Friday, June 19, 2020

ದೆಹಲಿ ಸಚಿವ ಸತ್ಯೇಂದರ್ ಜೈನ್ ಸ್ಥಿತಿ ಚಿಂತಾಜನಕ

ದೆಹಲಿ ಸಚಿವ ಸತ್ಯೇಂದರ್ ಜೈನ್ ಸ್ಥಿತಿ ಚಿಂತಾಜನಕ

ಪ್ಲಾಸ್ಮಾ ಥೆರೆಪಿ ಸಲುವಾಗಿ ಖಾಸಗಿ ಆಸ್ಪತ್ರೆಗೆ

ನವದೆಹಲಿ: ಕೋವಿಡ್ -೧೯ ಚಿಕಿತ್ಸೆಗಾಗಿ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಮಂಗಳವಾರ ದಾಖಲಾದ ದೆಹಲಿ ಸರ್ಕಾರದ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರಿಗೆ ನ್ಯುಮೋನಿಯಾ ಇರುವುದು ಪತ್ತೆಯಾಗಿದ್ದು, ಅವರನ್ನು 2020 ಜೂನ್ 19ರ ಶುಕ್ರವಾರ ದಕ್ಷಿಣ ದೆಹಲಿಯ ಸಾಕೇತ್ ಮ್ಯಾಕ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಗೆ ಸ್ಥಳಾಂತರಿಸಲಾಯಿತು.

ಜೈನ್ ಅವರ ಸ್ಥಿತಿ ಗಂಭೀರವಾಗಿರುವುದರಿಂದ ಅವರಿಗೆ ಕೋವಿಡ್-೧೯ ಸಲುವಾಗಿ ಪ್ಲಾಸ್ಮಾ ಚಿಕಿತ್ಸೆಯನ್ನು ನೀಡಲಾಗುವುದು ಎಂದು ಮೂಲಗಳು ಹೇಳಿವೆ.

೫೫ ವರ್ಷದ ಸಚಿವರ ಆಮ್ಲಜನಕದ ಸ್ಯಾಚುರೇಶನ್ ಮಟ್ಟ ಇಳಿಮುಖವಾಗಿರುವುದರಿಂದ ಅವರನ್ನು ಆಮ್ಲಜನಕದ ಬೆಂಬಲದಲ್ಲಿ ಇಡಲಾಗಿದೆ.

"ಕೋವಿಡ್ -೧೯ ಸೋಂಕಿನೊಂದಿಗೆ ಹೋರಾಡುತ್ತಿರುವ ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತಿದ್ದೇನೆ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟ್ವೀಟ್ ಮೂಲಕ ಹಾರೈಸಿದರು.

ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಸಹ ಜೈನ್ ಚೇತರಿಕೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.

ಅತಿಯಾದ ಜ್ವರದಿಂದ ಬಳಲುತ್ತಿದ್ದುದರ ಜೊತೆಗೆ ದಿಢೀರನೆ ಆಮ್ಲಜನಕದ ಮಟ್ಟದಲ್ಲಿ ಕುಸಿತದಿಂದ ಬಳಲಿದ  ಜೈನ್ ಅವರನ್ನು ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ (ಆರ್ಜಿಎಸ್‌ಎಸ್‌ಎಚ್) ದಾಖಲಿಸಿದ ಒಂದು ದಿನದ ನಂತರ ಬುಧವಾರ ಅವರಲ್ಲಿ ಕೊರೋನಾಸೋಂಕು ದೃಢಪಟ್ಟಿತ್ತು.

ಕಳೆದ ಎರಡು ದಿನಗಳಲ್ಲಿ ಅವರೊಂದಿಗೆ ಸಂವಹನ ನಡೆಸಿದ ಜನರನ್ನು ವೈದ್ಯರ ಸಲಹೆಯಂತೆ ನಿರ್ಬಂಧಿಸಲಾಗುವುದು ಎಂದು ದೆಹಲಿ ಸರ್ಕಾರದ ಮೂಲಗಳು ತಿಳಿಸಿವೆ.

ಭಾನುವಾರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ  ಕೊರೊನಾವೈರಸ್ ಪರಿಸ್ಥಿತಿ ಕುರಿತು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಜೈನ್ ಭಾಗವಹಿಸಿದ್ದರು, ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಕೂಡಾ ಸಭೆಯಲ್ಲಿ ಪಾಲ್ಗೊಂಡಿದ್ದರು.

No comments:

Advertisement