Tuesday, September 26, 2023

ಶ್ರೀ ಬಾಲಾಜಿ ಕೃಪಾ ಬಡಾವಣೆ ಗಣೇಶೋತ್ಸವ: ಚೆಂಡೆ ಸಂಭ್ರಮ

 ಶ್ರೀ ಬಾಲಾಜಿ ಕೃಪಾ ಬಡಾವಣೆ ಗಣೇಶೋತ್ಸವ: ಚೆಂಡೆ ಸಂಭ್ರಮ

ಬೆಂಗಳೂರು: ಚೆಂಡೆ ಧ್ವನಿಯ ಅನುರಣನ, ಬಾನಿನಲ್ಲಿ ಪಟಾಕಿ ಚಿತ್ತಾರದ ಸಂಭ್ರಮದೊಂದಿಗೆ ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೨ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಶ್ರೀ ಬಾಲಾಜಿ ಕೃಪಾ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ೨೦೨೩ ಸೆಪ್ಟೆಂಬರ್‌ ೨೪ರ ಭಾನುವಾರ ಸಡಗರದೊಂದಿಗೆ ನಡೆಯಿತು.

ಕಂದಾಯ ಸಚಿವ ಹಾಗೂ ಬ್ಯಾಟರಾಯನಪುರ ಕ್ಷೇತ್ರದ ಶಾಸಕರೂ ಆದ ಶ್ರೀ ಕೃಷ್ಣ ಬೈರೇಗೌಡ, ಬಡಾವಣೆಯ ನಿರ್ಮಾಪಕ ಶ್ರೀ ಎಸ್.‌ ಎನ್.‌ ಕೃಷ್ಣಯ್ಯ ಶೆಟ್ಟಿ, ರಾಜಕೀಯ ನಾಯಕರಾದ ಜಯಗೋಪಾಲ ಗೌಡ ಮತ್ತು ಶಿವಕುಮಾರ್‌ ಅವರು ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡರು.

ಸೆಪ್ಟೆಂಬರ್‌ ೨೩ರ ಶನಿವಾರ ಮಧ್ಯಾಹ್ನ ವರುಣ ಸಿಂಚನದ ಶುಭಾಶೀರ್ವಾದದೊಂದಿಗೆ ಮಕ್ಕಳು ಮತ್ತು ಮಹಿಳೆಯರ ಆಟೋಟ ಸ್ಪರ್ಧೆಗಳು ನಡೆದವು. ಇದೇ ವೇಳೆಯಲ್ಲಿ ಬಾಲಕ ಬಾಲಕಿಯರು ತಮ್ಮಿಷ್ಟದ ಹಾಡುಗಳಿಗೆ ಹೆಜ್ಜೆ ಹಾಕಿ ನರ್ತಿಸುತ್ತಾ ಸಂಭ್ರಮಿಸಿದರು.


ಅದೇ ದಿನ ರಾತ್ರಿ ವರುಣನ ಅಮೃತ ಧಾರೆಯೊಂದಿಗೆ ಶುದ್ಧಗೊಂಡ ಬಡಾವಣೆಯ ಉದ್ಯಾನವನ ವಿದ್ಯುದ್ದೀಪಗಳ ಅಲಂಕಾರದೊಂದಿಗೆ ಗಣಪನ ಆಹ್ವಾನಕ್ಕೆ ಸಜ್ಜಾಯಿತು. ಬೆಳಗ್ಗೆ ಬಡಾವಣೆಯ ನಿವಾಸಿಗಳು ಉತ್ಸಾಹದ ಶ್ರಮದಾನದೊಂದಿಗೆ ಉದ್ಯಾನದಲ್ಲಿ ತುಂಬಿದ್ದ ನೀರನ್ನು ತೆರವುಗೊಳಿಸಿ ಕಸ ತೆಗೆದು ಶುದ್ಧಗೊಳಿಸಿದರು. ಮಹಿಳೆಯರು ರಂಗೋಲಿ, ಪುಷ್ಪಗಳಿಂದ ಅಲಂಕಾರ ಮಾಡಿ ಹಾಕಿ ವಿಘ್ನ ವಿನಾಯಕನಿಗೆ ಸ್ವಾಗತ ಕೋರಿದರು.

ಬಡಾವಣೆಯಲ್ಲಿ ಗಣಪನ ದೇಗುಲ ನಿರ್ಮಾಣ, ಬಡಾವಣೆಯ ನೀರಿನ ಸಮಸ್ಯೆಯ ನಿವಾರಣೆ, ಎಲ್ಲ ನಿವಾಸಿಗಳ ಆಯುರಾರೋಗ್ಯ, ಸುಖ ಸಂಪತ್ತಿನ ವೃದ್ಧಿಯಾಗಬೇಕೆಂಬ ಸಂಕಲ್ಪದೊಂದಿಗೆ ಗಣಹೋಮ, ಗಣಪತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಿತು.


ಗಣಪನ ಪ್ರಾಣ ಪ್ರತಿಷ್ಠೆಯ ಹೊತ್ತಿಗೆ ಸರಿಯಾಗಿ ಆಗಮಿಸಿದ ಬಡಾವಣೆಯ ನಿರ್ಮಾಪಕ ಶ್ರೀ ಕೃಷ್ಣಯ್ಯ ಶೆಟ್ಟಿ ಅವರು ಗಣಪನಿಗೆ ಲಡ್ಡು ಪ್ರಸಾದವನ್ನು ಸಮರ್ಪಿಸಿದರು.

ಗಣಹೋಮದ ಪೂರ್ಣಾಹುತಿಯ ಹೊತ್ತಿಗೆ ಸರಿಯಾಗಿ ಆಗಮಿಸಿದ ಸಚಿವ ಶ್ರೀ ಕೃಷ್ಣ ಬೈರೇಗೌಡ, ಶಿವಕುಮಾರ್‌, ಜಯಗೋಪಾಲ ಗೌಡ ಅವರು ಹೋಮದ ಪೂರ್ಣಾಹುತಿ, ಮಹಾಪೂಜೆಯಲ್ಲಿ ಪಾಲ್ಗೊಂಡರು. ಕೇರಳದ ಚೆಂಡೆಯ ನಿನಾದ ಗಣಪನ ಮಹಾಪೂಜೆಗೆ ರಂಗೇರಿಸಿತು.

ಮಹಾಪೂಜೆ, ಪ್ರಸಾದ ವಿತರಣೆಯ ಜೊತೆಗೇ ಸುಮಾರು ಎರಡು ಗಂಟೆಗೂ ಹೆಚ್ಚುಕಾಲ ನಡೆದ ಕೇರಳ ಚೆಂಡೆಯ ಅನುರಣಕ್ಕೆ ಮಕ್ಕಳು, ಮಹಿಳೆಯರು, ಪುರುಷರು ಸೇರಿದಂತೆ ಬಡಾವಣೆಯ ನಿವಾಸಿಗಳು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಬಡಾವಣೆಯ ನ್ಯಾಯವಾದಿ ಶ್ರೀ ಮುನಿರಾಜು ಅವರು ಭಕ್ತರಿಗೆ ಶುಚಿ-ರುಚಿಯಾದ ಭೋಜನದ ವ್ಯವಸ್ಥೆಯನ್ನು ಮಾಡಿದ್ದರು.

ಮಧ್ಯಾಹ್ನದ ಬಳಿಕ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಗಣಪತಿಯನ್ನು ಅಲಂಕರಿಸಲು ಬಳಸಲಾದ ಶಾಲಿನ ಹರಾಜು ನಡೆಯಿತು.ಕರಾವಳಿ ಚೆಂಡೆಯ ಅನುರಣನ, ಬಾನಿನಲ್ಲಿ ವೈವಿದ್ಯಮಯ ಪಟಾಕಿಗಳ ಚಿತ್ತಾರದೊಂದಿಗೆ ಸಂಭ್ರಮದೊಂದಿಗೆ ಗಣಪತಿಯ ಮಹಾಮಂಗಳಾರತಿ, ಶೋಭಾಯಾತ್ರೆ ನಡೆಯಿತು.

ರಾಚೇನಹಳ್ಳಿ ಕೆರೆಯಲ್ಲಿ ಗಣಪನ ವಿಸರ್ಜನೆ ನಡೆಯಿತು.

ಜಾತಿ, ಮತ, ರಾಜಕೀಯ ಭಿನ್ನಾಭಿಪ್ರಾಯಗಳ ಭೇದವಿಲ್ಲದೆ ಬಡಾವಣೆಯ ಎಲ್ಲ ನಿವಾಸಿಗಳು ಪಾಲ್ಗೊಂಡದ್ದು,


ಶೋಭಾಯಾತ್ರೆಯಲ್ಲೂ ನಲಿದು ನರ್ತಿಸಿದ್ದು, ಟೆಂಟಿಗೆ ಬಡಾವಣೆಯ ನಿವಾಸಿ ಸಿರಾಜ್, ಕೇರಳ ಚೆಂಡೆಗೆ ಬಡಾವಣೆಯ ಮಲಯಾಳಂ ಬಂಧುಗಳು, ವಿವಿಧ ಸ್ಪರ್ಧೆಗಳ ಬಹುಮಾನ, ಪಟಾಕಿ ವೆಚ್ಚವನ್ನು ಶಿವಕುಮಾರ್‌, ಗಣಪನ ವಿಗ್ರಹವನ್ನು ಗಣೇಶ ಮತ್ತು ಸಂದೀಪ ಪ್ರಾಯೋಜಿಸಿದ್ದುದು ವಿಶೇಷವಾಗಿತ್ತು.

 

 


No comments:

Advertisement