Sunday, December 30, 2007

People's movement for Rejuvanate Rivers


Dr. Rajendra Singh, Magasaysay winner and 'Gandhi of Water' has planned nationwide people's movement to protect and rejuvenate rivers of India. Here is a small report on his plan. Paryaya presents one more story of students of a school in Bangalore contributing to conserve water through rain water harvesting. This report has been contributed by Shree Padre, the Rainwater Man of Karnataka and Kerala.

ನದಿ ಸಂರಕ್ಷಣೆ, ಪುನಶ್ಚೇತನಕ್ಕೆ

ಜನಾಂದೋಲನ


ನದಿಗಳನ್ನು ಪರಸ್ಪರ ಜೋಡಿಸುವುದರಿಂದ ಭಾರತವನ್ನು ಪ್ರವಾಹ ಮುಕ್ತ ಹಾಗೂ ಬರಗಾಲಮುಕ್ತ ನಾಡನ್ನಾಗಿ ಮಾಡಬಹುದು ಎಂಬುದು ನಿಜವಲ್ಲ. ಆದರೆ ನದಿ ಸಂರಕ್ಷಣೆಯ ವಿಚಾರಕ್ಕೆ ಜನರ ಮೆದುಳು- ಮನಸ್ಸುಗಳನ್ನು ಜೋಡಿಸುವುದರಿಂದ ನಮ್ಮ ಭೂಮಿ, ಪರಿಸರ ಖಂಡಿತ ಉಳಿಯುತ್ತದೆ.

ನೆತ್ರಕೆರೆ ಉದಯಶಂಕರ

ಭಾರತದ ನದಿಗಳ ಪುನಶ್ಚೇತನ ಹಾಗೂ ರಕ್ಷಣೆಗಾಗಿ 2008ರ ಜನವರಿಯಲ್ಲಿ ಆಂದೋಲನವೊಂದು ಆರಂಭವಾಗಲಿದೆ. ನದಿಗಳ ಸಂರಕ್ಷಣೆ ಸಲುವಾಗಿ ಆರಂಭವಾಗಲಿರುವ 'ಜನಾಂದೋಲನ'ದಲ್ಲಿ ಜನತೆ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅರಿವು ಮೂಡಿಸುವ ಸಲುವಾಗಿ ದೇಶಾದ್ಯಂತ 14 ತಂಡಗಳು ಪಾದಯಾತ್ರೆ ನಡೆಸಲಿವೆ.

ಈ ಆಂದೋಲನದ ಉದ್ಧೇಶ: ನದಿಗಳಿಗೆ ಪಟ್ಟಣಗಳ ಒಳಚರಂಡಿ ನೀರು ತುಂಬುವುದನ್ನು ತಡೆಗಟ್ಟುವುದು. ಬಹಳಷ್ಟು ನದಿಗಳು ಸತ್ತು ಹೋಗುತ್ತಿರುವುದು ಈ ರೀತಿ ಒಳಚರಂಡಿ ನೀರು, ಕಾರ್ಖಾನೆಗಳ ಮಲಿನ ನೀರನ್ನು ನದಿಗಳಿಗೆ ತುಂಬುವುದರಿಂದಲೇ. ಇದಕ್ಕೆ ಬೆಂಗಳೂರಿನಲ್ಲಿ ಈಗ ಕಣ್ಮರೆಯಾಗಿರುವ ವೃಷಭಾವತಿ ನದಿಯೇ ನಮ್ಮ ಕಣ್ಮುಂದೆ ಇರುವ ಉದಾಹರಣೆ.

ಉತ್ತರ ಭಾರತದಲ್ಲಿ ಹಿಮಾಲಯದಲ್ಲಿ ಹುಟ್ಟುವ 14 ಸಣ್ಣ ನದಿಗಳು ಒಂದಕ್ಕೊಂದು ಜೊತೆಗೂಡುತ್ತಾ ಗಂಗಾ ಹಾಗೂ ಯಮುನಾ ನದಿಗಳಾಗುತ್ತವೆ. ಆದರೆ ಉತ್ತರ ಕಾಶಿ ಬಳಿ ಈ ಭಾಗೀರಥಿ ನದಿಗೆ ಒಳಚರಂಡಿ ನೀರನ್ನು ಸೇರಿಸಲಾಗುತ್ತಿದೆ. ನಂತರ ಹೀಗೆ ಅಲ್ಲಲ್ಲಿ ಮಾಲಿನ್ಯ ಸೇರಿಸಿಕೊಳ್ಳುತ್ತಾ ಸಾಗುವ ಗಂಗಾನದಿ ಎಷ್ಟು ಮಲಿನಯುಕ್ತವಾಗಿದೆ ಎಂದರೆ ಅದನ್ನು ಸ್ವಚ್ಛಗೊಳಿಸಲು ಎರಡು ದಶಕ ಅಂದರೆ 1987ರಷ್ಟು ಹಿಂದೆಯೇ ದೊಡ್ಡ 'ಕ್ರಿಯಾಯೋಜನೆ'ಯನ್ನೇ ರೂಪಿಸಬೇಕಾಯಿತು. ಆದರೆ ಇಂದಿಗೂ ಗಂಗೆ ಸಂಪೂರ್ಣ ಮಲಿನಮುಕ್ತಳಲ್ಲ!

ಇದು ಕೇವಲ ಗಂಗೆಯ ಕಥೆ ಅಲ್ಲ. ಹಿಮಾಲಯದಿಂದ ಕನ್ಯಾಕುಮಾರಿಯವರೆಗೂ ಬಹುತೇಕ ಎಲ್ಲ ನದಿಗಳ ನೀರನ್ನೂ ಗಟಾರದ ನೀರು ಇಲ್ಲವೇ ಕಾರ್ಖಾನೆಗಳ ನೀರು ಸೇರಿಸಿ ಮಲಿನಗೊಳಿಸುವ ಕೆಲಸ ನಿರಂತರ ನಡೆಯುತ್ತಿದೆ.

ನದಿಗಳನ್ನು ಕೊಲ್ಲುವ ಇಂತಹ ಕೃತ್ಯಗಳನ್ನು ತಡೆಗಟ್ಟಲು ಯತ್ನ ನಡೆಯದೇ ಹೋದರೆ ಭವಿಷ್ಯ ಅಂಧಕಾರಮಯವಾಗುತ್ತದೆ. ಹೀಗಾಗಿ ಯಾವುದೋ ಒಂದು ಹಂತದಲ್ಲಿ ನದಿಗಳ ನೀರಿನ ನೈರ್ಮಲ್ಯ ಕಾಯ್ದುಕೊಳ್ಳುವ ಹಾಗೂ ಅವುಗಳನ್ನು ಪುನಶ್ಚೇತನ ಗೊಳಿಸುವ ಕಾರ್ಯ ಆರಂಭಿಸಲೇ ಬೇಕಾಗುತ್ತದೆ. ಇದೀಗ ಅಂತಹ ಆಂದೋಲನಕ್ಕೆ ಭಾರತ ಸಜ್ಜಾಗುತ್ತಿದೆ.

ಬೆಂಗಳೂರಿನ ಕೆಂಪೇಗೌಡ ನಗರದ ಗವಿಪುರದಲ್ಲಿನ ಭಾರತೀಯ ಭೂವಿಜ್ಞಾನ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ 'ನೀರಿನ ಗಾಂಧಿ' ಎಂದೇ ಖ್ಯಾತಿ ಪಡೆದಿರುವ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಡಾ. ರಾಜೇಂದ್ರ ಸಿಂಗ್ ಈ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ. ರಾಜಸ್ಥಾನದಲ್ಲಿ ಮಳೆನೀರು ಕೊಯ್ಲು ವಿಧಾನಗಳನ್ನು ಬಳಸಿ ನದಿಗಳಿಗೆ ಮರುಜನ್ಮ ನೀಡಿ ರೈತರ ಬದುಕಿಗೆ ಸಂಜೀವಿನಿಯಾದ ಮಹಾನ್ ಹೋರಾಟಗಾರ ಈ ರಾಜೇಂದ್ರ ಸಿಂಗ್.

ನದಿಗಳ ಪುನಶ್ಚೇತನ ಆಂದೋಲನ ಬಗ್ಗೆ ಜನಜಾಗೃತಿ ಮೂಡಿಸಲು ರಚಿಸಲಾಗಿರುವ ಪ್ರತಿ ತಂಡವೂ ಒಂದೊಂದು ರಾಜ್ಯದ ಒಂದೊಂದು ನದಿಯನ್ನು ಆಯ್ಕೆ ಮಾಡಿಕೊಂಡು ಈ ಬಗ್ಗೆ ಜಾಗೃತಿ ಮೂಡಿಸಲಿದೆ.

ಕಾನೂನನ್ನು ಉಲ್ಲಂಘಿಸಿಯಾದರೂ ಸರಿ ನದಿಗಳ ಸಂರಕ್ಷಣೆ ಅಗತ್ಯ ಎಂಬ ಮನೋಭಾವ ಜನರಲ್ಲಿ ಮೂಡಬೇಕು. ಆಗ ಮಾತ್ರ ನಾವು ಸ್ವಚ್ಛ ನೀರು, ಸುಂದರ ಪರಿಸರ ಹೊಂದಲು ಸಾಧ್ಯ ಎಂಬುದು ರಾಜೇಂದ್ರ ಸಿಂಗ್ ಅಭಿಮತ.

ಸಮಾಜದ ಹಿತಕ್ಕಾಗಿ ಕಾನೂನುಗಳನ್ನು ಉಲ್ಲಂಘಿಸಿದರೆ ತಪ್ಪೇನಿಲ್ಲ. ಅಧಿಕಾರಿಗಳಿಗೆ ಸಮಸ್ಯೆಗಳ ಗಂಭೀರತೆಯನ್ನು ಮನವರಿಕೆ ಮಾಡಿಕೊಡಲು ಸಂಘರ್ಷ ಅನಿವಾರ್ಯ. ಒಮ್ಮೆ ಅವರು ನಮ್ಮ ದಾರಿಗೆ ಬಂದ ಮೇಲೆ ಅವರ ಸಹಕಾರದಿಂದಲೇ ಸಮಸ್ಯೆಗಳನ್ನು ಬಗೆಹರಿಸಬಹುದು. ಮಹಾತ್ಮ ಗಾಂಧಿ ಕೂಡಾ ಮೊದಲು ಅಸಹಕಾರ ಚಳವಳಿ ಆರಂಭಿಸಿ ನಂತರ ಬ್ರಿಟಿಷರ ವಿರುದ್ಧ ತಿರುಗಿ ನಿಂತರು ಎನ್ನುವ ಸಿಂಗ್ ಉತ್ತರಕಾಶಿಯಲ್ಲಿ ಗಂಗಾನದಿಗೆ ಒಳಚರಂಡಿ ನೀರನ್ನು ಬಿಡುವ ಸ್ಥಳದಲ್ಲೇ ಮೊದಲ ಹೋರಾಟಕ್ಕೆ ನಾಂದಿ ಆಗಲಿದೆ ಎನ್ನುತ್ತಾರೆ.

ಸ್ಥಳೀಯ ಜನತೆ ಮತ್ತು ಜನ ಪ್ರತಿನಿಧಿಗಳಿಗೆ ನೀರಿನ ಮಹತ್ವ ವಿವರಿಸಿ ನದಿಯನ್ನು ಮಲಿನಗೊಳಿಸಬಾರದು ಎಂದು ಮನವಿ ಮಾಡಲಾಗುವುದು. ಮನವಿಗೆ ಸ್ಪಂದಿಸದೇ ಇದ್ದಲ್ಲಿ ಒಳಚರಂಡಿ ನೀರನ್ನು ಬಂದ್ ಮಾಡಿ ಪ್ರತಿಭಟಿಸಲಾಗುವುದು ಎನ್ನುತ್ತಾರೆ ರಾಜೇಂದ್ರ ಸಿಂಗ್.

`ಹಿಂದಿನ ಕೇಂದ್ರ ಸರ್ಕಾರ ನದಿಗಳ ಜೋಡಣೆ ಮಾಡುವುದಾಗಿ ಘೋಷಿಸಿ ಸುಮ್ಮನಾಯಿತು. ಹೊಸ ಸರ್ಕಾರ ವಿಕೇಂದ್ರಿಕೃತ ನೀರಿನ ನಿರ್ವಹಣೆ ವ್ಯವಸ್ಥೆ ಜಾರಿಗೊಳಿಸುವುದಾಗಿ ಪ್ರಕಟಿಸಿತು. ಆದರೆ ಈ ನಿಟ್ಟಿನಲ್ಲಿ ಈವರೆಗೆ ಯಾವುದೇ ಕೆಲಸವೂ ಆಗಿಲ್ಲ. ಜಲ ಮಾಲಿನ್ಯ ನಿಯಂತ್ರಣದ ಹೆಸರಿನಲ್ಲಿ ಕೇಂದ್ರ ಸರ್ಕಾರ ವೆಚ್ಚ ಮಾಡಿರುವುದು ಕೋಟ್ಯಂತರ ರೂಪಾಯಿ. ಗಂಗಾ ಕ್ರಿಯಾ ಯೋಜನೆಗೆ 1987ರಿಂದ ಈವರೆಗೆ 7000 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಯಮುನಾ ನದಿ ಯೋಜನೆಗೆ ಎರಡು ವರ್ಷಗಳಲ್ಲಿ 2000 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಆದರ ಫಲಿತಾಂಶ ಮಾತ್ರ ಸೊನ್ನೆ ಎಂಬುದು ರಾಜೇಂದ್ರ ಅವರ ವಿಷಾದ.

ನದಿಗಳನ್ನು ಪರಸ್ಪರ ಜೋಡಿಸುವುದರಿಂದ ಭಾರತವನ್ನು ಪ್ರವಾಹ ಮುಕ್ತ ಹಾಗೂ ಬರಗಾಲಮುಕ್ತ ನಾಡನ್ನಾಗಿ ಮಾಡಬಹುದು ಎಂಬುದು ನಿಜವಲ್ಲ. ಆದರೆ ನದಿ ಸಂರಕ್ಷಣೆಯ ವಿಚಾರಕ್ಕೆ ಜನರ ಮೆದುಳು- ಮನಸ್ಸುಗಳನ್ನು ಜೋಡಿಸುವುದರಿಂದ ನಮ್ಮ ಭೂಮಿ, ಪರಿಸರ ಖಂಡಿತ ಉಳಿಯುತ್ತದೆ. ಆದ್ದರಿಂದ ನದಿ ಸಂರಕ್ಷಣೆಯ ಆಂದೋಲನದಲ್ಲಿ ಹೆಚ್ಚಿನ ಜನ ಪಾಲ್ಗೊಳ್ಳುವಂತೆ ಮಾಡುವುದು ತುರ್ತಿನ ಕಾರ್ಯ. 2008ರ ಇಡೀ ವರ್ಷವನ್ನು ಈ ಕಾರ್ಯಕ್ಕಾಗಿ ಮುಡುಪಾಗಿ ಇಡಲಾಗುವುದು ಎನ್ನುತ್ತಾರೆ ರಾಜೇಂದ್ರಸಿಂಗ್.

ಉತ್ತರ ಭಾರತದಲ್ಲಿ ಮಾಡಿದಂತೆ ದಕ್ಷಿಣ ಭಾರತದ ಪ್ರತಿ ರಾಜ್ಯದಲ್ಲೂ ನದಿ ರಕ್ಷಣೆಗೆ ಆಂದೋಲನ ನಡೆಸಲಾಗುವುದು. ಇದಕ್ಕೆ ಸ್ಥಳೀಯರ ಸಹಕಾರ ಬೇಕು ಎಂಬುದು ಅವರ ಕೋರಿಕೆ.

ದೆಹಲಿಯಲ್ಲಿ ಯಮುನಾ ನದಿಯ ದಡದಲ್ಲಿ ಕ್ರೀಡಾ ಗ್ರಾಮ ನಿರ್ಮಾಣಕ್ಕೂ ವಿರೋಧ ಇದೆ. ಕಳೆದ 150 ದಿನಗಳಿಂದ ಕ್ರೀಡಾ ಗ್ರಾಮ ನಿರ್ಮಾಣ ವಿರೋಧಿಸಿ ನಿರಂತರ ನಿರಶನ ನಡೆದಿದೆ. ನದಿ ದಡವನ್ನು ಆಕ್ರಮಿಸಿಕೊಳ್ಳಲು ಯಾರಿಗೂ ಹಕ್ಕಿಲ್ಲ. ಸಂವಿಧಾನದಲ್ಲೂ ಇದಕ್ಕೆ ಅವಕಾಶವಿಲ್ಲ ಎಂಬುದು ಡಾ. ರಾಜೇಂದ್ರಸಿಂಗ್ ಪ್ರತಿಪಾದನೆ.

ಬೆಂಗಳೂರಿನ ಸ್ವರಾಜ್ ಸಂಸ್ಥೆಯು ಡಾ. ರಾಜೇಂದ್ರ ಸಿಂಗ್ ಅವರೊಂದಿಗಿನ ಸಂವಾದ ಕಾರ್ಯಕ್ರಮವನ್ನು (29-12-2007ರಂದು) ಸಂಘಟಿಸಿತ್ತು.

ಮಾಜಿ ಶಾಸಕ ಡಿ.ಆರ್. ಪಾಟೀಲ್, ಸ್ವರಾಜ್ ಸಂಸ್ಥೆಯ ನಿರ್ದೇಶಕಿ ಭಾರತಿ ಪಟೇಲ್, ಭಾರತೀಯ ಭೂವಿಜ್ಞಾನ ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ. ಶ್ರೀಕಂಠಯ್ಯ, ಕಾರ್ಯದರ್ಶಿ ಸಾವ್ಕಾರ್ ಮತ್ತಿತರರು, ಭೂಗರ್ಭ ತಜ್ಞರು, ಪರಿಸರ ತಜ್ಞರು, ಜಲ ಸಂರಕ್ಷಣಾ ಕಾರ್ಯಕರ್ತರು 'ಸಂವಾದ'ದಲ್ಲಿ ಪಾಲ್ಗೊಂಡಿದ್ದರು.

(ಚಿತ್ರ: ಡಾ. ರಾಜೇಂದ್ರಸಿಂಗ್ ನದಿ ಸಂರಕ್ಷಣಾ ಆಂದೋಲನ ಬಗ್ಗೆ ವಿವರಣೆ ನೀಡುತ್ತಿರುವುದು.)

1 comment:

Unknown said...

ನಿಮ್ಮ ಲೇಖನ ಸಕಾಲಿಕ. ಅಳಿವಿನ ಅಂಚಿನಲ್ಲಿರುವ ಈ ನದಿಗಳ ಬಗೆಗಿನ ಇಷ್ಟು ದೊಡ್ಡ ಹೋರಾಟ ನಮ್ಮ ಪತ್ರಿಕೆಗಳಿಗೆ ಏಕೆ ತಿಳಿಯುವುದಿಲ್ಲ ?? ಏಕೆ ಮಾಧ್ಯಮಗಳು ಇವುಗಳೆಡೆಗೆ ತಮ್ಮ ದೃಷ್ಟಿ ಬೀರುವುದಿಲ್ಲ? ಎಂಬುದೇ ತಿಳಿಯುವುದಿಲ್ಲ.

31ರ ರಾತ್ರಿಯ ಹೊಸ ವರುಷದ ಮೋಜು ನಮ್ಮ ಮಾಧ್ಯಮಗಳಿಗೆ ದೊಡ್ಡ ಸುದ್ದಿಯಾಯಿತು. ಆದರೆ........ಇಂತಹ ಒಂದು ಕಾರ್ಯಕ್ರಮದ ವಿವರಗಳು, ಹೋರಾಟದ ಹೆಜ್ಜೆಗಳು ಮಹತ್ವವನ್ನು ಪಡೆದುಕೊಳ್ಳದೇ ಇರುವುದು ದೊಡ್ಡ ದುರಂತ!!

ಸಮಾನಮನಸ್ಕರಾದವರು ಈ ಲೇಖನ ಓದಿಯಾದರೂ ಒಂದಾಗಿ ಒಂದೇ ವೇದಿಕೆಯಡಿ ಬರಬೇಕಾಗಿದೆ.


ಗಿರೀಶ ಕೆ.ಎಸ್.

Advertisement