Wednesday, September 6, 2023

ದೇಶದಲ್ಲೇ ಮೊದಲು ಶಿವಮೊಗ್ಗದಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನ

 ದೇಶದಲ್ಲೇ ಮೊದಲು ಶಿವಮೊಗ್ಗದಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನ

ಬೆಂಗಳೂರು: ಕೇಂದ್ರ ಸರ್ಕಾರದ ಪಂಚಾಯತ್‌ ರಾಜ್‌ ಸಚಿವಾಲಯವು ಮಾನ್ಯತೆ ನೀಡಿರುವ ವಿನೂತನ ದಿಕ್ಸೂಚಿ ಕಲಿಕಾ ತಂತ್ರಜ್ಞಾನದ (ನ್ಯಾವಿಗೇಟೆಡ್‌ ಲರ್ನಿಂಗ್‌ ಟೆಕ್ನಾಲಜಿ- ಎನ್‌ಎಲ್‌ಟಿ) ಮೂಲಕ ಗ್ರಾಮ ಪಂಚಾಯಿತಿ ಸದಸ್ಯರಿಗೆ ತರಬೇತಿ ನೀಡುವ ಕಾರ್ಯಕ್ರಮ ದೇಶದಲ್ಲೇ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಜಾರಿಗೆ ಬರಲಿದೆ.

ವಿಧಾನ ಪರಿಷತ್‌ ಸದಸ್ಯ ಡಿ.ಎಸ್.‌ ಅರುಣ್‌ ನೇತೃತ್ವದಲ್ಲಿ 2023 ಸೆಪ್ಟೆಂಬರ್‌ 4ರ ಸೋಮವಾರ ಶಿವಮೊಗ್ಗದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ 7 ತಾಲೂಕುಗಳಲ್ಲಿ 35 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿ ಎನ್‌ಎಲ್‌ಟಿ ತಂತ್ರಜ್ಞಾನ ಮೂಲಕ ತರಬೇತಿಯನ್ನು ಪ್ರಾಯೋಗಿಕವಾಗಿ ಮುನ್ನಡೆಸಲು ನಿರ್ಣಯ ಕೈಗೊಳ್ಳಲಾಯಿತು. ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸ್ನೇಹಲ್‌ ಸುಧಾಕರ್‌ ಲೋಖಂಡೆ, ಜಿಲ್ಲಾ ಉಪ ಕಾರ್ಯದರ್ಶಿಗಳು ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳ ಕಾರ್ಯ ನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದರು.

ಶಿವಮೊಗ್ಗ ಜಿಲ್ಲಾ ಪಂಚಾಯತಿ ಆವರಣದ ಸಹ್ಯಾದ್ರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಶ್ರೀ ಅಬ್ದುಲ್‌ ನಜೀರ್‌ ಸಾಬ್ಪೀಠ ಪಂಚಾಯತ್‌ ರಾಜ್‌ ವಿಭಾಗದ ಮಾಜಿ ಅಧ್ಯಕ್ಷ ಪ್ರೊ. ಸದಾನಂದ ಜಾನೆಕೆರೆ ಅವರೊಂದಿಗೆ ಪಾಲ್ಗೊಂಡಿದ್ದ ಸಂಪೂರ್ಣ ಸ್ವರಾಜ್ ಫ಼ೌಂಡೇಷನ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ಟ್ರಸ್ಟಿ ಡಾ. ಶಂಕರ ಕೆ. ಪ್ರಸಾದ್‌ ದಿಕ್ಸೂಚಿ ಕಲಿಕಾ ತಂತ್ರಜ್ಞಾನದ ಬಗ್ಗೆ ಪ್ರಸ್ತುತಿ ನೀಡಿದರು.

ಕೇಂದ್ರ ಸರ್ಕಾರ ರಚಿಸಿರುವ ʼರಾಷ್ಟ್ರೀಯ ಸಾಮರ್ಥ್ಯ ನಿರ್ಮಾಣ ಚೌಕಟ್ಟು-2022ʼ ಬೆಂಗಳೂರಿನ ಸಂಪೂರ್ಣ ಸ್ವರಾಜ್‌ ಫೌಂಡೇಷನ್‌ ಅಮೆರಿಕದ ಗೂರು ಸಂಸ್ಥೆಯೊಂದಿಗೆ ಅಭಿವೃದ್ದಿ ಪಡಿಸಿರುವ ನಿರಂತರ ಕಲಿಕೆಗೆ ಅವಕಾಶ ಕಲ್ಪಿಸುವ ದಿಕ್ಸೂಚಿ ಕಲಿಕಾ ತಂತ್ರಜ್ಞಾನವನ್ನು ಪಂಚಾಯಿತಿ ಸದಸ್ಯರಿಗೆ ತರಬೇತಿ ನೀಡುವಲ್ಲಿ ಬಳಸಿಕೊಳ್ಳಲು ಶಿಫಾರಸು ಮಾಡಿದೆ.

ದಿಕ್ಸೂಚಿ ಕಲಿಕಾ ತಂತ್ರಜ್ಞಾನವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಪಂಚಾಯತ್‌ ರಾಜ್‌ ಸಚಿವಾಲಯವು ಆಗಸ್ಟ್‌ ಕೊನೆಯ ವಾರ ವರ್ಚವಲ್‌ ಸಭೆಯೊಂದನ್ನೂ ಆಯೋಜಿಸಿತ್ತು. ಅದರಲ್ಲಿ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಕರ್ನಾಟಕದ ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಸಂಪೂರ್ಣ ಸ್ವರಾಜ್‌ ಫೌಂಡೇಷನ್‌, ಎನ್‌ ಐಸಿ ಸಪೋರ್ಟ್‌ ಮತ್ತು ಕೇರಳದ ಸ್ಥಳೀಯ ಆಡಳಿತ ಸಂಸ್ಥೆ (ಕಿಲಾ) ಪಾಲ್ಗೊಂಡಿದ್ದವು.

ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿನ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳ 10 ತಾಲೂಕುಗಳಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನದ ಅನುಷ್ಠಾನ ಹಾಗೂ ಪ್ರತಿ ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳಲ್ಲಿ ಮತ್ತು ಪ್ರತಿಯೊಬ್ಬ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸೀಮಾತೀತ ತಂತ್ರಜ್ಞಾನ ಅಳವಡಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡುವ ʼ21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯಿತಿʼ ಪುಸ್ತಕದ ಪ್ರತಿಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಶಾಸಕ ಅರುಣ್‌ ಇತ್ತೀಚೆಗೆ ಭರವಸೆ ನೀಡಿದ್ದರು..

ಚಿತ್ರ ಕ್ಯಾಪ್ಷನ್:

ಸಂಪೂರ್ಣ ಸ್ವರಾಜ್ ಫ಼ೌಂಡೇಷನ್  ಸಂಸ್ಥಾಪಕ ಮತ್ತು ವ್ಯವಸ್ಥಾಪಕ ಟ್ರಸ್ಟಿ ಡಾ. ಶಂಕರ ಕೆ. ಪ್ರಸಾದ್‌ ಅವರು ಶಿವಮೊಗ್ಗದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನದ ಬಗ್ಗೆ ಪ್ರಸ್ತುತಿ ನೀಡಿದರು. ವಿಧಾನ ಪರಿಷತ್‌ ಸದಸ್ಯ ಡಿ.ಎಸ್.‌ ಅರುಣ್‌, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸ್ನೇಹಲ್‌ ಸುಧಾಕರ್‌ ಲೋಖಂಡೆ, ಪ್ರೊ. ಸದಾನಂದ ಜಾನೆಕೆರೆ ಮತ್ತು ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಬಗ್ಗೆ ವಿಜಯ ಕರ್ನಾಟಕ ಪತ್ರಿಕೆಯ ಶಿವಮೊಗ್ಗೆ ಆವೃತ್ತಿಯಲ್ಲಿ ಪ್ರಕಟವಾಗಿರುವ ವರದಿ ಕೆಳಗಿದೆ: ವರದಿಯ ಸ್ಪಷ್ಟ ವೀಕ್ಷಣೆಗೆ ಚಿತ್ರವನ್ನು ಕ್ಲಿಕ್ಕಿಸಿ.


ಶಿವಮೊಗ್ಗದ ದೈನಿಕ ʼನಮ್ಮ ನಾಡುʼ ಪತ್ರಿಕೆಯಲ್ಲಿ ಬಂದ ವರದಿ. ವರದಿಯ ಸ್ಪಷ್ಟ ವೀಕ್ಷಣೆಗೆ ಚಿತ್ರವನ್ನು ಕ್ಲಿಕ್ಕಿಸಿ

ಇದನ್ನೂ ಓದಿ:
ಪಂಚಾಯಿತಿ ತರಬೇತಿಗೆ ದಿಕ್ಸೂಚಿ ಕಲಿಕಾ ತಂತ್ರಜ್ಞಾನ: ಕೇಂದ್ರ ಮನ್ನಣೆ

No comments:

Advertisement