Showing posts with label ಭವಿಷ್ಯನಿಧಿ ಪಿಂಚಣಿ. Show all posts
Showing posts with label ಭವಿಷ್ಯನಿಧಿ ಪಿಂಚಣಿ. Show all posts

Wednesday, September 17, 2025

ನಿವೃತ್ತ ನೌಕರರಿಗೆ ಸಂಜೀವಿನಿ: ಮದ್ರಾಸ್‌ ಹೈಕೋರ್ಟಿನ ಈ ತೀರ್ಪು

 ನಿವೃತ್ತ ನೌಕರರಿಗೆ ಸಂಜೀವಿನಿ: ಮದ್ರಾಸ್‌ ಹೈಕೋರ್ಟಿನ ಈ ತೀರ್ಪು

2025ರ ಜೂನ್‌ 28ರಂದು ಬೆಂಗಳೂರಿನ ಪತ್ರಿಕಾ ಸಂಸ್ಥೆಗಳ ಹಿರಿಯ ಪತ್ರಕರ್ತರ ನಿಯೋಗವೊಂದು ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿ ಉದ್ಹೋಗಿಗಳ ಭವಿಷ್ಯನಿಧಿ ಸಂಸ್ಥೆಯ (ಈಪಿಎಫ್‌ ಒ) ಅಧಿಕ ಪಿಂಚಣಿ ಯೋಜನೆಯಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಬಗೆ ಹರಿಸುವಂತೆ ಮನವಿ ಸಲ್ಲಿಸಿತ್ತು.

ಅಧಿಕ ಪಿಂಚಣಿ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಶೀಘ್ರವೇ ಸಂಬಂಧಪಟ್ಟವರ ಜೊತೆಗೆ ಮಾತುಕತೆ ನಡೆಸಿ ಪರಿಹರಿಸಲು ಯತ್ನಿಸುವುದಾಗಿ ಅವರು ಭರವಸೆ ಕೊಟ್ಟರು. ಆ ಬಳಿಕ ಮೂರು ತಿಂಗಳುಗಳು ಕಳೆದಿವೆ. ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಸಚಿವರು ಕೈಗೊಂಡ ಯಾವುದೇ ಕ್ರಮದ ಬಗ್ಗೆ ಈವರೆಗೂ ವರದಿಗಳು ಬಂದಿಲ್ಲ.

ಆದರೆ, ಜುಲೈ 2025 ರ ಲೋಕಸಭಾ ಅಧಿವೇಶನದಲ್ಲಿ, ನವೆಂಬರ್ 2022 ಇಪಿಎಫ್‌ ಒ ವರ್ಸಸ್‌ ಸುನೀಲ್‌ ಕುಮಾರ್‌ ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಹೆಚ್ಚಿನ ಪಿಂಚಣಿಗಾಗಿ ಬಂದ ಅರ್ಜಿಗಳ ಸ್ಥಿತಿಗತಿ ಕುರಿತು ಕರಂದ್ಲಾಜೆ ಅವರು ಸಂಸತ್ತಿಗೆ ಮಾಹಿತಿ ನೀಡಿದರು.
ಅದರಂತೆ, ಜುಲೈ
16, 2025 ರವರೆಗೆ ಸ್ವೀಕರಿಸಿದ 15.24 ಲಕ್ಷ ಅರ್ಜಿಗಳ ಪೈಕಿ, ಶೇ. 98.5% ಕ್ಕಿಂತ ಹೆಚ್ಚು ಅರ್ಜಿಗಳನ್ನು ಇಪಿಎಫ್‌ಒ (EPFO) ವಿಲೇವಾರಿ ಮಾಡಿದೆ.
ಆದರೆ ವಿಲೇವಾರಿಯ ವೈಖರಿ ನೋಡಿ.
ಸಚಿವರ ಉತ್ತರದ ಪ್ರಕಾರ ಒಟ್ಟು 15.24 ಲಕ್ಷ ಅರ್ಜಿಗಳಲ್ಲಿ, 11,01,582 ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, ಹೆಚ್ಚಿನ ಪಿಂಚಣಿಗಾಗಿ 4,00,573 ಬೇಡಿಕೆ ಪತ್ರಗಳನ್ನು ನೀಡಲಾಗಿದೆ.

ಹೀಗೆ ತಿರಸ್ಕರಿಸಿದ ಅರ್ಜಿಗಳನ್ನು ಇಪಿಎಫ್ಒ ಮೂರು ರೀತಿಯಾಗಿ ವಿಂಗಡಿಸಿದೆ. 1) ಆರ್.ಸಿ. ಗುಪ್ತಾ ಮತ್ತು ಇತರರು ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ಹಿಂದಿನ ತೀರ್ಪಿನ ಬಳಿಕ ಅಧಿಕ ಪಿಂಚಣಿ ನೀಡುತ್ತಿದ್ದ ಪ್ರಕರಣಗಳು, 2) ತಾನು ಹೊರಡಿಸಿದ್ದ 2014ರ ಸುತ್ತೋಲೆಗೆ ಮುನ್ನ ನಿವೃತ್ತರಾದ ಉದ್ಯೋಗಿಗಳು ಮತ್ತು 3) 2014ರ ಸುತ್ತೋಲೆಯ ಬಳಿಕ ನಿವೃತ್ತರಾದ ಉದ್ಯೋಗಿಗಳು.

ಆರ್.ಸಿ. ಗುಪ್ತಾ ಮತ್ತು ಇತರರು ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪಿನ ಬಳಿಕ ಅಧಿಕ ಪಿಂಚಣಿ ಪಡೆಯಲಾರಂಭಿಸಿದ್ದ ಹಲವಾರು ನಿವೃತ್ತ ಉದ್ಯೋಗಿಗಳಿಗೆ ಅಧಿಕ ಪಿಂಚಣಿ ಸ್ಥಗಿತಗೊಳಿಸಲು ಭವಿಷ್ಯನಿಧಿ ಸಂಸ್ಥೆ ನೀಡಿದ ಕಾರಣ- ವಿನಾಯಿತಿ ಪಡೆದ ಟ್ರಸ್ಟ್‌ಗಳ ನಿಯಮಗಳು ಹೆಚ್ಚಿನ ವೇತನವನ್ನು ಆದರಿಸಿ ನಿವೃತ್ತಿ ವೇತನ ನಿಧಿಗೆ ವಂತಿಗೆ ಪಾವತಿಸಲು ನಿವೃತ್ತ ಉದ್ಯೋಗಿಗಳಿಗೆ ಅನುಮತಿ ನೀಡುವುದಿಲ್ಲ. ಮಾಲೀಕರು ಟ್ರಸ್ಟ್‌ ನಿಯಮಾವಳಿಗಳನ್ನು ಉಲ್ಲಂಘಿಸಿ ಜಂಟಿ ಅರ್ಜಿ ಸಲ್ಲಿಸಿದ್ದಾರೆ ಎಂಬುದಾಗಿತ್ತು.

ಇನ್ನು 2014ರ ಸುತ್ತೋಲೆಗೆ ಮುನ್ನ ನಿವೃತ್ತರಾದ ಉದ್ಯೋಗಿಗಳ ಪಿಂಚಣಿ ಅರ್ಜಿಗಳನ್ನು ತಿರಸ್ಕರಿಸಲು ಭವಿಷ್ಯನಿಧಿ ಸಂಸ್ಥೆ ಆಧರಿಸಿದ್ದು ಸುಪ್ರೀಂಕೋರ್ಟ್‌ 2022ರಲ್ಲಿ ಸುನೀಲ್‌ ಕುಮಾರ್‌ ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿ ಉಲ್ಲೇಖಿಸಿದ ಒಂದು ಪ್ಯಾರಾವನ್ನು. ಅದರ ಪ್ರಕಾರ 2014ರ ಸೆಪ್ಟೆಂಬರ್‌ 1ನೇ ದಿನಾಂಕಕ್ಕೆ ಮುಂಚಿತವಾಗಿ ನಿವೃತ್ತರಾದ ಉದ್ಯೋಗಿಗಳು ನಿವೃತ್ತಿಗೆ ಮುನ್ನ ಇಪಿಎಫ್‌ ಒ ಪಿಂಚಣಿ ನಿಯಮಾವಳಿ 11(3)ರ ಪ್ರಕಾರ ಅಧಿಕ ಪಿಂಚಣಿಗಾಗಿ ಉದ್ಯೋಗದಾತರ ಜೊತೆಗೆ ಜಂಟಿ ಅರ್ಜಿ ಸಲ್ಲಿಸಿರಬೇಕು, ಮತ್ತು ಅದನ್ನು ಇಪಿಎಫ್‌ ಒ ಅಧಿಕಾರಿ ತಿರಸ್ಕರಿಸಿರಬೇಕು ಎಂಬ ವಾದವನ್ನು. 

ಇನ್ನು ಮೂರನೇ ವರ್ಗದವರಾದ 2014ರ ಸೆಪ್ಟೆಂಬರ್‌ 1ರ ನಂತರ ನಿವೃತ್ತರಾದವರಿಗೆ ವಿನಾಯಿತಿ ಪಡೆದ ಟ್ರಸ್ಟ್‌ ನಿಯಮಾಳಿಗಳ ಪ್ರಕಾರ ಅಧಿಕ ವೇತನದ ಮೇಲೆ ವಂತಿಗೆ ಪಾವತಿ ಮಾಡಲು ಟ್ರಸ್ಟ್‌ ನಿಯಮಗಳು ಅನುಮತಿಸುವುದಿಲ್ಲ. ಟ್ರಸ್ಟ್‌ ನಿಯಮವನ್ನು ಉಲ್ಲಂಘಿಸಿ ಅವರು ಮಾಲೀಕರೊಂದಿಗೆ ಜಂಟಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂಬ ನಿಲುವನ್ನು ಇಪಿಎಫ್‌ ಒ ತೆಗೆದುಕೊಂಡಿದೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಸಲ್ಲಿಸಿದ್ದ ಮನವಿ ಪತ್ರದಲ್ಲಿ ಇದೇ ಅಂಶವನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿತ್ತು. ಸುಪ್ರೀಂಕೋರ್ಟ್‌ ನೀಡಿದ 2022ರ ತೀರ್ಪಿನಲ್ಲಿ ಉಲ್ಲೇಖವೇ ಇರದ ಈ ಟ್ರಸ್ಟ್‌ ನಿಯಮಾವಳಿಯ ವಿಚಾರವೇ ಸುಪ್ರೀಂಕೋರ್ಟ್‌ ತೀರ್ಪಿನ ಜಾರಿಗೆ ಅಡ್ಡಿಯಾಗುವುದಿದ್ದರೆ, ಕೇಂದ್ರ ಸರ್ಕಾರದ ಮಟ್ಟದಲ್ಲಿ ಅದನ್ನು ಬಗೆ ಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವನ್ನು ಹಿರಿಯ ಪತ್ರಕರ್ತರ ನಿಯೋಗ ಮಂಡಿಸಿತ್ತು.

ಆದರೆ 15 ಲಕ್ಷ ಅರ್ಜಿಗಳ ಪೈಕಿ 11 ಲಕ್ಷ ಅರ್ಜಿಗಳನ್ನು ತಿರಸ್ಕರಿಸಲು ಇಪಿಎಫ್‌ ಒ ನೀಡಿದ ಕಾರಣಗಳು ಬಡ ನಿವೃತ್ತ ನೌಕರರ ಜಂಘಾ ಬಲವನ್ನು ಉಡುಗಿಸಿದೆ ಎಂದರೆ ಅತಿಶಯೋಕ್ತಿ ಅಲ್ಲ. ದೇವರು ಕೊಟ್ಟರೂ ಪೂಜಾರಿ ಬಿಡ ಎಂಬ ಮಾತು ಶತಾಯಗತಾಯ ನಿಜ ಮಾಡಲು ಹೊರಟಿಸುವ ಭವಿಷ್ಯ ನಿಧಿ ಸಂಸ್ಥೆಗೆ ತಿಳಿ ಹೇಳುವವರು ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದ್ದು ಸುಳ್ಳಲ್ಲ.

ಮತ್ತೆ ಕೋರ್ಟೇ ಬರಬೇಕಾಯಿತು..!

ಗುಪ್ತಾ ಮತ್ತು ಇತರರು ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ ತೀರ್ಪಿನ ಪ್ರಕಾರ ಪಡೆಯುತ್ತಿದ್ದ ಅಧಿಕ ಪಿಂಚಣಿಯನ್ನು ಇಪಿಎಫ್‌ಒ ಸ್ಥಗಿತಗೊಳಿಸಿದಾಗ ಅಂತಹ 69 ಉದ್ಯೋಗಿಗಳು ಕೇರಳ ಹೈಕೋರ್ಟಿನ ಮೆಟ್ಟಿಲೇರಿದರು. 2025ರ ಮಾರ್ಚ್‌ 24ರಂದು ಕೋರ್ಟ್‌ ಮಧ್ಯಂತರ ತೀರ್ಪೊಂದನ್ನು ನೀಡಿ ಅವರಿಗೆ ನೀಡಲಾಗುತ್ತಿರುವ ಪಿಂಚಣಿಯನ್ನು ತಡೆ ಹಿಡಿಯಬಾರದು ಎಂದು ಆಜ್ಞಾಪಿಸಿದೆ. ಆ ಪ್ರಕರಣ ಇನ್ನೂ ಮುಂದುವರೆಯುತ್ತಿದೆ.

ಈ ಮಧ್ಯೆ ಟ್ರಸ್ಟ್‌ ನಿಯಮಗಳನ್ನು ಉಲ್ಲೇಖಿಸಿ ಅಧಿಕ ಪಿಂಚಣಿ ಕೋರಿಕೆಯ ತಮ್ಮ ಜಂಟಿ ಅರ್ಜಿಗಳನ್ನು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ತಿರುಚಿರಾಪಳ್ಳಿಯ 86 ಮಂದಿ ಬಿಎಚ್‌ ಇಎಲ್‌ ನಿವೃತ್ತ ನೌಕರರು ಮದ್ರಾಸ್‌ ಹೈಕೋರ್ಟಿನ ಮಧುರೈ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಬಿಎಚ್‌ ಇಎಲ್‌ ಸಂಸ್ಥೆಯು 'ನೌಕರರ ಭವಿಷ್ಯನಿಧಿ (ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ಸ್) ಮತ್ತು ಇತರೆ ನಿಬಂಧನೆಗಳ ಕಾಯಿದೆ, 1952' ರ ಸೆಕ್ಷನ್ 17ರ ಅಡಿಯಲ್ಲಿ ವಿನಾಯಿತಿ ಪಡೆದ ಸಂಸ್ಥೆಯಾಗಿದೆ.

ಈ ಅರ್ಜಿಯಲ್ಲಿ ಅವರು ಈ ಭವಿಷ್ಯ ನಿಧಿ ಸಂಸ್ಥೆಯ ಈ ಮೂರು ಆದೇಶಗಳನ್ನು ಪ್ರಶ್ನಿಸಿದ್ದರು.

  •  ಹೆಚ್ಚಿನ ಪಿಂಚಣಿಗಾಗಿ ನೀಡಿದ್ದ ಬೇಡಿಕೆ ನೋಟಿಸ್‌ ಅನ್ನು ಇಪಿಎಫ್‌ಒ ಹಿಂದಕ್ಕೆ ಪಡೆದ ಆದೇಶ.
  • ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಅನುಗುಣವಾಗಿ ನೌಕರರ ಟ್ರಸ್ಟ್ ನಿಯಮಗಳನ್ನು ತಿದ್ದುಪಡಿ ಮಾಡಲು ಅನುಮತಿ ನೀಡದ ಸುತ್ತೋಲೆ.
  • ಹೆಚ್ಚಿನ ಪಿಂಚಣಿಗಾಗಿ ಸಲ್ಲಿಸಿದ ಜಂಟಿ ಆಯ್ಕೆ ಅರ್ಜಿಯನ್ನು ನಿರಾಕರಿಸಿದ ಆದೇಶ.

ಈ ಪ್ರಕರಣವು ಸುಪ್ರೀಂ ಕೋರ್ಟ್‌ನ ಮಹತ್ವದ 'ಇಪಿಎಫ್‌ಒ Vs. ಸುನಿಲ್ ಕುಮಾರ್ ಬಿ' ತೀರ್ಪನ್ನು ಆಧರಿಸಿದೆ. ಈ ತೀರ್ಪಿನ ಪ್ರಕಾರ, ನೌಕರರು ಪಿಂಚಣಿ ಯೋಜನೆಗೆ ತಮ್ಮ ಕೊಡುಗೆಯನ್ನು ನಿಜವಾದ ಸಂಬಳದ ಆಧಾರದ ಮೇಲೆ ಪಾವತಿಸಲು ಆಯ್ಕೆ ಮಾಡಿಕೊಳ್ಳಬಹುದು.
ಬಿಎಚ್‌ಇಎಲ್ ನೌಕರರು 01.09.2014 ರ ನಂತರ ನಿವೃತ್ತರಾಗಿದ್ದು , ಅವರ ಭವಿಷ್ಯನಿಧಿ (ಪ್ರಾವಿಡೆಂಟ್ ಫಂಡ್) ಟ್ರಸ್ಟ್ ನಿಯಮಗಳು ನೌಕರರ ನಿಜವಾದ ವೇತನದ ಮೇಲೆ ಕೊಡುಗೆಯನ್ನು ಪಾವತಿಸಲು ಅವಕಾಶ ನೀಡುತ್ತದೆ.
ಇಪಿಎಫ್‌ಒ ಯೋಜನೆಯಿಂದ ವಿನಾಯಿತಿ ಪಡೆದ ಸಂಸ್ಥೆಗಳ (exempted establishments) ನೌಕರರಿಗೂ ಇದು ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ತೀರ್ಪು ಹೇಳುತ್ತದೆ.
ನೌಕರರಿಗೆ ಜಂಟಿ ಆಯ್ಕೆಯನ್ನು ಸಲ್ಲಿಸಲು ಸುಪ್ರೀಂ ಕೋರ್ಟ್ ನಾಲ್ಕು ತಿಂಗಳ ಕಾಲಾವಕಾಶ ನೀಡಿತ್ತು. ಇದನ್ನು ನಂತರ ಹಲವಾರು ಬಾರಿ 31.01.2025 ರವರೆಗೆ ವಿಸ್ತರಿಸಲಾಯಿತು.

    • ಇಷ್ಟೆಲ್ಲ ಆದ ಬಳಿಕ ಹೆಚ್ಚಿನ ಪಿಂಚಣಿಗಾಗಿ ಕೊಡುಗೆ ಪಾವತಿಸಲು ಇಪಿಎಫ್‌ಒ ನೀಡಿದ ಬೇಡಿಕೆ ನೋಟಿಸನ್ನು ವಾಪಸ್‌ ಪಡೆದಿರುವುದು, ಹೆಚ್ಚಿನ ಪಿಂಚಣಿಗಾಗಿ ಸಲ್ಲಿಸಿದ ಜಂಟಿ ಆಯ್ಕೆಯ ಅರ್ಜಿಯನ್ನು ತಿರಸ್ಕರಿಸಿದ್ದು, ಬಿಎಚ್‌ಇಎಲ್ ನೌಕರರ ಟ್ರಸ್ಟ್ ನಿಯಮಗಳಿಗೆ ತಿದ್ದುಪಡಿ ತರಲು ನಿರಾಕರಿಸಿದ್ದನ್ನು 'ಸುನಿಲ್ ಕುಮಾರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ವಿರುದ್ಧವೆಂದು ನೌಕರರು ವಾದಿಸಿದರು.

 ಸುನಿಲ್‌ ಕುಮಾರ್‌ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ತೀರ್ಪಿನ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:

·         ಅನ್ವಯಿಸುವಿಕೆ: 22.08.2014ರ ಅಧಿಸೂಚನೆಯು ಸಾಮಾನ್ಯ ಸಂಸ್ಥೆಗಳಂತೆ ವಿನಾಯಿತಿ ಪಡೆದ ಸಂಸ್ಥೆಗಳ (exempted establishments) ನೌಕರರಿಗೂ ಸಮಾನವಾಗಿ ಅನ್ವಯಿಸುತ್ತದೆ.

·         ಹೆಚ್ಚುವರಿ ಆಯ್ಕೆ: ಈ ತೀರ್ಪಿನ ಪ್ರಕಾರ, ಈ ಹಿಂದೆ ಆಯ್ಕೆ ಮಾಡಿಕೊಳ್ಳದ ನೌಕರರು ಕೂಡ ಜಂಟಿ ಆಯ್ಕೆಯ ಮೂಲಕ ಪರಿಷ್ಕೃತ ಪಿಂಚಣಿ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ.

·         ನಿವೃತ್ತಿಯ ದಿನಾಂಕ: 01.09.2014ಕ್ಕಿಂತ ಮೊದಲು ನಿವೃತ್ತರಾದವರಿಗೆ ಈ ತೀರ್ಪಿನ ಪ್ರಯೋಜನಗಳು ಲಭ್ಯವಿಲ್ಲ. ಆದರೆ, ಅವರು ಈಗಾಗಲೇ ಅಧಿಕ ಪಿಂಚಣಿಯ ಆಯ್ಕೆಯನ್ನು ಹಿಂದಿನ ನಿಯಮದಂತೆ ಚಲಾಯಿಸಿದ್ದರೆ, ತೀರ್ಪಿನ ಪ್ರಯೋಜನಗಳನ್ನು ಪಡೆಯಬಹುದು.

ಅಂತಿಮವಾಗಿ, ಬಿಎಚ್‌ಇಎಲ್‌ನ ಭವಿಷ್ಯನಿಧಿ ಟ್ರಸ್ಟ್ ನಿಯಮಗಳ ಪ್ರಕಾರ, ನೌಕರರು ತಮ್ಮ ನಿಜವಾದ ವೇತನದ ಮೇಲೆ ಕೊಡುಗೆಗಳನ್ನು ಪಾವತಿಸಲು ಒಪ್ಪಿಕೊಂಡಿದ್ದಾರೆ. 'ನೌಕರರ ಭವಿಷ್ಯನಿಧಿ ಯೋಜನೆ, 1952ರ (ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ಸ್ ಸ್ಕೀಮ್, 1952' ) ನಿಯಮ 27-AA ಯ ಅನುಬಂಧ '' ನಲ್ಲಿನ ಷರತ್ತಿನ ಪ್ರಕಾರ, ಶಾಸನಬದ್ಧ ಯೋಜನೆಯಲ್ಲಿ ತಿದ್ದುಪಡಿ ಮಾಡಿದಾಗ, ಅದು ನೌಕರರಿಗೆ ಹೆಚ್ಚು ಅನುಕೂಲಕರವಾಗಿದ್ದರೆ, ಟ್ರಸ್ಟ್ ನಿಯಮಗಳನ್ನು ಔಪಚಾರಿಕವಾಗಿ ತಿದ್ದುಪಡಿ ಮಾಡದೆ ಅದು ಸ್ವಯಂಚಾಲಿತವಾಗಿ ಅನ್ವಯವಾಗುತ್ತದೆ ಎಂಬುದಾಗಿ ಅಭಿಪ್ರಾಯಪಟ್ಟ ಸುಪ್ರೀಕೋರ್ಟ್‌ ಬಿಎಚ್‌ ಇ ಎಲ್‌ ನೌಕರರ ಅರ್ಜಿಗಳನ್ನು ಪುರಸ್ಕರಿಸಿ, ಅವರಿಗೆ ಅಧಿಕ ಪಿಂಚಣಿ ಒದಗಿಸಬೇಕು ಎಂದು ಆಜ್ಞಾಪಿಸಿತು.

2025ರ ಸೆಪ್ಟೆಂಬರ್‌ 2ರಂದು ನೀಡಿದ  ಮದ್ರಾಸ್‌ ಹೈಕೋರ್ಟಿನ ಮಧುರೈ ಪೀಠದ ನ್ಯಾಯಮೂರ್ತಿ ಆರ್.‌ ವಿಜಯಕುಮಾರ್‌ ತೀರ್ಪು ಕೇವಲ ಬಿಎಚ್‌ ಇಎಲ್‌ ನೌಕರರಿಗೆ ಮಾತ್ರವೇ ಅಲ್ಲ, ವಿನಾಯಿತ ಭವಿಷ್ಯನಿಧಿ ಟ್ರಸ್ಟ್‌ ಗಳು ಇರುವ ಎಲ್ಲ ಸಂಸ್ಥೆಗಳ ನೌಕರರ ಪಾಲಿಗೂ ಒಂದು ಸಂಜೀವಿನಿ. ಅದನ್ನು ಅವರು ಬಳಸಿಕೊಳ್ಳಬೇಕು.

-ನೆತ್ರಕೆರೆ ಉದಯಶಂಕರ

ಈ ತೀರ್ಪಿನ ಸಮಗ್ರ ಅಂಶಗಳನ್ನು   ತಿಳಿಯಲು ಈ ಕೆಳಗಿನ ಎರಡು ವಿಡಿಯೋಗಳನ್ನು ಪೂರ್ತಿಯಾಗಿ ಕೊನೆಯವರೆಗೂ ನೋಡಿ.



Friday, November 4, 2022

ಪಿಂಚಣಿ (ತಿದ್ದುಪಡಿ) ಯೋಜನೆ ಸಿಂಧು, ರೂ. 15,000 ವೇತನ ಮಿತಿ ರದ್ದು

ಪಿಂಚಣಿ (ತಿದ್ದುಪಡಿ) ಯೋಜನೆ ಸಿಂಧು, ರೂ. 15,000 ವೇತನ ಮಿತಿ ರದ್ದು

ನವದೆಹಲಿ: ಭವಿಷ್ಯನಿಧಿ ಸಂಸ್ಥೆಯು ರೂಪಿಸಿದ 2014 ರ ನೌಕರರ ಪಿಂಚಣಿ (ತಿದ್ದುಪಡಿ) ಯೋಜನೆಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ 2022 ನವೆಂಬರ್‌ 04ರ ಶುಕ್ರವಾರ ಎತ್ತಿಹಿಡಿಯಿತು. ಆದರೆ ಪಿಂಚಣಿ ನಿಧಿಗೆ ಸೇರಲು ವಿಧಿಸಲಾದ 15,000 ರೂ ಮಾಸಿಕ ವೇತನದ ಮಿತಿಯನ್ನು ರದ್ದು ಪಡಿಸಿತು.

2014 ರ ತಿದ್ದುಪಡಿಯು ಗರಿಷ್ಠ ಪಿಂಚಣಿ ವೇತನವನ್ನು (ಮೂಲ ವೇತನ ಮತ್ತು ತುಟ್ಟಿಭತ್ಯೆ) ತಿಂಗಳಿಗೆ 15,000 ರೂ. ಎಂಬುದಾಗಿ ಪರಿಷ್ಕರಿಸಿತ್ತು.  ತಿದ್ದುಪಡಿಗೆ ಮೊದಲು, ಗರಿಷ್ಠ ಪಿಂಚಣಿ ವೇತನವನ್ನು ತಿಂಗಳಿಗೆ 6,500 ರೂ. ಎಂಬುದಾಗಿ ನಿಗದಿ ಪಡಿಸಲಾಗಿತ್ತು.

ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಮತ್ತು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರ ಪೀಠವು 2014ರ ಪಿಂಚಣಿ ಯೋಜನೆಯನ್ನು ಕಾನೂನುಬದ್ಧ ಎಂಬುದಾಗಿ ಹೇಳಿತಾದರೂ ಅದರ ಕೆಲವು ನಿಬಂಧನೆಗಳು ಮಾನ್ಯವಲ್ಲ ಎಂದು ಹೇಳಿತು.

2014ರ ಯೋಜನೆಯಲ್ಲಿ ನೌಕರರು 15,000 ರೂ.ಗಿಂತ ಹೆಚ್ಚಿನ ವೇತನದ ಮೇಲೆ ಶೇ.1.16 ರಷ್ಟು ಹೆಚ್ಚಿನ ಕೊಡುಗೆಯನ್ನು ನೀಡಬೇಕೆಂಬ ಷರತ್ತನ್ನು ಅಮಾನ್ಯವೆಂದು ಪೀಠವು ಪರಿಗಣಿಸಿತು.

ಪಿಂಚಣಿ ಯೋಜನೆಗೆ ಸೇರುವ ಆಯ್ಕೆಯನ್ನು ಚಲಾಯಿಸದ ನೌಕರರು ಆರು ತಿಂಗಳೊಳಗೆ ಹಾಗೆ ಮಾಡಬೇಕು ಎಂದು ಪೀಠ ಹೇಳಿತು. ತನ್ಮೂಲಕ ಭವಿಷ್ಯನಿಧಿಯ ಹಾಲಿ ಸದಸ್ಯ ನೌಕರರಿಗೆ ಯೋಜನೆ ಸೇರುವ ಆಯ್ಕೆ ಚಲಾಯಿಸಲು ಕಾಲಾವಕಾಶವನ್ನು ಆರು ತಿಂಗಳ ಕಾಲ ನೀಡಿತು.

ಕೇರಳ, ರಾಜಸ್ಥಾನ ಮತ್ತು ದೆಹಲಿಯ ಹೈಕೋರ್ಟ್‌ಗಳು ನೀಡಿದ ತೀರ್ಪಿನ ದೃಷ್ಟಿಯಿಂದ, ಈ ವಿಷಯದ ಬಗ್ಗೆ ಸ್ಪಷ್ಟತೆಯ ಕೊರತೆಯಿರುವುದರಿಂದ ಕಟ್-ಆಫ್ ದಿನಾಂಕದೊಳಗೆ ಯೋಜನೆಗೆ ಸೇರಲು ಸಾಧ್ಯವಾಗದ ಅರ್ಹ ಉದ್ಯೋಗಿಗಳಿಗೆ ಹೆಚ್ಚುವರಿ ಅವಕಾಶ ನೀಡಬೇಕು ಎಂದು ಅದು ಹೇಳಿತು.

ನ್ಯಾಯಾಲಯವು ಆರ್‌ಸಿ ಗುಪ್ತ ವಿರುದ್ಧ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಪ್ರಕರಣದ ತೀರ್ಪನ್ನು ಒಪ್ಪಿಕೊಂಡಿರುವಾಗಿ ಹೇಳಿತು.

ಆರ್.‌ಸಿ. ಗುಪ್ತ ವಿರುದ್ಧ ಪ್ರಾದೇಶಿಕ ಭವಿಷ್ಯನಿಧಿ ಪ್ರಕರಣದಲ್ಲಿ ಸುಪ್ರೀಂಕೋರ್ಟಿನ ವಿಭಾಗೀಯ ಪೀಠವು ಆಯ್ಕೆಯನ್ನು ಚಲಾಯಿಸಲು ಯಾವುದೇ ಕಟ್-ಆಫ್ ದಿನಾಂಕ ಇರುವಂತಿಲ್ಲ ಎಂದು ಹೇಳಿತ್ತು.

ಮಿತಿಯನ್ನು ಮೀರಿದ ಸಂಬಳದ ಮೇಲೆ ಶೇ.1.16 ರಷ್ಟು ಹೆಚ್ಚಿನ ಕೊಡುಗೆ ನೀಡಬೇಕೆಂಬ ಷರತ್ತು ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್‌ ಹೇಳಿತು. ಆದರೆ ಅಧಿಕಾರಿಗಳಿಗೆ ಹಣವನ್ನು ಹೊಂದಿಸಲು ಸಾಧ್ಯವಾಗುವಂತೆ ತೀರ್ಪಿನ ಈ ಭಾಗವನ್ನು ಆರು ತಿಂಗಳವರೆಗೆ ಅಮಾನತಿನಲ್ಲಿ ಇಡಲಾಗುವುದು ಎಂದು ಅದು ಹೇಳಿತು.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಮತ್ತು ಕೇಂದ್ರ ಸರ್ಕಾರವು 2014 ರ ಯೋಜನೆಯನ್ನು ರದ್ದುಗೊಳಿಸಿದ ಕೇರಳ, ರಾಜಸ್ಥಾನ ಮತ್ತು ದೆಹಲಿಯ ಹೈಕೋರ್ಟ್‌ಗಳ ತೀರ್ಪನ್ನು ಪ್ರಶ್ನಿಸಿದ್ದವು.

ವಿವಿಧ ದಿನಗಳ ವಿಚಾರಣೆಗಳ ವಿವರವಾದ ವರದಿಗಳು ಈ ಕೆಳಗೆ ಕ್ಲಿಕ್‌ ಮಾಡಿರಿ:

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಈ ವಾರ ಸುಪ್ರೀಂ ತೀರ್ಪು?

ಭವಿಷ್ಯನಿಧಿ ಪಿಂಚಣಿ ಪ್ರಕರಣ: ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

ಇಪಿಎಫ್ ಪಿಂಚಣಿ ಪ್ರಕರಣ: ಭವಿಷ್ಯ ನಿಧಿಸದಸ್ಯರು ಇಪಿಎಸ್ ಅಡಿಯಲ್ಲಿ ಸ್ವಯಂಚಾಲಿತವಾಗಿ ಅರ್ಹರಾಗುವುದಿಲ್ಲ

 ಸಬ್ಸಿಡಿಹಣಕಾಸಿನ ಹೊರೆಯ ವಿವರ ತೋರಿಸಿ: ಕೇಂದ್ರಇಪಿಎಫ್‌ಒಗೆ ಸುಪ್ರಿಂ ಕೋರ್ಟ್ ನಿರ್ದೇಶನ

ಇಪಿಎಫ್ ಪಿಂಚಣಿ ಪ್ರಕರಣ : 'ಪಿಂಚಣಿ ನಿಧಿಯಲ್ಲಿ ಕೊರತೆ ಇಲ್ಲ'

ಭವಿಷ್ಯ ನಿಧಿ ಪಿಂಚಣಿ ಪ್ರಕರಣ: ಆಗಸ್ಟ್‌ 10ಕ್ಕೆ ಮುಂದಿನ ವಿಚಾರಣೆ

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಆರ್ಥಿಕ ಸುಸ್ಥಿರತೆ ಪ್ರಶ್ನೆಯೇ ಅಲ್ಲ

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಪಿಂಚಣಿ ಮೂಲನಿಧಿ ಸ್ಥಿರ 

Wednesday, November 2, 2022

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಈ ವಾರ ಸುಪ್ರೀಂ ತೀರ್ಪು?

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಈ ವಾರ ಸುಪ್ರೀಂ ತೀರ್ಪು?

ನವದೆಹಲಿ: ಉದ್ಯೋಗಿಗಳ ಪಿಂಚಣಿ (ತಿದ್ದುಪಡಿ) ಯೋಜನೆ, 2014 ರದ್ದುಗೊಳಿಸಿದ ಕೇರಳ, ರಾಜಸ್ಥಾನ ಮತ್ತು ದೆಹಲಿ ಹೈಕೋರ್ಟ್ ತೀರ್ಪುಗಳನ್ನು ಪ್ರಶ್ನಿಸಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಸಲ್ಲಿಸಿದ ಮೇಲ್ಮನವಿಗಳ ತೀರ್ಪನ್ನು ಸುಪ್ರೀಂ ಕೋರ್ಟ್ ವಾರ ಪ್ರಕಟಿಸುವ ಸಾಧ್ಯತೆಯಿದೆ.

ನ್ಯಾಯಮೂರ್ತಿಗಳಾದ ಉದಯ್ ಉಮೇಶ್ ಲಲಿತ್, ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಮೂರ್ತಿಗಳ  ಪೀಠವು 6 ದಿನಗಳ ವಿಚಾರಣೆಯ ನಂತರ 2022 ಆಗಸ್ಟ್ 11 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ಭಾರತದ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಅವರು 2022 ನವೆಂಬರ್ 8ರಂದು ನಿವೃತ್ತರಾಗಲಿರುವ ಕಾರಣ, ಅದಕ್ಕೂ ಮುನ್ನ ಪೀಠವು ತೀರ್ಪು ನೀಡುವ ಸಾಧ್ಯತೆಯಿದೆ. ರಾಷ್ಟ್ರಪತಿಯವರಿಂದ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ನ್ಯಾಯಮೂರ್ತಿ ವೈ.ವಿ. ಚಂದ್ರಚೂಡ್‌  ಅವರು ಹಾಲಿ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್‌ ಅವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ.

2018 ರಲ್ಲಿ, ಕೇರಳ ಹೈಕೋರ್ಟ್, ಉದ್ಯೋಗಿಗಳ ಪಿಂಚಣಿ (ತಿದ್ದುಪಡಿ) ಯೋಜನೆ, (2014] ಅನ್ನು ರದ್ದುಪಡಿಸುವಾಗ, ತಿಂಗಳಿಗೆ ರೂ 15,000 ಮಿತಿ ಮಿತಿಗಿಂತ ಹೆಚ್ಚಿನ ಸಂಬಳಕ್ಕೆ ಅನುಗುಣವಾಗಿ ಪಿಂಚಣಿ ಪಾವತಿಸಲು ಅವಕಾಶ ಮಾಡಿಕೊಟ್ಟಿತು. ಪಿಂಚಣಿ ಯೋಜನೆಗೆ ಸೇರಲು ಯಾವುದೇ ಕಟ್-ಆಫ್ ದಿನಾಂಕ ಇರಬಾರದು ಎಂದು ಹೈಕೋರ್ಟ್ ಹೇಳಿತ್ತು.

2019 ರಲ್ಲಿ, ಕೇರಳ ಹೈಕೋರ್ಟ್ ತೀರ್ಪಿನ ವಿರುದ್ಧ ಇಪಿಎಫ್‌ಒ ಸಲ್ಲಿಸಿದ್ದ ವಿಶೇಷ ರಜೆ ಅರ್ಜಿಯನ್ನು (ಎಸ್‌ ಎಲ್‌ ಪಿ) ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ನಂತರ, ಇಪಿಎಫ್‌ಒ ಮತ್ತು ಕೇಂದ್ರ ಸರ್ಕಾರವು ಕೋರಿದ ಪರಿಶೀಲನಾ ಕೋರಿಕೆ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂಕೋರ್ಟ್‌,  ಎಸ್‌ಎಲ್‌ಪಿ ವಜಾ ಮಾಡಿದ ತನ್ನ ತೀರ್ಪನ್ನು ಹಿಂಪಡೆದಿತ್ತು ಮತ್ತು ಅರ್ಹತೆಯ ಮೇಲೆ ವಿಚಾರಣೆಗಾಗಿ ವಿಷಯವನ್ನು ಪುನಃ ತೆರೆದಿತ್ತು.

2021ರ ಆಗಸ್ಟ್ ತಿಂಗಳಲ್ಲಿ , ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠವು ಈ ಕೆಳಗಿನ ಸಮಸ್ಯೆಗಳನ್ನು ಪರಿಗಣಿಸಲು ತ್ರಿಸದಸ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಮೇಲ್ಮನವಿಗಳನ್ನು ಒಪ್ಪಿಸಿತ್ತು:

1. ಉದ್ಯೋಗಿಗಳ ಪಿಂಚಣಿ ಯೋಜನೆಯ ಪ್ಯಾರಾಗ್ರಾಫ್ 11(3) ಅಡಿಯಲ್ಲಿ ಕಟ್-ಆಫ್ ದಿನಾಂಕ ಇರುವುದೇ ಮತ್ತು

2. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಇತ್ಯರ್ಥ ಪಡಿಸಲು ಆರ್.ಸಿ. ಗುಪ್ತ ವಿರುದ್ಧ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು (2016) ಪ್ರಕರಣದ ತೀರ್ಪು ಆಧಾರ ತತ್ವವಾಗಿದೆಯೇ?

ಪಿಂಚಣಿ ನಿಧಿ ಮತ್ತು ಭವಿಷ್ಯ ನಿಧಿಗಳು ವಿಭಿನ್ನವಾಗಿವೆ ಮತ್ತು ನಂತರದ ಸದಸ್ಯತ್ವವು ಮೊದಲಿನ ಸದಸ್ಯತ್ವಕ್ಕೆ ಸ್ವಯಂಚಾಲಿತವಾಗಿ ಅನುವಾದಿಸುವುದಿಲ್ಲ. ಪಿಂಚಣಿ ಯೋಜನೆಯು ಕಡಿಮೆ ವಯಸ್ಸಿನ ಉದ್ಯೋಗಿಗಳಿಗೆ ಉದ್ದೇಶಿಸಲಾಗಿದೆ ಮತ್ತು ಕಟ್-ಆಫ್ ಮಿತಿಗಿಂತ ಹೆಚ್ಚಿನ ಸಂಬಳ ಪಡೆಯುವ ವ್ಯಕ್ತಿಗಳಿಗೆ ಪಿಂಚಣಿ ಪಡೆಯಲು ಅವಕಾಶ ನೀಡಿದರೆ, ಅದು ನಿಧಿಯೊಳಗೆ ದೊಡ್ಡ ಅಸಮತೋಲನವನ್ನು ಉಂಟುಮಾಡುತ್ತದೆ ಎಂದು ಎಂದು ಇಪಿಎಫ್‌ ಒ ಸುಪ್ರೀಂಕೋರ್ಟಿನಲ್ಲಿ ವಾದಿಸಿತ್ತು.

2014 ರ ತಿದ್ದುಪಡಿಗಳನ್ನು ಪಿಂಚಣಿ ಮತ್ತು ಭವಿಷ್ಯ ನಿಧಿಗಳ ನಡುವಿನ ಅಡ್ಡ-ಸಬ್ಸಿಡಿಕರಣದ ಸಮಸ್ಯೆಯನ್ನು ಪರಿಹರಿಸಲು ತರಲಾಯಿತು ಎಂದು ಅದು ನ್ಯಾಯಾಲಯದಲ್ಲಿ ಪ್ರತಿಪಾದಿಸಿತ್ತು.

 ಇಪಿಎಫ್‌ಒ ಎತ್ತಿರುವ ಆರ್ಥಿಕ ಹೊರೆಯ ವಾದವನ್ನು ಪಿಂಚಣಿದಾರರು ಆಕ್ಷೇಪಿಸಿದ್ದರು. ಮೂಲನಿಧಿಯು (ಕಾರ್ಪಸ್ ಫಂಡ್) ಹಾಗೆಯೇ  ಉಳಿದಿದೆ ಮತ್ತು ಬಡ್ಡಿಯಿಂದ ಪಿಂಚಣಿ ಪಾವತಿ ಮಾಡಲಾಗಿದೆ ಎಂದು ಅವರು ವಾದಿಸಿದ್ದರು. ಪಿಂಚಣಿ ಯೋಜನೆಗೆ ಸೇರಲು ಕಟ್-ಆಫ್ ಅವಧಿಯೊಳಗೆ ಪ್ರತ್ಯೇಕ ಆಯ್ಕೆಯನ್ನು ಬಳಸಬೇಕು ಎಂಬ ಇಪಿಎಫ್‌ಒನ ವಾದವನ್ನು ಪಿಂಚಣಿದಾರರು ವಿರೋಧಿಸಿದ್ದರು ಮತ್ತು ಇಪಿಎಫ್‌ಒ ನಿಲುವು ಕಾನೂನಿಗೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದ್ದರು.

ವಿವಿಧ ದಿನಗಳ ವಿಚಾರಣೆಗಳ ವಿವರವಾದ ವರದಿಗಳು ಈ ಕೆಳಗೆ ಕ್ಲಿಕ್‌ ಮಾಡಿರಿ:

ಭವಿಷ್ಯನಿಧಿ ಪಿಂಚಣಿ ಪ್ರಕರಣ: ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

ಇಪಿಎಫ್ ಪಿಂಚಣಿ ಪ್ರಕರಣ: ಭವಿಷ್ಯ ನಿಧಿಸದಸ್ಯರು ಇಪಿಎಸ್ ಅಡಿಯಲ್ಲಿ ಸ್ವಯಂಚಾಲಿತವಾಗಿ ಅರ್ಹರಾಗುವುದಿಲ್ಲ

 ಸಬ್ಸಿಡಿಹಣಕಾಸಿನ ಹೊರೆಯ ವಿವರ ತೋರಿಸಿ: ಕೇಂದ್ರಇಪಿಎಫ್‌ಒಗೆ ಸುಪ್ರಿಂ ಕೋರ್ಟ್ ನಿರ್ದೇಶನ

ಇಪಿಎಫ್ ಪಿಂಚಣಿ ಪ್ರಕರಣ : 'ಪಿಂಚಣಿ ನಿಧಿಯಲ್ಲಿ ಕೊರತೆ ಇಲ್ಲ'

ಭವಿಷ್ಯ ನಿಧಿ ಪಿಂಚಣಿ ಪ್ರಕರಣ: ಆಗಸ್ಟ್‌ 10ಕ್ಕೆ ಮುಂದಿನ ವಿಚಾರಣೆ

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಆರ್ಥಿಕ ಸುಸ್ಥಿರತೆ ಪ್ರಶ್ನೆಯೇ ಅಲ್ಲ

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಪಿಂಚಣಿ ಮೂಲನಿಧಿ ಸ್ಥಿರ 

Friday, August 12, 2022

ಭವಿಷ್ಯನಿಧಿ: ವಾರ್ಷಿಕ ವರದಿಗಳು ಸಂಭಾವ್ಯ ಆರ್ಥಿಕ ಹೊರೆಯನ್ನು ಏಕೆ ಪ್ರತಿಬಿಂಬಿಸುವುದಿಲ್ಲ?

 ವಾರ್ಷಿಕ ವರದಿಗಳು ಸಂಭಾವ್ಯ ಆರ್ಥಿಕ ಹೊರೆಯನ್ನು ಏಕೆ ಪ್ರತಿಬಿಂಬಿಸುವುದಿಲ್ಲ?


ಭವಿಷ್ಯನಿಧಿ ಪಿಂಚಣಿ ಪ್ರಕರಣ: ಇಪಿಎಫ್‌ ಒ, ಕೇಂದ್ರಕ್ಕೆ ಸುಪ್ರೀಂಕೋರ್ಟ್‌   ಪ್ರಶ್ನೆ

 [6ನೇ ದಿನದ ವಿಚಾರಣೆ]

ನವದೆಹಲಿ: ಭವಿಷ್ಯನಿಧಿ (ಇಪಿಎಫ್) ಪಿಂಚಣಿ ಪ್ರಕರಣದ ವಿಚಾರಣೆಯ ಅಂತಿಮ ದಿನವಾದ ಗುರುವಾರ (2022 ಆಗಸ್ಟ್‌ 11),  ಪಿಂಚಣಿದಾರರಿಗೆ ಪಿಂಚಣಿ ಯೋಜನೆಯನ್ನು ಪೂರ್ವಾನ್ವಯವಾಗಿ ಮತ್ತು 15,000 ರೂಪಾಯಿಗಳ ವೇತನ ಮಿತಿಗಿಂತ ಹೆಚ್ಚಿನದನ್ನು ಆಯ್ಕೆ ಮಾಡಲು ಅವಕಾಶ ನೀಡಿದರೆ ಸರ್ಕಾರಕ್ಕೆ ಆಗುವ ಸಂಭಾವ್ಯ ಆರ್ಥಿಕ ಹೊರೆಯನ್ನು ವಾರ್ಷಿಕ ವರದಿಗಳು ಏಕೆ ಪ್ರತಿಬಿಂಬಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ಉದ್ಯೋಗಿಗಳ ಪಿಂಚಣಿ ಯೋಜನೆ (ತಿದ್ದುಪಡಿ) ಯೋಜನೆ, 2014 ರದ್ದುಪಡಿಸಿದ ಕೇರಳ, ರಾಜಸ್ಥಾನ ಮತ್ತು ದೆಹಲಿ ಹೈಕೋರ್ಟ್ ತೀರ್ಪುಗಳನ್ನು ಪ್ರಶ್ನಿಸಿ ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ ಒ) ಸಲ್ಲಿಸಿದ ಮೇಲ್ಮನವಿಗಳ ವಿಚಾರಣೆ ಕಾಲದಲ್ಲಿ  ನ್ಯಾಯಮೂರ್ತಿಗಳಾದ ಯುಯು ಲಲಿತ್, ಸುಧಾಂಶು ಧುಲಿಯಾ ಮತ್ತು ಅನಿರುದ್ಧ ಬೋಸ್ ಅವರ ಪೀಠವು ಈ ಪ್ರಶ್ನೆಯನ್ನು ಕೇಳಿತು.

2018 ರಲ್ಲಿ, ಕೇರಳ ಹೈಕೋರ್ಟ್, ಉದ್ಯೋಗಿಗಳ ಪಿಂಚಣಿ (ತಿದ್ದುಪಡಿ) ಯೋಜನೆ, 2014 [2014 ತಿದ್ದುಪಡಿ ಯೋಜನೆ] ಅನ್ನು ರದ್ದುಗೊಳಿಸುವಾಗ, ತಿಂಗಳಿಗೆ ರೂ 15,000 ಮಿತಿ ಮಿತಿಗಿಂತ ಹೆಚ್ಚಿನ ಸಂಬಳಕ್ಕೆ ಅನುಗುಣವಾಗಿ ಪಿಂಚಣಿ ಪಾವತಿಸಲು ಅವಕಾಶ ಮಾಡಿಕೊಟ್ಟಿತ್ತು.

ಫೆಬ್ರವರಿ 25, 2021 ರಂದು, ನ್ಯಾಯಮೂರ್ತಿ ಯುಯು ಲಲಿತ್ ಮತ್ತು ನ್ಯಾಯಮೂರ್ತಿ ಕೆಎಂ ಜೋಸೆಫ್ ಅವರ ವಿಭಾಗೀಯ ಪೀಠವು ಕೇರಳ, ದೆಹಲಿ ಮತ್ತು ರಾಜಸ್ಥಾನದ ಹೈಕೋರ್ಟಿಗೆ ಕೇಂದ್ರ ಸರ್ಕಾರ ಮತ್ತು ಇಪಿಎಫ್‌ಒ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಪ್ರಾರಂಭಿಸದಂತೆ ತಡೆಯೊಡ್ಡಿತ್ತು.

ಆಗಸ್ಟ್ 2021 ರಲ್ಲಿ, ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ನ್ಯಾಯಮೂರ್ತಿಗಳ ಪೀಠವು ಈ ಕೆಳಗಿನ ಸಮಸ್ಯೆಗಳನ್ನು ಪರಿಗಣಿಸಲು ತ್ರಿಸದಸ್ಯ ನ್ಯಾಯಾಧೀಶರ ಪೀಠಕ್ಕೆ ಮೇಲ್ಮನವಿಗಳನ್ನು ಒಪ್ಪಿಸುತ್ತಾ ಕೋರಿತ್ತು:

1. ಉದ್ಯೋಗಿಗಳ ಪಿಂಚಣಿ ಯೋಜನೆಯ ಪ್ಯಾರಾ 11(3) ಅಡಿಯಲ್ಲಿ ಕಟ್-ಆಫ್ ದಿನಾಂಕ ಇರುವುದೇ ಮತ್ತು

2. ಆರ್.ಸಿ. ಗುಪ್ತ ವಿರುದ್ಧ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು (2016) ಪ್ರಕರಣದ ತೀರ್ಪು ಈ ಎಲ್ಲ ವಿಷಯಗಳನ್ನು ವಿಲೇವಾರಿ ಮಾಡಲು ಆಧಾರವಾಗಬೇಕೇ?

ಗುರುವಾರದ ವಿಚಾರಣಾ ಕಲಾಪದ ಮುಖ್ಯಾಂಶಗಳು:

ಹೈಕೋರ್ಟ್ ತೀರ್ಪಿನ ಅನುಷ್ಠಾನ ಎಂದರೆ ಪ್ರತಿಯೊಬ್ಬ ಖಾಸಗಿ ವಲಯದ ಉದ್ಯೋಗಿಗಳಿಗೆ ಮಿತಿಗಿಂತ ಹೆಚ್ಚು ಪಾವತಿ ಮಾಡುವುದು:

ವಿಚಾರಣೆಯ ಸಂದರ್ಭದಲ್ಲಿ, ಇಪಿಎಫ್‌ಒ ಪರವಾಗಿ ಹಾಜರಾದ ಹಿರಿಯ ವಕೀಲ ಆರ್ಯಮ ಸುಂದರಂ ಅವರು ಈ ವಿಷಯಕ್ಕೆ ವಿಷಯಗಳನ್ನು ಪೀಠಕ್ಕೆ ತಿಳಿಸಿದರು:

"ಪಿಎಫ್ಯೋಜನೆಗೆ ಕೊಡುಗೆ ನೀಡುವ ವ್ಯಕ್ತಿಗಳು ಪಿಂಚಣಿ ಯೋಜನೆಯ ಸದಸ್ಯರಾಗಿರುತ್ತಾರೆಯೇ?. ಇದು ಶಾಸನಬದ್ಧ ಮಿತಿಗಿಂತ ಹೆಚ್ಚಿನ ಜನರಿಗಾಗಿ ಇದೆಯೇ?", ನ್ಯಾಯಮೂರ್ತಿ ಯುಯು ಲಲಿತ್ ಕೇಳಿದರು.

"ಮೈ ಲಾರ್ಡ್‌, ಶಾಸನಬದ್ಧ ವೇತನ ಮಿತಿಯು 6,500 ರಿಂದ 15,000 ರೂ.ಗೆ ಬದಲಾಗಿದೆ ಎಂಬುದನ್ನು ಹೊರತುಪಡಿಸಿ ಶಾಸನಬದ್ಧ ಮಿತಿಗಿಂತ ಕೆಳಗಿನ ಜನರಿಗೆ ಏನೂ ಬದಲಾವಣೆ ಮಾಡಲಾಗಿಲ್ಲ” ಎಂದು ಹಿರಿಯ ವಕೀಲರು ಸ್ಪಷ್ಟಪಡಿಸಿದರು.

ಪರಿಗಣಿಸಬೇಕಾಗಿರುವ ಇತರ ಪ್ರಶ್ನೆಗಳು ಯಾವುವು ಎಂದರೆ:

ಅಂತಹ ಜನರಿಗೆ ಪೂರ್ವಾನ್ವಯವಾಗಿ ಹಿಂದಿನ ಕೊಡುಗೆಯನ್ನು ನೀಡಲು ಅನುಮತಿ ನೀಡಬಹುದೇ? ಮತ್ತು 2014 ರ ತಿದ್ದುಪಡಿಯ ದಿನಾಂಕದಂದು ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿದ ಮತ್ತು ಕೊಡುಗೆ ನೀಡಿದವರಿಗೆ ಸಮಾನವಾಗಿ ಇರಿಸಲಾಗುವುದೇ?

ಆರ್.ಸಿ. ಗುಪ್ತ ತೀರ್ಪಿನಂತೆ ಭವಿಷ್ಯ ನಿಧಿಗೆ ಹಾಗೆ ಪೂರ್ವಾನ್ವಯವಾಗಿ ಕೊಡುಗೆ ನೀಡಲು ಅನುಮತಿಸುವುದು ಕೇವಲ ಪುಸ್ತಕ ಹೊಂದಾಣಿಕೆಯಾಗುತ್ತದೆಯೇ ಅಥವಾ ಅದು ಗಂಭೀರವಾದ ಆರ್ಥಿಕ ಪರಿಣಾಮಗಳನ್ನು ಹೊಂದಿರುತ್ತದೆಯೇ?

" ದು ಕೇಂದ್ರ (ಪ್ರಶ್ನೆಯಾಗಿದೆ) ಎಂದು ನಾನು ವೈಯಕ್ತಿಕವಾಗಿ ನಂಬುತ್ತೇನೆ. ಸರ್ಕಾರವು ಹೆಚ್ಚುವರಿ 5000 ಕೋಟಿ, 10,000 ಕೋಟಿ ರೂಪಾಯಿಗಳನ್ನು ಭರಿಸಬೇಕಾಗುತ್ತದೆ. (ಹಾಗಿದ್ದರೆ) ಈ ಜನರಿಗೆ ಏಕೆ ಪ್ರಯೋಜನವನ್ನು ನೀಡಬಾರದು? ಇದು ಖಂಡಿತವಾಗಿಯೂ ನಿಬಂಧನೆಗಳ ಮೇಲೆ ಪ್ರಭಾವ ಬೀರುತ್ತದೆ. ಇದು ಕೇವಲ ಪುಸ್ತಕ ಹೊಂದಾಣಿಕೆಯಾಗಿದ್ದರೆ, ಈ ವಿಷಯದಲ್ಲಿ ಪ್ರಯೋಜನಕಾರಿ ದೃಷ್ಟಿಕೋನವನ್ನು ತೆಗೆದುಕೊಳ್ಳಬೇಕು ಎಂದು. ಆರ್‌ಸಿ ಗುಪ್ತ ತೀರ್ಪು ಹೇಳುತ್ತದೆ.  ಅಥವಾ, ಅದು ತಪ್ಪಾಗಿದ್ದರೆ, ಅಂತಹ ಸಂದರ್ಭದಲ್ಲಿ ಕಠಿಣವಾದ ವ್ಯಾಖ್ಯಾನವನ್ನು ನೀಡಬೇಕಾಗುತ್ತದೆ. ಇದು ನನ್ನ ಸಲ್ಲಿಕೆಯಾಗಿದೆ, ಮೈ ಲಾರ್ಡ್‌” ಎಂದು ಸುಂದರಂ ನ್ಯಾಯಾಲಯಕ್ಕೆ ತಿಳಿಸಿದರು.
ಮಾಸಿಕ ಆಧಾರದ ಮೇಲೆ ಪಿಎಫ್ ಯೋಜನೆಗೆ ದೊಡ್ಡ ಮೊತ್ತದ ಹಣವನ್ನು ನೀಡುವ ಜನರಿದ್ದಾರೆ ಎಂದು ಮೇಲಿನ ಪ್ರಶ್ನೆಗಳಿಗೆ ಉತ್ತರಿಸುತ್ತಾ ನುಡಿದ ಸುಂದರಂ, ಹೇಳಿದರು.

ಕೇರಳ ಹೈಕೋರ್ಟ್ ತೀರ್ಪನ್ನು ಅನುಷ್ಠಾನಗೊಳಿಸುವುದು ಎಂದರೆ ಮೂಲಭೂತವಾಗಿ ಪ್ರತಿಯೊಬ್ಬ ಖಾಸಗಿ ವಲಯದ ಉದ್ಯೋಗಿಗೆ ಅವರ ವೇತನ ಮಿತಿಯನ್ನು ಲೆಕ್ಕಿಸದೆ ಪಿಂಚಣಿ ನೀಡಬೇಕು ಎಂದಾಗುತ್ತದೆ. ಪ್ರತಿ ಖಾಸಗಿ ವಲಯದ ಉದ್ಯೋಗಿಯು ಪಿಂಚಣಿಯನ್ನು ಆರಿಸಿಕೊಳ್ಳುತ್ತಾರೆ ಮತ್ತು ಅವರು ನಿಧಿಗೆ ಕೊಡುಗೆ ನೀಡದಿದ್ದರೂ ಸಹ, ಪಿಂಚಣಿಗೆ ಅರ್ಹವಾದ ಸಂಬಳದ ಶೇಕಡಾ 50% ಅನ್ನು ನೀಡುವ, ಕೊನೆಯ ಸಂಬಳದ ಆಧಾರದ ಮೇಲೆ ಪಿಂಚಣಿಯನ್ನು ಒದಗಿಸಲು ಆಗ್ರಹಿಸುತ್ತಾರೆ” ಎಂದು ಅವರು ವಾದಿಸಿದರು..

"ಪಿಎಫ್ ಯೋಜನೆಗೆ ತಿಂಗಳಿಗೆ 12 ಲಕ್ಷ ರೂಪಾಯಿ ಕೊಡುಗೆ ನೀಡುತ್ತಿರುವ ಜನರಿದ್ದಾರೆ. (ಅವರ) ಸಂಬಳವನ್ನು ಊಹಿಸಿ, ಮೈ ಲಾರ್ಡ್ಸ್. ಆ ವ್ಯಕ್ತಿಗಳು ಕೂಡಾ ಈಗ ಈ ವ್ಯಾಪ್ತಿಗೆ  ಬರುತ್ತಾರೆ." ಎಂದು ಸುಂದರಂ ಹೇಳಿದರು.

"ನಿಮ್ಮ ತಪ್ಪುಗಳಿಂದ ನೀವು ಕಲಿಯಬಹುದು. ನೀವು ಕನಿಷ್ಟ ಮಟ್ಟವನ್ನು ಹೊಂದಿರುವಂತೆಯೇ, ನೀವು ಗರಿಷ್ಠ ಮಟ್ಟವನ್ನು ಮಿತಿಯಾಗಿ ಆಗಿ ಹೊಂದಬಹುದು" ಎಂದು ಪೀಠವು ಅಭಿಪ್ರಾಯಪಟ್ಟಿತು.

"ಗರಿಷ್ಠ ಮಟ್ಟವಿದೆ", ಸುಂದರಂ ಹೇಳಿದರು.

ಕೊಡುಗೆಯ ಮಟ್ಟವನ್ನು ನ್ಯಾಯಾಲಯಕ್ಕೆ ವಿವರಿಸಿದೆ.

"ಇದು ಪ್ರತ್ಯೇಕ ಪ್ರಕರಣವಲ್ಲವೇ?" ಪೀಠ ಮುಂದಿನ ಪ್ರಶ್ನೆಯನ್ನು ಕೇಳಿತು.

"ಈ ಯೋಜನೆಯಲ್ಲಿ, ಹೋರಾಟವು ಸರ್ಕಾರ ಮತ್ತು ಅದರ ಉದ್ಯೋಗಿಗಳ ನಡುವೆ ಅಲ್ಲ. ಅವರು ವ್ಯಾಪ್ತಿಗೆ ಒಳಪಡುತ್ತಾರೆ. ಇದು ನಿಜವಾಗಿ ಖಾಸಗಿ ವಲಯಕ್ಕೆ ಸಂಬಂಧಿಸಿದ್ದು." ವಕೀಲರು ಹೇಳಿದರು.

"ಹೌದು, ನಾವು ಅರ್ಥಮಾಡಿಕೊಂಡಿದ್ದೇವೆ" ಎಂದು ಪೀಠ ಹೇಳಿತು.

ಅದಕ್ಕಾಗಿಯೇ ಖಾಸಗಿ ವಲಯಕ್ಕೆ ಕೂಡಾ ರಕ್ಷಣೆ ಇರಬೇಕು ಎಂಬ ಕಲ್ಪನೆ ಇತ್ತು,'' ಎಂದು ನ್ಯಾಯಮೂರ್ತಿ ಲಲಿತ್ ಹೇಳಿದರು.

 ಒಟ್ಟು ಪರಿಣಾಮ ರಾಜ್ಯ ಸರಕಾರಕ್ಕೆ ಆರ್ಥಿಕ ಹೊರೆ

ಹಿಂದಿನ ವಿಚಾರಣೆಯ ಸಮಯದಲ್ಲಿ, ಪಿಂಚಣಿದಾರರು ಭವಿಷ್ಯ ನಿಧಿಯ ಮೇಲಿನ ಬಡ್ಡಿಯಿಂದ ಪಿಂಚಣಿಯನ್ನು ಪಾವತಿಸುತ್ತಿದ್ದಾರೆ ಮತ್ತು ಮೂಲನಿಧಿ ಸ್ಥಿರವಾಗಿ ಉಳಿದಿದೆ. ಹೀಗಾಗಿ ಕೇಂದ್ರಕ್ಕೆ ಆರ್ಥಿಕ ಹೊರೆಯಾಗುವ ಪ್ರಶ್ನೆಯೇ ಇಲ್ಲ ಎಂದು ವಾದಿಸಿದ್ದರು.

ಇದಕ್ಕೆ ಪ್ರತಿಯಾಗಿ ಸುಂದರಂ ವಾದ ಮಂಡಿಸಿದರು.

"ನಿವ್ವಳ ಪರಿಣಾಮ ಏನು - ಏಕೆಂದರೆ ಇನ್ನೊಂದು ಬದಿಯವರು (ಪಿಂಚಣಿದಾರರ ವಕೀಲರು) ವಿತ್ತೀಯ ಪರಿಣಾಮವು ಏನೂ ಅಲ್ಲ ಎಂದು ಹೇಳಿದ್ದಾರೆ. 21,229 ಜನರು ನಿಜವಾಗಿ ಕೊಡುಗೆ ಪಾವತಿಸಲಿಲ್ಲ. ಆರ್ಥಿಕವಾಗಿ ಇದು ಹೇಗೆ ಪರಿಣಾಮ ಬೀರುತ್ತದೆ?  ಆಕ್ಷೇಪಾರ್ಹ ತೀರ್ಪಿನ ಪ್ರಕಾರ ಇತ್ಯರ್ಥಗೊಳಿಸಲಾಗಿರುವ 21,200 ಪ್ರಕರಣಗಳನ್ನು ತೋರಿಸುವ ಹೊರತು ನಾನು ಏನನ್ನೂ ಇನ್ನೂ ಉತ್ತಮವಾಗಿ ಮಾಡಲು ಸಾಧ್ಯವಿಲ್ಲ. ಇದರ ಆರ್ಥಿಕ ಪರಿಣಾಮ ಏನು ಮತ್ತು ನಾನು ಪ್ರಯೋಜನವನ್ನು ನೀಡಬೇಕಾದ ಒಟ್ಟು 18.2 ಲಕ್ಷ ಜನರು ಇದ್ದಾರೆ ಎಂಬ ಅಂಶವನ್ನು ಯೋಚಿಸಿ. ಅದರಿಂದ, ಸಂಖ್ಯೆಗಳು ಪ್ರಮಾಣಾನುಗುಣವಾಗಿ ಹೆಚ್ಚಾಗಬಹುದು...."

"ಹಾಗಾದರೆ, ನೀವು ಹೇಳುತ್ತಿರುವುದು ಪ್ರತಿಯೊಂದು ಪ್ರಕರಣದಲ್ಲಿ (ಇಪಿಎಫ್‌ಒ ನೀಡಿದ ಉದಾಹರಣೆಗಳು), ನೀಡಿರುವ ಕೊಡುಗೆಯು ಅವರು ಕೊನೆಯಲ್ಲಿ ಪಡೆಯುವುದಕ್ಕಿಂತ ಕಡಿಮೆಯೇ?" ಎಂದು ಪೀಠವು ಪ್ರಶ್ನಿಸಿತು.

"ಹೌದು.... ನಾನು ಹೇಳುತ್ತಿರುವುದು (ಪಿಎಫ್ ಯೋಜನೆ ಮತ್ತು ಪಿಂಚಣಿ ಯೋಜನೆಯ ನಡುವೆ) ಪುಸ್ತಕದಲ್ಲಿನ ವರ್ಗಾವಣೆ ಅಲ್ಲ (ಎಂದು) ಸುಂದರಂ ಹೇಳಿದರು.

“21,200 ಜನರು ಸುಮಾರು 461.19 ಕೋಟಿಗಳನ್ನು ಪಿಎಫ್ ನಿಧಿಗೆ ಪಾವತಿಸುತ್ತಾರೆ ಮತ್ತು 718 ಕೋಟಿಗಳನ್ನು ಪಿಂಚಣಿಯಾಗಿ ತೆಗೆದುಕೊಳ್ಳುತ್ತಾರೆ ಎಂದು ಸುಂದರಂ ನ್ಯಾಯಾಲಯಕ್ಕೆ ವಿವರಿಸಿದರು.

"ಒಟ್ಟು 18.2 ಲಕ್ಷ ಜನರಿಗೆ 1.47 ಲಕ್ಷ ಕೋಟಿ ರೂಪಾಯಿಗಳಾಗುತ್ತವೆ" ಎಂದು ಅವರು ಹೇಳಿದರು.

ಹಕ್ಕು ಸಾಧಿಸುವ ಪ್ರಮಾಣವು ನಿಜವಾದ ಪರಿಣಾಮವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಬಯಸಿರುವುದಾಗಿ ಹೇಳಿದ ನ್ಯಾಯಾಲಯವು ಅಡ್ಡ ಪ್ರಶ್ನೆ ಕೇಳಿತು:

"ಪ್ರಕ್ಷೇಪಿಸಲಾದ ಪರಿಮಾಣವು ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ನೋಡಲು ಬಯಸುತ್ತೇವೆ."

ವಾರ್ಷಿಕ ವರದಿಗಳು ಈ ಅಂಕಿಅಂಶಗಳನ್ನು ಏಕೆ ಹೊಂದಿಲ್ಲ?

ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಮಜಿತ್ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರ ಪರವಾಗಿ ವಾದ ಮಂಡಿಸಿದರು. 2014 ರ ತಿದ್ದುಪಡಿಯು ಬಡ ಕಾರ್ಮಿಕರಿಗೆ ಮಾತ್ರ ಖಾತರಿ ನೀಡುವ ಲಾಭದಾಯಕ ಯೋಜನೆಯಾಗಿರುವುದರಿಂದ ಅದನ್ನು ಜೀವಂತವಾಗಿ ಇರಿಸಲುವಕಾಶ ನೀಡಬೇಕು ಎಂದು ಹೇಳಿದ ಅವರು ಇಪಿಎಫ್ ವಾರ್ಷಿಕ ವರದಿಗಳ ಪ್ರತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ವರದಿಗಳನ್ನು ಪರಿಶೀಲಿಸಿ, ನ್ಯಾಯಾಲಯವು ನೀವು ವಾಸ್ತವಾಂಶಗಳು ಮತ್ತು ಅಂಕಿಅಂಶಗಳ ಆಧಾರದ ಮೇಲೆ ಸಿದ್ಧಾಂತವನ್ನು ಪ್ರಸ್ತುತಪಡಿಸುತ್ತಿದ್ದೀರಿ. ಬಹುಶಃ ನೀವು ಈಗ ಇರಿಸಲು ಪ್ರಯತ್ನಿಸುತ್ತಿರುವ ಆ ದೃಷ್ಟಿಕೋನದ ಪ್ರಕ್ಷೇಪಣವು ತಾರ್ಕಿಕ ಕಡಿತವಾಗಿದೆ ಎಂದು ನಾವು ಹೇಳಬೇಕಾಗುತ್ತದೆ. ಅದನ್ನು ಅಂಗೀಕರಿಸಿದ್ದೇವೆ. ಆದರೆ ಅದರಲ್ಲಿ ಜನರು ಆ ಪರಿಸ್ಥಿತಿಗೆ ಮಿತ್ರರಾಗಿದ್ದರು (ಹೊಂದಿಕೊಂಡಿದ್ದರು) ಎಂದು ನೀವು ಇಂದು ಪ್ರಸ್ತುತಪಡಿಸುತ್ತಿದ್ದೀರಿ. ನಿಮ್ಮ ವಾರ್ಷಿಕ ವರದಿಗಳು ಅದನ್ನು  ಪ್ರತಿಬಿಂಬಿಸುವುದಿಲ್ಲವಲ್ಲ ? ಅದು ಹೇಗೆ?" ಎಂದು ಪ್ರಶ್ನಿಸಿತು.

"ವಾರ್ಷಿಕ ವರದಿಗಳು ನಿರ್ದಿಷ್ಟವಾಗಿ ವಾಸ್ತವಿಕ ವರದಿಗಳನ್ನು ಉಲ್ಲೇಖಿಸುತ್ತವೆ”" ಎಂದು ಎಎಸ್‌ಜಿ ಹೇಳಿದರು.

"ಕೇರಳ ಹೈಕೋರ್ಟ್ ತೀರ್ಪಿನ ಪರಿಣಾಮವಾಗಿ ಸುಮಾರು 1.47 ಲಕ್ಷ ಕೋಟಿಗಳಷ್ಟು ರೂಪಾಯಿಗಳು ಬರಿದಾಗಲಿದೆ ಎಂದು ನೀವು ಭಾವಿಸುವಿರಿ ಅಲ್ಲವೇ? ನಾನು ಆ ಅಭಿವ್ಯಕ್ತಿಯನ್ನು ಬಳಸಿ ಹೇಳಬಹುದಾದರೆ, ನಿಧಿಯು ಸಂಪೂರ್ಣ ನಾಶವಾಗುತ್ತದೆ ಎನ್ನಬಹುದು. ಆ ರೀತಿಯ ಪರಿಣಾಮ ಅದರದ್ದಾಗಿದ್ದರೆ, ಸರ್ಕಾರಕ್ಕೆ ತಿಳಿಸಲಾದ ಸಂವಹನಗಳು ಅಥವಾ ಅಂತರ ವಿಭಾಗೀಯ ಸಂವಹನಗಳು ಇಂತಹ ಪರಿಣಾಮವನ್ನು ಏಕೆ ಉಲ್ಲೇಖಿಸುವುದಿಲ್ಲ" ಎಂದು ನ್ಯಾಯಾಲಯವು ಮತ್ತಷ್ಟು ಪ್ರಶ್ನಿಸಿತು.

ಸ್ವಲ್ಪ ಸಮಯದ ನಂತರ, ಪೀಠವು ಈ ವಿಷಯದಲ್ಲಿ ತನ್ನ ತೀರ್ಪನ್ನು ಕಾಯ್ದಿರಿಸಲು ಮುಂದಾಯಿತು.

ಆರ್.ಸಿ. ಗುಪ್ತ ವಿರುದ್ಧ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಪ್ರಕರಣದ ತೀರ್ಪು, ಪಿಂಚಣಿ ಆಯ್ಕೆಗೆ ಯಾವುದೇ ಕಟ್-ಆಫ್ ಇಲ್ಲ ಎಂದು ಅಭಿಪ್ರಾಯಪಟ್ಟಿದೆ ಪ್ರಸ್ತುತ ಪ್ರಕರಣದಲ್ಲಿ ಇದು ತಮಗೂ  ಅನ್ವಯಿಸುತ್ತದೆ ಎಂದು ಹಿಂದಿನ ವಿಚಾರಣೆ ವೇಳೆ ಪಿಂಚಣಿದಾರರು ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದರು.

ಪ್ರಕರಣಇಪಿಎಫ್‌ ಒ ವಿರುದ್ಧ  ಸುನಿಲ್ ಕುಮಾರ್ ಮತ್ತು ಇತರರು.

ಹಿಂದಿನ ವಿಚಾರಣೆಗಳ ವರದಿಗಳಿಗೆ ಕೆಳಗೆ  ಕ್ಲಿಕ್‌  ಮಾಡಿರಿ

ಇಪಿಎಫ್ ಪಿಂಚಣಿ ಪ್ರಕರಣ: ಭವಿಷ್ಯ ನಿಧಿಸದಸ್ಯರು ಇಪಿಎಸ್ ಅಡಿಯಲ್ಲಿ ಸ್ವಯಂಚಾಲಿತವಾಗಿ ಅರ್ಹರಾಗುವುದಿಲ್ಲ

 ಸಬ್ಸಿಡಿಹಣಕಾಸಿನ ಹೊರೆಯ ವಿವರ ತೋರಿಸಿ: ಕೇಂದ್ರಇಪಿಎಫ್‌ಒಗೆ ಸುಪ್ರಿಂ ಕೋರ್ಟ್ ನಿರ್ದೇಶನ

ಇಪಿಎಫ್ ಪಿಂಚಣಿ ಪ್ರಕರಣ : 'ಪಿಂಚಣಿ ನಿಧಿಯಲ್ಲಿ ಕೊರತೆ ಇಲ್ಲ'

ಭವಿಷ್ಯ ನಿಧಿ ಪಿಂಚಣಿ ಪ್ರಕರಣ: ಆಗಸ್ಟ್‌ 10ಕ್ಕೆ ಮುಂದಿನ ವಿಚಾರಣೆ

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಆರ್ಥಿಕ ಸುಸ್ಥಿರತೆ ಪ್ರಶ್ನೆಯೇ ಅಲ್ಲ

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಪಿಂಚಣಿ ಮೂಲನಿಧಿ ಸ್ಥಿರ 

ಭವಿಷ್ಯನಿಧಿ ಪಿಂಚಣಿ ಪ್ರಕರಣ: ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್ 

Advertisement