Showing posts with label Bodo. Show all posts
Showing posts with label Bodo. Show all posts

Friday, February 7, 2020

ಬೋಡೋ ಒಪ್ಪಂದಕ್ಕೆ ಪ್ರಧಾನಿ ಮೋದಿ ಶ್ಲಾಘನೆ, ಸಿಎಎ ಬಗ್ಗೆ ಭರವಸೆ

ಬೋಡೋ ಒಪ್ಪಂದಕ್ಕೆ ಪ್ರಧಾನಿ ಮೋದಿ ಶ್ಲಾಘನೆ,
  ಸಿಎಎ ಬಗ್ಗೆ ಭರವಸೆ
‘ಈಶಾನ್ಯದಲ್ಲಿ ಶಾಂತಿಯ ನವ ಯುಗಾರಂಭ, ಇನ್ನೆಂದೂ ಹಿಂಸೆ, ಅಶಾಂತಿ ಇಲ್ಲ’
ಕೋಕ್ರಜ್ಹಾರ್ (ಅಸ್ಸಾಂ): ಕೇಂದ್ರದಲ್ಲಿ ಎರಡನೇ ಅವಧಿಗೆ ಪುನರಾಯ್ಕೆಗೊಂಡ ಬಳಿಕ ಇದೇ ಮೊದಲ ಬಾರಿಗೆ 2020 ಶುಕ್ರವಾರ ಅಸ್ಸಾಮಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಬೋಡೋ ಒಪ್ಪಂದವನ್ನು ಈಶಾನ್ಯದಲ್ಲಿನ ಶಾಂತಿಯ ನವ ಯುಗದ ಆರಂಭ ಎಂಬುದಾಗಿ ಬಣ್ಣಿಸಿ ಶ್ಲಾಘಿಸಿದರು. ಮತ್ತು ರಾಜ್ಯದಲ್ಲಿ ಆಶಾಂತಿ ಸೃಷ್ಟಿಗೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಭರವಸೆ ನೀಡಿದರು.

ಸ್ವಾತಂತ್ರ್ಯಾನಂತರ ಭಾರತದಲ್ಲೇ ಅತ್ಯಂತ ಬೃಹತ್ ರಾಜಕೀಯ ಸಮಾವೇಶ ಎಂಬುದಾಗಿ ಸ್ವತಃ ಬಣ್ಣಿಸಿದ ಸಭೆಯನ್ನು  ಉದ್ದೇಶಿಸಿ ಮಾತನಾಡಿದ ಪ್ರಧಾನಿ, ತಮ್ಮ ಭಾಷಣದಲ್ಲಿ ಈಶಾನ್ಯ ಭಾರತದ ಅಭಿವೃದ್ಧಿ ನಿಟ್ಟಿನ ತಮ್ಮ ಸರ್ಕಾರದ ದೃಷ್ಟಿಯನ್ನು ವಿವರಿಸಿದರು. ಪ್ರದೇಶದಲ್ಲಿ ಕಳೆದ ಎರಡು ತಿಂಗಳಲ್ಲಿ ಭುಗಿಲೆದ್ದ ಭಾರೀ ಪ್ರತಿಭಟನೆಗಳ ಪರಿಣಾಮವಾಗಿ ಹಿನ್ನಡೆ ಕಂಡಿದ್ದ ’ಆಕ್ಟ್ ಈಸ್ಟ್ ಪಾಲಿಸಿ’ಯನ್ನು ಇನ್ನಷ್ಟು ಗಟ್ಟಿಗೊಳಿಸುವ ನಿರ್ಧಾರವನ್ನು ಪ್ರಧಾನಿ ಪ್ರಕಟಿಸಿದರು.

ಬೊಡೋಗಳ ಜೊತೆಗೆ ಸಹಿ ಮಾಡಲಾಗಿರುವ ಶಾಂತಿ ಒಪ್ಪಂದವನ್ನು ’ರಾಜ್ಯಕ್ಕೆ ಹೊಸ ಬೆಳಕು’ ಎಂಬುದಾಗಿ ಬಣ್ಣಿಸಿದ ಪ್ರಧಾನಿ ಇದು ಪ್ರದೇಶದಲ್ಲಿ ಶಾಶ್ವತ ಶಾಂತಿಯನ್ನು  ಸ್ಥಾಪಿಸಲಿದೆ ಎಂದು ಹೇಳಿದರು. ’ಬೋಡೋಲ್ಯಾಂಡ್ ಚಳವಳಿಯ ಭಾಗವಾಗಿದ್ದ ಜನರನ್ನು ನಾನು ಭಾರತದ ಮುಖ್ಯ ಪ್ರವಾಹಕ್ಕೆ ಸ್ವಾಗತಿಸುತ್ತೇನೆ’ ಎಂದು ಪ್ರಧಾನಿ ನುಡಿದರು.

‘ಅಸ್ಸಾಮಿಗೆ ಭಯೋತ್ಪಾದನೆಯ ಕತ್ತಲು ಮತ್ತೆ ಬರಲು ತಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ’ ಎಂಬುದಾಗಿ ಪ್ರತಿಜ್ಞೆ ಮಾಡಿದ ಮೋದಿ, ’ಈ ಪ್ರದೇಶದಲ್ಲಿ ಇನ್ನೆಂದೂ ಯಾರೇ ಒಬ್ಬ ನಾಗರಿಕ ಹಿಂಸಾಚಾರದ ಕಾರಣಕ್ಕಾಗಿ ಸಾವನ್ನಪ್ಪುವುದಿಲ್ಲ’ ಎಂದು ಹೇಳಿದರು.

‘ಕುಟುಂಬವು ಇನ್ನೆಂದೂ ತನ್ನ ಸಹೋದರ, ಸಹೋದರಿ, ತಾಯಿ ಅಥವಾ ತಂದೆ ಸೇರಿದಂತೆ ಯಾವ ಸದಸ್ಯನನ್ನೂ ಕಳೆದುಕೊಳ್ಳುವುದಿಲ್ಲ. ದಟ್ಟಾರಣ್ಯದಿಂದ ಮರಳಿದ ಮಕ್ಕಳ ತಾಯಂದಿರು ಈದಿನ ಇಲ್ಲಿ ನನ್ನನ್ನು ಹರಸುತ್ತಿದ್ದಾರೆ.  ಎಷ್ಟೋ  ಕುಟುಂಬಗಳು ಸಮಾಧಾನದ ನಿಟ್ಟುಸಿರು ಎಳೆದಿವೆ’ ಎಂದು ಮೋದಿ ನುಡಿದರು.
೨೦೨೦ರ ಜನವರಿ ೨೭ರಂದು ಬೋಡೋ ಒಪ್ಪಂದಕ್ಕೆ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ (ಎನ್‌ಡಿಎಫ್‌ಬಿ), ಆಲ್ ಬೊಡೋ ಸ್ಟೂಡೆಂಟ್ಸ್ ಯೂನಿಯನ್ (ಎಬಿಎಸ್‌ಯು) ಮತ್ತು ಸಿವಿಲ್ ಸೊಸೈಟಿ ಗ್ರೂಪ್ ಈ ಸಂಘಟನೆಗಳ ಜೊತೆಗೆ ಸರ್ಕಾರವು ಒಪ್ಪಂದಕ್ಕೆ ಸಹಿ ಹಾಕಿತ್ತು. ಒಪ್ಪಂದವು ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶ ಜಿಲ್ಲೆಗಳಲ್ಲಿನ (ಬೋಡೋಲ್ಯಾಂಡ್ ಟೆರಿಟೋರಿಯಲ್ ಏರಿಯಾ ಡಿಸ್ಟ್ರಿಕ್ಟ್ -ಬಿಟಿಎಡಿ) ಮೂರು ದಶಕಗಳ ಬಂಡಾಯಕ್ಕೆ ತೆರೆ ಎಳೆದಿದೆ.

ಒಪ್ಪಂದದ
ಪ್ರಕಾರ ಈ ಪ್ರದೇಶ ಇದೀಗ ಬೊಡೋಲ್ಯಾಂಡ್ ಪ್ರಾದೇಶಿಕ ಪ್ರದೇಶ (ಬೋಡೋಲ್ಯಾಂಡ್ ಟೆರಿಟೋರಿಯಲ್ ರೀಜನ್- ಬಿಟಿಆರ್) ಎಂಬುದಾಗಿ ಮರುನಾಮಕರಣಗೊಂಡಿದೆ.

ನೂತನ ಒಪ್ಪಂದವು ೧೯೯೩ ಮತ್ತು ೨೦೦೩ರಲ್ಲಿ ಬೋಡೋ ಗುಂಪುಗಳ ಜೊತೆಗೆ ಸಹಿ ಮಾಡಲಾಗಿದ್ದ ಹಿಂದಿನ ಒಪ್ಪಂದಗಳಿಗೆ ಹೋಲಿಸಿದರೆ ಹೆಚ್ಚು ವಿಸ್ತೃತವಾಗಿದೆ ಎಂಬುದಾಗಿ ಪರಿಗಣಿಸಲ್ಪಟ್ಟಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ವ್ಯಾಪ್ತಿಯಿಂದ ವಿನಾಯ್ತಿ ಪಡೆದಿರುವ ಬೋಡೋಲಾಂಡ್ ಪಾದೇಶಿಕ ಮಂಡಳಿಯ (ಬಿಟಿಸಿ) ಅಡಿಯಲ್ಲಿ ಬರುವ ಕೋಕ್ರಜ್ಹಾರ್‌ನಲ್ಲಿ ಶುಕ್ರವಾರ ಪ್ರಧಾನಿ ಮೋದಿ ಅವರ  ಸಭೆ  ನಡೆಯಿತು.

ಪ್ರಧಾನಿಯವರು ತಮ್ಮ ಭಾಷಣದಲ್ಲಿ ಮುಖ್ಯವಾಗಿ ಶಾಂತಿ ಒಪ್ಪಂದ ಮತ್ತು ತಮ್ಮ ಸರ್ಕಾರವು ಈಶಾನ್ಯ ಪ್ರದೇಶದಲ್ಲಿ ಜನರನ್ನು ತಲುಪಲು ಕೈಗೊಂಡಿರುವ ಕ್ರಮಗಳಿಗೆ ಒತ್ತು ನೀಡಿದರು. ಜೊತೆಗೇ ನೂತನ ಪೌರತ್ವ ಕಾಯ್ದೆಯು ರಾಜ್ಯದಲ್ಲಿ ’ಹೊರಗಿನವರಿಗೆ’ ನೆಲೆಸಲು ಅವಕಾಶ ಮಾಡುತ್ತದೆ ಎಂಬುದು ಸುಳ್ಳು ಎಂದು ಆಶ್ವಾಸನೆ ನೀಡಿದರು.

ಪೌರತ್ವ ತಿದ್ದುಪಡಿ ಕಾಯ್ದೆಯು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಫ್ಘಾನಿಸ್ಥಾನದಿಂದ ೨೦೧೫ಕ್ಕೆ ಮುಂಚೆ ಭಾರತಕ್ಕೆ ಬಂದಿರುವ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ಕೊಡಬಯಸಿದೆ. ಆದರೆ ಅಸ್ಸಾಮ್ ಒಪ್ಪಂದವು ರಾಜ್ಯದಲ್ಲಿನ ವಿದೇಶೀಯರನ್ನು ಗಡೀಪಾರು ಮಾಡಲು ೧೯೭೧ರ ಮಾರ್ಚ್ ೨೪ ದಿನಾಂಕವನ್ನು  ಕಡೆಯ ದಿನವನ್ನಾಗಿ ಮಾಡಿದೆ.
‘ಆದಾಗ್ಯೂ, ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ. ಇದಕ್ಕೆ ಪ್ರತಿಭಟನೆಗಳನ್ನೇ ದೂಷಿಸಬೇಕಾಗಿದೆ’ ಎಂದು ಪ್ರಧಾನಿ ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆಯು (ಸಿಎಎ) ಹೊರಗಿನಿಂದ ಜನರಿಗೆ ಇಲ್ಲಿಗೆ ಬಂದು ನೆಲೆಯೂರಲು ದಾರಿ ಮಾಡಿದೆ ಎಂದು ಗುಂಪುಗಳು ಅಪಪ್ರಚಾರ ಮಾಡುತ್ತಿವೆ. .. ಅಂತಹದ್ದೇನೂ ಆಗುವುದಿಲ್ಲ ಎಂಬುದಾಗಿ ನಿಮಗೆ ಹೇಳಲು ನಾನಿಲ್ಲಿಗೆ ಬಂದಿದ್ದೇನೆ’ ಎಂದು ಮೋದಿ ನುಡಿದರು.

ಬೊಡೊ ಒಪ್ಪಂದವು ಶಾಂತಿಯ ವಿಜಯ ಎಂಬುದಾಗಿ ಬಣ್ಣಿಸಿದ ಮೋದಿ, ತಮ್ಮ ಸರ್ಕಾರವು ಒಪ್ಪಂದದ ಪ್ರತಿಯೊಂದು ಬೇಡಿಕೆಯನ್ನೂ ಒಪ್ಪಿದೆ ಮತ್ತು ಈಗ ಪ್ರದೇಶದ ಅಭಿವೃದ್ಧಿಯತ್ತ ಸಂಪೂರ್ಣ ಗಮನ ಹರಿಯಲಿದೆ ಎಂದು ಹೇಳಿದರು.

ಒಪ್ಪಂದದ ಪ್ರಕಾರ ಬೊಡೋಗಳ ನೆರವಿಗೆ ೧೫೦೦ ಕೋಟಿ ರೂಪಾಯಿಗಳನ್ನು ವಿಶೇಷ ಅಭಿವೃದ್ಧಿ ಕೊಡುಗೆ (ಪ್ಯಾಕೇಜ್) ರೂಪದಲ್ಲಿ ಕೊಡಲಾಗುವುದು. ಬೋಡೋಗಳ ಪ್ರತಿಯೊಂದು ಹಕ್ಕು, ಸಂಸ್ಕೃತಿ ಮತ್ತು ಭಾಷೆಯನ್ನು ರಕ್ಷಿಸಲಾಗುವುದು ಎಂದು ಪ್ರಧಾನಿ ಹೇಳಿದರು.

‘ಭಾರತದ ಎಲ್ಲರೂ ನಿಮಗೆ (ಬೋಡೋ ಬುಡಕಟ್ಟು) ಧನ್ಯವಾದ ಹೇಳುತ್ತಿದ್ದಾರೆ ಮತ್ತು ನಿಮ್ಮೊಂದಿಗೆ ಸಂಭ್ರಮಿಸುತ್ತಿದ್ದಾರೆ. ನಿಮ್ಮಿಂದಾಗಿ ಎಲ್ಲರೂ ಶಾಂತಿಯಿಂದ ಬಾಳಲು ಮತ್ತು ಬಲಾಢ್ಯ ಭಾರತಕ್ಕೆ ಕೊಡುಗೆ ನೀಡಲು ಒಪ್ಪಿದ್ದಾರೆ. ನೀವೆಲ್ಲರೂ ಶಾಂತಿ ಮತ್ತು ಬೆಳಕನ್ನು ಆಯ್ಕೆ ಮಾಡಿದ್ದೀರಿ’ ಎಂದು ಜನರ ಹರ್ಷೋದ್ಘಾರಗಳ ನಡುವೆ ಪ್ರಧಾನಿ ನುಡಿದರು.

ರಾಜಕೀಯ ಬಿರುಗಾಳಿ ಎಬ್ಬಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ’ಬಡಿಗೆ ಏಟು (ದಂಡದ ಪೆಟ್ಟು)’ ಟೀಕೆಯನ್ನೂ  ಮೋದಿ ಪ್ರಸ್ತಾಪಿಸಿದರು. ’ಕೆಲವರು ನನಗೆ ಬಡಿಗೆಗಳಿಂದ (ದಂಡ) ಹೊಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನಿಮ್ಮಿಂದ ಇಷ್ಟೊಂದು ದೊಡ್ಡ ಪ್ರಮಾಣದ ಬೆಂಬಲ ಇರುವಾಗ ನಾನು ಯಾಕೆ ಹೆದರಬೇಕು?’ ಎಂದೂ ಅವರು ನುಡಿದರು. 

Tuesday, January 28, 2020

ಚಾರಿತ್ರಿಕ ಬೊಡೋ ಒಪ್ಪಂದಕ್ಕೆ ಸಹಿ, ದಶಕಗಳ ಹಿಂಸಾತ್ಮಕ ಆಂದೋಲನಕ್ಕೆ ತೆರೆ

ಚಾರಿತ್ರಿಕ ಬೊಡೋ ಒಪ್ಪಂದಕ್ಕೆ ಸಹಿ, ದಶಕಗಳ ಹಿಂಸಾತ್ಮಕ ಆಂದೋಲನಕ್ಕೆ ತೆರೆ
ಬೋಡೋ ಜನರ ಅಭಿವೃದ್ಧಿಗೆ ೧೫೦೦ ಕೋಟಿ ರೂ ಪ್ಯಾಕೇಜ್
ನವದೆಹಲಿ: ಅಸ್ಸಾಮಿನ ಕಟ್ಟಾ ಉಗ್ರಗಾಮಿ ಸಂಘಟನೆ ’ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್’ ಜೊತೆಗೆ ಚಾರಿತ್ರಿಕ ಒಪ್ಪಂದಕ್ಕೆ ಸರ್ಕಾರವು 2020 ಜನವರಿ 27ರ ಸೋಮವಾರ ಸಹಿ ಹಾಕಿತು. ಇದರೊಂದಿಗೆ ರಾಜ್ಯ ಸ್ಥಾನಮಾನಕ್ಕಾಗಿ ನಡೆಯುತ್ತಿದ್ದ ದಶಕಗಳ ಕಾಲದ ಹಿಂಸಾತ್ಮಕ ಚಳವಳಿಗೆ ತೆರೆ ಬಿದ್ದಿತು.

ಒಪ್ಪಂದವು ಅಸ್ಸಾಮಿನ ಪ್ರಾದೇಶಿಕ ಸಮಗ್ರತೆಯನ್ನು ಹಾಗೇಯೇ ಉಳಿಸಿಕೊಳ್ಳುವುದರ ಜೊತೆಗೆ, ೧೫೦೦ ಕೋಟಿ ರೂ.ಗಳ ಹಣಕಾಸು ಕೊಡುಗೆಯೊಂದಿಗೆ ಬೋಡೋ ಜನರ ಸರ್ವತೋಮುಖ ಅಭಿವೃದ್ಧಿಯನ್ನು ಖಾತರಿ ಪಡಿಸುತ್ತದೆ ಎಂದು  ಎಂದು ಅಸ್ಸಾಂ ಸಚಿವ ಹಾಗೂ ಈಶಾನ್ಯದ ಬಿಜೆಪಿಯ ಪ್ರಮುಖ ನಾಯಕ ಹಿಮಂತ ಬಿಸ್ವಾ ಶರ್ಮಾ ಹೇಳಿದರು.

ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಹಾಜರಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಪ್ಪಂದವನ್ನು ’ಐತಿಹಾಸಿಕ’ ಎಂಬುದಾಗಿ ಬಣ್ಣಿಸಿ, "ಇದು ಬೋಡೋ ಪ್ರದೇಶ ಮತ್ತು ಅಸ್ಸಾಂ ಅಭಿವೃದ್ಧಿಗೆ ಸಹಾಯ ಮಾಡಲಿದೆ’ ಎಂದು ಹೇಳಿದರು. ಹಿಂದಿನ ಸಲಕ್ಕಿಂತ ಭಿನ್ನವಾಗಿ ಈ ಬಾರಿ ಎಲ್ಲ ಪಾಲುದಾರರೂ ಸಹಿ ಹಾಕಿರುವುದರಿಂದ ಈ ಒಪ್ಪಂದ ಶಾಶ್ವತ ಒಪ್ಪಂದವಾಗಲಿದೆ. ಕಳೆದ ಬಾರಿ ಮೂರು ಗುಂಪುಗಳು ಒಪ್ಪಂದ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಅಮಿತ್ ಶಾ ನುಡಿದರು.

ತ್ರಿಪಕ್ಷೀಯ ಒಪ್ಪಂದಕ್ಕೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್, ಎನ್‌ಡಿಎಫ್‌ಬಿ ಮತ್ತು ಎಬಿಎಸ್‌ಯು ಸಂಘಟನೆಗಳ ನಾಲ್ಕು ಬಣಗಳ ನಾಯಕತ್ವ ಮತ್ತು ಕೇಂದ್ರ ಸರ್ಕಾರ ಸಹಿ ಹಾಕಿವೆ. ರಾಜ್ಯ ಸ್ಥಾನಮಾನ ಚಳವಳಿಯ ಮುಂಚೂಣಿಯಲ್ಲಿದ್ದ ಆಲ್ ಬೋಡೋ ವಿದ್ಯಾರ್ಥಿ ಸಂಘ ಕೂಡಾ ಒಪ್ಪಂದಕ್ಕೆ ಸಹಿ ಹಾಕಿತು.

ಒಪ್ಪಂದದ ಪ್ರಕಾರ, ರಾಜ್ಯ ಸ್ಥಾನಮಾನಕ್ಕಾಗಿ ನಡೆದ ಆಂದೋಲನದಲ್ಲಿ ಶಸ್ತ್ರಾಸ್ತ್ರ ಕೈಗೆತ್ತಿಕೊಂಡವರ ಬಗ್ಗೆ ಕೇಂದ್ರವು ಸಹಾನುಭೂತಿಯ ದೃಷ್ಟಿಕೋನವನ್ನು ಹೊಂದಲಿದೆ ಎಂದು ಮೂಲಗಳು ತಿಳಿಸಿದವು.

ಒಪ್ಪಂದದ ಹಿನ್ನೆಲೆಯಲ್ಲಿ ಜನವರಿ ೩೦ ರಂದು ೧,೫೦೦ ಕ್ಕೂ ಹೆಚ್ಚು ಬೊಡೋ ಉಗ್ರಗಾಮಿಗಳು ಶರಣಾಗತರಾಗುವ ನಿರೀಕ್ಷೆಯಿದೆ. "ಅವರು ಈಗ ಉಗ್ರರಲ್ಲ, ಎಲ್ಲರೂ ನಮ್ಮ ಸಹೋದರರು" ಎಂದು ಅಮಿತ್ ಶಾ ಹೇಳಿದರು.

‘ಶರಣಾಗತರಾಗುವ ಉಗ್ರರ ಪೈಕಿ ಶುದ್ಧ ಹಿನ್ನೆಲೆ ಹೊಂದಿರುವವರನ್ನು ಅರೆಸೈನಿಕ ಪಡೆಗಳಿಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಬೋಡೋ ಚಳವಳಿಯಲ್ಲಿ ಮೃತರಾದವರ ಕುಟುಂಬಗಳಿಗೆ ಪರಿಹಾರವಾಗಿ ೫ ಲಕ್ಷ ರೂಪಾಯಿಗಳನ್ನು ಒದಗಿಸಲಾಗುವುದು’ ಎಂದು ಶಾ ನುಡಿದರು.

ಒಪ್ಪಂದದ ಪ್ರಕಾರ, ಬಿಟಿಎಡಿ ಎಂಬುದಾಗಿ ಗುರುತಿಸಲಾಗುವ ಪ್ರದೇಶವನ್ನು ’ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶ’ ಎಂದು ಮರುನಾಮಕರಣ ಮಾಡಲಾಗುವುದು ಮತ್ತು ಅಸ್ಸಾಮಿನ ಬೆಟ್ಟ ಪ್ರದೇಶದ ಜಿಲ್ಲೆಗಳಲ್ಲಿ ವಾಸಿಸುವ ಬೋಡೋ ಜನರಿಗೆ ಕೇಂದ್ರವು ’ಬೆಟ್ಟಗಳ ಬುಡಕಟ್ಟು’ ಸ್ಥಾನಮಾನವನ್ನು ತ್ವರಿತವಾಗಿ ಒದಗಿಸಿಕೊಡಲಿದೆ. ದೇವನಾಗರಿ ಲಿಪಿಯನ್ನು ಹೊಂದಿರುವ ಬೋಡೋ ಭಾಷೆ ಇಡೀ ಅಸ್ಸಾಮಿಕ ಅಧಿಕೃತ ಸಹ ಭಾಷೆಯಾಗಲಿದೆ.

ಒಪ್ಪಂದವು ಭಾರಿ ಹಣಕಾಸು ನೆರವಿನ ಕೊಡುಗೆಯನ್ನು ಕೂಡಾ ಒಳಗೊಂಡಿದೆ. ಈ ಪ್ರದೇಶವನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರವು ೩ ವರ್ಷಗಳವರೆಗೆ ೨೫೦ ಕೋಟಿ ರೂಪಾಯಿಗಳನ್ನು ಒದಗಿಸಲಿದ್ದು, ಕೇಂದ ಸರ್ಕಾರ ಕೂಡಾ  ಸಮಾನ ಮೊತ್ತವನ್ನು  ಅದಕ್ಕೆ ಸೇರಿಸಲಿದೆ. ಪ್ರದೇಶದ ಅಭಿವೃದ್ಧಿಗೆ ಮೂರು ವರ್ಷಗಳಲ್ಲಿ ಒಟ್ಟು ೧೫೦೦ ಕೋಟಿ ರೂ. ಲಭ್ಯವಾಗಲಿದೆ.

ಉದ್ಯಮಗಳ ಸ್ಥಾಪನೆ ಮತ್ತು ಉದ್ಯೋಗ ಪ್ಯಾಕೇಜ್ ಮತ್ತು ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ಹಣವನ್ನು ಬಳಸಲಾಗುತ್ತದೆ. ಸಾಮಾಜಿಕ-ಸಾಂಸ್ಕೃತಿಕ ಪ್ಯಾಕೇಜ್ ಅಡಿಯಲ್ಲಿ ಸರ್ಕಾರವು ಉಪೇಂದ್ರನಾಥ್ ಹೆಸರಿನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಿದೆ.

ಇತರ ಯೋಜನೆಗಳಲ್ಲಿ ಪ್ರಾದೇಶಿಕ ವೈದ್ಯಕೀಯ ಸಂಸ್ಥೆ, ಹೋಟೆಲ್ ನಿರ್ವಹಣಾ ಕ್ಯಾಂಪಸ್, ಮದರ್ ಡೈರಿ ಘಟಕ, ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಮತ್ತು ಹೆಚ್ಚಿನ ನವೋದಯ ವಿದ್ಯಾಲಯಗಳ ಸ್ಥಾಪನೆ ಸೇರಿವೆ.

"ಒಪ್ಪಂದವನ್ನು ಕಾರ್ಯಗತಗೊಳಿಸಲು ನಾವು ಯಾವುದೇ ಶತ ಪ್ರಯತ್ನ ಮಾಡುತ್ತೇವೆ. ಎಲ್ಲ ಭರವಸೆಗಳೂ ಕಾಲಮಿತಿಯಲ್ಲಿ ಈಡೇರಲಿವೆ’ ಎಂದು ಅಮಿತ್ ಶಾ ಹೇಳಿದರು.

ಒಪ್ಪಂದದ ಮುಖ್ಯಾಂಶಗಳು
* ತ್ರಿಪಕ್ಷೀಯ ಒಪ್ಪಂದ, ಕೇಂದ್ರ, ರಾಜ್ಯ ಸರ್ಕಾರ ಮತ್ತು ಚಳವಳಿ ನಿರತ ಎಲ್ಲ ಸಂಘಟನೆಗಳ ನಾಯಕರ ಸಹಿ
* ಬೊಡೋ ಜನರ ಸರ್ವತೋಮುಖ ಅಭಿವೃದ್ಧಿಗಾಗಿ ೧೫೦೦ ಕೋಟಿ ರೂಪಾಯಿಗಳ ಪ್ಯಾಕೇಜ್
* ಬೊಡೋ ಭಾಷೆಗೆ ಇಡೀ ಅಸ್ಸಾಮಿನ ಅಧಿಕೃತ ಸಹ ಭಾಷಾ ಸ್ಥಾನಮಾನ
* ಜನವರಿ ೩೦ರಂದು ೧೫೦೦ ಉಗ್ರಗಾಮಿಗಳ ಶರಣಾಗತಿ ನಿರೀಕ್ಷೆ
* ಚಳವಳಿಯಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ತಲಾ ೫ ಲಕ್ಷ ರೂಪಾಯಿ ಪರಿಹಾರ
* ಬಿಟಿಎಡಿ ಪ್ರದೇಶ ಇನ್ನು ಮುಂದೆ ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶ
* ಬೆಟ್ಟ ಪ್ರದೇಶದ ಬೋಡೋ ಜನರಿಗೆ ’ಬೆಟ್ಟಗಳ ಬುಡಕಟ್ಟು’ ಜನಾಂಗದ ಸ್ಥಾನಮಾನ
* ಉದ್ಯಮ ಸ್ಥಾಪನೆ, ಉದ್ಯೋಗ, ಪರಿಸರ ಪ್ರವಾಸೋದ್ಯಮಕ್ಕೆ ಒತ್ತು
* ಉಪೇಂದ್ರನಾಥ್ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ

Thursday, December 25, 2014

Assam violence toll rises to 78, NIA to probe killing


Assam violence toll rises to 78,
 NIA to probe killing


Guwahati/Sonitpur: Fresh incidents of violence were reported in Kokrajhar district on Thursday, 25th Decemeber 2014 morning in the aftermath of 23rd December 2014th  killing of adivasis numbering about 60, by NDFB (S) militants and retaliatory violence thereafter, with the toll of the victims increasing to 78 today.

After touring affected Sonitpur and Kokrajhar districts, Union Home Minister Rajnath Singh announced that the National Investigation Agency would probe the NDFB(S) attacks and assured the Assam government of Army's assistance, if necessary, in its crackdown on militant organisations.

Advertisement