ಭಾರತದಲ್ಲಿ ೩ನೇ ಹಂತಕ್ಕೆ ಪ್ರವೇಶಿಸಿದೆಯೇ ಕೋವಿಡ್?
ಬಂಗಾಳದ ಮೃತ ವ್ಯಕ್ತಿ ವಿದೇಶಯಾನವನ್ನೇ ಮಾಡಿಲ್ಲ..!
ಕೋಲ್ಕತ: ಕೋರೋನಾ ವೈರಸ್ ಸಾಂಕ್ರಾಮಿಕ ಪಿಡುಗಿಗೆ ಸಂಬಂಧಿಸಿದ ದೇಶದ ೮ನೇ ಸಾವು 2020 ಮಾರ್ಚ್ 23ರ ಸೋಮವಾರ ಕೋಲ್ಕತದಿಂದ ವರದಿಯಾಗಿದ್ದು, ೫೭ರ ಹರೆಯದ ಈ ರೋಗಿ ಯಾವುದೇ ವಿದೇಶಯಾನ ಮಾಡಿದ ದಾಖಲೆ ಇಲ್ಲದೇ ಇರುವುದು ವೈದ್ಯಕೀಯ ರಂಗದ ತಜ್ಞರನ್ನು ಚಿಂತೆಗೀಡು ಮಾಡಿತು.
ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಈ ರೋಗಿ ವಿದೇಶಯಾನ ಮಾಡಿದ ಇತಿಹಾಸವಿಲ್ಲ. ಹೀಗಾಗಿ ಈತನಿಗೆ ಕೋವಿಡ್ ಸೋಂಕು ತಗುಲಿದ್ದು ಹೇಗೆ ಎಂಬ ಪ್ರಶ್ನೆಯನ್ನು ಈ ಪ್ರಕರಣ ಹುಟ್ಟು ಹಾಕಿದೆ. ಸೋಂಕು ಮೂಲದ ಪತ್ತೆ ಅಸಾಧ್ಯವಾಗಿರುವುದರಿಂದ ಕೋವಿಡ್ -೧೯ ಇದೀಗ ಭಾರತದಲ್ಲಿ ೩ನೇ ಹಂತವನ್ನು ಪ್ರವೇಶಿಸಿರಬಹುದೇ ಎಂಬ ಗುಮಾನಿ ತಜ್ಞರನ್ನು ಕಾಡಿತು.
ಪಶ್ಚಿಮ ಬಂಗಾಳದಲ್ಲಿ ಇದು ಇದು ೭ನೇ ಕೊರೋನಾ ಸೋಂಕು ತಗುಲಿದ ಪ್ರಕರಣವಾಗಿದ್ದು, ಕಳೆದ ವಾರವಷ್ಟೇ ರಾಜ್ಯಕ್ಕೆ ಸೋಂಕು ಕಾಲಿರಿಸಿತ್ತು.
ರಾಜ್ಯದಲ್ಲಿ ಕೊರೋನಾವೈರಸ್ ಸೋಂಕು ಹೆಚ್ಚುತ್ತಿರುವಂತೆಯೇ ಸಂಸತ್ತಿಗೆ ರಾಜ್ಯದ ಸಂಸದರನ್ನು ಕಳುಹಿಸದೇ ಇರುವ ನಿರ್ಧಾರ ಕೈಗೊಂಡಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯಕ್ಕೆ ಬರುವ ಎಲ್ಲ ವಿಮಾನಗಳನ್ನೂ ನಿಷೇಧಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದರು.
ರಾಜ್ಯದಲ್ಲಿ ಮೊದಲ ಕೊರೋನಾ ಶಂಕೆಯ ರೋಗಿ ಇಂಗ್ಲಿಂಡಿನಿಂದ ಬಂದ ವಿದ್ಯಾರ್ಥಿಯಾಗಿದ್ದ. ಈ ಯುವಕ ಕೊರೋನಾ ಸೊಂಕು ಖಚಿತಪಡುವ ಮುನ್ನ ಮಾಲ್ ಒಂದಕ್ಕೆ ಭೇಟಿ ನೀಡಿದ್ದ.
ತೀರಾ ಇತ್ತೀಚಿನ ಕೋವಿಡ್-೧೯ ಪ್ರಕರಣದಲ್ಲಿ ವಿಮಾನ ನಿಲ್ದಾಣಕ್ಕೆ ಸಮೀಪದ ಡಂಡಂ ನಿವಾಸಿಯಾದ ೫೭ರ ಹರೆಯದ ವ್ಯಕ್ತಿ ಮಾರ್ಚ್ ೧೬ರಂದು ಉಸಿರಾಟದ ತೀವ್ರ ತೊಂದರೆಯ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದು ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು.
ಅವರ ಗಂಟಲ ದ್ರವ ಮಾದರಿಯನ್ನು ಎನ್ ಐಸಿಇಡಿ ಮತ್ತು ನಗರ ಮುಂಚೂಣಿಯ ಎಸ್ ಎಸ್ ಕೆಎಂ ಆಸ್ಪತ್ರೆಗೆ ಕಳುಹಿಸಲಾಗಿದ್ದು ವರದಿ ಬಂದಾಗ ಕೋವಿಡ್ ಸೋಂಕು ತಗುಲಿರುವುದು ಖಚಿತವಾಯಿತು. ಮಾರ್ಚ್ ೨೧ರಂದು ಕಳುಹಿಸಲಾಗಿದ್ದ ಇನ್ನೊಂದು ಮಾದರಿಯ ಪರೀಕ್ಷಾ ವರದಿ ಕೂಡಾ ಕೊರೋನಾವೈರಸ್ ಸೋಂಕು ತಗುಲಿದ್ದನ್ನು ದೃಢ ಪಡಿಸಿತು. ಸೋಮವಾರ ಮಧ್ಯಾಹ್ನ ೩.೩೫ಕ್ಕೆ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು.
ಈ ಮಧ್ಯೆ, ಏಕಾಂಗಿವಾಸ ಅಥವಾ ಪ್ರತ್ಯೇಕವಾಸದ ನಿಯಮ ಪಾಲಿಸದ ಜನರಿಗೆ ಕಠಿಣ ಎಚ್ಚರಿಕೆ ನೀಡಿದ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ’ಅವರ ವರ್ತನೆ ಅಪಾಯಕಾರಿ’ ಎಂದು ಹೇಳಿದರು. ರಾಜ್ಯದ ನಗರ ಪ್ರದೇಶಗಳಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆಯನ್ನೂ ಅವರು ಮಾಡಿದರು.
ಕೇಂದ್ರ ಸರ್ಕಾರವು ಎಲ್ಲ ದೇಶೀ ವಿಮಾನಯಾನ ಸ್ಥಗಿತದ ನಿರ್ಧರ ಕೈಗೊಳ್ಳುವುದಕ್ಕೆ ಮುನ್ನವೇ ರಾಜ್ಯಕ್ಕೆ ಬರುವ ವಿಮಾನಗಳ ಸಂಚಾರ ತಡೆಹಿಡಿಯುವಂತೆ ಅವರು ಪ್ರಧಾನಿಯವರಿಗೆ ಪತ್ರ ಬರೆದಿದ್ದರು.
ಕೋಲ್ಕತದ ಒಳಾಂಗಣ ಕ್ರೀಡಾಂಗಣವನ್ನು ತಾತ್ಕಾಲಿಕ ಆಸ್ಪತ್ರೆಯಾಗಿ ಪರಿವರ್ತಿಸಲು ಆದೇಶ ನೀಡಿದ ಮಮತಾ, ಕೊರೋನಾವೈರಸ್ ಎದುರಿಸಲು ಪೂರ್ವಸಿದ್ಧತೆಯೊಂದಿಗೆ ಸಜ್ಜಾಗಿರಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೇಂದ್ರದಿಂದ ಈ ನಿಟ್ಟಿನಲ್ಲಿ ಸಾಕಷ್ಟು ನೆರವು ಲಭಿಸುತ್ತಿಲ್ಲ ಎಂದೂ ಅವರು ದೂರಿದ್ದರು.
No comments:
Post a Comment