Saturday, July 12, 2008

ಇಂದಿನ ಇತಿಹಾಸ History Today ಜುಲೈ 12

ಇಂದಿನ ಇತಿಹಾಸ

ಜುಲೈ 12

ವಿವಾದಾತ್ಮಕ ನಂದಗುಡಿ ಬಹು ಉತ್ಪನ್ನ ವಿಶೇಷ ಆರ್ಥಿಕ ವಲಯಕ್ಕೆ (ಎಸ್ ಇ ಝಡ್) ಕೇಂದ್ರ ವಾಣಿಜ್ಯ ಇಲಾಖೆಯ ಮಂಜೂರಾತಿ ಮಂಡಳಿಯು ತಾತ್ವಿಕ ಒಪ್ಪಿಗೆ ನೀಡಿತು. ಇದರೊಂದಿಗೆ ನಂದಗುಡಿ ಎಸ್ ಇ ಝಡ್ ಗೆ ಹಸಿರು ನಿಶಾನೆ ಲಭಿಸಿತು.

2007: ವಿವಾದಾತ್ಮಕ ನಂದಗುಡಿ ಬಹು ಉತ್ಪನ್ನ ವಿಶೇಷ ಆರ್ಥಿಕ ವಲಯಕ್ಕೆ (ಎಸ್ ಇ ಝಡ್) ಕೇಂದ್ರ ವಾಣಿಜ್ಯ ಇಲಾಖೆಯ ಮಂಜೂರಾತಿ ಮಂಡಳಿಯು ತಾತ್ವಿಕ ಒಪ್ಪಿಗೆ ನೀಡಿತು. ಇದರೊಂದಿಗೆ ನಂದಗುಡಿ ಎಸ್ ಇ ಝಡ್ ಗೆ ಹಸಿರು ನಿಶಾನೆ ಲಭಿಸಿತು. ಈ ವಿಶೇಷ ಆರ್ಥಿಕ ವಲಯ (ಎಸ್ ಇ ಝಡ್) ಸ್ಥಾಪಿಸಲಿರುವ `ಸ್ಕಿಲ್ ಇನ್ ಫ್ರಾಸ್ಟ್ರಕ್ಚರ್ ಕಂಪೆನಿ'ಯ ಆರ್ಥಿಕ ಕ್ಷಮತೆಯ ಬಗ್ಗೆ ವಿವರಣೆ ಪಡೆದ ನಂತರ ವಾಣಿಜ್ಯ ಇಲಾಖೆ ಕಾರ್ಯದರ್ಶಿ ಜಿ.ಕೆ.ಪಿಳ್ಳೆ ಅಧ್ಯಕ್ಷತೆಯ ಮಂಡಳಿ ಯೋಜನೆಗೆ ತನ್ನ ಒಪ್ಪಿಗೆ ನೀಡಿತು. ಹೊಸಕೋಟೆ ತಾಲ್ಲೂಕಿನ ನಂದಗುಡಿ ಹೋಬಳಿಯ ಸುಮಾರು 5000 ಹೆಕ್ಟೇರ್ ಪ್ರದೇಶದಲ್ಲಿ ಈ ಎಸ್ ಇ ಝಡ್ ತಲೆ ಎತ್ತಲಿದೆ. ರಾಜ್ಯ ಸರ್ಕಾರದ ಜೊತೆಗೂಡಿ ತೈಲ ಮತ್ತು ನೈಸರ್ಗಿಕ ಅನಿಲ ಸಂಸ್ಥೆ (ಒಎನ್ ಜಿಸಿ) ಸ್ಥಾಪಿಸುವ ಪೆಟ್ರೋಲ್ ಮತ್ತು ಪೆಟ್ರೋಕೆಮಿಕಲ್ಸ್ ವಿಶೇಷ ಆರ್ಥಿಕ ವಲಯಕ್ಕೂ ಮಂಜೂರಾತಿ ಮಂಡಳಿ ಔಪಚಾರಿಕ ಒಪ್ಪಿಗೆ ನೀಡಿತು. ಮಂಗಳೂರಿನ 588 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 25 ಸಾವಿರ ಕೋಟಿ ರೂಪಾಯಿ ವೆಚ್ಚದ ಈ ಎಸ್ ಇಝಡ್ ನಿರ್ಮಾಣಗೊಳ್ಳುವುದು. ಮಂಗಳೂರಿನ ಗಂಜಿಮಠದಲ್ಲಿ ಕರ್ನಾಟಕ ಕೈಗಾರಿಕಾಭಿವೃದ್ಧಿ ಪ್ರದೇಶದ ಹತ್ತು ಎಕರೆ ಪ್ರದೇಶದಲ್ಲಿ ಕಿನ್ ಫೋಟೆಕ್ ಸಂಸ್ಥೆ ಸ್ಥಾಪಿಸಲು ಉದ್ದೇಶಿಸಿದ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧರಿತ ವಿಶೇಷ ಆರ್ಥಿಕವಲಯ ಸೇರಿದಂತೆ ರಾಜ್ಯದ ಒಟ್ಟು 49 ವಿಶೇಷ ಆರ್ಥಿಕ ವಲಯ ಪ್ರಸ್ತಾವಗಳಲ್ಲಿ 21ಕ್ಕೆ ಔಪಚಾರಿಕ ಮತ್ತು 6ಕ್ಕೆ ಮಂಡಳಿ ತಾತ್ವಿಕ ಒಪ್ಪಿಗೆ ನೀಡಿತು.

2007: ಭಾರತ ತಂಡದವರು ಐರ್ಲೆಂಡಿನ ಬೆಲ್ ಫಾಸ್ಟ್ ನಲ್ಲಿ ಇತ್ತೀಚೆಗೆ ನಡೆದ ಏಕದಿನ ಕ್ರಿಕೆಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದಿದ್ದ `ಫ್ಯೂಚರ್ಸ್ ಟ್ರೋಫಿ' ನಾಪತ್ತೆಯಾದುದು ಬೆಳಕಿಗೆ ಬಂತು. ಜೊತೆಗೆ ಸಚಿನ್ ತೆಂಡೂಲ್ಕರ್ ಗೆ ಲಭಿಸಿದ್ದ `ಪಂದ್ಯ ಶ್ರೇಷ್ಠ' ಟ್ರೋಫಿ, ಯುವರಾಜ್ ಸಿಂಗ್, ಗೌತಮ್ ಗಂಭೀರ್ ಗೆ ಸಿಕ್ಕಿದ್ದ `ಪಂದ್ಯ ಪುರುಷೋತ್ತಮ' ಟ್ರೋಫಿಗಳೂ ಕಣ್ಮರೆಯಾದವು. ಗ್ಲಾಸ್ಗೋ-ಲಂಡನ್-ಮುಂಬೈ ಮಾರ್ಗದ ಬ್ರಿಟಿಷ್ ಏರ್ ವೇಸ್ ನಲ್ಲಿ ವಾರದ ಹಿಂದೆಯೇ ಬರಬೇಕಿದ್ದ ಈ ಟ್ರೋಫಿಗಳು ಭಾರತಕ್ಕೆ ಬಾರದೇ ಕಣ್ಮರೆಯಾದವು.

2007: ಮಹಾರಾಷ್ಟ್ರ, ಉತ್ತರ ಪ್ರದೇಶದ ಮಾದರಿಯಲ್ಲಿ ರಾಜ್ಯದಲ್ಲೂ ಖಾಸಗಿ ಕೃಷಿ ಕಾಲೇಜು ಸ್ಥಾಪನೆ ಕುರಿತು ತೀರ್ಮಾನ ತೆಗೆದುಕೊಳ್ಳಲು ಗೃಹ ಸಚಿವ ಎಂ.ಪಿ.ಪ್ರಕಾಶ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಗೆ ಕರ್ನಾಟಕ ಸಚಿವ ಸಂಪುಟ ಒಪ್ಪಿಗೆ ನೀಡಿತು. ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶಗಳಲ್ಲಿ ಖಾಸಗಿ ಕೃಷಿ, ತೋಟಗಾರಿಕೆ, ಪಶುಸಂಗೋಪನಾ ಕಾಲೇಜುಗಳಿವೆ.

2007: ಕೊಲಂಬಸ್ ನ 1492ರ ಸಮುದ್ರಯಾನಕ್ಕೂ ಮುನ್ನ 14,000 ವರ್ಷಗಳಷ್ಟು ಹಿಂದೆಯೇ ಅಮೆರಿಕ ಖಂಡದೊಂದಿಗೆ ಐರೋಪ್ಯ ಹಾಗೂ ಪೌರಾತ್ಯ ದೇಶಗಳು ಸಂಬಂಧ ಹೊಂದಿದ್ದವು ಮತ್ತು ವಾಣಿಜ್ಯ ವಹಿವಾಟು ನಡೆಸುತ್ತಿದ್ದವು ಎಂಬುದನ್ನು ಸಾಬೀತು ಪಡಿಸುವ ಉದ್ದೇಶದ ವಿಶಿಷ್ಟ ಸಮುದ್ರಯಾನವೊಂದಕ್ಕೆ ಜರ್ಮನಿಯ ಜೀವವಿಜ್ಞಾನಿ ಡೊಮಿನಿಕ್ ಗೊರಿಟ್ಲಿಜ್ ನೇತೃತ್ವದ ವಿಜ್ಞಾನಿಗಳ ತಂಡವು ಚಾಲನೆ ನೀಡಿತು. ಪುರಾತನ ಈಜಿಪ್ತ್ ಜನ ಸಮುದ್ರಯಾನಕ್ಕೆ ಬಳಸುತ್ತಿದ್ದ ರೀಡ್ ಮರದಿಂದ ಮಾಡಲಾದ ಪ್ರಾಚೀನ ವಿನ್ಯಾಸದ ಹಡಗನ್ನು ಈ ಯಾನಕ್ಕಾಗಿ ಸಿದ್ಧಪಡಿಸಲಾಗಿದ್ದು, ದಕ್ಷಿಣ ಅಮೆರಿಕಾ ಖಂಡದ ಬೊಲಿವಿಯಾದ ಮೂಲ ನಿವಾಸಿಗಳಾದ ಅಯ್ಮಾರಾ ಬುಡಕಟ್ಟು ಜನ ಈ ವಿಶಿಷ್ಟ ಹಡಗನ್ನು ನಿರ್ಮಿಸಿದ್ದಾರೆ. ಹದಿನೈದು ವರ್ಷಗಳ ಹಿಂದೆ ಹಿಂದೆ ಈಜಿಪ್ತಿನ ಫರೋ `ರಾಮ್ಸೆಸ್-2'ನ ಮಮ್ಮಿಯನ್ನು ಶೋಧಕ್ಕೆ ಒಳಪಡಿಸಿದಾಗ ಕೊಕೇನ್ ಹಾಗೂ ನಿಕೋಟಿನ್ ಪತ್ತೆಯಾಗಿತ್ತು. ಈ ಮಾದಕ ದ್ರವ್ಯಗಳು ಹಾಗೂ ಇವುಗಳನ್ನು ಉತ್ಪಾದಿಸುವ ಗಿಡಗಳು ಅಮೆರಿಕ ಖಂಡದಲ್ಲೇ ಹುಟ್ಟಿರುವುದರಿಂದ ಈಜಿಪ್ತ್ ಹಾಗೂ ಅಮೆರಿಕ ಖಂಡಗಳ ನಡುವೆ 14,000 ವರ್ಷಗಳಷ್ಟು ಹಿಂದೆಯೇ ಸಂಪರ್ಕ ಇರಬೇಕು ಎಂದು ಊಹಿಸಲಾಗಿತ್ತು. ಈ ಅಂಶ ಸಾಬೀತುಪಡಿಸುವುದು ಡೊಮಿನಿಕ್ ಗೊರಿಟ್ಲಿಜ್ ತಂಡದ ವಿಶಿಷ್ಟ ಸಮುದ್ರ ಪರ್ಯಟನೆಯ ಉದ್ದೇಶ.

2007: ಅಸ್ಸಾಮಿನ ಕಾಮರೂಪ ಜಿಲ್ಲೆಯಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ಅಪಹೃತ ಭಾರತೀಯ ಆಹಾರ ನಿಗಮದ (ಎಫ್ಸಿಐ) ಕಾರ್ಯ ನಿರ್ವಾಹಕ ನಿರ್ದೇಶಕ ಪಿ.ಸಿ. ರಾಮ್ ಮತ್ತು ಇಬ್ಬರು ಉಲ್ಫಾ ಉಗ್ರಗಾಮಿಗಳು ಹತರಾದರು.

2006: ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಐವರು ಆರೋಪಿಗಳನ್ನು ಪಾಕಿಸ್ಥಾನದ ಪೂರ್ವ ಪಂಜಾಬ್ ಪ್ರಾಂತ್ಯದ ಸಿಯಾಲ್ ಕೋಟ್ ಪಟ್ಟಣದ ಜಿಲ್ಲಾ ಕಾರಾಗೃಹದಲ್ಲಿ ನೇಣುಗಂಬಕ್ಕೆ ಏರಿಸಲಾಯಿತು. ಇಲ್ಲಿ ಇಷ್ಟೊಂದು ಆರೋಪಿಗಳನ್ನು ಗಲ್ಲಿಗೇರಿಸಿದ್ದು ಇದೇ ಪ್ರಥಮ. ಅಪರಾಧಿಗಳಾದ ಮುಷ್ತಾಕ್ ಪಾಪು, ಷೆಹಜಾದ್ ಮಸೀಹ್, ಮೊಹಮ್ಮದ್ ಯೂಸುಫ್, ಅಬ್ದುಲ್ ಜಬ್ಬಾರ್ ಹಾಗೂ ಇಫ್ತಿಕಾರ್ ಅಹ್ಮದ್ ಅವರು 1999ರ ಸೆಪ್ಟೆಂಬರಿನಲ್ಲಿ ಸುರೆಯಾ ಬೇಬಿ ಎಂಬ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರದ ಆರೋಪಕ್ಕೆ ಒಳಗಾಗಿದ್ದರು.

1946: ಸಾಹಿತಿ ಶ್ರೀಧರರಾಯರು ಹುಟ್ಟಿದ ದಿನ.

1944: ಬಸು ಬೇವಿನ ಗಿಡದ ಜನನ.

1943: ಮೀನಾಕ್ಷಿ ರಾವ್ ಜನನ.

1937: ಸೀತಾಸುತ ಜನನ.

1912: ಜಾನಪದ, ನಾಟಕ, ಕಥೆ, ಕಾದಂಬರಿ ಸೇರಿದಂತೆ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿರುವ ಸ್ವಾತಂತ್ರ್ಯ ಹೋರಾಟಗಾರ ಮತಿಘಟ್ಟ ಕೃಷ್ಣಮೂರ್ತಿ ಅವರು ಹಾಸನ ಜಿಲ್ಲೆಯ ಮತಿಘಟ್ಟದಲ್ಲಿ ಈದಿನ ಜನಿಸಿದರು.

1896: ಹೈದರಾಬಾದ್ ವಿಮೋಚನಾ ಪಕ್ಷದ ಜನಕ, ರಾಜಕಾರಣಿ ಡಿ.ಜಿ. ಬಿಂದು ಜನನ.

1864: ಇತಿಹಾಸಕಾರ ವಿಶ್ವನಾಥ ಕಾಶೀನಾಥ ರಾಜವಾಡೆ ಜನನ.

1880: ಕರ್ನಾಟಕ ಕುಲ ಪುರೋಹಿತ ಎಂಬ ಅಭಿದಾನಕ್ಕೆ ಪಾತ್ರರಾಗಿದ್ದ ಸಾಹಿತಿ, ಪತ್ರಿಕೋದ್ಯಮಿ ಆಲೂರು ವೆಂಕಟರಾವ್ ವಿಜಾಪುರದಲ್ಲಿ ಈದಿನ ಜನಿಸಿದರು. ಇವರ ವಂಶದ ಪೂರ್ವಜರು ಧಾರವಾಡದ ಆಲೂರಿಗೆ ಬಂದು ನೆಲೆಸಿದ್ದರಿಂದ ಇವರ ಮನೆತನಕ್ಕೆ ಆಲೂರು ಹೆಸರು ಅಂಟಿಕೊಂಡಿತು. ವಾಗ್ಭೂಷಣ, ಜಯ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ಆಲೂರು ಧಾರವಾಡದ ಗ್ರಂಥ ಪ್ರಕಟಣಾ ಮಂದಿರ, ಕರ್ನಾಟಕ ಇತಿಹಾಸ ಮಂಡಳ, ಕರ್ನಾಟಕ ಸಾಹಿತ್ಯ ಪರಿಷತ್ತು, ಕರ್ನಾಟಕ ವಿಶ್ವವಿದ್ಯಾಲಯ ಮುಂತಾದವುಗಳ ಸ್ಥಾಪನೆಗೆ ಶ್ರಮಿಸಿದವರು.

No comments:

Advertisement