Showing posts with label commerce. Show all posts
Showing posts with label commerce. Show all posts

Friday, June 5, 2020

ಎಲ್ಲ ಹೊಸ ಯೋಜನೆ ಅಮಾನತು: ಕೇಂದ್ರ ಕಠಿಣ ಮಿತವ್ಯಯ ಕ್ರಮ

ಎಲ್ಲ ಹೊಸ ಯೋಜನೆ ಅಮಾನತು: ಕೇಂದ್ರ  ಕಠಿಣ ಮಿತವ್ಯಯ ಕ್ರಮ

ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಆರ್ಥಿಕತೆಯ ಮೇಲಿನ ವೆಚ್ಚವನ್ನು ಬಿಗಿಗೊಳಿಸುವ ಕ್ರಮವಾಗಿ ಹಣಕಾಸು ಸಚಿವಾಲಯವು  2020 ಜೂನ್ 05ರ ಶುಕ್ರವಾರ ಎಲ್ಲಾ ಹೊಸ ಯೋಜನೆಗಳನ್ನು ಮುಂದಿನ ವರ್ಷದ ಮಾರ್ಚ್ ಅಂತ್ಯದವರೆಗೆ ಅಮಾನತುಗೊಳಿಸಿತು.

ಆತ್ಮ ನಿರ್ಭರ ಭಾರತ ಅಭಿಯಾನ ಮತ್ತು ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಘೋಷಿಸಲಾದ ಯೋಜನೆಗಳನ್ನು ಮಾತ್ರ ಪ್ರಾರಂಭಿಸಿ ಮುಂದುವರೆಸಲಾಗುವುದು. ಈ ಹಣಕಾಸು ವರ್ಷದಲ್ಲಿ ಬೇರೆ ಯಾವುದೇ ಯೋಜನೆಗೆ ಅನುಮೋದನೆ ನೀಡಲಾಗುವುದಿಲ್ಲ ಎಂದು ಸಚಿವಾಲಯ ತಿಳಿಸಿತು.

ಸರ್ಕಾರದ ನಿರ್ಧಾರದ ಪರಿಣಾಮವಾಗಿ ಮುಂಗಡಪತ್ರದ (ಬಜೆಟ್) ಅಡಿಯಲ್ಲಿ ಈಗಾಗಲೇ ಅನುಮೋದಿಸಲಾದ ಯೋಜನೆಗಳು ಮುಂದಿನ ವರ್ಷದ ಮಾರ್ಚ್ ೩೧ ರವರೆಗೆ ಸ್ಥಗಿತಗೊಳ್ಳುತ್ತವೆ.

ಹಣಕಾಸು ಸಚಿವಾಲಯಕ್ಕೆ ವಿನಂತಿ ಕಳುಹಿಸುವುದನ್ನು ನಿಲ್ಲಿಸುವಂತೆ ಹೊಸ ಸಚಿವಾಲಯಗಳು ಸೇರಿದಂತೆ ಎಲ್ಲ ಸಚಿವಾಲಯಗಳಿಗೆ ತಿಳಿಸಲಾಗಿದೆ. "ಕೋವಿಡ್-೧೯ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಸಾರ್ವಜನಿಕ ಹಣಕಾಸು ಸಂಪನ್ಮೂಲಗಳ ಮೇಲೆ ಅಭೂತಪೂರ್ವ ಬೇಡಿಕೆ ಇದೆ ಮತ್ತು ಉದಯೋನ್ಮುಖ ಮತ್ತು ಬದಲಾಗುತ್ತಿರುವ ಆದ್ಯತೆಗಳಿಗೆ ಅನುಗುಣವಾಗಿ ಸಂಪನ್ಮೂಲಗಳನ್ನು ವಿವೇಕಯುತವಾಗಿ ಬಳಸಿಕೊಳ್ಳುವ ಅವಶ್ಯಕತೆಯಿದೆ" ಎಂದು ಹಣಕಾಸು ಸಚಿವಾಲಯದ  ಹೇಳಿಕೆ ತಿಳಿಸಿತು.

ಈ ಹೊಸ ನಿಯಮದಂತೆ ಯಾವುದೇ ವಿನಾಯಿತಿಯನ್ನು ವೆಚ್ಚ ಇಲಾಖೆ ಅನುಮೋದಿಸಬೇಕಾಗಿದೆ ಎಂದು ಹೇಳಿಕೆ ತಿಳಿಸಿತು.

ಕೊರೋನವೈರಸ್ ಸಾಂಕ್ರಾಮಿಕವು ಭಾರತದ ಬೆಳವಣಿಗೆಯ ಮಂದಗತಿಗೆ ಕಾರಣವಾಗಿದೆ. ವೈರಸ್ ಹರಡುವುದನ್ನು ತಡೆಯಲು ದಿಗ್ಬಂಧನ (ಲಾಕ್ ಡೌನ್) ವಿಧಿಸುವುದು ತೀವ್ರ ಆರ್ಥಿಕ ಸ್ಥಗಿತಕ್ಕೆ ಕಾರಣವಾಗುತ್ತದೆ ಮತ್ತು ಸರ್ಕಾರದ ಆದಾಯಕ್ಕೆ ಭಾರಿ ನಷ್ಟವನ್ನುಂಟುಮಾಡುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕ್ ಈ ವರ್ಷದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆಯ ಮುನ್ಸೂಚನೆಯನ್ನು ಒದಗಿಸುವುದನ್ನು ಅಥವಾ ಹಣದುಬ್ಬರಕ್ಕೆ ಪಥವನ್ನು ನೀಡುವುದನ್ನು ತಡೆಯಿತು. "ಅನಿಶ್ಚಿತತೆಗಳನ್ನು ಗಮನಿಸಿದರೆ, ೨೦೨೦-೨೧ರಲ್ಲಿ ಜಿಡಿಪಿ ಬೆಳವಣಿಗೆಯು ನಕಾರಾತ್ಮಕವಾಗಿರುತ್ತದೆ ಎಂಬುದಾಗಿ  ಅಂದಾಜಿಸಲಾಗಿದೆ" ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕೆಲವು ವಾರಗಳ ಹಿಂದೆ ಹೇಳಿದ್ದರು.

ತಜ್ಞರು ಹೇಳುವಂತೆ, ದೇಶವು ಎಷ್ಟು ಬೇಗನೆ ಕೊರೋನವೈರಸ್ ಪ್ರಕರಣಗಳನ್ನು ಸ್ಥಗಿತ ಸ್ಥಿತಿಗೆ ತರುತ್ತದೆ ಎಂಬುದರ ಮೇಲೆ ಆರ್ಥಿಕ ಚೇತರಿಕೆ ಅವಲಂಬಿತವಾಗಿರುತ್ತದೆ. ಕೊರೊನಾವೈರಸ್ ಪ್ರಕರಣಗಳ ಹೆಚ್ಚಳವನ್ನು ನಿಯಂತ್ರಣದಲ್ಲಿಡಲು ಹೆಚ್ಚು ಸಮಯ ತೆಗೆದುಕೊಂಡರೆ, ರಾಜ್ಯಗಳು ಮತ್ತು ಪ್ರದೇಶಗಳು ತಮ್ಮ ಆರ್ಥಿಕತೆಯನ್ನು ಪುನಃ ತೆರೆಯಲು ಪ್ರಾರಂಭಿಸಿದಾಗ ಅದು ವಿಳಂಬವಾಗಬಹುದು.

ಎರಡು ತಿಂಗಳಿಗಿಂತಲೂ ಹೆಚ್ಚು ಸಮಯದ ಲಾಕ್‌ಡೌನ್ ನಂತರ ಭಾರತದಲ್ಲಿ ಸೋಂಕುಗಳು ಇನ್ನೂ ಹೆಚ್ಚಾಗುತ್ತಿರುವುದರಿಂದ ಮತ್ತು ಸ್ವಲ್ಪ ಸಮಯದವರೆಗೆ ಸಾಮಾಜಿಕ ಅಂತರ ಪಾಲನೆಯ ಸಲುವಾಗಿ, ಸರ್ಕಾರವು ತನ್ನ ಮುಷ್ಟಿಯನ್ನು ಬಿಗಿಗೊಳಿಸುತ್ತಿದೆ.

ಕಳೆದ ೨೪ ಗಂಟೆಗಳಲ್ಲಿ ೯,೮೫೧ ಪ್ರಕರಣಗಳು ಮತ್ತು ೨೭೩ ಸಾವುUಳೊಂದಿಗೆ ಭಾರತವು ಶುಕ್ರವಾರ ಒಂದು ದಿನದಲ್ಲಿ ಕೊರೋನವೈರಸ್ ಪ್ರಕರಣಗಳಲ್ಲಿ ಅತಿ ಹೆಚ್ಚಿನ ಏರಿಕೆ ಕಂಡಿದೆ. ದೇಶದಲ್ಲಿ ಪ್ರಕರಣಗಳ ಸಂಖ್ಯೆ ೨,೨೬,೭೭೦ ಕ್ಕೆ ಏರಿದೆ. ಅಮೆರಿಕ, ಬ್ರೆಜಿಲ್, ರಷ್ಯಾ, ಇಂಗ್ಲೆಂಡ್, ಸ್ಪೇನ್ ಮತ್ತು ಇಟಲಿ ನಂತರ ಭಾರತ ಈಗ ಏಳನೇ ಸ್ಥಾನದಲ್ಲಿದೆ.

ಮತ್ತೊಂದು ವೆಚ್ಚ ಕಡಿತ ಕ್ರಮದಲ್ಲಿ, ಕೇಂದ್ರ ಸರ್ಕಾರವು ಈ ಹಿಂದೆ ನೌಕರರ ವೇತನದ ತುಟ್ಟಿ ಭತ್ಯೆಯ ಭಾಗವನ್ನು ಮುಂದಿನ ವರ್ಷದವರೆಗೆ ಸ್ಥಗಿತಗೊಳಿಸಿತ್ತು ಮತ್ತು ಹಲವಾರು ರಾಜ್ಯಗಳು ಸಹ ಇದನ್ನು ಅನುಸರಿಸಿದ್ದವು.

Friday, May 22, 2020

ಮತ್ತೆ ರೆಪೋ ದರ ಇಳಿಸಿದ ರಿಸರ್ವ್ ಬ್ಯಾಂಕ್

ಮತ್ತೆ ರೆಪೋ ದರ  ಇಳಿಸಿದ ರಿಸರ್ವ್  ಬ್ಯಾಂಕ್
ನವದೆಹಲಿ: ಕೊರೊನಾ ದಿಗ್ಬಂಧನದಿಂದ (ಲಾಕ್ ಡೌನ್) ಕಂಗೆಟ್ಟಿರುವ ಮಾರುಕಟ್ಟೆಗೆ ಚೈತನ್ಯ ತುಂಬಲು  ಭಾರತೀಯ ರಿಸರ್ವ್ ಬ್ಯಾಂಕ್ 2020 ಮೇ 22ರ ಶುಕ್ರವಾರ  ರೆಪೋ ದರದಲ್ಲಿ ಭಾರೀ ಕಡಿತ ಘೋಷಿಸಿತು. ಶೇ. ೪.೪ರಷ್ಟಿದ್ದ ರೆಪೋದರವನ್ನು ಶೇ.೪ಕ್ಕೆ ಇಳಿಕೆ ಮಾಡಿದ್ದು ರಿವರ್ಸ್ ರೆಪೋ ದರವನ್ನು ಕೂಡಾ ಶೇ.೩.೩೫ಕ್ಕೆ ಇಳಿಕೆ ಮಾಡಿತು.

ಭಾರತೀಯ ರಿಸರ್ವ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಅವರು  ರೆಪೋ ದರ ಕಡಿತ ಘೋಷಿಸಿದರು.

ಇದೇ ವೇಳೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇಎಂಐ ಪಾವತಿ ಅವಧಿಯನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಿಸಿತು. ಜೂನ್ ೧ರಿಂದ ಆಗಸ್ಟ್ ೩೧ರವರೆಗೆ ಮೂರು ತಿಂಗಳ ಕಾಲ ಇಎಂಐ ಪಾವತಿಯನ್ನುಅವಧಿಯನ್ನು ವಿಸ್ತರಿಸಲಾಗಿದೆ. ಈ ಮೊದಲು ಮಾರ್ಚ್ ೧ರಿಂದ ಮೇ ೩೧ರವರೆಗೆ ಇಎಂಐ ಪಾವತಿ ಅವಧಿಯನ್ನು ಮುಂದೂಡಲಾಗಿತ್ತು. ಇದೀಗ ಆರ್‌ಬಿಐ ಮತ್ತೊಮ್ಮೆ ಇಎಂಐ ಪಾವತಿ ಅವಧಿಯನ್ನು ಮುಂದೂಡಿದೆ. ಇದರಿಂದ ಲಾಕ್‌ಡೌನ್ ಸಂಕಷ್ಟಕ್ಕೆ ಒಳಗಾಗಿರುವ ಲಕ್ಷಾಂತರ ಮಂದಿಗೆ ಅನುಕೂಲವಾದಂತಾಗಿದೆ.

ರೆಪೋ ದರ ಕಡಿತದ ಪರಿಣಾಮವಾಗಿ ಬಡ್ಡಿ ದರದಲ್ಲಿ ಭಾರೀ ಇಳಿಕೆಯಾಗಲಿದೆ. ಗೃಹ ಸಾಲ, ವಾಹನ ಸಾಲ ಹಾಗೂ ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರದಲ್ಲೂ ಇಳಿಕೆಯಾಗಲಿದೆ. ಸಾಲ ಪಡೆಯಲು ಇದು ಸಕಾಲವಾಗಿದೆ.  ಆರ್ ಬಿಐ  ರೆಪೋ ದರ ಕಡಿತ ಘೋಷಿಸುತ್ತಿದ್ದಂತೆಯೇ ಷೇರು ಪೇಟೆ ಪುಟಿದೆದ್ದಿತು.

ಇಎಂಐ ಪಾವತಿ ಅವಧಿ ವಿಸ್ತರಣೆ: ವಿವಿಧ ಸಾಲಗಳ ಇಎಂಐ ಪಾವತಿ ಅವಧಿಯನ್ನು ಕೂಡಾ ಆರ್ ಬಿಐ ಜೂನ್ ೧ರಿಂದ ಆಗಸ್ಟ್ ೩೧ರವರೆಗೆ ಮೂರು ತಿಂಗಳ ಅವಧಿಗೆ ವಿಸ್ತರಿಸಿದೆ.
ಕಳೆದ ಮಾರ್ಚ್ ನಲ್ಲೂ ರೆಪೋ ದರ ಕಡಿತ
ಕಳೆದ ಮಾರ್ಚ್ ೨೭ರಂದು ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ೭೫ ಮೂಲಾಂಶಗಳಷ್ಟು ಕಡಿತಗೊಳಿಸಿತ್ತು. ಇದರಿಂದ ಬ್ಯಾಂಕ್ ಗಳಲ್ಲಿ ಸಾಲದ ಮೇಲಿನ ಬಡ್ಡಿ ಹಾಗೂ ಹೂಡಿಕೆ ಮೇಲಿನ ಬಡ್ಡದರವು ಕಡಿಮೆಯಾಗಿತ್ತು. ಭಾರತದ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರಿ ಕುಸಿತ ಕಂಡು ಬಂದರೂ ಸಹ ಎರಡನೇ ತ್ರೈಮಾಸಿಕದಲ್ಲಿ ಸುಧಾರಣೆ ಕಂಡು ಬರುತ್ತದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ವಿಶ್ವಾಸ ವ್ಯಕ್ತಪಡಿಸಿದರು.

 ಮುಖ್ಯಾಂಶಗಳು
ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು ಹೀಗಿವೆ:
೧)     ಜಾಗತಿಕ ಆರ್ಥಿಕತೆ ಮೇಲೆ ಕೊರೋನಾ ವೈರಸ್ ಭೀಕರ ಪರಿಣಾಮ ಬೀರಿದೆ. ಇದರಿಂದಾಗಿ ಏಪ್ರಿಲ್ ತಿಂಗಳಲ್ಲೇ ಆಹಾರ ಹಾಗೂ ಹಣದುಬ್ಬರ ಶೇ.೮.೬ರಷ್ಟು ಏರಿಕೆಯಾಗಿದೆ.
೨)     ಬೇಳೆ ಕಾಳುಗಳ ಬೆಲೆ ಏರಿಕೆ ಆತಂಕ ಹುಟ್ಟಿಸುತ್ತಿದೆ. ಸದ್ಯ ದೇಶದಲ್ಲಿ ಉತ್ತಮ ಮುಂಗಾರು ಆರಂಭದ ಮುನ್ಸೂಚನೆ ಇದೆ. ದೇಶದ ಆಹಾರ ಭದ್ರತೆಗೆ ಇದು ಅನುಕೂಲಕಾರಿ.
೩)     ಕೊರೊನಾ ವೈರಸ್ ಹೊಡೆತಕ್ಕೆ ದೇಶದಲ್ಲಿ ಕೈಗಾರಿಕೆ ಉತ್ಪಾದನೆ ಶೇ.೧೭ರಷ್ಟು ಕುಸಿತ.
೪)     ದೇಶದ ಒಟ್ಟಾರೆ ಆಮದಿನಲ್ಲಿ ಶೇ.೫.೮ರಷ್ಟು ಕುಸಿತ. ಕಳೆದ ೩೦ ವರ್ಷದಲ್ಲೇ ರಫ್ತು ಪ್ರಮಾಣ ಭಾರೀ ಪ್ರಮಾಣದಲ್ಲಿ ಕುಸಿತ.
೫)     ಆಹಾರ ಧಾನ್ಯ ಉತ್ಪಾದನೆ ಶೇ.೩.೭ರಷ್ಟು ಹೆಚ್ಚಳ. ಕೃಷಿ ವಲಯ ದೇಶದಲ್ಲಿ ಹೊಸ ಆಶಾಕಿರಣ ಮೂಡಿಸಿದೆ.
೬)     ದೇಶದ ಜಿಡಿಪಿ ಬೆಳವಣಿಗೆ ಶೂನ್ಯಕ್ಕಿಂತಲೂ ಇಳಿಕೆಯಾಗಿದೆ. ೨೦೨೧ರವರೆಗೂ ಜಿಡಿಪಿ ಬೆಳವಣಿಗೆ ನಿರೀಕ್ಷೆಗಿಂತ ಕೆಳಗಿಳಿಯಲಿದೆ.
೭)     ಲಾಕ್ಡೌನ್ ಕಾರಣದಿಂದ ಮಾರ್ಚ್ ತಿಂಗಳಲ್ಲಿ ಸಿಮೆಂಟ್ ಉತ್ಪಾದನೆ ಶೇ. ೧೯ರಷ್ಟು ಕುಸಿತ
   
ಆರ್ಥಿಕತೆ ಮೇಲೆತ್ತಲು ೪ ಮಹತ್ತರ ಹೆಜ್ಜೆಗಳು:
೧. ಮಾರುಕಟ್ಟೆ ಪುನಶ್ಚೇತನ
೨. ರಫ್ತು ಉತ್ತೇಜನ
೩. ಕೊರೊನಾದಿಂದ ಆರ್ಥಿಕ ಹೊರೆ ತಗ್ಗಿಸುವುದು
೪. ಸಾಲದ ಮೇಲಿನ ಇಎಂಐ ಪಾವತಿಗೆ ಮತ್ತೆ ಮೂರು ತಿಂಗಳು ಅವಧಿ ವಿಸ್ತರಣೆ.

Monday, May 4, 2020

ಫೇಸ್ ಬುಕ್ ಬೆನ್ನಲ್ಲೇ ಜಿಯೋ-ಸಿಲ್ವರ್ ಲೇಕ್ ಒಪ್ಪಂದ

ಫೇಸ್ ಬುಕ್ ಬೆನ್ನಲ್ಲೇ  ಜಿಯೋ-ಸಿಲ್ವರ್ ಲೇಕ್ ಒಪ್ಪಂದ
ಮುಂಬೈ:  ಭಾರತದ ಡಿಜಿಟಲ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಇರುವ  ರಿಲಾಯನ್ಸ್ ಜಿಯೋ ಜೊತೆ ಕೈಜೋಡಿಸಲು ಫೇಸ್ ಬುಕ್ ಮುಂದೆ  ಬಂದ ಬೆನ್ನಲ್ಲೇ  ವಿಶ್ವದ  ಇನ್ನೊಂದು ದಿಗ್ಗಜ ಕಂಪೆನಿ ಸಿಲ್ವರ ಲೇಕ್  ಜಿಯೋದಲ್ಲಿ ಹಣ ಹೂಡಲು ಮುಂದೆ ಬಂದಿದೆ ಎಂದು 2020 ಮೇ  04ರ ಸೋಮವಾರ  ರಿಲಯನ್ಸ್  ಇಂಡಸ್ಟ್ರೀಸ್  ಲಿಮಿಟೆಡ್ (ಆರ್ ಐ ಎಲ್) ಅಧ್ಯಕ್ಷ ಮುಕೇಶ್ ಅಂಬಾನಿ ಪ್ರಕಟಿಸಿದ್ದಾರೆ.

ಖಾಸಗಿ ಹೂಡಿಕೆ ನಿರ್ವಹಣಾ ಕಂಪೆನಿಯಾದ ಸಿಲ್ವರ್ ಲೇಕ್ ಜಿಯೋದಲ್ಲಿ ಶೇ.೧ರಷ್ಟು ಪಾಲನ್ನು ಖರೀದಿಸಿದೆ. ಇದು ಸುಮಾರು ೭೫೦ ಮಿಲಿಯನ್ ಡಾಲರ್, ಅಂದರೆ ಸುಮಾರು ೫,೬೫೫.೭೫ ಕೋಟಿ ರೂ ಮೊತ್ತವಾಗುತ್ತದೆ.

ಈ ಒಪ್ಪಂದದ ಕುರಿತು ಮಾತನಾಡಿದ ಮುಕೇಶ್ ಅಂಬಾನಿ, ‘ಸಿಲ್ವರ್ ಲೇಕಿನಿಂದ  ಜಿಯೋಗೆ ಹೂಡಿಕೆಯಾಗಿರುವುದು ಉತ್ತಮ ಬೆಳವಣಿಗೆ. ಭಾರತೀಯ ಡಿಜಿಟಲ್ ವ್ಯವಸ್ಥೆಗೆ ಪುಷ್ಟಿ ನೀಡಲು ಇದು ಸಹಕಾರಿಯಾಗಲಿದೆ. ಅಲ್ಲದೆ, ಇದರಿಂದ  ಭಾರತದ ಡಿಜಿಟಲ್ ಮಾರುಕಟ್ಟೆಯಲ್ಲಿ ರಿಲಯನ್ಸ್ ಜಿಯೋ ಮತ್ತಷ್ಟು ಮುಂಚೂಣಿಗೆ  ಸಾಗಲಿದೆ’ ಎಂದು ಹೇಳಿದರು.

ಫೇಸ್ ಬುಕ್ ಈಗಾಗಲೇ ಜಿಯೋದಲ್ಲಿ ಶೇ.೯.೯೯ ರಷ್ಟು ಷೇರು ಖರೀದಿ ಮಾಡಿದೆ. ಈ ಮೂಲಕ ರಿಲಯನ್ಸ್ ಜಿಯೋ ಕಂಪೆನಿಗೆ ೫.೭ ಬಿಲಿಯನ್ ಡಾಲರ್ ಹಣ ಹೂಡಿಕೆಯ ರೂಪದಲ್ಲಿ ಹರಿದು ಬಂದಿತ್ತು. ಇದೀಗ ಸಿಲ್ವರ್ ಲೇಕಿನಿಂದ  ೭೫೦ ಮಿಲಿಯನ್ ಡಾಲರ್ ಹಣ ಹೂಡಿಕೆಯಾಗಿದ್ದು, ಈ ಒಪ್ಪಂದದಿಂದ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮೌಲ್ಯ ಸುಮಾರು ೬೫ ಬಿಲಿಯನ್ ಡಾಲರಿಷ್ಟು ಆಗಿದೆ.

ಕೊರೋನಾ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಈ ಬೆಳವಣಿಗೆಗಳಾಗುತ್ತಿರುವುದು ಮಹತ್ವದ್ದಾಗಿದೆ. ಭಾರತದಲ್ಲಿ ಡಿಜಿಟಲ್ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಯಾಗುವ ಅಗತ್ಯವಿದೆ. ದೇಶದ ಮೂಲೆ ಮೂಲೆಯಲ್ಲೂ ಡಿಜಿಟಲ್ ವ್ಯವಸ್ಥೆ ಸಮರ್ಪಕವಾಗಿ ಅಳವಡಿಕೆಯಾಗಬೇಕಿದೆ. ಈ ದೃಷ್ಟಿಯಿಂದ ಜಿಯೋದಲ್ಲಿ ವಿದೇಶೀ ಹೂಡಿಕೆಯಾಗುತ್ತಿರುವುದು ಒಳ್ಳೆಯದು ಎಂದು ಕೆಲ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟರು.

Advertisement