Showing posts with label AAP. Show all posts
Showing posts with label AAP. Show all posts

Thursday, December 24, 2020

ದೆಹಲಿ ಜಲ ಮಂಡಳಿ ಕಚೇರಿ ಮೇಲೆ ಬಿಜೆಪಿ ದಾಳಿ: ಕೇಜ್ರಿವಾಲ್ ಆರೋಪ

 ದೆಹಲಿ ಜಲ ಮಂಡಳಿ ಕಚೇರಿ ಮೇಲೆ ಬಿಜೆಪಿ ದಾಳಿ: ಕೇಜ್ರಿವಾಲ್ ಆರೋಪ

ನವದೆಹಲಿ: ಆಮ್ ಆದ್ಮಿ ಪಕ್ಷವು ರೈತರ ಪ್ರತಿಭಟನೆಯನ್ನು ಬೆಂಬಲಿಸಿದ್ದಕ್ಕಾಗಿ ದೆಹಲಿ ಜಲ ಮಂಡಳಿಯ ಕಚೇರಿಯನ್ನು ಬಿಜೆಪಿ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎಂದು ಎಎಪಿ ಮುಖಂಡ ರಾಘವ್ ಛಡ್ಡಾ ಮತ್ತು ಎಎಪಿ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ 2020 ಡಿಸೆಂಬರ್ 24ರ ಗುರುವಾರ ಆರೋಪಿಸಿದರು.

ದೆಹಲಿ ಜಲ ಮಂಡಳಿಯ ಉಪಾಧ್ಯಕ್ಷರೂ ಆಗಿರುವ ರಾಘವ್ ಛಡ್ಡಾ ಗುರುವಾರ ’ವಿಡಿಯೊ ಟ್ವೀಟ್’ ಮಾಡುವ ಮೂಲಕ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ದಾಳಿಯನ್ನು ನಾಚಿಕೆಗೇಡು ಎಂದು ಕರೆದರು. ಇಂತಹ ಹೇಡಿತನದ ದಾಳಿಗೆ ತಾನು ಮತ್ತು ಅವರ ಪಕ್ಷ ಹೆದರುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದರು.

“ಆಮ್ ಆದ್ಮಿ ಪಕ್ಷ ಮತ್ತು ನನ್ನ ಸರ್ಕಾರ ತಮ್ಮ ಕೊನೆಯ ಉಸಿರಾಟದವರೆಗೂ ರೈತರೊಂದಿಗೆ ಸಂಪೂರ್ಣವಾಗಿ ಇರುತ್ತವೆ ಎಂಬುದನ್ನು ಬಿಜೆಪಿ ಅರ್ಥಮಾಡಿಕೊಳ್ಳಬೇಕು. ಇಂತಹ ಹೇಡಿತನದ ದಾಳಿಗೆ ನಾವು ಹೆದರುವುದಿಲ್ಲ. ಬಿಜೆಪಿಯ ಇಂತಹ ದಾಳಿಯಿಂದ ಪ್ರಚೋದನೆಗೆ ಒಳಗಾಗಬಾರದು ಎಂದು ನಾನು ಎಲ್ಲ ಕಾರ್‍ಯಕರ್ತರಿಗೆ  ಮನವಿ ಮಾಡುತ್ತೇನೆ ಮತ್ತು ರೈತರಿಗೆ ಬೆಂಬಲವನ್ನು ವ್ಯಕ್ತಪಡಿಸುತ್ತೇನೆ’ ಎಂದು ಎಎಪಿ ಮುಖ್ಯಸ್ಥ ಹಿಂದಿಯಲ್ಲಿ ಟ್ವೀಟ್ ಮಾಡಿದರು.

’ಬಿಜೆಪಿ ಗೂಂಡಾಗಳು ದೆಹಲಿ ಜಲಮಂಡಳಿಯ ಪ್ರಧಾನ ಕಚೇರಿಯ ಮೇಲೆ ದಾಳಿ ಮಾಡಿದ್ದಾರೆ. ಕಚೇರಿಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದ್ದಾರೆ. ಕಚೇರಿ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ’ ಎಂದು ಛಡ್ಡಾ ಹೇಳಿದರು.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ’ಬಿಜೆಪಿಯ ಗೂಂಡಾಗಳು ದೆಹಲಿ ಜಲ ಮಂಡಳಿ ಕಚೇರಿಗೆ ಪ್ರವೇಶಿಸಿ ಅದನ್ನು ಧ್ವಂಸ ಮಾಡಿದರು.

ರೈತರಿಗೆ ಬೆಂಬಲ ನೀಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಎಎಪಿ ನಾಯಕರು ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಬೆದರಿಕೆ ಹಾಕಿದರು. ಇದೆಲ್ಲವೂ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ದೆಹಲಿ ಪೊಲೀಸರ ಸಹಾಯದಿಂದಲೇ ಈ ಘಟನೆ ನಡೆದಿರುವುದು ಸ್ಪಷ್ಟವಾಗಿದೆ’ ಎಂದು ಅವರು ಹೇಳಿದರು.

ಇದಕ್ಕೆ ಮುನ್ನ ನವದೆಹಲಿಯ ಖಂಡೇವಾಲನ್‌ನಲ್ಲಿರುವ ಡಿಜೆಬಿಯ ಪ್ರಧಾನ ಕಚೇರಿಯಲ್ಲಿ ನೆಲದ ಮೇಲೆ ಮುರಿದ ಬಾಗಿಲುಗಳು, ಗಾಜು, ಮಡಿಕೆಗಳು, ಪೀಠೋಪಕರಣಗಳು ಮತ್ತು ರಕ್ತದ ಕಲೆಗಳನ್ನು ತೋರಿಸುವ ವೀಡಿಯೊ ಕ್ಲಿಪ್ ಅನ್ನು ಚಾಧಾ ಟ್ವೀಟ್ ಮಾಡಿದ್ದರು.

ಕೇಂದ್ರ ಸರ್ಕಾರದ ಕೃಷಿ ಸುಧಾರಣೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸದಂತೆ ದಾಳಿಕೋರರು ಎಎಪಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಆರೋಪಿಸಿದ ಘಟನೆಯ ನಂತರ ಡಿಜೆಬಿ ಉಪಾಧ್ಯಕ್ಷರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮೂರು ಕೃಷಿ ಕಾಯ್ದೆ ರದ್ದಿಗಾಗಿ ಪಕ್ಷದ ಬೆಂಬಲ ಮುಂದುವರಿಯುತ್ತದೆ ಎಂದು ಛಡಾ ಪುನರುಚ್ಚರಿಸಿದರು.

ಮತ್ತೊಂದೆಡೆ, ಬಿಜೆಪಿ ವಕ್ತಾರ ವೀರೇಂದ್ರ ಬಾಬರ್ ಅವರು ಆರೋಪಗಳನ್ನು ನಿರಾಕರಿಸಿದರು. ಕೇಜ್ರಿವಾಲ್ ಅವರ ಪಕ್ಷವು ಸ್ವತಃ ದಾಳಿಯನ್ನು ಯೋಜಿಸಿದೆ ಮತ್ತು ಈಗ ಬಿಜೆಪಿಯನ್ನು ದೂಷಿಸುತ್ತಿದೆ. "ದೆಹಲಿ ಪೊಲೀಸರು ಪಕ್ಷದ ಘಟಕದ ಮುಖ್ಯಸ್ಥ ಆದೇಶ್ ಗುಪ್ತಾ ಮತ್ತು ಅನೇಕ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ, ಆದರೆ ಈ ತಂತ್ರಗಳಿಗೆ ನಾವು ಹೆದರುವುದಿಲ್ಲ" ಎಂದು ಬಾಬರ್ ಹೇಳಿದರು.

Monday, February 17, 2020

ದೆಹಲಿಯ ’ಹ್ಯಾಟ್ರಿಕ್’ ಮುಖ್ಯಮಂತ್ರಿ ಕೇಜ್ರಿವಾಲ್ ಪ್ರಮಾಣ

ದೆಹಲಿಯ  'ಹ್ಯಾಟ್ರಿಕ್’ ಮುಖ್ಯಮಂತ್ರಿ  ಕೇಜ್ರಿವಾಲ್  ಪ್ರಮಾಣ
ಕೇಂದ್ರದ ಜೊತೆಗೆ ಸಾಮರಸ್ಯ,  ಪ್ರಧಾನಿ ಆಶೀರ್ವಾದಕ್ಕೆ ಕೋರಿಕೆ
ನವದೆಹಲಿ: ದೆಹಲಿಯ ಮುಖ್ಯಮಂತ್ರಿಯಾಗಿ ಮೂರನೇ ಅವಧಿಗೆ  2020 ಫೆಬ್ರುವರಿ 16ರ ಭಾನುವಾರ ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಆಮ್ ಆದ್ಮಿ ಪಕ್ಷದ (ಎಎಪಿ-ಆಪ್) ನಾಯಕ ಅರವಿಂದ ಕೇಜ್ರಿವಾಲ್ ಅವರು ’ಕೇಂದ್ರದ ಜೊತೆಗೆ ಸೌಹಾರ್ದಯುತವಾಗಿ ಕೆಲಸ ಮಾಡಲು ಬಯಸುವುದಾಗಿ’ ಘೋಷಿಸಿದರು.

ಪ್ರಮಾಣ ವಚನ ಸ್ವೀಕಾರದ ಬಳಿಕ ಮಾತನಾಡಿದ ಕೇಜ್ರಿವಾಲ್ ರಾಜಧಾನಿಯಲ್ಲಿ ಸುಗಮ ಆಡಳಿತ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದ ಕೋರುವುದಾಗಿ ಹೇಳಿದರು.

‘ನಾನು ಪ್ರಧಾನಿ ನರೇಂದ್ರ ಮೋದಿ ಜಿ ಅವರಿಗೆ ಈ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ಕಳುಹಿಸಿದ್ದೆ. ಅವರಿಗೆ ಬರಲು ಆಗಿಲ್ಲ. ಅವರು ಬೇರೆ ಏನಾದರೂ ಕಾರ್ಯಕ್ರಮದಲ್ಲಿ ಮಗ್ನರಾಗಿರಬಹುದು. ಈ ವೇದಿಕೆಯ ಮೂಲಕ ನಾನು ದೆಹಲಿ ಅಭಿವೃದ್ಧಿ ಮತ್ತು ಸುಲಲಿತ ಆಡಳಿತಕ್ಕಾಗಿ ಪ್ರಧಾನಿ ಮತ್ತು ಕೇಂದ್ರ ಸರ್ಕಾರದ ಆಶೀರ್ವಾದಗಳನ್ನು ಕೋರುತ್ತಿದ್ದೇನೆ’  ಎಂದು ಹಿಂದಿನ ಅವಧಿಯಲ್ಲಿ ಕೇಂದ್ರದ ಜೊತೆಗೆ ಹಲವಾರು ವಿಷಯಗಳಲ್ಲಿ ಘರ್ಷಿಸಿದ್ದ ಕೇಜ್ರಿವಾಲ್ ನುಡಿದರು.

‘ಚುನಾವಣಾ ಪ್ರಚಾರದ ವೇಳೆಯಲ್ಲಿ ಮಾಡಿದ ಎಲ್ಲ ಟೀಕೆಗಳಿಗಾಗಿ ನನ್ನ ವಿರೋಧಿಗಳನ್ನು ನಾನು ಕ್ಷಮಿಸಿದ್ದೇನೆ’ ಎಂದು ಹೇಳಿದ ಕೇಜ್ರಿವಾಲ್, ತಮ್ಮನ್ನು ’ದೆಹಲಿಯ ಪುತ್ರ’ ಎಂಬುದಾಗಿ ಉಲ್ಲೇಖಿಸಿದರು. ’ಈ ವಿಜಯ ನನ್ನ ವಿಜಯವಲ್ಲ, ಪ್ರತಿಯೊಬ್ಬ ದೆಹಲಿ ನಿವಾಸಿಯ ವಿಜಯ’ ಎಂದು ಅವರು ಹೇಳಿದರು.

‘ಇದು ನನ್ನ ವಿಜಯವಲ್ಲ. ಇದು ದೆಹಲಿಯ ಪ್ರತಿಯೊಬ್ಬ ನಿವಾಸಿ, ಪ್ರತಿ ಕುಟುಂಬದ ವಿಜಯ. ಕಳೆದ ಐದು ವರ್ಷಗಳಲ್ಲಿ  ಪ್ರತಿಯೊಬ್ಬ ದೆಹಲಿ ನಿವಾಸಿಗೂ ಸಂತಸ ಮತ್ತು ಪರಿಹಾರವನ್ನು ತರುವುದು ನಮ್ಮ ಏಕೈಕ ಪ್ರಯತ್ನವಾಗಿತ್ತು. ನಾನು ಯಾರ ಬಗೆಗೂ ಮಲತಾಯಿ ಧೋರಣೆ ತಾಳಲಿಲ್ಲ. ಕಳೆದ ಐದು ವರ್ಷಗಳಲ್ಲಿ ಎಲ್ಲರಿಗಾಗಿ ಶ್ರಮಿಸಿದ್ದೇನೆ’ ಎಂದು ಆಪ್ ನಾಯಕ ನುಡಿದರು.

‘ಈಗ ಚುನಾವಣೆಗಳು ಮುಗಿದಿವೆ. ನೀವು ಯಾರಿಗೆ ಮತ ಕೊಟ್ಟಿದ್ದೀರಿ ಎಂಬುದು ಈಗ ಪ್ರಸ್ತುತವಲ್ಲ. ಎಲ್ಲ ದೆಹಲಿಗರೂ ನನ್ನ ಕುಟುಂಬ ಸದಸ್ಯರು. ಯಾವುದೇ ಪಕ್ಷವಿರಲಿ, ಜಾತಿ ಇರಲಿ, ಮತ ಇರಲಿ ಅಥವಾ ಸಮಾಜದ ಸ್ತರ ಇರಲಿ, ನಾನು ಪ್ರತಿಯೊಬ್ಬನಿಗಾಗಿ ಶ್ರಮಿಸುತ್ತೇನೆ., ನಾನು ಕೇವಲ ಆಪ್ ಮುಖ್ಯಮಂತ್ರಿಯಲ್ಲ. ನಾನು ಬಿಜೆಪಿಯ ಮುಖ್ಯಮಂತ್ರಿ, ನಾನು ಕಾಂಗ್ರೆಸ್ಸಿನ ಮುಖ್ಯಮಂತ್ರಿ, ನಾನು ಪ್ರತಿಯೊಬ್ಬನ ಮುಖ್ಯಮಂತ್ರಿ’ ಎಂದು ಕೇಜ್ರಿವಾಲ್ ನುಡಿದರು.

‘ಉಚಿತ’ಗಳನ್ನು ಘೋಷಿಸುವ ಮೂಲಕ ಆಪ್ ಗೆದ್ದಿದೆ ಎಂಬುದಾಗಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಮಾಡಿದ ಟೀಕೆಯನ್ನೂ ಮುಖ್ಯಮಂತ್ರಿ ಪ್ರಸ್ತಾಪಿಸಿದರು.

‘ಕೆಲವು ವ್ಯಕ್ತಿಗಳು ಕೇಜ್ರಿವಾಲ್ ಎಲ್ಲವನ್ನೂ ಉಚಿತವಾಗಿ ನೀಡುತ್ತಾರೆ ಎಂದು ಹೇಳುತ್ತಾರೆ. ಪ್ರಕೃತಿಯು ಪ್ರತಿಯೊಂದು ಮೌಲ್ಯಯುತವಾದುದನ್ನು ಈ ಜಗತ್ತಿನಲ್ಲಿ ಉಚಿತವಾಗಿ ನೀಡಿದೆ. ಅದು ಮಾತೆಯ ಪ್ರೀತಿ ಇರಲಿ, ತಂದೆಯ ಆಶೀರ್ವಾದ ಇರಲಿ, ಶ್ರವಣ ಕುಮಾರನ ಸಮರ್ಪಣೆ ಇರಲಿ ಎಲ್ಲವೂ ಉಚಿತವೇ. ಹಾಗೆಯೇ ಕೇಜ್ರಿವಾಲ್ ತನ್ನ ಜನರನ್ನು ಪ್ರೀತಿಸುತ್ತಾನೆ ಆದ್ದರಿಂದ ಈ ಪ್ರೀತಿ ಕೂಡಾ ಉಚಿತವೇ’ ಎಂದು ಅವರು ಹೇಳಿದರು.

ಕಳೆದ ಮಂಗಳವಾರ ಆಪ್ ವಿಜಯ ಖಚಿತವಾಗುತ್ತಿದ್ದಂತೆಯೇ ಹಲವಾರು ಬಿಜೆಪಿ ನಾಯಕರು ’ಉಚಿತ ಭರವಸೆಗಳ ಕಾರಣ ಆಪ್ ಗೆದ್ದಿದೆ ಹೊರತು ಆಡಳಿತ ನೀತಿಗಳಿಂದಾಗಿ ಅಲ್ಲ’ ಎಂದು ಟೀಕಿಸಿದ್ದರು.

ರಾಮಲೀಲಾ ಮೈದಾನದಲ್ಲಿ ಪ್ರಮಾಣವಚನ ಸ್ವೀಕರಿಸಿದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಅರವಿಂದ ಕೇಜ್ರಿವಾಲ್ ಪಾತ್ರರಾಗಿದ್ದಾರೆ. ಅವರ ಪೂರ್ವಾಧಿಕಾರಿಗಳೆಲ್ಲರೂ ರಾಜ್ ನಿವಾಸದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು.

ಆಮ್ ಆದ್ಮಿ ಪಕ್ಷವು ೭೦ ಸದಸ್ಯ ಬಲದ ದೆಹಲಿ ವಿಧಾನಸಭೆಯ ಚುನಾವಣೆಯಲ್ಲಿ ೬೨ ಸ್ಥಾನ ಗೆದ್ದು ಪ್ರಚಂಡ ಜಯ ದಾಖಲಿಸಿದ್ದನ್ನು ಅನುಸರಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶುಕ್ರವಾರ ಕೇಜ್ರಿವಾಲ್ ಅವರನ್ನು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ನೇಮಕ ಮಾಡಿದ್ದರು.

ಕೇಜ್ರಿವಾಲ್ ಅವರ ಸಂಪುಟದ ಹಿಂದಿನ ಸಚಿವರೆಲ್ಲರೂ ಮುಂದುವರೆಯುತ್ತಾರೆ ಎಂಬುದಾಗಿ ಮೊದಲೇ ಘೋಷಿಸಿದ್ದ ಪ್ರಕಾರ, ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ, ಸತ್ಯೇಂದರ್ ಜೈನ್, ಗೋಪಾಲ್ ರೈ, ಕಾಳಿದಾಸ ಗೆಹ್ಲೋಟ್, ರಾಜೇಂದ್ರ ಪಾಲ್ ಗೌತಮ್ ಮತ್ತು ಇಮ್ರಾನ್ ಹುಸೈನ್ ಅವರೂ 2020 ಫೆಬ್ರುವರಿ 16ರ ಭಾನುವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

Wednesday, February 12, 2020

ಆಪ್ ಗೆಲುವಿನ ರೂವಾರಿ ಪ್ರಶಾಂತ ಕಿಶೋರ್ ಟ್ವೀಟ್

 ಆಪ್ ಗೆಲುವಿನ ರೂವಾರಿ ಪ್ರಶಾಂತ ಕಿಶೋರ್ ಟ್ವೀಟ್
ನವದೆಹಲಿ: ಸಂಯುಕ್ತ ಜನತಾದಳದಿಂದ ನಿತೀಶ್ ಕುಮಾರ್ ಅವರು ಕಿತ್ತೆಸೆದಿದ್ದ ರಾಜಕೀಯ ವ್ಯೂಹ ಚತುರ ಪ್ರಶಾಂತ ಕಿಶೋರ್ ಅವರು ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸಾಧನೆಯ ರೂವಾರಿಯಾಗಿದ್ದು ಪಕ್ಷದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳು ಕಾರಣ ಎಂಬ  ಸುಳಿವನ್ನು  2020 ಫೆಬ್ರುವರಿ 11ರ ಮಂಗಳವಾರ ನೀಡಿದರು.

೭೦ ವಿಧಾನಸಭಾ ಕ್ಷೇತ್ರಗಳ ಪೈಕಿ ೫೭ ಸ್ಥಾನಗಳಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ ಸ್ಪಷ್ಟ ಮುನ್ನಡೆ ಸಾಧಿಸುತ್ತಿದ್ದಂತೆಯೇ ಪ್ರಶಾಂತ ಕಿಶೋರ್ ಅವರು ದೆಹಲಿ ಮತದಾರರಿಗೆ ಧನ್ಯವಾದಗಳನ್ನು ಹೇಳಿ ಟ್ವೀಟ್ ಮಾಡಿದರು.

‘ಭಾರತದ ಆತ್ಮ ರಕ್ಷಣೆಗಾಗಿ ಎದ್ದು ನಿಂತದ್ದಕ್ಕಾಗಿ ಧನ್ಯವಾದಗಳು ದೆಹಲಿ’ ಎಂದು ಪ್ರಶಾಂತ ಕಿಶೋರ್ ಟ್ವೀಟ್ ಮಾಡಿದರು.

ಅರವಿಂದ ಕೇಜ್ರಿವಾಲ್ ಅವರು ವಿದಾನಸಭಾ ಚುನಾವಣೆಗೆ ಮುನ್ನ ಪ್ರಶಾಂತ ಕಿಶೋರ್ ನೇತೃತ್ವದ ಚುನಾವಣಾ ವ್ಯೂಹಗಾರಿಕಾ ಸಂಸ್ಥೆ ’ಇಂಡಿಯನ್  ಪೊಲಿಟಿಕಲ್ ಆಕ್ಷನ್ ಕಮಿಟಿ’ಯನ್ನು ತಮ್ಮ ಕಡೆಗೆ ಸೆಳೆದುಕೊಂಡಿದ್ದರು.

ಪ್ರಶಾಂತ ಕಿಶೋರ್ ಅವರು ಪೌರತ್ವ ಕಾಯ್ದೆಯ ತೀಕ್ಷ್ಣ ಟೀಕಾಕಾರರಲ್ಲಿ ಒಬ್ಬರಾಗಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆಯು ನೆರೆಯ ಮುಸ್ಲಿಮ್ ಬಾಹುಳ್ಯದ ದೇಶಗಳಾದ ಪಾಕಿಸ್ತಾನ, ಆಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶದ ಮುಸ್ಲಿಮೇತರರಿಗೆ ತ್ವರಿತವಾಗಿ ಭಾರತದ ಪೌರತ್ವ ಒದಗಿಸುವ ಕಾನೂನು ಆಗಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಇತ್ತೀಚೆಗೆ ಇದನ್ನು ಜಾರಿಗೆ ತಂದಿದೆ.

ಪೌರತ್ವ ಕಾಯ್ದೆಯನ್ನು ಟೀಕಿಸಿದ ಮೊತ್ತ ಮೊದಲ ರಾಜಕಾರಣಿಗಳಲ್ಲಿಯೂ ಕಿಶೋರ್ ಒಬ್ಬರಾಗಿದ್ದರು. ಉದ್ದೇಶಿತ ರಾಷ್ಟ್ರೀಯ ನಾಗರಿಕರ ನೋಂದಣಿಯ ಜೊತೆಗೆ ಪೌರತ್ವ ಕಾಯ್ದೆಯನ್ನು ಜೋಡಿಸಿದರೆ ಅದು ಮುಸ್ಲಿಮ್ ಸಮುದಾಯದ ಜನರಿಗೆ ಕಿರುಕುಳ ನೀಡುವ ಸಾಧ್ಯತೆ ಇದೆ ಎಂದು ಅವರು ಪ್ರತಿಪಾದಿಸಿದ್ದರು.

ಭಾರತೀಯ ಜನತಾ ಪಕ್ಷದ ವಿರುದ್ಧದ ತಮ್ಮ ಈ ನಿಲುವಿನ ಕಾರಣದಿಂದಾಗಿಯೇ ಪ್ರಶಾಂತ ಕಿಶೋರ್ ಮತ್ತು ನಿತೀಶ್ ಕುಮಾರ್ ಮಧ್ಯೆ ಘರ್ಷಣೆ ಶುರವಾಗಿತ್ತು. ನಿರ್ದಿಷ್ಟವಾಗಿ ದೆಹಲಿಯಲ್ಲಿನ ಬಿಹಾರದ ಮತದಾರರನ್ನು ಸೆಳೆಯುವ ಸಲುವಾಗಿ  ಸಂಯುಕ್ತ  ಜನತಾದಳವು ಬಿಜೆಪಿ ನೇತೃತ್ವದ ಮೈತ್ರಿಕೂಟದ ಜೊತೆಗೆ ಸೇರ್ಪಡೆಯಾದ ಬಳಿಕ ನಿತೀಶ್ ಮತ್ತು ಪ್ರಶಾಂತ ಕಿಶೋರ್ ಬಾಂಧವ್ಯ ಹದಗೆಟ್ಟಿತ್ತು. ದೆಹಲಿಯಲ್ಲಿ ಸಂಯುಕ್ತ ಜನತಾದಳವು ಬುರಾರಿ ಮತ್ತು ಸಂಗಮ್ ಈ ಎರಡು ಸ್ಥಾನಗಳಿಗೆ ಸ್ಪರ್ಧಿಸಿತ್ತು.  ಆದರೆ ಈ ಯೋಜನೆ ಫಲಪ್ರದವಾಗಲಿಲ್ಲ.

೬ನೇ ಸುತ್ತಿನ ಮತಗಳ ಎಣಿಕೆ ಮುಕ್ತಾಯದ ವೇಳೆಗೆ ಬುರಾರಿಯಲ್ಲಿ ಆಪ್ ಅಭ್ಯರ್ಥಿ ಸಂಜೀವ್ ಝಾ ಅವರು ಶೇಕಡಾ ೬೨ರಷ್ಟು ಮತಗಳನ್ನು ಪಡೆಯಲು ಸಮರ್ಥರಾದರೆ, ಸಂಯುಕ್ತ ಜನತಾದಳ ಅಭ್ಯರ್ಥಿ ಶೇಕಡಾ ೨೨ರಷ್ಟು ಮತಗಳನ್ನು ಮಾತ್ರ ಗಳಿಸಿದರು. ಸಂಗಮ್ ವಿಹಾರದಲ್ಲಿ ಆಪ್ ಅಭ್ಯರ್ಥಿ ದಿನೇಶ್ ಮೋಹನಿಯಾ ಅವರು ಜೆಡಿಯು ಅಭ್ಯಥಿ ಗಳಿಸಿದ ಮತಗಳ ದುಪ್ಪಟ್ಟು ಮತ ಪಡೆದಿದ್ದರು.

ನಿರೀಕ್ಷೆಯಂತೆ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಗೆಲುವಿನತ್ತ ಒಯ್ಯಲು  ಪ್ರಚಾರ ತಂತ್ರಗಳನ್ನು ಹೆಣೆದವರು ಚುನಾವಣಾ ಚಾಣಕ್ಯ ಎಂದೇ ಹೆಸರು ಪಡೆದಿರುವ ಪ್ರಶಾಂತ್ ಕಿಶೋರ್. ದೆಹಲಿಯಲಿ ಆಪ್ ಗೆಲುವಿನ ಮೂಲಕ ಅವರು ಮತ್ತೊಮ್ಮೆ ಗೆಲುವಿನ ಸೂತ್ರದಾರನಾಗಿ ಮೂಡಿ ಬಂದಿದ್ದಾರೆ.

ಪಕ್ಷದ ಗೆಲುವಿನ ಬೆನ್ನಲ್ಲೇ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಮಾಡಿ ಫೋಟೋ ತೆಗೆಸಿಕೊಂಡ ಪ್ರಶಾಂತ ಕಿಶೋರ್ ದೆಹಲಿ ಜನತೆಗೆ ಅಭಿನಂದನೆ ಮಾಡಿದ ಟ್ವೀಟಿನಲ್ಲಿ ಕೇಜ್ರಿವಾಲ್ ಜೊತೆಗಿನ ಫೋಟೋವನ್ನೂ ಹಂಚಿಕೊಂಡರು.

ಆಪ್ ಈ ಬಾರಿ  ಸಾಧಿಸಿರುವ ಗೆಲುವು  ಪ್ರಶಾಂತ್ ಕಿಶೋರ್ ಮತ್ತು ಅವರ ನೇತೃತ್ವದ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿಯ (ಐ-ಪ್ಯಾಕ್) ಪಾಲಿನ ಐದನೇ ಗೆಲುವಾಗಿದೆ.

೨೦೧೪ರ ಲೋಕಸಭೆ ಚುನಾವಣೆ ವೇಳೆ ನರೇಂದ್ರ ಮೋದಿ ಪರ ಪ್ರಚಾರಕ್ಕೆ ಪ್ರಶಾಂತ್ ಕಿಶೋರ್ ಧುಮುಕಿದ್ದರು. ಈ ಮೂಲಕ ಮೊದಲ ಬಾರಿಗೆ ಅವರ ಹೆಸರು ಭಾರತದ ರಾಜಕಾರಣದಲ್ಲಿ ಕೇಳಿ ಬಂದಿತ್ತು. ’ಚಾಯ್ ಪೇ ಚರ್ಚಾ’ದಂತಹ ಯಶಸ್ವೀ ಕಾರ್ಯಕ್ರಮಗಳನ್ನು ಸಂಘಟಿಸಿ ಪ್ರಶಾಂತ್ ಕಿಶೋರ್ ಬಿಜೆಪಿಗೆ ಭರ್ಜರಿ ಗೆಲುವನ್ನು ತಂದು ಕೊಟ್ಟಿದ್ದರು.

ಆದರೆ ಆ ಬಳಿಕ ಅಮಿತ್ ಶಾ ಜೊತೆ ಮುನಿಸಿಕೊಂಡ ಪ್ರಶಾಂತ ಕಿಶೋರ್ ಬಿಜೆಪಿ ವಿರುದ್ಧವೇ ಅವರು ತೊಡೆ ತಟ್ಟಿದ್ದರು.

೨೦೧೫ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಬೇಕು ಎಂದು ಪಣತೊಟ್ಟ ಪ್ರಶಾಂತ್ ಕಿಶೋರ್ ಪರಸ್ಪರ ವಿರುದ್ಧ ದಿಕ್ಕಿನ ರಾಜಕಾರಣಿಗಳಾದ ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಯಾದವ್ ಅವರನ್ನು ಜೊತೆಗೂಡಿಸಿದ್ದರು. ಇವರ ಜೊತೆಗೆ ಕಾಂಗ್ರೆಸ್ ಪಕ್ಷವೂ ಬರುವಂತೆ ಮಾಡಿ ಮಹಾಘಟಬಂಧನ್ ಕಟ್ಟಿ ಬಿಜೆಪಿಗೆ ಅಧಿಕಾರ ಸಿಗದಂತೆ ಮಾಡಿದ್ದರು. ಈ ಚುನಾವಣೆಯ ಭರ್ಜರಿ ಗೆಲುವಿನೊಂದಿಗೆ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿದ್ದರು. ಬಳಿಕ ಬೇರೆ ಬೇರೆ ಕಾರಣಗಳಿಗಾಗಿ ಆರ್‌ಜೆಡಿ ಮತ್ತು ಕಾಂಗ್ರೆಸ್ ಮೈತ್ರಿ ಕೂಟವನ್ನು  ತೊರೆದವು. ಜೆಡಿಯು ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಎ ತೆಕ್ಕೆಗೆ ಸರಿಯಿತು.

೨೦೧೭ರಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪರವಾಗಿ ಕೆಲಸ ಮಾಡಿ ಕೈ ಪಕ್ಷಕ್ಕೆ ಭಾರೀ ಗೆಲುವನ್ನು ಪ್ರಶಾಂತ ಕಿಶೋರ್ ತಂದು ಕೊಟ್ಟಿದ್ದರು.
‘ಕಾಫಿ ವಿತ್ ಕ್ಯಾಪ್ಟನ್’ನಂತಹ ಕಾರ್ಯಕ್ರಮಗಳನ್ನು ರೂಪಿಸಿ ಆಮ್ ಆದ್ಮಿ ಪಕ್ಷದ ಭಾರಿ ಪೈಪೋಟಿಯ ನಡುವೆಯೂ ಕಾಂಗ್ರೆಸ್ ಪಕ್ಷಕ್ಕೆ  ವಿಜಯಮಾಲೆ ತೊಡಿಸಿದ್ದರು. ಪಂಜಾಬ್ ಚುನಾವಣೆಯ ಬಳಿಕ ಪ್ರಶಾಂತ್ ಕಿಶೋರ್ ಜನಪ್ರಿಯತೆ ಮತ್ತಷ್ಟು ಜಾಸ್ತಿಯಾಯಿತು.

೨೦೧೯ರ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಪ್ರಚಾರದ ನೇತೃತ್ವವನ್ನೂ ಇದೇ ಪ್ರಶಾಂತ್ ಕಿಶೋರ್ ವಹಿಸಿಕೊಂಡಿದ್ದರು. ಈ ಚುನಾವಣೆಯಲ್ಲಿ ಜಗನ್ ಮೋಹನ್ ರೆಡ್ಡಿ ಪಕ್ಷ ಅಕ್ಷರಶಃ ತೆಲುಗುದೇಶಂ ಪಕ್ಷವನ್ನು (ಟಿಡಿಪಿ) ದೂಳೀಪಟ ಮಾಡಿತ್ತು. ಈ ಮೂಲಕ ತಾವೊಬ್ಬ ಅಪ್ಪಟ ಚುನಾವಣಾ ತಂತ್ರಗಾರ ಎಂಬುದನ್ನು ಪ್ರಶಾಂತ್ ಕಿಶೋರ್ ಮತ್ತೆ ಸಾಬೀತು ಪಡಿಸಿದ್ದರು.

ತೆರೆಯ ಹಿಂದೆ ಇರುತ್ತಿದ್ದ ಪ್ರಶಾಂತ್ ಕಿಶೋರ್ ೨೦೧೮ರ ಸೆಪ್ಟೆಂಬರಿನಲ್ಲಿ ಜೆಡಿಯು ಸೇರುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಧುಮುಕಿದರು. ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ಏರಿದ್ದ ಅವರು ಇತ್ತೀಚಿನವರೆಗೂ ಅವರು ಪಕ್ಷದಲ್ಲಿ ನಿತೀಶ್ ಕುಮಾರ್ ನಂತರದ ಉನ್ನತ ನಾಯರಾಗಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯಿದೆ ವಿಚಾರದಲ್ಲಿ ಇಬ್ಬರೂ ನಾಯಕರ ನಡುವೆ ಭಿನ್ನಾಭಿಪ್ರಾಯ ಹುಟ್ಟಿಕೊಂಡು ಜನವರಿ ೨೯ರಂದು ಅವರನ್ನು ನಿತೀಶ್ ಕುಮಾರ್ ಪಕ್ಷದಿಂದ ಹೊರ ಹಾಕಿದ್ದರು.

ಜೆಡಿಯು ಪಕ್ಷದಿಂದ ಹೊರ ಬಿದ್ದರೂ, ಚುನಾವಣಾ ರಾಜಕಾರಣದಲ್ಲಿ ಮಾತ್ರ ಪ್ರಶಾಂತ್ ಕಿಶೋರ್ ಬೇಡಿಕೆ ಕುಗ್ಗಲಿಲ್ಲ. ೨೦೨೧ ರಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪರವಾಗಿ ಪ್ರಶಾಂತ್ ಕಿಶೋರ್ ನೇತೃತ್ವದ ಐ-ಪ್ಯಾಕ್ ಕೆಲಸ ಮಾಡಲಿದೆ. ಈ ಮೂಲಕ ಮಮತಾ ಬ್ಯಾನರ್ಜಿ ಪರವಾಗಿ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಇದರ ಜೊತೆಗೆ ಇತ್ತೀಚೆಗೆ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷದ ಜೊತೆಗೂ ಐ-ಪ್ಯಾಕ್ ಒಪ್ಪಂದ ಮಾಡಿಕೊಂಡಿದೆ. ಕರುಣಾನಿಧಿ ಸಾವಿನ ಬಳಿಕ ಹೇಗಾದರೂ ಮಾಡಿ ತಮಿಳುನಾಡಿನಲ್ಲಿ ಅಧಿಕಾರ ಹಿಡಿಯಬೇಕು ಎಂದು ಹಠತೊಟ್ಟಿರುವ ಡಿಎಂಕೆ ವರಿಷ್ಠ ಎಂಕೆ ಸ್ಟಾಲಿನ್ ಪ್ರಶಾಂತ್ ಕಿಶೋರ್ ಹೆಗಲಿಗೆ ಕೈ ಹಾಕಿದ್ದಾರೆ.

Advertisement