Showing posts with label Flash News. Show all posts
Showing posts with label Flash News. Show all posts

Tuesday, October 22, 2024

ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡ ಕುಸಿದು 3 ಸಾವು

 ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡ ಕುಸಿದು 3 ಸಾವು

ಬೆಂಗಳೂರು: ಬೆಂಗಳೂರಿನ ಪೂರ್ವ ಭಾಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡವೊಂದು 2024 ಅಕ್ಟೋಬರ್‌ 22 ಮಂಗಳವಾರ ಕುಸಿದು ಮೂವರು ಸಾವನ್ನಪ್ಪಿದ್ದು, ಇನ್ನೂ ಹಲವರು ಕುಸಿದ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ಹೆಣ್ಣೂರು ಸಮೀಪದ ಹೊರಮಾವು ಅಗರದ ಅಂಜನಾದ್ರಿ ಲೇಔಟ್‌ನಲ್ಲಿ ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡ ಕುಸಿದಿದೆ. ಕಟ್ಟಡದಲ್ಲಿ ಒಟ್ಟು 15 ರಿಂದ 17 ಮಂದಿ ಇದ್ದರೆನ್ನಲಾಗಿದೆ.

ಮೃತರಲ್ಲಿ ಒಬ್ಬನನ್ನು ಬಿಹಾರ ಮೂಲದ ಹನುಮಾನ್ (25) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಓರ್ವ ಮಹಿಳೆ ಸೇರಿದಂತೆ 9 ಮಂದಿಯನ್ನು ರಕ್ಷಿಸಲಾಗಿದೆ.


ಮಾಲೀಕ ಮುನಿ ರೆಡ್ಡಿ ತಲೆಮರೆಸಿಕೊಂಡಿದ್ದು, ಪತ್ತೆಯಾಗಿಲ್ಲ.

ಎನ್‌ಡಿಆರ್‌ಎಫ್ ಸೇರಿದಂತೆ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿದ್ದು, ಪರಿಹಾರ ಕಾರ್ಯಗಳು ನಡೆಯುತ್ತಿವೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

Monday, August 12, 2024

ಚಂದನದಲ್ಲಿ ಫೋನ್‌ - ಇನ್ ಕಾರ್ಯಕ್ರಮ

 ಚಂದನದಲ್ಲಿ ಫೋನ್‌ -‌ ಇನ್ ಕಾರ್ಯಕ್ರಮ

ಬೆಂಗಳೂರು: ದೂರದರ್ಶನ ಚಂದನದಲ್ಲಿ ನಾಳೆ, 2024 ಆಗಸ್ಟ್‌ 13ರ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಆತ್ಮ ನಿರ್ಭರ ಗ್ರಾಮ ಪಂಚಾಯತಿಗೆ 21ನೇ ಶತಮಾನದ ತಂತ್ರಜ್ಞಾನʼ ಕುರಿತು ʼಹಲೋ ಗೆಳೆಯರೇ – ನೇರ ಫೋನ್‌ -ಇನ್‌ ಕಾರ್ಯಕ್ರಮ ನಡೆಯಲಿದೆ.

ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಸಂಸ್ಥಾಪಕ ಡಾ. ಶಂಕರ ಪ್ರಸಾದ್‌ ಅವರು ಪ್ರಶ್ನೆಗಳಿಗೆ ನೇರ ಉತ್ತರ ನೀಡಲಿದ್ದಾರೆ.

ಆಸಕ್ತರು ದೂರವಾಣಿ ಸಂಖ್ಯೆ 080 23542599/699 ಮೂಲಕ ತಮ್ಮ ಪ್ರಶ್ನೆಗಳನ್ನು ಕೇಳಬಹುದು ಎಂದು ಸಂಸ್ಥೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಕಾರ್ಯಕ್ರಮದ ನೇರ ವೀಕ್ಷಣೆಗೆ ಕೆಳಗಿನ ಕೊಂಡಿ/ ಲಿಂಕ್‌ ಕ್ಲಿಕ್‌ ಮಾಡಿರಿ:  https://www.youtube.com/watch?v=eQEXOtDxBfk

Tuesday, June 4, 2024

ಇವರೆಲ್ಲ ಭಾರತದ ಈವರೆಗಿನ ಪ್ರಧಾನಿಗಳು, ಮುಂದಿನ ಪ್ರಧಾನಿ …… ?

 ಇವರೆಲ್ಲ ಭಾರತದ ಈವರೆಗಿನ ಪ್ರಧಾನಿಗಳು, ಮುಂದಿನ ಪ್ರಧಾನಿ …… ?

ವದಹಲಿ: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಲೋಕಸಭೆಯ 543 ಸ್ಥಾನಗಳಿಗೆ ನಡೆದಿರುವ ಚುನಾವಣೆಯ ಫಲಿತಾಂಶಗಳು ದೇಶವನ್ನು ಕುತೂಹಲಕಾರೀ ಘಟ್ಟಕ್ಕೆ ತಂದು ನಿಲ್ಲಿಸಿವೆ. ಸುಮಾರು 292 ಸ್ಥಾನಗಳ ಸನಿಹದಲ್ಲಿ ಬಂದು ನಿಂತಿರುವ ಬಿಜೆಪಿ ನೇತೃತ್ವದ ಎನ್‌ ಡಿಎ ಮೈತ್ರಿಕೂಟವು ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚನೆಯ ಘೋಷಣೆ ಮಾಡಿದೆ.

233 ಸ್ಥಾನಗಳ ಅಂಚಿನಲ್ಲಿ ಇರುವ ಕಾಂಗ್ರೆಸ್‌ ನೇತೃತ್ವದ ‌ʼಇಂಡಿʼ ಐಎನ್‌ ಡಿಐ ಮೈತ್ರಿಕೂಟದೊಂದಿಗೆ ಇಡೀ ದಿನ ಹಾವು -ಏಣಿ ಆಟ ನಡೆಸಿದರೂ, ಅಂತಿಮವಾಗಿ ನಿತೀಶ್‌ ಕುಮಾರ್‌ ನೇತೃತ್ವದ ಜನತಾ ದಳ (ಯು) ಮತ್ತು ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಕ್ಷ (ಟಿಡಿಪಿ) ಎನ್‌ ಡಿಎ ಜೊತೆಗೇ ನಿಲ್ಲುವುದಾಗಿ ಸ್ಪಷ್ಟನೆ ನೀಡುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿಯಾಗಿ ಮುಂದುವರೆಯುವ ಘೋಷಣೆಯನ್ನು ಬಿಜೆಪಿ ಮಾಡಿದೆ.

ರಾತ್ರಿ ದೆಹಲಿಯ ಪಕ್ಷ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮೂರನೇ ಬಾರಿಗೆ ಆಡಳಿತ ನಡೆಸಲು ಬಿಜೆಪಿ ಹಾಗೂ ಎನ್‌ ಡಿಎ ಮೈತ್ರಿಕೂಟಕ್ಕೆ ಆಶೀರ್ವಾದ ಮಾಡಿದ್ದಕ್ಕಾಗಿ ದೇಶದ ಜನತೆಗೆ ವಂದನೆಗಳನ್ನು ಸಲ್ಲಿಸಿದ ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಅಗತ್ಯ ಬಹುಮತಕ್ಕಿಂತ ಹೆಚ್ಚಿನ ಸ್ಥಾನ ಗಳಿಸಿರುವ ಎನ್‌ ಡಿಎ ಸರ್ಕಾರ ರಚಿಸುವುದು ಎಂಬುದಾಗಿ ಸ್ಪಷ್ಟ ಪಡಿಸಿದರು.

(ವಿವರಗಳಿಗೆ ಪಕ್ಕದಲ್ಲಿರುವ ಪ್ರಧಾನಿ ಮೋದಿ ಚಿತ್ರ ಕ್ಲಿಕ್‌ ಮಾಡಿ)

ಸುಮಾರು 240 ಸ್ಥಾನಗಳಲ್ಲಿ ಗೆಲುವು/ ಮುನ್ನಡೆ ದಾಖಲಿಸುವುದರೊಂದಿಗೆ ಲೋಕಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ), ಎನ್‌ ಡಿಎ ಮೈತ್ರಿಕೂಟಕ್ಕೆ ಬಹುಮತ (292 ಸ್ಥಾನ) ಲಭಿಸಿದ್ದು ಸರ್ಕಾರ ರಚಿಸುವುದು ಖಚಿತ ಎಂಬುದಾಗಿ ಇದಕ್ಕೂ ಮುನ್ನವೇ ಘೋಷಿಸಿತು. ಇಂಡಿ ಮೈತ್ರಿಕೂಟದಿಂದ ಬಿಹಾರದ ಮುಖ್ಯಮಂತ್ರಿ ಉಪಪ್ರಧಾನಿ ಹುದ್ದೆಯ ಆಮಿಷ ಬಂದಿದ್ದರೂ ಜನತಾಳ (ಯು) ಎನ್‌ ಡಿಎ ಮೈತ್ರಿಕೂಟದಲ್ಲೇ ಮುಂದುವರೆಯುವುದಾಗಿ ಪಕ್ಷದ ನಾಯಕ ಕೆ.ಸಿ. ತ್ಯಾಗಿ ಪ್ರಕಟಿಸಿದರು.

ಚುನಾವಣೆಯಲ್ಲಿ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಬಿಜೆಪಿಯು ಭಾರೀ ಹಿನ್ನಡೆ ಅನುಭವಿಸಿದ್ದು ದಿಟವಾಗುತ್ತಿದ್ದಂತೆಯೇ ಎನ್‌ ಡಿಎಯ ಅಂಗಪಕ್ಷವಾದ ತೆಲುಗುದೇಶಂ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಸಂಪರ್ಕಿಸಲು ಯತ್ನಿಸಿದ ಇಂಡಿ ಮೈತ್ರಿಕೂಟವು ಆಂದ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಕೊಡುಗೆ ನೀಡುವ ಘೋಷಣೆ ಮಾಡಿದ್ದರೂ, ತೆಲುಗು ದೇಶಂ ಪಕ್ಷ ಕೂಡಾ ಎನ್‌ ಡಿಎ ಮೈತ್ರಿಕೂಟದಲ್ಲೇ ಮುಂದುವರೆಯುವುದಾಗಿ ಘೋಷಿಸಿತು.

ಈ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಎನ್‌ ಡಿಎ ಮೈತ್ರಿಕೂಟವು ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡುವುದು ಖಚಿತವಾಗುವಂತೆ ಕಂಡು ಬರುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯಲ್ಲಿ ಜಯಭೇರಿ ಭಾರಿಸಿದ್ದರೆ, ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌  ಕೂಡಾ ಜಯಭೇರಿ ಭಾರಿಸಿದ್ದಾರೆ. ಆದರೆ ಅವರ ಸಂಪುಟದ ಸದಸ್ಯರಾದ ಸ್ಮೃತಿ ಇರಾನಿ, ರಾಜೀವ ಚಂದ್ರಶೇಖರ್‌  ಸೋಲುಂಡಿದ್ದಾರೆ.

ಕ್ಲಿಕ್‌ ಮಾಡಿ ನೋಡಿ- ತಪ್ಪದೇ ಓದಿ. ಇ-ಬುಕ್‌ ಕೂಡಾ ಲಭಿಸುತ್ತದೆ.

ಬಿಜೆಪಿಯು ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದು, ರಾಜಸ್ಥಾನ, ಮಧ್ಯಪ್ರದೇಶ, ಅಸ್ಸಾಂ, ಒಡಿಶಾ, ಬಿಹಾರ,ಗುಜರಾತ್‌, ಕರ್ನಾಟಕ, ಆಂದ್ರ ಪ್ರದೇಶ, ತೆಲಂಗಾಣ ಮತ್ತಿತರ ಕಡೆ ಉತ್ತಮ ಸಾಧನೆ ಮಾಡಿದೆ. ಬಿಜೆಪಿಗೆ ಹಿನ್ನಡೆಯಾಗಿರುವ ರಾಜ್ಯಗಳಲ್ಲಿ ಇಂಡಿ ಮೈತ್ರಿಕೂಟದ ಕಾಂಗ್ರೆಸ್‌, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್‌, ಡಿಎಂಕೆ ಮುನ್ನಡೆ ಸಾಧಿಸಿವೆ. ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಕಾಂಗ್ರೆಸ್, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತ್ವತ್ವದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮುನ್ನಡೆ/ ಗೆಲುವು ದಾಖಲಿಸಿವೆ.

ಆಂಧ್ರಪ್ರದೇಶ ವಿಧಾನಸಭೆಗೆ ನಡೆದಿರುವ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ, ಬಿಜೆಪಿ ಮತ್ತು ಜನಸೇನಾ ಪಕ್ಷಗಳನ್ನು ಒಳಗೊಂಡ ಎನ್‌ ಡಿಎ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದ್ದು, ಒಡಿಶಾ ವಿಧಾನಸಭೆಯಲ್ಲೂ ಬಿಜೆಪಿ ಜಯಭೇರಿ ದಾಖಲಿಸಿದೆ. ಈ ಎರಡೂ ರಾಜ್ಯಗಳಲ್ಲಿ ಎನ್‌ ಡಿಎ ಸರ್ಕಾರ ರಚನೆಯಾಗಲಿದೆ. ಆಂಧ್ರಪ್ರದೇಶದಲ್ಲಿ ಈ ವಾರದಲ್ಲೇ ಸರ್ಕಾರ ರಚಿಸುವುದಾಗಿ ತೆಲುಗುದೇಶಂ ಪಕ್ಷ (ಟಿಡಿಪಿ) ಘೋಷಿಸಿದೆ.

ಈ ಮಧ್ಯೆ, ಜೆಡಿಯುನ ನಿತೀಶ್‌ ಕುಮಾರ್‌ ಅವರಿಗೆ ಉಪ ಪ್ರಧಾನಿ ಹುದ್ದೆ ನೀಡುವುದಾಗಿ ಹೇಳಿರುವ ಇಂಡಿ ಮೈತ್ರಿಕೂಟಕ್ಕೆ ತನ್ನ ಪ್ರಧಾನಿ ಯಾರು ಎಂಬುದೇ ಸ್ಪಷ್ಟವಾಗಿಲ್ಲ. ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ ಬಣವು ರಾಹುಲ್‌ ಗಾಂಧಿ ಪ್ರಧಾನಿಯಾಗಲಿ ಎಂಬುದಾಗಿ ಹೇಳಿದರೆ, ಸಮಾಜವಾದಿ ಪಕ್ಷವು ಅಖಿಲೇಶ  ಯಾದವ್‌ ಪ್ರಧಾನಿಯಾಗಬೇಕು ಎಂದು ಬಯಸಿದೆ. ಎನ್‌ ಸಿಪಿಯ ನಾಯಕ ಶರದ್‌ ಪವಾರ್‌ ಅವರು ಟಿಡಿಪಿಯ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಸಂಪರ್ಕಿಸಿದ್ದಕ್ಕೆ ಅಸಮಾಧಾನ ವ್ಯಕ್ತ ಪಡಿಸಿರುವ ಜಮ್ಮು  ಕಾಶ್ಮೀರದ ಒಮರ್‌ ಅಬ್ದುಲ್ಲ ʼಚುನಾವಣಾ ಪೂರ್ವ ಮೈತ್ರಿಯ ಪ್ರಕಾರವೇ ಮುಂದುವರೆಯೋಣ, ಕುದುರೆ ವ್ಯಾಪಾರ ಬೇಡʼ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ, ಕೇಂದ್ರದಲ್ಲಿ ಸರ್ಕಾರ ರಚನೆಯ ಕಸರತ್ತು ಆರಂಭವಾಗಿದ್ದು, ಒಂದು ವಾರದ ಒಳಗೆ ʼಭಾರತವನ್ನು ಆಳುವವವರು ಯಾರು?ʼ ಎಂಬ ಪ್ರಶ್ನೆಗೆ ಉತ್ತರ ಲಭಿಸಲಿದೆ.

ಚುನಾವಣೆಯ ನಿಖರ ಫಲಿತಾಂಶಕ್ಕಾಗಿ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:


Thursday, May 30, 2024

ಕೇರಳಕ್ಕೆ ಬಂತು ಮುಂಗಾರು, ಭಾರೀ ಮಳೆ, ಯೆಲ್ಲೋ ಅಲರ್ಟ್‌

 ಕೇರಳಕ್ಕೆ ಬಂತು ಮುಂಗಾರು, ಭಾರೀ ಮಳೆ, ಯೆಲ್ಲೋ ಅಲರ್ಟ್‌

ತಿರುವನಂತಪುರಂ: ಕೇರಳ ಮತ್ತು ಈಶಾನ್ಯ ಭಾರತದ ಬಹುತೇಕ ಭಾಗಗಳಿಗೆ  ಈದಿನ (30 ಮೇ 2024) ನೈಋತ್ಯ ಮುಂಗಾರು ಆಗಮಿಸಿದೆ, ಕೇರಳದಲ್ಲಿ ಮತ್ತು ಮಣಿಪುರದಲ್ಲಿ ಭಾರೀ ಮಳೆ ಆರಂಭವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಟಿಸಿದೆ.

ಮೇ 31 ರ ವೇಳೆಗೆ ಕೇರಳದ ಮೇಲೆ ಮುಂಗಾರು ಪ್ರಾರಂಭವಾಗಲಿದೆ ಎಂದು ಹವಾಮಾನ ಇಲಾಖೆ ಇದಕ್ಕೆ ಮುನ್ನ ಮೊದಲು ಘೋಷಿಸಿತ್ತು. ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಭಾರೀ ಮಳೆಯಾಗುತ್ತಿದೆ, ಇದರ ಪರಿಣಾಮವಾಗಿ ಮೇ ತಿಂಗಳಲ್ಲಿ ಹೆಚ್ಚುವರಿ ಮಳೆಯಾಗಿದೆ ಎಂದು ಹವಾಮಾನ ಕಚೇರಿಯ ಅಂಕಿಅಂಶಗಳು ಹೇಳಿವೆ.

ಕೇರಳಕ್ಕೆ ಸಾಮಾನ್ಯವಾಗಿ ನೈಋತ್ಯ ಮುಂಗಾರು ಜೂನ್‌ 1ರಂದು ಪ್ರಾರಂಭವಾಗುತ್ತದೆ. ಹಾಗೆಯೇ ಈಶಾನ್ಯ ಭಾರತದ  ಅರುಣಾಚಲ ಪ್ರದೇಶ, ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯ, ಮಿಜೋರಾಂ, ಮಣಿಪುರ ಮತ್ತು ಅಸ್ಸಾಂನಲ್ಲಿ ಜೂನ್ 5 ರಂದು ಮುಂಗಾರು ಆಗಮಿಸುವುದು ವಾಡಿಕೆಯಾಗಿದೆ..

ಮುಂಗಾರು ಆಗಮನದ ಹಿನ್ನೆಲೆಯಲ್ಲಿ ಐಎಂಡಿಯು ತನ್ನ ಮುನ್ಸೂಚನೆಯನ್ನು ಪರಿಷ್ಕರಿಸಿದೆ ಮತ್ತು ಗುರುವಾರ ಕೇರಳದ 14 ಜಿಲ್ಲೆಗಳಿಗೆ ಹಳದಿ ಎಚ್ಚರಿಕೆಯನ್ನು ನೀಡಿದೆ. ಹಳದಿ ಎಚ್ಚರಿಕೆಯ ಪ್ರಕಾರ 64.5 ಎಂಎಂನಿಂದ 115.5 ಎಂಎಂವರೆಗೆ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ.

ಯಾವ ಯಾವ ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ?

ಮೇ 31: ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್

ಜೂನ್ 1: ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು, ಕಾಸರಗೋಡು

ಜೂನ್ 2: ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು, ಕಾಸರಗೋಡು.

Friday, October 28, 2022

ಮೊಳಗಿತು ಕೋಟಿ ಕಂಠ ಗಾಯನ

 ಮೊಳಗಿತು ಕೋಟಿ ಕಂಠ ಗಾಯನ

ಬೆಂಗಳೂರು: ಕರ್ನಾಟಕದ ಉದ್ದಕ್ಕೂ ೨೦೨೨ ಅಕ್ಟೋಬರ್‌ ೨೮ರ ಶುಕ್ರವಾರ ೬೭ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ “ನನ್ನ ನಾಡು ನನ್ನ ಹಾಡು- ಕೋಟಿ ಕಂಠʼ ಗಾಯನ ಮೊಳಗಿತು.

ನೆಲದಲ್ಲಷ್ಟೇ ಅಲ್ಲ ಜಲದಲ್ಲೂ ದೋಣಿಗಳಲ್ಲಿ, ಆಕಾಶದಲ್ಲಿ ವಿಮಾನದಲ್ಲಿ ಕೂಡಾ ʼಕನ್ನಡ ಡಿಂಡಿಮʼ ಭಾರಿಸಿತು.

ಬೆಂಗಳೂರಿನಲ್ಲಿ ವಿಧಾನ ಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಲಭಿಸಿತು.

ಈ ಸಂದರ್ಭದಲ್ಲಿ ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು  ಬೆಂಗಳೂರಿನಲ್ಲಿ ತೆಗೆದ ಛಾಯಾಚಿತ್ರಗಳ ವಿಡಿಯೋ ಇಲ್ಲಿದೆ.  ಕ್ಲಿಕ್‌ ಮಾಡಿ ನೋಡಿ:


ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಕರ್ನಾಟಕದಾದ್ಯಂತ ಕನ್ನಡದ ಹಾಡು ಮೊಳಗಿದ ಪರಿಯನ್ನು ವೀಕ್ಷಿಸಿ:


Monday, October 24, 2022

ವಿಶ್ವ ವಿಜೇತ ದೇಶಕ್ಕೆ ಈಗ ಭಾರತದ ನಾಯಕ!

 ವಿಶ್ವ ವಿಜೇತ ದೇಶಕ್ಕೆ ಈಗ ಭಾರತದ ನಾಯಕ!

ಅದೊಂದು ಕಾಲವಿತ್ತು. ಭಾರತಕ್ಕೆ ಸ್ವಾತಂತ್ರ್ಯ ನೀಡಲು ಮೀನಾ ಮೇಷ ಎಣಿಸುತ್ತಿದ್ದ ಕಾಲ. ಆಗ ಬ್ರಿಟಿಷರು ಹೇಳಿದ್ದ ಮಾತು ಈಗಲೂ ಹಿರಿತಲೆಗಳ ನಾಲಿಗೆಯಲ್ಲಿ ಬರುತ್ತಿರುತ್ತದೆ:” ಭಾರತೀಯರು ಸ್ವಾತಂತ್ರ್ಯಕ್ಕೆ ಲಾಯಕ್ಕಲ್ಲ. ಸಿಕ್ಕಿದರೂ ಅವರು ಸ್ವಾತಂತ್ರ್ಯ ಉಳಿಸಿಕೊಳ್ಳಲಾರರು… ಅವರು ಆಡಳಿತ ನಡೆಸಲು ಸಾಧ್ಯವಿಲ್ಲ” ಅಂತ.

ಭಾರತ ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಭಾರತದ ಹಿರಿಮೆ ವಿಶ್ವದ ಮೂಲೆ ಮೂಲೆಗೂ ಪಸರಿಸುತ್ತಿದೆ.

ಆದರೆ, ವಿಶ್ವವನ್ನೇ ಆಳಿದ್ದ ದೇಶ. ಇಂಗ್ಲೆಂಡ್…‌ ಈಗಿನ ಯುನೈಟೆಡ್‌ ಕಿಂಗ್‌ ಡಮ್‌ʼ (ಯುಕೆ) ಆರ್ಥಿಕವಾಗಿ ನಲುಗುತ್ತಿದೆ. ಗೆದ್ದಿದ್ದ ಪ್ರಧಾನಿ ಲಿಜ್‌ ಟ್ರಸ್‌ ಕೇವಲ ೪೫ ದಿನ ಆಡಳಿತ ನಡೆಸಿ ನಿರ್ಗಮಿಸಿದ್ದಾರೆ. ಅವರ ಸ್ಥಾನಕ್ಕೆ ೨೦೨೨ರ ಅಕ್ಟೋಬರ್‌ ೨೪ರ ಸೋಮವಾರ ಭಾರತದ ಅದರಲ್ಲೂ ಕರ್ನಾಟಕದ ಅಳಿಯ ಯುವ ರಿಷಿ ಸುನಕ್ ಅವರು ಬ್ರಿಟನ್ ದೇಶದ ಮುಂದಿನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಸುಮಾರು 200 ವರ್ಷಗಳಿಗೂ ಹೆಚ್ಚು ಭಾರತವನ್ನು ಆಡಳಿತ ಮಾಡಿದ್ದ ಯುನೈಟೆಡ್‌ ಕಿಂಗ್‌ ಡಮ್‌ ಗೆ ಇದೇ ಮೊದಲ ಬಾರಿಗೆ ಭಾರತೀಯ ಮೂಲದ ವ್ಯಕ್ತಿ ಆಡಳಿತ ಮುನ್ನಡೆಸುವಂತಹ ಸ್ಥಿತಿ ಬಂದಿದೆ.

ರಿಷಿ ಸುನಕ್ ಅವರು ಇನ್ಫೋಸಿಸ್ ಕಂಪನಿ ಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರ ಅಳಿಯ.. ಬ್ರಿಟನ್‌ನಲ್ಲಿ ಪ್ರಬಲ ಯುವ ರಾಜಕಾರಣಿಯಾಗಿ ಬೆಳದಿರುವ ರಿಷಿ ಸುನಕ್ ಬದಲಾದ ಪರಿಸ್ಥಿತಿಯಲ್ಲಿ ಯುಕೆಯ ಉನ್ನತ ಹುದ್ದೆ ಪಡೆಯುವಂತಾಗಿದೆ.

ಕೇವಲ 45 ದಿನ ಆಡಳಿತ ನಡೆಸಿ ನಿರ್ಗಮಿಸಿದ ಲಿಜ್ ಟ್ರಸ್ ಅವರಿಂದ ರಾಜಕೀಯ ಬಿಕ್ಕಟ್ಟು ಏರ್ಪಟ್ಟಿತ್ತು ಯುಕೆಯ ಟೋರಿ ನಾಯಕತ್ವಕ್ಕಾಗಿ ಒಟ್ಟು ಬಲದ ಅರ್ಧಕ್ಕೂ ಹೆಚ್ಚು ಸಂಸದರು ರಿಷಿ ಸುನಕ್ ಅವರು ಪ್ರಧಾನಿಯಾಗಲು ಹಸಿರು ನಿಶಾನೆ ತೋರಿಸಿದ್ದಾರೆ.

ಪ್ರತಿಸ್ಫರ್ಧಿಯಾಗಬಹುದಾಗಿದ್ದ ಸಂಸದೆ ಪೆನ್ನಿ ಮೊರ್ಡಾಂಟ್ ಅವರಿಗೆ ಕೇವಲ 28 ಸಂಸದರು ಆಸಕ್ತಿ ತೋರಿದರು. ಇದರಿಂದ ಸುನಕ್ ಹಾದಿ ಸುಗಮವಾಯಿತು. 198 ಸಂಸದರು ರಿಷಿ ಪರವಾಗಿದ್ದಾರೆ. ಇದಕ್ಕೂ ಮುನ್ನ ಪ್ರತಿಸ್ಪರ್ಧಿಯಾಗಬಯಸಿದ್ದ ಬೋರಿಸ್‌ ಜಾನ್ಸನ್‌ ಪುನರಾಯ್ಕೆ ಬಯಸುವುದಿಲ್ಲ ಎಂದು ಹೇಳಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

ಸೋಮವಾರ ಸಂಜೆಯ ವೇಳೆಗೆ ರಿಷಿ ಸುನಕ್‌ ಅವರು ಕನ್ಸರ್ವೇಟಿವ್‌ ಪಕ್ಷದ ನಾಯಕನಾಗಿ ಆಯ್ಕೆಯಾದ ಪ್ರಕಟಣೆ ಹೊರಬಿದ್ದಿತು. ಸುನಕ್‌ ಅವರು ಅಕ್ಟೋಬರ್‌ ೨೮ರಂದು ಪ್ರಮಾಣವಚನ ಸ್ವೀಕರಿಸಬಹುದು ಎಂದು ವರದಿಗಳು ತಿಳಿಸಿವೆ.

ವಿಶ್ವವನ್ನೇ ಆಳಿದ, ಭಾರತೀಯರು ತಮ್ಮನ್ನು ತಾವು ಆಳಿಕೊಳ್ಳಲು ನಾಲಾಯಕ್‌ ಜನ ಎಂದು ಹೇಳಿದ ದೇಶಕ್ಕೆ ಇದೀಗ ಆಡಳಿತ ನಡೆಸಲು ಭಾರತೀಯರೇ ಬರಬೇಕಾಯಿತು. ಇದಕ್ಕೇ ಹೇಳುವುದು: ಕಾಲಾಯ ತಸ್ಮೈ ನಮಃ.

Tuesday, October 11, 2022

ಭವ್ಯ ಮಹಾಕಾಳ ಲೋಕ: ರಾಷ್ಟ್ರಾರ್ಪಣೆ

 ಭವ್ಯ ಮಹಾಕಾಳ ಲೋಕ: ರಾಷ್ಟ್ರಾರ್ಪಣೆ

ಉಜ್ಜಯಿನಿ: ಪ್ರಧಾನಿ ನರೇಂದ್ರ ಮೋದಿ ಅವರು 2022 ಅಕ್ಟೋಬರ್‌ 11ರ ಮಂಗಳವಾರ ಮಧ್ಯಪ್ರದೇಶದ ಉಜ್ಜಯಿನಿ ನಗರದಲ್ಲಿ 'ಶ್ರೀ ಮಹಾಕಾ ಲೋಕʼದ (ಕಾರಿಡಾರ್) ಮೊದಲ ಹಂತವನ್ನು ರಾಷ್ಟ್ರಾರ್ಪಣೆ ಮಾಡಿದರು. 856 ಕೋಟಿ ರೂಪಾಯಿ ವೆಚ್ಚದ ಮಹಾಕಾಳೇಶ್ವರ ದೇವಸ್ಥಾನದ ಕಾರಿಡಾರ್ ಅಭಿವೃದ್ಧಿ ಯೋಜನೆಯ ಭಾಗವಾಗಿ ಈ ಭವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ‘ಮಹಾಕಾ ಲೋಕ’ದ ಮೊದಲ ಹಂತವನ್ನು 316 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಮಹಾಕಾಳ ಲೋಕ ಅಂದರೆ ಮಹಾಕಾಳ ಕಾರಿಡಾರ್‌ 900 ಮೀಟರ್‌ ಉದ್ದವಿದ್ದು, ರುದ್ರಸಾಗರ ಸರೋವರದ ಸುತ್ತ ಹರಡಿಕೊಂಡಿದೆ.


900 ಮೀಟರ್‌ಗಿಂತಲೂ ಹೆಚ್ಚು ಉದ್ದದ 'ಮಹಾಕಾ ಲೋಕ' ಕಾರಿಡಾರ್, ದೇಶದಲ್ಲೇ ಅತಿ ದೊಡ್ಡ ಕಾರಿಡಾರುಗಳಲ್ಲಿ ಒಂದಾಗಿದೆ. ಹಳೆಯ ರುದ್ರಸಾಗರ ಸರೋವರದ ಸುತ್ತಲೂ ಪಸರಿಸಿರುವ  ಇದನ್ನು ಪ್ರಸಿದ್ಧ ಮಹಾಕಾಳೇಶ್ವರ ದೇವಾಲಯದ ಸುತ್ತ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ಪುನರುಜ್ಜೀವನಗೊಳಿಸಲಾಗಿದೆ. ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಮಹಾಕಾಳೇಶ್ವರ ಲಿಂಗವು ಭಾರೀ ಸಂಖ್ಯೆಯ ಭಕ್ತರನ್ನು ಸೆಳೆಯುತ್ತದೆ.

ಎರಡು ಭವ್ಯ ಮಹಾದ್ವಾರಗಳು:  ನಂದಿ ದ್ವಾರ ಮತ್ತು ಪಿನಾಕಿ ದ್ವಾರ ಈ ಎರಡು ಮಹಾದ್ವಾರಗಳನ್ನು ಅನತಿ ದೂರದಲ್ಲಿ ಕಾರಿಡಾರ್‌ ಆರಂಭವಾಗುವ ಸ್ಥಳದ ಸಮೀಪದಲ್ಲೇ ನಿರ್ಮಿಸಲಾಗಿದೆ.  ಸ್ವಲ್ಪ ದೂರದಿಂದ ಬೇರ್ಪಟ್ಟು, ಕಾರಿಡಾರ್‌ನ ಪ್ರಾರಂಭದ ಸಮೀಪದಲ್ಲಿ ನಿರ್ಮಿಸಲಾಗಿದೆ, ವು ದೇವಾಲಯದ ಪ್ರವೇಶದ್ವಾರಕ್ಕೆ ಸಾಗುತ್ತವೆ. ದಾರಿಯುದ್ದಕ್ಕೂ ರಮಣೀಯ ನೋಟವನ್ನು ನೀಡುತ್ತವೆ.

ಭವ್ಯ ಮಹಾಕಾ ಲೋಕ

ಸಂಕೀರ್ಣವಾದ ಕೆತ್ತಿದ ಮರಳುಗಲ್ಲುಗಳಿಂದ ನಿರ್ಮಿಸಲ್ಪಟ್ಟಿರುವ 108 ಅಲಂಕೃತ ಕಂಬಗಳ ಭವ್ಯವಾದ ಸ್ತಂಭಗಳು, ಚಿಮ್ಮುವ ಕಾರಂಜಿಗಳು ಮತ್ತು 'ಶಿವ ಪುರಾಣ'ದ ಕಥೆಗಳನ್ನು ಚಿತ್ರಿಸುವ 50 ಕ್ಕೂ ಹೆಚ್ಚು ಚಲಿಸುವ ಭಿತ್ತಿಚಿತ್ರಗಳ ಫಲಕವು ಉಜ್ಜಯಿನಿಯ ಮಹಾಕಾ ಲೋಕವನ್ನು ಸ್ಮರಣೀಯ  ಅನುಭವವನ್ನಾಗಿ ಮಾಡುತ್ತವೆ.

ಪಾದಚಾರಿ ಮಾರ್ಗವು 108 ಭಿತ್ತಿಚಿತ್ರಗಳು ಮತ್ತು ಶಿವನಿಗೆ ಸಂಬಂಧಿಸಿದ ಕಥೆಗಳನ್ನು ಚಿತ್ರಿಸುವ 93 ಪ್ರತಿಮೆಗಳನ್ನು ಒಳಗೊಂಡಿದೆ. ಉದಾಹರಣೆಗೆ ಶಿವ ವಿವಾಹ, ತ್ರಿಪುರಾಸುರ ವಧೆ, ಶಿವ ಪುರಾಣ ಮತ್ತು ಶಿವ ತಾಂಡ ಸ್ವರೂಪ. ಈ ಪಾದಚಾರಿ ಮಾರ್ಗದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ 128 ಸ್ಥಳಗಳಿವೆ. ಇಲ್ಲಿ ತಿಂಡಿ ತಿನಸು, ಮತ್ತು ಶಾಪಿಂಗ್ ಸ್ಥಳಗಳೂ, ಹೂ ಮಾರುವವರು, ಕರಕುಶಲ ಮಳಿಗೆಗಳು ಇತ್ಯಾದಿಗಳಿವೆ.

ವಿಡಿಯೋ ವೀಕ್ಷಿಸಲು ಕೆಳಗೆ ಕ್ಲಿಕ್‌ ಮಾಡಿರಿ 

ದೇಗುಲ ವಿಸ್ತಾರ

ಯೋಜನೆಯಡಿಯಲ್ಲಿ, ಸುಮಾರು 2.82 ಹೆಕ್ಟೇರಿನಷ್ಟಿರುವ ಮಹಾಕಾಳೇಶ್ವರ ದೇವಾಲಯದ ಆವರಣವನ್ನು 47 ಹೆಕ್ಟೇರುಗಳಿಗೆ ಹೆಚ್ಚಿಸಲಾಗುತ್ತಿದೆ.  ಉಜ್ಜಯಿನಿ ಜಿಲ್ಲಾಡಳಿತವು ಎರಡು ಹಂತಗಳಲ್ಲಿ ಇದನ್ನು ಅಭಿವೃದ್ಧಿಪಡಿಸುತ್ತದೆ. ಇದರಲ್ಲಿ 17 ಹೆಕ್ಟೇರ್ ರುದ್ರಸಾಗರ ಕೆರೆ ಕೂಡಾ ಸೇರಲಿದೆ. ಈ ಯೋಜನೆಯಿಂದ ನಗರಕ್ಕೆ ಆಗಮಿಸುವ ಯಾತ್ರಿಕರ ಸಂಖ್ಯೆ  ಈಗಿನ 1.50 ಕೋಟಿಯಿಂದ ಸುಮಾರು ಮೂರು ಕೋಟಿಗೆ ಹೆಚ್ಚುವ ನಿರೀಕ್ಷೆಯಿದೆ.

2ನೇ ಹಂತದಲ್ಲಿ ಏನೇನು?


ಯೋಜನೆಯ ಎರಡನೇ ಹಂತಕ್ಕಾಗಿ  310.22 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ, ಇದು ದೇವಾಲಯದ ಪೂರ್ವ ಮತ್ತು ಉತ್ತರದ ಮುಂಭಾಗಗಳ ವಿಸ್ತರಣೆಯನ್ನು ಒಳಗೊಂಡಿದೆ. ಉಜ್ಜಯಿನಿ ನಗರದ ವಿವಿಧ ಪ್ರದೇಶಗಳಾದ ಮಹಾರಾಜವಾಡ, ಮಹಲ್ ಗೇಟ್, ಹರಿ ಫಾಟಕ್ ಸೇತುವೆ, ರಾಮಘಾಟ್ ಮುಂಭಾಗ ಮತ್ತು ಬೇಗಂ ಬಾಗ್ ರಸ್ತೆಗಳ ಅಭಿವೃದ್ಧಿಯನ್ನು ಸಹ ಇದು ಒಳಗೊಂಡಿದೆ. ಮಹಾರಾಜವಾಡದಲ್ಲಿನ ಕಟ್ಟಡಗಳನ್ನು ಮರುಅಭಿವೃದ್ಧಿಪಡಿಸಲಾಗುತ್ತದೆ ಮತ್ತು ಮಹಾಕಾ ದೇವಾಲಯದ ಆವರಣಕ್ಕೆ ಸಂಪರ್ಕಿಸಲಾಗುತ್ತದೆ, ಆದರೆ ಪಾರಂಪರಿಕ ಧರ್ಮಶಾಲಾ ಮತ್ತು ಕುಂಭ ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗುತ್ತದೆ.

Sunday, October 9, 2022

ಗುಜರಾತಿನ ಮೊಧೇರಾ ದೇಶದ ಮೊದಲ 24X7 ಸೌರ ಗ್ರಾಮ

 ಗುಜರಾತಿನ ಮೊಧೇರಾ ದೇಶದ ಮೊದಲ 24X7 ಸೌರ ಗ್ರಾಮ

 ಮೊಧೇರಾ (ಗುಜರಾತ್): ಸೂರ್ಯ ದೇಗುಲದ ಮೂಲಕ ವಿಶ್ವ ಪ್ರಸಿದ್ಧವಾಗಿರುವ ಗುಜರಾತಿನ ಮೊಧೇರಾ ಈಗ ದೇಶದ ಮೊದಲ 24×7 ಸೌರಶಕ್ತಿ ಚಾಲಿತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈದಿನ 2022 ಅಕ್ಟೋಬರ್ 9 ರ ಭಾನುವಾರ ಮೊಧೇರಾವನ್ನು ದಿನದ ಇಪ್ಪತ್ತನಾಲ್ಕೂ ಗಂಟೆಗಳ ಕಾಲ ಬ್ಯಾಟರಿ ಇಂಧನ ದಾಸ್ತಾನು ವ್ಯವಸ್ಥೆಯ (ಬಿಇಎಸ್ಎಸ್) ಬೆಂಬಲ ಹೊಂದಿದ ʼದೇಶದ ಪ್ರಪ್ರಥಮ  ಸೌರಶಕ್ತಿ ಚಾಲಿತ ಗ್ರಾಮʼ ಎಂದು ಘೋಷಿಸಿದರು.

ಭಾರತ ಸರ್ಕಾರ ಮತ್ತು ಗುಜರಾತ್ ಸರ್ಕಾರವು ಸಮಗ್ರ ಸೌರಶಕ್ತಿಯನ್ನು ಪ್ರಾರಂಭಿಸಿದೆ. ಸೂರ್ಯ ಮಂದಿರದಿಂದ ಕೇವಲ 6 ಕಿಮೀ ದೂರದಲ್ಲಿರುವ ಸುಜನಪುರ, ಮೆಹ್ಸಾನಾದಲ್ಲಿ ಬ್ಯಾಟರಿ ಇಂಧನ ಶೇಖರಣಾ ವ್ಯವಸ್ಥೆಯೊಂದಿಗೆ ಯೋಜನೆ ರೂಪುಗೊಂಡಿದೆ. ಮೊಧೇರಾದಲ್ಲಿ 24×7 ಸೌರಶಕ್ತಿ ಆಧಾರಿತ ವಿದ್ಯುತ್  ಒದಗಿಸುವ ಸಲುವಾಗಿಯೇ ಮೊಧೇರಾ ಸೂರ್ಯ ದೇಗುಲ ಮತ್ತು ಗ್ರಾಮವನ್ನು ಸಂಪೂರ್ಣ ʼಸೌರ ಶಕ್ತಿಮಯʼವಾಗಿ ಮಾಡುವ ಉಪಕ್ರಮ ಕೈಗೊಳ್ಳಲಾಗಿದೆ.

ಇಂಧನ ಯೋಜನೆಯ ಪಯಣ ಹೇಗಿತ್ತು ಗೊತ್ತಾ?

ಯೋಜನೆಯ ಅಭಿವೃದ್ಧಿಗಾಗಿ ಗುಜರಾತ್ ಸರ್ಕಾರವು 12 ಹೆಕ್ಟೇರ್ ಭೂಮಿಯನ್ನು ಮಂಜೂರು ಮಾಡಿತು. ಅದೇ ಸಮಯದಲ್ಲಿ, ಭಾರತ ಸರ್ಕಾರ ಮತ್ತು ಗುಜರಾತ್ ಸರ್ಕಾರವು ಯೋಜನೆಗೆ 50:50 ಆಧಾರದ ಮೇಲೆ ಎರಡು ಹಂತಗಳಲ್ಲಿ 80.66 ಕೋಟಿ ರೂಪಾಯಿಗಳನ್ನು ಜಂಟಿಯಾಗಿ ಖರ್ಚು ಮಾಡಿದವು. ಅಂದರೆ ಹಂತ-1 ರಲ್ಲಿ 69 ಕೋಟಿ ಮತ್ತು ಹಂತ I. 2 ರಲ್ಲಿ 11.66 ಕೋಟಿ ರೂಪಾಯಿಗಳು. ಅಲ್ಲದೆ, ಮೋಧೇರಾದಲ್ಲಿ 1300 ಮನೆಗಳಿಗೆ ತಲಾ ಒಂದು ಕಿಲೋವ್ಯಾಟ್ ಸಾಮರ್ಥ್ಯದ ಸೌರ ಮೇಲ್ಛಾವಣಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದು ಸೂರ್ಯನ ಬಿಸಿಲಿನ ಶಕ್ತಿಯಿಂದ ವಿದ್ಯುತ್ ಪಡೆಯುತ್ತದೆ. ಈ ಸೌರ ಫಲಕಗಳ ಮೂಲಕ ಹಗಲಿನಲ್ಲಿ ನೇರವಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಸೂರ್ಯ ಮುಳುಗಿದ ಬಳಿಕ, ರಾತ್ರಿ ಬಿಇಎಸ್‌ ಎಸ್‌ (ಬ್ಯಾಟರಿ ಎನರ್ಜಿ ಸ್ಟೋರೇಜ್‌ ಸಿಸ್ಟಮ್)‌ ಮೂಲಕ ಮನೆಗಳಿಗೆ ವಿದ್ಯುತ್‌ ಸರಬರಾಜು ಆಗುತ್ತದೆ.

ಯೋಜನೆಯ ವಿಶೇಷತೆ ಏನು?

1. ಮೊಧೇರಾ ಈ ಯೋಜನೆಯ ಮೂಲಕ ಶುದ್ಧ ನವೀಕರಿಸಬಹುದಾದ ಶಕ್ತಿಯನ್ನು ಉತ್ಪಾದಿಸುವ ಭಾರತದ ಮೊದಲ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

2. ಸೋಲಾರ್ ಆಧಾರಿತ ಅಲ್ಟ್ರಾ-ಆಧುನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್‌ಗಳ ಸೌಲಭ್ಯವನ್ನು ಹೊಂದಿರುವ ಮೊದಲ ಆಧುನಿಕ ಗ್ರಾಮ ಎನಿಸಿತು.

3. ಭಾರತದ ಮೊದಲ ಗ್ರಿಡ್ ಸಂಪರ್ಕಿತ MWh ಪ್ರಮಾಣದ ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆಯನ್ನು ಇಲ್ಲಿ ಸ್ಥಾಪಿಸಲಾಗಿದೆ.

4. ಇಲ್ಲಿನ ಸ್ಥಳೀಯ ಜನರ ವಸತಿ ವಿದ್ಯುತ್ ಬಿಲ್ಲಿನಲ್ಲಿ ಶೇ.60ರಿಂದ 100ರಷ್ಟು ಉಳಿತಾಯವಾಗುತ್ತಿದೆ.

ಸೌರಬೆಳಕಿನಿಂದ ಸೂರ್ಯ ದೇಗುಲ ಜಗಮಗ

ವಿಶ್ವಪ್ರಸಿದ್ಧ ಮೊಧೇರಾ ಸೂರ್ಯ ದೇವಾಲಯದಲ್ಲಿ ಸೌರಶಕ್ತಿ ಚಾಲಿತ 3-ಡಿ ಪ್ರೊಜೆಕ್ಷನ್ ಮೂಲಕ ಪ್ರವಾಸಿಗರಿಗೆ ಮೊಧೇರಾದ ಶ್ರೀಮಂತ ಇತಿಹಾಸವನ್ನು ತಿಳಿಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, 3-ಡಿ ಪ್ರೊಜೆಕ್ಷನ್ ಪ್ರತಿದಿನ ಸಂಜೆ 7:00 ರಿಂದ 7:30 ರವರೆಗೆ ನಡೆಯುತ್ತದೆ. ದೇವಾಲಯದ ಸೌಂದರ್ಯವನ್ನು ಹೆಚ್ಚಿಸಲು ಸೌರಶಕ್ತಿ ಚಾಲಿತ ಪರಂಪರಾತ ದೀಪಗಳನ್ನು ಅದರ ಆವರಣದಲ್ಲಿ ಅಳವಡಿಸಲಾಗಿದೆ. ಸಂದರ್ಶಕರು ಪ್ರತಿದಿನ ಸಂಜೆ 6 ರಿಂದ ರಾತ್ರಿ 10 ರವರೆಗೆ ಈ ಆಕರ್ಷಕ ಬೆಳಕನ್ನು ಆಸ್ವಾದಿಸಬಹುದು.

ವಸತಿ ವಿದ್ಯುತ್ ಬಿಲ್ ಸೊನ್ನೆ

ಮೊಧೇರಾ ಗ್ರಾಮದ ಸರಪಂಚ್ ಜತನ್‌ಬೆನ್ ಡಿ.ಟ್ಯಾಗೋರ್ ಪ್ರಕಾರ “ಕೇಂದ್ರ-ರಾಜ್ಯ ಯೋಜನೆಯಿಂದ ಗ್ರಾಮೀಣ ಜನರು ಸಂತೋಷಭರಿತರಾಗಿದ್ದಾರೆ. ಈ ಹಿಂದೆ ಗ್ರಾಮಸ್ಥರ ವಿದ್ಯುತ್ ಬಿಲ್ ತಿಂಗಳಿಗೆ ಸುಮಾರು 1000 ರೂಪಾಯಿ ಬರುತ್ತಿತ್ತು. ಈಗ ಅದು ಬಹುತೇಕ ಸೊನ್ನೆಗೆ ಇಳಿದಿದೆ.

ಯಾವುದೇ ವೆಚ್ಚವಿಲ್ಲದೆ ಎಲ್ಲ ಜನರ ಮನೆಗಳ ಮೇಲ್ಛಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಈ ಸೌರ ಫಲಕಗಳು ನಮಗೆ ಅಗತ್ಯಕ್ಕಿಂತ ಹೆಚ್ಚಿನ ಶಕ್ತಿಯನ್ನು ಒದಗಿಸಿ ಉಳಿಸಿದಾಗ ಸರ್ಕಾರವು ನಮಗೆ ಹೆಚ್ಚುವರಿ ಹಣವನ್ನು ನೀಡುತ್ತದೆಎನ್ನುತ್ತಾರೆ ಜತನ್‌ ಬೆನ್.

ಮೊಧೇರಾ ಈ ಸೌರ ವಿದ್ಯುತ್ ಯೋಜನೆಯ ಕುರಿತು ಮಾತನಾಡಿದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಸ್ವಚ್ಛ ಮತ್ತು ಹಸಿರು ಇಂಧನವನ್ನು ಸೃಷ್ಟಿಸುವ ಪ್ರಧಾನಿಯವರ ಕನಸಿಗೆ ಗುಜರಾತ್ ಮತ್ತೊಮ್ಮೆ ಮಹತ್ವದ ಕೊಡುಗೆ ನೀಡಿರುವುದು ಸಂತೋಷವಾಗಿದೆ ಎಂದು ಹೇಳಿದರು..

ಇದೇ ವೇಳೆಗೆ, 2030 ರ ವೇಳೆಗೆ ನವೀಕರಿಸಬಹುದಾದ ಇಂಧನದ ಮೂಲಕ ಭಾರತದ 50% ಇಂಧನ ಅಗತ್ಯಗಳನ್ನು ಪೂರೈಸಿಕೊಳ್ಳುವ ಪ್ರಧಾನಿ ಮೋದಿಯವರ ಸಂಕಲ್ಪವನ್ನು ಪೂರೈಸಲು ನಾವು ಸಿದ್ಧರಿದ್ದೇವೆ ಎಂದು ಪಟೇಲ್ ಹೇಳಿದರು.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:


Advertisement