My Blog List

Friday, January 22, 2021

ಕೃಷಿ ಕಾನೂನು: ಸರ್ಕಾರದ ನಿಲುವು ಬಿಗಿ

 ಕೃಷಿ ಕಾನೂನು: ಸರ್ಕಾರದ ನಿಲುವು ಬಿಗಿ

ನವದೆಹಲಿ: ಸುಮಾರು ಎರಡು ತಿಂಗಳ ಸುದೀರ್ಘ ಬಿಕ್ಕಟ್ಟನ್ನು ಪರಿಹರಿಸಲು ಸರ್ಕಾರ ಮತ್ತು ಚಳವಳಿ ನಿರತ ಕೃಷಿ ಮುಖಂಡರ ನಡುವಣ ಹನ್ನೊಂದನೇ ಸುತ್ತಿನ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ ಕೃಷಿ ಸುಧಾರಣಾ ಕಾನೂನುಗಳನ್ನು ವಿರೋಧಿಸುವ ರೈತ ಸಂಘಗಳ ಜೊತೆಗಿನ ಮಾತುಕತೆಯಿಂದ ಹೊರನಡೆಯಲು ತಾನು ಸಿದ್ಧವಾಗಿರುವುದಾಗಿ ಎಂದು ಕೇಂದ್ರ ಸರ್ಕಾರ 2021 ಜನವರಿ 22ರ ಶುಕ್ರವಾರ ಸುಳಿವು ನೀಡಿದೆ

ತನ್ನ ನಿಲುವನ್ನು ಬಿಗಿಗೊಳಿಸಿದ ಸರ್ಕಾರ, ಕಾನೂನುಗಳ ಅನುಷ್ಠಾನವನ್ನು ೧೮ ತಿಂಗಳುಗಳವರೆಗೆ ತಡೆಹಿಡಿಯುವ ಪ್ರಸ್ತಾಪವು ತನ್ನ ‘ಅತ್ಯುತ್ತಮ ಮತ್ತು ಕೊನೆಯ ಕೊಡುಗೆ’ ಎಂದು ಹೇಳಿದೆ ಮತ್ತು ಕಾನೂನಿನಲ್ಲಿ ಯಾವುದೇ ಲೋಪವಿಲ್ಲ ಎಂದು ಪುನರುಚ್ಚರಿಸಿದ್ದರೂ ಸಹ, ಪ್ರಸ್ತಾಪವನ್ನು ಮರುಪರಿಶೀಲಿಸುವಂತೆ ಪ್ರತಿಭಟನಕಾರ ರೈತರನ್ನು ಕೋರಿದೆ.

ಸರ್ಕಾರದ ಪ್ರಸ್ತಾವನೆಯ ಕುರಿತು ರೈತರು ಮಾತನಾಡಲು ಸಿದ್ಧರಾದಾಗ ಮಾತ್ರ ಮುಂದಿನ ಸುತ್ತಿನ ಮಾತುಕತೆ ನಡೆಯಲಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಈದಿನ ಘೋಷಿಸಿದರು. "ನಿಮ್ಮ ಕಳವಳಕ್ಕೆ ಸ್ಪಂದಿಸಲು ನಾವು ಯೋಚಿಸಿದ್ದೆವು. ಆದರೆ ಪ್ರಸ್ತಾಪದಲ್ಲಿ ಯಾವುದೇ  ತಪ್ಪು ಇಲ್ಲ. ನಾವು ನಿಮಗೆ ಉತ್ತಮ ಪ್ರಸ್ತಾಪವನ್ನು ನೀಡಿದ್ದೇವೆ. ದುರದೃಷ್ಟವಶಾತ್ ನೀವು ಅದನ್ನು ತಿರಸ್ಕರಿಸಿದ್ದೀರಿ’ ಎಂದು ತೋಮರ್ ಸಭೆಯಲ್ಲಿ ಹೇಳಿದರು.

ಶುಕ್ರವಾರದ ಸಭೆ ಕೇವಲ ೧೮ ನಿಮಿಷಗಳು ಮಾತ್ರ ನಡೆಯಿತು. ಮತ್ತು ಉಳಿದ ಹೊತ್ತು ಕೃಷಿ ಮುಖಂಡರು ಪ್ರತ್ಯೇಕ ಕೋಣೆಯಲ್ಲಿದ್ದರು ಎಂದು ಮೂಲಗಳು ತಿಳಿಸಿವೆ. ಸರ್ಕಾರ ಮುಂದಿಟ್ಟ ಪ್ರಸ್ತಾಪದ ಕುರಿತು ಚರ್ಚಿಸಲು ನೀವು ಬಯಸಿದರೆ ಮಾತ್ರ ಮಾತುಕತೆ ನಡೆಯುತ್ತದೆ ಎಂದು ತೋಮರ್ ಸ್ಪಷ್ಟವಾಗಿ ಮತ್ತು ಖಂಡತುಂಡವಾಗಿ ಹೇಳಿದರು.

ಮೂರು ಕೃಷಿ ಸುಧಾರಣಾ ಕಾನೂನುಗಳ ವಿರುದ್ಧ ಪ್ರತಿಭಟಿಸಿದ ರೈತರು ಗುರುವಾರ ಮೂರು ಶಾಸನಗಳ ಅನುಷ್ಠಾನವನ್ನು ಒಂದೂವರೆ ವರ್ಷಗಳ ಕಾಲ ತಡೆಹಿಡಿಯುವ ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿದ್ದರು ಮತ್ತು ಮೂರು ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದರು.

ದೆಹಲಿ ಹೊರವಲಯದ ಹಲವಾರು ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಂಘಟನೆಗಳು ಮುಖ್ಯ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ಗಣರಾಜ್ಯೋತ್ಸವದ ದಿನದಂದು ಟ್ರಾಕ್ಟರ್ ಪ್ರತಿಭಟನೆ ಯೋಜಿಸಿದಂತೆ ನಡೆಯಲಿದೆ ಎಂದು ಹೇಳಿತ್ತು.

ಮೋರ್ಚಾ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, "ಇಂದು ಸಂಯುಕ್ತ ಕಿಸಾನ್ ಮೋರ್ಚಾದ ಸಾಮಾನ್ಯ ಸಭೆಯಲ್ಲಿ, ಬುಧವಾರ ಸರ್ಕಾರ ಮಂಡಿಸಿದ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ. ಮೂರು ಕೇಂದ್ರ ಕೃಷಿ ಕಾಯ್ದೆಗಳನ್ನು ಪೂರ್ಣವಾಗಿ ರದ್ದುಪಡಿಸುವುದು ಮತ್ತು ಕನಿಷ್ಠ ಬೆಂಬಲ ಬೆಲೆಯ ಸಲುವಾಗಿ ಶಾಸನವನ್ನು ಜಾರಿಗೊಳಿಸಬೇಕು ಎಂಬುದು ಚಳವಳಿಯು ಮುಖ್ಯ ಬೇಡಿಕೆ ಎಂದು ಪುನರುಚ್ಚರಿಸಲಾಗಿತ್ತು.

ರೈತ ಸಂಘಗಳೊಂದಿಗಿನ ೧೦ ನೇ ಸುತ್ತಿನ ಮಾತುಕತೆಯಲ್ಲಿ ಸರ್ಕಾರ ಬುಧವಾರ ಪ್ರಸ್ತಾಪವನ್ನು ಮುಂದಿಟ್ಟಿತ್ತು, ಮತ್ತು ಇದೇ ಮೊದಲ ಬಾರಿಗೆ ರೈತರು ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸದ ಕಾರಣ ಪ್ರಗತಿಯ ಭರವಸೆಯನ್ನು ಹುಟ್ಟುಹಾಕಿದೆ ಎಂದು ಸರ್ಕರ ಹೇಳಿತ್ತು.

No comments:

Advertisement