My Blog List

Thursday, October 1, 2020

ಹತ್ರಾಸ್ ಭೇಟಿಗೆ ಅನುಮತಿ ನಕಾರ: ರಾಹುಲ್, ಪ್ರಿಯಾಂಕಾ ಬಂಧನ

 ಹತ್ರಾಸ್ ಭೇಟಿಗೆ ಅನುಮತಿ ನಕಾರ: ರಾಹುಲ್, ಪ್ರಿಯಾಂಕಾ ಬಂಧನ

ನವದೆಹಲಿ: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಸಾವನ್ನಪ್ಪಿದ ಉತ್ತರ ಪ್ರದೇಶದ ಮಹಿಳೆಯ ಕುಟುಂಬದ ಭೇಟಿ ಸಲುವಾಗಿ ಹತ್ರಾಸ್ಗೆ ಮೆರವಣಿಗೆಯಲ್ಲಿ ತೆರಳಲು ಯತ್ನಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಉತ್ತರ ಪ್ರದೇಶ ಪೊಲೀಸರು 2020 ಅಕ್ಟೋಬರ್ 01 ಗುರುವಾರ ಯಮುನಾ ಎಕ್ಸ್ಪ್ರೆಸ್ ವೇ ಬಳಿಯಲ್ಲಿ ವಶಕ್ಕೆ ತೆಗೆದುಕೊಂಡರು.

ಹೆದ್ದಾರಿಯಲ್ಲಿ ಪೊಲೀಸರು ತಮ್ಮನ್ನು ತಡೆದಾಗ ಉಭಯ ನಾಯಕರೂ ಮಹಿಳೆಯ ಕುಟುಂಬವನ್ನು ಭೇಟಿಯಾಗಲು ಹತ್ರಾಸ್ಗೆ ತೆರಳಲು ನಿರ್ಧರಿಸಿದ್ದರು.

ವಾರದ ಆರಂಭದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಉತ್ತರ ಪ್ರದೇಶದ ಮಹಿಳೆ ದೆಹಲಿಯ ಆಸ್ಪತ್ರೆಯೊಂದರಲ್ಲಿ ಸಾವನ್ನಪ್ಪಿದ್ದರು.

ಪೊಲೀಸರು ತಮ್ಮನ್ನು ನೆಲಕ್ಕೆ ತಳ್ಳಿ, ಲಾಠಿಯಿಂದ ಹೊಡೆದರು ಎಂದು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರೂ ಆದ ರಾಹುಲ್ ಗಾಂಧಿ ಬಳಿಕ ಆಪಾದಿಸಿದರು.

ಘಟನಾ ಸ್ಥಳದ ಚಿತ್ರಗಳು ರಾಹುಲ್ ಗಾಂಧಿಯನ್ನು ಪೊಲೀಸರು ತಡೆಹಿಡಿದಿರುವುದನ್ನು ತೋರಿಸಿದವು, ಆದರೆ ಚಿತ್ರದ ಒಂದು ಚೌಕಟ್ಟು ರಾಹುಲ್ ಅವರು ನೆಲಕ್ಕೆ ಬಿದ್ದುದನ್ನು ಮತ್ತು ಪೊಲೀಸರು ಅವರನ್ನು ತಳ್ಳುತ್ತಿರುವುದನ್ನು ತೋರಿಸಿತು.

ತತ್ ಕ್ಷಣವೇ ಸ್ಥಳಕ್ಕೆ ಧಾವಿಸಿದ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿಯವರನ್ನು ಎತ್ತಿಕೊಂಡು ಹೋಗಲು ಯತ್ನಿಸಿದರು. ನಾಲ್ಕು ಅಥವಾ ಹೆಚ್ಚಿನ ಸಂಖ್ಯೆಯ ಜನರು ಸೇರುವುದನ್ನು ನಿಷೇಧಿಸುವ ಸೆಕ್ಷನ್ ೧೪೪ ಜಾರಿಯಲ್ಲಿ ಇರುವ ಕಾರಣ ರಾಹುಲ್ ಮತ್ತು ಪ್ರಿಯಾಂಕಾ ಅವರ ಮೆರವಣಿಗೆಯನ್ನು ತಡೆಯಲಾಯಿತು ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ.

ನಾನು ಇಲ್ಲಿ ಶಾಂತಿಯುತವಾಗಿ ನಿಂತಿದ್ದೇನೆ ಮತ್ತು ಏಕಾಂಗಿಯಾಗಿ ಹತ್ರಾಸ್ಗೆ ತೆರಳಲು ಬಯಸುತ್ತೇನೆ. ಸೆಕ್ಷನ್ ೧೪೪ ಸಾರ್ವಜನಿಕ ಸಭೆಯ ಬಗ್ಗೆ ಹೇಳುತ್ತದೆ. ಆದರೆ ನಾನು ಏಕಾಂಗಿಯಾಗಿ ಹತ್ರಾಸ್ಗೆ ಹೋಗುತ್ತೇನೆ. ಯಾವ ಆಧಾರದ ಮೇಲೆ ನೀವು ನನ್ನನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದೀರಿ?’ ಎಂದು ತಮ್ಮನ್ನು ತಡೆದ ಪೊಲೀಸರನ್ನು ರಾಹುಲ್ ಗಾಂಧಿಯವರು ಹಿಂದಿಯಲ್ಲಿ ಪ್ರಶ್ನಿಸುತ್ತಿದ್ದ ವಿಡಿಯೋಗಳನ್ನು ಮಾಧ್ಯಮಗಳು ಪ್ರಸಾರ ಮಾಡಿದವು.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂದಿ ಜೊತೆಗೆ ಕಾಂಗ್ರೆಸ್ ನಾಯಕರಾದ ಅಧೀರ್ ರಂಜನ್ ಚೌಧರಿ, ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೇವಾಲಾ ಅವರನ್ನು ಕೂಡಾ ಪೊಲೀಸರು ವಶಕ್ಕೆ ಪಡೆದುಕೊಂಡು ಗೌತಮ್ ಬುದ್ಧನಗರದ ಬುದ್ಧ ಇಂಟರ್ ನ್ಯಾಷನಲ್ ಸರ್ಕ್ಯೂಟ್ನಲ್ಲಿರುವ ಅತಿಥಿ ಗೃಹಕ್ಕೆ ಕರೆದೊಯ್ದರು ಎಂದು ವರದಿಗಳು ಹೇಳಿವೆ.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಮತ್ತೆ ದೆಹಲಿಗೆ ಕರೆದೊಯ್ಯಲಾಗುತ್ತಿದೆ. ಯುಪಿ ಪೊಲೀಸರು ಅವರನ್ನು ದೆಹಲಿಗೆ ಕರೆದೊಯ್ಯುತ್ತಾರೆ ಎಂದು ಕಾಂಗ್ರೆಸ್ ಬಳಿಕ ತಿಳಿಸಿತು.

ತಾಯಿಯೊಂದಿಗೆ ಮೇವು ಸಂಗ್ರಹಿಸಲು ಹೊರಟಿದ್ದಾಗ ಹತ್ರಾಸ್ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಹದಿನೈದು ದಿನಗಳ ಬಳಿಕ ಮಂಗಳವಾರ ದೆಹಲಿ ಆಸ್ಪತ್ರೆಯಲ್ಲಿ ಮೃತಳಾದ ೧೯ ವರ್ಷದ ದಲಿತ ಮಹಿಳೆಯ ಅಂತ್ಯಕ್ರಿಯೆಯನ್ನು ಬುಧವಾರ ನಸುಕಿನಲ್ಲೇ ಅವರ ಕುಟುಂಬದೊಂದಿಗೆ ನಡೆಸಲಾಗಿತ್ತು.

ಸ್ಥಳೀಯ ಪೊಲೀಸರು ರಾತ್ರಿಯೇ ಮೃತಳ ಅಂತ್ಯಕ್ರಿಯೆ ನಡೆಸಲು ಒತ್ತಾಯಿಸಿದರುಮಹಿಳೆಯ ಕುಟುಂಬ ಸದಸ್ಯರು ಎಂದು ಆರೋಪಿಸಿದ್ದಾರೆ.

ಗ್ರಾಮದಲ್ಲಿ ಯಾವುದೇ ಪ್ರತಿಭಟನೆಗಳು ನಡೆಯದಂತೆ ತಡೆಯುವ ಸಲುವಾಗಿ ನಸುಕಿನಲ್ಲೇ ಮಹಿಳೆಯ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಇದಕ್ಕೆ ಮುನ್ನ ದಲಿತ ಗುಂಪುಗಳ ಸದಸ್ಯರು ಮತ್ತು ಕಾರ್ಯಕರ್ತರು ಆಪಾದಿಸಿದ್ದರು.

ನಮ್ಮ ಸಹೋದರಿಯನ್ನು ಅವರ ಕುಟುಂಬದ ಅನುಪಸ್ಥಿತಿಯಲ್ಲಿ ಸರ್ಕಾರ ಮತ್ತು ಪೊಲೀಸರು ಒಟ್ಟಾಗಿ ಹೇಗೆ ಅಂತ್ಯಕ್ರಿಯೆ ನಡೆಸಿದರು ಎಂಬುದನ್ನು ಇಡೀ ಜಗತ್ತು ನೋಡುತ್ತಿದೆ. ನನ್ನನ್ನು ಸಹರಾನ್ ಪುರದಲ್ಲಿ ವಶಕ್ಕೆ ತೆಗೆದುಕೊಂಡು ಗೃಹಬಂಧನದಲ್ಲಿ ಇರಿಸಲಾಗಿದೆ, ಆದರೆ ನಾವು ಹೋರಾಟವನ್ನು ಮುಂದುವರೆಸುತ್ತೇವೆಎಂದು ದೆಹಲಿಯ ಸಫ್ಧರ್ ಜಂಗ್ ಆಸ್ಪತ್ರೆಯ ಹೊರಗೆ ಮಂಗಳವಾರ ಪ್ರತಿಭಟನೆ ನಡೆಸಿದ ಭೀಮ್ ಸೇನೆಯ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಹೇಳಿದ್ದಾರೆ.

ಮಧ್ಯೆ, ರಾಜ್ಯಸಭಾ ಸಂಸದ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಆನಂದ್ ಶರ್ಮಾ, "ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದನ್ನು ಖಂಡಿಸಿದರು. ಭೀಕರವಾದ ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಬಲಿಯಾದವರ ಕುಟುಂಬವನ್ನು ಭೇಟಿ ಮಾಡದಂತೆ ತಡೆಯಲಾಗುತ್ತಿದೆ. ರಾಷ್ಟ್ರೀಯ ನಾಯಕರಾಗಿ, ಸಂತ್ರಸ್ಥೆಯ ಕುಟುಂಬವನ್ನು ಭೇಟಿ ಮಾಡುವ ಹಕ್ಕನ್ನು ರಾಹುಲ್ ಗಾಂಧಿ ಮತ್ತು ಪ್ರಿಯಂಗಗಾಂಧಿ ಅವರಿಗೆ ನಿರಾಕರಿಸಲಾಗಿದೆ. ಉತ್ತರ ಪ್ರದೇಶ ಪೊಲೀಸರು ತಮ್ಮ ಪಕ್ಷಪಾತದ ಕೃತ್ಯಗಳಿಗೆ ನಾಚಿಕೆ ಪಡಬೇಕುಎಂದು ಶರ್ಮಾ ಹೇಳಿದರು.

ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರುಭಾರತ ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ಗಾಂಧಿಯವರ ಬಗ್ಗೆ ಯುಪಿ ಪೊಲೀಸರ ವರ್ತನೆ ಅತ್ಯಂತ ಖಂಡನೀಯ. ಕಾನೂನನ್ನು ಎತ್ತಿಹಿಡಿಯಬೇಕಾದವರು ಪ್ರಜಾಪ್ರಭುತ್ವ ಮೌಲ್ಯಗಳನ್ನು ರೀತಿಯಾಗಿ ಮೆಟ್ಟಿಹಾಕುವುದು ಖಂಡನಾರ್ಹಎಂದು ಹೇಳಿದರು.

ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯನ್ನು ಬಂಧಿಸಿರುವುದನ್ನು ಖಂಡಿಸಿದರು.

ಯೋಗಿ ಆದಿತ್ಯನಾಥ್ ಸರ್ಕಾರವು ಇದಕ್ಕಾಗಿ ಉನ್ನತ ಬೆಲೆ ತೆರಬೇಕಾಗುತ್ತದೆಎಂದು ಸಿದ್ದರಾಮಯ್ಯ ನುಡಿದರು.

No comments:

Advertisement