Showing posts with label GDP. Show all posts
Showing posts with label GDP. Show all posts

Friday, November 27, 2020

ಭಾರತದ ಜಿಡಿಪಿ: ಚೇತರಿಕೆ, ಕುಸಿತ ಶೇ.೨೩ರಿಂದ ಶೇ.೭.೫ಕ್ಕೆ ಇಳಿಕೆ

 ಭಾರತದ ಜಿಡಿಪಿ: ಚೇತರಿಕೆ, ಕುಸಿತ ಶೇ.೨೩ರಿಂದ ಶೇ.೭.೫ಕ್ಕೆ ಇಳಿಕೆ

ನವದೆಹಲಿ: ೨೦೧೯ರ ಇದೇ ಅವಧಿಗೆ ಹೋಲಿಸಿದರೆ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಜುಲೈ-ಸೆಪ್ಟೆಂಬರ್ ನಡುವಣ ತ್ರೈಮಾಸಿಕದ ಅವಧಿಯಲ್ಲಿ ಶೇಕಡಾ ೭.೫ ರಷ್ಟು ಕುಗ್ಗಿದೆ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ 2020 ನವೆಂಬರ್ 27ರ ಶುಕ್ರವಾರ ಬಿಡುಗಡೆ ಮಾಡಿದ ಮಾಹಿತಿ ತಿಳಿಸಿದೆ.

ಏಪ್ರಿಲ್-ಜೂನ್ ಅವಧಿಯ ತ್ರೈಮಾಸಿಕದ ಅವಧಿಯಲ್ಲಿ ಜಿಡಿಪಿ ಕಂಡಿದ್ದ ಶೇಕಡಾ ೨೩.೯ ಕುಸಿತಕ್ಕೆ ಹೋಲಿಸಿದರೆ ಆರ್ಥಿಕತೆ ಪುಟಿದೇಳುತ್ತಿರುವುದರ ಲಕ್ಷಣ ಇದಾಗಿದೆ, ಆದರೆ ಒಂದು ವರ್ಷದ ಹಿಂದಿನ ಇದೇ ಅವಧಿಗೆ ಹೋಲಿಸಿದರೆ ಸತತ ಎರಡು ತ್ರೈಮಾಸಿಕಗಳಲ್ಲಿ ದಾಖಲಾಗಿರುವ ಜಿಡಿಪಿ ಕುಸಿತದಿಂದಾಗಿ ಭಾರತವು ಪ್ರಮುಖ ಮುಂದುವರೆದ ಮತ್ತು ಉದಯೋನ್ಮುಖ ಆರ್ಥಿಕತೆಗಳಲ್ಲಿ ಅತ್ಯಂತ ಬಡ ಪ್ರದರ್ಶನ ನೀಡಿದಂತಾಗಿದೆ ಮತ್ತು ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ತಾಂತ್ರಿಕ ಹಿಂಜರಿತವನ್ನು ಪ್ರವೇಶಿಸಿದೆ.

ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಸಾಂಕ್ರಾಮಿಕ-ಪ್ರೇರಿತ ದಿಗ್ಬಂಧನಗಳು (ಲಾಕ್‌ಡೌನ್) ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜಿಡಿಪಿಯಲ್ಲಿ ಶೇಕಡಾ ೨೩.೯ರಷ್ಟು ಕಡಿದಾದ ಸಂಕೋಚನಕ್ಕೆ ಕಾರಣವಾಗಿತ್ತು.

ದೇಶವು ಈಗ ೧೯೪೭ರ ನಂತರ ಇದೇ ಮೊದಲ ಬಾರಿಗೆ "ತಾಂತ್ರಿಕ ಹಿಂಜರಿತ" ಕ್ಕೆ ಪ್ರವೇಶಿಸಿದೆ ಎಂಬುದು ಎರಡು ತ್ರೈಮಾಸಿಕಗಳ ಸತತ ಸಂಕೋಚನದ ಅರ್ಥವಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಂದಾಜಿನ ಪ್ರಕಾರ ಪೂರ್ಣ ಆರ್ಥಿಕ ವರ್ಷದಲ್ಲಿ ಆರ್ಥಿಕತೆಯು ಶೇಕಡಾ ೯.೫ರಷ್ಟು ಕುಗ್ಗಲಿದೆ.

ಡೈನಾಮಿಕ್ ಫ್ಯಾಕ್ಟರ್ ಮಾದರಿಯನ್ನು ಬಳಸಿಕೊಂಡು ೨೭ ಮಾಸಿಕ ಸೂಚಕಗಳಿಂದ ಸೂಚ್ಯಂಕವನ್ನು ರಚಿಸಲಾಗಿದೆ ಮತ್ತು ಆರ್ಥಿಕತೆಯ ಪುನರಾರಂಭದೊಂದಿಗೆ ಆರ್ಥಿಕತೆಯು ೨೦೨೦ರ ಮೇ / ಜೂನ್ ತಿಂಗಳುಗಳ ಬಳಿಕ ತ್ವರಿತವಾಗಿ ಚೇತರಿಸಿದೆ. ಅಂದರೆ ಸೇವಾ ಕ್ಷೇತ್ರಗಳಿಗಿಂತ ಬೇಗನೇ ಉದ್ಯಮ ಕ್ಷೇತ್ರವು ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಎಂಬುದನ್ನು ಇದು ಸೂಚಿಸಿದೆ ಎಂದು ಮಾದರಿಯು ಹೇಳಿದೆ. 

ಈ ವರ್ಷದ ಜುಲೈ-ಸೆಪ್ಟೆಂಬರ್‌ನಲ್ಲಿ ಚೀನಾದ ಆರ್ಥಿಕತೆಯು ಶೇಕಡಾ ೪.೯ರಷ್ಟು ಏರಿಕೆಯಾಗಿದ್ದು, ೨೦೨೦ ರ ಏಪ್ರಿಲ್-ಜೂನ್ ತಿಂಗಳುಗಳ ಶೇಕಡಾ ೩.೨ ಬೆಳವಣಿಗೆಗಿಂತ ವೇಗವಾಗಿದೆ.

ವೈರಸ್ ಹಿನ್ನೆಲೆಯ ಲಾಕ್‌ಡೌನ್‌ಗಳು ಜಗತ್ತನ್ನು ತತ್ತರಗೊಳಿಸಿದ ನಂತರ, ಸೆಪ್ಟೆಂಬರ್ ೩೦ ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಅಮೆರಿಕ, ಜಪಾನ್ ಮತ್ತು ಜರ್ಮನಿ ಸೇರಿದಂತೆ ಪ್ರಮುಖ ಆರ್ಥಿಕತೆಗಳು ದಾಖಲಿಸಿದ ಬೆಳವಣಿಗೆ ಭಾರತವು ಪುನರುಜ್ಜೀವನವನ್ನು ಕಾಣಲಿದೆ ಎಂಬ ನಿರೀಕ್ಷೆಯನ್ನು ಹುಟ್ಟುಹಾಕಿತ್ತು.

ಆದರೆ, ಅಕ್ಟೋಬರ್-ನವೆಂಬರ್ ಹಬ್ಬದ ಋತುವಿನಲ್ಲಿ ಹೆಚ್ಚಿದ ಖರ್ಚಿನಿಂದಾಗಿ ಗ್ರಾಹಕ ವ್ಯವಹಾರಗಳು ಉತ್ತೇಜನವನ್ನು ಕಂಡರೂ, ನಿರ್ಮಾಣ ಮತ್ತು ಆತಿಥ್ಯ ಕ್ಷೇತ್ರಗಳು ತೊಂದರೆಗೆ ಈಡಾಗುವುದರೊಂದಿಗೆ ವಿಸ್ತೃತ  ಚೇತರಿಕೆಯ ಭರವಸೆಗಳು ನಾಶವಾದವು.

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಕಳೆದ ತಿಂಗಳು ಬಿಡುಗಡೆ ಮಾಡಿದ ಅಂದಾಜಿನ ಪ್ರಕಾರ, ಈ ವರ್ಷ ಶೇಕಡಾ ೯.೫ ರಷ್ಟು ಕುಗ್ಗುವ ನಿರೀಕ್ಷೆಯಿರುವ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಭಾರತ ಹೆಣಗಾಡಿದೆ.

ಏತನ್ಮಧ್ಯೆ, ಅಂತಾರಾಷ್ಟ್ರೀಯ ಹಣಕಾಸು ನಿದಿಯು (ಐಎಂಎಫ್)  ಈ ವರ್ಷ ಭಾರತದ ಆರ್ಥಿಕತೆಯು ಶೇಕಡಾ ೧೦.೩ರಷ್ಟು ಕುಗ್ಗುತ್ತದೆ ಎಂದು ಭವಿಷ್ಯ ನುಡಿದಿದೆ. ಇದು ಪ್ರಮುಖ ಉದಯೋನ್ಮುಖ ಆರ್ಥಿಕತೆಗೆ ದೊಡ್ಡ ಕುಸಿತವಾಗಿದೆ ಮತ್ತು ಸ್ವಾತಂತ್ರ್ಯಾ ನಂತರದ ಅತ್ಯಂತ ಕೆಟ್ಟ ಹಿನ್ನಡೆಯಾಗಿದೆ.

ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಆಕ್ಸ್‌ಫರ್ಡ್ ಎಕನಾಮಿಕ್ಸ್‌ನ ವರದಿಯು ಸಾಂಕ್ರಾಮಿಕ ರೋಗವನ್ನು ಸಡಿಲಿಸಿದ ನಂತರವೂ ಭಾರತವು ಅತ್ಯಂತ ಕೆಟ್ಟ ಪರಿಣಾಮ ಬೀರುವ ಆರ್ಥಿಕತೆಯಾಗಿದೆ ಎಂದು ಹೇಳಿತ್ತು. ೨೦೨೫ ರ ವೇಳೆಗೆ ವಾರ್ಷಿಕ ಉತ್ಪಾದನೆಯು ವೈರಸ್ ಪೂರ್ವ ಮಟ್ಟಕ್ಕಿಂತ ಶೇಕಡಾ ೧೨ರಷ್ಟು ಕಡಿಮೆ ಇರುತ್ತದೆ ಎಂದು ವರದಿ ಹೇಳಿತ್ತು.

Thursday, October 15, 2020

ಭಾರತದ ತಲಾ ಜಿಡಿಪಿ ಶೇಕಡಾ ೩೦ಕ್ಕಿಂತ ಹೆಚ್ಚು

 ಭಾರತದ ತಲಾ ಜಿಡಿಪಿ ಶೇಕಡಾ ೩೦ಕ್ಕಿಂತ ಹೆಚ್ಚು

ನವದೆಹಲಿ: ೨೦೧೯ ರಲ್ಲಿ ಖರೀದಿ ಸಾಮರ್ಥ್ಯ ಸಮಾನತೆ (ಪಿಪಿಪಿ) ಆಧಾರದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬಾಂಗ್ಲಾದೇಶಕ್ಕಿಂತ ೧೧ ಪಟ್ಟು ಹೆಚ್ಚಾಗಿದೆ ಎಂದು ಸರ್ಕಾರದ ಮೂಲಗಳು 2020 ಅಕ್ಟೋಬರ್ 15ರ ಗುರುವಾರ ತಿಳಿಸಿದವು.

೨೦೧೯ ರಲ್ಲಿ, ಖರೀದಿ ಸಮಾನತೆಯ ನೆಲೆಯಲ್ಲಿ ಭಾರತದ ಜಿಡಿಪಿ ಬಾಂಗ್ಲಾದೇಶಕ್ಕಿಂತ ೧೧ ಪಟ್ಟು ಹೆಚ್ಚಿದ್ದರೆ, ಜನಸಂಖ್ಯೆಯು ೮ ಪಟ್ಟು ಹೆಚ್ಚಾಗಿದೆ. ಕೊಳ್ಳುವ ಶಕ್ತಿ ಸಮಾನತೆಯ ದೃಷ್ಟಿಯಿಂದ, ೨೦೨೦  ಬಾಂಗ್ಲಾದೇಶದ ೫೧೩೯ ಡಾಲರ್‌ಗಳಿಗೆ ಹೋಲಿಸಿದರೆ ಐಎಂಎಫ್ ಭಾರತದ ತಲಾ ಜಿಡಿಪಿಯನ್ನು ೬೨೮೪ ಡಾಲರ್ ಎಂದು ಅಂದಾಜು ಮಾಡಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.

ಐಎಂಎಫ್ ೨೦೨೧ ರಲ್ಲಿ ಭಾರತದ ಜಿಡಿಪಿ ಶೇಕಡಾ ೮.೮ ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜು ಮಾಡಿದೆ. ಇದು ಬಾಂಗ್ಲಾದೇಶದ ಶೇಕಡಾ ೪.೪ರ ಎರಡು ಪಟ್ಟಿನಷ್ಟು ಆಗುತ್ತದೆ ಎಂದು ಮೂಲಗಳು ಹೇಳಿವೆ.

ಹಾಲಿ ಕೇಂದ್ರ ಸರ್ಕಾರದ ಅವಧಿಯಲ್ಲಿ ತಲಾ ಜಿಡಿಪಿಯು ೨೦೧೪-೧೫ರಲ್ಲಿ ಇದ್ದ ೮೩,೦೯೧ ರೂಪಾಯಿಗಳಿಂದ  ೨೦೧೯-೨೦ರಲ್ಲಿ  ೧,೦೮,೬೨೦ ರೂಪಾಯಿಗಳಿಗೆ ಏರಿದೆ. ಅಂದರೆ ಇದು ಶೇಕಡಾ ೩೦.೭ ರಷ್ಟು ಹೆಚ್ಚಾಗಿದೆ. ಯುಪಿಎ ೨ ರ ಅವಧಿಯಲ್ಲಿ ಇದು ಶೇಕಡಾ ೧೯.೮ ರಷ್ಟು ಹೆಚ್ಚಾಗಿತ್ತು ಎಂದು ಸರ್ಕಾರದ ಮೂಲಗಳು ವಿವರಿಸಿವೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್) ದೇಶದ ತಲಾ ಒಟ್ಟು ದೇಶೀಯ ಉತ್ಪನ್ನವನ್ನು (ಜಿಡಿಪಿ) ನೆರೆಯ ಬಾಂಗ್ಲಾದೇಶದೊಂದಿಗೆ ಹೋಲಿಸಿದ್ದನ್ನು ಉಲ್ಲೇಖಿಸಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ತರಾಟೆಗೆ ತೆಗೆದುಕೊಂಡಿದ್ದರು.

ಐಎಂಎಫ್-ವರ್ಲ್ಡ್ ಎಕನಾಮಿಕ್ ಔಟ್‌ಲುಕ್‌ನ ಅಂದಾಜನ್ನು ಹಂಚಿಕೊಂಡ ರಾಹುಲ್ ಗಾಂಧಿ, ಮುಂದಿನ ವರ್ಷಗಳಲ್ಲಿ ಬಾಂಗ್ಲಾದೇಶದ ತಲಾ ಜಿಡಿಪಿ ಭಾರತವನ್ನು ಹಿಂದಿಕ್ಕಬಹುದು ಎಂದು ಹೇಳಿದ್ದರು.

ಭಾರತ ಮತ್ತು ಬಾಂಗ್ಲಾದೇಶದ ತಲಾ ಜಿಡಿಪಿ ೨೦೨೦ ಕ್ಕೆ ೧,೮೮೮ ಡಾಲರ್ ಆಗಿರುತ್ತದೆ ಎಂದು ಐಎಂಎಫ್ ಗ್ರಾಫ್ ಅಂದಾಜು ಮಾಡಿತ್ತು.

ರಾಹುಲ್ ಗಾಂಧಿಯವರು ತಮ್ಮ ಟ್ವೀಟ್ ಮೂಲಕ, ಕೇಂದ್ರದಲ್ಲಿ ಆಡಳಿತ ನಡೆಸಿದ ಆರು ವರ್ಷಗಳ ಅವಧಿಯಲ್ಲಿ ಬಿಜೆಪಿಯ ರಾಜಕೀಯ ಕಾರ್ಯಸೂಚಿಯ ಪರಿಣಾಮವಾಗಿ ಭಾರತದ ಜಿಡಿಪಿಯಲ್ಲಿ ಇಳಿಕೆಯಾಗಿದೆ ಎಂದು ಹೇಳಿದ್ದರು.

"ಬಿಜೆಪಿಯ ದ್ವೇಷ ಭರಿತ ಸಾಂಸ್ಕೃತಿಕ ರಾಷ್ಟ್ರೀಯತೆಯ ಆರು ವರ್ಷಗಳ ಘನ ಸಾಧನೆ: ಬಾಂಗ್ಲಾದೇಶ ಭಾರತವನ್ನು ಹಿಂದಿಕ್ಕಲಿದೆ" ಎಂದು ಗಾಂಧಿ ವ್ಯಂಗ್ಯವಾಡಿದ್ದರು.

Advertisement