Wednesday, August 26, 2020

ಜೆಇಇ, ನೀಟ್ ಪರೀಕ್ಷೆ: ಕೇಂದ್ರಕ್ಕೆ ಸೋನಿಯಾ ತರಾಟೆ

 ಜೆಇಇ, ನೀಟ್ ಪರೀಕ್ಷೆ: ಕೇಂದ್ರಕ್ಕೆ ಸೋನಿಯಾ ತರಾಟೆ


ನವದೆಹಲಿ: ಮುಂದಿನ ತಿಂಗಳು ನಡೆಸಲು ಸಮಯ ನಿಗದಿ ಪಡಿಸಲಾಗಿರುವ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮತ್ತು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ (ನೀಟ್) ಸಂಬಂಧಿಸಿದಂತೆ 2020 ಆಗಸ್ಟ್ 26ರ ಬುಧವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಸರ್ಕಾರಕ್ಕೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇಲ್ಲ ಎಂಬುದಾಗಿ ಹರಿ ಹಾಯ್ದರು.

ಕೊರೋನಾವೈರಸ್ ಹಿನ್ನೆಲೆಯಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸುಗಳಿಗಾಗಿ ನಡೆಸಲು ಸಮಯ ನಿಗದಿ ಪಡಿಸಲಾಗಿರುವ ಪರೀಕ್ಷೆಗಳನ್ನು ಮುಂದೂಡುವಂತೆ ಕೇಳಿ ಬರುತ್ತಿರುವ ಆಗ್ರಹಗಳ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಸಂಯುಕ್ತ ನಿಲುವು ರೂಪಿಸುವ ಸಲುವಾಗಿ ಸಂಘಟಿಸಲಾದ ವರ್ಚುವಲ್ ಸಭೆಯಲ್ಲಿ ಸೋನಿಯಾಗಾಂಧಿ ಅವರು ಮಾತನಾಡುತ್ತಿದ್ದರು.

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ ಸೊರೇನ್, ಛತ್ತೀಸ್ ಗಢದ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಹಾಗೂ ಪುದುಚೆರಿಯ ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ ಸಭೆಗೆ ಹಾಜರಾಗಿದ್ದರು.

ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧ ಪಟ್ಟವರು ಮಾಡುತ್ತಿರುವ ಪ್ರಕಟಣೆಗಳು ಚಿಂತೆ ಹುಟ್ಟಿಸುವಂತಹುಗಳಾಗಿವೆ ಎಂದು ನುಡಿದ ಸೋನಿಯಾ ಗಾಂಧಿ ಇವು ಪ್ರಗತಿಪರ, ಜಾತ್ಯತೀತ ಮತ್ತು ವೈಜ್ಞಾನಿಕ ಮೌಲ್ಯಗಳಿಗೆ ಹಿನ್ನಡೆಯಾಗಿವೆ ಎಂದು ಬಣ್ಣಿಸಿದರು.

ವಿದ್ಯಾರ್ಥಿಗಳು ಮತ್ತು ಪರೀಕ್ಷೆಗಳ ಇತರ ಸಮಸ್ಯೆಗಳ ಬಗ್ಗೆ ಯಾವ ಕಾಳಜಿಯೂ ಇಲ್ಲದೆ ವ್ಯವಹರಿಸಲಾಗುತ್ತಿದೆ ಎಂದು ಅವರು ಕೇಂದ್ರದ ಮೇಲೆ ಆಪಾದನೆ ಮಾಡಿದರು.

ವರ್ಚುವಲ್ ಸಭೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹಾಲಿ ಕೋವಿಡ್-೧೯ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡುವ ಸಲುವಾಗಿ ಪುನಃ ಸುಪ್ರೀಂಕೋರ್ಟಿಗೆ ಹೋಗುವಂತೆ ಸಲಹೆ ಮಾಡಿದರು.

ಇದು ಎಲ್ಲ ರಾಜ್ಯ ಸರ್ಕಾರಗಳಿಗೆ ನನ್ನ ಮನವಿಯಾಗಿದೆ. ನಾವು ಇದನ್ನು ಒಟ್ಟಾಗಿ ಮಾಡೋಣ. ನಾವು ಸುಪ್ರೀಂಕೋರ್ಟಿಗೆ ಹೋಗೋಣ ಮತ್ತು ಪರೀಕ್ಷೆಗೆ ಹಾಜರಾಗಲು ಅನುಕೂಲಕರ ಸ್ಥಿತಿ ನಿರ್ಮಾಣವಾಗುವವರೆಗೆ ಪರೀಕ್ಷೆಗಳನ್ನು ಮುಂದೂಡುವಂತೆ ಸುಪ್ರೀಂಕೋರ್ಟನ್ನು ಕೋರೋಣ ಎಂದು ಮಮತಾ ಹೇಳಿದರು.

ಪ್ರವೇಶ ಪರೀಕ್ಷೆಗಳನ್ನು ಮುಂದೂಡುವಂತೆ ಕೋರಿ ಪಧಾನಿ ನರೇಂದ್ರ ಮೋದಿ ಅವರಿಗೆ ವಾರದಲ್ಲಿ ತಾವು ಬರೆದ ಎರಡು ಪತ್ರಗಳನ್ನೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಉಲ್ಲೇಖಿಸಿದರು.

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರೂ ವಿಷಯದಲ್ಲಿ ಮಧ್ಯಪ್ರವೇಶ ಮಾಡುವಂತೆ ಸುಪ್ರೀಂಕೋರ್ಟನ್ನು ಕೋರಬೇಕೆಂಬ ಮಮತಾ ಬ್ಯಾನರ್ಜಿ ಅವರ ಕರೆಯನ್ನು ಬೆಂಬಲಿಸಿದರು.

ಶಾಲೆಗಳು ಪುನಾರಂಭವಾದಾಗ ೯೭,೦೦೦ ಮಕ್ಕಳಿಗೆ ಕೊರೋನಾವೈರಸ್ ಸೋಂಕು ತಗುಲಿದ ಬಗೆಗಿನ ಅಮೆರಿಕದ ವರದಿಯನ್ನು ಉದ್ಧವ್ ಠಾಕ್ರೆ ಉಲ್ಲೇಖಿಸಿದರು. ’ಇಂತಹ ಪರಿಸ್ಥಿತಿ ಇಲ್ಲ ಉದ್ಭವಿಸಿದರೆ ನಾವು ಏನು ಮಾಡುವುದು?’ ಎಂದು ಅವರು ಪ್ರಶ್ನಿಸಿದರು.

ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದ ಜೂನ್ ತಿಂಗಳಲ್ಲ ಕೂಡಾ ಶಾಲೆಗಳನ್ನು ತೆರೆಯಲು ಆಗಿಲ್ಲ. ಹಾಗಿರುವಾಗ ಈಗಿನ ಪರಿಸ್ಥಿತಿ ಪರೀಕ್ಷೆಗಳನ್ನು ನಡೆಸಲು ಯೋಗ್ಯವಾಗಿರುವುದು ಹೇಗೆ?’ ಎಂದು ಅವರು ಕೇಳಿದರು.

ಜಾರ್ಖಂಡ್ ಮುಖ್ಯಮಂತ್ರಿ ಸೊರೇನ್ ಅವರು ಕೂಡಾ ಇಂತಹುದೇ ಕಾಳಜಿ ವ್ಯಕ್ತ ಪಡಿಸಿದರು ಮತ್ತು ಪರೀಕ್ಷೆಗಳನ್ನು ನಡೆಸಲು ರಾಜ್ಯಗಳು ಇನ್ನೂ ಸಜ್ಜಾಗಿಲ್ಲ ಎಂದು ಹೇಳಿದರು. ’ಅಭ್ಯರ್ಥಿಗಳು, ಅದರಲ್ಲೂ ಮುಖ್ಯವಾಗಿ ಮಹಿಳಾ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಬಂದಾಗ ಅವರ ಪೋಷಕರೂ ಜೊತೆಗೆ ಬರುತ್ತಾರೆ. ಹೀಗಾಗಿ ಸ್ಥಳಗಳು ಜನ ನಿಬಿಡತೆಯ  ಕೇಂದ್ರಗಳಾಗುವ ಸಾಧ್ಯತೆಗಳಿದ್ದು ಅಪಾಯದ ಪರಿಸ್ಥಿತಿ ಉದ್ಭವಿಸಬಹುದು ಎಂದು ಅವರು ನುಡಿದರು.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್ಟಿಎ) ಸುಪ್ರೀಂಕೋರ್ಟಿನ ಆಗಸ್ಟ್ ೧೭ರ ಆದೇಶವನ್ನು ಉಲ್ಲೇಖಿಸಿ ಪರೀಕ್ಷಾ ದಿನಾಂಕಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬುದಾಗಿ ಹೇಳಿದ ಒಂದು ದಿನದ ಬಳಿಕ ವಿರೋಧ ಪಕ್ಷಗಳ ಸಭೆ ನಡೆದಿದೆ. ಪರೀಕ್ಷೆಗಳನ್ನು ಮುಂದೂಡುವಂತೆ ಕೋರಿದ ಅರ್ಜಿಯನ್ನು ತಿರಸ್ಕರಿಸಿದ್ದ ಸುಪ್ರೀಂಕೋರ್ಟ್ವಿದ್ಯಾರ್ಥಿಗಳ ಬದುಕಿನ ನಿರ್ಣಾಯಕ ವರ್ಷವನ್ನು ವ್ಯರ್ಥಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.

No comments:

Advertisement