ಇಂದಿನ ಇತಿಹಾಸ
ಜೂನ್ 12
ಹಲವು ರಾತ್ರಿಗಳ ಸಂಪೂರ್ಣ ನಿದ್ರಾಹೀನತೆಯ ನಂತರ ಸಂಭವಿಸಬಹುದಾದ ಅಪಾಯವನ್ನು ಒಂದು ಗುಟುಕು 'ಕೆಫಿನ್' (ಕಾಫಿ ಮತ್ತು ಟೀಯ ಉತ್ತೇಜನಾಕಾರಿ ಸಸ್ಯಕ್ಷಾರಸತ್ವ) ಸೇವನೆ ತಡೆಯಬಲ್ಲದು ಎಂದು ಸಂಶೋಧನೆಯೊಂದು ಬಹಿರಂಗಪಡಿಸಿತು.
2009: ಹಲವು ರಾತ್ರಿಗಳ ಸಂಪೂರ್ಣ ನಿದ್ರಾಹೀನತೆಯ ನಂತರ ಸಂಭವಿಸಬಹುದಾದ ಅಪಾಯವನ್ನು ಒಂದು ಗುಟುಕು 'ಕೆಫಿನ್' (ಕಾಫಿ ಮತ್ತು ಟೀಯ ಉತ್ತೇಜನಾಕಾರಿ ಸಸ್ಯಕ್ಷಾರಸತ್ವ) ಸೇವನೆ ತಡೆಯಬಲ್ಲದು ಎಂದು ಸಂಶೋಧನೆಯೊಂದು ಬಹಿರಂಗಪಡಿಸಿತು. ದಿಢೀರ್ ಸಂಭವಿಸುವ ಅಪಾಯಗಳನ್ನು ಅಳೆಯುವ ಕಂಪ್ಯೂಟರೀಕೃತ ವ್ಯವಸ್ಥೆ 'ಬಾರ್ಟ್' (ಬಲೂನ್ ಅನಲಾಗ್ ರಿಸ್ಕ್ ಟಾಸ್ಕ್) ಅನ್ವಯ, 'ತೀವ್ರ ನಿದ್ರಾಹೀನತೆಯ ನಂತರವೂ ಕೆಫಿನ್ ಸೇವಿಸಿದ ವ್ಯಕ್ತಿ ಮಾತ್ರ ಹೆಚ್ಚಿನ ತೊಂದರೆ ಎದುರಿಸುವ ನಡವಳಿಕೆ ತೋರಿಸುವುದಿಲ್ಲ' ಎಂಬುದನ್ನು ಸಂಶೋಧನಾ ಫಲಿತಾಂಶ ಪ್ರಕಟಪಡಿಸಿತು. ಈ ಸಂಶೋಧನಾ ಪ್ರಬಂಧವನ್ನು (ಸ್ಲೀಪ್ 2009) ವೃತ್ತಿಪರ ನಿದ್ರಾ ಸಂಸ್ಥೆಗಳ ಒಕ್ಕೂಟದ 23ನೇ ವಾರ್ಷಿಕ ಸಭೆಯಲ್ಲಿ ಮಂಡಿಸಲಾಯಿತು.
2009: ಪಾಕಿಸ್ಥಾನದ ನೌಷೇರಾ ನಗರದ ಮಸೀದಿ ಆವರಣದಲ್ಲಿ ಹಾಗೂ ಲಾಹೋರಿನ ಧಾರ್ಮಿಕ ಸಂಸ್ಥೆಯೊಂದರ ಅಂಗಣಲ್ಲಿ ನಡೆದ ಪ್ರತ್ಯೇಕ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ತಾಲಿಬಾನ್ ವಿರೊಧಿ ಧರ್ಮಗುರು ಸೇರಿದಂತೆ ಹನ್ನೊಂದು ಮಂದಿ ಮೃತರಾದರು. 'ಆತ್ಮಾಹುತಿ ಬಾಂಬ್ ಸಂಸ್ಕೃತಿ ಇಸ್ಲಾಮ್ ಧರ್ಮಕ್ಕೆ ವಿರುದ್ಧ' ಎಂದು ಫತ್ವಾ ಹೊರಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಧರ್ಮಗುರು ಮೌಲಾನ ಸರ್‌ಫ್ರಾಜ್ ನಯೀಮ್ ಹಾಗೂ ಇತರ ಮೂವರು ಲಾಹೋರ್‌ನ ಜೈಮಾ ನಯೀಮಾ ಧರ್ಮ ಸಂಘಟನೆಯ ಆವರಣದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಮೃತರಾದರು.
2009: ಪಾಕಿಸ್ಥಾನದಲ್ಲಿನ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದವನ್ನು ನಿಗ್ರಹಿಸುವ ಸಲುವಾಗಿ 300 ದಶಲಕ್ಷ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಹಾಗೂ ಇತರ ಸಲಕರಣೆಗಳನ್ನು ಚೀನಾದಿಂದ ಖರೀದಿಸಲು ಪಾಕಿಸ್ಥಾನ ಒಪ್ಪಂದವೊಂದಕ್ಕೆ ಸಹಿ ಹಾಕಿದೆ ಎಂದು ಪಾಕಿಸ್ಥಾನದ ಆಂತರಿಕ ವ್ಯವಹಾರಗಳ ಸಚಿವ ರೆಹಮಾನ್ ಮಲ್ಲಿಕ್ ಅವರು ಬೀಜಿಂಗ್‌ನಲ್ಲಿ ಪ್ರಕಟಿಸಿದರು.
2009: ಮಾನವ ತ್ಯಾಜ್ಯದಿಂದ ಕಡಿಮೆ ವೆಚ್ಚದಲ್ಲಿ ಜೈವಿಕ ಅನಿಲ ಉತ್ಪಾದಿಸುವ ಶೌಚಾಲಯ ತಾಂತ್ರಿಕತೆಯನ್ನು ಪ್ರಥಮ ಬಾರಿಗೆ ಅಭಿವೃದ್ಧಿ ಪಡಿಸಿದ ಸುಲಭ್ ಅಂತರರಾಷ್ಟ್ರಿಯ ಸಂಸ್ಥೆಯ ಸಂಸ್ಥಾಪಕ ಬಿಂದೇಶ್ವರ ಪಾಠಕ್ ಅವರಿಗೆ ವಿಶ್ವಸಂಸ್ಥೆ ಪ್ರತಿಷ್ಠಿತ ಪುನರ್‌ಬಳಕೆ ಇಂಧನ ಪ್ರಶಸ್ತಿ ನೀಡಿತು. ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
2009: ನೇಪಾಳದ ಮಾಜಿ ಉಪ ಪ್ರಧಾನಿ ಹಾಗೂ ನೇಪಾಳಿ ಕಾಂಗ್ರೆಸ್ಸಿನ ಹಿರಿಯ ಮುಖಂಡರಾದ ಶೈಲಜಾ ಆಚಾರ್ಯ (65) ದೀರ್ಘ ಕಾಲದ ಅಸ್ವಸ್ಥತೆಯ ನಂತರ ಕಠ್ಮಂಡುವಿನಲ್ಲಿ ನಿಧನರಾದರು. ಹಲವು ವರ್ಷಗಳಿಂದ ನ್ಯೂಮೋನಿಯಾ ಹಾಗೂ ಮರೆಗುಳಿ ರೋಗದಿಂದ ಬಳಲುತ್ತಿದ್ದ ಅವರನ್ನು ಎರಡು ದಿನ ಹಿಂದೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದಕ್ಕೂ ಮೊದಲ ಅವರು ಬ್ಯಾಂಕಾಕ್ ಮತ್ತು ಕಠ್ಮಂಡು ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಬಾಲಿವುಡ್ ನಟಿ ಮೊನಿಷಾ ಕೊಯಿರಾಲ ಅವರ ಸಂಬಂಧಿಯಾದ ಶೈಲಜಾ ಅವರು, ದೊರೆ ಮಹೇಂದ್ರ ಅವರಿಗೆ ಕಪ್ಪು ಬಾವುಟ ತೋರಿಸಿದ ಕಾರಣಕ್ಕೆ 1961ರಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು.
2009: ನವೀಕರಣಕ್ಕಾಗಿ ಕೆಲ ತಿಂಗಳುಗಳಿಂದ ಮುಚ್ಚಿದ್ದ ನವದೆಹಲಿಯ ಶಂಕರ್ ಅಂತಾರಾಷ್ಟ್ರೀಯ ಬೊಂಬೆ ಸಂಗ್ರಹಾಲಯವಾದ ದೇಶದ ಅತಿದೊಡ್ಡ ಬೊಂಬೆ ಮ್ಯೂಸಿಯಂ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಯಿತು. ಹರಪ್ಪ ನಾಗರಿಕತೆಯ ಬೊಂಬೆಯಿಂದ ಹಿಡಿದು ಬಾರ್ಬಿವರೆಗಿನ ಬೊಂಬೆಗಳ ಮಾಯಾಲೋಕವೊಂದು ಇಲ್ಲಿ ಮೈದಳೆದಿದೆ. ಅಲ್ಲಾವ್ದದೀನ್, ಆಲಿಬಾಬಾ, ಸ್ನೋವೈಟ್, ಸಿಂಡ್ರೆಲಾ ಬೊಂಬೆಗಳಂತೂ ಮನಸೆಳೆಯುತ್ತವೆ. ಜತೆಗೆ ಇವುಗಳ ಬಗೆಗಿನ ಸಮಗ್ರ ಮಾಹಿತಿ ಇರುವುದು ಕೂಡ ಈ ಸಂಗ್ರಹಾಲಯದ ವಿಶೇಷ. ಅಂತಾರಾಷ್ಟ್ರೀಯ ಬೊಂಬೆ ಸಂಗ್ರಹಾಲಯ 1985ರಲ್ಲಿ ಸರ್ಕಾರ ಮತ್ತು ರೋಟರಿ ಸಂಸ್ಥೆ ಸಹಯೋಗದಲ್ಲಿ ತಲೆ ಎತ್ತಿತು. ಇಲ್ಲಿ 90 ದೇಶಗಳ 7000ಕ್ಕೂ ಹೆಚ್ಚು ಬೊಂಬೆಗಳಿವೆ.
2008: ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಕಾರ್ಯಕರ್ತರು ಸ್ಥಳೀಯ ಜನರು, ಪ್ರವಾಸಿಗರು ಮತ್ತು ಪೊಲೀಸರ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸಿಲಿಗುರಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಶಾಂತಿ ಪಾಲನೆಗಾಗಿ ಸೇನೆ ಕರೆಸಲಾಯಿತು.
2007: ಗಿನ್ನೆಸ್ ದಾಖಲೆ ನಿರ್ಮಾಣದ ಸಲುವಾಗಿ ಚೆನ್ನೈಯ ಕಾಸ್ಮೋಪಾಲಿಟನ್ ಕ್ಲಬ್ ಈಜುಗೊಳದಲ್ಲಿ 15 ತಿಂಗಳ ಮಗುವೊಂದು (ಒಂದೂ ಕಾಲು ವರ್ಷ) ನಾಲ್ಕು ಮೀಟರ್ ದೂರವನ್ನು ಈಜಿತು. 2006ರ ಮಾರ್ಚ್ 13ರಂದು ಜನಿಸಿದ ಮಹರಂತ್ ಕಮಲಾಕರ್ ಈ ಸಾಧನೆ ಮಾಡಿದ ಪೋರ. ಈ ಬಾಲಕನ ಹೆತ್ತವರ ಪ್ರಕಾರ ಆಸ್ಟ್ರೇಲಿಯಾದ ಬಾಲಕನೊಬ್ಬ ಎರಡೂವರೆ ವರ್ಷದವನಾಗಿದ್ದಾಗ 80 ನಿಮಿಷಗಳ ಕಾಲ ತೇಲಾಡಿದ್ದಷ್ಟೇ ಈವರೆಗಿನ ದಾಖಲೆ.
2007: ಬಾಂಗ್ಲಾದೇಶದ ಚಿತ್ತಗಾಂಗ್ ಪ್ರದೇಶದಲ್ಲಿ ಭೂಕುಸಿತದಲ್ಲಿ ಸತ್ತವರ ಸಂಖ್ಯೆ 103ಕ್ಕೆ ಏರಿತು.
2007: ವಿಶ್ವಸಂಸ್ಥೆಯ ಸಮರ ಅಪರಾಧಗಳ ನ್ಯಾಯಮಂಡಳಿಯು ಕ್ರೊಯೇಷಿಯಾದ ಮಾಜಿ ಸೆರ್ಬ್ ಬಂಡಾಯ ನಾಯಕ ಮಿಲನ್ ಮಾರ್ಟಿಕ್ ಅವರಿಗೆ 35 ವರ್ಷಗಳ ಸೆರೆವಾಸದ ಶಿಕ್ಷೆಯನ್ನು ವಿಧಿಸಿತು. ಕ್ರೊಯೇಷಿಯಾದಲ್ಲಿ ಪ್ರತ್ಯೇಕ ಸೆರ್ಬ್ ರಾಷ್ಟ್ರ ಸ್ಥಾಪನೆಯ ಸಲುವಾಗಿ ಕ್ರೊಯೇಷಿಯನ್ನರು, ಮುಸ್ಲಿಮರು ಮತ್ತು ಸೆರ್ಬೇತರ ನಾಗರಿಕರ ಕೊಲೆ, ಚಿತ್ರಹಿಂಸೆ ನಡೆಸಿದ್ದರು ಎಂದು ಆಪಾದಿಸಲಾಗಿತ್ತು.
2007: ವೇತನ ಬಾಕಿ ಹಾಗೂ ಬಡ್ತಿಗೆ ಸಂಬಂಧಿಸಿದಂತೆ ಭಾರತೀಯ ವಿಮಾನಯಾನ ಸಂಸ್ಥೆ `ಇಂಡಿಯನ್' ಆಡಳಿತ ಮಂಡಳಿಯು ತಾನು ನೀಡಿದ್ದ ಭರವಸೆಗಳನ್ನು ಹಿಂದಕ್ಕೆ ತೆಗೆದುಕೊಂಡಿದೆ ಎಂದು ಆಪಾದಿಸಿ ಸಂಸ್ಥೆಯ 12,000ಕ್ಕೂ ಹೆಚ್ಚು ಮಂದಿ ಭೂ ಸಿಬ್ಬಂದಿ ರಾತ್ರಿ ಮಿಂಚಿನ ಮುಷ್ಕರ ಆರಂಭಿಸಿದರು.
2006: ಹಿರಿಯ ಪತ್ರಕರ್ತ ಎಸ್.ವಿ. ಹೆಗಡೆ (74) ಹುಬ್ಬಳ್ಳಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಸಂಯುಕ್ತ ಕರ್ನಾಟಕದ ಹುಬ್ಬಳ್ಳಿ ಆವೃತ್ತಿಯ ಸಹ ಸಂಪಾದಕರಾಗಿ ಅವರು ನಿವೃತ್ತರಾಗಿದ್ದರು.
2006: ಸೌರಶಕ್ತಿಯಿಂದ ಹಾರಬಲ್ಲ ವಿಶ್ವದ ಪ್ರಪ್ರಥಮ ವಿಮಾನವೊಂದು ಪ್ಯಾರಿಸ್ ಹೊರವಲಯದ ವಿಮಾನ ನಿಲ್ದಾಣದಲ್ಲಿ ಎಲ್ಲ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿ, ವಾರಾಂತ್ಯದಲ್ಲಿ ಲಂಡನ್ನಿಗೆ ಹಾರಿ `ಇತಿಹಾಸ' ನಿರ್ಮಿಸಲು ಸಜ್ಜಾಯಿತು.
2006: ಕೆನಡಾದ ವೃತ್ತಪತ್ರಿಕಾ ದೊರೆ ಕೆನ್ ಥಾಮ್ಸನ್ ಈ ದಿನ ನಿಧನರಾದರು.
2006: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಕವಿ ಡಾ. ಸಿದ್ದಲಿಂಗಯ್ಯ ಅಧಿಕಾರ ವಹಿಸಿಕೊಂಡರು.
2006: ವಿದೇಶೀ ನೇರ ಬಂಡವಾಳ ಹೂಡಿಕೆಗೆ (ಎಫ್ ಡಿಐ) ಪ್ರೋತ್ಸಾಹ ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಕರ್ನಾಟಕ ಮೂಲದ ನಾಲ್ಕು ವಿಶೇಷ ಆರ್ಥಿಕ ವಲಯಗಳಿಗೆ ಮಂಜೂರಾತಿ ನೀಡಿತು. ರಾಜ್ಯ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ಒಎನ್ ಜಿಸಿ) ಮಂಗಳೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಪೆಟ್ರೋ ಕೆಮಿಕಲ್ ಕಾಂಪ್ಲೆಕ್ಸ್, ಮಾಹಿತಿ ತಂತ್ರಜ್ಞಾನ ರಂಗದಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪಿಸುವ ಇನ್ಫೋಸಿಸ್ ಟೆಕ್ನಾಲಜೀಸ್ ನ ಪ್ರಸ್ತಾವ, ಬೆಂಗಳೂರಿನಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪಿಸಲು ಉದ್ದೇಶಿಸಿರುವ ಹಿಸ್ಕಿಲ್ ಪ್ರಸ್ತಾವ ಮತ್ತು ಮಂಗಳೂರಿನಲ್ಲಿ ಅಸಾಂಪ್ರದಾಯಿಕ ಇಂಧನ ವಲಯದಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪಿಸಲು ಉದ್ದೇಶಿಸಿರುವ ಸುಜ್ಲೋನ್ ಪ್ರಸ್ತಾವಗಳಿಗೆ ವಿಶೇಷ ಆರ್ಥಿಕ ವಲಯಗಳಿಗೆ ಸಂಬಂಧಿಸಿದಂತೆ ವ್ಯವಹರಿಸುವ ಏಕಗವಾಕ್ಷಿ ಸಂಸ್ಥೆಯಾಗಿರುವ `ಮಂಜೂರಾತಿಗಳ ಮಂಡಳಿ'ಯು (ಬೋರ್ಡ್ ಆಫ್ ಅಪ್ರೂವಲ್ಸ್- ಬಿಒಎ) ಔಪಚಾರಿಕ ಒಪ್ಪಿಗೆ ನೀಡಿತು.
1997: ಸೀತಾರಾಂ ಕೇಸರಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು.
1996: ನೂತನ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಲೋಕಸಭೆಯಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾದರು.
1957: ಪಾಕಿಸ್ಥಾನದ ಮಾಜಿ ಕ್ರಿಕೆಟ್ ಆಟಗಾರ ಜಾವೇದ್ ಮಿಯಾಂದಾದ್ ಜನ್ಮದಿನ. 50ಕ್ಕೂ ಹೆಚ್ಚು ಟೆಸ್ಟ್ ಮ್ಯಾಚುಗಳಲ್ಲಿ ನಿರಂತರವಾಗಿ ಆಡಿದ ಮೊತ್ತ ಮೊದಲ ಪಾಕಿಸ್ಥಾನಿ ಕ್ರಿಕೆಟ್ ಆಟಗಾರ ಈ ವ್ಯಕ್ತಿ.
1949: ಸಾಹಿತಿ ನೆಲೆಮನೆ ದೇವೇಗೌಡ ಜನನ.
1944: ಸಾಹಿತಿ ಎಂ.ಜಿ. ರೇಣುಕಾ ಪ್ರಸಾದ್ ಜನನ.
1942: ಯಹೂದಿ ಬಾಲಕಿ ಆನ್ ಫ್ರಾಂಕ್ (1929-45) ತನ್ನ 13ನೇ ಜನ್ಮದಿನದಂದು ದಿನಚರಿ ಬರೆಯಲು ಆರಂಭಿಸಿದಳು. 1944ರ ವರೆಗಿನ ಅವಧಿಯ ಈ ದಿನಚರಿಯ ದಾಖಲೆಗಳು ಆಕೆಯ ಕುಟುಂಬ ಸದಸ್ಯರು ನಾಝಿಗಳು ಯಹೂದಿಗಳ ವಿರುದ್ಧ ನಡೆಸಿದ ದೌರ್ಜನ್ಯದಿಂದ ಪಾರಾಗಲು ಆಮ್ ಸ್ಟರ್ ಡ್ಯಾಮಿನಲ್ಲಿ ಅಡಗಿಕೊಂಡಿದ್ದ ಎರಡು ವರ್ಷಗಳ ವಿವರಗಳನ್ನು ಒಳಗೊಂಡಿದೆ. ಈ ದಿನಚರಿ 50ಕ್ಕೂ ಹೆಚ್ಚು ಭಾಷೆಗಳಿಗೆ ಭಾಷಾಂತರಗೊಂಡಿದ್ದು, ಆಮ್ ಸ್ಟರ್ ಡ್ಯಾಮಿನಲ್ಲಿ ಫ್ರಾಂಕ್ ಕುಟುಂಬ ಅಡಗಿಕೊಂಡಿದ್ದ ಪ್ರಿನ್ಸೆಂಗ್ರಾಚ್ ಕಾಲುವೆ ಈಗ ಮ್ಯೂಸಿಯಂ ಆಗಿದೆ.
1929: ಯಹೂದಿ ಬಾಲಕಿ ಅನ್ನೆ ಫ್ರಾಂಕ್ ಈದಿನ ಫ್ರಾಂಕ್ ಫರ್ಟಿನಲ್ಲಿ ಜನಿಸಿದಳು. 1942ರಲ್ಲಿ ಇದೇ ದಿನ ತನ್ನ 13ನೇ ಜನ್ಮದಿನದಂದು ಈಕೆ ತನ್ನ ದಿನಚರಿ ಬರೆಯಲು ಆರಂಭಿಸಿದಳು.
1924: ಅಮೆರಿಕದ 41ನೇ ಅಧ್ಯಕ್ಷ ಜಾರ್ಜ್ ಬುಷ್ ಜನ್ಮದಿನ.
1906: ಸಾಹಿತಿ ತ.ಸು.ಶಾಮರಾವ್ ಅವರು ಸುಬ್ಬಣ್ಣ- ಲಕ್ಷ್ಮೀ ದೇವಮ್ಮ ದಂಪತಿಯ ಪುತ್ರನಾಗಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಗ್ರಾಮದಲ್ಲಿ ಜನಿಸಿದರು.
1915: ಸಾಹಿತಿ ಸಿ.ಕೆ. ನಾಗರಾಜರಾವ್ ಜನನ.
1902: ಸಾಹಿತಿ ಎನ್. ಎಸ್. ನಾರಾಯಣಶಾಸ್ತ್ರಿ ಜನನ.
1897: ಸ್ವಿಸ್ ಕಟ್ಲೆರಿ ನಿರ್ಮಾಪಕ ಕಾರ್ಲ್ ಎಲ್ಸನರ್ ತಮ್ಮ `ದಿ ಆಫೀಸರ್ ಅಂಡ್ ಸ್ಪೋರ್ಟ್ ನೈಫ್' ಹೆಸರಿನ ತನ್ನ ಪೆನ್- ಚೂರಿಗೆ ಪೇಟೆಂಟ್ ಪಡೆದರು. ಈ ಬಹೂಪಯೋಗಿ ಚೂರಿ ಈಗ `ಸ್ವಿಸ್ ಆರ್ಮಿ ನೈಫ್' ಎಂದೇ ಖ್ಯಾತಿ ಪಡೆದಿದೆ. ಈ ಚೂರಿ ತಯಾರಿ ಕಂಪೆನಿಗೆ ಕಾರ್ಲ್ ತಮ್ಮ ತಾಯಿ ವಿಕ್ಟೋರಿಯಾಳ ಹೆಸರು ಇರಿಸಿದರು.
1842: ಇಂಗ್ಲಿಷ್ ಶಿಕ್ಷಣ ಹಾಗೂ ಪಬ್ಲಿಕ್ ಶಾಲಾ ವ್ಯವಸ್ಥೆಯನ್ನು ಸುಧಾರಿಸಿದ ರಗ್ಬಿಯ ಹೆಡ್ ಮಾಸ್ಟರ್ ಥಾಮಸ್ ಆರ್ನಾಲ್ಡ್ ತಮ್ಮ 47ನೇ ಹುಟ್ಟು ಹಬ್ಬಕ್ಕೆ ಒಂದು ದಿನ ಮೊದಲು ಮೃತರಾದರು. ಇವರು ಖ್ಯಾತ ಇಂಗ್ಲಿಷ್ ಕವಿ ಮ್ಯಾಥ್ಯೂ ಅರ್ನಾಲ್ಡ್ ಅವರ ತಂದೆ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment