Showing posts with label ದಕ್ಷಿಣ ಕನ್ನಡ. Show all posts
Showing posts with label ದಕ್ಷಿಣ ಕನ್ನಡ. Show all posts

Sunday, April 26, 2026

ಗಿರಿನಗರ ಶ್ರೀ ಮಹಾಗಣಪತಿ ರಥೋತ್ಸವ

 ಗಿರಿನಗರ ಶ್ರೀ ಮಹಾಗಣಪತಿ ರಥೋತ್ಸವ

ಬೆಂಗಳೂರು ಗಿರಿನಗರದ ಒಡೆಯ ಶ್ರೀ ಮಹಾಗಣಪತಿಯ ರಥೋತ್ಸವವು ೨೦೨೬ ಏಪ್ರಿಲ್‌ ೨೬ರ ಭಾನುವಾರ ಸಡಗರದೊಂದಿಗೆ ನೆರವೇರಿತು.

ಶ್ರೀ ರಾಮಚಂದ್ರಾಪುರ ಮಠದ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಶ್ರೀ ಮಹಾಗಣಪತಿ ಜಾತ್ರೆಯ ಪ್ರಯುಕ್ತ ಏಪ್ರಿಲ್‌ ೨೨ರಿಂದ ವಿವಿಧ ಕಾರ್ಯಕ್ರಮಗಳು ನಡೆದವು. ಏಪ್ರಿಲ್‌ ೨೨ರಂದು ನವಗ್ರಹ ಶಾಂತಿ ಹೋಮ, ಅಥರ್ವ ಶೀರ್ಷ ಹೋಮ, ಏಪ್ರಿಲ್‌ ೨೩ರಂದು ಅಥರ್ವ ಶೀರ್ಷ ಹೋಮ, ದುರ್ಗಾ ದೀಪ ನಮಸ್ಕಾರ, ಏಪ್ರಿಲ್‌ ೨೪ರಂದು ಸುಬ್ರಹ್ಮಣ್ಯ ಹೋಮ, ರಂಗಪೂಜೆ, ಏಪ್ರಿಲ್‌ ೨೫ರಂದು ನಾಗಮೂಲಮಂತ್ರ ಹೋಮ, ಆಶ್ಲೇಷಬಲಿ, ಪಲ್ಲಕ್ಕಿ ಉತ್ಸವ ನಡೆದವು.

ಏಪ್ರಿಲ್‌ ೨೬ರಂದು ಅಥರ್ವಶೀರ್ಷ ಹೋಮ, ರಥೋತ್ಸವ, ದೇವನೃತ್ಯ ಕಾರ್ಯಕ್ರಮಗಳು ನಡೆದವು. ಏಪ್ರಿಲ್‌ ೨೭ರಂದು ಸಹಸ್ರಮೋದಕ ಅಥರ್ವಶೀರ್ಷ ಹವನ ಹಾಗೂ ಅವಭೃತದೊಂದಿಗೆ ಜಾತ್ರೆ ಮುಕ್ತಾಯ.

ಭಾನುವಾರ ನಡೆದ ಸಂಭ್ರಮದ ರಥೋತ್ಸವದಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.

ಈ ಸಂದರ್ಭದ ಕೆಲವು ವಿಡಿಯೋಗಳು ಹಾಗೂ ಚಿತ್ರಗಳು ಇಲ್ಲಿವೆ.

Friday, May 23, 2025

ಈ ಹುಂಜ ಹುಟ್ಟಿದ್ದು, ಬೆಳೆದದ್ದು ಎಲ್ಲಿ?

 ಈ ಹುಂಜ ಹುಟ್ಟಿದ್ದು, ಬೆಳೆದದ್ದು ಎಲ್ಲಿ?

ಇದು ವಾಟ್ಸಪ್ಪಿನಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ. ಅದಕ್ಕೊಂದು ಪ್ರಶ್ನಾವಳಿ ರೂಪಿಸಿದ್ದು ಪರ್ಯಾಯ. ಕೆಳಗಿರುವ ವಿಡಿಯೋ ನೋಡಿ, ಬಳಿಕ ನಿಮ್ಮ ಉತ್ತರವನ್ನು ಕೆಳಗೆ ಕಮೆಂಟ್ಸ್‌ ವಿಭಾಗದಲ್ಲಿ ಬರೆಯಿರಿ.


Friday, March 28, 2025

ವಿಟ್ಲ ಶ್ರೀ ಪಂಚಲಿಂಗೇಶ್ವರ- ಬೊಳ್ನಾಡು ಶ್ರೀ ಚೀರುಂಭ ಭಗವತಿ ಭೇಟಿ

 ವಿಟ್ಲ ಶ್ರೀ ಪಂಚಲಿಂಗೇಶ್ವರ- ಬೊಳ್ನಾಡು ಶ್ರೀ ಚೀರುಂಭ ಭಗವತಿ ಭೇಟಿ

ಇದು ೬೦೦ ವರ್ಷಗಳಗೊಮ್ಮೆ ನಡೆಯುವ ಅಪರೂಪದ ಉತ್ಸವ

ದೈವ -ದೇವತೆಗಳ ಬೀಡಾಗಿರುವ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ವಿಟ್ಲ ಪಾಂಡವರು ನೆಲೆಸಿದ್ದ ಏಕ ಚಕ್ರನಗರ ಎಂಬ ಪ್ರತೀತಿ ಇದೆ.

ಇದೇ ಬಂಟ್ವಾಳ ತಾಲೂಕಿನ ಬೊಳ್ನಾಡುವಿನ ಚೀರುಂಭ ಭಗವತಿ ದೇವಸ್ಥಾನ ಕೂಡಾ ಹಳೆಯದೇ. ಕೆಲವು ವರ್ಷಗಳ ಹಿಂದೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಆಗಿದ್ದರೆ, ಇತ್ತೀಚೆಗೆ ಬೊಳ್ನಾಡು ಚೀರುಂಭ ಭಗವತಿ ದೇವಸ್ಥಾನದ ಜೀರ್ಣೋದ್ಧಾರ ನಡೆದಿದೆ. ೨೦೨೫ರ ಮಾರ್ಚ್‌ ೨೦ರಿಂದ ೨೭ರವರೆಗೆ ಭಗವತಿ ದೇವಸ್ಥಾನದಲ್ಲಿ ಭರಣಿ ಮಹೋತ್ಸವ ನಡೆದಿದೆ.

ಈ ಸಂದರ್ಭದಲ್ಲಿ ಒಂದು ವಿಶೇಷವಾದ ಘಟನೆ ವಿಟ್ಲದಲ್ಲಿ ನಡೆದಿದೆ. ಮನುಷ್ಯರು ಅದರಲ್ಲೂ ಗಣ್ಯರು ಪರಸ್ಪರ ಭೇಟಿ ಮಾಡುವುದು ನಮಗೆಲ್ಲರಿಗೂ ಗೊತ್ತು. ಆದರೆ ದೇವರು- ದೇವಿ ಭೇಟಿ ಮಾಡುವುದು ಅಪರೂಪದ ಸಂಗತಿ. ಭಗವತಿ ದೇವಸ್ಥಾನದ ಭರಣಿ ಮಹೋತ್ಸವದ ಸಂದರ್ಭದಲ್ಲಿ ಚೀರುಂಭ ಭಗವತಿ, ಸನಿಹದ ಪಂಚಲಿಂಗೇಶ್ವರ ದೇಗುಲಕ್ಕೆ ಆಗಮಿಸಿ ಪಂಚಲಿಂಗೇಶ್ವರನ ದರ್ಶನಗೈದ ಘಟನೆ ನಡೆದಿದೆ.

ಶ್ರೀ ಪಂಚಲಿಂಗೇಶ್ವರ ಮತ್ತು ಚೀರುಂಭ ಭಗವತಿ ಭೇಟಿ ಹೀಗೆ ನಡೆಯುವುದು ೬೦೦ ವರ್ಷಗಳಿಗೆ ಒಮ್ಮೆ ಎಂಬ ಪ್ರತೀತಿ ಇದೆ. ಹೀಗಾಗಿ ಪ್ರಯಾಗದಲ್ಲಿ ನಡೆದ ಮಹಾಕುಂಭ ಮೇಳದಂತೆಯೇ, ಮನುಷ್ಯರ ಜೀವಮಾನದಲ್ಲಿ ಒಮ್ಮೆ ಮಾತ್ರ ಕಾಣಬಹುದಾದ, ಪಾಲ್ಗೊಳ್ಳಬಹುದಾದ ಅಪರೂಪದ ಭೇಟಿ ಇದು.

೨೦೨೫ರ ಮಾರ್ಚ್‌ ೨೫ರಂದು ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಉತ್ಸವ ರೂಪದಲ್ಲಿ ಈ ಘಟನೆ ನಡೆಯಿತು. ಬೊಳ್ನಾಡು ಚೀರುಂಭ ಭಗವತಿ ದೇವಸ್ಥಾನದಿಂದ ಕಾಲ್ನಡಿಗೆಯಲ್ಲೇ ಹೊರಟು ವಿಟ್ಲದ ಶ್ರೀ ಪಂಚಲಿಂಗೇಶ್ವರ ಸನ್ನಿಧಾನಕ್ಕೆ ವಾದ್ಯಮೇಳದೊಂದಿಗೆ ಆಗಮಿಸಿದ ಭಗವತಿ ಮಾತೆಯು ಶ್ರೀ ಪಂಚಲಿಂಗೇಶ್ವರನ ದೇವರ ದರ್ಶನ-ಭೇಟಿಯನ್ನು ಮಾಡಿದ ಅಪರೂಪದ ದೃಶ್ಯವನ್ನು ಸಹಸ್ರಾರು ಮಂದಿ ವೀಕ್ಷಿಸಿದರು.


ಈ ಸಂದರ್ಭದ ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ.

ಈ ಕೆಳಗಿನವುಗಳನ್ನೂ ಓದಿರಿ:

ವಿಟ್ಲ ಪಂಚಲಿಂಗೇಶ್ವರನಿಗೆ ಮರುಹುಟ್ಟು ಸಂಭ್ರಮ

ವಿಟ್ಲ ಪಂಚಲಿಂಗೇಶ್ವರನಿಗೆ ಧರ್ಮಸ್ಥಳದ 'ಮುಗುಳಿ'

ವಿಟ್ಲಾಯನದ ಕೊನೆಯ ದಿನ

Wahl! What Water falls..!

Tuesday, May 23, 2023

ಕ್ಷಮಿಸಿ ಪಂಜಾಜೆ ನಿಮ್ಮ ಮನೆಗೆ ಬರಲಾಗಲಿಲ್ಲ..

 ಕ್ಷಮಿಸಿ ಪಂಜಾಜೆ ನಿಮ್ಮ ಮನೆಗೆ ಬರಲಾಗಲಿಲ್ಲ..

ಕೆಲವು ವ್ಯಕ್ತಿಗಳು ಹಾಗೆ. ಯಾವುದೋ ಸಂದರ್ಭದಲ್ಲಿ ಪರಿಚಯವಾಗುತ್ತಾರೆ. ಬದುಕಿನುದ್ದಕ್ಕೂ ಮರೆಯದೆ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತು ಬಿಡುತ್ತಾರೆ. ವೃತ್ತಿ ಜೀವನದಲ್ಲಿ ಪರಿಚಿತರಾಗುವ ಮಂದಿಯಲ್ಲಿ ಹೀಗೆ ಮನಸ್ಸಿನೊಳಗೆ ನಿಂತು ಬಿಡುವ ಮಂದಿ ಬಲು ಅಪರೂಪ. ಅಂತಹ ಅಪರೂಪದ ಒಬ್ಬ ವ್ಯಕ್ತಿ ಸೂರ್ಯ ನಾರಾಯಣ ಪಂಜಾಜೆ ಸಂಕ್ಷಿಪ್ತದಲ್ಲಿ ಎಸ್‌ ಎನ್‌ ಪಂಜಾಜೆ.

ಸುಮಾರು ಒಂದೂವರೆ ದಶಕಕ್ಕೂ ಹಿಂದಿನ ಕಥೆ ಅದು. ಪ್ರಜಾವಾಣಿ ಕಚೇರಿಯಲ್ಲಿ ನಾನು ಇದ್ದಾಗ ಪಂಚೆ, ಶರಟು ಹಾಕಿಕೊಂಡಿದ್ದ ಆ ವ್ಯಕ್ತಿ ಬಂದಿದ್ದರು.

ʼಯಕ್ಷಗಾನಕ್ಕೊಂದು ಅಕಾಡೆಮಿ ಬೇಕು. ಸಂಗೀತ, ನಾಟಕ, ಸಾಹಿತ್ಯಕ್ಕೆಲ್ಲ ಅಕಾಡೆಮಿಗಳಿವೆ. ಯಕ್ಷಗಾನಕ್ಕೆ ಏಕಿಲ್ಲ? ಹೀಗಾಗಿ ನಾವೊಂದು ವಿನೂತನ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಖಂಡಿತ ಬರಬೇಕು.ʼ ಎಂದು ಆತ್ಮೀಯವಾಗಿ ಮಾತನಾಡಿ, ಆಗ್ರಹಿಸಿ ಹೋಗಿದ್ದರು.

ಆದಿನ, ಮಹಾತ್ಮಾ ಗಾಂಧಿ ರಸ್ತೆಯ ಗಾಂಧಿ ಪ್ರತಿಮೆ ಬಳಿಗೆ ಹೋದರೆ ಯಾವುದೇ ಪ್ರತಿಭಟನೆ, ಘೋಷಣೆಗಳ ಸದ್ದಿಲ್ಲ. ಆದರೆ ಬರೇ ಚೆಂಡೆಯ ಸದ್ದು ಕೇಳುತ್ತಿತ್ತು. ಪಂಜಾಜೆ ಮತ್ತು ಅವರು ಕೆಲವು ಗೆಳೆಯರು ಗಾಂಧಿ ಪ್ರತಿಮೆಯ ಬಳಿ ನಿಂತುಕೊಂಡು ಚೆಂಡೆ ಭಾರಿಸುತ್ತಿದ್ದರು. ಪಕ್ಕದಲ್ಲಿ ದೊಡ್ಡ ಬ್ಯಾನರ್.‌ ʼಯಕ್ಷಗಾನಕ್ಕೂ ಅಕಾಡೆಮಿ ಬೇಕು..ʼ

ಘೋಷಣೆಗಳಿಲ್ಲದೆ ಕಲೆಯ ಪ್ರದರ್ಶನದ ಮೂಲಕವೇ ಯಕ್ಷಗಾನಕ್ಕೆ ಅಕಾಡೆಮಿ ಬೇಕು ಎಂಬ ಕೂಗು ಹಾಕಿದ್ದು ನಿಜಕ್ಕೂ ಪಂಜಾಜೆಯವರ ವಿಶಿಷ್ಟತೆಯಾಗಿತ್ತು. ಅದಾದ ಬಳಿಕ ಸರ್ಕಾರ ಈ ಬೇಡಿಕೆಯನ್ನು ಒಪ್ಪಿಕೊಂಡಿತು.

ಯಕ್ಷಗಾನವನ್ನು ನಾಡಿನಿಂದ ವಿದೇಶದವರೆಗೂ ಒಯ್ಯುವುದಕ್ಕೆ ಕೂಡಾ ಪಂಜಾಜೆ ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಗಳನ್ನು ನಡೆಸಿದ್ದರು.   ರಾಜ್ಯದ ಹಲವೆಡೆ ಅಖಿಲ ಭಾರತ ಯಕ್ಷಗಾನ ಬಯಲಾಟ, ಯಕ್ಷಗಾನಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿದ್ದರು.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕನ್ಯಾನದವರಾದ ಎಸ್.‌ ಎನ್.‌ ಪಂಜಾಜೆ ೧೯೮೦ರ ದಶಕದಲ್ಲಿ ಬೆಂಗಳೂರಿಗೆ ತೆರಳಿ ಯಕ್ಷಗಾನ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಯಕ್ಷಗಾನ ಪಾತ್ರಧಾರಿಯಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ಸಂಘಟಕರಾಗಿದ್ದ ಅವರನ್ನು ಉಡುಪಿಯಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರದ ವತಿಯಿಂದ ನಡೆದ ಮೊದಲ ಸಮಗ್ರ ಯಕ್ಷಗಾನ ಸಾಹಿತ್ಯ ಸಮ್ಮೇಳನದಲ್ಲಿ ಗೌರವಿಸಲಾಗಿತ್ತು.

ಬೆಂಗಳೂರಿನಲ್ಲಿ ವೇಷಭೂಷಣ, ಪ್ರಸಾಧನ ನಿರ್ವಹಿಸುತ್ತಾ ಯಕ್ಷಗಾನ ಬೆಳೆಸಿದವರಲ್ಲಿ ಅವರು ಒಬ್ಬರು.

ಪರಿಚಿತರಾದ ಬಳಿಕ ನಿರಂತರವಾಗಿ ಆತ್ಮೀಯ ಸಂಪರ್ಕದಲ್ಲಿದ್ದ ಪಂಜಾಜೆ ಕೆಲಸ ಸಮಯದ ಹಿಂದೆ ಸಿಕ್ಕಿದ್ದಾಗ ಅವರ ಮನೆಗೊಮ್ಮೆ ಸಕುಟುಂಬ ಸಮೇತರಾಗಿ ಬರಬೇಕು. ಒಂದು ಇಡೀದಿನ ಒಟ್ಟಿಗೆ ಕಾಲ ಕಳೆಯಬೇಕು ಎಂದು ಹಾರೈಸಿದ್ದರು.

ಬರುತ್ತೇನೆ ಎಂದು ಒಪ್ಪಿಕೊಂಡರೂ ಹೋಗಲು ಸಾಧ್ಯವಾಗಿರಲಿಲ್ಲ.

ಇನ್ನು ಅದೆಲ್ಲಿ ಸಾಧ್ಯ?

ಪಂಜಾಜೆ ೨೦೨೩ ಮೇ ೨೨ರ ಸೋಮವಾರ ದೈವಾಧೀನರಾಗಿದ್ದಾರೆ. ಕ್ಷಮಿಸಿ ಪಂಜಾಜೆ.

ಪಂಜಾಜೆ ಅವರ ಪತ್ನಿ ಮನೋರಮಾ, ಪುತ್ರ ಕೈಲಾಸ ಭಟ್‌ ಸೇರಿದಂತೆ ಕುಟುಂಬವರ್ಗ, ಗೆಳೆಯರಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಕೋರುವೆ.

-ನೆತ್ರಕೆರೆ ಉದಯಶಂಕರ

ಅಮೆರಿಕದಲ್ಲಿ ʼಅಕ್ಕʼ ಸಮ್ಮೇಳನಕ್ಕೆ ಅವರು ಚೆಂಡೆಯ ಸದ್ದನ್ನು ಒಯ್ದ ಬಗ್ಗೆ ʼಪರ್ಯಾಯʼ ಪ್ರಕಟಿಸಿದ್ದ ಲೇಖನ ಇಲ್ಲಿದೆ:

'ಅಕ್ಕ' ಅಂಗಳದಲ್ಲಿ 'ಯಕ್ಷ' ವೈಭವ...! Yaksha Vaibhava in Akka Conference...! 

Monday, May 1, 2023

ಬೆಂಗಳೂರಿನಲ್ಲಿ ಕೇರಳ ಮಾದರಿ ರಥೋತ್ಸವ..

 ಬೆಂಗಳೂರಿನಲ್ಲಿ ಕೇರಳ ಮಾದರಿ ರಥೋತ್ಸವ..

ಹೌದು. ಬೆಂಗಳೂರಿನಲ್ಲಿ ಕೇರಳ ಮಾದರಿ ರಥೋತ್ಸವ. ಇದು ಬೆಂಗಳೂರಿನ ಗಿರಿನಗರದ ಮೂಲ ದೇವರಾದ ಮಹಾಗಣಪತಿಯ ರಥೋತ್ಸವ.
ಬೆಂಗಳೂರಿನ ಗಿರಿನಗರದಲ್ಲಿ ಮಹಾಗಣಪತಿ ರಥೋತ್ಸವ ಏಪ್ರಿಲ್‌ ೨೬ರಿಂದ ಮೇ ೦೧ರವರೆಗೆ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಿತು.

ಕರ್ನಾಟಕದ ಪಶ್ಚಿಮ ಕರಾವಳಿಯ ಅದರಲ್ಲೂ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆ ಹಾಗೂ ಕೇರಳದಲ್ಲಿ ನಡೆಯುವ ಮಾದರಿಯಲ್ಲಿ ಜಾತ್ರೆ ಹಾಗೂ ರಥೋತ್ಸವ ಇಲ್ಲಿನ ಆಸುಪಾಸಿನ ಭಕ್ತಾದಿಗಳನ್ನು ವಿಶೇಷವಾಗಿ ಆಕರ್ಷಿಸಿತು.

ಕೇರಳ, ದಕ್ಷಿಣ ಕನ್ನಡ, ಉಡುಪಿ ದೇವಾಲಯಗಳ ಮಾದರಿಯ  ದರ್ಶನಬಲಿ, ದೇವನೃತ್ಯ, ರಂಗಪೂಜೆ, ಮತ್ತು ವಿಶೇಷವಾಗಿ ಚೆಂಡೆ ವಾದನ, ಕೊಂಬು ಕಹಳೆಯೊಂದಿಗೆ ಮಹಾರಥೋತ್ಸವ ಜರುಗಿತು.


ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕೂಡಾ ೨೦೨೨ರಲ್ಲಿ ಕೇರಳ, ಕರ್ನಾಟಕದ ಪಶ್ಚಿಮ ಕರಾವಳಿ ಮಾದರಿಯಲ್ಲೇ ನೆರವೇರಿತ್ತು.


ಏಪ್ರಿಲ್‌ ೩೦ರಂದು ನಡೆದ ಮಹಾಗಣಪತಿ ದೇವರ ರಥೋತ್ಸವ ಸಂಭ್ರಮದ ವಿಡಿಯೋಗಳು ಇಲ್ಲಿವೆ.


Monday, January 23, 2023

ವಿಟ್ಲಾಯನದ ಕೊನೆಯದಿನ: ನೆತ್ರಕೆರೆಯಲ್ಲಿ ಕಟ್ಟೆಪೂಜೆ

 ವಿಟ್ಲಾಯನದ ಕೊನೆಯದಿನ: ನೆತ್ರಕೆರೆಯಲ್ಲಿ ಕಟ್ಟೆಪೂಜೆ


ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆಯ ಕೊನೆಯ ದಿನ (೨೩ ಜನವರಿ ೨೦೨೩) ದೇವಸ್ಥಾನದ ಓಕುಳಿ ಕಟ್ಟೆಯಲ್ಲಿ ಪೂಜೆಯ ಬಳಿಕ ಕೊಡಂಗಾಯಿಗೆ ಅವಭೃತ ಸ್ನಾನಕ್ಕೆ ಹೋಗುವುದು ಕ್ರಮ.

ಹೀಗೆ  ಹೋಗುವ ದಾರಿಯಲ್ಲಿ  ವಿಟ್ಲ ಪ್ರಾಥಮಿಕ ಶಾಲೆ, ಕೂಡೂರು ಕಟ್ಟೆ, ನೆತ್ರಕೆರೆ ಕಟ್ಟೆಗಳು, ಕಡಂಬು ಕಟ್ಟೆ ಸೇರಿದಂತೆ ವಿವಿಧ ಕಟ್ಟೆಗಳಲ್ಲಿ ಕಟ್ಟೆ ಪೂಜೆ ಸ್ವೀಕರಿಸಿ ಕೊಡಂಗಾಯಿಯಲ್ಲಿ ಅವಭೃತ ಸ್ನಾನ ಪೂರೈಸಿ ಪಂಚಲಿಂಗೇಶ್ವರನು ಸ್ವಸ್ಥಾನಕ್ಕೆ ವಾಪಸಾಗುತ್ತಾನೆ.


ಅವಭೃತ ಸ್ನಾನಕ್ಕಾಗಿ ಪಂಚಲಿಂಗೇಶ್ವರನು ಸವಾರಿ ನಡೆಸುವ ದೃಶ್ಯ ಮತ್ತು ನೆತ್ರಕೆರೆ ಕಟ್ಟೆಗಳಲ್ಲಿ ಪೂಜೆ ಸ್ವೀಕರಿಸುವ ಸಂಭ್ರಮದ ವಿಡಿಯೋ ಇಲ್ಲಿದೆ. (ವಿಡಿಯೋ, ಚಿತ್ರಗಳು: ಎನ್.‌ ಶ್ಯಾಮ್‌, ಎನ್‌.ಟಿ. ಗಣೇಶ್)



೨೦೨೩ರ ವಿಟ್ಲ ಜಾತ್ರೋತ್ಸವವನ್ನು ಮತ್ತೊಮ್ಮೆ ಮೆಲುಕು ಹಾಕುವಿರಾದರೆ ಕೆಳಗೆ ಕ್ಲಿಕ್‌ ಮಾಡಿರಿ:

ವಿಟ್ಲಾಯನದ ಕೊನೆಯ ದಿನ

 ವಿಟ್ಲ ರಥೋತ್ಸವ ಸಂಭ್ರಮ

ವಿಟ್ಲ ಜಾತ್ರೆ ಬಯ್ಯದ ಬಲಿ

 ವಿಟ್ಲಾಯನ ವೈಭವ

ವಿಟ್ಲ ಜಾತ್ರೋತ್ಸವ ಸಂಭ್ರಮ

Sunday, January 22, 2023

ವಿಟ್ಲಾಯನದ ಕೊನೆಯ ದಿನ

ವಿಟ್ಲಾಯನದ ಕೊನೆಯ ದಿನ

೨೦೨೩ ಜನವರಿ ೨೨ ಭಾನುವಾರ. ಇಂದು ದಕ್ಷಿಣ ಕನ್ನಡ ಜಿಲ್ಲೆ ವಿಟ್ಲದ ಶ್ರೀ ಪಂಚಲಿಂಗೇಶ್ವರನ ಜಾತ್ರೋತ್ಸವದ ಕೊನೆಯ ದಿನ. 

ಶನಿವಾರ ʼಬೆಡಿʼಯ ಮಧ್ಯೆ ಮಹಾರಥೋತ್ಸವದ ಬಳಿಕ ಬೀದಿ ಮೆರವಣಿಗೆ ಶಯನೋತ್ಸವ ನಡೆದು ವಿಶ್ರಾಂತಿ ಪಡೆಯುವ ದೇವರನ್ನು ಭಾನುವಾರ ಈದಿನ ಬೆಳಗ್ಗೆ ಎಬ್ಬಿಸಿ ಕವಟೋದ್ಘಾಟನೆ , ಬಳಿಕ ಮಹಾಪೂಜೆ ನಡೆಯುತ್ತದೆ. ಈ ವೇಳೆಯಲ್ಲಿ ಬಟ್ಲು ಕಾಣಿಕೆ, ತುಲಾಭಾರ ಸೇವೆ ನಡೆಯುತ್ತದೆ. 

ಓಕುಳಿಕಟ್ಟೆಯಲ್ಲಿ ಕಟ್ಟೆ ಪೂಜೆಗಾಗಿ ದೇವಾಲಯದ ಒಳಗಿನಿಂದ ಹೊರ ಬರುತ್ತಿರುವ ದೃಶ್ಯದ ವಿಡಿಯೋ ಇಲ್ಲಿದೆ:


ರಾತ್ರಿ ದೇವಸ್ಥಾನದ ಒಳಗಿನ ಬಲಿಯ ಬಳಿಕ ಹೊರಗೆ ಓಕುಳಿ ಕಟ್ಟೆಯಲ್ಲಿ ಕಟ್ಟೆ ಪೂಜೆ. ಕಟ್ಟೆ ಪೂಜೆಯ ಬಳಿಕ ಶ್ರೀವರಿಗೆ ಅಷ್ಟಾವಧಾನ ಸೇವೆ. ಅಲ್ಲಿಂದ ಕೊಡಂಗಾಯಿಗೆ ಅವಭೃತ ಸ್ನಾನಕ್ಕೆ ಸವಾರಿ,

ಈ ಸವಾರಿಯಲ್ಲಿ ಪ್ರಾಥಮಿಕ ಶಾಲೆ, ಕೂಡೂರು ಕಟ್ಟೆ, ನೆತ್ರಕೆರೆ ಕಟ್ಟೆಗಳು, ಕಡಂಬು ಕಟ್ಟೆ ಸೇರಿದಂತೆ ವಿವಿಧ ಕಟ್ಟೆಗಳಲ್ಲಿ ಕಟ್ಟೆ ಪೂಜೆಗಳು ನಡೆಯುತ್ತದೆ. ಇಲ್ಲಿನ ಭಕ್ತಾದಿಗಳು ತಮ್ಮ ತಮ್ಮ ಪ್ರದೇಶದ ಕಟ್ಟೆಗೆ ಬರುವ ದೇವರನ್ನು ಸಂಭ್ರಮೋತ್ಸಾಹದೊಂದಿಗೆ ಸ್ವಾಗತಿಸಿ, ಪೂಜೆ ನೀಡಿ ಬೀಳ್ಕೊಡುತ್ತಾರೆ.

ಕೊಡಂಗಾಯಿಯಲ್ಲಿ ಅವಭೃತ ಸ್ನಾನದ ಬಳಿಕ ಮರಳಿ ದೇವಸ್ಥಾನಕ್ಕೆ ವಾಪಸ್.‌ ಬರುವಾಗ ಪುನಃ ಭಕ್ತಾದಿಗಳಿಂದ ಅಲ್ಲಲ್ಲಿ ಪೂಜೆ ಮಂಗಳಾರತಿ. ಕೊನೆಗೆ ಧ್ವಜಾವರೋಹಣ, ಸಂಪ್ರೋಕ್ಷಣೆಯೊಂದಿಗೆ ವಿಟ್ಲ ಜಾತ್ರೆಗೆ ತೆರೆ.


ಇಲ್ಲಿ ಶನಿವಾರದ ಮಹಾರಥೋತ್ಸವದ ಚಿತ್ರ ಹಾಗೂ ʼಬೆಡಿʼ ಸಂಭ್ರಮದ ವಿಡಿಯೋವನ್ನು ನೋಡಬಹುದು. (ಚಿತ್ರ, ವಿಡಿಯೋ ಕೃಪೆ: ವಿಟ್ಲ ಸುದ್ದಿಗಳು ವಾಟ್ಸಪ್‌ ಗ್ರೂಪ್).

ವಿಟ್ಲ ಜಾತ್ರೆಯ ಹಿಂದಿನ ಸುದ್ದಿಗಳನ್ನು ಕೆಳಗೆ ಕ್ಲಿಕ್‌ ಮಾಡಿರಿ:

 ವಿಟ್ಲ ರಥೋತ್ಸವ ಸಂಭ್ರಮ

ವಿಟ್ಲ ಜಾತ್ರೆ ಬಯ್ಯದ ಬಲಿ

 ವಿಟ್ಲಾಯನ ವೈಭವ

ವಿಟ್ಲ ಜಾತ್ರೋತ್ಸವ ಸಂಭ್ರಮ

Saturday, January 21, 2023

ವಿಟ್ಲ ರಥೋತ್ಸವ ಸಂಭ್ರಮ

 ವಿಟ್ಲ ರಥೋತ್ಸವ ಸಂಭ್ರಮ


ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ರಥೋತ್ಸವ ೨೦೨೩ ಜನವರಿ ೨೧ರ ಶನಿವಾರ ವಿಜೃಂಭಣೆಯಿಂದ ನಡೆಯುತ್ತಿದೆ. 

ರಥೋತ್ಸವದ ದಿನ ಇಡೀ ಊರ ಮಂದಿಯ ಕೊಡುಗೆಯೊಂದಿಗೆ ನಡೆಯುವ ʼಬೆಡಿʼ - ಪಟಾಕಿಯ ಸಂಭ್ರಮದ ಎಲ್ಲರ ಕಣ್ಮನ ಸೆಳೆಯುತ್ತದೆ.

ಅದಕ್ಕೂ ಮುನ್ನ ಈವರೆಗೆ ನಡೆದ ಬಯ್ಯದ ಬಲಿ, ಕೆರೆ ಆಯನ, ಹೂ ತೇರು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ವಿಡಿಯೋಗಳು ಇಲ್ಲಿವೆ. ವಿಡಿಯೋ, ಚಿತ್ರ ಕೃಪೆ: ವಿಟ್ಲ ಸುದ್ದಿಗಳು ವಾಟ್ಸಪ್‌ ಗ್ರೂಪ್, ಸದಾಶಿವ ಶಿಲ್ಪಿ ಸ್ಟುಡಿಯೋ, ನಮ್ಮ ನ್ಯೂಸ್‌ ಇತ್ಯಾದಿ.  

ನಡು ದೀಪೋತ್ಕೆಸವ ಕೆರೆ ಆಯನ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ:


ಪಂಚಲಿಂಗೇಶ್ವರ ದೇವರು ʼಹೂ ತೇರುʼ ಏರು ಮುನ್ನ....



ಜಾತ್ರಾ ಸಂಭ್ರಮದ ಇನ್ನೊಂದು ದೃಶ್ಯ.


ಬಯ್ಯದ ಬಲಿ ಸಂದರ್ಭದಲ್ಲಿ ದೇವರ ಸಮೀಪ ದೃಶ್ಯಗಳನ್ನು ನೋಡಿ:

Thursday, January 19, 2023

ವಿಟ್ಲ ಜಾತ್ರೆ ಬಯ್ಯದ ಬಲಿ

ವಿಟ್ಲ ಜಾತ್ರೆ ಬಯ್ಯದ ಬಲಿ


ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಐದನೇ ದಿನ ವಿಶೇಷ. ಇಲ್ಲಿಯವರೆ ಸಣ್ಣ ತೇರಿನಲ್ಲಿ ದೇವರ ಉತ್ಸವ ನಡೆದರೆ ʼಬಯ್ಯದ ಬಲಿʼ ಎಂಬುದಾಗಿ ಕರೆಯಲಾಗುವ ಐದನೇ ದಿನ ದೇವರು ದೊಡ್ಡ ರಥವನ್ನು ಏರಿ ಸವಾರಿ ಮಾಡುವುದು ವಿಶೇಷ. ಈ ದಿನದ ಸಂಭ್ರಮ ಕೂಡಾ ಹಿಂದಿನ ನಾಲ್ಕು ದಿನಗಳ ಸಂಭ್ರಮಕ್ಕಿಂತ ಹೆಚ್ಚು.

ಈದಿನ ವಿಟ್ಲ ಸಮೀಪದ ಕೇಪುವಿನಿಂದ ಶ್ರೀ ಮಲರಾಯ ದೈವದ ಭಂಡಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಬರುತ್ತದೆ. ವಿಟ್ಲದ ʼಬಯ್ಯದ ಬಲಿʼ ಉತ್ಸವ ಸಂಭ್ರಮ ಶ್ರೀ ಮಲರಾಯ ದೈವದ ಭಂಡಾರ ಆಗಮನದೊಂದಿಗೆ ಶುರುವಾಗುತ್ತದೆ.

ʼಬಯ್ಯದ  ಬಲಿʼ ಸಂಭ್ರಮವನ್ನು ಈ ಕೆಳಗಿನ ವಿಡಿಯೋಗಳಲ್ಲಿ ನೋಡಿ. ಚಿತ್ರ ವಿಡಿಯೋ ಕೃಪೆ: ವಿಟ್ಲ ಸುದ್ದಿಗಳು ವಾಟ್ಸಪ್‌ ಗ್ರೂಪ್‌, ವಿಟಿವಿ. 

ಕೇಪುವಿನಿಂದ ಶ್ರೀ ಮಲರಾಯ ದೈವದ ಭಂಡಾರ ಆಗಮನ ಮತ್ತು ಜಾತ್ರಾ ವೈಭವದ ವೀಕ್ಷಣೆಗೆ ಕೆಳಗಿನ ಚಿತ್ರ ಕ್ಲಿಕ್‌ ಮಾಡಿ.

ಜಾತ್ರೆಯ ಮೊದಲ ದಿನ ಅಂದರೆ ಲಕ್ಷ ದೀಪೋತ್ಸವದ ದಿನ ನಡೆದ ರುದ್ರಯಾಗ ಮತ್ತು ಜಾತ್ರೆಯ ವೈಭವದ ಇನ್ನೊಂದು ವಿಡಿಯೋ ಇಲ್ಲಿದೆ. ಕೃಪೆ: ನಮ್ಮ ನ್ಯೂಸ್

Sunday, January 15, 2023

ವಿಟ್ಲಾಯನ ವೈಭವ

 ವಿಟ್ಲಾಯನ ವೈಭವ


ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯ ಎರಡನೇ ದಿನವಾದ ೨೦೨೩ ಜನವರಿ ೧೫ರ ಭಾನುವಾರ ಸಂಜೆ ಪಂಚಲಿಂಗೇಶ್ವರನ ನಿತ್ಯೋತ್ಸವ -ರಥೋತ್ಸವ ಜರುಗಿತು. 

ಪುಟ್ಟ ತೇರಿನಲ್ಲಿ ರಥೋತ್ಸವ ಮುಗಿದ ಬಳಿಕ ದೇವಾಲಯದ ಹೊರಾವರಣ ಕಟ್ಟೆಯಲ್ಲಿ ದೇವರ ಪೂಜೆ ನೆರವೇರಿತು.

ಈ ಸಂದರ್ಭದ ದೃಶ್ಯಗಳು ವಿಡಿಯೋದಲ್ಲಿ ಮೂಡಿಬಂದದ್ದು ಹೀಗೆ: ವಿಡಿಯೋ ಕೃಪೆ: ವಿಟ್ಲ ಸುದ್ದಿಗಳು ವಾಟ್ಸಪ್‌ ಗ್ರೂಪ್. ವಿಡಿಯೋ ಕ್ಲಿಕ್ಲಿಸಿದವರು: ನೆತ್ರಕೆರೆ ಶ್ಯಾಮ್‌ .

ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ:




ವಿಟ್ಲ ಜಾತ್ರೋತ್ಸವ ಸಂಭ್ರಮ

 ವಿಟ್ಲ ಜಾತ್ರೋತ್ಸವ ಸಂಭ್ರಮ


ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ಸಹಸ್ರಾರು ವರ್ಷಗಳಷ್ಟು ಪುರಾತನವಾದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಸಂಭ್ರಮ ೨೦೨೩ ಜನವರಿ ೧೪ರ ಶನಿವಾರ ಮಕರ ಸಂಕ್ರಾಂತಿಯೊಂದಿಗೆ ಆರಂಭವಾಗಿದೆ.

ʼವಿಟ್ಲಾಯನʼ ಎಂಬುದಾಗಿಯೇ ಖ್ಯಾತವಾಗಿರುವ  ವಿಟ್ಲ ಜಾತ್ರೆಯ ಮೊದಲ ದಿನದ ಧ್ವಜಾರೋಹಣ, ಲಕ್ಷದೀಪೋತ್ಸವ  ಸಂಭ್ರಮದ ಕೆಲವು ದೃಶ್ಯಗಳು ಇಲ್ಲಿವೆ. ಚಿತ್ರ ಹಾಗೂ  ವಿಡಿಯೋ ಕೃಪೆ: ವಿಟ್ಲ ಸುದ್ದಿಗಳು ವಾಟ್ಸಪ್‌ ಗ್ರೂಪಿನ ಶ್ಯಾಮ್‌ ನೆತ್ರಕೆರೆ, ಸದಾಶಿವ "ಶಿಲ್ಪಿʼ ವಿಟ್ಲ.









 ಸಂಜೆ ಭಜನಾ ತಂಡಗಳ ಜೊತೆಗೆ ನಡೆದ ಉಲ್ಪೆ ಮೆರವಣಿಗೆ ಮತ್ತು ಹಸಿರುವಾಣಿ ಮೆರವಣಿಗೆ ಸಂಭ್ರಮದ  ವಿಡಿಯೋ  l ಇಲ್ಲಿದೆ.  ಕೃಪೆ : ವಿಟಿವಿ, ವಿಟ್ಲ. ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:

Sunday, August 22, 2021

ವಾರೇ ವಾಹ್ ಕೇರಳದ ಓಣಂ ಮತ್ತು ತುಳುವರ ದೀಪಾವಳಿ..!

 ವಾರೇ ವಾಹ್  ಕೇರಳದ ಓಣಂ ಮತ್ತು ತುಳುವರ ದೀಪಾವಳಿ..!

ಭಾರತದ ಈ ಸಂಸ್ಕೃತಿಗೆ ವಾರೇ ವಾಹ್ ಎನ್ನಲೇಬೇಕು. ಎಂತಹ ಸಾಮ್ಯತೆ ನೋಡಿ. ಕೇರಳದಲ್ಲಿ ಈಗ (ಇದು ಬರೆಯುವಾಗ ದಿನ: 22 ಆಗಸ್ಟ್ 2021) ಓಣಂ ಸಂಭ್ರಮ.  ಇದೇ ಸಂಭ್ರಮ  ತುಳುನಾಡು ಅಂದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಅಥವಾ ಈಗಿನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಹಾಗೂ ಕರ್ನಾಟಕ-ಕೇರಳದ ಗಡಿನಾಡು ಕಾಸರಗೋಡಿನಲ್ಲಿ ದೀಪಾವಳಿಯ ವೇಳೆಯಲ್ಲಿ ಕಂಡು ಬರುತ್ತದೆ.

ಎರಡೂ ಸಂದರ್ಭಗಳಲ್ಲಿ  ಕಂಡು ಬರುವ ಸಾಮ್ಯತೆ ಬಲಿಯೇಂದ್ರ ಇಲ್ಲವೇ ಬಲಿ ಚಕ್ರವರ್ತಿ ಅಥವಾ ರಾಜಾಮಹಾಬಲಿಗೆ ನೀಡುವ ಸಂಭ್ರಮದ ಸ್ವಾಗತ.

ಈಗ ಕೇರಳದಲ್ಲಿ ಮಾತ್ರವೇ ಅಲ್ಲ ತಾವಿರುವ ಎಲ್ಲ ಕಡೆಗಳಲ್ಲೂ ಕೇರಳಿಗರು ಸಂಭ್ರಮದಿಂದ ಆಚರಿಸುತ್ತಿರುವ ಓಣಂ ಕಡೆಗೆ ಗಮನ ಹರಿಸಿ.

ಓಣಂ ಹಬ್ಬವು ಕೇರಳಿಗರು ನಂಬುವ ಪ್ರಕಾರ ರಾಜ ಮಹಾಬಲಿಯ ತಾಯ್ನಾಡಿನಲ್ಲಿ ಅಂದರೆ ಕೇರಳದಲ್ಲಿ ಆಚರಿಸಲ್ಪಡುತ್ತದೆ.  ಇದು 10 ದಿನಗಳ ಕಾಲ ನಡೆಯುತ್ತದೆ.  ಮುಖ್ಯ ಹಬ್ಬವನ್ನು ಆಗಸ್ಟ್ 21-23 ರಿಂದ ಮೂರು ದಿನಗಳವರೆಗೆ ಆಚರಿಸಲಾಗುತ್ತದೆ.

ಮಹಾಬಲಿ, ರಾಕ್ಷಸ ರಾಜ. ಆದರೆ  ಉದಾರ ಮತ್ತು ದಯಾಮಯ ಎಂದು ಪ್ರತೀತಿ. ಆತನ ಆಡಳಿತವನ್ನು  ಸುವರ್ಣ ಯುಗಕ್ಕೆ ಹೋಲಿಕೆ ಮಾಡಲಾಗುತ್ತದೆ,   ಕಾರಣದಿಂದಾಗಿ, ಪ್ರತಿವರ್ಷ ಮಹಾಬಲಿ ತನ್ನ ತಾಯ್ನಾಡಿಗೆ ಭೇಟಿ ನೀಡಿ ಮರಳುವ ಸಂದರ್ಭವನ್ನು  ವ್ಯಾಪಕವಾಗಿ ಆಚರಿಸಲಾಗುತ್ತದೆ. ಹಬ್ಬವನ್ನು ಮಲಯಾಳಂ ಕ್ಯಾಲೆಂಡರ್ ತಿಂಗಳಾದ ಚಿಂಗಂನಲ್ಲಿ ಆಚರಿಸಲಾಗುತ್ತದೆ. ಈ ಓಣಂ  ಸುಗ್ಗಿಯ ಹಬ್ಬ ಕೂಡಾ.

ಪುರಾಣ ಕಥೆಗಳ ಪ್ರಕಾರ ಅಸುರ ನಾಯಕಾಗಿದ್ದ ರಾಜಾ ಮಹಾಬಲಿಯು ದೇವತೆಗಳನ್ನು  ಸೋಲಿಸಿ ಮೂರು ಲೋಕಗಳನ್ನು ವಶಪಡಿಸಿಕೊಂಡನು.. ಇದು ದೇವತೆಗಳನ್ನು ವ್ಯಗ್ರಗೊಳಿಸಿತು.  ಅವರು ರಾಕ್ಷಸ ರಾಜನ ವಿರುದ್ಧ ಹೋರಾಡಲು ಅವರಿಗೆ ಸಹಾಯ ಮಾಡಲು ಭಗವಾನ್ ವಿಷ್ಣುವನ್ನು ಪ್ರಾರ್ಥಿಸಿದರು.

ರಾಜಾ ಮಹಾಬಲಿ ಭಗವಾನ್ ವಿಷ್ಣುವಿನ ಭಕ್ತ.  ಭಗವಾನ್ ವಿಷ್ಣುವಿಗೆ ಉಭಯ ಸಂಕಟ. ವಿಷ್ಣೂ ಭಗವಾನ್ ವಿಷ್ಣು ವಾಮನ  ಅಂದರೆ ಕುಬ್ಜ ಗಾತ್ರದ ಬ್ರಾಹ್ಮಣ ವಟು  ರೂಪದಲ್ಲಿ  ಮಹಾಬಲಿಯನ್ನು ಭೇಟಿ ಮಾಡಿದ  ಮತ್ತು ಮೂರು ಹೆಜ್ಜೆ ಜಾಗವನ್ನು ತನಗೆ ದಾನವಾಗಿ ನೀಡುವಂತೆ ಮಹಾಬಲಿ ಬಳಿ ಪ್ರಾರ್ಥಿಸಿದ. ದಾನಶೂರನಾದ ಮಹಾಬಲಿ  ಅದಕ್ಕೆ ಒಪ್ಪಿದ.

ಬಳಿಕ ವಾಮನ  ಗಾತ್ರದ ವಟುವಿನ ಗಾತ್ರ ಹಿಗ್ಗಿತು.  ಆತ ಕೇಳಿದ  ಎರಡು ಹೆಜ್ಜೆಗಳನ್ನು ಇಡುವಷ್ಟರಲ್ಲಿ ರಾಜಾ ಮಹಾಬಲಿಯ ಆಳ್ವಿಕೆಗೆ ಒಳಪಟ್ಟ ಸಮಸ್ತ ಭೂಮಂಡಲ ಮುಗಿದು ಹೋಯಿತು. ಮೂರನೇ ಹೆಜ್ಜೆ ಇಡಲು ಯಾವುದೇ ಸ್ಥಳ ಇಲ್ಲದೇ ಹೋದಾಗ ಮಹಾಬಲಿ ತನ್ನ ತಲೆಯ ಮೇಲೆಯೇ ಮೂರನೇ ಹೆಜ್ಜೆ ಇಡಲು ಮನವಿ ಮಾಡಿದ.

ಮಹಾಬಲಿಯ ನಡತೆಗೆ ಮೆಚ್ಚಿದ ಭಗವಾನ್ ವಿಷ್ಣು ಆತನಿಗೆ ಪ್ರತಿ  ವರ್ಷದಲ್ಲಿ ಒಂದು ಬಾರಿ ಭೂಮಿಯಲ್ಲಿನ ಆತನ ಸಾಮ್ಯಾಜ್ಯಕ್ಕೆ ಬರಲು ಅವಕಾಶ ನೀಡಿದ. 

ಹೀಗೆ ಪ್ರತಿ ವರ್ಷ ಮಹಾಬಲಿ ಭೂಮಿಯಲ್ಲಿನ ಆತನ ಸಾಮ್ರಾಜ್ಯಕ್ಕೆ ಬರುವ ಕಾಲವನ್ನೇ ಕೇರಳದಲ್ಲಿ ‘ಓಣಂ’ ಎಂಬುದಾಗಿ ಆಚರಿಸಲಾಗುತ್ತದೆ.

ಕೇರಳದಲ್ಲಿ ಅತ್ಯಂತ ಸಂಭ್ರಮದೊಂದಿಗೆ ಆಚರಿಸಲಾಗುವ  ಹಬ್ಬದಲ್ಲಿ ಗಮನ ಸೆಳೆಯುವುದು ರಂಗೋಲಿ ಅಲಂಕಾರ ಮತ್ತು ಬಾಳೆ ಎಲೆಯಲ್ಲಿ ಬಡಿಸಲಾಗುವ ಬಗೆ ಬಗೆಯ ಭಕ್ಷ್ಯ ಭೋಜ್ಯಗಳ ಭೋಜನ.

ಇಲ್ಲಿರುವ ಪುಟ್ಟ ವಿಡಿಯೋ ಈ ‘ಭೋಜನ ಸಂಭ್ರಮವನ್ನು’ ತೋರಿಸುತ್ತದೆ.


ಈ ಜನರು ‘ವಲ್ಲಂ ಕಾಳಿ’ ಎಂದು ಕರೆಯಲಾಗುವ  ದೋಣಿ ಓಟಗಳಲ್ಲಿ ಭಾಗವಹಿಸಿ ಸಂಭ್ರಮ ಆಚರಿಸುತ್ತಾರೆ.

ತುಳುನಾಡಿನಲ್ಲಿ:

ಇದು ಕೇರಳದ ಕಥೆಯಾದರೆ, ಕರ್ನಾಟಕದ ತುಳುನಾಡು ಅಂದರೆ ಪಶ್ಚಿಮ ಕರಾವಳಿಯಲ್ಲಿ ಇದೇ ರಾಜಾ ಮಹಾಬಲಿಯನ್ನು  ಬಲಿಯೇಂದ್ರ ಹೆಸರಿನಲ್ಲಿ ಪ್ರತಿವರ್ಷವೂ ಸಡಗರದೊಂದಿಗೆ ಬರಮಾಡಿಕೊಳ್ಳುತ್ತಾರೆ. ಆದರೆ ಕೇರಳಿಗರ  ಓಣಂ ಸಂದರ್ಭದಲ್ಲಿ ಅಲ್ಲ- ಭಾರತದಾದ್ಯಂತ ಸಂಭ್ರಮದಿಂದ ಆಚರಿಸಲಾಗುವ ದೀಪಾವಳಿಯ ಸಂದರ್ಭದಲ್ಲಿ.

ಕತ್ತಲೆಯಿಂದ ಬೆಳಕಿನ ಕಡೆಗೆ,  ಅಜ್ಞಾನದಿಂದ ಜ್ಞಾನದ ಕಡೆಗೆ ಮತ್ತು ಬಡತನದಿಂದ ಸಮೃದ್ಧಿಯತ್ತ ಸಾಗುವ ನಮ್ಮ ಸಹಜ ಆಕಾಂಕ್ಷೆಯ ಸಂಕೇತವಾಗಿ  ದೀಪಾವಳಿಯನ್ನು ಆಚರಿಸಲಾಗುತ್ತದೆ. ಇದು  ಪ್ರಕೃತಿಮಾತೆಗೆ ಕೃತಜ್ಞತೆ ಸಲ್ಲಿಸುವ ಹಬ್ಬ ಕೂಡಾ ಹೌದು.  ದೀಪಾವಳಿ ಎಂದರೆ ದೀಪಗಳ ಸಮೂಹ.

ಆಧುನಿಕ, ಸಕಾರಾತ್ಮಕ ಚಿಂತನೆಯ ಶೈಲಿಯ ವಿವರಣೆಗಳ ಹೊರತಾಗಿಯೂ, ಉತ್ಸವವನ್ನು ಮೂಲತಃ  ಬಲಿಯೇಂದ್ರನ ಸಾಮ್ರಾಜ್ಯದ  ವ್ಯಾಪ್ತಿಗೆ ಒಳಪಟ್ಟ ತುಳುನಾಡಿನ ಪ್ರಜೆಗಳು  ತಮ್ಮ ರಾಜನನ್ನು ಸ್ವಾಗತಿಸಿ ಆದರಿಸುವ ಹಬ್ಬವಾಗಿ ಆಚರಿಸುತ್ತಾರೆ.

ಬಲಿಯೇಂದ್ರ ಅಥವಾ ಬಲಿ ಚಕ್ರವರ್ತಿಯನ್ನು ಮನೆ ಮನೆಗಳಲ್ಲೂ ದೀಪ ಬೆಳಗಿ ಊಟ ಇಟ್ಟು  ಬಲಿಯೇಂದ್ರ ಪಠಣದ ಮೂಲಕ ಸ್ವಾಗತಿಸಿ ಸಂಭ್ರಮಿಸುವ ಆಚರಣೆ ತುಳುನಾಡಿನಲ್ಲಿದೆ. ಬಲಿಗೆ ಸಂಬಂಧಿಸಿದಂತೆ ತುಳುನಾಡಿನಲ್ಲಿ ಕೂಡಾ ಪ್ರಚಲಿತವಾಗಿರುವುದು ಕೇರಳದಲ್ಲಿ ಪ್ರಚಲಿತವಾಗಿರುವ ಈ ವಾಮನಾವತಾರದ ಕಥೆಯೇ..

ಅಸುರ ರಾಜ ಬಲಿಯೇಂದ್ರ ಮಾಡಿದ  ಮಹಾಪಾಪ ಏನು?

ಮಹಾಬಲಿ ಅಸುರನಾಗಿದ್ದರೂ  ಹೃದಯವಂತ.  ಲೋಕೋಪಕಾರಿ.  ಅಗತ್ಯವಿದ್ದವರಿಗೆ ಉಚಿತ ಉಡುಗೊರೆಗಳನ್ನು ಮನಃಪೂರ್ವಕವಾಗಿ ನೀಡುತ್ತಿದ್ದ.

ದಂತಕಥೆಯ ಪ್ರಕಾರ  ರಾಜಾ ಬಲಿಯೇಂದ್ರ ತನ್ನಿಂದ ದಾನ ಪಡೆಯುವವರು ಏನನ್ನೇ ಕೇಳಿದರೂ ಅದನ್ನು ಕೊಟ್ಟು ಬಿಡುತ್ತಿದ್ದ.  ದೇವತೆಗಳ ಮೊರೆಗೆ ಓಗೊಟ್ಟ ಭಗವಾನ್ ವಿಷ್ಣು  ರಾಜಾ ಬಲಿಯೇಂದ್ರನ    ಗುಣವನ್ನೇ ಬಳಸಿಕೊಂಡ. ಮತ್ತು  ಕುಬ್ಜ ವಟುವಿನ ಗಾತ್ರದಲ್ಲಿ ಬಂದು ಮೂರು  ಅಡಿ ಇಡುವಷ್ಟು ಗಾತ್ರದ ಭೂಮಿಯನ್ನು ನೀಡುವಂತೆ ಕೋರಿದ. ರಾಜಾ ಬಲಿಯೇಂದ್ರ  ಮಾತುಕೊಟ್ಟ ಬಳಿಕ ಬೃಹದಾಕಾರವಾಗಿ ಬೆಳೆದ ವಾಮನ ಎರಡು ಅಡಿಗಳನ್ನು ಸಂಪೂರ್ಣ ಭೂಮಂಡಲವನ್ನೇ ಪಡೆದುಕೊಂಡ. ಮೂರನೇ ಅಡಿ ಇಡಲು ಜಾಗವೇ ಇರಲಿಲ್ಲ. ಬಲಿಯೇಂದ್ರ ಮೂರನೇ ಹೆಜ್ಜೆ ಇಡಲು ತನ್ನ ತಲೆಯನ್ನೇ ಒಡ್ಡಿದ.

ಬಲಿಯೇಂದ್ರನ ತಲೆಯ ಮೇಲೆ ತನ್ನ ಪಾದವನ್ನು ಊರಿದ ವಿಷ್ಣು ಭಗವಾನ್ ಆತನನ್ನು ಪಾತಾಳಕ್ಕೆ ತಳ್ಳಿದ.  ಆದರೆ ಬಲಿಯೇಂದ್ರನ ತ್ಯಾಗಕ್ಕೆ ಮೆಚ್ಚಿದ ಭಗವಾನ್ ವಿಷ್ಣು, ಪ್ರತಿವರ್ಷ ಮೂರು ದಿನ ತನ್ನ ಸಾಮ್ರಾಜ್ಯಕ್ಕೆ ಹಿಂತಿರುಗಿ ಪ್ರಜೆಗಳಿಂದ ಆದರಾತಿಥ್ಯ ಪಡೆಯಲು ಅವಕಾಶ ನೀಡಿದ. ತುಳುನಾಡಿನಲ್ಲಿ ಇದನ್ನೇ ದೀಪಾವಳಿ ಹಬ್ಬವಾಗಿ ಆಚರಿಸಲಾಗುತ್ತಿದೆ.

ದೀಪಾವಳಿ ರಾತ್ರಿಯ ಸಮಯದಲ್ಲಿ ತುಳುನಾಡು ಗ್ರಾಮೀಣ ಭಾಗದಲ್ಲಿ 'ಪೊಲಿ ಪೊಲಿ ಬಲಿಯೇಂದ್ರ' ಪಠಣವು ಬಲಿಯೇಂದ್ರನನ್ನು  ಸ್ವಾಗತಿಸುವ ಪ್ರಾಚೀನ ಸಂಪ್ರದಾಯವನ್ನು ಪ್ರತಿಧ್ವನಿಸುತ್ತದೆ.

ಇಲ್ಲಿರುವ ಪುಟ್ಟ ವಿಡಿಯೋ ತುಳುವರು ಬಲಿಯೇಂದ್ರನನ್ನು ‘ಪೊಲಿ ಪೊಲಿ ಬಲಿಯೇಂದ್ರ’ ಎಂಬುದಾಗಿ ಪಠಿಸುತ್ತಾ ದೀಪ ಹಚ್ಚಿ ಸ್ವಾಗತಿಸುವುದನ್ನು ತೋರಿಸುತ್ತದೆ. 

ಒಂದೇ ಕಥೆ, ಒಂದೇ ಸಂಭ್ರಮ -  ಎರಡು ರಾಜ್ಯಗಳಲ್ಲಿನ ಸಾಮ್ಯತೆಯನ್ನು ಕಣ್ತುಂಬಿಕೊಳ್ಳಿ.

-ನೆತ್ರಕೆರೆ ಉದಯಶಂಕರ

Advertisement