Showing posts with label SAARC. Show all posts
Showing posts with label SAARC. Show all posts

Friday, April 10, 2020

ಸಾರ್ಕ್ ಕೋವಿಡ್ ನಿಧಿಗೆ ಷರತ್ತು: ಪಾಕಿಸ್ತಾನಕ್ಕೆ ಭಾರತದ ಕಟು ಉತ್ತರ

ಸಾರ್ಕ್ ಕೋವಿಡ್ ನಿಧಿಗೆ ಷರತ್ತು: ಪಾಕಿಸ್ತಾನಕ್ಕೆಭಾರತದ  ಕಟು ಉತ್ತರ
ನವದೆಹಲಿ: ಕೋವಿಡ್-೧೯ ಸ್ಪಂದನಾ ನಿಧಿಗೆ ತಮ್ಮ ಬದ್ಧತೆಯ ನಿಧಿಯನ್ನು ಬಳಸುವ ಸಮಯ, ವಿಧಾನ ಮತ್ತು ಅನುಷ್ಠಾನವನ್ನು  ಪ್ರತಿಯೊಂದು ಸಾರ್ಕ್ ಸದಸ್ಯ ರಾಷ್ಟ್ರ ಸ್ವತಃ ನಿರ್ಧರಿಸಬಹುದು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿದ ಸ್ಪಂದನಾ ನಿಧಿಗೆ ಪಾಕಿಸ್ತಾನವು ಪ್ರಕಟಿಸಿದ ೩ ಮಿಲಿಯನ್ (೩೦ಲಕ್ಷ) ಡಾಲರುಗಳ ಷರತ್ತಿನ ಕೊಡುಗೆಗೆ ಭಾರತವು  2020  ಏಪ್ರಿಲ್ 10ರ ಶುಕ್ರವಾರ ಕಟು ಪ್ರತಿಕ್ರಿಯೆ ವ್ಯಕ್ತ ಪಡಿಸಿತು.

ನಿಧಿಯನ್ನು ಸಾರ್ಕ್ ಸಚಿವಾಲಯವೇ ನಿಭಾಯಿಸಬೇಕು ಮತ್ತು ಸದಸ್ಯ ರಾಷ್ಟ್ರಗಳ ಜೊತೆ ಸಮಾಲೋಚಿಸಿ ಬಳಸಬೇಕು ಎಂಬ ಷರತ್ತಿನೊಂದಿಗೆ ಸಾರ್ಕ್ ಕೋವಿಡ್-೧೯ ಸ್ಪಂದನಾ ನಿಧಿಗೆ ತನ್ನ ೩೦ ಲಕ್ಷ ಡಾಲರ್ ಕೊಡುಗೆಯ ಬದ್ಧತೆಯನ್ನು ಪಾಕಿಸ್ತಾನ ವ್ಯಕ್ತ ಪಡಿಸಿತ್ತು.

’ತಮ್ಮ ಸಾರ್ಕ್ ಕೋವಿಡ್-೧೯ ತುರ್ತು ಸ್ಪಂದನಾ ನಿಧಿಯ ಬದ್ಧತೆಗಳ ಬಳಕೆಯ ಸಮಯ, ವಿಧಾನ ಮತ್ತು ಅನುಷ್ಠಾನವನ್ನು ನಿರ್ಧರಿಸುವುದು ಪ್ರತಿಯೊಂದು ಸದಸ್ಯ ರಾಷ್ಟ್ರಕ್ಕೆ ಬಿಟ್ಟ ವಿಷಯ.ಭಾರತಕ್ಕೆ ಸಂಬಂಧಿಸಿದಂತೆ ಪ್ರಧಾನಿಯವರು ಪ್ರಕಟಿಸಿದ ಬದ್ಧತೆಯು ಈಗ ಅನುಷ್ಠಾನದ ಹಂತದಲ್ಲಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ ಶ್ರೀವಾಸ್ತವ ಹೇಳಿದರು.

’ವಸ್ತು ಮತ್ತು ಸೇವಾ ನೆರವನ್ನು ಈಗಾಗಲೇ ಅಫ್ಘಾನಿಸ್ಥಾನ, ಬಾಂಗ್ಲಾದೇಶ, ಭೂತಾನ್, ಮಾಲ್ದೀವ್ಸ್, ನೇಪಾಳ ಮತ್ತು ಶ್ರೀಲಂಕಾ ದೇಶಗಳಿಗೆ ವಿಸ್ತರಿಸಲಾಗಿದೆ. ಈ ಸಾರ್ಕ್ ರಾಷ್ಟ್ರಗಳು ಈ ಮುನ್ನವೇ ನಿಧಿಗೆ ತಮ್ಮ ಬದ್ಧತೆಗಳನ್ನು ವ್ಯಕ್ತ ಪಡಿಸಿವೆ. ಪ್ರತಿಯೊಂದು ರಾಷ್ಟ್ರದ ಗಂಭೀರತೆಯ ಮಟ್ಟವನ್ನು ಅವುಗಳ ವರ್ತನೆಯಿಂದ ಅಂದಾಜು ಮಾಡಬಹುದು’ ಎಂದು ಶ್ರೀವಾಸ್ತವ ನುಡಿದರು.

ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘದ (ಸಾರ್ಕ್) ೮ ಸದಸ್ಯರ ಪೈಕಿ ನಿಧಿಗೆ ತನ್ನ ಕಾಣಿಕೆಯನ್ನು ಕೊಟ್ಟ ಕಟ್ಟ ಕಡೆಯ ಸದಸ್ಯ ರಾಷ್ಟ್ರ ಪಾಕಿಸ್ತಾನವಾಗಿದೆ. ಮಾರ್ಚ್ ೧೫ರಂದು ಸಾರ್ಕ್ ಸಮೂಹದ ನಾಯಕರ ವಿಡಿಯೋ ಸಂವಹನದ ಬಳಿಕ ಈ ನಿಧಿಯನ್ನು ಭಾರತದ ೧೦ ಮಿಲಿಯನ್ (೧೦೦) ಲಕ್ಷ ಡಾಲರ್ ಪ್ರಾಥಮಿಕ ದೇಣಿಗೆಯೊಂದಿಗೆ ರಚಿಸಲಾಗಿತ್ತು.

ಸಾರ್ಕ್ ಸಚಿವಾಲಯಕ್ಕೆ ತನ್ನ ಬದ್ಧತೆಯನ್ನು ತಿಳಿಸುವ ವೇಳೆಯಲ್ಲಿ ಪಾಕಿಸ್ತಾನವು ನಿಧಿಗೆ ಬರುವ ಎಲ್ಲ ಹಣವನ್ನು ಸಾರ್ಕ್ ಸಚಿವಾಲಯವೇ ನಿವಹಿಸಬೇಕು ಮತ್ತು ನಿಧಿ ಬಳಕೆಯ ವಿಧಿ ವಿಧಾನವನ್ನು ಸಾರ್ಕ್ ಚಾರ್ಟರ್ ಪ್ರಕಾರ ಸದಸ್ಯ ರಾಷ್ಟ್ರಗಳ ಜೊತೆಗೆ ಸಮಾಲೋಚಿಸುವ ಮೂಲಕವೇ ಅಂತಿಮಗೊಳಿಸಬೇಕು ಎಂದು ಪಾಕಿಸ್ತಾನ ಹೇಳಿತ್ತು. ಪಾಕಿಸ್ತಾನದ ವಿದೇಶಾಂಗ ಕಚೇರಿಯು ಈ ವಿಚಾರವನ್ನು ತಿಳಿಸಿ ಹೇಳಿಕೆ ಪ್ರಕಟಿಸಿತ್ತು.

’ಈ ನಿಟ್ಟಿನಲ್ಲಿ ಪಾಕಿಸ್ತಾನದ ದೃಷ್ಟಿಕೋನವನ್ನು ವಿದೇಶಾಂಗ ಕಾರ್‍ಯದರ್ಶಿ ಸೊಹೈಲ್ ಮಹಮೂದ್ ಮತ್ತು ಸಾರ್ಕ್ ಪ್ರಧಾನ ಕಾರ್‍ಯದರ್ಶಿ ಎಸಾಲ ರುವಾನ್ ವೀರಕೂನ್ ನಡುವಣ ದೂರವಾಣಿ ಸಂಭಾಷಣೆ ಕಾಲದಲ್ಲಿ ಈದಿನ ತಿಳಿಸಲಾಗಿದೆ’ ಎಂದೂ ಪಾಕ್ ವಿದೇಶಾಂಗ ಕಚೇರಿಯ ಹೇಳಿಕೆ ತಿಳಿಸಿತ್ತು.

ಪಾಕಿಸ್ತಾನವು ದಕ್ಷಿಣ ಏಷ್ಯಾ ಪಾದೇಶಿಕ ಸಹಕಾರ ಸಂಘದ (ಸಾರ್ಕ್) ಹಿರಿಯ ವಾಣಿಜ್ಯ ಅಧಿಕಾರಿಗಳ ವಿಡಿಯೊ ಕಾನ್ಫರೆನ್ಸಿಗೆ ಬುಧವಾರ ಗೈರು ಹಾಜರಾಗಿತ್ತು. ಇದನ್ನು ಸಂಘಟಿಸುವಲ್ಲಿ ಸಾರ್ಕ್ ಸಚಿವಾಲಯ ಯಾವುದೇ ಪಾತ್ರ ವಹಿಸದೇ ಇರುವುದರಿಂದ ಅದರಲ್ಲಿ ಪಾಲ್ಗೊಳ್ಳದೇ ಇರಲು ತಾನು ನಿರ್ಧರಿಸಿದುದಾಗಿ ಪಾಕಿಸ್ತಾನ ಹೇಳಿತ್ತು.

Sunday, March 15, 2020

ವಿಡಿಯೋ ಕಾನ್ಫರೆನ್ಸ್: ಸಾರ್ಕ್ ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಸಂದೇಶ

ವಿಡಿಯೋ ಕಾನ್ಫರೆನ್ಸ್: ಸಾರ್ಕ್ ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಸಂದೇಶ
’ಕೊರೋನಾವೈರಸ್ ಎದುರಿಸಲು ಸಿದ್ಧರಾಗಿರಿ ಆದರೆ ಭಯ ಬೇಡ’
ನವದೆಹಲಿ: ಮಾರಣಾಂತಿಕ ಕೋವಿಡ್ -೧೯ (ಕೊರೋನಾವೈರಸ್) ವಿರುದ್ಧ ಹೋರಾಡಲು ಸರ್ವ ಸನ್ನದ್ಧರಾಗಿರಿ. ಆದರೆ ಭಯಪಡಬೇಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘದ (ಸಾರ್ಕ್) ರಾಷ್ಟ್ರಗಳಿಗೆ  2020 ಮಾರ್ಚ್ 15ರ ಭಾನುವಾರ ಸಂದೇಶ ನೀಡಿದರು.

ಸಾರ್ಕ್ ಸದಸ್ಯ ರಾಷ್ಟ್ರಗಳ ನಾಯಕರ ಜೊತೆಗೆ ಕೊರೋನಾವೈರಸ್ ಹಾವಳಿಯ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಪ್ರಧಾನಿ ’ವಿಶ್ವ ಜನಸಂಖ್ಯೆಯ ಐದನೇ ಒಂದು ಭಾಗವನ್ನು ಹೊಂದಿರುವ ಈ ಪ್ರದೇಶವು ಕೊರೋನಾವೈರಸ್ ಹಾವಳಿ ಎದುರಿಸಲು ಆಪತ್ಕಾಲೀನ ಯೋಜನೆಯೊಂದಿಗೆ ಸಿದ್ಧವಾಗಬೇಕಿದೆ’ ಎಂದು ಹೇಳಿದರು.

"ಇಲ್ಲಿಯವರೆಗೆ ನಮ್ಮ ಸಾರ್ಕ್ ಪ್ರದೇಶವು ೧೫೦ ಕ್ಕಿಂತಲೂ ಕಡಿಮೆ ಪ್ರಕರಣಗಳನ್ನು ದಾಖಲಿಸಿದೆ ಆದರೆ ನಮ್ಮ ಸಾರ್ಕ್ ಪ್ರದೇಶವು ಒಟ್ಟು ವಿಶ್ವ ಜನಸಂಖ್ಯೆಯ ಐದನೇ ಒಂದು ಭಾಗzಷ್ಟನ್ನು ವ್ಯಾಪಿಸಿರುವುದರಿಂದ ನಾವು ಜಾಗರೂಕರಾಗಿರಬೇಕು" ಎಂದು ಆರಂಭಿಕ ಭಾಷಣ ಮಾಡುತ್ತಾ ಪ್ರಧಾನಿ ಹೇಳಿದರು.

ಈ ಪ್ರದೇಶದಲ್ಲಿ ಆರೋಗ್ಯ ಸೌಲಭ್ಯಗಳಿಗೆ ಗಮನಾರ್ಹ ಸವಾಲುಗಳಿವೆ. ಆದ್ದರಿಂದ, "ನಾವೆಲ್ಲರೂ ಒಟ್ಟಾಗಿ ತಯಾರಿ ಮಾಡಬೇಕು, ನಾವೆಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು ಮತ್ತು ನಾವೆಲ್ಲರೂ ಒಟ್ಟಾಗಿ ಯಶಸ್ವಿಯಾಗಬೇಕು" ಎಂದು ಮೋದಿ ಹೇಳಿದರು.

’ಕೊರೋನವೈರಸ್ sಸೋಂಕನ್ನು ಎದುರಿಸಲು ಭಾರತವು ತನ್ನ ವೈದ್ಯಕೀಯ ಮೂಲಸೌಕರ್ಯವನ್ನು ನವೀಕರಿಸಲು ತ್ವರಿತ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಯಾವುದೇ ಭೀತಿ ಇಲ್ಲ ಎಂದು ಖಚಿತಪಡಿಸುತ್ತದೆ’ ಎಂದು ಪ್ರಧಾನಿ ಹೇಳಿದರು.

’ತಯಾರಾಗಿ, ಆದರೆ ಭಯಪಡಬೇಡಿ, ಇದು ನಮ್ಮ ಮಾರ್ಗದರ್ಶಿ ಮಂತ್ರವಾಗಿದೆ. ನಾವು ಸಮಸ್ಯೆಯನ್ನು ಕಡಿಮೆ ಅಂದಾಜು ಮಾಡದಂತೆ ಎಚ್ಚರಿಕೆ ವಹಿಸಿದ್ದೇವೆ, ನವೀಕರಿಸಿದ ಪ್ರತಿಕ್ರಿಯೆ ಕಾರ್ಯವಿಧಾನಗಳು ಸೇರಿದಂತೆ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿದ್ದೇವೆ. ನಾವು ಜನವರಿ ಮಧ್ಯದಲ್ಲಿಯೇ ವೈದ್ಯಕೀಯ ತಪಾಸಣೆಗಳನ್ನು  ಪ್ರಾರಂಭಿಸಿದ್ದೇವೆ. ಹಂತ ಹಂತದ ಸಿದ್ಧತೆಯ ವಿಧಾನವು ಭೀತಿ ನಿವಾರಣೆಗೆ ಸಹಾಯ ಮಾಡಿದೆ’ ಎಂದು ಪ್ರಧಾನಿ ಹೇಳಿದರು.

ದುರ್ಬಲ ಗುಂಪುಗಳನ್ನು ತಲುಪಲು ಭಾರತವು ವಿಶೇಷ ಪ್ರಯತ್ನಗಳನ್ನು ಮಾಡಿದೆ ಎಂದು ಪ್ರಧಾನಿ ಹೇಳಿದರು.

’ನಮ್ಮ ವೈದ್ಯಕೀಯ ಸಿಬ್ಬಂದಿಯ ತರಬೇತಿ ಸೇರಿದಂತೆ ನಮ್ಮ ವ್ಯವಸ್ಥೆಗಳನ್ನು ತ್ವರಿತವಾಗಿ ಬಲಪಡಿಸಲು ನಾವು ಕೆಲಸ ಮಾಡಿದ್ದೇವೆ" ಎಂದು ಅವರು ಹೇಳಿದರು.

ಕೊರೋನಾವೈರಸ್ ಹಾವಳಿ ಎದುರಿಸಲು ಸಾರ್ಕ್ ಪ್ರದೇಶದಲ್ಲಿ ಜಂಟಿ ಕಾರ್ಯತಂತ್ರ ರೂಪಿಸಲು ವಿಡಿಯೋ ಕಾನ್ಫರೆನ್ಸ್ ನಡೆಸುವಂತೆ ಪ್ರಧಾನಿ ಮೋದಿ ಗುರುವಾರ ಸಲಹೆ ಮಾಡಿದ್ದರು. ನೇಪಾಳಿ ಪ್ರಧಾನಿ ಕೆ.ಪಿ.ಶರ್ಮಾ ಒಲಿ, ಭೂತಾನ್ ಪ್ರಧಾನಿ ಲೋಟೇ ತ್ಸೆರಿಂಗ್, ಶ್ರೀಲಂಕಾದ ಅಧ್ಯಕ್ಷ ಗೋಟಬಯಾ ರಾಜಪಕ್ಸೆ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಮಾಲ್ಡೀವಿಯನ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಈ ನಾಯಕರು ಮತ್ತು ಅಫಘಾನ್ ಸರ್ಕಾರದಿಂದ ಈ ಪ್ರಸ್ತಾಪಕ್ಕೆ ಸ್ವಾಗತ ವ್ಯಕ್ತವಾಗಿತ್ತು.

Advertisement