Sunday, October 11, 2020

ಕನ್ನಡ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ರಾಜನ್ ನಿಧನ

ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ರಾಜನ್ ನಿಧನ

ಬೆಂಗಳೂರು: ಭಾರತೀಯ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ರಾಜನ್ ಅವರು ಅಕ್ಟೋಬರ್ ೧೧ರ ಭಾನುವಾರ  ರಾತ್ರಿ ೧೦.೩೦ಕ್ಕೆ ನಿಧನರಾದರು. ಅವರಿಗೆ ೮೭ ವರ್ಷ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ, ಅವರು ಮನೆಯಲ್ಲಿಯೇ ಹೃದಯಾಘಾತದಿಂದ ಕೊನೆಯುಸಿರು ಎಳೆದರು.

ಮೂಲತಃ ಮೈಸೂರಿನವರಾದ ರಾಜನ್, ತಮ್ಮ ಸಹೋದರ ನಾಗೇಂದ್ರಪ್ಪ ಅವರೊಂದಿಗೆ ಸೇರಿಕೊಂಡು ರಾಜನ್-ನಾಗೇಂದ್ರ ಹೆಸರಿನಲ್ಲಿ ಜಂಟಿಯಾಗಿ ಸಂಗೀತ ನಿರ್ದೇಶನ ಮಾಡುತ್ತಿದ್ದರು. ೧೯೫೨ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಜೋಡಿ, ಸುಮಾರು ದಶಕಗಳ ಕಾಲ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿತ್ತು. ೧೯೫೨ರಿಂದ ೧೯೯೯ರವರೆಗೆ ೩೭೫ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ನೀಡಿದ್ದರು. ಇದರಲ್ಲಿ ಕನ್ನಡದ ೨೦೦ಕ್ಕೂ ಅಧಿಕ ಸಿನಿಮಾಗಳು. ತೆಲುಗಿನಲ್ಲಿಯೂ ಜೋಡಿ ದೊಡ್ಡ ಯಶಸ್ಸು ಕಂಡಿತ್ತು. ತಮಿಳು, ಹಿಂದಿ, ಮಲಯಾಳಂ, ಶ್ರೀಲಂಕಾದ ಸಿಂಹಳ ಭಾಷೆಯ ಸಿನಿಮಾಗಳಿಗೂ ಸಂಗೀತ ಸಂಯೋಜಿಸಿದ್ದರು. ರಾಜನ್ ಅವರ ಸಹೋದರ ನಾಗೇಂದ್ರ ಅವರು ೨೦೦೦ರಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದರು.

 ಮಂತ್ರಾಲಯ ಮಹಾತ್ಮೆ, ಗಂಧದ ಗುಡಿ, ನಾ ನಿನ್ನ ಬಿಡಲಾರೆ, ಎರಡು ಕನಸು, ಕಳ್ಳ ಕುಳ್ಳ, ಬಯಲು ದಾರಿ, ನಾ ನಿನ್ನ ಮರೆಯಲಾರೆ, ಹೊಂಬಿಸಿಲು, ಆಟೋ ರಾಜ, ಗಾಳಿಮಾತು, ಚಲಿಸುವ ಮೋಡಗಳು, ಬೆಟ್ಟದ ಹೂವು, ಸುಪ್ರಭಾತ, ಮತ್ತೆ ಹಾಡಿತು ಕೋಗಿಲೆ, ಕರುಳಿನ ಕುಡಿ, ಪರಸಂಗದ ಗೆಂಡೆತಿಮ್ಮ, ಶ್ರೀನಿವಾಸ ಕಲ್ಯಾಣ ಮುಂತಾದವು. ಅದರಲ್ಲಿ ಡಾ. ರಾಜ್ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅವರ ಸಿನಿಮಾಗಳೇ ಜಾಸ್ತಿ. ಬಾನಲ್ಲೂ ನೀನೇ ಭುವಿಯಲ್ಲೂ ನೀನೇ.., ಬಂz ಬಾಳಿನ ಬೆಳಕಾಗಿ.., ಚೆಲುವೆಯ ಅಂದದ ಮೊಗಕೆ.., ಎಂದೆಂದೂ ನಿನ್ನನು ಮರೆತು..., ಹೊಸ ಬಾಳಿಗೆ ನೀ ಜೊತೆಯಾದೆ..,ನಲಿವಾ ಗುಲಾಬಿ ಹೂವೇ.., ನಾವಾಡುವ ನುಡಿಯೇ ಕನ್ನಡ ನುಡಿ...., ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು.., ತೇರಾ ಏರಿ ಅಂಬರದಾಗೆ ನೇಸರ ನಗುತಾನೇ... ಮುಂತಾದವು ರಾಜನ್-ನಾಗೇಂದ್ರ ಜೋಡಿಯ ಸಾರ್ವಕಾಲಿಕ ಹಿಟ್ ಗೀತೆಗಳು.

No comments:

Advertisement