ಕೊರೋನಾಕ್ಕೆ ದೇಶೀ ಲಸಿಕೆ ಅಭಿವೃದ್ಧಿಗೆ ವೇಗ
೧೦೦೦ ಜನರ ಮೇಲೆ ಕ್ಲಿನಿಕಲ್ ಅಧ್ಯಯನ
ನವದೆಹಲಿ: ಕೋವಿಡ್-೧೯ ಸಾಂಕ್ರಾಮಿಕ ಸೋಂಕಿಗೆ ಲಸಿಕೆ ನೀಡಲು ಮಾನವ ಸ್ವಯಂಸೇವಕರನ್ನು ಒಳಗೊಂಡ ಕ್ಲಿನಿಕಲ್ ಅಧ್ಯಯನವು ಪ್ರಸ್ತುತ ಭಾರತದಲ್ಲಿ ನಡೆಯುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮಹಾನಿರ್ದೇಶಕ ಬಲರಾಮ್ ಭಾರ್ಗವ 2020 ಜುಲೈ 14ರ ಮಂಗಳವಾರ ತಿಳಿಸಿದರು.
ಪ್ರಾಣಿಗಳಲ್ಲಿ ಯಶಸ್ವಿ ವಿಷತ್ವ ಅಧ್ಯಯನಗಳ ನಂತರ, ಕಣದಲ್ಲಿದ್ದ ಎರಡು ಲಸಿಕೆಗಳನ್ನು ಮಾನವರ ಮೇಲೆ ಕ್ಲಿನಿಕಲ್ ಅಧ್ಯಯನಕ್ಕೆ ಆಯ್ಕೆ ಮಾಡಲಾಗಿದೆ.
ಭಾರತದಲ್ಲಿ ಮಂಗಳವಾರ ಕೋವಿಡ್ ಸೋಂಕಿತರ ಸಂಖ್ಯೆ ಸುಮಾರು ೯ ಲಕ್ಷ ದಾಟಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿಸಂಖ್ಯೆಗಳ ಪ್ರಕಾರ ದೇಶದ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ ೯,೧೧,೬೨೯ ಆಗಿದ್ದು, ಸಾವನ್ನಪ್ಪಿದವರ ಸಂಖ್ಯೆ ೨೩,೭೮೮ಕ್ಕೆ ಏರಿದೆ. ಇದೇ ವೇಳೆಗೆ ಸಂಪೂರ್ಣ ಗುಣಮುಖರಾಗಿ ಚೇತರಿಸಿದವರ ಸಂಖ್ಯೆ ೫,೭೩,೯೫೩ಕ್ಕೆ ಏರಿದೆ.
‘ಭಾರತದಲ್ಲಿ ದೇಶೀಯವಾಗಿ ನಿರ್ಮಿಸಲಾಗಿರುವ ಎರಡು ಲಸಿಕೆಗಳು ಇವೆ. ಇಲಿಗಳು, ಹೆಗ್ಗಣಗಳು ಮತ್ತು ಮೊಲಗಳಲ್ಲಿ ಯಶಸ್ವಿ ವಿಷತ್ವ ಅಧ್ಯಯನ ನಡೆಸಲಾಗಿದೆ. ಭಾರತದ ಔಷಧ ನಿಯಂತ್ರಕ ಮಹಾ ನಿರ್ದೇಶಕರಿಗೆ (ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್) ಈ ಬಗ್ಗೆ ಮಾಹಿತಿಯನ್ನು ಸಲ್ಲಿಸಲಾಗಿದೆ, ಈ ತಿಂಗಳ ಆರಂಭದಲ್ಲಿ ಈ ಎರಡು ಲಸಿಕೆಗಳ ಆರಂಭಿಕ ಹಂತದ ಮಾನವ ಪ್ರಯೋಗಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಗಿದೆ’ ಎಂದು ಭಾರ್ಗವ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
’ಮಾನವ ಸ್ವಯಂ ಸೇವಕರ ಮೇಲೆ ಈ ಎರಡು ಲಸಿಕೆಗಳ ಪ್ರಯೋಗಕ್ಕೆ ತಾಣಗಳನ್ನು ಸಜ್ಜುಗೊಳಿಸಲಾಗಿದೆ. ವಿವಿಧ ತಾಣಗಳಲ್ಲಿ ಸುಮಾರು ೧೦೦೦ ಮಾನವ ಸ್ವಯಂ ಸೇವಕರನ್ನು ಕ್ಲಿನಿಕಲ್ ಅಧ್ಯಯನಕ್ಕೆ ಒಳಪಡಿಸಲಾಗುತ್ತಿದೆ’ ಎಂದು ಅವರು ನುಡಿದರು.
ಅಮೆರಿಕ, ಇಂಗ್ಲೆಂಡ್ ಮತ್ತು ರಷ್ಯಾದಂತಹ ದೇಶಗಳು ಕೂಡಾ ತಮ್ಮ ಲಸಿಕೆಗಳನ್ನು ಕ್ಷಿಪ್ರವಾಗಿ ಪರೀಕ್ಷೆಗೆ ಒಳಪಡಿಸುತ್ತಿವೆ ಎಂದು ಐಸಿಎಂಆರ್ ಮುಖ್ಯಸ್ಥರು ಹೇಳಿದರು.
"ರಷ್ಯಾ ದೇಶವು ಲಸಿಕೆಯನ್ನು ಅತ್ಯಂತ ವೇಗವಾಗಿ ಪತ್ತೆಹಚ್ಚಿದೆ, ಅದು ಅದರ ಆರಂಭಿಕ ಹಂತಗಳಲ್ಲಿ ಯಶಸ್ವಿಯಾಗಿದೆ. ಅಮೆರಿಕವು ಎರಡು ಲಸಿಕೆಗಳನ್ನು ಗುರುತಿಸಿದೆ. ಆಕ್ಸ್‌ಫರ್ಡ್ ತಯಾರಿಸಿದ ಲಸಿಕೆಯನ್ನು ಹೇಗೆ ತ್ವರಿತವಾಗಿ ಪರೀಕ್ಷಿಸಬಹುದು ಎಂದು ಇಂಗ್ಲೆಂಡ್ ಯೋಚಿಸುತ್ತಿದೆ’ ಎಂದು ಭಾರ್ಗವ ನುಡಿದರು.
ಮೂರು ತಿಂಗಳ ಕ್ಲಿನಿಕಲ್ ಪ್ರಯೋಗಗಳನ್ನು ಐದು ವಾರಗಳಿಗೆ ಸಂಕುಚಿತಗೊಳಿಸುವ ಮೂಲಕ ಆಗಸ್ಟ್ ಮಧ್ಯದ ವೇಳೆಗೆ ಕೋವಿಡ್-೧೯ ಲಸಿಕೆ ಬಿಡುಗಡೆ ಮಾಡಲು ಯೋಜಿಸಲಾಗಿದೆ ಎಂದು ಐಸಿಎಂಆರ್ ಈ ತಿಂಗಳ ಆದಿಯಲ್ಲಿ ಹೇಳಿ ತೀವ್ರ ವಿವಾದಕ್ಕೆ ಗುರಿಯಾಗಿತ್ತು.
ಆದರೆ, ಸಂಭಾವ್ಯ ಕೋವಿಡ್ -೧೯ ಲಸಿಕೆಯ ಅಭಿವೃದ್ಧಿಯನ್ನು ವೇಗಗೊಳಿಸಲು ಮಾತ್ರ ಪ್ರಯತ್ನಿಸಲಾಗಿದೆ ಎಂದು ಅದು ನಂತರ ಸ್ಪಷ್ಟಪಡಿಸಿತ್ತು.
No comments:
Post a Comment