Sunday, April 20, 2008

ಇಂದಿನ ಇತಿಹಾಸ History Today ಏಪ್ರಿಲ್ 19

ಇಂದಿನ ಇತಿಹಾಸ

ಏಪ್ರಿಲ್ 19

ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಭೂತನಾಥ ದೇವಾಲಯ ಸಂಕೀರ್ಣದಲ್ಲಿ ಖ್ಯಾತ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಮತ್ತು ನಟ ಅಭಿಷೇಕ ಬಚ್ಚನ್ ಅವರ ವಿವಾಹ ಅದ್ಧೂರಿಯಾಗಿ ನಡೆಯಿತು. ಆದರೆ ಇದು ನಿಜ ಮದುವೆಯಲ್ಲ. ಮಣಿರತ್ನಂ ಅವರ ಮಹತ್ವಾಕಾಂಕ್ಷೆಯ ಗುರು ಚಿತ್ರಕ್ಕಾಗಿ ನಡೆದ ಚಿತ್ರೀಕರಣದ ಮದುವೆ ಇದು. ಬಾದಾಮಿಯ ಪುರೋಹಿತರು, ನಾಗರಿಕರು ಸೇರಿದಂತೆ 200ಕ್ಕೂ ಹೆಚ್ಚು ಜನ ಈ `ಮದುವೆ'ಯಲ್ಲಿ ಪಾಲ್ಗೊಂಡ್ದಿದರು.


2007: ನಿವೃತ್ತ ಎಂಜಿನಿಯರ್, ತುಂಗಾ ಮೇಲ್ದಂಡೆ ಹೋರಾಟ ಸಮಿತಿಯ ಸಂಚಾಲಕ ಎಫ್.ಕೆ. ಬಿದರಿ (69) ನಿಧನರಾದರು. ಕರ್ನಾಟಕ ಭೂ ಸೇನಾ ನಿಗಮದಲ್ಲಿ 25 ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ಅವರು ರಾಣೆಬೆನ್ನೂರು ಭಾಗದಲ್ಲಿ ರೈತ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.

2007: ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟಿನಲ್ಲಿವಿಶೇಷ ಮೇಲ್ಮನವಿ ಮತ್ತು ಮೂಲ ದಾವೆ ಹೂಡಲು ಕರ್ನಾಟಕ ರಾಜ್ಯ ಸರ್ಕಾರ ನಿರ್ಧರಿಸಿತು. ಈ ಮೇಲ್ಮನವಿಗಳ ಕರಡು ಪ್ರತಿಗಳಿಗೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿತು.

2007: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಾಣ ಬೆದರಿಕೆ ಒಡ್ಡಿದ ಆರೋಪ ಹೊತ್ತ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕರ್ನಾಟಕ ಹೈಕೋರ್ಟ್ ಆರೋಪ ಮುಕ್ತಗೊಳಿಸಿತು. ಇವರಿಬ್ಬರ ವಿರುದ್ಧ ಸುಳ್ಳು ಆರೋಪ ಹೊರಿಸಿರುವ ಬಗ್ಗೆ ಹೈಕೋರ್ಟಿನ ರಿಜಿಸ್ಟ್ರಾರ್ (ತನಿಖಾದಳ) ನೀಡಿದ ವರದಿಯ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಆರ್. ಗುರುರಾಜನ್ ನೇತೃತ್ವದ ವಿಭಾಗೀಯ ಪೀಠವು ವಿವಾದ ಕುರಿತ ಪ್ರಕರಣವನ್ನು ಇತ್ಯರ್ಥ ಮಾಡಿತು.

2006: ಆಸ್ಟ್ರೇಲಿಯಾದ ಜೆಸನ್ ಗ್ಲಿಲೆಸ್ಪಿ ಅವರು ಬಾಂಗ್ಲಾದೇಶದ ವಿರುದ್ಧ ಚಿತ್ತಗಾಂಗಿನಲ್ಲಿ ನಡೆದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ನೈಟ್ ವಾಚ್ ಮನ್ ಆಗಿ ಅತಿ ಹೆಚ್ಚು ರನ್ ಅಂದರೆ ಅಜೇಯ 201 ರನ್ ಗಳಿಸಿ ತಮ್ಮದೇ ದೇಶದ ಟೋನಿಮನ್ ದಾಖಲೆಯನ್ನು ಮುರಿದು ಹಾಕಿದರು. ಟೋನಿಮನ್ ಅವರು 1977ರಲ್ಲಿ ಭಾರತದ ವಿರುದ್ಧ 105 ರನ್ ಗಳಿಸಿ ವಿಶ್ವದಾಖಲೆ ನಿರ್ಮಿಸಿದ್ದರು.

2006: ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಭೂತನಾಥ ದೇವಾಲಯ ಸಂಕೀರ್ಣದಲ್ಲಿ ಖ್ಯಾತ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಮತ್ತು ನಟ ಅಭಿಷೇಕ ಬಚ್ಚನ್ ಅವರ ವಿವಾಹ ಅದ್ಧೂರಿಯಾಗಿ ನಡೆಯಿತು. ಆದರೆ ಇದು ನಿಜ ಮದುವೆಯಲ್ಲ. ಮಣಿರತ್ನಂ ಅವರ ಮಹತ್ವಾಕಾಂಕ್ಷೆಯ ಗುರು ಚಿತ್ರಕ್ಕಾಗಿ ನಡೆದ ಚಿತ್ರೀಕರಣದ ಮದುವೆ ಇದು. ಬಾದಾಮಿಯ ಪುರೋಹಿತರು, ನಾಗರಿಕರು ಸೇರಿದಂತೆ 200ಕ್ಕೂ ಹೆಚ್ಚು ಜನ ಈ `ಮದುವೆ'ಯಲ್ಲಿ ಪಾಲ್ಗೊಂಡ್ದಿದರು.

2006: ಒಂದು ಕಾಲದಲ್ಲಿ ಪ್ರಜಾಪ್ರಭುತ್ವ ಪರ ಹೋರಾಟದಲ್ಲಿ ಸೆರೆಮನೆವಾಸ ಅನುಭವಿಸಿದ್ದ ಮಾಜಿ ಸಾಮಾಜಿಕ ಕಾರ್ಯಕರ್ತೆ ಹ್ಯಾನ್ ಮೈಯಾಂಗ್- ಸೂಕ್ ಅವರನ್ನು ದೇಶದ ಪ್ರಥಮ ಮಹಿಳಾ ಪ್ರಧಾನಿಯಾಗಿ ದಕ್ಷಿಣ ಕೊರಿಯಾ ಸಂಸತ್ ಒಪ್ಪಿಕೊಂಡಿತು.

2006: ಭಾರತದ ಕೃಷಿ ವಲಯವನ್ನು ಆಹಾರ ಸ್ವಾವಲಂಬನೆಯಿಂದ ಹೆಚ್ಚು ಮಾರುಕಟ್ಟೆ ಆಧಾರಿತ ವ್ಯವಸ್ಥೆಗೆ ಪರಿವರ್ತಿಸಲು ಅನುವಾಗುವಂತೆ ವಿಶ್ವಬ್ಯಾಂಕ್ ಭಾರತದ ರಾಷ್ಟ್ರೀಯ ಕೃಷಿ ಪುನಶ್ಚೇತನ ಯೋಜನೆಗೆ ಒಟ್ಟು 200 ಕೋಟಿ ಅಮೆರಿಕನ್ ಡಾಲರ್ ಸಾಲ ನೀಡಲು ಒಪ್ಪಿಕೊಂಡಿತು.

2006: ಸಾಮಾಜಿಕ, ಶೈಕ್ಷಣಿಕ ಯೋಜನೆಗಳಿಗಾಗಿ ಹಾಗೂ ದತ್ತಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಕ್ಕಾಗಿ ವೆಸ್ಟ್ ಮಿನ್ ಸ್ಟರ್ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಸಾಗರೋತ್ತರ ಬ್ರಿಟಿಷ್ ವ್ಯವಹಾರಗಳ ರಾಯಭಾರಿ ಭಾರತೀಯ ಮೂಲದ ಲಾರ್ಡ್ ಸ್ವರಾಜ್ ಪಾಲ್ ಅವರಿಗೆ 2006ನೇ ಸಾಲಿನ ಬ್ರಿಟನ್ನಿನ ಈಸ್ಟರ್ನ್ ಐ ಕಮ್ಯೂನಿಟಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈಸ್ಟರ್ನ್ ಐ ಎಂಬುದು ಬ್ರಿಟನ್ನಿನಲ್ಲಿ ಅತ್ಯಧಿಕ ಮಾರಾಟವಾಗುವ ಏಷ್ಯಾದ ವೃತ್ತಪತ್ರಿಕೆಯಾಗಿದ್ದು, ಪತ್ರಿಕಾ ಸಂಸ್ಥೆಯು ಈ ಪ್ರಶಸ್ತಿ ನೀಡುತ್ತದೆ.

2005: ವ್ಯಾಟಿಕನ್ ಸಿಟಿಯ ರೋಮನ್ ಕ್ಯಾಥೊಲಿಕ್ ಚರ್ಚಿನ 265ನೇ ಪೋಪ್ ಆಗಿ ಜರ್ಮನಿಯ ರಜಿಂಗರ್ ಆಯ್ಕೆಯಾಗಿದ್ದು, ಕುತೂಹಲ ಕೆರಳಿಸಿದ್ದ ಹೊಸ ಪೋಪ್ ಆಯ್ಕೆ ಪ್ರಕ್ರಿಯೆಗೆ ಅಂತಿಮ ತೆರೆ ಬಿತ್ತು. 78 ವರ್ಷದ ರಜಿಂಗರ್ ಅವರು ಈದಿನದಿಂದ `ಪೋಪ್ 16ನೇ ಬೆನೆಡಿಕ್ಟ್' ಆದರು. ಈ ಶತಮಾನದ್ಲಲಿ ಪೋಪ್ ಸ್ಥಾನಕ್ಕೆ ಆಯ್ಕೆಯಾದವರಲ್ಲಿ ರಜಿಂಗರ್ ಅತ್ಯಂತ ಹಿರಿಯ ವ್ಯಕ್ತಿ ಮತ್ತು ಎರಡನೇ ಪೋಪ್ ಜಾನ್ ಪಾಲ್ ಅವರ ನಿಕಟವರ್ತಿ.

1995: ರಸಗೊಬ್ಬರ ಮತ್ತು ತೈಲ ತುಂಬಿದ್ದ ಟ್ರಕ್ಬಾಂಬ್ ಒಕ್ಲಹಾಮಾ ನಗರದ ಅಲ್ ಫ್ರೆಡ್ ಪಿ. ಮುರ್ರಾ ಫೆಡರಲ್ ಕಟ್ಟಡದ ಸಮೀಪ ಸ್ಫೋಟಗೊಂಡಿತು. ಈ ಘಟನೆಯಲ್ಲಿ 168 ಜನ ಮೃತರಾಗಿ 500 ಮಂದಿ ಗಾಯಗೊಂಡರು. ಅಮೆರಿಕದಲ್ಲಿ 2001ರ ಸೆಪ್ಟೆಂಬರ್ 11 ರ ಘಟನೆಗೆ ಮುಂಚಿನ ಅತಿ ಭೀಕರ ಭಯೋತ್ಪಾದಕ ದಾಳಿ ಇದು. ಪರ್ಷಿಯನ್ ಕೊಲ್ಲಿ ಯುದ್ಧದ ನಾಯಕ ಟಿಮೋಥಿ ಮೆಕ್ ವೀಗ್ ಮತ್ತು ಟೆರ್ರಿ ನಿಕೋಲಸ್ ಈ ದಾಳಿಯನ್ನು ರೂಪಿಸಿದ್ದರು.

1951: ಲಂಡನ್ನಿನ ಸ್ಟ್ರ್ಯಾಂಡ್ ನ ಲೈಸಿಯಂ ಬಾಲ್ ರೂಮಿನಲ್ಲಿ ಮೊತ್ತ ಮೊದಲ `ಮಿಸ್ ವರ್ಲ್ಡ್ಡ್' ಸ್ಪರ್ಧೆ ನಡೆಯಿತು. ಮಿಸ್ ಸ್ವೀಡನ್ ಕಿಕಿ ಹಾಕೋನ್ಸನ್ ಸ್ಪರ್ಧೆಯಲ್ಲಿ ವಿಜೇತರಾದರು.

1950: ಶ್ಯಾಮ ಪ್ರಸಾದ್ ಮುಖರ್ಜಿ ಅವರು ಭಾರತದ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು.
1939: ಕಲಾವಿದ ಐರೋಡಿ ವೈಕುಂಠ ಹೆಬ್ಬಾರ್ ಜನನ.

1913: ಮಹಿಳೆಯರ ಅಭ್ಯುದಯಕ್ಕಾಗಿ ದುಡಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಜಿ. ಚನ್ನಮ್ಮ (19-4-1913ರಿಂದ 20-1-1986) ಅವರು ಸ್ವಾತಂತ್ರ್ಯ ಹೋರಾಟಗಾರ ಗೌಡಗೆರೆ ಮಡಿವಾಳಯ್ಯ ಗುರು ಬಸವಯ್ಯ- ವೀಣಾ ವಾದಕಿ ರಾಜಮ್ಮ ದಂಪತಿಯ ಮಗಳಾಗಿ ತುಮಕೂರಿನಲ್ಲಿ ಜನಿಸಿದರು.

1845: ಭಾರತದಲ್ಲಿ ರೈಲ್ವೇ ಆರಂಭಿಸುವ ಬಗ್ಗೆ ಚರ್ಚಿಸುತ್ತಿದ್ದ ಮುಂಬೈಯ ಪ್ರಮುಖ ಗಣ್ಯರು ಇಂಡಿಯನ್ ರೈಲ್ವೇ ಅಸೋಸಿಯೇಷನ್ ಹುಟ್ಟು ಹಾಕಿದರು. ಭಾರತದಲ್ಲಿ ರೈಲ್ವೇ ಸಾಧ್ಯತೆಗಳ ಬಗ್ಗೆ ಅಧ್ಯಯನ ಮಾಡಲು ಆಗಮಿಸಿದ ಇಂಗ್ಲೆಂಡಿನ ಎಂಜಿನಿಯರ್ ಜಿ.ಟಿ. ಕ್ಲಾರ್ಕ್ ನೀಡಿದ ಮುಂಬೈ- ಠಾಣೆ ರೈಲುಮಾರ್ಗ ಪ್ರಸ್ತಾವಕ್ಕೆ ಈ ಗಣ್ಯರು ಅನುಮೋದನೆ ನೀಡಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement