ದೆಹಲಿಯಲ್ಲಿ ನೀಲಗಗನ, ಮಕಾಡೆ ಮಲಗಿತು ಮಾಲಿನ್ಯ
ನವದೆಹಲಿ: ದೇಶಾದ್ಯಂತ ಕೊರೋನಾ ವೈರಸ್ ಪ್ರಸರಣ ತಡೆಯಲು ಮಾರ್ಚ್ ೨೫ರಂದು ರಾಷ್ಟ್ರವ್ಯಾಪಿ ’ದಿಗ್ಬಂಧನ’ (ಲಾಕ್ ಡೌನ್) ಜಾರಿಯಾದ ಬಳಿಕ ದೆಹಲಿ -ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್ ಸಿಆರ್) ಅತ್ಯಂತ ಅಪರೂಪವಾದ ನೀಲಾಕಾಶವು ಕಂಡು ಬರುತ್ತಿದೆ. ’ದಿಗ್ಬಂಧನ’ ಬಳಿಕ ದೆಹಲಿಯ ಪರಿಸರ ಶುಭ್ರವಾಗಿರುವುದನ್ನು 2020 ಮಾರ್ಚ್ 28ರ ಶನಿವಾರ ಅಂಕಿ ಅಂಶಗಳು ಕೂಡಾ ಸಮರ್ಥಿಸಿದವು.
ವಿಜ್ಞಾನ ಮತ್ತು ಪರಿಸರ ಕೇಂದ್ರವು (ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ -ಸಿಎಸ್ಇ) ನಡೆಸಿರುವ ಹೊಸ ವಿಶ್ಲೇಷಣೆಯು ಬೆಳಗ್ಗೆ ಮತ್ತು ಸಂಜೆ ಉತ್ತುಂಗದಲ್ಲಿದ್ದ ಪಿಎಂ ೨.೫ (ಅತಿ ಸೂಕ್ಷ್ಮ ಮಾಲಿನ್ಯ ಕಣಗಳು) ಇದೀಗ ಮಕಾಡೆ ಮಲಗಿರುವುದನ್ನು ಮತ್ತು ಮುಖ್ಯವಾಗಿ ವಾಹನಗಳು ಮತ್ತು ಕೈಗಾರಿಕೆಗಳಿಂದ ಹೊರ ಸೂಸುವ ಸಾರಜನಕದ ಡೈಆಕ್ಸೈಡ್ (ನೈಟ್ರೋಜನ್ ಡೈ ಆಕ್ಸೈಡ್- ಎನ್ಒ೨) ಸಾಂದ್ರತೆಯ ಕಡಿತವು ಇನ್ನೂ ಹೆಚ್ಚು ಸ್ಪಷ್ಟವಾಗಿ ಗೋಚರಿಸಿರುವುದನ್ನು ತೋರಿಸಿತು.
ದೆಹಲಿ, ಗುರುಗ್ರಾಮ್, ಫರಿದಾಬಾದ್, ನೋಯ್ಡಾ ಮತ್ತು ಗಾಜಿಯಾಬಾದಿನಲ್ಲಿ ಪರಿಸರದ ವಿಶ್ಲೇಷಣೆಯನ್ನು ಸಿಎಸ್ಇ ನಡೆಸಿದ್ದು, ಅದು ಗಂಟೆಯ ಮಾಲಿನ್ಯದ ಪ್ರವೃತ್ತಿಯನ್ನು ಬೆಳಿಗ್ಗೆ ಮತ್ತು ಸಂಜೆ ಸಂಚಾರ ದಟ್ಟಣೆಯ ವೇಳೆಯಲ್ಲಿನ ಪರಿಸರಕ್ಕೆ ಹೋಲಿಸುವ ಮೂಲಕ ವಾಯುಮಾಲಿನ್ಯದ ಪ್ರಮಾಣವನ್ನು ಅಳತೆ ಮಾಡಿದೆ.
ಈಗ (ದಿಗ್ಬಂಧನ ಅವಧಿಯಲ್ಲಿ) ಈ ವೇಳೆಯಲ್ಲಿ ಸಂಚಾರ ದಟ್ಟಣೆ ಇಲ್ಲದೇ ಇರುವುದರಿಂದ ಅತಿ ಸೂಕ್ಷ್ಮ ಮಾಲಿನ್ಯ ಕಣಗಳ ಪ್ರಭಾವ ಶೂನ್ಯಗೊಂಡಿದೆ.
ವಿಷಕಾರಿ ವಾಹನ ಮಾಲಿನ್ಯವು ಪರಿಸರಕ್ಕೆ ಸೇರುವ ಪ್ರಮಾಣವನ್ನು ಅಧ್ಯಯನ ಮಾಡುವ ಮೂಲಕ ವಿಶ್ಲೇಷಣೆಯ ಪ್ರತಿ ಗಂಟೆಯ ಮಾಲಿನ್ಯ ಪ್ರವೃತ್ತಿಯನ್ನು ಸಿಎಸ್ಇ ಅಳತೆ ಮಾಡಿದೆ. ವಾಹನ ಸಂಚಾರ ದಟ್ಟಣೆ ಕಡಿಮೆಯಾದಾಗ ಗಂಟೆಯ ಮಾಲಿನ್ಯ ಪ್ರವೃತ್ತಿ ಕುಸಿಯುತ್ತದೆ. ನೈಟ್ರೋಜನ್ ಡೈ ಆಕ್ಸೈಡ್ ಪ್ರವೃತ್ತಿಗಳಲ್ಲಿ ಇದು ಸ್ಪಷ್ಟವಾಗಿ ಕಂಡು ಬಂದಿದೆ ಎಂದು ಶನಿವಾರ ಬಿಡುಗಡೆ ಮಾಡಲಾಗಿರುವ ವಿಶ್ಷೇಷಣೆ ತಿಳಿಸಿದೆ.
ಏತನ್ಮಧ್ಯೆ, ದೆಹಲಿಯ ಪ್ರಾದೇಶಿಕ ಹವಾಮಾನ ಮುನ್ಸೂಚನೆ ಕೇಂದ್ರವು ಏಪ್ರಿಲ್ನಲ್ಲಿ ದಾಖಲಾದ ಗರಿಷ್ಠ ತಾಪಮಾನದ ಐತಿಹಾಸಿಕ ದತ್ತಾಂಶವನ್ನು ಬಿಡುಗಡೆ ಮಾಡಿತು, ತಾಪಮಾನ ೧೯೯೪ ರಲ್ಲಿ ೩೯.೬ ಡಿಗ್ರಿ ಸಿ ಇದ್ದುದು ೨೦೧೦ ರಲ್ಲಿ ೪೩.೭ ಡಿಗ್ರಿ ಸಿಗೆ ಏರಿತ್ತು.
‘೧೯೯೨ ರಿಂದ ದತ್ತಾಂಶ ವಿಶ್ಲೇಷಣೆಯು ದೆಹಲಿಯಲ್ಲಿ ಗರಿಷ್ಠ ತಾಪಮಾನವು ಏಪ್ರಿಲ್ ೧೭ರಿಂದ ೨೦ರ ನಡುವಣ ಅವಧಿಯಲ್ಲಿ ೪೦ ಡಿಗ್ರಿ ಸಿ ತಲುಪುತ್ತದೆ ಎಂದು ತೋರಿಸುತ್ತದೆ. (ಸಾರ್ಸ್ ಕೋವ್ -೨) ವೈರಸ್ ಹರಡುವಿಕೆಯನ್ನು ಕಡಿಮೆ ಮಾಡುವಲ್ಲಿ ತಾಪಮಾನ ಮತ್ತು ತೇವಾಂಶವು ಪಾತ್ರ ವಹಿಸುವುದೇ ಎಂಬುದು ನಮಗೆ ಏಪ್ರಿಲ್ ತಿಂಗಳ ಪ್ರವೃತ್ತಿಗಳ ಅಧ್ಯಯನದಿಂದ ಸಾಧ್ಯವಾಗಲಿದೆ. ಆದರೆ ಜನರು ಮನೆಯೊಳಗೆ ಹವಾನಿಯಂತ್ರಣವನ್ನು ಬಳಸಿದರೆ ಪರಿಸ್ಥಿತಿ ಬೇರೆಯಾಗುತ್ತದೆ’ ಎಂದು ಆರ್ಡಬ್ಲ್ಯುಎಫ್ಸಿಯ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಹೇಳಿದರು.
ಈ ವಿಶ್ಲೇಷಣೆಗಾಗಿ ದೆಹಲಿಯ ಸಾಮಾನ್ಯ ದಿನಗಳಾದ ೨೦೨೦ರ ಮಾರ್ಚ್ ೧೮ ಮತ್ತು ೧೯, ದಿಗ್ಬಂಧನ (ಲಾಕ್ ಡೌನ್) ದಿನಗಳಾದ ೨೦೨೦ರ ಮಾರ್ಚ್ ೨೫ ಮತ್ತು ೨೬ ಹಾಗೂ ಜನತಾ ಕರ್ಫ್ಯೂ ಇದ್ದ ೨೦೨೦ರ ಮಾರ್ಚ್ ೨೨ರ ಸರಾಸರಿಯನ್ನು ಸಿಎಸ್ಇ ಪರಿಗಣಿಸಿತ್ತು.
No comments:
Post a Comment