ಇಎಂಐ ಬಡ್ಡಿ: ಸ್ಪಷ್ಟ ನಿಲುವಿಗೆ ಕೇಂದ್ರಕ್ಕೆ ಸುಪ್ರೀಂ ಗಡುವು
ನವದೆಹಲಿ: ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದವರಿಗೆ ಮನ್ನಾ ರೂಪದಲ್ಲಿ ಅಲ್ಪ ಪರಿಹಾರವನ್ನು ನೀಡಬೇಕೆ ಎಂಬ ಬಗ್ಗೆ ಸ್ವಂತ ನಿಲುವು ತಳೆಯುವುದಕ್ಕೆ ಬದಲಾಗಿ ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ಬಿಐ) ಹಿಂದೆ ಅಡಗಿಕೊಳ್ಳುತ್ತಿದೆ ಎಂಬುದಾಗಿ ಹೇಳುವ ಮೂಲಕ ಸುಪ್ರೀಂಕೋರ್ಟ್ 2020 ಆಗಸ್ಟ್ 26ರ ಬುಧವಾರ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳ ಸಾಲದ ಮೇಲಿನ ಬಡ್ಡಿ ಮನ್ನಾ ಕುರಿತಂತೆ ತನ್ನ ಖಡಾಖಂಡಿತ ನಿಲುವನ್ನು ಸ್ಪಷ್ಟ ಪಡಿಸಲು ಪೀಠವು ಕೇಂದ್ರ ಸರ್ಕಾರಕ್ಕೆ ಒಂದು ವಾರದ ಗಡುವು ನೀಡಿತು.
’ನಿಮ್ಮ ನಿಲುವು ಏನು ಎಂಬುದನ್ನು ನೀವು ಸ್ಪಷ್ಟ ಪಡಿಸಿ. ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಾದ್ದು ನಿಮ್ಮ ಹೊಣೆಗಾರಿಕೆ. ಮನ್ನಾಕ್ಕೆ ಸಂಬಂಧಿಸಿದ ವಿಷಯವನ್ನು ನಿರ್ಧರಿಸುವ ಅಧಿಕಾರಗಳು ನಿಮಗಿವೆ. ನೀವು ಕೇವಲ ಆರ್ಬಿಐಯನ್ನು ಅವಲಂಬಿಸಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿ ಅಶೋಕ ಭೂಷಣ್ ನೇತೃತ್ವದ ಪೀಠವು ಹೇಳಿತು.
ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರು ಆರ್ಬಿಐಯ ಪ್ರಮಾಣಪತ್ರವನ್ನು ಉಲ್ಲೇಖಿಸಿ ಬ್ಯಾಂಕಿಂಗ್ ಸಂಸ್ಥೆಗಳು ಕೂಡಾ ಸಂಕಷ್ಟದಲ್ಲಿವೆ ಎಂಬುದಾಗಿ ಹೇಳಿದ ಬಳಿಕ ಸುಪ್ರೀಂಕೋರ್ಟ್ ಸರ್ಕಾರದ ವಿರುದ್ಧ ಖಾರವಾದ ಮಾತುಗಳನ್ನು ಆಡಿತು.
ಸಾಲಿಸಿಟರ್ ಜನರಲ್ ಅವರ ಮಾತುಗಳಿಂದ ಪೀಠವು ಅಸಮಾಧಾನಗೊಂಡಿತು. ’ಇದು ಕೇವಲ ವ್ಯವಹಾರದ ಹಿತಾಸಕ್ತಿಗಳ ಬಗ್ಗೆ ಕಾಳಜಿ ವಹಿಸುವ ಸಮಯವಲ್ಲ. ಜನರ ಪರಿಸ್ಥಿತಿಯನ್ನು ಕೂಡಾ ನೀವು ಪರಿಗಣಿಸಬೇಕು. ಇದು ಆರ್ಬಿಐ ತೆಗೆದುಕೊಂಡಿರುವ ನಿಲುವಿನಂತೆ ಕಾಣುತ್ತಿದೆ ಮತ್ತು ನೀವು ಯಾವುದೇ ನಿಲುವನ್ನೂ ತೆಗೆದುಕೊಳ್ಳುತ್ತಿಲ್ಲ’ ಎಂದು ನ್ಯಾಯಮೂರ್ತಿಗಳಾದ ಆರ್. ಸುಭಾಶ್ ರೆಡ್ಡಿ ಮತ್ತು ಎಂ.ಆರ್. ಶಾ ಅವರನ್ನೂ ಒಳಗೊಂಡಿರುವ ಪೀಠ ಆಕ್ಷೇಪಿಸಿತು.
ಈ ಹಂತದಲ್ಲಿ ಸಾಲಿಸಿಟರ್ ಜನರಲ್ ಅವರು ’ಪೀಠದ ಹೇಳಿಕೆಗಳು ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಎಲ್ಲ ಅಗತ್ಯ ನಿರ್ದೇಶನಗಳನ್ನು ನೀಡುತ್ತಿರುವ ಸರ್ಕಾರದ ವಿರುದ್ಧ ಪರಿಣಾಮಗಳನ್ನು ಬೀರಬಹುದು’ ಎಂದು ಹೇಳಿದರು.
’ಹಾಗಿದ್ದರೆ, ನೀವು ನಿಲುವು ತೆಗೆದುಕೊಳ್ಳಬೇಕು.. ಇಲ್ಲಿ, ಏನಾದರೂ ಬಡ್ಡಿ ವಿಧಿಸಬೇಕೆ ಮತ್ತು ಸಾಲ ಮರುಪಾವತಿ ಸ್ಥಗಿತ ಅವಧಿಯಲ್ಲಿ ಏನಾದರೂ ಬಡ್ಡಿ ವಿಧಿಸಬೇಕೇ ಎಂಬ ಎರಡು ವಿಷಯಗಳಿವೆ’ ಎಂದು ಪೀಠ ಉತ್ತರಿಸಿತು.
ಸರ್ಕಾರವು ತನ್ನ ನಿಲುವನ್ನು ಸ್ಪಷ್ಟ ಪಡಿಸಲು ಯಾವುದೇ ಉತ್ತರವನ್ನು ಸಲ್ಲಿಸುತ್ತಿಲ್ಲ. ಬದಲಿಗೆ ಆರ್ಬಿಐಯ ಉತ್ತರವನ್ನು ಉಲ್ಲೇಖಿಸುತ್ತಿದೆ ಎಂದು ಪುನರುಚ್ಚರಿಸಿದ ಪೀಠ, ವಿಷಯಕ್ಕೆ ಸಂಬಂಧಿಸಿದಂತೆ ತನ್ನ ಖಡಾಖಂಡಿತ ನಿಲುವನ್ನು ತೆಗೆದುಕೊಂಡು ಪ್ರಮಾಣಪತ್ರ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಒಂದು ವಾರದ ಕಾಲಾವಕಾಶ ನೀಡಿತು.
ಆರ್ ಬಿಐ ಆದೇಶದಂತೆ ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳ ಸಾಲ ಮರುಪಾವತಿ ಸ್ಥಗಿತದ ಅವಧಿಯಲ್ಲಿ ಬಡ್ಡಿ ಮನ್ನಾ ಕೋರಿದ ಅರ್ಜಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಸಾಲದ ಇಎಂಐ ಪಾವತಿಯನ್ನು ಮುಂದೂಡಿರುವ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಮುಂದೂಡಲಾದ ಕಂತುಗಳಿಗೆ ಬಡ್ಡಿ ವಿಧಿಸುತ್ತಿರುವುದರಿಂದ ಸಾಲ ಮರುಪಾವತಿ ಸ್ಥಗಿತ ಪ್ರಕ್ರಿಯೆಯು ಒಂದು ವ್ಯರ್ಥ ಕಸರತ್ತು ಆಗಿದೆ ಎಂಬುದಾಗಿ ಅರ್ಜಿಯು ಬೊಟ್ಟು ಮಾಡಿದೆ. ಪರಿಣಾಮವಾಗಿ ಜನ ಸಾಮಾನ್ಯರಿಗೆ ಯಾವುದೇ ಪರಿಹಾರವೂ ಲಭಿಸುತ್ತಿಲ್ಲ ಎಂದು ಅರ್ಜಿ ಹೇಳಿದೆ.
No comments:
Post a Comment