Thursday, July 3, 2008

ಇಂದಿನ ಇತಿಹಾಸ History Today ಜುಲೈ 1

ಇಂದಿನ ಇತಿಹಾಸ

ಜುಲೈ 1

ಅಕ್ಷರಧಾಮ ಸ್ವಾಮಿನಾರಾಯಣ ದೇವಾಲಯದ ಮೇಲೆ 2002ರ ಸೆಪ್ಟೆಂಬರ್ 24ರಂದು ನಡೆದ ಭಯೋತ್ಪಾದಕ ದಾಳಿ ಪ್ರಕರಣದ ಆರು ಮಂದಿ ಆರೋಪಿಗಳ ಪೈಕಿ ಮೂವರಿಗೆ ಅಹಮದಾಬಾದಿನ ಪೋಟಾ (ಭಯೋತ್ಪಾದನಾ ತಡೆ ಕಾಯ್ದೆ) ನ್ಯಾಯಾಲಯ ಮರಣದಂಡನೆ ವಿಧಿಸಿತು.

2007: ದಕ್ಷಿಣ ಆಫ್ರಿಕದ ಬೆಲ್ ಫಾಸ್ಟ್ ಸ್ಟಾರ್ ಮಂಟ್ ಸಿವಿಲ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ನೇತೃತ್ವದ ಭಾರತ ತಂಡವು ಜಾಕ್ ಕಾಲಿಸ್ ನೇತೃತ್ವದ ದಕ್ಷಿಣ ಆಫ್ರಿಕ ತಂಡದ ವಿರುದ್ಧ 6 ವಿಕೆಟ್ಟುಗಳ ಗೆಲುವು ಸಾಧಿಸಿತು.

2007: ಕರ್ನಾಟಕದ ಆಗುಂಬೆ ಸಮೀಪದ ಹೊಸಗದ್ದೆ ಬಳಿಯ ಗುಬ್ಬಿಗದಲ್ಲಿ ಸಶಸ್ತ್ರರಾಗಿ ಬಂದ ಒಂಬತ್ತು ಮಂದಿ ನಕ್ಸಲೀಯರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿಗೆ ಬೆಂಕಿ ಹಚ್ಚಿ, ಸರ್ಕಾರದ ಕ್ರಮಗಳಿಗೆ ಪ್ರತೀಕಾರದ ಎಚ್ಚರಿಕೆ ಹಾಕಿ ಪರಾರಿಯಾದರು. ಬೆಳಿಗ್ಗೆ ಆಗುಂಬೆಯಿಂದ 6.45ಕ್ಕೆ ಹೊರಟ ಈ ಬಸ್ ಹೊಸಗದ್ದೆ ಮಾರ್ಗದ ಗುಬ್ಬಿಗದ ಬಳಿ 7 ಗಂಟೆಗೆ ಬಂದಾಗ ರಸ್ತೆಯಲ್ಲಿ ನಕ್ಸಲೀಯರ ಗುಂಪಿನಲ್ಲಿದ್ದ ಯುವತಿ ಬಸ್ಸನ್ನು ಪ್ರಯಾಣಿಕರ ಸೋಗಿನಲ್ಲಿ ನಿಲ್ಲಿಸಿದಳು. ನಂತರ ಒಂಬತ್ತು ಜನರಿದ್ದ ಬಂದೂಕುಧಾರಿ ಯುವಕರ ತಂಡ ಬಸ್ಸನ್ನು ಸುತ್ತುವರಿದು ಚಾಲಕ ಮತ್ತು ನಿರ್ವಾಹಕರನ್ನು ಬಸ್ಸಿನಿಂದ ಕೆಳಗಿಳಿಸಿ, ಈ ಕೃತ್ಯ ನಡೆಸಿತು.

2007: ಹಿಮಾಚಲ ಪ್ರದೇಶದ ಧರ್ಮಶಾಲಾದ 103 ವರ್ಷದ ಪ್ಯಾರಾಸಿಂಗ್ ಮತ್ತು 101 ವರ್ಷದ ಹಂಸಾದೇವಿ ವಿಶ್ವದಲ್ಲೇ ಅತೀ ಹೆಚ್ಚು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ಯಶಸ್ವಿ ಜೋಡಿ. 84 ವರ್ಷಕಾಲ ಸುದೀರ್ಘ ದಾಂಪತ್ಯ ನಡೆಸಿದ ಈ ಜೋಡಿಯ ಹೆಸರನ್ನು 'ಗಿನ್ನೆಸ್ ದಾಖಲೆ' ಪುಸ್ತಕದಲ್ಲಿ ದಾಖಲಿಸುವ ಸಲುವಾಗಿ ಇವರ ದಾಂಪತ್ಯ ಮಾಹಿತಿ, ಸಾಕ್ಷ್ಯಾಧಾರಗಳನ್ನು ಜೂನ್ ತಿಂಗಳಲ್ಲಿ ಗಿನ್ನೆಸ್ ದಾಖಲೆ ಕಚೇರಿಗೆ ಕಳುಹಿಸಿರುವುದಾಗಿ ಅವರ ಅವರ ಮಗ ಬಿಷಂಭರ್ ರಾಣಾ ಇಲ್ಲಿ ಈದಿನ ಬಹಿರಂಗಪಡಿಸಿದರು.

2007: ಭುವನೇಶ್ವರದ ರೂರ್ಕೆಲಾ ಪಟ್ಟಣದ ಸರೋಜ್ ಕುಮಾರ್ ರೌತ್ ಅವರು ತಮ್ಮ ಮೂರು ತಿಂಗಳ ಮಗು ಆಯುಷ್ ರಂಜನ್ ರೌತ್ ಆದಾಯ ತೆರಿಗೆ ಪಾನ್ ಕಾರ್ಡ್ ಹೊಂದಿರುವುದನ್ನು ಬಹಿರಂಗಪಡಿಸಿದರು. ರಂಜನ್, ಮುಂದಿನ ವರ್ಷದಿಂದ ಸ್ವಯಂ ಸೇವಾ ಸಂಸ್ಥೆಯೊಂದಕ್ಕೆ ರೂಪದರ್ಶಿಯಾಗಿ ಆಯ್ಕೆಯಾಗಿದ್ದು, ಈ ಪ್ರಕ್ರಿಯೆಯಲ್ಲಿ ಸ್ವಲ್ಪ ಹಣ ಗಳಿಸಿದ್ದಾನೆ. ಹಾಗಾಗಿ ಮುಂದಿನ ವರ್ಷದಿಂದ ಆತನ ಹೆಸರಲ್ಲಿ ತೆರಿಗೆ ಕಟ್ಟಬೇಕಿದ್ದು ಅದಕ್ಕಾಗಿ ಈ ವರ್ಷವೇ ಅವರು ರಂಜನ್ ಹೆಸರಲ್ಲಿ ಪಾನ್ ಕಾರ್ಡ್ ಮಾಡಿಸಿದರು. ರಂಜನ್ ಹುಟ್ಟಿದ್ದು 2007ರ ಮಾರ್ಚ್ 26ರಂದು. ಹೀಗಾಗಿ ರಂಜನ್ ಭಾರತದ ಅತ್ಯಂತ ಕಿರಿಯ ಪಾನ್ ಕಾರ್ಡ್ ಹೋಲ್ಡರ್ ಎಂಬ ಹೆಗ್ಗಳಿಕೆಗೆ ಪಾತ್ರನಾದ.

2007: ಆಫ್ಘಾನಿಸ್ಥಾನದ ಹೆಲ್ಮಂಡ್ ಪ್ರಾಂತ್ಯದಲ್ಲಿ ಅಮೆರಿಕ ನೇತೃತ್ವದ ಸೇನಾಪಡೆ ತಾಲಿಬಾನ್ ಉಗ್ರರ ಆಶ್ರಯ ತಾಣಗಳ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 62 ಉಗ್ರರು ಹಾಗೂ 45 ನಾಗರಿಕರು ಸಾವಿಗೀಡಾದರು.

2006: ಅಕ್ಷರಧಾಮ ಸ್ವಾಮಿನಾರಾಯಣ ದೇವಾಲಯದ ಮೇಲೆ 2002ರ ಸೆಪ್ಟೆಂಬರ್ 24ರಂದು ನಡೆದ ಭಯೋತ್ಪಾದಕ ದಾಳಿ ಪ್ರಕರಣದ ಆರು ಮಂದಿ ಆರೋಪಿಗಳ ಪೈಕಿ ಮೂವರಿಗೆ ಅಹಮದಾಬಾದಿನ ಪೋಟಾ (ಭಯೋತ್ಪಾದನಾ ತಡೆ ಕಾಯ್ದೆ) ನ್ಯಾಯಾಲಯ ಮರಣದಂಡನೆ ವಿಧಿಸಿತು. ಭಯೋತ್ಪಾದನಾ ದಾಳಿ ಘಟನೆ ನಡೆದ ನಾಲ್ಕು ವರ್ಷಗಳ ಬಳಿಕ ಸಬರಮತಿ ಸೆರೆಮನೆಯಲ್ಲಿ ಭಾರಿ ಭದ್ರತೆ ಮಧ್ಯೆ ಪೋಟಾ ನ್ಯಾಯಾಲಯದ ನ್ಯಾಯಾಧೀಶರಾದ ಸೋನಿಯಾ ಗೊಕಾನಿ ಈ ತೀರ್ಪು ನೀಡಿದರು. ಉಳಿದ ಮೂವರಲ್ಲಿ ಒಬ್ಬ ಆರೋಪಿಗೆ ಜೀವಾವಧಿ ಸೆರೆವಾಸ ಮತ್ತು ಇತರ ಇಬ್ಬರಿಗೆ 10 ಮತ್ತು 5 ವರ್ಷಗಳ ಕಠಿಣ ಸಜೆಯನ್ನು ವಿಧಿಸಲಾಯಿತು. ಜಮ್ಮು ಮತ್ತು ಕಾಶ್ಮೀರದ ನಿವಾಸಿಯಾದ ಮುಖ್ಯ ಆರೋಪಿ ಚಾಂದ್ ಖಾನ್, ಆದಂ ಸುಲೇಮಾನ್ ಅಜ್ಮೀರಿ ಮತ್ತು ಅಬ್ದುಲ್ ಕಯೂಂ ಮಹಮ್ಮದ್ ಹುಸೇನ್ ಮನ್ಸೂರಿ ಇವರು ಮರಣದಂಡನೆಗೆ ಗುರಿಯಾದವರು. ಮಹಮ್ಮದ್ ಸಲೀಂ ಮಹಮ್ಮದ್ ಅನಿಫ್ ಶೇಖ್ ಗೆ ಜೀವಾವಧಿ ಸೆರೆವಾಸದ ಶಿಕ್ಷೆ ವಿಧಿಸಲಾಯಿತು. ಮುಫ್ತಿ ಅಬ್ದುಲ್ ಮಿಯಾ ಯಾಸಿಮ್ ಮಿಯಾ ಖಾದ್ರಿ ಮತ್ತು ಅಲ್ತಾಫ್ ಹುಸೇನ್ ಅಸ್ಘರ್ ಹುಸೇನ್ ಮಲಿಕ್ ಗೆ ಕ್ರಮವಾಗಿ 10 ಮತ್ತು 5 ವರ್ಷಗಳ ಸೆರೆವಾಸ ವಿಧಿಸಲಾಯಿತು. ಈ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಎನ್ ಎಸ್ ಜಿ ಕಮಾಂಡೋಗಳು ಸೇರಿ ಒಟ್ಟು 33 ಮಂದಿ ಹತರಾಗಿ, 81 ಮಂದಿ ಗಾಯಗೊಂಡಿದ್ದರು. ಪ್ರಕರಣದ 34 ಮಂದಿ ಆರೋಪಿಗಳಲ್ಲಿ 26 ಮಂದಿ ತಲೆ ತಪ್ಪಿಸಿಕೊಂಡರೆ, ದಾಳಿಯಲ್ಲಿ ಷಾಮೀಲಾಗಿದ್ದ ಇಬ್ಬರು ಭಯೋತ್ಪಾದಕರು ಗುಂಡಿಗೆ ಬಲಿಯಾಗಿ ಅಸು ನೀಗಿದ್ದರು. ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾನಕ್ಕೆ ಸೇರಿದ ಅಕ್ಷರಧಾಮ ದೇವಾಲಯಕ್ಕೆ ಪಾಕಿಸ್ತಾನಿ ಮೂಲದ ಲಷ್ಕರ್-ಎ-ತೊಯ್ಬಾಕ್ಕೆ ಸೇರಿದ ಭಯೋತ್ಪಾದಕರು ಸೇನಾ ಸಮವಸ್ತ್ರ ಧರಿಸಿಕೊಂಡು ಬಂದು ದೇವಾಲಯದ ಒಳಗೆ ಮತ್ತು ಹೊರಗಿದ್ದ ಭಕ್ತರ ಮೇಲೆ ಗುಂಡು ಹಾಗೂ ಗ್ರೆನೇಡ್ ದಾಳಿ ನಡೆಸಿದ್ದರು. ರಾಷ್ಟ್ರೀಯ ಭದ್ರತಾ ಗಾರ್ಡ್ ಕಮಾಂಡೋಗಳು ಇಡೀರಾತ್ರಿಯ ಕದನದ ಬಳಿಕ ಮುರ್ತಾಜಾ ಹಫೀಜ್ ಯಾಸಿನ್ ಮತ್ತು ಆಶ್ರಫ್ ಅಲಿ ಮಹಮ್ಮದ್ ಫರೂಖ್ ಎಂಬ ಇಬ್ಬರು ಭಯೋತ್ಪಾದಕರನ್ನು ಕೊಂದು ಹಾಕಿದರು. ಇವರಿಬ್ಬರೂ ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದ ತೆಹರೀಕ್-ಎ-ಖಸಾಸ್ ಸಂಘಟನೆಗೆ ಸೇರಿದವರು ಎಂದು ಗುರುತಿಸಲಾಗಿತ್ತು.

2006: ವೃತ್ತಿ ಶಿಕ್ಷಣ ಪ್ರವೇಶ ಕುರಿತ `ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ವಿಶೇಷ ಉಪ ಬಂಧಗಳು ಮಸೂದೆಗೆ ಕರ್ನಾಟಕದ ರಾಜ್ಯಪಾಲ ಟಿ.ಎನ್. ಚತುರ್ವೇದಿ ಸಹಿ ಹಾಕಿದರು. ಇದರೊಂದಿಗೆ ಬಹು ನಿರೀಕ್ಷಿತ ಮಸೂದೆ ಕಾಯ್ದೆ ರೂಪ ಪಡೆದುಕೊಂಡಿತು.

1955: ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಹೆಸರನ್ನು `ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ' ಎಂಬುದಾಗಿ ಬದಲಾಯಿಸಿತು. 1921ರಲ್ಲಿ ಬಂಗಾಳ, ಮುಂಬೈ ಮತ್ತು ಮದ್ರಾಸ್ ಪ್ರೆಸಿಡೆನ್ಸಿ ಬ್ಯಾಂಕುಗಳು ವಿಲೀನಗೊಂಡು ಇಂಪೀರಿಯಲ್ ಬ್ಯಾಂಕ್ ಅಸ್ತಿತ್ವಕ್ಕೆ ಬಂದಿತ್ತು.

1944: ನ್ಯೂ ಹ್ಯಾಂಪ್ ಶೈರಿನ ಬ್ರೆಟ್ಟನ್ ವುಡ್ಸಿನಲ್ಲಿ `ಬ್ರೆಟ್ಟನ್ ವುಡ್ ಕಾನ್ಫರೆನ್ಸ್' ಸಮಾವೇಶಗೊಂಡಿತು. 44 ರಾಷ್ಟ್ರಗಳು ಪಾಲ್ಗೊಂಡಿದ್ದ ಈ ಸಮಾವೇಶ ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಇಂಟರ್ ನ್ಯಾಷನಲ್ ಮೊನೆಟರಿ ಫಂಡ್) ಸೇರಿದಂತೆ ಜಾಗತಿಕ ಯುದ್ಧಾನಂತರದ ಅಂತಾರಾಷ್ಟ್ರೀಯ ವ್ಯವಸ್ಥೆಗೆ ಅಡಿಪಾಯ ಹಾಕಿತು. ಸಮಾವೇಶ 1944ರ ಜುಲೈ 22ರಂದು ಕೊನೆಗೊಂಡಿತು.

1909: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಯೋಧ ಮದನ್ ಲಾಲ್ ಧೀಂಗ್ರ ಲಂಡನ್ನಿನ ಇಂಪೀರಿಯಲ್ ಇನ್ ಸ್ಟಿಟ್ಯೂಟಿನ ಭಾರತೀಯ ಕಚೇರಿಯಲ್ಲಿ ಬ್ರಿಟಿಷ್ ರಾಜಕೀಯ ಸಲಹೆಗಾರ ಡಬ್ಲ್ಯೂ. ಕರ್ಝನ್ ವಿಲ್ಲೀ ಅವರನ್ನು ಗುಂಡಿಟ್ಟು ಕೊಂದರು. ಪಾರ್ಸಿ ವೈದ್ಯ ಡಾ. ಕವಾಸ್ ಲಾಲ್ ಕಾಕಾ ಅವರೂ ಈ ಸಂದರ್ಭದಲ್ಲಿ ಹತರಾದರು.

1858: ಚಾರ್ಲ್ಸ್ ಡಾರ್ವಿನ್ ಅವರ ವಿಕಾಸವಾದ ಮತ್ತು ನೈಸರ್ಗಿಕ ಆಯ್ಕೆಯ ಸಿದ್ಧಾಂತಗಳನ್ನು ಲಂಡನ್ನಿನ ಲಿನ್ನಿಯನ್ ಸೊಸೈಟಿಯಲ್ಲಿ ಮಂಡಿಸಲಾಯಿತು. ಅಲ್ಫ್ರೆಡ್ ವಾಲ್ಲೇಸ್ ಅವರ ಇದೇ ಮಾದರಿಯ ಇನ್ನೊಂದು ಸಿದ್ಧಾಂತವನ್ನೂ ಇದೇ ಸಂದರ್ಭದಲ್ಲಿ ಮಂಡಿಸಲಾಯಿತು.

1852: ಬ್ರಿಟಿಷ್ ಭಾರತದಲ್ಲಿ ಅರ್ಧ ಆಣೆಯ ಮೊತ್ತ ಮೊದಲ ಅಂಚೆಚೀಟಿ ಬಿಡುಗಡೆಯಾಯಿತು.

1822: ಏಷ್ಯದ ಅತ್ಯಂತ ಹಳೆಯದಾದ `ಮುಂಬೈ ಸಮಾಚಾರ್' ಪತ್ರಿಕೆಯನ್ನು ಫರ್ದೂನ್ಜಿ ಮರ್ಝಬಾನ್ ಅವರು ಮುಂಬೈಯಲ್ಲಿ ಆರಂಭಿಸಿದರು. ಪ್ರಾರಂಭದಲ್ಲಿ ಇದನ್ನು `ಮುಂಬಯಿನ ಸಮಾಚಾರ್' ಎಂಬುದಾಗಿ ಕರೆಯಲಾಗುತ್ತಿತ್ತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement