Showing posts with label ನೀರು. Show all posts
Showing posts with label ನೀರು. Show all posts

Friday, May 22, 2026

ಬಸ್ಸನ್ನು ತಡೆದ ಮಂಗ ಕೇಳಿದ್ದು ಏನನ್ನು?

 ಬಸ್ಸನ್ನು ತಡೆದ ಮಂಗ ಕೇಳಿದ್ದು ಏನನ್ನು?

ಇದೊಂದು ಮನ ಕಲಕುವ ಸನ್ನಿವೇಶ

ಹಾರಾಷ್ಟ್ರದ ವಿದರ್ಭದಲ್ಲಿ ಅದೊಂದು ಮನ ಕಲಕುವ ಸನ್ನಿವೇಶ. ಬಸ್ಸೊಂದು ರಸ್ತೆಯಲ್ಲಿ ಮುಂದಕ್ಕೆ ಸಾಗುತ್ತಿತ್ತು. ಹಠಾತ್ತನೆ ಕೋತಿಯೊಂದು ಬಂದು ಬಸ್ಸಿನ ಮುಂದೆ ನಿಂತುಕೊಂಡಿತು.

ಚಾಲಕನಿಗೆ ಮುಂದೆ ಸಾಗಲು ಸಾಧ್ಯವಾಗಲಿಲ್ಲ. ಬಸ್ಸನ್ನು ನಿಲ್ಲಿಸಿದ. ಶ್..‌ ಶ್‌.. ಎಂದು ಬಾಯಿಯಲ್ಲೇ ಸದ್ದು ಮಾಡಿದ.

ಮಂಗ ಕದಲಲಿಲ್ಲ. ನಿಂತಲ್ಲೇ ನಿಂತುಕೊಂಡಿತ್ತು. ಇದೇನೋ ವಿಲಕ್ಷಣ ಪರಿಸ್ಥಿತಿ ಎಂದು ಬಸ್ಸಿನಲ್ಲಿದ್ದ ಕೆಲವರು ಕೆಳಕ್ಕೆ ಇಳಿದರು. ಆದರೂ ಕೋತಿ ಅಲ್ಲೇ ನಿಂತಿತ್ತು. ತನ್ನದೇ ಮೂಕಭಾಷೆಯಲ್ಲಿ ಕೈ ಅಲ್ಲಾಡಿಸುತ್ತಿತ್ತು.

ಅದಕ್ಕೆ ಬಹುಶಃ ನೀರು ಬೇಕಾಗಿರಬಹುದು ಎಂದು ಪ್ರಯಾಣಿಕರಲ್ಲಿ ಒಬ್ಬರಿಗೆ ಅನ್ನಿಸಿತು. ಅವರು ತತ್‌ ಕ್ಷಣವೇ ತನ್ನ ಬ್ಯಾಗಿನಲ್ಲಿದ್ದ ಪ್ಲಾಸ್ಟಿಕ್‌ ಬಾಟಲಿಯ ಮುಚ್ಚಳ ತೆಗೆದು ಮಂಗನ ಮುಂದೆ ಹಿಡಿದರು. ಮಂಗ ಬಾಯಿ ತೆರೆದು ಗಟಗಟನೆ ನೀರು ಕುಡಿಯಿತು.

ಅಷ್ಟರಲ್ಲಿ ಇನ್ನಷ್ಟು ಮಂಗಗಳು ಆಸು ಪಾಸಿನಿಂದ ಓಡಿ ಬಂದು ಕೈ ಚಾಚ ತೊಡಗಿದವು. ಬಸ್ಸಿನಲ್ಲಿದ್ದವರು ತಮ್ಮ ಬ್ಯಾಗುಗಳಿಂದ ನೀರಿನ ಬಾಟಲಿಗಳನ್ನು ತೆಗೆದು ಕೆಳಗಿದ್ದವರ ಕೈಗಳಿಗೆ ಕೊಟ್ಟರು. ಮಹಿಳೆಯರೂ ಹಿಂದು ಮುಂದು ನೋಡದೆ ತಮ್ಮ ನೀರಿನ ಬಾಟಲಿಗಳನ್ನು ನೀಡಿದರು.

ಮಂಗಗಳ ಹಿಂಡೇ ಬಾಟಲಿಗಳಿಂದ ನೀರು ಕುಡಿದು ಖುಷಿ ಪಟ್ಟವು.

ನೀರು ಸಿಗದೆ ಅದೆಷ್ಟು ದಿನಗಳಿಂದ ಬಾಯಾರಿದ್ದವೋ ಏನೋ. ಮಂಗಗಳಿಗೆ ಅಮೃತ ಸಿಕ್ಕಂತಾಗಿತ್ತು.

ಈ ಮನ ಕಲಕುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮೇಲೆ ಕ್ಲಿಕ್‌ ಮಾಡಿ ವಿಡಿಯೋ ನೋಡಿ.

ಮರೆಯಬೇಡಿ. ನಿಮ್ಮ ಮನೆ, ಕಚೇರಿಯ ಆಸುಪಾಸಿನಲ್ಲೂ ಪಶು ಪಕ್ಷಿಗಳು ಈ ಬೇಸಗೆಯಲ್ಲಿ ನೀರು ಸಿಗದೆ ಕಂಗಾಲಾಗಿರಬಹುದು. ಅವುಗಳಿಗೆ ಸಿಗುವಂತೆ ನೀರು ಸಿಗುವ ವ್ಯವಸ್ಥೆ ಮಾಡಿ. ಮೂಕ ಪ್ರಾಣಿ, ಪಕ್ಷಿಗಳ ದಾಹ ತಣಿಸಿ.

Thursday, October 9, 2025

ನೀರು ಉಳಿಸುವ ಮಾಂತ್ರಿಕ!

 ನೀರು ಉಳಿಸುವ ಮಾಂತ್ರಿಕ!

ನಳ ಜಲನಿಯಂತ್ರಕ/ ಟ್ಯಾಪ್‌ ಏರಿಯೇಟರ್

ಬೆಂಗಳೂರು ನೀರಿನ ಉಳಿತಾಯದ ಹೋರಾಟದಲ್ಲಿ ಒಂದು ಸರಳ, ಕಡಿಮೆ-ವೆಚ್ಚದ ಸಾಧನವು ದೊಡ್ಡ ಪರಿಣಾಮ ಬೀರುತ್ತಿದೆ: ಅದೇ ನಳ ಜಲ ನಿಯಂತ್ರಕ ಅಥವಾ ಟ್ಯಾಪ್ ಏರಿಯೇಟರ್‌ಗಳು. ನಲ್ಲಿಗಳಿಗೆ ಅಳವಡಿಸುವ ಈ ಚಿಕ್ಕ ಉಪಕರಣಗಳು ಈಗ ಶಾಲೆಗಳು, ಅಪಾರ್ಟ್‌ಮೆಂಟ್‌ಗಳು, ಕಚೇರಿಗಳು ಮತ್ತು ಮಾಲ್‌ಗಳಲ್ಲಿ ಪ್ರತಿದಿನ ಸಾವಿರಾರು ಲೀಟರ್ ನೀರನ್ನು ಉಳಿಸಲು ಸಹಾಯ ಮಾಡುತ್ತಿವೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕಳೆದ ವರ್ಷ ಹೆಚ್ಚು ನೀರು ಬಳಸುವವರಿಗೆ ಏರಿಯೇಟರ್‌ಗಳನ್ನು ಕಡ್ಡಾಯಗೊಳಿಸಿದ ನಂತರ, ನಗರದಲ್ಲಿ ಅವುಗಳ ಅಳವಡಿಕೆ ತೀವ್ರವಾಗಿ ಹೆಚ್ಚಿದೆ ಎಂದು 'ದಿ ಟೈಮ್ಸ್ ಆಫ್ ಇಂಡಿಯಾ' ವರದಿ ಹೇಳಿದೆ. ಇಲ್ಲಿಯವರೆಗೆ ಬೆಂಗಳೂರಿನಾದ್ಯಂತ 15 ಲಕ್ಷಕ್ಕೂ ಹೆಚ್ಚು ಏರಿಯೇಟರ್‌ಗಳನ್ನು ಅಳವಡಿಸಲಾಗಿದೆ. ನಿಯಮ ಪಾಲಿಸದ ಅಪಾರ್ಟ್‌ಮೆಂಟ್ ಮತ್ತು ವಾಣಿಜ್ಯ ಕಟ್ಟಡಗಳಿಗೆ ₹5,000 ದಂಡ ಮತ್ತು ನೀರಿನ ಪೂರೈಕೆಯನ್ನು ಕಡಿತಗೊಳಿಸುವ ಎಚ್ಚರಿಕೆ ನೀಡಲಾಗಿದೆ.

ಈ ದೊಡ್ಡ ಪ್ರಮಾಣದ ಅಳವಡಿಕೆಯಿಂದ ಪ್ರತಿದಿನ ಸುಮಾರು 100 ದಶಲಕ್ಷ ಲೀಟರ್ (Million Litres) ನೀರನ್ನು ಉಳಿಸಲಾಗಿದೆ ಎಂದು BWSSB ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್ ಹೇಳಿದ್ದಾರೆ. ಕೇವಲ 2024-25ರ ಅವಧಿಯಲ್ಲಿ BWSSB 594 ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ, ದಂಡ ರೂಪದಲ್ಲಿ ಸುಮಾರು ₹30 ಲಕ್ಷ ಸಂಗ್ರಹಿಸಿದೆ ಎಂದು ವರದಿ ತಿಳಿಸಿದೆ.

ಏರಿಯೇಟರ್‌ಗಳನ್ನು ಮುಖ್ಯವಾಗಿ ಕೈ ತೊಳೆಯುವ ನಲ್ಲಿಗಳಿಗೆ ಅಳವಡಿಸಲಾಗುತ್ತದೆ, ಇದು ಮನೆಯ ನೀರಿನ ಬಳಕೆಯಲ್ಲಿ ಸುಮಾರು ಶೇ. 30ರಷ್ಟಿರುತ್ತದೆ. ಈ ಸಾಧನಗಳು ನೀರಿನ ಹರಿವನ್ನು ನಿಮಿಷಕ್ಕೆ 10 ರಿಂದ 15 ಲೀಟರ್‌ಗಳಿಂದ ಕೇವಲ 3 ರಿಂದ 4 ಲೀಟರ್‌ಗಳಿಗೆ ಇಳಿಸುತ್ತವೆ. ಇದರಿಂದ ಶೇ. 50 ರಿಂದ ಶೇ. 80ರಷ್ಟು ನೀರಿನ ವ್ಯರ್ಥವಾಗುವಿಕೆ ಕಡಿಮೆಯಾಗುತ್ತದೆ.

ಏರಿಯೇಟರ್‌ಗಳ ಆರಂಭಿಕ ಪ್ರವರ್ತಕರಲ್ಲಿ ಒಂದಾದ ಬೆಂಗಳೂರು ಅಪಾರ್ಟ್‌ಮೆಂಟ್‌ಗಳ ಒಕ್ಕೂಟ (BAF) ಈ ಪ್ರಯತ್ನದಲ್ಲಿ ಪ್ರಮುಖ ಪಾಲುದಾರ. ಒಕ್ಕೂಟವು 2017ರಲ್ಲಿ ನೇರ ಪ್ರದರ್ಶನಗಳ ಮೂಲಕ ಏರಿಯೇಟರ್‌ಗಳ ಬಗ್ಗೆ ಪ್ರಚಾರ ಮಾಡಲು ಪ್ರಾರಂಭಿಸಿತು. ಅದರ ಪ್ರಚಾರವೇ BWSSB ಗೆ ಇದನ್ನು ಕಡ್ಡಾಯಗೊಳಿಸುವಂತೆ ಮನವರಿಕೆ ಮಾಡಲು ಸಹಾಯ ಮಾಡಿತು ಎಂದು BAF ಪ್ರಧಾನ ಕಾರ್ಯದರ್ಶಿ ಕೆ. ಅರುಣ್ ಕುಮಾರ್ ಹೇಳಿದ್ದಾರೆ.

ಇದೇ ವೇಳೆಗೆ ಶಾಲಾ ವಿದ್ಯಾರ್ಥಿಗಳೂ ಈ ಅಭಿಯಾನಕ್ಕೆ ಕೈಜೋಡಿಸುತ್ತಿದ್ದಾರೆ. ಜಲ ಸಂರಕ್ಷಣಾವಾದಿ ಮಾಧವನ್ ರಾವ್ ಅವರ ಪ್ರಾತ್ಯಕ್ಷಿಕೆ ನಂತರ, ಎಂಇಎಸ್ ಕಿಶೋರ ಕೇಂದ್ರದ ಮಕ್ಕಳು ಏರಿಯೇಟರ್‌ಗಳನ್ನು ಅಳವಡಿಸಿ ಪ್ರತಿದಿನ 10,000 ಲೀಟರ್ ನೀರನ್ನು ಉಳಿಸಲು ಪ್ರಾರಂಭಿಸಿದರು. ಈಗ, ರಾವ್ ಅವರು ತಮ್ಮ #MissionSchools10MLD ಉಪಕ್ರಮದ ಮೂಲಕ ಈ ಮಾದರಿಯನ್ನು 1,000 ಶಾಲೆಗಳಿಗೆ ತಲುಪಿಸಲು ಯೋಜಿಸುತ್ತಿದ್ದಾರೆ, ಇದರ ಗುರಿ ಪ್ರತಿದಿನ 10 ದಶಲಕ್ಷ ಲೀಟರ್ ನೀರನ್ನು ಉಳಿಸುವುದಾಗಿದೆ.

ನೀರು ಉಳಿಸುವ ಮಾಂತ್ರಿಕ ಕುರಿತ ವಿಡಿಯೋ ನೋಡಲು ಕೆಳಗಿನ ಚಿತ್ರ ಅಥವಾ  ಯೂ ಟ್ಯೂಬ್‌ ಲಿಂಕ್‌ https://youtube.com/shorts/wDKq5tRHVOY   ಕ್ಲಿಕ್‌ ಮಾಡಿ.


Saturday, May 24, 2025

ಇನ್ನು ನೀರಿನ ಬೆಂಕಿಯಿಂದಲೇ ಅಡುಗೆ ಮಾಡಿ, ಎಲ್‌ಪಿಜಿಗೆ ವಿದಾಯ ಹೇಳಿ!

 ಇನ್ನು ನೀರಿನ ಬೆಂಕಿಯಿಂದಲೇ ಅಡುಗೆ ಮಾಡಿ, ಎಲ್‌ಪಿಜಿಗೆ ವಿದಾಯ ಹೇಳಿ!

ನಾಲ್ಕೈದು ದಿನಗಳ ಹಿಂದಿನ ಮಾತು. ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ಸಮಾವೇಶವೊಂದರಲ್ಲಿ ಮಹಾರಾಷ್ಟ್ರದ ಸಚಿವ, ಕೋರೆಗಾಂವ್‌ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕೃಷ್ಣ ಕಣಿವೆ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಮಹೇಶ ದಾದಾ ಶಿಂಧೆ ತಮ್ಮ ಒಂದು ಹೊಸ ಆವಿಷ್ಕಾರದ ಪ್ರಕಟಣೆಯನ್ನು ಮಾಡಿದರು.

ಈ ಆವಿಷ್ಕಾರ ಭಾರತದ ಆರ್ಥಿಕ ಸ್ಥಿತಿಯನ್ನು ಉತ್ತುಂಗಕ್ಕೆ ಒಯ್ಯುವುದರ ಜೊತೆಗೆ ಜನತೆ ವಿದ್ಯುತ್‌ ಅಥವಾ ಅಡುಗೆ ಅನಿಲ ಬಳಸದೆಯೇ ಶುದ್ಧ ಅಡುಗೆ ಮಾಡಲು ಸಾಧ್ಯವಾಗುವಂತೆ ಮಾಡಲಿದೆ ಎಂದು ಶಿಂಧೆ ಹೇಳಿದರು.

ಏನಿದು ಈ ಅವಿಷ್ಕಾರ?


ಇದೊಂದು ಸಣ್ಣ ಉಪಕರಣ. ಈ ಉಪಕರಣವನ್ನು ಸೌರವಿದ್ಯುತ್ತಿನಿಂದ ಚಲಾಯಿಸಬಹುದು. ಇದಕ್ಕೆ ಜೋಡಿಸಿದ ಒಂದು ಜಾಡಿಯಲ್ಲಿ ಸುಮಾರು ಅರ್ಧ ಲೀಟರಿನಷ್ಟು ನೀರು ತುಂಬಿ ಇಡಲಾಗಿದೆ. ಯಂತ್ರದ ಗುಂಡಿ ಅದುಮಿದರೆ ಈ ನೀರಿನಿಂದ ಪೈಪಿನ ಮೂಲಕ ನೈಸರ್ಗಿಕ ಅನಿಲವಾದ ಜಲಜನಕ ಬರುತ್ತದೆ. ಆ ಪೈಪನ್ನು ಒಂದು ಅಡುಗೆ ತಯಾರಿಸುವ ಗ್ಯಾಸ್‌ ಸ್ಟವ್‌ ಒಂದಕ್ಕೆ ಜೋಡಿಸಲಾಗಿದೆ.

ಈ ಸ್ವವ್‌ಗೆ ನೈಸರ್ಗಿಕ ಅನಿಲ ಬರುತ್ತಿದ್ದಂತೆ ನೀವು ಲೈಟರ್‌ ಮೂಲಕ ಸ್ವವ್‌ ಉರಿಸಬಹುದು. ಗ್ಯಾಸ್‌ ಸ್ಟವ್‌ನಲ್ಲಿ ಬರುವಂತಹ ಖಾರವಾದ ನೀಲ ಬೆಂಕಿ ಸ್ಟೌವಿನಲ್ಲಿ ಬರತೊಡಗುತ್ತದೆ. ಗ್ಯಾಸ್‌ ಸ್ಟವಿನಲ್ಲಿ ಹೇಗೆ ಅಡುಗೆ ಮಾಡುವಿರೋ ಅದೇ ರೀತಿ ನೀವು ಈ ಸ್ಟೌವಿನಲ್ಲೂ ಅಡಿಗೆ ಮಾಡಬಹುದು.

ಅಂದರೆ ಇನ್ನು ಮುಂದೆ ನಿಮ್ಮ ಅಡುಗೆ ಮನೆಯಲ್ಲಿ ಅಡುಗೆ ಮಾಡಲು ವಿದ್ಯುತ್‌ ಬೇಕಾಗಿಲ್ಲ, ಅಡುಗೆ ಅನಿಲದ ಸಿಲಿಂಡರೂ ಬೇಕಾಗಿಲ್ಲ. ಕೇವಲ ಒಂದರ್ಧ ಲೀಟರ್‌ ನೀರಿದ್ದರೆ ಸಾಕು ಸುಮಾರು ಆರು ತಿಂಗಳ ಕಾಲ ನೀವು ನಿರುಮ್ಮಳರಾಗಿ ಇರಬಹುದು.

ಇದನ್ನು ಬಳಸುವುದರಿಂದ ಇನ್ನೂ ಒಂದು ಪ್ರಯೋಜನವಿದೆ. ಈ ಯಂತ್ರವು ನೀರಿನಿಂದ ಜಲಜನಕವನ್ನು ಬಿಡುಗಡೆ ಮಾಡಿ ಸ್ಟವ್‌ಗೆ ಒದಗಿಸುವುದರ ಜೊತೆಗೇ ನೀರಿನಲ್ಲಿನ ಆಮ್ಮಜನಕವನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ.

ಎಲ್‌ ಪಿಜಿ ಅನಿಲ ಬಳಸುವುದರಿಂದ ಮಿಥೇನ್‌ ಉರಿದು ಅಂಗಾರಾಮ್ಲ ಅಂದರೆ ಇಂಗಾಲದ ಡೈ ಆಕ್ಸೈಡ್‌ ಬಿಡುಗಡೆಯಾಗುವುದರಿಂದ ವಾಯುಮಾಲಿನ್ಯ ಉಂಟಾಗುತ್ತದೆ. ಆದರೆ ಹೊಸ ಆವಿಷ್ಕಾರದಲ್ಲಿ ನೀರಿನಿಂದ ಬಿಡುಗಡೆಯಾಗುವ ಜಲಜನಕ ಸ್ಟೌವಿನಲ್ಲಿ ಉರಿಯುವುದರಿಂದ ವಾಯುಮಾಲಿನ್ಯ ಉಂಟಾಗುವುದಿಲ್ಲ. ಒಂದೇ ಪ್ರಕ್ರಿಯೆಯಲ್ಲಿ ಅಡುಗೆ ಇಂಧನ ವೆಚ್ಚ ಸಂಪೂರ್ಣ ಉಳಿತಾಯ ಮತ್ತು ಜೀವಿಗಳ ಉಸಿರಾಟಕ್ಕೆ ಅತ್ಯಗತ್ಯವಾದ ಆಮ್ಲಜನಕ ವಾತಾವರಣಕ್ಕೆ ಸೇರ್ಪಡೆ.

ತಮ್ಮ ಸಹಚರರಾದ ಆಟೋ ಕ್ಲೀನ್‌ ಸಂಸ್ಥೆಯ ವಿಶಾಲ್‌ ಮತ್ತು ಅವರ ತಂಡ ಮಾಡಿದ ಈ ಅವಿಷ್ಕಾರದ ಬಗ್ಗೆ ವಿವರಿಸಿದ ಮಹೇಶ ದಾದಾ ಶಿಂಧೆ ಅವರು ದಶಕಗಳ ಹಿಂದೆ ತಾವು ಇಥೆನಾಲ್‌ ಬಳಸಿ ವಾಹನಗಳನ್ನು ಓಡಿಸಬಹುದು ಎಂಬುದನ್ನು ಬೆಳಕಿಗೆ ತಂದಿದ್ದುದನ್ನು ನೆನಪಿಸಿದರು. ಈಗ ದೇಶಾದ್ಯಂತ ಪೆಟ್ರೋಲ್‌ ಮತ್ತು ಡೀಸೆಲ್‌ ಜೊತೆಗೆ ಇದೇ ಇಥೆನಾಲ್‌ ಬಳಸಿ ವಾಹನಗಳನ್ನು ಓಡಿಸಲಾಗುತ್ತದೆ.

ಈಗ ರೂಪಿಸಿರುವ ಯಂತ್ರವನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಿ ಹಳ್ಳಿ ಹಳ್ಳಿಗಳಲ್ಲೂ ಮನೆ ಮನೆಗಳಿಗೂ ತಲುಪಿಸಲಾಗುವುದು. ಇದರಿಂದ ಪರಿಸರ ಮಾಲಿನ್ಯ ನಿವಾರಣೆಗೂ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದರು ಮಹೇಶ ಶಿಂಧೆ.

ಅಂದ ಹಾಗೆ ಈ ಯಂತ್ರ ದುಬಾರಿಯದ್ದೂ ಅಲ್ಲ. ಶ್ರೀ ರವಿ ಶಂಕರ ಗುರೂಜಿ ಅವರು ಹೇಳುವ ಹಾಗೆ ಎರಡು ಮೂರು ಸಾವಿರ ರೂಪಾಯಿಗಳಷ್ಟೆ. ಎರಡ್ಮೂರು ಸಾವಿರ ರೂಪಾಯಿ ವೆಚ್ಚ ಮಾಡುವುದರಿಂದ ಜೀವನ ಪರ್ಯಂತ ಇಂಧನ ವೆಚ್ಚವೇ ಇರುವುದಿಲ್ಲ.

ಇಂತಹುದೊಂದು ಆವಿಷ್ಕಾರ ಸಾಧ್ಯವೇ ಎಂದು ಮೂಗು ಮುರಿಯುವವರು ಇರುವುದು ಸಹಜ. ಆದರೆ ಸುಮಾರು ಆರು ತಿಂಗಳ ಹಿಂದೆ ತಾನು ನೀರಿನಿಂದ ಗ್ಯಾಸ್‌ ಸ್ಟವ್‌ ಉರಿಸಿದ್ದು ಹೇಗೆ ಎಂಬುದನ್ನು ಪ್ರಯೋಗಾಸಕ್ತರೊಬ್ಬರು ಯೂ ಟ್ಯೂಬ್‌ ವಿಡಿಯೋ ಒಂದರಲ್ಲಿ ವಿವರಿಸಿದ್ದರು.

ವಿಡಿಯೋವನ್ನು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಅಥವಾ ಯೂ ಟ್ಯೂಬ್‌ಲಿಂಕ್‌ ಕ್ಲಿಕ್‌ ಮಾಡಿ ನೋಡಬಹುದು.

ಮಹೇಶ ದಾದಾ ಶಿಂಧೆ ಅವರು ಶ್ರೀ ಶ್ರೀ ರವಿ ಶಂಕರ ಗುರೂಜಿ ಅವರ ಮುಂದೆ ಪ್ರದರ್ಶಿಸಿದ್ದು ಇದರ ಪರಿಷ್ಕೃತ ರೂಪ. ಖಂಡಿತವಾಗಿ ಇದು ದೇಶಕ್ಕೆ, ಜನತೆಗೆ ಮಹೋನ್ನತ ಕೊಡುಗೆಯಾಗಬಲ್ಲುದು. 

-ನೆತ್ರಕೆರೆ ಉದಯಶಂಕರ

Wednesday, August 17, 2022

ಪ್ಲಾಸ್ಟಿಕ್ ಬಾಟಲಿ ನೀರು ವಿಷಕಾರಿ, ಪರಿಸರಕ್ಕೆ ಹಾನಿಕರ; ಪರ್ಯಾಯ ಹುಡುಕಿ: ಕೇಂದ್ರಕ್ಕೆ ಮದ್ರಾಸ್ ಹೈ ಸೂಚನೆ

 ಪ್ಲಾಸ್ಟಿಕ್ ಬಾಟಲಿ ನೀರು ವಿಷಕಾರಿ, ಪರಿಸರಕ್ಕೆ ಹಾನಿಕರ;

ಪರ್ಯಾಯ ಹುಡುಕಿ: ಕೇಂದ್ರಕ್ಕೆ ಮದ್ರಾಸ್ ಹೈ ಸೂಚನೆ

ಚೆನ್ನೈ: ಪ್ಲಾಸ್ಟಿಕ್ ಬಾಟಲಿಗಳು ಮತ್ತು ಬಬಲ್ ಟಾಪ್ ಕ್ಯಾನುಗಳ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ನೀರಿನ ವಿತರಣೆ ನಡೆಯುತ್ತಿರುವ ಬಗ್ಗೆ 2022 ಆಗಸ್ಟ್‌ 16ರ ಮಂಗಳವಾರ ಕಳವಳ ವ್ಯಕ್ತಪಡಿಸಿದ ಮದ್ರಾಸ್ ಹೈಕೋರ್ಟ್, ಪರಿಣಾಮಕಾರಿ ಪರ್ಯಾಯ ಪ್ಯಾಕೇಜಿಂಗ್ ಪರಿಹಾರಗಳನ್ನು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಎಸ್ ವೈದ್ಯನಾಥನ್ ಮತ್ತು ಪಿಟಿ ಆಶಾ ಅವರನ್ನು ಒಳಗೊಂಡ ಪೀಠವು, ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದ್ದಾಗ ಇದನ್ನು ಗಮನಿಸಿ, "ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸಂಗ್ರಹವಾಗಿರುವ ಕುಡಿಯುವ ನೀರು ಪರಿಸರದ ಯೋಗಕ್ಷೇಮಕ್ಕೆ ಹಾನಿಕರವಷ್ಟೇ ಅಲ್ಲ, ನಮ್ಮ ಆರೋಗ್ಯದ ಗುಣಮಟ್ಟದ ಮೇಲೆಯೂ ಪರಿಣಾಮ ಬೀರುತ್ತದೆ" ಎಂದು ಹೇಳಿತು.

ʼಕಳಪೆ ಗುಣಮಟ್ಟವನ್ನು ಹೊಂದಿರುವ ಬಾಟಲಿಗಳಲ್ಲಿ ನೀರನ್ನು ದೀರ್ಘಕಾಲದವರೆಗೆ ಸಂಗ್ರಹಿಸುವುದರಿಂದ ಪ್ಲಾಸ್ಟಿಕ್ ಕಣಗಳು ನೀರಿನೊಂದಿಗೆ ಮಿಶ್ರಣಗೊಂಡು ಉತ್ತಮ ನೀರು ವಿಷಕಾರಿಯಾಗಿ ಪರಿವರ್ತನೆಗೊಳ್ಳುತ್ತದೆʼ ಎಂದು ನ್ಯಾಯಾಲಯವು ಗಮನಿಸಿತು. ಎಲ್ಲ ಸ್ಥಳಗಳಲ್ಲಿ ಬಬಲ್ ಟಾಪ್ ವಾಟರ್ ಕ್ಯಾನ್ ಬಳಕೆ ತಮಿಳುನಾಡಿನಲ್ಲಿ ಸಾಮಾನ್ಯವಾಗಿದೆ, ಇದು ಜೀವಕ್ಕೆ ಹೆಚ್ಚು ಅಪಾಯಕಾರಿಯಾಗಿದೆ ಎಂದೂ ನ್ಯಾಯಾಲಯ ಹೇಳಿತು.

ರಾಜ್ಯದಲ್ಲಿ ಕುಡಿಯುವ ನೀರನ್ನು ಹೇಗೆ ತಯಾರಿಸಲಾಗುತ್ತದೆ ಮತ್ತು ನೀರಿನ ಕ್ಯಾನುಗಳನ್ನು ಹೇಗೆ ಸ್ವಚ್ಛಗೊಳಿಸಲಾಗುತ್ತದೆ ಎಂಬುದರ ಕುರಿತು ವಾಸ್ತವಸ್ಥಿತಿ ವರದಿಯನ್ನು ಸಲ್ಲಿಸುವಂತೆಯೂ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಸೂಚಿಸಿತು. ನೀರಿನ ಕ್ಯಾನ್‌ನುಗಬಾಳಿಕೆ ಅವಧಿ, ನೀರಿನ ಕ್ಯಾನುಗಳಲ್ಲಿ ಎಷ್ಟು ದಿನ ನೀರು ಸಂಗ್ರಹಿಸಲಾಗುತ್ತದೆ ಮತ್ತು ಈ ನೀರಿನ ಕ್ಯಾನುಗಳ ನಾಶಕ್ಕೆ ಅನುಸರಿಸುತ್ತಿರುವ ಕಾರ್ಯವಿಧಾನದ ಬಗ್ಗೆಯೂ ನ್ಯಾಯಾಲಯ ವಿಚಾರಿಸಿತು. ಈ ಬಗ್ಗೆ ದಾಖಲೆಗಳನ್ನು ನಿರ್ವಹಿಸಲಾಗಿದೆಯೇ ಎಂಬುದನ್ನು ಸೂಚಿಸುವಂತೆಯೂ ನ್ಯಾಯಾಲಯವು ರಾಜ್ಯಕ್ಕೆ ನಿರ್ದೇಶಿಸಿತು.

ಸ್ಯಾಚೆಟ್‌ಗಳ ಬದಲಿಗೆ ಬಾಟಲಿಗಳಲ್ಲಿ ಹಾಲನ್ನು ನೀಡುವ ಕಾರ್ಯಸಾಧ್ಯತೆಯ ಬಗೆಗೂ ನ್ಯಾಯಾಲಯವು ವಿಚಾರಿಸಿತು. ರಾಜ್ಯ ಸರ್ಕಾರದ ಸಹಕಾರಿ ಸಂಸ್ಥೆಯಾದ ಎಎವಿಐಎನ್‌ (AAVIN) ಹೆಚ್ಚುವರಿ ಶುಲ್ಕವನ್ನು ಪಾವತಿಸುವ ಮೂಲಕ ಬಾಟಲಿಗಳಲ್ಲಿ ಹಾಲು ಖರೀದಿಸಲು ಗ್ರಾಹಕರಿಗೆ ಆಯ್ಕೆಯನ್ನು ನೀಡಬಹುದು ಅಥವಾ ಸ್ಯಾಚೆಟ್‌ಗಳಲ್ಲಿನ ಹಾಲಿನ ಪೂರೈಕೆಯನ್ನು ನಿರ್ಮೂಲನೆ ಮಾಡಲು ಅವಧಿಯನ್ನು ನೀಡಬಹುದು ಎಂದು ನ್ಯಾಯಾಲಯ ಸೂಚಿಸಿತು. ಅಪಾಯಕಾರಿಯಲ್ಲದ ಟೆಟ್ರಾ ಪ್ಯಾಕ್‌ಗಳಲ್ಲಿ ಹಾಲನ್ನು ಮಾರಾಟ ಮಾಡಲು AAVIN ಗೆ ನ್ಯಾಯಾಲಯ ನಿರ್ದೇಶಿಸಿತು.

ಅದೇ ರೀತಿ ಸ್ಯಾಚೆಟ್‌ಗಳಲ್ಲಿ ಮಾರಾಟ ಮಾಡಲಾಗುತ್ತಿರುವ ಇತರ ನಿಬಂಧನೆಗಳು ಮತ್ತು ಖಾದ್ಯಗಳನ್ನು ಬದಲಿಗಳಲ್ಲಿ ಪ್ಯಾಕ್ ಮಾಡಬಹುದು ಎಂದು ನ್ಯಾಯಾಲಯ ಸೂಚಿಸಿತು. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತರು, ಡಿಎಂಎಸ್ ಕಾಂಪ್ಲೆಕ್ಸ್, ತೆನಾಂಪೇಟೆ, ಅವರನ್ನೂ ಪಕ್ಷವಾಗಿ ಪ್ರಕರಣಕ್ಕೆ ಸೇರ್ಪಡೆ ಮಾಡಿದ ನ್ಯಾಯಾಲಯ ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ತಮ್ಮ ಸಲಹೆಗಳನ್ನು ನೀಡುವಂತೆ ಅವರಿಗೆ ಸೂಚಿಸಿತು.

ಪ್ರಕರಣದ ಮುಂದಿನ ವಿಚಾರಣೆಯನ್ನು
ಆಗಸ್ಟ್ 29 ರಂದು ಕೈಗೆತ್ತಿಕೊಳ್ಳುವಂತೆಯೂ ಪೀಠ ನಿರ್ದೇಶಿಸಿತು.

Advertisement