Saturday, January 2, 2021

ಪಾಕಿಸ್ತಾನದಲ್ಲಿ ಜಾಕಿ-ಉರ್-ರಹಮಾನ್ ಲಖ್ವಿ ಬಂಧನ

 ಪಾಕಿಸ್ತಾನದಲ್ಲಿ  ಜಾಕಿ-ಉರ್-ರಹಮಾನ್ ಲಖ್ವಿ ಬಂಧನ

ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಮತ್ತು ಲಷ್ಕರ್--ತೈಬಾ (ಎಲ್‌ಇಟಿ) ಕಾರ್ಯಾಚರಣೆಯ ಕಮಾಂಡರ್ ಜಾಕಿ-ಉರ್-ರೆಹಮಾನ್ ಲಖ್ವಿಯನ್ನು ಭಯೋತ್ಪಾದಕ ಹಣಕಾಸು ಆರೋಪದ ಮೇಲೆ ಪಾಕಿಸ್ತಾನದಲ್ಲಿ 2021 ಜನವರಿ 02ರ ಶನಿವಾರ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮುಂಬೈ ದಾಳಿ ಪ್ರಕರಣದಲ್ಲಿ ೨೦೧೫ ರಿಂದ ಜಾಮೀನಿನಲ್ಲಿದ್ದ ಲಖ್ವಿಯನ್ನು ಪಂಜಾಬ್ ಪ್ರಾಂತ್ಯದ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಬಂಧಿಸಿದೆ.

ಆದರೆ, ಆತನ ಬಂಧನದ ಸ್ಥಳವನ್ನು ಸಿಟಿಡಿ ಬಹಿರಂಗಪಡಿಸಿಲ್ಲ.

"ಸಿಟಿಡಿ ಪಂಜಾಬ್ ನಡೆಸಿದ ಗುಪ್ತಚರ ಸುಳಿವು ಆಧರಿತ ಕಾರ್ಯಾಚರಣೆಯ ನಂತರ, ನಿಷೇಧಿತ ಸಂಸ್ಥೆ ಎಲ್‌ಇಟಿ ನಾಯಕ ಜಾಕಿ-ಉರ್-ರೆಹಮಾನ್ ಲಖ್ವಿಯನ್ನು ಭಯೋತ್ಪಾದನೆ ಹಣಕಾಸು ಆರೋಪದ ಮೇಲೆ ಬಂಧಿಸಲಾಯಿತು" ಎಂದು ಸಿಟಿಡಿ ಹೇಳಿತು.

ಲಾಹೋರಿನ ಪೊಲೀಸ್ ಠಾಣೆಯಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣವನ್ನು ೬೧ ವರ್ಷದ ಲಖ್ವಿ ವಿರುದ್ಧ ದಾಖಲಿಸಲಾಗಿದೆ ಎಂದು ಅದು ತಿಳಿಸಿದೆ.

"ಲಖ್ವಿ ಔಷಧಾಲಯವನ್ನು ನಡೆಸುತ್ತಿದ್ದು, ಇಲ್ಲಿನ ಹಣವನ್ನು ಭಯೋತ್ಪಾದನೆಗೆ ಹಣಕಾಸು ನೆರವಿಗಾಗಿ ಬಳಸಿದ್ದಾನೆ ಎಂದು ಆಪಾದಿಸಲಾಗಿದೆ. ಲಖ್ವಿ ಜೊತೆಗೆ ಇತರರು ಸಹ ಔಷಧಾಲಯದಿಂದ ಹಣವನ್ನು ಸಂಗ್ರಹಿಸಿದರು ಅದನ್ನು ಮತ್ತಷ್ಟು ಭಯೋತ್ಪಾದಗೆ ಹಣಕಾಸು ನೆರವು ಒದಗಿಸಲು ಬಳಸಿದ್ದಾರೆ. ಅವರು ಹಣವನ್ನು ವೈಯಕ್ತಿಕ ಖರ್ಚುಗಳಿಗೂ ಬಳಸಿದ್ದಾರೆ ಎಂದು ಸಿಟಿಡಿ ಹೇಳಿದೆ.

ಲಖ್ವಿಯು ನಿಷೇಧಿತ ಸಂಸ್ಥೆ ಎಲ್‌ಇಟಿಗೆ ಸೇರಿರುವುದಲ್ಲದೆ, ವಿಶ್ವ ಸಂಸ್ಥೆಯು ಭಯೋತ್ಪಾದಕ ಎಂಬುದಾಗಿ ಘೋಷಿಸಿದ ವ್ಯಕ್ತಿ ಕೂಡಾ ಆಗಿದ್ದಾನೆ ಎಂದು ಸಿಟಿಡಿ ಹೇಳಿದೆ.

"ಲಖ್ವಿ ವಿಚಾರಣೆಯನ್ನು ಲಾಹೋರಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ಮುಂದೆ ನಡೆಸಲಾಗುವುದು ಎಂದೂ ಸಿಟಿಡಿ ಹೇಳಿದೆ.

No comments:

Advertisement