Thursday, July 23, 2020

ಪೈಲಟ್ ಬಂಡಾಯ ಪ್ರಕರಣ ಸುಪ್ರೀಂಕೋರ್ಟಿಗೆ

ಪೈಲಟ್ ಬಂಡಾಯ ಪ್ರಕರಣ ಸುಪ್ರೀಂಕೋರ್ಟಿಗೆ

ಸ್ಪೀಕರ್ ಜೋಶಿ ಅರ್ಜಿ, ಸಚಿನ್ ಕೇವಿಯಟ್

ನವದೆಹಲಿ: ಬಂಡಾಯ ನಾಯಕ ಹಾಗೂ ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ೧೮ ಮಂದಿ ಭಿನ್ನಮತೀಯ ಕಾಂಗ್ರೆಸ್ ಶಾಸಕರಿಗೆ ವಿಧಾನಸಭಾಧ್ಯಕ್ಷ ಸಿ.ಪಿ. ಜೋಶಿ ಜಾರಿಗೊಳಿಸಿದ್ದ ಅನರ್ಹತೆ ನೋಟಿಸನ್ನು ಪ್ರಶ್ನಿಸಿದ ಪ್ರಕರಣದ ತೀರ್ಪು ರಾಜಸ್ಥಾನ ಹೈಕೋರ್ಟಿನಿಂದ ಬರುವ ಮುನ್ನವೇ  ಬಂಡಾಯ ಪ್ರಕರಣ2020 ಜುಲೈ 22ರ ಬುಧವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತು.

ವಿಧಾನಸಭಾಧ್ಯಕ್ಷ ಸಿ.ಪಿ. ಜೋಶಿ ಅವರು ಸುಪ್ರಿಂಕೋರ್ಟಿಗೆ ವಿಶೇಷ ಅರ್ಜಿಯನ್ನು (ಎಸ್‌ಎಲ್‌ಪಿ) ಸಲ್ಲಿಸಿದ್ದು, ಸಚಿನ್ ಪೈಲಟ್ ಅವರು ವಿಶೇಷ ಅರ್ಜಿಯ ಮೇಲೆ ಭಿನ್ನಮತೀಯ ಶಾಸಕರ ಬಣದ ಅಹವಾಲು ಆಲಿಸುವ ಮುನ್ನ ಆದೇಶ ನೀಡಬಾರದು ಎಂದು ಕೋರಿ ಕೇವಿಯಟ್ ಸಲ್ಲಿಸಿದರು.

ಸಿಪಿ ಜೋಶಿ ಅವರ ಪರವಾಗಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ರಾಜಸ್ಥಾನದ ವಿಷಯವನ್ನು (ಸಿಪಿ ಜೋಶಿ ಅವರ ಅರ್ಜಿ) ತುರ್ತಾಗಿ ಆಲಿಸಲು ಏನಾದರೂ ಮಾರ್ಗವಿದೆಯೇ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಅವರ ಮುಂದೆ ವಿಷಯ ಪ್ರಸ್ತಾಪಿಸುತ್ತಾ ವಿಚಾರಿಸಿದರು. ಸಿಜೆಐ ಅವರು ರಿಜಿಸ್ಟ್ರಾರ್ ಅವರ ಬಳಿಗೆ ಹೋಗಿ ಎಂದು ಸೂಚಿಸಿದರು.

ರಾಜಸ್ಥಾನ ಹೈಕೋರ್ಟ್ ಇನ್ನೊಂದು ಸಾಂವಿಧಾನಿಕ ಪ್ರಾಧಿಕಾರಕ್ಕೆಆದೇಶ ನೀಡಲು ಸಾಧ್ಯವಿಲ್ಲ  ಎಂಬ ನೆಲೆಯಲ್ಲಿ ಸಿಪಿ ಜೋಶಿ ಅವರು ಸುಪ್ರೀಂಕೋರ್ಟಿಗೆ ವಿಶೇಷ ಅರ್ಜಿ ಸಲ್ಲಿಸಿದ್ದಾರೆ.

ಮಧ್ಯೆ, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಿದ ವರದಿಯೊಂದರಲ್ಲಿ ರಾಜಸ್ಥಾನ ಸರ್ಕಾರವು ರಾಜ್ಯದಲ್ಲಿ ಫೋನ್ ಟ್ಯಾಪಿಂಗ್ ಮಾಡಲು ಅನುಮತಿ ನೀಡಿದ್ದರಲ್ಲಿ ತಾನು ಯಾವುದೇ ಪಾತ್ರ ವಹಿಸಿರುವುದನ್ನು ನಿರಾಕರಿಸಿದೆ.

ಇದಕ್ಕೆ ಮುನ್ನ ಉಪಮುಖ್ಯಮಂತ್ರಿ ಸ್ಥಾನದಿಂದ ವಜಾಗೊಂಡಿರುವ ಸಚಿನ್ ಪೈಲಟ್ ಮತ್ತು ಬಂಡಾಯ ಶಾಸಕರ ವಿರುದ್ಧದ ಕ್ರಮವನ್ನು ಮುಂದೂಡುವಂತೆ ರಾಜಸ್ಥಾನ ಹೈಕೋರ್ಟ್ ಆಜ್ಞಾಪಿಸಿದ ಒಂದು ದಿನದ ಬಳಿಕ ಪತ್ರಕರ್ತರ ಜೊತೆಗೆ ಮಾತನಾಡಿದ್ದ ವಿಧಾನಸಭಾಧ್ಯಕ್ಷ ಜೋಶಿಯವರು ತಾವು ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಪ್ರಕಟಿಸಿದ್ದರು.

ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಸಚಿನ್ ಮತ್ತು ಇತರ ಶಾಸಕರಿಗೆ ಕಳೆದ ವಾರ ಅನರ್ಹತೆ ನೋಟಿಸ್ ಜಾರಿಗೊಳಿಸಿದ್ದ ವಿಧಾನಸಭಾಧ್ಯಕ್ಷರಿಗೆ ರಾಜಸ್ಥಾನ ಹೈಕೋರ್ಟ್ ಶುಕ್ರವಾರದವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಆಜ್ಞಾಪಿಸಿತ್ತು.

ಸಾಂವಿಧಾನಿಕ ಬಿಕ್ಕಟ್ಟು ತಪ್ಪಿಸುವ ಸಲುವಾಗಿ ತಾವು ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ವಿಧಾನಸಭಾಧ್ಯಕ್ಷರಿಗೆ ಶಾಸಕರನ್ನು ಅನರ್ಹಗೊಳಿಸುವ ಹಕ್ಕು ಇದೆ. ವಿಧಾನಸಭಾ ಅಧ್ಯಕ್ಷರ ನಿರ್ಣಯದಲ್ಲಿ ಯಾರೂ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಅವರು ನುಡಿದರು.

ನ್ಯಾಯಾಲಯ ಕೊಟ್ಟ ಯಾವುದೇ ಆದೇಶವನ್ನು ಈವರೆಗೂ ನಾನು ಗೌರವಿಸಿದ್ದೇನೆ. ಆದಾಗ್ಯೂ ಗೌರವ ಮತ್ತು ಸ್ವೀಕೃತಿಯ ಅರ್ಥ ಒಂದು ಪ್ರಾಧಿಕಾರವು ಇನ್ನೊಂದರ ಪಾತ್ರದಲ್ಲಿ ಹಸ್ತಕ್ಷೇಪ ಮಾಡಬಹುದು ಎಂದಲ್ಲ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರ ಜೊತೆಗೆ ಘರ್ಷಣೆಗೆ ಇಳಿದಿರುವ ಸಚಿನ್ ಪೈಲಟ್ ಅವರು ರಾಜಸ್ಥಾನ ಹೈಕೋರ್ಟಿನಿಂದ ತಾತ್ಕಾಲಿಕ ನಿರಾಳತೆ ಪಡೆದ ಬಳಿಕ, ಸಚಿನ್ ಅವರು ತನಗೆ ಬಿಜೆಪಿ ಸೇರಲು ಹಣದ ಆಮಿಷ ಒಡ್ಡಿರುವುದಾಗಿ ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕ ಗಿರಿರಾಜ್ ಸಿಂಗ್ ಮಾಲಿಂಗ ಅವರಿಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.

ಸುಳ್ಳು ಮತ್ತು ದುರುದ್ದೇಶಪೂರಿತ ಹೇಳಿಕೆಗಾಗಿ ಮಾಲಿಂಗ ಅವರಿಗೆ ಲೀಗಲ್ ನೋಟಿಸ್ ಜಾರಿಮಾಡಲಾಗಿದೆ ಎಂದು ಪೈಲಟ್ ಅವರ ಅಧಿಕೃತ ವಾಟ್ಸಪ್ ಗ್ರೂಪ್ ಮಂಗಳವಾರ ರಾತ್ರಿ ತಿಳಿಸಿದೆ. ಮಾಲಿಂಗ ಅವರು ಪತ್ರಿಕೆಗಳಿಗೆ ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು.

ಪೈಲಟ್ ಅವರ ನಿವಾಸದಲ್ಲಿ ಮಾತುಕತೆಗಳು ನಡೆದಿದ್ದವು ಮತ್ತು ತಾನು (ಮಾಲಿಂಗ) ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರಿಗೆ ರಾಜ್ಯ ಸರ್ಕಾರ ಉರುಳಿಸುವ ಸಂಚಿನ ಬಗ್ಗೆ ಸೂಚನೆ ನೀಡಿರುವುದಾಗಿ ಮಾಲಿಂಗ ಸೋಮವಾರ ವರದಿಗಾರರ ಜೊತೆ ಮಾತನಾಡುತ್ತಾ ತಿಳಿಸಿದ್ದರು.

ನಾನು ಸಚಿನ್ ಜಿ ಜೊತೆಗೆ ಮಾತನಾಡಿದ್ದೆ. ಅವರು ಬಿಜೆಪಿ ಸೇರಲು ಹಣದ ಆಮಿಷ ಒಡ್ಡಿದ್ದರು. ಆದರೆ ನಾನು ಬಿಜೆಪಿ ಸೇರುವುದಿಲ್ಲ ಎಂದು ಹೇಳಿ ನಾನು ಅದನ್ನು ನಿರಾಕರಿಸಿದೆ ಎಂದು ಮಾಲಿಂಗ ಹೇಳಿದ್ದರು. ಮಾಲಿಂಗ ಅವರು ಗೆಹ್ಲೋಟ್ ಬಣದಲ್ಲಿದ್ದು, ದೆಹಲಿ ಹೆದ್ದಾರಿಯಲ್ಲಿ ಇರುವ ಹೋಟೆಲಿನಲ್ಲಿ ಇತರ ಶಾಸಕರ ಜೊತೆಗೆ ವಾಸ್ತವ್ಯ ಹೂಡಿದ್ದಾರೆ. ಏನಿದ್ದರೂ, ಶಾಸಕರು ಪ್ರತಿಕ್ರಿಯೆಗಾಗಿ ಲಭಿಸಿಲ್ಲ.

ಪೈಲಟ್ ಮತ್ತು ಇತರ ೧೮ ಮಂದಿ ಭಿನ್ನಮತೀಯ ಕಾಂಗ್ರೆಸ್ ಶಾಸಕರು ತಮ್ಮ ಅನರ್ಹತೆ ನೋಟಿಸುಗಳನ್ನು  ರಿಟ್ ಅರ್ಜಿಯ ಮೂಲಕ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದಾರೆ. ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಇಂದ್ರಜಿತ್ ಮಹಾಂತಿ ಮತ್ತು ನ್ಯಾಯಮೂರ್ತಿ ಪ್ರಕಾಶ ಗುಪ್ತ ಅವರನ್ನು ಒಳಗೊಂಡ ಪೀಠವು ಶುಕ್ರವಾರ ವಿಚಾರಣೆಗೆ ಎತ್ತಿಕೊಂಡಿತ್ತು.

ವಿಚಾರಣೆಯ ಬಳಿಕ ಪೈಲಟ್ ಮತ್ತು ಇತರ ಕಾಂಗ್ರೆಸ್ ಭಿನ್ನಮತೀಯರಿಗೆ ನಾಲ್ಕು ದಿನಗಳ ನಿರಾಳತೆ ಒದಗಿಸಿದ ಹೈಕೋರ್ಟ್ ಅನರ್ಹತೆ ನೋಟಿಸ್ ಸಂಬಂಧ ಮಂಗಳವಾರದವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ರಾಜಸ್ಥಾನ ವಿಧಾನಸಭಾಧ್ಯಕ್ಷರಿಗೆ ನಿರ್ದೇಶಿಸಿತ್ತು.

ಸೋಮವಾರ ವಿಚಾರಣೆ ಮುಂದುವರೆದರೂ ಅದು ಅಪೂರ್ಣವಾಗಿತ್ತು ಮತ್ತು ಮಂಗಳವಾರ ವಿಚಾರಣೆ ಮುಂದುವರೆದಿತ್ತು.

ಕಳೆದ ಸೋಮವಾರ ಮತ್ತು ಮಂಗಳವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದೇ ಇರುವ ಮೂಲಕ ಸದರಿ ಶಾಸಕರು ಸಚೇತಕಾಜ್ಞೆಯನ್ನು ಉಲ್ಲಂಘಿಸಿದ್ದಾರೆ ಎಂಬುದಾಗಿ ಪಕ್ಷವು ವಿಧಾನಸಭಾಧ್ಯಕ್ಷರಿಗೆ ದೂರು ನೀಡಿದ್ನನ್ನು ಅನುಸರಿಸಿ ವಿಧಾನಸಭಾಧ್ಯಕ್ಷರು ಶಾಸಕರಿಗೆ ನೋಟಿಸ್ ಜಾರಿ ಮಾಡಿದ್ದರು.

ಏನಿದ್ದರೂ, ಪಕ್ಷದ ಸಚೇತಕಾಜ್ಞೆಯು ಅನ್ವಯವಾಗುವುದು ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವಾಗ ಮಾತ್ರ ಎಂದು ಪೈಲಟ್ ಶಿಬಿರ ಪ್ರತಿಪಾದಿಸಿದೆ. ವಿಧಾನಸಭಾಧ್ಯಕ್ಷರಿಗೆ ನೀಡಿದ ದೂರಿನಲ್ಲಿ ಕಾಂಗ್ರೆಸ್ ಪಕ್ಷವು ಪೈಲಟ್ ಮತ್ತು ಇತರ ಭಿನ್ನಮತೀಯರ ವಿರುದ್ಧ ಸಂವಿಧಾನದ ೧೦ನೇ ಶೆಡ್ಯೂಲಿನ ಪ್ಯಾರಾ ()() ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷವು ಕೋರಿತ್ತು.

No comments:

Advertisement