ಪಾಕ್ ಜೊತೆ ಸಾಮಾನ್ಯ ಸಂಬಂಧ ಕಷ್ಟ: ಜೈಶಂಕರ್
ನವದೆಹಲಿ: ಭಯೋತ್ಪಾದನೆಯನ್ನು ಪಾಕಿಸ್ತಾನ ಸರ್ಕಾರವು ತಾನು ಸಮರ್ಥಿಸುವ ನೀತಿಯೆಂದು ಸಾರ್ವಜನಿಕವಾಗಿ ಅಂಗೀಕರಿಸಿದೆ, ಹೀಗಾಗಿ ಪಾಕಿಸ್ತಾನದ ಜೊತೆ ಸಾಮಾನ್ಯ ಸಂಬಂಧವನ್ನು ಮುಂದುವರೆಸುವುದು ತುಂಬಾ ಕಷ್ಟಕರವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ 2020 ಅಕ್ಟೋಬರ್ 16ರ ಶುಕ್ರವಾರ ಹೇಳಿದರು.
ಏಷ್ಯಾ ಸೊಸೈಟಿ ಆಯೋಜಿಸಿದ್ದ ಆನ್ಲೈನ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೈಶಂಕರ್, "ಪಾಕಿಸ್ತಾನದ ಜೊತೆ ನಾವು ಹೇಗೆ ಇದ್ದೇವೆ ಎಂಬುದು ನಿಮ್ಮ ಪ್ರಶ್ನೆ. ಪಾಕಿಸ್ತಾನದಿಂದ ಭಯೋತ್ಪಾದನೆ ಮುಂದುವರೆದಿದೆ. ಭಯೋತ್ಪಾದನೆ ತಾವು ಸಮರ್ಥಿಸುವ ನೀತಿಯೆಂದು ಪಾಕಿಸ್ತಾನ ಸರ್ಕಾರವು ಸಾರ್ವಜನಿಕವಾಗಿ ಅಂಗೀಕರಿಸಿದೆ. ಆದ್ದರಿಂದ ಅವರೊಂದಿಗೆ ಸಾಮಾನ್ಯ ಸಂಬಂಧವನ್ನು ನಡೆಸುವುದು ತುಂಬಾ ಕಷ್ಟಕರವಾಗಿದೆ’ ಎಂದು ಹೇಳಿದರು.
’ಇದು ಭಯೋತ್ಪಾದನೆ ವಿಚಾರ ಮಾತ್ರವಲ್ಲ, ಪಾಕಿಸ್ತಾನವು ಭಾರತದೊಂದಿಗೆ ಸಾಮಾನ್ಯ ವ್ಯಾಪಾರ ಮಾಡುವುದಿಲ್ಲ ಮತ್ತು ಭಾರvಕ್ಕೆ ಅತ್ಯಂತ ಆಪ್ತ ರಾಷ್ಟ್ರ (ಎಂಎಫ್ಎನ್-ಮೋಸ್ಟ್ ಫೇವರ್ಡ್ ನೇಷನ್) ಸ್ಥಾನಮಾನವನ್ನು ನೀಡಿಲ್ಲ ಎಂದು ಜೈಶಂಕರ್ ಹೇಳಿದರು.
"ನಮಲ್ಲಿ ಸಾಮಾನ್ಯ ವೀಸಾ ಸಂಬಂಧವೂ ಇಲ್ಲ, ಈ ವಿಚಾರದಲ್ಲಿ ಅವರು ಬಹಳ ನಿರ್ಬಂಧಗಳನ್ನು ಹೇರಿದ್ದಾರೆ. ಅವರು ಭಾರತ ಮತ್ತು ಅಫ್ಘಾನಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ಸಂಪರ್ಕವನ್ನು ನಿರ್ಬಂಧಿಸಿದ್ದಾರೆ’ ಎಂದು ಅವರು ಹೇಳಿದರು.
’ಸಾಮಾನ್ಯ ನೆರೆಹೊರೆಯವರು ವೀಸಾ ಮತ್ತು ವ್ಯಾಪಾರ ಸಂಬಂಧ ಹೊಂದಿರುತ್ತಾರೆ. ಅವರು ನಿಮಗೆ ಸಂಪರ್ಕವನ್ನು ಒದಗಿಸುತ್ತಾರೆ ಮತ್ತು ಮುಖ್ಯವಾಗಿ ಅವರು ಭಯೋತ್ಪಾದನೆಗೆ ಇಂಬು ಕೊಡುವುದಿಲ್ಲ’ ಎಂದು ಜೈಶಂಕರ್ ನುಡಿದರು.
"ನಾವು ಈ ಸಮಸ್ಯೆಯನ್ನು ಪರಿಹರಿಸುವ ತನಕ, ಈ ವಿಶಿಷ್ಟ ನೆರೆಹೊರೆಯವರೊಂದಿಗೆ ನೀವು ಹೇಗೆ ಸಾಮಾನ್ಯ ಸಂಬಂಧವನ್ನು ಹೊಂದಿರುತ್ತೀರಿ ಎಂಬುದು ನಮ್ಮ ವಿದೇಶಾಂಗ ನೀತಿಗೆ ಬಹಳ ತೊಂದರೆ ಉಂಟು ಮಾಡುವ ಸವಾಲು ಆಗಿದೆ’ ಎಂದು ಅವರು ಹೇಳಿದರು.
ಕಳೆದ ವರ್ಷ ವಿಭಜನೆಯಾದ ನಂತರ ಕಾಶ್ಮೀರದ ಬೆಳವಣಿಗೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಈಗ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮಾರ್ಪಟ್ಟಿದೆ. "ಭಾರತದ ಬಾಹ್ಯ ಗಡಿಗಳು ಬದಲಾಗಿಲ್ಲ. ಭಾರತದ ಬಾಹ್ಯ ಗಡಿಗಳು ಐದು ವರ್ಷಗಳ ಹಿಂದೆ ಅಥವಾ ೨೦ ವರ್ಷಗಳ ಹಿಂದೆ, ೪೦ ವರ್ಷಗಳ ಹಿಂದೆ ಇದ್ದಂತೆಯೇ ಈಗಲೂ ಇವೆ’ ಎಂದು ಅವರು ಹೇಳಿದರು.
"ನಮ್ಮ ನೆರೆಹೊರೆಯವರಿಗೆ ಸಂಬಂಧಿಸಿದಂತೆ, ಇದು ನಮ್ಮ ಆಂತರಿಕ ವಿಷಯವಾಗಿದೆ. ನಮ್ಮ ದೇಶವು ತನ್ನ ಆಡಳಿತಾತ್ಮಕ ನ್ಯಾಯವ್ಯಾಪ್ತಿಗಳನ್ನು ಬದಲಾಯಿಸುವ ಹಕ್ಕನ್ನು ಕಾಯ್ದಿರಿಸಿದೆ. ಚೀನಾದಂತಹ ದೇಶವು ತನ್ನ ಪ್ರಾಂತ್ಯಗಳ ಗಡಿಗಳನ್ನು ಸಹ ಬದಲಾಯಿಸಿದೆ ಮತ್ತು ಇತರ ದೇಶಗಳು ಇದನ್ನು ಮಾಡುತ್ತವೆ ಎಂದು ನನಗೆ ಖಾತ್ರಿಯಿದೆ’ ಎಂದು ಅವರು ಹೇಳಿದರು.
"ನಿಮ್ಮ ಬಾಹ್ಯ ಗಡಿಗಳು ಬದಲಾದರೆ ಮಾತ್ರ ನೆರೆಹೊರೆಯವರ ಮೇಲೆ ಪರಿಣಾಮವಾಗುತ್ತದೆ. ಈ ಸಂದರ್ಭದಲ್ಲಿ ಅದು ಸಂಭವಿಸಿಲ್ಲ" ಎಂದು ಅವರು ಹೇಳಿದರು.
ನೆರೆಯ ದೇಶ ಮೂಲದ ಭಯೋತ್ಪಾದಕ ಗುಂಪುಗಳು ೨೦೧೬ ರಲ್ಲಿ ಪಠಾಣ್ಕೋಟ್ ವಾಯುಪಡೆಯ ನೆಲೆಯ ಮೇಲೆ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳ ಮೇಲೆ ಪರಿಣಾಮಗಳಾದವು. ಉರಿಯ ಭಾರತೀಯ ಸೇನಾ ಶಿಬಿರದಲ್ಲಿ ಒಂದು ದಾಳಿ ಸೇರಿದಂತೆ ನಂತರದ ದಾಳಿಗಳು ಸಂಬಂಧವನ್ನು ಮತ್ತಷ್ಟು ಹದಗೆಡಿಸಿದವು. ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಕಳೆದ ವರ್ಷ ಫೆಬ್ರವರಿ ೨೬ ರಂದು ಪಾಕಿಸ್ತಾನದೊಳಗಿನ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ತರಬೇತಿ ಶಿಬಿರವನ್ನು ಭಾರತದ ಯುದ್ಧ ವಿಮಾನಗಳು ನಾಶಪಡಿಸಿದ ನಂತರ ಈ ಸಂಬಂಧ ಮತ್ತಷ್ಟು ಕುಸಿಯಿತು, ಇದರಲ್ಲಿ ೪೦ ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಅಧಿಕಾರವನ್ನು ಹಿಂತೆಗೆದುಕೊಂಡದ್ದು ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ್ದು ಪಾಕಿಸ್ತಾನದಿಂದ ಬಲವಾದ ಪ್ರತಿಕ್ರಿಯೆಗೆ ಕಾರಣವಾಗಿತ್ತು. ಈ ವಿಚಾರವಾಗಿ ಅಂತಾರಾಷ್ಟ್ರೀಯ ಬೆಂಬಲ ಪಡೆಯಲು ಪಾಕಿಸ್ತಾನ ಯತ್ನಿಸಿತು. ಆದರೆ ತನ್ನ ಯತ್ನದಲ್ಲಿ ವಿಫಲಗೊಂಡಿತ್ತು.
No comments:
Post a Comment