Thursday, March 12, 2020

ದೆಹಲಿಯಲ್ಲಿ ಶಾಲಾ-ಕಾಲೇಜು, ಸಿನೆಮಾ ಬಂದ್, ಕೇಂದ್ರ ಸಚಿವರ ವಿದೇಶ ಪಯಣಕ್ಕೆ ಕತ್ತರಿ

ದೆಹಲಿಯಲ್ಲಿ ಶಾಲಾ-ಕಾಲೇಜು, ಸಿನೆಮಾ ಬಂದ್, ಕೇಂದ್ರ ಸಚಿವರ ವಿದೇಶ ಪಯಣಕ್ಕೆ ಕತ್ತರಿ
ಮತ್ತೆ ಕುಸಿದ ಷೇರುಪೇಟೆ, ೧೧ ಲಕ್ಷ ಕೋಟಿ ರೂಪಾಯಿ ನಷ್ಟ
ನವದೆಹಲಿ/ ಮುಂಬೈ: ಭಾರತದಲ್ಲಿ ಕೊರೋನಾವೈರಸ್ ಸೋಂಕಿತರ ಸಂಖ್ಯೆ 2020 ಮಾರ್ಚ್ 13ರ ಗುರುವಾರ ೭೩ಕ್ಕೆ ಏರುತ್ತಿದ್ದಂತೆಯೇ ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಎಲ್ಲ ಶಾಲೆ, ಕಾಲೇಜುಗಳಿಗೂ ಮಾರ್ಚ್ ೩೧ರವರೆಗೆ ರಜೆ ಘೋಷಿಸಿದರು. ಇದೇ ವೇಳೆಗೆ ಭಾರತದ ಷೇರುಪೇಟೆಯಲ್ಲಿ ಭಾರೀ ಕುಸಿತ ಉಂಟಾಗಿ, ಹೂಡಿಕೆದಾರರು ೧೧ ಲಕ್ಷ ಕೋಟಿ ರೂಪಾಯಿಗಳನ್ನು ಗುರುವಾರ ಒಂದೇ ದಿನ ಕಳೆದುಕೊಂಡರು. ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವರ ಎಲ್ಲ ವಿದೇಶ ಪಯಣಗಳಿಗೂ ಕತ್ತರಿ ಹಾಕಿದರು.

ಚೀನಾದ ವುಹಾನ್‌ನಲ್ಲಿ ಮೊದಲು ಪತ್ತೆಯಾದ ಕೊರೊನಾ ವೈರಸ್ ಈಗ ವಿಶ್ವವ್ಯಾಪಿಯಾಗಿದ್ದು, ೧೨೪ ದೇಶಗಳಿಗೆ ವ್ಯಾಪಿಸಿದೆ. ಕೊರೊನಾ ಸೋಂಕಿತರ ಸಂಖ್ಯೆ ೧,೨೬,೬೩೧ಕ್ಕೆ ಏರಿತು.  ಜಗತ್ತಿನಲ್ಲಿ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ ೪,೬೩೮ಕ್ಕೆ ತಲುಪಿತು.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೆಹಲಿಯ ಎಲ್ಲ ಶಾಲಾ ಕಾಲೇಜುಗಳು, ಚಿತ್ರ ಮಂದಿರಗಳಿಗೆ ಮಾರ್ಚ್ ೩೧ರವರೆಗೆ ರಜೆ ಘೋಷಿಸಿದರು.

ಈಮಧ್ಯೆ, ಟೂರ್ನಮೆಂಟ್ ಸಲುವಾಗಿ ಬರ್ಮಿಂಗ್ ಹ್ಯಾಮ್‌ಗೆ ತೆರಳಿದ್ದ ಭಾರತದ ಬ್ಯಾಡ್ಮಿಂಟನ್ ತಂಡವು ಅಲ್ಲಿ ಸಿಕ್ಕಿಹಾಕಿಕೊಂಡಿದೆ. ಈ ಬಗ್ಗೆ ಟ್ವೀಟ್ ಮಾಡಿದ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಪರುಪಳ್ಳಿ ಕಶ್ಯಪ್ ಅವರು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರಿಗೆ ಟ್ವೀಟನ್ನು ಟ್ಯಾಗ್ ಮಾಡಿ ’ಸಂಕಷ್ಟದಲ್ಲಿದ್ದೇವೆ, ನಿಮ್ಮನ್ನು ಸಂಪರ್ಕಿಸಬೇಕಾಗಿದೆ ಎಂದು ಮನವಿ ಮಾಡಿದರು.

ಆಂಧ್ರಪ್ರದೇಶದಲ್ಲಿ ಇಟಲಿಯಿಂದ ಬಂದ ಆಂಧ್ರಪ್ರದೇಶದ ವ್ಯಕ್ತಿಗೆ ಕೊರೋನಾವೈರಸ್ ಅಂಟಿರುವುದು ದೃಢ ಪಟ್ಟಿರೆ, ಕರ್ನಾಟಕದಲ್ಲಿ ಗ್ರೀಸ್ ದೇಶದಿಂದ ಬಂದ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆಯನ್ನು ೫ಕ್ಕೆ ಏರಿಸಿತು.

ಭಾರತದ ಅತಿದೊಡ್ಡ ಆನ್‌ಲೈನ್ ಮಾರಾಟ ಜಾಲ ಕಂಪೆನಿ ಪ್ಲಿಫ್‌ಕಾರ್ಟ್ ಬೆಂಗಳೂರಿನ ಬೆಳಂದೂರಿನಲ್ಲಿರುವ ಕೇಂದ್ರ ಕಂಪೆನಿಯ ಎಲ್ಲಾ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚನೆ ನೀಡಿತು.

ಮಾರ್ಚ್ ೮ ರ ಭಾನುವಾರ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಐಸಿಸಿ ಮಹಿಳಾ ಟ್ವೆಂಟಿ-೨೦ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಿದ್ದ ಪ್ರೇಕ್ಷಕನಿಗೆ ಕೊರೊನಾ ವೈರಸ್ ಸೋಂಕು ತಗಲಿರುವ ಅಂಶ ಬೆಳಕಿಗೆ ಬಂದಿದೆ. ಅಭಿಮಾನಿಯು ಫೈನಲ್ ಪಂದ್ಯ ವೀಕ್ಷಿಸಲು ಬಂದಾಗ ಕೊರೊನಾ ವೈರಸ್ ಸೋಂಕು ತಗುಲಿರುವುದರಿಂದ ಇತರರಿಗೆ ಹಬ್ಬಿರಬಹುದೇ ಎಂಬ ಬಗ್ಗೆ ಆತಂಕ ಮನೆ ಮಾಡಿತು.

ಐಪಿಎಲ್ ಮೇಲೆ ಪರಿಣಾಮ: ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಭೀತಿಯ ಹಿನ್ನೆಲೆಯಲ್ಲಿ ಮುಂಬಯಿನಲ್ಲಿ ಐಪಿಎಲ್ ಟಿಕೆಟ್ ಮಾರಾಟಕ್ಕೆ ಮಹಾರಾಷ್ಟ್ರ ಸರಕಾರ ನಿಷೇಧ ಹೇರಿತು. ಮಾರ್ಚ್ ೧೪ರಂದು ಸಭೆ ಸೇರಲಿರುವ ಬಿಸಿಸಿಐ ಆಡಳಿತ ಮಂಡಳಿಯು ಮಾರ್ಚ್ ೧೯ರಂದು ಆರಂಭವಾಗಬೇಕಾಗಿರುವ ಐಪಿಎಲ್ ೨೦೨೦ನ್ನು ಆಯೋಜಿಸಬೇಕೋ ಬೇಡವೋ ಎಂಬುದರ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದೆ.

ಭಾರತದಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ ೭೩ಕ್ಕೆ ಏರಿಕೆಯಾಗಿರುವುದನ್ನು ಭಾರತದ ಆರೋಗ್ಯ ಸಚಿವಾಲಯ ಗುರುವಾರ ಖಚಿತಪಡಿಸಿತು. ಹೀಗಾಗಿ ಹೀಗಾಗಿ ದೇಶದಲ್ಲಿ ಆತಂಕ ಮತ್ತಷ್ಟು ಹೆಚ್ಚಿತು.

ಕೇರಳದಲ್ಲಿ ವೈರಸ್ ಸೋಂಕಿತ ೮೫ ವರ್ಷದ ವ್ಯಕ್ತಿಯೊಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿತು.

ಕೊರೊನಾ ವೈರಸ್ ಸೋಂಕು ಹರಡುತ್ತಿರುವುದರ ಪರಿಣಾಮವಾಗಿ ಚೀನಾದಿಂದ ಆಮದಾಗುತ್ತಿದ್ದ ರೇಷ್ಮೆಯಲ್ಲಿ ಕುಂಠಿತವಾಗಿದೆ. ಏಷ್ಯಾ ಖಂಡದಲ್ಲೇ ರೇಷ್ಮೆ ಉತ್ಪಾದನೆಯಲ್ಲಿ ಚೀನಾ ದೇಶಕ್ಕೆ ಮೊದಲ ಸ್ಥಾನವಿದೆ. ಎರಡನೇ ಸ್ಥಾನದಲ್ಲಿರುವ ಭಾರತದ ದೇಶೀಯ ರೇಷ್ಮೆಗೆ ಈಗ ಬೇಡಿಕೆ ಹೆಚ್ಚಿದ್ದು, ಚೀನಾ ರೇಷ್ಮೆ ಆಮದನ್ನು ಸಂಪೂರ್ಣ ನಿಲ್ಲಿಸಲು ಮನವಿ ಮಾಡಲಾಗಿದೆ.

ಚೀನಾ, ಹಾಂಕಾಂಗ್, ಕೊರಿಯಾ, ಜಪಾನ್, ಇಟಲಿ, ಥೈಲ್ಯಾಂಡ್, ಸಿಂಗಾಪುರ್, ಇರಾನ್, ಮಲೇಷ್ಯಾ, ಫ್ರಾನ್ಸ್, ಸ್ಪೇನ್ ಮತ್ತು ಜರ್ಮನಿ ದೇಶಗಳಿಂದ ಭಾರತಕ್ಕೆ ಬಂದಿರುವ ಎಲ್ಲಾ ಪ್ರಯಾಣಿಕರು ತಾವು ಬಂದ ದಿನದಿಂದ ಕೆಲ ದಿನಗಳವರೆಗೆ ತಮ್ಮ ಮನೆಗಳಲ್ಲಿ ಸ್ವಯಂ ದಿಗ್ಬಂಧನಲ್ಲಿ ಇರಬೇಕೆಂದು ದೇಶದ ಆರೋಗ್ಯ ಸಚಿವಾಲಯ ಟ್ವೀಟ್ ಮೂಲಕ ಆದೇಶ ನೀಡಿತು.

ಕುಸಿದ ಷೇರುಪೇಟೆ: ಈ ಮಧ್ಯೆ, ವಿಶ್ವ ಆರೋಗ್ಯ ಸಂಸ್ಥೆಯು ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಎಂಬುದಾಗಿ ಘೋಷಿಸಿದ್ದು, ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆಗಳು ಪಾತಾಳಕ್ಕೆ ಕುಸಿದವು.

ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ಷೇರು ಸೂಚ್ಯಂಕವು (ಸೆನ್ಸೆಕ್ಸ್) ೨,೭೦೭ ಅಂಕಗಳನ್ನು ಕಳೆದುಕೊಂಡು ೩೨,೯೦೯ ಅಂಕಗಳಿಗೆ ಕುಸಿಯಿತು. ದೆಹಲಿಯ ರಾಷ್ಟ್ರೀಯ ಷೇರುಪೇಟೆಯ ನಿಫ್ಟಿ ಸೂಚ್ಯಂಕದಲ್ಲಿ ೭೬೦ ಅಂಕ ಕುಸಿತವಾಗಿದ್ದು, ೯,೭೦೦ ಕ್ಕೂ ಬಂದು ತಲುಪಿತು. ಇದು ಷೇರು ಮಾರುಕಟ್ಟೆಯಲ್ಲಿ ಇಲ್ಲಿಯವರೆಗೆ ದಾಖಲಾದ ಅತ್ಯಂತ ದೊಡ್ಡ ಕುಸಿತವಾಗಿದೆ. ಈ ಚಾರಿತ್ರಿಕ ಕುಸಿತದ ಪರಿಣಾಮವಾಗಿ ಹೂಡಿಕೆದಾರರು ಕೆಲವೇ ಗಂಟೆಗಳಲ್ಲಿ ೧೧ ಲಕ್ಷ ಕೋಟಿ ರೂಪಾಯಿ ಕಳೆದುಕೊಂಡರು.

ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಕೂಡಾ ಕುಸಿದಿದ್ದು, ಹೂಡಿಕೆದಾರರನ್ನು ಆತಂಕದಲ್ಲಿ ತಳ್ಳಿದೆ.
ಅಮೆರಿಕಾದಲ್ಲಿ ಡೌ ಜೋನ್ಸ್ ಇಂಡಸ್ಟ್ರಿಯಲ್ ಸರಾಸರಿ ೨೦೦೮ರ ಆರ್ಥಿಕ ಹಿಂಜರಿತದ ನಂತರ ಮೊದಲ ಬಾರಿಗೆ ಭಾರಿ ಕುಸಿತಕ್ಕೆ ಒಳಗಾಯಿತು. ಬ್ರಿಟನ್ ಬಿಟ್ಟು ಎಲ್ಲಾ ಯುರೋಪ್ ದೇಶಗಳಿಗೆ ಪ್ರಯಾಣಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ೩೦ ದಿನಗಳ ನಿಷೇಧ ಹೇರಿದ ಬೆನ್ನಿಗೆ ಈ ಕುಸಿತ ದಾಖಲಾಯಿತು. ಇದೇ ರೀತಿಯ ಕುಸಿತ ಜಾಗತಿಕವಾಗಿ ಎಲ್ಲಾ ಷೇರು ಮಾರುಕಟ್ಟೆಗಳಲ್ಲೂ ಕಾಣಿಸಿಕೊಂಡಿತು.

ಷೇರು ಸೂಚ್ಯಂಕ ಕುಸಿತದಲ್ಲಿ ಯೆಸ್ ಬ್ಯಾಂಕ್ ಗರಿಷ್ಠ ನಷ್ಟ ಅನುಭವಿಸಿದ್ದು ಶೇಕಡಾ ೧೬ ರಷ್ಟು ಷೇರು ಬೆಲೆ ಕುಸಿತವಾಯಿತು. ಇದೇ ವೇಳೆ ರೂಪಾಯಿ ಮೌಲ್ಯ ೬೪ ಪೈಸೆಯಷ್ಟು ಕುಸಿತವಾಗಿದ್ದು ಪ್ರತಿ ಡಾಲರ್ ಎದುರು ೭೪.೨೮ ರೂಪಾಯಿಗೆ ಕುಸಿಯಿತು.

ಸಚಿವರ ವಿದೇಶ ಪಯಣಕ್ಕೆ ಕತ್ತರಿ: ಪ್ರಧಾನಿ ಮೋದಿ ಟ್ವೀಟ್
ಈ ಮಧ್ಯೆ, ಕೊರೋನಾವೈರಸ್ ವಿಚಾರದಲ್ಲಿ ಭಯಬೀಳಬೇಡಿ, ಆದರೆ ಎಚ್ಚರಿಕೆ ವಹಿಸಿ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದರು.

‘ಕೇಂದ್ರ ಸರ್ಕಾರದ ಯಾವ ಸಚಿವರೂ ಮುಂಬರುವ ದಿನಗಳಲ್ಲಿ ವಿದೇಶ ಪ್ರಯಾಣ ಮಾಡುವುದಿಲ್ಲ. ಅನಗತ್ಯ ಪ್ರವಾಸಗಳನ್ನು ನಿವಾರಿಸುವಂತೆ ನಾನು ಜನತೆಗೆ ಮನವಿ ಮಾಡುವೆ ಎಂದು ಪ್ರಧಾನಿ ಟ್ವೀಟ್ ಸಂದೇಶದಲ್ಲಿ ಕೋರಿದರು.

ದೊಡ್ಡ ಪ್ರಮಾಣದ ಸಭೆ, ಸಮಾರಂಭಗಳನ್ನು ನಿವಾರಿಸುವ ಮೂಲಕ ನಾವು ವೈರಸ್ ಹರಡುವಿಕೆಯನ್ನು ತಡೆಯಬಹುದು ಎಂದು ಸುರಕ್ಷತೆಯ ಖಾತರಿ ನೀಡಬಹುದು ಎಂದು ಅವರು ತಿಳಿಸಿದರು.

No comments:

Advertisement