ರಾಷ್ಟ್ರಪತಿ ಭವನಕ್ಕೆ ಜೆಎನ್ಯು ವಿದ್ಯಾರ್ಥಿಗಳ ಮೆರವಣಿಗೆ
ಪೊಲೀಸರ ತಡೆ, ಬಂಧನ; ವಿಸಿ ವಜಾಕ್ಕೆ ಆಗ್ರಹ, ಒಪ್ಪದ ಸರ್ಕಾರ
ನವದೆಹಲಿ:
ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ ಕಳೆದ ವಾರ ಸಂಭವಿಸಿದ ಹಿಂಸಾಚಾರದ ವಿರುದ್ಧ ಪ್ರತಿಭಟಿಸುತ್ತಿರುವ ಜೆಎನ್ಯು ವಿದ್ಯಾರ್ಥಿಗಳು ಉಪಕುಲಪತಿ
ಜಗದೀಶ್ ಕುಮಾರ್ ವಜಾಕ್ಕೆ ಆಗ್ರಹಿಸಿ 2020 ಜನವರಿ 09ರ ಗುರುವಾರ ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ನಡೆಸಿದರು. ಆದರೆ ಮಾರ್ಗಮಧ್ಯದಲ್ಲಿಯೇ ತಡೆದ ಪೊಲೀಸರು ಅವರನ್ನು ಬಂಧಿಸಿದರು.
ಸರ್ಕಾರದ ಜೊತೆಗಿನ ಮಾತುಕತೆ ಫಲಪ್ರದವಾಗದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಬಹುತೇಕ ವಿದ್ಯಾರ್ಥಿಗಳನ್ನು ಪೊಲೀಸರು ತಡೆದು ಬಸ್ಸು ಒಂದಕ್ಕೆ ಹತ್ತಿಸಿದರು. ಮೆರವಣಿಗೆ ತಡೆಯುವ ಯತ್ನ ನಡೆಸಿದ ಪೊಲೀಸರು, ಜನಪಥದಲ್ಲಿ ಸಂಚಾರ ಅಡ್ಡಗಟ್ಟಲು ಯತ್ನಿಸಿದ ಪ್ರತಿಭಟನಕಾರರನ್ನು ನಿಯಂತ್ರಿಸಲು ಲಾಠಿ ಪ್ರಹಾರವನ್ನೂ ನಡೆಸಿದರು ಎಂದು ವರದಿಗಳು ತಿಳಿಸಿವೆ.
ಇದಕ್ಕೆ ಮುನ್ನ ಧ್ವನಿವರ್ಧಕಗಳ ಮೂಲಕ ಪೊಲೀಸರು ಶಾಂತಿ ಕಾಯ್ದುಕೊಳ್ಳುವಂತೆ ವಿದ್ಯಾರ್ಥಿ ಸಮುದಾಯಕ್ಕೆ ಮನವಿ ಮಾಡಿದರು.
ಪೊಲೀಸರು ಕೆಲವು ಮಹಿಳಾ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಯತ್ನಿಸಿದಾಗ ಮಾತಿನ ಚಕಮಕಿ ನಡೆಯಿತು. ಆಗ ಪೊಲೀಸರು ಪ್ರತಿಭಟನಾಕಾರರ ಮೇಲೆ ಬೆತ್ತ ಬೀಸಿದರು ಎಂದು ವರದಿಗಳು ಹೇಳಿವೆ.
ಮುಂಜಾಗರೂಕತಾ ಕ್ರಮವಾಗಿ ಪೊಲೀಸರು ರಾಷ್ಟ್ರಪತಿ ಭವನದ ಉತ್ತರ- ದಕ್ಷಿಣ ಬ್ಲಾಕ್ಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದರು.
ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ತೆರಳುವ ಮುನ್ನ ಜೆಎನ್ಯು ವಿದ್ಯಾರ್ಥಿ ಸಂಘ ಮತ್ತು ಜೆಎನ್ಯು ಶಿಕ್ಷಕರ ಸಂಘದ ನಿಯೋಗವೊಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್ಆರ್ಡಿ) ಸಚಿವಾಲಯ ಅಧಿಕಾರಿಗಳನ್ನು ಭೇಟಿ ಮಾಡಿ ಉಪಕುಲಪತಿ ಜಗದೀಶ್ ಕುಮಾರ್ ಅವರನ್ನು ಹುದ್ದೆಯಿಂದ ಕಿತ್ತುಹಾಕಬೇಕು ಎಂದು ಆಗ್ರಹಿಸಿತು.
ಜಗದೀಶ್ ಕುಮಾರ್ ಅವರನ್ನು ಕಿತ್ತು ಹಾಕಲು ಸರ್ಕಾರವು ಈವರೆಗೂ ನಿರಾಕರಿಸಿದೆ ಎಂದು ಮಾನವ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಅಮಿತ್ ಖಾರೆ ಹೇಳಿದರು.
‘ಜೆಎನ್ಯು ಉಪಕುಲಪತಿಯವರನ್ನು ಹುದ್ದೆಯಿಂದ ಕಿತ್ತು ಹಾಕುವುದು ಸಮಸ್ಯೆಗೆ ಪರಿಹಾರವಲ್ಲ. ಸಚಿವಾಲಯದ ಗಮನ ಇರುವುದು ಶೈಕ್ಷಣಿಕ ವಿಷಯಗಳ ಕಡೆಗೆ, ರಾಜಕೀಯ ವಿಷಯಗಳ ಬಗೆಗಲ್ಲ’ ಎಂದು ಖಾರೆ ನುಡಿದರು.
ಜಗದೀಶ್ ಕುಮಾರ್ ಅವರನ್ನು ಕಿತ್ತು ಹಾಕಲು ಸರ್ಕಾರವು ಈವರೆಗೂ ನಿರಾಕರಿಸಿದೆ ಎಂದು ಮಾನವ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಅಮಿತ್ ಖಾರೆ ಹೇಳಿದರು.
‘ಕುಮಾರ್ ಅವರನ್ನು ಶುಕ್ರವಾರ ಭೇಟಿ ಮಾಡಿದ ಬಳಿಕ ಸಚಿವಾಲಯದ ಅಧಿಕಾರಿಗಳು ಜೆಎನ್ಯು ವಿದ್ಯಾರ್ಥಿ ಸಂಘವನ್ನು ಭೇಟಿ ಮಾಡಲಿದ್ದಾರೆ’ ಎಂದು ಖಾರೆ ಹೇಳಿದರು.
‘ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಜೊತೆಗೆ ಸಂಧಾನ ಮಾಡಿಕೊಳ್ಳುವ ಸ್ಥಿತಿಯಲ್ಲಿ ನಾವು ಇಲ್ಲ. ಸಚಿವಾಲಯವು ಈಗಲೂ ಉಪಕುಲಪತಿಯನ್ನು ಕಿತ್ತು ಹಾಕಬೇಕೇ ಎಂಬುದಾಗಿ ಯೋಚಿಸುತ್ತಿದೆ’ ಎಂದು ಜೆಎನ್ಯುಎಸ್ಯು ಅಧ್ಯಕ್ಷೆ ಐಶೆ ಘೋಷ್ ಗುರುವಾರದ ಭೇಟಿ ಬಳಿಕ ಹೇಳಿದರು.
ಭಾನುವಾರ ದಾಳಿ ನಡೆಸಿದ್ದ ದಾಳಿಕೋರರ ಜೊತೆಗೆ ಉಪಕುಲಪತಿ ಜಗದೀಶ್ ಕುಮಾರ್ ಶಾಮೀಲಾಗಿದ್ದಾರೆ. ಆದ್ದರಿಂದ ಅವರು ರಾಜೀನಾಮೆ ನೀಡಬೇಕು ಎಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆಗ್ರಹಿಸುತ್ತಿದ್ದಾರೆ.
ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಮುಸುಕುಧಾರಿಗಳ ಗುಂಪೊಂದು ದಕ್ಷಿಣ ದೆಹಲಿಯ ವಿಶ್ವ ವಿದ್ಯಾಲಯದ ಆವರಣಕ್ಕೆ ಭಾನುವಾರ ನುಗ್ಗಿ ಮೂರು ವಸತಿ ನಿಲಯಗಳಲ್ಲಿ ಇದ್ದ ವಿದ್ಯಾರ್ಥಿಗಳ ಮೇಲೆ ಕಲ್ಲುಗಳು, ದೊಣ್ಣೆ ಮತ್ತು ಕಬ್ಬಿಣದ ಸಲಾಕೆಗಳಿಂದ ಹಲ್ಲೆ ನಡೆಸಿತ್ತು. ಜೊತೆಗೆ ಕಿಟಕಿಗಳು, ಪೀಠೋಪಕರಣಗಳು ಮತ್ತು ವಿದ್ಯಾರ್ಥಿಗಳ ವೈಯಕ್ತಿಕ ಸಾಮಗ್ರಗಳನ್ನು ಧ್ವಂಸಗೊಳಿಸಿತ್ತು. ಗುಂಪು ಮಹಿಳಾ ವಸತಿ ಗೃಹದ ಮೇಲೂ ದಾಳಿ ನಡೆಸಿತು ಎಂದು ಆಪಾದಿಸಲಾಗಿದೆ.
ಜೆಎನ್ಯು ಶಿಕ್ಷಕರ ಸಂಘವು (ಜೆಎನ್ಯುಟಿಎ) ಇದಕ್ಕೆ ಮುನ್ನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದು ಹಿಂಸಾಚಾರಕ್ಕೆ ಜಗದೀಶ್ ಕುಮಾರ್ ಅವರೇ ಸಂಪೂರ್ಣಹೊಣೆ ಎಂದು ಆಪಾದಿಸಿತ್ತು.
ಜೆಎನ್ಯು ಶಿಕ್ಷಕರ ಸಂಘವು (ಜೆಎನ್ಯುಟಿಎ) ಇದಕ್ಕೆ ಮುನ್ನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದು ಹಿಂಸಾಚಾರಕ್ಕೆ ಜಗದೀಶ್ ಕುಮಾರ್ ಅವರೇ ಸಂಪೂರ್ಣಹೊಣೆ ಎಂದು ಆಪಾದಿಸಿತ್ತು.
ವಿದ್ಯಾರ್ಥಿ, ಶಿಕ್ಷಕರ ನಿಯೋಗದ ಜೊತೆಗೆ ಮಾತುಕತೆ ನಡೆಸಿದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ’ವಿದ್ಯಾರ್ಥಿಗಳ ಜೊತೆಗೆ ಹೆಚ್ಚು ಸಂವಹನ ನಡೆಸುವಂತೆ ಜಗದೀಶ್ ಕುಮಾರ್ ಅವರಿಗೆ ’ಸಲಹೆ’ ಮಾಡಿದರು ಎಂದು ಮಾಧ್ಯಮವೊಂದು ವರದಿ ಮಾಡಿತು.
ಈ ಮಧ್ಯೆ ಗೃಹ ಸಚಿವ ಅಮಿತ್ ಶಾ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಅವರು ಹಿಂಸಾಚಾರಕ್ಕೆ ಹೊಣೆ. ಅವರು ಅಧಿಕೃತವಾಗಿ ಗೂಂಡಾಗಿರಿಯನ್ನು ಪ್ರಾಯೋಜಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷವು ಆಪಾದಿಸಿತು.
No comments:
Post a Comment