Friday, December 20, 2019

ಜಾಮಿಯಾ ಹಿಂಸಾಚಾರ: ಕೇಂದ್ರ, ದೆಹಲಿ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಜಾಮಿಯಾ ಹಿಂಸಾಚಾರ: ಕೇಂದ್ರ, ದೆಹಲಿ ಸರ್ಕಾರಕ್ಕೆ  ಹೈಕೋರ್ಟ್ ನೋಟಿಸ್
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆಯಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವ ವಿದ್ಯಾಲಯದಲ್ಲಿ ಸಂಭವಿಸಿದ ಹಿಂಸಾಚಾರದ ವಾಸ್ತವಾಂಶ ಪತ್ತೆಗೆ ಸಮಿತಿ ರಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಮತ್ತು ಪೊಲೀಸರಿಗೆ ದೆಹಲಿ ಹೈಕೋರ್ಟ್  2019 ಡಿಸೆಂಬರ್ 19ರ ಗುರುವಾರ ನೋಟಿಸ್ ಜಾರಿ ಮಾಡಿತು.

ಆದಾಗ್ಯೂ
, ಮುಖ್ಯ ನ್ಯಾಯಮೂರ್ತಿ ಡಿಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಸಿ. ಹರಿಶಂಕರ್ ಅವರನ್ನು ಒಳಗೊಂಡ ಪೀಠವು ಬಂಧನ ಸೇರಿದಂತೆ ಯಾವುದೇ ಬಲ ಪ್ರಯೋಗದಿಂದ ವಿದ್ಯಾರ್ಥಿಗಳಿಗೆ ರಕ್ಷಣೆ ಒದಗಿಸಲು ಯಾವುದೇ ಆದೇಶವನ್ನೂ ನೀಡಲಿಲ್ಲ.

ವಿದ್ಯಾರ್ಥಿಗಳಿಗೆ ರಕ್ಷಣೆ ಒದಗಿಸಲು ಹೈಕೋರ್ಟ್ ನಿರಾಕರಿಸಿದ ಬಳಿಕ ವಕೀಲರ ಗುಂಪೊಂದುಶೇಮ್ ಶೇಮ್ (ನಾಚಿಕೆಗೇಡು) ಎಂಬುದಾಗಿ ಘೋಷಣೆಗಳನ್ನು ಕೂಗಿತು.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಕಾಲದಲ್ಲಿ ಗಾಯಗೊಂಡಿರುವ ವಿದ್ಯಾರ್ಥಿಗಳಿಗೆ ವೈದ್ಯಕೀಯ ನೆರವು ಮತ್ತು ಪರಿಹಾರ ಒದಗಿಸುವಂತೆ ಕೋರಿದ್ದ ಆರು ಅರ್ಜಿಗಳ ಮೇಲಿನ ಸುದೀರ್ಘ ವಾದ ಮಂಡನೆಯ ಬಳಿಕ ನ್ಯಾಯಾಲಯವು ನೋಟಿಸುಗಳನ್ನು ಜಾರಿಗೊಳಿಸಲು ಆಜ್ಞಾಪಿಸಿತು.

ಅರ್ಜಿದಾರರೊಬ್ಬರ ಪರವಾಗಿ ಹಾಜರಾಗಿದ್ದ ವಕೀಲರುಪ್ರತಿಭಟನೆಯ ವೇಳೆಯಲ್ಲಿ ಒಬ್ಬ ವಿದ್ಯಾರ್ಥಿ ತನ್ನ ದೃಷ್ಟಿಯನ್ನು ಕಳೆದುಕೊಂಡಿರುವುದಾಗಿ ವರದಿಗಳು ತಿಳಿಸಿವೆ. ೪೩೨ ಅಶ್ರುವಾಯು ಶೆಲ್ಲುಗಳನ್ನು ಪ್ರಯೋಗಿಸಲಾಗಿದ್ದು ಇದು ೨೦೧೨ರಿಂದೀಚೆಗೆ ಅತ್ಯಂತ ಹೆಚ್ಚಿನ ಪ್ರಮಾಣದ ಅಶ್ರುವಾಯು ಶೆಲ್ ಪ್ರಯೋಗಎಂದು ಹೇಳಿದರು.

ಹಿಂಸಾಚಾರದಲ್ಲಿ ೫೨ ಮಂದಿ ವಿದ್ಯಾಥಿಗಳು ಗಾಯಗೊಂಡಿದ್ದಾರೆ. ಜಾಮಿಯಾ ವಿಶ್ವ ವಿದ್ಯಾಲಯದ ಮುಖ್ಯಸ್ಥರು ಪೊಲೀಸರಿಗೆ ಆವರಣ ಪ್ರವೇಶಕ್ಕೆ ಅನುಮತಿ ನೀಡಿರಲಿಲ್ಲಎಂದು ಅವರು ನುಡಿದರು. ಇಂತಹ ತುರ್ತುಸ್ಥಿತಿ ಮಾದರಿ ಕಾರ್ಯಾಚರಣೆಗೆ ಕಾರಣವೇನು ಎಂಬುದಾಗಿ ಪೊಲೀಸರನ್ನು ಪ್ರಶ್ನಿಸಬೇಕು ಎಂದೂ ಅವರು ಆಗ್ರಹಿಸಿದರು.

ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರು ವಿಶ್ವ ವಿದ್ಯಾಲಯ ಆವರಣದ ಒಳಗೆ ಬಲಪ್ರಯೋಗದ ಅಗತ್ಯವಿತ್ತೇ? ಬಲಪ್ರಯೋಗ ನಡೆಸಲು ಪೊಲೀಸರಿಗೆ ಅವಕಾಶ ನೀಡಬಹುದೇ ಮತ್ತು ಇಂತಹ ಬಲಪ್ರಯೋಗಕ್ಕೆ ಸಮರ್ಥನೆ ಏನು ಎಂಬುದಾಗಿ ನ್ಯಾಯಾಲಯ ತೀರ್ಮಾನಿಸಬೇಕು ಎಂದು ಹೇಳಿದರು.

ಗ್ರಂಥಾಲಯ ಮತ್ತು ಶೌಚಾಲಯಗಳನ್ನು ಅನುಮತಿ ಇಲ್ಲದೆ ಪ್ರವೇಶಿದ್ದಕ್ಕೆ ಕಾರಣ ಏನು ಎಂದು ಪೊಲೀಸರು ವಿವರಣೆ ನೀಡಬೇಕು ಎಂದು ಹೇಳಿದ ಹೆಗ್ಡೆ, ಪರಿಸ್ಥಿತಿ ಇನ್ನೂ ಮಾಮೂಲಿಗೆ ಹಿಂದಿರುಗಿಲ್ಲ ಎಂದು ನುಡಿದರು. ಪೊಲೀಸರು ಆವರಣ ಪ್ರವೇಶಕ್ಕೆ ಮುನ್ನ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ತಿಳಿಸಬೇಕಿತ್ತು ಎಂದೂ ಅವರು ನುಡಿದರು.

ಹಿರಿಯ
ವಕೀಲೆ ಇಂದಿರಾ ಜೈಸಿಂಗ್ ಅವರು ವಿದ್ಯಾರ್ಥಿಗಳು ಮತ್ತು ಪೊಲೀಸರು ಪರಸ್ಪರ ವೈರಿಗಳಂತಾಗಿದ್ದಾರೆ ಎಂದು ಹೇಳಿದರು.

ಒಳಗಾಗಿರುವ ವಿದ್ಯಾರ್ಥಿ ಸಮುದಾಯ ತನ್ನನ್ನು ತಾನು ರಕ್ಷಿಸಿಕೊಳ್ಳುವುದು ಮತ್ತು ಪೊಲೀಸ್ ದೌರ್ಜನ್ಯದ ವಿರುದ್ಧ ತನ್ನ ಹಕ್ಕುಗಳನ್ನು ಚಲಾಯಿಸುವುದು ಎಂದು ನಾವು ಹೇಗೆ ನಿರೀಕ್ಷಿಸಲು ಸಾಧ್ಯ?’ಎಂದು ಇಂದಿರಾ ಪ್ರಶ್ನಿಸಿದರು.

ಅನಗತ್ಯವಾಗಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಕ್ಕೆ ನಾನು ಕಳವಳಗೊಂಡಿದ್ದೇನೆ. ವಕೀಲರು ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು, ಆಘಾತಗೊಂಡಿರುವ ವಿದ್ಯಾರ್ಥಿಗಳಿಂದ ನಾವು ಇದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಬಂಧಿತ ವಿದ್ಯಾರ್ಥಿಗಳನ್ನು ಕೂಡಾ ನಾಗರಿಕ ಸಮಾಜದ ಒತ್ತಡದ ಬಳಿಕವಷ್ಟೇ ಬಿಡುಗಡೆ ಮಾಡಲಾಗಿದೆಎಂದು ಆಕೆ ನುಡಿದರು.

ಮಕ್ಕಳ ಮೇಲೆ ಎಸಗಿದ ಕ್ರೌರ್ಯಕ್ಕಾಗಿ ಪೊಲೀಸರ ವಿರುದ್ಧ ಎಫ್ಐಆರ್ ಕೂಡಾ ದಾಖಲಾಗಿಲ್ಲ ಎಂದೂ ಹೇಳಿದ ಜೈಸಿಂಗ್, ವಿದ್ಯಾರ್ಥಿಗಳಿಗೆ ತತ್ ಕ್ಷಣ ವೈದ್ಯಕೀಯ ನೆರವು ಒದಗಿಸಬೇಕು ಮತ್ತು ವಿದ್ಯಾರ್ಥಿಗಳ ವಿರುದ್ಧ ಯಾವುದೇ ಬಲ ಪ್ರಯೋಗಿಸದಂತೆ ಪೊಲೀಸರನ್ನು ನಿರ್ಬಂಧಿಸಬೇಕು ಎಂದು ಹಿರಿಯ ವಕೀಲೆ ಕೋರಿದರು.

ತೀಸ್ ಹಜಾರಿ ಘರ್ಷಣೆಯ ವಿಚಾರದಲ್ಲಿ ನೀಡಿದಂತಹುದೇ ಆದೇಶವನ್ನು ನ್ಯಾಯಾಲಯವು ನೀಡಬೇಕು ಎಂದು ನಾವು ಬಯಸುತ್ತೇವೆ. ಮಾಹಿತಿ ಇರುವ ಯಾರೇ ವ್ಯಕ್ತಿ ಮುಂದಕ್ಕೆ ಬಂದು ಸಮಿತಿಯ ಮುಂದೆ ವಿವರಿಸುವಂತೆ ಬಹಿರಂಗ ನೋಟಿಸ್ ನೀಡಬೇಕು ಎಂದೂ ಅವರು ನುಡಿದರು.

ಜಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಉಪಕುಲಪತಿ ನಜ್ಮಾ ಅಖ್ತರ್ ಅವರ ಬಳಿಗೆ ತೆರಳಿ ಪರೀಕ್ಷೆಗಳನ್ನು ನಡೆಸುವಂತೆ ಕೋರಿದ್ದಾರೆ. ಇದು ದಂಗೆ ನಡೆಸುವ ವಿದ್ಯಾರ್ಥಿಗಳ ವರ್ತನೆ ಅಲ್ಲ. ಬಳಿಕ ವಿದ್ಯಾರ್ಥಿಗಳ ಮೇಲೆ ಪೊಲೀಸರು ಬಾತ್ ರೂಂ, ಗ್ರಂಥಾಲಯ ಮತ್ತು ಮಸೀದಿಯಲ್ಲಿ ಕೂಡಾ ದಾಳಿ ನಡೆಸಿದ್ದಾರೆ ಎಂದು ಹಿರಿಯ ವಕೀಲ ಕೊಲಿನ್ ಗೋನ್ಸಾಲ್ವೆಸ್ ಹೇಳಿದರು.

ಇದು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಮೇಲೆ ನಡೆದ ಅತ್ಯಂತ ಮಹತ್ವದ ದಾಳಿ. ಉಪಕುಲಪತಿ ಕೂಡಾ ಹಿಂಸಾಚಾರದ ತನಿಖೆಯಾಗಬೇಕು ಎಂಬುದಾಗಿ ಕೋರಿದ್ದಾರೆ ಎಂದುಜ ಗೋನ್ಸಾಲ್ವೆಸ್ ನುಡಿದರು.

ನೆಲದ ಮೇಲೆ ಬಿದ್ದಿದ್ದ ವಿದ್ಯಾರ್ಥಿಯೊಬ್ಬನ ತಲೆಗೆ ಪೊಲೀಸ್ ಅಧಿಕಾರಿಯೊಬ್ಬರು ಹೊಡೆಯುತ್ತಿದ್ದ ದೃಶ್ಯದ ಭಾವಚಿತ್ರವನ್ನೂ ಅವರು ನ್ಯಾಯಾಲಯಕ್ಕೆ ತೋರಿಸಿದರು.

ಗಾಯಾಳು ವಿದ್ಯಾರ್ಥಿಗಳಿಗೆ ತತ್ ಕ್ಷಣ ಚಿಕಿತ್ಸೆ ಲಭಿಸಬೇಕು ಎಂದು ಕೋರಿದ ಅವರು, ಕೆಲವು ವಿದ್ಯಾರ್ಥಿಗಳು ಕಲ್ಲೆಸೆದಿರಬಹುದು, ಆದರೆ ಪ್ರಮುಖ ದಾಳಿ ನಡೆದದ್ದು ಪೊಲೀಸರಿಂದ. ವಿದ್ಯಾರ್ಥಿಗಳ ಮೇಲೆ ದಂಗೆಯ ಆರೋಪ ಹೊರಿಸುವುದು ತಪ್ಪು. ಏಕೆಂದರೆ ಪೊಲೀಸರ ದಾಳಿಯ ಬಳಿಕ ವಿದ್ಯಾರ್ಥಿಗಳು ಹಿಂತಿರುಗಿದ್ದಾರೆ ಎಂದು ಹೇಳಿದರು.      
ಸುದೀರ್ಘ ವಾದಗಳ ಬಳಿಕ ನ್ಯಾಯಾಲಯವು ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಆದೇಶ ನೀಡಿ, ವಿಷಯವನ್ನು ಫೆಬ್ರವರಿ ೪ಕ್ಕೆ ವಿಚಾರಣೆಗೆ ನಿಗದಿ ಪಡಿಸಿತು.

ಪೀಠವು ವಿಚಾರಣೆಯನ್ನು ಫೆಬ್ರುವರಿ ೪ಕ್ಕೆ ಮುಂದೂಡುತ್ತಿದ್ದಂತೆಯೇ ನ್ಯಾಯಾಲಯದಲ್ಲಿಶೇಮ್ ಶೇಮ್ (ನಾಚಿಕೆಗೇಡು, ನಾಚಿಕೆಗೇಡು) ಘೋಷಣೆಗಳು ಕೇಳಿಬಂದವು.

No comments:

Advertisement