Showing posts with label ಇಂದಿನ ಇತಿಹಾಸ History Today (May 11-20). Show all posts
Showing posts with label ಇಂದಿನ ಇತಿಹಾಸ History Today (May 11-20). Show all posts

Thursday, May 20, 2010

ಇಂದಿನ ಇತಿಹಾಸ History Today ಮೇ 20

ಇಂದಿನ ಇತಿಹಾಸ

ಮೇ 20

ಸತತ ಎರಡನೇ ಅವಧಿಗೆ ದೇಶದ ಪ್ರಧಾನಿಯಾಗಿ ಡಾ.ಮನಮೋಹನ್ ಸಿಂಗ್ ಮೇ 22 ರಂದು ಪ್ರಮಾಣ ವಚನ ಸ್ವೀಕರಿಸುವರು ಎಂದು ಪ್ರಕಟಿಸಲಾಯಿತು. ಇದೇ ವೇಳೆ ಸಂಪುಟ ರಚನೆಗೆ ಸಂಬಂಧಿಸಿದಂತೆ ಸಿಂಗ್ ಅವರಿಗೆ ಯುಪಿಎ ಮಿತ್ರಪಕ್ಷಗಳು ಮುಕ್ತ ಅವಕಾಶ ನೀಡಿದವು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ಸಿಂಗ್ ಅವರು ಈದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.

2009: ಸತತ ಎರಡನೇ ಅವಧಿಗೆ ದೇಶದ ಪ್ರಧಾನಿಯಾಗಿ ಡಾ.ಮನಮೋಹನ್ ಸಿಂಗ್ ಮೇ 22 ರಂದು ಪ್ರಮಾಣ ವಚನ ಸ್ವೀಕರಿಸುವರು ಎಂದು ಪ್ರಕಟಿಸಲಾಯಿತು. ಇದೇ ವೇಳೆ ಸಂಪುಟ ರಚನೆಗೆ ಸಂಬಂಧಿಸಿದಂತೆ ಸಿಂಗ್ ಅವರಿಗೆ ಯುಪಿಎ ಮಿತ್ರಪಕ್ಷಗಳು ಮುಕ್ತ ಅವಕಾಶ ನೀಡಿದವು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ಸಿಂಗ್ ಅವರು ಈದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಹಕ್ಕುಮಂಡನೆ ಪತ್ರ ಸ್ವೀಕರಿಸಿದ ರಾಷ್ಟ್ರಪತಿ ಅವರು ಸಿಂಗ್ ನಾಯಕತ್ವವನ್ನು ಪರಿಗಣಿಸಿರುವುದಾಗಿ ತಿಳಿಸಿ,, 22ರಂದು ಪ್ರಮಾಣ ವಚನ ಸ್ವೀಕರಿಸಲು ಸೂಚಿಸಿದರು.

ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ
ಈವರೆಗಿನ ಪ್ರಧಾನಿಗಳು...

ಜವಾಹರ ಲಾಲ್ ನೆಹರೂ
ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಿ ಪಂಡಿತ್ ಜವಾಹರ ಲಾಲ್ ನೆಹರೂ ಅಧಿಕಾರ ಸ್ವೀಕಾರ. ಅವಧಿ ಆಗಸ್ಟ್ 15, 1947 ರಿಂದ ಮೇ 27 1964ರವರೆಗೆ.

ಗುಲ್ಜಾರಿ ಲಾಲ್ ನಂದಾ
ಅಪ್ಪಟ ಗಾಂಧಿವಾದಿ ಗುಲ್ಜಾರಿ ಲಾಲ್ ನಂದಾ ಅವರು ನೆಹರೂ ನಿಧನಾ ನಂತರ ಮೇ 27, 1964ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಅವಧಿ ಜೂನ್ 9, 1964ರವರೆಗೆ. ನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ನಿಧನರಾದ ಸಂದರ್ಭದಲ್ಲಿ 1966ರ ಜನವರಿ 11ರಿಂದ 24ರವರೆಗೆ ಮತ್ತೆ 14 ದಿನಗಳ ಕಾಲ ಪ್ರಧಾನಿಯಾಗಿದ್ದರು.

ಲಾಲ್ ಬಹದ್ದೂರ್ ಶಾಸ್ತ್ರಿ
1964ರ ಜೂನ್ 9ರಿಂದ 1966ರ ಜನವರಿ 11ರವರೆಗೆ ಪ್ರಧಾನಿಯಾಗಿ ಆಳ್ವಿಕೆ.

ಇಂದಿರಾ ಗಾಂಧಿ
ಜನವರಿ 24, 1966ರಿಂದ ಮಾರ್ಚ್ 24, 1977ರವರೆಗೆ ಮತ್ತು 1980 ಜನವರಿ 14ರಿಂದ 31ಅಕ್ಟೋಬರ್ 1984ರವರೆಗೆ ಒಟ್ಟು 5831 ದಿನಗಳ ಕಾಲ ಪ್ರಧಾನಿಯಾಗಿ ಆಳ್ವಿಕೆ. (ತಮ್ಮ ತಂದೆಗಿಂತಲೂ 300 ದಿನ ಕಡಿಮೆ ಅವಧಿ).

ಮೊರಾರ್ಜಿ ದೇಸಾಯಿ
ಪ್ರಥಮ ಕಾಂಗ್ರೆಸ್ಸೇತರ ಪ್ರಧಾನಿಯಾದ ಮೊರಾರ್ಜಿ ದೇಸಾಯಿ ನೇತೃತ್ವದಲ್ಲಿ ಜನತಾ ಪಕ್ಷದ ಸರ್ಕಾರ ಮಾರ್ಚ್ 24, 1977ರಲ್ಲಿ ಅಧಿಕಾರಕ್ಕೆ. ಜುಲೈ 28 1979ರವರೆಗೆ ಆಳ್ವಿಕೆ.

ಚೌಧರಿ ಚರಣ್ ಸಿಂಗ್
ರೈತ ನಾಯಕ ಚರಣ್ ಸಿಂಗ್ ಜುಲೈ 28, 1979ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ. ಜನವರಿ 14, 1980ರವರೆಗೆ 171 ದಿನಗಳ ಆಳ್ವಿಕೆ.

ರಾಜೀವ್ ಗಾಂಧಿ
ದೇಶದ ಪ್ರಥಮ ತರುಣ ಪ್ರಧಾನಿ. ನೆಹರೂ ಮೊಮ್ಮಗನಾದ ರಾಜೀವ್ ಅವರು ತಮ್ಮ 41ನೇ ವಯಸ್ಸಿನಲ್ಲಿ ಅಂದರೆ 31 ಅಕ್ಟೋಬರ್ 1984ರಂದು ತಮ್ಮ ತಾಯಿ ಹತ್ಯೆಯಾದ ದಿನವೇ ಅಧಿಕಾರ ಸ್ವೀಕಾರ, 1 ಡಿಸೆಂಬರ್ 1989ರವರೆಗೆ ಆಡಳಿತ.

ವಿ.ಪಿ.ಸಿಂಗ್
ಜನತಾದಳದ ಮುಖಂಡ ವಿಶ್ವನಾಥ ಪ್ರತಾಪ ಸಿಂಗ್ 2 ಡಿಸೆಂಬರ್, 1989ರಂದು ಅಧಿಕಾರ ಸ್ವೀಕಾರ, 10 ನವೆಂಬರ್, 1990ರವರೆಗೆ 344 ದಿನಗಳ ಕಾಲ ಆಳ್ವಿಕೆ.

ಚಂದ್ರಶೇಖರ್
ಯಂಗ್ ಟರ್ಕ್ ಎಂದೇ ಖ್ಯಾತರಾಗಿದ್ದ ಚಂದ್ರಶೇಖರ್ 10 ನವೆಂಬರ್ 1990ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕಾರ, 21 ಜೂನ್ 1991ರವರೆಗೆ ಆಳ್ವಿಕೆ, ಒಟ್ಟು (224 ದಿನಗಳು).

ಪಿ.ವಿ.ನರಸಿಂಹರಾವ್
ಪ್ರಧಾನಿ ಪಟ್ಟ ಅಲಂಕರಿಸಿದ ದಕ್ಷಿಣ ಭಾರತದ ಪ್ರಥಮ ವ್ಯಕ್ತಿ. 21 ಜೂನ್ 1991ರಿಂದ 10 ಮೇ 1996ರವರೆಗೆ ಸಂಪೂರ್ಣ ಐದು ವರ್ಷಗಳ ಕಾಲ ಆಳ್ವಿಕೆ.

ಎ.ಬಿ.ವಾಜಪೇಯಿ
ಅಟಲ್ ಬಿಹಾರಿ ವಾಜಪೇಯಿ ಮೇ 16 ರಿಂದ 1 ಜೂನ್ 1996ರವರೆಗೆ. ನಂತರ ಎರಡನೇ ಬಾರಿಗೆ 19 ಮಾರ್ಚ್ 1998ರಲ್ಲಿ ಹಾಗೂ ಮೂರನೇ ಬಾರಿಗೆ 13 ಅಕ್ಟೋಬರ್ 1999ರಂದು ಅಧಿಕಾರ ಸ್ವೀಕಾರ. 13 ಮೇ 2004ರವರೆಗೆ ಪ್ರಧಾನಿಯಾಗಿ ಆಳ್ವಿಕೆ.

ಎಚ್.ಡಿ.ದೇವೇಗೌಡ
11ನೇ ಲೋಕಸಭೆಯ ನಾಯಕನಾಗಿ ಹರದನಹಳ್ಳಿ ದೊಡ್ಡೇಗೌಡರ ಮಗ ದೇವೇಗೌಡ 1 ಜೂನ್ 1996ರಿಂದ 21 ಏಪ್ರಿಲ್ 1997ರವರೆಗೆ ಒಟ್ಟು 11 ತಿಂಗಳ ಕಾಲ ಪ್ರಧಾನಿಯಾಗಿ ಆಳ್ವಿಕೆ.

ಐಕೆ ಗುಜ್ರಾಲ್
21 ಏಪ್ರಿಲ್ 1997ರಂದು ಪ್ರಧಾನಿಯಾಗಿ ಗುಜ್ರಾಲ್ ಅಧಿಕಾರ ಸ್ವೀಕಾರ, 28 ನವೆಂಬರ್ 1997ರಲ್ಲಿ ಪ್ರಧಾನಿ ಪದವಿಗೆ ರಾಜೀನಾಮೆ.

ಡಾ.ಮನಮೋಹನ್ ಸಿಂಗ್
ಮನಮೋಹನ್ ಸಿಂಗ್ 22 ಮೇ 2004ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕಾರ.

2009: ಮದುವೆ ಮನೆಯಿಂದ ಹಿಂದಿರುಗುತ್ತಿದ್ದವರನ್ನು ಹೊತ್ತ ಎತ್ತಿನ ಬಂಡಿಯೊಂದು, ತುಂಬಿ ಹರಿಯುತ್ತಿದ್ದ ಹಳ್ಳವನ್ನು ದಾಟುವಾಗ ದುರಂತ ಸಂಭವಿಸಿ 18 ಮಂದಿ ಜಲಸಮಾಧಿಯಾದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಘಟಿಸಿತು. ಮೊಳಕಾಲ್ಮುರು ತಾಲ್ಲೂಕಿನ ಚಿನ್ನದಹಗರಿ ಹಳ್ಳದಲ್ಲಿ ನಡೆದ ಈ ದುರ್ಘಟನೆಯಲ್ಲಿ ಇಬ್ಬರು ತೀವ್ರ ಅಸ್ವಸ್ಥರಾದರು. ನಾಲ್ಕು ಮಂದಿ ನೀರಿನಲ್ಲಿ ಕಾಣೆಯಾದರು. ಮೃತರಲ್ಲಿ 12 ಮಕ್ಕಳು, ಮೂವರು ಪುರುಷರು ಹಾಗೂ ಮೂವರು ಮಹಿಳೆಯರು. ಬಂಡಿ ಮತ್ತು ಎತ್ತುಗಳು ಕಾಣೆಯಾದವು. ಬಂಡಿ ಮದುವೆ ಮನೆಗೆ ಹೋಗುವಾಗ ಇದೇ ಹಳ್ಳವನ್ನು ಯಶಸ್ವಿಯಾಗಿ ದಾಟಿತ್ತು. ಆದರೆ ವಾಪಸಾಗುವಾಗ ದಡದಾಚೆ ಕಾದು ಕುಳಿತಿದ್ದ ಜವರಾಯನನ್ನು ಮೆಟ್ಟಿ ಸಾಗಲು ಅದಕ್ಕೆ ಸಾಧ್ಯವಾಗಲಿಲ್ಲ. ನೀರಿನಲ್ಲಿದ್ದ ಮರಳಿನಲ್ಲಿ ಬಂಡಿಯ ಗಾಲಿ ಸಿಲುಕಿಕೊಂಡು ಈ ದುರಂತ ಸಂಭವಿಸಿತು.

2009: ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಯುಪಿಎ (ಸಂಯುಕ್ತ ಪ್ರಜಾಸತ್ತಾತ್ಮಕ ಮೈತ್ರಿಕೂಟ) ಒಕ್ಕೂಟದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಸೋನಿಯಾ ಅವರ ನಿವಾಸದಲ್ಲಿ ಸಭೆ ಸೇರಿದ್ದ ಒಕ್ಕೂಟದ ವಿವಿಧ ಪಕ್ಷಗಳ ನಾಯಕರು ಅವಿರೋಧವಾಗಿ ಸೋನಿಯಾ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದರು. ಡಿಎಂಕೆ ಪಕ್ಷದ ಅಧ್ಯಕ್ಷ ಕರುಣಾನಿಧಿ ಸೋನಿಯಾ ಅವರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದರೆ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅನುಮೋದಿಸಿದರು.

2009: ತಮಿಳು ವ್ಯಾಘ್ರ ಪಡೆಯ (ಎಲ್‌ಟಿಟಿಇ) ಅಧಿನಾಯಕ ವೇಲುಪಿಳ್ಳೈ ಪ್ರಭಾಕರನ್ ಶವವನ್ನು ಆತನ ಇಬ್ಬರು ಪ್ರಮುಖ ಮಾಜಿ ಸಹಚರರು ಗುರುತಿಸಿದರು. ಎಲ್‌ಟಿಟಿಇಯ ಪೂರ್ವ ವಲಯದ ಕಮಾಂಡರ್ ಆಗಿದ್ದು, 2004ರಲ್ಲಿ ಸಂಘಟನೆಯಿಂದ ಹೊರಬಿದ್ದ ವಿನಾಯಕಮೂರ್ತಿ ಮುರಳೀಧರನ್ ಅಲಿಯಾಸ್ ಕರುಣಾ ಹಾಗೂ ಇತ್ತೀಚೆಗೆ ಸೇನೆಗೆ ಶರಣಾದ ದಯಾ ಮಾಸ್ಟರ್ ಅವರು ಶ್ರೀಲಂಕಾ ಸರ್ಕಾರದ ನಿರ್ದೇಶನದ ಮೇರೆಗೆ ಶವ ದೊರೆತ ಜಾಗಕ್ಕೆ ತೆರಳಿ ಶವವನ್ನು ಗುರುತಿಸಿದರು. 'ಇದು ಪ್ರಭಾಕರನ್ ದೇಹ ಎಂಬುದರಲ್ಲಿ ಸಂಶಯವೇ ಇಲ್ಲ. ಇದು ಆತನ ಸ್ವಯಂಕೃತ ಅಪರಾಧದ ಫಲ. ಆತ ಈಗಿಲ್ಲ ಎಂದು ನೆನೆಸಿಕೊಂಡರೆ ನನಗೆ ಕೊಂಚ ದುಃಖವಾಗುತ್ತದೆ. ಆದರೆ ವಾಸ್ತವದಲ್ಲಿ ಆತ ಯಾರೊಬ್ಬರ ಮಾತನ್ನೂ ಕೇಳುತ್ತಿರಲಿಲ್ಲ. ಹಿಂಸಾಚಾರವೊಂದೇ ಪರಿಹಾರ ಎಂಬುದು ಅವನ ಬಲವಾದ ನಂಬಿಕೆಯಾಗಿತ್ತು' ಎಂದು ದ್ವೀಪರಾಷ್ಟ್ರದ ಸರ್ಕಾರದಲ್ಲಿ ಸಚಿವರಾದ ಕರುಣಾ ಸ್ಮರಿಸಿದರು.

2009: ಎಲ್‌ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ಪತ್ನಿ ಮತಿವಧನಿ, ಹಿರಿಯ ಪುತ್ರಿ ದ್ವಾರಕಾ ಹಾಗೂ ಕಿರಿಯ ಪುತ್ರ ಬಾಲಚಂದ್ರನ್ ಅವರ ಮೃತದೇಹಗಳನ್ನು ಶ್ರೀಲಂಕಾ ಸೇನೆ ಪತ್ತೆ ಹಚ್ಚಿತು. ಪ್ರಭಾಕರನ್ ಶವ ಪತ್ತೆಯಾದ ನಂದಿಕಡಲ್ ಲಗೂನ್ ಪ್ರದೇಶದಲ್ಲೇ ಆತನ ಕುಟುಂಬದವರ ಮೃತದೇಹಗಳನ್ನು ಸಹ ಸೇನೆ ಗುರುತಿಸಿತು.

2009: ಸಿಕ್ಕಿಂನ ನೂತನ ಮುಖ್ಯಮಂತ್ರಿಯಾಗಿ ಆಡಳಿತಾರೂಡ ಸಿಕ್ಕಿಂ ಡೆಮಾಕ್ರಿಟಿಕ್ ಫ್ರಂಟ್ ಅಧ್ಯಕ್ಷ ಐವತ್ತೊಂಬತ್ತು ವರ್ಷದ ಪವನ್‌ಕುಮಾರ್ ಚಾಮ್ಲಿಂಗ್ ಅವರು ದಾಖಲೆಯ ನಾಲ್ಕನೇ ಬಾರಿ ಗ್ಯಾಂಗ್ಟಕ್ ರಾಜಭವನದಲ್ಲಿ ಅಧಿಕಾರ ಸ್ವೀಕರಿಸಿದರು. ರಾಜ್ಯಪಾಲ ಬಿ.ಪಿ.ಸಿಂಗ್ ಅವರು ಚಾಮ್ಲಿಂಗ್ ಮತ್ತು ಸಂಪುಟದ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.

2009: ಎರಡು ದಿನಗಳಿಂದ ಬಳ್ಳಾರಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಹಾಗೂ ಗಾಳಿಗೆ 700ಕ್ಕೂ ಹೆಚ್ಚು ಮನೆಗಳು ಕುಸಿದು, ಹಗರಿಬೊಮ್ಮನಹಳ್ಳಿ ತಾಲ್ಲೂಕು ಸಕ್ರಿಹಳ್ಳಿಯ ಮರುಳಸಿದ್ದಯ್ಯ(55) ಆಲೀಕಲ್ಲು ಮಳೆಯ ಹೊಡೆತಕ್ಕೆ ಸಿಲುಕಿ ಮೃತರಾದರು.

2009: ಆಂಧ್ರಪ್ರದೇಶದ 22 ನೇ ಮುಖ್ಯಮಂತ್ರಿಯಾಗಿ ವೈ.ಎಸ್. ರಾಜಶೇಖರ ರೆಡ್ಡಿ ಅವರು ಹೈದರಾಬಾದಿನಲ್ಲಿ ಅಧಿಕಾರ ಸ್ವೀಕರಿಸಿದರು. ರಾಜ್ಯಪಾಲ ಎನ್.ಡಿ.ತಿವಾರಿ ಅವರು ಇಲ್ಲಿನ ಲಾಲ್ ಬಹದ್ದೂರ್ ಮೈದಾನದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ರೆಡ್ಡಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಅಧಿಕಾರಾವಧಿ ಪೂರ್ಣಗೊಳಿಸಿದ ಹಾಗೂ ಸತತ ಎರಡೇ ಬಾರಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದವರಲ್ಲಿ ರಾಜಶೇಖರ ರೆಡ್ಡಿ ಮೊದಲಿಗರು. ಪ್ರಮಾಣವಚನ ಸ್ವೀಕರಿಸಿದ ಬಳಿಕ ರೆಡ್ಡಿ, ತಾವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಹಾಗೂ ರಾಜ್ಯದ ಜನತೆಯ ಆಶೋತ್ತರಗಳಿಗೆ ಬದ್ಧರಾಗಿರುವುದಕ್ಕೆ ಸಾಕ್ಷಿಯಾಗಿ ವೇದಿಕೆಯಲ್ಲಿಯೇ ಎರಡು ಕಡತಗಳಿಗೆ ಸಹಿ ಹಾಕಿದರು. ಇದರಲ್ಲಿ ಕಡುಬಡವರಿಗೆ ನೀಡುವ ಅಗ್ಗದ ದರ ಅಕ್ಕಿ ಪ್ರಮಾಣವನ್ನು 20 ಕೆ.ಜಿಯಿಂದ 30 ಕೆ.ಜಿಗೆ ಏರಿಸುವ ಹಾಗೂ ರೈತರಿಗೆ ಮತ್ತೆರಡು ತಾಸುಗಳ ಕಾಲ (7ರಿಂದ 9 ತಾಸುಗಳು) ಉಚಿತ ವಿದ್ಯುತ್ ನೀಡುವ ಪ್ರಸ್ತಾವನೆಗಳಿದ್ದವು.

2009: ನೂರಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಇಂಡೊನೇಷ್ಯಾದ ಸೇನಾ ವಿಮಾನ ಜಾವಾ ಪ್ರಾಂತ್ಯದ ವಾಯುನೆಲೆ ಬಳಿ ಅಪಘಾತಕ್ಕೀಡಾಯಿತು. ವಿಮಾನ ಹಳ್ಳಿಯೊಂದರ ಸಾಲು ಮನೆಗಳಿಗೆ ಡಿಕ್ಕಿ ಹೊಡೆದು ಸ್ಛೋಟಗೊಂಡ ಪರಿಣಾಮ 79 ಪ್ರಯಾಣಿಕರು ಸುಟ್ಟು ಭಸ್ಮವಾದರು. 'ಪಶ್ಚಿಮ ಜಾವಾ ಪ್ರಾಂತ್ಯದ ವಾಯುನೆಲೆ ಸಮೀಪವಿರುವ ಜೆಪ್ಲಾಕ್ ಹಳ್ಳಿಯಲ್ಲಿರುವ ಸಾಲು ಮನೆಗಳ ಮೇಲೆ ಅಪ್ಪಳಿಸಿದ 'ಸಿ-130 ಹರ್ಕ್ಯುಲಸ್' ಸೇನಾ ವಿಮಾನವು ಸ್ಥಳದಲ್ಲೇ ಮೂವರನ್ನು ಬಲಿತೆಗೆದುಕೊಂಡು ನಂತರ ಪಕ್ಕದ ಭತ್ತದ ಗದ್ದೆಗೆ ಬಿದ್ದಿತು. ಈ ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ 112 ಮಂದಿ ಪ್ರಯಾಣಿಸುತ್ತಿದ್ದರು.

2009: ಅಪ್ರಾಪ್ತ ವಯಸ್ಸಿನ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ಸ್ವಯಂಘೋಷಿತ ದೇವಮಾನವ ಸಂತೋಷ್ ಮಾಧವನ್‌ಗೆ ಕೇರಳ ನ್ಯಾಯಾಲಯ 16 ವರ್ಷಗಳ ಕಠಿಣ ಶಿಕ್ಷೆ ವಿಧಿಸಿತು. ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ 376 (ಅತ್ಯಾಚಾರ) ಮತ್ತು 342ನೇ (ಅಕ್ರಮ ಬಂಧನ) ವಿಧಿಗಳಡಿ ಆರೋಪಿಗೆ ತಲಾ ಎಂಟು ವರ್ಷಗಳ ಶಿಕ್ಷೆ ವಿಧಿಸಿ ಕೋಚಿಯ (ಕೊಚ್ಚಿಯ) ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕೆ ಹರಿಪಾಲ್ ತೀರ್ಪು ನೀಡಿದರು.

2009: ಪರಿಸರದ ಬಗ್ಗೆ ಹೊಂದಿರುವ ಕಾಳಜಿಗಾಗಿ ರಾಯಲ್ ಹಾರ್ಟಿಕಲ್ಚರಲ್ ಸೊಸೈಟಿ ನೀಡುವ 'ವಿಕ್ಟೋರಿಯ ಪ್ರಶಸ್ತಿ' ರಾಜಕುಮಾರ ಚಾರ್ಲ್ಸ್ ಅವರಿಗೆ ಲಭಿಸಿತು.

2008: ಹುಬ್ಬಳ್ಳಿ ನಗರದ ತಿಮ್ಮಸಾಗರ ಗುಡಿ ಮುಖ್ಯರಸ್ತೆ ಲಿಮ್ಕಾ ವಿಶ್ವದಾಖಲೆಗೆ ಸೇರಿತು. ನಾಗರಿಕರು ವಿಮೆ ಮಾಡಿಸಿದ
ಪ್ರಥಮ ರಸ್ತೆ ಎಂಬ ಹೆಗ್ಗಳಿಕೆ ಈ ರಸ್ತೆಯದ್ದು. ಈ ಭಾಗದ ನಿವಾಸಿಗಳು ರಸ್ತೆಗೆ 2 ಲಕ್ಷ ರೂ. ವಿಮೆ ಮಾಡಿಸಿದ್ದು, ಲಿಮ್ಕಾ ದಾಖಲೆ ಪುಸ್ತಕದಲ್ಲಿ ಈ ರಸ್ತೆ ಸ್ಥಾನ ಪಡೆಯಿತು. ಮೇ 20ರಂದು ಪ್ರಕಟವಾದ 2008ರ ಲಿಮ್ಕಾ ದಾಖಲೆಗಳ ಪುಸ್ತಕದಲ್ಲಿ ಈ ರಸ್ತೆಯ ಚಿತ್ರ ಹಾಗೂ ವಿಮೆ ಬಗೆಗಿನ ವಿವರ ಪ್ರಕಟಿಸಲಾಯಿತು. ಪಾಲಿಕೆ ಆಯುಕ್ತ ಪಿ.ಮಣಿವಣ್ಣನ್ ಅವರ ಅನುಮತಿ ಪಡೆದು, 2007ರ ಆಗಸ್ಟ್ ತಿಂಗಳಲ್ಲಿ ಡಾ.ಮೃತ್ಯುಂಜಯ ಸಿ.ಸಿಂಧೂರ ನೇತೃತ್ವದಲ್ಲಿ ನಾಗರಿಕರು ವಿಮೆ ಮಾಡಿಸಿದ್ದರು. 385 ಮೀಟರ್ ಉದ್ದದ ರಸ್ತೆಗೆ ಓರಿಯಂಟಲ್ ಇನ್ಶೂರೆನ್ಸ್ ಕಂಪೆನಿ ವಾರ್ಷಿಕ 303 ರೂ. ವಾರ್ಷಿಕ ವಿಮಾ ಕಂತು ತುಂಬಿಸಿಕೊಂಡು 2 ಲಕ್ಷ ರೂ ವಿಮೆ ಮಾಡಿತ್ತು. 2007ರ ಆಗಸ್ಟ್ ಎರಡರಿಂದ 2008ರ ಆ. 1ರವರೆಗೆ ವಿಮೆ ಮಾಡಿಸಲಾಗಿತ್ತು. ಈ ರಸ್ತೆಯ ದುರಸ್ತಿಗೆ ತಗುಲುವ ನಿರ್ವಹಣಾ ವೆಚ್ಚವನ್ನು ವಿಮಾ ಕಂಪೆನಿ ಪಾಲಿಕೆಗೆ ಭರಿಸುವುದಾಗಿ ಒಪ್ಪಂದವಾಗಿತ್ತು. ವಿಮಾ ಕಂಪೆನಿಗೆ ಪಾಲಿಕೆ ವತಿಯಿಂದ ಆಯುಕ್ತರು ನಿರಾಕ್ಷೇಪಣಾ ಪತ್ರ ನೀಡಿದ್ದರು

2008: ಕಳ್ಳಬಟ್ಟಿ ಕುಡಿದು ವಿವಿಧ ಕಡೆ ಆಸ್ಪತ್ರೆಗಳಿಗೆ ದಾಖಲಾಗಿದ್ದ ಬೆಂಗಳೂರು, ಕೋಲಾರ, ಹೊಸೂರು, ಕೃಷ್ಣಗಿರಿ, ಆನೇಕಲ್ ನ 56 ಮಂದಿ ಮೃತರಾದರು. ಇದರೊಂದಿಗೆ ಮೃತರ ಸಂಖ್ಯೆ 149ಕ್ಕೆ ಏರಿತು.

2008: ಕಪ್ಪೆಗಳು ಸಾಮೂಹಿಕವಾಗಿ ತಮ್ಮ ವಾಸಸ್ಥಾನಗಳಿಂದ ಹೊರಬಂದ ಕಾರಣ ನೈಋತ್ಯ ಚೀನಾದ ಝುನೈ ಪಟ್ಟಣದಲ್ಲಿ ಸಾವಿರಾರು ಜನ ಈದಿನ ರಾತ್ರಿಯಿಡೀ ತಮ್ಮ ಮನೆಯಿಂದ ಹೊರಗೆ ಬಯಲು ಪ್ರದೇಶದಲ್ಲಿ ಕಾಲ ಕಳೆದರು. ಕಪ್ಪೆಗಳು ಈ ರೀತಿ ಸಾವಿರಾರು ಸಂಖ್ಯೆಯಲ್ಲಿ ಚಲಿಸಿದ್ದರಿಂದ ಭೂಕಂಪವಾಗುವ ಸಾಧ್ಯತೆಯಿದೆ ಎಂದು ಜನ ಭಯಗ್ರಸ್ತರಾಗಿದ್ದರು. 71,000 ಜನರನ್ನು ಬಲಿ ತೆಗೆದುಕೊಂಡ ಮೇ 12ರ ಭೂಕಂಪಕ್ಕೂ ಮುನ್ನ ಕಪ್ಪೆಗಳು ಹೀಗೆ ಸಾಮೂಹಿಕವಾಗಿ ಹೊರಗೆ ಕಾಣಿಸಿಕೊಂಡಿದ್ದವು ಎನ್ನಲಾಗಿದೆ.

2008: ಭಾರತದಲ್ಲಿ ಪ್ರನಾಳ ಶಿಶು ತಂತ್ರಜ್ಞಾನ (ಕೃತಕ ಗರ್ಭಧಾರಣೆ) ರೂಪುಗೊಂಡ ಮೂರು ದಶಕದ ಬಳಿಕ ಮೇಲೆ ವೈದ್ಯಕೀಯ ಬಳಗ ಇದೀಗ ಎಚ್ಚೆತ್ತುಕೊಂಡಿತು. ಅದನ್ನು ಅನ್ವೇಷಿಸಿದ ಡಾ.ಸುಭಾಶ್ ಮುಖರ್ಜಿ ಅವರಿಗೆ ರಾಷ್ಟ್ರೀಯ ಮಾನ್ಯತೆ ನೀಡಬೇಕೆಂದು ವೈದ್ಯಕೀಯ ಬಳಗ ಒತ್ತಾಯಿಸಿತು. 30 ವರ್ಷಗಳ ಹಿಂದೆ ತಾವು ಸಂಶೋಧನೆಯಲ್ಲಿ ತೊಡಗಿದ್ದಾಗ ತಮ್ಮದೇ ವೈದ್ಯಕೀಯ ಕ್ಷೇತ್ರದ ಪರಿಣಿತರು ಹಾಗೂ ಸರ್ಕಾರದಿಂದ ಸಾಕಷ್ಟು ತಾತ್ಸಾರಕ್ಕೆ ಗುರಿಯಾಗಿದ್ದ ಸುಭಾಶ್, ಕಡೆಗೆ ಇದೇ ಕಾರಣದಿಂದ ಬೇಸತ್ತು 1981ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರನಾಳ ಶಿಶು ತಂತ್ರಜ್ಞಾನ ಅನ್ವೇಷಿಸಿದ ಪ್ರಪಂಚದ ಎರಡನೇ ಸಂಶೋಧಕ ಎನ್ನುವ ಹೆಗ್ಗಳಿಕೆ ಕೂಡ ಸುಭಾಶ್ ಮುಖರ್ಜಿ ಅವರದ್ದು. ಇಂಗ್ಲೆಂಡಿನ ಓಲ್ಧಮ್ ಆಸ್ಪತ್ರೆಯಲ್ಲಿ ಡಾ.ಪ್ಯಾಟ್ರಿಕ್ ಸ್ಟೆಪ್ಟೋ ಮತ್ತು ಡಾ.ರಾಬರ್ಟ್ ಎಡ್ವರ್ಡ್ಸ್ ಜಗತ್ತಿನ ಪ್ರಪ್ರಥಮ ಪ್ರನಾಳ ಶಿಶು ಜನಿಸಲು ಕಾರಣವಾದ ನಾಲ್ಕೇ ತಿಂಗಳಲ್ಲಿ ಸುಭಾಶ್ ರೂಪಿಸಿದ್ದ ತಂತ್ರಜ್ಞಾನ ಕೂಡ ಫಲ ನೀಡಿತ್ತು! ಅವರ ಸಂಶೋಧನೆಯ ಫಲವಾಗಿ 1978ರಲ್ಲಿ ಜನಿಸಿದ ಕನುಪ್ರಿಯಾ ಅಗರ್ ವಾಲ್ ಗೆ ಈಗ 30ರ ಪ್ರಾಯ. ಮುಖರ್ಜಿ ಅವರ ಕೊಡುಗೆಯನ್ನು ಗುರುತಿಸಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) 2005-06ರಲ್ಲಿ ಮರಣೋತ್ತರ ಪುರಸ್ಕಾರ ನೀಡಿದ್ದರೂ ಅದು ಸಾಲದು; ತಮ್ಮ ಕಾಲದ ಇತರರಿಗಿಂತ ಹೆಚ್ಚು ದೂರದೃಷ್ಟಿಯ ವಿಜ್ಞಾನಿಯಾಗಿದ್ದ ಅವರ ಹೆಸರಿನಲ್ಲಿ ರಾಷ್ಟ್ರೀಯ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವೊಂದನ್ನು ಸ್ಥಾಪಿಸಬೇಕು ಎಂಬುದು ವೈದ್ಯಕೀಯ ಬಳಗದ ಆಗ್ರಹ.

2008: ಸಾಂಪ್ರದಾಯಿಕ ತೊಗಲುಗೊಂಬೆ ಆಟದಲ್ಲಿ ಬಸವ, ಗಾಂಧಿ, ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಂತಹ ಹೊಸ ಹೊಸ ವಿಷಯ-ವಸ್ತುಗಳ ಪ್ರಯೋಗಗಳನ್ನು ಮಾಡಿ ರಾಷ್ಟ್ರದ ಗಮನ ಸೆಳೆದ ಹಿರಿಯ ರಂಗ ಕಲಾವಿದ ಬಳ್ಳಾರಿಯ ಬೆಳಗಲ್ ವೀರಣ್ಣ (73) ಅವರನ್ನು 2007ರ ಪ್ರತಿಷ್ಠಿತ ಜಾನಪದಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2008: ಮೆದುಳಿಗೆ ತೆರೆದ ಶಸ್ತ್ರಚಿಕಿತ್ಸೆಗೆ ಬದಲಾಗಿ ಲೇಸರ್ ಚಾಕುವನ್ನು ಬಳಸಿ ಅತ್ಯಾಧುನಿಕ ರೀತಿಯಲ್ಲಿ ಶಸ್ತ್ರಚಿಕಿತ್ಸೆ ಮಾಡುವ ವಿಧಾನವನ್ನು ವಿಜ್ಞಾನಿಗಳು ಸಂಶೋಧಿಸಿದರು. ವೈದ್ಯರು ರೇಡಿಯೋ ತರಂಗಗಳ ಮೂಲಕ ಗಾಮಾ ಕಿರಣದ ಚಾಕುವನ್ನು ಬಳಸಿ ಮೆದುಳಿನ ಗೆಡ್ಡೆಯ ಶಸ್ತ್ರಚಿಕಿತ್ಸೆಯನ್ನು ಮಾಡಬಹುದು. ನೋವಿರದ ಈ ಶಸ್ತ್ರಚಿಕಿತ್ಸೆಗೆ ಕೇವಲ ಎರಡು ಗಂಟೆ ಸಾಕು ಎಂಬುದು ವಿಜ್ಞಾನಿಗಳ ವಿವರಣೆ. ಮೆದುಳಿನಲ್ಲಿ ಆದ ಕ್ಯಾನ್ಸರನ್ನು ಸಂಪೂರ್ಣವಾಗಿ ಗುಣಪಡಿಸಲು ಈ ಶಸ್ತ್ರಚಿಕಿತ್ಸೆಯ ಮೂಲಕ ಆಗದಿದ್ದರೂ ರೋಗವನ್ನು ನಿಯಂತ್ರಿಸಿ ರೋಗಿಯು ಹೆಚ್ಚು ಕಾಲ ಬದುಕುವಂತೆ ಮಾಡಬಹುದು. ಮೆದುಳನ್ನು ಸ್ಕ್ಯಾನ್ ಮಾಡಿದ ನಂತರ ತಲೆಯ ಸುತ್ತ ಲೋಹದ ಪಟ್ಟಿಯನ್ನು ಕಟ್ಟಿ ಗೆಡ್ಡೆ ಇರುವ ಜಾಗಕ್ಕೆ ಗಾಮಾ ಕಿರಣದ ಚಾಕುವನ್ನು ಹಾಯಿಸಲಾಗುತ್ತದೆ ಎಂದು ವಿಜ್ಞಾನಿಗಳು ವಿವರಿಸುತ್ತಾರೆ.

2008: ಮುಸ್ಲಿಂ ಯುವಕರು ಭಯೋತ್ಪಾದನಾ ಕೃತ್ಯಗಳತ್ತ ವಾಲದಂತೆ ಅವರಿಗೆ ಪ್ರತಿ ಶುಕ್ರವಾರದ ನಮಾಜ್ ನಂತರ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ನೀಡಲು ಉತ್ತರ ಪ್ರದೇಶದ ಇಮಾಮರು ನಿರ್ಧರಿಸಿದರು. ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ಯಾವುದೇ ಭಯೋತ್ಪಾದಕ ಚಟುವಟಿಕೆಗಳನ್ನು ಒಪ್ಪುವುದಿಲ್ಲ. ನಿಷೇಧಿತ ಉಗ್ರಗಾಮಿ ಸಂಘಟನೆಗಳು ತಮ್ಮ ಭಯೋತ್ಪಾದನಾ ಚಟುವಟಿಕೆಗಳಿಗೆ ಯುವಕರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಸ್ಲಾಮ್ ಹೆಸರಿನಲ್ಲಿ ಅವರನ್ನು ಶೋಷಣೆ ಮಾಡುತ್ತಿವೆ. ಈ ವಿಷಯವನ್ನು ಅವರಿಗೆ ಮನದಟ್ಟು ಮಾಡಲು ಈ ತರಗತಿಗಳು ಶ್ರಮಿಸಲಿವೆ ಎಂದು ಮುಸ್ಲಿಂ ಧರ್ಮ ಗುರುಗಳು ತಿಳಿಸಿದರು. `ಭಯೋತ್ಪಾದನೆ ವಿರುದ್ಧ ಚಳವಳಿ' ಎಂಬ ಅಭಿಯಾನದ ಹೆಸರಿನಲ್ಲಿ ಲಖನೌನ ಉಲೇಮಾ (ಮುಸ್ಲಿಂ ಪಂಡಿತರು) ಗಳು ಫೆಬ್ರುವರಿ ತಿಂಗಳಲ್ಲಿ ಸಭೆಯೊಂದನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ಅವರು ರಾಜ್ಯದ ಎಲ್ಲ ಇಮಾಮರಿಗೂ ಪತ್ರ ಬರೆದು ಭಯೋತ್ಪಾದನಾ ಚಟುವಟಿಕೆಗಳ ವಿರುದ್ಧ ಜಾಗೃತಿ ಮೂಡಿಸಲು ಮನವಿ ಮಾಡಿದ್ದರು.

2008: ಆಂಧ್ರ ಪ್ರದೇಶದ ವಾರಂಗಲ್ ಜಿಲ್ಲೆಯ ಕೋಡಿಶಾಲಾ ಗ್ರಾಮದಲ್ಲಿ ನಸುಕಿನಲ್ಲಿ ಪೊಲೀಸರ ಜೊತೆಗೆ ಸಂಭವಿಸಿದ ಘರ್ಷಣೆಯಲ್ಲಿ ಪ್ರಜಾ ಪ್ರತಿಘಟನ ಸಂಘಟನೆಗೆ ಸೇರಿದ ಇಬ್ಬರು ನಕ್ಸಲೀಯರು ಹತರಾದರು.

2008: ಆರು ತಿಂಗಳುಗಳ ಬಳಿಕ ಭಾರತ ಮತ್ತು ಪಾಕಿಸ್ಥಾನ ಇಸ್ಲಾಮಾಬಾದಿನಲ್ಲಿ ಮಾತುಕತೆ ಪುನರಾರಂಭ ಮಾಡಿದವು. ಭಯೋತ್ಪಾದನೆ, ಕಾಶ್ಮೀರ ವಿಚಾರ ಹಾಗೂ ವಿಶ್ವಾಸ ಮೂಡಿಸುವ ಕ್ರಮಗಳಿಗೆ ಸಂಬಂಧಿಸಿದಂತೆ ವಿವಿಧ ದ್ವಿಪಕ್ಷೀಯ ವಿಷಯಗಳ ಬಗ್ಗೆ ಚರ್ಚಿಸಲು ಉಭಯ ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿಗಳು ಈದಿನ ಇಲ್ಲಿ ಸಭೆ ಸೇರಿದರು.

2008: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣವ್ ಮುಖರ್ಜಿ ಅವರ ಭೇಟಿಯ ಸಂದರ್ಭದಲ್ಲಿ ಸದ್ಭಾವನೆಯ ದ್ಯೋತಕವಾಗಿ 99 ಮಂದಿ ಭಾರತೀಯರು ಅವರಲ್ಲೂ ಬಹುತೇಕ ಮಂದಿ ಮೀನುಗಾರರನ್ನು ಬಿಡುಗಡೆ ಮಾಡುವುದಾಗಿ ಪಾಕಿಸ್ಥಾನವು ಪ್ರಕಟಿಸಿತು. ಒಳಾಡಳಿತ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪ್ರಧಾನಿಯ ಸಲಹೆಗಾರರಾಗಿರುವ ರಹಮಾನ್ ಮಲಿಕ್ ಅವರು ಭಾರತ- ಪಾಕ್ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆ ಆರಂಭಕ್ಕೆ ಸ್ವಲ್ಪ ಮೊದಲು ಈ ಪ್ರಕಟಣೆ ಮಾಡಿದರು.

2007: ವೇದಾಂತ ಭಾರತಿ ಸಂಸ್ಥೆಯು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಘಟಿಸಿದ ಅಭೂತಪೂರ್ವ `ಸೌಂದರ್ಯ ಲಹರಿ ಸ್ತೋತ್ರ ಸಮರ್ಪಣ' ಕಾರ್ಯಕ್ರಮದಲ್ಲಿ ಸಹಸ್ರಾರು ಮಹಿಳೆಯರು ಶಂಕರ ಭಗವತ್ಪಾದ ವಿರಚಿತ ಸೌಂದರ್ಯ ಲಹರಿ ಸ್ತೋತ್ರಗಳನ್ನು ಪಠಿಸಿ ಇತಿಹಾಸ ನಿರ್ಮಿಸಿದರು.

2007: ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಟಾಟಾ ಕಂಪೆನಿಯ ಸಣ್ಣ ಕಾರುಗಳ ಉತ್ಪಾದನಾ ಘಟಕಕ್ಕೆ ಸರ್ಕಾರ ಸ್ವಾಧೀನ ಪಡಿಸಿಕೊಂಡ ಜಮೀನನ್ನು ಮತ್ತೆ ಜನರ ವಶಕ್ಕೆ ತೆಗೆದುಕೊಳ್ಳಲು ಕೃಷಿ ಜಮೀನು ರಕ್ಷಾ ಸಮಿತಿ ಹಾಗೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದಾಗ ಹಿಂಸಾಚಾರ ಭುಗಿಲೆದ್ದು 25ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2007: ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿರುವವರಿಗಾಗಿ ರಕ್ತದಲ್ಲಿ ಸೋಡಿಯಂ ಕ್ಲೋರೈಡ್ ಅಂಶವನ್ನು ನಿಯಂತ್ರಿಸುವ `ಸಲೋನಿ-ಕೆ' ಎಂಬ ಹೆಸರಿನ ಸಸ್ಯಜನ್ಯ ಉಪ್ಪು ತಯಾರಿಸಿರುವುದಾಗಿ ಗುಜರಾತಿನ ಭಾವನಗರದ ಕೇಂದ್ರ ಉಪ್ಪು ಮತ್ತು ಸಮುದ್ರ ರಾಸಾಯನಿಕ ಸಂಶೋಧನಾ ಸಂಸ್ಥೆ ಪ್ರಕಟಿಸಿತು. ಸಮುದ್ರ ಕಳೆ ಮತ್ತು ಸಲಿಕೋರ್ನಿಯಾ ಬ್ರಚಿಟಾ ಎಂಬ ಸಸ್ಯವನ್ನು ಈ ಉಪ್ಪು ತಯಾರಿಸಲು ಇದೇ ಮೊದಲ ಬಾರಿಗೆ ಬಳಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಪಿ.ಕೆ. ಘೋಷ್ ಪ್ರಕಟಿಸಿದರು.

2007: ಹವಾಮಾನ ವೈಪರೀತ್ಯದಿಂದ ಭಾರತದಲ್ಲಿ ಅತಿವೃಷ್ಟಿ ಹಾಗೂ ಭಾರಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದ್ದು, ಕೆಲವೊಮ್ಮೆ ವಿಕೋಪದ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆ ಇದೆ ಎಂದು ವಿಶ್ವಬ್ಯಾಂಕ್ ಅಧ್ಯಯನವೊಂದು ಎಚ್ಚರಿಕೆ ನೀಡಿತು.

2006: ರಾಷ್ಟ್ರದ ಅತ್ಯಂತ ಹಿರಿಯ ವ್ಯಕ್ತಿ ಎಂದು ನಂಬಲಾದ ರಾಜಸ್ತಾನದ ಜೈಪುರದ ಹಿರಿಯಜ್ಜ ಬಡೇ ಮಿಯಾ 130ನೇ ಜನ್ಮದಿನ ಆಚರಿಸಿಕೊಂಡು ಗಿನ್ನೆಸ್ ಪುಸ್ತಕದಲ್ಲಿ ಅತೀ ಹೆಚ್ಚು ವರ್ಷ ಬದುಕಿದ ವ್ಯಕ್ತಿ ಎಂಬುದಾಗಿ ಹೆಸರು ದಾಖಲುಸುವ ಇಚ್ಛೆ ವ್ಯಕ್ತಪಡಿಸಿದರು. ಪಿಂಚಣಿ ಕಾರ್ಡ್ ಪ್ರಕಾರ ಅವರು ಹುಟ್ಟಿದ್ದು 1878ರ ಮೇ 20ರಂದು. ಆದರೆ ತಾನು ಇನ್ನೂ ಹಿಂದೆಯೇ ಹುಟ್ಟಿರುವುದಾಗಿ ಈ ಅಜ್ಜನ ವಾದ.

2006: ದಕ್ಷಿಣ ಚೀನಾ ಸಮುದ್ರದಲ್ಲಿ ಬೀಸಿದ ಭಾರಿ ಚಂಡಮಾರುತಕ್ಕೆ ಸಿಲುಕಿ 160ಕ್ಕೂ ಹೆಚ್ಚು ಮೀನುಗಾರರು ಮೃತರಾದರು.

1983: ಭಾರತದ ಶ್ರೇಷ್ಠ ಹಾಕಿ ಆಟಗಾರರಲ್ಲಿ ಒಬ್ಬರಾದ ಪ್ರಿಥಿಪಾಲ್ ಸಿಂಗ್ ಅವರು ಈದಿನ ಬೆಳಗ್ಗೆ ಲೂಧಿಯಾನದಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಗುಂಡೇಟಿಗೆ ಬಲಿಯಾದರು. ಪಂಜಾಬ್ ಕೃಷಿ ವಿವಿ ಕ್ಯಾಂಪಸ್ಸಿನಲ್ಲಿ ಈ ದುರ್ಘಟನೆ ಸಂಭವಿಸಿತು.

1982: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (ಐ) ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ರಂಗವು 77 ಸ್ಥಾನಗಳನ್ನು ಗೆದ್ದುಕೊಂಡು 140 ಸ್ಥಾನಬಲದ ವಿಧಾನಸಭೆಯಲ್ಲಿ ನಿಚ್ಚಳ ಬಹುಮತ ಗಳಿಸಿಕೊಂಡಿತು.

1975: ಸರ್ ಸೈಯದ್ ಅಹಮದ್ ಖಾನ್ ಮತ್ತು ಅವರ ಮಗ ಸೈಯದ್ ಮಹಮೂದ್ ಆಲಿಗಢದಲ್ಲಿ ಮಹಮ್ಮಡನ್ ಆಂಗ್ಲೋ - ಓರಿಯಂಟಲ್ ಸ್ಕೂಲ್ ಸ್ಥಾಪಿಸಿದರು. 1920ರಲ್ಲಿ ಅದು ಅಲಿಘಡ ಮುಸ್ಲಿಂ ವಿಶ್ವ ವಿದ್ಯಾಲಯವಾಯಿತು.

1957: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಖ್ಯಾತ ಕಾಂಗ್ರೆಸ್ ಧುರೀಣ ಟಿ. ಪ್ರಕಾಶಂ ಅವರು ಹೈದರಾಬಾದಿನಲ್ಲಿ ನಿಧನರಾದರು.

1941: ಜರ್ಮನ್ ಸಮರನೌಕೆ ಬಿಸ್ಮಾರ್ಕ್ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಗ್ರೀನ್ ಲ್ಯಾಂಡ್ ಕರಾವಳಿ ಸಮೀಪ ಬ್ರಿಟಿಷರ ಎಚ್ ಎಂ ಎಸ್ ಹೂಡ್ ನೌಕೆಯನ್ನು ಮುಳುಗಿಸಿತು. ನೌಕೆಯಲ್ಲಿದ್ದ 1421 ಮಂದಿಯ ಪೈಕಿ ಕೇವಲ 3 ಮಂದಿಯನ್ನು ರಕ್ಷಿಸಲು ಸಾಧ್ಯವಾಯಿತು.

1819: ರಾಣಿ ವಿಕ್ಟೋರಿಯಾ ಜನ್ಮದಿನ. ವಿಕ್ಟೋರಿಯಾ (1819-1901) ಇಂಗ್ಲೆಂಡಿನ ಅತ್ಯಂತ ದೀರ್ಘ ಅವಧಿಯ ರಾಣಿ ಎಂಬುದಾಗಿ ಖ್ಯಾತಿ ಪಡೆದ ವ್ಯಕ್ತಿ.

1844: ಸ್ಯಾಮ್ಯುಯೆಲ್ ಮೋರ್ಸ್, ಬಾಲ್ಟಿಮೋರಿನಿಂದ ವಾಷಿಂಗ್ಟನ್ನಿಗೆ ಟೆಲಿಗ್ರಾಫ್ ಸಂದೇಶವನ್ನು ಕಳುಹಿಸುವ ಮೂಲಕ ಅಮೆರಿಕದ ಮೊತ್ತ ಮೊದಲ ಟೆಲಿಗ್ರಾಫ್ ಲೈನ್ ಉದ್ಘಾಟಿಸಿದ.

1686: ಡೇನಿಯಲ್ ಗ್ಯಾಬ್ರಿಯಲ್ ಫ್ಯಾರನ್ ಹೀಟ್ (1686-1736) ಜನ್ಮದಿನ. ಜರ್ಮನಿಯ ವೈದ್ಯನಾದ ಈತ ಆಲ್ಕೋಹಾಲ್ ಥರ್ಮಾಮೀಟರ್, ಮರ್ಕ್ಯುರಿ ಥರ್ಮಾಮೀಟರ್ ಹಾಗೂ ಉಷ್ಣಮಾಪಕವನ್ನು ಸಂಶೋಧಿಸಿದ. ಈತ ಸಂಶೋಧಿಸಿದ ಉಷ್ಣಮಾಪಕಕ್ಕೆ ಈತನ ಹೆಸರನ್ನೇ ಇಟ್ಟು ಗೌರವಿಸಲಾಯಿತು.

Wednesday, May 19, 2010

ಇಂದಿನ ಇತಿಹಾಸ History Today ಮೇ 19

ಇಂದಿನ ಇತಿಹಾಸ

ಮೇ 19

ಬಹುತೇಕ ಭಾರತೀಯ ಭಾಷೆಗಳಿಗೆ ಅನುವಾದಗೊಂಡ `ಘಾಸೀರಾಂ ಕೊತ್ವಾಲ್' ಜನಪ್ರಿಯ ನಾಟಕ ಸೇರಿದಂತೆ 33 ನಾಟಕಗಳನ್ನು ರಚಿಸಿ ಮರಾಠಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಹೆಸರಾಂತ ಸಾಹಿತಿ ವಿಜಯ್ ದೊಂಡೋಪಂತ್ ತೆಂಡೂಲ್ಕರ್ ಈದಿನ ಪುಣೆಯಲ್ಲಿ ನಿಧನರಾದರು. ಮೂಳೆ ರೋಗದಿಂದ ಬಳಲುತ್ತಿದ್ದ ಅವರನ್ನು ಕೆಲವು ವಾರಗಳ ಹಿಂದೆ ಪುಣೆಯ ಪ್ರಯಾಗ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಹಿಂದಿನ ದಿನ ಅವರು ಕೋಮಾಕ್ಕೆ ಜಾರಿದರು. ಆಮೇಲೆ ಅವರಿಗೆ ಪ್ರಜ್ಞೆ ಬರಲೇ ಇಲ್ಲ. ಈದಿನ ಬೆಳಿಗ್ಗೆ 8 ಗಂಟೆಗೆ ತೀರಿಕೊಂಡರು.

2009: ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಕೂಟ ಸರ್ಕಾರ ರಚಿಸುವುದು ಖಾತರಿಯಾಗುತ್ತಿದ್ದಂತೆ ನಾ ಮುಂದು ತಾ ಮುಂದು ಎಂದು ಹಲವು ಪಕ್ಷಗಳು ಬೆಂಬಲ ನೀಡಲು ಮುಂದೆ ಬಂದವು. ಚುನಾವಣಾಪೂರ್ವದಲ್ಲಿ ಕಾಂಗ್ರೆಸ್ ಜೊತೆ ಕಚ್ಚಾಡಿದ್ದ 23 ಸಂಸದರನ್ನು ಹೊಂದಿರುವ ಸಮಾಜವಾದಿ ಪಕ್ಷ (ಎಸ್ಪಿ), 4 ಸದಸ್ಯರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸೇರಿದಂತೆ 21 ಸಂಸದರಿರುವ ಬಹುಜನ ಸಮಾಜ ಪಕ್ಷ (ಬಿಎಸ್ಪಿ), 1 ಸ್ಥಾನ ಗಳಿಸಿದ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್), 3 ಸಂಸದರ ಜೆಡಿಎಸ್ ಬೆಂಬಲ ಸೂಚಿಸಿದವು. ಇದರೊಂದಿಗೆ ಯುಪಿಎ ಸಂಖ್ಯಾಬಲ 300ರ ಗಡಿ ದಾಟಿತು. ಬೆಳಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ, ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಅವರು ಯುಪಿಎಗೆ ಬಾಹ್ಯ ಬೆಂಬಲ ನೀಡುವುದಾಗಿ ಲಖನೌದಲ್ಲಿ ಘೋಷಿಸುತ್ತಿದ್ದಂತೆಯೇ, ಅಮರ್ ಸಿಂಗ್ ಅವರು ದೆಹಲಿಯಲ್ಲಿ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ತಮ್ಮ ಪಕ್ಷದ ಬೆಂಬಲ ಪತ್ರವನ್ನು ಸಲ್ಲಿಸಿಬಿಟ್ಟರು.

2009: ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕನಾಗಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅವರು ಮರು ಆಯ್ಕೆಗೊಂಡರು. ಚುನಾವಣಾ ಪೂರ್ವ ಮಿತ್ರರು, ಮಿತ್ರರಲ್ಲದವರಿಂದಲೂ ಪೈಪೋಟಿ ಮೇಲೆ ಬೋನಸ್ ರೂಪದಲ್ಲಿ ಬೆಂಬಲದ ಮಹಾಪೂರ ಹರಿದು ಬಂದ ಸಂಭ್ರಮದ ಮಧ್ಯೆಯೇ, ಮನಮೋಹನ್ ಸಿಂಗ್ (76) ಅವರ ಪ್ರಧಾನಿ ಪಟ್ಟದ ಎರಡನೇ ಇನಿಂಗ್ಸ್ ಆರಂಭಕ್ಕೆ ಶ್ರೀಕಾರ ಹಾಕಲಾಯಿತು.

2009: ವಿಶ್ವದ ಅತ್ಯಂತ ಬಲಿಷ್ಠ ಉಗ್ರ ಕಾರ್ಯಜಾಲದ ರೂವಾರಿ, ವ್ಯಾಘ್ರ ಪಡೆ ಎಲ್‌ಟಿಟಿಇಯ ಅಧಿನಾಯಕ ವೇಲುಪಿಳ್ಳೈ ಪ್ರಭಾಕರನ್ ಸಾವನ್ನು ಶ್ರೀಲಂಕಾದ ರಕ್ಷಣಾ ಸಚಿವಾಲಯ ದೃಢ ಪಡಿಸಿತು. ಇದಕ್ಕೆ ಪೂರಕವೆಂಬಂತೆ ಗುಂಡೇಟಿನಿಂದ ಗಾಯ ಗೊಂಡ ಆತನ ಮೃತದೇಹದ ಚಿತ್ರಗಳನ್ನು ಸರ್ಕಾರಿ ಸ್ವಾಮ್ಯದ ಟಿವಿಗೆ ಬಿಡುಗಡೆ ಮಾಡಿತು. 'ಪ್ರಭಾಕರನ್ ಶವ ನಂದಿಕಡಲ್ ಲಗೂನ್‌ನಲ್ಲಿ ಪತ್ತೆಯಾಗಿದೆ. ಎಲ್‌ಟಿಟಿಇಯ ಸಮವಸ್ತ್ರದಲ್ಲಿದ್ದ ಆತನ ತಲೆಗೆ ಗುಂಡಿನ ಗಾಯಗಳಾಗಿವೆ' ಎಂದು ಸೇನಾ ವಕ್ತಾರ ಬ್ರಿಗೇಡಿಯರ್ ಉದಯ ನನಯಕ್ಕಾರ ತಿಳಿಸಿದರು. ಇದಕ್ಕೆ ಮುನ್ನ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರು ಸಂಸತ್ತನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಬಂಡು ಕೋರ ಸಂಘಟನೆಯ ವಿರುದ್ಧ ಸೇನೆಯ ದಿಗ್ವಿಜಯವನ್ನು ಘೋಷಿಸಿದ್ದರೂ, ಒಮ್ಮೆಯೂ ಪ್ರಭಾಕರನ್ ಸಾವಿನ ಪ್ರಸ್ತಾಪ ಮಾಡಿರಲಿಲ್ಲ. ಜತೆಗೆ ಎಲ್‌ಟಿಟಿಇ ಪರ ವೆಬ್‌ಸೈಟ್ ಸಹ ತನ್ನ ನಾಯಕ ಇನ್ನೂ ಬದುಕುಳಿದಿದ್ದಾನೆ ಎಂದೇ ಪ್ರತಿಪಾದಿಸಿತ್ತು. ಇದು ಪ್ರಭಾಕರನ್ ಸಾವಿನ ಸುತ್ತ ಸಂಶಯದ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಆದರೆ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿದ ವಿಡಿಯೊ ದೃಶ್ಯಗಳಲ್ಲಿ, ಮುತ್ತುತ್ತಿದ್ದ ನೊಣಗಳ ನಡುವೆ ಬಿಟ್ಟ ಕಣ್ಣು ಬಿಟ್ಟಂತೆಯೇ ಸೇನೆಯ ಸ್ಟ್ರೆಚರ್ ಮೇಲೆ ನಿಶ್ಚೇಷ್ಟಿತವಾಗಿದ್ದ ಆತನ ದೇಹ ಈ ಎಲ್ಲಾ ಸಂದೇಹಗಳಿಗೂ ಒಂದೇ ಕ್ಷಣದಲ್ಲಿ ಅಂತ್ಯ ಹಾಡಿತು. ಇದರೊಂದಿಗೆ ಪ್ರತ್ಯೇಕ ತಮಿಳು ರಾಷ್ಟ್ರಕ್ಕಾಗಿ ತನ್ನ ಜೀವವನ್ನೇ ಮುಡುಪಾಗಿಟ್ಟ ಪ್ರಭಾಕರನ್‌ನ ಬದ್ಧತೆ ಸಹ ಜಗಜ್ಜಾಹೀರಾಯಿತು. ಗುಂಡೇಟು ತಗುಲಿದ್ದ ಆತನ ನೆತ್ತಿಗೆ ಕರವಸ್ತ್ರ ಸುತ್ತಿ ಮುಖ ಸ್ಪಷ್ಟವಾಗಿ ಕಾಣುವಂತೆ ಕೊಂಚ ಎತ್ತಿ ಹಿಡಿದ ಭಂಗಿಯಲ್ಲಿ, ಸೈನಿಕರು ದೇಹವನ್ನು ಟಿವಿ ಕ್ಯಾಮೆರಾಗೆ ಪ್ರದರ್ಶಿಸುತ್ತಿದ್ದಂತೆಯೇ ಕುಖ್ಯಾತ ನಾಯಕನ ದುರಂತ ಅಂತ್ಯಕ್ಕೆ ಬೇರೆ ಯಾವುದೇ ಸಾಕ್ಷಿ ಬೇಕಾಗಲಿಲ್ಲ. ಆದರೂ ಡಿಎನ್‌ಎ ಪರೀಕ್ಷೆ ನಡೆಸಿ ಆತನ ಸಾವನ್ನು ನಿಖರಪಡಿಸುವುದಾಗಿ ಸೇನೆಯ ವಕ್ತಾರರು ಹೇಳಿದರು. ಅತ್ತ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯ ರೂವಾರಿ ಮತ್ತು ಆ ಕಾರಣಕ್ಕಾಗೇ ವಿಶ್ವದಲ್ಲೇ ಮೊದಲ ಬಾರಿ ಮಹಿಳಾ ಆತ್ಮಹತ್ಯಾ ದಳ ಬಳಸಿದ ಅಪಖ್ಯಾತಿಗೆ ಗುರಿಯಾಗಿದ್ದ ವ್ಯಕ್ತಿ ಅರಣ್ಯ ಮಧ್ಯದ ಕೆಸರಿನಲ್ಲಿ ಇಹದ ಗೊಡವೆ ಇಲ್ಲದೆ ಮಲಗಿದ್ದರೆ, ಇತ್ತ ಭಾರತದಲ್ಲಿ ರಾಜೀವ್ ಅವರ ಪತ್ನಿ ಸೋನಿಯಾ ಮತ್ತು ಪುತ್ರ ರಾಹುಲ್ ಗಾಂಧಿ ಹೊಸ ಸರ್ಕಾರ ರಚನೆಯ ಗುಂಗಿನಲ್ಲಿ ಮುಳುಗಿಹೋಗಿದ್ದರು. ಕಾಕತಾಳೀಯವೆಂಬಂತೆ ಭಾರತದ ಟಿವಿ ವಾಹಿನಿಗಳು ಇಡೀ ದಿನ ಈ ಎರಡೂ ಸುದ್ದಿಗಳನ್ನು ಒಂದರ ನಂತರ ಒಂದು ಬಿತ್ತರಿಸುತ್ತಲೇ ಇದ್ದವು.

2009: 2008ರ ಕೊಂಕಣಿ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಆರು ಜನರಿಗೆ ನೀಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಕೆ. ನಾರಾಯಣ ಖಾರ್ವಿ ಮಂಗಳೂರಿನಲ್ಲಿ ಪ್ರಕಟಿಸಿದರು. ಕೊಂಕಣಿ ಸಾಹಿತ್ಯ ಪ್ರಶಸ್ತಿಗೆ (ಸಾಹಿತ್ಯ) ಲೇಖಕ ಜೆ.ಬಿ. ಮೊರಾಯಿಸ್, ಕೊಂಕಣಿ ಜಾನಪದ ಪ್ರಶಸ್ತಿಗೆ ವಾಸುದೇವ ನಾಯಕ್, ಕೊಂಕಣಿ ಸಂಘಟಕ ಪ್ರಶಸ್ತಿಗೆ ಬಸ್ತಿ ವಾಮನ ಶೆಣೈ ಅವರನ್ನು ಆಯ್ಕೆ ಮಾಡಲಾಗಿದೆ. ಕೊಂಕಣಿ ಪುಸ್ತಕ ಪುರಸ್ಕಾರಕ್ಕೆ ಪಾಲ್ ಮೊರಾಸ್ ಹಾಗೂ ಎಡ್ವರ್ಡ್ ಸೆರಾವೊ ಅವರು ಪಾತ್ರರಾಗಿದ್ದಾರೆ. ಮಾಲತಿ ಕಾಮತ್ ಅವರಿಗೆ ಕೊಂಕಣಿ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಖಾರ್ವಿ ಹೇಳಿದರು.

2008: ಹಸಿರು ಮನೆ ಅನಿಲಗಳಾದ ಇಂಗಾಲದ ಡೈಆಕ್ಸೈಡ್ ಹಾಗೂ ಮಿಥೇನ್ ಹೊರಸೂಸುವಿಕೆ ಪ್ರಮಾಣ ಇತ್ತೀಚೆಗೆ ಅತಿ ಹೆಚ್ಚಾಗಿದೆ ಎಂಬುದು ದಕ್ಷಿಣ ಧ್ರುವ ಅಂಟಾರ್ಟಿಕಾದ ಹಿಮಪದರಗಳಲ್ಲಿ ಅಡಗಿರುವ ಅನಿಲಗಳ ಅಧ್ಯಯನದಿಂದ ಸಾಬೀತಾಯಿತು. ಹಿಮಪದರಗಳ ನಡುವಿನ ಅನಿಲಗಳ ಅಧ್ಯಯನ ನಡೆಸಿದ ವಿಜ್ಞಾನಿಗಳು ಕಳೆದ 8 ಲಕ್ಷ ವರ್ಷಗಳಿಗೆ ಹೋಲಿಸಿದಾಗ ಈ ಅನಿಲ ಹೊರಸೂಸುವಿಕೆ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಮಾಲಿನ್ಯಕಾರಕ ಹಸಿರು ಮನೆ ಅನಿಲಗಳ ಪ್ರಮಾಣಕ್ಕೂ ಜಾಗತಿಕ ತಾಪಮಾನ ಹೆಚ್ಚಳಕ್ಕೂ ನೇರ ಸಂಬಂಧವಿದೆ ಎಂಬುದನ್ನು ಈ ಅಧ್ಯಯನ ಇನ್ನಷ್ಟು ದೃಢಗೊಳಿಸಿತು. ಹಿಮಪದರಗಳ ನಡುವೆ ಲಕ್ಷಗಟ್ಟಲೆ ವರ್ಷಗಳಿಂದ ಸಿಲುಕಿಕೊಂಡಿರುವ ಅನಿಲ ಕಣಗಳಲ್ಲಿ ಇಂಗಾಲದ ಡೈಆಕ್ಸೈಡ್ ಪ್ರಮಾಣ ಹತ್ತು ಲಕ್ಷ ವಾಯು ಕಣಗಳಲ್ಲಿ 200-300ರಷ್ಟು ಇದ್ದರೆ, ಇತ್ತೀಚಿನ ವರ್ಷಗಳಲ್ಲಿ ವಾತಾವರಣದಲ್ಲಿ ಹತ್ತು ಲಕ್ಷ ವಾಯು ಕಣಗಳಲ್ಲಿ 380ರಷ್ಟು ಇಂಗಾಲದ ಡೈಆಕ್ಸೈಡ್ ಅಣುಗಳು ಕಾಣಿಸುತ್ತಿವೆ. ಲಕ್ಷ ವರ್ಷ ಹಿಂದೆ ಮಿಥೇನ್ ಪ್ರಮಾಣ ಒಂದು ಶತಕೋಟಿ ವಾಯು ಕಣಗಳಲ್ಲಿ 400-700ರಷ್ಟು ಇದ್ದರೆ, ಈಗ ವಾತಾವರಣದಲ್ಲಿ ಒಂದು ಶತಕೋಟಿ ವಾಯು ಕಣಗಳಲ್ಲಿ 1,800ರಷ್ಟು ಮಿಥೇನ್ ಅಣುಗಳು ಇವೆ ಎಂಬುದು ವಿಜ್ಞಾನಿಗಳ ವಿವರಣೆ.

2008: ಖ್ಯಾತ ಗೀತ ರಚನೆಕಾರ ಆರ್. ಎನ್. ಜಯಗೋಪಾಲ್ (73) ಅವರು ಈದಿನ ಬೆಳಗ್ಗೆ ಚೆನ್ನೈಯ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಕನ್ನಡ ಚಲನಚಿತ್ರೋದ್ಯಮದಲ್ಲಿ ಅರ್ಧ ಶತಮಾನದಷ್ಟು ಕಾಲ ಚಿತ್ರಗೀತೆಗಳನ್ನು ನೀಡಿ ರಂಜಿಸಿದ ಜಯಗೋಪಾಲ್ ಅವರು ಖ್ಯಾತ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಆರ್. ನಾಗೇಂದ್ರರಾವ್ ಅವರ ಪುತ್ರ. ತಂದೆಯ ಚಿತ್ರ `ಪ್ರೇಮದ ಪುತ್ರಿ' ಚಿತ್ರಕ್ಕಾಗಿ 1957ರಲ್ಲಿ ತಮ್ಮ ಚೊಚ್ಚಲ `ತ್ರಿಭುವನ ಜನನಿ ಜಗನ್ಮೋಹಿನಿ' ಗೀತೆಯನ್ನು ರಚಿಸಿದ್ದ ಜಯಗೋಪಾಲ್ ಅವರು `ಕರ್ಪೂರದ ಗೊಂಬೆ ನಾನು, ಮಿಂಚಂತೆ ಬಳಿ ಬಂದೆ ನೀನು', `ಹೂವು ಚೆಲುವೆಲ್ಲಾ ನಂದೆಂದಿತು', `ನೀರಿನಲ್ಲಿ ಅಲೆಯ ಉಂಗುರ', `ಹಾಡೊಂದ ಹಾಡುವೆ ನೀ ಕೇಳು ಮಗುವೇ'. `ಗಗನವು ಎಲ್ಲೋ ಭೂಮಿಯು ಎಲ್ಲೋ' ಇತ್ಯಾದಿ ಜನಪ್ರಿಯ ಗೀತೆಗಳು ಸೇರಿದಂತೆ 1650ಕ್ಕೂ ಅಧಿಕ ಚಿತ್ರಗೀತೆಗಳನ್ನು ರಚಿಸಿದವರು. ಚಿ. ಉದಯಶಂಕರ್, ಪುಟ್ಟಣ್ಣ ಕಣಗಾಲ್, ಡಾ. ರಾಜಕುಮಾರ್ ಸಮಕಾಲೀನರಾಗಿ ಮಿಂಚಿದ ಜಯಗೋಪಾಲ್ ಅವರು ಸರಳವಾಗಿ ಜನರಿಗೆ ಅರ್ಥವಾಗುವಂತೆ ಚಿತ್ರಗೀತೆ ಬರೆಯುವ ಕಲೆಯನ್ನು ಅದ್ಭುತವಾಗಿ ರೂಢಿಸಿಕೊಂಡಿದ್ದರು. ಜಯಗೋಪಾಲ್ ಅವರ ಸಹೋದರ ಆರ್.ಎನ್. ಸುದರ್ಶನ್ ಹಾಗೂ ಆರ್.ಎನ್.ಕೆ ಪ್ರಸಾದ್ ಸಹ ಚಿತ್ರರಂಗದಲ್ಲಿ ದುಡಿದವರು. ಕನ್ನಡ ಚಲನಚಿತ್ರಗಳ ಗೀತರಚನೆಕಾರರಾಗಿ ಹೆಸರು ಮಾಡಿದ ಜಯಗೋಪಾಲ್ ನಿರ್ದೇಶಕರಾಗಿಯೂ ಕೆಲಸ ಮಾಡಿದವರು. `ಜನನಿ' ಮೆಗಾ ಧಾರಾವಾಹಿ ನಿರ್ಮಿಸುವ ಮೂಲಕ ಕಿರುತೆರೆಯ ಮಾಧ್ಯಮವನ್ನು ಕೂಡ ದುಡಿಸಿಕೊಂಡ ಜಯಗೋಪಾಲ್ ಅವರ ನಿರ್ಮಾಣ ನಿರ್ದೇಶನದ `ರಾಮಾಯಣ' ಧಾರಾವಾಹಿಯು ಉದಯ ವಾಹಿನಿಯಲ್ಲಿ ವಾರಕ್ಕೊಮ್ಮೆ ಬೆಳಕು ಕಂಡಿತು. `ತ್ರಿಭುವನ ಜನನಿ' (ಪ್ರೇಮದ ಪುತ್ರಿ), `ದೋಣಿಯೊಳಗೆ ನೀನು' (ಉಯ್ಯಾಲೆ), `ಹಾಡೊಂದ ಹಾಡುವೆ ನೀ ಕೇಳು ಮಗುವೇ' (ನಾಂದಿ), `ಗಗನವು ಎಲ್ಲೋ ಭೂಮಿಯು ಎಲ್ಲೋ' (ಗೆಜ್ಜೆಪೂಜೆ), `ಹೂವು ಚೆಲುವೆಲ್ಲ ತಂದೆಂದಿತು' (ಹಣ್ಣೆಲೆ ಚಿಗುರಿದಾಗ), `ನಗುವ ನಯನ ಮಧುರ ಮೌನ' (ಪಲ್ಲವಿ ಅನುಪಲ್ಲವಿ) ಹಾಡುಗಳು ಅವರ ನೂರಾರು ಹಾಡುಗಳ ಪೈಕಿ ಸದಾ ನೆನಪಿನಲ್ಲಿ ಉಳಿಯುವಂತಹವು. ತಂದೆ ಎರ್.ಎನ್. ನಾಗೇಂದ್ರ ರಾಯರ ಮಾರ್ಗದರ್ಶನದಲ್ಲಿ ಬೆಳೆದ ಜಯಗೋಪಾಲ್, ಬೆಂಗಳೂರಿನ ಪೀಣ್ಯದಲ್ಲಿ ಅಪ್ಪನ ಹೆಸರಿನಲ್ಲೇ ಸ್ಟುಡಿಯೋ ಒಂದನ್ನು ಕಷ್ಟಪಟ್ಟು ನಿರ್ಮಿಸಿ ಬಹುಕಾಲದ ಕನಸನ್ನು ನನಸಾಗಿಸಿಕೊಂಡಿದ್ದರು. ರಾಜ್ ಕುಮಾರ್ ಅಭಿನಯದ `ಧೂಮಕೇತು', `ನಾ ಮೆಚ್ಚಿದ ಹುಡುಗ' ಸೇರಿದಂತೆ ಎಂಟು ಚಿತ್ರಗಳನ್ನು ಜಯಗೋಪಾಲ್ ನಿರ್ದೇಶಿಸಿದ್ದರು. ರಾಜ್ಯ ಚಲನಚಿತ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ತಮಿಳುನಾಡು ಸರ್ಕಾರ ಜೀವಮಾನದ ಸಾಧನೆಗೆ ನೀಡುವ ಕಲೈಮಾಮಣಿ ಪುರಸ್ಕಾರ ಸೇರಿದಂತೆ ಅನೇಕ ಸಮ್ಮಾನಗಳು ಜಯಗೋಪಾಲ್ ಅವರಿಗೆ ಸಂದಿದ್ದವು.

2008: ಬಹುತೇಕ ಭಾರತೀಯ ಭಾಷೆಗಳಿಗೆ ಅನುವಾದಗೊಂಡ `ಘಾಸೀರಾಂ ಕೊತ್ವಾಲ್' ಜನಪ್ರಿಯ ನಾಟಕ ಸೇರಿದಂತೆ 33 ನಾಟಕಗಳನ್ನು ರಚಿಸಿ ಮರಾಠಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಹೆಸರಾಂತ ಸಾಹಿತಿ ವಿಜಯ್ ದೊಂಡೋಪಂತ್ ತೆಂಡೂಲ್ಕರ್ ಈದಿನ ಪುಣೆಯಲ್ಲಿ ನಿಧನರಾದರು. ಮೂಳೆ ರೋಗದಿಂದ ಬಳಲುತ್ತಿದ್ದ ಅವರನ್ನು ಕೆಲವು ವಾರಗಳ ಹಿಂದೆ ಪುಣೆಯ ಪ್ರಯಾಗ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಹಿಂದಿನ ದಿನ ಅವರು ಕೋಮಾಕ್ಕೆ ಜಾರಿದರು. ಆಮೇಲೆ ಅವರಿಗೆ ಪ್ರಜ್ಞೆ ಬರಲೇ ಇಲ್ಲ. ಈದಿನ ಬೆಳಿಗ್ಗೆ 8 ಗಂಟೆಗೆ ತೀರಿಕೊಂಡರು. 1928ರ ಜನವರಿ 6ರಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ವಿಜಯ್ ಜನಿಸಿದ್ದರು. ಗುಮಾಸ್ತರಾಗಿದ್ದ ಅವರ ತಂದೆ ಸಣ್ಣಮಟ್ಟದ ಪ್ರಕಾಶಕರೂ ಆಗಿದ್ದರು. ಸಾಹಿತ್ಯದ ವಾತಾವರಣದಲ್ಲಿ ಬೆಳೆದ ವಿಜಯ್ ತಮ್ಮ 6ನೇ ವಯಸ್ಸಿನಲ್ಲೇ ಮೊದಲ ಕತೆ ಬರೆದರು. `ಮರಾಠ' ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ವೃತ್ತಿ ಆರಂಭಿಸಿದ ಅವರು ಆಮೇಲೆ ನಾಟಕಗಳ ರಚನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡರು. ಫ್ರೆಂಚ್ ಸಣ್ಣಕತೆಯೊಂದರ ಪ್ರಭಾವದಿಂದ ಅವರು ಬರೆದ ನಾಟಕ `ಶಾಂತತಾ! ಕೋರ್ಟ್ ಚಾಲೂ ಆಹೇ' ಭಾರೀ ಹೆಸರು ಮಾಡಿತ್ತು. 1967ರಲ್ಲಿ ಮೊದಲ ಪ್ರಯೋಗ ಕಂಡ ಈ ನಾಟಕವನ್ನು ಆಮೇಲೆ ಸತ್ಯದೇವ್ ದುಬೆ ಸಿನಿಮಾ ಮಾಡಿದರು. ಈ ನಾಟಕವನ್ನು `ಸದ್ದು! ವಿಚಾರಣೆ ನಡೀತಾ ಇದೆ' ಎಂಬ ಹೆಸರಿನಲ್ಲಿ ಚಂದ್ರಕಾಂತ ಕುಸುನೂರ, ಘಾಸೀರಾಂ ಕೊತ್ವಾಲ್ ನಾಟಕವನ್ನು ಮುದೇನೂರು ಸಂಗಣ್ಣ, ಕನ್ಯಾದಾನ ನಾಟಕವನ್ನು ವೀಣಾ ಕುಲಕರ್ಣಿ ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಮತ್ತೊಂದು ಹೆಸರಾಂತ ನಾಟಕ ಸಖಾರಾಂ ಬೈಂಡರ್ ಕೂಡ ಕನ್ನಡದಲ್ಲಿ ಪ್ರಕಟವಾಗಿ ಪ್ರಯೋಗಗೊಂಡಿದೆ. ಇವರ ಬಹುತೇಕ ನಾಟಕಗಳು ವಿವಿಧ ಭಾರತೀಯ ಭಾಷೆಗೆ ಅನುವಾದಗೊಂಡಿವೆ. ಶ್ರೀರಾಮ್ ಲಾಗೂ, ಮೋಹನ್ ಅಗಾಶೆ ಮತ್ತು ಸುಲಭಾ ದೇಶಪಾಂಡೆ ಅವರಂತಹ ಹೆಸರಾಂತ ಕಲಾವಿದರು ತೆಂಡೂಲ್ಕರ್ ನಾಟಕಗಳನ್ನು ಭಾರಿ ಜನಪ್ರಿಯಗೊಳಿಸಿದರು. ತಮಗೆ ಜ್ಞಾನಪೀಠ ಪ್ರಶಸ್ತಿ ಪ್ರಕಟವಾದಾಗ `ಇದು ವಿಜಯ್ ತೆಂಡೂಲ್ಕರ್ ಗೆ ಸಿಗಬೇಕಿತ್ತು' ಎಂದು ಗಿರೀಶ ಕಾರ್ನಾಡ್ ಪ್ರತಿಕ್ರಿಯಿಸಿದ್ದರು.

2008: ಮುಂಬೈಯಲ್ಲಿ ನೆಲೆಸಿದ್ದ ಕನ್ನಡದ ಪ್ರಖ್ಯಾತ ಕವಿ ಅರವಿಂದ ನಾಡಕರ್ಣಿ (77) ನಿಧನರಾದರು. ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲ್ಲೂಕಿನ ಬಂಕಿಕೊಡ್ಲ ಗ್ರಾಮದವರಾದ ಅವರು ಕೊಲ್ಲಾಪುರ ಹಾಗೂ ಮುಂಬೈಯಲ್ಲಿ ಶಿಕ್ಷಣ ಮುಗಿಸಿ ಆಮೇಲೆ ಮುಂಬೈಯಲ್ಲಿ ತೆರಿಗೆ ತಜ್ಞರಾಗಿದ್ದರು. ಅವರು ವೈದ್ಯ ಪತ್ನಿ ಗಾಯತ್ರಿ ಅವರನ್ನು ಅಗಲಿದರು. ಕನ್ನಡ ಸಾರಸ್ವತ ಲೋಕಕ್ಕೆ 14ಕ್ಕೂ ಹೆಚ್ಚು ಕವನ ಸಂಕಲನಗಳನ್ನು ಅವರು ಕೊಡುಗೆಯಾಗಿ ನೀಡಿದ್ದರು. `ಕಾವ್ಯಾರ್ಪಣ', `ಮಾಯಾವಿ', `ನಗರಾಯಣ', `ಆತ್ಮ ಭಾರತ', `ಸಲೂನಿನಲ್ಲಿ ಹುಡುಗ' ಈ ಸಂಕಲನಗಳಲ್ಲಿ ಸೇರಿವೆ. `ಆಹತ' ಎಂಬ ವಿಮರ್ಶಾ ಸಂಕಲನವನ್ನೂ ಅವರು ಪ್ರಕಟಿಸಿದ್ದರು. ಕಾವ್ಯಕ್ಕೆ ಮಾತ್ರ ಮೀಸಲಾಗಿದ್ದ `ಸೃಜನದೇವಿ' ಎಂಬ ತ್ರೈಮಾಸಿಕ ಪತ್ರಿಕೆಯನ್ನು ನಾಲ್ಕು ವರ್ಷಗಳ ಕಾಲ ಅವರು ಸಂಪಾದಕರಾಗಿ ಮುಂಬೈಯಿಂದ ಹೊರತಂದಿದ್ದರು. ಪುರಾಣ ಪ್ರತಿಮೆಗಳನ್ನು ಬಳಸಿ ನಗರ ಜೀವನದ `ಮನುಜ ವಿನ್ಯಾಸ'ಗಳನ್ನು ಅನ್ವೇಷಿಸುವುದು ಅವರ ಕಾವ್ಯದ ಮುಖ್ಯ ಲಕ್ಷಣವಾಗಿತ್ತು. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವಗಳು ಅವರಿಗೆ ಲಭಿಸಿದ್ದವು.

2008: ಕೋಲಾರ ತಾಲ್ಲೂಕಿನ ನರಸಾಪುರ, ಮಾಲೂರು ತಾಲ್ಲೂಕಿನ ಟೇಕಲ್, ಆನೇಕಲ್, ಬೆಂಗಳೂರಿನ ದೇವರಜೀವನ ಹಳ್ಳಿ, ಬೆಂಗಳೂರಿಗೆ ಸಮೀಪದ ಹೊಸೂರು ಹಾಗೂ ಕೃಷ್ಣಗಿರಿಯಲ್ಲಿ ಕಳ್ಳಬಟ್ಟಿ ದುರಂತದಲ್ಲಿ ಮೃತರಾದವರ ಸಂಖ್ಯೆ 72ಕ್ಕೆ ಏರಿತು. ದೇವರಜೀವನಹಳ್ಳಿಯ (ಡಿ.ಜೆ ಹಳ್ಳಿ) ರೋಷನ್ ನಗರದಲ್ಲಿ ಹಿಂದಿನ ದಿನ ಕಳ್ಳಬಟ್ಟಿ ಸೇವಿಸಿ ಎಂಟು ಮಂದಿ ಮೃತರಾಗಿ 40 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರ್ಲಲಿ 22 ಜನರು ಚಿಕಿತ್ಸೆ ಫಲಕಾರಿಯಾಗದೆ ಈದಿನ ಮೃತರಾದರು.

2008: ಅಪರೂಪದ ಬಿಳಿ ಜಿಂಕೆ ದರ್ಶನವೇ ತೀರಾ ವಿರಳ. ಮೈಮೇಲೆ ಚುಕ್ಕೆಗಳುಳ್ಳ ಇಂತಹ ಬಿಳಿ ಜಿಂಕೆಯೊಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಣಿಸಿಕೊಂಡದ್ದು ಬೆಳಕಿಗೆ ಬಂತು.
ರಾಜ್ಯದ ಯಾವುದೇ ಅರಣ್ಯ ಪ್ರದೇಶದಲ್ಲಿ ಈ ಅಪರೂಪದ ಬಿಳಿ ಜಿಂಕೆ ಕಂಡ ಉದಾಹರಣೆಯಿಲ್ಲ. ಆದರೆ ನಿವೃತ್ತ ಅರಣ್ಯ ಅಧಿಕಾರಿ ಎಸ್. ಜಿ. ನೇಗಿನಹಾಳ್ ಅವರು ಈ ವಾರ ನಾಗರಹೊಳೆಗೆ ಭೇಟಿ ನೀಡಿದ್ದಾಗ ಈ ಅಪರೂಪದ ಜಿಂಕೆ ಕಾಣಿಸಿಕೊಂಡಿತು.

2008: ಕೇರಳದ ಪಿರವೊಮ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸಿಪಿಎಂ ಶಾಸಕ ಎಂ.ಜೆ. ಜೇಕಬ್ ಅವರ ಅರ್ಹತೆಯನ್ನು ರದ್ದುಗೊಳಿಸಿದ್ದ ಕೇರಳ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತು. ನ್ಯಾಯಮೂರ್ತಿ ಸಿ.ಕೆ.ಠಕ್ಕರ್ ಹಾಗೂ ಎಲ್. ಎಸ್. ಪಂತ್ ಅವರನ್ನೊಳಗೊಂಡ ರಜಾಕಾಲದ ಪೀಠವು ಈ ಆದೇಶ ನೀಡಿತು. ಏಪ್ರಿಲ್ 29, 2006ರಲ್ಲಿ ನಡೆದ ಕೇರಳ ವಿಧಾನಸಭಾ ಚುನಾವಣೆಗಳಲ್ಲಿ ಎಂ.ಜೆ. ಜೇಕಬ್ ಭ್ರಷ್ಟಾಚಾರ ಎಸಗಿ ಗೆಲುವು ಸಾಧಿಸಿದ್ದಾರೆ, ಇದು ಪ್ರಜಾ ಪ್ರಾತಿನಿಧ್ಯ ಕಾಯ್ದೆಯ (1956) ಕಲಂ 123(4)ಕ್ಕೆ ವಿರುದ್ಧವಾದ ನಡವಳಿಕೆ. ಆದ್ದರಿಂದ ಜೇಕಬ್ ಅವರ ಶಾಸಕತ್ವವನ್ನು ಅನೂರ್ಜಿತಗೊಳಿಸಬೇಕು ಎಂದು ಮತದಾರ ನಾರಾಯಣನ್ ಎಂಬುವವರು ಕೋರ್ಟ್ ಮೇಟ್ಟಿಲೇರಿದ್ದರು.

2008: ನೈಋತ್ಯ ಚೀನಾದಲ್ಲಿ ಎರಡು ದಿನಗಳ ಹಿಂದೆ ಉಂಟಾದ ಭೂಕುಸಿತದಲ್ಲಿ ಸುಮಾರು 200ಕ್ಕೂ ಹೆಚ್ಚು ಪರಿಹಾರ ಕಾರ್ಯಕರ್ತರು ಸಿಲುಕಿ ಜೀವಂತ ಸಮಾಧಿಯಾದರು ಎಂದು ಚೀನಾದ ಸಾರಿಗೆ ಸಚಿವಾಲಯ ತಿಳಿಸಿತು.

2008: ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ ಅವರ ಸಂಬಳವು ಶೇ 45ರಷ್ಟು ಹೆಚ್ಚಳಗೊಂಡಿದ್ದು, ಕಳೆದ ಸಾಲಿನಲ್ಲಿ ಅವರು ಕಂಪೆನಿಯಿಂದ ಒಟ್ಟು ರೂ 44 ಕೋಟಿಗಳಷ್ಟು ವಾರ್ಷಿಕ ಸಂಬಳ ಪಡೆದುಕೊಂಡಿದ್ದಾರೆ ಎಂದು ಷೇರು ಹೂಡಿಕೆದಾರರಿಗೆ ಕಂಪೆನಿಯು ನೀಡಿದ ವಾರ್ಷಿಕ ವರದಿ ತಿಳಿಸಿತು. 2006-07ನೇ ಹಣಕಾಸು ವರ್ಷದಲ್ಲಿ ಅತ್ಯಂತ ಗರಿಷ್ಠ ಸಂಬಳದ ಮಾಲೀಕ ಎಂದೂ ಮುಖೇಶ್ ಗುರುತಿಸಿಕೊಂಡಿದ್ದರು. ನಂತರದ ಸ್ಥಾನದಲ್ಲಿ ಮದ್ರಾಸ್ ಸಿಮೆಂಟ್ಸ್ ಕಂಪೆನಿ ಮಾಲೀಕ ಪಿ.ಆರ್.ಆರ್ ರಾಜಾ ಅವರಿದ್ದರು.

2008: ಹಿಂದಿನವಾರ ಸಂಭವಿಸಿದ ಜೈಪುರ ಸ್ಫೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಹಿಂದಿನ ದಿನ ಮೃತರಾಗುವುದರ ಜೊತೆಗೆ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ 65ಕ್ಕೆ ಏರಿತು.

2007: ಖ್ಯಾತ ಪಿಟೀಲುವಾದಕ ಮತ್ತು ಹಿರಿಯ ಹಿರಿಯ ನಿರ್ದೇಶಕ ಎಲ್. ವೈದ್ಯನಾಥನ್ (61) ಅವರು ಹೃದಯಾಘಾತದಿಂದ ಚೆನ್ನೈಯಲ್ಲಿ ನಿಧನರಾದರು. ವೈದ್ಯನಾಥನ್ ಅವರು ಕನ್ನಡ ಮತ್ತು ತಮಿಳು ಚಿತ್ರಗಳಿಗೆ ಗೀತೆಗಳನ್ನು ರಚಿಸಿದ್ದಲ್ಲದೆ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ತಮಿಳು ಚಿತ್ರ `ಎಜಾವತು ಮಣಿತನ್' ಚಿತ್ರಕ್ಕೆ ನೀಡಿದ್ದ ಸಂಗೀತದಿಂದ ಅವರು ಖ್ಯಾತಿ ಪಡೆದಿದ್ದರು. ನಮ್ಮೂರ ಮಂದಾರ ಹೂವೇ, ಇದು ಎಂಥಾ ಲೋಕವಯ್ಯಾ, ಒಲುಮೆ ಪೂಜೆಗೆಂದೇ, ಸಂತಸ ಅರಳುವ ಸಮಯ, ಅಂತರಂಗದ ಹೂ ಬನಕೆ, ಏನೋ ಮಾಡಲು ಹೋಗಿ ಮತ್ತಿತರ ಜನಪ್ರಿಯ ಗೀತೆಗಳಿಗೆ ಅವರು ಸಂಗೀತ ನೀಡಿದ್ದರು.

2007: ಏಷ್ಯಾದಲ್ಲೇ ಪ್ರಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ `ಮಿರರ್ ಡೋಂ ಪ್ಲಸ್' ತಾರಾ ಮಂಡಲ ವೀಕ್ಷಣೆಯ ಪ್ರೊಜೆಕ್ಟರಿಗೆ ಬೆಂಗಳೂರಿನ ಜವಾಹರ ಲಾಲ್ ನೆಹರೂ ತಾರಾಲಯದಲ್ಲಿ ರಾಜ್ಯಪಾಲ ಟಿ.ಎಸ್. ಚತುರ್ವೇದಿ ಚಾಲನೆ ನೀಡಿದರು. ಕಂಪ್ಯೂಟರ್, ಡಿ ಎಲ್ ಪಿ ಪ್ರೊಜೆಕ್ಟರ್ ಮತ್ತು ಅತಿ ಹೆಚ್ಚು ಪ್ರತಿಫಲನ ಶಕ್ತಿಯ ಉನ್ನತ ದರ್ಪಣವನ್ನು ಪ್ರೊಜೆಕ್ಟರ್ ಹೊಂದಿದೆ. ಆಸ್ಟ್ರೇಲಿಯಾದ ಸ್ವಿನ್ ಬರ್ನ್ ತಾಂತ್ರಿಕ ವಿಶ್ವ ವಿದ್ಯಾಲಯ ಸಿದ್ಧ ಪಡಿಸಿದ ಈ ಪ್ರತಿಫಲನ ಸಂಬಂಧಿತ ಸಾಫ್ಟ್ ವೇರನ್ನು ಕೂಡಾ ಈ ಪ್ರೊಜೆಕ್ಟರಿಗೆ ಅಳವಡಿಸಲಾಗಿದೆ.

2007: ದಕ್ಷಿಣ ನೈಜೀರಿಯಾದ ಬಂದರು ನಗರ ಹಾರ್ ಕೋರ್ಟಿನಲ್ಲಿ ತೈಲ ಕಂಪೆನಿಯೊಂದರ ಮೂವರು ಭಾರತೀಯ ಉದ್ಯೋಗಿಗಳನ್ನು ಬಂದೂಕುಧಾರಿ ಭಯೋತ್ಪಾದಕರು ಅಪಹರಿಸಿದರು.

2007: ಹುಕ್ಕೇರಿ ತಾಲ್ಲೂಕಿನ ರಕ್ಷಿ ಗ್ರಾಮದ 94 ವರ್ಷಗಳ ಹಿರಿಯಜ್ಜಿ ಗೌರವ್ವ ಚನ್ನಪ್ಪ ಕುರಬೇಟ ಅವರು ಈದಿನ ಬೆಳಗ್ಗೆ ಮೃತಳಾಗಿ ಸಂಜೆ ವೇಳೆಗೆ ಮತ್ತೆ ಬದುಕಿ ಬಂದಳು. ಬೆಳಗ್ಗೆ 11.30ರ ವೇಳೆಗೆ ಆಕೆ ಕಣ್ಮುಚ್ಚಿದಾಗ ವೈದ್ಯರು ತಪಾಸಿಸಿ ಆಕೆ ಮೃತಳಾಗಿರುವುದಾಗಿ ಘೋಷಿಸಿದ್ದರು. ಎಲ್ಲ ಬಂಧುಗಳಿಗೂ ಕರೆ ಹೋಯಿತು. ಸಂಜೆ 4.30ರ ವೇಳೆಗೆ ಅಂತ್ಯ ಸಂಸ್ಕಾರ ವಿಧಿಗಳನ್ನು ನಡೆಸುತ್ತಿದ್ದಾಗ ಅಜ್ಜಿಯ ಮೂಗಿನ ಹೊಳ್ಳೆ, ಭುಜ ಅಲುಗಿತು. ಇದನ್ನು ಗಮನಿಸಿದ ಕುಟುಂಬ ಸದಸ್ಯರು ಆಕೆಗೆ ಪ್ರಥಮ ಚಿಕಿತ್ಸೆ ನೀಡಿ ವೈದ್ಯರನ್ನು ಕರೆಸಿದರು. ನಂತರ ಅಜ್ಜಿ ಎದ್ದು ಕುಳಿತಳು.

2006: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಅಜಾದ್ ಹಿಂದ್ ಫೌಜ್ ನಲ್ಲಿ ಚಾಲಕ ಹಾಗೂ ಅಂಗರಕ್ಷಕರಾಗಿದ್ದರೆನ್ನಲಾದ ಉತ್ತರ ಪ್ರದೇಶದ ಅಜಂಗಢದ 102 ವರ್ಷ ವಯಸ್ಸಿನ ನಿಜಾಮುದ್ದೀನ್ ಎಂಬ ವ್ಯಕ್ತಿ, 1945ರಲ್ಲಿ ತೈಪೆಯಲ್ಲಿ ಅಪಘಾತಕ್ಕೆ ಈಡಾದ ವಿಮಾನದಲ್ಲಿ ನೇತಾಜಿ ಇರಲೇ ಇಲ್ಲ, ಅವರು ಕೆಲವು ವರ್ಷಗಳ ಹಿಂದೆ ಫೈಜಾಬಾದಿನಲ್ಲಿ ಗುಮ್ನಾಮಿ ಬಾಬಾ ಹೆಸರಿನಲ್ಲಿ ಮೃತರಾದರು ಎಂದು ಈದಿನ ಅಜಂಗಢದಲ್ಲಿ ಹೇಳಿದರು. 1946ರಲ್ಲಿ ಥಾಯ್ಲೆಂಡಿನ ನದಿಯ ಸೇತುವೆಯೊಂದರ ಮೇಲೆ ತಾನು ನೇತಾಜಿ ಮತ್ತು ಅವರ ಸಹೋದರ ಶರತ್ ಚಂದ್ರ ಬೋಸ್ ಅವರನ್ನು ಭೇಟಿ ಮಾಡಿದ್ದುದಾಗಿ ನಿಜಾಮುದ್ದೀನ್ ನುಡಿದರು.

1947: ವೃತ್ತಿ ರಂಗಭೂಮಿ, ಹವ್ಯಾಸಿ ರಂಗಭೂಮಿ ಮತ್ತು ಚಲನಚಿತ್ರ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಖ್ಯಾತರಾಗಿದ್ದ ಲೋಕೇಶ್ (19-03-1947ರಿಂದ 14-10-2004) ಅವರು ಎಂ.ವಿ. ಸುಬ್ಬಯ್ಯನಾಯ್ಡು- ವೆಂಕಟಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1938: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ನಟ, ಸಾಹಿತಿ ಗಿರೀಶ್ ಕಾರ್ನಾಡ್ ಜನ್ಮದಿನ. ಗಿರೀಶ್ ಕಾರ್ನಾಡ್ ಅವರು ಈ ದಿನ ಮಹಾರಾಷ್ಟ್ರದ ಮ್ಯಾಥೆರಾನಿನಲ್ಲಿ ಡಾ. ರಘುನಾಥ ಕಾರ್ನಾಡ್ - ಕೃಷ್ಣಾಬಾಯಿ ಮಗನಾಗಿ ಜನಿಸಿದರು.

1919: ಕಲಾವಿದ ಭಾಗವತ ನೀಲಾವರ ರಾಮಕೃಷ್ಣಯ್ಯ ಜನನ.

1911: ಮಹಾತ್ಮ ಗಾಂಧೀಜಿಯವರ ಹಂತಕ ನಾಥೂರಾಮ್ ಗೋಡ್ಸೆ ಹುಟ್ಟಿದ ದಿನ. ಗಾಂಧೀಜಿಯವರು ನವದೆಹಲಿಯ ಬಿರ್ಲಾ ಮಂದಿರದಲ್ಲಿ ಪ್ರಾರ್ಥನಾ ಸಭೆಯಲ್ಲಿದ್ದಾಗ ಅವರನ್ನು ಗೋಡ್ಸೆ ಗುಂಡು ಹೊಡೆದು ಕೊಂದ.

1890: ವಿಯೆಟ್ನಾಮಿನ ಧುರೀಣ ಹೊ.ಚಿ. ಮಿನ್ಹ್ (1890-1969) ಜನ್ಮದಿನ. ಮೂರು ದಶಕಗಳ ಕಾಲ ವಿಯೆಟ್ನಾಂ ರಾಷ್ಟ್ರೀಯ ಚಳವಳಿಯ ನೇತೃತ್ವ ವಹಿಸಿದ್ದ ಇವರು 1945ರಿಂದ 1969ರವರೆಗೆ ಉತ್ತರ ವಿಯೆಟ್ನಾಮಿನ ಅಧ್ಯಕ್ಷರಾಗಿದ್ದರು.

1795: ಜಾನ್ಸ್ ಹಾಪ್ ಕಿನ್ಸ್ (1795-1873) ಜನ್ಮದಿನ. ಅಮೆರಿಕದ ದಾನಿಗಳಲ್ಲೊಬ್ಬರಾದ ಇವರು ನೀಡಿದ 7 ದಶಲಕ್ಷ ಡಾಲರ್ ಹಣದಿಂದ ಜಾನ್ಸ್ ಹಾಪ್ ಕಿನ್ಸ್ ಆಸ್ಪತ್ರೆ ಹಾಗೂ ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು.

1536: ಇಂಗ್ಲೆಂಡಿನ ದೊರೆ ಎಂಟನೇ ಹೆನ್ರಿಯ ದ್ವಿತೀಯ ಪತ್ನಿ, ರಾಣಿ ಮೊದಲನೇ ಎಲಿಜಬೆತ್ ಳ ತಾಯಿಯ ತಲೆಯನ್ನು ಎಂಟನೇ ಹೆನ್ರಿಯ ವಿವಾಹದ ಹಿಂದಿನ ದಿನ ಕಡಿಯಲಾಯಿತು. ಆಕೆ ವ್ಯಭಿಚಾರ ನಡೆಸಿದ ಆರೋಪಕ್ಕಾಗಿ ಈ ಶಿಕ್ಷೆ ವಿಧಿಸಲಾಯಿತು.

ಇಂದಿನ ಇತಿಹಾಸ History Today ಮೇ 18


ಇಂದಿನ ಇತಿಹಾಸ

ಮೇ 18

ಕೊನೆಗೂ ಶ್ರೀಲಂಕಾದಲ್ಲಿ ಎಲ್‌ಟಿಟಿಇ ರಕ್ತಸಿಕ್ತ ಅಧ್ಯಾಯಕ್ಕೆ ತೆರೆಬಿದ್ದಿತು. ಮೂರು ದಶಕಗಳ ಕಾಲ ಈ ಪುಟ್ಟ ದ್ವೀಪದಲ್ಲಿ ಅಶಾಂತಿಯ ಉರಿಗೆ ತಿದಿಯೊತ್ತುತ್ತಿದ್ದ ವೇಲುಪಿಳ್ಳೈ ಪ್ರಭಾಕರನ್ (54) ಸೇನೆಯ ಗುಂಡಿಗೆ ಬಲಿಯಾದ. ಈವರೆಗೆ 70ಸಾವಿರ ಮಂದಿಯ ಸಾವಿಗೆ ಕಾರಣವಾದ ಜಗತ್ತಿನ ಕುಖ್ಯಾತ ಭಯೋತ್ಪಾದಕ ಸಂಘಟನೆಯ ಮುಖಂಡ ಪ್ರಭಾಕರನ್ ಸತ್ತಿರುವುದನ್ನು ಶ್ರೀಲಂಕಾ ಸೇನೆ ಖಚಿತ ಪಡಿಸಿತು. 'ಎಲ್‌ಟಿಟಿಇಯ ಮುಖ್ಯಸ್ಥ ಪ್ರಭಾಕರನ್ ಸೇರಿದಂತೆ ಆತನ ಜತೆಗಿದ್ದ ಎಲ್ಲಾ ಪ್ರಮುಖ ಕಮಾಂಡರ್‌ಗಳೂ ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ' ಎಂದು ಸೇನೆ ಪ್ರಕಟಿಸಿತು.

2009: ಕೊನೆಗೂ ಶ್ರೀಲಂಕಾದಲ್ಲಿ ಎಲ್‌ಟಿಟಿಇ ರಕ್ತಸಿಕ್ತ ಅಧ್ಯಾಯಕ್ಕೆ ತೆರೆಬಿದ್ದಿತು. ಮೂರು ದಶಕಗಳ ಕಾಲ ಈ ಪುಟ್ಟ ದ್ವೀಪದಲ್ಲಿ ಅಶಾಂತಿಯ ಉರಿಗೆ ತಿದಿಯೊತ್ತುತ್ತಿದ್ದ ವೇಲುಪಿಳ್ಳೈ ಪ್ರಭಾಕರನ್ (54) ಸೇನೆಯ ಗುಂಡಿಗೆ ಬಲಿಯಾದ. ಈವರೆಗೆ 70ಸಾವಿರ ಮಂದಿಯ ಸಾವಿಗೆ ಕಾರಣವಾದ ಜಗತ್ತಿನ ಕುಖ್ಯಾತ ಭಯೋತ್ಪಾದಕ ಸಂಘಟನೆಯ ಮುಖಂಡ ಪ್ರಭಾಕರನ್ ಸತ್ತಿರುವುದನ್ನು ಶ್ರೀಲಂಕಾ ಸೇನೆ ಖಚಿತ ಪಡಿಸಿತು. 'ಎಲ್‌ಟಿಟಿಇಯ ಮುಖ್ಯಸ್ಥ ಪ್ರಭಾಕರನ್ ಸೇರಿದಂತೆ ಆತನ ಜತೆಗಿದ್ದ ಎಲ್ಲಾ ಪ್ರಮುಖ ಕಮಾಂಡರ್‌ಗಳೂ ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ' ಎಂದು ಸೇನೆ ಪ್ರಕಟಿಸಿತು. ಸಂಪೂರ್ಣವಾಗಿ ಎಲ್‌ಟಿಟಿಇ ನಾಯಕತ್ವವನ್ನು ಅಂತ್ಯಗೊಳಿಸಿದ ಶ್ರೀಲಂಕಾ ಸೇನಾಪಡೆಯ ಮೂರು ವಿಭಾಗಗಳ ಮುಖ್ಯಸ್ಥರಿಗೆ ಸರ್ಕಾರ ವಿಶೇಷ ಬಡ್ತಿಗಳನ್ನು ಪ್ರಕಟಿಸಿತು. ಜಾಫ್ನಾದ ಹಿಂದೂ ಕುಟುಂಬದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರ ಪುತ್ರನಾಗಿ 1954ರಲ್ಲಿ ಜನಿಸಿದ ಪ್ರಭಾಕರನ್ ಶಾಲೆಯಲ್ಲಿ ಕಲಿತದ್ದು ಕಡಿಮೆಯೇ. 1972ರಲ್ಲಿ ತಮಿಳ್ ನ್ಯೂ ಟೈಗರ್ಸ್‌ ಸಂಘಟನೆ ಕಟ್ಟಿದ. ಅದೇ 1976ರಲ್ಲಿ ಎಲ್‌ಟಿಟಿಇ ಆಗಿ ರೂಪಾಂತರಗೊಂಡಿತು. ಆ ನಂತರ ನಡೆದ ಘಟನೆಗಳೆಲ್ಲವೂ ಈಗ ಇತಿಹಾಸ.
ಲಂಕಾ ನೆಲದಲ್ಲಿ ಎಲ್‌ಟಿಟಿಇ ಹೋರಾಟದ ಹೆಜ್ಜೆಗಳು...
ಮೂರೂವರೆ ದಶಕಗಳಿಂದ ಶ್ರೀಲಂಕಾದ ನೆಲದಲ್ಲಿ ನಡೆದ 'ತಮಿಳು ರಾಷ್ಟ್ರೀಯವಾದಿ' ಹೋರಾಟದ ಕೆಲವು ಪ್ರಮುಖ ಘಟನೆಗಳು ಇಲ್ಲಿವೆ.

1972 : ಶ್ರೀಲಂಕಾ ಆಗಿ ಬದಲಾದ ಸಿಲೋನ್. ರಾಷ್ಟ್ರದ ಧಾರ್ಮಿಕ ಆಚರಣೆಯಲ್ಲಿ ಬೌದ್ಧ ಧರ್ಮಕ್ಕೆ ಪ್ರಮುಖ ಸ್ಥಾನ. ಪರಿಣಾಮ ಲಂಕಾದಲ್ಲಿ ತಮಿಳರಿಗೆ ಅಲ್ಪಸಂಖ್ಯಾತರ ಪಟ್ಟ. ನಂತರ ತಮಿಳರಿಗೆ 'ತಾವು ಅಳಿವಿನಂಚಿನಲ್ಲಿದ್ದೇವೆ' ಎಂಬ ಭಯ ಉದ್ಭವ.

1976: ವೇಲುಪಿಳ್ಳೈ ಪ್ರಭಾಕರನ್ ಅವರಿಂದ ಎಲ್‌ಟಿಟಿಇ ಸ್ಥಾಪನೆ

1977: ಚುನಾವಣೆಯಲ್ಲಿ ಉತ್ತರ ಲಂಕಾದ ತಮಿಳು ಬಹುಸಂಖ್ಯಾತರಿರುವ ಎಲ್ಲ ಕ್ಷೇತ್ರಗಳಲ್ಲೂ ತಮಿಳು ಪ್ರಜಾಸತ್ತಾತ್ಮಕ ಸ್ವತಂತ್ರ ರಂಗದ(ಪ್ರತ್ಯೇಕತಾ ಪಕ್ಷ) ಅಭ್ಯರ್ಥಿಗಳಿಗೆ ಜಯ. ತಮಿಳು ವಿರೋಧಿಗಳ ಪ್ರತಿಭಟನೆ. ನೂರಾರು ತಮಿಳರ ಸಾವು.

1981: ಲಂಕಾ ತಮಿಳರ ಸಾಂಸ್ಕೃತಿಕ ರಾಜಧಾನಿ, ಜಾಫ್ನಾದ ಸಾರ್ವಜನಿಕ ಗ್ರಂಥಾಲಯಕ್ಕೆ ಬೆಂಕಿ, ಪರಿಣಾಮ ತಮಿಳು ಸಮುದಾಯದಲ್ಲಿ ಅಸಮಾಧಾನದ ಹೊಗೆ.

1983: ಎಲ್‌ಟಿಟಿಇಯವರ ಹಠಾತ್ ದಾಳಿಗೆ 13 ಲಂಕಾ ಸೈನಿಕರು ಬಲಿ. ಉತ್ತರ ಶ್ರೀಲಂಕಾದಾದ್ಯಂತ ತಮಿಳು ವಿರೋಧಿ ಸೇನಾ ಕಾರ್ಯಾಚರಣೆ ಆರಂಭ. ತಮಿಳು ಸಮುದಾಯದ ನೂರಾರು ನಾಗರಿಕರ ಬಲಿ.

1985: ಶ್ರೀಲಂಕಾ ಸರ್ಕಾರ ಹಾಗೂ ಎಲ್‌ಟಿಟಿಇ ನಡುವೆ ವಿಫಲಗೊಂಡ ಪ್ರಥಮ ಶಾಂತಿ ಮಾತುಕತೆ.

1987: ಎಲ್‌ಟಿಟಿಇಯವರನ್ನು ಉತ್ತರದ ಜಾಫ್ನಾ ನಗರಕ್ಕೆ ಹಿಮ್ಮೆಟ್ಟಿಸಿದ ಲಂಕಾ ಪಡೆಗಳು. ಉತ್ತರ ಮತ್ತು ಪಶ್ಚಿಮ ಭಾಗದಲ್ಲಿನ ತಮಿಳು ಬಹುಸಂಖ್ಯಾತಪ್ರದೇಶಗಳಲ್ಲಿ 'ಹೊಸ ಮಂಡಳಿ' ಸ್ಥಾಪನೆ ಒಪ್ಪಂದಕ್ಕೆ ಸಹಿ. ಭಾರತದ ಶಾಂತಿಪಾಲನಾ ಪಡೆ ಸ್ಥಾಪನೆ.

1990: ಶ್ರೀಲಂಕಾ ತೊರೆದ ಭಾರತದ ಶಾಂತಿಪಾಲನಾ ಪಡೆ. ಶ್ರೀಲಂಕಾ ಸೇನಾಪಡೆ ಹಾಗೂ ತಮಿಳು ಉಗ್ರರ ನಡುವೆ ಘರ್ಷಣೆ, ಹಿಂಸಾಚಾರ.

1991: ಚೆನ್ನೈ ಸಮೀಪದ ಪೆರಂಬದೂರಿನಲ್ಲಿ ಆತ್ಮಾಹುತಿ ದಾಳಿ ನಡೆಸಿ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ. ಹತ್ಯೆಗೆ ಎಲ್‌ಟಿಟಿಇ ಕಾರಣ.

1993: ಎಲ್‌ಟಿಟಿಇಯ ಆತ್ಮಾಹುತಿದಳದ ಸದಸ್ಯರಿಂದ ಶ್ರೀಲಂಕಾ ಅಧ್ಯಕ್ಷ ಪ್ರೇಮದಾಸ ಅವರ ಹತ್ಯೆ.

1994: ಲಂಕಾ ಅಧ್ಯಕ್ಷೆಯಾಗಿ ಚಂದ್ರಿಕಾ ಕುಮಾರತುಂಗಾ ಅಧಿಕಾರ ಸ್ವೀಕಾರ. ಎಲ್‌ಟಿಟಿಇ ಜೊತೆ ಮಾತುಕತೆ ಪುನರಾರಂಭ.

2002: ನಾರ್ವೆಯ ಮದ್ಯಸ್ಥಿಕೆಯಲ್ಲಿ ಶ್ರೀಲಂಕಾ- ಎಲ್‌ಟಿಟಿಇ ನಡುವೆ ಕದನ ವಿರಾಮಕ್ಕೆ ಚಾಲನೆ.

2004: ಬಂಡುಕೋರ ಚಳವಳಿಯಲ್ಲಿ ಒಡಕು. ಒಡೆದ ಪಾಳೆಯಕ್ಕೆ ತಮಿಳು ಉಗ್ರರ ಕಮಾಂಡರ್ ಕರುಣಾ ನಾಯಕತ್ವ. ತನ್ನ ಬೆಂಬಲಿಗರ ಜೊತೆ ಭೂಗತ ಸ್ಥಳಕ್ಕೆ ಪಯಣ.

2005: ಎಲ್‌ಟಿಟಿಇ ಉಗ್ರರಿಂದ ವಿದೇಶಾಂಗ ಸಚಿವ ಲಕ್ಷ್ಮಣ್ ಕದಿರ್‌ಗಮರ್ ಅವರ ಹತ್ಯೆ.

2008, ಜನವರಿ : ಕದನ ವಿರಾಮ ಹಿಂತೆಗೆದುಕೊಂಡ ಶ್ರೀಲಂಕಾ ಸರ್ಕಾರ.

2008, ಜುಲೈ: ಉತ್ತರದ ವಿಡತ್ತಲ್‌ತ್ತಿವು ಭಾಗದಲ್ಲಿನ ತಮಿಳು ಉಗ್ರರ ಪ್ರಮುಖ ನೌಕಾ ನೆಲೆಯನ್ನು ವಶಪಡಿಸಿಕೊಂಡಿರುವುದಾಗಿ ಲಂಕಾ ಪಡೆಗಳ ಘೋಷಣೆ.

2009, ಜನವರಿ: ಎಲ್‌ಟಿಟಿಇ ಉಗ್ರರ ರಾಜಧಾನಿ ಕಿಲಿನೋಚ್ಚಿ ವಶಪಡಿಸಿಕೊಂಡ ಲಂಕಾಪಡೆಗಳು.

2009, ಏಪ್ರಿಲ್: ಎಲ್‌ಟಿಟಿಇಯವರ ಹಿಡಿತದಲ್ಲಿದ್ದ ಮುಲ್ಲೈತ್ತಿವು ಜಿಲ್ಲೆ ಲಂಕಾಪಡೆಗಳ ವಶಕ್ಕೆ.

2009, ಮೇ 16: ಎಲ್‌ಟಿಟಿಯವರನ್ನು ಲಂಕಾಪಡೆಗಳು ಮಣಿಸಿರುವುದಾಗಿ ಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸೆ ಘೋಷಣೆ.

2009, ಮೇ 17: ಸೋಲೊಪ್ಪಿಕೊಂಡ ಎಲ್‌ಟಿಟಿಇ ಉಗ್ರರು.

2009, ಮೇ 18: ಪ್ರಭಾಕರನ್, ಪೊಟ್ಟು ಅಮ್ಮನ್, ಸೂಸೈ, ಪ್ರಭಾಕರನ್ ಪುತ್ರ ಚಾರ್ಲ್ಸ್ ಆಂಟನಿ ಸೇರಿದಂತೆ ಪ್ರಮುಖ ಎಲ್‌ಟಿಟಿ ನಾಯಕರ ಹತ್ಯೆ. ಶ್ರೀಲಂಕಾದಾದ್ಯಂತ ಸಂಭ್ರಮಾಚರಣೆ
2009: ಪಕ್ಷದ ಸಂಸದೀಯ ಮಂಡಲಿಯ ಹಾಗೂ ಇತರ ಮುಖಂಡರ ಕೋರಿಕೆಯಂತೆ ಬಿಜೆಪಿಯ ಹಿರಿಯ ಮುಖಂಡ ಎಲ್. ಕೆ. ಅಡ್ವಾಣಿ ಅವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ಕಾರ್ಯ ನಿರ್ವಹಿಸಲು ಒಪ್ಪಿಕೊಂಡರು. ಪಕ್ಷದ ಸಂಸದೀಯ ಮಂಡಲಿಯ ಮುಖ್ಯಸ್ಥರಾಗಿ ಮುಂದುವರಿಯಲು ಅಡ್ವಾಣಿ ಅವರು ಒಪ್ಪಿಕೊಂಡಿರುವುದರಿಂದ ಅವರೇ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಮುಂದುವರಿಯುತ್ತಾರೆ ಎಂದು ಅಧ್ಯಕ್ಷ ರಾಜನಾಥ್ ಸಿಂಗ್ ತಿಳಿಸಿದರು.

2009: ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ಹಾಗೂ ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಷ್ಟಾಂಗ ಯೋಗ ಗುರು ಕೃಷ್ಣ ಪಟ್ಟಾಭಿ ಜೋಯಿಸ್ (94) ಈದಿನ ಮಧ್ಯಾಹ್ನ 2.30ಕ್ಕೆ ಮೈಸೂರಿನಲ್ಲಿ ನಿಧನರಾದರು. 'ಯೋಗ ಗುರು' ಎಂದೇ ಹೆಸರಾಗಿದ್ದ ಕೃಷ್ಣ ಪಟ್ಟಾಭಿ ಜೋಯಿಸರು ಭಾರತೀಯರು ಸೇರಿದಂತೆ ಸಾವಿರಾರು ವಿದೇಶಿಗರಿಗೆ ಅಷ್ಟಾಂಗ ಯೋಗವನ್ನು ಕಲಿಸುವ ಮೂಲಕ ಕೀರ್ತಿ ಗಳಿಸಿದ್ದರು. ಜೋಯಿಸರು ಮೂಲತಃ ಹಾಸನ ಸಮೀಪದ ಕೌಶಿಕ ಗ್ರಾಮದಲ್ಲಿ 1915ರ ಬುದ್ಧ ಪೂರ್ಣಿಮಾ ದಿನ ಜನಿಸಿದ್ದರು. ತಮ್ಮ 14 ನೇ ವಯಸ್ಸಿಗೆ ಯೋಗ ಗುರು ಕೃಷ್ಣಮಾಚಾರ್ ಅವರಿಂದ ಯೋಗ ಕಲಿಯಲು ಆರಂಭಿಸಿದರು. ಅಂತರ ಗುರುಗಳ ಆಸೆಯಂತೆ ಸಂಪ್ರದಾಯಬದ್ಧವಾಗಿಯೇ ಅಷ್ಟಾಂಗ ಯೋಗವನ್ನು ಜಗತ್ತಿನಾದ್ಯಂತ ಪ್ರಚುರಪಡಿಸಿದರು.

2009: ಎತ್ತರವಿದ್ದಷ್ಟೂ ಹೆಚ್ಚು ಗಳಿಸುತ್ತೀರಿ; ದಪ್ಪವ್ದಿದರೆ ಚಿಂತೆ ಬೇಡ ನಿಮ್ಮ ಪರ್ಸಿನ ಮೇಲೇನೂ ಅದು ಪರಿಣಾಮ ಬೀರದು!-ಹೀಗೆಂದು ಆಸ್ಟ್ರೇಲಿಯಾದ ಸಂಶೋಧಕರು ಸಿಡ್ನಿಯಲ್ಲಿ ಬಹಿರಂಗಪಡಿಸಿದರು. ಸರಾಸರಿಗಿಂತ ಐದು ಸೆಂಟಿಮೀಟರ್ ಹೆಚ್ಚಿದ್ದರೆ ನೌಕರರ ಸಂಬಳವೂ ಸರಾಸರಿ ಶೇ 1.5ರಷ್ಟು ಹೆಚ್ಚಬಹುದು ಎಂದು ತಾವು ಕಂಡು ಹಿಡಿದಿರುವುದಾಗಿ ಆಸ್ಟ್ರೇಲಿಯ ರಾಷ್ಟ್ರೀಯ ವಿಶ್ವವಿದ್ಯಾಲಯದ ಆಂಡ್ರ್ಯೂ ಲೇ ಮತ್ತು ಸಿಡ್ನಿ ವಿಶ್ವವಿದ್ಯಾಲಯದ ಮೈಕೆಲ್ ಕಾರ್ಟ್ ಹೇಳಿದರು. 'ಈ ಪರಿಣಾಮವು ಮಹಿಳೆ ಮತ್ತು ಪುರುಷ ಇಬ್ಬರಲ್ಲಿಯೂ ಕಂಡುಬರುತ್ತದೆಯಾದರೂ ಪುರುಷರಲ್ಲಿ ಹೆಚ್ಚು ಪರಿಣಾಮಕಾರಿ' ಎಂದು ಲೇ ಅಭಿಪ್ರಾಯ.

2008: ಬಿಹಾರದಲ್ಲಿ ಮರಗಳನ್ನು ಕಡಿಯುವುದು ನಿಷಿದ್ಧ. ಅಂತ್ಯ ಸಂಸ್ಕಾರಕ್ಕಾಗಿ ಬಡವರು ಏನು ಮಾಡಬೇಕು? ಅದಕ್ಕೆ ದನ ಕರುಗಳ ಸಗಣಿಯಿಂದ ಮಾಡಿದ ಒಣ ಬೆರಣಿ (ಕುಳ್ಳು) ಬಳಸಿ ದೇಹಕ್ಕೆ ಚಿತೆ ಹತ್ತಿಸುವ ಉಪಾಯವನ್ನು ಬಿಹಾರಿನ ಬಡವರು ಕಂಡುಕೊಂಡದ್ದು ಬೆಳಕಿಗೆ ಬಂತು. ಐದಡಿ ಆಳ ನೆಲ ಅಗಿದು ಅದರಲ್ಲಿ ಸುತ್ತಲೂ ಒಣಗಿದ ಬೆರಣಿಗಳನ್ನು ಜೋಡಿಸಲಾಗುತ್ತದೆ. ಕೆಳಗೊಂದು ಪದರು ಬೆರಣಿ ಜೋಡಿಸಿ ಅದರ ಮೇಲೆ ಮೃತದೇಹ ಮಲಗಿಸಲಾಗುತ್ತದೆ. ಮೇಲೆ ಮತ್ತೆರಡು ಪದರು ಬೆರಣಿಗಳನ್ನು ಜೋಡಿಸಿ ಬುಡಕ್ಕೆ ಚಿತೆ ಇಡಲಾಗುತ್ತದೆ. ಸಾಮಾನ್ಯವಾಗಿ ದೇಹಕ್ಕೆ ಚಿತೆ ಹತ್ತಿಸುವ ಅಂತ್ಯಸಂಸ್ಕಾರ ಪದ್ಧತಿಯಲ್ಲಿ ಒಂದು ದೇಹಕ್ಕೆ ಕನಿಷ್ಠ 290 ಕೆ.ಜಿ ಕಟ್ಟಿಗೆ ಬೇಕು. ಆದರೆ ನೆರೆಹಾವಳಿಯಿಂದ ತತ್ತರಿಸಿದ ಬಿಹಾರಿನ ಜನತೆಗೆ ಅದರಲ್ಲೂ ಕಡುಬಡವರಿಗೆ ಅಷ್ಟೊಂದು ಕಟ್ಟಿಗೆ ವ್ಯಯಿಸುವುದು ಮತ್ತು ಅದಕ್ಕೆ ದುಡ್ಡು ಹೊಂದಿಸುವುದು ಕಷ್ಟ. ಅದರ ಬದಲು ತಮ್ಮದೇ ದನಕರುಗಳ ಸಗಣಿ ಬಳಸಿ ಬೆರಣಿ ಮಾಡಿ ಅದನ್ನು ಅಂತ್ಯಸಂಸ್ಕಾರಕ್ಕೆ ಬಳಸುವುದು ಸುಲಭ ಎಂಬುದನ್ನು ಇಲ್ಲಿನ ಜನ ಲೆಕ್ಕ ಹಾಕಿ ಕಂಡುಕೊಂಡರು. ಉತ್ತರ ಕರ್ನಾಟಕದಲ್ಲೂ ಅಂತ್ಯಸಂಸ್ಕಾರ ಮಾಡುವಾಗ ಚಿತೆಗೆ ಕುಳ್ಳು (ಬೆರಣಿ) ಬಳಸುವ ಪದ್ಧತಿ ಚಾಲ್ತಿಯಲ್ಲಿದೆ.

2008: ಬೆಂಗಳೂರು ನಗರದ ದೇವರಜೀವನಹಳ್ಳಿ, ಕೋಲಾರ ಜಿಲ್ಲೆಯ ನರಸಾಪುರ, ಟೇಕಲ್, ಬೆಳ್ಳೂರು, ತಮಿಳುನಾಡಿನ ಹೊಸೂರಿನಲ್ಲಿ ಸಂಭವಿಸಿದ ಪ್ರತ್ಯೇಕ ಕಳ್ಳಬಟ್ಟಿ ಸಾರಾಯಿ ದುರಂತಗಳು 30 ಜೀವಗಳನ್ನು ಬಲಿ ತೆಗೆದುಕೊಂಡವು. 33 ಮಂದಿ ಅಸ್ವಸ್ಥರಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಾದರು.

2008: ಚಿತ್ರದುರ್ಗಕ್ಕೆ 15 ಕಿ.ಮೀ. ದೂರದ ಕುರುಮರಡಿಕೆರೆ ಬಳಿ ಕ್ರಿ.ಪೂ. 2,500 ವರ್ಷಗಳಷ್ಟು ಹಿಂದೆ, ನವಶಿಲಾಯುಗದ ಕಾಲದಲ್ಲಿ ಬಾಳಿ ಬದುಕಿದ್ದ ಮಾನವ ಬಳಸಿದ ಕಲ್ಲಿನ ಕೊಡಲಿ ಪತ್ತೆಯಾಯಿತು. ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಅಧ್ಯಾಪಕ ಡಾ.ಎಸ್.ವೈ. ಸೋಮಶೇಖರ್ ಹಾಗೂ ಅದೇ ವಿಭಾಗದ ಸಂಶೋಧಕರಾದ ಎಸ್. ನಾಗರಾಜಪ್ಪ ಮತ್ತು ಬಿ.ಟಿ. ಚಾರುಲತಾ ಕುರುಮರಡಿಕೆರೆ ಸುತ್ತಮತ್ತ ನಡೆಸಿದ ಕ್ಷೇತ್ರಕಾರ್ಯದಲ್ಲಿ ಕೊಡಲಿ ದೊರಕಿತು. ಇದರಿಂದ ಇಲ್ಲಿ ಸುಮಾರು 5,000 ವರ್ಷಗಳ ಹಿಂದೆ ಮಾನವ ವಾಸಿಸುತಿದ್ದುದು ಬೆಳಕಿಗೆ ಬಂತು.

2008: ಪಶ್ಚಿಮ ಬಂಗಾಳದಲ್ಲಿ ಪಂಚಾಯ್ತಿ ಚುನಾವಣೆಯ ಮೂರನೇ ಹಾಗೂ ಅಂತಿಮ ಹಂತದ ಮತದಾನ ಸಂದರ್ಭದಲ್ಲಿ ಸಂಭವಿಸಿದ ಘರ್ಷಣೆಯಲ್ಲಿ ಎಂಟು ಜನರ ಹತ್ಯೆಯಾಗಿ 25ಕ್ಕೂ ಹೆಚ್ಚು ಜನರು ಗಾಯಗೊಂಡರು.

2008: ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದ ಪರಿಣಾಮ 12 ಕೂಲಿ ಕಾರ್ಮಿಕರು ಸಾವನ್ನಪ್ಪಿ ಇತರ 20ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡ ಘಟನೆ ಗುಡಗಾಂವದ ಫರೂಕ್ ನಗರ ತಾಲ್ಲೂಕಿನ ಖೇಡಕ್ ಗ್ರಾಮದಲ್ಲಿ ನಡೆಯಿತು.

2008: ಪಾಕಿಸ್ಥಾನದ ಕರಾಚಿ ನಗರದಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಮತ್ತೆ ಇಬ್ಬರು ದರೋಡೆಕೋರರು ಜೀವ ತೆತ್ತರು. ಒಂದೇ ವಾರದಲ್ಲಿ ಇಂತಹ ಘಟನೆ ನಡೆದದ್ದು ಇದು ಎರಡನೇ ಬಾರಿ. ಈ ವಾರದ ಆರಂಭದಲ್ಲಿ ಮೂವರು ದರೋಡೆಕೋರರನ್ನು ಸಾರ್ವಜನಿಕರು ಬೆಂಕಿ ಹಚ್ಚಿ ದಹಿಸಿದ ಘಟನೆ ನಡೆದಿತ್ತು. ಈದಿನ ಸುಮಾರು 20 ಶಸ್ತ್ರಧಾರಿ ದರೋಡೆಕೋರರು ಬಸ್ ಪ್ರಯಾಣಿಕರನ್ನು ಲೂಟಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದರು. ಅವರನ್ನು ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ಇವರಲ್ಲಿ ತೀವ್ರವಾಗಿ ಸುಟ್ಟುಹೋಗಿದ್ದ ಇಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

2008: ರಾನ್ ಬ್ಯಾಕ್ಸಿ ಮುಖ್ಯಸ್ಥ ಮಾಲ್ವಿಂದರ್ ಮೋಹನ್ ಸಿಂಗ್ ಸೇರಿದಂತೆ ಐವರು ಭಾರತೀಯರು ವಿಶ್ವ ಔಷಧ ಕ್ಷೇತ್ರದಲ್ಲಿ ಪ್ರಭಾವಿಗಳಾಗಿದ್ದಾರೆ ಎಂದು ಇಂಗ್ಲೆಂಡಿನ ನಿಯತಕಾಲಿಕ ವರದಿ ಮಾಡಿತು. ಒಟ್ಟು 40 ಜನ ಪ್ರಭಾವಿಗಳ ಪೈಕಿ ಎಂ. ವೆಂಕಟೇಶ್ವರಲು (ಮಾಜಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) 16ನೇ ಸ್ಥಾನದಲ್ಲಿ, ರಾನ್ ಬಾಕ್ಸಿ ಮುಖ್ಯಸ್ಥ ಮಾಲ್ವಿಂದರ್ ಮೋಹನ್ ಸಿಂಗ್ (21ನೇ ಸ್ಥಾನ), ಭಾರತೀಯ ಔಷಧಿ ಉತ್ಪಾದಕರ ಸಂಘದ ಅಧ್ಯಕ್ಷ ರಂಜಿತ್ ಶಹಾನಿ (24ನೇ ಸ್ಥಾನ), ಅರವಿಂದ ಫಾರ್ಮ್ ಅಧ್ಯಕ್ಷ ರಾಮ ಪ್ರಸಾದ್ ರೆಡ್ಡಿ (35ನೇ ಸ್ಥಾನ) ಹಾಗೂ ಪನೇಶಿಯಾ ಬಯೋಟೆಕ್ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಜೈನ್ (40ನೇ ಸ್ಥಾನ) ಸ್ಥಾನ ಗಿಟ್ಟಿಸಿಕೊಂಡರು. ಪಟ್ಟಿಯ ಮೊದಲನೇ ಸ್ಥಾನದಲ್ಲಿ ನೋಬೆಲ್ ಪುರಸ್ಕೃತ ಮಾರ್ಲೊ ಆರ್ ಕೇಪಚ್ಚಿ, ಸರ್ ಮಾರ್ಟಿನ್ ಜೆ ಇವಾನ್ಸ್ ಹಾಗೂ ಒಲಿವರ್ ಸ್ಮಿತ್ ಇದ್ದರು.

2008: ಮೂತ್ರಪಿಂಡ ತಜ್ಞ ಹಾಗೂ ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ನೆಫ್ರೊಲಾಜಿ ನಿರ್ದೇಶಕ ಡಾ. ರಾಜನ್ ರವಿಚಂದ್ರನ್ ಅವರಿಗೆ ಅಮೆರಿಕದ ಪ್ರತಿಷ್ಠಿತ ಕಾಲೇಜ್ ಆಫ್ ಫಿಜಿಸಿಯನ್ಸ್ (ಎಫ್ ಎ ಸಿ ಪಿ) ಫೆಲೋಷಿಪ್ ದೊರಕಿತು.

2008: ಎರಡನೇ ಜಾಗತಿಕ ಮಹಾಯುದ್ಧದಲ್ಲಿ ಅಮೆರಿಕ ಸೇನೆ ಹಾಕಿದ್ದ ಸ್ಫೋಟವಾಗದ ಬೃಹತ್ ಬಾಂಬ್ ಒಂದನ್ನು ಪರಿಣತರು ಟೋಕಿಯೊ ಬಳಿ ನಿಷ್ಕ್ರಿಯಗೊಳಿಸಿದರು. ಈ ಹಿನ್ನೆಲೆಯಲ್ಲಿ ಇಲ್ಲಿನ ಸುಮಾರು 16,490 ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ತುಕ್ಕು ಹಿಡಿದಿದ್ದ ಈ ಬಾಂಬನ್ನು ಜಪಾನಿನ ಸ್ವಯಂ-ರಕ್ಷಣಾ ಪಡೆಯ ಸಿಬ್ಬಂದಿ ನಿಷ್ಕ್ರಿಯಗೊಳಿದರು.

2007: ನೈಜೀರಿಯಾದ ಅತಿದೊಡ್ಡ ತೈಲ ಸಂಸ್ಕರಣಾ ಘಟಕ ಪೋರ್ಟ್ ಹಾಕೋರ್ಟ್ ರಿಫೈನರಿಯನ್ನು ಸ್ವಾಧೀನಪಡಿಸಿಕೊಳ್ಳುವ ಯತ್ನದಲ್ಲಿ ಉಕ್ಕು ಉದ್ಯಮದ ಸಾಮ್ರಾಟ ಭಾರತೀಯ ಮೂಲದ ಲಕ್ಷ್ಮೀ ನಿವಾಸ್ ಮಿತ್ತಲ್ ಅವರಿಗೆ ಸೋಲಾಯಿತು.

2007: ಕರ್ನಾಟಕ ನಗರ ಹಾಗೂ ಗ್ರಾಮಾಂತರ ಪ್ರದೇಶ ಯೋಜನೆ (ಅಕ್ರಮ ನಿವೇಶನ ಹಾಗೂ ಕಟ್ಟಡಗಳ ಸಕ್ರಮೀಕರಣ) ನಿಯಮವನ್ನು (2007) ರಾಜ್ಯಪತ್ರದಲ್ಲಿ ಪ್ರಕಟಿಸುವ ಮೂಲಕ ರಾಜ್ಯ ಸರ್ಕಾರವು ಸಕ್ರಮೀಕರಣಕ್ಕೆ ವಿಧ್ಯುಕ್ತ ಚಾಲನೆ ನೀಡಿತು. ಕಂದಾಯ ಭೂಮಿಯಲ್ಲಿನ ಅಕ್ರಮ ಕಟ್ಟಡ ಹಾಗೂ ನಿವೇಶನಗಳನ್ನು ಸಕ್ರಮಗೊಳಿಸುವ ಸಂಬಂಧಿ ಸರ್ಕಾರ ಈ ಅಧಿಸೂಚನೆ ಹೊರಡಿಸಿತು.

2007: ನಿಯಮಗಳನ್ನು ಗಾಳಿಗೆ ತೂರಿ ಪ್ರೇಯಸಿ ಶಹಾ ರಿಜಾ ಅವರಿಗೆ ಉದಾರವಾಗಿ ಬಡ್ತಿ ನೀಡಿ ಸಂಬಳ ಹೆಚ್ಚಿಸಿದ ಆರೋಪ ಎದುರಿಸುತ್ತಿರುವ ವಿಶ್ವಬ್ಯಾಂಕ್ ಅಧ್ಯಕ್ಷ ಪೌಲ್ ವುಲ್ಫೋವಿಜ್ ಅವರು ಕೊನೆಗೂ ಒತ್ತಡಕ್ಕೆ ಮಣಿದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

2007: ಮುಂಬೈಯಲ್ಲಿ 1993ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಐವರಿಗೆ ಸ್ಫೋಟಕಗಳು, ಮದ್ದುಗುಂಡುಗಳು ಹಾಗೂ ಶಸ್ತ್ರಾಸ್ತ್ರ ಕಳ್ಳ ಸಾಗಾಣಿಕೆಯಲ್ಲಿ ನೆರವು ನೀಡಿದ್ದಕ್ಕಾಗಿ ಹಾಗೂ ಶಸ್ತ್ರಾಸ್ತ್ರ ಕಳ್ಳ ಸಾಗಾಣಿಕೆಯಲ್ಲಿ ನೆರವು ನೀಡಿದ್ದಕ್ಕಾಗಿ ವಿಶೇಷ ಟಾಡಾ ನ್ಯಾಯಾಲಯವು ದೀರ್ಘಕಾಲದ ವಿಚಾರಣೆಯ ಬಳಿಕ ಕಸ್ಟಮ್ಸ್ ಕಾಯ್ದೆಯ ಅಡಿಯಲ್ಲಿ ಮೂರು ವರ್ಷಗಳ ಕಠಿಣ ಶಿಕ್ಷೆ ವಿಧಿಸಿತು. ಈ ಮೂಲಕ, 14 ವರ್ಷಗಳ ಹಿಂದೆ ನಡೆದ ಈ ಕ್ರಿಮಿನಲ್ ಪ್ರಕರಣದ 100 ಮಂದಿ ಅಪರಾಧಿಗಳಿಗೆ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಲು ಆರಂಭಿಸಿತು. 1993ರ ಮಾರ್ಚ್ 12ರಂದು ಮುಂಬೈಯಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ 257 ಜನ ಮೃತರಾಗಿ 700 ಮಂದಿ ಗಾಯಗೊಂಡಿದ್ದರು.

2007: ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯ ಸಚಿವೆಯಾಗಿ ಡಿಎಂಕೆ ಸಂಸದೆ ವಿ. ರಾಧಿಕಾ ಸೆಲ್ವಿ ಪ್ರಮಾಣ ವಚನ ಸ್ವೀಕರಿಸಿದರು. ತಮಿಳುನಾಡಿನ ತಿರುಚೆಂದೂರಿನಿಂದ ಇದೇ ಪ್ರಥಮ ಬಾರಿಗೆ ಸಂಸದೆಯಾಗಿ ಆವರು ಆಯ್ಕೆಯಾಗಿದ್ದರು.

2007: ಆಂಧ್ರ ಪ್ರದೇಶದ ರಾಜಧಾನಿ ಹೈದರಾಬಾದಿನ ಚಾರಿತ್ರಿಕ ಮೆಕ್ಕಾ ಮಸೀದಿಯಲ್ಲಿ ಪಾರ್ಥನೆ ವೇಳೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 16 ಜನ ಮೃತರಾಗಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2007: ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಕಾನಾಹೊಸಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮದುಮಗಳು ಸೇರಿ ಮದುವೆ ದಿಬ್ಬಣದ 19 ಮಂದಿ ಮೃತರಾಗಿ 26 ಮಂದಿ ಗಾಯಗೊಂಡರು.

2007: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಕುಲಪತಿಯಾಗಿ ಭಾರತೀಯ ವಿಜ್ಞಾನ ಸಂಸ್ಥೆಯ (ಐ ಐ ಎಸ್ ಸಿ) ಎಲೆಕ್ಟ್ರಿಕಲ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಎಚ್.ವಿ. ಖಿಂಚ ನೇಮಕಗೊಂಡರು.

2006: ನೇತಾಜಿ ಅವರಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎ.ಕೆ. ಮುಖರ್ಜಿ ಆಯೋಗವು ಸಲ್ಲಿಸಿದ ವರದಿಯನ್ನು ತಿರಸ್ಕರಿಸಿದ ಯುಪಿಎ ಸರ್ಕಾರದ ಕ್ರಮವನ್ನು ಲೋಕಸಭಾ ಸದಸ್ಯರು ಪಕ್ಷಭೇದ ಮರೆತು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ವರದಿ ಬಗ್ಗೆ ಸದನದಲ್ಲಿ ಚರ್ಚೆಗೆ ಆಗ್ರಹಿಸಿದರು.

2006: ನೇಪಾಳದ ದೊರೆಯ ರಾಜಕೀಯ ಹಾಗೂ ಸೇನಾ ಅಧಿಕಾರವನ್ನು ಮೊಟಕುಗೊಳಿಸುವ ಪ್ರಸ್ತಾವವನ್ನು ನೇಪಾಳ ಸಂಸತ್ತು ಅಂಗೀಕರಿಸಿತು. ಜೊತೆಗೇ ನೇಪಾಳವು ಜಾತ್ಯತೀತ ರಾಷ್ಟ್ರ ಎಂದು ಘೋಷಿಸಿತು.

2006: ಉಪಗ್ರಹವನ್ನು ಹೊತ್ತ ಎಚ್-2ಎ ಹೆಸರಿನ ರಾಕೆಟನ್ನು ಜಪಾನ್ ದಕ್ಷಿಣ ಕಾಗೊಶಿಮಾದ ತಾನೆಗಶಿಮಾ ಬಾಹ್ಯಕಾಶ ಕೇಂದ್ರದಿಂದ ಗಗನಕ್ಕೆ ಹಾರಿಸಿತು. ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಜಪಾನ್ ಮಾಡಿದ ಎರಡನೇ ಸಾಹಸ ಇದಾಗಿದ್ದು, ಹಲವು ದುರಂತಗಳ ಬಳಿಕ ರಾಷ್ಟ್ರದ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಅಗತ್ಯ ಉತ್ತೇಜನ ನೀಡಿತು. ರಾಕೆಟ್ 4.7 ಟನ್ ತೂಕದ ಉಪಗ್ರಹವನ್ನು ಗಗನಕ್ಕೆ ಒಯ್ದು ಸಮರ್ಪಕವಾಗಿ ಕಕ್ಷೆಗೆ ಸೇರಿಸಿತು.

1974: ಭಾರತವು ರಾಜಸ್ಥಾನದ ಪೋಖ್ರಾನಿನಲ್ಲಿ ತನ್ನ ಮೊತ್ತ ಮೊದಲ ಅಣ್ವಸ್ತ್ರ ಪರೀಕ್ಷಾ ಸ್ಫೋಟ ನಡೆಸಿತು.

1969: ಚಂದ್ರನಲ್ಲಿ ಮಾನವನನ್ನು ಇಳಿಸಲು ಸಿದ್ಧತೆಗಳನ್ನು ನಡೆಸುವ ಸಲುವಾಗಿ ಅಮೆರಿಕವು ಬಾಹ್ಯಾಕಾಶ ನೌಕೆ ಅಪೋಲೋ 10ನ್ನು ಗಗನಕ್ಕೆ ಹಾರಿಸಿತು.

1965: ಕಲಾವಿದೆ ಮಾಲಾ ರಾಣಿ ಜನನ.

1952: ಕಲಾವಿದ ಶ್ರೀಧರ್ ಜೆ.ಕೆ. ಜನನ.

1945: ತೈಲವರ್ಣ ಚಿತ್ರಕಲೆಯಲ್ಲಿ ಅಗಾಧ ಸಾಧನೆ ಮಾಡಿರುವ ಎಸ್. ಕೃಷ್ಣಪ್ಪ ಅವರು ನೇಕಾರ ಕುಟುಂಬದ ಸಂಪಂಗಿರಾಮಯ್ಯ- ನಾರಾಯಣಮ್ಮ ದಂಪತಿಯ ಮಗನಾಗಿ ಬೆಂಗಳೂರು ಜಿಲ್ಲೆಯ ಸರ್ಜಾಪುರದಲ್ಲಿ ಜನಿಸಿದರು.

1915: ಕಲಾವಿದ ಶೆಲ್ವ ಪಿಳ್ಳೈ ಅಯ್ಯಂಗಾರ್ ಜನನ.

1912: ಮೂಕಿ ಚಿತ್ರಗಳ ದಿನಗಳಲ್ಲಿ ಬ್ರಿಟಿಷ್ ಸಹಯೋಗದೊಂದಿಗೆ ನಿರ್ಮಿಸಲಾದ ಮೊತ್ತ ಮೊದಲ ಭಾರತೀಯ ಚಿತ್ರ `ಪುಂಡಲೀಕ' ಮುಂಬೈಯ ಕೊರೋನೇಷನ್ ಸಿನೆಮಾಟೋಗ್ರಾಫಿನಲ್ಲಿ ಬಿಡುಗಡೆಯಾಯಿತು. ಎನ್. ಜಿ. ಚಿತ್ರೆ ಮತ್ತು ಪಿ.ಆರ್. ಟಿಪ್ನಿಸ್ ಇದನ್ನು ಜಂಟಿಯಾಗಿ ನಿರ್ದೇಶಿಸಿದ್ದರು. (ದಾದಾಸಾಹೇಬ್ ಫಾಲ್ಕೆ ಅವರ `ರಾಜಾ ಹರಿಶ್ಚಂದ್ರ' ಚಿತ್ರ ಒಂದು ವರ್ಷ ತಡವಾಗಿ ಬಿಡುಗಡೆಗೊಂಡರೂ ಅದು ಸಂಪೂರ್ಣ ದೇಶೀಯವಾಗಿ ನಿರ್ಮಾಣಗೊಂಡದ್ದರಿಂದ ಅದೇ ಮೊತ್ತ ಮೊದಲ ಭಾರತೀಯ ಚಿತ್ರ ಎಂದು ದಾಖಲಾಗಿದೆ.)

1836: ಆಸ್ಟ್ರಿಯಾದ ಚೆಸ್ ಮಾಸ್ಟರ್ ವಿಲ್ಹೆಮ್ ಸ್ಟೀನಿಜ್ (1836-1900) ಹುಟ್ಟಿದ ದಿನ. ಅತ್ಯಂತ ಹೆಚ್ಚು ಕಾಲ (1866ರಿಂದ 1894ರವರೆಗೆ) ಜಾಗತಿಕ ಚೆಸ್ ಚಾಂಪಿಯನ್ ಆಗಿದ್ದ ವಿಲ್ಹೆಮ್ 1894ರಲ್ಲಿ ಎಮ್ಯಾನುವೆಲ್ ಲಸ್ಕರ್ ಅವರ ಎದುರು ಸೋತು ಜಾಗತಿಕ ಚೆಸ್ ಚಾಂಪಿಯನ್ ಶಿಪ್ ಕಳೆದುಕೊಂಡರು.

1048: ಪರ್ಷಿಯಾದ ಕವಿ, ಗಣಿತತಜ್ಞ, ಖಗೋಳತಜ್ಞ ಉಮರ್ ಖಯ್ಯಾಂ (1048-1131) ಜನ್ಮದಿನ.

Monday, May 17, 2010

ಇಂದಿನ ಇತಿಹಾಸ History Today ಮೇ 17

ಇಂದಿನ ಇತಿಹಾಸ

ಮೇ 17

ಐದನೇ ತರಗತಿ ಓದುತ್ತಿದ್ದಾಗಲೇ ಶಾಲೆ ತೊರೆದು ಹೋದ ಬಾಲಕನೊಬ್ಬ ಮುಂದೆ ರಾಜ್ಯದ ಮುಖ್ಯಮಂತ್ರಿ ಯಾಗುತ್ತಾನೆಂದು ಯಾರೂ ಎಣಿಸಿರಲಿಲ್ಲ. ಆದರೆ ಪವನ್‌ಕುಮಾರ್ ಚಾಮ್ಲಿಂಗ್ ಅದನ್ನೆಲ್ಲ ಸುಳ್ಳಾಗಿಸಿ ನಾಲ್ಕನೇ ಬಾರಿಗೆ ಸಿಕ್ಕಿಂ ಮುಖ್ಯಮಂತ್ರಿಯಾಗಿ ವಿಜೃಂಭಿಸಿದರು. ಚಾಮ್ಲಿಂಗ್ ನೇತೃತ್ವದಲ್ಲಿ ಎಲ್ಲ 32 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್) ಸಿಕ್ಕಿಂನ ಏಕೈಕ ಲೋಕಸಭಾ ಕ್ಷೇತ್ರವನ್ನು ಕೂಡ ತನ್ನ ತೆಕ್ಕೆಗೆ ಎಳೆದುಕೊಂಡಿತು.

2009: ಎಲ್‌ಟಿಟಿಇಯ ಸುಮಾರು 300 ಉಗ್ರರು ಆತ್ಮಹತ್ಯೆ ಮಾಡಿಕೊಂಡರು. ಅವರಲ್ಲಿ ಪ್ರಭಾಕರನ್ ಸೇರಿರಬಹುದೆಂದು ಶಂಕಿಸಲಾಯಿತು. ಆದರೆ ಇದರ ಬಗ್ಗೆ ಖಚಿತ ಮಾಹಿತಿ ಬರಲಿಲ್ಲ. ಶ್ರೀಲಂಕಾ ಸೇನೆಯು ಎಲ್‌ಟಿಟಿಇ ವಿರುದ್ಧ ನಡೆಸಿದ ಅಂತಿಮ ಹಂತದ ದಾಳಿಯಲ್ಲಿ ಎಲ್‌ಟಿಟಿಇಯ ಇಬ್ಬರು ಅಗ್ರ ನಾಯಕರು ಸೇರಿದಂತೆ 70 ಉಗ್ರಗಾಮಿಗಳನ್ನು ಹತ್ಯೆ ಮಾಡಿತು. ಸಶಸ್ತ್ರ ಹೋರಾಟವನ್ನು ನಿಲ್ಲಿಸಲಾಗಿದೆ ಎಂದು ಎಲ್‌ಟಿಟಿಇ ಘೋಷಿಸಿದರೂ, ಅದರ ಮುಖ್ಯಸ್ಥ ವಿ. ಪ್ರಭಾಕರನ್ ಪತ್ತೆಯಾಗಲಿಲ್ಲ.

2009: ಶ್ರೀಲಂಕಾದ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು ತಮ್ಮ ಜೊರ್ಡಾನ್ ಪ್ರವಾಸವನ್ನು ಮೊಟಕುಗೊಳಿಸಿ ಸ್ವದೇಶಕ್ಕೆ ವಾಪಸಾದರು. ರಾಜಪಕ್ಸೆ ಅವರು ವಿಮಾನದಿಂದ ಕೆಳಗಿಳಿದ ಕೂಡಲೇ ನೆಲ ಮುಟ್ಟಿ ನಮಸ್ಕರಿಸಿದರು. 'ಸೇನೆಯು ದೇಶವನ್ನು ಎಲ್‌ಟಿಟಿಇ ಭಯೋತ್ಪಾದಕರಿಂದ ಮುಕ್ತಗೊಳಿಸಿದೆ' ಎಂದು ಅವರು ಈ ಸಂದರ್ಭದಲ್ಲಿ ಘೋಷಿಸಿದರು. ಯುದ್ಧ ವಲಯದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಸುಮಾರು 50 ಸಾವಿರ ನಾಗರಿಕರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿದವು. ಸೇನೆಯ ಅಂತಿಮ ಕಾರ್ಯಾಚರಣೆಯಲ್ಲಿ ಎಲ್‌ಟಿಟಿಯ ಅಗ್ರ ನಾಯಕರಾದ ಸ್ವರನಮ್ ಮತ್ತು ಶಶಿ ಮಾಸ್ಟರ್ ಅವರನ್ನು ಹತ್ಯೆ ಮಾಡಲಾಯಿತು.. ಕೊನೆಗೂ ಮಣಿದ ಎಲ್‌ಟಿಟಿಇ ಸಶಸ್ತ್ರ ಹೋರಾಟಕ್ಕೆ ಪೂರ್ಣವಿರಾಮ ಘೋಷಿಸಿತು. 'ಕದನ ಕೆಟ್ಟ ಅಂತ್ಯವನ್ನು ಕಂಡಿದೆ, ಆದ್ದರಿಂದ ನಾವು ನಮ್ಮ ಜನರನ್ನು ಕೊಲ್ಲುತ್ತಿರುವ ವೈರಿಗಳನ್ನು ಕ್ಷಮಿಸಿ ಬಂದೂಕನ್ನು ಸ್ಥಗಿತಗೊಳಿಸುತ್ತೇವೆ' ಎಂದು ಎಲ್‌ಟಿಟಿಇ ಪರ ಇರುವ ತಮಿಳ್‌ನೆಟ್ ವೆಬ್‌ಸೈಟ್‌ನಲ್ಲಿ ಪ್ರಸಾರ ಮಾಡಲಾಯಿತು. ಎಲ್‌ಟಿಟಿಇಯ ಅಂತಾರಾಷ್ಟ್ರೀಯ ಸಂಬಂಧಗಳ ಮುಖ್ಯಸ್ಥ ಸೆಲ್ವೆರಸ ಪದ್ಮನಾಥಮ್ ಅವರು ನೀಡಿದ ಈ ಹೇಳಿಕೆಯನ್ನು ವೆಬ್‌ಸೈಟ್ ಪ್ರಸಾರ ಮಾಡಿತು.

2009: ಕಡಲಾಳದಲ್ಲಿ ಹೆಚ್ಚುತ್ತಿರುವ ಉಷ್ಣತೆ, ಏರುತ್ತಿರುವ ಸಮುದ್ರ ಮಟ್ಟ, ಎಲ್ಲೆ ಮೀರಿದ ಆಮ್ಲತೆ, ಮಿತಿ ಮೀರಿದ ಮೀನುಗಾರಿಕೆ ಮತ್ತು ಮಾಲಿನ್ಯದಿಂದಾಗಿ ಹವಳದ ದಂಡೆಗಳು ವಿನಾಶದ ಅಂಚಿಗೆ ತಲುಪಿದೆ ಎಂದು 'ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್' ಸಂಸ್ಥೆ ಸಿದ್ಧಪಡಿಸಿದ ವರದಿ ಹೇಳಿತು. ಈ ವರದಿಯ ಪ್ರಕಾರ ಕಡಲಿನಲ್ಲಿರುವ ಹವಳದ ತ್ರಿಭುಜಗಳು ನಾಶವಾದರೆ ಕಡಲ ತೀರದ ಶೇ 80ರಷ್ಟು ಜನ ಆಹಾರ ಕಳೆದುಕೊಳ್ಳಬಹುದು, ಸುಮಾರು 10 ಕೋಟಿ ಜನರ ಜೀವಕ್ಕೇ ಅಪಾಯ ಕಾದಿದೆ. ಮಲೇಷ್ಯಾ, ಇಂಡೋನೇಷ್ಯಾ, ಪಪುವಾ ನ್ಯುಗಿನಿಯಾ,ಪೂರ್ವ ತೈಮೋರ್, ಸಾಲೊಮನ್ ದ್ವೀಪ ಹಾಗು ಫಿಲಿಪ್ಪೀನ್ಸ್ ದೇಶಗಳ ಸಮುದ್ರ ತೀರಗಳು ಹವಳದ ತ್ರಿಭುಜವನ್ನು ಸುತ್ತುವರೆದಿದ್ದು, ಇದು ಅತ್ಯಂತ ಸಂಪದ್ಭರಿತ ಹವಳದ ದಂಡೆ ಎಂದು ಗುರುತಿಸಲಾಗಿದೆ. ವಿಶ್ವದ ಶೇ 30ರಷ್ಟು ಹವಳ ಸಂಪತ್ತು ಈ ತ್ರಿಭುಜದಲ್ಲಿಯೇ ಇದೆ. ಹವಳದ ದಂಡೆಯನ್ನೇ ಆಶ್ರಯಿಸಿ 10 ಕೋಟಿಗೂ ಹೆಚ್ಚು ಜನ ಬದುಕು ಸಾಗಿಸುತ್ತಿದ್ದಾರೆ.

2009: ಐದನೇ ತರಗತಿ ಓದುತ್ತಿದ್ದಾಗಲೇ ಶಾಲೆ ತೊರೆದು ಹೋದ ಬಾಲಕನೊಬ್ಬ ಮುಂದೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾನೆಂದು ಯಾರೂ ಎಣಿಸಿರಲಿಲ್ಲ. ಆದರೆ ಪವನ್‌ಕುಮಾರ್ ಚಾಮ್ಲಿಂಗ್ ಅದನ್ನೆಲ್ಲ ಸುಳ್ಳಾಗಿಸಿ ನಾಲ್ಕನೇ ಬಾರಿಗೆ ಸಿಕ್ಕಿಂ ಮುಖ್ಯಮಂತ್ರಿಯಾಗಿ ವಿಜೃಂಭಿಸಿದರು. ಚಾಮ್ಲಿಂಗ್ ನೇತೃತ್ವದಲ್ಲಿ ಎಲ್ಲ 32 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್) ಸಿಕ್ಕಿಂನ ಏಕೈಕ ಲೋಕಸಭಾ ಕ್ಷೇತ್ರವನ್ನು ಕೂಡ ತನ್ನ ತೆಕ್ಕೆಗೆ ಎಳೆದುಕೊಂಡಿತು. ಚಾಮ್ಲಿಂಗ್ ತಾವು ಸ್ಪರ್ಧಿಸಿದ್ದ ಎರಡೂ ವಿಧಾನಸಭಾ ಕ್ಷೇತ್ರಗಳಿಂದ ಚುನಾಯಿತರಾದರು. 1956ರಲ್ಲಿ ಬಹದೂರ್ ರಾಯ್ ಮತ್ತು ಮಾಯಾರಾಯ್ ದಂಪತಿಗೆ ಜನಿಸಿದ ಚಾಮ್ಲಿಂಗ್ ಐದನೇ ತರಗತಿಗೇ ಶಾಲೆಗೆ ಹೋಗುವ ಅವಕಾಶದಿಂದ ವಂಚಿತರಾಗಿದ್ದರು.

2009: 15ನೇ ಲೋಕಸಭೆಯು ಇದೇ ಪ್ರಥಮ ಬಾರಿಗೆ ನಾಲ್ವರು 'ಗಾಂಧಿ'ಗಳನ್ನು ಪಡೆದು ಅಚ್ಚರಿ ಮೂಡಿಸಿತು. ಪ್ರತಿಷ್ಠಿತ ನೆಹರು-ಗಾಂಧಿ ಕುಟುಂಬಕ್ಕೆ ಸೇರಿದ ವರುಣ್ ಗಾಂಧಿ ಉತ್ತರ ಪ್ರದೇಶದ ಫಿಲಿಬಿಟ್ ಕ್ಷೇತ್ರದಿಂದ ಸಂಸತ್‌ಗೆ ಆಯ್ಕೆಯಾಗುವುದರೊಂದಿಗೆ ನಾಲ್ಕನೇ 'ಗಾಂಧಿ' ಸಂಸತ್ ಒಳಗೆ ಒಟ್ಟಿಗೆ ಕುಳಿತುಕೊಳ್ಳುವಂತಾಯಿತು. ಅದರಲ್ಲೂ ಮುಖ್ಯವಾಗಿ ಇಬ್ಬರು ಅಮ್ಮ-ಮಗ ಜೋಡಿ ಒಟ್ಟಾಗಿ ಕಾಣಿಸಿಕೊಳ್ಳುವಂತಾಯಿತು. ಸೋನಿಯಾ ಮತ್ತು ರಾಹುಲ್ ಗಾಂಧಿ ಆಡಳಿರೂಢ ಗುಂಪಿನಲ್ಲಿದ್ದರೆ, ಬಿಜೆಪಿ ನಾಯಕರಾದ ಮೇನಕಾ ಮತ್ತು ವರುಣ್ ಗಾಂಧಿ ವಿರೋಧಿ ಗುಂಪಿನಲ್ಲಿ ಗೆದ್ದು ಬಂದರು. ಪ್ರಥಮ ಲೋಕಸಭೆಯಿಂದ ಹಿಡಿದು ಇಲ್ಲಿಯ ತನಕ ನೆಹರು- ಗಾಂಧಿ ಕುಟುಂಬದ ಒಬ್ಬರು ಸದಸ್ಯರಾದರೂ ಸಂಸತ್‌ನಲ್ಲಿ ಬಹುತೇಕ ಇದ್ದರೆಂದೇ ಹೇಳಬಹುದು. ಆದರೆ ಈ ಬಾರಿ ಅವರ ಸಂಖ್ಯೆ ಇದೇ ಪ್ರಥಮ ಬಾರಿಗೆ 4ಕ್ಕೆ ಏರಿತು.

2009: 'ಸಾಮಾಜಿಕ ಸಂಶೋಧನೆ' ವಿಷಯ ಕುರಿತು 51 ಗಂಟೆ ಕಾಲ ನಿರಂತರ ಉಪನ್ಯಾಸ ನೀಡಿ ಲಿಮ್ಕಾ ಮತ್ತು ಗಿನ್ನೆಸ್ ದಾಖಲೆ ಮಾಡಲು ನಿರ್ಧರಿಸಿದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಅಂಚೆ ತೆರಪಿನ ಶಿಕ್ಷಣ ಸಂಸ್ಥೆಯ ಸಮಾಲೋಚಕಿ ಎಚ್.ಕೆ. ಕೋಮಲ ಈದಿನ ತಮ್ಮ ಉಪನ್ಯಾಸ ಆರಂಭಿಸಿದರು. ಚನ್ನರಾಯಪಟ್ಟಣದ ಹೇಮಾವತಿ ಒಕ್ಕಲಿಗರ ಮಹಿಳಾ ಸಂಘದ ಆವರಣದಲ್ಲಿ ವಿದ್ಯಾರ್ಥಿಗಳು, ಅನೇಕ ಬಂಧುಗಳ ಸಮ್ಮುಖದಲ್ಲಿ ಅವರು ಉತ್ಸಾಹದಿಂದ ಉಪನ್ಯಾಸ ಆರಂಭಿಸಿದರು.

2008: ಬೆಂಗಳೂರಿನ ಎಚ್ ಎ ಎಲ್ ವಿಮಾನ ನಿಲ್ದಾಣವನ್ನು ಸ್ಥಗಿತಗೊಳಿಸದಂತೆ ಒತ್ತಾಯಿಸಿ ಐಟಿ, ಬಿಟಿ ಕ್ಷೇತ್ರದ ಪ್ರಮುಖರು ಹಾಗೂ ವಿಮಾನ ನಿಲ್ದಾಣದ ನೌಕರರು ಎಚ್ ಎ ಎಲ್ ವಿಮಾನ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ, ಇನ್ಫೋಸಿಸ್ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಮೋಹನ್ ದಾಸ್ ಪೈ ಮತ್ತು ವಿಮಾನ ನಿಲ್ದಾಣ ನೌಕರರು, `ಎಚ್ ಎ ಎಲ್ ವಿಮಾನ ನಿಲ್ದಾಣವನ್ನು ಮುಂದುವರೆಸುವ ಬಗ್ಗೆ ಸರ್ಕಾರ ಬಿಐಎಎಲ್ನೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು' ಎಂದು ಒತ್ತಾಯಿಸಿದರು.

2008: ಭೂಕಂಪ ಪೀಡಿತ ಪ್ರದೇಶ ಬೈಚುವಾನ್ ಕೌಂಟಿಯಲ್ಲಿನ `ಚೈನಾ ಸರೋವರ' ಉಕ್ಕುವ ಭೀತಿಯಿಂದ ಸರೋವರ ದಡದಲ್ಲಿನ ನಿವಾಸಿಗಳು ಬೆಟ್ಟ ಪ್ರದೇಶಕ್ಕೆ ಸ್ಥಳಾಂತರಗೊಂಡರು. ಸರೋವರ ಉಕ್ಕುತ್ತಿರುವುದನ್ನು ಪ್ರತ್ಯಕ್ಷದರ್ಶಿಯೊಬ್ಬ ದೂರವಾಣಿ ಮುಖಾಂತರ ಸೇನಾಪಡೆಗೆ ತಿಳಿಸಿದ. ಕೂಡಲೇ ಸೇನೆ ಇಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಮುಂದಾಯಿತು. ಸಿಚುವಾನ್ ಪ್ರಾಂತ್ಯದಲ್ಲಿ ಭೂಕಂಪದಿಂದ ಮಡಿದವರ ಸಂಖ್ಯೆ ಈಗ 28,881 ಎಂದು ಚೀನಾ ಹೇಳಿತು. ಆದರೆ ಮೃತರ ಸಂಖ್ಯೆ 50 ಸಾವಿರ ದಾಟುವ ನಿರೀಕ್ಷೆ ವ್ಯಕ್ತವಾಗಿದೆ.

2008: ಎಂಟು ವರ್ಷಗಳ ಹಿಂದಿನ ಆಫ್ಘನ್ ವಿಮಾನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್ನಿನ ಅಂತಾರಾಷ್ಟ್ರೀಯ ಹೀಥ್ರೂ ವಿಮಾನ ನಿಲ್ದಾಣದ ಸ್ವಚ್ಛತಾ ವಿಭಾಗದ ಪರಿಚಾರಕ ನಿಜಾಮುದ್ದೀನ್ ಮೊಹಮ್ಮದಿ (34) ಎಂಬಾತನನ್ನು ಬಂಧಿಸಲಾಯಿತು. ಈತ ಆಫ್ಘಾನಿಸ್ಥಾನದ ಪ್ರಜೆ. ಒಂಬತ್ತು ಜನ ಅಪಹರಣಕಾರರಲ್ಲಿ ಇವನೂ ಒಬ್ಬನೆಂದು ಗುರುತಿಸಲಾಗಿದೆ.

2008: ಮೂರು ತಿಂಗಳ ಹಿಂದೆ ತಾಲಿಬಾನ್ ಉಗ್ರರಿಂದ ಅಪಹೃತರಾಗಿದ್ದ ಅಫ್ಘಾನಿಸ್ಥಾನದಲ್ಲಿರುವ ಪಾಕಿಸ್ಥಾನದ ರಾಯಭಾರಿ ತಾರಿಖ್ ಅಜೀಜ್ ಅವರನ್ನು ಉಗ್ರರು ಬಿಡುಗಡೆ ಮಾಡಿದರು. ತಾಲಿಬಾನ್ ಮತ್ತು ಸರ್ಕಾರದ ನಡುವೆ ಶಾಂತಿ ಮಾತುಕತೆಯಲ್ಲಿ ಪ್ರಗತಿ ಕಂಡುಬಂದ ಹಿನ್ನೆಲೆಯಲ್ಲಿ ರಾಯಭಾರಿಯ ಬಿಡುಗಡೆ ನಡೆಯಿತು.

2008: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ಐದು ಗ್ರಾಮಗಳಲ್ಲಿ ಹಕ್ಕಿ ಜ್ವರ ಮತ್ತೆ ಪತ್ತೆಯಾದ ಹಿನ್ನೆಲೆಯಲ್ಲಿ ಸಾವಿರಾರು ಕೋಳಿಗಳನ್ನು ನಾಶಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿದವು. ರೋಗ ಕಾಣಿಸಿಕೊಂಡಿರುವ ಬಿಜನ್ ಬರಿಯಿಂದ ಮೇ 11ರಂದು ಭೋಪಾಲ ಮೂಲದ ಬಿಗಿ ಭದ್ರತೆಯ ಪಶುರೋಗ ಪತ್ತೆ ಪ್ರಯೋಗಾಯಲಕ್ಕೆ ಸೋಂಕುಪೀಡಿತ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಪ್ರಯೋಗಾಲಯವು ರೋಗ ಪತ್ತೆಯಾಗಿರುವುದನ್ನು ದೃಢಪಡಿಸಿತು.

2008: ಜೈಪುರದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಮೂವರು ಶಂಕಿತರ ರೇಖಾಚಿತ್ರ ಬಿಡುಗಡೆ ಮಾಡಿದರು. ಉಗ್ರರು ಸೈಕಲುಗಳನ್ನು ಖರೀದಿಸಿದ್ದ ಅಂಗಡಿಯವರು, ಸ್ಫೋಟದಲ್ಲಿ ಗಾಯಗೊಂಡವರನ್ನು ಮಾತನಾಡಿಸಿ ಇನ್ನೂ ಕೆಲವು ಶಂಕಿತರ ರೇಖಾಚಿತ್ರ ರಚಿಸಲಾಯಿತು ಎಂದು ಪೊಲೀಸರು ತಿಳಿಸಿದರು.

2008: ತೀವ್ರ ಉಸಿರಾಟದ ತೊಂದರೆಯಿಂದ ಬಳಲಿದ ಹಿರಿಯ ಮಾರ್ಕ್ಸ್ವಾದಿ ಹರಿಕಿಷನ್ ಸಿಂಗ್ ಸುರ್ಜಿತ್ ಅವರ ದೇಹಸ್ಥಿತಿ ವಿಷಮಿಸಿದ್ದು, ಅವರು ಕೋಮಾ ಸ್ಥಿತಿಗೆ ಜಾರಿದರು.

2008: ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಬಿಹಾರದ ಸಾರಿಗೆ ಸಚಿವ ರಮಾನಂದ ಪ್ರಸಾದ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಭ್ರಷ್ಟಾಚಾರ ನಡೆಸಿದ ಬಗ್ಗೆ ಸಿಂಗ್ ಅವರ ವಿರುದ್ಧ ರಾಜ್ಯ ಗುಪ್ತದಳವು 1990ರ ಮೇ 24ರಂದು ಪ್ರಕರಣ ದಾಖಲಿಸಿಕೊಂಡಿತ್ತು. ಅದು ಬಹಿರಂಗಗೊಂಡ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದರು.

2007: ಕ್ಯಾಲಿಫೋರ್ನಿಯಾದ 18ರ ಹರೆಯದ ತರುಣಿ ಸಮಂಥಾ ಲಾರ್ಸನ್ ಅವರು ವಿಶ್ವದ ಅತ್ಯುನ್ನತವಾದ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಮೊತ್ತ ಮೊದಲ ಅತಿ ಕಿರಿಯ ವಿದೇಶಿ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಳಾದಳು. ನೇಪಾಳದ 15 ವರ್ಷದ ಶೆರ್ಪಾ ಬಾಲಕಿಯೊಬ್ಬಳು ಎವರೆಸ್ಟ್ ಶಿಖರ ಏರಿದ ಕಿರಿಯ ಹುಡುಗಿ ಎಂಬ ಹೆಗ್ಗಳಿಕೆಗೆ ಈಗಾಗಲೇ ಪಾತ್ರಳಾಗಿದ್ದಾಳೆ.

2007: ಬಜಾಜ್ ಆಟೋ ಸಂಸ್ಥೆಯನ್ನು ಬಜಾಜ್ ಹೋಲ್ಡಿಂಗ್ಸ್ ಅಂಡ್ ಇನ್ ವೆಸ್ಟ್ ಮೆಂಟ್ಸ್ ಲಿಮಿಟೆಡ್ (ಬಿಎಚ್ ಐಎಲ್) ಮತ್ತು ಬಜಾಜ್ ಫೈನಾನ್ಸರ್ಸ್ ಲಿಮಿಟೆಡ್ (ಬಿಎಫ್ ಎಲ್) ಎಂಬ ಹೆಸರಿನೊಂದಿಗೆ ಎರಡು ಸಂಸ್ಥೆಗಳಾಗಿ ವಿಭಜಿಸುವ ಯೋಜನೆಗೆ ಬಜಾಜ್ ಆಟೋ ಲಿಮಿಟೆಡ್ ಬೋರ್ಡ್ ಒಪ್ಪಿಗೆ ನೀಡಿತು.

2007: ಮೈಸೂರು, ಮಂಡ್ಯ ಜಿಲ್ಲೆಗೆ ನೀರು ಒದಗಿಸುವ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ ತಗ್ಗುತ್ತಿದ್ದಂತೆಯೇ ಮೈಸೂರು ತಾಲ್ಲೂಕಿಗೆ ಸೇರಿದ ಆನಂದೂರು ಗ್ರಾಮದ ಬಳಿ ಜಲಾಶಯದ ಕೆಳಗಿದ್ದ ನಾರಾಯಣಸ್ವಾಮಿ ದೇವಾಲಯ ಪ್ರತ್ಯಕ್ಷವಾಯಿತು. ಕಳೆದ ಬಾರಿ ಜಲಾಶಯದಲ್ಲಿ ಕನ್ನಂಬಾಡಿ ಗ್ರಾಮದ ಬಳಿ ವೇಣುಗೋಪಾಲ ಸ್ವಾಮಿ ದೇವಸ್ಥಾನ ಗೋಚರಿಸಿತ್ತು.

2007: ಉನ್ನತ ಶಿಕ್ಷಣಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ (ಓಬಿಸಿ) ಶೇಕಡಾ 27ರಷ್ಟು ಮೀಸಲಾತಿ ನೀಡುವ ವಿವಾದಾತ್ಮಕ ವಿಷಯದ ವಿಚಾರಣೆಯನ್ನು ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠವು ಉನ್ನತ ಪೀಠಕ್ಕೆ ವಹಿಸಿತು.

2007: ಬ್ರಿಟನ್ನಿನ ಚಾನ್ಸೆಲರ್ ಗಾರ್ಡನ್ ಬ್ರೌನ್ ಅವರು ಸಂಸತ್ತಿನಲ್ಲಿ ನಡೆದ ನಾಮ ನಿರ್ದೇಶನದಲ್ಲಿ ್ಲತಮ್ಮ ವಿರೋಧಿ ಎಡಪಂಥೀಯ ಜಾನ್ ಮೆಕ್ ಡೊನೆಲ್ ಅವರನ್ನು ಸೋಲಿಸಿದರು. ಇದರೊಂದಿಗೆ ಟೋನಿ ಬ್ಲೇರ್ ನಂತರ ಬ್ರೌನ್ ಪ್ರಧಾನ ಮಂತ್ರಿಯಾಗುವುದು ಖಚಿತಗೊಂಡಿತು.

2007: ಹಿಂದೂಗಳ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬ್ರಿಟನ್ನಿನ ಹಿಂದೂ ದೇವಾಲಯದಲ್ಲಿ ಬಿಡಲಾಗಿದ್ದ ಬಸವನ (ಶಂಭು) ಹತ್ಯೆಯ ನಿರ್ಧಾರವನ್ನು ಸರ್ಕಾರ ಮುಂದೂಡಿತು.

2007: ಐವತ್ತಾರು ವರ್ಷಗಳ ಬಳಿಕ ಉತ್ತರ ಮತ್ತು ದಕ್ಷಿಣ ಕೊರಿಯಾಗಳ ಎರಡು ರೈಲುಗಾಡಿಗಳು ಪರಸ್ಪರ ಗಡಿ ದಾಟಿ ಏಕತೆಯೆಡೆಗೆ ಮತ್ತೆ ಹೆಜ್ಜೆ ಹಾಕಿದವು.

2007: ದೇಶದ ಪ್ರಪ್ರಥಮ ಕೃಷಿ ಸಮುದಾಯ ಬಾನುಲಿ ಕೇಂದವು ಧಾರವಾಡದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಚಾಲನೆಗೊಂಡಿತು. ಕೃಷಿ ಸಚಿವ ಬಂಡೆಪ್ಪ ಕಾಶೆಂಪೂರ ಬಾನುಲಿ ಕೇಂದ್ರವನ್ನು ಉದ್ಘಾಟಿಸಿದರು.

2007: ಡೆಕ್ಕನ್ ಹೆರಾಲ್ಡ್ ಹಿರಿಯ ವರದಿಗಾರ್ತಿ ಸಂಗೀತಾ ಚೆಂಗಪ್ಪ ಅವರಿಗೆ 9ನೇ ವರ್ಷದ `ಪೋಲ್ಸ್ಟಾರ್' ಪ್ರಶಸ್ತಿ ಲಭಿಸಿತು.

2006: ಸ್ವಾತಂತ್ರ್ಯ ಹೋರಾಟಗಾರ, ಇಂಡಿಯನ್ ನ್ಯಾಷನಲ್ ಆರ್ಮಿ ಸಂಸ್ಥಾಪಕ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ ಎಂಬುದಾಗಿ ಹೇಳಿರುವ ನ್ಯಾಯಮೂರ್ತಿ ಎಂ.ಕೆ. ಮುಖರ್ಜಿ ಆಯೋಗದ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತು. ನ್ಯಾಯಮೂರ್ತಿ ಮುಖರ್ಜಿ ಆಯೋಗವು 2005 ನವೆಂಬರ್ 8ರಂದು ಸಲ್ಲಿಸಿದ್ದ ವರದಿಯನ್ನು ಸರ್ಕಾರವು ಪರಿಶೀಲಿಸಿದೆ, ಆದರೆ ನೇತಾಜಿ ವಿಮಾನ ಅಪಘಾತದಲ್ಲಿ ಸತ್ತಿಲ್ಲ, ಜಪಾನ್ ದೇವಾಲಯದಲ್ಲಿ ಇರುವ ಚಿತಾಭಸ್ಮ ಅವರದ್ದಲ್ಲ ಎಂಬ ಆಯೋಗದ ವರದಿಗೆ ಸರ್ಕಾರದ ಸಹಮತ ಇಲ್ಲ ಎಂದು ಸದನದಲ್ಲಿ ವರದಿಯ ಜೊತೆಗೆ ಮಂಡಿಸಲಾದ ಕ್ರಮಾನುಷ್ಠಾನ ವರದಿಯಲ್ಲಿ (ಕ್ರಮ ಕೈಗೊಂಡ ವರದಿ) ಸರ್ಕಾರ ತಿಳಿಸಿತು.

2006: ಇತರ ಹಿಂದುಳಿದ ವರ್ಗಗಳಿಗೆ ಶೇಕಡಾ 27 ಮೀಸಲಾತಿ ಕಲ್ಪಿಸುವ ಪ್ರಸ್ತಾವದ ವಿರುದ್ಧ ದೇಶದ ವಿವಿಧ ಪ್ರದೇಶಗಳಿಗೆ ಚಳವಳಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಹೆಚ್ಚಳ ಪರಿಶೀಲಿಸಿ ಬಿಕ್ಕಟ್ಟು ಬಗೆಹರಿಸುವ ಸಲುವಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರಕ್ಷಣಾ ಸಚಿವ ಪ್ರಣವ್ ಮುಖರ್ಜಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಅರ್ಜುನ್ ಸಿಂಗ್, ಕಾನೂನು ಸಚಿವ ಎಚ್. ಆರ್. ಭಾರದ್ವಾಜ್ ಮತ್ತು ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಒಳಗೊಂಡ ನಾಲ್ಕು ಮಂದಿ ಸಚಿವರ `ಅನೌಪಚಾರಿಕ ಸಲಹಾ ಸಮಿತಿ' ಒಂದನ್ನು ರಚಿಸಿದರು.

1965: ಕಲಾವಿದ ರಾಜಗೋಪಾಲ ಕಲ್ಲೂರಕರ ಜನನ.

1954: ಕರಿಯರು ಮತ್ತು ಬಿಳಿಯರಿಗಾಗಿ `ಪ್ರತ್ಯೇಕ ಮತ್ತು ಸಮಾನ' ಪಬ್ಲಿಕ್ ಶಾಲೆಗಳನ್ನು ನಡೆಸುವುದು ಸಂವಿಧಾನದ ಉಲ್ಲಂಘನೆಯಾಗುತ್ತದೆ ಎಂಬ ಚಾರಿತ್ರಿಕ ತೀರ್ಪನ್ನು ಅಮೆರಿಕದ ಸುಪ್ರೀಂ ಕೋರ್ಟ್ ನೀಡಿತು.

1946: ಕಲಾವಿದೆ ಕಾವೇರಿ ಶ್ರೀಧರ್ ಜನನ.

1935: ಕಲಾವಿದ ಉತ್ತರಾಚಾರ್ಯ ಜನನ.

1934: ಕಲಾವಿದ ರಾಮಮೂರ್ತಿ ಜನನ.

1934: ಕಲಾವಿದ ಜಂಬೂಕಣ್ಣನ್ ಜನನ.

1897: ಕರ್ನಾಟಕ ಸಂಗೀತದ ವಾಗ್ಗೇಯಕಾರ ಎಚ್. ಯೋಗಾ ನರಸಿಂಹಂ (17-5-1897ರಿಂದ 14-5-1971) ಅವರು ಹೊಳೆನರಸೀಪುರದ ನಾರಣಪ್ಪ- ಲಕ್ಷ್ಮೀದೇವಮ್ಮ ದಂಪತಿಯ ಮಗನಾಗಿ ಕೋಲಾರದಲ್ಲಿ ಜನಿಸಿದರು.

1861: ಲಂಡನ್ನಿನಿಂದ ಪ್ಯಾರಿಸ್ಸಿಗೆ 6 ದಿನಗಳ ಪ್ರವಾಸ ಏರ್ಪಡಿಸುವ ಮೂಲಕ ಥಾಮಸ್ ಕುಕ್ ಮೊತ್ತ ಮೊದಲ `ಪ್ಯಾಕೇಜ್ ಹಾಲಿಡೇ' ಆರಂಭಿಸಿದ.

1792: `ನ್ಯೂಯಾರ್ಕ್ ಸ್ಟಾಕ್ ಎಕ್ಸ್ ಚೇಂಜ್' ಆರಂಭಗೊಂಡಿತು. ಈಗ ವಾಲ್ ಸ್ಟ್ರೀಟ್ ಎಂಬುದಾಗಿ ಕರೆಯಲಾಗುವ ಸ್ಥಳದಲ್ಲಿ ಸೆಕ್ಯುರಿಟಿಗಳ ಖರೀದಿ ಹಾಗೂ ಮಾರಾಟ ಮಾಡುತ್ತಿದ್ದ ಸ್ಥಳೀಯ ಬ್ರೋಕರುಗಳು ತಮ್ಮ ವಹಿವಾಟನ್ನು ಈ ಕೇಂದ್ರದ ಮೂಲಕ ಅಧಿಕೃತಗೊಳಿಸಲು ಒಪ್ಪಿದರು. ಈಗ ಎಲ್ಲರಿಂದ ಮಾನ್ಯತೆ ಪಡೆದಿರುವ ದಿ ನ್ಯೂಯಾರ್ಕ್ ಸ್ಟಾಕ್ ಎಕ್ಸ್ ಚೇಂಜ್ 1825ರಲ್ಲಿ ನ್ಯೂಯಾರ್ಕ್ ನಗರದ ವಾಲ್ ಸ್ಟ್ರೀಟಿನ 11ನೇ ನಂಬರ್ ಕಟ್ಟಡದಲ್ಲಿ ಸ್ಥಾಪನೆಗೊಂಡಿತು.

1540: ಕನೋಜಿನಲ್ಲಿ ನಡೆದ ಕದನದಲ್ಲಿ ಹುಮಾಯೂನನನ್ನು ಶೇರ್ ಶಹ ಸೂರಿ ಸೋಲಿಸಿದ. ಸೋತ ಹುಮಾಯೂನ್ ಸಿಂಧ್ ಹಾಗೂ ನಂತರ ಮಾರವಾಡದಲ್ಲಿ ನಿರಾಶ್ರಿತನಾಗಿ ನೆಲೆಸಬೇಕಾಯಿತು. ಆತನ ಮಗ ಅಕ್ಬರ್ ಇಂತಹ ಪರಿಸ್ಥಿತಿಯಲ್ಲೇ 1542ರಲ್ಲಿ ಜನಿಸಿ ಮುಂದೆ ಮೊಘಲ್ ಸಾಮ್ರಾಟರಲ್ಲೇ ಅತ್ಯಂತ ಶ್ರೇಷ್ಠ ಸಾಮ್ರಾಟನೆಂಬ ಹೆಸರು ಪಡೆದ.

Sunday, May 16, 2010

ಇಂದಿನ ಇತಿಹಾಸ History Today ಮೇ 16



ಇಂದಿನ ಇತಿಹಾಸ

ಮೇ 16

ಈ ವರ್ಷದ ಮೈಂಡ್ ಬುಕ್ ಪ್ರಶಸ್ತಿ ಲಭಿಸಿತು. 1980ರ ದಶಕದಲ್ಲಿ ಬ್ರಿಟನ್‌ನಲ್ಲಿ ಕಳೆದ ತಮ್ಮ ಜೀವನವನ್ನೇ ಆಧರಿಸಿ ಈ ಪುಸ್ತಕವನ್ನು ಅವರು ಬರೆದಿದ್ದರು.

2009: ಅತಂತ್ರ ಲೋಕಸಭೆಯ ನಿರೀಕ್ಷೆಯಲ್ಲಿ ತಂತ್ರಗಾರಿಕೆಯ ರಾಜಕೀಯಕ್ಕೆ ಹೊಂಚು ಹಾಕುತ್ತಿದ್ದವರನ್ನೆಲ್ಲ ಕೆಡವಿಹಾಕಿದ ದೇಶದ ಪ್ರಜ್ಞಾವಂತ ಮತದಾರರು ಮತ್ತೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಕೈ ಹಿಡಿದರು. ಚುನಾವಣಾ ಓಟದಲ್ಲಿ 'ಎಡ' 'ಬಲ' ಪಕ್ಷಗಳೆಲ್ಲ ನಡುದಾರಿಯಲ್ಲಿಯೇ ಕುಸಿದು ಬಿದ್ದವು. ಮಧ್ಯದ ದಾರಿ ಹಿಡಿದು ಸಾಗಿದ ಕಾಂಗ್ರೆಸ್ ಪಕ್ಷ ಉಳಿದೆಲ್ಲರನ್ನೂ ಹಿಮ್ಮೆಟ್ಟಿಸಿ ಮುಂದೋಡಿತು. ಪ್ರಧಾನಿ ಮನಮೋಹನ್‌ಸಿಂಗ್ ಪಾಲಿಗೆ 'ಮನಮೋಹಕ' ಫಲಿತಾಂಶ ಲಭಿಸಿದರೆ, ಬಿಜೆಪಿ ನಾಯಕ ಲಾಲ್‌ಕೃಷ್ಣ ಅಡ್ವಾಣಿ ಅವರ ಪ್ರಧಾನಿಯಾಗುವ ಕನಸು ಭಗ್ನಗೊಂಡಿತು. ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ವೈಯಕ್ತಿಕ ಮಟ್ಟಕ್ಕೆ ಒಯ್ದು ನಿಂದನೆಯಲ್ಲಿ ತೊಡಗಿದ್ದ ಎಡಪಕ್ಷಗಳು ತಮ್ಮದೇ ಕೆಂಪುಕೋಟೆಯಲ್ಲಿ ಉರುಳಿಬಿದ್ದವು.

2009: ಪಾಕಿಸ್ತಾನದ ಹಿಂದಿನ ಸರ್ಕಾರಗಳು ತಾಲಿಬಾನ್ ಉಗ್ರರ ಜತೆ ಒಳ ಒಪ್ಪಂದ ಮಾಡಿಕೊಂಡು ತಪ್ಪೆಸಗಿವೆ ಎಂದು ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಸಿಎನ್ ಎನ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. ಅನೇಕ ವರ್ಷಗಳ ಹಿಂದೆ ತಾಲಿ ಬಾನ್ ಉಗ್ರರ ಜತೆ ಒಳ ಒಪ್ಪಂದ ಮಾಡಿಕೊಂಡದ್ದರಿಂದ ಈ ಉಗ್ರಗಾಮಿಗಳು ದೇಶದ ಕೆಲವು ಭಾಗಗಳಲ್ಲಿ ಬಲವಾಗಿ ಬೇರೂರಲು ಸಾಧ್ಯವಾಯಿತು ಎಂದು ಮುಷರಫ್ ನುಡಿದರು.

2009: ಎಲ್‌ಟಿಟಿಇ ವಿರುದ್ಧ ಲಂಕಾ ಸರ್ಕಾರ ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆಯಿತು. ತಮಿಳು ಬಂಡುಕೋರರ ನೌಕಾ ನೆಲೆಯನ್ನು ವಶಪಡಿಸಿಕೊಳ್ಳುವಲ್ಲಿ ಸೇನೆ ಯಶಸ್ವಿಯಾಯಿತು. ಇದರಿಂದಾಗಿ ಎಲ್‌ಟಿಟಿಇಗೆ ಸಮುದ್ರ ಮಾರ್ಗದ ಸಂಪರ್ಕ ಪೂರ್ಣ ಕಡಿದುಹೋಯಿತು.. ಭದ್ರತಾ ಪಡೆಗಳು ಸುತ್ತುವರಿದ ಕಾರಣ ಅವರ ಕಾರ್ಯವ್ಯಾಪ್ತಿ ಯುದ್ಧ ಮುಕ್ತ ವಲಯದಿಂದ ಕೇವಲ 1.5 ಚದರ ಕಿ.ಮೀ.ಗೆ ಮೀಸಲಾಗಿ ಉಳಿಯಿತು.

2009: ಪಂಜಾಬ್ ಮೂಲದ ಅಮೆರಿಕದ ನಾಗರಿಕ ಪ್ರೀತ್ ಭರಾರಾ ಅವರನ್ನು ಅಧ್ಯಕ್ಷ ಬರಾಕ್ ಒಬಾಮ ಅವರು ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆಯ ಅಟಾರ್ನಿಯಾಗಿ ನೇಮಿಸಿದರು. 40 ವರ್ಷದ ವಕೀಲ ಭರಾರಾ ಅವರು ನ್ಯಾಯಾರ್ಕ್‌ನ ಡೆಮಾಕ್ರೆಟಿಕ್ ಪಕ್ಷದ ಸೆನೆಟರ್ ಚಾರ್ಲಸ್ ಸ್ಕಮೆರ್ ಅವರಿಗೆ ಕಾನೂನು ಸಲಹೆಗಾರರಾಗಿದ್ದರು ಹಾಗೂ ಬುಷ್ ಆಡಳಿತ 8 ಮಂದಿ ಅಟಾರ್ನಿಗಳನ್ನು ವಜಾ ಮಾಡಿದ ಸಂದರ್ಭದಲ್ಲಿ ನಡೆದ ಕಾಂಗ್ರೆಸ್ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಶ್ವೇತಭವನದ ಪ್ರಕಟಣೆ ತಿಳಿಸಿತು.

2009: ದಿ ಟೈಮ್ಸ್‌ನ ಭಾರತೀಯ ಮೂಲದ ಅಂಕಣಕಾರ ಸತ್ನಾಮ್ ಸಂಘೇರಾ ಅವರು ಬರೆದ 'ದಿ ಬಾಯ್ ವಿದ್ ದಿ ಟಾಪ್‌ನಾಟ್' ಕೃತಿಗೆ ಈ ವರ್ಷದ ಮೈಂಡ್ ಬುಕ್ ಪ್ರಶಸ್ತಿ ಲಭಿಸಿತು. 1980ರ ದಶಕದಲ್ಲಿ ಬ್ರಿಟನ್‌ನಲ್ಲಿ ಕಳೆದ ತಮ್ಮ ಜೀವನವನ್ನೇ ಆಧರಿಸಿ ಈ ಪುಸ್ತಕವನ್ನು ಅವರು ಬರೆದಿದ್ದರು.

2008: ಆಂಧ್ರ ಪ್ರದೇಶದ ಮಾಜಿ ರಣಜಿ ಕ್ರಿಕೆಟ್ ಆಟಗಾರ ರಾಜೇಂದ್ರ ಸಾಹು ಅವರನ್ನು ಮಾವೋವಾದಿ ಉಗ್ರರು ರಾಯಗಢ ಜಿಲ್ಲೆ ಗೋಥಲ್ ಪದರಿನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದರು. ಸಾಹು ಮೂಲತಃ ಒರಿಸ್ಸಾದವರಾಗಿದ್ದು, ಆಂಧ್ರದ ಪರವಾಗಿ 2006-07 ರಲ್ಲಿ ರಣಜಿ ಕ್ರಿಕೆಟ್ ಪಂದ್ಯದಲ್ಲಿ ಆಡಿದ್ದರು.

2008: ಕೇಂದ್ರದ ಹಣಕಾಸು ನೆರವಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೆ 27ರಷ್ಟು ಮೀಸಲಾತಿ ಕಲ್ಪಿಸುವುದಕ್ಕೆ ಕೋಲ್ಕತ ಹೈಕೋರ್ಟ್ ವಿಧಿಸಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿತು.

2008: ಬೆಂಗಳೂರಿನ ಯಲಹಂಕದಲ್ಲಿ ಇರುವ ರೈಲ್ವೆ ಗಾಲಿ ಕಾರ್ಖಾನೆಗೆ ಪ್ರತಿಷ್ಠಿತ `ಗೋಲ್ಡನ್ ಪಿಕಾಕ್ ಅವಾರ್ಡ್ಫಾರ್ ಆಕ್ಯುಪೇಷನಲ್ ಹೆಲ್ತ್ ಅಂಡ್ ಸೇಫ್ಟಿ-2008' ಪ್ರಶಸ್ತಿ ಲಭಿಸಿತು. ಸುಪ್ರೀಂ ಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಹಾಗೂ ಮಾನವ ಹಕ್ಕುಗಳ ಆಯೋಗದ ಸದಸ್ಯ ಪಿ.ಎನ್.ಭಗವತಿ ಅಧ್ಯಕ್ಷತೆಯ ಆಯ್ಕೆ ಸಮಿತಿ ಕಾರ್ಖಾನೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿತು.

2008: ಕರ್ನಾಟಕ ರಾಜ್ಯ ವಿಧಾನಸಭೆಗೆ ಎರಡನೇ ಹಂತದಲ್ಲಿ ನಡೆದ 66 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಶೇ 60.30ರಷ್ಟು ಮತದಾನವಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಎಂ.ಎನ್.ವಿದ್ಯಾಶಂಕರ್ ಬೆಂಗಳೂರಿನಲ್ಲಿ ಪ್ರಕಟಿಸಿದರು. ನಕ್ಸಲ್ ಪೀಡಿತ ಚಿಕ್ಕಮಗಳೂರು, ಉಡುಪಿ, ಘಟಾನುಘಟಿಗಳೇ ಸ್ಪರ್ಧಿಸಿದ್ದ ಶಿವಮೊಗ್ಗ ಹಾಗೂ ಬಳ್ಳಾರಿ ಸೇರಿದಂತೆ ಒಟ್ಟು 10 ಜಿಲ್ಲೆಗಳಲ್ಲೂ ಮತದಾನ ಬಹುತೇಕ ಶಾಂತಿಯುತವಾಗಿತ್ತು.

2008: ಕರ್ನಾಟಕ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಇಬ್ಬರು `ನೋಟಾ' (ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸುವ) ಮತ ಚಲಾಯಿಸಿದರು. ಮೂಡುಬಿದಿರೆ ಕ್ಷೇತ್ರದ ಕಲ್ಲಬೆಟ್ಟು ಮತಗಟ್ಟೆಯಲ್ಲಿ ವಿಮರ್ಶಕ ಅರವಿಂದ ಚೊಕ್ಕಾಡಿ ಹಾಗೂ ಕಾರ್ಕಳದ ಅಜೆಕಾರು ಮತಗಟ್ಟೆಯಲ್ಲಿ ಶ್ರೀಶ ಉಡುಪ ಅವರು ನೋಟಾ ಮತ ಚಲಾಯಿಸಿದರು. 1961ರ ಚುನಾವಣಾ ನಡಾವಳಿ ಸಂಹಿತೆ ಸೆಕ್ಷನ್ 49-'ಒ'ದ ಪ್ರಕಾರ ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸುವ `ನಿರಾಕರಣೆ ಹಕ್ಕನ್ನು' ಅವರು ಬಳಸಿಕೊಂಡರು. ಎಸ್ ಇ ಝೆಡ್, ಕೂಲಿ ಕಾರ್ಮಿಕರ ಸಮಸ್ಯೆ, ಶಿಕ್ಷಣದ ಅಮೆರಿಕೀಕರಣ, ಕ್ಷೇತ್ರದ ಅಭಿವೃದ್ಧಿ ಕುಂಠಿತ, ರೈತರ ಆತ್ಮಹತ್ಯೆ ಮತ್ತಿತರ ಸಮಸ್ಯೆಗಳ ಬಗ್ಗೆ ಅಭ್ಯರ್ಥಿಗಳ ಹಾಗೂ ಪಕ್ಷಗಳ ನಿರ್ಲಕ್ಷ್ಯವನ್ನು ಪ್ರತಿಭಟಿಸಿ ನೋಟಾ ಮತ ಚಲಾಯಿಸಿರುವುದಾಗಿ ಅರವಿಂದ ಚೊಕ್ಕಾಡಿ ಹೇಳಿದರು. ಕ್ಷೇತ್ರದೊಳಗೆ ಶೇ. 50ಕ್ಕಿಂತ ಹೆಚ್ಚು ಮಂದಿ ನೋಟಾ ಮತ ಚಲಾಯಿಸಿದಲ್ಲಿ ಮರು ಮತದಾನ ನಡೆಯಬೇಕು. ಅಲ್ಲದೆ ಆಭ್ಯರ್ಥಿಗಳು ಮತ್ತೆ ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳುತ್ತಾರೆ. ಈ ಬಗ್ಗೆ ಜಾಗೃತಿ ಮೂಡಿಸಲು ನೋಟಾ ಚಲಾಯಿಸಿದ್ದೇನೆ ಎಂದು ಅವರು ನುಡಿದರು.

2008: ಕಾರ್ಕಳ ತಾಲ್ಲೂಕಿನ ಸೀತಾನದಿಯಲ್ಲಿ ನಡೆದ ನಕ್ಸಲ್ ದಾಳಿಗೆ ಸಂಬಂಧಿಸಿದಂತೆ ಸೋಮೇಶ್ವರದ ತಣ್ಣೀರು ಉದಯ ಆಚಾರ್ಯ ಸಹಿತ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

2008: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸೊದೆಪುರದಲ್ಲಿನ ಜನನಿಬಿಡ ವ್ಯಾಪಾರ ಮಳಿಗೆಯೊಂದರಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ 12 ಮಂದಿ ಮೃತರಾಗಿ, ಇತರ 23 ಮಂದಿ ಗಾಯಗೊಂಡರು.

2008: ರಾಮಾಯಣದ ದೃಷ್ಟಾಂತಗಳನ್ನು ಬಿಂಬಿಸುವ ಮೊತ್ತಮೊದಲ ಚಿತ್ರಕಲಾ ಪ್ರದರ್ಶನ ಲಂಡನ್ನಿನಲ್ಲಿ ಶುರುವಾಯಿತು. 17ನೇ ಶತಮಾನದ ಮೇವಾರದ ರಾಣಾ ಜಗತ್ ಸಿಂಗನ ಸಂಪುಟಗಳನ್ನು ಆಧರಿಸಿ ರಚಿಸಿದ 120 ಚಿತ್ತಾಕರ್ಷಕ ಚಿತ್ರಗಳನ್ನು ಈ ಪ್ರದರ್ಶನ ಒಳಗೊಂಡಿದೆ. `ಬ್ರಿಟಿಷ್ ಲೈಬ್ರರಿ ಫೀಚರ್ಸ್' ಆಯೋಜಿಸಿದ ಈ ಪ್ರದರ್ಶನದಲ್ಲಿ ಚಿತ್ರಕಲೆಯ ಜತೆಗೆ ಶಿಲ್ಪಕೃತಿಗಳು, ಕಲಾತ್ಮಕ ಉಡುಪುಗಳು, ತೊಗಲು ಬೊಂಬೆಗಳು ಹಾಗೂ ನೃತ್ಯ ಪರಿಕರಗಳನ್ನೂ ಇಡಲಾಗಿತ್ತು. ಇಲ್ಲಿನ ಬಹುತೇಕ ಕಲಾಕೃತಿಗಳನ್ನು ಈತನಕ ಸಾರ್ವಜನಿಕವಾಗಿ ಪ್ರದರ್ಶಿಸಿರಲಿಲ್ಲ.

2007: ನೇಪಾಳದ ಖ್ಯಾತ ಪರ್ವತಾರೋಹಿ ಅಪ್ಪಾ ಶೆರ್ಪಾ ಅವರು 17ನೇ ಬಾರಿಗೆ ಹಿಮಾಲಯ ಶಿಖರವನ್ನು ಹತ್ತುವ ಮೂಲಕ ತಮ್ಮದೇ ವಿಶ್ವದಾಖಲೆಯನ್ನು ಮುರಿದು ಮತ್ತೊಂದು ಇತಿಹಾಸ ನಿರ್ಮಿಸಿದರು. ಆಗ್ನೇಯ ದಿಕ್ಕಿನಿಂದ ಶಿಖರವನ್ನು ಹತ್ತಿದ ಇವರು ಈ ದಿನ ಬೆಳಗ್ಗೆ 8.30ಕ್ಕೆ (ಸ್ಥಳೀಯ ಕಾಲಮಾನ) 29,035 ಅಡಿ ಎತ್ತರ ಕ್ರಮಿಸಿ ನೂತನ ದಾಖಲೆ ನಿರ್ಮಿಸಿದರು. ಇವರ ತಂಡದ ಇತರ ಏಳು ಮಂದಿ ಪರ್ವತಾರೋಹಿಗಳೂ ಯಶಸ್ವಿಯಾಗಿ ಶಿಖರ ಏರಿದರು.

2007: ಮದ್ಯದ ದೊರೆ ವಿಜಯ್ ಮಲ್ಯ ಒಡೆತನದ ಯುನೈಟೆಡ್ ಸ್ಪಿರಿಟ್ , ಸ್ಕಾಟ್ಲೆಂಡಿನ ವಿಸ್ಕಿ ತಯಾರಕ ವೈಟ್ ಅಂಡ್ ವೈಟ್ ಅಂಡ್ ಮೆಕೆಯನ್ನು 5950 ಲಕ್ಷ ಪೌಂಡುಗಳಿಗೆ (ಸುಮಾರು 4819 ಕೋಟಿ ರೂಪಾಯಿಗಳಿಗೆ) ಖರೀದಿಸಿತು.

2007: ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ರಾಗಿಂಗ್ ಮೂಲಕ ಗೋಳು ಹುಯ್ದುಕೊಳ್ಳುವ ಹಿರಿಯ ವಿದ್ಯಾರ್ಥಿಗಳ ವಿರುದ್ಧ ತಪ್ಪದೇ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಸುಪ್ರೀಂಕೋರ್ಟ್ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿತು.

2006: ಪಾಂಡವರು ಮತ್ತು ಕೌರವರ ನಡುವೆ ಯುದ್ಧ ನಡೆದ ಕುರುಕ್ಷೇತ್ರದ ಸಮೀಪದಲ್ಲಿ 4500 ವರ್ಷಗಳಿಗೂ ಹಳೆಯದು ಎಂದು ಅಂದಾಜು ಮಾಡಲಾದ ಇಟ್ಟಿಗೆಗಳು ಪತ್ತೆಯಾಗಿರುವುದಾಗಿ ಹರಿಯಾಣದ ಪ್ರಾಚ್ಯವಸ್ತು ಇಲಾಖೆ ಪ್ರಕಟಿಸಿತು. ಕುಶಾನ ವಂಶದ ಆಡಳಿತ ಅವಧಿಯಲ್ಲಿ ಬ್ರಹ್ಮಸಾರ ತೀರ್ಥದ ಪ್ರದೇಶದಲ್ಲಿ ಬಳಸಲಾಗಿದ್ದವೆಂದು ನಂಬಲಾಗಿರುವ ಈ ಇಟ್ಟಿಗೆಗಳು ಬ್ರಹ್ಮಸಾರ ತೀರ್ಥದಲ್ಲಿ ಹೂಳೆತ್ತುವಾಗ ಪತ್ತೆಯಾದವು.

2006: ಬಿಜೆಪಿ ನೇತೃತ್ವದ ಎನ್ ಡಿಎ ನೇತೃತ್ವದ ಪ್ರತಿಪಕ್ಷಗಳ ವಿರೋಧದ ನಡುವೆ `ಲಾಭದಾಯಕ ಹುದ್ದೆ' ಪರಿಧಿಯಿಂದ ವಿವಾದಾತ್ಮಕ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷ ಸ್ಥಾನ ಸೇರಿದಂತೆ 56 ಹುದ್ದೆಗಳಿಗೆ ವಿನಾಯ್ತಿ ನೀಡುವ ಮಸೂದೆಯನ್ನು (ಸಂಸದರ ಅನರ್ಹತೆ ತಡೆ ತಿದ್ದುಪಡಿ ಮಸೂದೆ-2006) ಲೋಕಸಭೆಯಲ್ಲಿ ತೀವ್ರ ಚರ್ಚೆಯ ನಂತರ ಧ್ವನಿಮತದಿಂದ ಅಂಗೀಕರಿಸಲಾಯಿತು. ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ ಅವರು ಅಧ್ಯಕ್ಷರಾಗಿರುವ ಶಾಂತಿನಿಕೇತನ ಅಭಿವೃದ್ಧಿ ಪ್ರಾಧಿಕಾರ, ಸಮಾಜವಾದಿ ಪಕ್ಷದ ನಾಯಕ ಅಮರಸಿಂಗ್ ಅಧ್ಯಕ್ಷರಾಗಿರುವ ಉತ್ತರಪ್ರದೇಶ ಅಭಿವೃದ್ಧಿ ಮಂಡಲಿ, ಕೇಂದ್ರ ಗಣಿ ಖಾತೆ ರಾಜ್ಯ ಸಚಿವ ಟಿ. ಸುಬ್ರಮಣಿ ರೆಡ್ಡಿ ಅಧ್ಯಕ್ಷರಾಗಿರುವ ತಿರುಮಲ ತಿರುಪತಿ ದೇವಸ್ಥಾನಂ ಮಂಡಲಿ, ಬಿಜೆಪಿ ಸಂಸದ ವಿ.ಕೆ. ಮಲ್ಹೋತ್ರ ಅಧ್ಯಕ್ಷರಾಗಿರುವ ಅಖಿಲ ಭಾರತ ಕ್ರೀಡಾ ಮಂಡಲಿ, ಸೋನಿಯಾ ಗಾಂಧಿ ಅವರು ಅಧ್ಯಕ್ಷರಾಗಿರುವ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್, ನೆಹರು ಸ್ಮಾರಕ ಮ್ಯೂಜಿಯಂ ಮತ್ತು ಗ್ರಂಥಾಲಯ, ಜಲಿಯನ್ ವಾಲಾಬಾಗ್ ಸ್ಮಾರಕ ಟ್ರಸ್ಟುಗಳೂ ಈ ಹುದ್ದೆಗಳಲ್ಲಿ ಸೇರಿವೆ. ಆದರೆ `ಲಾಭದ ಹುದ್ದೆಯ ವಿವಾದಕ್ಕೆ ಮೂಲವಾದ ಹಾಗೂ ಜಯಾ ಬಚ್ಚನ್ ಅವರು ರಾಜ್ಯಸಭಾ ಸ್ಥಾನ ಕಳೆದುಕೊಳ್ಳಲು ಕಾರಣವಾದ ಉತ್ತರಪ್ರದೇಶ ಚಲನಚಿತ್ರ ಅಭಿವೃದ್ಧಿ ನಿಗಮವನ್ನು ಲಾಭದ ಹುದ್ದೆ ಮಸೂದೆ ವ್ಯಾಪ್ತಿಯಿಂದ ಹೊರಗಿಡಲಾಯಿತು.

2006: ಸಹಕಾರ ಕೃಷಿ ಪತ್ತಿನ ಸಂಸ್ಥೆಗಳು ರೈತರಿಗೆ ಏಪ್ರಿಲ್ ಒಂದರಿಂದ ಪೂರ್ವಾನ್ವಯ ಆಗುವಂತೆ ಶೇಕಡಾ 4ರ ಬಡ್ಡಿ ದರದಲ್ಲಿ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ವಿತರಣೆ ಮಾಡಲು ರಾಜ್ಯ ಸರ್ಕಾರ ಹಿಂದಿನ ರಾತ್ರಿ ಆದೇಶ ಹೊರಡಿಸಿದ್ದು, ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆದೇಶದ ಪ್ರತಿಗಳನ್ನು ಈದಿನ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

1975: ಜಪಾನಿನ ಪರ್ವತಾರೋಹಿ ಜಂಕೋ ತಾಬೀ ಎವರೆಸ್ಟ್ ಶಿಖರವನ್ನು ತಲುಪುವ ಮೂಲಕ ಜಗತ್ತಿನ ಅತಿ ಎತ್ತರದ ಈ ಶಿಖರ ತಲುಪಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1975: ಸಿಕ್ಕಿಂ ಭಾರತದ 22ನೇ ರಾಜ್ಯವಾಯಿತು.

1957: ಕಲಾವಿದೆ ಆಶಾ ಜನನ.

1957: ಕಲಾವಿದೆ ರಂಗಶ್ರೀ ಜನನ.

1956: ಕಲಾವಿದ ರೆಡ್ಡಪ್ಪ ಎ.ಎನ್. ಜನನ.

1929: ಹಾಲಿವುಡ್ನ ರೂಸ್ ವೆಲ್ಟ್ ಹೋಟೆಲಿನಲ್ಲಿ ಮೊತ್ತ ಮೊದಲ (ಚಲನಚಿತ್ರ) ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಅತ್ಯುತ್ತಮ ನಿರ್ಮಾಣ ಪ್ರಶಸ್ತಿ `ವಿಂಗ್ಸ್' ಚಲನಚಿತ್ರಕ್ಕೆ ಲಭಿಸಿತು. ಎಮಿಲ್ ಜೆನ್ನಿಂಗ್ಸ್ ಮತ್ತು ಜಾನೆಟ್ ಗೇನೊರ್ ಕ್ರಮವಾಗಿ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ನಟಿ ಪ್ರಶಸ್ತಿ ಗಳಿಸಿದರು. ಅಕಾಡೆಮಿ ಅಧ್ಯಕ್ಷ ಡಗ್ಲಾಸ್ ಫೇರ್ ಬ್ಯಾಂಕ್ಸ್ ಪ್ರಶಸ್ತಿ ಪ್ರದಾನ ಮಾಡಿದರು.

1926: ಪ್ರಜಾವಾಣಿಯ ನಿವೃತ್ತ ಸಂಪಾದಕ, ಹಿರಿಯ ಪತ್ರಕರ್ತ ವೈಎನ್ ಕೆ (1926-1999)ಅವರು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಅಗರ ಗ್ರಾಮದಲ್ಲಿ ಈದಿನ ಜನಿಸಿದರು. ವಿದ್ಯಾರ್ಥಿಯಾಗಿದ್ದಾಗಲೇ ಪತ್ರಿಕೋದ್ಯಮದಲ್ಲಿ ಅಪಾರ ಆಸಕ್ತಿ ತಾಳಿದ್ದ ಅವರು `ಬಾಲಚಂದ್ರ' ಎಂಬ ಕೈಬರಹದ ಪತ್ರಿಕೆ ನಡೆಸಿದ್ದರು. ಕೆಲವು ಕಾಲ `ಕುಸುಮ' `ಕಿರಣ' ಕೈಬರಹದ ಪತ್ರಿಕೆಗಳನ್ನು ಹೊರತಂದಿದ್ದರು. ಪತ್ರಿಕೋದ್ಯಮವೂ ಸಾಹಿತ್ಯದ ಒಂದು ಭಾಗ ಎಂಬುದನ್ನು ನಿರೂಪಿಸಲು ಹೊಸ ಹೊಸ ಅಂಕಣಗಳನ್ನು ತಾವು ದುಡಿದ ಪ್ರಜಾವಾಣಿ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಆರಂಭಿಸಿ ಅವುಗಳ ಮೌಲ್ಯ ಹೆಚ್ಚಿಸಿದರು. ಶಬ್ದಗಳನ್ನು ಪನ್ (PUN)
ಮಾಡಿ ಆಡುವ ಕಲೆ ಅವರಿಗೆ ಕರಗತವಾಗಿತ್ತು. 16-10-1999 ರಂದು ಅವರು ಹೃದಯಾಘಾತದಿಂದ ನಿಧನರಾದರು.

1916: ನಟ, ನಿರ್ದೇಶಕ, ನಾಟಕಕಾರ, ರಂಗತಜ್ಞ, ರಂಗಶಿಕ್ಷಕರಾಗಿದ್ದ ಚಂದ್ರಶೇಖರ್ (16-5-1916ರಿಂದ 13-12-2000) ಅವರು ವಕೀಲ ಬೆಳವಾಡಿ ರಾಮಸ್ವಾಮಯ್ಯ- ಗುಂಡಮ್ಮ ದಂಪತಿಯ ಮಗನಾಗಿ ಹಾಸನದಲ್ಲಿ ಜನಿಸಿದರು.

1888: ಫ್ರಾಂಕ್ಲಿನ್ ಇನ್ ಸ್ಟಿಟ್ಯೂಟ್ ಆಫ್ ಫಿಲಿಡೆಲ್ಫಿಯದ ಸದಸ್ಯರ ಮುಂದೆ ಫ್ಲಾಟ್ ರೆಕಾರ್ಡಿಂಗ್ ಡಿಸ್ಕನ್ನು (ಹಾಡುವ ತಟ್ಟೆ) ಎಮಿಲ್ ಬರ್ಲೈನರ್ ಮೊತ್ತ ಮೊದಲ ಬಾರಿಗೆ ಪ್ರದರ್ಶಿಸಿದ. ಈ `ರೆಕಾರ್ಡನ್ನು' ಧ್ವನಿ ಮರು ಉತ್ಪಾದಿಸುವ ಯಂತ್ರದಲ್ಲಿ ಹಾಕಿ ಮತ್ತೆ ಧ್ವನಿಯನ್ನು ಕೇಳಬಹುದಾಗಿತ್ತು. ಈ ಧ್ವನಿ ಮರು ಉತ್ಪಾದನಾ ಯಂತ್ರವನ್ನು ಎಮಿಲ್ ಬರ್ಲೈನರ್ `ಗ್ರಾಮೋಫೋನ್' ಎಂಬುದಾಗಿ ಕರೆದ.

1831: ಆಂಗ್ಲೋ ಅಮೆರಿಕನ್ ಸಂಶೋಧಕ ಡೇವಿಡ್ ಎಡ್ವರ್ಡ್ ಹ್ಯೂಗ್ಸ್ (1831-1900) ಜನ್ಮದಿನ. ಈತ ಕಾರ್ಬನ್ ಮೈಕ್ರೋಫೋನನ್ನು ಕಂಡು ಹಿಡಿದ. ಈತನ ಈ ಸಂಶೋಧನೆ ಮುಂದೆ ದೂರವಾಣಿ ತಂತ್ರದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿತು.

Saturday, May 15, 2010

ಇಂದಿನ ಇತಿಹಾಸ History Today ಮೇ 15

ಇಂದಿನ ಇತಿಹಾಸ

ಮೇ 15

ಹಲವಾರು ಚಲನಚಿತ್ರ, ಕಿರುತೆರೆಗಳಲ್ಲಿ ಅಭಿನಯಿಸಿರುವ ನಟಿ ಅಭಿನಯ, ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ಕಿರುತೆರೆ ಛಾಯಾಗ್ರಾಹಕ ಉಮಾಕಾಂತ್ ಮತ್ತು ಅಭಿನಯ ಅವರ ವಿವಾಹ ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ವಿಜೃಂಭಣೆಯಿಂದ ನೆರವೇರಿತು. 15ನೇ ವಯಸ್ಸಿನಲ್ಲಿ ನಿರ್ದೇಶಕ ಕಾಶೀನಾಥ್ ಅವರ 'ಅನುಭವ' ಚಿತ್ರದ ಮೂಲಕ ಅಭಿನಯ ಪ್ರಪಂಚಕ್ಕೆ ಕಾಲಿಟ್ಟ ಇವರು ಎಲ್ಲ ಪಾತ್ರಗಳಲ್ಲೂ ಸೈ ಎನಿಸಿಕೊಂಡವರು.

2009: ದೇಶದ ನ್ಯಾಯಾಂಗ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಸತಿಪತಿಗಳಿಬ್ಬರು ನ್ಯಾಯಮೂರ್ತಿಗಳಾಗಿ ದೆಹಲಿ ಹೈಕೋರ್ಟಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇಂದರ್‌ಮೀತ್ ಕೌರ್ ಕೊಚ್ಚರ್ ಮತ್ತು ಅವರ ಪತಿ ಎ.ಕೆ.ಪಾಠಕ್ ಅವರಿಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ನೇಮಕ ಆದೇಶವನ್ನು ವಾರದ ಆರಂಭದಲ್ಲಿ ನೀಡಿದ್ದರು. ದೆಹಲಿ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಆರಂಭಿಸಿದ್ದ ಇವರಿಬ್ಬರು ನ್ಯಾಯಾಂಗ ಸೇವೆಗೆ ಸೇರಿದ ನಂತರ ವಿವಾಹವಾಗಿದ್ದರು. ಇವರ ಜೊತೆಗೆ ಅಜಿತ್ ಬರಿಹೋಕ್‌ಮತ್ತು ವಿ.ಕೆ. ಜೈನ್ ಅವರೂ ನ್ಯಾಯಮೂರ್ತಿಗಳಾಗಿ ಪ್ರಮಾಣ ಸ್ವೀಕರಿಸಿದರು. ಈ ನಾಲ್ವರು ನ್ಯಾಯಮೂರ್ತಿಗಳ ನೇಮಕದೊಂದಿಗೆ ದೆಹಲಿ ಹೈಕೋರ್ಟಿನ ನ್ಯಾಯಮೂರ್ತಿಗಳ ಸಂಖ್ಯೆ 44ಕ್ಕೆ ಏರಿತು.

2009: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನಲ್ಲಿ ವೇದಾವತಿ ನದಿಯ ಪಕ್ಕ ಯಾದಲಗಟ್ಟೆ, ದೊಡ್ಡೇರಿ, ಹಿರಿಯೂರು ಹಾಗೂ ಹರ್ತಿಕೋಟೆ ನೆಲೆಗಳಲ್ಲಿ ಅಪರೂಪದ ಹವಳ ಮಣಿಗಳು ದೊರೆತವು. ಮೈಸೂರಿನ ಕುವೆಂಪು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಸ್.ಜಿ.ರಾಮದಾಸ ರೆಡ್ಡಿ ನೇತೃತ್ವದ ತಂಡ ಕ್ಷೇತ್ರ ಕಾರ್ಯ ಮಾಡುವಾಗ ಈ ಅಪರೂಪದ ಹವಳ ಮಣಿಗಳು ಪತ್ತೆಯಾದವು. ಇವು ಶಾತವಾಹನರ ಕಾಲದಲ್ಲಿ ಅಲಂಕಾರಕ್ಕಾಗಿ ಬಳಸುತ್ತಿದ್ದ ಬಹು ಉಪಯೋಗಿ ಹವಳ ಮಣಿಗಳು ಎಂದು ಹೇಳಲಾಯಿತು.

2009: 'ರಾಗಿ, ಜೋಳ, ಸಜ್ಜೆ, ನವಣೆ ಬೆಳೆಯಿರಿ. ಜಾಗತಿಕ ತಾಪಮಾನ ಕಡಿಮೆ ಮಾಡಿ'. ಏಕೆಂದರೆ ಕಿರುಧಾನ್ಯಗಳನ್ನು ಹೆಚ್ಚಾಗಿ ಬೆಳೆಯುವುದರಿಂದ ಜಾಗತಿಕ ತಾಪಮಾನ, ಹವಾಮಾನ ವೈಪರಿತ್ಯ ಕಡಿಮೆ ಮಾಡಬಹುದು ಎಂಬ ಅಂಶವನ್ನು ಹೈದರಾಬಾದಿನ ಡೆಕ್ಕನ್ ಡೆವಲಪ್‌ಮೆಂಟ್ ಸೊಸೈಟಿಯ ವಿಜ್ಞಾನಿ ಡಾ.ಸತೀಶ್ ಪೆರಿಯಾಪಟ್ಟಣ ಬಹಿರಂಗ ಪಡಿಸಿದರು. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆದಿದೆ. ಈಗ ಎಲ್ಲೆಲ್ಲೂ ಕೇಳಿಬರುತ್ತಿರುವ ಮಾತೆಂದರೆ ಜಾಗತಿಕ ತಾಪಮಾನ. ವಿಶ್ವವೆಲ್ಲ ಕಾದ ದೋಸೆ ಕಾವಲಿಯಂತಾಗಿದ್ದು, ಜೀವ ಸಂಕುಲ ತತ್ತರಿಸಿ ಹೋಗುತ್ತಿದೆ. ಇದರ ಪರಿಹಾರಕ್ಕಾಗಿ ಹಲವಾರು ತಜ್ಞರು ಸಂಶೋಧನೆ ನಡೆಸಿ, ಜಾಗತಿಕ ತಾಪಮಾನ ಕಡಿಮೆ ಮಾಡಲು ಸರ್ಕಸ್ ನಡೆಸುತ್ತಲೇ ಇದ್ದಾರೆ. ಕಿರುಧಾನ್ಯಗಳನ್ನು ಬೆಳೆಯುವ ಮೂಲಕ ತಾಪಮಾನವನ್ನು ತಡೆಗಟ್ಟಬಹುದು ಎಂಬ ಸಂಶೋಧನೆಯೂ ಈಗ ಹೊರಬಿದ್ದಿತು. ಡಾ.ಸತೀಶ್ ಪೆರಿಯಾಪಟ್ಟಣ ಅವರು ಆಂಧ್ರಪ್ರದೇಶದ ಮೇಡಕ್ ಜಿಲ್ಲೆಯ ಅರೆ ಮರುಭೂಮಿ ಪ್ರದೇಶದ 5 ಸಾವಿರ ಎಕರೆ ಪಾಳು ಬಿದ್ದ ಪ್ರದೇಶದಲ್ಲಿ 1996ರಿಂದ ಈ ಪ್ರಯೋಗ ಮಾಡಿದ್ದರು. ಇದರಿಂದ 20 ಲಕ್ಷ ಕೆಜಿಯಷ್ಟು ಹೆಚ್ಚುವರಿ ಆಹಾರಧಾನ್ಯ ಉತ್ಪಾದನೆಯಾಯಿತು. ಕಿರುಧಾನ್ಯ ಬೆಳೆಗಳು ಒಣಭೂಮಿ ಮತ್ತು ಮರುಭೂಮಿ ಪ್ರದೇಶಗಳ ಕಠಿಣ ಹವಾಮಾನವನ್ನು ಎದುರಿಸುತ್ತವೆ ಎನ್ನುವುದನ್ನು ಅವರು ಸಾಬೀತು ಪಡಿಸಿದರು. ಭಾರತದಲ್ಲಿ ಹಲವಾರು ಭಾಗದಲ್ಲಿ ಖುಷ್ಕಿ ಭೂಮಿಯ ವ್ಯವಸಾಯವೇ ಹೆಚ್ಚು. ಆದರೂ ನೀರಾವರಿ ಪ್ರದೇಶದ ಬೆಳೆಗಳಾದ ಭತ್ತ, ಗೋಧಿ ಬೆಳೆಯುವುದೇ ಕೃಷಿಯೆಂದು ಪರಿಗಣಿತವಾಗಿ ಬಿಟ್ಟಿದೆ. ಎಲ್ಲರೂ ಭತ್ತ-ಗೋಧಿಯನ್ನೇ ಬೆಳೆಯುತ್ತಾರೆ. ಇದರಿಂದ ಅಧಿಕ ಪ್ರಮಾಣದ ನೀರು ವ್ಯಯವಾಗುತ್ತದೆ. ನೀರಿಲ್ಲದೆ ಭತ್ತದ ಬೆಳೆ ಉಳಿಯುವುದಿಲ್ಲ. ಆದರೆ ಭತ್ತದ ಗದ್ದೆಯಲ್ಲಿ ನಿಂತ ನೀರಿನಿಂದ ಮಿಥೇನ್‌ನಂತಹ ಅನಿಲ ಉತ್ಪಾದನೆಯಾಗುತ್ತದೆ. ಈ ಅನಿಲ ವಾತಾವರಣದಲ್ಲಿ ಹರಡಿ ಸುತ್ತಮುತ್ತಲ ಪರಿಸರವನ್ನು ಕವಚದಂತೆ ಮುಚ್ಚಿಕೊಳ್ಳುತ್ತದೆ. ಇದರಿಂದಾಗಿ ಹವಾಮಾನ ವೈಪರಿತ್ಯ ಹಾಗೂ ತಾಪಮಾನ ಹೆಚ್ಚಾಗುವ ಪ್ರಕ್ರಿಯೆ ಜಾಸ್ತಿಯಾಗುತ್ತದೆ ಎಂಬುದು ಪೆರಿಯಾಪಟ್ಟಣ ವಿಶ್ಲೇಷಣೆ. ಇದೇ ಸ್ಥಿತಿ ಮುಂದುವರಿದರೆ ಐದಾರು ವರ್ಷದಲ್ಲಿ ಉಷ್ಣಾಂಶ 2ರಿಂದ3 ಡಿಗ್ರಿ ಸೆಲ್ಷಿಯಸ್ ಏರಲಿದೆ. ಇದು ಭತ್ತ ಮತ್ತು ಗೋಧಿ ಬೆಳೆಗೆ ಪೂರಕವಲ್ಲ. ಇದರ ಪ್ರಭಾವದಿಂದ ಆಹಾರ ಉತ್ಪಾದನೆಯಲ್ಲಿ ಶೇ.20ರಷ್ಟು ಕಡಿಮೆಯಾದರೂ ಗಂಭೀರ ಪರಿಣಾಮ ಉಂಟಾಗುತ್ತದೆ ಎನ್ನುವುದು ಅವರ ಆತಂಕ. ಇದಕ್ಕೆ ಒಂದೇ ಅತ್ಯುತ್ತಮ ಪರಿಹಾರ: ದೇಶದಲ್ಲಿ ಆಹಾರ ಭದ್ರತೆ ಸಾಧಿಸಲು ಹಾಗೂ ತಾಪಮಾನ ತಡೆಗಟ್ಟಲು ಕಿರುಧಾನ್ಯ ಬೆಳೆಯುವುದು ಪರಿಹಾರ ಎನ್ನುತ್ತಾರೆ ಡಾ.ಸತೀಶ್. ಕಿರುಧಾನ್ಯಗಳಿಗೆ ಹೆಚ್ಚು ನೀರು ಬೇಕಾಗಿಲ್ಲ. ಸ್ಥಳೀಯವಾಗಿ ಬಿತ್ತನೆ ಬೀಜಗಳು ದೊರೆಯುತ್ತವೆ. ಪೌಷ್ಟಿಕಾಂಶವೂ ಅಧಿಕವಾಗಿರುತ್ತದೆ. ಅಲ್ಲದೆ ಸಾಮಾನ್ಯವಾಗಿ ಕಿರುಧಾನ್ಯಗಳನ್ನು ಮಿಶ್ರಬೆಳೆ ಪದ್ಧತಿಯಲ್ಲಿ ಬೆಳೆಯುತ್ತಾರೆ. ಇವುಗಳ ಮಧ್ಯದಲ್ಲಿ ದ್ವಿದಳ ಧಾನ್ಯಗಳನ್ನು ಎಡೆ ಬೆಳೆಯಾಗಿ ಬೆಳೆಯುತ್ತಾರೆ. ಈ ದ್ವಿದಳ ಧಾನ್ಯಗಳು ಸಾಕಷ್ಟು ಎಲೆಗಳನ್ನು ಉದುರಿಸುವುದರಿಂದ ಹೊಲದಲ್ಲಿ ಇಂಗಾಲದ ಅಂಶ ಸ್ಥಿರವಾಗಿರುತ್ತದೆ. ಇದರಿಂದ ಹವಾಮಾನ ವೈಪರಿತ್ಯ ಸ್ವಲ್ಪವಾದರೂ ಕಡಿಮೆಯಾಗುತ್ತದೆ ಎನ್ನುವುದು ಅವರ ಪ್ರತಿಪಾದನೆ.

2009: ವೈದ್ಯಕೀಯ ನಿರ್ಲಕ್ಷ್ಯದಿಂದ ಶಾಶ್ವತವಾಗಿ ಅಂಗವೈಕಲ್ಯ ಹೊಂದಿದ ಬೆಂಗಳೂರು ಇನ್‌ಫೋಸಿಸ್ ಸಂಸ್ಥೆಯ ಸಾಫ್ಟ್‌ವೇರ್ ಎಂಜಿನಿಯರ್ ಪ್ರಶಾಂತ್ ಎಸ್. ಧನಂಕ (39) ಅವರಿಗೆ ಒಂದು ಕೋಟಿ ರೂ. ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಹೈದರಾಬಾದಿನ ನಿಜಾಮ್ ವೈದ್ಯ ವಿಜ್ಞಾನ ಸಂಸ್ಥೆಗೆ ಆದೇಶ ನೀಡಿತು. ದೇಶದಲ್ಲಿ ಇಂತಹ ಪ್ರಸಂಗದಲ್ಲಿ ಒದಗಿಸಲಾದ ಅತ್ಯಂತ ಗರಿಷ್ಠ ಮೊತ್ತದ ಪರಿಹಾರ ಇದು. ನ್ಯಾಯಮೂರ್ತಿಗಳಾದ ಬಿ. ಎನ್. ಅಗರ್‌ವಾಲ್, ಜಿ. ಎಸ್. ಸಿಂಘ್ವಿ ಮತ್ತು ಎಚ್. ಎಸ್. ಬೇಡಿ ಅವರನ್ನು ಒಳಗೊಂಡ ಪೀಠವು ಆಂಧ್ರಪ್ರದೇಶ ಹೈಕೋರ್ಟ್ ನೀಡಿದ್ದ 15 ಲಕ್ಷ ಪರಿಹಾರ ಮೊತ್ತವನ್ನು ಒಂದು ಕೋಟಿ ರೂಪಾಯಿಗೆ ಹೆಚ್ಚಿಸಿತು. ಪ್ರಶಾಂತ್ ಅವರು ನಿಜಾಮ್ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ 1990ರ ಅಕ್ಟೋಬರ್ 23ರಂದು ಹೃದಯದಲ್ಲಿನ ಗಡ್ಡೆಯೊಂದನ್ನು ತೆಗೆಸುವುದಕ್ಕಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಶಸ್ತ್ರಚಿಕಿತ್ಸೆ ಸೂಕ್ತವಾಗಿ ನಡೆಯದೆ ಅವರು ಪಕ್ಷವಾತ ಮತ್ತು ಇತರ ಹಲವು ತೊಂದರೆಗೆಸಿಲುಕಿ ಶಾಶ್ವತ ಅಂಗವೈಕಲ್ಯ ಅನುಭವಿಸುವಂತಾಯಿತು. 1993ರಲ್ಲಿ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯವು ಧನಂಕ ಅವರಿಗೆ 15.5 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಆಸ್ಪತ್ರೆ ಕೋರ್ಟ್ ಮೆಟ್ಟಿಲು ಏರಿತ್ತು. ಸುಪ್ರೀಂ ಕೋರ್ಟ್ ಈಗ ಪ್ರಕಟಿಸಿದ 1 ಕೋಟಿ ರೂಪಾಯಿ ಪರಿಹಾರಕ್ಕೆ 1999ರ ಮಾರ್ಚ್ 1ರಿಂದ ಅನ್ವಯವಾಗುವಂತೆ ಶೇ 6ರ ಬಡ್ಡಿದರದೊಂದಿಗೆ ಪರಿಹಾರ ಮೊತ್ತ ನೀಡಬೇಕಾಗುತ್ತದೆ. ಹೀಗಾಗಿ ಪರಿಹಾರದ ಒಟ್ಟು ಮೊತ್ತ 1.60 ಕೋಟಿ ರೂಪಾಯಿಗೆ ಹೆಚ್ಚುತ್ತದೆ. ಇದರ ಜತೆಗೆ ನತದೃಷ್ಟನ ಹೆತ್ತವರಿಗೆ 1.5 ಲಕ್ಷ ರೂ.ಪರಿಹಾರ ನೀಡಬೇಕೆಂದೂ ನ್ಯಾಯಪೀಠ ಹೇಳಿತು. ಕಳೆದ 14 ವರ್ಷಳ ಕಾಲ ನ್ಯಾಯಾಲಯದಲ್ಲಿ ಸೆಣಸಾಡಿದ ಧನಂಕ ಅವರಿಗೆ ಕೋರ್ಟ್ ವೆಚ್ಚದ ರೂಪದಲ್ಲಿ 50 ಸಾವಿರ ರೂಪಾಯಿ ನೀಡಲು ಸಹ ಆದೇಶ ನೀಡಲಾಯಿತು.

2009: ಈದಿನ ಬಿಡುಗಡೆಯಾಗಬೇಕಾಗಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬರೆದಿರುವರು ಎನ್ನಲಾದ ಪುಸ್ತಕವು ತಮ್ಮ ಸಂಶೋಧನಾ ಪ್ರಬಂಧದಿಂದ ಯಥಾವತ್ ನಕಲು ಪಟ್ನಾದ ಸಂಶೋಧಕರೊಬ್ಬರು ದೂರುವುದರೊಂದಿಗೆ ಇಲ್ಲಿನ ರಾಜಕೀಯ ವಲಯದಲ್ಲಿ ತಲ್ಲಣ ಉಂಟಾಯಿತು. ನವದೆಹಲಿಯಲ್ಲಿನ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಹಿರಿಯ ಸಂಶೋಧಕ ಅತುಲ್ ಕುಮಾರ್ ಸಿಂಗ್ ಅವರು, ಜೆಡಿಯು ಅಧ್ಯಕ್ಷರೂ ಆಗಿರುವ ಬಿಹಾದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಕೃತಿಯನ್ನು ಕದ್ದು ತಮ್ಮ ಹೆಸರಲ್ಲಿ ಪ್ರಕಟಿಸುತ್ತಿರುವುದನ್ನು ಸಾಬೀತುಪಡಿಸಲು ತಮ್ಮ ಮೂಲ ಸಂಶೋಧನ ಪ್ರಬಂಧವನ್ನು ಪ್ರಕಟಿಸಿದರು. 'ಸ್ಟೇಷಲ್ ಕೆಟಗರಿ ಸ್ಟೇಟಸ್ - ಎ ಕೇಸ್ ಫಾರ್ ಬಿಹಾರ' ಹೆಸರಿನಲ್ಲಿ ನಿತೀಶ್ ಕುಮಾರ್ ಅವರು 80 ಪುಟಗಳ ಪುಸ್ತಕ ಬರೆದಿರುವುದಾಗಿ ದಿನಗಳಿಂದ ಸ್ಥಳೀಯ ಪತ್ರಿಕೆಗಳಲ್ಲಿ ಸುದ್ದಿಗಳು ಪ್ರಕಟವಾಗಿದ್ದವು. ಸರ್ಕಾರ ಈ ಸುದ್ದಿಗಳನ್ನು ಅಲ್ಲಗಳೆದಿರಲಿಲ್ಲ.

2009: ಹಲವಾರು ಚಲನಚಿತ್ರ, ಕಿರುತೆರೆಗಳಲ್ಲಿ ಅಭಿನಯಿಸಿರುವ ನಟಿ ಅಭಿನಯ, ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ಕಿರುತೆರೆ ಛಾಯಾಗ್ರಾಹಕ ಉಮಾಕಾಂತ್ ಮತ್ತು ಅಭಿನಯ ಅವರ ವಿವಾಹ ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ವಿಜೃಂಭಣೆಯಿಂದ ನೆರವೇರಿತು. 15ನೇ ವಯಸ್ಸಿನಲ್ಲಿ ನಿರ್ದೇಶಕ ಕಾಶೀನಾಥ್ ಅವರ 'ಅನುಭವ' ಚಿತ್ರದ ಮೂಲಕ ಅಭಿನಯ ಪ್ರಪಂಚಕ್ಕೆ ಕಾಲಿಟ್ಟ ಇವರು ಎಲ್ಲ ಪಾತ್ರಗಳಲ್ಲೂ ಸೈ ಎನಿಸಿಕೊಂಡವರು. ಕಿರುತೆರೆಯಲ್ಲಿ ಬಹು ಬೇಡಿಕೆಯ ನಟಿ. ಚಿತ್ರರಂಗದ ಅನೇಕ ಗಣ್ಯರು ಇವರ ವಿವಾಹಕ್ಕೆ ಸಾಕ್ಷಿಯಾದರು.

2008: ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಸೀತಾನದಿಯ ಶಿಕ್ಷಕ ಭೋಜ ಶೆಟ್ಟಿ ಮತ್ತಹ ಸುರೇಶ ಶೆಟ್ಟಿ ಎಂಬ ಇಬ್ಬರನ್ನು ವಿಧಾನಸಭೆಯ ಎರಡನೇ ಹಂತದ ಚುನಾವಣೆಯ ಮುನ್ನಾದಿನ ನಕ್ಸಲೀಯರು ಸೋಮೇಶ್ವರದಲ್ಲಿ ಗುಂಡಿನ ಮಳೆಗರೆದು ಕೊಂದು ಹಾಕಿದರು.

2008: ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅವರ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ಜುಲೈ 14 ರವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಕೇಂದ್ರ ತನಿಖಾ ಘಟಕ (ಸಿಬಿಐ) ಸುಪ್ರೀಂ ಕೋರ್ಟಿಗೆ ಭರವಸೆ ನೀಡಿತು. ತನಿಖೆಯನ್ನು ಪ್ರಶ್ನಿಸಿ ಮಾಯಾವತಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಮತ್ತು ಎಂ.ಕೆ.ಶರ್ಮ ಅವರನ್ನು ಒಳಗೊಂಡ ಪೀಠವು ಸಿಬಿಐಗೆ ನೋಟಿಸ್ ಜಾರಿಗೊಳಿಸಿತು.

2008: ಚೀನಾ ಭೂಕಂಪದಲ್ಲಿ ಮಡಿದವರ ಸಂಖ್ಯೆ 50 ಸಾವಿರಕ್ಕೆ ಏರಿದೆ ಎಂದು ಬೀಜಿಂಗ್ ಮಾಧ್ಯಮಗಳು ವರದಿ ಮಾಡಿದವು.

2008: `ಹೊಗೇನಕಲ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ನನ್ನಿಂದ ಏನೂ ತಪ್ಪಾಗಿಲ್ಲ. ಆದಾಗ್ಯೂ ಕ್ಷಮೆ ಯಾಚಿಸುತ್ತೇನೆ. ಹೊಗೇನಕಲ್ ವಿಚಾರವಾಗಿ ಕನ್ನಡ ಪರ ಸಂಘಟನೆಗಳು ಇನ್ನು ಮೈಸೂರಿನಿಂದಲೇ ಪ್ರತಿಭಟನೆಯನ್ನು ಆರಂಭಿಸಲಿದ್ದು ನಾನೂ ಸಕ್ರಿಯವಾಗಿ ಭಾಗವಹಿಸುತ್ತೇನೆ' ಎಂದು ಹಿರಿಯ ನಟ ಡಾ. ವಿಷ್ಣುವರ್ಧನ್ ಮೈಸೂರಿನಲ್ಲಿ ಪ್ರಕಟಿಸಿದರು.

2008: ಬೇಲೂರು ತಾಲ್ಲೂಕಿನ ಹೆಬ್ಬಾಳು ಗ್ರಾಮದ ಒಂದೇ ಮನೆಯ ಐವರು ಅಣ್ಣತಮ್ಮಂದಿರು ಈದಿನ ಒಂದೇ ಮಂಟಪದಲ್ಲಿ ವಿವಾಹವಾದರು. ಗ್ರಾಮದ ಅವಿಭಕ್ತ ಕುಟುಂಬದ ಮುಖ್ಯಸ್ಥ ಮಲ್ಲೇಗೌಡರ ಐವರು ಸಹೋದರರು ಒಂದೇ ಮನೆಯಲ್ಲಿ ವಾಸವಾಗಿದ್ದು ಅವರು, ಗ್ರಾಮದ ಹೆಬ್ಬಾಳು ಮಂಜಯ್ಯ ಅವರ ನಾಲ್ವರು ಗಂಡುಮಕ್ಕಳು 2007ರ ನವೆಂಬರಿನಲ್ಲಿ ಒಂದೇ ಮನೆಯ ನಾಲ್ವರು ಸಹೋದರಿಯರನ್ನು ಮದುವೆಯಾದ ಘಟನೆಯಿಂದ ಸ್ಫೂರ್ತಿ ಪಡೆದು ಈದಿನ ಒಂದೇ ಮಂಟಪದಲ್ಲಿ ತಮ್ಮ ಐವರು ಮಕ್ಕಳಿಗೂ ಮದುವೆ ಮಾಡಿಸಿದರು. ಮಲ್ಲೇಗೌಡರ ಮಕ್ಕಳಾದ ಚಂದ್ರಶೇಖರ್ ಹಾಗೂ ಕುಮಾರ್, ನಂಜೇಗೌಡರ ಮಕ್ಕಳಾದ ಗಿರೀಶ್ ಹಾಗೂ ಹಾಲಪ್ಪ ಮತ್ತು ಪುಪ್ಪೇಗೌಡರ ಮಗ ದಿನೇಶ್ ಅವರು ಕ್ರಮವಾಗಿ ಶಕುಂತಲ, ಚಂದ್ರಕಲಾ, ಗುಣ, ರೇಖಾ ಮತ್ತು ದೊಡ್ಡ ಪವಿತ್ರರಿಗೆ ಒಂದೇ ಮಂಪಟದಲ್ಲಿ 10.20 ರಿಂದ 11.50ರವರೆಗೆ ಕುಳೀರ ಲಗ್ನದಲ್ಲಿ ತಾಳಿ ಕಟ್ಟುವುದರ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

2008: ಅಸ್ಸಾಮಿನ ಉತ್ತರ ಕಾಚಾರ್ ಹಿಲ್ಸ್ ಜಿಲ್ಲೆಯಲ್ಲಿ ದಿಮಾ ಹಾಲಮ್ ಡೌಗಹ್ (ಜೆವೆಲ್) ಗುಂಪಿನ ಉಗ್ರರು ಇಬ್ಬರು ರೈಲ್ವೆ ನೌಕರರು ಸೇರಿದಂತೆ 12 ಮಂದಿಯನ್ನು ಗುಂಡಿಟ್ಟು ಕೊಂದು ರೈಲಿಗೆ ಬೆಂಕಿ ಹಚ್ಚಿದರು. ಲುಂಡಿಂಗ್ ಮತ್ತು ಹಫ್ಲೊಂಗ್ ಬಳಿ ಈ ಘಟನೆ ನಡೆಯಿತು.

2008: ಹಿರಿಯ ವೈದ್ಯ ಡಾ. ಟಿ.ಎಲ್.ದೇವರಾಜ್ ಅವರಿಗೆ ಪ್ರಸಕ್ತ ವರ್ಷದ ಶ್ರೀರಾಮ ನಾರಾಯಣ ವೈದ್ಯಶ್ರೀ ಪ್ರಶಸ್ತಿ ಲಭಿಸಿತು. ಆಯುರ್ವೇದ ಇಲಾಖೆಯ ನಿವೃತ್ತ ಉಪನಿರ್ದೇಶಕ ದೇವರಾಜ್ ಅವರು ಈ ಪ್ರಶಸ್ತಿಗೆ ಆಯ್ಕೆಯಾದ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಮಂಡಳಿಯ ಸದಸ್ಯ ಡಾ. ಕೆ.ಸಿ.ಬಲ್ಲಾಳ ತಿಳಿಸಿದರು. ದೇವರಾಜ್ ಅವರು 36ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದು, ಅದರಲ್ಲಿ ಕೆಲ ಕೃತಿಗಳು ಇಂಗ್ಲಿಷ್, ಹಿಂದಿ ಮತ್ತು ರಷ್ಯನ್ ಭಾಷೆಗಳಿಗೆ ಅನುವಾದಗೊಂಡಿವೆ. `ಆಯುರ್ವೇದದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ' ಎಂಬ ಕೃತಿಗೆ ನಾರಾಯಣ ವೈದ್ಯ ಆಯುರ್ವೇದ ಸಂಶೋಧನಾ ಟ್ರಸ್ಟ್ ಈ ಪ್ರಶಸ್ತಿ ಲಭಿಸಿದೆ.

2008: ಕರ್ನಾಟಕ ಲೇಖಕಿಯರ ಸಂಘವು ಲೇಖಕಿ ಮಾಲತಿ ಪಟ್ಟಣಶೆಟ್ಟಿ ಅವರನ್ನು 2008ನೇ ಸಾಲಿನ `ಅನುಪಮಾ ಪ್ರಶಸ್ತಿ'ಗೆ ಆಯ್ಕೆ ಮಾಡಿತು. ಮಾಲತಿ ಪಟ್ಟಣಶೆಟ್ಟಿ ಅವರ ಒಟ್ಟು ಸಾಹಿತ್ಯ ಸಾಧನೆ ಮತ್ತು ಮಹಿಳಾ ಸಾಹಿತ್ಯಕ್ಕೆ ಅವರ ಕೊಡುಗೆ, ಸಂಸ್ಕೃತಿ ಕ್ಷೇತ್ರದಲ್ಲಿ ಅವರು ಗಳಿಸಿದ ಮನ್ನಣೆ ಮತ್ತು ಕ್ರಿಯಾಶೀಲತೆಯನ್ನು ನಿರಂತರವಾಗಿ ಉಳಿಸಿಕೊಂಡು ಬಂದಿರುವ ಅಂಶಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷೆ ಡಾ. ಕೆ.ಆರ್.ಸಂಧ್ಯಾರೆಡ್ಡಿ ಪ್ರಕಟಿಸಿದರು.

2007: ಸೈನಿಕರಿಗೆ ಗುಣಮಟ್ಟದ ತರಬೇತಿ ನೀಡುವ ಮೂಲಕ ದೇಶಕ್ಕೆ ಉತ್ತಮ ಸೇನಾಧಿಕಾರಿಗಳು ಮತ್ತು ಯೋಧರನ್ನು ಕೊಡುಗೆಯಾಗಿ ನೀಡಿ ಖ್ಯಾತಿ ಪಡೆದಿರುವ ಬೆಳಗಾವಿಯ ಮರಾಠಾ ಲಘು ಪದಾತಿ ದಳದ (ಎಂಎಲ್ ಐ ಆರ್ ಸಿ) ಯೋಧರು ಸೇರಿದಂತೆ 12 ಜನರಿದ್ದ ಭಾರತೀಯ ಯೋಧರ ತಂಡ ಹಾಗೂ 13 ಶೆರ್ಪಾಗಳ ತಂಡ ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಇತಿಹಾಸ ನಿರ್ಮಿಸಿದವು. ಭಾರತೀಯ ಭೂಸೇನೆಯ ಮುಖ್ಯಸ್ಥ ಹಾಗೂ ಮರಾಠಾ ಲಘು ಪದಾತಿದಳದ ಕರ್ನಲ್ ಜನರಲ್ ಜೋಗೀಂದರ್ ಜಸ್ವಂತ್ಸಿಂಗ್ (ಜೆ.ಜೆ.ಸಿಂಗ್) ಮಾರ್ಗದರ್ಶನದಲ್ಲಿ ಲೆಫ್ಟಿನೆಂಟ್ ಕ್ಯಾಪ್ಟನ್ ಥಾಪಾ ಈ ಸಾಹಸ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಎರಡು ತಂಡಗಳಾಗಿ ಈ ಸಾಹಸ ನಡೆಸಲಾಯಿತು. ಒಂದು ತಂಡ ಈದಿನ ಹಾಗೂ ಇನ್ನೊಂದು ತಂಡ ಮರುದಿನ (ಮೇ 16) ಮೌಂಟ್ ಎವರೆಸ್ಟ್ ಶಿಖರ ಏರಿತು. ಶೆರ್ಪಾಗಳ ತಂಡದ ನೇತೃತ್ವವನ್ನು ಸಿರ್ಧರ್ ಚಿರೀಂಗ್ ದೋರ್ಜಿ ವಹಿಸಿದ್ದರು.

2007: ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಮಿಲೆನಿಯಂ ಅಭಿವೃದ್ಧಿ ಗುರಿಗಳಿಗೆ ಹೆಚ್ಚಿನ ಕೊಡುಗೆ ನೀಡಿದ್ದಕ್ಕಾಗಿ ನ್ಯೂಯಾರ್ಕ್ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಮೂರನೇ `ಯುಎನ್ ವಿಮೆನ್ ಟುಗೆದರ್ ಅವಾರ್ಡ್' ವಿಶ್ವಸಂಸ್ಥೆ ಮಹಿಳಾ ಪ್ರಶಸ್ತಿ ಪಡೆದರು. ಖಾದಿ ಅಭಿವೃದ್ಧಿ, ನೇಕಾರರ ಅಭಿವೃದ್ಧಿ ಮತ್ತು ಕುಶಲಕರ್ಮಿಗಳ ಅಭಿವೃದ್ಧಿಗಾಗಿ ನೀಡಿದ ಕೊಡುಗೆಗಾಗಿ ವಸುಂಧರಾ ರಾಜೆ ಅವರಿಗೆ ಈ ಪ್ರಶಸ್ತಿ ಲಭಿಸಿತು. ಇದರೊಂದಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಭಾರತದ ಪ್ರಪ್ರಥಮ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ವಸುಂಧರಾ ಪಾತ್ರರಾದರು.

2007: ದಯಾನಿಧಿ ಮಾರನ್ ರಾಜೀನಾಮೆಯ ಬಳಿಕ ಪರಿಸರ ಖಾತೆಯ ಸಚಿವರಾಗಿದ್ದ ಎ. ರಾಜ ಅವರನ್ನು ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ಖಾತೆಯ ಸಚಿವರನ್ನಾಗಿ ಪ್ರಧಾನಿ ಮನಮೋಹನ್ ಸಿಂಗ್ ನೇಮಕ ಮಾಡಿದರು.

2007: ನ್ಯಾಟೋ ನೇತೃತ್ವದ ಸೇನಾಪಡೆ ಹಿಂದಿನ ರಾತ್ರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 60 ತಾಲಿಬಾನ್ ಉಗ್ರಗಾಮಿಗಳು ಹತರಾದರು.

2007: ಮೇ 9ರಂದು ಮದುರೈಯಲ್ಲಿ `ದಿನಕರನ್' ದೈನಿಕ ಕಚೇರಿಯ ಮೇಲೆ ನಡೆದ ದಾಳಿಯ ಪ್ರಮುಖ ಆರೋಪಿ `ಅಟ್ಯಾಕ್ ಪಾಂಡಿ' ಮದುರೈ ಗ್ರಾಮಾಂತರ ಪೊಲೀಸರಿಗೆ ಶರಣಾಗತನಾದ.

2007: ಅನಿಲ್ ಶರ್ಮಾ ಅವರ `ಅಪ್ನೆ' ಚಿತ್ರವು ಜೂನ್ 29ರಂದು ದೇಶ - ವಿದೇಶಗಳಲ್ಲಿ 900 ಕಡೆ ಏಕಕಾಲದಲ್ಲಿ ಬಿಡುಗಡೆಯಾಗುವುದು ಎಂದು ಪ್ರಕಟಿಸಲಾಯಿತು. 8 ತಿಂಗಳಲ್ಲಿ ಪೂರ್ಣಗೊಂಡ ಈ ಚಿತ್ರದಲ್ಲಿ ಧರ್ಮೇಂದ್ರ ಅವರ ಮಕ್ಕಳಾದ ಸನ್ನಿ ಡಿಯೋಲ್, ಕತ್ರಿನಾ ಕೈಫ್, ಶಿಲ್ಪಾಶೆಟ್ಟಿ ಅಭಿನಯಿಸಿದ್ದು ಬ್ಯಾಂಕಾಕ್, ನ್ಯೂಯಾರ್ಕ್ ಮತ್ತು ಕೆನಡಾದಲ್ಲಿ ಚಿತ್ರೀಕರಣ ನಡೆಸಲಾಗಿತ್ತು.

2006: ಇಪ್ಪತ್ನಾಲ್ಕು ವರ್ಷಗಳ ಹಿಂದೆ ಪರ್ವತಾರೋಹಣ ಕಾಲದಲ್ಲಿ ಸಂಭವಿಸಿದ ಅಪಘಾತದಲ್ಲಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ ನ್ಯೂಜಿಲ್ಯಾಂಡಿನ ಪರ್ವತಾರೋಹಿ ಮಾರ್ಕ್ ಇಂಗ್ಲಿಸ್ ಈದಿನ `ಎವರೆಸ್ಟ್ ಶಿಖರಾರೋಹಣ' ಮಾಡುವ ಮೂಲಕ ವಿಶ್ವದ ಅತ್ಯುನ್ನತ ಪರ್ವತ ಶಿಖರವನ್ನು ಏರಿದ ಮೊತ್ತ ಮೊದಲ `ಕಾಲುಗಳಿಲ್ಲದ ವ್ಯಕ್ತಿ' ಎಂಬ ಹೆಗ್ಗಳಿಕೆಗೆ ಪಾತ್ರರಾದರು. 47 ವರ್ಷದ ಈ ಸಾಧಕ 1982ರಲ್ಲಿ ಫಿಲ್ ಧೂಲೆ ಜೊತೆಗೆ ನ್ಯೂಜಿಲೆಂಡಿನ ಅತ್ಯುನ್ನತ ಶಿಖರ ಮೌಂಟ್ ಕುಕ್ ಏರುತ್ತಿದ್ದಾಗ ಮಂಜುಗಡ್ಡೆಯ ಗುಹೆಯೊಳಗೆ 14 ದಿನಗಳ ಕಾಲ ಸಿಕ್ಕಿಹಾಕಿಕೊಂಡಿದ್ದರು. ಆಗ ಕಾಲುಗಳಲ್ಲಿ ಹಿಮ ಹುಣ್ಣಾಗಿ ತೊಡೆಯಿಂದ ಕೆಳಗಿನ ಎರಡೂ ಕಾಲುಗಳನ್ನು ಕತ್ತರಿಸಿ ಹಾಕಲಾಗಿತ್ತು. ಆ ಬಳಿಕ ಬದುಕನ್ನು ಸವಾಲಾಗಿ ಸ್ವೀಕರಿಸಿದ ಇಗ್ಲಿಸ್ ಕಾಲು ರಹಿತರ ಪರ್ವತಾರೋಹಣ ಸೇರಿದಂತೆ ಹಲವಾರು ಸಾಹಸ ಕೃತ್ಯಗಳಲ್ಲಿ ಪಾಲ್ಗೊಂಡಿದ್ದರು.

2006: ಸಂಗ್ರಹಾಲಯವಾಗಿ ಪರಿವರ್ತನೆಗೊಳ್ಳಲಿರುವ ಐ ಎನ್ ಎಸ್ ಚಪಲ್ ಸಮರನೌಕೆಯು ಆಗ್ರಾ ಐ ಎನ್ ಎಸ್ ಕದಂಬ ನೌಕಾ ನೆಲೆಯಿಂದ ಈದಿನ ಕಾರವಾರದ ರಬೀಂದ್ರನಾಥ ಟ್ಯಾಗೋರ್ ಕರಾವಳಿಗೆ ಆಗಮಿಸಿತು. ಕ್ಷಿಪಣಿ ಉಡಾವಣಾ ವಾಹನವಾಗಿ 28 ವರ್ಷಗಳ ಸೇವೆ ಸಲ್ಲಿಸಿದ್ದ ಈ ಸಮರನೌಕೆ 2005ರ ನವೆಂಬರಿನಲ್ಲಿ ಸೇವೆಯಿಂದ ನಿವೃತ್ತಿ ಪಡೆದಿತ್ತು. 275 ಟನ್ ತೂಕ, 38.5 ಮೀಟರ್ ಎತ್ತರ, 7.2 ಮೀಟರ್ ಅಗಲ ಇರುವ ಈ ನೌಕೆಯು ಈಗ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕಾರವಾರ ನೌಕಾನೆಲೆಯಲ್ಲಿ ಇದನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಿ ಇರಿಸಲು ನಿರ್ಧರಿಸಲಾಗಿದೆ.

2006: ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಂ ಹುಸೇನ್ ವಿರುದ್ಧ ತನಿಖೆ ನಡೆಸುತ್ತಿರುವ ನ್ಯಾಯಾಲಯದಲ್ಲಿ ಗ್ರಾಮಸ್ಥರ ಕೊಲೆ, ಮಕ್ಕಳು ಮಹಿಳೆಯರಿಗೆ ಚಿತ್ರಹಿಂಸೆ ಮತ್ತು 399 ಜನರನ್ನು ಅಕ್ರಮವಾಗಿ ಬಂಧಿಸಿ ದೌರ್ಜನ್ಯ ನಡೆಸಿದ ಆರೋಪಗಳನ್ನು ಹೊರಿಸಲಾಯಿತು. 1982ರಲ್ಲಿ ದುಜೈಲ್ನಲ್ಲಿ ಸದ್ದಾಂ ಹತ್ಯೆಗೆ ದಾಳಿ ನಡೆದ ಹಿನ್ನೆಲೆಯಲ್ಲಿ ಅಲ್ಲಿನ ಭದ್ರತಾ ಪಡೆಗಳು ನೂರಾರು ಮಂದಿಯನ್ನು ಬಂಧಿಸಿ ಹಿಂಸೆಗೆ ಗುರಿಪಡಿಸಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆರೋಪ ಪಟ್ಟಿ ಸಲ್ಲಿಸಲಾಯಿತು.

2006: ರಾಯ್ ಬರೇಲಿ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಲೋಕಸಭೆಯಲ್ಲಿ ಈದಿನ ಪ್ರಮಾಣವಚನ ಸ್ವೀಕರಿಸಿದರು. ತಿರುವನಂತಪುರದಲ್ಲಿ ಸಿಪಿಎಂ ಹಿರಿಯ ಮುಖಂಡ ವಿ.ಎಸ್. ಅಚ್ಯುತಾನಂದನ್ (82) ಕೇರಳದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.

1993: ಭಾರತದ ನಿವೃತ್ತ ಸೇನಾ ಪ್ರಮುಖ ಕೆ.ಎಂ. ಕಾರ್ಯಪ್ಪ ಅವರು ಈದಿನ ನಿಧನರಾದರು. 1899ರ ಜನವರಿ 28ರಂದು ಮಡಿಕೇರಿಯಲ್ಲಿ ಜನಿಸಿದ ಕಾರ್ಯಪ್ಪ 1918ರಲ್ಲಿ ಮೊದಲ ಮಹಾಯುದ್ಧ ಮುಗಿದ ಸಮಯಲ್ಲಿ ಕಿಂಗ್ಸ್ ಕಮಿಷನ್ ಸೈನಿಕರಿಗಾಗಿ ಭಾರತದಲ್ಲಿ ಆಯ್ಕೆ ನಡೆಸಿದಾಗ ಆಯ್ಕೆಯಾದ ಕಾರ್ಯಪ್ಪ ಕಿಂಗ್ಸ್ ಕಮಿಷನ್ಡ್ ಇಂಡಿಯನ್ ಆಫೀಸರ್ಸ್ (ಕೆಸಿಐಒ) ಮೊದಲ ತಂಡದ ತರಬೇತಿ ಪಡೆದರು. ಕ್ರೀಡೆ ಮತ್ತು ಸಂಗೀತದಲ್ಲಿ ಇವರಿಗೆ ಅಪಾರ ಆಸಕ್ತಿ ಇತ್ತು.

1966: ಕಲಾವಿದೆ ರಾಧಿ ರಂಜಿನಿ ಜನನ.

1952: ಕಲಾವಿದ ಶಿವರುದ್ರಯ್ಯ ಕೆ. ಜನನ.

1951: ಕಲೆಯ ಹಲವು ಪ್ರಕಾರಗಳಾದ ಕಲಾ ಇತಿಹಾಸ, ಕಲಾ ಬರಹ, ಕಲಾ ಸಂಘಟನೆ ಮುಂತಾದುವುಗಳಲ್ಲಿ ತೊಡಗಿಸಿಕೊಂಡ ಕಲಾವಿದ ಎನ್. ಮರಿಶಾಮಾಚಾರ್ ಅವರು ಸಿ.ಎಂ. ನಂಜುಂಡಾಚಾರ್- ಲಿಂಗಮ್ಮ ದಂಪತಿಯ ಮಗನಾಗಿ ದೇವನಹಳ್ಳಿ ಬಳಿಯ ವಿಜಯಪುರದಲ್ಲಿ ಜನಿಸಿದರು.

1941: ಕಲಾವಿದ ಟಿ.ಎ.ಎಸ್. ಮಣಿ ಜನನ.

1918: ಅಮೆರಿಕವು ನ್ಯೂಯಾರ್ಕ್ ನಗರ ಮತ್ತು ವಾಷಿಂಗ್ಟನ್ ಡಿ.ಸಿ. ಮಧ್ಯೆ ನಿಯಮಿತ ಏರ್ ಮೇಲ್ ಸೇವೆಯನ್ನು ಆರಂಭಿಸಿತು. ಇದು ಜಗತ್ತಿನಲ್ಲೇ ಪ್ರಪ್ರಥಮ ನಿಯಮಿತ ಏರ್ ಮೇಲ್ ಸೇವೆಯಾಗಿತ್ತು.

1914: ತೇನ್ ಸಿಂಗ್ ನೋರ್ಗೆ (1914-84) ಜನ್ಮದಿನ. ಇವರು ನ್ಯೂಜಿಲೆಂಡಿನ ಸರ್ ಎಡ್ಮಂಡ್ ಹಿಲರಿ ಜೊತೆಗೆ ಮೊತ್ತ ಮೊದಲ ಬಾರಿಗೆ ಜಗತ್ತಿನ ಅತಿ ಎತ್ತರದ ಎವರೆಸ್ಟ್ ಪರ್ವತವನ್ನು ಏರಿದರು.

1859: ಪಿಯರ್ ಕ್ಯೂರಿ (1859-1906) ಹುಟ್ಟಿದ ದಿನ. ಫ್ರೆಂಚ್ ಭೌತ ರಸಾಯನ ತಜ್ಞನಾದ ಈತ ತನ್ನ ಪತ್ನಿ ಮೇಡಂ ಕ್ಯೂರಿ ನೆರವಿನೊಂದಿಗೆ ರೇಡಿಯಂ ಮತ್ತು ಪೊಲೋನಿಯಂನ್ನು ಸಂಶೋಧಿಸಿದ.

1845: ಮುಂಬೈಯ ಜೆಮ್ ಸೆಟ್ ಜಿ ಜೀಜೆಭಾಯ್ ಆಸ್ಪತ್ರೆಯು ಗವರ್ಮರ್ ಸರ್ ಜಾರ್ಜ್ ಆರ್ಥರ್ ಬಾರ್ಟ್ ಅವರಿಂದ ಉದ್ಘಾಟನೆಗೊಂಡಿತು.

1817: ಮಹರ್ಷಿ ದೇಬೇಂದ್ರನಾಥ ಟ್ಯಾಗೋರ್ (1817-1905) ಜನ್ಮದಿನ. ಹಿಂದೂ ತತ್ವಜ್ಞಾನಿ ಹಾಗೂ ಧಾರ್ಮಿಕ ಸುಧಾರಕರಾಗಿದ್ದ ಇವರು 1863ರಲ್ಲಿ `ಶಾಂತಿ ನಿಕೇತನ'ವನ್ನು ಸ್ಥಾಪಿಸಿದರು. ಇವರ ಪುತ್ರ ರಬೀಂದ್ರನಾಥ ಟ್ಯಾಗೋರ್ ಅವರು ಶಾಂತಿನಿಕೇತನಕ್ಕೆ ಖ್ಯಾತಿಯನ್ನು ತಂದುಕೊಟ್ಟರು.

Thursday, May 13, 2010

ಇಂದಿನ ಇತಿಹಾಸ History Today ಮೇ 14

ಇಂದಿನ ಇತಿಹಾಸ

ಮೇ 14

ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷವನ್ನು ಕಡಿಮೆ ಮಾಡುವುದಕ್ಕೆ ಶ್ರಮಿಸಿದ ಕನ್ನಡಿಗ ವನ್ಯಜೀವಿ ತಜ್ಞ ಮೈಸೂರಿನ ನಿಸರ್ಗ ಸಂರಕ್ಷಣಾ ಪ್ರತಿಷ್ಠಾನದ ನಿರ್ದೇಶಕ ಡಾ. ಎಂ. ಡಿ. ಮಧುಸೂಧನ್ ಅವರಿಗೆ 'ಹಸಿರು ಆಸ್ಕರ್' ಎಂದೇ ಖ್ಯಾತಿ ಪಡೆದಿರುವ ಪ್ರತಿಷ್ಠಿತ ವೈಟ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಲಂಡನ್ ರಾಯಲ್ ಜಿಯಾಗ್ರಫಿಕಲ್ ಸೊಸೈಟಿಯಲ್ಲಿ ನಡೆದ ಸಮಾರಂಭದಲ್ಲಿ ಯುವರಾಣಿ ಅನ್ನೆ ಅವರು ಪ್ರಶಸ್ತಿ ಪ್ರದಾನ ಮಾಡಿದರು.

2009: ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷವನ್ನು ಕಡಿಮೆ ಮಾಡುವುದಕ್ಕೆ ಶ್ರಮಿಸಿದ ಕನ್ನಡಿಗ ವನ್ಯಜೀವಿ ತಜ್ಞ ಮೈಸೂರಿನ ನಿಸರ್ಗ ಸಂರಕ್ಷಣಾ ಪ್ರತಿಷ್ಠಾನದ ನಿರ್ದೇಶಕ ಡಾ. ಎಂ. ಡಿ. ಮಧುಸೂಧನ್ ಅವರಿಗೆ 'ಹಸಿರು ಆಸ್ಕರ್' ಎಂದೇ ಖ್ಯಾತಿ ಪಡೆದಿರುವ ಪ್ರತಿಷ್ಠಿತ ವೈಟ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಲಂಡನ್ ರಾಯಲ್ ಜಿಯಾಗ್ರಫಿಕಲ್ ಸೊಸೈಟಿಯಲ್ಲಿ ನಡೆದ ಸಮಾರಂಭದಲ್ಲಿ ಯುವರಾಣಿ ಅನ್ನೆ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು 30 ಸಾವಿರ ಪೌಂಡ್ ನಗದು ಮತ್ತು ಟ್ರೋಫಿಯನ್ನು ಒಳಗೊಂಡಿದೆ. ಮಧುಸೂಧನ್ ಅವರ ಜತೆ ಭಾರತದ ಇನ್ನಿಬ್ಬರು ಪರಿಸರ ಸಂರಕ್ಷರಾದ ಸುದಿಪ್ತೊ ಚಟರ್ಜಿ ಮತ್ತು ಸುಪ್ರಜಾ ಧರಿಣಿ ಅವರು 'ಸಹ ಪ್ರಶಸ್ತಿ'ಯನ್ನು ಪಡೆದುಕೊಂಡರು. ಪೂರ್ವ ಹಿಮಾಲಯದಲ್ಲಿ ಕಂಡುಬರುವ ದೊಡ್ಡದಾದ ಗುಲ್ಮ ಹೂವನ್ನು ರಕ್ಷಿಸುವುದಕ್ಕೆ ಸಂಬಂಧಿಸಿದಂತೆ ರೂಪಿಸಿದ ಕ್ರಿಯಾ ಯೋಜನೆಗೆ ಸುದಿಪ್ತೊ ಚಟರ್ಜಿ ಅವರು ಪ್ರಶಸ್ತಿ ಪಡೆದರು. ತಮಿಳುನಾಡಿನ ಕಂಚಿಪುರಂನ ಕಡಲಾಮೆ ಮತ್ತು ಡಾಲ್ಫಿನ್ ಮೀನುಗಳ ಸಂರಕ್ಷಣೆಗೆ ಸಾಮುದಾಯಿಕ ಕ್ರಮ ತೆಗೆದುಕೊಳ್ಳುವಲ್ಲಿ ಮುಖ್ಯ ಪಾತ್ರ ವಹಿಸಿದ ಸುಪ್ರಜಾ ಧರಿಣಿ ಅವರು 'ಸಹ ಪ್ರಶಸ್ತಿ'ಗೆ ಭಾಜನರಾದರು. ಮೈಸೂರಿನ ಯುವರಾಜ ಕಾಲೇಜಿನ ವಿಜ್ಞಾನ ಪದವೀಧರರಾದ ಮಧುಸೂಧನ್ ನಂತರ ಡೆಹ್ರಾಡೂನಿನ ಭಾರತೀಯ ವನ್ಯಜೀವಿ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಪಡೆದವರು. ಕಾಡು ಪ್ರಾಣಿಗಳು ಮತ್ತು ಸ್ಥಳೀಯರ ನಡುವಿನ ಸಂಘರ್ಷ ತಪ್ಪಿಸಲು ಮಧುಸೂಧನ್ ಮತ್ತು ಅವರ ತಂಡ ಬಂಡೀಪುರ ಹುಲಿ ಸಂರಕ್ಷಿತ ಕಾಡಿನ ಸುತ್ತಮುತ್ತ ಶ್ರಮಿಸಿದೆ. ಕಾಡಂಚಿನ ರೈತರ ಜತೆ ಸೇರಿಕೊಂಡು ಸಂಘರ್ಷ ಶಮನ ಯೋಜನೆಯನ್ನು ಜಾರಿಗೊಳಿಸಿದೆ. ಮಧುಸೂಧನ್ ನೇತೃತ್ವದ ತಂಡವು ಬೆಳೆಗಳ ರಕ್ಷಣೆಗಾಗಿ ಸೌರ ಶಕ್ತಿ ಬೇಲಿಯನ್ನು ಸಂಶೋಧನೆ ಮಾಡಿ ಅಳವಡಿಸಿದೆ. ಈ ಬೇಲಿಯನ್ನು ಅಳವಡಿಸುವ ಮೊದಲು ಆನೆ ಹಾವಳಿಯಿಂದಾಗಿ ರೈತರು ತಮ್ಮ ಫಸಲಿನ ನಾಲ್ಕನೇ ಒಂದರಷ್ಟು ಭಾಗವನ್ನು ಕಳೆದುಕೊಳ್ಳುತ್ತಿದ್ದರು. ಮಧುಸೂದನ್ ಪ್ರಯತ್ನದ ಬಳಿಕ ಬೆಳೆನಾಶ ತಪ್ಪಿತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ವಿಷಯವನ್ನು ತಿಳಿಸಿದ ಮಧುಸೂಧನ್ ಅವರು, ಕಾಡಾನೆ ಮತ್ತು ಇತರ ಕಾಡು ಪ್ರಾಣಿಗಳ ಹಾವಳಿಯಿಂದ ವೃದ್ಧ ದಂಪತಿ ಸಂಪೂರ್ಣ ಬೆಳೆಯನ್ನು ಕಳೆದುಕೊಂಡು ಕಂಗಾಲಾಗಿ ಕುಳಿತಿದ್ದ ದೃಶ್ಯವೇ ತಮಗೆ ಸೌರ ಶಕ್ತಿ ಬೇಲಿಯನ್ನು ಸಂಶೋಧಿಸಲು ಪ್ರೇರಣೆಯಾಯಿತು ಎಂದು ವಿವರಿಸಿದರು.

2009: ಬಿಜೆಪಿ ನಾಯಕ ವರುಣ್ ಗಾಂಧಿ ಅವರ ವಿರುದ್ಧ ಬಳಸಲಾಗಿದ್ದ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು (ಎನ್‌ಎಸ್‌ಎ) ಸುಪ್ರೀಂಕೋರ್ಟ್ ರದ್ದು ಪಡಿಸಿತು. ಆದರೆ, ವರುಣ್ ಕೇಳಿಕೊಂಡಿದ್ದ ಅಕ್ರಮ ಬಂಧನಕ್ಕೆ ಪರಿಹಾರ ರೂಪದಲ್ಲಿ ಉತ್ತರ ಪ್ರದೇಶ ಸರ್ಕಾರ ರೂ 10 ಲಕ್ಷ ನೀಡಬೇಕೆಂಬ ಬೇಡಿಕೆಯನ್ನು ಕೋರ್ಟ್ ತಳ್ಳಿ ಹಾಕಿತು. ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರವು ವರುಣ್ ವಿರುದ್ಧದ 'ಎನ್‌ಎಸ್‌ಎ'ಯನ್ನು ವಾಪಸ್ ತೆಗೆದುಕೊಂಡಿತು.

2009: ಲೋಕಾಯುಕ್ತ ದಾಳಿಗೆ ತುತ್ತಾಗಿದ್ದ ಐಪಿಎಸ್ ಅಧಿಕಾರಿ ಹೇಮಂತ ಎಂ. ನಿಂಬಾಳ್ಕರ್ ಅವರನ್ನು ಸೇವೆಯಿಂದ ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಭಯೋತ್ಪಾದನೆ ನಿಗ್ರಹ ದಳದ ಎಸ್ಪಿ ಹೇಮಂತ ನಿಂಬಾಳ್ಕರ್ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಪತ್ತೆ ಹಚ್ಚಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡುವಂತೆ ಲೋಕಾಯುಕ್ತರು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.

2009: ಆಸ್ಕರ್ ಪ್ರಶಸ್ತಿ ಪಡೆದ 'ಸ್ಲಮ್ ಡಾಗ್ ಮಿಲಿಯನೇರ್' ಚಿತ್ರದಲ್ಲಿ ಅಭಿನಯಿಸಿದ ಸುಮಾರು 20 ಮಕ್ಕಳು ಬೀದಿ ಪಾಲಾದರು. ಅಕ್ರಮವಾಗಿ ನೆಲೆಸಿದ್ದಾರೆ ಎಂಬ ಕಾರಣ ನೀಡಿ ಈ ಮಕ್ಕಳ ಪಾಲಕರು ವಾಸಿಸುತ್ತಿದ ಕೊಳೆಗೇರಿಯಲ್ಲಿನ 50 ಗುಡಿಸಲುಗಳನ್ನು ಮುಂಬೈ ಮಹಾನಗರ ಪಾಲಿಕೆ ನೆಲಸಮಗೊಳಿಸಿದ್ದರಿಂದ ಈ ಪರಿಸ್ಥಿತಿ ಉಂಟಾಯಿತು. ಈದಿನ ಬೆಳಿಗ್ಗೆ ಪಶ್ಚಿಮ ಬಾಂದ್ರಾದ ಗರೀಬ್‌ನಗರದ ಕೊಳೆಗೇರಿಗೆ ಆಗಮಿಸಿದ ಬೃಹತ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಗುಡಿಸಲುಗಳನ್ನು ಖಾಲಿ ಮಾಡುವಂತೆ ಆದೇಶಿಸಿದರು. 'ಈಗ ಇದ್ದಕ್ಕಿದ್ದಂತೆ ಗುಡಿಸಲುಗಳನ್ನು ಖಾಲಿ ಮಾಡಿ ಹೋಗಿ ಎಂದರೆ ನಾವು ಎಲ್ಲಿಗೆ ಹೋಗಬೇಕು. ಅಡುಗೆ ಮಾಡಿಕೊಳ್ಳಲೂ ನಮಗೆ ಆಗಿಲ್ಲ' ಎಂದು ಬೀದಿಯಲ್ಲಿ ಕುಳಿತಿದ್ದ 'ಸ್ಲಮ್' ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಅಜರುದ್ದೀನ್ ಇಸ್ಮಾಯಿಲ್ ಅಳಲು ತೋಡಿಕೊಂಡ.

2008: ಕನ್ನಡದಲ್ಲೇ ಅನಿಸಿಕೆ, ಭಾವನೆಗಳನ್ನು ಹಂಚಿಕೊಳ್ಳಲು ಬಯಸುವ ಮತ್ತು ಇಂಗ್ಲಿಷಿನಲ್ಲಿ ಬರೆಯಲು ಹಿಂಜರಿಯುವ ಕನ್ನಡಿಗರಿಗೆ ಸಂತಸಪಡಿಸಲೆಂದೇ ಟಕಾಯನ್ ಟೆಕ್ನಲಾಜಿಸ್ ಸಂಸ್ಥೆಯು `ಕ್ವಿಲ್ಪ್ಯಾಡ್' ಎಂಬ ನೂತನ ಸಾಫ್ಟ್ ವೇರ್ ಮತ್ತು ವೆಬ್ಸೈಟ್ ರೂಪಿಸಿದ್ದನ್ನು ಬಹಿರಂಗಪಡಿಸಿತು. `ಕ್ವಿಲ್ ಪ್ಯಾಡ್'ನಿಂದ ಕನ್ನಡದಲ್ಲಿ ಟೈಪ್ ಮಾಡಬಹುದು, ಬರಹವನ್ನು ಇ-ಮೇಲ್ ಮೂಲಕ ಕಳುಹಿಸಬಹುದು. ಕಂಪ್ಯೂಟರ್ ಕೀಬೋರ್ಡಿನ `ಕಂಟ್ರೋಲ್-ಶಿಫ್ಟ್' ಕೀಗಳನ್ನು ಬಳಸಿ ಕನ್ನಡದಲ್ಲಿ ಟೈಪ್ ಮಾಡುವ ಹರಸಾಹಸ ಸಹ ಪಡಬೇಕಿಲ್ಲ. ಬರೆಯಬೇಕಾದದ್ದನ್ನು ಕೀಬೋರ್ಡಿನಲ್ಲಿ ಇಂಗ್ಲಿಷ್ ಮಾದರಿಯಲ್ಲಿ ಟೈಪ್ ಮಾಡುತ್ತ ಮುಂದುವರೆದರೆ ಸಾಕು, ಕಂಪ್ಯೂಟರ್ ಸ್ಕ್ರೀನ್ ಮೇಲೆ ಕನ್ನಡ ಪದಗಳು ಮೂಡುತ್ತವೆ. ಸಣ್ಣಪುಟ್ಟ ತಪ್ಪು ಮೂಡಿದರೂ ಕಂಪ್ಯೂಟರ್ ತನ್ನಿಂದ ತಾನೇ ಸರಿಪಡಿಸಿಕೊಳ್ಳುತ್ತದೆ ಅಥವಾ ಬರಹಗಾರರೇ ತಪ್ಪುಗಳನ್ನು ಸರಿಪಡಿಸಬಹುದು. ಕನ್ನಡದಲ್ಲಿ ಇ-ಮೇಲ್ ಮಾಡಲು ಬಯಸುವವರು www.quillpad.com ವೆಬ್ಸೈಟಿಗೆ ಭೇಟಿ ನೀಡಿದರೆ ಸಾಕು, ಅಲ್ಲಿ ಕನ್ನಡದಲ್ಲಿ ಟೈಪ್ ಮಾಡಬಹುದು. ಸರಳವಾದ ರೀತಿಯಲ್ಲಿ ಕನ್ನಡ ಪದಗಳು ಕಂಪ್ಯೂಟರ್ ಸ್ಕ್ರೀನ್ ಮೇಲೆ ಮೂಡತೊಡಗುತ್ತದೆ.

2008: ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ವಿಚಕ್ಷಣಾ ಅಧಿಕಾರಿಯೊಬ್ಬರ ಸಂಬಂಧಿಗೆ `ಸಹಾಯ' ಮಾಡಿದ್ದಾರೆಂಬ ಆರೋಪಕ್ಕೆ ಗುರಿಯಾದ ತಮಿಳುನಾಡಿನ ಸಮಾಜ ಕಲ್ಯಾಣ ಇಲಾಖೆ ಸಚಿವೆ ಪೂಂಗೊಥಾಯ್ ಅಲಾಡಿ ಅರುಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ವಿಚಕ್ಷಣಾ ದಳ ಮತ್ತು ಭ್ರಷ್ಟಾಚಾರ ನಿಗ್ರಹದ ದಳ ನಿರ್ದೇಶಕ ಎಸ್. ಕೆ. ಉಪಾಧ್ಯಾಯ ಅವರ ಸಂಬಂಧಿಯೊಬ್ಬರಿಗೆ ಸಚಿವೆ ಪೂಂಗೊಥಾಯ್ `ಸಹಾಯ' ಮಾಡುವ ಸಂಬಂಧ ನಡೆಸಿದ ದೂರವಾಣಿ ಸಂಭಾಷಣೆಯನ್ನು ಕದ್ದಾಲಿಸಿ ಧ್ವನಿಮುದ್ರಿಸಲಾಗಿದ್ದ `ಸಿಡಿ'ಯನ್ನು ಜನತಾಪಕ್ಷದ ಸುಬ್ರಮಣಿಯನ್ ಸ್ವಾಮಿ ಬಿಡುಗಡೆ ಮಾಡಿದ್ದರು. `ದೂರವಾಣಿಯಲ್ಲಿ ಮಾತನಾಡಿರುವ ಧ್ವನಿ ನನ್ನದೇ. ಆದರೆ ನಾನು ಈ ಪ್ರಕರಣ ಯಾವ ಹಂತದವರೆಗೆ ಮುಂದುವರಿದಿದೆ ಎಂದು ವಿಚಾರಿಸಲು ಕರೆ ಮಾಡಿದ್ದಾಗಿ' ಪೂಂಗೋಥಾಯ್ ಮಾಧ್ಯಮದವರ ಮುಂದೆ ಹೇಳಿದ್ದರು. ಪೂಂಗೋಥಾಯ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು ಸ್ವಾಮಿ ಆಗ್ರಹಿಸಿದ್ದರು.

2008: ವಿಶ್ವದ ಅಗ್ರ ರ್ಯಾಂಕಿಂಗಿನ ಟೆನಿಸ್ ಆಟಗಾರ್ತಿ ಜಸ್ಟಿನ್ ಹೆನಿನ್ ಅವರು ವೃತ್ತಿಪರ ಟೆನಿಸ್ಸಿಗೆ ವಿದಾಯ ಹೇಳಿದರು. ಈದಿನ ಬ್ರಸ್ಸೆಲ್ಸಿನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ತಮ್ಮ ನಿರ್ಧಾರ ಪ್ರಕಟಿಸಿದರು.

2008: ಹರಭಜನ್ ಸಿಂಗ್ ಮೇಲೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೊನೆಗೂ `ದಂಡಾಸ್ತ್ರ'ವನ್ನು ಪ್ರಯೋಗಿಸಿತು. ಐದು ಏಕದಿನ ಪಂದ್ಯಗಳ ನಿಷೇಧ ಹೇರಿದ್ದಲ್ಲದೆ ತಪ್ಪು ಮರುಕಳಿಸಿದರೆ ಆಜೀವ ನಿಷೇಧ ಶಿಕ್ಷೆ ವಿಧಿಸುವ ಬೆದರಿಕೆಯನ್ನೂ ಹಾಕಿತು.

2008: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಕೆನಡಾದ ಒಂಟಾರಿಯೊದಲ್ಲಿರುವ ವಿಂಡ್ಸರ್ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದರು. ಚಿತ್ರರಂಗಕ್ಕೆ ಅಕ್ಷಯ್ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ ಎಂದು ವಿವಿ ಹೇಳಿತು.

2008: ವಿಶ್ವದ ನಂ.1 ಉಕ್ಕು ಉತ್ಪಾದನಾ ಕಂಪೆನಿ ಆರ್ಸೆಲರ್ ಮಿತ್ತಲ್ ಭಾರತದಲ್ಲಿನ ತನ್ನ ಕಾರ್ಯ ನಿರ್ವಹಣೆಗಾಗಿ ವಿಜಯ್ ಭಟ್ನಾಗರ್ ಅವರನ್ನು ನೂತನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಿತು.

2008: ರಾಜಧಾನಿ ದೆಹಲಿ ಸಹಿತ ಉತ್ತರ ಭಾರತದ ಹಲವು ಕಡೆಗಳಲ್ಲಿ ಗಾಳಿಯಿಂದ ಕೂಡಿದ ಮಳೆ ಸುರಿಯಿತು. ಉತ್ತರ ಪ್ರದೇಶದಲ್ಲಿ ಮಳೆ ಸಂಬಂಧಿತ ಅನಾಹುತಗಳಿಗೆ ಸಿಕ್ಕಿ 40 ಮಂದಿ ಮೃತರಾದರು.

2007: ಸುಮಾರು 45 ವರ್ಷಗಳಿಂದ ಜಾರಿಯಲ್ಲಿರುವ ಮಹಿಳಾ ನೌಕರರ ರಾತ್ರಿ ಪಾಳಿ ನಿಷೇಧ ಕಾನೂನನ್ನು ರದ್ದು ಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿತು. ಮಹಿಳಾ ನೌಕರರಿಗೆ ರಾತ್ರಿ ಪಾಳಿ ನಿಷೇಧಿಸುವ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆಯನ್ನು (1961) ರದ್ದು ಪಡಿಸುವ ಸಲುವಾಗಿ ಶೀಘ್ರ ಸುಗ್ರೀವಾಜ್ಞೆ ಹೊರಡಿಸಲು ಸಚಿವ ಸಂಪುಟ ತೀರ್ಮಾನಿಸಿತು.

2007: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಆಂಧ್ರಪ್ರದೇಶ ಮೂಲದ ಮುತ್ಯಾಲರಾಜ ರೇವು ಅವರು ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್ ಸಿ) ನಡೆಸಿದ 2006ರ ನಾಗರಿಕ ಸೇವಾ (ಮುಖ್ಯ) ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದರು.

2007: ಪ್ರಧಾನಿ ಮನಮೋಹನ್ ಸಿಂಗ್ ಅವರು ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ದಯಾನಿಧಿ ಮಾರನ್ ಅವರು ಕೇಂದ್ರ ಸಚಿವ ಸಂಪುಟಕ್ಕೆ ಸಲ್ಲಿಸಿದ ರಾಜೀನಾಮೆಯನ್ನು ಅಂಗೀಕರಿಸುವಂತೆ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಶಿಫಾರಸು ಮಾಡಿದರು.

2007: ರಸ್ತೆ ಅಪಘಾತದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ 27 ಮಂದಿ ಸಜೀವವಾಗಿ ದಹನಗೊಂಡ ಘಟನೆ ಆನಂದ್ ಬಳಿ ಘಟಿಸಿತು. ವಡೋದರ ಜಿಲ್ಲೆಯ ಮೆಹಸಾನದಿಂದ ರಮೇಶರಕ್ಕೆ ಹೊರಟಿದ್ದ ಸಿಎನ್ಜಿ ಬಸ್ ಎಲ್ಪಿಜಿ ಟ್ಯಾಂಕರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ದುರಂತ ಸಂಭವಿಸಿತು.

2007: ಆಂಧ್ರ ಪ್ರದೇಶದ ಅದಿಲಾಬಾದ್ ಜಿಲ್ಲೆಯ ನೆರೆದುಗುಂಡ ಬಳಿ ವ್ಯಾನ್ ಮತ್ತು ಟ್ರಕ್ ಪರಸ್ಪರ ಡಿಕ್ಕಿಯಾಗಿ ಕನಿಷ್ಠ 18 ಜನ ಮೃತರಾದರು.

2007: ಪಾಕಿಸ್ಥಾನದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಎಂ. ಚೌಧರಿ ಅಮಾನತು ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸುಪ್ರೀಂಕೋರ್ಟ್ ಹಿರಿಯ ನ್ಯಾಯಮೂರ್ತಿ ಫಲೆಕ್ ಶೇರ್ ಪೀಠಕ್ಕೆ ರಾಜೀನಾಮೆ ಸಲ್ಲಿಸಿದರು. ಆ ಬಳಿಕ ಮುಖ್ಯನ್ಯಾಯಮೂರ್ತಿ ರಾಣಾ ಭಗವಾನ್ ದಾಸ್ ಅವರು 14 ಸದಸ್ಯರ ಪೂರ್ಣಪೀಠವನ್ನು ಮರುಸ್ಥಾಪಿಸಿದರು.

2006: ಖ್ಯಾತ ಪಿಟೀಲುವಾದಕ ಲಾಲ್ಗುಡಿ ಜಯರಾಮನ್ ಅವರಿಗೆ ಬೆಂಗಳೂರಿನ ಶ್ರೀರಾಮ ಸೇವಾ ಮಂಡಳಿಯು 2006ನೇ ಸಾಲಿನ `ಎಸ್.ವಿ. ನಾರಾಯಣಸ್ವಾಮಿ ರಾವ್ ರಾಷ್ಟ್ರೀಯ ಪ್ರಶಸ್ತಿ' ನೀಡಿ ಗೌರವಿಸಿತು. 68ನೇ ರಾಮನವಮಿ ಸಂಗೀತೋತ್ಸವದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ. ಕೃಷ್ಣ ಪ್ರಶಸ್ತಿ ಪ್ರದಾನ ಮಾಡಿದರು.

2006: ಅಸ್ಸಾಂ ಮುಖ್ಯಮಂತ್ರಿಯಾಗಿ ಸತತ ಎರಡನೇ ಅವಧಿಗೆ ತರುಣ್ ಗೊಗೋಯ್ ಅವರು ಪ್ರಮಾಣವಚನ ಸ್ವೀಕರಿಸಿದರು. ಅಸ್ಸಾಂ ರಾಜ್ಯ ರಚನೆಯಾದ ಬಳಿಕ ಗೊಗೋಯ್ ಈಗ 16ನೇ ಅವಧಿಯ ಮುಖ್ಯಮಂತ್ರಿ.

2006: ಅಮೆರಿಕದ ಮಾಂಟ್ ಗೊಮೆರಿ ಕೌಂಟಿಯ ಮುಂಚೂಣಿಯ ಹೈಸ್ಕೂಲುಗಳಲ್ಲಿ ಒಂದಾದ ಮೇರಿಲ್ಯಾಂಡಿನ ಬೆಥೆಸ್ಡಾ ಚೆವಿ ಚೇಸ್ ಹೈಸ್ಕೂಲಿನ (ಬಿಸಿಸಿ) ವಿದ್ಯಾರ್ಥಿನಿ ಭಾರತೀಯ ಮೂಲದ ಶ್ರೀಮತಿ ಶ್ರೀಧರ್ ಅವರನ್ನು ಹೈಸ್ಕೂಲ್ ತಾನು ಪ್ರಕಟಿಸುತ್ತಿರುವ `ಟಟ್ಲೇರ್' ಪತ್ರಿಕೆಯ ಆನ್ ಲೈನ್ ಆವೃತ್ತಿಯ ಮುಖ್ಯ ಸಂಪಾದಕಿಯನ್ನಾಗಿ ನೇಮಕ ಮಾಡಿತು. ಈ ವಿದ್ಯಾರ್ಥಿನಿ ಈ ವೃತ್ತ ಪತ್ರಿಕೆಯ ಸಿಬ್ಬಂದಿ ಬರಹಗಾರ್ತಿ.

2006: ಕೇಂದ್ರ ದೆಹಲಿಯ ರಾಜಾಜಿ ಮಾರ್ಗದಲ್ಲಿ ನಿವೇಶನ ಮಂಜೂರಾದ ಎಂಟು ವರ್ಷಗಳ ಒಳಗಾಗಿ ನಿರ್ಮಾಣಗೊಂಡ ಡಿ ಆರ್ ಡಿ ಓ ಕೇಂದ್ರ ಕಚೇರಿಯನ್ನು ಪ್ರಧಾನಿ ಡಾ. ಮನಮೋಹನ್ ಸಿಂಗ್ ಉದ್ಘಾಟಿಸಿದರು. ಇದು ಕೆಂಪು ಮರಳುಕಲ್ಲಿನ ಸುಂದರ ಕಟ್ಟಡ. ರಾಷ್ಟ್ರಪತಿ ಭವನ, ನಾರ್ಥ್ ಬ್ಲಾಕ್, ಸೌತ್ ಬ್ಲಾಕ್ ಮತ್ತು ಸಂಸತ್ ಕಟ್ಟಡಗಳು ಇರುವ ಸುಂದರ ಪ್ರದೇಶಕ್ಕೆ ಈ ಡಿ ಆರ್ ಡಿ ಓ ಕೇಂದ್ರ ಕಚೇರಿ ಇನ್ನಷ್ಟು ಶೋಭೆ ನೀಡಿತು. ಎ.ಪಿ.ಜೆ. ಅಬ್ದುಲ್ ಕಲಾಂ, ವಿ.ಕೆ. ಅತ್ರೆ ಮತ್ತು ಎಂ. ನಟರಾಜನ್ ಈ ಮೂವರು ಕಳೆದ 8 ವರ್ಷಗಳಲ್ಲಿ ಈ ಯೋಜನೆಯ ಜಾರಿಗೆ ಶ್ರಮವಹಿಸಿದ ಪ್ರಮುಖರು.

1973: ಸಿ. ಹೊನ್ನಪ್ಪ ಹುಟ್ಟಿದ ದಿನ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಕರ್ನಾಟಕದ ಅತ್ಯುತ್ತಮ ಕಬಡ್ಡಿ ಆಟಗಾರರಲ್ಲಿ ಇವರು ಒಬ್ಬರು. ಏಕಲವ್ಯ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ.

1973: ತನ್ನ ಪ್ರಪ್ರಥಮ `ಸ್ಕೈಲ್ಯಾಬ್-1' ಮಾನವ ಸಹಿತ ಅಂತರಿಕ್ಷ ನಿಲ್ದಾಣವನ್ನು ಅಮೆರಿಕ ಅಂತರಿಕ್ಷಕ್ಕೆ ಉಡಾವಣೆ ಮಾಡಿತು. 34,981 ಪ್ರದಕ್ಷಿಣೆಗಳ ಬಳಿಕ 1979ರ ಜುಲೈ 11ರಂದು ಅದು ಉರಿದು ಸಮುದ್ರಕ್ಕೆ ಬಿತ್ತು.

1963: ಕಲಾವಿದೆ ರತ್ನ ಸುಪ್ರಿಯ ರಾಮಮೋಹನ್ ಜನನ.

1956: ಕಲಾವಿದ ಎಂ.ಜಿ. ವೆಂಕಟರಾಘವನ್ ಜನನ.

1955: ಕಲಾವಿದೆ ಎಂ.ಕೆ. ಜಯಶ್ರೀ ಜನನ.

1948: ಇಸ್ರೇಲಿನ ಪ್ರಥಮ ಪ್ರಧಾನಿ ಹಾಗೂ ರಾಷ್ಟ್ರೀಯ ಮಂಡಳಿಯ ಅಧ್ಯಕ್ಷ ಡೇವಿಡ್ ಬೆನ್-ಗ್ಯುರಿಯನ್ ಹೊಸ ಇಸ್ರೇಲ್ ರಾಷ್ಟ್ರ ಸ್ಥಾಪನೆಯ ಘೋಷಣೆಯನ್ನು ಸಂಜೆ 4 ಗಂಟೆಗೆ ಮಾಡಿದರು.

1934: ಖ್ಯಾತ ಸಂಗೀತಗಾರ ಎಚ್. ಕೆ. ನಾರಾಯಣ ಅವರು ಸಂಗೀತಗಾರ ಕೇಶವಯ್ಯ- ಸಣ್ಣಮ್ಮ ದಂಪತಿಯ ಮಗನಾಗಿ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಜನಿಸಿದರು.

1924: ಕಲಾವಿದ ಮಾಧವರಾವ್ ಕೆ.ಬಿ. ಜನನ.

1923: ಭಾರತದ ಚಲನಚಿತ್ರ ನಿರ್ದೇಶಕ ಮೃಣಾಲ್ ಸೇನ್ ಜನ್ಮ ದಿನ.

1796: ಎಡ್ವರ್ಡ್ ಜೆನ್ನರ್ ಹಾಲು ಮಾರಾಟಗಾರ್ತಿಯೊಬ್ಬಳ ಕೈಗೆ ತಗುಲಿದ್ದ ದನದ ಸಿಡುಬಿನ ಕೀವನ್ನು ತೆಗೆದು 8 ವರ್ಷದ ಆರೋಗ್ಯಶಾಲಿ ಬಾಲಕ ಜೇಮ್ಸ್ ಫಿಪ್ಸ್ ನ ಕೈಗೆ ಸೇರಿಸಿದ. ಫಿಪ್ಸ್ ನಲ್ಲಿ ಸಿಡುಬಿನ ದುಷ್ಪರಿಣಾಮ ಕಾಣಲಿಲ್ಲ. ಆರು ವಾರಗಳ ನಂತರ ಸಿಡುಬು ಪೀಡಿತ ವ್ಯಕ್ತಿಯೊಬ್ಬನ ಕೀವನ್ನು ಜೆನ್ನರ್ ಅದೇ ಬಾಲಕನಿಗೆ ಸೇರಿಸಿದ. ಬಾಲಕನಿಗೆ ಸಿಡುಬು ತಟ್ಟಲಿಲ್ಲ.. ಜೆನ್ನರನ ಈ ಪ್ರಯೋಗ `ಲಸಿಕೆಯ' (ವ್ಯಾಕ್ಸಿನೇಷನ್) ಹುಟ್ಟಿಗೆ ನಾಂದಿಯಾಯಿತು.

1643: ಫ್ರಾನ್ಸಿನ ದೊರೆ 8ನೇ ಲೂಯಿ ಮೃತನಾದ್ದದರಿಂದ ಆತನ 4 ವರ್ಷ ವಯಸ್ಸಿನ ಮಗ 9ನೇ ಲೂಯಿ ಫ್ರಾನ್ಸಿನ ರಾಜನಾದ. 9ನೇ ಲೂಯಿ 72 ವರ್ಷಗಳ ಕಾಲ ರಾಜ್ಯಭಾರ ನಡೆಸಿದ.

Advertisement