Friday, June 12, 2020

ಭಾರತೀಯ ಮೂಲದ ಮಣ್ಣು ವಿಜ್ಞಾನಿಗೆ ವಿಶ್ವ ಆಹಾರ ಪ್ರಶಸ್ತಿ

ಭಾರತೀಯ ಮೂಲದ ಮಣ್ಣು ವಿಜ್ಞಾನಿಗೆ ವಿಶ್ವ ಆಹಾರ ಪ್ರಶಸ್ತಿ

ವಾಷಿಂಗ್ಟನ್: ‘ಅನ್ನ ನೀಡುವ ಭೂಮಿ ತಾಯಿಗೆ ಮರಳಿ ಸಾರವ ನೀಡು ಎಂಬ ಸಿದ್ಧಾಂತ ಪ್ರತಿಪಾದಿಸುವ ಭಾರತೀಯ ಮೂಲದ ಅಮೆರಿಕದ ಮಣ್ಣು ವಿಜ್ಞಾನಿ ಡಾ. ರತನ್ ಲಾಲ್ (೭೫) ಅವರು ೨೦೨೦ರ ಪ್ರತಿಷ್ಠಿತವಿಶ್ವ ಆಹಾರ ಪುರಸ್ಕಾರಕ್ಕೆ ೨೦೨೦ ಜೂನ್ ೧೨ರ ಶುಕ್ರವಾರ ಪಾತ್ರರಾದರು.

ಕೃಷಿ ಕ್ಷೇತ್ರದಲ್ಲಿ ಮಾಡಿರುವ ಜೀವಮಾನದ ಸಾಧನೆ ಪರಿಗಣಿಸಿ ನೀಡುವ ಪ್ರಶಸ್ತಿಯು ನೊಬೆಲ್ ಪುರಸ್ಕಾರಕ್ಕೆ ಸಮವಾಗಿದ್ದು, ೧೮.೯೭ ಕೋಟಿ ರೂ. (೨೫೦,೦೦೦ ಡಾಲರ್) ನಗದು ಬಹುಮಾನ ಹೊಂದಿದೆ.

ಕೃಷಿ ಭೂಮಿಯ ಕುರಿತು ಐದು ದಶಕಗಳಿಂದ ಸಂಶೋಧನೆ ನಡೆಸುತ್ತಿರುವ ರತನ್ ಲಾಲ್ ಅವರು, ಮಣ್ಣಿನ ಸಾರ ಹೆಚ್ಚಿಸುವ ಹಲವು ತಂತ್ರಗಳನ್ನು ಪರಿಚಯಿಸಿದ್ದರು. ಜಗತ್ತಿನಾದ್ಯಂತ ೫೦ ಕೋಟಿ ರೈತರು ಇವರ ಸಂಶೋಧನೆಯ ಫಲವನ್ನು ಉಂಡಿದ್ದಾರೆ ಎಂದುವಲ್ಡ್ ಫುಡ್ ಪ್ರೈಸ್ ಫೌಂಡೇಷನ್ ಹೇಳಿತು. ಫೌಂಡೇಷನ್ನಿನ ಕೇಂದ್ರ ಕಚೇರಿ ಅಮೆರಿಕದ ಅಯೊವಾದಲ್ಲಿದೆ.

ಓಹಿಯೊ ಸ್ಟೇಟ್ ಯೂನಿವರ್ಸಿಟಿಯ ಕಾಲೇಜ್ ಆಫ್ ಫುಡ್, ಅಗ್ರಿಕಲ್ಚರ್ ಆಂಡ್ ಎನ್ವಿರಾನ್ಮೆಂಟಲ್ ಸೈನ್ಸನ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ರತನ್ ಲಾಲ್ ಅವರು ತಮಗೆ ದೊರೆತ ನಗದು ಬಹುಮಾನವನ್ನು ಮಣ್ಣಿನ ಕುರಿತ ಭವಿಷ್ಯದ ಸಂಶೋಧನಾ ಕಾರ್ಯಕ್ಕೆ ದಾನ ಮಾಡುವುದಾಗಿ ಘೋಷಿಸಿದರು.

ರೈತರು ತಾವು ಬೆಳೆದ ಬೆಳೆಯನ್ನು ಸಂಪೂರ್ಣವಾಗಿ ಕಟಾವು ಮಾಡದೆ ಹಾಗೆಯೇ ಭೂಮಿಯಲ್ಲಿ ಬಿಡುವ ಮೂಲಕ ಗೊಬ್ಬರವನ್ನಾಗಿಸುವ ತಂತ್ರವನ್ನು ರತನ್ಲಾಲ್ ಅವರು ಪ್ರತಿಪಾದಿಸುತ್ತಾರೆ. ಅಲ್ಲದೆ, ಹೊಲದಲ್ಲಿ ಬೆಳೆ ಪಡೆದ ಬಳಿಕ ಉಳಿದ ಪೈರಿಗೆ ಬೆಂಕಿ ಹಚ್ಚುವ ಪದ್ಧತಿಯನ್ನು ತಕ್ಷಣದಲ್ಲೇ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸುತ್ತಾರೆ.

No comments:

Advertisement