Thursday, March 26, 2020

ಕೊರೋನಾದಿಂದ ರಕ್ಷಣೆ ಹೇಗಣ್ಣ? ಇಲ್ಲಿದೆ ಜಾಗೃತಿ ಯಕ್ಷಗಾನ

ಕೊರೋನಾದಿಂದ ರಕ್ಷಣೆ ಹೇಗಣ್ಣ? ಇಲ್ಲಿದೆ  ಜಾಗೃತಿ  ಯಕ್ಷಗಾನ

ಬೆಂಗಳೂರು: ಮಾರಕ ಕೊರೋನಾ ಮನುಕುಲಕ್ಕೆ ದುಸ್ವಪ್ನವಾಗಿ ಕಾಡುತ್ತಿದೆ. ಈ ಮಾರಕ ಸೋಂಕಿಗೆ ವಿಶ್ವದಾದ್ಯಂತ ೨೦,೦೦೦ಕ್ಕಿಂತಲೂ ಹೆಚ್ಚು ಮಂದಿ ಅಸುನೀಗಿದ್ದಾರೆ. ಸೋಂಕಿಗೆ ಒಳಗಾಗಿ ಏಕಾಂಗಿವಾಸವನ್ನು ಅನುಭವಿಸುತ್ತಿರುವವರ ಸಂಖ್ಯೆ ವಿಶ್ವದಲ್ಲಿ ೫ ಲಕ್ಷದ ಹತ್ತಿರ ಬಂದಿದೆ. ಚೀನಾ, ಇಟಲಿ, ಇರಾನ್, ಅಮೆರಿಕ, ಕೊರಿಯಾ ಸೇರಿದಂತೆ ಎಲ್ಲೆಡೆಗಳಲ್ಲೂ ಸಹಸ್ರಾರು ಮಂದಿ ವ್ಯಾಧಿಯ ಕಬಂಧಬಾಹುವಿಗೆ ಸಿಲುಕಿದ್ದಾರೆ. ಭಾರತದಲ್ಲೂ ಕೊರೋನಾ ತನ್ನ ಪ್ರಭಾವವನ್ನು ಬೀರಿದೆ.

ಇಡೀ ಜಗತ್ತೇ ‘ಕೊರೋನಾಸುರನ ಅಬ್ಬರಕ್ಕೆ ನಡುಗುತ್ತಿದೆ. ದೇಶಗಳಷ್ಟೇ ಅಲ್ಲ, ದೇಶಗಳ ಒಳಗೂ ರಾಜ್ಯ ರಾಜ್ಯಗಳ ಮಧ್ಯೆ, ಪಟ್ಟಣ-ಪಟ್ಟಣಗಳ ಮಧ್ಯೆ, ನಗರ ?ಗ್ರಾಮಗಳ ಮಧ್ಯೆ ರಸ್ತೆಗಳೇ ಮುಚ್ಚಲ್ಪಡುತ್ತಿವೆ. ಗಿಜಿಗುಡುವ ಮಹಾನಗರಗಳ ರಸ್ತೆಗಳೆಲ್ಲ ನಿರ್ಜನವಾಗಿ ಭಣಗುಟ್ಟುತ್ತಿವೆ. ಎಲ್ಲ ವಾಣಿಜ್ಯ ಕೇಂದ್ರಗಳು ಸ್ಥಗಿತಗೊಂಡಿವೆ. ವಿಮಾನಗಳು, ಬಸ್ಸುಗಳು, ರೈಲುಗಳು, ಹಡಗುಗಳ ಸಂಚಾರ ಸ್ಥಗಿತಗೊಂಡಿವೆ. ದೇವಸ್ಥಾನ, ಇಗರ್ಜಿ, ಮಸೀದಿಗಳಲ್ಲೂ ಅರ್ಚನೆ, ಪ್ರಾರ್ಥನೆ, ನಮಾಜ್ ಗಳು ನಿಂತುಹೋಗಿವೆ.

ವೈದ್ಯರು, ವಿಜ್ಞಾನಿಗಳು, ಈ ವ್ಯಾಧಿಗೆ ಮದ್ದು ಕಂಡು ಹಿಡಿಯಲು ನಿರಂತರ ಶ್ರಮಿಸುತ್ತಿದ್ದಾರೆ. ಆದರೆ ಮದ್ದು ಸಿಕ್ಕಿಲ್ಲ, ಸಧ್ಯಕ್ಕೆ ಇರುವ ಏಕೈಕ ಮಾರ್ಗ  ವ್ಯಾಧಿಯ ಹರಡುವಿಕೆಯನ್ನು ತಡೆಯುವುದು ಮಾತ್ರ. ಅದಕ್ಕೆ ಇರುವ ಒಂದೇ ದಾರಿ ಸಾಮಾಜಿಕ ಅಂತರ ಅಂದರೆ ಪರಸ್ಪರ ಅಂತರ ಕಾಯ್ದುಕೊಳ್ಳುವುದು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು. ಈ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರಗಳು, ಸಾಮಾಜಿಕ ಸಂಘ ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.  ಟಿ.ವಿ ಮಾಧ್ಯಮಗಳಲ್ಲೂ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು  ಸರ್ವ ಸಾಹಸ ಮಾಡುತ್ತಿದ್ದರೂ ಅದು ಸಾಧ್ಯವಾಗುತ್ತಿಲ್ಲ.

 ಜನರಿಗೆ ಮಾರಕ ರೋಗದ ಭೀಕರತೆ ಅರ್ಥವಾಗುತ್ತಿಲ್ಲ. ಅದನ್ನು ಸನಿಹಕ್ಕೆ ಬರದಂತೆ ತಡೆಯಬೇಕಾದ ಮಹತ್ವ ಎಂಬುದು ಗೊತ್ತಾಗುತ್ತಿಲ್ಲ.

ಕರಾವಳಿಯ ಜೀವನಾಡಿಯೇ ಆಗಿರುವ ತೆಂಕು ತಿಟ್ಟು ಮತ್ತು ಬಡಗುತಿಟ್ಟಿನ ಯಕ್ಷಗಾನ ಜನ ಜಾಗೃತಿಯಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಮಹಾಮಾರಿ ಕಾಯಿಲೆಗಳು ಬಂದಾಗ ಅದರ ಬಗ್ಗೆ ಜನಜಾಗೃತಿ ಮೂಡಿಸುವ ’ಏಡ್ಸಾಸುರ ಸಂಹಾರದಂತಹಾ ಯಕ್ಷಗಾನ ಪ್ರಸಂಗಗಳನ್ನೇ ಪ್ರದರ್ಶಿಸಿ ಸೈ ಅನ್ನಿಸಿಕೊಂಡ ಯಕ್ಷಗಾನ ರಂಗವು ಈಗ ಜಾಗತಿಕವಾಗಿ ಆತಂಕ ಮೂಡಿಸಿರುವ ಕೊರೊನಾ ವೈರಸ್ಗೂ ಸ್ಪಂದಿಸಿ, ಎಲ್ಲೆಡೆಯಲ್ಲಿ ಸೈ ಅನ್ನಿಸಿಕೊಳ್ಳುತ್ತಿದೆ.

ದೇಶದಲ್ಲಿ ಮೊತ್ತ ಮೊದಲಿಗೆ ಈ ರೋಗ ಕಂಡು ಬಂದ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನಡೆದಿರುವ ಯಕ್ಷಗಾನ ಕ್ಷೇತ್ರದ ಕಲಾವಿದರ ಯತ್ನವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಲ್ಲೆಡೆಯಲ್ಲೂ ಜನರ ಗಮನ ಸೆಳೆಯುತ್ತಿದೆ. ಲಕ್ಷಾಂತರ ಮಂದಿ ಇದನ್ನು ವೀಕ್ಷಿಸುತ್ತಿದ್ದಾರೆ.  ಇದೇ ‘ಕೊರೋನಾ ಜಾಗೃತಿ ಯಕ್ಷಗಾನ. 


ಗಡಿ ನಾಡ ಜಿಲ್ಲೆ ಕೇರಳದ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ ಪ್ರಸ್ತುತ ಪಡಿಸಿರುವ ಈ ಯಕ್ಷಗಾನಕ್ಕೆ ಶ್ರೀ ಗಣೇಶ ಕಲಾವೃಂದ ಪೈವಳಿಕೆ (ದೇವಕಾನ) ಸಹಯೋಗ ನೀಡಿದ್ದಾರೆ. ನೀರ್ಚಾಲಿನ ವರ್ಣ ಸ್ಟುಡಿಯೋದವರು ಚಿತ್ರೀಕರಿಸಿದ್ದಾರೆ. ಯಕ್ಷಗಾನ ಪ್ರಸಂಗ ತಜ್ಞರಾದ ಶ್ರೀಧರ ಡಿ.ಎಸ್. ಮತ್ತು ಪ್ರೊ. ಎಂ.ಎ. ಹೆಗಡೆ ಅವರು ಪ್ರಸಂಗ ಸಾಹಿತ್ಯ ರಚನೆ ಮಾಡಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ?. ಎಂ.ಎ. ಹೆಗಡೆ ಮತ್ತು ಅಕಾಡೆಮಿ ಸದಸ್ಯರಾದ ಯೋಗೀಶ್ ರಾವ್ ಚಿಗುರುಪಾದೆ ಅವರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಈ ಪ್ರಸಂಗದ ಚಿತ್ರೀಕರಣ ನಡೆದಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಚೆಂಡೆಯಲ್ಲಿ ಶಂಕರ ಭಟ್ ನಿಡುವಜೆ, ಮದ್ದಲೆಯಲ್ಲಿ ಉದಯ ಕಂಬಾರು ಚಕ್ರತಾಳದಲ್ಲಿ ಶ್ರೀಮುಖ ಎಸ್.ಆರ್. ಮಯ್ಯ ಸಹಕರಿಸಿದ್ದಾರೆ. ಮುಮ್ಮೇಳದಲ್ಲಿ ಕೊರೋನಾ- ರಾಧಾಕೃಷ್ಣ ನಾವಡ ಮಧೂರು, ಧನ್ವಂತರಿ- ವಾಸುದೇವ ರಂಗಾಭಟ್ ಮಧೂರು, ರಾಜೇಂದ್ರನಾಗಿ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಮಣಿಭದ್ರನಾಗಿ ಗುರುರಾಜ ಹೊಳ್ಳ ಬಾಯಾರು, ಪತ್ನಿ- ಪ್ರಕಾಶ್ ನಾಯಕ್ ನೀರ್ಚಾಲು, ಮಣಿಕರ್ಣ- ಕಿಶನ್ ಅಗ್ಗಿತ್ತಾಯ ನೆಲ್ಲಿಕಟ್ಟೆ, ಪುರಜನರು- ಶ್ರೀಕೃಷ್ಣ ಭಟ್ ದೇವಕಾನ, ಶಬರೀಶ್ ಮಾನ್ಯ, ಕಿರಣ್ ಕುದ್ರೆ?ಕ್ಕೂಡ್ಲು ಅಭಿನಯಿಸಿದ್ದಾರೆ.  ಶ್ರೀ ಗಣೇಶ ಕಲಾವೃಂದ ಪೈವಳಿಕೆ ವೇಷಭೂಷಣ ಸಹಕಾರವನ್ನು ನೀಡಿದ್ದಾರೆ. ನೀರ್ಚಾಲಿನ ವರ್ಣ ಸ್ಟುಡಿಯೋದವರು ಇದನ್ನು ಚಿತ್ರೀಕರಣ ನಡೆಸಿದ್ದು, ಉದಯ ಕಂಬಾರು, ವೇಣುಗೋಪಾಲ್, ಶೇಖರ ವಾಂತಿಚ್ಚಾಲ್, ಮಹೇಶ್ ತೇಜಸ್ವಿ ನೀರ್ಚಾಲ್ ಕ್ಯಾಮರಾ ಸಹಕಾರ ನೀಡಿದ್ದಾರೆ.
 
ಬನ್ನಿ ಈ ಯಕ್ಷಗಾನ ವೀಕ್ಷಿಸಿ. ‘ಕೊರೋನಾಸುರನ ಕಪಿಮುಷ್ಠಿಯಿಂದ ಹೇಗೆ ಪಾರಾಗಬಹುದು ಎಂದು ತಿಳಿದುಕೊಳ್ಳಿ.

ಯಕ್ಷಗಾನದ ವಿಡಿಯೋದ ತುಣುಕು  ನೋಡಲು ಇಲ್ಲಿ ಕ್ಲಿಕ್ ಮಾಡಿರಿ:

ಪೂರ್ತಿ ಯಕ್ಷಗಾನ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:




No comments:

Advertisement