ಪುಲ್ವಾಮಾ ಉಗ್ರದಾಳಿಯಲ್ಲಿ ಪಾಕ್ ಪಾತ್ರ: ಒಪ್ಪಿಕೊಂಡ ಸಚಿವ
ನವದೆಹಲಿ/ ಇಸ್ಲಾಮಾಬಾದ್: ೨೦೧೯ ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭೀಕರ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪಾಕಿಸ್ತಾನವೇ ಕಾರಣ ಎಂದು ಪಾಕಿಸ್ತಾನದ ಹಿರಿಯ ಸಚಿವರು 2020 ಅಕ್ಟೋಬರ್ 29ರ ಗುರುವಾರ ಒಪ್ಪಿಕೊಂಡರು.
ಇದು ಉಭಯ ದೇಶಗಳನ್ನು ಯುದ್ಧದ ಅಂಚಿಗೆ ತಂದಿತು. "ಹಮ್ನೆ ಹಿಂದೂಸ್ತಾನ್ ಕೊ ಘುಸ್ ಕೆ ಮಾರಾ (ನಾವು ಭಾರತವನ್ನು ಅವರ ಮನೆಯಲ್ಲಿ ಹೊಡೆದಿದ್ದೇವೆ). ಪುಲ್ವಾಮಾದಲ್ಲಿ ನಮ್ಮ ಯಶಸ್ಸು ಇಮ್ರಾನ್ ಖಾನ್ ನೇತೃತ್ವದಲ್ಲಿ ಈ ರಾಷ್ಟ್ರ ಗಳಿಸಿದ ಯಶಸ್ಸಾಗಿದೆ. ನೀವು ಮತ್ತು ನಾವೆಲ್ಲರೂ ಆ ಯಶಸ್ಸಿನ ಭಾಗವಾಗಿದ್ದೇವೆ’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಚರ್ಚೆಯ ಸಂದರ್ಭದಲ್ಲಿ ಹೇಳಿದರು.
ಆದರೆ, ಆ ಬಳಿಕ ತಮ್ಮ ಹೇಳಿಕೆಗೆ ಸಮಜಾಯಿಸಿ ನೀಡಲು ಯತ್ನಿಸಿದ ಚೌಧರಿ, "ನಾನು ಮಾತನಾಡಿದ್ದು ಪುಲ್ವಾಮಾ ನಂತರದ ನಮ್ಮ ಕ್ರಮದ ಬಗ್ಗೆ. ಆದರೆ ನಾವು ಭಾರತದೊಂದಿಗೆ ಯುದ್ಧವನ್ನು ಹುಟ್ಟುಹಾಕಲು ಯೋಚಿಸುತ್ತಿಲ್ಲ. ಇದು ಸುದೀರ್ಘ ಭಾಷಣವಾಗಿತ್ತು ಮತ್ತು ಪುಲ್ವಾಮಾ ಪಾಕಿಸ್ತಾನದ ಕೆಲಸ ಎಂದು ನಾನು ಹೇಳಿಲ್ಲ’ ಎಂದು ಸುದ್ದಿ ಜಾಲ ಒಂದರ ಜೊತೆ ಮಾತನಾಡುತ್ತಾ ಹೇಳಿದರು.
ವಿರೋಧ ಪಕ್ಷವಾಗಿರುವ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನಾಯಕ ಅಯಾಜ್ ಸಾದಿಕ್ ಅವರು ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರು ಮಹತ್ವದ ಸಭೆಯಲ್ಲಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅವರನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು ಎಂದು ಹೇಳಿದಕ್ಕೆ ಪ್ರತಿಯಾಗಿ ಪ್ರಧಾನಿ ಇಮ್ರಾನ್ ಖಾನ್ ಅವರ ಆಪ್ತ ಸಹಾಯಕ ಚೌಧರಿ ಈ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದ ಜೆಟ್ಗಳ ಜೊತೆಗಿನ ಡಾಗ್ ಫೈಟ್ ಕಾಲದಲ್ಲಿ ಭಾರತದ ಮಿಗ್ -೨೧ ಬೈಸನ್ ಜೆಟ್ನ್ನು ಹೊಡೆದ ಪಾಕ್ ಸೇನೆಯು ೨೦೧೯ ರ ಫೆಬ್ರವರಿ ೨೭ ರಂದು ಅಭಿನಂದನ್ ವರ್ಥಮಾನ್ ಅವರನ್ನು ಸೆರೆ ಹಿಡಿದಿತ್ತು.
೨೦೧೯ರ ಫೆಬ್ರವರಿ ೨೬ರ ನಸುಕಿನಲ್ಲಿ ಭಾರತೀಯ ವಾಯುಪಡೆ ಜೆಟ್ ವಿಮಾನಗಳು ಪಾಕಿಸ್ತಾನದ ಖೈಬರ್ ಪಖ್ತೂನ್ ಖ್ವ್ವಾದಲ್ಲಿನ ಬಾಲಕೋಟ್ನಲ್ಲಿದ್ದ ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಸೇಡು ತೀರಿಸಿಕೊಂಡಿದ್ದರು. ಈ ಭಯೋತ್ಪಾದಕ ದಾಳಿಯಲ್ಲಿ ಭಾರತದ ೪೦ ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು.
"ಕಾಲುಗಳು ನಡುಗುತ್ತಿದ್ದವು ಮತ್ತು ಹಣೆ ಬೆವರುತ್ತಿತ್ತು. ದೇವರಾಣೆಗೂ, ಅವರು (ವರ್ಥಮಾನ್) ಈಗ ಹಿಂದಿರುಗಿ ಹೋಗಲಿ. ಇಲ್ಲದ್ದಿದ್ದರೆ ರಾತ್ರಿ ೯ ಗಂಟೆಗೆ ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತದೆ ಎಂದು ವಿದೇಶಾಂಗ ಸಚಿವರು ಸಂಸದರ ಸಭೆಯಲ್ಲಿ ಹೇಳಿದ್ದರು ಎಂದು ವಿರೋಧ ಪಕ್ಷದ ನಾಯಕ ಸಾದಿಕ್ ಜನರಲ್ ಅಸೆಂಬ್ಲಿಯಲ್ಲಿ ಗುರುವಾರ ಇದಕ್ಕೆ ಮುನ್ನ ಹೇಳಿದ್ದರು.
"ಭಾರತವು ದಾಳಿ ಮಾಡಲು ಯೋಜಿಸುತ್ತಿರಲಿಲ್ಲ ... ಆದರೆ ಅವರು (ವಿದೇಶಾಂಗ ಸಚಿವರು) ಭಾರತದ ಮುಂದೆ ಮಂಡಿಯೂರಿ ಅಭಿನಂದನ್ ಅವರನ್ನು ವಾಪಸ್ ಕಳುಹಿಸಲು ಬಯಸಿದ್ದರು’ ಎಂದೂ ಸಾದಿಕ್ ಹೇಳಿದ್ದರು.
ಪುಲ್ವಾಮಾ ದಾಳಿಯ ಸಮಯದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವರಾಗಿದ್ದ ಚೌಧರಿ, ಸಾದಿಕ್ ಅವರ ಹೇಳಿಕೆಯನ್ನು ಟೀಕಿಸಿದರು ಮತ್ತು ಹೇಳಿಕೆ ಸಮರ್ಪಕವಲ್ಲ ಎಂದು ಬಣ್ಣಿಸಿದರು.
No comments:
Post a Comment