Showing posts with label ಇಂದಿನ ಇತಿಹಾಸ History Today (August 21-31).. Show all posts
Showing posts with label ಇಂದಿನ ಇತಿಹಾಸ History Today (August 21-31).. Show all posts

Friday, September 4, 2009

ಇಂದಿನ ಇತಿಹಾಸ History Today ಆಗಸ್ಟ್ 31

ಇಂದಿನ ಇತಿಹಾಸ

ಆಗಸ್ಟ್ 31

ವೇಲ್ಸ್ ರಾಜಕುಮಾರಿ ಡಯಾನಾ ಪ್ಯಾರಿಸ್ಸಿನಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಮೃತರಾದರು. ಆಕೆಯ ಗೆಳೆಯ ಎಮಾಡ್ ಮಹಮ್ಮದ್ `ಡೋಡಿ'ಅಲ್ ಫಯಾಜ್ ಕೂಡಾ ಅಪಘಾತದಲ್ಲಿ ಸಾವನ್ನಪ್ಪಿದರು. ಬ್ರಿಟನ್ ರಾಜಕುಮಾರ ಚಾರ್ಲ್ಸ್ ಜೊತೆ ವಿವಾಹವಾಗಿದ್ದ ರಾಜಕುಮಾರಿ ಡಯಾನಾ 15 ವರ್ಷ ದಾಂಪತ್ಯ ಜೀವನ ನಡೆಸಿದ್ದರು. ದುರಂತ ಸಾವಿಗೆ ಒಂದು ವರ್ಷ ಮೊದಲು (1996ರ ಆಗಸ್ಟ್ 28) ವಿವಾಹ ವಿಚ್ಛೇದನ ಪಡೆದಿದ್ದರು.

2008: ಎರಡು ತಿಂಗಳ ಕಾಲ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ತಾಂಡವವಾಡಲು ಕಾರಣವಾದ ಅಮರನಾಥ ಭೂವಿವಾದ ಬಗೆಹರಿಸುವ ಸಂಬಂಧ ಒಪ್ಪಂದ ಏರ್ಪಟ್ಟಿತು. ಅಮರನಾಥ ಯಾತ್ರೆಯ ಎರಡು ತಿಂಗಳ ಅವಧಿಯಲ್ಲಿ ಮಾತ್ರ ಬಲ್ಟಾಲಿನಲ್ಲಿನ 40 ಹೆಕ್ಟೇರ್ ಪ್ರದೇಶವನ್ನು ಶ್ರೀ ಅಮರನಾಥ ದೇವಸ್ಥಾನ ಮಂಡಳಿ ಬಳಸಿಕೊಳ್ಳಬಹುದು. ಈ ಸ್ಥಳ ಮುಂದೆಯೂ ರಾಜ್ಯ ಅರಣ್ಯ ಇಲಾಖೆಯ ವಶದ್ಲಲೇ ಇರುತ್ತದೆ ಎಂಬ ಬಗ್ಗೆ ಶ್ರೀ ಅಮರನಾಥ ಸಂಘರ್ಷ ಸಮಿತಿ ಮತ್ತು ರಾಜ್ಯಪಾಲರಿಂದ ನೇಮಕಗೊಂಡ 4 ಸದಸ್ಯರ ಸಮಿತಿಯ ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು.

2008: ವೃದ್ಧಾಪ್ಯದಿಂದ ಬಳಲುತ್ತಿದ್ದ ಮಲಯಾಳಂ ಸಿನಿಮಾ ನಿರ್ದೇಶಕ ಹಾಗೂ ಕಾದಂಬರಿಕಾರ ಎನ್. ಎನ್. ಪಿಶಾರ್ದಿ (82) ಕೋಚಿಯಲ್ಲಿ ನಿಧನರಾದರು. ಬ್ರಹ್ಮಚಾರಿಯಾಗಿದ್ದ ಅವರು 6 ಸಿನಿಮಾ ನಿರ್ದೇಶಿಸಿದ್ದರು. ಅವುಗಳಲ್ಲಿ `ನಿನಮಣಿಜ ಕಲ್ ಪ್ಪದುಗಲ್' ಅತ್ಯುತ್ತಮ ಸಿನಿಮಾ ಎಂದು 1962ರಲ್ಲಿ ಬೆಳ್ಳಿ ಪದಕ ಪಡೆದಿತ್ತು. ಅಲ್ಲದೆ ರಾಜ್ಯ ಪ್ರಶಸ್ತಿಯೂ ಇದಕ್ಕೆ ಲಭಿಸಿತ್ತು.

2007: ರಾಮೇಶ್ವರದ ಬಳಿ ಸಮುದ್ರದಲ್ಲಿನ ಐತಿಹಾಸಿಕ ರಾಮರ್ ಸೇತುವೆಯನ್ನು (ರಾಮಸೇತು) ಒಡೆಯದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. ಕಡಲುಗಾಲುವೆ ನಿರ್ಮಾಣಕ್ಕಾಗಿ ಭಾರತ ಹಾಗೂ ಶ್ರೀಲಂಕಾ ಮಧ್ಯೆ ಸಮುದ್ರದ ಪಾಕ್ ಮತ್ತು ಮನ್ನಾರ್ ಜಲಸಂಧಿಯಲ್ಲಿ ಹೂಳೆತ್ತುವ ಕೆಲಸಕ್ಕೆ ಕೋರ್ಟ್ ಕೆಲವು ನಿರ್ಬಂಧ ಹೇರಿತು. ಇದರೊಂದಿಗೆ ಸೇತುಸಮುದ್ರಂ ಕಾಲುವೆ ಯೋಜನೆ ವಿವಾದ ಹೊಸ ತಿರುವು ಪಡೆದುಕೊಂಡಿತು. `ರಾಮಸೇತು'ಗೆ ಯಾವುದೇ ಅಪಾಯವಾಗದಂತೆ ಸೇತುಸಮುದ್ರಂ ಕಾಮಗಾರಿ ಮುಂದುವರಿಸಬಹುದು ಎಂದು ನ್ಯಾಯಮೂರ್ತಿ ಬಿ. ಎನ್. ಅಗರವಾಲ್ ನೇತೃತ್ವದ ನ್ಯಾಯಪೀಠ ಕೇಂದ್ರಕ್ಕೆ ಸೂಚಿಸಿತು. ವಿಚಾರಣೆ ವೇಳೆಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಹ್ಮಣ್ಯಂ ಅವರು ಈ ಆದೇಶದ ಬಗ್ಗೆ ವಿವರಣೆ ಕೋರಿದಾಗ, `ರಾಮಸೇತುವಿಗೆ ಧಕ್ಕೆಯಾಗದ ರೀತಿಯಲ್ಲಿ ಹೂಳೆತ್ತುವ (ಡ್ರೆಜ್ಜಿಂಗ್) ಕೆಲಸವನ್ನು ನಡೆಸಬಹುದು. ಸೆಪ್ಟೆಂಬರ್ 14ರಂದು ನಡೆಯುವ ವಿಚಾರಣೆಯ ವೇಳೆಗೆ ಸರ್ಕಾರ ತನ್ನ ಹೇಳಿಕೆಯನ್ನು ದಾಖಲಿಸಬೇಕು' ಎಂದು ನ್ಯಾಯಪೀಠ ತಿಳಿಸಿತು. ಸೇತುಸಮುದ್ರಂ ಕಾಲುವೆ ಯೋಜನೆ ಜಾರಿ ಮಾಡುವಾಗ ಡೈನಮೈಟ್ ಸ್ಫೋಟ ಅಥವಾ ಇನ್ನಾವುದೇ ಕಾಮಗಾರಿಯಿಂದ 40 ಕಿ. ಮೀ. ಉದ್ದದ ರಾಮಸೇತುವಿಗೆ (ಆಡಮ್ ಸೇತುವೆ) ಯಾವುದೇ ರೀತಿಯ ಧಕ್ಕೆ ಉಂಟು ಮಾಡದಂತೆ ಕೇಂದ್ರ ಸರ್ಕಾರ ಮತ್ತು ಸೇತುಸಮುದ್ರಂ ಕಾರ್ಪೊರೇಷನ್ನಿಗೆ ನಿರ್ದೇಶನ ನೀಡುವಂತೆ ಕೇಂದ್ರದ ಮಾಜಿ ಸಚಿವ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಅರ್ಜಿಯಲ್ಲಿ ಕೋರಿದ್ದರು. ಆಗಸ್ಟ್ 26ರಂದು ರಾಮೇಶ್ವರಕ್ಕೆ ಭೇಟಿ ನೀಡಿದ್ದಾಗ ಆರ್ ಡಿ ಎಕ್ಸ್ ತುಂಬಿ ಸ್ಫೋಟಿಸಲು ರಾಮಸೇತುಗೆ ರಂಧ್ರ ಕೊರೆಯಲಾಗುತ್ತಿತ್ತು. ಒಮ್ಮೆ ಈ ಸೇತುವೆಯನ್ನು ಹಾಳು ಮಾಡಿದರೆ ನಮ್ಮ ಪರಂಪರೆ ಮತ್ತು ಸಂಸ್ಕೃತಿಗೆ ಧಕ್ಕೆಯಾಗುವುದರ ಜತೆಗೆ ಅಸಂಖ್ಯಾತ ಜನರ ಧಾರ್ಮಿಕ ಭಾವನೆಯನ್ನು ಕೆರಳಿಸಿದಂತಾಗುತ್ತದೆ ಎಂದು ಸ್ವಾಮಿ ಅವರು ತಮ್ಮ ಅರ್ಜಿಯಲ್ಲಿ ಪ್ರತಿಪಾದಿಸಿದ್ದರು.

2007: ಹನ್ನೊಂದು ವರ್ಷಗಳ ಹಿಂದೆ ಸಿವಾನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೇಲೆ ಹಲ್ಲೆ ನಡೆಸಿದ್ದು ಸಾಬೀತಾಗಿರುವುದರಿಂದ ಆರೋಪಿ ಆರ್ ಜೆಡಿ ಸಂಸದ ಮೊಹಮ್ಮದ್ ಶಹಾಬುದ್ದೀನ್ ಗೆ ಹತ್ತು ವರ್ಷಗಳ ಕಠಿಣ ಸಜೆ ಮತ್ತು ಎರಡು ಸಾವಿರ ರೂಪಾಯಿ ದಂಡ ವಿಧಿಸಲಾಯಿತು. ಭಾರತೀಯ ದಂಡ ಸಂಹಿತೆಯ 307 ಕಲಂನನ್ವಯ ಶಹಾಬ್ದುದೀನ್ ಅವರನ್ನು ತಪ್ಪಿತಸ್ಥರೆಂದು ಸಿವಾನಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ನ್ಯಾಯಮೂರ್ತಿ ಜ್ಞಾನೇಶ್ವರ ಪ್ರಸಾದ್ ಶ್ರೀವಾಸ್ತವ್ ತೀರ್ಪು ನೀಡಿದರು. ಇದಲ್ಲದೆ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ 353ನೇ ಕಲಂ ಪ್ರಕಾರ ಎರಡು ವರ್ಷ ಶಿಕ್ಷೆ, 500 ರೂಪಾಯಿ ದಂಡ ಹಾಗೂ ಶಸ್ತ್ರಾಸ್ತ್ರ ಕಾಯಿದೆಯಡಿ ಏಳು ವರ್ಷ ಶಿಕ್ಷೆ ಮತ್ತು ಒಂದು ಸಾವಿರ ರೂಪಾಯಿ ದಂಡವನ್ನು ಸಹ ಶಹಾಬ್ದುದೀನ್ ಗೆ ವಿಧಿಸಲಾಯಿತು. ಶಹಾಬ್ದುದೀನ್ ಅವರ ಪೊಲೀಸ್ ಅಂಗ ರಕ್ಷಕರಾದ ಜಹಾಂಗೀರ್ ಮತ್ತು ಖಾಲಿಕ್ ಅವರನ್ನು ಸಹ ಈ ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿ ಅಷ್ಟೇ ಪ್ರಮಾಣದ ಶಿಕ್ಷೆ ನೀಡಲಾಯಿತು. ಹನ್ನೊಂದು ವರ್ಷಗಳ ಹಿಂದೆ ಶಹಾಬ್ದುದೀನ್ ಅವರು ಜೀರಾದಿ ಕ್ಷೇತ್ರದ ಶಾಸಕರಾಗಿದ್ದಾಗ ಈ ಪ್ರಕರಣ ನಡೆದಿತ್ತು.

2007: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭಾರತದಲ್ಲಿ ಮಾತ್ರವಲ್ಲ, ವಿಶ್ವದಲ್ಲೂ ಅತ್ಯಂತ ಪ್ರಭಾವ ಬೀರುತ್ತಿರುವ ಮಹಿಳೆ ಎಂದು ಗುರುತಿಸಿದ್ದಲ್ಲದೆ ಪೆಪ್ಸಿ ಅಧ್ಯಕ್ಷೆ, ಕರ್ನಾಟಕದ ಸೊಸೆ ಇಂದ್ರಾ ನೂಯಿ ಅವರನ್ನು ವಿಶ್ವದ 10 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸೇರಿಸಲಾಯಿತು. ಅಮೆರಿಕದ `ಫೋಬ್ಸ್' ನಿಯತಕಾಲಿಕ ಪ್ರಕಟಿಸಿರುವ ಈ ಪಟ್ಟಿಯಲ್ಲಿ ಸೋನಿಯಾ 6ನೇ ಸ್ಥಾನ ಪಡೆದರು. ಕಳೆದ ವರ್ಷ ಅವರು 13ನೇ ಸ್ಥಾನದಲ್ಲಿದ್ದರು. ಸೋನಿಯಾ ಕಣಕ್ಕಿಳಿಸಿದ ಅಭ್ಯರ್ಥಿ ಪ್ರತಿಭಾ ಪಾಟೀಲ್ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವುದು ಅವರ ಹೆಚ್ಚುತ್ತಿರುವ ಪ್ರಭಾವಕ್ಕೆ ಸಾಕ್ಷಿ ಎಂದು ಪತ್ರಿಕೆ ಹೇಳಿತು. ಆದರೆ 2006ರಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಇಂದ್ರಾ ನೂಯಿ ಐದನೇ ಸ್ಥಾನಕ್ಕೆ ಇಳಿದರು. ಜಗತ್ತಿನ ಒಂದು ನೂರು ಪ್ರಭಾವಿ ಮಹಿಳೆಯರಿರುವ ಈ ಪಟ್ಟಿಯಲ್ಲಿ ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಸತತ ಎರಡನೇ ವರ್ಷವೂ ಪ್ರಥಮ ಸ್ಥಾನ ಉಳಿಸಿಕೊಂಡರು.
ಇನ್ನೊಬ್ಬ ಭಾರತೀಯ ಮಹಿಳೆ ಅಮೆರಿಕದ ಜಂಬೋ ಗ್ರೂಪ್ ಅಧ್ಯಕ್ಷೆ ವಿದ್ಯಾ ಛಾಬ್ರಿಯಾ 97ನೇ ಸ್ಥಾನದಲ್ಲಿದ್ದರೆ, ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು `ಪ್ರಭಾವಿ ಮಹಿಳೆಯ ಹಿಂದಿರುವ ಇನ್ನೊಬ್ಬಳು ಪ್ರಭಾವಿ ಮಹಿಳೆ' ಎಂದು ಪತ್ರಿಕೆ ಹೇಳಿತು.

2006: ದಕ್ಷಿಣ ಆಫ್ರಿಕಾದ ಡರ್ಬಾನಿನ ಬಡ ಕರಿಯರ ವಸತಿ ಪ್ರದೇಶದ ಪ್ರೌಢಶಾಲೆಯೊಂದಕ್ಕೆ ಅಬ್ದುಲ್ ಕಲಾಂ ಅವರು ಕಳುಹಿಸಿರುವ 2 ಲಕ್ಷ ಅಮೆರಿಕನ್ ಡಾಲರ್ ಮೌಲ್ಯದ ಪ್ರಯೋಗಾಲಯ ಉಪಕರಣ ತಲುಪಿತು. 2004ರಲ್ಲಿ ದಕ್ಷಿಣ ಆಫ್ರಿಕಕ್ಕೆ ಭೇಟಿ ನೀಡಿದ್ದ ಕಾಲದಲ್ಲಿ ಕಲಾಂ ಅವರು ಉಮ್ಲಾಝಿ ಪಟ್ಟಣದ ಮೆಂಝಿ ಹೈಸ್ಕೂಲಿಗೆ ವಿಜ್ಞಾನ ಉಪಕರಣ ಒದಗಿಸುವ ಭರವಸೆ ನೀಡಿದ್ದರು. ಭಾರತೀಯ ರಾಜತಾಂತ್ರಿಕ ಅಜಯ್ ಸ್ವರೂಪ್ ಅವರು ಅಧಿಕೃತ ಸಮಾರಂಭದಲ್ಲಿ ಉಪಕರಣವನ್ನು ಶಾಲೆಯ ಪ್ರಾಂಶುಪಾಲರಾದ ಫೆಲಿಕ್ಸ್ ಶೊಲೋಲೊ ಮತ್ತು ಕ್ವಾಝುಲು-ನೇಟಾಲ್ ಪ್ರಾಂತದ ಶಿಕ್ಷಣ ಸಚಿವೆ ಇನಾ ಕ್ರೋನೆ ಅವರಿಗೆ ಹಸ್ತಾಂತರಿಸಿದರು.

2006: ಜಾಗತಿಕ ಐಟಿ ಸಂಸ್ಥೆಯಾಗಿರುವ ಇನ್ಫೋಸಿಸ್ ಟೆಕ್ನಾಲಜೀಸ್ ಒಂದು ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ಹೊಂದಿರುವ ಕಂಪೆನಿಗಳ ಸಾಲಿಗೆ ಸೇರ್ಪಡೆಗೊಂಡಿತು. ಈ ಪ್ರಮಾಣದ ಬಂಡವಾಳ ಹೊಂದಿರುವ ಎಲೈಟ್ ಕ್ಲಬ್ಬಿನಲ್ಲಿ ಈಗಾಗಲೇ ಒಎನ್ ಜಿಸಿ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎನ್ ಟಿಪಿಸಿ ಸೇರ್ಪಡೆಯಾಗಿದ್ದು, ಇನ್ಫೋಸಿಸ್ ಈ ಸಾಲಿಗೆ ಸೇರಿದ ನಾಲ್ಕನೆ ಕಂಪೆನಿಯಾಯಿತು.

2006: ವಿಶ್ವದ ಮೊತ್ತ ಮೊದಲ ಸಂಗೀತಮಯ ರೊಬೋಟ್ `ಮಿಯುರೊ'ವನ್ನು ರೂಪದರ್ಶಿಯೊಬ್ಬಳು ಟೋಕಿಯೋದಲ್ಲಿ ಪ್ರದರ್ಶಿಸಿದಳು. ಮೊಟ್ಟೆ ಆಕಾರದಲ್ಲಿರುವ ಈ ರೊಬೋಟ್ ಸ್ವಯಂಚಾಲಿತವಾಗಿ ಚಲಿಸುವುದಲ್ಲದೆ ಸಂಗೀತಕ್ಕೆ ನೃತ್ಯವನ್ನೂ ಮಾಡುತ್ತದೆ.

2006: ವಿವಿಧ ಕ್ಷೇತ್ರಗಳಿಗೆ ಸಲ್ಲಿಸಿದ ಸೇವೆಗಳಿಗಾಗಿ ನೀಡಲಾಗುವ `ಪ್ರಿಯದರ್ಶಿನಿ' ಪ್ರಶಸ್ತಿಗೆ ಇನ್ಫೋಸಿಸ್ ಟೆಕ್ನಾಲಜೀಸ್ ಸ್ಥಾಪಕ ಎನ್. ಆರ್. ನಾರಾಯಣಮೂರ್ತಿ ಮತ್ತು ಬಾಲಿವುಡ್ ತಾರೆ ಕರೀನಾ ಕಪೂರ್ ಆಯ್ಕೆಯಾದರು.

1997: ವೇಲ್ಸ್ ರಾಜಕುಮಾರಿ ಡಯಾನಾ ಪ್ಯಾರಿಸ್ಸಿನಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಮೃತರಾದರು. ಆಕೆಯ ಗೆಳೆಯ ಎಮಾಡ್ ಮಹಮ್ಮದ್ `ಡೋಡಿ'ಅಲ್ ಫಯಾಜ್ ಕೂಡಾ ಅಪಘಾತದಲ್ಲಿ ಸಾವನ್ನಪ್ಪಿದರು. ಬ್ರಿಟನ್ ರಾಜಕುಮಾರ ಚಾರ್ಲ್ಸ್ ಜೊತೆ ವಿವಾಹವಾಗಿದ್ದ ರಾಜಕುಮಾರಿ ಡಯಾನಾ 15 ವರ್ಷ ದಾಂಪತ್ಯ ಜೀವನ ನಡೆಸಿದ್ದರು. ದುರಂತ ಸಾವಿಗೆ ಒಂದು ವರ್ಷ ಮೊದಲು (1996ರ ಆಗಸ್ಟ್ 28) ವಿವಾಹ ವಿಚ್ಛೇದನ ಪಡೆದಿದ್ದರು.

1995: ಪಂಜಾಬಿನ ಮುಖ್ಯಮಂತ್ರಿ ಬೇ ಆಂತ್ ಸಿಂಗ್ ಅವರು ಚಂಡೀಗಢದಲ್ಲಿ ನಡೆದ ಬಾಂಬ್ ದಾಳಿಯ್ಲಲಿ ಅಸುನೀಗಿದರು.

1993: ಕೇಂದ್ರ ವಾಣಿಜ್ಯ ಸಚಿವರಾಗಿ ಪ್ರಣವ್ ಮುಖರ್ಜಿ ಅಧಿಕಾರ ಸ್ವೀಕಾರ.

1982: ಭಾರತದ ಮಾಜಿ ಉಪರಾಷ್ಟ್ರಪತಿ ಜಿ.ಎಸ್. ಪಾಠಕ್ ನಿಧನ.

1981: ಒಂದು ದಿನ ಹಿಂದೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಇರಾನಿನ ನೂತನ ಅಧ್ಯಕ್ಷ ಮಹಮ್ಮದ್ ಅಲ್ ಹಜಾಯಿ (48) ಮತ್ತು ಪ್ರಧಾನಿ ಮಹಮ್ಮದ್ ಜಾನದ್ ಅವರು ಈದಿನ ಬೆಳಗ್ಗೆ ಅಸು ನೀಗಿದರು. ಇದೇ ದಿನ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

1981: ಮದ್ರಾಸಿನಿಂದ (ಈಗಿನ ಚೆನ್ನೈ) ದೆಹಲಿಗೆ ಹೋಗುತ್ತಿದ್ದ ತಮಿಳುನಾಡು ಎಕ್ಸ್ ಪ್ರೆಸ್ ರೈಲು ಕಾಜಿಪೇಟ್-ಬಲದ್ ಷಾ ವಿಭಾಗದ ಮಧ್ಯೆ ಹಳಿ ತಪ್ಪಿ ಮಗುಚಿದ ಪರಿಣಾಮವಾಗಿ 25ಜನ ಮೃತರಾಗಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

1979: ಭಾರತದ ಉಪರಾಷ್ಟ್ರಪತಿಯಾಗಿ ಎಂ. ಹಿದಾಯತುಲ್ಲಾ (1979-84) ನೇಮಕ.

1969: ಭಾರತದ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಜನ್ಮದಿನ.

1969: ಬಾಕ್ಸರ್ ರಾಕಿ ಮರ್ಸಿಯಾನೋ ಅವರು ಅಯೋವಾದಲ್ಲಿ ಸಂಭವಿಸಿದ ಹಗುರ ವಿಮಾನ ಅಪಘಾತದಲ್ಲಿ ತಮ್ಮ ಹುಟ್ಟು ಹಬ್ಬಕ್ಕಿಂತ ಒಂದು ದಿನ ಮೊದಲು ಮೃತರಾದರು.

1963: ವಾಷಿಂಗ್ಟನ್ ಡಿ.ಸಿ. ಮತ್ತು ಮಾಸ್ಕೊ ಮಧ್ಯೆ ಹಾಟ್ ಲೈನ್ ಸಂವಹನ (ಕಮ್ಯೂನಿಕೇಷನ್ಸ್) ಸಂಪರ್ಕ ಆರಂಭವಾಯಿತು.

1956: ಪ್ರಾಂತ್ಯಗಳ ಪುನರ್ ವಿಂಗಡಣಾ ಮಸೂದೆಗೆ ರಾಷ್ಟ್ರಾಧ್ಯಕ್ಷರು ಸಮ್ಮತಿ ಮುದ್ರೆ ಒತ್ತಿದರು. ವಾರದ ಹಿಂದೆ ಸಂಸತ್ತು ಈ ಮಸೂದೆಯನ್ನು ಅಂಗೀಕರಿಸಿತ್ತು.

1956: ಪದ್ಮಶ್ರೀ ನೇತ್ರದಾನಿ ಡಾ. ಎಂ.ಸಿ. ಮೋದಿ ಅವರು ಕರ್ನಾಟಕದ ಹೊಸಪೇಟೆಯಲ್ಲಿನಡೆಸಿದ ತಮ್ಮ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಕುರುಡನೊಬ್ಬನಿಗೆ ಕೋಳಿಮರಿಯ ಕಣ್ಣುಗುಡ್ಡೆಗಳನ್ನು ಹಾಕಿ ನೇತ್ರ ಶಸ್ತ್ರಚಿಕಿತ್ಸೆ ನಡೆಸಿ ದೃಷ್ಟಿ ತಂದುಕೊಡುವಲ್ಲಿ ಯಶಸ್ವಿಯಾದರು.

1952: ಸಾಹಿತಿ ಕೆ. ಜಯಪ್ರಕಾಶ ರಾವ್ ಜನನ.

1938: ಸಾಹಿತಿ, ಪ್ರವಚನಕಾರ, ಕೀರ್ತನಕಾರ ದಾನಪ್ಪ ಜತ್ತಿ ಅವರು ಸಿದ್ರಾಮಪ್ಪ ಜತ್ತಿ- ದೊಡ್ಡಮ್ಮ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ತಿಕೋಟದಲ್ಲಿ ಜನಿಸಿದರು. ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸಿದ ಅವರಿಗೆ ಕರ್ನಾಟಕ ರಾಜ್ಯ ಸಂಗೀತ ಮತ್ತು ನೃತ್ಯ ಅಕಾಡೆಮಿಯಿಂದ `ಕರ್ನಾಟಕ ಕಲಾ ತಿಲಕ' ಬಿರುದು ಹಾಗೂ ಪ್ರಶಸ್ತಿ ಲಭಿಸಿದೆ.

1919: ಭಾರತದ ಖ್ಯಾತ ಬರಹಗಾರ್ತಿ, ಕವಯಿತ್ರಿ, ಕಾದಂಬರಿಗಾರ್ತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಅಮೃತಾ ಪ್ರೀತಮ್ ಜನ್ಮದಿನ.

1907: ರಾಮೋನ್ ಮ್ಯಾಗ್ಸೇಸೆ (1907-57) ಜನ್ಮದಿನ. ಫಿಲಿಪ್ಪೀನ್ಸ್ ಅಧ್ಯಕ್ಷರಾಗಿದ್ದ ಇವರು ಕಮ್ಯೂನಿಸ್ಟ್ ನೇತೃತ್ವದ (ಹಕ್) ಚಳವಳಿಯನ್ನು ಯಶಸ್ವಿಯಾಗಿ ಸೋಲಿಸಿದ ವ್ಯಕ್ತಿ. ಅವರ ನೆನಪಿಗಾಗಿ ಪ್ರತಿವರ್ಷ ಮ್ಯಾಗ್ಸೇಸೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

1887: ಥಾಮಸ್ ಆಲ್ವ ಎಡಿಸನ್ ಕಂಡು ಹಿಡಿದ `ಕೈನೆಟೋಸ್ಕೋಪ್' ಗೆ ಹಕ್ಕು ಸ್ವಾಮ್ಯ ನೀಡಲಾಯಿತು. ಈ ಯಂತ್ರವನ್ನು ಚಲಿಸುವ ಚಿತ್ರಗಳ ನಿರ್ಮಾಣಕ್ಕೆ ಬಳಸಲಾಗುತ್ತಿತ್ತು.

1881: ಅಮೆರಿಕದ ಮೊದಲ ಟೆನಿಸ್ ಚಾಂಪಿಯನ್ ಶಿಪ್ ರೋಡ್ ಐಲ್ಯಾಂಡಿನ ನ್ಯೂಪೋರ್ಟ್ ಕ್ಯಾಸಿನೋದಲ್ಲಿ ಆರಂಭವಾಯಿತು. ರಿಚರ್ಡ್ ಸಿಯರ್ಸ್ ಅವರು ವಿಲಿಯಂ ಗ್ಲೈನ್ ಅವರನ್ನು ಪರಾಭವಗೊಳಿಸಿ ಮೊದಲ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡರು. 1887ರಲ್ಲಿ ಮಹಿಳೆಯರ ಆಟವನ್ನು ಆರಂಭಿಸಲಾಯಿತು.

Thursday, September 3, 2009

ಇಂದಿನ ಇತಿಹಾಸ History Today ಆಗಸ್ಟ್ 30

ಇಂದಿನ ಇತಿಹಾಸ

ಆಗಸ್ಟ್ 30

ಜೈಲಿನಲ್ಲಿರುವ ಆರ್ ಜೆಡಿ ಸಂಸದ ಶಹಾಬ್ದುದೀನ್ ಅವರ ವಿರುದ್ಧ ಸಿವಾನ್ ಪೊಲೀಸ್ ವರಿಷ್ಠಾಧಿಕಾರಿ ಎಸ್.ಕೆ.ಸಿಂಘಾಲ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಅಪರಾಧ ಸಾಬೀತಾಗಿದೆ ಎಂದು ಸಿವಾನಿನ ವಿಶೇಷ ನ್ಯಾಯಾಲಯ ತೀರ್ಪು ನೀಡಿತು. 1996ರ ಮೇ 3ರಂದು ಸಿವಾನ್ ಜಿಲ್ಲೆಯಲ್ಲಿ ಸಿಂಘಾಲ್ ಮೇಲೆ ನಡೆದ ಹಲ್ಲೆಯಲ್ಲಿ ಶಹಾಬ್ದುದೀನ್ ಭಾಗಿಯಾಗಿದ್ದರು ಎಂಬುದು ಸಾಬೀತಾಗಿದೆ ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜ್ಞಾನೇಶ್ವರ್ ಪ್ರಸಾದ್ ಶ್ರೀವಾಸ್ತವ್ ಹೇಳಿದರು.

2008: ಅಮೆರಿಕದ ನ್ಯೂಜೆರ್ಸಿಯಲ್ಲಿ ಆರಂಭದ ಮೂರು ದಿನಗಳ ವಿಶ್ವ ಗುಜರಾತಿ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲು ಗುಜರಾತ್ ಮುಖ್ಯ ಮಂತ್ರಿ ನರೇಂದ್ರ ಮೋದಿ ಅವರಿಗೆ ವೀಸಾವನ್ನು ಕೊಡುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿತು. ಗುಜರಾತಿನಲ್ಲಿ 2002ರಲ್ಲಿ ಮುಸ್ಲಿಮರ ವಿರುದ್ಧ ನಡೆದ ಗಲಭೆಯಲ್ಲಿ ಮೋದಿ ಅವರು ಷಾಮೀಲಾಗಿರುವ ಆರೋಪದ ಹಿನ್ನೆಲೆಯಲ್ಲಿ ವೀಸಾ ಕೊಡದಿರಲು ನಿರ್ಧರಿಸಲಾಗಿದೆ ಎಂದು ಇಲಾಖೆ ಹೇಳಿತು.

2007: ಮಲೇಷ್ಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ರತಕೃಷ್ಣನ್ ವೇಲು ಎಂಬಾತ ಕ್ವಾಲಾಲಂಪುರದಲ್ಲಿ ತನ್ನ ಬಲಿಷ್ಠ ಹಲ್ಲುಗಳ ಶಕ್ತಿಯಿಂದ ಏಳು ಬೋಗಿಗಳನ್ನು ಹೊಂದಿದ್ದ ರೈಲುಗಾಡಿಯನ್ನು ಎಳೆದು ಪರಾಕ್ರಮ ಮೆರೆದ. ಈತ 297.1 ಮೆಟ್ರಿಕ್ ಟನ್ ಭಾರದ ರೈಲನ್ನು 2.8 ಮೀಟರ್ ದೂರ ಎಳೆಯುವಲ್ಲಿ ಯಶಸ್ವಿಯಾದ. ಕಬ್ಬಿಣದ ಸರಪಳಿಯನ್ನು ರೈಲಿಗೆ ಕಟ್ಟಲಾಗಿತ್ತು. ಅದರ ಮತ್ತೊಂದು ತುದಿಯನ್ನು ಹಲ್ಲಿನಿಂದ ಕಚ್ಚಿ ಹಿಡಿದ ವೇಲು ಸರ್ವಶಕ್ತಿಯನ್ನೂ ಉಪಯೋಗಿಸಿ ರೈಲನ್ನು ಎಳೆದ. ಇದೊಂದು ವಿಶ್ವದಾಖಲೆ ಎಂದು ಸಂಘಟಕರು ತಿಳಿಸಿದರು. ದಾಖಲೆಗಳ ಪರಿಶೀಲನೆ ಬಳಿಕ ಈ ಸಾಧನೆಗೆ ಗಿನ್ನೆಸ್ ವಿಶ್ವದಾಖಲೆಯ ಮಾನ್ಯತೆ ಲಭಿಸಬಹುದು ಎಂದು ವೇಲುವಿನ ಮ್ಯಾನೇಜರ್ ಅಣ್ಣ ಚಿದಂಬರ್ ಹೇಳಿದರು. `ಕಿಂಗ್ ಟೂಥ್' ಎಂದೇ ಜನಪ್ರಿಯನಾಗಿರುವ ವೇಲು ಅಪ್ಪಟ ಸಸ್ಯಾಹಾರಿ. ಈತ 2003ರ ಅಕ್ಟೋಬರ್ 18 ರಂದು 260.8 ಮೆಟ್ರಿಕ್ ಟನ್ ಭಾರದ ರೈಲನ್ನು 4.2 ಮೀ. ದೂರ ಎಳೆದು ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ಹೆಸರು ಪಡೆದಿದ್ದ. ವೇಲು ಈ ಸಾಹಸ ಮಾಡಿದ್ದು ಯೋಗ, ಧ್ಯಾನದ ಬಲದಿಂದ. ಪ್ರಯತ್ನ ಅರಂಭಿಸುವ ಮೊದಲು ಈತ ಎರಡೂ ಕಣ್ಣುಗಳನ್ನು ಮುಚ್ಚಿ ನಿಡಿದಾದ ಉಸಿರು ಎಳೆದು ಧ್ಯಾನ ನಿರತನಾಗಿದ್ದ.

2007: ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳಿಗೆ ಹಣಕಾಸು ನೆರವು ನೀಡುವಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಬ್ಯಾಂಕಿಗೆ ಕೇಂದ್ರ ಸರ್ಕಾರ ನೀಡುವ ಪ್ರಥಮ ರಾಷ್ಟ್ರೀಯ ಪ್ರಶಸ್ತಿಯನ್ನು ಕೆನರಾ ಬ್ಯಾಂಕ್ ಪಡೆದುಕೊಂಡಿತು. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಂ.ಬಿ.ಎನ್. ರಾವ್ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

2007: ನಂದಿ ಇನ್ ಫ್ರಾಸ್ಟ್ರಕ್ಷರ್ ಕಾರಿಡಾರ್ ಎಂಟರ್ ಪ್ರೈಸಸ್ (ನೈಸ್) ವಶದಲ್ಲಿರುವ ಹೆಚ್ಚುವರಿ ಜಮೀನು ಪರಾಭಾರೆಗೆ ಅವಕಾಶ ಕಲ್ಪಿಸಿದ್ದ ಒಪ್ಪಂದವನ್ನು ರದ್ದುಪಡಿಸಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿತು. 2002ರ ಆಗಸ್ಟ್ 6ರಂದು ನೈಸ್ ಮತ್ತು ಸರ್ಕಾರದ ನಡುವೆ ಆದ ಒಪ್ಪಂದದ ಉಪ ವಿಧಿ 1.1.3ರ ಪ್ರಕಾರ ಸರ್ಕಾರದಿಂದ ಪಡೆದ ಜಮೀನು ಮಾರಾಟ ಮಾಡಲು ನೈಸ್ ಗೆ ಅವಕಾಶವಿತ್ತು. ಈ ಉಪ ವಿಧಿಯನ್ನು ರದ್ದು ಮಾಡಲು ಕೈಗಾರಿಕಾ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಸಂಪುಟ ಸಭೆಯ ನಂತರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಪ್ರಕಟಿಸಿದರು.

2007: ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಡಾ.ರಾಜ್ ಕುಮಾರ್ ಪ್ರಶಸ್ತಿಯನ್ನು ಹಿರಿಯ ಕಲಾವಿದೆ ಎಂ.ಎನ್.ಲಕ್ಷ್ಮೀದೇವಿ, ಜೀವಮಾನ ಸಾಧನೆಗಾಗಿ ನೀಡಲಾಗುವ ಪ್ರಶಸ್ತಿಯನ್ನು ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಸ್ವೀಕರಿಸಿದರು. ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಚಿತ್ರ ನಿರ್ದೇಶಕ ಸಿಂಗೀತಂ ಶ್ರೀನಿವಾಸರಾವ್ ಪರವಾಗಿ ನಟ ರಮೇಶ್ ಸ್ವೀಕರಿಸಿದರು. `ಸೈನೇಡ್' ಚಿತ್ರದಲ್ಲಿನ ಅಭಿನಯಕ್ಕಾಗಿ ತಾರಾ ಹಾಗೂ `ದುನಿಯಾ'ದ ನಟನೆಗಾಗಿ ವಿಜಯ್ ಕ್ರಮವಾಗಿ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿಯನ್ನು ಪಡೆದರು.

2007: ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಕಡೆಗೂ ಎಡಪಕ್ಷಗಳ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ, ಈ ಪಕ್ಷಗಳು ಎತ್ತಿರುವ ಆಕ್ಷೇಪಗಳನ್ನು ನಿವಾರಿಸಲು ರಚಿಸಲಾಗುವ ರಾಜಕೀಯ ಸಮಿತಿ ತನ್ನ ವರದಿ ನೀಡುವವರೆಗೆ ಒಪ್ಪಂದವನ್ನು ಕಾರ್ಯಗತಗೊಳಿಸುವುದಿಲ್ಲ ಎಂದು ಹೇಳಿತು. ಹೀಗಾಗಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಎಡಪಕ್ಷಗಳ ಮಧ್ಯೆ ಉದ್ಭವಿಸಿದ್ದ ಮೂರು ವಾರಗಳ ಬಿಕ್ಕಟ್ಟು ಶಮನಗೊಂಡಿತು.

2007: ವರನಟ ಡಾ. ರಾಜ್ ಕುಮಾರ ಅವರಿಗೆ ಮರಣೋತ್ತರವಾಗಿ ರಾಘವೇಂದ್ರ ಅನುಗ್ರಹ (ಸಾಮಾಜಿಕ), ಧಾರವಾಡದ ಕರ್ನಾಟಕ ಇತಿಹಾಸ ಸಂಶೋಧನಾ ಸಂಸ್ಥೆಗೆ ರಾಘವೇಂದ್ರ ಅನುಗ್ರಹ (ಧಾಮರ್ಿಕ) ಹಾಗೂ ಪ್ರಸಿದ್ಧ ಕರ್ನಾಟಕ ಸಂಗೀತ ಕಲಾವಿದ ಚೆನ್ನೈನ ಟಿ.ವಿ. ಗೋಪಾಲಕೃಷ್ಣನ್ ಅವರಿಗೆ ಅಸ್ಥಾನ ವಿದ್ವಾನ್ ಗೌರವ ಪ್ರಶಸ್ತಿ ಪ್ರದಾನ ಸಮಾರಂಭವು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ನಡೆಯಿತು. ರಾಯರ 336ನೇ ಆರಾಧನಾ ಮಹೋತ್ಸವ ಅಂಗವಾಗಿ ಮಧ್ಯಾರಾಧನೆ ದಿನದಂದು ಮಠದ ಪೀಠಾಧಿಪತಿ ಶ್ರೀ ಸುಶಮೀಂದ್ರ ತೀರ್ಥ ಶ್ರೀಪಾದಂಗಳು, ಉತ್ತರಾಧಿಕಾರಿ ಶ್ರೀ ಸುಯತೀಂದ್ರ ತೀರ್ಥ ಶ್ರೀಪಾದಂಗಳು ಪ್ರಶಸ್ತಿ ಪ್ರದಾನ ಮಾಡಿದರು. ಡಾ.ರಾಜಕುಮಾರ ಅವರಿಗೆ ಕೊಡಮಾಡಿದ ರಾಘವೇಂದ್ರ ಅನುಗ್ರಹ ಪ್ರಶಸ್ತಿಯನ್ನು ಪಾರ್ವತಮ್ಮ ರಾಜ್ ಕುಮಾರ, ಕರ್ನಾಟಕ ಇತಿಹಾಸ ಸಂಶೋಧನಾ ಸಂಸ್ಥೆಗೆ ನೀಡಿದ ರಾಘವೇಂದ್ರ ಅನುಗ್ರಹ ಪ್ರಶಸ್ತಿಯನ್ನು ಡಾ.ಎ.ಆರ್. ಪಂಚಮುಖಿ, ಹಾಗೂ ಆಸ್ಥಾನ ವಿದ್ವಾನ್ ಪ್ರಶಸ್ತಿಯನ್ನು ಚೆನ್ನೈನ ಟಿ.ವಿ. ಗೋಪಾಲಕೃಷ್ಣನ್ ಸ್ವೀಕರಿಸಿದರು.

2007: ಜೈಲಿನಲ್ಲಿರುವ ಆರ್ ಜೆಡಿ ಸಂಸದ ಶಹಾಬ್ದುದೀನ್ ಅವರ ವಿರುದ್ಧ ಸಿವಾನ್ ಪೊಲೀಸ್ ವರಿಷ್ಠಾಧಿಕಾರಿ ಎಸ್.ಕೆ.ಸಿಂಘಾಲ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಅಪರಾಧ ಸಾಬೀತಾಗಿದೆ ಎಂದು ಸಿವಾನಿನ ವಿಶೇಷ ನ್ಯಾಯಾಲಯ ತೀರ್ಪು ನೀಡಿತು. 1996ರ ಮೇ 3ರಂದು ಸಿವಾನ್ ಜಿಲ್ಲೆಯಲ್ಲಿ ಸಿಂಘಾಲ್ ಮೇಲೆ ನಡೆದ ಹಲ್ಲೆಯಲ್ಲಿ ಶಹಾಬ್ದುದೀನ್ ಭಾಗಿಯಾಗಿದ್ದರು ಎಂಬುದು ಸಾಬೀತಾಗಿದೆ ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜ್ಞಾನೇಶ್ವರ್ ಪ್ರಸಾದ್ ಶ್ರೀವಾಸ್ತವ್ ಹೇಳಿದರು. ಸಂಸದ ಶಹಾಬ್ದುದೀನ್ ಅವರಿಗೆ ರಕ್ಷಣೆ ಒದಗಿಸಿದ್ದ ಪೊಲೀಸರಾದ ಜಹಂಗೀರ್ ಮತ್ತು ಖಲಿ ಅವರ ಅಪರಾಧವೂ ಸಾಬೀತಾಗಿದೆ ಎಂದು ನ್ಯಾಯಾಲಯಯ ಹೇಳಿತು.

2007: ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಮತ್ತು ಪ್ರದೇಶ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಮರಾವ್ ಅದಿಕ್ ಈದಿನ ಮುಂಬೈಯ ಲೀಲಾವತಿ ಆಸ್ಪತೆಯಲ್ಲಿ ಕೊನೆಯುಸಿರೆಳೆದರು. 1978 ರಿಂದ 1996 ತನಕ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದ ಅದಿಕ್, ವಸಂತದಾದಾ ಪಾಟೀಲ್, ಎ.ಆರ್. ಅಂತುಳೆ, ಬಾಬಾಸಾಹೇಬ್ ಭೋಸ್ಲೆ, ಶರದ್ ಪವಾರ್ ಹಾಗೂ ಸುಧಾಕರ ರಾವ್ ನಾಯಕ್ ಸಂಪುಟದಲ್ಲಿ ದಶಕಕ್ಕೂ ಹೆಚ್ಚು ಕಾಲ ಸಚಿವರಾಗಿದ್ದರು.

2006: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಡಾ. ಶ್ರೀನಿವಾಸ ಸಂಪತ್ ಅವರು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿಯು ನೀಡುವ 2006ನೇ ಸಾಲಿನ ಪ್ರತಿಷ್ಠಿತ ಎಸ್.ಎಸ್. ಭಟ್ನಾಗರ್ ಪ್ರಶಸ್ತಿಗೆ ಆಯ್ಕೆಯಾದರು. ರಾಸಾಯನಿಕ ವಿಜ್ಞಾನದಲ್ಲಿ ಮಾಡಿರುವ ಸಾಧನೆಗಾಗಿ ಈ ಪ್ರಶಸ್ತಿಯನ್ನು ಸಂಪತ್ ಮತ್ತು ತಿರುವನಂತಪುರದ ವಿಜ್ಞಾನಿ ಥಾಮಸ್ ಅವರಿಗೆ ಘೋಷಿಸಲಾಯಿತು.

2006: ಮುಂಬೈಯ ಸ್ಥಳೀಯ ಟ್ಯಾಬ್ಲಾಯಿಡ್ ಪತ್ರಿಕೆಯೊಂದು ಗಣೇಶನ ವಿವಾದಾತ್ಮಕ ವ್ಯಂಗ್ಯಚಿತ್ರ (ಕಾರ್ಟೂನ್) ಪ್ರಕಟಿಸ್ದಿದಕ್ಕಾಗಿ ಮುಖಪುಟದಲ್ಲಿ ಕ್ಷಮೆಯಾಚಿಸಿತು. ಪತ್ರಿಕೆ ಪ್ರಕಟಿಸಿದ ವ್ಯಂಗ್ಯಚಿತ್ರ ವಿರುದ್ಧ ಅರುಣ್ಗೌಳಿ ನೇತೃತ್ವದ ಅಖಿಲ ಭಾರತೀಯ ಸೇನಾ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆ ವ್ಯಕ್ತಪಡಿಸಿದ್ದು, ಸಂಘಟನೆಗಳ 20-25ಮಂದಿ 29ರ ರಾತ್ರಿ ದಕ್ಷಿಣ ಕೇಂದ್ರ ಮುಂಬೈಯಲ್ಲಿರುವ ಪತ್ರಿಕೆಯ ಕಾರ್ಯಾಲಯಕ್ಕೆ ಮೆರವಣಿಗೆ ನಡೆಸಿ ಸಂಪಾದಕರು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದರು.. ಪತ್ರಿಕೆ ಹಿಟ್ಲರ್, ಬಿನ್ ಲಾಡೆನ್ ಹಾಗೂ ಜಾರ್ಜ್ ಬುಷ್ ರಂತೆ ಕಾಣುವ ಗಣಪತಿಯ ಕಾರ್ಟೂನುಗಳನ್ನು ಪ್ರಕಟಿಸಿದ್ದೇ ಅಲ್ಲದೆ `ನಾವು ಈ ತರದ ವೈವಿಧ್ಯಮಯ ಗಣೇಶನನ್ನು ಇನ್ನೆಲ್ಲೂ ಕಾಣೆವು'ಎಂಬುದಾಗಿ ಅಡಿಬರಹ ನೀಡಿತ್ತು.

1991: ಉರಗ ಮಿತ್ರ ಡಾ. ಪಿ.ಜೆ. ದೇವ್ರಾಸ್ ನಿಧನ.

1990: ಪ್ರಸಾರ ಭಾರತಿ ಕಾಯ್ದೆಗೆ ಸಂಸತ್ತಿನಲ್ಲಿ ಅವಿರೋಧ ಸಮ್ಮತಿ.

1987: ಕೆನಡಾದ ಬೆನ್ ಜಾನ್ಸನ್ 9.83 ಸೆಕೆಂಡುಗಳಲ್ಲಿ 100 ಮೀಟರ್ ಓಡಿ ವಿಶ್ವ ದಾಖಲೆ ನಿರ್ಮಿಸಿದ.

1983: ಭಾರತದ ಇನ್ ಸಾಟ್-1ಬಿ ವಿವಿಧೋದ್ಧೇಶ ಉಪಗ್ರಹವನ್ನು ಅಮೆರಿಕದ ಕೇಪ್ ಕ್ಯಾನವರಾಲಿನಿಂದ ಚಾಲೆಂಜರ್ ಮೂಲಕ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಹಾರಿಸಲಾಯಿತು. ಅದು ಅಕ್ಟೋಬರ್ 15ರ ವೇಳೆಗೆ ಪೂರ್ಣ ಕಾರ್ಯಾಚರಣೆ ಆರಂಭಿಸಿತು.

1983: ಗುಯೋನ್ ಎಸ್ ಬ್ಲುಫೋರ್ಡ್ ಜ್ಯೂನಿಯರ್ ಅವರು ಚಾಲೆಂಜರ್ ಮೂಲಕ ಬಾಹ್ಯಾಕಾಶಕ್ಕೆ ಹಾರಿದ ಮೊತ್ತ ಮೊದಲ ಕರಿಯ ಅಮೆರಿಕನ್ ಗಗನಯಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1967: ಅಮೆರಿಕದ ಸುಪ್ರೀಂಕೋರ್ಟಿಗೆ ಮೊತ್ತ ಮೊದಲ ಕರಿಯ ನ್ಯಾಯಾಧೀಶ ತುರ್ ಗುಡ್ ಮಾರ್ಶಲ್ ಅವರ ನೇಮಕಾತಿಯನ್ನು ಅಮೆರಿಕದ ಸೆನೆಟ್ ದೃಢಪಡಿಸಿತು.

1945: ಜಪಾನಿನಿಂದ ಹಾಂಕಾಂಗ್ ಸ್ವತಂತ್ರ.

1941: ದ್ವಿತೀಯ ಮಹಾಸಮರದ ಕಾಲದಲ್ಲಿ ನಾಝಿ ಪಡೆಗಳಿಂದ ಲೆನಿನ್ ಗ್ರಾಡ್ ಕೈವಶ ಆರಂಭ.

1934: ಕ್ರಿಕೆಟಿಗ ಬಾಲಕೃಷ್ಣ ಪಂಡರಿನಾಥ ಗುಪ್ತ (ಬಾಲೂ) ಜನನ.

1913: ಸರ್ ರಿಚರ್ಡ್ ಸ್ಟೋನ್ (1913-1991) ಜನ್ಮದಿನ. ಖ್ಯಾತ ಬ್ರಿಟಿಷ್ ಆರ್ಥಿಕ ತಜ್ಞರಾದ ಇವರು ರಾಷ್ಟ್ರೀಯ ಆದಾಯ ಲೆಕ್ಕಾಚಾರ ಕುರಿತು ಮಾಡಿದ ಕೆಲಸಕ್ಕಾಗಿ 1984ರ ನೊಬೆಲ್ ಪ್ರಶಸ್ತಿ ಗಳಿಸಿದರು.

1849: ಭಾರತದ ಖ್ಯಾತ ಕೈಗಾರಿಕೋದ್ಯಮಿ ಹಾಗೂ ದಾನಿ ನವರೋಜಿ ವಾಡಿಯಾ (1849-1999) ಜನ್ಮದಿನ. ಇವರು 1879ರಲ್ಲಿ ಉಡುಪುಗಳ ಉತ್ಪಾದನೆಗಾಗಿ ಬಾಂಬೆ ಡೈಯಿಂಗ್ ಅಂಡ್ ಟೆಕ್ಸ್ ಟೈಲ್ಸ್ ಮ್ಯಾನ್ಯುಫ್ಯಾಕ್ಚರಿಂಗ್ ಕಂಪೆನಿಯನ್ನು ಸ್ಥಾಪಿಸಿದರು.

1569: ಭಾರತದ ಮೊಘಲ್ ಸಾಮ್ರಾಟ ಜಹಾಂಗೀರ್ (1569-1627) ಜನ್ಮದಿನ. ಈತ ಅಕ್ಬರ್ನ ಪುತ್ರ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Wednesday, September 2, 2009

ಇಂದಿನ ಇತಿಹಾಸ History Today ಆಗಸ್ಟ್ 29

ಇಂದಿನ ಇತಿಹಾಸ

ಆಗಸ್ಟ್ 29


ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಾಗಿದ್ದ ದಿವಂಗತ ರಾಮಕೃಷ್ಣ ಹೆಗಡೆ (29-8-1926ರಿಂದ 12-1-2004) ಅವರು 1926ರಲ್ಲಿ ಈದಿನ ಜನಿಸಿದರು. ಕರ್ನಾಟಕದ ಕಾಂಗ್ರೆಸ್ಸೇತರ ಸರ್ಕಾರದ ಮೊದಲ ಮುಖ್ಯಮಂತ್ರಿಯಾದ ಹೆಗಡೆ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅದಕ್ಕೆ ಮೊದಲು ಎಸ್. ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ್ ಸರ್ಕಾರಗಳಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದರು.

2015: ನವದೆಹಲಿ: ಭಾರತದ ಶ್ರೇಷ್ಠ ಟೆನಿಸ್ ತಾರೆ ಸಾನಿಯಾ ಮಿರ್ಜಾರಾಜೀವ್ ಗಾಂಧಿ ಖೇಲ್ರತ್ನಪ್ರಶಸ್ತಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಸ್ವೀಕರಿಸಿದರು. ಉಳಿದಂತೆ 12 ಕ್ರೀಡಾ ಸಾಧಕರು ಅರ್ಜುನ ಪ್ರಶಸ್ತಿ ಸ್ವೀಕರಿಸಿದರು. ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ ಪ್ಯಾರಾ ಈಜುಪಟು ಶರತ್ ಗಾಯಕ್ವಾಡ್ ಸೇರಿದಂತೆ 12 ಕ್ರೀಡಾಪಟುಗಳು ಅರ್ಜುನ ಪ್ರಶಸ್ತಿ ಸ್ವೀಕರಿಸಿದರು. ಸಾನಿಯಾ ಖೇಲ್​ರತ್ನ ಪ್ರಶಸ್ತಿ ಪಡೆದ 2ನೇ ಟೆನಿಸ್​ಪಟುವಾಗಿದ್ದಾರೆ. ಲಿಯಾಂಡರ್ ಪೇಸ್ ಮೊದಲಿಗರು. ಸಾನಿಯಾ ಮಿರ್ಜಾ ಖೇಲ್ ರತ್ನ
ಪುರಸ್ಕಾರದ ಜತೆ ಪದಕ, ಪ್ರಮಾಣಪತ್ರ ಮತ್ತು 7.5 ಲಕ್ಷ ರೂ. ನಗದು ಸ್ವೀಕರಿಸಿದರೆ, ಅರ್ಜುನ ಪ್ರಶಸ್ತಿ ಪುರಸ್ಕೃತರು ಅರ್ಜುನನ ಪ್ರತಿಮೆ, ಪ್ರಮಾಣ ಪತ್ರ ಮತ್ತು 5 ಲಕ್ಷ ರೂ ನಗದು ಪಡೆದರು. ಶೂಟರ್ ಜಿತು ರೈ, ಹಾಕಿ ಗೋಲ್ಕೀಪರ್ ಪಿಆರ್ ಶ್ರೀಜೇಶ್, ಜಿಮ್ನಾಸ್ಟ್ ದೀಪಾ ಕರ್ವಕರ್, ಬ್ಯಾಡ್ಮಿಂಟನ್ ಆಟಗಾರ ಕೆ. ಶ್ರೀಕಾಂತ್, ಕಬಡ್ಡಿ ಆಟಗಾರ ಮಂಜಿತ್ ಚಿಲ್ಲರ್ ಇವರಲ್ಲಿ ಪ್ರಮುಖರು. ಕರ್ನಾಟಕದ ಈಜು ಕೋಚ್ ನಿಹಾರ್ ಅಮೀನ್ ಜೀವಮಾನ ಸಾಧನೆಗಾಗಿ ದ್ರೋಣಾಚಾರ್ಯ ಪ್ರಶಸ್ತಿ ಪಡೆದರು. ಡೇವಿಸ್​ಕಪ್ ತಂಡದ ಮಾಜಿ ನಾಯಕ ಎಸ್​ಪಿ ಮಿಶ್ರಾ ಸಹಿತ ಮೂವರು ಧ್ಯಾನ್​ಚಂದ್ ಪ್ರಶಸ್ತಿಗೆ ಪಾತ್ರರಾದರು. ಅರುಣಿಮಾ ಸಿನ್ಹಾ, ಜೋತ್ ಸಿಂಗ್, ಪರಮ್ೕರ್ ಸಿಂಗ್, ಲೆ. ಕರ್ನಲ್ ಸತ್ಯೇಂದ್ರ ವರ್ಮ, ಕರ್ನಲ್ ಸತೀಷ್ ಚಂದರ್ ಶರ್ಮ ತೇನ್​ಸಿಂಗ್ ನೋರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.


2015: ವಾಷಿಂಗ್ಟನ್: ಮಂಗಳನ ಅಂಗಳಕ್ಕೆ ಪ್ರಯಾಣ ಬೆಳೆಸಲಿರುವ ಗಗನಯಾತ್ರಿಗಳಪರೀಕ್ಷಾರ್ಥ ಜೀವನಆರಂಭಗೊಂಡಿತು. ಇದೇನಿದು ಪರೀಕ್ಷಾರ್ಥ ಜೀವನ ಎನ್ನುವ ನಿಮ್ಮ ಕುತೂಹಲಕ್ಕೆ ಉತ್ತರ ಇಲ್ಲಿದೆ: ನಾಸಾ ಗಗನಯಾತ್ರಿಗಳು ಅಂದುಕೊಂಡಂತೆ ಮಂಗಳಯಾನ ಆರಂಭಕ್ಕೂ ಮುನ್ನ ಅಲ್ಲನ ಜೀವನ ಶೈಲಿಗೆ ಒಗ್ಗಿಕೊಳ್ಳುವ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ನಡೆಸಬೇಕೆಂದುಕೊಂಡ ಒಂದು ವರ್ಷದ ಜೀವನ ಆರಂಭಿಸಿದರು. ಇದಕ್ಕೆಂದೇ ಹವಾಯಿ ದ್ವೀಪದಲ್ಲಿ ನಿರ್ಮಿಸಲಾದ ಚೆಂಡಿನಾಕಾರದ ಪರೀಕ್ಷಾರ್ಥ ಮನೆಯಲ್ಲಿ ಮುಂದಿನ 12 ತಿಂಗಳು ತಂಗಲಿದ್ದಾರೆ. ಈದಿನ ಮಧ್ಯಾಹ್ನ 1 ಗಂಟೆ ಸುಮಾರಿಗೆ (ಸ್ಥಳೀಯ ಸಮಯ ಮಧ್ಯಾಹ್ನ 3ಗಂಟೆ, ಶುಕ್ರವಾರ) ಆರು ಮಂದಿ ಗಗನಯಾತ್ರಿಗಳು ಮನೆ ಪ್ರವೇಶಿಸಿದರು. ಇನ್ನೊಂದು ವರ್ಷ ಇವರು ಇಲ್ಲಿಯೇ ವಾಸವಿರಬೇಕು. ಗಗನಯಾನಿಗಳು ಅನ್ಯ ಗ್ರಹದಲ್ಲಿ ಹೇಗೆ ಇರಬೇಕೋ ಎಲ್ಲಾ ನಿಯಮಗಳನ್ನು ಅನುಸರಿಸಿ ವಾಸಿಸಬೇಕು. ಒಂದೊಮ್ಮೆ ಮನೆಯಿಂದ ಆಚೆ ಬರಬೇಕೆಂದರೆ ಸ್ಪೇಸ್ ಸೂಟ್ ಧರಿಸಿ ಬರಬೇಕು. ಮನೆಯಲ್ಲಿ ನಾಸಾ ಇದಕ್ಕಾಗಿಯೇ ಕಳುಹಿಸಿದ ಆಹಾರವನ್ನೇ ಸೇವಿಸಬೇಕು. ಅಪ್ಪಿತಪ್ಪಿಯೂ ಕೃತಕ ಮನೆಯಲ್ಲಿ ಪರಿಶುದ್ಧ ಗಾಳಿ ಸಿಗುವುದಿಲ್ಲ. ಸೌರಶಕ್ತಿ ಬೆಳಕನ್ನು ಹೊರತುಪಡಿಸಿ ಬೇರೆ ಯಾವ ಬೆಳಕೂ ಲಭ್ಯವಿಲ್ಲ. ಸ್ವಾತಂತ್ರ್ಯ ಅನ್ನೋದನ್ನು ಮರೆತು ದಿನಕಳೆಯಬೇಕು. ಇದೀಗ ಮನೆಯಲ್ಲಿ ಬಂಧಿಯಾಗಿರುವವರಲ್ಲಿ ಫ್ರಾನ್ಸ್​ನ ಆಸ್ಟ್ರೋಬಯಾಲಜಿಸ್ಟ್, ಜರ್ಮನಿಯ ಭೌತವಿಜ್ಞಾನಿ ಮತ್ತು ಅಮೆರಿಕದ ಒಬ್ಬ ಪೈಲಟ್ ಇದ್ದಾರೆ. ಜೊತೆಗೆ ವಾಸ್ತು ಶಾಸ್ತ್ರಜ್ಞ, ಪತ್ರಕರ್ತ ಹಾಗೂ ಮಣ್ಣಿನ ಗುಣಲಕ್ಷಣ ಅರಿಯಬಲ್ಲ ವಿಜ್ಞಾನಿ ಸೇರಿದ್ದಾರೆ. ಇನ್ನೊಂದು ವಿಚಾರ ಗೊತ್ತಾ, ಇದು ಭಾರಿ ಗಾತ್ರದ ಬಂಗಲೇಯೇನಲ್ಲ. ಅಬ್ಬಬ್ಬಾ ಅಂದರೆ 36 ಅಡಿ ಉದ್ದಗಲ, ಅಮ್ಮಮ್ಮಾ ಅಂದ್ರೆ 20 ಅಡಿ ಎತ್ತರವಿದೆ. ಮನೆಗೆ ಸದಾಕಾಲ ಬೆಳಕು ಇರಬೇಕೆಂದು ಉತ್ತಮ ಸಾಮರ್ಥ್ಯದ ಸೌರಶಕ್ತಿ ಅಳವಡಿಸಲಾಗಿದೆ. 2030 ವೇಳೆಗೆ ಮಂಗಳನ ಅಂಗಳಕ್ಕೆ ಗಗನಯಾನಿಗಳನ್ನು ಕಳುಹಿಸಬೇಕೆನ್ನುವ ಯೋಜನೆ ಇರಿಸಿಕೊಂಡಿರುವ ನಾಸಾ ಪರೀಕ್ಷಾರ್ಥ ಮನೆಗೆ ಅಂದಾಜು 8 ಕೋಟಿ ರೂಪಾಯಿ ವ್ಯಯ ಮಾಡಿದೆ ಎಂದು ಪ್ರಧಾನ ಸಂಶೋಧಕಿ ಕಿಮ್ ಬಿನ್​ಸ್ಟೆಡ್ ಹೇಳಿದರು.
2015: ಬೆಂಗಳೂರು: ಬಿಬಿಎಂಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಮೂರು ಪ್ರಮುಖ ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿರುವಾಗಲೇ ಮೇಯರ್ ಹಾಗೂ ಉಪಮೇಯರ್ ಆಯ್ಕೆ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಚಾಲನೆ ನೀಡಿತು. ನಗರಾಭಿವೃದ್ಧಿ ಇಲಾಖೆ ಮೂಲಕ ನೂತನವಾಗಿ ಆಯ್ಕೆಯಾಗಿರುವ ಬಿಬಿಎಂಪಿ ಸದಸ್ಯರ ಪಟ್ಟಿಯನ್ನು ಅಧಿಸೂಚನೆ ಮೂಲಕ ಪ್ರಕಟಿಸಲಾಯಿತು. ಪ್ರಾದೇಶಿಕ ಆಯುಕ್ತರು ಬಹುತೇಕ ಆ.31ರಂದು ಚುನಾವಣೆ ದಿನಾಂಕ ಪ್ರಕಟಿಸುವ ನಿರೀಕ್ಷೆ ಇದೆ. ಈ ನಡುವೆ ಈವರೆಗೂ ರಾಜ್ಯ ರಾಜಕಾರಣಕ್ಕೆ ಮಾತ್ರ ಸೀಮಿತವಾಗಿದ್ದ ‘ರೆಸಾರ್ಟ್’ ರಾಜಕೀಯದ ರಂಗು ಇದೀಗ ಪಾಲಿಕೆ ಚುನಾವಣೆಗೂ ವಿಸ್ತರಣೆಯಾಯಿತು. ಸ್ವತಃ ಜೆಡಿಎಸ್ ನಾಯಕ ಎಚ್.ಡಿ.ಕುಮಾರ ಸ್ವಾಮಿ ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್​ವೊಂದರಲ್ಲಿ ಬೀಡು ಬಿಟ್ಟರೆ, ಜೆಡಿಎಸ್ ಸದಸ್ಯರ ಇನ್ನೊಂದು ಗುಂಪು ಖಾಸಗಿ ಬಸ್ಸಿನಲ್ಲಿ ಕೇರಳದತ್ತ ಹೊರಟಿತು. ಬೆಂಗಳೂರಿನಲ್ಲಿ ಬಿಜೆಪಿ ಕಾರ್ಪೆರೇಟರ್​ಗಳು ಆರ್. ಅಶೋಕ್ ಮನೆಯಲ್ಲಿ ಸಮಾಲೋಚನೆ ನಿರತರಾದರೆ, ಕೆಪಿಸಿಸಿ ಸಭೆ ಬೆಂಗಳೂರಿನಲ್ಲಿ ವಿಷಯ ಚರ್ಚಿಸಿತು. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಜನತಾದಳ ಮುಖ್ಯಸ್ಥ ಎಚ್.ಡಿ. ದೇವೇಗೌಡರನ್ನು ಮಾತನಾಡಿಸಿ ಬಂದರು.

2015: ನವದೆಹಲಿ: ನಿವೃತ್ತ ಯೋಧರಿಗೆ ’ಏಕ ಶ್ರೇಣಿ ಏಕ ಪಿಂಚಣಿ’ ವ್ಯವಸ್ಥೆಯ ತ್ವರಿತ ಜಾರಿಗಾಗಿ ಆಗ್ರಹಿಸಿ ಸರದಿ ಉಪವಾಸ ಮುಷ್ಕರ ನಡೆಸುತ್ತಿದ್ದ ನಿವೃತ್ತ ಯೋಧರಲ್ಲಿ ಒಬ್ಬರಾದ ಸೇನಾ ಹವಿಲ್ದಾರ್ ಅಭಿಲಾಸ್ ಸಿಂಗ್ ಅವರು ಈದಿನ ನಿರಶನ ಜಾಗದಲ್ಲಿ ಅಸ್ವಸ್ಥರಾದರು. ತತ್ ಕ್ಷಣವೇ ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತು. ’ಸಿಂಗ್ ಅವರನ್ನು ಆಸ್ಪತ್ರೆಗೆ ಒಯ್ಯಲಾಗಿದೆ. ಅವರು ಸರದಿ ನಿರಶನದಲ್ಲಿ ಪಾಲ್ಗೊಂಡಿದ್ದರು’ ಎಂದು ನಿವೃತ್ತ ಯೋಧರ ಸಂಯುಕ್ತ ರಂಗ ದ ಅಧಿಕಾರಿಯೊಬ್ಬರು ತಿಳಿಸಿದರು. ಸಿಂಗ್ ಹೊರತಾಗಿ ಆಮರಣ ನಿರಶನ ನಡೆಸುತ್ತಿರುವ ಇತರ ನಾಲ್ವರನ್ನೂ ಆರೋಗ್ಯ ವಿಷಮಿಸಿದ್ದನ್ನು ಅನುಸರಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿವೃತ್ತ ಯೋಧರ ಪ್ರತಿಭಟನೆಯು ಈದಿನ 76ನೇ ದಿನಕ್ಕೆ ಕಾಲಿರಿಸಿತು. ಏಕ ಶ್ರೇಣಿ, ಏಕ ಪಿಂಚಣಿ ವ್ಯವಸ್ಥೆ ಜಾರಿಗೆ ಇನ್ನೂ ಸ್ವಲ್ಪ ಕಾಲಾವಕಾಶ ನೀಡುವಂತೆ ಕೇಂದ್ರ ಸರ್ಕಾರ ಹಿಂದಿನ ದಿನ ಕೋರಿತ್ತು.  22 ಲಕ್ಷ ಮಂದಿ ನಿವೃತ್ತ ಯೋಧರು ಮತ್ತು 6 ಲಕ್ಷಕ್ಕೂ ಹೆಚ್ಚು ಮೃತ ಯೋಧರ ಪತ್ನಿಯರಿಗೆ ಯೋಜನೆ ಅನ್ವಯಿಸುತ್ತದೆ. ಒಂದೇ ಶ್ರೇಣಿಯಲ್ಲಿ ನಿವೃತ್ತರಾದ ಎಲ್ಲ ಯೋಧರಿಗೂ ನಿವೃತ್ತಿಯ ದಿನಾಂಕದ ಮಿತಿಯನ್ನು ರದ್ದು ಪಡಿಸಿ ಸಮಾನ ಪಿಂಚಣಿ ವ್ಯವಸ್ಥೆ ಮಾಡುವಂತೆ ನಿವೃತ್ತ ಯೋಧರು ಆಗ್ರಹಿಸಿದ್ದರು. ಹಾಲಿ ಪಿಂಚಣಿ ವ್ಯವಸ್ಥೆಯಂತೆ 1996ರಲ್ಲಿ ನಿವೃತ್ತನಾದ ಮೇಜರ್ ಜನರಲ್, 1996ರ ನಂತರ ನಿವೃತ್ತರಾದ ಮೇಜರ್ ಜನರಲ್​ಗಿಂತ ಕಡಿಮೆ ವೇತನ ಪಡೆಯುತ್ತಾರೆ.

2015: ನವದೆಹಲಿ: ಮಾಜಿ ರಾಷ್ಟ್ರೀಯ ಕುಸ್ತಿ ಕೋಚ್ ಮುಖ್ಯಸ್ಥ ವಿನೋದ್ ಕುಮಾರ್ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದ್ದ ಹೈಕೋರ್ಟ್​ನ ಏಕಸದಸ್ಯ ಪೀಠದ ಆದೇಶಕ್ಕೆ ದೆಹಲಿ ಹೈಕೋರ್ಟ್​ನ ವಿಭಾಗೀಯ ಪೀಠವು ತಡೆಯಾಜ್ಞೆ ನೀಡಿತು.
ಮುಖ್ಯ ನ್ಯಾಯಮೂರ್ತಿ ಜಿ. ರೋಹಿಣಿ ಮತ್ತು ನ್ಯಾಯಮೂರ್ತಿ ಜಯಂತ್ ನಾಥ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ವಿಶೇಷ ಕಲಾಪ ನಡೆಸಿ ವಿನೋದ ಕುಮಾರ್ ಅವರಿಗೆ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ್ದ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿತು. ರಾಷ್ಟ್ರಪತಿ ಭವನದಲ್ಲಿ ಈದಿನ ಸಂಜೆ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಹೈಕೋರ್ಟ್​ನ ಏಕಸದಸ್ಯ ಪೀಠ ಹಿಂದಿನ ದಿನ ನೀಡಿದ್ದ ಆದೇಶ ವಿರುದ್ಧ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿತ್ತು. ಆ ಅರ್ಜಿಯ ವಿಶೇಷ ವಿಚಾರಣೆಯನ್ನು ವಿಭಾಗೀಯ ಪೀಠವು ನಡೆಸಿತು. ಹೈಕೋರ್ಟ್​ನ ಏಕಸದಸ್ಯ ಪೀಠವು ನೀಡಿದ ಆದೇಶಕ್ಕೆ ವಿಭಾಗೀಯ ಪೀಠವು ತಡೆ ನೀಡಿದೆ. ಪ್ರಕರಣವನ್ನು ಪೂರ್ಣ ಪ್ರಮಾಣದಲ್ಲಿ ವಿಚಾರಣೆ ನಡೆಸದೆಯೇ ಏಕಸದಸ್ಯ ಪೀಠವು ತೀರ್ಪು ನೀಡಿದೆ ಎಂದು ಅಡಿಷನಲ್ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಹೇಳಿದರು. ದ್ರೋಣಾಚಾರ್ಯ ಪ್ರಶಸ್ತಿ ಸಮಿತಿಯು ಪ್ರತಿಷ್ಠಿತ ಪ್ರಶಸ್ತಿಗೆ ತನ್ನನ್ನು ನಿರ್ಲಕ್ಷಿಸಿದ್ದನ್ನು ಪ್ರಶ್ನಿಸಿ ವಿನೋದ್ ಕುಮಾರ್ ಹೈಕೋರ್ಟ್ ಮೆಟ್ಟಲೇರಿದ್ದರು. ಪ್ರಶಸ್ತಿ ಸಮಿತಿಯು ಈ ಪ್ರಶಸ್ತಿಗೆ ಅನೂಪ್ ಸಿಂಗ್ ದಹಿಯಾ ಹೆಸರನ್ನು ಶಿಫಾರಸು ಮಾಡಿತ್ತು. 2010ರಿಂದ 2015ರವರೆಗೆ ರಾಷ್ಟ್ರೀಯ ಪುರುಷರ ತಂಡದ ಕೋಚ್ ಮುಖ್ಯಸ್ಥ ವಿನೋದ್ ಕುಮಾರ್ ಅವರು ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳ ಸಾಧನೆಗಳಲ್ಲಿ ತಾವು ಅನೂಪ್ ಅವರಿಗಿಂತ ಹೆಚ್ಚು ಪಾಯಿಂಟ್​ಗಳನ್ನು ಗಳಿಸಿದ್ದುದಾಗಿ ವಿನೋದ್ ಕುಮಾರ್ ಪ್ರತಿಪಾದಿಸಿದ್ದರು.

2015: ಲಂಡನ್: ಮದ್ಯ ಸೇವನೆಯ ಬಳಿಕ ನಿಮಗೆ ಇಷ್ಟವಾದ ಆಹಾರ ಅಥವಾ ನೀರು ಸೇವಿಸುವ ಮೂಲಕ ಮರುದಿನ ಬೆಳಗಿನ ಆಲಸ್ಯ (ಹ್ಯಾಂಗೋವರ್) ತಡೆಯಲು ಸಾಧ್ಯವಿಲ್ಲ ಎಂಬ ಎಂಬ ಕುತೂಹಲಕಾರಿ ವಿಚಾರವನ್ನು ಸಂಶೋಧನೆಯೊಂದು ಬಹಿರಂಗ ಪಡಿಸಿತು. ರಾತ್ರಿ ಮದ್ಯ ಸೇವನೆಯ ಬಳಿಕ ಇಷ್ಟವಾದ ಆಹಾರ ತಿಂದರೆ ಅಥವಾ ಚೆನ್ನಾಗಿ ನೀರು ಕುಡಿದರೆ ಮರುದಿನ ಬೆಳಗ್ಗೆ ’ಹ್ಯಾಂಗೋವರ್’ ಇರುವುದಿಲ್ಲ ಎಂಬುದು ಅತ್ಯಂತ ಜನ ಜನಿತವಾದ ನಂಬಿಕೆ. ಶೇಕಡಾ 25ರಿಂದ 30ರಷ್ಟು ಕುಡುಕರು ಸಾಮಾನ್ಯವಾಗಿ ಇದನ್ನೇ ಪ್ರತಿಪಾದಿಸುತ್ತಾರೆ.  ಆದರೆ ಯಾರಿಗಾದರೂ ಇಷ್ಟವಾದ ತಿಂಡಿ ತಿಂದ ಬಳಿಕವೋ ಅಥವಾ ಚೆನ್ನಾಗಿ ನೀರು ಕುಡಿದ ಬಳಿಕವೋ ಹ್ಯಾಂಗೋವರ್ ಕಾಣಿಸದೇ ಇದ್ದಲ್ಲಿ ಅವರು ಕಡಿಮೆ ಕುಡಿದಿದ್ದಾರೆ ಅಥವಾ ಅವರು ಸತ್ಯ ಹೇಳುತ್ತಿಲ್ಲ ಎಂದೇ ಅದರ ಅರ್ಥ ಎಂದು ಸಂಶೋಧನೆ ಹೇಳಿತು. ‘ಹೆಚ್ಚು ಕುಡಿದಷ್ಟೂ ನೀವು ಹೆಚ್ಚು ಆಲಸಿಗಳಾಗುತ್ತೀರಿ ಅಥವಾ ಹೆಚ್ಚು ಹ್ಯಾಂಗೋವರ್​ಗೆ ಒಳಗಾಗುತ್ತೀರಿ ಎಂಬುದು ಅತ್ಯಂತ ಸರಳವಾದ ಸತ್ಯ’ ಎಂದು ಈ ಕುರಿತು ಸಂಶೋಧನೆ ನಡೆಸಿದ ನೆದರ್​ಲ್ಯಾಂಡ್​ನ ಉಟ್ರೆಚ್ಟ್ ಯುನಿವರ್ಸಿಟಿಯ ತಂಡದ ನೇತಾರ ಡಾ. ಜೊರಿಸ್ ವರ್​ಸ್ಟೆರ್ ಹೇಳಿದರು. ತಮಗೆ ಹ್ಯಾಂಗೋವರ್ ಅನುಭವವಾಗಿಲ್ಲ ಎಂದು ಹೇಳುವವರು ಹ್ಯಾಂಗೋವರ್​ಗೆ ಕಾರಣವಾಗಬಹುದು ಎಂದು ಗ್ರಹಿಸಿಕೊಂಡು ವಾಸ್ತವವಾಗಿ ಕಡಿಮೆ ಕುಡಿದಿರುತ್ತಾರೆ ಎಂಬುದು ಜೊರಿಸ್ ಹೇಳಿಕೆ. ಈ ತೀರ್ಮಾನಕ್ಕೆ ಬರುವ ಮುನ್ನ ನೆದರ್​ಲ್ಯಾಂಡ್ಸ್ ಮತ್ತು ಕೆನಡಾದ ಅಂತಾರಾಷ್ಟ್ರೀಯ ಸಂಶೋಧಕರ ತಂಡವು ಕುಡಿತದ ಹವ್ಯಾಸ ಇದ್ದವರ ಸಮೀಕ್ಷೆ ನಡೆಸಿತ್ತು. ತಂಡವು ಸುಮಾರು 789 ಮಂದಿ ಕೆನಡಾ ವಿದ್ಯಾರ್ಥಿಗಳ ಕುಡಿತದ ಹವ್ಯಾಸ ಮತ್ತು ಹ್ಯಾಂಗೋವರ್ ತೀವ್ರತೆಯ ಬಗ್ಗೆ ಸಮೀಕ್ಷೆ ನಡೆಸಿತ್ತು. ಮದ್ಯ ಸೇವನೆಯ ಬಳಿಕ ಅವರು ನೇರವಾಗಿ ಏನಾದರೂ ಆಹಾರ ಸೇವಿಸಿದ್ದರೇ ಅಥವಾ ನೀರನ್ನು ಕುಡಿದಿದ್ದರೇ ಎಂಬ ಬಗೆಗೂ ತಂಡ ಸಮೀಕ್ಷೆ ನಡೆಸಿತ್ತು.  ಮದ್ಯ ಸೇವನೆಯ ಬಳಿಕ ಆಹಾರ ತಿಂದ ಮೇಲೆ ಅಥವಾ ನೀರು ಕುಡಿದ ಬಳಿಕ ಅವರ ಹ್ಯಾಂಗೋವರ್ ಅನುಭವ ಏನು ಎಂಬ ಮಾಹಿತಿಯನ್ನೂ ತಂಡ ಕಲೆ ಹಾಕಿತ್ತು. ಮೈಮರೆಯುವಂತೆ ಕುಡಿದ 826 ಡಚ್ ವಿದ್ಯಾರ್ಥಿಗಳನ್ನು ಅವರು ಮದ್ಯ ಸೇವನೆ ಬಳಿಕ ಆಹಾರ ತಿಂದಿದ್ದರೇ ಅಥವಾ ನೀರು ಕುಡಿದಿದ್ದರೇ ಎಂದು ತಂಡ ಪ್ರಶ್ನಿಸಿತ್ತು. ಇವರ ಪೈಕಿ ಸುಮಾರು 450 ಮಂದಿ ಮದ್ಯ ಸೇವನೆಯ ಬಳಿಕ ಇಷ್ಟವಾದ ತಿಂಡಿ ತಿಂದಿದ್ದರು. ಅವರ ಹ್ಯಾಂಗೋವರ್ ಪ್ರಮಾಣವನ್ನು ತಿಳಿಸುವಂತೆಯೂ ತಂಡ ಅವರಿಗೆ ಸೂಚಿಸಿತ್ತು. ಉಭಯ ತಂಡಗಳಲ್ಲಿಯೂ ಹ್ಯಾಂಗೋವರ್ ತೀವ್ರತೆ ವಿಚಾರದಲ್ಲಿ ಹೆಚ್ಚಿನ ಭಿನ್ನಾಭಿಪ್ರಾಯ ಇರಲಿಲ್ಲ. ಮದ್ಯ ಸೇವನೆ ಬಳಿಕ ಆಹಾರ ತಿಂದ ಅಥವಾ ನೀರು ಕುಡಿದವರು ನೀಡಿದ ಅಂಕಿ ಅಂಶದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ವ್ಯತ್ಯಾಸವಿತ್ತು. ಅದರೆ ಅದನ್ನೊಂದು ಅರ್ಥಪೂರ್ಣ ವ್ಯತ್ಯಾಸ ಎಂದು ಹೇಳಲು ಸಾಧ್ಯವಿರಲಿಲ್ಲ. ಈ ಸಮೀಕ್ಷೆಯಿಂದ ನಾವು ಅರಿತ ವಿಚಾರ ಏನೆಂದರೆ ಹ್ಯಾಂಗೋವರ್​ನಿಂದ ಪಾರಾಗಲು ಇರುವ ಏಕೈಕ ಮಾರ್ಗ ಎಂದರೆ ಕಡಿಮೆ ಮದ್ಯ ಕುಡಿಯುವುದು ಎಂದು ಡಾ. ವರ್ಸ್ಟರ್ ಹೇಳಿದರು. ಆಮ್ ಸ್ಟರ್ ಡ್ಯಾಮಿನಲ್ಲಿ ಇತ್ತೀಚೆಗೆ ನಡೆದ ಯುರೋಪಿಯನ್ ಕಾಲೇಜ್ ಆಫ್ ನ್ಯೂರೋಸೈಕೊಫಾರ್ಮಕಾಲಜಿ (ಇಸಿಎನ್​ಪಿ) ಕಾಂಗ್ರೆಸ್​ನಲ್ಲಿ ಸಂಶೋಧನೆಯನ್ನು ಪ್ರಸ್ತುತ ಪಡಿಸಲಾಗಿತ್ತು.

2015: ಮುಂಬೈ: ರಾಷ್ಟ್ರವ್ಯಾಪಿ ಕುತೂಹಲ ಕೆರಳಿಸಿದ ಶೀನಾ ಬೋರಾ ಕೊಲೆ ಪ್ರಕರಣದ ತನಿಖೆಯ ದಿಕ್ಕು ರಾಯಗಡ ಜಿಲ್ಲೆಯಲ್ಲಿ ಲಭಿಸಿದ ಕಳೇಬರದ ಅವಶೇಷಗಳ ಬಗೆಗಿನ ವಿಧಿ ವಿಧಾನ ತಜ್ಞರ (ಫಾರೆನ್ಸಿಕ್) ವಿಶ್ಲೇಷಣೆಯತ್ತ ತಿರುಗಿತು. ಮೂರು ವರ್ಷಗಳ ಹಿಂದೆ ಕೊಲೆಯ ಬಳಿಕ ಶೀನಾ ಶವ ಹುಗಿದಿಡಲಾಗಿತ್ತು ಎನ್ನಲಾದ ಜಾಗದಲ್ಲಿ ಈ ಅವಶೇಷಗಳು ಲಭಿಸಿದ್ದವು. ‘ಎಲುಬು ಮತ್ತ ಅಸ್ತಿಪಂಜರದ ಅವಶೇಷಗಳನ್ನು ನಾವು ವಿಧಿವಿಧಾನ ತಜ್ಞರಿಗೆ ವಿಶ್ಲೇಷಣೆಗಾಗಿ ಕಳುಹಿಸಿದ್ದು ವರದಿಗಾಗಿ ಕಾಯುತ್ತಿದ್ದೇವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. 2012ರಲ್ಲಿ ರಾಯಗಡ ಪೊಲೀಸರಿಂದ ಪಡೆದಿದ್ದ ಕೆಲವು ಎಲುಬುಗಳನ್ನು ಜೆ.ಜೆ. ಆಸ್ಪತ್ರೆಯು ಖಾರ್ ಪೊಲೀಸರಿಗೆ ಒಪ್ಪಿಸಿತ್ತು. 2012ರ ಏಪ್ರಿಲ್ 24ರಂದು ಇಂದ್ರಾಣಿ ಮತ್ತು ಸಂಜೀವ ಖನ್ನಾ ಅವರು ಶೀನಾ ಬೋರಾಳನ್ನು ಭೇಟಿ ಮಾಡಿ ಕರೆದೊಯ್ಯವ ಕೆಲವೇ ಗಂಟೆಗಳ ಮುನ್ನ ಇಂದ್ರಾಣಿಯು ತನ್ನ ಮಗನಾದ ಮೈಖೆಲ್​ನನ್ನೂ ಎಳೆತಂದು ಕೊಲ್ಲಲೆತ್ನಿಸಿದ್ದಳು ಎಂಬುದಾಗಿ ಮೈಖೆಲ್ ಬೋರಾ ಮಾಡಿರುವ ಪ್ರತಿಪಾದನೆ ಬಗೆಗೂ ಪೊಲೀಸರು ತನಿಖೆ ನಡೆಸಿದರು. ವರದಿಯೊಂದರ ಪ್ರಕಾರ ಖನ್ನಾ ಅವರು ಮೈಖೆಲ್ ಬೋರಾ ಹೇಳಿಕೆಯನ್ನು ದೃಢೀಕರಿಸಿದ್ದಾರೆ ಎನ್ನಲಾಯಿತು. ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸುವ ನೆಪದಲ್ಲಿ ವರ್ಲಿಯ ತನ್ನ ಹೋಟೇಲ್ ಕೊಠಡಿಯಲ್ಲಿ ಮಾತನಾಡಲು ಬಂದಿದ್ದ ತನಗೆ ಮಾದಕ ದ್ರವ್ಯ ಕುಡಿಸಿದ ಬಳಿಕ ಇಂದ್ರಾಣಿ ಮತ್ತು ಸಂಜೀವ್ ಶೀನಾಳನ್ನು ಭೇಟಿ ಮಾಡಲು ತೆರಳಿದ್ದರು ಎಂದು ಮೈಖೆಲ್ ಪೊಲೀಸರಿಗೆ ಹೇಳಿಕೆ ನೀಡಿದ್ದ. ಅವರು ವಾಪಸ್ ಬರುವ ಹೊತ್ತಿಗಾಗಲೇ ಸಂಶಯ ಬಂದ ಹಿನ್ನೆಲೆಯಲ್ಲಿ ಅಮಲಿನಲ್ಲೇ ಇದ್ದ ತಾನು ಪರಾರಿಯಾಗಿದ್ದುದಾಗಿ ಮೈಖೆಲ್ ಹೇಳಿದ್ದ.

2015: ಪಟ್ನಾ: ಪರಿಸರ ಸಂರಕ್ಷಣೆ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮರಕ್ಕೆ ರಾಖಿ ಕಟ್ಟುವ ವಿನೂತನ ವಿಧಾನ ಅನುಸರಿಸಿ, ಬಿಹಾರಿನ ಹಸಿರು ಉಳಿಸುವಂತೆ ಜನತೆಯನ್ನು ಒತ್ತಾಯಿಸಿದರು. ‘ಆರೋಗ್ಯಪೂರ್ಣ ಪರಿಸರಕ್ಕಾಗಿ ಹೆಚ್ಚು ಸಸಿಗಳನ್ನು ನೆಡಲು ಮತ್ತು ಅವುಗಳನ್ನು ರಕ್ಷಿಸಲು ಜನತೆ ಮುಂದೆ ಬರಬೇಕು’ ಎಂದು ಇಲ್ಲಿನ ರಾಜಧಾನಿ ವಾಟಿಕಾದಲ್ಲಿ ಮರಕ್ಕೆ ರಾಖಿ ಕಟ್ಟಿದ ಬಳಿಕ ನಿತೀಶ್ ಕುಮಾರ್ ಹೇಳಿದರು.  ಬಿಳಿಯ ಹತ್ತಿ ಬಟ್ಟೆಯ ಕುರ್ತಾ-ಪೈಜಾಮ ಧರಿಸಿದ್ದ ಮುಖ್ಯಮಂತ್ರಿ ‘ಪರಿಸರ ಸಂರಕ್ಷಣೆಗಾಗಿ ಮರಗಳಿಗೆ ರಾಖಿ ಕಟ್ಟುವಂತೆ ನಾನು ಜನರಿಗೆ ಕೈ ಮುಗಿದು ಮನವಿ ಮಾಡುತ್ತೇನೆ. ಭೂಮಿ ಮತ್ತು ಮನುಷ್ಯರನ್ನು ರಕ್ಷಿಸಲು ಇದು ಹೊಸ ಆರಂಭ’ ಎಂದು ನುಡಿದರು. ಗಿಡಗಳನ್ನು ನೆಡಲು ಮತ್ತು ರಾಜ್ಯದ ಹಸಿರು ಸಂರಕ್ಷಣೆ ಮಾಡಲು ಜನರಿಗೆ ಪ್ರೋತ್ಸಾಹ ಹಾಗೂ ನೆರವನ್ನು ರಾಜ್ಯ ಸರ್ಕಾರ ನೀಡಿದೆ ಎಂದು ನಿತೀಶ್ ಕುಮಾರ್ ಹೇಳಿದರು. ಆಡಳಿತಾರೂಢ ಜನತಾದಳದ (ಸಂಯುಕ್ತ) ಹಲವಾರು ನಾಯಕರು, ಸರ್ಕಾರಿ ಅಧಿಕಾರಿಗಳು, ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಕೆಲವು ವರ್ಷಗಳ ಹಿಂದೆ ನಿತೀಶ್ ಕುಮಾರ್ ಅವರು ರಾಜ್ಯದ ಕಾಡುಪ್ರದೇಶವನ್ನು ಹೆಚ್ಚಿಸುವ ಸಲುವಾಗಿ ‘ಹಸಿರು ಚಳವಳಿ’ ಹಮ್ಮಿಕೊಂಡಿದ್ದರು. ಪಟ್ನಾದಿಂದ 230 ಕಿಮೀ. ದೂರದ ಭಾಗಲ್ಪುರ ಜಿಲ್ಲೆಯ ಸಣ್ಣ ಗ್ರಾಮ ಧರ್ತಾರದಲ್ಲಿ ಗ್ರಾಮಸ್ಥರು ಮಾವು ಮತ್ತು ಲಿಚಿ ಸೇರಿದಂತೆ ಹಣ್ಣಿನ ಮರಗಳನ್ನು ನೆಡುವ ಮೂಲಕ ಎರಡು ವರ್ಷದ ಹಿಂದೆ ಸುದ್ದಿ ಮಾಡಿದ್ದುದರಿಂದ ಸ್ಪೂರ್ತಿ ಪಡೆದ ನಿತೀಶ್ ’ಹಸಿರು ಚಳವಳಿ’ಯನ್ನು ರೂಪಿಸಿದ್ದರು. ಪ್ರತಿಯೊಂದು ಹೆಣ್ಣು ಮಗುವಿನ ಜನ್ಮದಿನ ಆಚರಣೆಗಾಗಿ ಧರ್ತಾರ ಗ್ರಾಮಸ್ಥರು ಹಣ್ಣುಗಳ ಗಿಡ ನೆಡುವ ಪರಂಪರೆ ಹುಟ್ಟು ಹಾಕಿದ್ದರು. ಪರಿಣಾಮವಾಗಿ ಈ ಗ್ರಾಮ ಹಚ್ಚ ಹಸಿರಿನ ಗ್ರಾಮವಾಗಿ ಪರಿವರ್ತನೆಗೊಂಡಿತ್ತು.

2015: ವಡೋದರಾ: ಖ್ಯಾತ ಶಿಲ್ಪಿ ಮಹೇಂದ್ರ ಪಾಂಡ್ಯ ಅವರು ಅಲ್ಪಕಾಲದ ಅಸ್ವಸ್ಥತೆಯ ಬಳಿಕ ತಮ್ಮ ಸ್ವಗೃಹದಲ್ಲೇ ಹಿಂದಿನ ದಿನ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿದವು. 89ರ ಹರೆಯದ ಪಾಂಡ್ಯ ಅವರು ಬರೋಡದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದ ಲಲಿತ ಕಲೆಗಳ ವಿಭಾಗದ ಮುಖ್ಯಸ್ಥರಾಗಿದ್ದರು. ಅವರು ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿಯನ್ನು ಅಗಲಿದರು. ಕಲಾವಿದ ಹಾಗೂ ಪದ್ಮಶ್ರೀ ವಿಜೇತರಾದ ಗುಲಾಂ ಶೇಖ್, ಶಿಲ್ಪಿಗಳಾದ ನಾಗ್​ಜಿ ಪಟೇಲ್, ರಾಘವ್ ಕನೇರಿಯಾ, ಜ್ಯೋತಿ ಭಟ್ ಮತ್ತಿತರರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಶಿಲ್ಪಕಲಾ ಕ್ಷೇತ್ರದಲ್ಲಿ ಪಾಂಡ್ಯ ಅವರು ಅಪಾರ ಸಿದ್ಧಾಂತ ಹಾಗೂ ಪ್ರಾಯೋಗಿಕ ಜ್ಞಾನ ಹೊಂದಿದ್ದರು.

2015: ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿನ ಸೇನಾ ಶಿಬಿರವೊಂದರಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಸ್ಪೋಟವೊಂದರಲ್ಲಿ ಕನಿಷ್ಠ 18 ಮಂದಿ ಸೇನಾ ಯೋಧರು ಗಾಯಗೊಂಡರು.  ಅವರ ಪೈಕಿ 7 ಜನರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಯಿತು. ಪುಲ್ವಾಮ ಜಿಲ್ಲೆಯ ಅವಂತಿಪೊರ ಪ್ರದೇಶದ ಕ್ರ್ಯೂನ ಕೋರ್ ಬ್ಯಾಟಲ್ ಸ್ಕೂಲ್​ನಲ್ಲಿ (ಸಿಬಿಎಸ್) ಸಂಭವಿಸಿದ ಸ್ಪೋಟದಲ್ಲಿ ಕನಿಷ್ಠ 18 ಜನ ಗಾಯಗೊಂಡಿದ್ದಾರೆ. ಅವರ ಪೈಕಿ 7 ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ವಿಶೇಷ ಚಿಕಿತ್ಸೆಗಾಗಿ ಅವರನ್ನು ವಿಮಾನದ ಮೂಲಕ ಇಲ್ಲಿನ ಬಾದಾಮಿಬಾಗ್​ನಲ್ಲಿರುವ 92 ಬೇಸ್ ಆಸ್ಪತ್ರೆಗೆ ಕರೆತರಲಾಗಿದೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದರು. ಉಳಿದ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅವರು ನುಡಿದರು. ಸ್ಫೋಟ ಹೇಗೆ ಸಂಭವಿಸಿತು ಎಂಬುದು ತತ್ ಕ್ಷಣಕ್ಕೆ ಗೊತ್ತಾಗಿಲ್ಲ. ‘ಅದು ಆಕಸ್ಮಿಕವಾಗಿ ಸಂಭವಿಸಿರಬಹುದು. ಏನಿದ್ದರೂ ವಾಸ್ತವಾಂಶ ಏನು ಎಂಬುದು ತನಿಖೆಯ ಮೇಲಷ್ಟೇ ಗೊತ್ತಾಗಬಹುದು. ಈಗ ಏನೂ ಹೇಳಲಾಗದು’ ಎಂದು ಅಧಿಕಾರಿ ನುಡಿದರು.

2015: ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು  ರಕ್ಷಾ ಬಂಧನ ಉತ್ಸವದ ಸಂದರ್ಭದಲ್ಲಿ ರಾಷ್ಟ್ರವನ್ನು ಅಭಿನಂದಿಸಿದರು. ‘ಪವಿತ್ರ ರಾಖಿಯು ಸಹೋದರಿಯರು ಮತ್ತು ಸಹೋದರರನ್ನು ಪ್ರೇಮ ಮತ್ತು ವಿಶ್ವಾಸದ ಬಂಧನದಲ್ಲಿ ಬೆಸೆಯುವುದು. ನಾವೆಲ್ಲರೂ ಈದಿನ ಭಾರತದ ಮಹಿಳೆಯರು ಅದರಲ್ಲೂ ನಿರ್ದಿಷ್ಟವಾಗಿ ಹೆಣ್ಣು ಮಗುವಿನ ಕಲ್ಯಾಣಕ್ಕಾಗಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳುವ ಪ್ರತಿಜ್ಞೆಗೈಯೋಣ’ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಮ್ಮ ಸಂದೇಶದಲ್ಲಿ ತಿಳಿಸಿದರು. ‘ರಕ್ಷಾ ಬಂಧನದ ಸಂದರ್ಭದಲ್ಲಿ ನಾನು ಭಾರತದ ನಾಗರಿಕರೆಲ್ಲರಿಗೂ ಶುಭಾಶಯಗಳನ್ನು ಸಲ್ಲಿಸುತ್ತೇನೆ’ ಎಂದು ಮೋದಿ ಟ್ವೀಟ್ ಮಾಡಿದರು. ರಕ್ಷಾ ಬಂಧನವು ಸಹೋದರ - ಸಹೋದರಿಯರ ನಡುವಣ ಪ್ರೇಮ ಹಾಗೂ ಕರ್ತವ್ಯವನ್ನು ನೆನಪಿಸುವ ಹಬ್ಬವಾಗಿದ್ದು, ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುತ್ತಾರೆ. ಇದು ಸಹೋದರರ ಬಗೆಗಿನ ಸಹೋದರಿಯರ ಪ್ರೇಮ ಮತ್ತು ಅವರ ಹಿತಕ್ಕಾಗಿ ಪ್ರಾರ್ಥನೆ ಮಾಡುವ ಸಂಕೇತವಾಗಿದ್ದು, ಸಹೋದರರು ಜೀವನ ಪರ್ಯಂತ ಸಹೋದರಿಯರನ್ನು ರಕ್ಷಿಸುವ ಪ್ರತಿಜ್ಞೆ ಮಾಡುತ್ತಾರೆ.
2008: ಖ್ಯಾತ ಅಂಕಣಕಾರ ಎಚ್. ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ (ಎಚ್ಚೆಸ್ಕೆ) (90) ಅವರು ತೀವ್ರ ಹೃದಯಾಘಾತದಿಂದ ಮೈಸೂರಿನಲ್ಲಿ ನಿಧನರಾದರು. `ಪ್ರಜಾವಾಣಿ'ಯಲ್ಲಿ ಆರ್ಥಿಕ ಚಿಂತನೆ ಮತ್ತು ಸುಧಾದಲ್ಲಿ ವಾರದ ವ್ಯಕ್ತಿ ಕಾಲಂನ್ನು ಹಲವಾರು ವರ್ಷಗಳ ಕಾಲ ಬರೆದಿದ್ದ ಅವರು ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶವನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಬಂಧಕಾರರೂ ಆಗಿದ್ದ ಅವರು ಸುಮಾರು 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದರು. ಅವರ ಸಮಗ್ರ ಪ್ರಬಂಧ ಕಳೆದ ಆಗಸ್ಟ್ 26ರಂದು ಅವರ 90ನೇ ಹುಟ್ಟಿದ ಹಬ್ಬದ ದಿನ ಬಿಡುಗಡೆಯಾಗಿತ್ತು. ಸಾಹಿತ್ಯ ಅಕಾಡೆಮಿ, ಗೌರವ ಡಾಕ್ಟರೇಟ್, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪಡೆದಿದ್ದರು. ಹರ್ನಿಯಾ ಸಮಸ್ಯೆಯಿಂದ ಅವರನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

2008: ಷಿಕಾಗೋ ನಗರದಲ್ಲಿ ಅಮೆರಿಕಾದ ಕನ್ನಡ ಕೂಟಗಳ ಒಕ್ಕೂಟ (ಅಕ್ಕ) ಆಯೋಜಿಸಿದ 5ನೇ ವಿಶ್ವ ಕನ್ನಡ ಸಮ್ಮೇಳನವನ್ನು ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಉದ್ಘಾಟಿಸಿದರು.

2007: ಭಾರತದ ಫುಟ್ ಬಾಲ್ ಇತಿಹಾಸದಲ್ಲಿ ಈದಿನದ ರಾತ್ರಿ ಒಂದು ಸುಂದರ ರಾತ್ರಿ. ಭಾರತ ತಂಡದವರು ಮೊದಲ ಬಾರಿ ಒಎನ್ ಜಿಸಿ ನೆಹರೂ ಕಪ್ ಫುಟ್ ಬಾಲ್ ಟ್ರೋಫಿ ಗೆದ್ದು ಚಾಂಪಿಯನ್ ಶಿಪ್ ಪಡೆದುದು ಇದಕ್ಕೆ ಕಾರಣ. ನವದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಸೊಗಸಾದ ಆಟ ಪ್ರದರ್ಶಿಸಿದ ಭಾರತ ಫೈನಲ್ ಪಂದ್ಯದಲ್ಲಿ 1-0 ಗೋಲಿನಿಂದ ಸಿರಿಯಾ ತಂಡವನ್ನು ಮಣಿಸಿ ಈ ಮಹತ್ವದ ಸಾಧನೆ ಮಾಡಿತು. ಇದಕ್ಕಾಗಿ ಭಾರತ ತಂಡ 40 ಸಾವಿರ ಡಾಲರ್ ಬಹುಮಾನ ಪಡೆಯಿತು.

2007: ಖ್ಯಾತ ಟ್ರ್ಯಾಪ್ ಶೂಟರ್ ಮಾನವ್ ಜಿತ್ ಸಿಂಗ್ ಸಂಧು ಅವರಿಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಪ್ರತಿಷ್ಠಿತ `ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿ ಪ್ರದಾನ ಮಾಡಿದರು. ರಾಷ್ಟ್ರಪತಿ ಭವನದ ಅಶೋಕಾ ಹಾಲಿನಲ್ಲಿ ನಡೆದ ಸಮಾರಂಭದಲ್ಲಿ 14 ಮಂದಿಗೆ ಅರ್ಜುನ ಪ್ರಶಸ್ತಿ, ಧ್ಯಾನ್ ಚಂದ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ನೀಡಲಾಯಿತು. ಇತರ ಪ್ರಶಸ್ತಿ ವಿಜೇತರು: ಅರ್ಜುನ ಪ್ರಶಸ್ತಿ- ಜಯಂತಾ ತಾಲ್ಲೂಕ್ದಾರ್ (ಆರ್ಚರಿ), ಕೆ.ಎಂ.ಬಿನು (ಅಥ್ಲೆಟಿಕ್ಸ್), ಬಿ. ಚೇತನ್ ಆನಂದ್ (ಬ್ಯಾಡ್ಮಿಂಟನ್), ವಿಜೇಂದರ್ (ಬಾಕ್ಸಿಂಗ್), ಪಿ. ಹರಿಕೃಷ್ಣ (ಚೆಸ್), ಅಂಜುಮ್ ಚೋಪ್ರಾ (ಕ್ರಿಕೆಟ್), ಜ್ಯೋತಿ ಸುನಿತಾ ಕುಲ್ಲು (ಹಾಕಿ), ವಿಜಯ್ ಕುಮಾರ್ (ಶೂಟಿಂಗ್), ಸೌರವ್ ಘೋಷಾಲ್ (ಸ್ಕ್ವಾಷ್), ಸುಭಜಿತ್ ಸಾಹಾ (ಟೇಬಲ್ ಟೆನಿಸ್), ಗೀತಾ ರಾಣಿ (ವೇಯ್ಟ್ ಲಿಫ್ಟಿಂಗ್), ನವನೀತ್ ಗೌತಮ್ (ಕಬಡ್ಡಿ), ರೋಹಿತ್ ಬಾಕರ್ (ಬ್ಯಾಡ್ಮಿಂಟನ್, ಅಂಗವಿಕಲರ ವಿಭಾಗ). ಧ್ಯಾನ್ ಚಂದ್ ಪ್ರಶಸ್ತಿ: ವರಿಂದರ್ ಸಿಂಗ್ (ಹಾಕಿ), ಶಂಷೇರ್ ಸಿಂಗ್ (ಕಬಡ್ಡಿ), ರಾಜೇಂದ್ರ ಸಿಂಗ್ (ಕುಸ್ತಿ); ದ್ರೋಣಾಚಾರ್ಯ ಪ್ರಶಸ್ತಿ: ಆರ್. ಡಿ. ಸಿಂಗ್ (ಅಂಗವಿಕಲರ ಅಥ್ಲೆಟಿಕ್ಸ್), ದಾಮೋದರನ್ ಚಂದ್ರಲಾಲ್ (ಬಾಕ್ಸಿಂಗ್), ಕೊನೇರು ಅಶೋಕ್ (ಚೆಸ್).

2007: ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ವಿಭಾಗ ಪ್ರತಿವರ್ಷ ಉತ್ತಮ ಶಿಕ್ಷಕರಿಗೆ ನೀಡುವ ರಾಷ್ಟ್ರಪ್ರಶಸ್ತಿಗೆ ಗುಲ್ಬರ್ಗದ ಕಪನೂರ ನೆಹರು ಗಂಜ್ ಸರ್ಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ದೇವೇಂದ್ರಪ್ಪ ಎಸ್. ತೋಟನಹಳ್ಳಿ ಅವರು ಆಯ್ಕೆಯಾದರು.

2007: ಶಾಬೇ ಬರಾತ್ ಅಂಗವಾಗಿ ನಡೆಯುತ್ತಿದ್ದ ಮೆರವಣಿಗೆ ಮೇಲೆ ಲಾರಿ ಹರಿದು ನಾಲ್ವರು ಯುವಕರು ಮೃತಪಟ್ಟ ಘಟನೆಯಿಂದ ರೊಚ್ಚಿಗೆದ್ದ ಜನ ಬೀದಿಗೆ ಇಳಿದು ಹಿಂಸಾಕೃತ್ಯದಲ್ಲಿ ತೊಡಗಿದ್ದರಿಂದ ಆಗ್ರಾದಲ್ಲಿ ವ್ಯಾಪಕ ಹಿಂಸಾಕೃತ್ಯ ಸಂಭವಿಸಿ ಒಬ್ಬ ಬಾಲಕ ಗೋಲಿಬಾರಿಗೆ ಬಲಿಯಾದ.

2006: ಆಲಮಟ್ಟಿ ಜಲಾಶಯದ ಮುಂಭಾಗದ ಸೇತುವೆಯಿಂದ ಮ್ಯಾಕ್ಸಿಕ್ಯಾಬ್ ಒಂದು ಕೃಷ್ಣಾ ನದಿಗೆ ಉರುಳಿ ಬಿದ್ದ ಪರಿಣಾಮವಾಗಿ 29 ಜನ ಜಲ ಸಮಾಧಿಯಾದರು. ವರ್ಷದ ಹಿಂದೆ ನಡೆದಿದ್ದ ಸೋದರರ ಮದುವೆಯ ಬಾಸಿಂಗವನ್ನು ಕೂಡಲ ಸಂಗಮದಲ್ಲಿ ಬಿಟ್ಟು ಆಲಮಟ್ಟಿ ವೀಕ್ಷಣೆಗಾಗಿ ಹೊರಟಿದ್ದ ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳ ಜನರಿದ್ದ ತಂಡವನ್ನು ಒಯ್ಯುತ್ತಿದ್ದ ಈ ಟೆಂಪೋದಲ್ಲಿ 32 ಜನರಿದ್ದರು. ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಬ್ರೇಕ್ ಹಾಕಿದಾಗ ಟೆಂಪೋ ನಿಯಂತ್ರಣ ತಪ್ಪಿ ನದಿಗೆ ಉರುಳಿದ್ದು ಈ ದುರಂತಕ್ಕೆ ಕಾರಣ.

2006: ಆಧುನಿಕ ವಚನ ರಚನೆಗೆ ಗಣನೀಯ ಕೊಡುಗೆ ನೀಡಿದ ಬೆಂಗಳೂರಿನ ಅನ್ನದಾನಯ್ಯ ಪುರಾಣಿಕ, ವಚನ ಸಂಗೀತದ ಸುಧೆ ಹರಿಸಿದ ಧಾರವಾಡದ ಪಂಡಿತ ಸೋಮನಾಥ ಮರಡೂರ, ಸಂಶೋಧನಾ ಕ್ಷೇತ್ರದ್ಲಲಿ ಸೇವೆ ಸ್ಲಲಿಸಿದ ಧಾರವಾಡದ ಸಂಶೋಧಕ ವೀರಣ್ಣ ರಾಜೂರ ಅವರಿಗೆ ಪ್ರತಿಷ್ಠಿತ ರಮಣಶ್ರೀ ಪ್ರಶಸ್ತಿ ಪ್ರಕಟಿಸಲಾಯಿತು.

2006: ಅಂಥ್ರಾಕ್ಸ್ ವೈರಾಣು ದೇಹದ ಮೇಲೆ ದಾಳಿ ಮಾಡಲಾಗದಂತೆ ತಡೆಯಬಲ್ಲ ಹಾಗೂ ಸಾರ್ಸ್ ಸೋಂಕು ಹಾಗೂ ಏಡ್ಸ್ನಂತಹ ರೋಗಗಳನ್ನು ತಡೆಗಟ್ಟಬಲ್ಲಂತಹ ರೋಗ ನಿರೋಧಕವನ್ನು ಪತ್ತೆ ಹಚುವಲ್ಲಿ ಯಶಸ್ವಿಯಾಗಿರುವುದಾಗಿ ನ್ಯೂಯಾರ್ಕಿನ ರೆನ್ಸೆಲೀರ್ ಪಾಲಿಟೆಕ್ನಿಕ್ ಸಂಸ್ಥೆ ಪ್ರಕಟಿಸಿತು. ಸಂಸ್ಥೆಯ ರವಿಕಾನೆ ಮತ್ತು ಸಹೋದ್ಯೋಗಿಗಳು ಮೊದಲು ಈ ಮದ್ದನ್ನು ಇಲಿಗಳ ಮೇಲೆ ಪ್ರಯೋಗಿಸಿದ್ದು ಅವು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಅಂಥ್ರಾಕ್ಸ್ ನಿಂದ ಪಾರಾದವು ಎಂದು ಬಿಬಿಸಿಯ ಆನ್ ಲೈನ್ ಸಂಚಿಕೆ ವರದಿ ಮಾಡಿತು.

2006: ಖ್ಯಾತ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಆಟಗಾರ ಕರ್ನಾಟಕದ ಪಂಕಜ್ ಅಡ್ವಾಣಿ ಅವರಿಗೆ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ನವದೆಹಲಿಯಲ್ಲಿ ಪ್ರತಿಷ್ಠಿತ `ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿ ಪ್ರದಾನ ಮಾಡಿದರು.

2006: ಜಪಾನಿನ ರಕ್ಷಣೆ, ಪಶ್ಚಿಮ ಫೆಸಿಫಿಕ್ನ ಸ್ಥಿರತೆ ಹಾಗೂ ಶಾಂತಿಗೆ ಶ್ರಮಿಸುವ ಉದ್ದೇಶದೊಂದಿಗೆ ಅಮೆರಿಕದ ಕ್ಷಿಪಣಿ ನಿರೋಧಕ ಯುದ್ಧ ನೌಕೆ `ಯುಎಸ್ಎಸ್ ಶಿಲೋಹ್' ಜಪಾನಿನ ಯೊಕೊಸುಕಾ ಬಂದರಿಗೆ ಆಗಮಿಸಿತು. 360 ಸಿಬ್ಬಂದಿಯನ್ನು ಹೊಂದಿರುವ ಈ ನೌಕೆಯ ತೂಕ 10,000 ಟನ್ನುಗಳು. ನೌಕೆಯಿಂದ ಆಕಾಶಕ್ಕೆ ಚಿಮ್ಮುವ ಎಸ್ ಎಂ -3 ಕ್ಷಿಪಣಿ ನಿರೋಧಕಗಳ ಮೂಲಕ ಖಂಡಾಂತರ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಈ ನೌಕೆ ಹೊಂದಿದೆ.

1994: ಖ್ಯಾತ ಪತ್ರಕರ್ತ ತುಷಾರ್ ಕ್ರಾಂತಿ ಘೋಷ್ ನಿಧನ.

1982: ಮಾತಾ ಆನಂದ ಮಯಿ ನಿಧನ.

1974: ಚೌಧರಿ ಚರಣ್ ಸಿಂಗ್ ಅಧ್ಯಕ್ಷತಯಲ್ಲಿ ಲೋಕದಳ ಅಸ್ತಿತ್ವಕ್ಕೆ.

1926: ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಾಗಿದ್ದ ದಿವಂಗತ ರಾಮಕೃಷ್ಣ ಹೆಗಡೆ (29-8-1926ರಿಂದ 12-1-2004) ಅವರು 1926ರಲ್ಲಿ ಈದಿನ ಜನಿಸಿದರು. ಕರ್ನಾಟಕದ ಕಾಂಗ್ರೆಸ್ಸೇತರ ಸರ್ಕಾರದ ಮೊದಲ ಮುಖ್ಯಮಂತ್ರಿಯಾದ ಹೆಗಡೆ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅದಕ್ಕೆ ಮೊದಲು ಎಸ್. ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ್ ಸರ್ಕಾರಗಳಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದರು. ಐದು ದಶಕಗಳ ಕಾಲ ರಾಷ್ಟ್ರ ಹಾಗೂ ರಾಜ್ಯದ ರಾಜಕೀಯ ರಂಗದಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದ ಹೆಗಡೆ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಕೇಂದ್ರ ಸರ್ಕಾರದಲ್ಲಿ ವಾಣಿಜ್ಯ ಸಚಿವರಾಗಿದ್ದರು.

1915: ಸಾಹಿತಿ ಗುರುದೇವಿ ಹಿರೇಮಠ ಜನನ.

1913: ಸಾಹಿತ್ಯವಲಯದಲ್ಲಿ ಎನ್ಕೆ ಎಂದೇ ಖ್ಯಾತರಾದ ಎನ್ಕೆ ಕುಲಕರ್ಣಿ (20-8-1913ರಿಂದ 23-4-2005) ಅವರು ಕೃಷ್ಣರಾವ್ ನರಸಿಂಹ ಕುಲಕರ್ಣಿ - ಸೋನಕ್ಕ ದಂಪತಿಯ ಮಗನಾಗಿ ಗದಗದಲ್ಲಿ ಜನಿಸಿದರು. ಧಾರವಾಡದ ಮಂದಿಗೆ `ನಾನೀಕಾಕ' ಎಂದೇ ಆತ್ಮೀಯರಾಗಿದ್ದ ಎನ್ಕೆ ಹಾಸ್ಯ ಪ್ರಹಸನ, ಕಾದಂಬರಿ, ನಗೆ ಲೇಖನ, ಲಲಿತ ಪ್ರಬಂಧ, ಜೀವನ ಚರಿತ್ರೆ ಇತ್ಯಾದಿ ವೈವಿಧ್ಯಮಯ ಬರವಣಿಗೆಯ ಕೃಷಿ ನಡೆಸಿದವರು. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ಕೇಂದ್ರ ಸರ್ಕಾರದ ಬಹುಮಾನ, ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಪ್ರಶಸ್ತಿ, ಪ್ರೊ. ಸ.ಸ. ಮಾಳವಾಡ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗೋರೂರು ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರಿಗೆ ಲಭಿಸಿವೆ.

1905: ಭಾರತದ ಖ್ಯಾತ ಹಾಕಿ ಆಟಗಾರ ಧ್ಯಾನ್ ಚಂದ್ (1905-1979) ಜನ್ಮದಿನ. ಇವರ ಜನ್ಮದಿನವನ್ನು ಭಾರತದ್ಲಲಿ `ರಾಷ್ಟ್ರೀಯ ಕ್ರೀಡಾ ದಿನ'ವಾಗಿ ಆಚರಿಸಲಾಗುತ್ತದೆ. ಇವರ ಹಾಕಿ ಆಟದ ಕೌಶಲ್ಯಗಳು ಮ್ಯಾಜಿಕ್ಕಿನಂತೆ ಭಾಸವಾಗುತ್ತಿದ್ದವು. ವಿದೇಶೀ ತಂಡಗಳು ಅವರ ಹಾಕಿ ಸ್ಟಿಕ್ಕಿನಲ್ಲಿ `ಅಯಸ್ಕಾಂತ' ಮತ್ತು `ಗೋಂದು/ ಮರವಜ್ರ'ಕ್ಕಾಗಿ ತಡಕಾಟ ನಡೆಸಿದ್ದೂ ಉಂಟು. 1936ರ ಬಲರ್ಿನ್ ಒಲಿಂಪಿಕ್ಸ್ ಬಳಿಕ ಜರ್ಮನಿಗೆ ವಲಸೆ ಬಂದದ್ದೇ ಆದರೆ ಕರ್ನಲ್ ಹುದ್ದೆ ನೀಡುವುದಾಗಿ ಹಿಟ್ಲರ್ ಅವರಿಗೆ ಆಹ್ವಾನ ಕೂಡಾ ನೀಡಿದ್ದ.

1896: ಅಮೆರಿಕಕ್ಕೆ ಭೇಟಿ ನೀಡಿದ ಚೀನಾದ ರಾಯಭಾರಿ ಲಿ ಹಂಗ್-ಚಾಂಗ್ ಅವರಿಗಾಗಿ ಚೀನಾ- ಅಮೆರಿಕದ `ಚಾಪ್-ಸ್ವೇ' ಹೆಸರಿನ ಹೊಚ್ಚ ಹೊಸ ಭಕ್ಷ್ಯವನ್ನು ನ್ಯೂಯಾರ್ಕ್ ನಗರದಲ್ಲಿ ತಯಾರಿಸಲಾಯಿತು.

1882: ಲಂಡನ್ನಿನ ಓವಲ್ ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾವು ಇಂಗ್ಲೆಂಡನ್ನು ಮೊದಲ ಬಾರಿಗೆ ಸೋಲಿಸಿತು. ಈ ಪಂದ್ಯವನ್ನು `ಆಷಸ್ ಟೆಸ್ಟ್' (ಬೂದಿ ಪಂದ್ಯ!) ಎಂದು ಕರೆಯಲಾಯಿತು. ಪಂದ್ಯ ಮುಗಿದ ಒಂದು ದಿನದ ಬಳಿಕ `ಸ್ಪೋರ್ಟಿಂಗ್ ಟೈಮ್' ಪತ್ರಿಕೆ `ಇನ್ ಮೆಮೋರಿಯಮ್' ವಿಭಾಗದಲ್ಲಿ ಇಂಗ್ಲಿಷ್ ಕ್ರಿಕೆಟ್ಟಿನ ಸಾವು ಕುರಿತ ಪ್ರಕಟಣೆಯನ್ನು ಪ್ರಕಟಿಸಿತು. `ಶವವನ್ನು ದಹಿಸಲಾಯಿತು ಮತ್ತು ಭಸ್ಮವನ್ನು ಆಸ್ಟ್ರೇಲಿಯಾಕ್ಕೆ ಒಯ್ಯಲಾಯಿತು' ಎಂದು ಅದು ಬರೆದಿತ್ತು.

1842: `ನಾನ್ ಕಿಂಗ್ ಒಪ್ಪಂದ'ದ ಮೂಲಕ ಚೀನಾ ಮತ್ತು ಬ್ರಿಟನ್ ಮಧ್ಯೆ ನಡೆಯುತ್ತಿದ್ದ ವ್ಯಾಪಾರಿ ಘರ್ಷಣೆ ಕೊನೆಗೊಂಡಿತು. ಈ ಘರ್ಷಣೆ ಮೊದಲ `ಅಫೀಮು ಯುದ್ಧ' (1839-42) ಎಂದೇ ಖ್ಯಾತಿ ಪಡೆದಿತ್ತು. ಒಪ್ಪಂದದ ಷರತ್ತುಗಳ ಪ್ರಕಾರ ಚೀನಾವು ಹಾಂಕಾಂಗ್ ಭೂಪ್ರದೇಶವನ್ನು ಬಿಟ್ಟು ಕೊಟ್ಟದ್ದಲ್ಲದೆ, ಐದು ಬಂದರುಗಳಲ್ಲಿ ವ್ಯಾಪಾರ ನಡೆಸಲು ಬ್ರಿಟಿಷರಿಗೆ ಅವಕಾಶ ನೀಡಿತು. ಒಪ್ಪಂದಕ್ಕೆ ಎಚ್ ಎಂಎಸ್ ಕಾರ್ನವಾಲಿಸ್ ಹಡಗಿನಲ್ಲಿ ಸಹಿ ಮಾಡಲಾಯಿತು. ಈ ಹಡಗನ್ನು 19ನೇ ಶತಮಾನದಲ್ಲಿ ಭಾರತದಲ್ಲಿ ಖ್ಯಾತಿ ಪಡೆದಿದ್ದ ಮುಂಬೈಯ ವಾಡಿಯಾಸ್ ಹಡಗು ನಿರ್ಮಾಣ ಸಂಸ್ಥೆ ಬಾಂಬೆ ಡಾಕ್ಸ್ ನಿರ್ಮಿಸಿತ್ತು.

1831: ಮೂಲ ವಿದ್ಯುತ್ ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ಸಮಬಲದ ಎರಡನೇ ಸರ್ಕಿಟ್ ವಿದ್ಯುತ್ ಪ್ರವಾಹ ಕುರಿತ ತನ್ನ ಸಂಶೋಧನೆಗಳನ್ನು ಮೈಕೆಲ್ ಫ್ಯಾರಡೆ ನಡೆಸಿದ. ಈ ವರ್ಷದಲ್ಲೇ ನಂತರ ಅಯಸ್ಕಾಂತ (ಮ್ಯಾಗ್ನೆಟ್) ಬಳಸಿ ನಡೆದ ಪ್ರಯೋಗಗಳು ಮೊತ್ತ ಮೊದಲ `ಡೈನಮೊ' ಅಭಿವೃದ್ಧಿಗೆ ದಾರಿ ಮಾಡಿಕೊಟ್ಟವು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Monday, August 31, 2009

ಇಂದಿನ ಇತಿಹಾಸ History Today ಆಗಸ್ಟ್ 28


ಇಂದಿನ ಇತಿಹಾಸ

ಆಗಸ್ಟ್ 28

ಅಮೆರಿಕದ ಈಜುಗಾರ್ತಿ ಜಾನೆಟ್ ಇವಾನ್ಸ್ ಜನ್ಮದಿನ. ನಾಲ್ಕು ಒಲಿಂಪಿಕ್ ಸ್ವರ್ಣ ಪದಕಗಳನ್ನು ಗೆದ್ದ ಈಕೆ ಈಜುಗಾರಿಕೆಯಲ್ಲಿನ ತನ್ನ ವೇಗದಿಂದಾಗಿ ಖ್ಯಾತಿ ಪಡೆದವರು. 
 2015: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನವದೆಹಲಿಯಲ್ಲಿ 1965ರ ಭಾರತ- ಪಾಕಿಸ್ತಾನ ಸಮರದ 50ನೇ ವರ್ಷಾಚರಣೆ ಸಂದರ್ಭದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ‘1965ನೇ ವರ್ಷದ ಸಮರದ 50ನೇ ವರ್ಷಾಚರಣೆ ಸಂದರ್ಭದಲ್ಲಿ ನಾನು ನಮ್ಮ ತಾಯ್ನಾಡಿಗಾಗಿ ಹೋರಾಡಿದ ಎಲ್ಲಾ ಧೈರ್ಯಶಾಲಿ ಯೋಧರಿಗೂ ತಲೆಬಾಗುತ್ತೇನೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದರು. ‘ನಮ್ಮ ಸಶಸ್ತ್ರ ಯೋಧರ ಧೈರ್ಯ ಮತ್ತು ಶೌರ್ಯ ಸ್ಪೂರ್ತಿದಾಯಕ. ಪ್ರತಿಯೊಂದು ಅಡ್ಡಿ ಆತಂಕ ಎದುರಾದಾಗಲೂ ಅವರು ಭಾರತದ ಏಕತೆ ಮತ್ತು ಸಮಗ್ರತೆಯನ್ನು ರಕ್ಷಿಸಿದ್ದಾರೆ’ ಎಂದು ಪ್ರಧಾನಿ ಹೇಳಿದರು. ಈ ಮಧ್ಯೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಮರ ಜ್ಯೋತಿ ಜವಾನ್​ಗೆ ತೆರಳಿ ಹುತಾತ್ಮ ಯೋಧರ ಸ್ಮಾರಕದಲ್ಲಿ ತಮ್ಮ ಶ್ರದ್ಧಾಂಜಲಿ ಸಲ್ಲಿಸಿದರು.
2015: ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಮತ್ತೆ ನಡೆಸಿದ ಕದನ ವಿರಾಮ ಉಲ್ಲಂಘನೆಗೆ ಮೂವರು ನಾಗರಿಕರು ಹತರಾಗಿ, ಇತರ 16 ಮಂದಿ ಗಾಯಗೊಂಡರು.  ಆರ್.ಎಸ್.ಪುರ ವಿಭಾಗದಲ್ಲಿ ಪಾಕಿಸ್ತಾನಿ ಪಡೆಗಳು ಭಾರಿ ಪ್ರಮಾಣದಲ್ಲಿ ಅಪ್ರಚೋದಿತ ಗುಂಡುದಾಳಿ ಮತ್ತು ಫಿರಂಗಿ ದಾಳಿ ನಡೆಸಿದವು. ಪಾಕಿಸ್ತಾನದ ಕಡೆಯ ಫಿರಂಗಿದಾಳಿಗೆ ಭಾರತೀಯ ಗಡಿ ಭದ್ರತಾ ಪಡೆಗಳು (ಬಿಎಸ್​ಎಫ್) ಸೂಕ್ತ ಉತ್ತರ ನೀಡಿದವು. ಈಮಧ್ಯೆ, ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿಯು ಭಾರತದ ಹೈಕಮೀಷನರ್ ಅವರನ್ನು ಕರೆಸಿ ಕದನ ವಿರಾಮ ಉಲ್ಲಂಘನೆಗಾಗಿ ಪ್ರತಿಭಟನೆ ಸಲ್ಲಿಸಿದರು. ಸಿಯಾಲ್ ಕೋಟ್ ವರದಿಯ ಪ್ರಕಾರ ಕಾಶ್ಮೀರದ ಭಾರತ ಮತ್ತು ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಲ್ಲಿ ಸಂಭವಿಸಿದ ಗುಂಡಿನ ಘರ್ಷಣೆಗಳಲ್ಲಿ ಪಾಕಿಸ್ತಾನದ  ಕನಿಷ್ಠ 9 ನಾಗರಿಕರು ಮೃತರಾಗಿ, ಇತರ ಹಲವರು ಗಾಯಗೊಂಡರು ಎಂದು ಪಾಕಿಸ್ತಾನದ ‘ಡಾನ್’ ವರದಿ ಮಾಡಿತು.

2015: ನವದೆಹಲಿ: ಜಾಗತಿಕ ಮಟ್ಟದಲ್ಲಿ ತೈಲ ಹಾಗೂ ವಸ್ತುಗಳ ಬೆಲೆ ಕುಸಿತವು ಭಾರತಕ್ಕೆ ಲಾಭದಾಯಕ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ನವದೆಹಲಿಯಲ್ಲಿ ಹೇಳಿದರು. ಜಾಗತಿಕ ತೈಲ ಹಾಗೂ ಸಾಮಗ್ರಿಗಳ ಬೆಲೆ ಕುಸಿತವು ಸಾರ್ವಜನಿಕ ವೆಚ್ಚಕ್ಕಾಗಿ ಹಣ ಉಳಿತಾಯ ಮಾಡುವುದು ಎಂದು ಅವರು ಹೇಳಿದರು..

2015: ಮುಂಬೈ: ಪ್ರಮುಖ ಬೆಳವಣಿಗೆಯೊಂದರಲ್ಲಿ ಮುಂಬೈ ಪೊಲೀಸರು ಶೀನಾ ಬೋರಾ ದೇಹವನ್ನು ಹುಗಿಯಲಾಗಿದ್ದ ಜಾಗದಲ್ಲಿ ಅಗೆದು ಕೆಲವು ಎಲುಬುಗಳು, ತಲೆಬುರುಡೆ ಮತ್ತು ಸೂಟ್​ಕೇಸ್ ಪತ್ತೆ ಮಾಡಿದರು. ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿನ ಪೆನ್​ನಲ್ಲಿ ಠಿಕಾಣಿ ಹೂಡಿದ  ಪೊಲೀಸರು ಇನ್ನಷ್ಟು ಅವಶೇಷಗಳಿಗಾಗಿ ಶೋಧ ನಡೆಸಲು ಕಾದರು. 2012ರ ಮೇ ತಿಂಗಳಲ್ಲಿ ರಾಯಗಢ ಪೊಲೀಸರು ತಲೆಗೂದಲು, ಹಲ್ಲು ಮತ್ತು ಕೆಲವು ಎಲುಬು ಮಾದರಿಗಳನ್ನು ಮುಂಬೈಯ ಜೆಜೆ ಆಸ್ಪತ್ರೆಗೆ ಕಳುಹಿಸಿದ್ದರು. 2013ರ ಡಿಸೆಂಬರ್​ನಲ್ಲಿ ಆಸ್ಪತ್ರೆಯು ಮೃತ ವ್ಯಕ್ತಿಯ ವಯಸ್ಸು ಮತ್ತು ಲಿಂಗ ಮತ್ತು ಸಾವಿನ ಕಾರಣ ಪತ್ತೆಗೆ ಈ ಅವಶೇಷಗಳು ಸಾಕಾಗುವುದಿಲ್ಲ ಎಂದು ಪೊಲೀಸರಿಗೆ ತಿಳಿಸಿತ್ತು. ರಾಯಗಢ ಪೊಲೀಸರು ಬಳಿಕ
ಆಸ್ಪತ್ರೆಯ ಪತ್ರಕ್ಕೆ ಉತ್ತರಿಸಿರಲೇ ಇಲ್ಲ. ಶುಕ್ರವಾರ ಅವಶೇಷಗಳನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಯಿತು.  ಈ ಮಧ್ಯೆ ಇಂದ್ರಾಣಿಯ ಮಾಜಿ ಗಂಡನ ಪೊಲೀಸ್ ಕಸ್ಟಡಿಯನ್ನು ಆಗಸ್ಟ್ 31ರವರೆಗೆ ನ್ಯಾಯಾಲಯವು ವಿಸ್ತರಿಸಿತು.

2015: ರಾಯಪುರ: ಮಾವೋವಾದಿ ನಕ್ಸಲೀಯರ ಸಂದೇಶ ವಾಹಕರಾಗಿ ಕೆಲಸ ಮಾಡುತ್ತಾ ಅವರಿಗೆ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡು ಪೂರೈಸುತ್ತಿದ್ದುದಕ್ಕಾಗಿ ಇಬ್ಬರು ವ್ಯಾಪಾರಿಗಳು ಸೇರಿದಂತೆ 13 ಮಂದಿಗೆ ವಿಶೇಷ ನ್ಯಾಯಾಲಯವೊಂದು 7 ವರ್ಷಗಳ ಕಠಿಣ ಸಜೆ ವಿಧಿಸಿತು. ವ್ಯಾಪಾರಿ ನೀರಜ್ ಛೋಪ್ರಾ, ಸಂಬಂಧಿ ಧರ್ಮೇಂದ್ರ ಛೋಪ್ರಾ, ಮೊಹ್​ಪಾಲ್ ಯಾನೆ ಸಂತೋಷ ಧ್ರುವ, ಬಲಿರಾಮ್ ಉಸೆಂಡಿ, ಚೈತ್ರಂ ದರ್ರೊ, ಫೋಲ್​ಸಿಂಗ್ ನಾಗ್, ಸುಖನಾಥ್ ನರೇಟಿ, ಬದ್ರಿ ಗವಡೆ, ಮೋಹನ್ ಸಿಂಗ್ ಧ್ರುವ, ರಾಮ್ ಕುಮಾರ್ ಮಾಂಡವಿ, ದಶರಥ ಮಾಂಡವಿ, ಲಕ್ಷ್ಮಣ್ ಉಸೆಂಡಿ ಮತ್ತು ರವಿ ಕಡಿಯಂ ಅವರಿಗೆ ವಿಶೇಷ ನ್ಯಾಯಾಧೀಶ ಅಬ್ದುಲ್ ಝುಹೀದ್ ಖುರೇಷಿ ಶಿಕ್ಷೆ ವಿಧಿಸಿದ್ದಾರೆ ಎಂದು ಪಬ್ಲಿಕ್ ಪ್ರಾಸೆಕ್ಯೂಟರ್ ಸುರೇಶ ಪ್ರಸಾದ್ ಶರ್ಮಾ ಹೇಳಿದರು. ಎಲ್ಲಾ ಆರೋಪಿಗಳೂ ಮಾವೋವಾದಿ ಸಂದೇಶವಾಹಕರಾಗಿ ಕೆಲಸ ಮಾಡುತ್ತಾ ಅವರಿಗಾಗಿ ಶಸ್ತ್ರಾಸ್ತ್ರ, ಮದ್ದುಗುಂಡು ಸರಬರಾಜು ಸರಬರಾಜು ಮಾಡುತ್ತಿದ್ದುದು ಸಾಬೀತಾಗಿದೆ ಎಂದು ಅವರು ಹೇಳಿದರು. ರಾಜ್ಯ ಗುಪ್ತಚರ ಶಾಖೆ ಮತ್ತು ಪೊಲೀಸರು ಕಳೆದ ವರ್ಷ ಜನವರಿ ಮತ್ತು ಫೆಬ್ರುವರಿಯಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಗೆ ರಾಯಪುರ ಮತ್ತು ಬಸ್ತಾರ್ ಪ್ರದೇಶದ ಪ್ರತ್ಯೇಕ ಸ್ಥಳಗಳಿಂದ ಸಾಗಣೆ ಮತ್ತು ಹಣಕಾಸು ಬೆಂಬಲ ನೀಡುತ್ತಿದ್ದುದಕ್ಕಾಗಿ 13 ಜನರನ್ನು ಬಂಧಿಸಿದ್ದರು. 2014ರ ಜನವರಿ 15ರಂದು ಮೊಹ್​ಪಾಲ್, ಬಲಿರಾಂ ಮತ್ತು ಚೈತ್ರಮ್ ಅವರನ್ನು ರಾಯಪುರದಿಂದ ಕಂಕೇರ್​ಗೆ ನಕ್ಸಲೀಯರಿಗಾಗಿ ಶಸ್ತ್ರಾಸ್ತ್ರಗಳನ್ನು ಒಯ್ಯತ್ತಿದ್ದಾಗ ಅಭಂಪುರ್ ಪ್ರದೇಶದಲ್ಲಿ ಬಂಧಿಸಿದ್ದರು.

2015: ನವದೆಹಲಿ: ಟೋಲ್ ಅಡೆತಡೆಗಳನ್ನು ತೆಗೆದುಹಾಕಬೇಕೆಂಬ ತಮ್ಮ ಬೇಡಿಕೆಯನ್ನು ಸರ್ಕಾರವು ಅಂಗೀಕರಿಸದ ಕಾರಣಕ್ಕಾಗಿ ಅಕ್ಟೋಬರ್ 1ರಿಂದ ಅನಿರ್ದಿಷ್ಟ ಕಾಲ ರಾಷ್ಟ್ರವ್ಯಾಪಿ ಲಾರಿ ಮುಷ್ಕರ ಆರಂಭಿಸಲಾಗುವುದು ಎಂದು ಟ್ರಕ್ ಚಾಲಕ - ಮಾಲೀಕರು ಪ್ರಕಟಿಸಿದರು.
2015: ನವದೆಹಲಿ: ತಮ್ಮ ವಿರುದ್ಧ ಹೂಡಲಾಗಿದ್ದ ಅತ್ಯಾಚಾರ ಪ್ರಕರಣ ಸುಳ್ಳೆಂದು ಸಾಬೀತಾದ ಕಾರಣ, ದೂರುದಾರರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಆರೋಪಿತರಿಗೆ ನ್ಯಾಯಾಲಯ ಅನುವು ಮಾಡಿಕೊಟ್ಟಿತು. ಇತ್ತೀಚಿನ ದಿನಗಳಲ್ಲಿ ಅತ್ಯಾಚಾರದ ಸುಳ್ಳು ಆರೋಪಗಳು ದಾಖಲಾಗುತ್ತಿರುವ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯದ ಈ ತೀರ್ಮಾನ ಹೆಚ್ಚಿನ ಮಹತ್ವಪಡೆದುಕೊಂಡಿತು. ಮದುವೆಯಾಗುವುದಾಗಿ ನಂಬಿಸಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರು ದೆಹಲಿಯ ಮುಖರ್ಜಿ ನಗರದ ನಿವಾಸಿಯೊಬ್ಬರ ವಿರುದ್ಧ ದೂರು ದಾಖಲಿಸಿದ್ದರು. ಆದರೆ ಪ್ರಕರಣದ ವಿಚಾರಣೆ ವೇಳೆ ತಮ್ಮ ಸಮ್ಮತಿಯ ಮೇಲೆಯೇ ತಮ್ಮಿಬ್ಬರ ನಡುವೆ ಲೈಂಗಿಕ ಸಂಬಂಧ ಬೆಳೆದಿದ್ದಾಗಿ ಮಹಿಳೆ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಯನ್ನು ಪರಿಗಣಿಸಿದ ನ್ಯಾಯಾಲಯ, ಆರೋಪಿಯನ್ನು ಖುಲಾಸೆಗೊಳಿಸಿ ಆದೇಶಿಸಿತು. ಇದೇ ವೇಳೆ ಅತ್ಯಾಚಾರದ ಸುಳ್ಳು ಆರೋಪದಿಂದಾಗಿ ಆ ವ್ಯಕ್ತಿ ಸಾಕಷ್ಟು ಮಾನಸಿಕ ಹಿಂಸೆ ಅನುಭವಿಸಿದ್ದಾನೆ. ಜತೆಗೆ ಸಾರ್ವಜನಿಕವಾಗಿ ಅವಮಾನಿತನಾಗಿದ್ದಾನೆ. ಈ ಎಲ್ಲಾ ಕಾರಣಗಳಿಂದಾಗಿ ಮಹಿಳೆಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಆ ವ್ಯಕ್ತಿಗೆ ಅವಕಾಶ ಮಾಡಿಕೊಡುತ್ತಿರುವುದಾಗಿ ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದರು. ಪ್ರಕರಣದ ವಿಚಾರಣೆ ವೇಳೆ ದೂರುದಾರರೇ ತಟಸ್ಥರಾಗಿ, ಆರೋಪಿಯನ್ನು ಖುಲಾಸೆಗೊಳಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಗೌರವಪೂರ್ಣವಾಗಿ ಆರೋಪದಿಂದ ಖುಲಾಸೆಗೊಳ್ಳಲು ಆರೋಪಿತರಿಗೆ ಅವಕಾಶ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೂರುದಾರರ ನಡತೆಯನ್ನು ಗಂಭೀರವಾಗಿ ಪರಿಗಣಿಸುವುದು ಅನಿವಾರ್ಯವಾಗಿದೆ. ಆದ್ದರಿಂದ, ದೂರುದಾರರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಆರೋಪಿತರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.

2015: ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಹೆಚ್ಚುವರಿ ಆಪಾದಿತರನ್ನಾಗಿ ಕರೆಸಲು ಸಮನ್ಸ್ ಹೊರಡಿಸುವಂತೆ ಕೋರಿ ಜಾರ್ಖಂಡ್​ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರು ಮಾಡಿರುವ ಮನವಿಯ ವಿಚಾರಣೆಯನ್ನು ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 2ರಂದು ನಡೆಸುವುದಾಗಿ ಪ್ರಕರಣದ ವಿಚಾರಣೆ ಕಾಲದಲ್ಲಿ ನ್ಯಾಯಾಲಯ ತಿಳಿಸಿತು. ಉದ್ಯಮಿ, ಮಾಜಿ ಸಂಸತ್ ಸದಸ್ಯ ನವೀನ್ ಜಿಂದಾಲ್, ಮಧುಕೋಡಾ ಮತ್ತು ಇತರ 13 ಮಂದಿ ವಿರುದ್ಧ ಹೊರಿಸಲಾಗಿರುವ ಆಪಾದನೆಗಳಿಗೆ ಸಂಬಂಧಿಸಿದಂತೆ ವಾದಗಳ ಆರಂಭಕ್ಕೆ ವಿಶೇಷ ನ್ಯಾಯಾಲಯವು ಅಕ್ಟೋಬರ್ 15ನೇ ದಿನಾಂಕವನ್ನು ನಿಗದಿ ಪಡಿಸಿತು.

2015: ಟ್ರಿಪೋಲಿ:: ಆಫ್ರಿಕಾದ ವಲಸಿಗರಿದ್ದ ದೋಣಿಯೊಂದು ಮುಳುಗಿದ ಪರಿಣಾಮ 200 ಮಂದಿ ಮೃತರಾದರು.  ವಲಸಿಗರು ಇಟಲಿಯತ್ತ ಪ್ರಯಾಣಿಸುತ್ತಿದ್ದ ವೇಳೆ ಲಿಬಿಯಾದ ಸಮುದ್ರದಲ್ಲಿ ಮುಳುಗಿದ್ದಾಗಿ ಲಿಬಿಯಾದ ಅಧಿಕಾರಿಗಳು ತಿಳಿಸಿದರು. ದೋಣಿಯಲ್ಲಿ ಸುಮಾರು 400 ಮಂದಿ ಪ್ರಯಾಣಿಸುತ್ತಿದ್ದರು. ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ತುಂಬಿಕೊಂಡಿದ್ದೇ ದೋಣಿ ಮುಳುಗಲು ಕಾರಣವೆಂದು ಹೇಳಲಾಯಿತು. ಸುಮಾರು 200 ಜನರನ್ನು ರಕ್ಷಿಸಲಾಯಿತು. ಇವರ ಪೈಕಿ 147 ಮಂದಿಯನ್ನು ಅಕ್ರಮ ವಲಸಿಗರ ಆಶ್ರಯ ತಾಣದಲ್ಲಿ ಇರಿಸಿ, ಸೂಕ್ತ ಚಿಕಿತ್ಸೆ ಕೊಡಿಸಲಾಯಿತು ಎಂದು ಟ್ರಿಪೋಲಿಯ  ಅಧಿಕಾರಿಗಳು ಹೇಳಿದರು.

2015: ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ಯಾವುದಾದರೂ ಬಾಹ್ಯ ಬೆದರಿಕೆ ಇದ್ದರೆ ಅದು ಭಾರತದಿಂದ ಮಾತ್ರ ಎಂದು ಪಾಕಿಸ್ತಾನದ ಸಂಸದೀಯ ರಕ್ಷಣಾ ಸಮಿತಿ ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿತು. ಇತ್ತೀಚೆಗೆ ಪಾಕ್​ನ ಸೇನಾಪಡೆಯ ಜಾಯಿಂಟ್ ಸ್ಟಾಫ್ ಕೇಂದ್ರ ಸ್ಥಾನಕ್ಕೆ ಸಂಸದೀಯ ರಕ್ಷಣಾ ಸಮಿತಿ ಸದಸ್ಯರು ಭೇಟಿ ಕೊಟ್ಟ ಸಂದರ್ಭದಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಅಪಾಯ ಇರುವ ಬಗ್ಗೆ ಸೇನಾಧಿಕಾರಿಗಳು ಆತಂಕವನ್ನು ಹಂಚಿಕೊಂಡರು. ಪಾಕಿಸ್ತಾನದ ರಕ್ಷಣಾ ವ್ಯವಸ್ಥೆಯಲ್ಲಿ ಜಾಯಿಂಟ್ ಸ್ಟಾಫ್ ಉನ್ನತ ರಕ್ಷಣಾ ಸಂಸ್ಥೆಯಾಗಿ ಕಾರ್ಯನಿರ್ವಹಿಸುವುದರ ಜತೆಗೆ ಅಣ್ವಸ್ತ್ರಗಳ ಭದ್ರತೆ ಹಾಗೂ ನಿರ್ವಹಣೆಯ ಹೊಣೆಯನ್ನು ನಿಭಾಯಿಸುತ್ತಿರುವುದಾಗಿ ಮುಷಾಯಿದ್ ಹುಸೇನ್ ನೇತೃತ್ವದ ಸಂಸದೀಯ ಸಮಿತಿಗೆ ಲೆಫ್ಟಿನೆಂಟ್ ಜನರಲ್ ರಶದ್ ಮೆಹಮೂದ್ ಮಾಹಿತಿ ನೀಡಿದರು. ಕಳೆದ ಕೆಲವಾರು ವರ್ಷಗಳಲ್ಲಿ ಭಾರತ ಸುಮಾರು 100 ಶತಕೋಟಿ ಡಾಲರ್ ಮೊತ್ತದ ಶಸ್ತ್ರಾಸ್ತ್ರಗಳನ್ನು ಖರೀದಿಸಿದೆ. ಇವುಗಳ ಪೈಕಿ ಶೇ.80ರಷ್ಟು ಶಸ್ತ್ರಾಸ್ತ್ರಗಳು ಪಾಕಿಸ್ತಾನವನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಲೆಂದೇ ಮೀಸಲಾಗಿದೆ. ಇದರ ಜತೆಗೆ ಮುಂದಿನ 5 ವರ್ಷಗಳ ಅವಧಿಯಲ್ಲಿ ಶಸ್ತ್ರಾಸ್ತ್ರಗಳ ಖರೀದಿಗಾಗಿ ಭಾರತ ಈಗಾಗಲೆ ಸಾಕಷ್ಟು ಹಣವನ್ನು ವ್ಯಯಿಸುತ್ತಿರುವುದಾಗಿ ಹೇಳಿದರು. ಈ ಮಧ್ಯೆ ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಪಾಕಿಸ್ತಾನ 3ನೇ ಅತಿದೊಡ್ಡ ಅಣ್ವಸ್ತ್ರಗಳ ದಾಸ್ತಾನು ಹೊಂದಿರುವ ರಾಷ್ಟ್ರವಾಗಲಿರುವುದಾಗಿ ಅಮೆರಿಕದ ತಜ್ಞರು ವರದಿ ನೀಡಿದರು. ಈ ವರದಿಯ ಪ್ರಕಾರ ಪ್ರತಿ ವರ್ಷ 20 ಅಣ್ವಸ್ತ್ರಗಳನ್ನು ಖರೀದಿಸಿ, ದಾಸ್ತಾನು ಮಾಡಿಕೊಳ್ಳುತ್ತಿದೆ. ಭಾರತ ಕೂಡ ಅಣ್ವಸ್ತ್ರ ಬಲಾಢ್ಯ ರಾಷ್ಟ್ರವಾಗಿರುವುದು ಇದಕ್ಕೆ ಕಾರಣ. ಪಾಕಿಸ್ತಾನದ ಬಳಿ ಸಂಸ್ಕರಿತ ಯುರೇನಿಯಂ ದಾಸ್ತಾನು ಹೆಚ್ಚಾಗಲಿರುವ ಕಾರಣ ಮುಂಬರುವ ದಿನಗಳಲ್ಲಿ ಪಾಕಿಸ್ತಾನದ ಅಣ್ವಸ್ತ್ರ ಬಲ ಮತ್ತಷ್ಟು ವೃದ್ಧಿಸುವುದು ನಿಶ್ಚಿತವೆಂದು ತಜ್ಞರು ಅಭಿಪ್ರಾಯಪಟ್ಟರು..

2015: ಬ್ಯಾಂಕಾಕ್: ಸಮುದ್ರದ ತೆರೆ ಬಂದು ಅಪ್ಪಳಿಸುವಾಗಲೇ ಒಂದು ರೀತಿಯ ಭಯ ಸಾಮಾನ್ಯ. ಅದೇ ರೀತಿ ಭಯ ಹುಟ್ಟಿಸುವ ಮಾಹಿತಿಯನ್ನು ಇದೀಗ ನಾಸಾ ಹೊರಗೆಡವಿದೆ. ಅದೇನೆಂದರೆ, ಸಮುದ್ರ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯಂತೆ. ಕಳೆದ ನೂರು ವರ್ಷಗಳ ಅವಧಿಯಲ್ಲಿ ಒಂದು ಮೀಟರ್​ನಷ್ಟು ಹೆಚ್ಚಿದೆ ಎಂದು ಹೇಳಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿಜ್ಞಾನಿ ಚಾರ್ಲೆಸ್ ಬೊಲ್ಡೆನ್ ಇದು ಪ್ರಕೃತಿಯ ಸಾಮಾನ್ಯ ಪ್ರಕ್ರಿಯೆ ಎಂದು ಹೇಳಿದರು. ಇದಾದ ಬಳಿಕ ನಾಸಾ ವಿಜ್ಞಾನಿಗಳು ಇದಕ್ಕೆ ಪ್ರತಿಯಾಗಿ ಮತ್ತೆ ವಾದ ಮಂಡಿಸಿದ್ದು, 1992ರಿಂದ ಈಚೆ ಸಾಗರ ನೀರಿನ ಮಟ್ಟ ಹೆಚ್ಚೂಕಡಿಮೆ 8 ಸೆಂ.ಮೀ.ನಷ್ಟು ಹೆಚ್ಚಿದೆ. ಇದಕ್ಕೆ ಕಾರಣ ತಿಳಿದುಕೊಳ್ಳುವ ನಿಟ್ಟಿನಲ್ಲಿ ನಡೆಸಿದ ಅಧ್ಯಯನದಿಂದ ಬಿಸಿ ನೀರು ಹೆಚ್ಚುತ್ತಿರುವುದು ಮತ್ತು ಹಿಮ ಕರಗುತ್ತಿರುವುದು ಎನ್ನುವುದು ತಿಳಿದಿದೆ ಎಂದರು. ಏಷ್ಯಾದ ಸಮುದ್ರ ತೀರದಲ್ಲಿ ಹೆಚ್ಚೂಕಡಿಮೆ 150 ಮಿಲಿಯನ್ ಜನರು ಸಮುದ್ರ ನೀರಿನ ಮಟ್ಟದಿಂದ ಕೇವಲ ಒಂದು ಮೀಟರ್ ಎತ್ತರದಲ್ಲಿ ವಾಸವಿದ್ದಾರೆ. ಇದು ಮುಂಬರುವ ದಿನಗಳಲ್ಲಿ ಅಪಾಯ ತಂದೊಡ್ಡುವ ಸಾಧ್ಯತೆ ಇದೆ ಎನ್ನುವುದು ಎಚ್ಚರಿಕೆಯ ಸಂದೇಶ ಎನ್ನಲಾಯಿತು.

2008: ಪುದುಚೇರಿಯ ಕೈಗಾರಿಕೆ ಹಾಗೂ ವಿದ್ಯುತ್ ಖಾತೆ ಸಚಿವ ವೈದ್ಯಲಿಂಗಂ ಅವರನ್ನು ಪುದುಚೇರಿಯ ನೂತನ ಮುಖ್ಯಮಂತ್ರಿಯಾಗಿ ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷವು ಆಯ್ಕೆ ಮಾಡಿತು. ರಂಗಸ್ವಾಮಿ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಕೆಲವೇ ಕ್ಷಣಗಳಲ್ಲಿ ಸಭೆ ಸೇರಿದ ಶಾಸಕರು ವೈದ್ಯಲಿಂಗಂ ಅವರನ್ನು ಮುಖ್ಯಮಂತ್ರಿಯಾಗಿ ಒಮ್ಮತದಿಂದ ಆರಿಸಿದರು.

2007: ಕ್ರೋಯೇಷಿಯಾದಲ್ಲಿ ನಡೆದ ವಿಶ್ವಕಪ್ ಶೂಟಿಂಗ್ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದ ಮಾನವ್ ಜಿತ್ ಸಿಂಗ್ ಸಂಧು ಅವರು ಪ್ರತಿಷ್ಠಿತ `ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿಗೆ ಆಯ್ಕೆಯಾದರು. ಬೆಂಗಳೂರಿನ `ಟಾಟಾ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ'ಯಲ್ಲಿ ತರಬೇತಿ ಪಡೆಯುತ್ತಿರುವ ಪಿಎಸ್ ಪಿಬಿ ಆಟಗಾರ ಚೇತನ್ ಆನಂದ್ ಅವರು ಬ್ಯಾಡ್ಮಿಂಟನ್ ರಂಗದಲ್ಲಿ ಈ ವರ್ಷ ತೋರಿದ ಸಾಧನೆಗಾಗಿ `ಅರ್ಜುನ' ಪ್ರಶಸ್ತಿಗೆ ಆಯ್ಕೆಯಾದರು.

2007: ಮಾತೆ ಮಹಾದೇವಿ ಅವರ `ಬಸವ ವಚನ ದೀಪ್ತಿ' ವಚನ ಸಂಗ್ರಹದ ಮೇಲೆ ರಾಜ್ಯ ಸರ್ಕಾರ ಹೇರಿದ ನಿಷೇಧವನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್ ವಚನಗಳ ಅಂಕಿತನಾಮ `ಕೂಡಲಸಂಗಮದೇವ' ವನ್ನು `ಲಿಂಗದೇವ' ಎಂದು ಬದಲಾಯಿಸುವ ಅಧಿಕಾರ ಲೇಖಕರಿಗಿಲ್ಲ ಎಂದು ಹೇಳಿತು. `ಬಸವಣ್ಣನವರು ಕನಸಿನಲ್ಲಿ ಬಂದು ವಚನಗಳ ಅಂಕಿತ ನಾಮವನ್ನು `ಲಿಂಗದೇವ' ಎಂದು ಬದಲಾಯಿಸುವಂತೆ ತಿಳಿಸಿದ್ದರು ಎಂಬ ಮಾತೆ ಮಹಾದೇವಿ ಅವರ ಹೇಳಿಕೆ ನಂಬಿಕೆಗೆ ಯೋಗ್ಯವಲ್ಲ' ಎಂದು ನ್ಯಾಯಮೂರ್ತಿಗಳಾದ ಸಿ.ಕೆ.ಠಕ್ಕರ್ ಮತ್ತು ಮಾರ್ಕಾಂಡೇಯ ಖಟ್ಜು ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿತು. ಮಾತೆಮಹಾದೇವಿ ಸಂಪಾದಿಸಿ 1995ರಲ್ಲಿ ಪ್ರಕಟಿಸಿದ್ದ ಪರಿಷ್ಕೃತ ವಚನಗಳ ಸಂಗ್ರಹವನ್ನು ರಾಜ್ಯ ಸರ್ಕಾರ ನಿಷೇಧಿಸಿತ್ತು. ರಾಜ್ಯ ಸರ್ಕಾರದ ನಿರ್ಧಾರವನ್ನು 1998ರಲ್ಲಿ ಎತ್ತಿಹಿಡಿದಿದ್ದ ಹೈಕೋರ್ಟ್ ` ಈ ರೀತಿ ಅಂಕಿತನಾಮದ ಬದಲಾವಣೆ ಸಮರ್ಥನಿಯ ಅಲ್ಲ' ಎಂದು ಹೇಳಿತ್ತು.

2007: ಬೆಂಗಳೂರು ನಗರದ ಪ್ರತಿಷ್ಠಿತ ಬಡಾವಣೆಯಾದ ಕೋರಮಂಗಲದ ಫೋರಂ ಸಮೀಪದಲ್ಲಿ ಬಿಗ್ ಬಜಾರ್ ಮಳಿಗೆ ಇರುವ ಕಟ್ಟಡ ಸೇರಿದಂತೆ ಹಲವು ಮಾಲ್ಗಳ ನಿರ್ಮಾಣಕ್ಕೆ 8.11 ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿರುವುದನ್ನು ಶಾಸಕ ಎ.ಟಿ. ರಾಮಸ್ವಾಮಿ ನೇತೃತ್ವದ ಜಂಟಿ ಸದನ ಸಮಿತಿ ಪತ್ತೆ ಹಚ್ಚಿತು. `ಇಲ್ಲಿನ ಪ್ರತಿಷ್ಠಿತ `ಮಾಲ್' ಗಳು ಸೇರಿ ಸುಮಾರು 325 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಜಮೀನು ಒತ್ತುವರಿಯಾಗಿದೆ' ಎಂದು ರಾಮಸ್ವಾಮಿ ತಿಳಿಸಿದರು.

2007: ಸೇನಾ ಮುಖ್ಯಸ್ಥರಾಗಿದ್ದುಕೊಂಡೇ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಉದ್ದೇಶಿಸಿದ ಪಾಕಿಸ್ಥಾನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ನಿಲುವನ್ನು ವಿರೋಧಿಸಿ ಮಾಹಿತಿ ತಂತ್ರಜ್ಞಾನ ಸಚಿವ ಇಷಾಕ್ ಖಾಕ್ವಾನಿ ರಾಜೀನಾಮೆ ನೀಡಿದರು.

2007: ದಕ್ಷಿಣ ಆಫ್ರಿಕಾದ ಮಾಜಿ ಟೆಸ್ಟ್ ಕ್ರಿಕೆಟಿಗ ರಾಯ್ ಮೆಕ್ ಲೀನ್ (77) ಜೋಹಾನ್ಸ್ ಬರ್ಗಿನಲ್ಲಿ ನಿಧನರಾದರು. ನಲವತ್ತು ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಆಡಿದ್ದ ಮೆಕ್ ಲೀನ್ 30ಕ್ಕೂ ಹೆಚ್ಚು ಸರಾಸರಿಯಲ್ಲಿ ರನ್ ಗಿಟ್ಟಿಸಿದ್ದರು. 1955ರರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇನಿಂಗ್ಸ್ ಒಂದರಲ್ಲಿ ಅಜೇಯ 76 ರನ್ ಗಳಿಸುವ ಮೂಲಕ ತಮ್ಮ ತಂಡವನ್ನು ಅವರು ಗೆಲ್ಲಿಸಿಕೊಟ್ಟಿದ್ದರು. 1960ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡ ತಂಡದ ಪರವಾಗಿ ಉತ್ತಮ ಪ್ರದರ್ಶನನ ನೀಡಿದ ಮೆಕ್ ಲೀನ್ 1961ರಲ್ಲಿ ವಿಸ್ಡನ್ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿಗೂ ಭಾಜನರಾಗಿದ್ದರು. ರಗ್ಬಿ ಆಟಗಾರರಾಗಿಯೂ ಹೆಸರು ಮಾಡಿದ್ದರು.

2006: ಒರಿಸ್ಸಾ ರಾಜ್ಯದ ಅಂಗುಲ್ ಜಿಲ್ಲೆಯು ತಲ್ಚೇರಿನಲ್ಲಿ ಸ್ಥಾಪಿಸಲಾಗಿರುವ ದೇಶದ ಅತಿ ದೊಡ್ಡ ಉಷ್ಣವಿದ್ಯುತ್ ಸ್ಥಾವರವನ್ನು ಪ್ರಧಾನಿ ಮನಮೋಹನ್ ಸಿಂಗ್ ದೇಶಕ್ಕೆ ಸಮರ್ಪಿಸಿದರು. ಮಳೆಯ ಕಾರಣದಿಂದ ಸ್ಥಾವರ ಸ್ಥಳಕ್ಕೆ ತೆರಳಲು ಅಸಾಧ್ಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರನ್ಸ್ ಮೂಲಕ ಈ ಕಾರ್ಯವನ್ನು ಅವರು ರಾಜಧಾನಿ ಭುವನೇಶ್ವರದಿಂದಲೇ ನೆರವೇರಿಸಿದರು.

2006: ಹತ್ತನೇ ದಕ್ಷಿಣ ಏಷ್ಯಾ ಫೆಡರೇಷನ್ (ಎಸ್ ಎಎಫ್) ಕ್ರೀಡಾಕೂಟ ಮುಕ್ತಾಯ. 118 ಚಿನ್ನ, 69 ಬೆಳ್ಳಿ, 47 ಕಂಚಿನ ಪದಕ ಸೇರಿ ಒಟ್ಟು 234 ಪದಕಗಳನ್ನು ತಮ್ಮ ಉಡಿಗೆ ಹಾಕಿಕೊಳ್ಳುವ ಮೂಲಕ ಭಾರತ ಪದಕ ಪಟಿಯಲ್ಲಿ ಅಗ್ರಸ್ಥಾನ ಗಳಿಸಿತು. ಪಾಕಿಸ್ಥಾನವು 43 ಚಿನ್ನ, 44 ಬೆಳ್ಳಿ, 71 ಕಂಚು ಸೇರಿ 158 ಪದಕ ಗೆದ್ದರೆ, ಶ್ರೀಲಂಕೆಯು 37 ಚಿನ್ನ, 63 ಬೆಳ್ಳಿ, 78 ಕಂಚು ಸೇರಿ 178 ಪದಕ ಗೆದ್ದುಕೊಂಡಿತು.

2001: ಇಂಟೆಲ್ ಕಾರ್ಪೊರೇಷನ್ ತನ್ನ ಅತಿ ವೇಗದ `ಪೆಂಟಿಯಮ್ 4' ಮೈಕ್ರೊಪ್ರೊಸೆಸರನ್ನು ಬಿಡುಗಡೆ ಮಾಡಿತು. ಹೊಸ ಪೆಂಟಿಯಮ್ 4 ಸೆಕೆಂಡಿಗೆ ಎರಡು ಶತಕೋಟಿ ಸೈಕಲಿನಷ್ಟು ಅಂದರೆ ಎರಡು ಗಿಗ್ಹರ್ಟ್ ಸಾಮರ್ಥ್ಯ ಹೊಂದಿದೆ.

1996: ವಿಚ್ಛೇದನಾ ಡಿಕ್ರಿ ಜಾರಿಯೊಂದಿಗೆ ಬ್ರಿಟನ್ನಿನ ರಾಜಕುಮಾರ ಚಾರ್ಲ್ಸ್ ಮತ್ತು ರಾಜಕುಮಾರಿ ಡಯಾನಾ ಅವರ 15 ವರ್ಷಗಳ ದಾಂಪತ್ಯ ಕೊನೆಗೊಂಡಿತು.

1971: ಅಮೆರಿಕದ ಈಜುಗಾರ್ತಿ ಜಾನೆಟ್ ಇವಾನ್ಸ್ ಜನ್ಮದಿನ. ನಾಲ್ಕು ಒಲಿಂಪಿಕ್ ಸ್ವರ್ಣ ಪದಕಗಳನ್ನು ಗೆದ್ದ ಈಕೆ ಈಜುಗಾರಿಕೆಯಲ್ಲಿನ ತನ್ನ ವೇಗದಿಂದಾಗಿ ಖ್ಯಾತಿ ಪಡೆದವರು.

1963: ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆದ ಶಾಂತಿಯುತ ನಾಗರಿಕ ಹಕ್ಕುಗಳ ರ್ಯಾಲಿಯಲ್ಲಿ 2 ಲಕ್ಷ ಮಂದಿ ಪಾಲ್ಗೊಂಡರು. ಲಿಂಕನ್ ಸ್ಮಾರಕದ ಎದುರು ನಡೆದ ರ್ಯಾಲಿಯನ್ನು ಉದ್ದೇಶಿಸಿ ಡಾ. ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಭಾಷಣ ಮಾಡಿದರು. ಅವರ ಭಾಷಣ `ನನಗೆ ಕನಸಿದೆ' ಭಾಷಣ ಎಂದೇ ಖ್ಯಾತಿ ಪಡೆಯಿತು.

1801: ಫ್ರೆಂಚ್ ಆರ್ಥಿಕ ತಜ್ಞ ಹಾಗೂ ಗಣಿತ ತಜ್ಞ ಆಂಟೋನಿ-ಆಗಸ್ಟಿನ್ ಕೊರ್ನೊ (1801-1877) ಜನ್ಮದಿನ. ಗಣಿತ-ಅರ್ಥಶಾಸ್ತ್ರವನ್ನು ರೂಪಿಸಿದ ಮೊದಲಿಗರಲ್ಲಿ ಈತನೂ ಒಬ್ಬ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Advertisement