Showing posts with label ಇಂದಿನ ಇತಿಹಾಸ History Today (November 11-20).. Show all posts
Showing posts with label ಇಂದಿನ ಇತಿಹಾಸ History Today (November 11-20).. Show all posts

Thursday, December 10, 2009

ಇಂದಿನ ಇತಿಹಾಸ History Today ನವೆಂಬರ್ 20

 ಇಂದಿನ ಇತಿಹಾಸ

ನವೆಂಬರ್ 20

 ಬಿಹಾರದಲ್ಲಿನ ಬೌದ್ಧ ಧರ್ಮೀಯರ ಪವಿತ್ರ ಕ್ಷೇತ್ರ ಬೋಧ ಗಯಾದ ಮಹಾಬೋಧಿ ದೇಗುಲ ಸಂಕೀರ್ಣದೊಳಗೆ ಬರುವ ಭಕ್ತರು ಮತ್ತು ಪ್ರವಾಸಿಗರು ಇನ್ನು ಮುಂದೆ ಗರ್ಭಗುಡಿ ಹೊರತುಪಡಿಸಿ ಉಳಿದೆಡೆಯೆಲಾ ಚಪ್ಪಲಿ ಧರಿಸಬಹುದು. ಈವರೆಗೆ ಈ ಸಂಬಂಧ ಇದ್ದ ದಶಕಗಳಷ್ಟು ಹಳೆಯದಾದ ನಿರ್ಬಂಧವನ್ನು ದೇವಸ್ಥಾನದ ಆಡಳಿತ ಮಂಡಳಿ ತೆಗೆದುಹಾಕಿತು.

2008: ದಿವಂಗತ ಜೋಕಿಮ್ ಮತ್ತು ವಯೊಲೆಟ್ ಆಳ್ವಾ ಅವರ ಸಂಸ್ಮರಣಾರ್ಥ ಅಂಚೆ ಚೀಟಿಯನ್ನು ಅವರ ಜನ್ಮ ಶತಮಾನೋತ್ಸವ ವರ್ಷದ ಅಂಗವಾಗಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ನವದೆಹಲಿಯಲ್ಲಿ ಬಿಡುಗಡೆ ಮಾಡಿದರು. ವಯೊಲೆಟ್ ಮತ್ತು ಜೋಕಿಮ್ ಅವರು ರಾಜ್ಯಸಭೆ ಮತ್ತು ಲೋಕಸಭೆಗೆ 1952ರಲ್ಲಿ ಆಯ್ಕೆಯಾದರು. ಇವರು ದೇಶದ ಇತಿಹಾಸದಲ್ಲಿ ಸಂಸತ್ತಿಗೆ ಆಯ್ಕೆಯಾದ ಮೊದಲ ದಂಪತಿ. ಈ ಸ್ವಾತಂತ್ರ್ಯ ಹೋರಾಟಗಾರ ದಂಪತಿಯ ನೆನಪಿಗಾಗಿ ಪ್ರಥಮ ದಿನದ ಲಕೋಟೆಯನ್ನೂ ಸಹ ಪಾಟೀಲ್  ಬಿಡುಗಡೆ ಮಾಡಿದರು. ಈ ಸಮಾರಂಭದಲ್ಲಿ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ, ಹಿಮಾಚಲ ಪ್ರದೇಶದ ರಾಜ್ಯಪಾಲರಾದ ಪ್ರಭಾರಾವ್, ಸಂಪರ್ಕ ಸಚಿವ ಎ.ರಾಜ, ಮಾಜಿ ಪ್ರಧಾನಿ ಐ.ಕೆ. ಗುಜ್ರಾಲ್ ಹಾಗೂ ಜೋಕಿಮ್ ಮತ್ತು ವಯೊಲೆಟ್ ಆಳ್ವ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಭಾಗವಹಿಸಿದ್ದರು.

2008: ಮಹಾರಾಷ್ಟ್ರ ಸರ್ಕಾರವು ಮಾಲೆಗಾಂವ್ ಸ್ಫೋಟ ಪ್ರಕರಣದ ಎಲ್ಲ 10 ಆರೋಪಿಗಳ ವಿರುದ್ಧ ಮೊಕಾ ಕಾಯ್ದೆ ಜಾರಿಗೊಳಿಸಿತು.

2008: ಬಿಹಾರದಲ್ಲಿನ ಬೌದ್ಧ ಧರ್ಮೀಯರ ಪವಿತ್ರ ಕ್ಷೇತ್ರ ಬೋಧ ಗಯಾದ ಮಹಾಬೋಧಿ ದೇಗುಲ ಸಂಕೀರ್ಣದೊಳಗೆ ಬರುವ ಭಕ್ತರು ಮತ್ತು ಪ್ರವಾಸಿಗರು ಇನ್ನು ಮುಂದೆ ಗರ್ಭಗುಡಿ ಹೊರತುಪಡಿಸಿ ಉಳಿದೆಡೆಯೆಲಾ ಚಪ್ಪಲಿ ಧರಿಸಬಹುದು. ಈವರೆಗೆ ಈ ಸಂಬಂಧ ಇದ್ದ ದಶಕಗಳಷ್ಟು ಹಳೆಯದಾದ ನಿರ್ಬಂಧವನ್ನು ದೇವಸ್ಥಾನದ ಆಡಳಿತ ಮಂಡಳಿ ತೆಗೆದುಹಾಕಿತು. ಚಳಿಗಾಲದಲ್ಲಿ 2ರಿಂದ 4 ಡಿಗ್ರಿ ಸೆಲ್ಸಿಯಸ್ಸಿಗೆ ಕುಸಿಯುವ ಉಷ್ಣಾಂಶ ಹಾಗೂ ಬೇಸಿಗೆ ಕಾಲದಲ್ಲಿ ಅತಿಯಾದ ಬಿಸಿಲಿನಲ್ಲಿ ಬರಿಗಾಲಲ್ಲಿ ನಡೆಯುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆ ಎದುರಿಸಬೇಕಾಗಿದ್ದ ಹಿನ್ನೆಲಯಲ್ಲಿ, ಚಪ್ಪಲಿ ಧರಿಸಲು ಇದ್ದ ನಿರ್ಬಂಧ ತೆಗೆದು ಹಾಕಬೇಕೆಂಬ  ಒತ್ತಾಯ ಕೇಳಿಬಂದಿತ್ತು. ಟಿಬೆಟಿನ ಬೌದ್ಧೀಯರ ಕರ್ಮಪಾ ಪಂಗಡದ ಯುವ ಮುಖ್ಯಸ್ಥ ಉಗೇನ್ ಟ್ರಿನ್ಲ್ಲೆ ದೋರ್ಜೆ 2001ರಲ್ಲಿ ನಿಯಮ ಉಲ್ಲಂಘಿಸಿ ದೊಡ್ಡ ಶೂಗಳನ್ನು ಧರಿಸಿ ದೇವಸ್ಥಾನ ಸಂಕೀರ್ಣಪ್ರವೇಶಿಸುವ ಮೂಲಕ ಮತ್ತೊಂದು ಪಂಗಡದ  ವಿರೋಧ ಎದುರಿಸಿದ್ದರು. 1500 ವರ್ಷ ಹಳೆಯದಾದ ಮಹಾಬೋಧಿ ದೇವಸ್ಥಾನವನ್ನು 2550 ವರ್ಷ ಹಿಂದೆ ಬುದ್ಧನಿಗೆ ಜ್ಞಾನೋದಯವಾದ ಬೋಧಿ ವೃಕ್ಷದ ಎದುರು ಕಟ್ಟಲಾಗಿತ್ತು. 2002ರಲ್ಲಿ ಯುನೆಸ್ಕೊ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಅದನ್ನು ಸೇರಿಸಿದ್ದರಿಂದ ವರ್ಷವಿಡೀ ಸಾವಿರಾರು ಪ್ರವಾಸಿಗರು, ಅದರಲ್ಲೂ ಬೌದ್ಧ ಸಮುದಾಯ ಹೆಚ್ಚಾಗಿರುವ ದೇಶಗಳ ಜನ ಅಲ್ಲಿಗೆ ಭೇಟಿ ನೀಡುತ್ತಾರೆ.

2008: ಎರಡು ವರ್ಷದ ಹಿಂದೆ ತಮ್ಮ ನಾಯಕನನ್ನು ಕೊಲೆ ಮಾಡಿದ್ದ21 ಮಂದಿ ಸಿಪಿಎಂ ಕಾರ್ಯಕರ್ತರಿಗೆ ಪಶ್ಚಿಮಬಂಗಾಳದ ಹೂಗ್ಲಿಯ ಸ್ಥಳೀಯ ನ್ಯಾಯಾಲಯವೊಂದು  ಜೀವಾವಧಿ ಶಿಕ್ಷೆ ವಿಧಿಸಿ, ಜೊತೆಗೆ ತಲಾ 25 ಸಾವಿರ ರೂ. ದಂಡವನ್ನೂ ವಿಧಿಸಿತು.

2008: ಇಂಗ್ಲಿಷಿನ ಕ್ಲಾಸಿಕಲ್ ಪದವನ್ನು ಕನ್ನಡದಲ್ಲಿ ಶಾಸ್ತ್ರೀಯ ಎಂದು ಬಳಸಿದರೆ ಹೆಚ್ಚು ಅರ್ಥ ನೀಡುವುದಿಲ್ಲ. `ಶಾಸ್ತ್ರೀಯ' ಎಂದರೆ ಸಾಂಪ್ರದಾಯಿಕ, ನಿಯಮ ಬದ್ಧ ಎಂದರ್ಥ. ಆದ್ದರಿಂದ `ಕ್ಲಾಸಿಕಲ್' ಪದಕ್ಕೆ ತೀರಾ ಸಮೀಪವಿರುವ `ಅಭಿಜಾತ' (ಅತ್ಯುತ್ತಮ) ಪದವನ್ನೇ ಇನ್ನು ಮುಂದೆ ಎಲ್ಲರೂ ಬಳಸಬೇಕು ಎಂದು ಸಂಶೋಧಕ ಡಾ. ಎಂ.ಚಿದಾನಂದ ಮೂರ್ತಿ ಬೆಂಗಳೂರಿನಲ್ಲಿ ಸಲಹೆ ನೀಡಿದರು. `ಇಂಗ್ಲಿಷಿನ `ಕ್ಲಾಸಿಕಲ್' ಎಂಬ ಮಾತಿಗೆ ಗ್ರೀಕ್, ರೋಮನ್ ಮಾದರಿಯಲ್ಲಿ ಅತ್ಯುನ್ನತ, ಚಿರಂತನ ಶ್ರೇಷ್ಠತೆಯ ಎಂಬ ಅರ್ಥವಿದೆ. `ಶಾಸ್ತ್ರೀಯ' ಎಂಬ ಪದಕ್ಕೆ ಸಂಬಂಧಿಸಿದಂತೆ  ಹಲವಾರು ವಿದ್ವಾಂಸರೊಂದಿಗೆ ಚರ್ಚಿಸಿ, `ಶಾಸ್ತ್ರೀಯ ಭಾಷೆ' ಬದಲು `ಅಭಿಜಾತ ಭಾಷೆ' ಎಂದು ಬಳಸಿದರೆ ಒಳಿತು ಎಂಬ ನಿರ್ಧಾರಕ್ಕೆ ಬಂದಿರುವುದಾಗಿ' ಅವರು ತಿಳಿಸಿದರು.

2008: ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ಹಿರಿಯ ಶಿಲ್ಪ ಕಲಾವಿದ ಗುಂಡಪ್ಪ ದೇವೇಂದ್ರಪ್ಪ ಮಾಯಾಚಾರಿ (83) ಬಾಗಲಕೋಟೆಯಲ್ಲಿ ನಿಧನರಾದರು. ಕೃಷ್ಣಶಿಲೆ ಕೆತ್ತನೆಯಲ್ಲಿ ಪರಿಣತಿ ಹೊಂದಿದ್ದ ಗುಂಡಪ್ಪ, ಅವರಿಗೆ 1999ರಲ್ಲಿ ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ, 1978ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1998ರಲ್ಲಿ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಹಾಗೂ ಸಮ್ಮಾನಗಳು ಲಭಿಸಿದ್ದವು. ಮೂಲತಃ ಬೀಳಗಿ ತಾಲ್ಲೂಕು ಹೆರಕಲ್ ಗ್ರಾಮದವರಾದ ಗುಂಡಪ್ಪ ಮಾಯಾಚಾರಿ, ದೇವಿಮೂರ್ತಿಗಳ ಕೆತ್ತನೆಯ ಮೂಲಕ ಪ್ರಸಿದ್ಧಿ ಗಳಿಸಿದ್ದರು.

2007: ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿ, ವಿಧಾನಸಭೆಯ ವಿಸರ್ಜನೆಗೆ ಸಂಸತ್ತನ್ನು ಕೋರಲು ನಿರ್ಧರಿಸಿತು. ಸಂಪುಟದ ನಿರ್ಣಯಕ್ಕೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಂಗೀಕಾರದ ಮೊಹರು ಒತ್ತಿದ ನಂತರ ಗೃಹಸಚಿವ ಶಿವರಾಜ್ ಪಾಟೀಲ್ ರಾಷ್ಟ್ರಪತಿ ಆಳ್ವಿಕೆಯ ಅಧಿಕೃತ ನಿರ್ಧಾರವನ್ನು ಸಂಜೆ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರಿಗೆ ರವಾನಿಸಿದರು. ಹೀಗಾಗಿ ಕರ್ನಾಟಕ ಕೇವಲ ಆರು ವಾರಗಳ ಅವಧಿಯಲ್ಲಿ ಎರಡನೇ ಬಾರಿಗೆ ರಾಷ್ಟ್ರಪತಿ ಆಳ್ವಿಕೆಗೆ ಒಳಗಾಯಿತು. ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ಜೆಡಿ (ಎಸ್) ನಿರಾಕರಿಸಿದ್ದರಿಂದ ನಿರ್ಮಾಣವಾದ ರಾಜಕೀಯ ಬಿಕ್ಕಟ್ಟಿನಿಂದಾಗಿ 2007ರ ಅಕ್ಟೋಬರ್ ಒಂಬತ್ತರಿಂದ ನವೆಂಬರ್ 12ರ ವರೆಗೆ 34 ದಿನಗಳ ಕಾಲ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು.

2007: ಹನೂರು ಕ್ಷೇತ್ರ ಶಾಸಕಿ ಪರಿಮಳಾ ನಾಗಪ್ಪ ಅವರ ಅಳಿಯ ಡಾ.ಕಿರಣ್ ಪಟೇಲ್ (34) ಅವರು ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಭೂಪಸಂದ್ರ ಬಡಾವಣೆಯಲ್ಲಿ ಸಂಭವಿಸಿತು. ಎಂಬಿಬಿಎಸ್ ವ್ಯಾಸಂಗ ಮುಗಿಸಿದ ಬಳಿಕ ವೈದ್ಯಕೀಯ ಉಪಕರಣಗಳ ವ್ಯಾಪಾರ ಮಾಡಿಕೊಂಡಿದ್ದ ಕಿರಣ್ ಪಟೇಲ್ ಅವರು ಭೂಪಸಂದ್ರದಲ್ಲಿ ನೆಲೆಸಿದ್ದರು.

2007: 1997ರಲ್ಲಿ ದೆಹಲಿಯ ಉಪಾಹಾರ್ ಸಿನಿಮಾ ಮಂದಿರದ ಬೆಂಕಿ ದುರಂತದಲ್ಲಿ 59 ಜನರು ಸಜೀವ ದಹನಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನಿಮಾ ಮಂದಿರದ ಮಾಲಿಕರಾದ ಸುಶಿಲ್, ಗೋಪಾಲ್ ಅನ್ಸಾಲ್ ಮತ್ತು ದೆಹಲಿ ನಗರಪಾಲಿಕೆ ಅಧಿಕಾರಿಗಳಾದ ಶಾಂ ಸುಂದರ್ ಶರ್ಮಾ, ಎನ್. ಡಿ. ತಿವಾರಿ ಹಾಗೂ ಅಗ್ನಿ ಶಾಮಕದ ದಳದ ಅಧಿಕಾರಿ ಎಚ್. ಎಸ್. ಪನ್ವರ್ ಅವರೂ ಸೇರಿ ಇತರ 12 ಮಂದಿಯನ್ನು ತಪ್ಪಿತಸ್ಥರು ಎಂದು ನ್ಯಾಯಾಲಯ ಘೋಷಿಸಿತು. ಅನ್ಸಾಲ್ ಮತ್ತು ಇತರ 12 ಮಂದಿ ಭಾರತೀಯ ದಂಡ ಸಂಹಿತೆ 304ಎ (ಆತುರ ಹಾಗೂ ನಿರ್ಲ್ಯಕ್ಷದ ಕ್ರಮ) ಮತ್ತು ಜನರ ಜೀವಕ್ಕೆ ಅಪಾಯ ಒಡ್ಡಿದ ಇತರ ಪ್ರಕರಣಗಳ ಪ್ರಕಾರ ತಪ್ಪಿತಸ್ಥರು. ಇದಲ್ಲದೆ ಅನ್ಸಾಲ್ ಸಹೋದರರು ಸಿನಿಮಾಟೋಗ್ರಫಿ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ಹೆಚ್ಚುವರಿ ಸೆಷನ್ ನ್ಯಾಯಾಧೀಶರಾದ ಮಮತಾ ಸೆಹಗಲ್ ತೀರ್ಪು ನೀಡಿದರು. ಅನ್ಸಾಲ್ ಸಹೋದರರ ಎಂಟು ಮಂದಿ ಸಂಬಂಧಿಕರೂ ಸೇರಿದಂತೆ ಸಿಬಿಐ ಅಧಿಕಾರಿಗಳು ಒಟ್ಟು 115 ಸಾಕ್ಷಿಗಳ ವಿಚಾರಣೆ ನಡೆಸಿದ್ದರು. ಅನ್ಸಾಲ್ ಸಂಬಂಧಿಗಳು ನಂತರ ತದ್ವಿರುದ್ಧ ಹೇಳಿಕೆ ನೀಡಿದ್ದರು. ಈ ಮಧ್ಯೆ ಅನ್ಸಾಲ್ ಸಹೋದರರ ಆಮಿಷಕ್ಕೆ ಒಳಗಾಗಿ ದಾಖಲೆ ಪತ್ರಗಳನ್ನು ತಿದ್ದಿದ್ದ  ನ್ಯಾಯಾಲಯದ ಸಿಬ್ಬಂದಿಯೊಬ್ಬರನ್ನು ಸೇವೆಯಿಂದ ವಜಾ ಮಾಡಲಾಗಿತ್ತು.

2007:  ದೇವರ ಆಜ್ಞೆಯ ನೆಪ ಹೇಳಿ  ಜಲಪೈಗುರಿ ಜಿಲ್ಲೆಯ ಕಾಶಿಯಾಜ್ಹೋರಾ ಗ್ರಾಮದ ಅಫಿಜುದ್ದೀನ್ ಅಲಿ (37) ಎಂಬಾತ  ತನ್ನ ಹದಿಹರೆಯದ ಮಗಳನ್ನೇ ಮದುವೆಯಾದ ವಿಚಿತ್ರ ಘಟನೆ ತಡವಾಗಿ ಬೆಳಕಿಗೆ ಬಂದಿತು. ದೈವಿಕ ಇಚ್ಛೆಯೇ ತಾನು ತನ್ನ ಮಗಳನ್ನು ಮದುವೆಯಾಗಲು ಕಾರಣ. ದೇವರು ಕನಸಲ್ಲಿ ಬಂದು ಹಿರಿಯ ಮಗಳನ್ನು ಮದುವೆಯಾಗಲು ಆಜ್ಞಾಪಿಸಿದ ಎಂಬ ಸಬೂಬನ್ನು ಈ ಭೂಪ ನೀಡಿದ. ಹುಡುಗಿ ಐದು ತಿಂಗಳ ಗರ್ಭಿಣಿಯಾದಾಗ ವಿಷಯ ಬೆಳಕಿಗೆ ಬಂತು.

2007: ತಿರುಮಕೂಡಲಿನ ಇತಿಹಾಸ ಪ್ರಸಿದ್ಧ ಸೋಸಲೆ ವ್ಯಾಸರಾಜಮಠದ ಮಠಾಧಿಪತಿಗಳಾಗಿದ್ದ ವಿದ್ಯಾವಾಚಸ್ಪತಿ ತೀರ್ಥ ಸ್ವಾಮೀಜಿ (87) ತಿ. ನರಸೀಪುರದಲ್ಲಿ ನಿಧನರಾದರು. ಮೂಲತಃ ತಿ. ನರಸೀಪುರ ತಾಲ್ಲೂಕಿನ ತಲಕಾಡಿನವರಾದ ಸ್ವಾಮೀಜಿ, ಗುಂಬಳ್ಳಿ ನರಸಿಂಹಾಚಾರ್ ಅವರ ಪುತ್ರರಾಗಿದ್ದರು. ತಿ.ನರಸೀಪುರದಲ್ಲಿ ತಮ್ಮ ವಿದ್ಯಾಭ್ಯಾಸ ಪಡೆದಿದ್ದರು. ಮಹಾರಾಜರ ಕಾಲದಲ್ಲಿ ಇವರು 5 ಭಾಷೆಗಳಲ್ಲಿ ಹರಿಕಥಾ ವಿದ್ವಾಂಸರಾಗಿ ಸೇವೆ ಸಲ್ಲಿಸಿದ್ದರು. ಇವರಿಗೆ 10 ಮಂದಿ ಮಕ್ಕಳಿದ್ದರು. 1997ರಲ್ಲಿ ಮಠದ 54ನೇ ಮಠಾಧಿಪತಿಗಳಾಗಿ ಇವರು ನೇಮಕಗೊಂಡಿದ್ದರು.

2007: ಪೆಪ್ಸಿಕೊದ ಚೇರ್ಮನ್ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಇಂದ್ರಾ ಕೆ. ನೂಯಿ ಅವರನ್ನು ಅಮೆರಿಕ ಭಾರತ ವಾಣಿಜ್ಯ ಮಂಡಳಿಯ (ಯುಎಸ್ಐಬಿಸಿ) ನಿರ್ದೇಶಕ ಮಂಡಳಿಗೆ ನೇಮಕ ಮಾಡಲಾಯಿತು. ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವ ಅಮೆರಿಕದ 250 ಬೃಹತ್ ಉದ್ದಿಮೆ ಸಂಸ್ಥೆಗಳಿಗೆ ಮತ್ತು ಭಾರತದ 24 ಜಾಗತಿಕ ಸಂಸ್ಥೆಗಳಿಗೆ `ಯು ಎಸ್ ಐ ಬಿ ಸಿ' ಸಲಹಾ ರೂಪದ ಸೇವೆ ನೀಡುತ್ತದೆ.

2006: ಕ್ಯಾನ್ಸರ್, ಏಡ್ಸ್, ಮಧುಮೇಹ ಮತ್ತು ರಕ್ತದ ಒತ್ತಡದಂತಹ ರೋಗಗಳನ್ನು ವಾಸಿ ಮಾಡುವಲ್ಲಿಪರಿಣಾಮಕಾರಿ ಫಲ ನೀಡಿರುವ ಗೋಮೂತ್ರ ಇದೀಗ ಗಡಿಯಾರದ ಮುಳ್ಳುಗಳನ್ನು ಚಲಿಸುವಂತೆ ಮಾಡುವಲ್ಲಿಯೂ ಯಶಸ್ವಿಯಾಯಿತು. ಕಛ್ ಮೂಲದ ವರ್ಧಮಾನ ಜೀವದಯಾ ಕೇಂದ್ರದ ಆಡಳಿತ ಟ್ರಸ್ಟಿ ವಸಂತಜಿ ಪ್ರೇಮ್ ಜಿ ಸೋನಿ ಅವರು ಆನಂದದಲ್ಲಿ ಗುಜರಾತ್ ಪ್ರದೇಶ ಆಯುರ್ವೇದ ಸಮ್ಮೇಳನದ ಆಶ್ರಯದಲ್ಲಿ ನಡೆದ ಆಯುರ್ವೇದ ಮೇಳದಲ್ಲಿ ಇದನ್ನು ಯಶಸ್ವಿಯಾಗಿ ಪ್ರಯೋಗ ಮಾಡಿ ತೋರಿಸಿದರು. ಅವರು ಮಾಡಿದ್ದು ಇಷ್ಟೆ: ಒಂದು ಲೋಟದದಲ್ಲಿ ಗೋಮೂತ್ರ ತುಂಬಿ ಅದರಲ್ಲಿ ತಾಮ್ರ ಹಾಗೂ ಸತುವಿನ ಒಂದೊಂದು ವಿದ್ಯುತ್ ವಾಹಕಗಳನ್ನು (ಎಲೆಕ್ಟ್ರೋಡ್) ಮುಳುಗಿಸಿದರು. ವಿದ್ಯುತ್ ಸಂಪರ್ಕ ಕಲ್ಪಿಸುವ ಈ ಪ್ರಕ್ರಿಯೆ ಪೂರ್ಣಗೊಂಡಾಗ ವಿದ್ಯುತ್ ಸಂಚಾರ ಆರಂಭವಾಗಿ ಗಡಿಯಾರದ ಮುಳ್ಳುಗಳು ಟಿಕ್ ಟಿಕ್ ಸದ್ದು ಮಾಡುತ್ತಾ ಚಲಿಸಲಾರಂಭಿಸಿದವು. `ಗೋಮೂತ್ರದಿಂದ ಈ ರೀತಿ ಉತ್ಪನ್ನವಾಗುವ ವಿದ್ಯುತ್ತಿನಿಂದ ಗಡಿಯಾರವನ್ನು 15 ದಿನಗಳ ಕಾಲ ನಿರಂತರವಾಗಿ ಚಲಾಯಿಸಬಹುದು. ಗೋಮೂತ್ರದ ವಿದ್ಯುತ್ ಶಕ್ತಿಯ ಬಗ್ಗೆ 1999ರಿಂದಲೇ ಪ್ರಯೋಗ ನಡೆಸುತ್ತಿದ್ದೇನೆ. ಎಲೆಕ್ಟ್ರಾನಿಕ್ ಕ್ಯಾಲ್ಕುಲೇಟರುಗಳು ಹಾಗೂ ರೇಡಿಯೋಗಳನ್ನು ಸಹಾ ಗೋಮೂತ್ರ ಬಳಸಿ ಚಲಾಯಿಸುವಲ್ಲಿ ಯಶಸ್ವಿಯಾಗಿದ್ದೇನೆ' ಎಂದು ಅವರು ಪ್ರತಿಪಾದಿಸಿದರು. ವರ್ಧಮಾನ ಜೀವದಯಾ ಕೇಂದ್ರವು ಗೋಶಾಲೆಯೊಂದನ್ನು ನಡೆಸುತ್ತಿದ್ದು ಅಲ್ಲಿ ಭಾರಿ ಪ್ರಮಾಣದಲ್ಲಿ ಹಸುಗಳನ್ನು ಸಾಕುತ್ತಿದೆ.

2006: ಉತ್ತರ ಬಂಗಾಳದ ನ್ಯೂ ಜಲಪೈಗುರಿ ಸಮೀಪದ ಬೆಲಕೋಬ ನಿಲ್ದಾಣದಲ್ಲಿ, ಹಲ್ದಿಬಾರಿ-ಸಿಲಿಗುರಿ ಪ್ಯಾಸೆಂಜರ್ ರೈಲಿನಲ್ಲಿ ಸಂಜೆ ಸಂಭವಿಸಿದ ಭಾರಿ ಬಾಂಬ್ ಸ್ಫೋಟದಲ್ಲಿ 8 ಪ್ರಯಾಣಿಕರು ಮೃತರಾಗಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಅನಧಿಕೃತ ಮೂಲಗಳ ಪ್ರಕಾರ ಸತ್ತವರ ಸಂಖ್ಯೆ 15 ಎಂದು ಹೇಳಲಾಗಿದೆ. ರೈಲುಗಾಡಿಯ ಬೋಗಿಯೊಂದರ ಶೌಚಾಲಯದಲ್ಲಿ ಉಗ್ರಗಾಮಿಗಳು ಬಾಂಬನ್ನು ಅಡಗಿಸಿ ಇಟ್ಟಿದ್ದರು ಎಂದು ಶಂಕಿಸಲಾಗಿದೆ.

2006: ತ್ವರಿತವಾಗಿ ಆರ್ಥಿಕ ಬೆಳವಣಿಗೆ ಸಾಧಿಸುತ್ತಿರುವ ಭಾರತ ಮತ್ತು ಚೀನಾ ದೇಶಗಳ ಪರಸ್ಪರ ಬಾಂಧವ್ಯ ಸುಧಾರಣೆಗೆ ಒತ್ತು ಸಿಗುವ ನಿರೀಕ್ಷೆಗಳ ಮಧ್ಯೆ ಚೀನಾ ಅಧ್ಯಕ್ಷ ಹು ಜಿಂಟಾವೊ ಅವರು ನವದೆಹಲಿಗೆ ಆಗಮಿಸಿದರು. ಉನ್ನತ ಮಟ್ಟದ ನಿಯೋಗದ ನೇತೃತ್ವ ವಹಿಸಿರುವ ಜಿಂಟಾವೊ ಅವರನ್ನು ಪಾಲಂ ವಿಮಾನ ನಿಲ್ದಾಣದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣವ್ ಮುಖರ್ಜಿ ಹಾಗೂ ಕೇಂದ್ರ ಸಚಿವ ಕಪಿಲ್ ಸಿಬಲ್ ಸ್ವಾಗತಿಸಿದರು. 10 ವರ್ಷಗಳ ಅವಧಿಯಲ್ಲಿ ಭಾರತಕ್ಕೆ ಭೇಟಿ ನೀಡಿದ ಮೊದಲ ಚೀನೀ ರಾಷ್ಟ್ರಪತಿ ಜಿಂಟಾವೊ.

2005: ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಬೆಂಗಳೂರಿನಲ್ಲಿ ಕರ್ನಾಟಕ ವಿಧಾನಮಂಡಲ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದರು. ಉಜ್ವಲ ಕರ್ನಾಕಕಕ್ಕೆ ನೀಲನಕ್ಷೆಯನ್ನು ಪ್ರಕಟಿಸಿದರು.

1999: ಖ್ಯಾತ ಗಾಯಕಿ ಲತಾ ಮಂಗೇಶ್ಕರ್, ಹಿರಿಯ ಪತ್ರಕರ್ತ ರಾಮಸ್ವಾಮಿ, ನ್ಯಾಯಮೂರ್ತಿ ಫಾಲಿ ಎಸ್. ನಾರಿಮನ್ ಮತ್ತು ಹಿರಿಯ ಆರೆಸ್ಸೆಸ್ ನಾಯಕ ನಾನಾಜಿ ದೇಶಮುಖ್ ಅವರನ್ನು ರಾಜ್ಯಸಭೆ ಸದಸ್ಯರಾಗಿ ನಾಮಕರಣ ಮಾಡಲಾಯಿತು.

1995: ತಾನು ರಾಜಕುಮಾರ ಚಾರ್ಲ್ಸ್ ಅವರಿಗೆ ವಿಧೇಯಳಾಗಿಲ್ಲ ಎಂದು ರಾಜಕುಮಾರಿ ಡಯಾನಾ ಬಿಬಿಸಿಯಲ್ಲಿ ಪ್ರಸಾರವಾದ ಸಂದರ್ಶನವೊಂದರಲ್ಲಿ ಒಪ್ಪಿಕೊಂಡರು.

1981: ಭಾರತದ ಎರಡನೇ ಭೂ ವೀಕ್ಷಣಾ ಉಪಗ್ರಹ `ಭಾಸ್ಕರ-2'ನ್ನು ಮಾಸ್ಕೋದ ಬಾಹ್ಯಾಕಾಶ ಉಪಗ್ರಹ ನಿಲ್ದಾಣದಿಂದ ಯಶಸ್ವಿಯಾಗಿ ಅಂತರಿಕ್ಷಕ್ಕೆ ಹಾರಿಬಿಡಲಾಯಿತು.

1975: ಸ್ಪೇನಿನ ಜನರಲ್ ಫ್ರಾನ್ಸಿಸ್ಕೊ ಫ್ರಾಂಕೊ ತಮ್ಮ 82ನೇ ವಯಸ್ಸಿನಲ್ಲಿ ನಿಧನರಾದರು. ಹೆಚ್ಚು ಕಡಿಮೆ 40 ವರ್ಷಗಳ ಕಾಲ ಅವರು ಸ್ಪೇನಿನ ಆಡಳಿತ ನಡೆಸಿದರು.

1970: ಸಾಹಿತಿ ಟಿ. ಪದ್ಮ ಜನನ.

1962: ಕ್ಯೂಬಾದ ಕ್ಷಿಪಣಿ ಬಿಕ್ಕಟ್ಟು ಅಂತ್ಯಗೊಂಡಿತು. ಸೋವಿಯತ್ ಯೂನಿಯನ್ ಕ್ಯೂಬಾದಲ್ಲಿದ್ದ ತನ್ನ ಎಲ್ಲ ಕ್ಷಿಪಣಿ ಹಾಗೂ ಬಾಂಬರುಗಳನ್ನು. ಅಮೆರಿಕ ದ್ವೀಪದ ಮೇಲೆ ವಿಧಿಸಿದ್ದ ದಿಗ್ಬಂಧನವನ್ನು ರದ್ದು ಪಡಿಸಿತು.

1952: ಸಾಹಿತಿ ಕಮಲಾ ಹೆಮ್ಮಿಗೆ ಜನನ.

1947: ಬ್ರಿಟನ್ನಿನ ರಾಜಕುಮಾರಿ ಎಲಿಜಬೆತ್ ಮತ್ತು ಎಡಿನ್ ಬರೋದ ಡ್ಯೂಕ್ ಫಿಲಿಪ್ ಮೌಂಟ್ ಬ್ಯಾಟನ್ ಅವರ ವಿವಾಹ ವೆಸ್ ್ಟಮಿನ್ ಸ್ಟರ್ ಅಬ್ಬೆಯಲ್ಲಿ ನಡೆಯಿತು.

1944: ಸಾಹಿತಿ ದಾಸೇಗೌಡ (ಜಿವಿಡಿ) ಜನನ.

1931: ಸಾಹಿತಿ ವಿ.ಜೆ. ನಾಯಕ ಜನನ.

1918: ಸಾಹಿತಿ ಇ.ಆರ್. ಸೇತೂರಾಂ ಜನನ.

1900: ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾದ ದೇಶಭಕ್ತರಿಗೆ ಕನ್ನಡ ದೇಶಭಕ್ತಿ ಗೀತೆಗಳನ್ನು ರಚಿಸಿಕೊಟ್ಟ `ಭಾರತಿ' ಕಾವ್ಯನಾಮದ ರಾಜಮ್ಮ (20-11-1900ರಿಂದ 24-10-1984) ಅವರು ರಾಘವಾಚಾರ್ಯರು- ಸೀತಮ್ಮ ದಂಪತಿಯ ಮಗನಾಗಿ ತುಮಕೂರಿನಲ್ಲಿ ಜನಿಸಿದರು.

1889: ಅಮೆರಿಕದ ಖಗೋಳ ವಿಜ್ಞಾನಿ ಎಡ್ವಿನ್ ಪೊವೆಲ್ ಹಬಲ್ (1889-1953) ಹುಟ್ಟಿದ ದಿನ. ವಿಶ್ವವು ವಿಸ್ತಾರಗೊಳ್ಳುತ್ತಿದೆ ಎಂಬುದಕ್ಕೆ ಇವರು ಮೊತ್ತ ಮೊದಲ ಸಾಕ್ಷ್ಯ ಒದಗಿಸಿದರು. ಇಂದು ಇವರು `ಎಕ್ಸ್ ಟ್ರಾ ಗ್ಯಾಲಕ್ಟಿಕ್ ಅಸ್ಟ್ರಾನಮಿ'ಯ ಸ್ಥಾಪಕರೆಂದೇ ಖ್ಯಾತರಾಗಿದ್ದಾರೆ.

1873: ಪ್ರತಿಸ್ಪರ್ಧಿ ನಗರಗಳಾಗಿದ್ದ ಬುಡಾ ಮತ್ತು ಪೆಸ್ಟ್ ಒಂದಾಗಿ ಹಂಗರಿಯ ರಾಜಧಾನಿ `ಬುಡಾಪೆಸ್ಟ್' ರೂಪುಗೊಂಡಿತು.

1659: ಮರಾಠಾ ಯೋಧ ಶಿವಾಜಿ ತನ್ನ ಕೈಗೆ ಅಂಟಿಸಲಾಗಿದ್ದ `ವ್ಯಾಘ್ರನಖ' (ಹುಲಿ ಉಗುರು) ಬಳಸಿ ಬಿಜಾಪುರದ ಅದಿಲ್ ಶಹಾನ ಜನರಲ್ ಅಫ್ಜಲ್ ಖಾನನನ್ನು ಕೊಂದು ಹಾಕಿದ. ಸಂಧಾನದ ಹೆಸರಿನಲ್ಲಿ ಶಿವಾಜಿಯ ಹತ್ಯೆಗಾಗಿ ನಡೆದಿದ್ದ ಸಂಚೊಂದು ಈ ರೀತಿ ವಿಫಲಗೊಂಡಿತು. ಈ ಘಟನೆಯ ಬಳಿಕ ಶಿವಾಜಿ `ಹೀರೋ' ಆಗಿ ಬೆಳೆದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Wednesday, December 9, 2009

ಇಂದಿನ ಇತಿಹಾಸ History Today ನವೆಂಬರ್ 19

 ಇಂದಿನ ಇತಿಹಾಸ

ನವೆಂಬರ್ 19
ಪ್ರಸಕ್ತ ವರ್ಷದ `ಇಂದಿರಾ ಗಾಂಧಿ ಶಾಂತಿ, ನಿಶ್ಶಸ್ತ್ರೀಕರಣ ಹಾಗೂ ಅಭಿವೃದ್ಧಿ' ಪ್ರಶಸ್ತಿಗೆ ವಿಯೆನ್ನಾದಲ್ಲಿರುವ ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (ಐಎಇಎ)ಯ ಮಹಾನಿರ್ದೇಶಕ ಮೊಹಮ್ಮದ್ ಎಲ್ ಬರಾಡಿ ಆಯ್ಕೆಯಾದರು.

2008: ದಾಳಿಂಬೆ ಬೆಳೆ ಬಾಧಿಸುತ್ತಿರುವ ದುಂಡಾಣು ಅಂಗಮಾರಿ ರೋಗ ನಿಯಂತ್ರಣಕ್ಕೆ ಗೋಮೂತ್ರ ರಾಮಬಾಣವಾಗಿದೆ ಎಂದು ರಾಜ್ಯ ದಾಳಿಂಬೆ ಬೆಳೆಗಾರರ ಸಂಘದ ಉಪಾಧ್ಯಕ್ಷ ಜಿ.ರುದ್ರಗೌಡ ಕುಷ್ಟಗಿಯಲ್ಲಿ ಹೇಳಿದರು. ಸಿಂಡಿಕೇಟ್ ಬ್ಯಾಂಕ್ ಸ್ಥಳೀಯ ಶಾಖೆಯಲ್ಲಿ `ಗ್ರಾಹಕರ ಸಮಾವೇಶ'ದಲ್ಲಿ ಮುಖ್ಯ ಅತಿಥಿಯಾಗಿ  ಅವರು ಮಾತನಾಡುತ್ತಿದ್ದರು. ದುಂಡಾಣು ಅಂಗಮಾರಿ ರೋಗದಿಂದಾಗಿ ದಾಳಿಂಬೆ ಬೆಳೆಗಾರರು ಕಂಗಾಲಾಗಿದ್ದಾರೆ. ದುಬಾರಿ ಔಷಧಗಳನ್ನು ಸಿಂಪಡಿಸುವ ಮೂಲಕ ಎಷ್ಟೇ ನಿಯಂತ್ರಣ ಕ್ರಮಗಳನ್ನು ಕೈಗೊಂಡರೂ ಹತೋಟಿಗೆ ಬಾರದ ಕಾರಣ ರೈತರು ಹತಾಶರಾಗಿದ್ದಾರೆ. ಆದರೆ ಗೋಮೂತ್ರವನ್ನು ಸಿಂಪಡಿಸಿದ ಅನೇಕ ರೈತರು ಅದರಲ್ಲಿ ಯಶಸ್ವಿಯಾಗಿರುವ ಉದಾಹರಣೆಗಳಿದ್ದು ಅಂಥ ಅನುಭವಿ ರೈತರಿಂದ ಮಾಹಿತಿ ಪಡೆಯಬೇಕು ಎಂದು ದಾಳಿಂಬೆ ಬೆಳೆಗಾರರಿಗೆ ಸಲಹೆ ನೀಡಿದರು. ಸದರಿ ರೋಗ ನಿಯಂತ್ರಣಕ್ಕೆ ಸಾಧ್ಯವಿರುವ ಎಲ್ಲ ಸಂಶೋಧನೆಗಳನ್ನು ನಡೆಸಲಿ ಎಂಬ ಕಾರಣಕ್ಕೆ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳಿಗೆ ಸರ್ಕಾರ ರೂ 1 ಕೋಟಿ ಧನ ಸಹಾಯ ನೀಡಿದೆ. ಆದರೆ ಈವರೆಗೂ ವಿಜ್ಞಾನಿಗಳು ಸೂಕ್ತ ಪರಿಹಾರ ಸೂಚಿಸಿಲ್ಲ ಎಂದು ಅವರು ವಿಷಾದಿಸಿದರು.

2008: ಪ್ರಸಕ್ತ ವರ್ಷದ `ಇಂದಿರಾ ಗಾಂಧಿ ಶಾಂತಿ, ನಿಶ್ಶಸ್ತ್ರೀಕರಣ ಹಾಗೂ ಅಭಿವೃದ್ಧಿ' ಪ್ರಶಸ್ತಿಗೆ ವಿಯೆನ್ನಾದಲ್ಲಿರುವ ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (ಐಎಇಎ)ಯ ಮಹಾನಿರ್ದೇಶಕ ಮೊಹಮ್ಮದ್ ಎಲ್ ಬರಾಡಿ ಆಯ್ಕೆಯಾದರು. ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿಯ ಅಂತಾರಾಷ್ಟ್ರೀಯ ನ್ಯಾಯಮಂಡಳಿಯು, ಸೇನಾ ಉದ್ದೇಶಗಳಿಗೆ ಅಣುಶಕ್ತಿ ಬಳಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಅದರ ಶಾಂತಿಯುತ ಬಳಕೆಗೆ ಸ್ಥಿರ ಬೆಂಬಲ ನೀಡಿರುವ ಸೇವೆಯನ್ನು ಪರಿಗಣಿಸಿ ಎಲ್ ಬರಾಡಿ ಅವರಿಗೆ ಪ್ರಶಸ್ತಿಗೆ ನೀಡಲು ನಿರ್ಧರಿಸಿತು.

2008: ಅಂತಾರಾಷ್ಟ್ರೀಯ ನೌಕಾ ಪಡೆಗಳ ಕಣ್ಗಾವಲಿನ ನಡುವೆಯೂ ಸೋಮಾಲಿಯಾ ಕಡಲ್ಗಳ್ಳರು ಮತ್ತೊಂದು ಹಡಗನ್ನು ವಶಕ್ಕೆ ತೆಗೆದುಕೊಂಡರು. ಕೆಲವು ಮಂದಿ ಭಾರತೀಯರ ಸಹಿತ 25 ಮಂದಿ ಒತ್ತೆಯಾಳುಗಳಾದರು. ವಿಶ್ವದ ಅತ್ಯಂತ ದೊಡ್ಡ ತೈಲ ಸಾಗಾಟದ ಹಡಗು ಸೌದಿ ಅರೇಬಿಯಾದ `ಸಿರಿಯಸ್ ಸ್ಟಾರ'ನ್ನು ವಶಕ್ಕೆ ತೆಗೆದುಕೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆಯಿತು.

2008: ಹಿರಿಯ ತಮಿಳು ಚಿತ್ರ ನಟ ಹಾಗೂ ರಂಗಭೂಮಿ ಕಲಾವಿದ ಎಂ.ಎನ್. ನಂಬಿಯಾರ್ (92) ಚೆನ್ನೈಯಲ್ಲಿ ತೀವ್ರ ಉಸಿರಾಟ ತೊಂದರೆಯಿಂದ ಮೃತರಾದರು. ಖಳನಾಯಕನ ಪಾತ್ರದಲ್ಲಿ ಚಿತ್ರಪ್ರೇಮಿಗಳ ಮನ ಗೆದ್ದಿದ್ದ ಅವರು, ವೃದ್ಧಾಪ್ಯದಿಂದ ಬಳಲುತ್ತಿದ್ದರು. ಅವರು ಪತ್ನಿ, ಮಗಳು ಹಾಗೂ ಮಗ ಬಿಜೆಪಿಯ ನಾಯಕ ಸುಕುಮಾರನ್ ನಂಬಿಯಾರ್ ಅವರನ್ನು ಅಗಲಿದರು. ನಂಬಿಯಾರ್ ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.

2008: ಪ್ರಧಾನಿ ಆಗಬೇಕೆಂದು ಬಾಲ್ಯದಿಂದಲೇ ಕನಸು ಕಾಣುತ್ತಿದ್ದ ಕೋಟ್ಯಧಿಪತಿ ಜಾನ್ ಕೀ ನ್ಯೂಜಿಲೆಂಡಿನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು.

2008: ಮಲೆನಾಡಿನಲ್ಲಿ ಪೊಲೀಸರು ಮತ್ತು ನಕ್ಸಲರ ನಡುವಿನ ಕಾದಾಟ ಒಂದೂವರೆ ವರ್ಷದ ವಿರಾಮದ ನಂತರ ಮತ್ತೆ ಮುಂದುವರೆಯಿತು. ಹಸಿರು ವನರಾಶಿಯ ಮಧ್ಯೆ ರಕ್ತದ ಓಕುಳಿ ಮತ್ತೆ ಹರಿಯಿತು. ಹೊರನಾಡು ಸಮೀಪದ ಮಾವಿನಹೊಲ ಬಳಿಯ ಮುತ್ತಿನಕಡಿವೆ ಪ್ರದೇಶದಲ್ಲಿ ಹಿಂದಿನ ದಿನ ಮಧ್ಯರಾತ್ರಿಯಿಂದ ಈದಿನ ಬೆಳಗಿನ ಜಾವದವರೆಗೆ ಪೊಲೀಸರು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲರು ಮತ್ತು ಒಬ್ಬ  ಕೆ ಎಸ್ ಆರ್ ಪಿ ಪೊಲೀಸ್ ಪೇದೆ ಗುರುಪ್ರಸಾದ್ ಹತರಾದರು.

2008: ಗ್ರಾಮಗಳನ್ನು ಸಂಪೂರ್ಣ ಅಭಿವೃದ್ಧಿಪಡಿಸುವ `ಸುವರ್ಣ ಗ್ರಾಮ' ಯೋಜನೆಯಡಿ ಹೊಸದಾಗಿ ಇನ್ನೂ 1000 ಗ್ರಾಮಗಳನ್ನು ಕೈಗೆತ್ತಿಕೊಳ್ಳಲು ಸಂಪುಟ ಸಭೆ ನಿರ್ಧರಿಸಿತು. ಹಿಂದಿನ ಸಮ್ಮಿಶ್ರ ಸರ್ಕಾರ `1000 ಗ್ರಾಮ: 1000 ಕೋಟಿ' ಯೋಜನೆಯಡಿ ಸುವರ್ಣ ಗ್ರಾಮ ಕಾರ್ಯಕ್ರಮವನ್ನು ರೂಪಿಸಿತ್ತು. ಅದನ್ನೇ ಈಗಲೂ ಮುಂದುವರೆಸಲು ಸಂಪುಟ ಒಪ್ಪಿಗೆ ನೀಡಿತು ಎಂದು ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

2008: ಬೆಂಗಳೂರಿನ ಅರಮನೆ ಮೈದಾನದಲ್ಲಿ ಲಕ್ಷಾಂತರ ಕಾರ್ಯಕರ್ತರ `ಕಾಯಕಲ್ಪ ಪ್ರತಿಜ್ಞಾ ಸಮಾವೇಶ'ದಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರ ಸ್ವಾಮಿ ಅವರು ಜನತಾದಳ (ಎಸ್) ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಅಧಿಕಾರಿ ಸ್ವೀಕರಿಸಿದರು. ಸಮಾವೇಶಕ್ಕೆ ಲಕ್ಷಾಂತರ ಕಾರ್ಯಕರ್ತರು ಬಂದ ಪರಿಣಾಮವಾಗಿ ಇಡೀ ನಗರದಲ್ಲಿ ವಾಹನ ದಟ್ಟಣೆಯುಂಟಾಗಿ ಟ್ರಾಫಿಕ್ ಜಾಮ್ ಸಮಸ್ಯೆ ತಲೆದೋರಿತು.

2007: ದಕ್ಷಿಣ ಭಾರತದ ಮೊತ್ತ ಮೊದಲ ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರ ಜನತಾದಳ (ಎಸ್) ಕೈಕೊಟ್ಟ ಪರಿಣಾಮವಾಗಿ ಒಂದೇ ವಾರದಲ್ಲಿ ಪತನಗೊಂಡಿತು. ಏಳು ದಿನಗಳ ಹಿಂದೆ ನವೆಂಬರ್ 12ರಂದು ಅಸ್ತಿತ್ವಕ್ಕೆ ಬಂದಿದ್ದ ಸರ್ಕಾರ ಈದಿನ ಕುಸಿದು ಬೀಳುವುದರೊಂದಿಗೆ ರಾಜ್ಯದ ಇತಿಹಾಸದಲ್ಲಿ ಅತ್ಯಂತ ಕಡಿಮೆ ಅವಧಿಯ ಸರ್ಕಾರ ಎಂಬ ದಾಖಲೆಗೂ ಕಾರಣವಾಯಿತು. ಉಭಯ ಪಕ್ಷಗಳ ಮರು ಮೈತ್ರಿಯೂ ಮುರಿದು ಬಿತ್ತು. ಸರ್ಕಾರ ರಚನೆಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಯವರ ಮುಂದೆ ಬಿಜೆಪಿಗೆ ತನ್ನ ಬೆಂಬಲ ಇದೆ ಎಂದು ಹೇಳಿದ್ದ ಜೆಡಿಎಸ್, ಅವಿಶ್ವಾಸದ ಪರ ಮತ ಚಲಾಯಿಸುವ ಸ್ಪಷ್ಟ ನಿರ್ಧಾರವನ್ನು ಬೆಳಿಗ್ಗೆಯೇ ಕೈಗೊಂಡಿತ್ತು. ಇದರಿಂದ ತಮ್ಮ ಸೋಲು ಖಚಿತ ಪಡಿಸಿಕೊಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸಮತ ಯಾಚನೆಯ ನಿರ್ಣಯದ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆದಿರುವಾಗಲೇ ಸದನದಿಂದ ಹೊರ ನಡೆದು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ನಂತರ ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದರು.

2007: ಪಾಕಿಸ್ಥಾನದ ಅಧ್ಯಕ್ಷರಾಗಿ ಪರ್ವೇಜ್ ಮುಷರಫ್ ಅವರ ಪುನರಾಯ್ಕೆಯನ್ನು ಪ್ರಶ್ನಿಸಿದ್ದ ಆರು ಅರ್ಜಿಗಳ ಪೈಕಿ ಐದನ್ನು ಸುಪ್ರೀಂಕೋರ್ಟ್ ವಜಾ ಮಾಡಿತು. ಒಂದು ಅರ್ಜಿಯ ವಿಚಾರಣೆಗೆ ಮಾತ್ರ ದಿನ ನಿಗದಿ ಪಡಿಸಿತು. ಈ ಮೊದಲು 11 ಸದಸ್ಯರಿದ್ದ ಪೀಠ ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಆದರೆ ನ. 3 ರಂದು ತುರ್ತು ಪರಿಸ್ಥಿತಿ ಹೇರಿದ ಮುಷರಫ್ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಪೀಠದಲ್ಲಿದ್ದ ಬಹುತೇಕ ನ್ಯಾಯಮೂರ್ತಿಗಳನ್ನು ವಜಾ ಮಾಡಿದ್ದರು. ಪ್ರಸ್ತುತ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಬ್ದುಲ್ ಹಮೀದ್ ಡೋಗರ್ ನೇತೃತ್ವದ 10 ಸದಸ್ಯರ ಪೂರ್ಣಪೀಠ ಈ ಪ್ರಕರಣದ ವಿಚಾರಣೆ ನಡೆಸಿತು. ವಜಾಗೊಂಡ 5 ಅರ್ಜಿಗಳಲ್ಲಿ ನಿವೃತ್ತ ನ್ಯಾಯಮೂರ್ತಿ ವಾಜಿಹ್ದುದೀನ್ ಅಹ್ಮದ್ ಹಾಗೂ ಪಾಕಿಸ್ಥಾನ ಪೀಪಲ್ಸ್ ಪಾರ್ಟಿ ನಾಯಕ ಮಕ್ದೂಮ್ ಅಮಿನ್ ಫಹಿನ್ ಅವರು ಸಲ್ಲಿಸಿದ್ದ ಅರ್ಜಿಗಳೂ ಸೇರಿದ್ದವು.

2007: 65 ವರ್ಷ ವಯಸ್ಸಿಗೂ ಹೆಚ್ಚು ವಯೋಮಾನದ ಹಿರಿಯ ನಾಗರಿಕರ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿತು. ಇದರಿಂದ ಸುಮಾರು 16 ದಶಲಕ್ಷ ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ. ಬೊಕ್ಕಸಕ್ಕೆ ವಾರ್ಷಿಕ 3,772 ಕೋಟಿ ರೂಪಾಯಿಗಳಷ್ಟು ಹೊರೆಯಾಗಲಿದೆ. `ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧರ ಪಿಂಚಣಿ' ಯೋಜನೆಯ ಪ್ರಕಾರ ಪ್ರತಿಯೊಬ್ಬ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ಪ್ರತಿ ತಿಂಗಳು 200 ರೂಪಾಯಿಗಳನ್ನು ನೀಡುತ್ತದೆ. ರಾಜ್ಯ ಸರ್ಕಾರಗಳು ಈ ಮೊತ್ತಕ್ಕೆ 200 ರೂಪಾಯಿಗಳನ್ನು ಸೇರಿಸಿ ಒಟ್ಟು ರೂ 400 ಕೊಡಬೇಕಾಗುತ್ತದೆ. ಈ ಪಿಂಚಣಿ ಯೋಜನೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ನವದೆಹಲಿಯಲ್ಲಿ ಉದ್ಘಾಟಿಸಿದರು.

2007: ಅಂಪೈರ್ ತೀರ್ಪಿಗೆ ಗೌರವ ನೀಡದ ಭಾರತ ತಂಡದ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮ್ಯಾಚ್ ರೆಫರಿ ರೋಷನ್ ಮಹಾನಾಮಾ ಅವರು ಪಂದ್ಯ ಶುಲ್ಕದ ಶೇಕಡಾ ಇಪ್ಪತ್ತರಷ್ಟು ಮೊತ್ತವನ್ನು ದಂಡವಾಗಿ ವಿಧಿಸಿದರು. ಉಮರ್ ಗುಲ್ ಬೌಲಿಂಗಿನಲ್ಲಿ ವಿಕೆಟ್ ಕೀಪರ್ ಸರ್ಫರಾಜ್ ಅಹ್ಮದ್ ಚೆಂಡನ್ನು ಹಿಡಿತಕ್ಕೆ ಪಡೆದಾಗ ಅಂಪೈರ್ ಸುರೇಶ್ ಶಾಸ್ತ್ರಿ ಅವರು ಯುವರಾಜ್ ಔಟ್ ಎಂದು ತೀರ್ಪು ನೀಡಿದ್ದರು. ಇದನ್ನು ಆಗ ಯುವರಾಜ್ ಆಕ್ಷೇಪಿಸಿದ್ದರು.

2006: ಶಾಂತಿ, ನಿಶ್ಯಸ್ತ್ರೀಕರಣ ಮತ್ತು ಅಭಿವೃದ್ಧಿಗೆ ನೀಡಲಾಗುವ 2005ನೇ ಸಾಲಿನ `ಇಂದಿರಾಗಾಂಧಿ ಶಾಂತಿ ಪ್ರಶಸ್ತಿ'ಯನ್ನು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಆಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜೈ  ಅವರಿಗೆ ಪ್ರದಾನ ಮಾಡಿದರು.

2006: ಮುಂಬೈ ಕನ್ನಡಿಗರಲ್ಲಿ ಮನೆ ಮಾತಾಗಿರುವ ರಂಗ ನಿರ್ದೇಶಕ ಭರತ್ ಕುಮಾರ್ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿಯು `ಕೆ. ಮಾಸ್ಟರ್ ಹಿರಣ್ಣಯ್ಯ ಶತಮಾನೋತ್ಸವ ದತ್ತಿ ನಿಧಿ' ಪ್ರಶಸ್ತಿ ನೀಡಿ ಗೌರವಿಸಿತು.

2006: ತಲಕಾಡಿನಲ್ಲಿ ಸಹಸ್ರಮಾನದ ಮೊತ್ತ ಮೊದಲ ಪಂಚಲಿಂಗ ದರ್ಶನದ ಪೂಜಾ ವಿಧಿ ವಿಧಾನಗಳು ಮಧ್ಯರಾತ್ರಿ ಬಳಿಕ ಸಡಗರದೊಂದಿಗೆ ಆರಂಭವಾಯಿತು. ಒಂದು ಲಕ್ಷಕ್ಕೂ  ಹೆಚ್ಚು ಮಂದಿ ಭಕ್ತರು ಪಂಚಲಿಂಗ ದರ್ಶನಾಕಾಂಕ್ಷಿಗಳಾಗಿ ತಲಕಾಡಿಗೆ ಬಂದಿದ್ದರು.

2006: ತಾತ್ಕಾಲಿಕ ಕಾರ್ಮಿಕರಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥ ಪಡಿಸುವಾಗ ಭಾವನೆಗಳು ಮತ್ತು ಅನುಕಂಪ ಮಾನದಂಡ ಆಗಬಾರದು ಎಂದು ಸುಪ್ರೀಂ ಕೋರ್ಟ್ ಕೆಳಹಂತದ ನ್ಯಾಯಾಲಯಗಳಿಗೆ ಸೂಚಿಸಿತು. ತಾತ್ಕಾಲಿಕ ನೌಕರರಿಗೆ ಖಾಯಂ ಹುದ್ದೆಗಳ ಮೇಲೆ ಹಕ್ಕಿಲ್ಲ. ತಾತ್ಕಾಲಿಕ ನೌಕರರಿಗೆ ಸಂಬಂಧಿಸಿದ ಪ್ರಕರಣಗಳನ್ನು ಕಾನೂನು ಮಿತಿಯಲ್ಲೇ ಇತ್ಯರ್ಥಪಡಿಸಬೇಕು ಎಂದೂ ನ್ಯಾಯಮೂರ್ತಿ ಎಸ್.ಬಿ.ಸಿನ್ಹಾ ಮತ್ತು ಮಾರ್ಕಾಂಡೇಯ ಕಟ್ಜು ಅವರ ಪೀಠ ಹೇಳಿತು. ತಾತ್ಕಾಲಿಕ ಮತ್ತು ಕಾಯಂ ನೌಕರರ ನಡುವಿನ ವ್ಯತ್ಯಾಸ ಸ್ಪಷ್ಟವಾಗಿದೆ. ಕಾಯಂ ನೌಕರರಿಗೆ ಹುದ್ದೆಯ ಮೇಲೆ ಹಕ್ಕಿದೆ; ತಾತ್ಕಾಲಿಕ ನೌಕರರಿಗೆ ಇಲ್ಲ. ತನ್ನ ಸೇವಾವಧಿ ಇರುವವರೆಗೆ (ವಜಾ ಆಗದ್ದಿದರೆ) ನೌಕರಿಯಲ್ಲಿ ಮುಂದುವರಿವ ಹಕ್ಕು ಕಾಯಂ ನೌಕರರಿಗೆ ಮಾತ್ರವೇ ಇದೆ ಎಂದು ಪೀಠವು ಸ್ಪಷ್ಟಪಡಿಸಿತು. ಸರ್ಕಾರಿ ಅಧೀನದ ಇಂಡಿಯನ್ ಡ್ರಗ್ಸ್ ಅಂಡ್ ಫಾರ್ಮಾಸ್ಯೂಟಿಕಲ್ಸ್ ಸಂಸ್ಥೆಯ ಕೆಲ ತಾತ್ಕಾಲಿಕ ನೌಕರರು ಸೇವಾ ಅವಧಿಯವರೆಗೂ ನೌಕರಿಯಲ್ಲಿ ಮುಂದುವರಿಯಬಹುದು ಎಂಬುದಾಗಿ ಉತ್ತರಾಂಚಲ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಪೀಠ ಈ ತೀರ್ಮಾನವನ್ನು ಪ್ರಕಟಿಸಿತು. ಕಾಯಂ ನೌಕರರಿಗೆ ನೀಡುವ ವೇತನ ಸೌಲಭ್ಯವನ್ನೇ ತಾತ್ಕಾಲಿಕ ನೌಕರರಿಗೂ ನೀಡಬೇಕು ಎಂದು ಉತ್ತರಾಂಚಲ ಹೈಕೋರ್ಟ್ ಆದೇಶ ನೀಡಿತ್ತು. ಇದನ್ನು ಪೀಠವು ತಳ್ಳಿಹಾಕಿ, `ಈ ಆದೇಶ ಜಾರಿಯಲ್ಲಿರುವ ನಿಯಮಗಳಿಗೆ ವಿರುದ್ಧವಾಗಿದೆ. ತಾತ್ಕಾಲಿಕ ನೌಕರರನ್ನೂ ಸೇವೆಯಲ್ಲಿಮುಂದುವರಿಸಲು ಕೋರ್ಟುಗಳು ನಿರ್ದೇಶಿಸಲಾಗದು' ಎಂದು ಹೇಳಿತು.

2006: ನೆಲದಿಂದ ನೆಲಕ್ಕೆ ಚಿಮ್ಮುವ ಭಾರತದ ಅತ್ಯಾಧುನಿಕ ಮಧ್ಯಂತರಗಾಮೀ ಕ್ಷಿಪಣಿ `ಪೃಥ್ವಿ'ಯ ಪರೀಕ್ಷಾರ್ಥ ಉಡಾವಣೆಯನ್ನು ಒರಿಸ್ಸಾದ ಬಾಲಸೋರಿಗೆ 15 ಕಿ.ಮೀ. ದೂರದಲ್ಲಿರುವ ಚಂಡೀಪುರ ಸಮೀಪದ ಸಮುದ್ರದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಸಂಚಾರಿ ಉಡಾವಣಾ ವಾಹನದಲ್ಲಿ ಇರಿಸಲಾಗಿದ್ದ ದೇಶೀ ನಿರ್ಮಿತ ಏಕಹಂತದ ಕ್ಷಿಪಣಿಯನ್ನು ಬೆಳಗ್ಗೆ 9.55ರ ವೇಳೆಗೆ ಚಂಡೀಪುರದ ಸಮೀಪ ಸಮುದ್ರದಲ್ಲಿನ ಸಮಗ್ರ ಪರೀಕ್ಷಾ ವಲಯದಿಂದ ಹಾರಿಸಲಾಯಿತು. ಈ ಕ್ಷಿಪಣಿಯು 150ರಿಂದ 250 ಕಿ.ಮೀ. ದೂರಕ್ಕೆ ನೆಗೆಯುವ ಸಾಮರ್ಥ್ಯ ಹೊಂದಿದೆ. ಸ್ಫೋಟಕ ವಸ್ತುವಿನ ಸಿಡಿತಲೆ ತೂಕ ಕಡಿಮೆಗೊಳಿಸುವ ಮೂಲಕ ಇದರ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ಸಾಧ್ಯವಿದೆ. 8.65 ಮೀಟರ್ ಎತ್ತರ ಹಾಗೂ 1 ಮೀಟರ್ ದಪ್ಪ ಇರುವ ಕ್ಷಿಪಣಿಯನ್ನು ಈಗಾಗಲೇ ಸೇನೆಗೆ ಸೇರ್ಪಡೆ ಮಾಡಲಾಗಿದೆ. ಒಂದು ಟನ್ ತೂಕದ ಸ್ಫೋಟಕ ಸಿಡಿತಲೆಯೂ ಸೇರಿದಂತೆ 4.6 ಟನ್ ತೂಕದ `ಪೃಥ್ವಿ' ಕ್ಷಿಪಣಿಯು ಘನ ಹಾಗೂ ದ್ರವ ರೂಪದ `ಪ್ರೊಪಲ್ಲೆಂಟ್' ಬಳಸಬಲ್ಲುದು. 150 ಕಿ.ಮೀ. ದೂರದಾಚೆಯ ನಿರ್ದಿಷ್ಟ ಗುರಿಯನ್ನು ಕ್ಷಿಪಣಿಯು 300 ಸೆಕೆಂಡುಗಳಲ್ಲಿ ತಲುಪಬಲ್ಲುದು. ಸಮರ ಕಾಲದ ದಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ನಿರ್ಮಿಸಲಾದ ಈ ಕ್ಷಿಪಣಿಯನ್ನು ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ) ಅಭಿವೃದ್ಧಿ ಪಡಿಸಿದೆ. 700 ಕಿ.ಗ್ರಾಂ. ತೂಕದ ಸಿಡಿತಲೆಯೊಂದಿಗೆ 250 ಕಿ.ಮೀ. ಕ್ರಮಿಸುವ ಸಾಮರ್ಥ್ಯ ಈ ಕ್ಷಿಪಣಿಗೆ ಇದೆ. ಸಿಡಿತಲೆ ತೂಕವನ್ನು 1000 ಕಿ.ಗ್ರಾಂ,ಗೆ ಹೆಚ್ಚಿಸಬಹುದು.

2005: ದಿವಂಗತ ಇಂದಿರಾಗಾಂಧಿ ಅವರ ಸ್ಮರಣಾರ್ಥ ನೀಡಲಾಗುವ 2004ರ ಸಾಲಿನ 'ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ'ಯನ್ನು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಥಾಯ್ಲೆಂಡಿನ ರಾಜಕುಮಾರಿ ಮಹಾ ಚಕ್ರಿ ಸಿರಿಂಧೋರ್ನ್ ಅವರಿಗೆ ನವದೆಹಲಿಯಲ್ಲಿ ಪ್ರದಾನ ಮಾಡಿದರು.

1997: ಬಾಹ್ಯಾಕಾಶಕ್ಕೆ ತೆರಳಿದ ಮೊತ್ತ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಕಲ್ಪನಾ ಚಾವ್ಲಾ ಪಾತ್ರರಾದರು. ಚಾವ್ಲಾ ಮತ್ತು ಇತರ ಐವರು ಇದ್ದ ಶಟಲ್ ನೌಕೆ 16 ದಿನಗಳ ವೈಜ್ಞಾನಿಕ ಅಧ್ಯಯನಕ್ಕಾಗಿ ಬಾಹ್ಯಾಕಾಶಕ್ಕೆ ಹಾರಿತು.

1994: ದಕ್ಷಿಣ ಆಫ್ರಿಕಾದ ಜೊಹಾನ್ನೆಸ್ ಬರ್ಗಿನ ಸನ್ ಸಿಟಿಯಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಐಶ್ವರ್ಯ ರೈ ಅವರು `ವಿಶ್ವ ಸುಂದರಿ' ಕಿರೀಟ ಧರಿಸಿದರು. ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು.

1992: ಕರ್ನಾಟಕದ ಮುಖ್ಯಮಂತ್ರಿಯಾಗಿ ಎಂ. ವೀರಪ್ಪ ಮೊಯಿಲಿ ಅಧಿಕಾರ ಸ್ವೀಕರಿಸಿದರು.

1975: ಸುಶ್ಮಿತಾ ಸೇನ್ ಹುಟ್ಟಿದ ದಿನ. 1994ರಲ್ಲಿ ನಡೆದ `ಭುವನಸುಂದರಿ' ಸ್ಪರ್ಧೆಯಲ್ಲಿ ಇವರು `ಮಿಸ್ ಯುನಿವರ್ಸ್' ಕಿರೀಟ ಧರಿಸುವ ಮೂಲಕ `ಭುವನ ಸುಂದರಿ' ಎನಿಸಿದ ಭಾರತದ ಮೊದಲ ಮಹಿಳೆಯಾದರು.

1951: ಚಿತ್ರನಟಿ ಝೀನತ್ ಅಮಾನ್ ಹುಟ್ಟಿದ ದಿನ.

1947: ಸಾಹಿತಿ ತಿಲಕನಾಥ ಮಂಜೇಶ್ವರ ಜನನ.

1946: ಸಾಹಿತಿ, ಪ್ರಾಧ್ಯಾಪಕ ಸಿದ್ಧರಾಮಯ್ಯ ಅವರು ಗುರುಭಕ್ತಯ್ಯ- ರೇವಮ್ಮ ದಂಪತಿಯ ಮಗನಾಗಿ ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಸಿಂಗಾಪುರ ಗ್ರಾಮದಲ್ಲಿ ಜನಿಸಿದರು.

1945: ಸಾಹಿತಿ ಲೋಕನಾಥ ದೀಕ್ಷಿತ್ ಜನನ.

1928: ರಕ್ಷಾಪುಟದಲ್ಲಿ ಜಪಾನಿನ ಚಕ್ರವರ್ತಿ ಹಿರೊಹಿತೊ ಅವರ ಚಿತ್ರವನ್ನು ಹಾಕುವ ಮೂಲಕ `ಟೈಮ್' ಪತ್ರಿಕೆ ಮೊತ್ತ ಮೊದಲ ಬಾರಿಗೆ ವ್ಯಕ್ತಿಯೊಬ್ಬರ ಭಾವಚಿತ್ರವನ್ನು  ಮುಖಪುಟದಲ್ಲಿ ಪ್ರಕಟಿಸಿತು.

1917: ಇಂದಿರಾ ಗಾಂಧಿ (1917-1984) ಹುಟ್ಟಿದ ದಿನ. ಭಾರತದ ಪ್ರಧಾನಿಯಾಗಿದ್ದ ಇವರು 1984ರ ಅಕ್ಟೋಬರ್ 31ರಂದು ತಮ್ಮ ಸಿಖ್ ಅಂಗರಕ್ಷಕರಿಂದಲೇ ಹತರಾದರು.

1910: ಖ್ಯಾತ ಚಿತ್ರನಟಿ ಗೋಹರ್ ಜನನ.

1893: ನಾಲ್ಕು ಪುಟಗಳ ಮೊತ್ತ ಮೊದಲ ವರ್ಣರಂಜಿತ ಪುರವಣಿ `ನ್ಯೂಯಾರ್ಕ್ ವರ್ಲ್ಡ್' ನಲ್ಲಿ ಪ್ರಕಟಗೊಂಡಿತು.

1877: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಜತೀಂದ್ರನಾಥ ಬ್ಯಾನರ್ಜಿ ಜನನ.

1863: ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರು ಗೆಟ್ಟೀಸ್ಬರ್ಗ್ ಸಮರಭೂಮಿಯಲ್ಲಿ ರಾಷ್ಟ್ರೀಯ ಸಮಾಧಿಯನ್ನು ರಾಷ್ಟ್ರಕ್ಕೆ ಅರ್ಪಿಸಿದರು. ಕೆಲವೇ ತಿಂಗಳುಗಳ ಹಿಂದೆ ಇದೇ ಸ್ಥಳದಲ್ಲಿ 7000 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದರು.

1852: ಕೆನರಾಬ್ಯಾಂಕಿನ ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ಜನಿಸಿದರು.

1838: ಭಾರತೀಯ ತತ್ವಜ್ಞಾನಿ, ಸಮಾಜ ಸುಧಾರಕ ಕೇಶವ ಚಂದರ್ ಸೇನ್ (1838-1884) ಹುಟ್ಟಿದ ದಿನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Tuesday, December 8, 2009

ಇಂದಿನ ಇತಿಹಾಸ History Today ನವೆಂಬರ್ 18


ಇಂದಿನ ಇತಿಹಾಸ

ನವೆಂಬರ್ 18

ಬೆಂಗಳೂರಿನ ಅರಮನೆ ಮೈದಾನ ಈದಿನ ಗೋವಿಗಾಗಿ ಮರುಗಿತು, ಗೋವಿನ ಹಾಡನ್ನು ಹಾಡಿ, ಕುಣಿದು ಕುಪ್ಪಳಿಸಿತು. ಕೊನೆಯಲ್ಲಿ ಲಕ್ಷ ಲಕ್ಷ ಬಾರಿ ಗೋವಿಗೆ ಆರತಿ ಬೆಳಗಿ ಗೋವಿನ ಕಣ್ಣಲ್ಲಿ ವಿಶೇಷ ಆಶಾಕಿರಣವೊಂದನ್ನು ಹೊರಹೊಮ್ಮಿಸಿತು. ಗೋ ಸಂರಕ್ಷಣೆಯ ಸಂದೇಶವನ್ನು ಜಗತ್ತಿಗೆ ನೀಡಿತು.

2008:  ಬ್ರಿಟಿಷ್ ಕೊಲಂಬಿಯಾ ದ್ವೀಪದ ಕಡಲ ತೀರದಲ್ಲಿ ಅಪಘಾತಕ್ಕೊಳಗಾದ ಪುಟ್ಟ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಒಟ್ಟು ಎಂಟು ಮಂದಿಯಲ್ಲಿ ಕೊಡಗು ಜಿಲ್ಲೆ ಸಿದ್ದಾಪುರದ ಬಿದ್ದಂಡ  ಅಜಯ್ ಕಾರ್ಯಪ್ಪ  (34) ಸೇರಿದಂತೆ  ಏಳು ಜನರು ಸಾವನ್ನಪ್ಪಿದರು.

2008:  ಮಾಜಿ ವಿದೇಶಾಂಗ ಸಚಿವ ಕೆ.ನಟವರ್ ಸಿಂಗ್ ಅವರನ್ನು  ಬಹುಜನ ಸಮಾಜಪಕ್ಷದಿಂದ ಉಚ್ಚಾಟಿಸಲಾಯಿತು. ನಾಲ್ಕು ತಿಂಗಳ ಹಿಂದೆ ಬಹುಜನ ಸಮಾಜ ಪಕ್ಷ ಸೇರಿದ್ದ ನಟವರ್ ಸಿಂಗ್ ಅವರನ್ನು ಅಶಿಸ್ತು ಹಾಗೂ ಪಕ್ಷ ವಿರೋಧಿ ಚಟುವಟಿಕೆಯ ಕಾರಣ ನೀಡಿ ಉಚ್ಚಾಟಿಸಲಾಯಿತು.

2008: ನಾಡಿನ ಖ್ಯಾತ ತಬಲಾ ವಾದಕ ರಾಜು ಕುಲಕರ್ಣಿ (54) ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ತಮ್ಮ ತಂದೆ ಸುಮನರಾವ ಕುಲಕರ್ಣಿ ಅವರಲ್ಲಿ ತಬಲಾ ಶಿಕ್ಷಣ ಕಲಿತಿದ್ದ ರಾಜು, 1998ರಿಂದ ಬೆಂಗಳೂರಿನಲ್ಲಿ ನೆಲೆಸಿ, ಸಂಗೀತಾಸಕ್ತರಿಗೆ ತಬಲಾ ಕಲಿಸುತ್ತಿದ್ದರು. ಭಾರತರತ್ನ ಭೀಮಸೇನ ಜೋಶಿ, ಜಸರಾಜ್, ಪಂ. ಮಾಧವ ಗುಡಿ, ಮಾಲಿನಿ ರಾಜೂರಕರ, ಅಜಯ ಚಕ್ರವರ್ತಿ, ಕಂಕಣಾ ಬ್ಯಾನರ್ಜಿ ಸೇರಿದಂತೆ ಇತರ ಅಂತಾರಾಷ್ಟ್ರೀಯ ಖ್ಯಾತಿಯ ಸಂಗೀತ ದಿಗ್ಗಜರಿಗೆ ರಾಜು ಕುಲಕರ್ಣಿ ಅವರು ತಬಲಾ ಸಾಥ್ ನೀಡಿದ್ದರು.

2008: ಪ್ರತಿಷ್ಠಿತ ಆಳ್ವಾಸ್ ನುಡಿಸಿರಿ-2008ರ `ನುಡಿಸಿರಿ' ಪ್ರಶಸ್ತಿಯನ್ನು ನಾಡು ನುಡಿಗೆ ಅನುಪಮ ಸೇವೆ ಸಲ್ಲಿಸಿದ ನಾಡೋಜ ದರೋಜಿ ಈರಮ್ಮ, ಗೊ.ರು. ಚನ್ನಬಸಪ್ಪ, ಡಾ. ಸಾ.ಶಿ. ಮರುಳಯ್ಯ, ಹೊಸ್ತೋಟ ಮಂಜುನಾಥ ಭಾಗವತ, ಡಾ. ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ, ಸದಾನಂದ ಸುವರ್ಣ, ಎ. ಈಶ್ವರಯ್ಯ, ವೈ.ಕೆ. ಮುದ್ದುಕೃಷ್ಣ, ನಾಗತಿಹಳ್ಳಿ ಚಂದ್ರಶೇಖರ, ಬಹ್ರೈನ್ ಕನ್ನಡ ಸಂಘ ಇವರಿಗೆ ನೀಡಲು ತೀರ್ಮಾನಿಸಲಾಯಿತು.

2007: ಬೆಂಗಳೂರಿನ ಅರಮನೆ ಮೈದಾನ ಈದಿನ ಗೋವಿಗಾಗಿ ಮರುಗಿತು, ಗೋವಿನ ಹಾಡನ್ನು ಹಾಡಿ, ಕುಣಿದು ಕುಪ್ಪಳಿಸಿತು. ಕೊನೆಯಲ್ಲಿ ಲಕ್ಷ ಲಕ್ಷ ಬಾರಿ ಗೋವಿಗೆ ಆರತಿ ಬೆಳಗಿ ಗೋವಿನ ಕಣ್ಣಲ್ಲಿ ವಿಶೇಷ ಆಶಾಕಿರಣವೊಂದನ್ನು ಹೊರಹೊಮ್ಮಿಸಿತು. ಗೋ ಸಂರಕ್ಷಣೆಯ ಸಂದೇಶವನ್ನು ಜಗತ್ತಿಗೆ ನೀಡಿತು. 2007ರ ಮೇ ತಿಂಗಳಲ್ಲಿ ಹೊಸನಗರದಲ್ಲಿ ವಿಶ್ವ ಗೋ ಸಮ್ಮೇಳನ ನಡೆಸಿ ಗೋವಿಗಾಗಿಯೇ ತಮ್ಮ ಜೀವನ ಮುಡಿಪು ಎಂದು ಸಾರಿದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ಬಹುದಿನಗಳ ಕನಸಾದ ಕೋಟಿ ನೀರಾಜನ ರಾತ್ರಿ 9ರ ಸುಮಾರಿಗೆ ಸಂಪನ್ನ ಗೊಳ್ಳುತ್ತಿದ್ದಂತೆಯೇ ಇಡೀ ಅರಮನೆ ಮೈದಾನವೇ ಲಕ್ಷ ದೀಪಗಳಿಂದ ಮಿಂಚಿತು. ಪುರುಷರಿಂದ ಆಗದ ಗೋ ಮಾತೆಯ ಸಂರಕ್ಷಣೆಗೆ ತಾವು ಕಂಕಣ ತೊಟ್ಟಿದ್ದೇವೆ ಎಂಬ ಸೂಚ್ಯ ಸಂದೇಶವನ್ನು ಮಾತೆಯರು ಜಗತ್ತಿಗೆ ಸಾರಿ ಹೇಳಿದರು. ಅಪರೂಪದ ದೇಶೀಯ ಗಿರ್ ತಳಿಯ ಗೋವಿನ ಬೃಹತ್ ಪ್ರತಿಕೃತಿಯನ್ನು ಹೊಂದಿದ್ದ ವೇದಿಕೆ ಎಲ್ಲರನ್ನೂ ಸ್ವಾಗತಿಸಿತು. ಕಾರ್ಯಕ್ರಮಕ್ಕೆ ಬಂದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಹಿತ ಎಲ್ಲಾ ಗಣ್ಯರೂ ವೇದಿಕೆಯ ಕೆಳಭಾಗದಲ್ಲೇ ಕುಳಿತು ಗೋ ಮಾತೆಗೆ ತಮ್ಮ ಗೌರವ ಸಲ್ಲಿಸಿದರು. ಭಾಷಣ ಮಾಡುವ ಸಂದರ್ಭದಲ್ಲಿ ಮಾತ್ರ ವೇದಿಕೆಯೇರಿ ಭಾಷಣ ಮುಗಿದಂತೆ ಕೆಳಗಿಳಿದು ಬಂದು ಗೋವಿನ ಮುಂದೆ ತಾವೆಲ್ಲ ಸಣ್ಣವರೇ ಎಂಬುದನ್ನು ಮನಸಾರೆ ಒಪ್ಪಿಕೊಂಡರು. ರಾಘವೇಶ್ವರ ಶ್ರೀಗಳು ಗೋ ಸಂರಕ್ಷಣೆಯ ಮಹಾನ್ ಕಾರ್ಯಕ್ಕೆ ಕೈಹಚ್ಚಿ ಈಗಾಗಲೇ ಹಲವು ಮಹತ್ವದ ಕಾರ್ಯಕ್ರಮ ನಡೆಸಿದ್ದಾರೆ. ಕೋಟಿ ನೀರಾಜನ ಮೂಲಕ ಮತ್ತೊಮ್ಮೆ ಗೋವಿನ ಮಹತ್ವವನ್ನು ಸಾರಿದ್ದಾರೆ. ಅವರು ಬಯಸುವ ರೀತಿಯಲ್ಲಿ ಗೋ ಸಂರಕ್ಷಣೆಯ ಕಾರ್ಯಕ್ಕೆ ಸರ್ಕಾರ ಬದ್ಧ ಎಂದು ಯಡಿಯೂರಪ್ಪ ಹೇಳಿದರು. ಕೇಂದ್ರದ ಯೋಜನಾ ಖಾತೆ ರಾಜ್ಯ ಸಚಿವ ಎಂ. ವಿ. ರಾಜಶೇಖರನ್ ಮಾತನಾಡಿದರು. ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ, ಹೃಷಿಕೇಶದ ಚಿದಾನಂದ ಸರಸ್ವತಿ ಮಹಾರಾಜ್ ಆಶೀರ್ವಚನ ನೀಡಿದರು. ರಾಘವೇಶ್ವರ ಶ್ರೀಗಳು ಮಾತನಾಡಿ, ಗೋವಿಗೆ ಆಗುತ್ತಿರುವ ನೋವನ್ನು ಪರಿಪರಿಯಾಗಿ ವಿವರಿಸಿದರು. `ಗೋ ರಾಷ್ಟ್ರವನ್ನಾಗಿ ಮಾಡುವುದೇ ತಮ್ಮ ಗುರಿ, ಪುರುಷರಿಂದ ಈ ಕಾರ್ಯ ಸಾಧ್ಯವಾಗಿಲ್ಲ. ಹೆಣ್ಣಿನ ನೋವನ್ನು ಹೆಣ್ಣು ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂಬ ಚಿಂತನೆಯೊಂದಿಗೆ ಮಹಿಳೆಯರು ಗೋ ಮಾತೆಯ ಸಂರಕ್ಷಣೆಗೆ ಮುಂದಾಗಬೇಕು ಎಂದು ಸಾರಲು ಈ ಕಾರ್ಯಕ್ರಮ ನಡೆದಿದೆ. ಮಾತೆಯರು ದುರ್ಗೆಯರಾಗಬೇಕು' ಎಂದರು. ವಿ. ಮನೋಹರ್ ನಿರ್ದೇಶನದಲ್ಲಿ ಗೀತ-ಗಾಯನ ಹಾಗೂ ನೃತ್ಯಗಳು ನಡೆದವು. ನಿರುಪಮಾ ಮತ್ತು ರಾಜೇಂದ್ರ ಹಾಗೂ ಬಳಗದ ಗೋ ವಿಶ್ವರೂಪ ದರ್ಶನ ನೃತ್ಯ ರೂಪಕ ಗಮನ ಸೆಳೆಯಿತು. ಭೂಮಿಯ ಆಕಾರದ ವೇದಿಕೆಯಲ್ಲಿ ನಿಂತಿದ್ದ ಜೀವಂತ ಹಸು ನೆಲದ ಒಳಗಿಂದ ಮೇಲೆದ್ದು ಬರುವಂತೆ ವ್ಯವಸ್ಥೆ ಮಾಡಲಾಗಿತ್ತು. ಗೋವು ಮೇಲೆ ಬರುತ್ತಿದ್ದಂತೆಯೇ ಸಹಸ್ರಾರು ಮಹಿಳೆಯರು ಏಕ ಕಾಲಕ್ಕೆ ಗೋವಿಗೆ ದೀಪ ಬೆಳಗಿದರು.

2007: `ಪಕ್ಷಿ ಸಂಕುಲಗಳ ವರ್ಧನೆಗೆ ಕೃತಕ ಗೂಡುಗಳ ಪ್ರಯೋಗ' ಎಂಬ ಪ್ರಬಂಧವನ್ನು ಮಂಡಿಸಿದ ಮೈಸೂರು ಜಿಲ್ಲೆಯ ದಾಸನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಮಾದಲಾಂಬಿಕ ಪ್ರಸಕ್ತ ವರ್ಷದ `ಯುವ ವಿಜ್ಞಾನಿ' ಪ್ರಶಸ್ತಿಗೆ ಭಾಜನಳಾದಳು. ಮಂಗಳೂರು ಸಮೀಪದ ಪಿಲಿಕುಳ ನಿಸರ್ಗಧಾಮದಲ್ಲಿ `ಜೀವವೈವಿಧ್ಯ- ನಿಸರ್ಗದ ಪೋಷಣೆ, ನಮ್ಮೆಲ್ಲರ ಭವಿಷ್ಯಕ್ಕಾಗಿ' ಎಂಬ ವಿಷಯಾಧಾರಿತವಾಗಿ ನಡೆದ 15ನೇ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿದ್ದ ರಾಜ್ಯದ 310 ಸ್ಪರ್ಧಾಳುಗಳಲ್ಲಿ ದಾಸನೂರಿನ  ರೈತ ಶಿವಮಲ್ಲಪ್ಪ ಮತ್ತು ರಾಜಮ್ಮ ದಂಪತಿ ಪುತ್ರಿ ಮಾದಲಾಂಬಿಕೆ ತನ್ನ ವಿಚಾರವನ್ನು ಸಮರ್ಥವಾಗಿ ಮಂಡನೆ ಮಾಡುವ ಮೂಲಕ `ಯುವವಿಜ್ಞಾನಿ' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಳು.

2007: ಬಾಂಗ್ಲಾದೇಶದಲ್ಲಿ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 2,300ಕ್ಕೆ ಏರಿತು. ಈ ಸಂಖ್ಯೆ 10,000 ದಾಟುವ ಸಂಭವ ಇದೆ ಎಂದು ರೆಡ್ ಕ್ರೆಸೆಂಟ್ ಸೊಸೈಟಿ ಹೇಳಿತು.

2006: ಹಿರಿಯ ಲೇಖಕಿ ಕಾಕೋಳು ಸರೋಜಾ ರಾವ್ (64) ಅವರು ಬೆಂಗಳೂರಿನ ಮಲ್ಲೇಶ್ವರಂನ ರಾಮಕೃಷ್ಣ ನರ್ಸಿಂಗ್ ಹೋಮಿನಲ್ಲಿ ನಿಧನರಾದರು. 60ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದ ಕಾಕೋಳು ಅವರ `ಸಂಯುಕ್ತ', `ಕರುಣಾಮಯಿ', `ಮಾಗಿ ಕನಸು', `ಬಾಳೆ ಹೊಂಬಾಳೆ', `ಮಾಂಗಲ್ಯ ಮಾತೆ, `ಇಂದ್ರಜಿತ್' ಮೊದಲಾದ ಕಾದಂಬರಿಗಳು ಚಲನಚಿತ್ರಗಳಾಗಿವೆ. ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ವಿಶ್ವ ಮಹಿಳೆ ಮತ್ತಿತರ ಪುರಸ್ಕಾರಗಳು ಅವರ ಮುಡಿಗೇರಿದ್ದವು.

2006: ಇಂದೋರಿನ ಬಾಲಕಿ ಆಕಾಂಕ್ಷ ಸತತ 61 ಗಂಟೆಗಳ ಕಾಲ ಹಾಡಿ ದಾಖಲೆ ನಿರ್ಮಿಸಿದ ಬೆನ್ನಲ್ಲೇ ಇಂದೋರಿನ ಯುವಕ ದೀಪಕ್ ಗುಪ್ತ (28) ಕೊಯಮತ್ತೂರಿನಲ್ಲಿ ಸತತ 55 ಗಂಟೆ ಸಂಗೀತ ಕಾರ್ಯಕ್ರಮ ನೀಡಿ ಗಿನ್ನೆಸ್ ದಾಖಲೆ ಸ್ಥಾಪಿಸಿದ. ಜರ್ಮನಿಯ ಹಾಡುಗಾರನ ಹೆಸರಿನಲ್ಲಿ ಇದ್ದ `ಗಿನ್ನೆಸ್' ದಾಖಲೆಯನ್ನು ಗುಪ್ತ ಅಳಿಸಿ ಹಾಕಿದ.

2006: `ಇರಾಕ್ ಮೇಲೆ ಅಮೆರಿಕ ಮತ್ತು ಇಂಗ್ಲೆಂಡ್ ನಡೆಸಿದ ದಾಳಿ ಒಂದು ದುರ್ಘಟನೆ' ಎಂದು ಅಲ್ ಜಜೀರಾದ ಹೊಸ ಇಂಗ್ಲಿಷ್ ಭಾಷಾ ಚಾನೆಲ್ ಒಂದಕ್ಕಾಗಿ ಸರ್ ಡೇವಿಡ್ ಫ್ರಾಸ್ಟ್ ಅವರಿಗೆ ನೀಡಿದ ಸಂದರ್ಶನದಲ್ಲಿ ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್ ಒಪ್ಪಿಕೊಂಡರು. ಸಂದರ್ಶನ ಕಾಲದಲ್ಲಿ ಸರ್ ಡೇವಿಡ್ ಅವರು ಅವರು `ಇರಾಕಿನಲ್ಲಿ ನಡೆಸಿದ ಹಸ್ತಕ್ಷೇಪ ದುರ್ಘಟನೆ ಎಂದು ಭಾವಿಸುವಿರಾ' ಎಂದು ಕೇಳಿದ್ದರು. `ಹೌದು. ಆದರೆ ಅದು ಇರಾಕಿನಲ್ಲಿ ಏಕೆ ಕಷ್ಟಕರ ಎಂಬುದನ್ನು ನಾನು ಜನರಿಗೆ ಹೇಳಬೇಕಾಗಿದೆ. ಅಲ್ ಖೈದಾ ಸಂಘಟನೆಯು ಒಂದು ಕೈಯಲ್ಲಿ ಸುನ್ನಿ ಬಂಡುಕೋರರನ್ನು ಮತ್ತು ಇನ್ನೊಂದು ಕೈಯಲ್ಲಿ ಇರಾನ್ ಬೆಂಬಲಿತ ಶಕ್ತಿಗಳಾದ ಶಿಯಾ ಉಗ್ರಗಾಮಿಗಳನ್ನು ಇಟ್ಟುಕೊಂಡು ಬಹುಸಂಖ್ಯಾತರ ಅಪೇಕ್ಷೆಯಾದ ಶಾಂತಿಯನ್ನು ಹದಗೆಡಿಸುವಂತಹ ನಿರ್ದಿಷ್ಟ ಕಾರ್ಯತಂತ್ರ ರೂಪಿಸಿ ಅಲ್ಪಸಂಖ್ಯಾತರ ಯುದ್ಧದ ಬಯಕೆಯನ್ನು ಬಹುಸಂಖ್ಯಾತರ ಮೇಲೆ ಹೇರಿದ್ದು ನಮಗೆ ಸಮಸ್ಯೆಯಾಯಿತು' ಎಂದು ಬ್ಲೇರ್ ಉತ್ತರಿಸಿದರು.

2005: ಶ್ರೀಲಂಕಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಪ್ರಧಾನಿ ಮಹಿಂದ ರಾಜಪಕ್ಸೆ ಜಯ ಗಳಿಸಿದರು. ಅವರು ಸಮೀಪದ ಪ್ರತಿಸ್ಪರ್ಧಿ ಮಾಜಿ ಪ್ರಧಾನಿ ರಾನಿಲ್ ವಿಕ್ರಮ್ ಸಿಂಘೆ ಅವರನ್ನು 1.86 ಲಕ್ಷ ಮತಗಳ ಅಂತರದಿಂದ ಸೋಲಿಸಿದರು.

2005: ಇರಾಕ್ ರಾಜಧಾನಿ ಬಾಗ್ದಾದಿನ ವಾಯವ್ಯ ಭಾಗದ ಖಾನಾಕ್ವಿನ್ ಪಟ್ಟಣದಲ್ಲಿ ಶಿಯಾ ಜನಾಂಗದ ಎರಡು ಮಸೀದಿಗಳ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ 100 ಜನ ಹತರಾದರು. 85ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

1995: ಇಂಟರ್ನೆಟ್ಟಿನಲ್ಲಿ ಸಂಗೀತ ಕಾರ್ಯಕ್ರಮ ಪ್ರಸಾರ ಮಾಡಿದ ಮೊತ್ತ ಮೊದಲ ತಂಡ ಎಂಬ ಹೆಗ್ಗಳಿಕೆಗೆ ರೋಲಿಂಗ್ ಸ್ಟೋನ್ಸ್ ಪಾತ್ರವಾಯಿತು.

1978: ಜೇಮ್ಸ್ ವಾರನ್ ಜೋನ್ಸ್ (1931-1978) ಗುಯಾನಾದಲ್ಲಿ ಅಮೆರಿಕದ ತನ್ನ ಪಂಥದ ಅನುಯಾಯಿಗಳ ಸಾಮೂಹಿಕ ಆತ್ಮಹತ್ಯೆಯ ನೇತೃತ್ವ ವಹಿಸಿದ. ಈ ಘಟನೆ `ಜೋನ್ಸ್ ಟೌನ್ ಮೆಸಾಕರ್' (ಜೋನ್ಸ್ ಟೌನ್ ಹತ್ಯಾಕಾಂಡ) ಎಂದೇ ಖ್ಯಾತಿ ಪಡೆಯಿತು. ಸಯನೈಡ್ ಮಿಶ್ರಿತ ಪಾನೀಯ ಸೇವಿಸಲು ತನ್ನ ಅನುಯಾಯಿಗಳಿಗೆ ಆಜ್ಞಾಪಿಸಿದ ಆತ ತಾನು ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ. ಈ ಘಟನೆಯಲ್ಲಿ 276 ಮಕ್ಕಳು ಸೇರಿ 913 ಮಂದಿ ಸತ್ತರು.

1978: ಚಿತ್ರ ನಿರ್ಮಾಪಕ, ನಿರ್ದೇಶಕ ಧೀರೇಂದ್ರ ಗಂಗೂಲಿ ನಿಧನ.

1954: ಸಾಹಿತಿ ತುಳಸಿ ವೇಣುಗೋಪಾಲ್ ಜನನ.

1946: ಶಾಸನಶಾಸ್ತ್ರ ಬೋಧಕ, ಸಾಹಿತಿ ಡಾ. ಎಚ್. ಎಸ್. ಗೋಪಾಲರಾವ್ ಅವರು ಎಚ್. ಎನ್. ಸೂರ್ಯನಾರಾಯಣರಾವ್- ಮಹಾಲಕ್ಷ್ಮಮ್ಮ ದಂಪತಿಯ ಮಗನಾಗಿ ಬೆಂಗಳೂರು ಉತ್ತರ ತಾಲ್ಲೂಕಿನ ಜುಲ್ಲೇಗೌಡನ ಹಳ್ಳಿಯಲ್ಲಿ ಜನಿಸಿದರು.

1936: ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ ಚಿದಂಬರಂ ಪಿಳ್ಳೈ ನಿಧನ.

1936: ಸಾಹಿತಿ ವಿಶಾಲಾಕ್ಷಿ ದಕ್ಷಿಣಾಮೂರ್ತಿ ಜನನ.

1928: ವಾಲ್ಟ್ ಡಿಸ್ನಿ ಅವರ `ಸ್ಟೀಮ್ ಬೋಟ್ ವಿಲ್ಲೀ' ಜೊತೆಗೆ `ಮಿಕ್ಕಿ ಮೌಸ್' ಜನ್ಮತಾಳಿತು. ಪರದೆಯಲ್ಲಿ ಸದ್ದಿಗೆ ಸರಿಯಾಗಿ ಓಡಾಡಿದ ಮೊತ್ತ ಮೊದಲ ಮಿಕ್ಕಿ ಕಾರ್ಟೂನ್ ಇದಾಗಿತ್ತು. 1988ರಲ್ಲಿ ಮಿಕಿ ಮೌಸ್ ನ 60ನೇ ಹುಟ್ಟುಹಬ್ಬವನ್ನು ವಾಲ್ಟ್ ಡಿಸ್ನಿ ಕಂಪೆನಿಯು ಆಚರಿಸಿತು.

1922: ಸಾಹಿತಿ ಚಂಪಾವತಿ ಮಹಿಷಿ ಜನನ.

1901: ಭಾರತೀಯ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ವಿ. ಶಾಂತಾರಾಮ್ (1901-1990) ಹುಟ್ಟಿದ ದಿನ. ಭಾರತೀಯ ಚಿತ್ರೋದ್ಯಮಕ್ಕೆ ನೀಡಿದ ಗಣನೀಯ ಕೊಡುಗೆ ಇವರಿಗೆ 1986ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ತಂದು ಕೊಟ್ಟಿತ್ತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Monday, December 7, 2009

ಇಂದಿನ ಇತಿಹಾಸ History Today ನವೆಂಬರ್ 17

ಇಂದಿನ ಇತಿಹಾಸ

ನವೆಂಬರ್ 17

ನಟ ಅಂಬರೀಷ್ ಅವರಿಗೆ ಹೈದರಾಬಾದಿನಲ್ಲಿ 2005ರ ಸಾಲಿನ ಎನ್ಟಿಆರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಿ. ಡಾ.ರಾಜಕುಮಾರ್ ಅವರು ಈ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ . ಪ್ರಶಸ್ತಿಯು ಐದು ಲಕ್ಷ ರೂಪಾಯಿಗಳ ನಗದು ಮತ್ತು ಫಲಕ ಒಳಗೊಂಡಿದೆ.

2008: ನಟ ಅಂಬರೀಷ್ ಅವರಿಗೆ ಹೈದರಾಬಾದಿನಲ್ಲಿ 2005ರ ಸಾಲಿನ ಎನ್ಟಿಆರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಿ. ಡಾ.ರಾಜಕುಮಾರ್ ಅವರು ಈ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ . ಪ್ರಶಸ್ತಿಯು ಐದು ಲಕ್ಷ ರೂಪಾಯಿಗಳ ನಗದು ಮತ್ತು ಫಲಕ ಒಳಗೊಂಡಿದೆ. 

2008:  ಸೆಪ್ಟೆಂಬರ್ 2000ದಲ್ಲಿ ಸಂಭವಿಸಿದ ಚೆರುವನ್ಚೆರಿ ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಣ್ಣೂರು ಸ್ಥಳೀಯ ನ್ಯಾಯಾಲಯವು 13 ಮಂದಿ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರಿಗೆ  ಐದುವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತು. ಸೆಪ್ಟೆಂಬರ್ 27, 2000ರಲ್ಲಿ ನಡೆದ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಆರೋಪಿಗಳು ನಡೆಸಿದ್ದ ಬಾಂಬ್ ದಾಳಿಯಿಂದ ಆರುವರ್ಷದ ಬಾಲಕಿ ಸಹಿತ ಇತರೆ ಮೂವರು ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಮಂದಿ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಕೊಲೆ ಯತ್ನ ಆರೋಪವನ್ನು ಹೊರಿಸಿ, ಜೈಲಿಗೆ ಕಳುಹಿಸಲಾಗಿತ್ತು. ಈ ಮೊಕದ್ದಮೆಯ ವಿಚಾರಣೆಯನ್ನು ಮತ್ತೆ ಕೈಗೆತ್ತಿಕೊಂಡ ಥಾಲ್ಸೆರಿ ನ್ಯಾಯಾಲಯ ತೀರ್ಪು ನೀಡಿತು. ಹದಿಮೂರು ಮಂದಿಗೆ ಐಪಿಸಿ ಸೆಕ್ಷನ್ 307 ಪ್ರಕಾರ ಐದು ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆಯನ್ನು ತೀರ್ಪಿನಲ್ಲಿ ವಿಧಿಸಲಾಗಿದೆ.

2008: ಅರಸೊತ್ತಿಗೆಯಿಂದ ಗಣರಾಜ್ಯವಾಗಿ ಪರಿವರ್ತನೆ ಹೊಂದಿದ ನೇಪಾಳದಲ್ಲಿ 2010ರ ಮೇ ತಿಂಗಳೊಳಗೆ ಹೊಸ ಸಂವಿಧಾನ ಅಸ್ತಿತ್ವಕ್ಕೆ ತರಲು ಅಲ್ಲಿನ ರಾಜಕೀಯ ಪಕ್ಷಗಳು ಒಪ್ಪಿಕೊಂಡವು. ಈ ನಿಟ್ಟಿನಲ್ಲಿ ಶಾಸನ ಸಭೆ ಅಧಿಕೃತವಾಗಿ ನಿರ್ಣಯ ತೆಗೆದುಕೊಂಡಿದೆ ಎಂದು ಸಂಸತ್ ಮೂಲಗಳು ಹೇಳಿದವು.

2007: ಶತಮಾನದಲ್ಲೇ ಅತ್ಯಂತ ಭೀಕರವೆನ್ನಲಾದ 'ಸಿದ್ರ್' ಚಂಡಮಾರುತಕ್ಕೆ ಸಿಲುಕಿ ಬಾಂಗ್ಲಾದೇಶದಲ್ಲಿ ಮೃತರಾದವರ ಸಂಖ್ಯೆ 2,000 ತಲುಪಿತು. ನಾಪತ್ತೆಯಾದವರ ಸಂಖ್ಯೆ ಹಲವು ಸಾವಿರಕ್ಕೆ ಏರಿತು. ಗಂಟೆಗೆ ಸುಮಾರು 223 ಕಿ.ಮೀ. ವೇಗದಲ್ಲಿ ಸತತ ಐದು ಗಂಟೆಗಳ ಕಾಲ ಬೀಸಿದ ಬಿರುಗಾಳಿ 1876ರಿಂದ ಈಚೆಗೆ ಅತ್ಯಂತ ಭೀಕರವಾದದ್ದು. ಇದರಿಂದಾಗಿ ಸುಮಾರು 15 ಅಡಿ ಎತ್ತರದ ಸಮುದ್ರದಲೆಗಳು ಕಾಣಿಸಿಕೊಂಡಿದ್ದವು.

2007: `ತಿರಂಗಾ ಕೇಕ್' ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದೋರ್ ನ್ಯಾಯಾಲಯವು ಭಾರತ ಕ್ರಿಕೆಟ್ ತಂಡದ ಅನುಭವಿ ಬ್ಯಾಟ್ಸ್ ಮನ್ ಸಚಿನ್ ತೆಂಡೂಲ್ಕರ್ ಅವರಿಗೆ ನೋಟಿಸ್ ಜಾರಿಮಾಡಿತು. ತ್ರಿವರ್ಣ ಧ್ವಜವನ್ನು ಹೋಲುವ ಕೇಕನ್ನು ಸಚಿನ್ ಅವರು ವೆಸ್ಟ್ ಇಂಡೀಸಿನಲ್ಲಿ ವಿಶ್ವಕಪ್ ಕ್ರಿಕೆಟ್ ನಡೆದ ಸಂದರ್ಭದಲ್ಲಿ ಕತ್ತರಿಸಿದ್ದರು. ಜಮೈಕಾದಲ್ಲಿ ಇದೇ ವರ್ಷದ ಆದಿಯಲ್ಲಿ ಈ ಘಟನೆ ನಡೆದಿತ್ತು. ಸಚಿನ್ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಇಂದೋರಿನ ನಾಗರಿಕ ರಾಜೇಶ್ ಬಿಡ್ಕರ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಅದನ್ನು ವಿಚಾರಣೆಗೆ ಎತ್ತಿಕೊಂಡ ವಿಶೇಷ ನ್ಯಾಯಾಧೀಶ ಮೊಹಮ್ಮದ್ ಶಮೀಮ್ ಅವರು `ಮಾಸ್ಟರ್ ಬ್ಲಾಸ್ಟರ್' ಗೆ ನೋಟಿಸ್ ನೀಡಿದರು.

2007: ತುರ್ತುಸ್ಥಿತಿಯನ್ನು ಕೊನೆಗೊಳಿಸಿ ಸೇನಾ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಬೇಕು ಎಂಬ ಸ್ಪಷ್ಟ ಸಂದೇಶವನ್ನು ಬುಷ್ ಆಡಳಿತ ಮುಷರಫ್ ಅವರಿಗೆ ನೀಡಿತು.ಪಾಕಿಸ್ಥಾನಕ್ಕೆ ಭೇಟಿ ನೀಡಿದ ಅಮೆರಿಕದ ರಾಜತಾಂತ್ರಿಕ ಅಧಿಕಾರಿ ನೆಗ್ರೊಪೊಂಟೆ ಅವರು ಇಸ್ಲಾಮಾಬಾದಿನಲ್ಲಿ ಮುಷರಫ್ ಮತ್ತು ಜನರಲ್ ಅಷ್ಫಕ್ ಪರ್ವೇಜ್ ಕಿಯಾನಿ ಅವರನ್ನು ಭೇಟಿ ಮಾಡಿ ತುರ್ತುಸ್ಥಿತಿಯನ್ನು ವಾಪಸ್ ಪಡೆಯಬೇಕು ಮತ್ತು ಸೇನಾ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಬೇಕು ಎಂಬ ಅಮೆರಿಕದ ಅಧ್ಯಕ್ಷ ಬುಷ್ ಅವರ ಸಂದೇಶವನ್ನು ತಿಳಿಸಿದರು.

2006: ಭಾರತ ಜೊತೆಗಿನ ನಾಗರಿಕ ಪರಮಾಣು ಒಪ್ಪಂದಕ್ಕೆ ಅಮೆರಿಕ ಸಂಸತ್ತಿನ ಮೇಲ್ಮನೆ ಸೆನೆಟಿನಲ್ಲಿ ಅಪೂರ್ವ ಬೆಂಬಲ ವ್ಯಕ್ತಗೊಂಡಿತು. ಒಪ್ಪಂದ ಅನುಷ್ಠಾನಕ್ಕೆ ಮಂಡಿಸಲಾಗಿದ್ದ ಮಸೂದೆಯನ್ನು ಭಾರಿ ಬಹುಮತದೊಂದಿಗೆ ಸದನ ಅಂಗೀಕರಿಸಿತು. ಇಡೀ ದಿನ ನಡೆದ ಸುದೀರ್ಘ ಕಾವೇರಿದ ಚರ್ಚೆಯ ಬಳಿಕ 18 ತಿದ್ದುಪಡಿಗಳ ಪೈಕಿ ಐದು ತಿದ್ದುಪಡಿಗಳನ್ನು ತಿರಸ್ಕರಿಸಿದ ಸೆನೆಟ್, 85-12 ಮತಗಳ ಅಂತರದಿಂದ ಮಸೂದೆಯನ್ನು ಅನುಮೋದಿಸಿತು.

2006: ಹೌರಾ ಜಿಲ್ಲೆಯ ಕೆ.ಕೆ. ಸಿಂಹಾನಿಯಾ ಅವರು ಪರಿಸರದ ಮಾಲಿನ್ಯ ನಿವಾರಣೆಗಾಗಿ 1008 ಹೋಮಕುಂಡಗಳೊಂದಿಗೆ ಮೂರು ದಿನಗಳ `ಆಶ್ವಮೇಧ ಯಜ್ಞ'ವನ್ನು ಕೋಲ್ಕತಾದಲ್ಲಿ (ಹಿಂದಿನ ಕಲ್ಕತ್ತ) ಆರಂಭಿಸಿದರು. ಮಾಲಿನ್ಯ ನಿಯಂತ್ರಣ ಮಂಡಳಿಯ ತೀವ್ರ ವಿರೋಧದ ಮಧ್ಯೆ ನಗರದ ಗುಲ್ ಮೊಹರ್ ರೈಲ್ವೇ ಮೈದಾನದಲ್ಲಿ ಈ ಮಹಾ ಯಜ್ಞ ಆರಂಭಗೊಂಡಿತು. ವೇದ ಮಂತ್ರಗಳೊಂದಿಗೆ ಆರಂಭವಾದ ಯಜ್ಞವನ್ನು ವೀಕ್ಷಿಸಲು ಸಹಸ್ರಾರು ಮಂದಿ ಸೇರಿದ್ದರು.  ಯಜ್ಞಕ್ಕೆ ತಡೆಯಾಜ್ಞೆ ನೀಡಲು ರಾಜ್ಯ ಹೈಕೋರ್ಟ್ ನಿರಾಕರಿಸಿತ್ತು.

2006: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಏರ್ಪಡಿಸಿದ ನಾಲ್ಕು ದಿನಗಳ ಕೃಷಿ ಮೇಳ ಹಾಗೂ ರಾಷ್ಟ್ರೀಯ ಕೃಷಿ ಯಂತ್ರೋಪಕರಣಗಳ ಪ್ರದರ್ಶನಕ್ಕೆ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ಚಾಲನೆ ನೀಡಿದರು. ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ನಿರ್ಮಿಸಲಾಗಿರುವ ವಿಶಾಲವಾದ ಶಾಶ್ವತ ಮೇಳ ಪ್ರಾಂಗಣದಲ್ಲಿ ಆರಂಭಗೊಂಡ `ಬೇಸಾಯದ ಹಬ್ಬ'ಕ್ಕೆ ನೆರೆದಿದ್ದ ರಾಜ್ಯದ 15 ಜಿಲ್ಲೆಗಳ ಸಹಸ್ರಾರು ರೈತರು ಸಾಕ್ಷಿಯಾದರು.

2006: ದುಬೈಯ ಹೈಪರ್ ಮಾರ್ಕೆಟ್ಟಿಗೆ ಭೇಟಿ ನೀಡುತ್ತಿದ್ದ ಮಹಿಳೆಯರನ್ನು ಅಸಭ್ಯವಾಗಿ ಚಿತ್ರೀಕರಿಸಿದ್ದಕ್ಕಾಗಿ ಬ್ರಿಟಿಷ್ ಕಂಪೆನಿಯೊಂದರ ಜನರಲ್ ಮ್ಯಾನೇಜರನಿಗೆ ಆರು ತಿಂಗಳುಗಳ ಸೆರೆವಾಸದ ಶಿಕ್ಷೆ ವಿಧಿಸಲಾಯಿತು. 34 ವರ್ಷ ವಯಸ್ಸಿನ ಈ ಬ್ರಿಟಿಷ್ ಪ್ರಜೆಯನ್ನು ಕೇವಲ `ಪಿಎಸ್' ಎಂಬುದಾಗಿ ಗುರುತಿಸಲಾಗಿದ್ದು, ಮಿನಿಸ್ಕರ್ಟ್ ಧರಿಸುತ್ತಿದ್ದ ಮಹಿಳೆಯರ ಗುಪ್ತಭಾಗಗಳ ಚಿತ್ರೀಕರಣ ನಡೆಸುವ ಮೂಲಕ ಅವರ ಖಾಸಗಿ ಬದುಕಿಗೆ ಕನ್ನ ಹಾಕಿದ ಆರೋಪವನ್ನು ಈತನ ಮೇಲೆ ಹೊರಿಸಲಾಗಿದೆ. ಈ ಆರೋಪಿಯು ಡಿಜಿಟಲ್ ವಿಡಿಯೋ ಕ್ಯಾಮ್ ಕಾರ್ಡರ್ ಬಳಸಿ ರಹಸ್ಯವಾಗಿ ಮಹಿಳೆಯರ ಚಿತ್ರೀಕರಣ ಮಾಡುತ್ತಿದ್ದ.

2006: ಭಾರತದ ಅತ್ಯಂತ ಶ್ರೀಮಂತ ನಿವಾಸಿ ಎನಿಸಿದ್ದ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್ ಜಿ ಅವರನ್ನು, ಕಳೆದ ವರ್ಷ ಪ್ರತ್ಯೇಕ ಮಾರ್ಗಗಳಲ್ಲಿ ಕ್ರಮಿಸಲು ನಿರ್ಧರಿಸಿದ ಅಂಬಾನಿ ಸಹೋದರರಾದ ಮುಖೇಶ್ ಮತ್ತು ಅನಿಲ್ ಎರಡನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ತಳ್ಳಿದ್ದು, ದೇಶದ ಅತ್ಯಂತ ಶ್ರೀಮಂತರ ಸ್ಥಾನಕ್ಕೆ ಏರಿದ್ದಾರೆ. ಆದರೆ ಜಗತ್ತಿನಲ್ಲಿ ಮೂರನೇ ಶ್ರೀಮಂತ ವ್ಯಕ್ತಿ ಎನಿಸಿರುವ ಉಕ್ಕು ಉದ್ಯಮಿ ಅನಿವಾಸಿ ಭಾರತೀಯ ಲಕ್ಷ್ಮಿ ನಿವಾಸ್ ಮಿತ್ತಲ್ `ಭಾರತದ 40 ಶ್ರೀಮಂತರ ಪಟ್ಟಿ'ಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದ್ದಾರೆ ಎಂದು `ಫೋಬ್ಸ್ ಏಷ್ಯಾ' ನಿಯತಕಾಲಿಕವು `ಭಾರತದ 40 ಶ್ರೀಮಂತರ' ಪಟಿಯಲ್ಲಿ ಪ್ರಕಟಿಸಿತು.

2006: ಅನಾರೋಗ್ಯದಿಂದ ಬಳಲುತ್ತಿದ್ದ ಹಂಗೇರಿಯ ವಿಶ್ವ ವಿಖ್ಯಾತ ಫುಟ್ಬಾಲ್ ಆಟಗಾರ ಫರೆನ್ಸ್ ಪುಸ್ಕಾಸ್ (79) ಬುಡಾಪೆಸ್ಟಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು. 85 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಒಟ್ಟು 85 ಗೋಲುಗಳನ್ನು ಪಡೆದಿದ್ದರು. 1952ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಫುಟ್ಬಾಲ್ ವಿಭಾಗದಲ್ಲಿ ಚಿನ್ನ ಗೆದ್ದ ಹಂಗೇರಿ ತಂಡದ ನಾಯಕ ಇವರೇ ಆಗಿದ್ದರು.

2005: ಇರಾನಿನಲ್ಲಿ ಸೆರೆವಾಸ ಅನುಭವಿಸುತ್ತಿರುವ ಖ್ಯಾತ ತನಿಖಾ ವರದಿಗಾರ ಅಕ್ಬರ್ ಗಾಂಜಿ ಅವರಿಗೆ ವಿಶ್ವ ದಿನ ಪತ್ರಿಕೆಗಳ ಸಂಘದ 2006ನೇ ಸಾಲಿನ `ಗೋಲ್ಡನ್ ಪೆನ್ ಆಫ್ ಫ್ರೀಡಂ' ಪ್ರಶಸ್ತಿ ಘೋಷಿಸಲಾಯಿತು. ರಾಜಕೀಯ ಕಾರಣಕ್ಕಾಗಿ 2000ನೇ ಇಸವಿಯಲ್ಲಿ ಬಂಧಿತರಾದ ಗಾಂಜಿ ಅವರಿಗೆ 6 ವರ್ಷಗಳ ಸೆರೆಮನೆವಾಸದ ಶಿಕ್ಷೆ ವಿಧಿಸಲಾಗಿದೆ.

2005: ಕೆಲವು ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬುದಾಗಿ ಬೆಳಗಾವಿ ಮಹಾನಗರ ಪಾಲಿಕೆ ಕೈಗೊಂಡಿದ್ದ ನಿರ್ಣಯವನ್ನು ರಾಜ್ಯ ಸರ್ಕಾರ ತತ್ ಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿತು.

2005: ಭಾರತದ ಅಗ್ರಮಾನ್ಯ ಮಹಿಳಾ ಹೆಪಥ್ಲಾನ್ ಪಟು ಜೆ.ಜೆ. ಶೋಭಾ ಅವರು ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಹಾಕಿಪಟು ಅಜಯಕುಮಾರ್ ಅವರ ಕೈ ಹಿಡಿದು ದಾಂಪತ್ಯ ಜೀವನಕ್ಕೆ ಅಡಿ ಇರಿಸಿದರು.

1988: ಬೆನಜೀರ್ ಭುಟ್ಟೋ ಅವರು ಇಸ್ಲಾಮಿಕ್ ರಾಷ್ಟ್ರವೊಂದರ ಮೊತ್ತ ಮೊದಲ ನಾಯಕಿಯಾದರು. ಪಾಕಿಸ್ಥಾನದಲ್ಲಿ 11 ವರ್ಷಗಳ ಬಳಿಕ ನಡೆದ ಮೊದಲ ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ಅವರ ಪಕ್ಷ ಜಯಗಳಿಸಿ ಅವರು ನಾಯಕಿಯಾಗಿ ಆಯ್ಕೆಯಾದರು.

1970: ಸಂಶೋಧಕ ಡಗ್ಲಾಸ್ ಎಂಗೆಲ್ಬರ್ಟ್ ಅವರು ಸಂಶೋಧಿಸಿದ `ಕಂಪ್ಯೂಟರ್ ಮೌಸ್' ಗೆ ಅಮೆರಿಕನ್ ಪೇಟೆಂಟ್ ನೀಡಲಾಯಿತು.

1966: ಲಂಡನ್ನಿನ ಲೈಸಿಯಮ್ ಥಿಯೇಟರಿನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಭಾರತದ ರೀಟಾ ಫರಿಯಾ `ವಿಶ್ವ ಸುಂದರಿ' ಕಿರೀಟ ಧರಿಸಿ, ವಿಶ್ವ ಸುಂದರಿ ಎನಿಸಿದ ಭಾರತದ ಮೊತ್ತ ಮೊದಲ ಮಹಿಳೆಯಾದರು.

1932: ಮೂರನೇ `ದುಂಡು ಮೇಜಿನ ಪರಿಷತ್ತು' (ರೌಂಡ್ ಟೇಬಲ್ ಕಾನ್ಫರೆನ್ಸ್) ಲಂಡನ್ನಿನಲ್ಲಿ ಆರಂಭವಾಯಿತು. ಕಾಂಗ್ರೆಸ್ ಮತ್ತು ಬ್ರಿಟಿಷ್ ಲೇಬರ್ ಪಾರ್ಟಿ ಅದರಲ್ಲಿ ಪಾಲ್ಗೊಳ್ಳದೇ ಇದ್ದುದರಿಂದ ಅದು ಮೊದಲ ಪರಿಷತ್ತುಗಳಷ್ಟು ಮಹತ್ವ ಪಡೆಯಲಿಲ್ಲ. ಪರಿಣಾಮವಾಗಿ ಪ್ರಾಂತೀಯ ಸ್ವಾಯತ್ತತೆ ಹಾಗೂ ಒಕ್ಕೂಟ ವ್ಯವಸ್ಥೆ ಸ್ಥಾಪನೆ ಉದ್ದೇಶದ 1935ರ ಭಾರತ ಸರ್ಕಾರ ಕಾಯ್ದೆ ಅನುಷ್ಠಾನಗೊಳ್ಳಲಿಲ್ಲ.

1928: ಭಾರತದ ರಾಷ್ಟ್ರೀಯ ನಾಯಕ ಲಾಲಾ ಲಜಪತರಾಯ್ ಅವರು ಸೈಮನ್ ಕಮೀಷನ್ ವಿರೋಧಿ ಪ್ರದರ್ಶನಕಾಲದಲ್ಲಿ ಪೊಲೀಸರ ಲಾಠಿ ಪ್ರಹಾರದಿಂದ ಆದ ಗಾಯಗಳ ಪರಿಣಾಮವಾಗಿ ಮೃತರಾದರು.

1869: ಮೆಡಿಟರೇನಿಯನ್ ಮತ್ತು ಕೆಂಪು ಸಮುದ್ರವನ್ನು (ರೆಡ್ ಸೀ) ಸಂಪರ್ಕಿಸುವ ಸುಯೆಜ್ ಕಾಲುವೆ ಈಜಿಪ್ಟಿನಲ್ಲಿ ಸಂಚಾರಕ್ಕಾಗಿ ತೆರೆಯಲಾಯಿತು. ಉತ್ತರದ ಪೋರ್ಟ್ ಸೆಡ್ ನಿಂದ ದಕ್ಷಿಣದ ಸುಯೆಜ್ ವರೆಗೆ ಈ ಕಾಲುವೆಯ ಉದ್ದ 163 ಕಿ.ಮೀ.ಗಳು. ಇದು ಆಫ್ರಿಕಾ ಖಂಡವನ್ನು ಏಷ್ಯಾ ಖಂಡದಿಂದ ಬೇರ್ಪಡಿಸುತ್ತದೆ. ಹಿಂದೂ ಸಾಗರ ಮತ್ತು ಪಶ್ಚಿಮದ ಫೆಸಿಫಿಕ್ ಸಾಗರ ಪ್ರದೇಶಗಳಿಗೆ ಯುರೋಪಿನಿಂದ ಸಂಪರ್ಕ ಕಲ್ಪಿಸುವ ಅತ್ಯಂತ ಹತ್ತಿರದ ಜಲಮಾರ್ಗವಿದು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Thursday, December 3, 2009

ಇಂದಿನ ಇತಿಹಾಸ History Today ನವೆಂಬರ್ 16

ಇಂದಿನ ಇತಿಹಾಸ

ನವೆಂಬರ್ 16


ಈಚೆಗೆ ಸಂತ ಪದವಿ ಪಡೆದ ಭಾರತೀಯ ಮೊದಲ ಮಹಿಳೆ ಸೇಂಟ್ ಆಲ್ಫೋನ್ಸಾ ಅವರ ಹೆಸರಿನಲ್ಲಿ ಅಂಚೆ ಚೀಟಿಯನ್ನು  ನವದೆಹಲಿಯಲ್ಲಿ  ಬಿಡುಗಡೆ  ಮಾಡಲಾಯಿತು. ಇಲ್ಲಿನ ಸೈರೋ ಮಲಬಾರ್ ಇಗರ್ಜಿಯಲ್ಲಿ (ಚರ್ಚ್) ನಡೆದ ಸಮಾರಂಭದಲ್ಲಿ ಅಂಚೆ ಇಲಾಖೆಯ ಮಹಾನಿರ್ದೇಶಕ ಪಿ.ಕೆ.ಗೋಪಿನಾಥ್ ಅವರು 15 ರೂಪಾಯಿಯ ಅಂಚೆ ಚೀಟಿ ಬಿಡುಗಡೆ ಮಾಡಿ ಸುಪ್ರೀಂಕೋರ್ಟ್ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಅವರಿಗೆ ನೀಡಿದರು.

2008:  `ಡ್ರಾ' ಮಾಡಿದ ಹಣ ಕೈಗೂ ಸಿಗದೇ, `ಎಟಿಎಂ ಬಿನ್' ನಲ್ಲಿಯೂ (ಎಟಿಎಂ ಯಂತ್ರದ ಡಬ್ಬ) ಕಾಣದೇ ವ್ಯಕ್ತಿಯೊಬ್ಬರು ತೊಂದರೆ ಪಡುವಂತೆ ಮಾಡಿದ ಸ್ಟೇಟ್ ಬ್ಯಾಂಕ್ ಆಫ್ ವೆೆುಸೂರಿನ ಜಯನಗರ ಶಾಖೆಗೆ ಬೆಂಗಳೂರಿನ ಮೂರನೇ ಹೆಚ್ಚುವರಿ ಗ್ರಾಹಕ ನ್ಯಾಯಾಲಯ ದಂಡ ವಿಧಿಸಿ ಆದೇಶ ಹೊರಡಿಸಿತು. ಎಂ.ಆರ್. ರಾಜಕುಮಾರ್ ಎಂಬವರು ಈ ಬ್ಯಾಂಕಿನ ಎಟಿಎಂನಲ್ಲಿ ಮೂರು ಸಾವಿರ ರೂಪಾಯಿ `ಡ್ರಾ' ಮಾಡಲು ಹೋಗಿದ್ದರು. ಆದರೆ ಅದೇ ಸಮಯದಲ್ಲಿ ವಿದ್ಯುತ್ ನಿಲುಗಡೆ ಆದ ಕಾರಣ, ಹಣ ಹೊರಕ್ಕೆ ಬರಲಿಲ್ಲ. ಈ ಬಗ್ಗೆ ಅವರು ಬ್ಯಾಂಕನ್ನು  ಸಂಪರ್ಕಿಸಿದಾದ ಮರುದಿನ ಬೆಳಗ್ಗೆ ಅದು `ಬಿನ್' ನಲ್ಲಿ ಇರುವುದಾಗಿ ಉತ್ತರ ಬಂತು. ಆದರೆ ಮಾರನೇ ದಿನ ಹಣ `ಬಿನ್' ನಲ್ಲಿ ಇರಲಿಲ್ಲ. ಅವರು ಬ್ಯಾಂಕನ್ನು ಪುನಃ ಸಂಪರ್ಕಿಸಿದಾಗ ಸಿಬ್ಬಂದಿಯಿಂದ ಹಾರಿಕೆ ಉತ್ತರ ಬಂತು. ಇದರಿಂದ ಬೇಸತ್ತ ಅವರು ಗ್ರಾಹಕ ನ್ಯಾಯಾಲಯದ ಮೊರೆ ಹೋದರು. ಬ್ಯಾಂಕ್ ಕರ್ತವ್ಯ ಲೋಪ ಎಸಗಿದೆ ಎಂದು ಅಭಿಪ್ರಾಯ ಪಟ್ಟ ವೇದಿಕೆ ಅಧ್ಯಕ್ಷ ಎನ್. ಶ್ರೀವತ್ಸ ಕೆದಿಲಾಯ ಅವರು, ಅರ್ಜಿದಾರರಿಗೆ ಮೂರು ಸಾವಿರ ರೂಪಾಯಿ ಜೊತೆಗೆ ಐದು ಸಾವಿರ ರೂಪಾಯಿ ಪರಿಹಾರ ನೀಡುವಂತೆ  ಆದೇಶಿಸಿದರು. ಈ ಮೊತ್ತದ ಜೊತೆಗೆ ದಂಡದ ರೂಪದಲ್ಲಿ ಒಂದು ಸಾವಿರ ರೂಪಾಯಿ ನೀಡುವಂತೆಯೂ ಬ್ಯಾಂಕಿಗೆ ಸೂಚಿಸಿದರು.

2008:  ಈಚೆಗೆ ಸಂತ ಪದವಿ ಪಡೆದ ಭಾರತೀಯ ಮೊದಲ ಮಹಿಳೆ ಸೇಂಟ್ ಆಲ್ಫೋನ್ಸಾ ಅವರ ಹೆಸರಿನಲ್ಲಿ ಅಂಚೆ ಚೀಟಿಯನ್ನು  ನವದೆಹಲಿಯಲ್ಲಿ  ಬಿಡುಗಡೆ  ಮಾಡಲಾಯಿತು. ಇಲ್ಲಿನ ಸೈರೋ ಮಲಬಾರ್ ಇಗರ್ಜಿಯಲ್ಲಿ (ಚರ್ಚ್) ನಡೆದ ಸಮಾರಂಭದಲ್ಲಿ ಅಂಚೆ ಇಲಾಖೆಯ ಮಹಾನಿರ್ದೇಶಕ ಪಿ.ಕೆ.ಗೋಪಿನಾಥ್ ಅವರು 15 ರೂಪಾಯಿಯ ಅಂಚೆ ಚೀಟಿ ಬಿಡುಗಡೆ ಮಾಡಿ ಸುಪ್ರೀಂಕೋರ್ಟ್ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಅವರಿಗೆ ನೀಡಿದರು.  ತ್ರಿಶೂರಿನ ಮಹಾಧರ್ಮಾಧ್ಯಕ್ಷ ಅ್ಯಂಡ್ರೂಸ್ ಥಾಜ್ಸು ಅವರ ನೇತೃತ್ವದಲ್ಲಿ ದೆಹಲಿ ಮತ್ತು ಕೇರಳದ ಬೇರೆ ಬೇರೆ ಧರ್ಮಕ್ಷೇತ್ರಗಳ ಬಿಷಪ್ ಗಳು ಭಾಗವಹಿಸಿದ್ದರು.

2008: ಚಂದ್ರ ಯಾನ-1 ಬಾಹ್ಯಾಕಾಶ ನೌಕೆಯ ಮೂನ್ ಇಂಪ್ಯಾಕ್ಟ್ ಪ್ರೋಬ್ (ಎಂಐಪಿ) ಶೋಧಕ ಉಪಕರಣ ಚಂದ್ರನ ಮೇಲೆ ಬಿದ್ದ ಬೆನ್ನಲ್ಲೇ ಲೂನಾರ್ ಲೇಸರ್ ರೇಂಜಿಂಗ್ (ಎಲ್ ಎಲ್ ಆರ್ ಐ) ಉಪಕರಣ ತನ್ನ ಮಹತ್ವದ ಕೆಲಸ ಆರಂಭಿಸಿತು.  ಚಂದ್ರನ ವಿಕಾಸ ಹಾಗೂ ಈ ಪ್ರದೇಶದ ಗುರುತ್ವಾಕರ್ಷಣ ಶಕ್ತಿಯನ್ನು ಅರಿಯುವಲ್ಲಿ ಲೂನಾರ್ ಲೇಸರ್ ರೇಂಜಿಂಗ್ ಉಪಕರಣ ಸಹಾಯ ಮಾಡುವುದು.

2007: ಕಲೆ, ಸಂಸ್ಕೃತಿ ಮತ್ತು ಶಿಕ್ಷಣಕ್ಕಾಗಿ ನೀಡಲಾಗುವ ಪ್ರತಿಷ್ಠಿತ ದಯಾವತಿ ಮೋದಿ ಪ್ರಶಸ್ತಿಯನ್ನು ಖ್ಯಾತ ಚಿತ್ರ ಕಲಾವಿದ ಅಕ್ಬರ್ ಪದಂಸೀ ಅವರಿಗೆ ಪ್ರಕಟಿಸಲಾಯಿತು. ಸಮಕಾಲೀನ ಭಾರತೀಯ ಚಿತ್ರ ಪರಂಪರೆಗೆ ಪದಂಸೀ ಅವರು ಸಲ್ಲಿಸಿರುವ ಸೇವೆಗಾಗಿ  ಅವರನ್ನು ಆಯ್ಕೆ ಮಾಡಲಾಯಿತು. ಪ್ರಶಸ್ತಿಯು 2.51 ಲಕ್ಷ ನಗದು, ಬೆಳ್ಳಿ ಪದಕವನ್ನು ಒಳಗೊಂಡಿರುತ್ತದೆ ಎಂದು ಪ್ರಶಸ್ತಿ ಸಮಿತಿಯ ಸತೀಶ್ಕುಮಾರ್ ಮೋದಿ  ಬೆಂಗಳೂರಿನಲ್ಲಿ ತಿಳಿಸಿದರು.

2007:  ನವೆಂಬರ್ 15ರ ರಾತ್ರಿ ಬಾಂಗ್ಲಾದೇಶದ ದಕ್ಷಿಣದ ಕರಾವಳಿ ತೀರಕ್ಕೆ ಅಪ್ಪಳಿಸಿದ ಭಯಾನಕ `ಸಿದ್ರ್' ಚಂಡಮಾರುತಕ್ಕೆ ಸಿಲುಕಿ 550ಕ್ಕೂ ಹೆಚ್ಚು ಜನ ಮೃತರಾಗಿ, 3,000ಕ್ಕೂ ಹೆಚ್ಚು ಮೀನುಗಾರರು, ನಾವಿಕರು ನಾಪತ್ತೆಯಾದರು. ಬಂಗಾಳ ಕೊಲ್ಲಿಯ ಉತ್ತರ ಭಾಗದಿಂದ ಬಾಂಗ್ಲಾ ಪ್ರವೇಶಿಸಿದ ಚಂಡಮಾರುತ 15 ಕರಾವಳಿ ಜಿಲ್ಲೆಗಳಲ್ಲಿ ರುದ್ರನರ್ತನ ಮಾಡಿತು. ಗಂಟೆಗೆ 240 ಕಿ.ಮೀ. ವೇಗದಲ್ಲಿ ಬೀಸುತ್ತಿದ್ದ ಪ್ರಬಲ ಗಾಳಿ, 15 ಅಡಿ ಎತ್ತರದ ಸಮುದ್ರದ ಅಲೆಗಳು ಸುನಾಮಿಯನ್ನು ನೆನಪಿಸಿದವು.

2007: ಒಡಂಬಡಿಕೆ ಪತ್ರ ಎಂಬ `ಮೂಗುದಾರ'ದ ಮೂಲಕ ಸರ್ಕಾರವನ್ನು ನಿಯಂತ್ರಿಸಲು ಉದ್ದೇಶಿಸಿದ ಜೆ.ಡಿ (ಎಸ್) ನಾಯಕ ಎಚ್. ಡಿ. ದೇವೇಗೌಡರ ಕಾರ್ಯತಂತ್ರಕ್ಕೆ ಮಣಿಯದಿರಲು ಬಿಜೆಪಿ ನಿರ್ಧರಿಸಿತು. ನವದೆಹಲಿಯಲ್ಲಿ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತಿತರ ನಾಯಕರು ಪಾಲ್ಗೊಂಡ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಇಪ್ಪತ್ತೊಂದು ತಿಂಗಳುಗಳ ಹಿಂದೆ ಉಭಯ ಪಕ್ಷಗಳ ನಡುವೆ ಯಾವ ಬಗೆಯ ಕೊಡು-ಕೊಳ್ಳುವಿಕೆ ಆಧಾರದಲ್ಲಿ ಮೈತ್ರಿ ಏರ್ಪಟ್ಟಿತ್ತೋ ಅದನ್ನಷ್ಟೇ ಪಾಲಿಸಿಕೊಂಡು ಹೋಗಬೇಕೆಂಬ ಒಮ್ಮತದ ಅಭಿಪ್ರಾಯವನ್ನು ಪಕ್ಷದ ನಾಯಕರು ಸಭೆಯಲ್ಲಿ ವ್ಯಕ್ತ ಪಡಿಸಿದರು.

2007: ಪಾಕಿಸ್ಥಾನದ ಸೇನಾ ಆಡಳಿತಗಾರ ಜನರಲ್ ಪರ್ವೇಜ್ ಮುಷರಫ್ ಅವರ ಬೆಂಬಲಿಗ, 57 ವರ್ಷದ ಮೊಹಮ್ಮದಿಯಾ ಸೂಮ್ರೊ ದೇಶದ ಹಂಗಾಮಿ ಪ್ರಧಾನಿಯಾಗಿ ಇಸ್ಲಾಮಾಬಾದಿನಲ್ಲಿ ಅಧಿಕಾರ ಸ್ವೀಕರಿಸಿದರು.

2007: ಗೃಹ ಬಂಧನದಲ್ಲಿದ್ದ ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ, ಮಾನವ ಹಕ್ಕುಗಳ ಧುರೀಣೆ ಆಸ್ಮಾ ಜಹಾಂಗೀರ್ ಮತ್ತಿತರ ಬಂಧಿತ ಮಹಿಳಾ ಮುಖಂಡರನ್ನು ಪಾಕಿಸ್ಥಾನದ ಸೇನಾ ಆಡಳಿತ ಬಿಡುಗಡೆ ಮಾಡಿತು. ತುರ್ತು ಪರಿಸ್ಥಿತಿ ತೆರವುಗೊಳಿಸುವಂತೆ ಪರ್ವೇಜ್ ಮುಷರಫ್ ಅವರನ್ನು ಒತ್ತಾಯಿಸಲು ಅಮೆರಿಕದ ಪ್ರತಿನಿಧಿಯಾಗಿ ರಕ್ಷಣಾ ಇಲಾಖೆ ಜಂಟಿ ಕಾರ್ಯದರ್ಶಿ ಜಾನ್ ನೆಗ್ರೊಪೊಂಟೆ ಅವರು ಲಾಹೋರಿಗೆ ಆಗಮಿಸುವ ಕೇವಲ ಒಂದು ಗಂಟೆ ಮೊದಲು ಈ ಮುಖಂಡರನ್ನು ಬಿಡುಗಡೆ ಮಾಡಲಾಯಿತು. ನವೆಂಬರ್ 13 ರಂದು ಬೆನಜೀರ್ ಭುಟ್ಟೊ ಅವರಿಗೆ ಏಳು ದಿನಗಳ ಗೃಹ ಬಂಧನದ ಆದೇಶ ಜಾರಿಯಾಗಿತ್ತು. ಆದರೆ, ಅಮೆರಿಕ ಪ್ರತಿನಿಧಿ ಆಗಮನದ ಹಿನ್ನೆಲೆಯಲ್ಲಿ ಏಳುದಿನಗಳ ಮೊದಲೇ ಅವರನ್ನು ಮುಕ್ತಗೊಳಿಸಲಾಯಿತು. ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಆಸ್ಮಾ ಜಹಾಂಗೀರ್ ಅವರನ್ನು ತುರ್ತು ಪರಿಸ್ಥಿತಿ ಘೋಷಣೆಯಾದ ದಿನದಿಂದಲೇ ಗೃಹ ಬಂಧನದಲ್ಲಿ ಇರಿಸಲಾಗಿತ್ತು.

2007: ವಿಶ್ವದ ಮೊತ್ತ ಮೊದಲ ತದ್ರೂಪಿ ಕುರಿ `ಡಾಲಿ' ರೂಪಿಸಿದ ವಿಜ್ಞಾನಿಗಳು ಈಗ ಇದೇ ಮೊದಲ ಬಾರಿಗೆ ಜಗತ್ತಿನ ಮೊತ್ತ ಮೊದಲ ಮಂಗನ ಭ್ರೂಣದ ತದ್ರೂಪಿ ರೂಪಿಸುವಲ್ಲಿ ಸಫಲರಾಗಿರುವುದಾಗಿ ಪ್ರಕಟಿಸಿದರು. ಈ ವಿಜ್ಞಾನಿಗಳ ಪ್ರಕಾರ ಭ್ರೂಣದ ಆಕರ ಕೋಶಗಳಿಂದ ದೇಹದ ಯಾವುದೇ ಅಂಗಾಂಶದ ಜೀವಕೋಶಗಳನ್ನು ಪಡೆಯಬಹುದು. ಇದರಿಂದ ಅನೇಕ ಕಾಯಿಲೆಗಳಿಗೆ ಪರಿಣಾಮಕಾರಿ ಚಿಕಿತ್ಸೆಯೂ ಸಾಧ್ಯವಾಗಲಿದೆ. `ನೇಚರ್' ಪತ್ರಿಕೆಯಲ್ಲಿ ಈ ಕುರಿತ ವರದಿಯನ್ನು ಪ್ರಕಟಿಸಲಾಗಿದೆ. ಅದರ ಪ್ರಕಾರ ಭ್ರೂಣದ ಆಕರ ಕೋಶಗಳಿಂದ ಪಡೆಯುವ ಹೊಸ ಜೀವಕೋಶಗಳನ್ನು ತಮ್ಮ ಕಾರ್ಯಕ್ಷಮತೆ ಕಳೆದುಕೊಂಡ ಜೀವಕೋಶಗಳ ಬದಲಿಗೆ ಅಳವಡಿಸುವುದರಿಂದ ಮಾನವ ದೇಹ ಅಂತಹ ಕೋಶಗಳನ್ನು ತಿರಸ್ಕರಿಸುವುದಿಲ್ಲ ಎಂಬುದು ವಿಜ್ಞಾನಿಗಳ ಅಭಿಮತ.

2006: 1300 ಕಿ.ಮೀ. ದೂರದ ಗುರಿಯನ್ನು ನಿಖರವಾಗಿ ತಲುಪುವ ಸಾಮರ್ಥ್ಯದ ಮಧ್ಯಮಗಾಮಿ `ಹತ್ಪ್ 5 (ಘೋರಿ) ಅಣ್ವಸ್ತ್ರ ಪ್ರಕ್ಷೇಪಣಾ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಪಾಕಿಸ್ಥಾನ ಯಶಸ್ವಿಯಾಗಿ ನಡೆಸಿತು. ಈ ಕ್ಷಿಪಣಿಯು ಇಂಧನಶಕ್ತಿಯಿಂದ ಉಡಾವಣೆಗೊಂಡು ಬಳಿಕ ಗುರುತ್ವಾಕರ್ಷಣ ಶಕ್ತಿಯಿಂದಲೇ ವೈರಿಪಾಳಯವನ್ನು ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ.

2006: ಬೆಂಗಳೂರಿನ ಹವ್ಯಾಸಿ ಪತ್ರಕರ್ತೆ ಭಾರತಿ ಘನಶ್ಯಾಮ್ ಅವರಿಗೆ ಪ್ರತಿಷ್ಠಿತ ಥಾಮ್ಸನ್ ಪ್ರತಿಷ್ಠಾನ ಪ್ರಶಸ್ತಿ ಲಭಿಸಿತು. ಎಚ್ ಐವಿ/ ಏಡ್ಸ್ ಕುರಿತು ಉದಯವಾಣಿಯಲ್ಲಿ ಬರೆದ ಲೇಖನಕ್ಕೆ ಈ ಪ್ರಶಸ್ತಿ ಬಂದಿತು.

 2004: ಖ್ಯಾತ ಛಾಯಾಗ್ರಾಹಕ ಗೌರಿಶಂಕರ ನಿಧನ.

2001: ದಕ್ಷಿಣ ಆಫ್ರಿಕಾದ ಸನ್ಸಿಟಿಯಲ್ಲಿ ನಡೆದ ವಿಶ್ವಸುಂದರಿ ಸ್ಪರ್ಧೆಯಲ್ಲಿ ವಿಶ್ವಸುಂದರಿ ಕಿರೀಟ ಧರಿಸುವ ಮೂಲಕ ನೈಜೀರಿಯಾದ 18 ವರ್ಷದ ತರುಣಿ ಅಗ್ಬಾನಿ ಡರೇಗೊ ಸ್ಪರ್ಧೆಯ 51 ವರ್ಷಗಳ ಇತಿಹಾಸದಲ್ಲೇ `ವಿಶ್ವ ಸುಂದರಿ' ಎನಿಸಿಕೊಂಡ ಮೊತ್ತ ಮೊದಲ ಕರಿಯ ಆಫ್ರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2000: ಕಮ್ಯೂನಿಸ್ಟ್ ವಿಯೆಟ್ನಾಂಗೆ ಭೇಟಿ ನೀಡಿದ ಮೊತ್ತ ಮೊದಲ ಅಮೆರಿಕನ್ ಅಧ್ಯಕ್ಷ ಎಂಬ ಹೆಗ್ಗಳಿಕೆ ಬಿಲ್ ಕ್ಲಿಂಟನ್ ಅವರದಾಯಿತು.

1990: ಚಂದ್ರಶೇಖರ್ ನೇತೃತ್ವದ ಕೇಂದ್ರ ಸರ್ಕಾರಕ್ಕೆ ವಿಶ್ವಾಸಮತ ಗೊತ್ತುವಳಿಯಲ್ಲಿ ಜಯ.

1988: ಪಾಕಿಸ್ಥಾನದಲ್ಲಿ ಹನ್ನೊಂದು ವರ್ಷಗಳ ಬಳಿಕ ನಡೆದ ಮೊದಲ ಮುಕ್ತ ಚುನಾವಣೆಯಲ್ಲಿ
ಬೆನಜೀರ್ ಭುಟ್ಟೋಗೆ ಗೆಲುವು.

1981: ಅಮೆರಿಕನ್ ಚಿತ್ರನಟ ವಿಲಿಯಂ ಹೋಲ್ಡನ್ ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದಲ್ಲಿ ತಮ್ಮ 63ನೇ ವಯಸ್ಸಿನಲ್ಲಿ ನಿಧನರಾದರು. `ಸನ್ ಸೆಟ್ ಬುಲೆವಾರ್ಡ್' ಚಿತ್ರದ ಪಾತ್ರ ಅವರಿಗೆ ಅಪಾರ ಖ್ಯಾತಿ ತಂದು ಕೊಟ್ಟಿತು.

1973: ಭಾರತದ ಬ್ಯಾಡ್ಮಿಂಟನ್ ಪಟು ಪುಯೆಲ್ಲ ಗೋಪಿಚಂದ್ ಹುಟ್ಟಿದ ದಿನ. ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆದ್ದ ಎರಡನೇ ಭಾರತೀಯ ಇವರು. ಮೊದಲಿಗೆ ಈ ಚಾಂಪಿಯನ್ ಶಿಪ್ ಗೆದ್ದದ್ದು ಪ್ರಕಾಶ್ ಪಡುಕೋಣೆ.
1960: ಹಾಲಿವುಡ್ಡಿನ ಖ್ಯಾತ ನಟ ಕ್ಲಾರ್ಕ್ ಗ್ಯಾಬಲ್ 59ನೇ ವಯಸ್ಸಿನಲ್ಲಿ ಮೃತರಾದರು. `ಕಿಂಗ್ ಆಫ್ ಹಾಲಿವುಡ್' ಎಂದೇ ಪ್ರಖ್ಯಾತರಾಗಿದ್ದ ಇವರು `ಗಾನ್ ವಿದ್ ದಿ ವಿಂಡ್' ಚಿತ್ರದಲ್ಲಿ ಮಾಡಿದ್ದ ರೆಟ್ ಬಟ್ಲರ್ ಪಾತ್ರದಿಂದ ಜನಪ್ರಿಯರಾಗಿದ್ದರು.

1947: ಸಾಹಿತಿ ವಿಜಯಾ  ನಾಗರಾಜ್ ಜನನ.

1942: ಸಾಹಿತಿ ಕೋ.ಲ. ರಂಗನಾಥರಾವ್ ಜನನ.

1933: ಅಮೆರಿಕ ಮತ್ತು ಸೋವಿಯತ್ ಯೂನಿಯನ್ ಮೊದಲ ಬಾರಿಗೆ ರಾಜತಾಂತ್ರಿಕ ಬಾಂಧ್ಯವಗಳನ್ನು ಸ್ಥಾಪಿಸಿಕೊಂಡವು.

1930: ಭಾರತೀಯ ಈಜುಗಾರ ಮಿಹಿರ್ ಸೆನ್ (1930-1997) ಹುಟ್ಟಿದ ದಿನ. 1958ರಲ್ಲಿ ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿದ ಪ್ರಪ್ರಥಮ ಏಷ್ಯನ್ ಎಂಬ ಹೆಗ್ಗಳಿಕೆ ಇವರದು. ಪಾಕ್ ಜಲಸಂಧಿ, ಗಿಬ್ರಾಲ್ಟರ್ ಜಲಸಂಧಿ, ಪನಾಮಾ ಕಾಲುವೆ ಇತ್ಯಾದಿಗಳನ್ನೂ ಇವರು ಈಜಿದ್ದಾರೆ.

1916: ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜ ಶಾಸ್ತ್ರಜ್ಞ, ಸಾಮಾಜಿಕ ಮಾನವ ಶಾಸ್ತ್ರದ ಅದ್ವೈರ್ಯು ಪ್ರೊ. ಎಂ.ಎನ್. ಶ್ರೀನಿವಾಸ್ ಅವರು ನರಸಿಂಹಾಚಾರ್ ಪುತ್ರನಾಗಿ ಮೈಸೂರಿನ ಬಳಿಯ ಅರಕೆರೆ ಗ್ರಾಮದಲ್ಲಿ ಜನಿಸಿದರು.

1835: ಬ್ರಿಟಿಷರೊಂದಿಗೆ ಹೋರಾಡುತ್ತಾ ರಣರಂಗದಲ್ಲಿ ಮಡಿದ ಭಾರತದ ವೀರ ಯೋಧೆ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ (1835-1858) ಹುಟ್ಟಿದ ದಿನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ನವೆಂಬರ್ 15

ಇಂದಿನ ಇತಿಹಾಸ

ನವೆಂಬರ್ 15

ರಾಜ್ಯದ 17 ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ರೈತರನ್ನು ತರಕಾರಿ ಮತ್ತು ಹಣ್ಣುಗಳ ಸಂಸ್ಕರಣಾ ತಂತ್ರಜ್ಞಾನದತ್ತ ಆಕರ್ಷಿಸಲು  ಜಿಕೆವಿಕೆ ಆವರಣದಲ್ಲಿ ನಡೆದ  ಕೃಷಿ  ಮೇಳದಲ್ಲಿ  ರಾಜ್ಯ ಸರ್ಕಾರದ ನೆರವಿನಿಂದ ತರಕಾರಿ ಮತ್ತು ಹಣ್ಣು ಸಂಸ್ಕರಣಾ ತರಬೇತಿ ಕೇಂದ್ರವನ್ನು ಸ್ಥಾಪಿಸಿತು. ಈ ಘಟಕದಲ್ಲಿ ಬೆಟ್ಟದ ನೆಲ್ಲಿಕಾಯಿ ಶರಬತ್ತು, ಪುನರ್ಪುಳಿ ಮತ್ತು ಪರಂಗಿಹಣ್ಣಿನ ಜ್ಯೂಸ್ ತಯಾರಿಸಿ, ರೈತರಿಗೆ ರುಚಿ ತೋರಿಸಿತು.

2008: 2007ರ  ಫೆಬ್ರುವರಿ 17 ರಂದು 68 ಜನರ ಸಾವಿಗೆ ಕಾರಣವಾದ  ಸಂಜೋತಾ ಎಕ್ಸ್ಪ್ರೆಸ್ ರೈಲು ಸ್ಫೋಟ ಮತ್ತು  ಸೆಪ್ಟಂಬರ್ 29ರಂದು 6 ಜನರ ಸಾವಿಗೆ ಕಾರಣವಾದ ಮಾಲೆಗಾಂವ್ ಸ್ಫೋಟಗಳಲ್ಲಿ ಬಳಸಲಾದ ಆರ್ಡಿಎಕ್ಸನ್ನು ಸೇನಾ ಅಧಿಕಾರಿ ಲೆಪ್ಟಿನೆಂಟ್  ಕರ್ನಲ್ ಪಿ. ಎಸ್ ಪುರೋಹಿತ್ ಒದಗಿಸಿದ್ದರು ಎಂಬುದಾಗಿ ಪೊಲೀಸರು ನಾಸಿಕ್  ನ್ಯಾಯಾಲಯಕ್ಕೆ ತಿಳಿಸಿದರು.

2008: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಈದಿನ ಹಾರಿಬಿಡಲಾದ ಎಂಡೀವರ್' ನೌಕೆಯ ವಿಜ್ಞಾನಿಗಳು ಕುಡಿಯುವ ಸಲುವಾಗಿ ಮೂತ್ರವನ್ನು  ಸಂಸ್ಕರಿಸುವ  ಹೊಸ ಸಲಕರಣೆಯನ್ನು ಮನುಕುಲಕ್ಕೆ ನೀಡಿದರು. ಮೂತ್ರವನ್ನು ಸಂಸ್ಕರಿಸಿ ಕುಡಿಯಲು ಯೋಗ್ಯವಾಗುವ, ಮರುಬಳಕೆಯ ನೀರನ್ನು ಈ ಉಪಕರಣ ತಯಾರಿಸುವುದು. ಬಾಹ್ಯಾಕಾಶದಲ್ಲಿ ಗಗನ ಯಾತ್ರಿಗಳ ಮೂತ್ರವನ್ನೇ ಕುಡಿಯುವ ನೀರಾಗಿ ಶುದ್ಧೀಕರಿಸುವ  ಘಟಕ ಎಂಡೀವರ್ ನೌಕೆಯಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ ಎಂದು ನಾಸಾ ವಿಜ್ಞಾನಿಗಳು ಪ್ರಕಟಿಸಿದರು.  ಮೂತ್ರವನ್ನು ಸಂಸ್ಕರಿಸಿ ಕುಡಿಯಲು ಯೋಗ್ಯವಾಗುವ, ಮರುಬಳಕೆಯ ನೀರನ್ನು ತಯಾರಿಸುವ ಮಹತ್ವದ ಪ್ರಯತ್ನ ಬಾಹ್ಯಾಕಾಶ ಸಂಚಾರದಲ್ಲಿ ಇದೇ ಪ್ರಥಮ. ಆದರೆ ಇದು ದುಬಾರಿ  ವಿಧಾನ. ಈ ಸಲಕರಣೆ ಪ್ರತಿದಿನ 23 ಲೀಟರುಗಳಷ್ಟು  (6 ಗ್ಯಾಲನ್) ಮೂತ್ರವನ್ನು  ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ. ನೌಕೆಯಲ್ಲಿ ಈ ಕಾರ್ಯ ಯಶಸ್ವಿಯಾಗಿದೆ. ಇದರೊಂದಿಗೆ ಬಾಹ್ಯಾಕಾಶ ಕೇಂದ್ರದಲ್ಲಿ ಅವಶ್ಯವಿರುವ ನೀರಿನ ಶೇಕಡ 92 ಭಾಗವನ್ನು ಪೂರೈಸಲು ಸಾಧ್ಯ .

2008: ರಾಜ್ಯದ 17 ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ರೈತರನ್ನು ತರಕಾರಿ ಮತ್ತು ಹಣ್ಣುಗಳ ಸಂಸ್ಕರಣಾ ತಂತ್ರಜ್ಞಾನದತ್ತ ಆಕರ್ಷಿಸಲು  ಜಿಕೆವಿಕೆ ಆವರಣದಲ್ಲಿ ನಡೆದ  ಕೃಷಿ  ಮೇಳದಲ್ಲಿ  ರಾಜ್ಯ ಸರ್ಕಾರದ ನೆರವಿನಿಂದ ತರಕಾರಿ ಮತ್ತು ಹಣ್ಣು ಸಂಸ್ಕರಣಾ ತರಬೇತಿ ಕೇಂದ್ರವನ್ನು ಸ್ಥಾಪಿಸಿತು. ಈ ಘಟಕದಲ್ಲಿ ಬೆಟ್ಟದ ನೆಲ್ಲಿಕಾಯಿ ಶರಬತ್ತು, ಪುನರ್ಪುಳಿ ಮತ್ತು ಪರಂಗಿಹಣ್ಣಿನ ಜ್ಯೂಸ್ ತಯಾರಿಸಿ, ರೈತರಿಗೆ ರುಚಿ ತೋರಿಸಿತು. ಈ ಕೇಂದ್ರದ ಮೂಲಕ ತರಕಾರಿ ಮತ್ತು ಹಣ್ಣುಗಳ ಸಂಸ್ಕರಣಾ ಡಿಪ್ಲೊಮಾ ಪದವಿ ತರಗತಿ ಆರಂಭಿಸಲು ಉದ್ದೇಶಿಸಿರುವುದಾಗಿ ಕೃಷಿ ವಿವಿ ಪ್ರಕಟಿಸಿತು. ಹೆಚ್ಚು ಶಿಕ್ಷಣ ಪಡೆಯದ ರೈತರು ಮತ್ತು ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯರಿಗೂ ಇದೇ ಕೇಂದ್ರದಲ್ಲಿ ಒಂದು ವಾರ ಅವಧಿಯ ತರಬೇತಿ ನೀಡಿ, ರೈತರನ್ನು ತಾವೇ ಬೆಳೆದ ಹಣ್ಣು ಮತ್ತು ತರಕಾರಿಯ ಸಂಸ್ಕರಣೆಗೆ ಸಜ್ಜುಗೊಳಿಸಲು ಉದ್ದೇಶಿಸಲಾಗಿದೆ ಎಂದು ವಿವಿ ಹೇಳಿತು. ಹಣ್ಣುಗಳ ಉತ್ಪಾದನೆಯಲ್ಲಿ ಭಾರತ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ. ತರಕಾರಿಯಲ್ಲಿ ಎರಡನೇ ಸ್ಥಾನ. ಆದರೆ ಸಂಸ್ಕರಣೆಯಲ್ಲಿ ತೀರಾ ಕೆಳ ಹಂತದಲ್ಲಿದೆ. ಕೇವಲ ಶೇ 1.5ರಷ್ಟು ಉತ್ಪನ್ನಗಳು ಮಾತ್ರ ಸಂಸ್ಕರಣೆಗೆ ಒಳಪಡುತ್ತಿವೆ. ಇದು ದೇಶದ ರೈತರು ತೀವ್ರ ನಷ್ಟ ಅನುಭವಿಸಲು ಕಾರಣ ಎಂಬುದು ವಿವಿ  ವಿಶ್ಲೇಷಣೆ..

2008: ಸೋಮಾಲಿಯಾ ಹಡಗುಗಳ್ಳರು ಎರಡು ತಿಂಗಳ ಹಿಂದೆ ಅಪಹರಿಸಿದ್ದ ಸ್ಟಾಲ್ಟ್ ವೇಲರ್ ಹಡಗಿನಿಂದ 18 ಭಾರತೀಯರು ಸೇರಿದಂತೆ 22 ಜನರನ್ನು ಈದಿನ ಬೆಳಿಗ್ಗೆ ಬಿಡುಗಡೆ ಮಾಡಿದರು.

2007: ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಡಿಸೆಂಬರಿನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾನಕ್ಕಿಂತ 48 ಗಂಟೆಗಳ ಮುಂಚೆ ಅಭ್ಯರ್ಥಿಗಳು ಮೊಬೈಲಿನ ಎಸ್ ಎಂ ಎಸ್ (ಸಂಕ್ಷಿಪ್ತ ಸಂದೇಶ) ಕಳುಹಿಸಿ ಪ್ರಚಾರ ಮಾಡುವುದನ್ನು ಚುನಾವಣಾ ಆಯೋಗ ನಿಷೇಧಿಸಿತು. ಮತದಾನಕ್ಕಿಂತ 48 ಗಂಟೆಗಳ ಮುಂಚೆ ಅಭ್ಯರ್ಥಿಗಳು ತಮ್ಮ ಮೊಬೈಲಿನಿಂದ ಸಂದೇಶ ಕಳುಹಿಸಿ ಪ್ರಚಾರ ಮಾಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಯಿತು. ಮತದಾನ ಸಮಯದಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಚುನಾವಣಾ ಆಯೋಗ ಈ ನೂತನ ಕ್ರಮವನ್ನು ಮೊತ್ತ ಮೊದಲ ಬಾರಿಗೆ ಕಂಡುಕೊಂಡಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿ ತಿಳಿಸಿದರು.

2007: ಗುಲ್ಬರ್ಗ ನಗರದ ಪ್ರತಿಷ್ಠಿತ ಎಂ.ಆರ್. ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ, ಖ್ಯಾತ ವೈದ್ಯ ಸಾಹಿತಿಯೂ ಆಗಿರುವ ಡಾ.ಪಿ.ಎಸ್. ಶಂಕರ್ ಅವರಿಗೆ `ನ್ಯಾಶನಲ್ ಕಾಲೇಜ್ ಆಫ್ ಚೆಸ್ಟ್ ಫಿಜಿಶಿಯನ್ಸ್' ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಘೋಷಿಸಿತು. 50 ವರ್ಷಗಳ ಇತಿಹಾಸ ಹೊಂದಿರುವ ಈ ಸಂಸ್ಥೆಯು ಎದೆ ರೋಗಗಳ ನಿದಾನ, ಶುಶ್ರೂಷೆಯಲ್ಲಿ ಸಾಧನೆಗಾಗಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಘೋಷಿಸಿದ್ದು, 1999ರ ನಂತರ ಈ ಪ್ರಶಸ್ತಿಗೆ ಪಾತ್ರರಾದವರ ಪೈಕಿ ದೇಶದಲ್ಲೇ ಎರಡನೆಯವರು ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಡಾ. ಪಿ.ಎಸ್. ಶಂಕರ್ ಅವರು ಚೆಸ್ಟ್ ಸೊಸೈಟಿ ಮತ್ತು ನ್ಯಾಷನಲ್ ಕಾಲೇಜ್ ಆಫ್ ಚೆಸ್ಟ್ ಫಿಜಿಶಿಯನ್ಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ದೆಹಲಿಯ ಪಟೇಲ್ ಚೆಸ್ಟ್ ಇನ್ಸ್ಟಿಟ್ಯೂಟಿನಲ್ಲಿ ಅಧ್ಯಯನ ನಡೆಸಿ, ನಂತರ ಕಾಮನ್ ವೆಲ್ತ್ ಮೆಡಿಕಲ್ ಫೆಲೋ ಆಗಿ ಲಂಡನ್ನಿನ ಬ್ರಾಮ್ ಟನ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

2007: ಸೇವೆ ಕಾಯಂಗೆ ಒತ್ತಾಯಿಸಿ ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ಇಬ್ಬರ ಸಾವಿಗೆ ಕಾರಣರಾದ ನಗರದ ಬಿಪಿಎಲ್ ಎಂಜಿನಿಯರಿಂಗ್ ಲಿಮಿಟೆಡ್ ಕಾರ್ಮಿಕ ಸಂಘದ 12 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿತು. 1998ರಲ್ಲಿ ನಡೆದ ಈ ಘಟನೆಯಲ್ಲಿ ಶಿಕ್ಷೆಗೆ ಒಳಗಾದವರು ಕಂಪೆನಿಗೆ ಸೇರಿದ ಬಸ್ಸಿಗೆ ಬೆಂಕಿ ಹಚ್ಚಿ, ಅದರ ಒಳಗಿದ್ದ ಸಿಬ್ಬಂದಿ ತಪ್ಪಿಸಿಕೊಂಡು ಹೋಗದಂತೆ ಮಾಡಿದ್ದರಿಂದಾಗಿ ಇಬ್ಬರು ಸಾವನ್ನಪ್ಪಿ ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. 49 ಆರೋಪಿಗಳ ಪೈಕಿ ಸೆಷನ್ಸ್ ಕೋರ್ಟಿನಿಂದ ಅಕ್ಟೋಬರ್ 13ರಂದು ಆರೋಪ ಮುಕ್ತಗೊಂಡಿದ್ದ ಸಿ.ಮಗೇಶ್, ಪಿ.ಎ.ಭರತ್ ಕುಮಾರ್, ಎಡ್ವಿನ್ ನೋಯಲ್, ಎಸ್.ಬಾಬು, ನಾಗರಾಜ್ (ಎಲ್ಲರೂ 20 ರಿಂದ 25 ವರ್ಷ ವಯಸ್ಸಿನವರು) ಅವರಿಗೆ ನ್ಯಾಯಮೂರ್ತಿಗಳಾದ ಕೆ.ಶ್ರೀಧರರಾವ್ ಹಾಗೂ ರವಿ ಬಿ.ನಾಯಕ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಜೀವಾವಧಿ ಶಿಕ್ಷೆ ವಿಧಿಸಿತು. ಈ ಆರೋಪಿಗಳನ್ನು ಖುಲಾಸೆ ಮಾಡಿದ್ದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಪೀಠ ಮಾನ್ಯ ಮಾಡಿತು. ಕೊಲೆಗೆ ಕಾರಣರಾದ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಆರ್. ಶ್ರೀನಿವಾಸ, ಕಾರ್ಯದರ್ಶಿ ಟಿ.ಕೆ.ಎಸ್.ಕುಟ್ಟಿ ಹಾಗೂ ಇತರ ಪದಾಧಿಕಾರಿಗಳಾದ ಎನ್.ವಿ.ರವಿ, ಆರ್.ರಮೇಶ್, ಧರಣೇಶ್ ಕುಮಾರ್, ಎಸ್.ಜಗದೀಶ ಹಾಗೂ ಶರತ್ಕುಮಾರ್ ಅವರಿಗೆ ಸೆಷನ್ಸ್ ಕೋರ್ಟ್ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಪೀಠ ಊರ್ಜಿತಗೊಳಿಸಿತು.

2007: ಗ್ವಾಲಿಯರಿನಲ್ಲಿ ಪಾಕಿಸ್ಥಾನ ತಂಡದ ವಿರುದ್ಧದ ಇಂಡಿಯನ್ ಆಯಿಲ್ ಕಪ್ ಏಕದಿನ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯವನ್ನು ಆರು ವಿಕೆಟ್ಟುಗಳ ಅಂತರದಿಂದ ಜಯಿಸಿದ ಭಾರತ ಇನ್ನೂ ಒಂದು ಪಂದ್ಯ ಉಳಿದಿರುವಂತೆ ಸರಣಿಯನ್ನು 3-1ರಿಂದ ತನ್ನದಾಗಿಸಿಕೊಂಡಿತು.

2006: ಸಾರ್ವತ್ರಿಕ ಲಸಿಕಾ ಕಾರ್ಯಕ್ರಮವನ್ನು ಜನಪ್ರಿಯಗೊಳಿಸಲು ಸಲ್ಲಿಸಿದ ಅನುಪಮ ಸೇವೆಗಾಗಿ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೆ ಲಂಡನ್ನಿನ ಅಂತಾರಾಷ್ಟ್ರೀಯ ಲಸಿಕಾ ಕಾರ್ಯಕ್ರಮದ ಅನುದಾನ ಸಂಸ್ಥೆಯು ವಿಶೇಷ ಪ್ರಮಾಣಪತ್ರ ನೀಡಿ ಗೌರವಿಸಿತು. ಈ ವಿಶೇಷ ಪ್ರಮಾಣಪತ್ರ ಪಡೆಯುತ್ತಿರುವ ಮೊದಲ ಭಾರತೀಯ ಹಾಗೂ ವಿಶ್ವದ 6ನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಬಚ್ಚನ್ ಪಾತ್ರರಾದರು. ಬಚ್ಚನ್ ಅವರು ಭಾರತದಲ್ಲಿ ಯುನಿಸೆಫ್ ಮತ್ತು ಪಲ್ಸ್ ಪೋಲಿಯೊ ಲಸಿಕೆ ನೀಡಿಕೆ ಕಾರ್ಯಕ್ರಮಗಳ ಪ್ರಚಾರದ ರಾಯಭಾರಿಯಾಗಿದ್ದಾರೆ.

2006: ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಅವರ ಎರಡು ದಶಕಗಳ ಹಿಂದಿನ ಬ್ಯಾಟಿಂಗ್ ಜೊತೆಯಾಟದ ವಿಶ್ವದಾಖಲೆಯನ್ನು ಹೈದರಾಬಾದ್ ಸೇಂಟ್ ಪೀಟರ್ಸ್ ಶಾಲೆಯ ಬಿ. ಮನೋಜ್ ಕುಮಾರ್ ಮತ್ತು ಮೊಹಮ್ಮದ್ ಶಾಯ್ ಬಾಜ್ ತಂಬಿ ಮುರಿದರು. ಸೇಂಟ್ ಪೀಟರ್ಸ್ ಶಾಲೆಯ ವಿರುದ್ಧ ಸಿಕಂದರಾಬಾದ್ ಪೆರೇಡ್ ಮೈದಾನದಲ್ಲಿ ನಡೆದ ಅಂತರಶಾಲಾ ಪಂದ್ಯದಲ್ಲಿ ಈ ಜೋಡಿ ಮುರಿಯದ ಮೊದಲ ವಿಕೆಟ್ ಜೊತೆಯಾಟಕ್ಕೆ 721 ರನ್ ಕಲೆ ಹಾಕಿತು. ಇದರಿಂದಾಗಿ 1987-88ರ ಸಾಲಿನಲ್ಲಿ ಸಚಿನ್ ಮತ್ತು ಕಾಂಬ್ಳಿ ಶಾರದಾಶ್ರಮ ಶಾಲೆಯ ಪರ ಮುರಿಯದ 3ನೇ ವಿಕೆಟ್ಟಿಗೆ ಸೇರಿಸಿದ್ದ 664 ರನ್ನುಗಳ ದಾಖಲೆಯನ್ನು ಈ ಜೋಡಿ ಮುರಿದಂತಾಯಿತು.

2005: ಬೆಂಗಳೂರಿನ ಪ್ರಾರ್ಥನಾ ಎಜುಕೇಷನ್ ಸೊಸೈಟಿ'ಯು 2004ರ ಸಾಲಿನ ಕಂಪ್ಯೂಟರ್ ಲಿಟರೆಸಿ ಎಕ್ಸಲೆನ್ಸ್ ಅವಾರ್ಡ್ ಫಾರ್ ಸ್ಕೂಲ್ಸ್' ಪ್ರಶಸ್ತಿಗೆ ಆಯ್ಕೆಯಾಯಿತು. ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಪ್ರತಿವರ್ಷ ನೀಡುವ ಈ ಪ್ರಶಸ್ತಿಯ ಮೊತ್ತ 1.5 ಲಕ್ಷ ರೂಪಾಯಿಗಳು.

2002: ನೇಪಾಳದಲ್ಲಿ ಮಾವೋವಾದಿಗಳ ದಾಳಿಯಲ್ಲಿ ಭದ್ರತಾಪಡೆಯ ಸಿಬ್ಬಂದಿ ಸೇರಿ 200 ಜನ ಮೃತರಾದರು.

1989: ಕರಾಚಿಯಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ತಮ್ಮ ಚೊಚ್ಚಲ ಹೆಜ್ಜೆ ಇರಿಸಿದ ಸಚಿನ್ ತೆಂಡೂಲ್ಕರ್ ಭಾರತದ ಪರವಾಗಿ ಆಡಿದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಗ ಅವರ ವಯಸ್ಸು: 16 ವರ್ಷ 205 ದಿನಗಳು. ಪಾಕಿಸ್ಥಾನದ ಬೌಲರ್ ವಖಾರ್ ಯೂನಸ್ ಅವರೂ ಇದೇ ಪಂದ್ಯದಲ್ಲಿ ಚೊಚ್ಚಲ ಹೆಜ್ಜೆ ಇರಿಸಿದರು.

1982: ಖ್ಯಾತ ಗಾಂಧಿವಾದಿ, ಸಮಾಜ ಸುಧಾರಕ ಆಚಾರ್ಯ ವಿನೋಬಾ ಭಾವೆ ಅವರು ವಾರ್ಧಾದಲ್ಲಿ ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು.

1982: ಖ್ಯಾತ ಕವಿ, ಯುಗವಾಣಿ ಮಾಜಿ ಸಂಪಾದಕ ಎಸ್.ಎನ್. ಕಾಟ್ಕರ್ ನಿಧನ.

1965: ಕಝಖಸ್ಥಾನದ ಬೈಕನೂರಿನಿಂದ ಸೋವಿಯತ್ ಗಗನನೌಕೆ ವೆನೆರಾ 3 ಬಾಹ್ಯಾಕಾಶಕ್ಕೆ ಏರಿತು. 1966ರ ಮಾರ್ಚ್ 1 ರಂದು ಇದು ಶುಕ್ರಗ್ರಹಕ್ಕೆ ತಲುಪಿ ಅಲ್ಲಿಂದ ಇನ್ನೊಂದು ಗ್ರಹವನ್ನು ತಲುಪಿದ ಮೊದಲ ಮಾನವ ರಹಿತ ಬಾಹ್ಯಾಕಾಶ ನೌಕೆ ಎನಿಸಿಕೊಂಡಿತು.

1956: ಮಣಿಪುರ ಸಂಸ್ಥಾನಕ್ಕೆ ಭಾರತದ ಆರು ಶಾಸನಗಳನ್ನು ಅನ್ವಯಿಸಲು ಅವಕಾಶ ನೀಡುವ `ಸಿ' ವಿಭಾಗದ ಸಂಸ್ಥಾನಗಳ (ಶಾಸನಗಳ ತಿದ್ದುಪಡಿ) ಮಸೂದೆಯನ್ನು ಲೋಕಸಭೆಯು ಅಂಗೀಕರಿಸಿತು.

1949: ಮಹಾತ್ಮಾ ಗಾಂಧಿ ಅವರನ್ನು ಕೊಲೆಗೈದುದಕ್ಕಾಗಿ ನಾಥೂರಾಂ ಗೋಡ್ಸೆ ಮತ್ತು ನಾರಾಯಣ ಆಪ್ಟೆ ಅವರನ್ನು ಗಲ್ಲಿಗೇರಿಸಲಾಯಿತು.

1947: ಸಾಹಿತಿ ಹಿ.ಶಿ. ರಾಮಚಂದ್ರಗೌಡ ಜನನ.

1945: ಸಾಹಿತಿ ಟಿ. ಜಯಶೀಲ ಜನನ.

1907: `ಹಚ್ಚೇವು ಕನ್ನಡದ ದೀಪ' ರಚನಕಾರ ದುಂಡಪ್ಪ ಸಿದ್ದಪ್ಪ ಕರ್ಕಿ (15-11-1907ರಿಂದ 16-1-1984) ಅವರು ಸಿದ್ದಪ್ಪ್ಪ-ದುಂಡವ್ವ ದಂಪತಿಯ ಮಗನಾಗಿ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಹಿರೇಕೊಪ್ಪದಲ್ಲಿ ಜನಿಸಿದರು.

1904: `ಸೇಫ್ಟಿ ರೇಜರ್' ಗಾಗಿ ಕಿಂಗ್ ಕ್ಯಾಂಪ್ ಗಿಲ್ಲೆಟ್ ಅವರಿಗೆ ಪೇಟೆಂಟ್ ನೀಡಲಾಯಿತು.

1738: ಸರ್ ವಿಲಿಯಮ್ ಫ್ರೆಡರಿಕ್ ಹರ್ಶೆಲ್ (1738-1822) ಹುಟ್ಟಿದ ದಿನ. ಜರ್ಮನ್ ಸಂಜಾತ ಈ ಬ್ರಿಟಿಷ್ ಖಗೋಳತಜ್ಞ ಯುರೇನಸ್ ಗ್ರಹವನ್ನು ಕಂಡು ಹಿಡಿದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Wednesday, December 2, 2009

ಇಂದಿನ ಇತಿಹಾಸ History Today ನವೆಂಬರ್ 14

ಇಂದಿನ ಇತಿಹಾಸ

ನವೆಂಬರ್ 14

ಚಂದ್ರನ ಮೇಲೆ ರಾಷ್ಟ್ರಧ್ವಜವನ್ನು ಪ್ರತಿಷ್ಠಾಪಿಸುವ ಭಾರತೀಯರ ಕನಸು ಈದಿನ ರಾತ್ರಿ ನನಸಾಯಿತು. ಚಂದ್ರಯಾನ-1 ನೌಕೆಯಿಂದ ಬಿಡುಗಡೆಗೊಂಡ ಮೂನ್ ಇಂಪ್ಯಾಕ್ಟ್ ಪ್ರೋಬ್ (ಎಂಐಬಿ) ಶೋಧಕ ಉಪಕರಣವು ಚಂದ್ರನ ಮೇಲೆ ಇಳಿಯುವ ಮೂಲಕ ರಾಷ್ಟ್ರಧ್ವಜ ಪ್ರತಿಷ್ಠಾಪನೆಗೊಂಡಿತು. ಇದು ವಿಜ್ಞಾನಿಗಳಿಗೆ ಸಾಧನೆ ಮಾಡಿದ ರೋಮಾಂಚನ ಉಂಟು ಮಾಡಿದರೆ, ಭಾರತೀಯರಿಗೆ ಹೆಮ್ಮೆ ತಂದಿತು.

ಇಂದು ಮಕ್ಕಳ ದಿನ. ಭಾರತದಲ್ಲಿ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ (1889-1964) ಅವರ ಜನ್ಮದಿನವನ್ನು ಮಕ್ಕಳ ದಿನವಾಗಿ ಆಚರಿಸಲಾಗುತ್ತಿದೆ. ಆದರೆ ಹಲವಾರು ರಾಷ್ಟ್ರಗಳಲ್ಲಿ ಜೂನ್ 1ರಂದು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. 1925ರ ಜೂನ್ 1ರಂದು ಮಕ್ಕಳ ಕಲ್ಯಾಣಕ್ಕೆ ಸಂಬಂಧಿಸಿದ ಜಾಗತಿಕ ಸಮ್ಮೇಳನ ಸ್ವಿಜರ್ ಲ್ಯಾಂಡಿನ ಜಿನೇವಾದಲ್ಲಿ ನಡೆಯಿತು. ಇದೇ ಈ ದಿನಾಚರಣೆಯ ಮೂಲ.

2008: ಚಂದ್ರನ ಮೇಲೆ ರಾಷ್ಟ್ರಧ್ವಜವನ್ನು ಪ್ರತಿಷ್ಠಾಪಿಸುವ ಭಾರತೀಯರ ಕನಸು ಈದಿನ ರಾತ್ರಿ ನನಸಾಯಿತು. ಚಂದ್ರಯಾನ-1 ನೌಕೆಯಿಂದ ಬಿಡುಗಡೆಗೊಂಡ ಮೂನ್ ಇಂಪ್ಯಾಕ್ಟ್ ಪ್ರೋಬ್ (ಎಂಐಬಿ) ಶೋಧಕ ಉಪಕರಣವು ಚಂದ್ರನ ಮೇಲೆ ಇಳಿಯುವ ಮೂಲಕ ರಾಷ್ಟ್ರಧ್ವಜ ಪ್ರತಿಷ್ಠಾಪನೆಗೊಂಡಿತು. ಇದು ವಿಜ್ಞಾನಿಗಳಿಗೆ ಸಾಧನೆ ಮಾಡಿದ ರೋಮಾಂಚನ ಉಂಟು ಮಾಡಿದರೆ, ಭಾರತೀಯರಿಗೆ ಹೆಮ್ಮೆ ತಂದಿತು. ಭಾರತೀಯರು ಯಾವುದೇ ಕ್ಷೇತ್ರದಲ್ಲಿ ಹಿಂದುಳಿದಿಲ್ಲ ಎಂಬುದನ್ನು ಸಾಬೀತುಪಡಿಸಿತು. ಚಂದ್ರನ ಮೇಲಿಳಿದ `ಶೋಧನಾ ಉಪಕರಣ'ವು ತ್ರಿವರ್ಣ ಧ್ವಜವನ್ನು ವಿಭಿನ್ನವಾಗಿ ಪ್ರದರ್ಶಿಸಿತು. `ರಾತ್ರಿ 8.30ರ ಸುಮಾರಿಗೆ ನೌಕೆಯಿಂದ ಶೋಧನಾ ಉಪಕರಣವನ್ನು ಚಂದ್ರನ ಮೇಲೆ ಇಳಿಸಲಾಯಿತು. ಉಪಕರಣದ ನಾಲ್ಕು ದಿಕ್ಕುಗಳಲ್ಲಿಯೂ ತ್ರಿವರ್ಣ ಧ್ವಜವನ್ನು ಚಿತ್ರಿಸಲಾಗಿದ್ದು, ಅದು ಚಂದ್ರನ ಮೇಲೆ ಭಿನ್ನವಾದ ರೀತಿಯಲ್ಲಿ ಕಂಗೊಳಿಸುತ್ತಿದೆ' ಎಂದು ಇಸ್ರೋ ವಕ್ತಾರ ಎಸ್. ಸತೀಶ್ ತಿಳಿಸಿದರು. ಶೋಧನಾ ಉಪಕರಣ ಚಂದ್ರನನ್ನು ತಲುಪಲು ಒಟ್ಟು ಇಪ್ಪತ್ತು ನಿಮಿಷ ತೆಗೆದುಕೊಂಡಿತು. ಇದರ ಒಟ್ಟು ಪ್ರಕ್ರಿಯೆಯಲ್ಲಿ ಉಪಕರಣವು ವಿವಿಧ ಕೋನಗಳಲ್ಲಿ ಚಂದ್ರನ ದೃಶ್ಯಗಳನ್ನು ಸೆರೆ ಹಿಡಿಯಿತು. ಶೋಧಕ ಉಪಕರಣವು 29 ಕೆ.ಜಿ ತೂಕದ `ಸಿ-ಬ್ಯಾಂಡ್ ರಾಡಾರ್ ಆಲ್ಟಿಮೀಟರ್' ಸಾಧನದ ಮೂಲಕ ಚಂದ್ರನ ಮೇಲ್ಮೈ ಪ್ರದೇಶವನ್ನು ಅಳೆದು, ದೃಶ್ಯಗಳನ್ನು ಸೆರೆ ಹಿಡಿದು ಮಾಹಿತಿ ರವಾಸುವುದು.

2008: ಅತ್ಯಧಿಕ ಮಾಲಿನ್ಯದಿಂದಾಗಿ ನವದೆಹಲಿಯಿಂದ ಬೀಜಿಂಗ್ ವರೆಗಿನ ಏಷ್ಯಾದ ನಗರಗಳು ಕಪ್ಪಾಗುತ್ತಿವೆ; ಹಿಮಾಲಯದ ಹಿಮರಾಶಿ ಶೀಘ್ರವಾಗಿ ಕರಗುತ್ತಿದ್ದು, ಹವಾಮಾನ ವೈಪರೀತ್ಯ ಹೆಚ್ಚುತ್ತಿದೆ ಎಂದು ವಿಶ್ವಸಂಸ್ಥೆಯ ಅಧ್ಯಯನವೊಂದು ಎಚ್ಚರಿಸಿತು. ಕಪ್ಪು ಇಂಗಾಲದ ಅಂಶ ಮೋಡಗಳಲ್ಲಿ ಸೇರಿಕೊಂಡು ಸೂರ್ಯನ ಕಿರಣಗಳನ್ನು ಹೀರಿಕೊಳ್ಳುತ್ತದಲ್ಲದೆ ವಾತಾವರಣವನ್ನು ಬಿಸಿ ಮಾಡುತ್ತದೆ. ಇದರಿಂದ ಗಾಳಿಯ ಗುಣಮಟ್ಟ ಹಾಗೂ ಏಷ್ಯಾದ ಕೃಷಿಯ ಮೇಲೆ ದುಷ್ಪರಿಣಾಮವಾಗುತ್ತಿದೆ. ಇಲ್ಲಿನ ಮೂರು ಶತಕೋಟಿ ಮನುಷ್ಯರ ಆರೋಗ್ಯ ಮತ್ತು ಆಹಾರ ಉತ್ಪಾದನೆಗೆ ಗಂಡಾಂತರ ತಂದೊಡ್ಡುತ್ತಿದೆ. ಭಾರತದಲ್ಲಿ 1960ರಿಂದ 2000 ದವರೆಗೆ ವಾತಾವರಣ ಮಸುಕಾಗುವ ಪ್ರಮಾಣ ದಶಕಕ್ಕೆ ಶೇ 2ರಷ್ಟಿದ್ದರೆ 1980ರಿಂದ 2004ರ ಅವಧಿಯಲ್ಲಿ ಅದು ದ್ವಿಗುಣಗೊಂಡಿದೆ. ನವದೆಹಲಿ, ಕರಾಚಿ, ಬೀಜಿಂಗ್, ಶಾಂಘೈಗಳಂತಹ ನಗರಗಳಲ್ಲಿ ವಾತಾವರಣ ಮಸುಕಾಗುವಿಕೆ ಶೇ. 10ರಿಂದ 25ರಷ್ಟು. ಎಲ್ಲಕ್ಕಿಂತ ಹೆಚ್ಚು ಹಾನಿಗೊಳಗಾಗಿರುವ ನಗರವೆಂದರೆ ಚೀನಾದ ಗ್ವಾಂಗ್ ಝೊ. ಚಳಿಗಾಲದಲ್ಲಿ ಇಲ್ಲಿನ ಸೂರ್ಯಕಿರಣಗಳು ಶೇ 20ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಮಸುಕಾಗುತ್ತವೆ ಎಂದು ವರದಿ ಹೇಳಿತು.

2008: ಭಾರತೀಯ ಮೂಲದ ಡಿಸೈನರ್ ಆನಂದ್ ಜಾನ್ ಅಲೆಗ್ಸಾಂಡರ್ ಮೇಲಿದ್ದ ಅತ್ಯಾಚಾರಕ್ಕೆ ಸಂಬಂಧಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು. 2 ತಿಂಗಳ ವಿಚಾರಣೆ ಬಳಿಕ ಕೋರ್ಟ್ ತೀರ್ಪು ನೀಡಿತು. ಸದ್ಯ 34ರ ಹರೆಯದ ಆನಂದ್ 67 ವರ್ಷವಾದ ಬಳಿಕ ಮಾತ್ರ ಪೆರೋಲ್ ಮೇಲೆ ಬಿಡುಗಡೆಗೆ ಅವಕಾಶವಿದೆ ಎಂದು ತೀರ್ಪಿನಲ್ಲಿ ಹೇಳಲಾಯಿತು. ವಿಚಾರಣೆಯ ಪ್ರಾರಂಭದ ಹಂತದಲ್ಲಿ ಆತನ ಮೇಲೆ ಇಂತಹ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಆದರೆ ಕೊನೆಯ ಹಂತದಲ್ಲಿ 16 ಪ್ರಕರಣಗಳು ಮಾತ್ರ ಸಾಬೀತಾದವು. ಎರಡು ಕೊಲೆ ಪ್ರಕರಣಗಳೂ ಇದರಲ್ಲಿ ಸೇರಿದ್ದರೂ ಅವುಗಳಿಂದ ದೋಷಮುಕ್ತಗೊಳಿಸಲಾಯಿತು.

2008: ಮಾಜಿ ರಾಜ ಪ್ರಭುತ್ವದ ಕುಟುಂಬಗಳಿಗೆ ವಿಶೇಷ ಸ್ಥಾನಮಾನ ಒದಗಿಸುವ ಕಾನೂನನ್ನು ತೆಗೆದು ಹಾಕುವಂತೆ ಅಥವಾ ಅದಕ್ಕೆ ತಿದ್ದುಪಡಿ ತರುವಂತೆ ನೇಪಾಳ ಸುಪ್ರೀಂಕೋರ್ಟ್ ಮಾವೋವಾದಿ ನೇತೃತ್ವದ ಸರ್ಕಾರಕ್ಕೆ ನಿರ್ದೇಶನ ನೀಡಿತು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನುಪರಿಗಣಿಸಿ ಈ ತೀರ್ಪು ಹೊರಬಿದ್ದಿತು.

2008: ಇಂಡೊನೇಷ್ಯಾದ ಎರಡು ಗ್ರಾಮಗಳಲ್ಲಿ ಅಧಿಕ ಮಳೆಯಿಂದ ಭೂಕುಸಿತ ಸಂಭವಿಸಿ 10 ಜನರು ಮೃತರಾಗಿ, 7 ಮಂದಿ ಕಾಣೆಯಾದರು. 30 ಮನೆಗಳು ನಾಶಗೊಂಡವು.

2008: ಮಾಜಿ ಕೇಂದ್ರ ಸಚಿವ ಹಾಗೂ ತೃಣಮೂಲ ಕಾಂಗ್ರೆಸ್ಸೊಮ ಹಿರಿಯ ಮುಖಂಡ ಅಜಿತ್ ಪಾಂಜಾ (72) ಈದಿನ ಕೋಲ್ಕತ್ತದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಆರು ಸಲ ಸಂಸತ್ತಿಗೆ ಆಯ್ಕೆಯಾಗಿದ್ದ ಪಾಂಜಾ ಅವರು ರಾಜೀವ ಗಾಂಧಿ, ಪಿ.ವಿ.ನರಸಿಂಹ ರಾವ್ ಹಾಗೂ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದರು. 1971 ಹಾಗೂ 1972-77 ರ್ಲಲಿ ಪಶ್ಚಿಮ ಬಂಗಾಳದ ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

2008: ಕರಾವಳಿ ಪ್ರದೇಶದ ಬಹುತೇಕ ಮಂದಿಯನ್ನು ಕಾಡುವ ಆನೆಕಾಲು ರೋಗ (ಫೈಲೇರಿಯಾ) ನಿವಾರಿಸುವ ನಿಟ್ಟಿನಲ್ಲಿ ಕಾಸರಗೋಡಿನ `ಇನ್ಸ್ಟಿಟ್ಯೂಟ್ ಆಫ್ ಅಪ್ಲೈಯ್ಡ್ ಡರ್ಮಟಾಲಜಿ' (ಐಎಡಿ) ಸಂಸ್ಥೆಯು ಭಾರತೀಯ ಸಂಯೋಜಿತ ಚಿಕಿತ್ಸಾ ವಿಧಾನವನ್ನು ಪತ್ತೆ ಮಾಡಿದೆ ಎಂದು ಸಂಸ್ಥೆಯ ಚರ್ಮರೋಗ ತಜ್ಞ ಡಾ.ಎಸ್. ಆರ್. ನರಹರಿ ಬೆಂಗಳೂರಿನಲ್ಲಿಪ್ರಕಟಿಸಿದರು. ಅಲೋಪಥಿ, ಆಯುರ್ವೇದ, ಹೋಮಿಯೋಪಥಿ ಮುಂತಾದ ಚಿಕಿತ್ಸಾ ಮಾದರಿ ಒಳಗೊಂಡ ಸಂಯೋಜಿತ ಚಿಕಿತ್ಸಾ ವಿಧಾನದ ಮೂಲಕ ಫೈಲೇರಿಯಾ ರೋಗ ಗುಣಪಡಿಸಬಹುದು ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು. `ಮೂರು ಚಿಕಿತ್ಸಾ ಮಾದರಿಗಳ ಜೊತೆಗೆ ಯೋಗಾಸನ ಮಾಡಿಸುವುದರಿಂದ ಫೈಲೇರಿಯಾದಿಂದ ಬಳಲುತ್ತಿರುವ ವ್ಯಕ್ತಿಯನ್ನು ಹಂತಹಂತವಾಗಿ ಗುಣಪಡಿಸಬಹುದು. ಸಂಯೋಜಿತ ಚಿಕಿತ್ಸಾ ಪದ್ಧತಿ ಮೂಲಕ ಫೈಲೇರಿಯಾ ಬಾಧಿತ ಕಾಲನ್ನು ಶೇ 80ರಷ್ಟು ಗುಣಪಡಿಸಬಹುದು' ಎಂದು ಅವರು ಈ ದಿನದ ವಿಶ್ವ ಆನೆಕಾಲು ರೋಗ ದಿನಾಚರಣೆ ಸಂದರ್ಭದಲ್ಲಿ ಹೇಳಿದರು.

2007: ಜನತಾದಳ (ಎಸ್) ಮುಖಂಡರ ಧೋರಣೆಯಿಂದ ಬೇಸತ್ತು ಆ ಪಕ್ಷ ತ್ಯಜಿಸಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್. ಪಟೇಲ್ ಪುತ್ರ ಮಹಿಮಾ ಪಟೇಲ್ ಸಾರಥ್ಯದ `ಸುವರ್ಣ ಯುಗ' ನೂತನ ಪಕ್ಷ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಈದಿನ ಉದಯವಾಯಿತು.

2007: ಮಾಜಿ ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ರೆಫ್ರಿ ಎಂ. ಕೃಷ್ಣಪ್ಪ (72) ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಇವರು ಬಾಲಾಂಜನೇಯ ವ್ಯಾಯಾಮ ಶಾಲೆಯ ಸ್ಥಾಪಕ ಸದಸ್ಯರು ಹಾಗೂ ಅಧ್ಯಕ್ಷರು. ಅನೇಕ ಅಂತಾರಾಷ್ಟ್ರೀಯ ಖ್ಯಾತಿಯ ಪವರ್ ಲಿಫ್ಟರುಗಳು ಕೃಷ್ಣಪ್ಪ ಅವರಿಂದ ತರಬೇತಿ ಪಡೆದಿದ್ದಾರೆ. ರಥಬೀದಿಯ ಬಳಿ ಅವರು ಬೆಳೆಸಿದ ಬಾಲಾಂಜನೇಯ ವ್ಯಾಯಾಮ ಶಾಲೆಗೆೆ ಈ ವರ್ಷ ವಜ್ರ ಮಹೋತ್ಸವ ಸಂಭ್ರಮ.

2007: ಬೆಂಗಳೂರು ನಗರದ ಹೊರವಲಯದಲ್ಲಿನ ಸ್ಪರ್ಶ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಿಹಾರದ ಎರಡು ವರ್ಷದ ಬಾಲಕಿ ಲಕ್ಷ್ಮಿಯನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆಕೆಯ ಆರೈಕೆಗಾಗಿ ಸರ್ಕಾರದ ವತಿಯಿಂದ 1 ಲಕ್ಷ ರೂಪಾಯಿ ನೀಡಿದರು.

2006: ಬಡಕುಟುಂಬದ ಹೆಣ್ಣು ಮಗುವಿನ ಹೆಸರಿನಲ್ಲಿ 10,000 ರೂಪಾಯಿ ಠೇವಣಿ ಇಡುವ ಕರ್ನಾಟಕ ಸರ್ಕಾರದ ವಿನೂತನ `ಭಾಗ್ಯಲಕ್ಷ್ಮಿ' ಯೋಜನೆಗೆ ಬೆಂಗಳೂರಿನ ಜವಾಹರ ಬಾಲ ಭವನದಲ್ಲಿ ಅಧಿಕೃತ ಚಾಲನೆ ನೀಡಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಯೋಜನೆಗೆ ಚಾಲನೆ ನೀಡಿ, 100 ಫಲಾನುಭವಿ ಹೆಣ್ಣುಮಕ್ಕಳ ತಾಯಂದಿರಿಗೆ ಸಾಂಕೇತಿಕವಾಗಿ ಮಂಜೂರಾತಿ ಆದೇಶ ಪತ್ರ ವಿತರಿಸಿದರು. ಬಿಡದಿ ಹೋಬಳಿ ಕರಿಯಪ್ಪನ ಹಳ್ಳಿಯ ಚೌಡಯ್ಯ ಮತ್ತು ಭಾಗ್ಯ ಅವರ ಮಗು ಅನುಷಾ ಠೇವಣಿ ಪತ್ರ ಪಡೆದ ಪ್ರಥಮ ಮಗು ಎನಿಸಿಕೊಂಡಿತು. ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಜರಿದ್ದರು.

2006: ಹಿರಿಯ ಸಾಹಿತಿ ಸೂರ್ಯನಾರಾಯಣ ಚಡಗ (77) ಅವರು ಬೆಂಗಳೂರಿನ ಕಲ್ಯಾಣನಗರದ ತಮ್ಮ ನಿವಾಸದಲ್ಲಿ ನಿಧನರಾದರು. 1954ರಲ್ಲಿ ಮೊದಲ ಕಾದಂಬರಿ `ರತ್ನ ಪಡೆದ ಭಾಗ್ಯ'ದಿಂದ 2001ರಲ್ಲಿ ಬರೆದ `ನಾಟ್ಯರಶ್ಮಿ' ಕೃತಿವರೆಗೆ 30ಕ್ಕೂ ಹೆಚ್ಚು ಕೃತಿಗಳನ್ನು ಚಡಗ ರಚಿಸಿದ್ದಾರೆ.

2006: ಕೇರಳದ ಹಿರಿಯ ಸ್ವಾತಂತ್ರ್ಯ ಯೋಧ, ಕಮ್ಯೂನಿಸ್ಟ್ ಧುರೀಣ ಎನ್. ಸುಬ್ರಹ್ಮಣ್ಯ ಶೆಣೈ ಪಯ್ಯನ್ನೂರಿನಲ್ಲಿ ನಿಧನರಾದರು. ಕೇರಳದಲ್ಲಿ ಕಮ್ಯೂನಿಸ್ಟ್ ಆಂದೋಲನ ಹುಟ್ಟು ಹಾಕಿದವರಲ್ಲಿ ಶೆಣೈ ಒಬ್ಬರು.

2006: ಇರಾಕಿ ಪೊಲೀಸ್ ಕಮಾಂಡೋ ಸಮವಸ್ತ್ರ್ರ ಧರಿಸ್ದಿದ ಶಸ್ತ್ರಧಾರಿಗಳು ಕೇಂದ್ರ ಬಾಗ್ದಾದಿನ ಉನ್ನತ ಶಿಕ್ಷಣ ಸಚಿವಾಲಯದ ಕಟ್ಟಡ, ಹಾಗೂ ಕರ್ರಾಡಾ ಸಂಶೋಧನಾ ನಿರ್ದೇಶನಾಲಯದಿಂದ ಶಿಯಾ ಹಾಗೂ ಸುನ್ನಿ ಸಮುದಾಯಗಳಿಗೆ ಸೇರಿದ 150ಕ್ಕೂ ಹೆಚ್ಚು ಮಂದಿಯನ್ನು ಅಪಹರಿಸಿದರು. ಶಸ್ತ್ರಧಾರಿಗಳು 20 ನಿಮಿಷಗಳ ಅವಧಿಯಲ್ಲಿ ಈ ಕಾರ್ಯಾಚರಣೆಯನ್ನು ನಡೆಸಿದರು. ದಾಳಿಗೆ ಮುನ್ನ ಇಡೀ ರಸ್ತೆಯನ್ನು ಸುತ್ತುವರೆದು, ಪ್ರತಿಭಟಿಸಿದ ನಾಲ್ವರು ಭದ್ರತಾ ಸಿಬ್ಬಂದಿಯನ್ನು ನಿಶ್ಯಸ್ತ್ರಗೊಳಿಸಲಾಯಿತು. ಪುರುಷರು ಹಾಗೂ ಮಹಿಳೆಯರನ್ನು ಪ್ರತ್ಯೇಕ ಕೊಠಡಿಗಳಲ್ಲಿ ಕೂಡಿ ಹಾಕಿ ಅವರ ಕೈಗಳನ್ನು ಬಿಗಿದು 6 ಟ್ರಕ್ಕುಗಳಲ್ಲಿ ತುಂಬಿಕೊಂಡು ಹೋಗಲಾಯಿತು.

2006: ಕೆನಡಾ ನಿವಾಸಿ `ಎಡಿಬಿ'ಯ ಆಗ್ನೇಯ ಏಷ್ಯಾ ವಿಭಾಗದ ಮಹಾ ನಿರ್ದೇಶಕ, `ಎಡಿಬಿ' ಅಧ್ಯಕ್ಷರ ಸಲಹೆಗಾರ ರಜತ್ ಎಂ. ನಾಗ್ ಅವರನ್ನು ಏಷ್ಯನ್ ಡೆವೆಲಪ್ ಮೆಂಟ್ ಬ್ಯಾಂಕಿನ (ಎಡಿಬಿ) ಹೊಸ ಮಹಾ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲಾಯಿತು.

2005: ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಲಾರೆನ್ಸ್ ಫರ್ನಾಂಡಿಸ್ (73) ಹೃದಯದ ರಕ್ತನಾಳ ಒಡೆದ ಪರಿಣಾಮವಾಗಿ ಅಸು ನೀಗಿದರು. ತುರ್ತು ಪರಿಸ್ಥಿತಿ ಕಾಲದಲ್ಲಿ ಸೆರೆಮನೆವಾಸ ಅನುಭವಿಸಿ ಪೊಲೀಸರಿಂದ ವಿಪರೀತ ಚಿತ್ರಹಿಂಸೆ ಅನುಭವಿಸಿದ್ದ ಲಾರೆನ್ಸ್ ಅವಿವಾಹಿತರಾಗಿದ್ದರು. ಲಾರೆನ್ಸ್ ಫರ್ನಾಂಡಿಸ್ ಅವರು ಮಾಜಿ ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ಸಹೋದರ.

1992: ಸಚಿನ್ ತೆಂಡೂಲ್ಕರ್ ಅವರು ದಕ್ಷಿಣ ಆಫ್ರಿಕದ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಟೆಲಿವಿಷನ್ ಸಾಕ್ಷ್ಯದ ಆಧಾರದಲ್ಲಿ (ಥರ್ಡ್ ಅಂಪೈರ್) ವಜಾಗೊಂಡ ಮೊದಲ ಕ್ರಿಕೆಟ್ ಪಟು ಎನಿಸಿಕೊಂಡರು.

1971: ಬಾಂಗ್ಲಾದೇಶದಲ್ಲಿ ಬೀಸಿದ ಭಾರಿ ಚಂಡಮಾರುತಕ್ಕೆ 3 ಲಕ್ಷ ಮಂದಿ ಬಲಿಯಾದರು.

1967: ಭಾರತದ ಮೊದಲ ಟೆಸ್ಟ್ ಕ್ಯಾಪ್ಟನ್ ಹಾಗೂ ಖ್ಯಾತ ಕ್ರಿಕೆಟ್ ಆಟಗಾರ ಕೊಟ್ಟಾರಿ ಕನಕಯ್ಯ ನಾಯ್ಡು ಅವರು ತಮ್ಮ 72ನೇ ವಯಸ್ಸಿನಲ್ಲಿ ನಿಧನರಾದರು.

1948: ವೇಲ್ಸ್ ರಾಜಕುಮಾರ ಚಾರ್ಲ್ಸ್ ಜನನ.

1944: ಭಾರತದ ಕೈಗಾರಿಕೋದ್ಯಮಿ ಆದಿತ್ಯ ವಿಕ್ರಮ್ ಬಿರ್ಲಾ (1944-95) ಹುಟ್ಟಿದ ದಿನ.

1915: ಕರಿಯ ಅಮೆರಿಕನ್ನರ ಪ್ರಭಾವಶಾಲಿ ವಕ್ತಾರ, ಸುಧಾರಕ ಬೂಕರ್ ಟಿ. ವಾಷಿಂಗ್ಟನ್ ಅವರು ತಮ್ಮ 59ನೇ ವಯಸಿನಲ್ಲಿ ನಿಧನರಾದರು.

1913: ರಬೀಂದ್ರನಾಥ ಟ್ಯಾಗೋರ್ ಅವರಿಗೆ ಸಾಹಿತ್ಯಕ್ಕೆ ನೀಡಲಾಗುವ ನೊಬೆಲ್ ಪ್ರಶಸ್ತಿ ಲಭಿಸಿದ ಸುದ್ದಿ ತಿಳಿಯಿತು. ಆಗ ಶಾಂತಿ ನಿಕೇತನದಲ್ಲಿ ದೂರವಾಣಿ ಇರಲಿಲ್ಲ. ಹಾಗಾಗಿ ಕಲ್ಕತ್ತದಿಂದ (ಈಗಿನ ಕೋಲ್ಕತ್ತಾ) ಕೇಬಲ್ ಮೂಲಕ ಸುದ್ದಿ ಕಳುಹಿಸಲಾಯಿತು. ಈ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಹಾಗೂ ಮೊದಲ ಏಷ್ಯನ್ ಎಂಬ ಹೆಗ್ಗಳಿಕೆ ಟ್ಯಾಗೋರ್ ಅವರದಾಯಿತು.

1910: ಪ್ರಾಧ್ಯಾಪಕ, ಸಾಹಿತಿ, ವಿಮರ್ಶಕ ಸ.ಸ. ಮಾಳವಾಡ ಅವರು ಸಂಗನಬಸಪ್ಪ- ಕಾಳಮ್ಮ ದಂಪತಿಯ ಮಗನಾಗಿ ಧಾರವಾಡ ಜಿಲ್ಲೆಯ ಮೆಣಸಗಿಯಲ್ಲಿ ಜನಿಸಿದರು.

1891: ಸರ್ ಫ್ರೆಡರಿಕ್ ಗ್ರಾಂಟ್ ಬಂಟಿಂಗ್ (1891-1941) ಹುಟ್ಟಿದ ದಿನ. ವೈದ್ಯರಾದ ಇವರು ಚಾರ್ಲ್ಸ್ ಎಚ್. ಬೆಸ್ಟ್ ನೆರವಿನೊಂದಿಗೆ ಇನ್ಸುಲಿನನ್ನು ಕಂಡು ಹಿಡಿದರು.

1889: ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು (1889-1964) ಹುಟ್ಟಿದ ದಿನ.

1863: ಅಮೆರಿಕದ ಕೈಗಾರಿಕಾ ರಾಸಾಯನಿಕ ತಜ್ಞ, ಸಂಶೋಧಕ ಲಿಯೋ ಹೆಂಡ್ರಿಕ್ ಬೆಕೆಲೈಟ್ ಹುಟ್ಟಿದ ದಿನ. ಈತ ಕಂಡು ಹಿಡಿದ `ಬೆಕಲೈಟ್' ಆಧುನಿಕ ಪ್ಲಾಸ್ಟಿಕ್ ಉದ್ಯಮದ ಹುಟ್ಟಿಗೆ ಕಾರಣವಾಯಿತು.

1687: ಇಂಗ್ಲಿಷ್ ನಟಿ ಹಾಗೂ ಎರಡನೇ ಚಾರ್ಲ್ಸ್ ನ ಪ್ರೇಯಸಿ ನೆಲ್ ಗ್ವಿನ್ ತನ್ನ 37ನೇ ವಯಸ್ಸಿನಲ್ಲಿ ಮೃತಳಾದಳು.

1681: ಈಸ್ಟ್ ಇಂಡಿಯಾ ಕಂಪೆನಿಯು ಬಂಗಾಳವನ್ನು ಪ್ರತ್ಯೇಕ ಪ್ರಾಂತ್ಯ ಎಂದು ಘೋಷಿಸಿತು.

ಇಂದಿನ ಇತಿಹಾಸ History Today ನವೆಂಬರ್ 13

ಇಂದಿನ ಇತಿಹಾಸ

ನವೆಂಬರ್ 13

ನ್ಯೂಯಾರ್ಕಿನ ಮೇರಿ ಫೆಲ್ ಪ್ಸ್ ಜಾಕೋಬ್ ಅವರಿಗೆ `ಬ್ಯಾಕ್ ಲೆಸ್ ಬ್ರಾಸಿಯರ್' ಗೆ ಪೇಟೆಂಟ್ ಲಭಿಸಿತು. ಸ್ತನಗಳನ್ನು ಸಹಜವಾಗಿ ಬೇರೆ ಬೇರೆಯಾಗಿ ಕಾಣುವಂತಹ ವಿನ್ಯಾಸದ ಮೃದುವಾದ, ಚಿಕ್ಕದಾದ ಹೊಸ ಮಾದರಿಯ ಈ `ಬ್ರಾ'ವನ್ನು ಈಕೆ ಸಂಶೋಧಿಸಿದರು. ಈಕೆ ಅದನ್ನು `ಬ್ರಾಸಿಯರ್' ಎಂದು ಕರೆದರು.

2008: ಕಾಂಗ್ರೆಸ್ ನಂತರ ಬಿಜೆಪಿ ಸರದಿ. `ಹಣಕ್ಕಾಗಿ ಟಿಕೆಟ್ ಮಾರಾಟ ಮಾಡಲಾಗಿದೆ, ಬಿಜೆಪಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ' ಎಂದು ಆರೋಪಿಸಿ ರಾಜಸ್ಥಾನದ ಭರತಪುರ್ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿಜೆಪಿ ಲೋಕಸಭಾ ಸದಸ್ಯ ವಿಶ್ವೇಂದ್ರ ಸಿಂಗ್ ಪಕ್ಷಕ್ಕೆ ಹಾಗೂ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧ್ಯ ಅವರ ರಾಜಕೀಯ ಸಲಹಾಗಾರರಾಗಿದ್ದ ಸಿಂಗ್ ರಾಜೀನಾಮೆ ಪಕ್ಷಕ್ಕೆ ಭಾರಿ ಮುಜುಗರ ತಂದಿತು.

2008: ಮೆದುಳು ನಿಷ್ಕ್ರಿಯಗೊಂಡಿದ್ದ ಐದು ವರ್ಷದ ಬಾಲಕಿಯ ಅಂಗಾಂಗ ದಾನ ಮಾಡಲು ಪೋಷಕರು ಒಪ್ಪಿದ್ದರಿಂದ ಇತರ ಮೂರು ಜನರಿಗೆ ಅನುಕೂಲವಾದ ಘಟನೆ ತಿರುಚಿನಾಪಳ್ಳಿಯಲ್ಲಿ ನಡೆಯಿತು. `ಬ್ರೇನ್ ಸ್ಟೆಮ್ ಗ್ಲುಕೋಮ' ರೋಗಕ್ಕೆ ಎಂಟು ತಿಂಗಳಿನಿಂದ ತುತ್ತಾಗಿದ್ದ ಶುಭಾ ನಂದಿನಿಯ ಮೂತ್ರಪಿಂಡ, ಪಿತ್ತಜನಕಾಂಗ, ಪಾರದರ್ಶಕ ಪಟಲ ಹಾಗೂ ಹೃದಯವನ್ನು ದಾನ ಮಾಡಲು ಪೋಷಕರು ಒಪ್ಪಿದ್ದರು. ಮೂತ್ರಪಿಂಡವನ್ನು ತಿರುಚಿನಾಪಳ್ಳಿಯ ಎಬಿಸಿ ಆಸ್ಪತೆಯಲ್ಲಿ ಕಸಿ ಮಾಡಿ 46 ವರ್ಷದ ರೋಗಿಗೆ ಅಳವಡಿಸಲಾಯಿತು. ಪಾರದರ್ಶಕ ಪಟಲದ ಕಸಿಯನ್ನು ಸೆಂಟ್ ಜಾನ್ಸ್ ನೇತ್ರಸಂಸ್ಥೆಯಲ್ಲಿ ಮಾಡಲಾಯಿತು. ನಗರದಲ್ಲಿ ಹೃದಯ ಮತ್ತು ಪಿತ್ತಜನಕಾಂಗದ ಕಸಿಗೆ ಸೌಲಭ್ಯ ಇಲ್ಲದ ಕಾರಣ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಕಳುಹಿಸಲಾಯಿತು. `ಮಗಳ ಅಂಗಾಂಗ ದಾನದಿಂದ ಮೂರು ಜನರಿಗೆ ಅನುಕೂಲವಾಗಿರುವುದು ಸಂತಸ ತಂದಿದೆ' ಎಂದು ಬಾಲಕಿಯ ತಂದೆ ಮಾಣಿಕನಂದನ್ ಹೇಳಿದರು.

2008: ಆಫ್ರಿಕ ಖಂಡದ ದೇಶಗಳೊಡನೆ ಭಾರತದ ಸಂಬಂಧವನ್ನು ಉತ್ತಮಗೊಳಿಸಿರುವುದಕ್ಕೆ ಕೃತಜ್ಞತೆಯಿಂದ ಘಾನಾ ದೇಶವು ಆ ದೇಶದ ಉನ್ನತ ಪ್ರಶಸ್ತಿಯನ್ನು ಭಾರತದ ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ಆನಂದ ಶರ್ಮ ಅವರಿಗೆ ನೀಡುವುದಾಗಿ ಅಕ್ರಾದಲ್ಲಿ (ಘಾನ) ಪ್ರಕಟಿಸಿತು.

2008: ಪೂರ್ವ ಆಫ್ಘಾನಿಸ್ಥಾನದ ನಂಗರ್ ಹಾರ್ ಪ್ರಾಂತ್ಯದಲ್ಲಿನ ಮಾರುಕಟ್ಟೆ ಪ್ರದೇಶವೊಂದರಲ್ಲಿ ಅಮೆರಿಕ ನೇತೃತ್ವದ ಸಮ್ಮಿಶ್ರ ಸೇನಾಪಡೆಗಳ ಬೆಂಗಾವಲು ವಾಹನದ ಮೇಲೆ ಆತ್ಮಹತ್ಯಾ ಕಾರು ಬಾಂಬ್ ದಾಳಿ ನಡೆದು ಕನಿಷ್ಠ 21 ಮಂದಿ ಮೃತರಾಗಿ ಇತರ 74 ಜನರು ಗಾಯಗೊಂಡರು. ಮೃತರಲ್ಲಿ ಒಬ್ಬ ಯೋಧ ಮತ್ತು ಮಂದಿ 20 ನಾಗರಿಕರು.

2008: ಪಾಕಿಸ್ಥಾನದ ವಾಯವ್ಯ ಪ್ರಾಂತ್ಯದಲ್ಲಿ ಅಪರಿಚಿತ ಬಂದೂಕುಧಾರಿಗಳು ಇರಾನ್ ರಾಜತಾಂತ್ರಿಕರೊಬ್ಬರನ್ನು ಅಪಹರಿಸಿ, ಅವರ ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿದ ಘಟನೆ ನಡೆಯಿತು. ಈ ಮಧ್ಯೆ, ತನ್ನ ರಾಜತಾಂತ್ರಿಕರು, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪೂರ್ಣಪ್ರಮಾಣದ ಭದ್ರತೆ ಒದಗಿಸುವಂತೆ ಪಾಕ್ ಸರ್ಕಾರವನ್ನು ಇರಾನ್ ಒತ್ತಾಯಿಸಿತು.

2008: ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡುವ ತಲಾ ಒಂದು ಲಕ್ಷ ರೂಪಾಯಿ ಮೊತ್ತದ ಪ್ರಶಸ್ತಿ ಸರಗೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಹಾಗೂ ನಗರದ ಚೈಲ್ಡ್ ರೈಟ್ಸ್ ಟ್ರಸ್ಟಿಗೆ ದೊರಕಿತು. ಇದರ ಜೊತೆಯಲ್ಲಿ ತಲಾ 25 ಸಾವಿರ ರೂಪಾಯಿ ಮೊತ್ತದ ವೈಯಕ್ತಿಕ ಪ್ರಶಸ್ತಿಯನ್ನು ಚಾಮರಾಜನಗರದ ಆದಿವಾಸಿ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಬಿ.ಎಸ್ ಬಸವರಾಜು ಹಾಗೂ ಕಾರವಾರದ ನಜೀರ್ ಅಹ್ಮದ್ ಯು ಶೇಖ್ ಅವರಿಗೆ ನೀಡಲಾಯಿತು.

2008: ಪೆಟ್ರೋಲಿಯಮ್ಮಿನಿಂದ ಜವಳಿ ಉದ್ಯಮದವರೆಗೂ ಮುಂಚೂಣಿ ಸ್ಥಾನ ಕಾಯ್ದುಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ (51) ವಿಶ್ವದಲ್ಲೇ ಅತ್ಯಂತ ಶ್ರೀಮಂತ ಭಾರತೀಯ ಎಂದು `ಫೋಬ್ಸ್ ` ಪತ್ರಿಕೆ ಹೇಳಿತು. ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಷೇರುಪೇಟೆಯಲ್ಲಿ ಆಸ್ತಿ ಮೌಲ್ಯ ಕಳೆದುಕೊಳ್ಳುತ್ತಿರುವ ಅನಿವಾಸಿ ಭಾರತೀಯ ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಎರಡನೇ ಸ್ಥಾನಕ್ಕಿಳಿದಿದ್ದಾರೆ ಎಂದು ಪತ್ರಿಕೆಯ ವಾರ್ಷಿಕ ಶ್ರೀಮಂತರ ಪಟ್ಟಿ ತಿಳಿಸಿತು.

2007: ಉಕ್ಕು, ಆಟೋಮೋಟಿವ್ ಮತ್ತು ದೂರವಾಣಿ ಸೇವೆ ಕ್ಷೇತ್ರಗಳಲ್ಲಿ ಜಾಗತಿಕ ಸಾಧನೆ ಮಾಡಿರುವ ಟಾಟಾ ಸಮೂಹ, ವಿಶ್ವದಲ್ಲೇ ನಾಲ್ಕನೇ ಸ್ಥಾನದ ವೇಗವನ್ನು ಹೊಂದಿರುವ ಸೂಪರ್ ಕಂಪ್ಯೂಟರ್ ಸಿದ್ಧಪಡಿಸಿರುವುದನ್ನು ಮುಂಬೈಯಲ್ಲಿ ಬಹಿರಂಗ ಪಡಿಸಿತು. ಏಕ್ (ಇಕೆಎ- 'ಏಕ' ಸಂಸ್ಕೃತದಲ್ಲಿ ಪ್ರಥಮ) ಎಂದು ಹೆಸರಿಡಲಾದ ಟಾಟಾ ಸಮೂಹದ ಸೂಪರ್ ಕಂಪ್ಯೂಟರ್ ಪ್ರತಿ ಸೆಕೆಂಡಿಗೆ 117.9 ಟ್ರಿಲಿಯನ್ ಲೆಕ್ಕ ಹಾಕುತ್ತದೆ. ಜಾಗತಿಕವಾಗಿ ಉನ್ನತ ಶ್ರೇಣಿಯ 500 ಸೂಪರ್ ಕಂಪ್ಯೂಟರ್ ಮಾದರಿಯಲ್ಲಿ ಇದೂ ಒಂದು ಎಂದು ಗುರುತಿಸಿಕೊಂಡಿದ್ದು, ವೇಗದಲ್ಲಿ ಏಷ್ಯಾದಲ್ಲಿ ಪ್ರಥಮ ಸ್ಥಾನವನ್ನು ಹೊಂದಿದೆ. ಪುಣೆಯಲ್ಲಿ ಟಾಟಾ ಸಮೂಹ ಸ್ಥಾಪಿಸಿರುವ ಕಂಪ್ಯೂಟೇಷನಲ್ ರಿಸರ್ಚ್ ಲ್ಯಾಬೋರೊಟರೀಸ್ ಘಟಕದ 60 ವಿವಿಧ ಸಂಪನ್ಮೂಲ ವ್ಯಕ್ತಿಗಳು ಸೇರಿಕೊಂಡು ಇದನ್ನು ಅಭಿವೃದ್ಧಿಗೊಳಿಸಿದ್ದಾರೆ. ಸಿ ಆರ್ ಎಲ್ ಅಧ್ಯಕ್ಷ ಎಸ್. ರಾಮಾದೊರೈ ಈ ಕುರಿತು ಮಾಹಿತಿ ನೀಡಿದರು. `ಸೂಪರ್ ಕಂಪ್ಯೂಟರ್ ಅಭಿವೃದ್ಧಿಪಡಿಸಲು 30 ದಶಲಕ್ಷ ಡಾಲರ್ ವೆಚ್ಚ ತಗುಲಿತು. ಇದನ್ನು ಸಂಪೂರ್ಣವಾಗಿ ಟಾಟಾ ಸನ್ಸ್ ಭರಿಸಿದೆ. ಬರುವ ದಿನಗಳಲ್ಲಿ ಸಿ ಆರ್ ಎಲ್ ಸಿಬ್ಬಂದಿಯ ಸಂಖ್ಯೆಯು 90ಕ್ಕೆ ಹೆಚ್ಚಾಗಲಿದೆ' ಎಂದು ರಾಮಾದೊರೈ ಹೇಳಿದರು. `ಬಾಲಿವುಡ್ ಚಿತ್ರ `ಶೋಲೆ'ಯನ್ನು ಒಂದು ಆನಿಮೇಷನ್ ಸಿನಿಮಾವಾಗಿ ಪರಿವರ್ತಿಸಲು ಸೂಪರ್ ಕಂಪ್ಯೂಟರ್ ಬೇಕಾಗುತ್ತದೆ. ಅದೇ ರೀತಿ ಆಟೋಮೋಟಿವ್ ಎಂಜಿನಿಯರಿಂಗ್, ನ್ಯಾನೋ ತಂತ್ರಜ್ಞಾನಕ್ಕೆ ಸೂಪರ್ ಕಂಪ್ಯೂಟರಿನ ಅಗತ್ಯವಿದೆ. `ಏಕ' ಇದೊಂದು ಟಾಟಾ ಆಸ್ತಿಯಾಗಿದ್ದು, ಇದರ ಪೇಟೆಂಟ್ ಪಡೆಯಲಾಗುವುದು. ಅದೇ ರೀತಿ ಇದರ ಬಹುಪಯೋಗದ ಬಗ್ಗೆ ವಿವಿಧ ಕಂಪೆನಿಗಳಿಗೆ ಪ್ರಾತ್ಯಕ್ಷಿಕೆಯನ್ನು ನೀಡಲಾಗುತ್ತಿದೆ' ಎಂದು ಅವರು ನುಡಿದರು. ಸಂಸ್ಥೆಯು ಈವರೆಗೆ ದೇಶದಲ್ಲಿ 9 ಸೂಪರ್ ಕಂಪ್ಯೂಟರುಗಳನ್ನು ಅಬೀವೃದ್ಧಿ ಪಡಿಸಲಾಗಿದೆ ಎಂದೂ ಅವರು ಬಹಿರಂಗ ಪಡಿಸಿದರು.

2007: ನಿರ್ದೇಶಕ ಫಿರೋಜ್ ಅಬ್ಬಾಸ್ ಖಾನ್ ಅವರ `ಗಾಂಧಿ ಮೈ ಫಾದರ್' ಚಲನಚಿತ್ರ ಉತ್ತಮ ಚಿತ್ರಕಥೆಗಾಗಿ ಏಷ್ಯ ಪೆಸಿಫಿಕ್ ಸ್ಕ್ರೀನ್ ಪ್ರಶಸ್ತಿ ಪಡೆಯಿತು. ನಟರಾದ ಅಕ್ಷಯ್ ಖನ್ನಾ, ಭೂಮಿಕಾ ಚಾವ್ಲಾ, ಮತ್ತು ಶೆಫಾಲಿ ಷಾ ಅವರು ನಟಿಸಿದ್ದ ಈ ಚಲನಚಿತ್ರದ ಕಥೆಯನ್ನು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಅವರ ಹಿರಿಯ ಪುತ್ರ ಹರಿಲಾಲ್ ಗಾಂಧಿ ಅವರ ನಡುವಣ ವಿವಾದಾತ್ಮಕ ಸಂಬಂಧದ ಸುತ್ತ ಹೆಣೆಯಲಾಗಿತ್ತು. ಆಸ್ಟ್ರೇಲಿಯದ ಕ್ವೀನ್ಸ್ ಲ್ಯಾಂಡಿನ ಗೋಲ್ಡ್ ಕೋಸ್ಟಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಚಿತ್ರದ ಚಿತ್ರಕಥೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭಾರತ, ಕೊರಿಯ, ಇಂಡೋನೇಷ್ಯ, ಜಪಾನ್, ಲೆಬನಾನ್, ಇರಾನ್, ಟರ್ಕಿ, ಇಸ್ರೇಲ್ ಇತ್ಯಾದಿ ರಾಷ್ಟ್ರಗಳ ಚಿತ್ರಗಳು ಕಣದಲ್ಲಿದ್ದವು. ಖ್ಯಾತ ನಟಿ ಶಬಾನಾ ಆಜ್ಮಿ ಅಧ್ಯಕ್ಷತೆಯ ಅಂತಾರಾಷ್ಟ್ರೀಯ ಆಯ್ಕೆ ಸಮಿತಿ ಚಿತ್ರಗಳನ್ನು ಆಯ್ಕೆ ಮಾಡಿತು. ಉತ್ತಮ ಚಲನಚಿತ್ರ ಪ್ರಶಸ್ತಿ ಕೊರಿಯದ `ಮಿರ್ ಯಾಂಗ್' (ರಹಸ್ಯ ಸೂರ್ಯಕಿರಣ) ಚಿತ್ರಕ್ಕೆ ದೊರೆಯಿತು.

2007: ಎಂಟು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಪತಿ ಹಾಗೂ 20 ವರ್ಷದ ಮಗನನ್ನು ಕಳೆದುಕೊಂಡ ಮಹಿಳೆಗೆ ಅಪಘಾತ ಪರಿಹಾರ ಮಂಡಳಿಯು 46.44 ಲಕ್ಷ ರೂಪಾಯಿ ಪರಿಹಾರ ಧನ ನೀಡುವಂತೆ ಆದೇಶಿಸಿತು. 8 ವರ್ಷಗಳ ಹಿಂದೆ ಮದುರೈ ಸಮೀಪ ಮ್ಯಾಕ್ಸಿ ಕ್ಯಾಬ್ ಹಾಗೂ ತಮಿಳುನಾಡು ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಡುವೆ ರಸ್ತೆ ಅಪಘಾತ ಸಂಭವಿಸಿತ್ತು. ಈಗ ಪರಿಹಾರ ಪಡೆದಿರುವ ಮಹಿಳೆಯ ಪತಿ ಹಾಗೂ ಮಗ ಮ್ಯಾಕ್ಸಿಕ್ಯಾಬಿನಲ್ಲಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಮಂಡಳಿಯ ಅಧ್ಯಕ್ಷೆ ವಿ.ಕೆ. ಮಹೇಶ್ವರಿ ಅವರು, ಈ ಅಪಘಾತಕ್ಕೆ ಮ್ಯಾಕ್ಸಿಕ್ಯಾಬ್ ಚಾಲಕ ಹಾಗೂ ಮಾಲೀಕನೇ ಹೊಣೆ ಎಂದು ಹೇಳಿ, ಮಹಿಳೆಗೆ ಪರಿಹಾರ ಧನ ನೀಡುವಂತೆ ಆದೇಶ ನೀಡಿದರು.

2007: ಕರ್ನಾಟಕ ರಾಜ್ಯಪಾಲ ಠಾಕೂರ್ ಅವರ ಸೂಚನೆ ಮೇರೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನವೆಂಬರ್ 19ರಂದೇ ಬಹುಮತ ಸಾಬೀತು ಪಡಿಸಲು ನಿರ್ಧರಿಸಿದರು. ಇದಕ್ಕೆ ಮುನ್ನ ಈ ತಿಂಗಳ 23 ರಂದು ಬಹುಮತ ಸಾಬೀತು ಪಡಿಸಲು ಮುಖ್ಯಮಂತ್ರಿ ತೀರ್ಮಾನಿಸಿದ್ದರು. ಆದರೆ, ರಾಜ್ಯಪಾಲರು ಬಹುಮತ ಸಾಬೀತು ಪಡಿಸಲು ಎಂಟು ದಿನಗಳ ಗಡುವು ವಿಧಿಸಿದ ಹಿನ್ನೆಲೆಯಲ್ಲಿ ತುರ್ತು ಸಂಪುಟ ಸಭೆ ನಡೆಸಿದ ಯಡಿಯೂರಪ್ಪ ಈ ನಿರ್ಧಾರ ಕೈಗೊಂಡರು.

2007: ನೆನೆಗುದಿಗೆ ಬಿದ್ದಿದ್ದ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸುವ ಯೋಜನೆಗೆ ಮರು ಚಾಲನೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 75 ದಿನಗಳ ಒಳಗೆ 4.35 ಲಕ್ಷ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲು ಆದೇಶ ನೀಡಿದರು. ಸಚಿವ ಸಂಪುಟ ಸಭೆ ತೆಗೆದುಕೊಂಡ ಈ ತೀರ್ಮಾನವನ್ನು ಸಚಿವ ಡಾ. ವಿ.ಎಸ್. ಆಚಾರ್ಯ ಸುದ್ದಿಗಾರರಿಗೆ ತಿಳಿಸಿದರು.

2007: ವಾರದ ಹಿಂದೆ ಬೆಂಗಳೂರಿನ ಹೊರವಲಯದ ನಾರಾಯಣ ಆರೋಗ್ಯ ನಗರದ ಸ್ಪರ್ಶ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಅವಳಿ ದೇಹದ ಭಾರ ಕಳೆದುಕೊಂಡಿದ್ದ ಬಿಹಾರಿನ ಎರಡು ವರ್ಷದ ಬಾಲಕಿ ಲಕ್ಷ್ಮಿಯನ್ನು ಈದಿನ ತೀವ್ರ ನಿಗಾ ಘಟಕದಿಂದ (ಐಸಿಯು) ಸಾಮಾನ್ಯ ವಾರ್ಡಿಗೆ ಸ್ಥಳಾಂತರಿಸಲಾಯಿತು. ಲಕ್ಷ್ಮಿ ತತ್ಮಾಳ ತಂದೆ ಶಂಭು ಪುಟ್ಟ ಬಾಲೆಯನ್ನು ಎತ್ತಿಕೊಂಡು ಬಂದಾಗ ಪಿಳಪಿಳನೆ ಕಣ್ಣು ಬಿಟ್ಟು ನೋಡುತ್ತಿದ್ದ ಮಗು ಹೊಸ ಜಗತ್ತಿಗೆ ಬಂದ ಹಿಗ್ಗಿನಲ್ಲಿ ಇದ್ದಂತಿತ್ತು. ಅಪಾರ ನೋವಿನಲ್ಲೂ ಮಗುವಿನ ಕಣ್ಣಲ್ಲಿ ಲವಲವಿಕೆ ನಾಟ್ಯವಾಡುತ್ತಿತ್ತು. ಲಕ್ಷ್ಮಿಯ ಅಮ್ಮ ಪೂನಂ ಮುಖದಲ್ಲಿ ಸಂತೃಪ್ತಿ, ಅಣ್ಣ ಮಿಥಿಲೇಶನಲ್ಲಿ ಖುಷಿ ಮನೆ ಮಾಡಿತ್ತು.

2007: ಭಾರತೀಯ ಮೂಲದ ಅಮೆರಿಕ ಪ್ರಜೆ ಶಾಂತನು ನರೇನ್ ಅವರನ್ನು ವಿಶ್ವವಿಖ್ಯಾತ ಅಡೋಬ್ ಸಿಸ್ಟಮ್ಸ್ ಇನ್ ಕಾರ್ಪೊರೇಟೆಡ್ ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ನೇಮಕ ಮಾಡಲಾಯಿತು. ಬ್ರೂಸ್ ನಾಗರಿಕನ ಉತ್ತರಾಧಿಕಾರಿಯಾಗಿ ಈ ಪ್ರತಿಷ್ಠಿತ ಹುದ್ದೆಗೆ ಏರಿದ ಶಾಂತನು ಅವರು ಡಿಸೆಂಬರ್ 1 ರಿಂದ ಹೊಸ ಹುದ್ದೆ ಅಲಂಕರಿಸುವರು ಎಂದು ನ್ಯೂಯಾರ್ಕಿನಲ್ಲಿ ಸಂಸ್ಥೆಯ ಪ್ರಕಟಣೆ ತಿಳಿಸಿತು.

2007: ಪಂಡಿತ್ ಜವಾಹರ ಲಾಲ್ ನೆಹರೂ ಅವರ 118ನೇ ಜನ್ಮದಿನಾಚರಣೆ ಅಂಗವಾಗಿ ಜವಾಹರ್ಲಾಲ್ ನೆಹರೂ ಸ್ಮಾರಕ ನಿಧಿ ಸಂಸ್ಥೆಯು ದೆಹಲಿ ವಿಶ್ವವಿದ್ಯಾಲಯ ಕೇಂದ್ರೀಯ ಶಿಕ್ಷಣ ಸಂಸ್ಥೆಯ ಪ್ರೊ. ಪೂನಂ ಬಾತ್ರಾ ಅವರಿಗೆ ನೆಹರೂ ಫೆಲೋಶಿಪ್ ನೀಡಿತು.

2007: ಕನ್ನಡದ ಹಿರಿಯ ಕವಿ, ಅನುವಾದಕ ಡಾ.ಬಿ.ಎ. ಸನದಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಪುತ್ತೂರು ವಿವೇಕಾನಂದ ಕಾಲೇಜಿನ ಶಿವರಾಮ ಕಾರಂತ ಅಧ್ಯಯನ ಕೇಂದ್ರವು ನೀಡುವ ಪ್ರಸಕ್ತ ಸಾಲಿನ ಪ್ರತಿಷ್ಠಿತ ನಿರಂಜನ ಪ್ರಶಸ್ತಿಗೆ ಆಯ್ಕೆ ಮಾಡಿತು. ನವ್ಯ ಮತ್ತು ನವ್ಯೋತ್ತರದ ಸಂದರ್ಭದಲ್ಲಿ ಕನ್ನಡ ಕಾವ್ಯ, ಅನುವಾದ ವಿಮರ್ಶೆ, ಶಿಶು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗಮನಿಸಿ ಅವರನ್ನು ಈ ಪ್ರಶಸ್ತಿಗೆ ಆರಿಸಲಾಯಿತು.

2006: ವಿಶ್ವದ ಅತಿದೊಡ್ಡ ಪ್ರಯಾಣಿಕರ ವಿಮಾನ `ಎ 380'ರ ದಕ್ಷಿಣ ಫ್ರಾನ್ಸಿನ ಟುಲೌಸಿನಿಂದ ವಿಶ್ವದ ಸುತ್ತ ಪರೀಕ್ಷಾರ್ಥ ಹಾರಾಟ ಆರಂಭಿಸಿತು. ದಕ್ಷಿಣ ಫ್ರಾನ್ಸಿನ ಟುಲೌಸಿನಿಂದ ಗಗನಕ್ಕೆ ನೆಗೆದ ವಿಮಾನ 12 ತಾಸುಗಳ ಪ್ರಯಾಣದ ನಂತರ ಸಿಂಗಪುರ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿ ಮೊದಲ ನಿಲುಗಡೆ ಪಡೆಯಿತು. ಪೈಲಟ್ ಹಾಗೂ ತಾಂತ್ರಿಕ ಸಿಬ್ಬಂದಿ ಸೇರಿ 60 ಜನ ವಿಮಾನದಲ್ಲಿ ಇದ್ದರು.

2006: ಬೆಂಗಳೂರಿನ ನಿಸರ್ಗ ಆಯುರ್ವೇದಿಕ್ ಮೆಡಿಸಿನ್ ರೀಸರ್ಚ್ ಸೆಂಟರಿನ ವೈದ್ಯ ಡಾ. ಅಶೋಕಕುಮಾರ ಅವರು ಮಧುಮೇಹಕ್ಕೆ `ಡಯಟ್ ಸ್ಟೀವಿಯಾ' ಎಂಬ ಸಸ್ಯಮೂಲ ಔಷಧಿ ಸಂಶೋಧಿಸಿರುವುದಾಗಿ ಪ್ರಕಟಿಸಿದರು. ಸ್ಟೀವಿಯಾ ಸಸ್ಯ ಮಧುಮೇಹ ರೋಗಿಗಳಿಗೆ ಇನ್ಸುಲಿನ್ ಹೆಚ್ಚಲು ಸಹಕಾರಿ ಎಂದು ಅವರು ಹೇಳಿದರು.

2006: ಗಿನ್ನೆಸ್ ದಾಖಲೆ ಸ್ಥಾಪಿಸುವ ಸಲುವಾಗಿ ತಮಿಳುನಾಡಿನ ಕೋವಿಲ್ ಪಟ್ಟಿಯ ಮಡು ಗ್ರಾಮದ ಕಟ್ಟಡ ಕೆಲಸಗಾರ ಮುತ್ತುಕುಮಾರ್ ಎಂಬ 23 ವರ್ಷದ ಯುವಕನೊಬ್ಬ 1 ನಿಮಿಷ 38 ಸೆಕೆಂಡ್ ಕಾಲ ನೇಣಿನ ಕುಣಿಕೆಯೊಳಗೆ ನೇತಾಡಿಯೂ ಜೀವಂತವಾಗಿ ಉಳಿದ.

2006: ಬ್ರೆಜಿಲಿನ ರಿಯೋಡಿಜನೈರೋದಲ್ಲಿರುವ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಅಂತಾರಾಷ್ಟ್ರೀಯ ಒಕ್ಕೂಟದ (ಐಎಫ್ ಇ ಇ ಎಸ್) ಉಪಾಧ್ಯಕ್ಷರಾಗಿ ಬೆಂಗಳೂರಿನ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಷನ್ ಅಧ್ಯಕ್ಷ ಪ್ರೊ. ಎನ್. ಆರ್. ಶೆಟ್ಟಿ ನೇಮಕಗೊಂಡರು. ಈ ಒಕ್ಕೂಟಕ್ಕೆ ನೇಮಕಗೊಂಡ ಪ್ರಥಮ ಭಾರತೀಯ ಎಂಬ ಹೆಗ್ಗಳಿಕೆ ಇವರದಾಯಿತು. ಪ್ರೊ. ಶೆಟ್ಟಿ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿಯೂ ಸೇವೆ ಸಲ್ಲಿಸಿದವರು.

2006: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಕಡತಗಳನ್ನು ರಹಸ್ಯ ದಾಖಲೆಗಳ ಪಟ್ಟಿಯಿಂದ ಸಾಮಾನ್ಯ ದಾಖಲೆಗಳ ಪಟ್ಟಿಗೆ ಸೇರಿಸುವ ಮೂಲಕ ಈ ಕಡತಗಳನ್ನು ಬಹಿರಂಗ ಪಡಿಸಲು ಪ್ರಧಾನಿ ಸಚಿವಾಲಯ ತೀರ್ಮಾನಿಸಿದೆ ಎಂದು ಪ್ರಧಾನಿ ಕಚೇರಿ ಮೂಲಗಳು ಬಹಿರಂಗ ಪಡಿಸಿದವು. ಕೇಂದ್ರೀಯ ಮಾಹಿತಿ ಅಧಿಕಾರಿ ಕಮಲ್ ದಯಾನಿ ಅವರು ಪತ್ರವೊಂದರಲ್ಲಿ ಈ ವಿಚಾರವನ್ನು ದೆಹಲಿಯ ನೇತಾಜಿ ಮಿಷನ್ ಸಂಸ್ಥೆಗೆ ತಿಳಿಸಿದರು.

2005: ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ `ಸಾರ್ಕ್' ದೇಶಗಳು ದಕ್ಷಿಣ ಏಷ್ಯಾ ಮುಕ್ತ ವಾಣಿಜ್ಯ ಒಪ್ಪಂದವನ್ನು (ಸಪ್ಟಾ)-2006ರ ಜನವರಿ 1ರಿಂದ ಜಾರಿಗೆ ತರಲು ಈದಿನ ನೇಪಾಳದ ಕಠ್ಮಂಡುವಿನಲ್ಲಿ ಮುಕ್ತಾಯಗೊಂಡ 13ನೇ ಸಾರ್ಕ್ ಸಮ್ಮೇಳನದಲ್ಲಿ ನಿರ್ಧರಿಸಿದವು. ದಕ್ಷಿಣ ಏಷ್ಯಾ ಆರ್ಥಿಕ ಒಕ್ಕೂಟ ರಚನೆ ನಿಟ್ಟಿನಲ್ಲಿ ಈ ಒಪ್ಪಂದ ಮಹತ್ವದ ಮೈಲಿಗಲ್ಲು. ಈ ನಿಟ್ಟಿನ ಒಪ್ಪಂದಕ್ಕೆ ಈದಿನ ಸಾರ್ಕ್ ಶೃಂಗಸಭೆಯಲ್ಲಿ ಸಹಿ ಹಾಕಲಾಯಿತು.

2005: ಬೆಂಗಳೂರಿನಲ್ಲಿ ನಡೆದ ಜನತಾ ದಳ (ಜಾತ್ಯತೀತ) ರಾಷ್ಟ್ರೀಯ ಮಹಾ ಅಧಿವೇಶನದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಎಚ್. ಡಿ. ದೇವೇಗೌಡ ಅವರನ್ನು ಪುನರಾಯ್ಕೆ ಮಾಡಲಾಯಿತು.

2005: ವಿಶ್ವದಲ್ಲೇ ಮೊತ್ತ ಮೊದಲ ರಾಷ್ಟ್ರಮಟ್ಟದ 9 ದಿನಗಳ `ಮಹಾಭಾರತ ಉತ್ಸವ' ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆರಂಭಗೊಂಡಿತು. ಗಿರಿನಗರದ ಮಹಾಭಾರತ ಸಂಶೋಧನಾ ಪ್ರತಿಷ್ಠಾನವು ಸಂಘಟಿಸಿದ ಈ ಉತ್ಸವದಲ್ಲಿ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಮಹಾಭಾರತ ಕುರಿತ ಸಾಂಪ್ರದಾಯಿಕ ವರ್ಣಚಿತ್ರಗಳು ಮತ್ತು ಸಂತೊಕ್ ಬಾ ಎಂಬ ವರ್ಣಚಿತ್ರಕಾರ ರಚಿಸಿದ ವಿಶ್ವದ ಅತ್ಯಂತ ಉದ್ದದ (ಸುಮಾರು 1.7 ಕಿ.ಮೀ) ಕ್ಯಾನ್ವಾಸ್ ಪ್ರದರ್ಶನಗೊಂಡಿತು.

2005: ಬಿಹಾರಿನ ಜೆಹಾನಾಬಾದ್ ಜಿಲ್ಲಾ ಸೆರೆಮನೆಯ ಮೇಲೆ ಬಾಂಬ್ ದಾಳಿ ನಡೆಸಿದ ಶಸ್ತ್ರಸಜ್ಜಿತ ಸಿಪಿಐ ಮಾವೋವಾದಿ ನಕ್ಸಲೀಯರು 389 ಮಂದಿ ಕೈದಿಗಳು ಪರಾರಿಯಾಗುವಂತೆ ಮಾಡಿದರು. ಸೆರೆಮನಯಲ್ಲಿದ್ದ ಭೂಮಾಲೀಕರ ರಣವೀರ ಸೇನೆಯ 15 ಮಂದಿಯನ್ನು ಅಪಹರಿಸಿ ಅವರಲ್ಲಿ 9 ಜನರನ್ನು ಕೊಲ್ಲಲಾಯಿತು. ಬಾಂಬ್ ದಾಳಿ ಸಂದರ್ಭದಲ್ಲಿ 4 ಮಂದಿ ಅಸು ನೀಗಿದರು.

1970: ನೆರೆ ಹಾವಳಿಯಿಂದ ಗಂಗಾನದಿಯ ದಡದಲ್ಲಿ ಲಕ್ಷಾಂತರ ಜನ ಅಸು ನೀಗಿದರು.

1967: ಜೂಹಿ ಚಾವ್ಲಾ ಹುಟ್ಟಿದ ದಿನ.

1914: ನ್ಯೂಯಾರ್ಕಿನ ಮೇರಿ ಫೆಲ್ ಪ್ಸ್ ಜಾಕೋಬ್ ಅವರಿಗೆ `ಬ್ಯಾಕ್ ಲೆಸ್ ಬ್ರಾಸಿಯರ್' ಗೆ ಪೇಟೆಂಟ್ ಲಭಿಸಿತು. ಸ್ತನಗಳನ್ನು ಸಹಜವಾಗಿ ಬೇರೆ ಬೇರೆಯಾಗಿ ಕಾಣುವಂತಹ ವಿನ್ಯಾಸದ ಮೃದುವಾದ, ಚಿಕ್ಕದಾದ ಹೊಸ ಮಾದರಿಯ ಈ `ಬ್ರಾ'ವನ್ನು ಈಕೆ ಸಂಶೋಧಿಸಿದರು. ಈಕೆ ಅದನ್ನು `ಬ್ರಾಸಿಯರ್' ಎಂದು ಕರೆದರು. ನಂತರ ಈಕೆ ಈ ಪೇಟೆಂಟನ್ನು ಕನೆಕ್ಟಿಕಟ್ ನ ಬ್ರಿಜ್ಪೋರ್ಟಿನ ವಾರ್ನರ್ ಬ್ರದರ್ಸ್ ಕೊರ್ಸೆಟ್ ಕಂಪೆನಿಗೆ 1500 ಡಾಲರುಗಳಿಗೆ ಮಾರಾಟ ಮಾಡಿದರು. ಕಳೆದ 30 ವರ್ಷಗಳಲ್ಲಿ ಈ ಕಂಪೆನಿ ಈ `ಬ್ರಾ'ಗಳ ಮಾರಾಟದಿಂದ 1.50 ಕೋಟಿ ಡಾಲರುಗಳಿಗೂ ಹೆಚ್ಚಿನ ಹಣ ಸಂಪಾದನೆ ಮಾಡಿತು.

1789: ಬೆಂಜಮಿನ್ ಫ್ರಾಂಕ್ಲಿನ್ ತನ್ನ ಗೆಳೆಯನೊಬ್ಬನಿಗೆ ಪತ್ರವೊಂದನ್ನು ಬರೆದರು. ಅದರಲ್ಲಿ ಅವರು ಬರೆದ ಅಮರ ಹೇಳಿಕೆ ಹೀಗಿತ್ತು: `ಈ ಜಗತ್ತಿನಲ್ಲಿ ಸಾವು ಮತ್ತು ತೆರಿಗೆಗಳ ಹೊರತಾಗಿ ಯಾವುದನ್ನೂ ಖಚಿತ ಎಂದು ಹೇಳಲು ಸಾಧ್ಯವಿಲ್ಲ.'

1780: ಪಂಜಾಬಿನಲ್ಲಿ ಸಿಕ್ಖರ ರಾಜ್ಯವನ್ನು ಸ್ಥಾಪಿಸಿ 1801-1839ರ ಅವಧಿಯಲ್ಲಿ ಅದನ್ನು ಆಳಿದ ಮಹಾರಾಜ ರಣಜಿತ್ ಸಿಂಗ್ (1780-1839) ಹುಟ್ಟಿದ ದಿನ.

1834: ಪೀಟರ್ ಅರ್ರೆಲ್ ಬ್ರೌನ್ ವೈಡನರ್ (1834-1915) ಹುಟ್ಟಿದ ದಿನ. ಅಮೆರಿಕದ ಮಹಾದಾನಿಗಳಲ್ಲೊಬ್ಬರಾದ ಇವರು ಹ್ಯಾರಿ ಎಲ್ಕಿನ್ಸ್ ವೈಡ್ನರ್ ಗ್ರಂಥಾಲಯವನ್ನು ತನ್ನ ಮೊಮ್ಮಗನ ನೆನಪಿಗಾಗಿ ಹಾರ್ವರ್ಡ್ ವಿಶ್ವ ವಿದ್ಯಾಲಯಕ್ಕೆ ದಾನ ನೀಡಿದರು. ಟೈಟಾನಿಕ್ ದುರಂತದಲ್ಲಿ ಇವರ ಮೊಮ್ಮಗ ಹ್ಯಾರಿ ಅಸು ನೀಗಿದ್ದರು

Tuesday, December 1, 2009

ಇಂದಿನ ಇತಿಹಾಸ History Today ನವೆಂಬರ್ 12

ಇಂದಿನ ಇತಿಹಾಸ

ನವೆಂಬರ್ 12

ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ಅವರು ಕರ್ನಾಟಕದ 26ನೇ ಮುಖ್ಯ ಮಂತ್ರಿಯಾಗಿ ವಿಧಾನಸೌಧದ ಎದುರು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ದಕ್ಷಿಣ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಯಡಿಯೂರಪ್ಪ ಅವರ ಜೊತೆಗೆ ಗೋವಿಂದಪ್ಪ ಕಾರಜೋಳ, ಜಗದೀಶ ಶೆಟ್ಟರ, ಡಾ.ವಿ.ಎಸ್. ಆಚಾರ್ಯ ಮತ್ತು ಆರ್. ಅಶೋಕ್ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು

2008: ರಕ್ಷಣಾ ಇಲಾಖೆ ಒರಿಸ್ಸಾದ ಬಲ್ಸೂರು ಬಳಿ ಭೂ ಕ್ಷಿಪಣಿ `ಶೌರ್ಯ'ದ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು.

2008: ಚಂದ್ರನ ಕಕ್ಷೆ ಪ್ರವೇಶಿಸಿದ ಚಂದ್ರಯಾನ-1 ಬಾಹ್ಯಾಕಾಶ ನೌಕೆಯನ್ನು ಚಂದ್ರನ ಇನ್ನಷ್ಟು ಸಮೀಪ ಸಾಗಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾದರು. ಅಂಡಾಕಾರ ಮಾರ್ಗದಲ್ಲಿ ಚಂದ್ರನಿಂದ ಸುಮಾರು 200 ಕಿ.ಮೀ ದೂರದ ಅಂತರದಲ್ಲಿ ಸುತ್ತುತ್ತಿದ್ದ ನೌಕೆಯನ್ನು 100 ಕಿ.ಮೀ ಅಂತರಕ್ಕೆ ತಲುಪಿಸಿದರು. ಈದಿನ ಸಂಜೆ 6.30ರ ಸುಮಾರಿಗೆ ಒಂದು ನಿಮಿಷದ ಕಾಲ ನೌಕೆಯ ಲ್ಯಾಮ್ ರಾಕೆಟನ್ನು ಕೊನೆಯ ಬಾರಿ ಉರಿಸುವ ಮೂಲಕ ನಿಗದಿತ ಸ್ಥಳಕ್ಕೆ ನೌಕೆಯನ್ನು ತಲುಪಿಸಲಾಯಿತು

2008: ಕರ್ನಾಟಕದ ವಿಧಾನಸಭಾ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಮಾಡಿದ್ದ ಕೇಂದ್ರದ ಮಾಜಿ ಸಚಿವೆ ಮಾರ್ಗರೆಟ್ ಆಳ್ವ ಮೇಲೆ ಕಾಂಗ್ರೆಸ್ ಹೈಕಮಾಂಡ್ ಶಿಸ್ತುಕ್ರಮದ ದಂಡ ಪ್ರಯೋಗಿಸಿತು. ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯ ಜೊತೆಗೆ ಕಾರ್ಯಕಾರಿ ಸಮಿತಿ ಮತ್ತು ಕೇಂದ್ರ ಚುನಾವಣಾ ಸಮಿತಿಯ ಸದಸ್ಯತ್ವವನ್ನು ಅವರು ಕಳೆದುಕೊಂಡರು. ರಕ್ಷಣಾ ಖಾತೆ ಸಚಿವ ಎ.ಕೆ.ಆಂಟನಿ ಅಧ್ಯಕ್ಷತೆಯ ಶಿಸ್ತುಪಾಲನಾ ಸಮಿತಿ ನೀಡಿದ ವರದಿಯನ್ನು ಪರಿಶೀಲಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಆಳ್ವ ಅವರ ತಲೆದಂಡ ಪಡೆದರು. ತನ್ನ ಆರೋಪವನ್ನು ತನಿಖೆಗಾಗಿ ಶಿಸ್ತುಪಾಲನಾ ಸಮಿತಿಗೆ ಒಪ್ಪಿಸಿದ ನಂತರ ಕಾಂಗ್ರೆಸ್ ಅಧ್ಯಕ್ಷೆಯನ್ನು ಭೇಟಿ ಮಾಡಿದ್ದ ಮಾರ್ಗರೆಟ್ ಪಕ್ಷದ ಪದಾಧಿಕಾರಗಳಿಗೆ ರಾಜೀನಾಮೆ ಸಲ್ಲಿಸಿದ್ದರು. ಇದಕ್ಕೆ ಮೊದಲು ಅವರು ಶಿಸ್ತುಪಾಲನಾ ಸಮಿತಿ ಮುಂದೆಯೂ ಹಾಜರಾಗಿದ್ದರು. ಪಕ್ಷದ ಹಿರಿಯ ನಾಯಕರೊಡನೆ ಸಮಾಲೋಚನೆ ನಡೆಸಿದ ಸೋನಿಯಾಗಾಂಧಿ ಅವರು ಆಳ್ವ ರಾಜೀನಾಮೆಯನ್ನು ಸ್ವೀಕರಿಸಿದರು.

2008: ಸಿಡ್ನಿಯ ಖ್ಯಾತ ಪ್ರವಾಸಿ ತಾಣವಾದ ಗೋಲ್ಡ್ ಕೋಸ್ಟಿನಲ್ಲಿ ಆಯೋಜಿಸಿದ್ದ ಏಷ್ಯಾ ಪೆಸಿಫಿಕ್ ಚಲನಚಿತ್ರೋತ್ಸವದಲ್ಲಿ ಭಾರತದ ಪ್ರಯಾಸ್ ಗುಪ್ತ ಅವರ ನಿರ್ದೇಶನದ `ದಿ ಪ್ರಿಸನರ್' ತೀರ್ಪುಗಾರರ ಮಂಡಳಿಯ ಪ್ರಶಸ್ತಿಗೆ ಪಾತ್ರವಾಯಿತು. ಜೊತೆಗೆ ಏಷ್ಯಾ ಪೆಸಿಫಿಕ್ ವಲಯದಲ್ಲಿ ಚಿತ್ರೋದ್ಯಮದ ಜೀವಮಾನದ ಸಾಧನೆಗಾಗಿ ಯಶ್ ರಾಜ್ ಫಿಲ್ಮಿನ ಸಂಸ್ಥಾಪಕ ಯಶ್ ಚೋಪ್ರಾ ಅವರಿಗೆ ಅಂತಾರಾಷ್ಟ್ರೀಯ ಚಿತ್ರ ನಿರ್ಮಾಪಕರ ಸಂಘಗಳ ಒಕ್ಕೂಟ (ಎಫ್ ಐ ಎ ಪಿ ಎಫ್) ದ ಪ್ರಶಸ್ತಿ ಲಭಿಸಿತು.

2007: ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ಅವರು ಕರ್ನಾಟಕದ 26ನೇ ಮುಖ್ಯಮಂತ್ರಿಯಾಗಿ ವಿಧಾನಸೌಧದ ಎದುರು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ದಕ್ಷಿಣ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಯಡಿಯೂರಪ್ಪ ಅವರ ಜೊತೆಗೆ ಗೋವಿಂದಪ್ಪ ಕಾರಜೋಳ, ಜಗದೀಶ ಶೆಟ್ಟರ, ಡಾ.ವಿ.ಎಸ್. ಆಚಾರ್ಯ ಮತ್ತು ಆರ್. ಅಶೋಕ್ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿಯ ರಾಷ್ಟ್ರೀಯ ನಾಯಕರು ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾದರು. ಲೋಕಸಭೆ ವಿರೋಧ ಪಕ್ಷದ ನಾಯಕ ಎಲ್.ಕೆ.ಅಡ್ವಾಣಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಮಾಜಿ ಅಧ್ಯಕ್ಷ ಮುರಳಿ ಮನೋಹರ್ ಜೋಷಿ, ರಾಷ್ಟ್ರೀಯ ಉಪಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು, ರಾಜ್ಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಯಶವಂತಸಿನ್ಹಾ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಾದ ನರೇಂದ್ರ ಮೋದಿ (ಗುಜರಾತ್), ಶಿವರಾಜ್ ಸಿಂಗ್ ಚವಾಣ್ (ಮಧ್ಯಪ್ರದೇಶ), ರಮಣ್ ಸಿಂಗ್ (ಛತ್ತೀಸ್ ಗಡ) ಹಾಗೂ ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ- ಹೀಗೆ ರಾಷ್ಟ್ರದ ವಿವಿಧೆಡೆಯಿಂದ ಬಿಜೆಪಿ ಮುಖಂಡರ ದಂಡೇ ಆಗಮಿಸಿತ್ತು. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಪಕ್ಷ ಸದಸ್ಯರು ಸಮಾರಂಭಕ್ಕೆ ಹಾಜರಾದರೂ ತತ್ ಕ್ಷಣ ಸರ್ಕಾರ ಸೇರದಿರಲು ಮಿತ್ರ ಪಕ್ಷ ಜನತಾದಳ (ಎಸ್) ನಿರ್ಧರಿಸಿತು.

2007: ಭಾರತೀಯ ವಾಯು ಪಡೆಗೆ ಎರಡು ಅತ್ಯಾಧುನಿಕ `ಹಾಕ್ ಎಂಕೆ132' ಯುದ್ಧ ವಿಮಾನಗಳು ಸೇರ್ಪಡೆಯೊಂದಿಗೆ ರಾಷ್ಟ್ರದ ಬಹುದಿನಗಳ ಕನಸು ಈಡೇರಿತು. ಏರ್ ಮಾರ್ಷಲ್ ಜಿ.ಎಸ್. ಚೌಧುರಿ ಅವರು ಬೀದರ ನಗರದ ಹೊರಭಾಗದಲ್ಲಿನ ವಾಯುಪಡೆಯ ತರಬೇತಿ ಕೇಂದ್ರದಲ್ಲಿ ಸಾಯಂಕಾಲ 4 ಗಂಟೆಗೆ ನಡೆದ ಸರಳ ಮತ್ತು ಹೃದಯಸ್ಪರ್ಶಿ ಸಮಾರಂಭದಲ್ಲಿ ಬೂದು ಬಣ್ಣದ ಉಕ್ಕಿನ ಹಕ್ಕಿಗಳನ್ನು ಬರಮಾಡಿಕೊಂಡರು. ಪ್ಲಾಟಿನಂ ಮಹೋತ್ಸವ ಆಚರಿಸಿದ ವಾಯುಪಡೆಗೆ ಹಾಕ್ ವಿಮಾನಗಳ ಸೇರ್ಪಡೆ ಹೊಸ ಆಯಾಮವನ್ನೇ ಕಲ್ಪಿಸಿತು. ಇಂಗ್ಲೆಂಡಿನಲ್ಲಿ ಸಿದ್ಧವಾದ ಅತ್ಯಾಧುನಿಕ ಜೆಟ್ ಟ್ರೇನರ್ (ಎಜೆಟಿ)ಗಳಾದ `ಹಾಕ್ ಎಂಕೆ 132' ವಿಮಾನಗಳು ಸತತ ಐದು ದಿನಗಳ ಪ್ರಯಾಣದ ನಂತರ ಬೀದರಿನ ರನ್ ವೇಗೆ ಶರವೇಗದಲ್ಲಿ ಬಂದಿಳಿದವು. ವಿಂಗ್ ಕಮಾಂಡರ್ ಪಂಕಜ್ ಜೈನ್ ಮತ್ತು ಸ್ಕ್ವಾಡ್ರನ್ ಲೀಡರ್ ತರುಣ್ ಹಿಂದ್ವಾನಿ ಇಂಗ್ಲೆಂಡಿನಿಂದ ಹಾಕ್ ಯುದ್ಧ ವಿಮಾನಗಳನ್ನು `ಹಾರಿಸಿ'ಕೊಂಡು ಬಂದರು. ಅವರೊಂದಿಗೆ ಬ್ರಿಟಿಷ್ ಪೈಲಟ್ ಗಳಾದ ಜಾನ್ ಲಾಸನ್ ಮತ್ತು ಪೀಟರ್ ಕೊಸೊಗೊರಿನ್ ಇದ್ದರು. ಬ್ರಿಟಿಷ್ ಏರೋಸ್ಪೇಸ್ (ಬಿಇಎ) ಸಂಸ್ಥೆಯು ನಿಗದಿತ ಸಮಯದಲ್ಲಿಯೇ ಹಾಕ್ ವಿಮಾನಗಳನ್ನು ಪೂರೈಸಿತು. ಅತ್ಯುತ್ತಮ ಗುಣಮಟ್ಟದ ಹಾಕ್ ಗಳ ನಿರ್ಮಾಣದಲ್ಲಿ ಬೆಂಗಳೂರಿನ ಎಚ್ ಎ ಎಲ್ ಸಂಸ್ಥೆ ಕೂಡ ಪ್ರಮುಖ ಪಾತ್ರ ವಹಿಸಿತ್ತು. ಮೂರು ಸಾವಿರ ಕಿ.ಮೀ. ಕ್ರಮಿಸಿರುವ ಹಾಕ್ ಗಳು ಬೀದರ ತಲುಪುವಲ್ಲಿ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಹಂಟರ್ ವಿಮಾನಗಳ ನಿವೃತ್ತಿಯ ನಂತರ ಮಿಗ್ 21 ವಿಮಾನಗಳನ್ನು ಬಳಸಲಾಗುತ್ತಿತ್ತು. ಮುಂಚೂಣಿಯಲ್ಲಿದ್ದು ಹಾರಾಟ ನಡೆಸುವುದಕ್ಕೆ ಮಿಗ್ ವಿಮಾನಗಳು ಸೂಕ್ತವಾದವುಗಳಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಹಾಕ್ ವಿಮಾನಗಳ ಸೇರ್ಪಡೆ ಅಗತ್ಯವಾಗಿತ್ತು. ಗಂಟೆಗೆ 1050 ಕಿ.ಮೀ. ವೇಗದಲ್ಲಿ ಸಂಚರಿಸುವ ಹಾಕ್ ಯುದ್ಧ ವಿಮಾನಗಳಲ್ಲಿ 9,100 ಕೆ.ಜಿ. ಭಾರದ ಶಸ್ತ್ರಾಸ್ತ್ರಗಳನ್ನು ಸಾಗಿಸಬಹುದು. 13 ಅಡಿ ಎತ್ತರ ಮತ್ತು 40 ಅಡಿ ಅಗಲ ಇರುವ ಈ ಹಾಕ್ ಗಳಲ್ಲಿ ರಾಕೆಟ್, ಮಿಸೈಲ್, ಪ್ರಾಕ್ಟೀಸ್ ಬಾಂಬುಗಳನ್ನು ಕೊಂಡೊಯ್ಯಬಹುದು.

2007: ಕಾವೇರಿ ನದಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ನವೆಂಬರ್ 14ಂದು `ಸುವರ್ಣ ಯುಗ' ಎಂಬ ಹೊಸ ಪಕ್ಷ ಆರಂಭಿಸಲು ನಿರ್ಧರಿಸಿದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಪುತ್ರ ಮಹಿಮಾ ಪಟೇಲ್ ಈದಿನ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

2007: ಗುಜರಾತಿನ ಗೋಧ್ರಾದಲ್ಲಿ ಸಬರಮತಿ ರೈಲಿನ ಕೆಲ ಬೋಗಿಗಳಿಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿ ಇದ್ರಿಸ್ ಸಾದಿಕನನ್ನು ಗೋಧ್ರಾ ಪೊಲೀಸರು ಬಂಧಿಸಿದರು. 2002ರಲ್ಲಿ ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದಾಗ ಅದರಲ್ಲಿ ಪ್ರಯಾಣಿಸುತ್ತಿದ್ದ 59 ಕರಸೇವಕರು ಸಜೀವ ದಹನಗೊಂಡಿದ್ದರು. ಇದರ ಪರಿಣಾಮವಾಗಿ ಗುಜರಾತಿನಲ್ಲಿ ಸಂಭವಿಸಿದ ಕೋಮು ಗಲಭೆಯಲ್ಲಿ ಅಪಾರ ಪ್ರಮಾಣದದಲ್ಲಿ ಸಾವು ನೋವು ಸಂಭವಿಸಿತ್ತು. ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿ ಇದ್ರಿಸ್ ಸಾದಿಕ್ ತನ್ನ ಮನೆಗೆ ಬಂದ ಮಾಹಿತಿ ಅನುಸರಿಸಿ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡರು.

2007: ದಕ್ಷಿಣ ಧ್ರುವ ಅಂಟಾರ್ಟಿಕಾದಲ್ಲಿ ಸಂಶೋಧನಾ ಕಾರ್ಯವನ್ನು ಇನ್ನಷ್ಟು ವಿಸ್ತ್ರತಗೊಳಿಸಲು ನಿರ್ಧರಿಸಿದ ಚೀನಾದ 90ಕ್ಕೂ ಹೆಚ್ಚು ವಿಜ್ಞಾನಿಗಳು ಮತ್ತು ಸಹಾಯಕ ಸಿಬ್ಬಂದಿ ಸೋಮವಾರ ಅಂಟಾರ್ಟಿಕಾದತ್ತ ಪಯಣ ಬೆಳೆಸಿದರು. `ಸ್ನೊ ಡ್ರಾಗನ್' ಎಂಬ ಹಡಗಿನಲ್ಲಿ ಈ ತಂಡ ಅಂಟಾರ್ಟಿಕಾದತ್ತ ಹೊರಟಾಗ, ಸೇನೆಯ ಸಂಗೀತದ ಬ್ಯಾಂಡ್, ಚೀನಾದ ಸಾಂಪ್ರದಾಯಿಕ ನೃತ್ಯ, ಸಿಡಿಮದ್ದಿನ ಸಂಭ್ರಮದ ನಡುವೆ ಈ ಸಿಬ್ಬಂದಿಯನ್ನು ಬೀಳ್ಕೊಡಲಾಯಿತು.

2006: ಉತ್ತರಾಂಚಲದ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಡಾ. ಅನಿಲ್ ಕುಮಾರ ತಿವಾರಿ ಅವರನ್ನು ಅಪರಿಚಿತ ಬಂದೂಕುಧಾರಿಯೊಬ್ಬ ಗುಂಡಿಟ್ಟು ಹತ್ಯೆ ಮಾಡಿದ.

2006: ಬ್ರಿಟಿಷ್ ವಿಜ್ಞಾನಿಗಳು ಜಗತ್ತಿನ ಮೊತ್ತ ಮೊದಲ `ಕೃತಕ ಹೊಟ್ಟೆ'ಯನ್ನು ನಿರ್ಮಿಸಿದರು. ಈ ಕೃತಕ ಹೊಟ್ಟೆಯು ಹೊಟ್ಟೆಯ ಒಳಗೆ ಏನು ಕ್ರಿಯೆ ಸಂಭವಿಸುತ್ತದೆ, ಮತ್ತು ಅಜೀರ್ಣ ಸಮಸ್ಯೆ ನಿವಾರಿಸಲು ಎಂತಹ ಆರೋಗ್ಯ ಪೂರ್ಣ ಆಹಾರ ತೆಗೆದುಕೊಳ್ಳಬೇಕು ಎಂಬುದನ್ನು ಅರಿತುಕೊಳ್ಳಲು ನೆರವಾಗುತ್ತದೆ. ನಾರ್ವಿಜ್ ಆಹಾರ ಮತ್ತು ಸಂಶೋಧನಾ ಸಂಸ್ಥೆಯ ವಿಜ್ಞಾನಿ ಮಾರ್ಟಿನ್ ವಿಕ್ಹಾಮ್ ಮತ್ತು ಸಹೋದ್ಯೋಗಿಗಳು ಈ `ಕೃತಕ ಹೊಟ್ಟೆ'ಯನ್ನು ನಿರ್ಮಿಸಿದವರು.

2006: ಹಲವು ರೋಗಗಳನ್ನು ಆರಂಭದ ಹಂತದಲ್ಲಿಯೇ ಗುರುತಿಸುವ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿರುವುದಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ಭೌತ ಶಾಸ್ತ್ರ ವಿಭಾಗದ ಬೆಂಗಳೂರು ಮೂಲದ ವಿಜ್ಞಾನಿಗಳಾದ ಡಾ. ಅಜಯ್ ಸೂದ್ ಮತ್ತು ಅಜಯ್ ನೇಗಿ ಪ್ರಕಟಿಸಿದರು. ಬಹುತೇಕ ಎಲ್ಲ ರೋಗಗಳ ಪತ್ತೆಗೆ ಬಳಸುವ ಆಂಟಿಜನ್ ಡಯಾಗ್ನೋಸ್ಟಿಕ್ ಉಪಕರಣದ ದಕ್ಷತೆಯನ್ನು ನೂರು ಪಟ್ಟು ಹೆಚ್ಚಿಸುವ ನಿಟಿನಲ್ಲಿ ಸೂಕ್ಷ್ಮ ವಿದ್ಯುತ್ ಪಲ್ಸ್ ಗಳನ್ನು ಅವರು ಬಳಸಿದರು. ಈ ತಂತ್ರಜ್ಞಾನದಿಂದ ರೋಗವನ್ನು ಆರಂಭಗೊಂಡ ಮೊದಲ ಅಥವಾ ಎರಡನೇ ದಿನವೇ ಪತ್ತೆಹಚ್ಚಲು ಸಾಧ್ಯವಿದೆ.

2005: ಭಾರತದ ಪರಿಶುದ್ಧ ರಾಜಕಾರಣಿಗಳಲ್ಲಿ ಒಬ್ಬರಾದ, ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ನಾಯಕ, ಕೇಂದ್ರದ ಮಾಜಿ ಸಚಿವ ಪ್ರೊ. ಮಧು ದಂಡವತೆ (1924-2005) ಮುಂಬೈಯಲ್ಲಿ ನಿಧನರಾದರು. ಅವರು ಹುಟ್ಟಿದ್ದು 1924ರ ಜನವರಿ 21ರಂದು. ಭಾರತದ ಹೆಮ್ಮೆಯ ಕೊಂಕಣ ರೈಲ್ವೆ ದಂಡವತೆ ಅವರ ಕಲ್ಪನೆಯ ಕೂಸು.

2000: ಜಾರ್ಖಂಡ್ ಭಾರತದ 28ನೇ ರಾಜ್ಯವಾಯಿತು. ರಾಂಚಿ ಅದರ ರಾಜಧಾನಿಯಾಯಿತು.

1990: ಜಪಾನಿನ ಚಕ್ರವರ್ತಿ ಅಕಿಹಿಟೊ ಅವರು ಔಪಚಾರಿಕವಾಗಿ ಕ್ರೈಸಾಂಥೇಮಮ್ (ಸೇವಂತಿಗೆ) ಸಿಂಹಾಸನವನ್ನು ಏರಿದರು.

1981: ಅಮೆರಿಕಾದ ಷಟಲ್ ನೌಕೆ ಕೊಲಂಬಿಯಾ ಬಾಹ್ಯಾಕಾಶಕ್ಕೆ ಎರಡನೇ ಯಾನ ಮಾಡಿದ ಮೊದಲ ಬಾಹ್ಯಾಕಾಶ ನೌಕೆ ಎನಿಸಿತು.

1960: ಸಾಹಿತಿ ನಂದಾ ಪ್ರಸಾದ್ ಜನನ.

1953: ಸಾಹಿತಿ ಸದಾನಂದ ಜನನ.

1946: ಪಂಡಿತ ಮದನ ಮೋಹನ ಮಾಳವೀಯ ನಿಧನರಾದರು.

1946: ಖ್ಯಾತ ಕಾದಂಬರಿಕಾರ ಎಚ್. ಕೆ. ಅನಂತರಾವ್ ಅವರು ಎಚ್.ಬಿ. ಕೃಷ್ಣರಾವ್- ರಾಧಾಬಾಯಿ ದಂಪತಿಯ ಮಗನಾಗಿ ಹೈದರಾಬಾದಿನಲ್ಲಿ ಜನಿಸಿದರು.

1933: ಸಾಹಿತಿ ಜೀಶಂಪ ಜನನ.

1923: ಸಾಹಿತಿ ಗಂಗಾಧರ ಚಿತ್ತಾಲ ಜನನ.

1896: `ಭಾರತದ ಪಕ್ಷಿ ಮಾನವ' (ಬಡರ್್ ಮ್ಯಾನ್ ಆಫ್ ಇಂಡಿಯಾ) ಎಂದೇ ಖ್ಯಾತರಾಗಿರುವ ಪಕ್ಷಿತಜ್ಞ ಸಲೀಂ ಅಲಿ (1896-1987) ಹುಟ್ಟಿದ ದಿನ.

1893: ಅಫ್ಘಾನಿಸ್ಥಾನ ಮತ್ತು ಅದರ ಪೂರ್ವ ಹಾಗೂ ದಕ್ಷಿಣ ಭಾಗದಲ್ಲಿ ಆಗಿನ ಬ್ರಿಟಿಷ್ ಭಾರತದ ಗಡಿಗಳನ್ನು ಗುರುತಿಸುವ ಒಪ್ಪಂದಕ್ಕೆ ಭಾರತ ಸರ್ಕಾರದ ವಿದೇಶಾಂಗ ಕಾರ್ಯದರ್ಶಿ ಮಾರ್ಟಿಮರ್ ಡ್ಯುರಾಂಡ್ ಮತ್ತು ಅಫ್ಘಾನಿಸ್ಥಾನದ ಅಮೀರ್ ಅಬ್ದುಲ್ ರಹಮಾನ್ ಖಾನ್ ಸಹಿ ಹಾಕಿದರು. ಈ ಗಡಿ ರೇಖೆಯನ್ನು `ಡ್ಯುರಾಂಡ್ ಲೈನ್' ಎಂದೇ ಹೆಸರಿಸಲಾಯಿತು.

1889: ಡೆ ವಿಟ್ ವ್ಯಾಲೇಸ್ (1889-1981) ಹುಟ್ಟಿದ ದಿನ. ಇವರು ಜಗತಿನಲ್ಲಿ ಅತ್ಯಂತ ಹೆಚ್ಚು ಪ್ರಸಾರವುಳ್ಳ ನಿಯತಕಾಲಿಕಗಳಲ್ಲಿ ಒಂದಾದ `ರೀಡರ್ಸ್ ಡೈಜೆಸ್ಟ್' ಪತ್ರಿಕೆಯನ್ನು ರೂಪಿಸಿದವರು ಹಾಗೂ ಪ್ರಕಾಶಕರು.

1866: ಚೀನೀ ನ್ಯಾಷನಲಿಸ್ಟ್ ಪಾರ್ಟಿಯ ನಾಯಕ ಹಾಗೂ ಚೀನಾ ಗಣರಾಜ್ಯದ ಮೊದಲ ತಾತ್ಕಾಲಿಕ ಅಧ್ಯಕ್ಷ ಸನ್-ಯಾತ್-ಸೆನ್ (1866-1925) ಹುಟ್ಟಿದ ದಿನ. ಇವರು ಆಧುನಿಕ ಚೀನಾದ ಜನಕ ಎಂದೇ ಖ್ಯಾತರಾಗಿದ್ದಾರೆ.

1880: ಭಾರತದ ಸ್ವಾತಂತ್ರ್ಯ ಹೋರಾಟಗಾರ ಸೇನಾಪತಿ ಬಾಪಟ್ (1880-1967) ಹುಟ್ಟಿದ ದಿನ.

1855: ಭಾರತೀಯ ಸ್ವಾತಂತ್ರ್ಯ ಯೋಧ ಹಾಗೂ ಕೈಗಾರಿಕೋದ್ಯಮಿ ಕುಂದನ್ ಮಲ್ ಸೋಭಚಂದ್ ಫಿರೋಡಿಯಾ (1855-1968) ಹುಟ್ಟಿದ ದಿನ.

1817: ಬಹಾಯಿ ಪಂಥದ ಸ್ಥಾಪಕ ಬಹಾವುಲ್ಲಾ (1817-1892) ಹುಟ್ಟಿದ ದಿನ.

Thursday, November 26, 2009

ಇಂದಿನ ಇತಿಹಾಸ History Today ನವೆಂಬರ್ 11

ಇಂದಿನ ಇತಿಹಾಸ

ನವೆಂಬರ್ 11

ಇಂದು ರಾಷ್ಟ್ರೀಯ ಶಿಕ್ಷಣ ದಿನ. ಭಾರತದ ಪ್ರಥಮ ಶಿಕ್ಷಣ ಸಚಿವರಾಗಿದ್ದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನವಾದ ನವೆಂಬರ್ 11ನ್ನು 'ರಾಷ್ಟ್ರೀಯ ಶಿಕ್ಷಣ ದಿನ'ವನ್ನಾಗಿ ಆಚರಿಸಬೇಕೆಂದು ಭಾರತ ಸರ್ಕಾರ ಘೋಷಣೆ ಹೊರಡಿಸಿತು.. ಸಚಿವರಾಗಿದ್ದ ಅವಧಿಯಲ್ಲಿ ಆಜಾದ್ ಕೈಗೊಂಡ ಸುಧಾರಣೆಗಳು ದೇಶದ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಿಗೆ ಕಾರಣವಾಗಿದ್ದವು. ಉರ್ದು ಲೇಖಕರಾಗಿ, ಪತ್ರಕರ್ತರಾಗಿ, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯ ಪಾತ್ರವಹಿಸಿದ್ದ ಮೌಲಾನಾ ಅಬುಲ್ ಕಲಾಂ ಮಕ್ಕಾದಲ್ಲಿ 1888ರ ನವೆಂಬರ್ 11 ರಂದು ಜನಿಸಿದರು.

ಮೃತ್ಯುವಿಗೆ ಸವಾಲು ಹಾಕುವ ಎರಡು ಸಾಹಸಗಳು ಈದಿನ ನಡೆದವು. 1998ರಲ್ಲಿ ಜೇ ಕೊಚ್ರಾನೆ ಅವರು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಆಗಸದಲ್ಲಿ ನಡೆದರು. ನೆವಾಡಾದ ಲಾಸ್ ವೆಗಾಸಿನಲ್ಲಿ ಫ್ಲೆಮಿಂಗೊ ಹಿಲ್ಟನ್ ಗೋಪುರಗಳ ಮಧ್ಯೆ ಬಿಗಿಯಾಗಿ ಕಟ್ಟಿದ್ದ ಹಗ್ಗದ ಮೇಲೆ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಅವರು ನಡೆದರು. ಈ ಗೋಪುರಗಳ ನಡುವಣ ಅಂತರ 600 ಅಡಿಗಳು. 1981ರಲ್ಲಿ ಸ್ಟಂಟ್ ಮ್ಯಾನ್ ಗುಡ್ ವಿನ್ ಅವರು 100 ಮಹಡಿಗಳ ಕಟ್ಟಡವನ್ನು ಅದರ ಹೊರಭಾಗದ ಗೋಡೆಯ ಮೂಲಕ ಏರಿದರು. ಈ ಸಾಹಸಕ್ಕೆ ಅವರು 6 ಗಂಟೆಗಳನ್ನು ತೆಗೆದುಕೊಂಡರು.

2008: ಚಾಮರಾಜನಗರ- ನಂಜನಗೂಡು ಪರಿವರ್ತತ ಬ್ರಾಡ್ ಗೇಜ್ ಮಾರ್ಗದಲ್ಲಿ ಪ್ರಥಮ ರೈಲು ಪಯಣಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ಆರ್. ವೇಲು ಹಸಿರು ನಿಶಾನೆ ತೋರಿದರು.

2008: ಭಾರತದ ಕಡಲ ತಡಿಯಲ್ಲಿರುವ 'ಪ್ರವಾಸಿಗರ ಸ್ವರ್ಗ' ಮಾಲ್ಡೀವ್ಸಿನಲ್ಲಿ ಹೊಸ ಶಕೆಯೊಂದು ಆರಂಭವಾಯಿತು. 41 ವರ್ಷದ ಮೊಹಮ್ಮದ್ ಅನ್ನಿ ನಶೀದ್ ಈ ದ್ವೀಪ ರಾಷ್ಟ್ರದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಮೂರು ದಶಕಗಳ ಏಕ ವ್ಯಕ್ತಿ ಆಡಳಿತವನ್ನು ಕೊನೆಗಾಣಿಸಿ, ದೇಶದ ಜನರಲ್ಲಿ ಮಿಂಚಿನ ಸಂಚಾರಕ್ಕೆ ಕಾರಣರಾದರು. ಹಿಂದಿನ ಸುದೀರ್ಘ ಅವಧಿಯ ಅಧ್ಯಕ್ಷ ಮೌಮೂನ್ ಅಬ್ದುಲ್ ಗಯೂಮ್ ಅವರಿಂದ ಭಿನ್ನಮತದ ಕಾರಣಕ್ಕಾಗಿ ಹಲವು ಬಾರಿ ಜೈಲುವಾಸ ಅನುಭವಿಸಿದ್ದ ನಶೀದ್, ಅಭಿವ್ಯಕ್ತಿ ಸ್ವಾತಂತ್ರ್ಯದ ಜೊತೆಗೆ ದ್ವೇಷ, ಹೊಟ್ಟೆಕಿಚ್ಚು ಮತ್ತು ಹಗೆತನದಿಂದ ಹೊರತಾದ ಹೊಸ ಮಾಲ್ಡೀವ್ಸ್ ಕಟ್ಟುವ ಭರವಸೆಯನ್ನು ಪ್ರಜೆಗಳಿಗೆ ನೀಡಿದರು.

2008: ಮಂಗಳಗ್ರಹದ ಮೇಲಿನ ಅಧ್ಯಯನಕ್ಕಾಗಿ ಐದು ತಿಂಗಳ ಹಿಂದೆ ತೆರಳಿದ್ದ 'ಫೀನಿಕ್ಸ್ ಮಾರ್ಸ್ ಲ್ಯಾಂಡರ್' ಗಗನನೌಕೆಯು ತಾಂತ್ರಿಕ ದೋಷಗಳಿಂದಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನಾಸಾ'ದೊಂದಿಗೆ ಸಂಪರ್ಕ ಕಡಿದುಕೊಂಡಿತು.

2008: ಪೆಪ್ಸಿ ಕಂಪೆನಿಯ ಅಧ್ಯಕ್ಷೆ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾರತೀಯ ಮೂಲದ ಇಂದ್ರಾ ನೂಯಿ ಅವರನ್ನು 'ಷಿಕಾಗೋ ಯುನೈಟೆಡ್-2008 ಬ್ರಿಜ್ ಪ್ರಶಸ್ತಿ'ಗೆ ಆಯ್ಕೆ ಮಾಡಲಾಯಿತು. ವಿವಿಧತೆಯಲ್ಲಿ ನೂಯಿ ಅವರು ತೋರಿರುವ ವಿಶೇಷ ನಾಯಕತ್ವ ಗುಣಕ್ಕಾಗಿ ಈ ಪ್ರಶಸ್ತಿ ನೀಡಲಾಯಿತು..

2008: ಇಂದು ರಾಷ್ಟ್ರೀಯ ಶಿಕ್ಷಣ ದಿನ. ಭಾರತದ ಪ್ರಥಮ ಶಿಕ್ಷಣ ಸಚಿವರಾಗಿದ್ದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನವಾದ ನವೆಂಬರ್ 11ನ್ನು 'ರಾಷ್ಟ್ರೀಯ ಶಿಕ್ಷಣ ದಿನ'ವನ್ನಾಗಿ ಆಚರಿಸಬೇಕೆಂದು ಭಾರತ ಸರ್ಕಾರ ಘೋಷಣೆ ಹೊರಡಿಸಿತು.. ಸಚಿವರಾಗಿದ್ದ ಅವಧಿಯಲ್ಲಿ ಆಜಾದ್ ಕೈಗೊಂಡ ಸುಧಾರಣೆಗಳು ದೇಶದ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಿಗೆ ಕಾರಣವಾಗಿದ್ದವು. ಉರ್ದು ಲೇಖಕರಾಗಿ, ಪತ್ರಕರ್ತರಾಗಿ, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯ ಪಾತ್ರವಹಿಸಿದ್ದ ಮೌಲಾನಾ ಅಬುಲ್ ಕಲಾಂ ಮಕ್ಕಾದಲ್ಲಿ 1888ರ ನವೆಂಬರ್ 11 ರಂದು ಜನಿಸಿದರು. ಅಬುಲ್ ಕಲಾಮ್ ಮೊಹಿಯ್ದುದೀನ್ ಅಹಮದ್ ಎಂಬ ತಮ್ಮ ಮೊದಲಿನ ಹೆಸರಿಗೆ ಆಜಾದ್ ಎಂಬ ಕಾವ್ಯನಾಮ ಸೇರಿಸಿಕೊಂಡರು. ಕೈರೋದ ಅಲ್ ಅಝ್ಹರ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ನಂತರ 1912ರಲ್ಲಿ ಕೋಲ್ಕತದಲ್ಲಿ ಅಲ್ ಹಿಲಾಲ್ ಎಂಬ ಉರ್ದು ವಾರಪತ್ರಿಕೆಯನ್ನು ಆರಂಭಿಸಿದರು.

2008: ಕರ್ನಾಟಕದಲ್ಲಿ ಕಾಂಗ್ರೆಸ್ ಟಿಕೆಟುಗಳು ಮಾರಾಟವಾಗಿವೆ ಎಂಬ ಗಂಭೀರ ಆರೋಪ ಮಾಡಿದ ಏಐಸಿಸಿ ಪ್ರಧಾನ ಕಾರ್ಯದರ್ಶಿ ಮಾರ್ಗರೆಟ್ ಆಳ್ವ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಆಳ್ವ ವಿರುದ್ಧದ ಶಿಸ್ತು ಉಲ್ಲಂಘನೆಯ ಆರೋಪದ ಬಗ್ಗೆ ತನಿಖೆ ನಡೆಸಿರುವ ಪಕ್ಷದ ಶಿಸ್ತುಪಾಲನಾ ಸಮಿತಿಯ ಅಧ್ಯಕ್ಷ ಎ.ಕೆ.ಆಂಟನಿ ತಮ್ಮ ವರದಿಯನ್ನು ಈದಿನ ಸಂಜೆ ಪಕ್ಷಾಧ್ಯಕ್ಷೆ ಸೋನಿಯಾ ಅವರಿಗೆ ಸಲ್ಲಿಸಿದರು.

2007: ಪಾಕಿಸ್ಥಾನದಲ್ಲಿ 2008ರ ಜನವರಿ 9ರಂದು ಸಾರ್ವತ್ರಿಕ ಚುನಾವಣೆಯನ್ನು ನಡೆಸುವುದಾಗಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಘೋಷಿಸಿದರು. ಚುನಾವಣೆ ಪ್ರಕ್ರಿಯೆ ನೋಡಿಕೊಳ್ಳಲು ಉಸ್ತುವಾರಿ ಸರ್ಕಾರ ನವೆಂಬರ್ 15ರಂದು ಅಸ್ತಿತ್ವಕ್ಕೆ ಬರಲಿದೆ ಎಂದು ಹೇಳಿದ ಅವರು 'ನಾನು ಅಧ್ಯಕ್ಷನಾಗಿ ಮತ್ತೊಂದು ಅವಧಿಗೆ ಪ್ರಮಾಣ ವಚನ ತೆಗೆದುಕೊಳ್ಳುವೆ. ಸೇನಾ ಮುಖ್ಯಸ್ಥನ ಸ್ಥಾನ ಬಿಟ್ಟುಕೊಡುವೆ' ಎಂದೂ ಪ್ರಕಟಿಸಿದರು. ತುರ್ತು ಪರಿಸ್ಥಿತಿ ಘೋಷಿಸಿದ 9 ದಿನಗಳ ನಂತರ ಮುಷರಫ್ ಈ ಘೋಷಣೆ ಮಾಡಿದರು.

2007: ಅಮೆರಿಕದ ನ್ಯೂಜೆರ್ಸಿ ಶಾಸನ ಸಭೆಯ ಉಪಾಧ್ಯಕ್ಷ ಉಪೇಂದ್ರ ಜೆ.ಚಿವುಕುಲ ಅವರಿಗೆ ಪ್ರತಿಷ್ಠಿತ ಅತ್ಯುತ್ತಮ ಶಾಸಕ ಪ್ರಶಸ್ತಿ ಸಂದಿದೆ ಎಂದು ನ್ಯೂಜೆರ್ಸಿ ರಾಜ್ಯ ವಾಣಿಜ್ಯ ಮಂಡಳಿ ಘೋಷಿಸಿತು. ಈ ಪ್ರಶಸ್ತಿ ಸ್ವೀಕರಿಸುವ ಒಟ್ಟು ನಾಲ್ಕು ಮಂದಿಯಲ್ಲಿ ಚಿವುಕುಲ ಅವರೂ ಒಬ್ಬರು.

2007: ಆಗ್ನೇಯ ಚೀನಾದ ಕಲ್ಲಿದ್ದಲು ಗಣಿಯಲ್ಲಿ ವಿಷಾನಿಲ ಸೋರಿಕೆಯಿಂದ ಸತ್ತವರ ಸಂಖ್ಯೆ 35ಕ್ಕೆ ಏರಿತು. ವಿಷಾನಿಲ ಸೋರಿಕೆ ಶುರುವಾದಾಗ ಒಟ್ಟು 86 ಗಣಿ ಕಾರ್ಮಿಕರು ಗಣಿಯಲ್ಲಿ ಸಿಕ್ಕಿಹಾಕಿಕೊಂಡಿದ್ದರು.

2007: ಇಂಡೋನೇಷ್ಯಾದ ಸುಮಾತ್ರ ದ್ವೀಪದಲ್ಲಿ ಲಘು ಭೂಕಂಪ ಸಂಭವಿಸಿತು. ರಿಕ್ಟರ್ ಮಾಪಕದಲ್ಲಿ 6.0ಯಷ್ಟು ತೀವ್ರತೆಯ ಈ ಭೂಕಂಪದಿಂದ ಪ್ರಾಣ ಮತ್ತು ಆಸ್ತಿಪಾಸ್ತಿಗಳಿಗೆ ಹಾನಿಯಾದ ವರದಿ ಬಂದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿತು.

2006: `ಕೇರಾಫ್ ಫುಟ್ಪಾತ್' ಚಿತ್ರವನ್ನು ನಿರ್ದೇಶಿಸಿ, `ಅತ್ಯಂತ ಕಿರಿಯ ವಯಸ್ಸಿನ ನಿರ್ದೇಶಕ' ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದ 11ರ ಹರೆಯದ ಮಾಸ್ಟರ್ ಕಿಶನ್ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾದ. ಈ ಕುರಿತು ಗಿನ್ನೆಸ್ನಿಂದ ಪತ್ರ ಬಂತು. ಕೊಳೆಗೇರಿ ಮಕ್ಕಳ ಕತೆ ಹೊಂದಿರುವ ಈ ಚಿತ್ರದಲ್ಲಿ ನಟರಾದ ಅಂಬರೀಷ್, ಸುದೀಪ್, ಬಾಲಿವುಡ್ ನಟ ಜಾಕಿ ಶ್ರಾಫ್ ನಟಿಸಿದ್ದಾರೆ.

2006: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಬ್ರಸ್ಸೆಲ್ಸ್ ನಲ್ಲಿ ಬೆಲ್ಜಿಯಂನ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ `ಆರ್ಡರ್ ಆಫ್ ಲಿಯೋಪೋಲ್ಡ್' ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರೀಯ ಅಭಿವೃದ್ಧಿ, ಭಾರತದ ಬಹು ಸಂಸ್ಕೃತಿ, ಸಹನಶೀಲ ಸಮಾಜ ವ್ಯವಸ್ಥೆಯ ರಕ್ಷಣೆಗೆ ಶ್ರಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.

2006: ಎರಡು ವರ್ಷಗಳ ಹಿಂದೆ ಸುನಾಮಿ ದುರಂತದಲ್ಲಿ ತಾಯಿಯೊಡನೆ ಸಾವನ್ನಪ್ಪಿದ ಹುಬ್ಬಳ್ಳಿಯ ಶಾಲಾ ಬಾಲಕ ಶ್ರೇಯಸ್ ಪಾಟೀಲನಿಗೆ ಮರಣೋತ್ತರವಾಗಿ ರಾಜ್ಯ ಸರ್ಕಾರ ಶೌರ್ಯ ಪ್ರಶಸ್ತಿ ಘೋಷಿಸಿತು. 2004ರ ಡಿಸೆಂಬರಿನಲ್ಲಿ ವಾಸುದೇವ ಪಾಟೀಲ ಕುಟುಂಬ ಮತ್ತು ಗೆಳೆಯ ಶಶಿಧರ ಉಡುಪ ಕುಟುಂಬ ಕಡಲೂರಿಗೆ ಪ್ರವಾಸ ಹೋಗಿದ್ದಾಗ ಈ ದುರಂತ ಸಂಭವಿಸಿತ್ತು. ಡಿಸೆಂಬರ್ 26ರಂದು ದುರಂತ ಸಂಭವಿಸಿದಾಗ ಸಮುದ್ರ ತೀರದಲ್ಲಿದ್ದ ಈ ಕುಟುಂಬಗಳ ನಾಲ್ವರು ಸಮುದ್ರದದ ಅಲೆಯ ಮಧ್ಯೆ ಕೊಚ್ಚಿ ಹೋಗಿದ್ದರು. ತಾಯಿ ಸಂಧ್ಯಾ ಅವರನ್ನು ಉಳಿಸಲು ಯತ್ನಿಸಿದ ಶ್ರೇಯಸ್ ಹಾಗೂ ಶಶಿಧರ ಉಡುಪ ಅವರ ಪತ್ನಿ ಗೀತಾ ಪ್ರಾಣ ಕಳೆದುಕೊಂಡಿದ್ದರು. ಅವರ ಮಗ ಪ್ರಣಾಮ್ ಮತ್ತು ವಾಸುದೇವ ಪಾಟೀಲ ಮಾತ್ರ ಪಾರಾಗಿದ್ದರು.

2005: ಅಂಧರ ಬಾಳಿಗೆ ಆಶಾಕಿರಣವಾಗಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ನೇತ್ರತಜ್ಞ ಡಾ. ಎಂ.ಸಿ. ಮೋದಿ (90) ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರ ಇಚ್ಛೆಯಂತೆ ಅವರ ಎರಡೂ ಕಣ್ಣುಗಳನ್ನು ಲಯನ್ಸ್ ಕಣ್ಣಿನ ಆಸ್ಪತ್ರೆಗೆ ದಾನ ಮಾಡಲಾಯಿತು.

1992: ಕರ್ನಾಟಕದ ಮುಖ್ಯಮಂತ್ರಿ ಎಸ್. ಬಂಗಾರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

1960: ಸಾಹಿತಿ ಸತ್ಯನಾರಾಯಣ ಉರಾಳ ಜನನ.

1958: ಸಾಹಿತಿ ಬಸವರಾಜ ಹುಡೇದಗಡ್ಡಿ ಜನನ.

1948: ಸಾಮಾಜಿಕ, ಚಾರಿತ್ರಿಕ ಸೇರಿದಂತೆ ಎಲ್ಲ ಪ್ರಾಕಾರಗಳಲ್ಲೂ ಕಾದಂಬರಿ ರಚಿಸಿ ಖ್ಯಾತಿ ಪಡೆದ ಕಾದಂಬರಿಕಾರ ರುದ್ರಮೂರ್ತಿ ಶಾಸ್ತ್ರಿ ಅವರು ಎಸ್.ಎನ್. ಶಿವರುದ್ರಯ್ಯ- ಸಿದ್ದಗಂಗಮ್ಮ ದಂಪತಿಯ ಮಗನಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಗ್ಗನಹಳ್ಳಿಯಲ್ಲಿ ಜನಿಸಿದರು.

1947: ಫಂಡರಪುರದ ವಿಠೋಬಾ ದೇವಾಲಯ ಪ್ರವೇಶಕ್ಕೆ ಹರಿಜನರಿಗೆ ಅವಕಾಶ ಲಭಿಸಿತು. ಗಣಪತರಾವ್ ತಾಪ್ಸೆ ಅವರು ದೇವಾಲಯ ಪ್ರವೇಶಿಸಿದ ಮೊತ್ತ ಮೊದಲ ಹರಿಜನ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1944: ಸಾಹಿತಿ ಲಲಿತಾ ಬಿ. ರಾವ್ ಜನನ.

1942: ಸಾಹಿತಿ ಗಂಡಸಿ ವಿಶ್ವೇಶ್ವರ ಜನನ.

1938: ಇಪ್ಪತ್ತನೇ ಶತಮಾನದ ಆದಿಯಲ್ಲಿ ನ್ಯೂಯಾರ್ಕ್ ನಗರದಲ್ಲಿ `ಟೈಫಾಯಿಡ್ ವಾಹಕಿ' ಎಂಬುದಾಗಿಯೇ ಹೆಸರು ಪಡೆದ ಮೇರಿ ಮಲ್ಲೊನ್ (1870-1938) ಮೃತಳಾದಳು. 51 ಟೈಫಾಯಿಡ್ ಪ್ರಕರಣಗಳಿಗೆ ನೇರವಾಗಿ ಈಕೆ ಕಾರಣಳಾಗಿದ್ದು, ಮೂರು ಸಾವುಗಳೂ ನೇರವಾಗಿ ಈಕೆಯಿಂದ ಟೈಫಾಯಿಡ್ ಹರಡಿದ ಪರಿಣಾಮವಾಗಿಯೇ ಸಂಭವಿಸಿವೆ. (ಈಕೆಯ ಮೂಲಕ ಪರೋಕ್ಷವಾಗಿ ರೋಗ ಹರಡಿದ ಪ್ರಕರಣಗಳು ಅಸಂಖ್ಯಾತ). ಇಷ್ಟೆಲ್ಲ ಮಂದಿಗೆ ರೋಗ ತಗುಲಿಸಿದರೂ ಈಕೆಗೆ ಮಾತ್ರ ಟೈಫಾಯಿಡ್ ರೋಗಾಣುಗಳಿಂದ ಏನೂ ತೊಂದರೆ ಆಗಿರಲಿಲ್ಲ.

1918: ಫ್ರಾನ್ಸಿನ ಕಾಂಪಿಗ್ನೆ ಅರಣ್ಯದ ನಡುವೆ ಮಿತ್ರ ಪಡೆಗಳ ಕಮಾಂಡರ್ ಮಾರ್ಷಲ್ ಫರ್ಡಿನಾಂಡ್ ಫೋಕ್ ಅವರ ರೈಲ್ವೇ ಬೋಗಿಯಲ್ಲಿ ಆರ್ಮಿಸ್ಟೀಸ್ ಗೆ ಸಹಿ ಮಾಡುವುದರೊಂದಿಗೆ ಮೊದಲನೆಯ ವಿಶ್ವ ಸಮರ ಕೊನೆಗೊಂಡಿತು. ಈ ದಿನವನ್ನು `ಆರ್ಮಿಸ್ಟೀಸ್ ದಿನ' ಎಂಬುದಾಗಿ ಕರೆಯಲಾಗಿದೆ. ಈ ರೈಲ್ವೇ ಬೋಗಿಯನ್ನು ಸ್ಮಾರಕವಾಗಿ ಸಂರಕ್ಷಿಸಿ ಇಡಲಾಗಿದೆ.

1888: ಭಾರತರತ್ನ ಪ್ರಶಸ್ತಿ ಪುರಸ್ಕೃತ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬುಲ್ ಕಲಂ ಅಜಾದ್ ಅವರು ಹುಟ್ಟಿದ ದಿನ. ಅವರು ಈದಿನ ಹುಟ್ಟಿದ್ದು ಮೆಕ್ಕಾದಲ್ಲಿ. ಅವರ ತಂದೆ ಮೌಲಾನಾ ಕೈರುದ್ದೀನ್ 1890ರಲ್ಲಿ ಕೋಲ್ಕತ್ತಾಕ್ಕೆ ಬಂದು ನೆಲೆಸಿದರು. ಹೀಗಾಗಿ ಭಾರತ ಅಜಾದ್ ಅವರ ಕರ್ಮಭೂಮಿಯಾಯಿತು.

1888: ಸ್ವಾತಂತ್ರ್ಯ ಸೇನಾನಿ, ಮಾಜಿ ಸಂಸದ ಆಚಾರ್ಯ ಕೃಪಲಾನಿ ಜನನ.

1675: ಸಿಕ್ಖರ 9ನೇ ಗುರುಗಳಾದ ಗುರು ತೇಗ್ ಬಹದೂರ್ (1621-1675) ಅವರನ್ನು ಇಸ್ಲಾಮಿಗೆ ಮತಾಂತರಗೊಳ್ಳಲು ನಿರಾಕರಿಸಿದ್ದಕ್ಕಾಗಿ ದೆಹಲಿಯಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಮರಣದಂಡನೆಗೆ ಗುರಿಪಡಿಸಿದ. ಈ ಘಟನೆ ನಡೆದಾಗ ತೇಗ್ ಬಹದೂರ್ ಅವರ ಪುತ್ರ ಗೋಬಿಂದ್ ಸಿಂಗ್ ವಯಸ್ಸು ಕೇವಲ 9 ವರ್ಷ.

Advertisement