Showing posts with label Dakshina Kannada. Show all posts
Showing posts with label Dakshina Kannada. Show all posts

Friday, May 23, 2025

ಈ ಹುಂಜ ಹುಟ್ಟಿದ್ದು, ಬೆಳೆದದ್ದು ಎಲ್ಲಿ?

 ಈ ಹುಂಜ ಹುಟ್ಟಿದ್ದು, ಬೆಳೆದದ್ದು ಎಲ್ಲಿ?

ಇದು ವಾಟ್ಸಪ್ಪಿನಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ. ಅದಕ್ಕೊಂದು ಪ್ರಶ್ನಾವಳಿ ರೂಪಿಸಿದ್ದು ಪರ್ಯಾಯ. ಕೆಳಗಿರುವ ವಿಡಿಯೋ ನೋಡಿ, ಬಳಿಕ ನಿಮ್ಮ ಉತ್ತರವನ್ನು ಕೆಳಗೆ ಕಮೆಂಟ್ಸ್‌ ವಿಭಾಗದಲ್ಲಿ ಬರೆಯಿರಿ.


Tuesday, May 23, 2023

ಕ್ಷಮಿಸಿ ಪಂಜಾಜೆ ನಿಮ್ಮ ಮನೆಗೆ ಬರಲಾಗಲಿಲ್ಲ..

 ಕ್ಷಮಿಸಿ ಪಂಜಾಜೆ ನಿಮ್ಮ ಮನೆಗೆ ಬರಲಾಗಲಿಲ್ಲ..

ಕೆಲವು ವ್ಯಕ್ತಿಗಳು ಹಾಗೆ. ಯಾವುದೋ ಸಂದರ್ಭದಲ್ಲಿ ಪರಿಚಯವಾಗುತ್ತಾರೆ. ಬದುಕಿನುದ್ದಕ್ಕೂ ಮರೆಯದೆ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತು ಬಿಡುತ್ತಾರೆ. ವೃತ್ತಿ ಜೀವನದಲ್ಲಿ ಪರಿಚಿತರಾಗುವ ಮಂದಿಯಲ್ಲಿ ಹೀಗೆ ಮನಸ್ಸಿನೊಳಗೆ ನಿಂತು ಬಿಡುವ ಮಂದಿ ಬಲು ಅಪರೂಪ. ಅಂತಹ ಅಪರೂಪದ ಒಬ್ಬ ವ್ಯಕ್ತಿ ಸೂರ್ಯ ನಾರಾಯಣ ಪಂಜಾಜೆ ಸಂಕ್ಷಿಪ್ತದಲ್ಲಿ ಎಸ್‌ ಎನ್‌ ಪಂಜಾಜೆ.

ಸುಮಾರು ಒಂದೂವರೆ ದಶಕಕ್ಕೂ ಹಿಂದಿನ ಕಥೆ ಅದು. ಪ್ರಜಾವಾಣಿ ಕಚೇರಿಯಲ್ಲಿ ನಾನು ಇದ್ದಾಗ ಪಂಚೆ, ಶರಟು ಹಾಕಿಕೊಂಡಿದ್ದ ಆ ವ್ಯಕ್ತಿ ಬಂದಿದ್ದರು.

ʼಯಕ್ಷಗಾನಕ್ಕೊಂದು ಅಕಾಡೆಮಿ ಬೇಕು. ಸಂಗೀತ, ನಾಟಕ, ಸಾಹಿತ್ಯಕ್ಕೆಲ್ಲ ಅಕಾಡೆಮಿಗಳಿವೆ. ಯಕ್ಷಗಾನಕ್ಕೆ ಏಕಿಲ್ಲ? ಹೀಗಾಗಿ ನಾವೊಂದು ವಿನೂತನ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಖಂಡಿತ ಬರಬೇಕು.ʼ ಎಂದು ಆತ್ಮೀಯವಾಗಿ ಮಾತನಾಡಿ, ಆಗ್ರಹಿಸಿ ಹೋಗಿದ್ದರು.

ಆದಿನ, ಮಹಾತ್ಮಾ ಗಾಂಧಿ ರಸ್ತೆಯ ಗಾಂಧಿ ಪ್ರತಿಮೆ ಬಳಿಗೆ ಹೋದರೆ ಯಾವುದೇ ಪ್ರತಿಭಟನೆ, ಘೋಷಣೆಗಳ ಸದ್ದಿಲ್ಲ. ಆದರೆ ಬರೇ ಚೆಂಡೆಯ ಸದ್ದು ಕೇಳುತ್ತಿತ್ತು. ಪಂಜಾಜೆ ಮತ್ತು ಅವರು ಕೆಲವು ಗೆಳೆಯರು ಗಾಂಧಿ ಪ್ರತಿಮೆಯ ಬಳಿ ನಿಂತುಕೊಂಡು ಚೆಂಡೆ ಭಾರಿಸುತ್ತಿದ್ದರು. ಪಕ್ಕದಲ್ಲಿ ದೊಡ್ಡ ಬ್ಯಾನರ್.‌ ʼಯಕ್ಷಗಾನಕ್ಕೂ ಅಕಾಡೆಮಿ ಬೇಕು..ʼ

ಘೋಷಣೆಗಳಿಲ್ಲದೆ ಕಲೆಯ ಪ್ರದರ್ಶನದ ಮೂಲಕವೇ ಯಕ್ಷಗಾನಕ್ಕೆ ಅಕಾಡೆಮಿ ಬೇಕು ಎಂಬ ಕೂಗು ಹಾಕಿದ್ದು ನಿಜಕ್ಕೂ ಪಂಜಾಜೆಯವರ ವಿಶಿಷ್ಟತೆಯಾಗಿತ್ತು. ಅದಾದ ಬಳಿಕ ಸರ್ಕಾರ ಈ ಬೇಡಿಕೆಯನ್ನು ಒಪ್ಪಿಕೊಂಡಿತು.

ಯಕ್ಷಗಾನವನ್ನು ನಾಡಿನಿಂದ ವಿದೇಶದವರೆಗೂ ಒಯ್ಯುವುದಕ್ಕೆ ಕೂಡಾ ಪಂಜಾಜೆ ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಗಳನ್ನು ನಡೆಸಿದ್ದರು.   ರಾಜ್ಯದ ಹಲವೆಡೆ ಅಖಿಲ ಭಾರತ ಯಕ್ಷಗಾನ ಬಯಲಾಟ, ಯಕ್ಷಗಾನಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿದ್ದರು.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕನ್ಯಾನದವರಾದ ಎಸ್.‌ ಎನ್.‌ ಪಂಜಾಜೆ ೧೯೮೦ರ ದಶಕದಲ್ಲಿ ಬೆಂಗಳೂರಿಗೆ ತೆರಳಿ ಯಕ್ಷಗಾನ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಯಕ್ಷಗಾನ ಪಾತ್ರಧಾರಿಯಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ಸಂಘಟಕರಾಗಿದ್ದ ಅವರನ್ನು ಉಡುಪಿಯಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರದ ವತಿಯಿಂದ ನಡೆದ ಮೊದಲ ಸಮಗ್ರ ಯಕ್ಷಗಾನ ಸಾಹಿತ್ಯ ಸಮ್ಮೇಳನದಲ್ಲಿ ಗೌರವಿಸಲಾಗಿತ್ತು.

ಬೆಂಗಳೂರಿನಲ್ಲಿ ವೇಷಭೂಷಣ, ಪ್ರಸಾಧನ ನಿರ್ವಹಿಸುತ್ತಾ ಯಕ್ಷಗಾನ ಬೆಳೆಸಿದವರಲ್ಲಿ ಅವರು ಒಬ್ಬರು.

ಪರಿಚಿತರಾದ ಬಳಿಕ ನಿರಂತರವಾಗಿ ಆತ್ಮೀಯ ಸಂಪರ್ಕದಲ್ಲಿದ್ದ ಪಂಜಾಜೆ ಕೆಲಸ ಸಮಯದ ಹಿಂದೆ ಸಿಕ್ಕಿದ್ದಾಗ ಅವರ ಮನೆಗೊಮ್ಮೆ ಸಕುಟುಂಬ ಸಮೇತರಾಗಿ ಬರಬೇಕು. ಒಂದು ಇಡೀದಿನ ಒಟ್ಟಿಗೆ ಕಾಲ ಕಳೆಯಬೇಕು ಎಂದು ಹಾರೈಸಿದ್ದರು.

ಬರುತ್ತೇನೆ ಎಂದು ಒಪ್ಪಿಕೊಂಡರೂ ಹೋಗಲು ಸಾಧ್ಯವಾಗಿರಲಿಲ್ಲ.

ಇನ್ನು ಅದೆಲ್ಲಿ ಸಾಧ್ಯ?

ಪಂಜಾಜೆ ೨೦೨೩ ಮೇ ೨೨ರ ಸೋಮವಾರ ದೈವಾಧೀನರಾಗಿದ್ದಾರೆ. ಕ್ಷಮಿಸಿ ಪಂಜಾಜೆ.

ಪಂಜಾಜೆ ಅವರ ಪತ್ನಿ ಮನೋರಮಾ, ಪುತ್ರ ಕೈಲಾಸ ಭಟ್‌ ಸೇರಿದಂತೆ ಕುಟುಂಬವರ್ಗ, ಗೆಳೆಯರಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಕೋರುವೆ.

-ನೆತ್ರಕೆರೆ ಉದಯಶಂಕರ

ಅಮೆರಿಕದಲ್ಲಿ ʼಅಕ್ಕʼ ಸಮ್ಮೇಳನಕ್ಕೆ ಅವರು ಚೆಂಡೆಯ ಸದ್ದನ್ನು ಒಯ್ದ ಬಗ್ಗೆ ʼಪರ್ಯಾಯʼ ಪ್ರಕಟಿಸಿದ್ದ ಲೇಖನ ಇಲ್ಲಿದೆ:

'ಅಕ್ಕ' ಅಂಗಳದಲ್ಲಿ 'ಯಕ್ಷ' ವೈಭವ...! Yaksha Vaibhava in Akka Conference...! 

Monday, October 12, 2020

ಖ್ಯಾತ ಕಲಾವಿದ ಮೋಹನ ಸೋನ ನಿಧನ

 ಖ್ಯಾತ ಕಲಾವಿದ ಮೋಹನ ಸೋನ ನಿಧನ

ಸುಳ್ಯ: ಹೆಸರಾಂತ ಕಲಾವಿದ ಮೋಹನ ಸೋನ (೬೪) ಅಲ್ಪ ಕಾಲದ ಅಸೌಖ್ಯದಿಂದ ೨೦೨೦ . ೧೨ ಸೋಮವಾರ ರಾತ್ರಿ ನಿಧನರಾದರು.

ವಿಟ್ಲದ ಸಿ.ಪಿ.ಸಿ.ಆರ್. ನಲ್ಲಿ ಉದ್ಯೋಗಿಯಾಗಿ ನಿವೃತ್ತರಾಗಿದ್ದ ಮೋಹನ್ ಸೋನಾ (೬೪) ಕರ್ನಾಟಕ ಕಂಡ ಪ್ರಸಿದ್ಧ ಕಲಾವಿದ. ಚಿತ್ರ ಕಲಾವಿದರಾಗಿ, ನಾಟಕ ನಟರಾಗಿ, ನಿರ್ದೇಶಕರಾಗಿ ತನ್ನ ಪ್ರತಿಭೆ ಮೆರೆದವರು. ಚೋಮ, ನಾಳೆ ಯಾರಿಗೂ ಇಲ್ಲ, ತೆರೆಗಳಲ್ಲಿ ಅದ್ಭುತ ಅಭಿನಯ ತೋರಿದವರು. ಅನೇಕ ಕಡೆ ಚಿತ್ರಕಲಾ ಪ್ರದರ್ಶನ ಮಾಡಿದವರು. ಸುಳ್ಯದ ಸೋಣಂಗೇರಿಯಲ್ಲಿ ಬಯಲು ಚಿತ್ರಾಲಯ ಮಾಡಿ ಇಡೀ ರಾಜ್ಯದ ಗಮನ ಸೆಳೆದಿದ್ದ ಇವರು, ಕಾರವಾರದ ಕಡಲ ತೀರದಲಿ ಶಿಲ್ಪಗಳನ್ನು ನಿಲ್ಲಿಸಿದ ಖ್ಯಾತಿ ಹೊಂದಿದ್ದಾರೆ.

ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಪತ್ನಿ ಮತ್ತು ಇಬ್ಬರು ಮಕ್ಕಳು,, ಸಹೋದರ ಸಹೋದರಿಯರನ್ನು ಅಗಲಿದ್ದಾರೆ.

Friday, May 15, 2020

ಜಯ ಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ನಿಧನ

ಜಯ ಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ನಿಧನ
ರಾಮನಗರ: ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ, ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ (೬೮)  2020 ಮೇ 15ರ ಶುಕ್ರವಾರ ನಸುಕಿನ ಎರಡು ಗಂಟೆ ಸುಮಾರಿಗೆ ನಿಧನರಾದರು. ಒಂದು ವರ್ಷದ ಹಿಂದೆ ಕ್ಯಾನ್ಸರಿಗೆ ತುತ್ತಾಗಿದ್ದ ಅವರು ಕೆಲವು ದಿನದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿಯೇ ಕೊನೆಯುಸಿರು ಎಳೆದರು. ಇಬ್ಬರು ಪುತ್ರರು, ಮೂವರು ಸಹೋದರರು ಹಾಗೂ ಒಬ್ಬ ಸಹೋದರಿಯನ್ನು ರೈ ಅಗಲಿದ್ದಾರೆ.

ತುಳು ಭಾಷೆಯ ಬಂಟರ
ಕುಟುಂಬದ ನೆಟ್ಟಲ ನಾರಾಯಣ ರೈ ಮತ್ತು ಸುಶೀಲಾ ರೈ ದಂಪತಿಯ ಪುತ್ರನಾಗಿ ಪುತ್ತೂರಿನಲ್ಲಿ ಜನಿಸಿದ ನೆಟ್ಟಲ ಮುತ್ತಪ್ಪ ರೈ ಒಂದು ಕಾಲದಲ್ಲಿ ಭೂಗತ ಲೋಕದ ಡಾನ್ ಎಂದು ಕುಖ್ಯಾತರಾಗಿದ್ದರು. ಮೊದಲ ಪತ್ನಿ ರೇಖಾ ಸಿಂಗಪುರದಲ್ಲಿ ನಿಧನರಾಗಿದ್ದರು. ರಾಖಿ ಮತ್ತು ರಿಕ್ಕಿ ಇಬ್ಬರು ಪುತ್ರರು.

 ತುಳು ಸಿನಿಮಾ ಕಂಚಿಲ್ದ ಬಾಲೆಯಲ್ಲಿ ಮುತ್ತಪ್ಪ ರೈ ಕಾಣಿಸಿಕೊಂಡಿದ್ದರು. ಜಯ ಕರ್ನಾಟಕ ಸಂಘಟನೆಯನ್ನು ಹುಟ್ಟುಹಾಕಿ ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

ನ್ಯಾಯಾಲಯಗಳಲ್ಲಿ ಮುತ್ತಪ್ಪ ರೈ ವಿರುದ್ಧ ಆರೋಪಗಳನ್ನು ಸಾಬೀತುಪಡಿಸಲು ಭದ್ರತಾ ಸಂಸ್ಥೆಗಳು ವಿಫಲವಾದವು. ಆದರೆ ಸಮಾಜ ಅವರನ್ನು ಭೂಗತ ಲೋಕದ ಮಾಜಿ ಡಾನ್ ಎಂದೇ ಗುರುತಿಸುತ್ತಿತ್ತು. ಮುತ್ತಪ್ಪ ರೈ ವಿರುದ್ಧ ಪೊಲೀಸರು ದಂಡ ಸಂಹಿತೆ ೩೦೨ (ಕೊಲೆ) ಮತ್ತು ೧೨೦ಬಿ (ಸಂಚು) ಅನ್ವಯ ಪ್ರಕರಣಗಳನ್ನು ದಾಖಲಿಸಿದ್ದರು. ೨೦೦೧ರಲ್ಲಿ ನಡೆದಿದ್ದ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಸುಬ್ಬರಾಜು ಅವರ ಕೊಲೆ ಪ್ರಕರಣದಲ್ಲಿಯೂ ಮುತ್ತಪ್ಪ ರೈ ಅವರ ಹೆಸರು ಕೇಳಿ ಬಂದಿತ್ತು.

 
ರೌಡಿ ಜಯರಾಜ್ ಕೊಲೆ ಘಟನೆಯ ಬಳಿಕ ದುಬೈ ಸೇರಿದ್ದ ಮುತ್ತಪ್ಪ ರೈ ಅವರನ್ನು ೨೦೦೨ರಲ್ಲಿ ದುಬೈ ಪೊಲೀಸರು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಿದ್ದರು. ಸಿಬಿಐ, ರಾ, ಐಬಿ ಮತ್ತು ಕರ್ನಾಟಕ ಪೊಲೀಸರು ಮುತ್ತಪ್ಪ ರೈ ಅವರ ವಿಚಾರಣೆ ನಡೆಸಿದ್ದರು. ಆದರೆ ಸಾಕ್ಷಿಗಳ ಕೊರತೆಯಿಂದಾಗಿ ರೈ ವಿರುದ್ಧ ಯಾವುದೇ ಆರೋಪಗಳು ಸಾಬೀತಾಗಲಿಲ್ಲ. ಹಫ್ತಾ ವಸೂಲಿ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬೆದರಿಕೆ, ರಕ್ಷಣೆಗಾಗಿ ಹಣ ವಸೂಲಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂನೊಂದಿಗಿನ ನಂಟು ಸೇರಿದಂತೆ ಹತ್ತಾರು ಆರೋಪಗಳು ಮುತ್ತಪ್ಪ ರೈ ಮೇಲಿದ್ದವು.

ಮುತ್ತಪ್ಪ ರೈ ಜೀವನ ಆಧರಿಸಿದ ಚಲನಚಿತ್ರವೊಂದನ್ನು (ರೈ) ರಾಮ್ ಗೋಪಾಲ್ ವರ್ಮಾ ಸಿದ್ಧಪಡಿಸಲು ಯತ್ನಿಸಿದ್ದರು. ಆದರೆ ಚಿತ್ರ ಬಿಡುಗಡೆಯಾಗಲಿಲ್ಲ. ಕ್ಯಾನ್ಸರ್ ನನ್ನನ್ನು ಸಾವಿನ ದವಡೆಗೆ ನೂಕಿರುವುದು ನಿಜ. ಪವಾಡ ಸದೃಶ ರೀತಿಯಲ್ಲಿ ಬದುಕುತ್ತಿದ್ದೇನೆ ಎಂದು ಕಳೆದ ಜನವರಿಯಲ್ಲಿ ಮುತ್ತಪ್ಪ ರೈ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು.

‘ವರ್ಷದ ಹಿಂದೆ ಕುಕ್ಕೆಗೆ ಹೋಗುವ ಸಂದರ್ಭದಲ್ಲಿ ಬೆನ್ನು ನೋವು ಕಾಣಿಸಿಕೊಂಡಿತು. ನಂತರದಲ್ಲಿ ಪರೀಕ್ಷೆ ಮಾಡಲಾಗಿ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ನಂತರ ದೆಹಲಿಯ ಮ್ಯಾಕ್ಸ್, ಚೆನ್ಮೈನ ಅಪೋಲೊ, ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದೆ ಎಂದು ಮಾಹಿತಿ ಹಂಚಿಕೊಂಡಿದ್ದರು.

ಶೇ ೯೦ರಷ್ಟು ಗುಣ ಆಗಿರುವುದಾಗಿ ವೈದ್ಯರು ಹೇಳಿದರು. ಆದರೆ ನಂತರದಲ್ಲಿ ಮಿದುಳಿಗೆ ಕ್ಯಾನ್ಸರ್ ತಗುಲಿತ್ತು. ಕೆಲವು ತಿಂಗಳಷ್ಟೇ ಬದುಕುವುದಾಗಿ ವೈದ್ಯರು ಹೇಳಿದರು. ಹೀಗಾಗಿ ಬಿಡದಿಗೆ ವಾಪಸ್ ಆಗಿದ್ದೇನೆ. ನನಗೀಗ ೬೮ ವರ್ಷ. ಐದು ಗುಂಡು ಬಿದ್ದರೂ ಬದುಕಿದವನು. ಸಾವಿಗೆ ಹೆದರುವುದಿಲ್ಲ. ವಿಲ್ ಪವರ್ನಿಂದ ಬದುಕುತ್ತಿದ್ದೇನೆ. ಸಮಾಜ ಸೇವೆ ಮುಂದುವರಿಸುತ್ತೇನೆ ಎಂದು ಆತ್ಮವಿಶ್ವಾಸದಿಂದ ಮಾತನಾಡಿದ್ದರು.

ವರ್ಷಕ್ಕೆ ೨೫-೩೦ ಕೋಟಿ ತೆರಿಗೆ ಕಟ್ಟುತ್ತಿದ್ದೇನೆ. ಆಸ್ತಿ ಕುರಿತು ಈಗಾಗಲೇ ವಿಲ್ ಮಾಡಿಸಿದ್ದು, ಮಕ್ಕಳಿಗೂ ತಿಳಿಸಿದ್ದೇನೆ. ಕಳೆದ ೧೫-೨೦ ವರ್ಷದಿಂದ ನನ್ನ ಜೊತೆಗಿರುವವರಿಗೆ ಒಂದೊಂದು ನಿವೇಶನ ಕೊಡುವಂತೆ ತಿಳಿಸಿದ್ದೇನೆ. ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ನೇಮಿಸಿದ್ದೇನೆ ಎಂದು ತಮ್ಮ ಅನುಪಸ್ಥಿತಿಯಲ್ಲಿಯೂ ತಮ್ಮನ್ನು ನಂಬಿದವರ ಯೋಗಕ್ಷೇಮಕ್ಕೆ ವ್ಯವಸ್ಥೆ ಮಾಡಿದ್ದ ವಿವರ ತಿಳಿಸಿದ್ದರು. ಪುತ್ತೂರು ಮಹಾಲಿಂಗೇಶ್ವರ  ದೇವಾಲಯಕ್ಕೆ ಬ್ರಹ್ಮರಥವನ್ನು ಸಮರ್ಪಿಸಿದ್ದರು.

Advertisement