Saturday, November 8, 2025

ಕಾರ್ತೀಕ ಮಾಸದ ಸಂಕಷ್ಟಿ ಪೂಜಾ

 ಕಾರ್ತೀಕ ಮಾಸದ ಸಂಕಷ್ಟಿ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ನವೆಂಬರ್‌ ೦೮ರ ಶನಿವಾರ ಕಾರ್ತೀಕ ಮಾಸದ ಸಂಕಷ್ಟಿ ಪೂಜೆಯನ್ನು ಶ್ರದ್ಧಾ ಭಕ್ತಿಗಳೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದ ಕೆಲವು ಚಿತ್ರ ಹಾಗೂ ವಿಡಿಯೋಗಳು ಇಲ್ಲಿವೆ.





Friday, November 7, 2025

ರಾಷ್ಟ್ರಗೀತೆ "ವಂದೇ ಮಾತರಂ"ಗೆ ೧೫೦ರ ಸಂಭ್ರಮ

 ರಾಷ್ಟ್ರಗೀತೆ "ವಂದೇ ಮಾತರಂ"ಗೆ ೧೫೦ರ ಸಂಭ್ರಮ

ಸ್ಮರಣಾರ್ಥ ಉತ್ಸವ ಕ್ಕೆ ಪ್ರಧಾನಿ ಚಾಲನೆ

ಭಾರತದ ರಾಷ್ಟ್ರಗೀತೆ ʼವಂದೇ ಮಾತರಂʼನ ೧೫೦ನೇ ವರ್ಷಾಚರಣೆ ಸ್ಮರಣಾರ್ಥ ಉತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ೨೦೨೫ ನವೆಂಬರ್‌ ೭ರ ಶುಕ್ರವಾರ ಚಾಲನೆ ನೀಡಿದರು.

ಸಂಸ್ಕೃತಿ ಸಚಿವಾಲಯವು ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪ್ರಧಾನಿ ಈ ಶುಭ ಸಮಾರಂಭವನ್ನು ಉದ್ಘಾಟಿಸಿದರು.

ಈ ಕಾರ್ಯಕ್ರಮವು ನವೆಂಬರ್ ೭, ೨೦೨೫ ರಿಂದ ನವೆಂಬರ್ ೭, ೨೦೨೬ ರವರೆಗೆ ಒಂದು ವರ್ಷದ ರಾಷ್ಟ್ರವ್ಯಾಪಿ ಸ್ಮರಣೋತ್ಸವಕ್ಕೆ ಔಪಚಾರಿಕವಾಗಿ ನಾಂದಿ ಹಾಡಿತು. ಭಾರತದ ಸ್ವಾತಂತ್ರ್ಯ ಚಳುವಳಿಗೆ ಸ್ಫೂರ್ತಿ ನೀಡಿದ ಮತ್ತು ರಾಷ್ಟ್ರೀಯ ಹೆಮ್ಮೆ ಹಾಗೂ ಏಕತೆಯನ್ನು ಇಂದಿಗೂ ಜಾಗೃತಗೊಳಿಸುತ್ತಿರುವ ಈ ಕಾಲಾತೀತ ಸಂಯೋಜನೆಗೆ ೧೫೦ ವರ್ಷಗಳು ತುಂಬಿದ ಸಂಭ್ರಮ ಇದು.

🌟 ವಂದೇ ಮಾತರಂ ಇತಿಹಾಸ ಮತ್ತು ಮಹತ್ವ 🌟

೨೦೨೫ ವಂದೇ ಮಾತರಂ ಗೀತೆಗೆ ೧೫೦ ವರ್ಷ ತುಂಬಿದ ವರ್ಷ. ಬಂಕಿಮಚಂದ್ರ ಚಟರ್ಜಿ ಅವರು ರಚಿಸಿದ ನಮ್ಮ "ವಂದೇ ಮಾತರಂ" ರಾಷ್ಟ್ರಗೀತೆಯನ್ನು ೧೮೭೫ ರ ನವೆಂಬರ್ ೭ ರ ಅಕ್ಷಯ ನವಮಿಯ ಶುಭ ಸಂದರ್ಭದಲ್ಲಿ ಬರೆಯಲಾಯಿತು ಎಂದು ನಂಬಲಾಗಿದೆ.

ವಂದೇ ಮಾತರಂ ಮೊದಲು ಬಂಕಿಮಚಂದ್ರ ಅವರ ಕಾದಂಬರಿ ಆನಂದಮಠದ ಭಾಗವಾಗಿ 'ಬಂಗದರ್ಶನ್' ಎಂಬ ಸಾಹಿತ್ಯ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಕಾಣಿಸಿಕೊಂಡಿತು ಮತ್ತು ನಂತರ ೧೮೮೨ ರಲ್ಲಿ ಸ್ವತಂತ್ರ ಪುಸ್ತಕವಾಗಿ ಪ್ರಕಟವಾಯಿತು.

ಆ ಅವಧಿಯಲ್ಲಿ ಭಾರತವು ಪ್ರಮುಖ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಬದಲಾವಣೆಗಳಿಗೆ ಒಳಗಾಗುತ್ತಿತ್ತು ಮತ್ತು ರಾಷ್ಟ್ರೀಯ ಅಸ್ಮಿತೆ ಹಾಗೂ ವಸಾಹತುಶಾಹಿ ಆಡಳಿತಕ್ಕೆ ಪ್ರತಿರೋಧದ ಪ್ರಜ್ಞೆ ಬೆಳೆಯುತ್ತಿತ್ತು. ತಾಯಿಭಾರತಿಯನ್ನು ಶಕ್ತಿ, ಸಮೃದ್ಧಿ ಮತ್ತು ದೈವತ್ವದ ಮೂರ್ತರೂಪವಾಗಿ ಆವಾಹಿಸುವ ಈ ಹಾಡು, ಭಾರತದ ಜಾಗೃತಗೊಂಡ ಏಕತೆ ಮತ್ತು ಆತ್ಮಗೌರವದ ಮನೋಭಾವಕ್ಕೆ ಕಾವ್ಯಾತ್ಮಕ ಅಭಿವ್ಯಕ್ತಿ ನೀಡಿತು. ಶೀಘ್ರದಲ್ಲೇ, ಇದು ರಾಷ್ಟ್ರಭಕ್ತಿಯ ಶಾಶ್ವತ ಸಂಕೇತವಾಯಿತು.

ಜನವರಿ ೨೪, ೧೯೫೦ ರಂದು, ಸಂವಿಧಾನ ಸಭೆಯ ಅಧ್ಯಕ್ಷರಾದ ಡಾ. ರಾಜೇಂದ್ರ ಪ್ರಸಾದ್ ಅವರು, "ವಂದೇ ಮಾತರಂ" ಸ್ವಾತಂತ್ರ್ಯ ಹೋರಾಟದಲ್ಲಿ ಐತಿಹಾಸಿಕ ಪಾತ್ರವನ್ನು ವಹಿಸಿದ್ದರಿಂದ, ಅದಕ್ಕೆ ರಾಷ್ಟ್ರಗೀತೆ "ಜನ ಗಣ ಮನ" ದೊಂದಿಗೆ ಸಮಾನ ಗೌರವ ನೀಡಲಾಗುವುದು ಎಂದು ಘೋಷಿಸಿದರು.

🎤 ಸಮಾರಂಭದ ವಿಶೇಷತೆ: ಸಾಮೂಹಿಕ ಗಾಯನ 🎤

ಪ್ರಧಾನಮಂತ್ರಿಗಳ ಸಮ್ಮುಖದಲ್ಲಿ ನಡೆ ಮುಖ್ಯ ಕಾರ್ಯಕ್ರಮದಲ್ಲಿ "ವಂದೇ ಮಾತರಂ"ನ ಸಂಪೂರ್ಣ ಆವೃತ್ತಿಯ ಸಾಮೂಹಿಕ ಗಾಯನ ನಡೆಯಿತು. ದೇಶಾದ್ಯಂತ ಇತರೆಡೆಗಳಲ್ಲೂ ವಂದೇ ಮಾತರಂನ ಸಂಪೂರ್ಣ ಆವೃತ್ತಿಯ ಸಾಮೂಹಿಕ ಗಾಯನ ನಡೆಯಿತು.

ಈ ಅಭಿಯಾನದಲ್ಲಿ ಸಾರ್ವಜನಿಕರು, ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಪೊಲೀಸ್ ಸಿಬ್ಬಂದಿ, ವೈದ್ಯರು, ಶಿಕ್ಷಕರು, ಚಾಲಕರು, ಅಂಗಡಿಯವರು ಮತ್ತು ಸಮಾಜದ ಎಲ್ಲ ವರ್ಗಗಳ ಸಂಬಂಧಿತ ಪಾಲುದಾರರು ಭಾಗವಹಿಸಿದರು.

🏛️ ಕೇಂದ್ರ ಸಚಿವ ಸಂಪುಟದ ಅನುಮೋದನೆ 🏛️

ಈ ಐತಿಹಾಸಿಕ ಮತ್ತು ರಾಷ್ಟ್ರೀಯ ಮಹತ್ವವನ್ನು ಗುರುತಿಸಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಅಕ್ಟೋಬರ್ ೧, ೨೦೨೫ ರಂದು ರಾಷ್ಟ್ರಗೀತೆ ವಂದೇ ಮಾತರಂನ ೧೫೦ ವರ್ಷಗಳ ಆಚರಣೆಗಳಿಗೆ ಅನುಮೋದನೆ ನೀಡಿತ್ತು. ನಂತರ, ಅಕ್ಟೋಬರ್ ೨೪, ೨೦೨೫ ರಂದು ರಾಷ್ಟ್ರೀಯ ಅನುಷ್ಠಾನ ಸಮಿತಿಯು ನವೆಂಬರ್ ೭, ೨೦೨೫ ರಿಂದ ನವೆಂಬರ್ ೭, ೨೦೨೬ ರವರೆಗೆ ಒಂದು ವರ್ಷದ ಸ್ಮರಣೋತ್ಸವಕ್ಕೆ ಅನುಮೋದನೆ ನೀಡಿದೆ.

'ವಂದೇ ಮಾತರಂ'ಗೆ ಗೌರವ ನೀಡಿದ ಪರ್ಯಾಯದ ಪರಿ ಇಲ್ಲಿದೆ: ಚಿತ್ರಗಳನ್ನು ಕ್ಲಿಕ್‌  ಮಾಡಿ ನೋಡಿ:



Thursday, November 6, 2025

ಯಕ್ಷಗಾನ ಅಂದರೇನು?

ಯಕ್ಷಗಾನ ಅಂದರೇನು?


ಯಕ್ಷಗಾನವು ನವರಸ ಭರಿತವಾದ ಒಂದು ಸಂಪೂರ್ಣ ಕಲೆ. ಈ ಕಲೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸಬೇಕು ಎಂಬ ನಿಟ್ಟಿನಲ್ಲಿ ಹಲವಾರು ಕಡೆಗಳಲ್ಲಿ ಯತ್ನಗಳು ನಡೆಯುತ್ತಿವೆ. ತರಗತಿಗಳೂ ನಡೆಯುತ್ತಿವೆ.

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಯಕ್ಷ ಕಲಾ ಕೌಸ್ತುಭದ ವತಿಯಿಂದ ಇಂತಹದೊಂದು ಯತ್ನ ಆರಂಭವಾಗಿದೆ.

ಯಕ್ಷಗುರು ಶ್ರೀ ಉಮೇಶ ರಾಜ್‌ ಮಂದಾರ್ತಿ (ಫೋನ್‌
9663671591) ಅವರು ಯಕ್ಷಗಾನ ಕಲಿಯಬಯಸುವವರಿಗೆ ಯಕ್ಷಗಾನ ಕಲೆಯನ್ನು ಹೇಳಿಕೊಡುತ್ತಿದ್ದಾರೆ. ಮೊದಲ ತರಗತಿಯ ಒಂದು ದೃಶ್ಯ ಇಲ್ಲಿದೆ. 

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಅಥವಾ ಯೂ ಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿ: https://youtu.be/1EhpNPAlZA8


ವಿವರಗಳಿಗೆ:  ಮೇಲಿರುವ ಯಕ್ಷಗಾನ / ತಾಳಮದ್ದಳೆ ಪುಟ ಕ್ಲಿಕ್‌ ಮಾಡಿರಿ.

Wednesday, November 5, 2025

ಕಾರ್ತೀಕ ಸತ್ಯನಾರಾಯಣ ಪೂಜಾ

 ಕಾರ್ತೀಕ ಸತ್ಯನಾರಾಯಣ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಾರ್ತೀಕ ಮಾಸದ ಸತ್ಯನಾರಾಯಣ ಪೂಜೆಯನ್ನು ೨೦೨೫ ನವೆಂಬರ್‌ ೫ರ ಬುಧವಾರ ಶ್ರದ್ಧಾ ಭಕ್ತಿಗಳೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದ ಕೆಲವು ಚಿತ್ರ, ವಿಡಿಯೋಗಳು ಇಲ್ಲಿವೆ.







Monday, November 3, 2025

ತುಳಸೀ ಪೂಜಾ

 ತುಳಸೀ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೫ ನವೆಂಬರ್‌ ೨ರ ಭಾನುವಾರ ತುಳಸೀ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.



Saturday, November 1, 2025

ಹೆಸರಾಂತ ಯಕ್ಷಗಾನ ಅರ್ಥಧಾರಿ ವಿಟ್ಲ ಶಂಭು ಶರ್ಮ ಇನ್ನಿಲ್ಲ

 ಹೆಸರಾಂತ ಯಕ್ಷಗಾನ ಅರ್ಥಧಾರಿ ವಿಟ್ಲ ಶಂಭು ಶರ್ಮ ಇನ್ನಿಲ್ಲ

ಹೆಸರಾಂತ ಯಕ್ಷಗಾನ ಅರ್ಥಧಾರಿ ವಿಟ್ಲ ಶಂಭು ಶರ್ಮ ಅವರು ಇನ್ನಿಲ್ಲ. ೨೦೨೫ರ ನವೆಂಬರ್‌ ೧ರ ಶನಿವಾರ ಅವರು ಸ್ವರ್ಗಸ್ಥರಾದರು.
ಶಂಭು ಶರ್ಮರ ಬಗ್ಗೆ ಯಕ್ಷದೀಪ.ಕಾಮ್‌ ಐದು ವರ್ಷಗಳ ಹಿಂದೆ ಇದೇ ದಿನ ಪ್ರಕಟಿಸಿದ್ದ ಬರಹ ಇಲ್ಲಿದೆ. ಶಂಭುಶರ್ಮದ ಸಂಪೂರ್ಣ ಚಿತ್ರವನ್ನು ಇದು ನೀಡುತ್ತದೆ. ಇದರ ಜೊತೆಗೆ ಶಂಭು ಶರ್ಮರು ಉತ್ತರಕುಮಾರನಾಗಿ ಮಾಡಿದ್ದ ಅರ್ಥಗಾರಿಕೆಯ ತುಣುಕೊಂದು ಇಲ್ಲಿದೆ.
ವಿಟ್ಲ ಶಂಭು ಶರ್ಮ ಎಂಬ ಹೆಸರೇ ಒಂದು ಕಾಲದಲ್ಲಿ ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತಿದ್ದ ಹೆಸರು. ತಾಳಮದ್ದಳೆ ಪ್ರಿಯ ಪ್ರೇಕ್ಷಕರ ದೈನಂದಿನ ಚರ್ಚೆಗಳಲ್ಲಿ ಆಗಾಗ ಪ್ರಸ್ತಾಪವಾಗುತ್ತಿದ್ದ ವ್ಯಕ್ತಿತ್ವ. ನಾನು ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿಯೂ ಮನೆಯಲ್ಲಿ, ಸಮಾರಂಭಗಳಲ್ಲಿ ಶಂಭು ಶರ್ಮ ಎಂಬ ತಾಳಮದ್ದಳೆಯ ಹೊಸ ಪ್ರತಿಭೆಯ ಬಗ್ಗೆ ಮಾತನಾಡುವುದನ್ನು ಕೇಳಿದ್ದೆ. ‘ಒಳ್ಳೆ ಅರ್ಥ ಹೇಳ್ತಾರಂತೆ, ವಾದದಲ್ಲಿ ಎತ್ತಿದ ಕೈ” ಹೀಗೆ ಮಾತನಾಡುವುದು ಕೇಳಿಬರುತ್ತಿತ್ತು.
ಆಮೇಲೆ ಅವರ ಅರ್ಥಗಾರಿಕೆಯನ್ನು ಹಲವಾರು ಬಾರಿ ಕೇಳುವ ಅವಕಾಶವೂ ಬಂತು.  ವರ್ತಮಾನದ ಆಗುಹೋಗುಗಳ ಹೋಲಿಕೆ, ಹಾಸ್ಯಪ್ರವೃತ್ತಿ, ಶೃಂಗಾರಹುಡುಗಾಟಿಕೆಯ ಮನೋಭಾವಇವುಗಳನ್ನೆಲ್ಲಾ ತನ್ನ ಅರ್ಥಗಾರಿಕೆಯಲ್ಲಿ ಬಳಸುವ ಶಂಭು ಶರ್ಮರ ಅರ್ಥಗಾರಿಕೆಯ ಶೈಲಿ  ಜನಪ್ರಿಯತೆಯನ್ನು ಸಾಧಿಸಿತು.  ತಾಳಮದ್ದಳೆ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ ಹೆಸರು. ಮಲ್ಪೆ ಶಂಕರನಾರಾಯಣ ಸಾಮಗ, ಶೇಣಿ ಗೋಪಾಲಕೃಷ್ಣ ಭಟ್, ದೇರಾಜೆ ಸೀತಾರಾಮಯ್ಯ ಮತ್ತು  ಪ್ರಸ್ತುತ ಕೂಟಗಳಲ್ಲಿ ಸಕ್ರಿಯರಾಗಿರುವ ಹಲವಾರು ಈಗಿನ ಕಿರಿಯ ಅರ್ಥಧಾರಿಗಳ ಜೊತೆಗೂ ಈಗಲೂ ಬಹುಬೇಡಿಕೆಯ ಅರ್ಥಧಾರಿ.
ಅವರು ಅತಿ ಕಿರಿಯ ವಯಸ್ಸಿನಲ್ಲಿ ಪ್ರೇಕ್ಷಕನಾಗಿ ಹೋಗಿದ್ದ ತಾಳಮದ್ದಳೆ ಕೂಟವೊಂದರಲ್ಲಿ ಅನಿವಾರ್ಯವಾಗಿ ಅರ್ಥಧಾರಿಯಾಗಿ ಭಾಗವಹಿಸಿದಾಗ ಎದುರು ಪಾತ್ರಧಾರಿಯಿಂದ ಆದ ಮಾತಿನ ದಾಳಿಯಲ್ಲಿ ಸೋತು ಕಣ್ಣೀರಿಳಿಸಿದ ಅವರು ಮುಂದೆ ಹಠದಿಂದ ತಾಳಮದ್ದಳೆ ಅರ್ಥಧಾರಿಯಾಗಿ ಸಾಧನೆಯನ್ನು ಮಾಡಿದರು. 

ವಿಟ್ಲ ಶಂಭುಶರ್ಮ ಹುಟ್ಟಿದ್ದು  13-10-1951ರಲ್ಲಿ ಕುಂಬಳೆ ಸೀಮೆಯ ಎಡನಾಡು ಗ್ರಾಮದ ಶೆಡಂಪಾಡಿ ಎಂಬಲ್ಲಿ.  ತಂದೆಯವರು ದಿ| ಕೃಷ್ಣ ಭಟ್ರು, ತಾಯಿ ಹೇಮಾವತಿ ಅಮ್ಮ. ತಂದೆಯವರು ಹೆಡ್‍ಮಾಸ್ಟ್ರು. ಓದಿದ್ದು ಬೇರೆ ಬೇರೆ ಕಾಲೇಜುಗಳಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ  ಓದಿ 35 ವರ್ಷ ಬೇರೆ ಬೇರೆ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ದುಡಿದು ಎಲ್ಲಿಯೂ ಖಾಯಂ ಆಗದೆ ನಿವೃತ್ತಿ ಹೊಂದಿದರು. 
ಮೊದಲೇ ಹೇಳಿದಂತೆ ಆಕಸ್ಮಿಕ ಸನ್ನಿವೇಶವೊಂದರಲ್ಲಿ ಯಕ್ಷಗಾನ ತಾಳಮದ್ದಳೆ ಕೂಟವೊಂದರಲ್ಲಿ ಅರ್ಥ ಹೇಳಿದ ಶಂಭು ಶರ್ಮ ಮುಂದಕ್ಕೆ ಅದರಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಮೊದಲ ಅನಿರೀಕ್ಷಿತ ಅವಕಾಶದಲ್ಲಿ ಆದ ಮುಖಭಂಗ ಅವರನ್ನು ಮುಂದೆ ಹಠವಾದಿಯನ್ನಾಗಿ ಬೆಳೆಸಿತು. ವಿಟ್ಲಕ್ಕೆ ಬಂದಿದ್ದ ಪ್ರಸಿದ್ಧ ಅರ್ಥಧಾರಿ ದೇರಾಜೆ ಸೀತಾರಾಮಯ್ಯನವರನ್ನು ಭೇಟಿಯಾಗಿ ಅರ್ಥಗಾರಿಕೆ ಕಲಿಸಿಕೊಡುವಂತೆ ಬಿನ್ನವಿಸಿದ್ದರು. ‘‘ಅರ್ಥಗಾರಿಕೆ ಎಂಬುದು ಕಲಿಸಿಕೊಡುವಂಥದ್ದಲ್ಲ. ತಾನಾಗಿ ಕಲಿತು ಸಿದ್ಧಿಸುವಂತದ್ದು’’ ಎಂದು ದೇರಾಜೆಯವರು ಹೇಳಿದರು. ಆದರೂ ಅವರೊಡನೆ ಸಂಭಾಷಣೆಯ ಮತ್ತು ಪಾತ್ರಗಳ ಸೂಕ್ಷ ಮರ್ಮಗಳನ್ನು ಕಲಿತರು.
ಅರ್ಥಧಾರಿಯಾಗಿ ಬೆಳೆಯಲು ಕರ್ಗಲ್ಲು ಸುಬ್ಬಣ್ಣ ಭಟ್ಟರು ಶಂಭು ಶರ್ಮರಿಗೆ ತುಂಬಾ ಪ್ರೋತ್ಸಾಹವನ್ನು ಕೊಟ್ಟರು. ಅದರಂತೆ ವಿಟ್ಲದ ಹಲವಾರು ಕೂಟಗಳಲ್ಲಿ ಹಿರಿಯ ಕಲಾವಿದರಾಗಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು, ಪೆರುವೋಡಿ ನಾರಾಯಣ ಭಟ್ಟರೇ ಮೊದಲಾದವರು ಭಾಗವಹಿಸುತ್ತಿದ್ದುದರಿಂದ ಶಂಭು ಶರ್ಮರಿಗೆ ಅರ್ಥಧಾರಿಯಾಗಿ ಬೆಳೆಯಲು ಅನುಕೂಲವಾಯಿತು. ಆದರೆ ಶಂಭು ಶರ್ಮರಿಗೆ ಉದ್ಯೋಗದ ಕಾರಣದಿಂದ ಅರ್ಥಗಾರಿಕೆಯಲ್ಲಿ ಮತ್ತು ತಾಳಮದ್ದಳೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲು ಆಗುತ್ತಲೇ ಇರಲಿಲ್ಲ. ಅವರು ಉಪನ್ಯಾಸಕ ವೃತ್ತಿಯನ್ನು ಕೈಗೊಂಡಿದ್ದ ಕೆಲವು ಕಾಲೇಜಿನ ಪರಿಸರಗಳಲ್ಲಿ ಯಕ್ಷಗಾನ, ತಾಳಮದ್ದಳೆಗಳು ನಡೆಯುತ್ತಿರಲಿಲ್ಲ. ಹೀಗೆ ಆಗಾಗ ತನ್ನ ವೃತ್ತಿ ಬದುಕಿನ ನಡುವೆ ಯಕ್ಷಗಾನ ಕ್ಷೇತ್ರದಿಂದ ದೂರ ಉಳಿಯಬೇಕಾಗಿ ಬರುತ್ತಿತ್ತು. 
ತುರ್ತುಪರಿಸ್ಥಿತಿಯ ವಿರುದ್ಧದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯಕ್ಷಗಾನದಿಂದ ದೂರವಾಗಿದ್ದರು.  ತುರ್ತುಪರಿಸ್ಥಿತಿಯ ನಂತರ ಗಣಪತಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಗೆ ಸೇರಿದ ನಂತರ ಆ ಸಂದರ್ಭದಲ್ಲಿ ಪುನಃ ಯಕ್ಷಗಾನದಲ್ಲಿ ಬೆಳೆಯುವುದಕ್ಕೆ ಅವಕಾಶ ಆಯಿತು. ಬೆಸೆಂಟ್ ಸಂಜೆ ಕಾಲೇಜು, ಬೆಸೆಂಟ್ ಡೇ ಕಾಲೇಜು- ಹೀಗೆ ಹಲವು ಕಾಲೇಜುಗಳಲ್ಲಿ ದುಡಿಯುತ್ತಾ  ರಾತ್ರಿ ಶ್ರೀಧರ ರಾಯರ ನೇತೃತ್ವದ ಯಕ್ಷಗಾನ ಬಯಲಾಟಗಳಲ್ಲಿ ಭಾಗವಹಿಸುತ್ತಿದ್ದರು. ತಾಳಮದ್ದಳೆಗಳಲ್ಲಿ ಭಾಗವಹಿಸುತ್ತಿದ್ದರು. 
ಯೌವನದ ಪ್ರಾರಂಭದಲ್ಲಿ ಹೀಗೆ ಅವಿಶ್ರಾಂತಿಯಿಂದ ದುಡಿಯುತ್ತಿದ್ದರೂ ಮತ್ತೆ ಪುನಃ ಮೂರ್ನಾಡಿಗೆ ಉದ್ಯೋಗಕ್ಕಾಗಿ ತೆರಳಿದಾಗ ಯಕ್ಷಗಾನದ ಸಂಪರ್ಕ ಮುರಿಯಿತು. ಎರಡು ವರ್ಷದ ನಂತರ ಮೂರ್ನಾಡಿಂದ ಮಂಗಳೂರಿನ ಫಿಶರೀಸ್ ಕಾಲೇಜಿಗೆ ಬಂದಾಗ ಮತ್ತೆ ಯಕ್ಷಗಾನದ ಅವಕಾಶಗಳು ಕೈತುಂಬಾ ಬಂದು ಜನಪ್ರಿಯನಾಗಲು ಸಹಾಯಕವಾಯಿತು. ಆದರೆ ಯಾಕೋ ಮತ್ತೆ ತಡೆ ಬಂತು. ಮುಂದಿನ ಎಂಟು ವರ್ಷಗಳ ಕಾಲ ಸೋಮವಾರಪೇಟೆಯ ಕಾಲೇಜಿನಲ್ಲಿ ಕೆಲಸ ಮಾಡಬೇಕಾಗಿ ಬಂತು. ಹೀಗೆ ಯಕ್ಷಗಾನದ ಸಂಪರ್ಕ ಆಗಾಗ ಕಡಿಯುತ್ತಾ ಇದ್ದುದು ಶಂಭು ಶರ್ಮರ ಕಲಾ ಬದುಕಿನ ದುರಂತವೆಂದೇ ಹೇಳಬೇಕು. ಸೋಮವಾರಪೇಟೆಯಿಂದ ಬಂದ ನಂತರ ವಿಜಯಾ ಕಾಲೇಜು, ಮುಲ್ಕಿ, ಸುಂಕದಕಟ್ಟೆ ಕಾಲೇಜು ಇಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರಥಮ ಹಂತದ ಅರ್ಥಧಾರಿಗಳ ಸಾಲಿಗೆ ಸೇರಿದ್ದರು. 
ವಿಟ್ಲ ಶಂಭು ಶರ್ಮ ಕೇವಲ ತಾಳಮದ್ದಳೆ ಕ್ಷೇತ್ರದಲ್ಲಿ ಅರ್ಥಧಾರಿ ಎಂದು ಹಚ್ಚಿನವರು ಭಾವಿಸಿರಬಹುದು. ಆದರೆ ಅವರು ಯಕ್ಷಗಾನ ವೇಷಧಾರಿಯಾಗಿಯೂ ಕೆಲವು ವರ್ಷಗಳ ತಿರುಗಾಟ ಮಾಡಿದ್ದಾರೆ ಎಂದರೆ ಕೆಲವರಿಗೆ ಆಶ್ಚರ್ಯವಾಗಬಹುದು. ಶ್ರೀಧರ ರಾಯರ ತಂಡದಲ್ಲಿ ಹಾಗೂ ಕರ್ನೂರು ಕೊರಗಪ್ಪ ರೈಗಳ ತಂಡದಲ್ಲಿ ಖಾಯಂ ವೇಷಧಾರಿಯಾಗಿದ್ದರು.  ಮಾತ್ರವಲ್ಲ ಫೆಬ್ರವರಿ 28ಕ್ಕೆ ಕಾಲೇಜಿನ ಪಾಠವನ್ನು ಮುಗಿಸಿದ ಮೇಲೆ, ಬೇರೆ ಬೇರೆ ಮೇಳಗಳಲ್ಲಿ ಅಂದರೆ, ಸುಬ್ರಹ್ಮಣ್ಯ, ಕದ್ರಿಮೇಳ ಮೊದಲಾದುವುಗಳಲ್ಲಿ ಅತಿಥಿ ಕಲಾವಿದನಾಗಿ ಭಾಗವಹಿಸುತ್ತಿದ್ದರು.  ಒಂದು ವರ್ಷ ಉದ್ಯೋಗಕ್ಕೆ ರಜೆ ಹಾಕಿ ಪೂರ್ಣಾವಧಿ ಕಲಾವಿದನಾಗಿ ನಾರಾಯಣ ಕಮ್ತಿಯವರ ಬಪ್ಪನಾಡು ಮೇಳದಲ್ಲಿ ತಿರುಗಾಟ ಮಾಡಿದ್ದರು.
ಆಮೇಲೆ ಅನಿರೀಕ್ಷಿತ ಅಪಘಾತವಾಗಿದ್ದರಿಂದ ಚಿಟ್ಟೆಪಟ್ಟಿ ಕಟ್ಟಲಿಕ್ಕೂ ಕಷ್ಟವಾಗಿ ಯಕ್ಷಗಾನ ತಿರುಗಾಟವನ್ನು ನಿಲ್ಲಿಸಿದ್ದರು. ಆದರೆ ಕೆಲವೊಮ್ಮೆ ಅತಿಥಿ ಕಲಾವಿದನಾಗಿ ಅಪರೂಪಕ್ಕೆ ಒಂದೊಂದು ವೇಷವನ್ನು ಆಗಾಗ ಮಾಡುತ್ತಿದ್ದರು. ಶಂಭು ಶರ್ಮ ತನ್ನ 14ನೆಯ ವಯಸ್ಸಿನಲ್ಲಿ ಸೂರಂಬೈಲಿನಲ್ಲಿ ನಡೆದ ‘ಭೀಷ್ಮಪರ್ವ’ ತಾಳಮದ್ದಳೆ ಕೂಟದಲ್ಲಿ ದೊಡ್ಡ ಸಾಮಗರ (ಮಲ್ಪೆ ಶಂಕರನಾರಾಯಣ ಸಾಮಗ) ಭೀಷ್ಮನ ಪಾತ್ರಕ್ಕೆದುರಾಗಿ ಅಭಿಮನ್ಯುವಾಗಿ ಅರ್ಥ ಹೇಳಿದ್ದರು. ದೊಡ್ಡ ಸಾಮಗರು ಇವರ ಅರ್ಥವನ್ನು ಮೆಚ್ಚಿಕೊಂಡು ಪ್ರಶಂಸಿಸಿದ್ದರು. 
ಯಕ್ಷಗಾನಕ್ಕೆ ಶೈಕ್ಷಣಿಕ ಶಿಸ್ತಿನ ಗ್ರಂಥವನ್ನು ಅವಶ್ಯಕತೆಯ ಬಗ್ಗೆ ಶಂಭು ಶರ್ಮರಲ್ಲಿ ಕೇಳಿದಾಗ “ಅದು ಸಾಧ್ಯ ಇಲ್ಲ ಎಂದೇ ನನ್ನ ಅಭಿಪ್ರಾಯ. ಯಕ್ಷಗಾನ ಎಂದರೆ ಚೌಕಟ್ಟಿನೊಳಗಿರುವ ಸ್ವಾತಂತ್ರ್ಯ. ಇದಕ್ಕೆ ಚೌಕಟ್ಟೂ ಇದೆ, ಸ್ವಾತಂತ್ರ್ಯವೂ ಇದೆ ಎಂದಾಗ ಒಂದು clean syllabus ಸಾಧ್ಯವಿಲ್ಲ. ಒಂದು ರೂಪುರೇಷೆಗಳ outline ಮಾಡಬಹುದೇ ಹೊರತು ಕಡ್ಡಾಯ ಕಾನೂನಿನಲ್ಲಿ ಯಕ್ಷಗಾನವನ್ನು ಒಳಪಡಿಸಲು ಸಾಧ್ಯವೇ ಇಲ್ಲ. ಸ್ವಾತಂತ್ರ್ಯ ಸ್ವಲ್ಪ ಇದ್ದರೂ ಅದು ದುರುಪಯೋಗ ಆಗಬಾರದು ಎಂದು ನಿರ್ದೇಶನಗಳನ್ನು ಕೊಡಬಹುದೇ ಹೊರತು ಕಟ್ಟುನಿಟ್ಟು ಎಂಬುದು ಯಕ್ಷಗಾನದಲ್ಲಿ ಕಷ್ಟ” ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಶಂಭು ಶರ್ಮರಿಗೆ ಸಂಕಷ್ಟದ ಕಾಲವೊಂದಿತ್ತು. ಅಪಘಾತವೊಂದರಲ್ಲಿ ದೈಹಿಕವಾಗಿ ಜರ್ಝರಿತರಾಗಿದ್ದ ಸಮಯದಲ್ಲಿ ಫ್ರಾಕ್ಚರ್ ಆಗಿ ಕೈಯೊಂದನ್ನು ರಾಡ್ ಹಾಕಿ ಕೊರಳಿಗೆ ನೇತಾಡಿಸಿದ್ದರು. ಈ ಸ್ಥಿತಿಯಲ್ಲೇ ಶಂಭು ಶರ್ಮರು ಸುಮಾರು 50 ತಾಳಮದ್ದಳೆಗಳಲ್ಲಿ ಭಾಗವಹಿಸಿದ್ದರು. ಎಲ್ಲರಿಂದಲೂ ಇದು ಸಾಧ್ಯವಾಗುವ ಕಾರ್ಯವಲ್ಲ. ಶಂಭು ಶರ್ಮ ಇವರು ಯಕ್ಷರಂಗ ಪ್ರಶಸ್ತಿ, ಪೆರ್ಲ ಕೃಷ್ಣ ಭಟ್ಟ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆಯ ಪುರಸ್ಕಾರ, ವಿಟ್ಲ ಜೋಷಿ ಪ್ರಶಸ್ತಿ, ಮುಂಬಯಿ ಅಜೆಕಾರು ಪ್ರಶಸ್ತಿಯೇ ಮೊದಲಾದ ಹಲವಾರು ಪ್ರಶಸ್ತಿ, ಸನ್ಮಾನಗಳನ್ನು ಪಡೆದಿದ್ದಾರೆ. ಈಗ ಪತ್ನಿ ಲಕ್ಷ್ಮೀಶರ್ಮ, ಮಗ ಕೃಷ್ಣರಾಜ, ಸೊಸೆ ವಿದ್ಯಾ, ಮೊಮ್ಮಗ ನಿಶ್ಚಯರೊಂದಿಗೆ ಸಂತೃಪ್ತ ಜೀವನವನ್ನು ನಡೆಸಿದ್ದರು.

ಲೇಖನ: ಮನಮೋಹನ್ ವಿ.ಎಸ್. 

ಕೃಪೆ: ಯಕ್ಷದೀಪ.ಕಾಮ್‌ (https://yakshadeepa.com/)

ಏರಲಿ ಹಾರಲಿ ಕನ್ನಡ ಧ್ವಜ

 ಏರಲಿ ಹಾರಲಿ ಕನ್ನಡ ಧ್ವಜ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಶ್ರೀ ಬಾಲಾಜಿ ಕೃಪಾ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ೨೦೨೫ ನವೆಂಬರ್‌ ೧ರ ಶನಿವಾರ ಸರಳವಾಗಿ ೭೦ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಚೆನ್ನೈಯ ಬಿನ್ನಿಮಿಲ್‌ ಮತ್ತು ಮೈಸೂರು ಸಮೀಪದ ನಂಜನಗೂಡಿನಲ್ಲಿ ಡನ್‌ ಫೋರ್ಡ್‌ ಫ್ಯಾಬ್ರಿಕ್ಸ್‌ನಲ್ಲಿ ನಿವೃತ್ತಿಯ ನಂತರ ಸೇವೆ ಸಲ್ಲಿಸಿದ್ದ ಹಿರಿಯ ವ್ಯಕ್ತಿ ಶ್ರೀ ಸಿ. ವರದನ್‌ ಧ್ವಜಾರೋಹಣ ನೆರವೇರಿಸಿದರು. ಸಂಘದ ಅಧ್ಯಕ್ಷ ಶ್ರೀ ರಾಜೇಶ ಕೆ. ಹೆಗಡೆ ಕನ್ನಡ ಭುವನೇಶ್ವರಿಗೆ ಪೂಜೆ ಸಲ್ಲಿಸಿದರು.


ಶ್ರೀ ಸಿ. ವರದನ್‌ ಅವರನ್ನು ಶ್ರೀ ಮುನಿರಾಜು, ಶ್ರೀ ಚೌಡರೆಡ್ಡಿ, ಶ್ರೀ ಉದಯಶಂಕರ್‌ ಸನ್ಮಾನಿಸಿ ಗೌರವಿಸಿದರು.

ಶ್ರೀ ಬಾಲಾಜಿ ಕೃಪಾ ಬಡಾವಣೆ ನಿವಾಸಿಗಳ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷ ಶಿವಪ್ಪ ಶಾಂತಪ್ಪನವರ, ಹಿರಿಯ ಸದಸ್ಯ ಶ್ರೀ ರವಿಚಂದ್ರನ್‌ ಅವರ ಪತ್ನಿ, ಶ್ರೀ ವರದನ್‌ ಅವರ ಪುತ್ರಿ ಹೇಮಾ, ಸಂಘದ ಅಧ್ಯಕ್ಷ ಶ್ರೀ ರಾಜೇಶ ಹೆಗಡೆ ಮಾತನಾಡಿದರು. ಶ್ರೀ ನೆತ್ರಕೆರೆ ಉದಯಶಂಕರ ಭಟ್‌ ಕಾರ್ಯಕ್ರಮ ನಿರ್ವಹಿಸಿದರು.


ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋ ಇಲ್ಲಿದೆ.



Friday, October 31, 2025

ಬಂದರೋ ಬಂದರು ಭಾವ ಬಂದರು..!

 ಬಂದರೋ ಬಂದರು ಭಾವ ಬಂದರು…!

ವಿವರಕ್ಕೆ ಮೇಲಿನ ಚಿತ್ರ ಕ್ಲಿಕ್‌ ಮಾಡಿ ಅಥವಾ ಮೇಲಿನ ʼವಾಟ್‌ ಸುದ್ದಿʼ ಪುಟ ಕ್ಲಿಕ್‌ ಮಾಡಿ.

Advertisement