My Blog List

Saturday, November 28, 2020

ನೇಪಾಳಕ್ಕೆ ಚೀನೀ ರಕ್ಷಣಾ ಸಚಿವರ ದಿಡೀರ್ ದೌಡು

 ನೇಪಾಳಕ್ಕೆ ಚೀನೀ ರಕ್ಷಣಾ ಸಚಿವರ  ದಿಡೀರ್ ದೌಡು

ಕಠ್ಮಂಡು: ಗಡಿ ಬಿಕ್ಕಟ್ಟಿನಿಂದ ಪ್ರಭಾವಿತವಾದ ದ್ವಿಪಕ್ಷೀಯ ಬಾಂಧವ್ಯಗಳನ್ನು ಸುಧಾರಿಸುವ ಉದ್ದೇಶದಿಂದ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ಶ್ರೀಂಗ್ಲಾ ಅವರು ಕಠ್ಮಂಡುವಿಗೆ ಪ್ರವಾಸ ಕೈಗೊಂಡ ಕೆಲವೇ ದಿನಗಳಲ್ಲಿ ಚೀನಾವು 2020 ನವೆಂಬರ್ 29ರ ಭಾನುವಾರ ಒಂದು ದಿನದ ಭೇಟಿಗಾಗಿ ರಕ್ಷಣಾ ಸಚಿವ ವೀ ಫೆಂಗ್ ಅವರನ್ನು ನೇಪಾಳಕ್ಕೆ ಕಳುಹಿಸುತ್ತಿದೆ.

ಚೀನಾ ಸಚಿವ ಸಂಪುಟದಲ್ಲಿ ರಾಜ್ಯ ಕೌನ್ಸಿಲರ್ ಶ್ರೇಣಿಯನ್ನು ಹೊಂದಿರುವ ಪೀಪಲ್ಸ್ ಲಿಬರೇಶನ್ ಆರ್ಮಿ ಜನರಲ್ ವೀ ಅವರ ಭೇಟಿ ವಿಚಾರವನ್ನು ನೇಪಾಳದ ವಿದೇಶಾಂಗ ಸಚಿವಾಲಯ 2020 ನವೆಂಬರ್ 28ರ ಶನಿವಾರ ಪ್ರಕಟಿಸಿತು.

ಕಠ್ಮಂಡುವಿನಲ್ಲಿ ವಿದೇಶಾಂಗ ಸಚಿವಾಲಯ ಹೊರಡಿಸಿರುವ ಸಂಕ್ಷಿಪ್ತ ಹೇಳಿಕೆಯಲ್ಲಿ ವೀ ಅವರು ನವೆಂಬರ್ ೨೯ರ ಭಾನುವಾರ ನೇಪಾಳಕ್ಕೆ ಒಂದು ದಿನದ ಕೆಲಸದ ಭೇಟಿ ನೀಡಲಿದ್ದಾರೆ.

ವೀ ಅವರು ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ, ರಕ್ಷಣಾ ಖಾತೆಯನ್ನು ಹೊಂದಿರುವ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಮತ್ತು ಸೇನಾ ಮುಖ್ಯಸ್ಥ ಜನರಲ್ ಪೂರ್ಣ ಚಂದ್ರ ಥಾಪಾ ಅವರನ್ನು ತಮ್ಮ ಇಡೀ ದಿನದ ಪ್ರವಾಸ ಕಾಲದಲ್ಲಿ ಭೇಟಿ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಭೇಟಿಯ ಬಗ್ಗೆ ಬೀಜಿಂಗ್‌ನಿಂದ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ.

ಕಳೆದ ವರ್ಷ ಸೆಪ್ಟೆಂಬರಿನಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಕಠ್ಮಂಡುವಿಗೆ ಪ್ರವಾಸ ಕೈಗೊಂಡ ನಂತರ ನೇಪಾಳಕ್ಕೆ ಭೇಟಿ ನೀಡಿದ ಅತ್ಯಂತ ಹಿರಿಯ ಚೀನಾ ನಾಯಕನಾಗಿದ್ದಾರೆ ವೀ.  ಹರ್ಷ ಶ್ರೀಂಗ್ಲಾ ಅವರು ತಮ್ಮ ತನ್ನ ಎರಡು ದಿನಗಳ ನೇಪಾಳ ಪ್ರವಾಸವನ್ನು ಮುಗಿಸಿದ ಎರಡು ದಿನಗಳ ಬಳಿಕ ವೀ ಅವರು ನೇಪಾಕ್ಕೆ ಅಗಮಿಸುತ್ತಿದ್ದಾರೆ.

ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ ಮತ್ತು ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ಮುಖ್ಯಸ್ಥ ಸಮಂತ್ ಗೋಯೆಲ್ ಅವರ ನೇಪಾಳ ಪ್ರವಾಸದ ಬೆನ್ನಲ್ಲೇ ನೇಪಾಳಕ್ಕೆ ಪ್ರಯಾಣಿಸಿದ ಶ್ರಿಂಗ್ಲಾ, ದ್ವಿಪಕ್ಷೀಯ ಸಂಬಂಧವನ್ನು ವಿಶೇಷವಾಗಿ ಸಂಪರ್ಕ ಮತ್ತು ಗಡಿ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಮುಂದಕ್ಕೆ ಒಯ್ಯುವ ಮಾರ್ಗಗಳ ಬಗ್ಗೆ ತಮ್ಮ ಉನ್ನತ ಮಟ್ಟದ ಸಭೆಗಳಲ್ಲಿ ಗಮನಹರಿಸಿದ್ದರು.

ಶ್ರಿಂಗ್ಲಾ ಅವರ ಭೇಟಿಯ ಸಮಯದಲ್ಲಿ ನಡೆದ ಚರ್ಚೆಗಳಲ್ಲಿ ಪರಸ್ಪರರ ಸೂಕ್ಷ್ಮತೆಗಳನ್ನು ಗೌರವಿಸುವದರ ಬಗೆಗಿನ ಮಹತ್ವದ ಬಗ್ಗೆ ಉಭಯ ಕಡೆಯವರು ಗಮನಹರಿಸಿದ್ದಾರೆ ಎಂದು ಬೆಳವಣಿಗೆಗಳ ಪರಿಚಯವಿರುವ ವ್ಯಕ್ತಿಗಳು ಹೇಳಿದ್ದಾರೆ.

ಭಾರತವು ಆಯಕಟ್ಟಿನ ಲಿಪುಲೇಖ ಪ್ರದೇಶಕ್ಕೆ ಹೊಸ ರಸ್ತೆಯನ್ನು ನಿರ್ಮಿಸಿದ ನಂತರ, ಭಾರತದ ನಿಯಂತ್ರಣದಲ್ಲಿ ಇರುವ ಕಾಲಾಪಾನಿ ಪ್ರದೇಶದ ಹಕ್ಕು ಪ್ರತಿಪಾದಿಸುವ ಹೊಸ ರಾಜಕೀಯ ನಕ್ಷೆಯನ್ನು ಮೇ ತಿಂಗಳಲ್ಲಿ ನೇಪಾಳ ಬಿಡುಗಡೆ ಮಾಡಿತ್ತು. ಇದರೊಂದಿಗೆ ಭಾರತ-ನೇಪಾಳ ಸಂಬಂಧ ಬಿಗಡಾಯಿಸಿತ್ತು.  ಭಾರತವು ನೇಪಾಳದ ವಿವಾದಾತ್ಮಕ ನಕ್ಷೆಯನ್ನು ತಿರಸ್ಕರಿಸಿತ್ತು. ಶ್ರಿಂಗ್ಲಾ ಅವರು ತಮ್ಮ ಸಭೆಗಳಲ್ಲಿ ಗಡಿ ಸಮಸ್ಯೆಯನ್ನು ಸೂಕ್ತ ದ್ವಿಪಕ್ಷೀಯ ಕಾರ್ಯವಿಧಾನಗಳ ಮೂಲಕ ಮುಂದಕ್ಕೆ ಒಯ್ಯುವ ಮಾರ್ಗಗಳ ಬಗ್ಗೆ ಚರ್ಚಿಸಿದರು.

ಚೀನಾ ಇತ್ತೀಚಿನ ವರ್ಷಗಳಲ್ಲಿ ನೇಪಾಳದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸುವ ಪ್ರಯತ್ನಗಳನ್ನು ನಡೆಸುತ್ತಾ ಬಂದಿದೆ. ಇದರಲ್ಲಿ ಪ್ರಮುಖ ಯೋಜನೆಗಳಲ್ಲಿನ ಹೂಡಿಕೆಗಳು ಮತ್ತು ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷದ (ಎನ್‌ಸಿಪಿ) ನಾಯಕತ್ವಕ್ಕೆ ಸಮಿಪವಾಗುವ ಯತ್ನಗಳು ಸೇರಿವೆ.

ಎನ್‌ಸಿಪಿ ರಚಿಸುವಲ್ಲಿ ಹಾಗೂ ಎರಡು ಎಡಪಂಥೀಯ ಪಕ್ಷಗಳ ಏಕೀಕರಣದಲ್ಲಿ ಬೀಜಿಂಗ್ ಪ್ರಮುಖ ಪಾತ್ರ ವಹಿಸಿತ್ತು ಎಂದು ವರದಿಗಳು ಸೂಚಿಸಿವೆ.

ನೇಪಾಳದ ಚೀನಾದ ರಾಯಭಾರಿ ಹೌ ಯಾಂಕಿ ಅವರು, ಸಹ-ಅಧ್ಯಕ್ಷರಾದ ಒಲಿ ಮತ್ತು ಪುಷ್ಪ್ಪ ಕಮಲ್ ದಹಲ್ ಸೇರಿದಂತೆ ಎನ್‌ಸಿಪಿಯ ನಾಯಕರನ್ನು ಆಗಾಗ್ಗೆ ಭೇಟಿಯಾಗುತ್ತಾರೆ. ಜುಲೈಯಲ್ಲಿ ಉಭಯ ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ತೀವ್ರವಾಗಿದ್ದಾಗ, ಪಕ್ಷವನ್ನು ಒಗ್ಗೂಡಿಸುವಲ್ಲಿ ಹೌ ಪ್ರಮುಖ ಪಾತ್ರ ವಹಿಸಿದ್ದರೆಂದು ವರದಿಗಳು ಹೇಳಿವೆ.

ಚೀನಾದ ರಕ್ಷಣಾ ಸಚಿವರಿಗೆ ನೇಪಾಳ ಸೇನೆಯ ಪ್ರಧಾನ ಕಚೇರಿಯಲ್ಲಿ ಗೌರವ ರಕ್ಷೆ ನೀಡಲಾಗುವುದು ಮತ್ತು ಉಭಯ ಪಕ್ಷಗಳ ನಡುವಿನ ಚರ್ಚೆಗಳು ಚೀನಾದ ಮಿಲಿಟರಿ ನೆರವು ಪುನರಾರಂಭದ ಬಗ್ಗೆ ಗಮನಹರಿಸುವ ನಿರೀಕ್ಷೆಯಿದೆ ಎಂದು ನೇಪಾಳ ಸೇನೆಯ ವಕ್ತಾರ ಬ್ರಿಗ್ ಜನರಲ್ ಸಂತೋಷ್ ಬಲ್ಲಾವ್ ಪೌಡಿಯಲ್ ಅವರನ್ನು ಉಲ್ಲೇಖಿಸಿ ಕಠ್ಮಂಡು ಪೋಸ್ಟ್ ವರದಿ ಮಾಡಿದೆ.

ಕಳೆದ ವರ್ಷ ನೇಪಾಳದ ಮಾಜಿ ರಕ್ಷಣಾ ಸಚಿವ ಈಶ್ವರ್ ಪೋಖರೆಲ್ ಅವರ ಬೀಜಿಂಗ್ ಭೇಟಿಯ ಸಮಯದಲ್ಲಿ ನೇಪಾಳ ಮತ್ತು ಚೀನಾ ೧೫೦ ಮಿಲಿಯನ್ ಆರ್‌ಎಂಬಿ ಮಿಲಿಟರಿ ನೆರವು ಪ್ಯಾಕೇಜ್ ಒಪ್ಪಂದಕ್ಕೆ ಸಹಿ ಹಾಕಿದ್ದವು ಮತ್ತು ವೀ ಅವರ ಭೇಟಿಯ ಸಮಯದಲ್ಲಿ ಒಪ್ಪಂದದ ಶಿಷ್ಟಾಚಾರಕ್ಕೆ ಸಹಿ ಹಾಕಲಾಗುವುದು ಎಂದು ಪೋಸ್ಟ್ ವರದಿ ಮಾಡಿದೆ.

No comments:

Advertisement