Showing posts with label Plane. Show all posts
Showing posts with label Plane. Show all posts

Sunday, November 3, 2024

ಪಿಎಂಒ, ವಿಮಾನಗಳಿಗೆ ಹುಸಿಬಾಂಬ್‌ ಬೆದರಿಕೆ ಹಾಕಿದ್ದೇಕೆ ಗೊತ್ತೇ?

 ಪಿಎಂಒ, ವಿಮಾನಗಳಿಗೆ ಹುಸಿಬಾಂಬ್‌ ಬೆದರಿಕೆ ಹಾಕಿದ್ದೇಕೆ ಗೊತ್ತೇ?  

ಬೆಂಗಳೂರು: ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ಹಾಗೂ ವಿವಿಧ ವಿಮಾನಗಳಿಗೆ ಬಾಂಬ್‌ ಬೆದರಿಕೆ ಹಾಕಿ ಸುಮಾರು ೧೦೦ಕ್ಕೂ ಹೆಚ್ಚು ಮಿಂಚಂಚೆಗಳನ್ನು ಕಳುಹಿಸಿದ ವ್ಯಕ್ತಿಯನ್ನು ಮಹಾರಾಷ್ಟ್ರದ ಪೊಲೀಸರು ಬಂಧಿಸಿದ್ದಾರೆ.

ಆತನ ವಿಚಾರಣೆಯಿಂದ ಕುತೂಹಲಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಸುಮಾರು ೧೦೦ಕ್ಕೂ ಹೆಚ್ಚು ಬಾಂಬ್‌ ಬೆದರಿಕೆಗಳ ಮಿಂಚಂಚೆ ಕಳುಹಿಸಿದ್ದ ಈ ವ್ಯಕ್ತಿ ಭಯೋತ್ಪಾದನೆಗೆ ಸಂಬಂಧಿಸಿದ ತನ್ನ ಪುಸ್ತಕ ಪ್ರಕಟಿಸಲು ಕೋರಿದ ನೆರವು ಲಭಿಸದೇ ಇದ್ದುದಕ್ಕಾಗಿ ಈ ಬಾಂಬ್‌ ಬೆದರಿಕೆಯ ಮಿಂಚಂಚೆಗಳನ್ನು ಕಳುಹಿಸಿದ್ದನಂತೆ.

ಮಹಾರಾಷ್ಟ್ರದ ಪೊಲೀಸರಿಂದ ಬಂಧಿತನಾಗಿರುವ ಮಹಾರಾಷ್ಟ್ರದ ಮಾವೋವಾದಿ ನಕ್ಸಲೀಯ ಹಾವಳಿಪೀಡಿತ ಜಿಲ್ಲೆ ಗೊಂಡಿಯಾದ ಈ ವ್ಯಕ್ತಿಯ ಹೆಸರು ಜಗದೀಶ್‌ ಉಯಿಕೆ ಅಂತ. ಈತನ ವಯಸ್ಸು ೩೫ ವರ್ಷ.

ಪೊಲೀಸರ ಪ್ರಕಾರ ಕಳೆದ ಜನವರಿಯಿಂದ ಇಲ್ಲಿಯವರೆಗೆ ಈತ ಪಿಎಂಒ ಮತ್ತು ಇತರ ಅಧಿಕಾರಿಗಳಿಗೆ ಸುಮಾರು ೧೦೦ ಬಾರಿ ಬಾಂಬ್‌ ಬೆದರಿಕೆಯ ಮಿಂಚಂಚೆಗಳನ್ನು ಕಳುಹಿಸಿದ್ದಾನೆ.

ಈತ ಬರೆದ ಪುಸ್ತಕದ ಹೆಸರು ʼಆತಂಕ್‌ ವಾದ್‌ - ಏಕ್‌ ತೂಫಾನಿ ರಾಕ್ಷಸ್‌ʼ (ಭಯೋತ್ಪಾದನೆ- ಒಂದು ರಕ್ಕಸ ಬಿರುಗಾಳಿ). ಈ ಪುಸ್ತಕವನ್ನು ಪ್ರಕಟಿಸಲು ಅನುಮತಿ ಹಾಗೂ ನೆರವು ನೀಡಬೇಕು ಎಂಬುದು ಈತನ ಕೋರಿಕೆಯಾಗಿತ್ತಂತೆ.

ಮೊದ ಮೊದಲಿಗೆ ತನ್ನ ಕೋರಿಕೆ ಮಿಂಚಂಚೆಗಳನ್ನು ಕಳುಹಿಸಿದ ಈತ, ಬಹುಶ: ಅದಕ್ಕೆ ಯಾವುದೇ ಸ್ಪಂದನೆ  ಸಿಗಲಿಲ್ಲ ಎಂಬುದಾಗಿ ಭ್ರಮನಿರಸನಗೊಂಡು ಬಾಂಬ್‌ ಬೆದರಿಕೆಯ ಮಿಂಚಂಚೆಗಳನ್ನು ಕಳುಹಿಸಲು ಆರಂಭಿಸಿದ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ನಾಗಪುರ ಸೈಬರ್‌ ಕ್ರೈಮ್‌ ಡಿಸಿಪಿ ಲೋಹಿತ್‌ ಮತಾನಿ ಬಹಿರಂಗ ಪಡಿಸಿದ್ದಾರೆ.

ನಾಗ್ಪುರದ ಹೆಚ್ಚುವರಿ ಸಿಪಿ, ಸಂಜಯ್ ಪಾಟೀಲ್ ಪ್ರಕಾರ, ಉಯಿಕೆಯ ಪುಸ್ತಕವು ಆನ್‌ಲೈನ್‌ನಲ್ಲಿ ಸುಲಭವಾಗಿ ಲಭ್ಯವಿರುವ ಭಯೋತ್ಪಾದಕ ಸಿದ್ಧಾಂತಗಳ ಮೂಲ ಸಂಕಲನವಾಗಿದೆ ಎಂದು ವರದಿಗಳು ತಿಳಿಸಿವೆ.

Thursday, November 5, 2020

ಚೀನಾದಿಂದ ಭಾರತದ ವಿಶೇಷ ವಿಮಾನ ಹಾರಾಟ ಅಮಾನತು

 ಚೀನಾದಿಂದ ಭಾರತದ ವಿಶೇಷ ವಿಮಾನ  ಹಾರಾಟ ಅಮಾನತು

ಬೀಜಿಂಗ್: ವಂದೇ ಭಾರತ ಮಿಷನ್ ಅಡಿಯಲ್ಲಿ ಚೀನಾಕ್ಕೆ ಬಂದ ಭಾರತೀಯರಲ್ಲಿ ಕೋವಿಡ್-೧೯ ಪತ್ತೆಯಾದ ಹಿನ್ನೆಲೆಯಲ್ಲಿ ಭಾರತದಿಂದ ಚೀನಾಕ್ಕೆ ವಿಶೇಷ ವಿಮಾನಗಳ ಹಾರಾಟವನ್ನು ಚೀನಾವು 2020 ನವೆಂಬರ್ 05ರ ಗುರುವಾರ ಅನಿರ್ದಿಷ್ಟ ಅವಧಿಯವರೆಗೆ ಅಮಾನತುಗೊಳಿಸಿತು.

ಇದರಿಂದಾಗಿ ವಂದೇ ಭಾರತ್ ಮಿಷನ್ ಅಡಿಯಲ್ಲಿ ಭಾರತದಿಂದ ವಿಶೇಷ ವಿಮಾನಗಳ ಮೂಲಕ ಚೀನಾ ಪ್ರವೇಶಿಸುವುದಕ್ಕೆ ಅಡ್ಡಿ ಎದುರಾಗಿದೆ. ಚೀನೀಯರನ್ನು ಹೊರತು ಪಡಿಸಿ ಭಾರತದಿಂದ ಬೇರೆ ಯಾರಿಗೂ ಪ್ರವೇಶಕ್ಕೆ ಅನುಮತಿ ನೀಡದೇ ಇರಲು ಚೀನಾ ನಿರ್ಧರಿಸಿದೆ.

ಕಳೆದ ವಾರ ವಂದೇ ಭಾರತ್ ಮಿಷನ್ ಅಡಿಯಲ್ಲಿ ಚೀನಾ ಪ್ರವೇಶಿಸಿರುವವರ ಪೈಕಿ ಹಲವು ಜನರಿಗೆ ಕೋವಿಡ್-೧೯ ದೃಢಪಟ್ಟಿದ್ದು, ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ಅನಿರ್ದಿಷ್ಟಾವದಿವರೆಗೆ ಪ್ರವೇಶಕ್ಕೆ ಚೀನಾ ನಿರ್ಬಂಧ ಹೇರಿದೆ. ಭಾರತ ಮತ್ತು ಚೀನಾ ನಡುವೆ ಖಾಸಗಿ ವಿಮಾನಗಳ ಹಾರಾಟ ಪುನಾರಂಭಗೊಂಡಿಲ್ಲ.  ಆದರೆ, ಚೀನಾದ ವಿವಿಧ ನಗರಗಳಿಗೆ ವಂದೇ ಭಾರತ್ ಮಿಷನ್ ಅಡಿಯಲ್ಲಿಏರ್ ಇಂಡಿಯಾವಿಶೇಷ ವಿಮಾನಗಳ ಹಾರಾಟ ನಡೆಸಲಾಗುತ್ತಿದೆ.

ವಾಸ್ತವ್ಯ ಕುರಿತು ಸೂಕ್ತ ಅನುಮತಿ ದಾಖಲೆಗಳನ್ನು ಹೊಂದಿರುವ ಎಲ್ಲ ವಿದೇಶಿಯರಿಗೆ ಚೀನಾ ಪ್ರವೇಶಿಸಲು ಬೀಜಿಂಗ್ ಆಡಳಿತವು ಸೆಪ್ಟೆಂಬರ್ ೨೮ರಂದು ಅವಕಾಶ ನೀಡಿತ್ತು. ಜಗತ್ತಿನಾದ್ಯಂತ ಕೊರೊನಾ ಸಾಂಕ್ರಾಮಿಕ ವ್ಯಾಪಿಸುತ್ತಿದ್ದಂತೆ ಮಾರ್ಚ್ ತಿಂಗಳಿನಿಂದ ವಿದೇಶಿಯರ ಪ್ರವೇಶವನ್ನು ಚೀನಾ ರದ್ದು ಪಡಿಸಿತ್ತು.

ಬೀಜಿಂಗಿನಲ್ಲಿ ಇರುವ ಅಧಿಕಾರಿಗಳ ಪ್ರಕಾರ, ,೫೦೦ಕ್ಕೂ ಹೆಚ್ಚು ಭಾರತೀಯರು ಚೀನಾಕ್ಕೆ ಮರಳಲು ನೋಂದಾಯಿಸಿಕೊಂಡಿದ್ದರು. ಆದರೆ, ಚೀನಾದ ಹೊಸ ಪ್ರಕಟಣೆಯಿಂದಾಗಿ ಅವರ ಪ್ರಯಾಣ ಅನಿಶ್ಚಿತಗೊಂಡಿದೆ. ’ಸಾಂಕ್ರಾಮಿಕ ನಿಯಂತ್ರಿಸುವ ನಿಟ್ಟಿನಲ್ಲಿ ಇದೊಂದು ಸೂಕ್ತ ನಿರ್ಧಾರವಾಗಿದೆಎಂದು ಚೀನಾದ ವಿದೇಶಾಂಗ ಸಚಿವಾಲಯವು ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ನವೆಂಬರ್ ೧೩ರಿಂದ ಪ್ರತಿ ವಾರ ಚೀನಾಕ್ಕೆ ಪ್ರಯಾಣಿಸಲು ನಿಗದಿಯಾಗಿದ್ದ ವಂದೇ ಭಾರತ್ ಮಿಷನ್ನಿನ ನಾಲ್ಕು ವಿಮಾನಗಳ ವೇಳಾ ಪಟ್ಟಿ ಇದೀಗ ಮರುನಿಗದಿ ಪಡಿಸಬೇಕಾಗುತ್ತದೆ.

ಚೀನಾದ ರಾಜತಾಂತ್ರಿಕ, ಸೇವೆಗಳು, ಸರ್ಕಾರದಿಂದ ನೀಡಲಾಗಿರುವ ವೀಸಾ ಹಾಗೂ ಸಿ ವೀಸಾಗಳನ್ನು ಹೊಂದಿರುವ ವಿದೇಶಿಯರ ಪ್ರಯಾಣಕ್ಕೆ ಯಾವುದೇ ಅಡಚಣೆಯಾಗುವುದಿಲ್ಲಎಂದು ಚೀನಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ತುರ್ತು ಕಾರಣಗಳಿಂದಾಗಿ ಚೀನಾ ಪ್ರವೇಶಿಸಲು ಬಯಸುವ ವಿದೇಶಿಯರು ಭಾರತದಲ್ಲಿನ ಚೀನಾ ರಾಯಭಾರ ಕಚೇರಿ ಅಥವಾ ಕಾನ್ಸುಲೇಟ್‌ಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಿಸಿರುವುದಾಗಿ ಸುದ್ದಿ ಸಂಸ್ಥೆ ವರದಿ ತಿಳಿಸಿದೆ.

ಕಳೆದ ಶುಕ್ರವಾರ ನವದೆಹಲಿಯಿಂದ ಚೀನಾದ ವುಹಾನಿನಲ್ಲಿ ಇಳಿದ ವಿಶೇಷ ವಿಮಾನದಲ್ಲಿದ್ದವರ ಪೈಕಿ ೨೩ ಮಂದಿಗೆ ಕೋವಿಡ್-೧೯ ದೃಢಪಟ್ಟಿದೆ. ಅವರಲ್ಲಿ ೧೯ ಮಂದಿಗೆ ರೋಗ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂದು ವರದಿ ತಿಳಿಸಿದೆ.

ಬ್ರಿಟನ್, ಬೆಲ್ಜಿಯಂ ಹಾಗೂ ಫಿಲಿಪ್ಪೀನ್ಸಿನ ವಿದೇಶಿಯರ ಪ್ರವೇಶಕ್ಕೂ ಚೀನಾ ನಿರ್ಬಂಧ ವಿಧಿಸಿದೆ. ಅಮೆರಿಕ, ಫ್ರಾನ್ಸ್ ಹಾಗೂ ಜರ್ಮನಿಯಿಂದ ಪ್ರಯಾಣಿಸುವವರು ಹೆಚ್ಚುವರಿ ಆರೋಗ್ಯ ತಪಾಸಣೆ ವರದಿಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದೆ.

Saturday, August 8, 2020

ಕೋಯಿಕ್ಕೋಡ್ ವಿಮಾನ ನಿಲ್ದಾಣ: ತಜ್ಞರ ಎಚ್ಚರಿಕೆ ನಿರ್ಲಕ್ಷಿಸಿದ್ದ ಡಿಜಿಸಿಎ

 ಕೋಯಿಕ್ಕೋಡ್ ವಿಮಾನ ನಿಲ್ದಾಣ: ತಜ್ಞರ ಎಚ್ಚರಿಕೆ ನಿರ್ಲಕ್ಷಿಸಿದ್ದ ಡಿಜಿಸಿಎ

ನವದೆಹಲಿ:  ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಗಾಳಿ ಮಳೆ ಪರಿಸ್ಥಿತಿಯಲ್ಲಿ ರನ್‌ವೇ ೧೦ ರಲ್ಲಿ ಇಳಿಯುವ ವಿಮಾನಗಳು ವಿಮಾನಗಳಲ್ಲಿರುವ ಜನರ ಜೀವಕ್ಕೆ ಅಪಾಯವನ್ನುಂಟುಮಾಡಬಲ್ಲವು ಎಂಬುದಾಗಿ ನಾಗರಿಕ ವಿಮಾನಯಾನ ತಜ್ಞರು ೨೦೧೧ ರಲ್ಲಿ ಎಚ್ಚರಿಸಿದ್ದರು. ಆದರೆ ಅದು ಡಿಜಿಸಿಎಯ ಕಿವುಡು ಕಿವಿಗಳಿಗೆ ಬಿದ್ದಿರಲಿಲ್ಲ ಎಂದು ಸುದ್ದಿ ಮೂಲಗಳು  2020 ಆಗಸ್ಟ್ 08ರ ಶನಿವಾರ ತಿಳಿಸಿದವು.

ಕ್ಯಾಪ್ಟನ್ ಮೋಹನ್ ರಂಗನಾಥನ್ ಅವರು ಜೂನ್ ೨೦೧೧ ರಲ್ಲಿ ಅಂದಿನ ನಾಗರಿಕ ವಿಮಾನಯಾನ ಕಾರ್ಯದರ್ಶಿ ನಾಸಿಮ್ ಜೈದಿ ಅವರಿಗೆ ನೀಡಿದ ಸಂವಹನದಲ್ಲಿ ರನ್ ವೇ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ರಂಗನಾಥನ್ ಆಗ ನಾಗರಿಕ ವಿಮಾನಯಾನ ಸುರಕ್ಷತಾ ಸಲಹಾ ಸಮಿತಿಯ (ಸಿಎಎಸ್‌ಎಸಿ) ಕಾರ್ಯಾಚರಣೆಯ ಗುಂಪಿನ ಸದಸ್ಯರಾಗಿದ್ದರು.

ಗಾಳಿಮಳೆಯ ಪರಿಸ್ಥಿತಿಯಲ್ಲಿ ವಿಮಾನವನ್ನು ಕೋಯಿಕ್ಕೋಡಿನಿಂದ ಕೊಯಮತ್ತೂರಿಗೆ ತಿರುಗಿಸಬೇಕಾಗಿತ್ತು. ವಿಮಾನ ನಿಲ್ದಾಣ ದೊಡ್ಡ ವಿಮಾನಗಳು ಬೋಯಿಂಗ್ ೭೩೭ ಹೊರತಾಗಿ ದೊಡ್ಡ ಗಾತ್ರದ ವಿಮಾನಗಳನ್ನು ಇಂತಹ ಸಂದರ್ಭಗಳಲ್ಲಿ ಇಳಿಸಲು ಸೂಕ್ತವಾದದ್ದೇ ಅಲ್ಲ ಎಂದು ರಂಗನಾಥನ್ ಹೇಳಿದರು.

ತಾವು ಇದ್ದಾಗಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಯಾವುದೇ ವ್ಯತ್ಯಾಸವಾಗಿಲ್ಲ. ೨೦೧೧ರಲ್ಲಿ ತಾವು ನೀಡಿದ್ದ ಎಚ್ಚರಿಕೆ ಸಂದರ್ಭಕ್ಕೂ ಪ್ರಸ್ತುತವೇ ಎಂದು ನುಡಿದ ಅವರು ಟೇಬಲ್ ಟಾಪ್ ರನ್ ವೇಗಳು ಇರುವ ಎಲ್ಲ ವಿಮಾನ ನಿಲ್ದಾಣಗಳೂ ಮಾದರಿಯ ಅಪಾಯದಿಂದ ಹೊರತಾಗಿರುವುದಿಲ್ಲ ಎಂದು ಹೇಳಿದರು.

೨೪೦ ಮೀಟರ್  ರೇಸಾವನ್ನು ತಕ್ಷಣ ಪರಿಚಯಿಸಬೇಕು ಮತ್ತು ವಿಮಾನ ಕಾರ್ಯಾಚರಣೆಯನ್ನು ಸುರಕ್ಷಿತವಾಗಿಸಲು ರನ್ ವೇ ಉದ್ದವನ್ನು ಕಡಿಮೆ ಮಾಡಬೇಕು ಎಂದು ಅವರು ಸೂಚಿಸಿದ್ದರು.

"ವಾಯುಯಾನ ಅನಾಹುತಗಳನ್ನು ತಪ್ಪಿಸಲು ಎರಡೂ ಬದಿಯಲ್ಲಿ ೧೫೦ ಮೀ ಇರಬೇಕು" ಎಂದು ಕ್ಯಾಪ್ಟನ್ ರಂಗನಾಥನ್ ಸೂಚಿಸಿದ್ದರು. “ಆದರೆ ಅಲ್ಲಿ ಸಾಕಷ್ಟು ಪ್ರದೇಶವಿಲ್ಲ. ಇದು ಯಾವಾಗಲೂ ಅಪಾಯಕಾರಿ ಎಂದು ಅವರು ಹೇಳಿದ್ದರು.

ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸಂಭವಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಅಪಘಾತದ ಹಿನ್ನೆಲೆಯಲ್ಲಿ ಇಬ್ಬರು ಪೈಲಟ್‌ಗಳು ಸೇರಿದಂತೆ ಕನಿಷ್ಠ ೧೮ ಜನರು ಸಾವನ್ನಪ್ಪಿದ್ದಾರೆ. ದುಬೈಯಿಂದ  ಬರುತ್ತಿದ್ದ ಬೋಯಿಂಗ್ ೭೩೭-೮೦೦ ವಿಮಾನವು ಭಾರಿ ಮಳೆಯಲ್ಲಿ ಇಳಿಯುವಾಗ ರನ್‌ವೇಯಿಂದ ಜಾರಿ ಕಣಿವೆಗೆ ಉರುಳಿ ಇಬ್ಬಾಗಗೊಂಡಿತ್ತು.

"... ಸಿಬ್ಬಂದಿ ಆರ್ದ್ರ ಮತ್ತು ಗಾಳಿಮಳೆ ಪರಿಸ್ಥಿತಿಗಳಲ್ಲಿ ಇಳಿಯುವುದನ್ನು ಒಪ್ಪಿಕೊಂಡರೆ, ಅವರ ಎಎಲ್ ಎಆರ್ (ಅಪ್ರೋಚ್ ಅಂಡ್ ಲ್ಯಾಂಡಿಂಗ್ ಆಕ್ಸಿಡೆಂಟ್ ರಿಡಕ್ಷನ್) ಪರಿಕಲ್ಪನೆಯು ತುಂಬಾ ಕಳಪೆಯಾಗಿದೆ ಎಂದರ್ಥ" ಎಂದು ಅವರು ಸಂವಹನದಲ್ಲಿ ತಿಳಿಸಿದ್ದರು.

೨೦೧೦ ರಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಅಪಘಾತದ ಹಿನ್ನೆಲೆಯಲ್ಲಿ ಸಂವಹನವನ್ನು ಅವರು ನೀಡಿದ್ದರು. ಮಂಗಳೂರು ವಿಮಾನ ಅಪಘಾತದಲ್ಲಿ ೧೫೮ ಜನರು ಸಾವನ್ನಪ್ಪಿದ್ದರು.

ಬಾಲದತ್ತ ಗಾಳಿಮಳೆ ಬೀಸುವ ಪರಿಸ್ಥಿತಿಗಳಲ್ಲಿ ರನ್‌ವೇ ೧೦ ರಲ್ಲಿ ಇಳಿಯುವ ಎಲ್ಲಾ ವಿಮಾನಗಳು ವಿಮಾನದಲ್ಲಿರುವ ಎಲ್ಲರ ಜೀವಕ್ಕೆ ಅಪಾಯವನ್ನುಂಟುಮಾಡುತ್ತವೆ ಎಂದು ರಂಗನಾಥನ್ ಹೇಳಿದರು.

ಇಂತಹ ಪರಿಸ್ಥಿತಿಯಲ್ಲಿ, ಇಳಿಯುವ ಸಮಯದಲ್ಲಿ ವಿಮಾನದ ಇಳಿಯುವಿಕೆ ಮೇಲೆ ಪರಿಣಾಮವಾಗಬಹುದು. ಕೇರಳದ ಕೋಯಿಕ್ಕೋಡ್ ವಿಮಾನ ನಿಲ್ದಾಣವು ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಅಡಿಯಲ್ಲಿ ಬರುತ್ತದೆ. ವಿಮಾನ ನಿಲ್ದಾಣವು ಮಂಗಳೂರಿನಂತೆಯೇ ಟೇಬಲ್ ಟಾಪ್ ರನ್ ವೇ ಹೊಂದಿದೆ.

ಸಂವಹನದ ನಂತರ ಸಂಬಂಧಪಟ್ಟ ಅಧಿಕಾರಿಗಳು ಕೈಗೊಂಡ ಕ್ರಮಗಳ ಬಗ್ಗೆ ವಿವರಗಳು ಪತ್ತೆಯಾಗಿಲ್ಲ.

ದುರಂತದಲ್ಲಿ ೧೮ ಜನರು ಮೃತರಾಗಿದ್ದು, ಮಲಪ್ಪುರಂ ಮತ್ತು ಕೋಯಿಕ್ಕೋಡ್ ಜಿಲ್ಲೆಗಳ ವಿವಿಧ ಆಸ್ಪತ್ರೆಗಳಲ್ಲಿ ೧೪೯ ಜರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶನಿವಾರ ಜಿಲ್ಲೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಹೇಳಿದರು. ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸಹ ಸಭೆಯಲ್ಲಿ ಭಾಗವಹಿಸಿದ್ದರು.

"ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ರಾಜ್ಯ ಸರ್ಕಾರ ೧೦ ಲಕ್ಷ ರೂ.ಗಳ ಪರಿಹಾರವನ್ನು ನೀಡಲಿದೆ. ಚಿಕಿತ್ಸೆಯಲ್ಲಿರುವವರ ವೈದ್ಯಕೀಯ ವೆಚ್ಚವನ್ನು ರಾಜ್ಯ ಸರ್ಕಾರ ವಹಿಸಿಕೊಳ್ಳಲಿದೆ" ಎಂದು ವಿಜಯನ್ ಹೇಳಿದರು. ಸಾವನ್ನಪ್ಪಿದ ೧೮ ಜನರಲ್ಲಿ ೧೪ ವಯಸ್ಕರು ಮತ್ತು ನಾಲ್ವರು ಮಕ್ಕಳು ಎಂದು ಅವರು ಹೇಳಿದರು.

"೧೪ ವಯಸ್ಕರಲ್ಲಿ, ಏಳು ಪುರುಷರು ಮತ್ತು ಇತರರು ಸ್ತ್ರೀಯರು. ಪ್ರಸ್ತುತ, ೧೪೯ ಜನರು ಮಲಪ್ಪುರಂ ಮತ್ತು ಕೋಯಿಕ್ಕೋಡಿನ ವಿವಿಧ ಆಸ್ಪತ್ರೆಗಳಲ್ಲಿದ್ದಾರೆ, ಅವರಲ್ಲಿ ೨೩ ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಮೊದಲು ೨೩ ಮಂದಿಯನ್ನು ಆರಂಭಿಕ ವೈದ್ಯಕೀಯ ನೆರವು ನೀಡಿದ ನಂತರ ಬಿಡುಗಡೆ ಮಾಡಲಾಗಿದೆ" ಎಂದು ಅವರು ಹೇಳಿದರು.

ಎಲ್ಲ ಪ್ರಯಾಣಿಕರನ್ನು ಕ್ವಾರಂಟೈನಿಗೆ  ಒಳಪಡಿಸಲಾಗುವುದು. ಸಾಮಾನ್ಯ ಜೀವನಕ್ಕೆ ಮರಳಲು ಅವರಿಗೆ ಅಗತ್ಯ ಬೆಂಬಲ ನೀಡುವ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದು ಮುಖ್ಯಮಂತ್ರಿ ನುಡಿದರು.

 

Advertisement