Showing posts with label Gold. Show all posts
Showing posts with label Gold. Show all posts

Saturday, December 26, 2020

ಕೇರಳ ಚಿನ್ನದ ಕಳ್ಳಸಾಗಣೆ ಪ್ರಕರಣ: ಹೈಕೋರ್ಟಿಗೆ ಕಸ್ಟಮ್ಸ್ ?

 ಕೇರಳ ಚಿನ್ನದ ಕಳ್ಳಸಾಗಣೆ ಪ್ರಕರಣ: ಹೈಕೋರ್ಟಿಗೆ ಕಸ್ಟಮ್ಸ್ ?

ತಿರುವನಂತಪುರ: ಕೇರಳ ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸ್ವಪ್ನಾ ಸುರೇಶ್ ಭೇಟಿ ಮಾಡಲು ತನ್ನ ಅಧಿಕಾರಿಗಳಿಗೆ ಅವಕಾ ನಿರಾಕರಿಸಿರುವ ರಾಜ್ಯ ಜೈಲು ಇಲಾಖೆಯ ನಿರ್ಧಾರದ ವಿರುದ್ಧ ಕೇರಳ ಹೈಕೋರ್ಟ್ ಮೆಟ್ಟಿಲೇರಲು ಕಸ್ಟಮ್ಸ್ ಇಲಾಖೆ ಯೋಜಿಸುತ್ತಿದೆ ಎಂದು ಸುದ್ದಿ ಮೂಲಗಳು  2020 ಡಿಸೆಂಬರ್ 26ರ ಶನಿವಾರ ತಿಳಿಸಿವೆ.

ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ- ಕೋಫೆಪೊಸಾ ಅಡಿಯಲ್ಲಿ ರಾಜ್ಯ ರಾಜಧಾನಿಯಲ್ಲಿ ಮಹಿಳಾ ಸೆರೆಮನೆಯಲ್ಲಿ ಇರುವ ಚಿನ್ನ ಕಳ್ಳಸಾಗಣೆ ಪ್ರಕರಣದ ಮುಖ್ಯ ಆರೋಪಿಯನ್ನು ಭೇಟಿ ಮಾಡುವ ಯಾರೇ ವ್ಯಕ್ತಿಗಳ ಬಗ್ಗೆ ತನಗೆ ತಿಳಿಸಬೇಕು ಮತ್ತು ಕಸ್ಟಮ್ಸ್ ಅಧಿಕಾರಿಯೊಬ್ಬರು ಅಂತಹ ಸಂದರ್ಶಕರ ಜೊತೆಗಿರುತ್ತಾರೆ ಎಂದು ಕಸ್ಟಮ್ಸ್ ಇಲಾಖೆ ಇತ್ತೀಚೆಗೆ ಸೆರೆಮನೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ಆದರೆ ಇದನ್ನು ನಿರಾಕರಿಸಿದ ಜೈಲು ಇಲಾಖೆ ಕಳೆದ ವಾರ ಆರೋಪಿಯ ಸಂಬಂಧಿಕರೊಂದಿಗೆ ಸೆರೆಮನೆಗೆ ಬಂದ ಕಸ್ಟಮ್ಸ್ ಅಧಿಕಾರಿಯನ್ನು ವಾಪಸ್ ಕಳುಹಿಸಿತ್ತು. ಇಂತಹ ಕ್ರಮವು ಹೊಸ ಪೂರ್ವನಿದರ್ಶನವನ್ನು ಸೃಷ್ಟಿಸುತ್ತದೆ ಮತ್ತು ಜೈಲು ಅಧಿಕಾರಿಗಳನ್ನು ಭ್ರಮ ನಿರಸನಗೊಳಿಸುತ್ತದೆ ಎಂದು ರಾಜ್ಯ ಜೈಲು ಮುಖ್ಯಸ್ಥ ರಿಷಿರಾಜ್ ಸಿಂಗ್ ಹೇಳಿದ್ದಾರೆ.

ಆದರೆ ಇದು ಉನ್ನತ ಮಟ್ಟದ ಪ್ರಕರಣವನ್ನು ದುರ್ಬಲಗೊಳಿಸುವ ಪ್ರಯತ್ನ ಎಂದು ಕಸ್ಟಮ್ಸ್ ಅಧಿಕಾರಿಗಳು ಭಯಪಡುತ್ತಾರೆ.

‘ನಾವು ಈಗಾಗಲೇ ಕೋಫೆಪೊಸಾ ಮಂಡಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ನಾವು ಮುಂದಿನ ವಾರ ಹೈಕೋರ್ಟ್‌ಗೆ ಹೋಗುತ್ತೇವೆ. ಆಕೆ ಈಗಾಗಲೇ ಗಂಭೀರ ಬೆದರಿಕೆಗಳನ್ನು ಎದುರಿಸುತ್ತಿರುವುದಾಗಿ ದೂರು ನೀಡಿದ್ದಾರೆ ಮತ್ತು ಕೆಲವರು ಆಕೆಯನ್ನು ಜೈಲಿನಲ್ಲಿ ಭೇಟಿಯಾಗಿ ಹೇಳಿಕೆಯನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಪ್ರಕರಣವನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸಲು ಇಲಾಖೆ ಸುಪ್ರೀಂ ಕೋರ್ಟಿನ ಮೊರೆ ಹೋಗಬೇಕಾಗಬಹುದು ಎಂದು ಅವರು ಹೇಳಿದರು.

ನಡೆಯುತ್ತಿರುವ ತನಿಖೆಗೆ ರಾಜ್ಯ ಪೊಲೀಸರು ಮತ್ತು ಜೈಲು ಅಧಿಕಾರಿಗಳು ಸಂಪೂರ್ಣವಾಗಿ ಸಹಕರಿಸುತ್ತಿಲ್ಲ ಎಂದೂ ಅವರು ಹೇಳಿದರು.

ಆದರೆ ಜೈಲು ಇಲಾಖೆ ಸಾಮಾನ್ಯ ಜೈಲು ಕಾರ್ಯವಿಧಾನಗಳು ಮತ್ತು ಕಾನೂನುಗಳು ಕೋಫೆಪೊಸಾ ಬಂಧಿತರಿಗೂ ಅನ್ವಯವಾಗುತ್ತವೆ ಮತ್ತು ಅಧಿಕಾರಿಗಳನ್ನು ಪ್ರತಿ ಬಾರಿ ಸಂದರ್ಶಕರೊಂದಿಗೆ ಅನುಮತಿಸಲಾಗುವುದಿಲ್ಲ ಎಂದು ಪ್ರತಿಪಾದಿಸಿದೆ.

ಡಿಸೆಂಬರ್ ಮೊದಲ ವಾರದಲ್ಲಿ, ಸ್ವಪ್ನಾ ಸುರೇಶ್ ತನ್ನ ಜೀವಕ್ಕೆ ಅಪಾಯವಿದೆ ಎಂದು ಕೊಚ್ಚಿಯಲ್ಲಿನ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ತಿಳಿಸಿತ್ತು ಮತ್ತು ಜೈಲಿನಲ್ಲಿ ತನಗೆ ಮತ್ತು ತನ್ನ ಕುಟುಂಬ ಸದಸ್ಯರಿಗೂ ವಿಶೇಷ ರಕ್ಷಣೆ ಒದಗಿಸಬೇಕು ಕೋರಿದ್ದಾರೆ.

ದೊಡ್ಡ ಹೆಸರುಗಳನ್ನು ಹೇಳದಂತೆ ಆರೋಪಿಯ ಮೇಲೆ ಒತ್ತಡವಿದೆ ಮತ್ತು ಈ ವಿಷಯದಲ್ಲಿ ಕೆಲವು ಜನರು ಆಕೆಯನ್ನು ಜೈಲಿನಲ್ಲಿ ಭೇಟಿಯಾಗಿದ್ದರು. ನಂತರ ಜೈಲಿನಲ್ಲಿದ್ದ ಆಕೆಗೆ ಸಾಕಷ್ಟು ಭದ್ರತೆ ಒದಗಿಸುವಂತೆ ನ್ಯಾಯಾಲಯ ಜೈಲು ಇಲಾಖೆಗೆ ನಿರ್ದೇಶನ ನೀಡಿತ್ತು.

ನ್ಯಾಯಾಲಯದ ನಿರ್ದೇಶನದ ನಂತರ ಆಕೆ ಇರುವ ಸೆರೆಮನೆಗೆ ಹೆಚ್ಚಿನ ಭದ್ರತೆಯನ್ನು ಹಾಕಲಾಯಿತು.

ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರ ಏಜೆನ್ಸಿಗಳು ಆಕೆ ಮಾಹಿತಿ ಬಹಿರಂಗ ಪಡಿಸಿದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು ಮತ್ತು ಆ ಬಳಿಕ ಆಕೆಯನ್ನು ಭೇಟಿ ಮಾಡುವ ಎಲ್ಲರ ಬಗ್ಗೆ ತನಗೆ ಮಾಹಿತಿ ನೀಡಬೇಕು ಮತ್ತು ಕಸ್ಟಮ್ಸ ಅಧಿಕಾರಿಯೊಬ್ಬರು ಸಂದರ್ಶಕರ ಜೊತೆಗೆ ಇರುತ್ತಾರೆ ಎಂದು ಕಸ್ಟಮ್ಸ್ ಇಲಾಖೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ಆದರೆ ಇದಕ್ಕೆ ಅನುಮತಿ ಅನುಮತಿಸಲಾಗುವುದಿಲ್ಲ, ಅದು ತನ್ನ ಅಧಿಕಾರಿಗಳ ಸಮಗ್ರತೆಯನ್ನು ಪ್ರಶ್ನಿಸುತ್ತದೆ ಎಂದು ಜೈಲು ಇಲಾಖೆ ಹೇಳಿದೆ.

ಜುಲೈ ೫ ರಂದು ರಾಜ್ಯ ರಾಜಧಾನಿಯಲ್ಲಿರುವ ಯುಎಇ ದೂತಾವಾಸಕ್ಕೆ ರವಾನೆ ಮಾಡಾಗಿದ್ದ ಪ್ಯಾಕೇಜಿನಿಂದ ೩೦ ಕೆಜಿ ಚಿನ್ನವನ್ನು ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡ ಬಳಿಕ ಚಿನ್ನದ ಕಳ್ಳಸಾಗಣೆ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಪ್ಯಾಕೇಜ್ ಸ್ವೀಕರಿಸಲು ಬಂದ ದೂತಾವಾಸದ ಮಾಜಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಪಿ.ಎಸ್.ಸರೀತ್ ಕುಮಾರ್ ಅವರನ್ನು ಕಸ್ಟಮ್ಸ್ ಇಲಾಖೆ ಬಂಧಿಸಿತ್ತು.

ಐದು ದಿನಗಳ ನಂತರ ಇತರ ಇಬ್ಬರು ಶಂಕಿತರಾದ ಸ್ವಪ್ನಾ ಸುರೇಶ್ ಮತ್ತು ಅವರ ಸಹಚರ ಸಂದೀಪ್ ನಾಯರ್ ಅವರನ್ನು ಬೆಂಗಳೂರಿನಲ್ಲಿರುವ ಅಡಗುತಾಣದಿಂದ ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿತ್ತು. ಬಳಿಕ ಕೇರಳ ಮುಖ್ಯಮಂತ್ರಿಯವರ ಪ್ರಧಾನ ಕಾರ್‍ಯದರ್ಶಿ ಹಿರಿಯ ಐಎಎಸ್ ಅಧಿಕಾರಿ ಎಂ.ಶಿವಶಂಕರ್ ಅವರನ್ನು ಸ್ವಪ್ನಾ ಸುರೇಶ್ ಜೊತೆಗಿನ ಸಂಪರ್ಕಗಳ ವಿವರ ಹೊರಬಂದಾಗ ಬಂಧಿಸಲಾಗಿತ್ತು.

ತನಿಖೆಯ ಸಮಯದಲ್ಲಿ ಕಾನ್ಸುಲರ್ ಕಚೇರಿಯ ಮೂಲಕ ಕಳ್ಳಸಾಗಣೆ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ  ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

ಪ್ರಸ್ತುತ, ಐದು ಕೇಂದ್ರೀಯ ಏಜೆನ್ಸಿಗಳನ್ನು ಒಳಗೊಂಡ ಬಹು-ಏಜೆನ್ಸಿ ತಂಡವು ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ೩೪ ಜನರನ್ನು ಬಂಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮುಖ್ಯಮಂತ್ರಿಯ ಮತ್ತೊಬ್ಬ ಕಾರ್ಯದರ್ಶಿ ಸಿಎಂ ರವೀಂದ್ರನ್ ಮತ್ತು ರಾಜ್ಯ ಸಚಿವ ಕೆ ಟಿ ಜಲೀಲ್ ಅವರನ್ನು ಒಂದೆರಡು ಬಾರಿ ವಿಚಾರಣೆಗೆ ಗುರಿ ಪಡಿಸಿತ್ತು.

Friday, March 13, 2020

ಕೊರೋನಾ ಹೆಮ್ಮಾರಿ: ವಿಶ್ವಾದ್ಯಂತ ೫೦೦೦ಕ್ಕೂ ಹೆಚ್ಚು ಬಲಿ

ಕೊರೋನಾ ಹೆಮ್ಮಾರಿ: ವಿಶ್ವಾದ್ಯಂತ ೫೦೦೦ಕ್ಕೂ ಹೆಚ್ಚು ಬಲಿ
ಭಾರತದಲ್ಲಿ ೮೧ ಪ್ರಕರಣ, ಚಿನ್ನದ ಬೆಲೆ ಕುಸಿತ, ಸುಪ್ರೀಂಕೋರ್ಟ್ ಮೇಲೂ ಪ್ರಭಾವ
ನವದೆಹಲಿ: ಇಡೀ ಜಗತ್ತನ್ನೇ ಗಡಗಡ ನಡುಗಿಸುತ್ತಿರುವ ಮಾರಕ ಕೋರೋನಾ ವೈರಸ್ ಹೆಮ್ಮಾರಿಗೆ ವಿಶ್ವಾದ್ಯಂತ ಬಲಿಯಾದವರ ಸಂಖ್ಯೆ 2020 ಮಾರ್ಚ್  13ರ ಶುಕ್ರವಾರ  ೫೦೦೦ವನ್ನು ದಾಟಿದ್ದು, ಭಾರತದಲ್ಲಿ ಸೋಂಕಿತರ ಸಂಖ್ಯೆ ೮೧ಕ್ಕೆ ಮುಟ್ಟಿತು.. ಷೇರುಪೇಟೆಯನ್ನು ತಲ್ಲಣಗೊಳಿಸಿರುವ ಕೊರೋನಾ ಚಿನ್ನದ ಮೇಲೂ ಕಣ್ಣ್ನು ಹಾಕಿದ್ದು, ದೆಹಲಿಯಲ್ಲಿ ಚಿನ್ನದ ಬೆಲೆ ೧೦೦೦ ರೂಪಾಯಿಯಷ್ಟು ಕುಸಿಯಿತು. ಸುಪ್ರೀಂಕೋರ್ಟಿನ ವಿಚಾರಣೆ ಮೇಲೂ ಕೋರೋನಾ ನೆರಳುಬಿದ್ದಿದ್ದು ತುರ್ತು ಪ್ರಕರಣಗಳನ್ನು ಮಾತ್ರವೇ ಆಲಿಸುವುದಾಗಿ ಸುಪ್ರೀಂಕೋರ್ಟ್ ಪ್ರಕಟಿಸಿತು.
ಕೊರೋನಾ ವೈರಸ್ ಕಬಂಧಬಾಹು ವಿಶ್ವದ ೧೨೧ ರಾಷ್ಟ್ರಗಳು ಮತ್ತು ಪ್ರದೇಶಗಳಿಗೆ ವ್ಯಾಪಿಸಿ ಸೋಂಕಿತರ ಸಂಖ್ಯೆ ೧,೩೪,೩೦೦ನ್ನು ದಾಟುತ್ತಿದ್ದಂತೆಯೇ ಹೆಮ್ಮಾರಿಗೆ ಬಲಿಯಾದವರ ಸಂಖ್ಯೆ ಶುಕ್ರವಾರ ೫,೦೪೩ಕ್ಕೆ ತಲುಪಿದೆ ಎಂದು ಅಧಿಕೃತ ಮೂಲಗಳು ತಿಳಿಸಿದವು.
ಒಟ್ಟು ೩,೧೭೬ ಮಂದಿ ಚೀನಾದಲ್ಲಿ ಸಾವನ್ನಪ್ಪಿದ್ದರೆ, ೧,೦೧೬ ಮಂದಿ ಇಟಲಿಯಲ್ಲಿ ಮತ್ತು ೫೧೪ ಮಂದಿ ಇರಾನಿನಲ್ಲಿ ಸಾವನ್ನಪ್ಪಿದ್ದು- ಈ ಮೂರು ರಾಷ್ಟ್ರಗಳಲ್ಲಿ ಅತ್ಯಧಿಕ ಸಂಖ್ಯೆಯ ಸಾವುಗಳು ಸಂಭವಿಸಿವೆ. ಚೀನಾದ ವುಹಾನ್ ನಗರದಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ಕೋವಿಡ್-೧೯ ಮೊತ್ತ ಮೊದಲಿಗೆ ಕಂಡು ಬಂದಿತ್ತು.
ಭಾರತದಲ್ಲಿ ವೈರಸ್ ದಾಂಗುಡಿ: ಭಾರತದಲ್ಲಿ ಈವರೆಗೆ ಕೊರೋನಾವೈರಸ್ ಸೋಂಕಿದ್ದು ದೃಢ ಪಟ್ಟಿರುವ ೮೧ ಪ್ರಕರಣಗಳು ವರದಿಯಾಗಿದ್ದು ಈ ಪೈಕಿ ೬೪ ಮಂದಿ ಭಾರತೀಯರು, ೧೬ ಮಂದಿ ಇಟಲಿ ಪ್ರಜೆಗಳು ಮತ್ತು ಒಬ್ಬ ಕೆನಡಾ ಪ್ರಜೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕರ್ನಾಟಕದಲ್ಲಿ ಸಾವನ್ನಪ್ಪಿದ ಒಬ್ಬ ವ್ಯಕ್ತಿ ಕೋರೋನಾ ವೈರಸ್ ಪರಿಣಾಮವಾಗಿಯೇ ಅಸು ನೀಗಿರುವುದಾಗಿ ವೈದ್ಯಕೀಯ ಮೂಲಗಳು ತಿಳಿಸಿದ್ದು, ಭಾರತದಲ್ಲೂ ಒಬ್ಬ ವ್ಯಕ್ತಿ ಬಲಿಯಾದಂತಾಗಿದೆ.
ದೇಶದಲ್ಲಿ ಕೊರೋನಾವೈರಸ್ ಸಾಂಕ್ರಾಮಿಕವಾಗಿಲ್ಲ ಎಂದು ತಿಳಿಸಿದ ಸಚಿವಾಲಯ ಆದರೂ ಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು, ಉಸಿರಾಟ ನೈರ್ಮಲ್ಯ ಮತ್ತು ಸಾಮಾಜಿಕವಾಗಿ ಅಂತರ ಕಾಯ್ದುಕೊಳ್ಳುವ ಬಗ್ಗೆ ಆದ್ಯ ಗಮನ ನೀಡಬೇಕು ಎಂದು ಜನತೆಗೆ ಸಲಹೆ ಮಾಡಿದೆ.
‘ಈವರೆಗೆ ಭಾರತದಲ್ಲಿ ೮೧ ಪ್ರಕರಣಗಳು ದೃಢ ಪಟ್ಟಿವೆ ಅವರಲ್ಲಿ ೬೪ ಮಂದಿ ಭಾರತೀಯರು, ೧೬ ಮಂದಿ ಇಟಲಿ ಪ್ರಜೆಗಳು ಮತ್ತು ೧ ಕೆನಡಾ ಪ್ರಜೆ. ಎಲ್ಲ ಪ್ರಯಾಣಿಕರೂ ತಮ್ಮ ಪ್ರವಾಸದ ವಿವರಗಳನ್ನು ಅಧಿಕಾರಿಗಳಿಗೆ ನೀಡಬೇಕು ಮತ್ತು ವೈದ್ಯರನ್ನು ನೋಡಲು ಹೋಗುವಾಗ ಮುಸುಕು ಧರಿಸುವುದನ್ನು ಮರೆಯಬಾರದು’ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್‍ಯದರ್ಶಿ ಲವ ಅಗರ್‌ವಾಲ್ ನುಡಿದರು.
ವೈರಸ್ ಹರಡುವಿಕೆಯನ್ನು ತಡೆಯಲು ಭಾರತ ಸರ್ಕಾರವು ಭೂ ವಲಸೆ ಚೆಕ್‌ಪೋಸ್ಟ್ ಗಳ ಮೂಲಕ ಅಂತಾರಾಷ್ಟ್ರಿಯ ಸಂಚಾರ ತಪಾಸಣೆಗೆ ನಿರ್ಧರಿಸಿದೆ. ಇಂತಹ ೩೭ ಚೆಕ್ ಪೋಸ್ಟ್ ಗಳು ಇವೆ. ಈ ಪೈಕಿ ೧೯ರ ಮೂಲಕ ಸಾಗಣೆಗೆ ಅವಕಾಶ ನೀಡಲಾಗಿದೆ. ಬಾಂಗ್ಲಾದೇಶದಿಂದ ಗಡಿದಾಟಿ ಬರುವ ಬಸ್ಸುಗಳು ಮತ್ತು ರೈಲುಗಳನ್ನು ಮುಂದೆ ತಿಳಿಸುವವರೆಗೆ ಅಮಾನತುಗೊಳಿಸಲಾಗಿದೆ. ಆದಾಗ್ಯೂ ಭೂತಾನ್ ಮತ್ತು ನೇಪಾಳಿಗರಿಗೆ ಭಾರತಕ್ಕೆ ವೀಸಾಮುಕ್ತ ಪ್ರವೇಶ ಇದೆ ಎಂದು ಅಧಿಕಾರಿ ಹೇಳಿದರು.
ಪಾತಾಳಕ್ಕೆ ಕುಸಿದ ಚಿನ್ನ: ಕೊರೋನಾವೈರಸ್ ಭೀತಿಯ ಹಿನ್ನೆಲೆಯಲ್ಲಿ ಹೂಡಿಕೆದಾರರು ತಮ್ಮ ಚಿನ್ನವನ್ನು ಮಾರಾಟ ಮಾಡಲು ಮುಂದಾದ ಪರಿಣಾಮವಾಗಿ ಚಿನ್ನದ ಬೆಲೆ ಶುಕ್ರವಾರ ದೆಹಲಿಯಲ್ಲಿ ೧೦೦೦ ರೂಪಾಯಿಗಳಷ್ಟು ಕುಸಿಯಿತು.
ದೆಹಲಿಯಲಿ ಹೂಡಿಕೆದಾರರು ನಷ್ಟವನ್ನು ಸರಿದೂಗಿಸಿಕೊಳ್ಳುವ ಕಾತರದಲ್ಲಿ ಸಾಧ್ಯವಿರುವುದೆಲ್ಲವನ್ನೂ ಮಾರಾಟ ಮಾಡಲು ಹೊರಟ ಪರಿಣಾಮವಾಗಿ ಚಿನ್ನದ ಬೆಲೆ ೧,೦೯೭ ರೂಪಾಯಿಗಳಷ್ಟು ಕುಸಿದು ೧೦ ಗ್ರಾಂ ಚಿನ್ನದ ದರ ೪೨,೬೦೦ಕ್ಕೆ ಇಳಿಯಿತು. ಹಿಂದಿನ ದಿನ ಹಳದಿ ಲೋಹದ ಬೆಲೆ ೧೦ ಗ್ರಾಂಗೆ ೪೩,೬೯೭ ರೂಪಾಯಿ ಇತ್ತು.
ಬೆಳ್ಳಿಯ ಬೆಲೆ ಕೂಡಾ ೧,೫೭೪ ರೂಪಾಯಿಗಳಷ್ಟು ಕುಸಿಯಿತು. ಬೆಳ್ಳಿಯ ಬೆಲೆ ಕಿಲೋ ಗ್ರಾಂ ಒಂದಕ್ಕೆ ೪೫,೭೦೪ ರೂಪಾಯಿಗಳಿಂದ ೪೪,೧೩೦ ರೂಪಾಯಿಗಳಿಗೆ ಇಳಿಯಿತು.
ಸುಪ್ರೀಂಕೋರ್ಟಿನ ಮೇಲೂ ಕರಿನೆರಳು: ಕೊರೋನಾವೈಸ್ ಕರಿನೆರಳು ಶುಕ್ರವಾರ ಸುಪ್ರೀಂಕೋರ್ಟಿನ ಮೇಲೂ ಬಿದ್ದಿದ್ದು, ತುರ್ತು ಪ್ರಕರಣಗಳನ್ನು ಮಾತ್ರವೇ ಆಲಿಸಲಾಗುವುದು ಮತ್ತು ವಕೀಲರಿಗೆ ಮಾತ್ರವೇ ಪ್ರವೇಶಾವಕಾಶ ನೀಡಲಾಗಿದೆ ಎಂದು ಅಧಿಕೃತವಾಗಿ ಹೊರಡಿಸಲಾದ ಆದೇಶ ತಿಳಿಸಿದೆ.
ಸುಪ್ರೀಂಕೋರ್ಟ್ ಹೋಳಿ ಬಿಡುವಿನ ಬಳಿಕ ಸೋಮವಾರ ಪುನಾರಂಭವಾಗುವ ನಿರೀಕ್ಷೆ ಇದೆ.
ಕೊರೋನಾವೈರಸ್ ಹರಡುವ ಅಪಾಯವನ್ನು ಕನಿಷ್ಠಗೊಳಿಸುವ ಸಲುವಾಗಿ ಮುಂದಿನ ವಾರ ತುರ್ತು ಪ್ರಕರಣಗಳನ್ನು ಮಾತ್ರವೇ ಆಲಿಸಲು ಸುಪ್ರೀಂಕೋರ್ಟ್ ಶುಕ್ರವಾರ ನಿರ್ಧರಿಸಿತು.
ಸುಪ್ರೀಂಕೋರ್ಟ್ ಹೊರಡಿಸಿದ ಆದೇಶವು ಕೋರ್ಟ್ ಕೊಠಡಿಗೆ ವಕೀಲರು ಮತ್ತು ಕಕ್ಷಿದಾರರಿಗೆ ಮಾತ್ರವೇ ಪ್ರವೇಶಾವಕಾಶ ನೀಡಲು ನಿರ್ಧರಿಸಲಾಗಿದೆ ಎಂದೂ ತಿಳಿಸಿತು.
ಹೆಚ್ಚು ಜನರು ಸೇರುವಂತಹ ಸಮಾವೇಶಗಳನ್ನು ನಡೆಸದಂತೆ ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆ ನೀಡಿರುವುದನ್ನು ಉಲ್ಲೇಖಿಸಿದ ಆರೋಗ್ಯ ಸಚಿವಾಲಯದ ಮಾರ್ಗದರ್ಶಿ ಸುತ್ತೋಲೆಯು ಸಭೆ ಸಮಾರಂಭಗಳನ್ನು ಮುಂದೂಡುವಂತೆ ಸೂಚಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಅವರು ಇತರ ಹಿರಿಯ ನ್ಯಾಯಮೂರ್ತಿಗಳ ಜೊತೆಗೆ ಶುಕ್ರವಾರ ನಡೆಸಿದ ಸಭೆಯ ಬಳಿಕ ಸುಪ್ರೀಂಕೋರ್ಟ್ ಕಲಾಪಗಳನ್ನು ಮಿತಿಗೊಳಿಸಲು ಮತ್ತು  ವಕೀಲರು ಮತ್ತು ಕಕ್ಷಿದಾರರಿಗೆ ಮಾತ್ರವೇ ಪ್ರವೇಶಾವಕಾಶ ಕಲ್ಪಿಸುವ ಆದೇಶವನ್ನು ನೀಡಲಾಯಿತು. ಶುಕ್ರವಾರ ಮತ್ತು ಸೋಮವಾರ ಸಾಮಾನ್ಯವಾಗಿ ಸುಪ್ರೀಂಕೋರ್ಟ್ ಕೊಠಡಿಗಳು ಜನರಿಂದ ಕಿಕ್ಕಿರಿದಿರುತ್ತವೆ.
ಪಂದ್ಯ ರದ್ದಿಗೆ ಬಿಸಿಸಿಐ ನಿರ್ಧಾರ: ಈ ಮಧ್ಯೆ, ದಕ್ಷಿಣ ಆಫ್ರಿಕಾ ವಿರುದ್ಧ ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯದ ಬಾಕಿ ಉಳಿದಿರುವ ಎರಡು ಪಂದ್ಯಾಟಗಳ ವೇಳಾಪಟ್ಟಿಯನ್ನು ಕೊರೋನಾವೈರಸ್ ಹಿನ್ನೆಲೆಯಲ್ಲಿ ಪರಿಷ್ಕರಿಸಲು ಬಿಸಿಸಿಐ (ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ) ಶುಕ್ರವಾರ ನಿರ್ಧರಿಸಿತು. ಪರಿಣಾಮವಾಗಿ ಲಕ್ನೋ ಮತ್ತು ಕೋಲ್ಕತ ಪಂದ್ಯಗಳು ರದ್ದಾದವು.
ಇಂಡಿಯನ್ ಪ್ರೀಮಿಯಲ್ ಲೀಗ್ (ಐಪಿಎಲ್) ಕೊರೋನಾವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತನ್ನ ಪಂದ್ಯಾಟಗಳನ್ನು ಏಪ್ರಿಲ್ ೧೫ಕ್ಕೆ ಮುಂದೂಡಲು ನಿರ್ಧರಿಸಿದ ಬಳಿ ಬಿಸಿಸಿಐ ಕೂಡಾ ತನ್ನ ಪಂದ್ಯಗಳ ದಿನಾಂಕಗಳನ್ನು ಪರಿಷ್ಕರಿಸುವ ನಿರ್ಧಾರ ಕೈಗೊಂಡಿತು.

Saturday, February 22, 2020

ಉತ್ತರಪ್ರದೇಶದ ಎರಡು ಕಡೆ ೩,೩೫೦ ಟನ್ ಚಿನ್ನದ ನಿಕ್ಷೇಪ ಪತ್ತೆ

ಉತ್ತರಪ್ರದೇಶದ ಎರಡು ಕಡೆ ೩,೩೫೦ ಟನ್  ಚಿನ್ನದ ನಿಕ್ಷೇಪ ಪತ್ತೆ
ಲಕ್ನೋ: ಉತ್ತರಪ್ರದೇಶದ ಸೋನ್ ಫಾಡಿ ಮತ್ತು ಹಾರ್ಡಿ ಪ್ರದೇಶದಲ್ಲಿ ಸುಮಾರು ೩೩೫೦ ಟನ್ನುಗಳಷ್ಟು ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ಉತ್ತರಪ್ರದೇಶದ ಭೂವಿಜ್ಞಾನ ಮತ್ತು ಗಣಿ ನಿರ್ದೇಶನಾಲಯ 2020 ಫೆಬ್ರುವರಿ 21ರ ಶುಕ್ರವಾರ  ತಿಳಿಸಿತು.

ಸೋನ್ ಭದ್ರಾ ಜಿಲ್ಲೆಯ ಸೋನ್ ಫಾಡಿ ಪ್ರದೇಶದಲ್ಲಿ ಅಂದಾಜು ೨,೭೦೦ ಟನ್ ಗಳಷ್ಟು ಹಾಗೂ ಹಾರ್ಡಿ ಪ್ರದೇಶದಲ್ಲಿ ೬೫೦ ಟನ್ ಗಳಷ್ಟು ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ವರದಿ ವಿವರಿಸಿತು.

ಈ ಕುರಿತು ವಿವರಿಸಿದ ಜಿಲ್ಲಾ ಗಣಿ ಇಲಾಖಾ ಅಧಿಕಾರಿ ಕೆಕೆ ರಾಯ್  ಅವರು , ರಾಜ್ಯ ಗಣಿ ಇಲಾಖೆ ರಚಿಸಿದ ಏಳು ಜನರ ತಂಡ  2020 ಫೆಬ್ರುವರಿ 20ರ ಗುರುವಾರ ಸೋನ್ ಭದ್ರಾ ಪ್ರದೇಶಕ್ಕೆ ಭೇಟಿ ನೀಡಿತ್ತು. ಚಿನ್ನದ ಗಣಿಗಾರಿಕೆ ಮಾಡುವ ಪ್ರದೇಶವನ್ನು ತಂಡ ಮ್ಯಾಪ್ ಮಾಡಿದ್ದು, ಚಿನ್ನ ನಿಕ್ಷೇಪ ಸ್ಥಳವನ್ನು ಜಿಯೋ ಟ್ಯಾಗಿಂಗ್ (ಸ್ಥಳ ಗುರುತಿಸುವಿಕೆ) ಮಾಡಿರುವುದಾಗಿ ಹೇಳಿದರು.

ಖನಿಜ ಶ್ರೀಮಂತಿಕೆಯ ಸೋನ್ ಭದ್ರಾ ಪ್ರದೇಶದಲ್ಲಿ ಸುಲಭವಾಗಿ ಚಿನ್ನದ ಗಣಿಗಾರಿಕೆ ಮಾಡಬಹುದು.  ಗಣಿಗಾರಿಕೆಯನ್ನು ಗುಡ್ಡಪ್ರದೇಶವನ್ನು ಸುತ್ತುವರಿದಿದೆ. ಈ ಬಗ್ಗೆ ಸರ್ಕಾರ ಕೂಡಲೇ ಹರಾಜು ಪ್ರಕ್ರಿಯೆ ಆರಂಭಿಸಲಿದೆ ಎಂದು ಅವರು ನುಡಿದರು.

ಚಿನ್ನ ಹೊರತುಪಡಿಸಿ ಇಲ್ಲಿ ಅಪರೂಪದ ಯುರೇನಿಯಂ ಇದ್ದಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದರು. ಉತ್ತರಪ್ರದೇಶದ ಬುಂದೇಲ್ ಖಂಡ ಮತ್ತು ವಿಂಧ್ಯಾನ್ ಜಿಲ್ಲೆಯಲ್ಲಿ ಚಿನ್ನ, ವಜ್ರ, ಪ್ಲ್ಯಾಟಿನಂ, ಸುಣ್ಣದ ಕಲ್ಲು, ಗ್ರೆನೈಟ್, ಫಾಸ್ಫೇಟ್ ಖನಿಜ ಹೊಂದಿರುವುದಾಗಿಯೂ ವರದಿ ಹೇಳಿತು.

Advertisement