Sunday, January 21, 2024

ಉಕ್ಕು ಇಲ್ಲ, ಕಬ್ಬಿಣ ಇಲ್ಲ, ವಾಸ್ತುಶಿಲ್ಪದ ಅಧ್ಬುತ ಈ ರಾಮ ಮಂದಿರ

ಉಕ್ಕು ಇಲ್ಲ, ಕಬ್ಬಿಣ ಇಲ್ಲ, ವಾಸ್ತುಶಿಲ್ಪದ ಅಧ್ಬುತ ಈ ರಾಮ ಮಂದಿರ

ಹೊಸ ಚಿಗುರು, ಹಳೆ ಬೇರು ಕೂಡಿರಲು ಮರ ಸೊಬಗು,
ಹೊಸ ಯುಕ್ತಿ ಹಳೆ ತತ್ವದೊಡಗೂಡೆ ಧರ್ಮ,

ಋಷಿವಾಕ್ಯದೊಡೆ ವಿಜ್ಞಾನ ಕಲೆ ಮೇಳವಿಸೆ,
ಜಸವು  ಜನ ಜೀವನಕೆ ಮಂಕು ತಿಂಮ್ಮ!

ಕನ್ನಡದ ಖ್ಯಾತ ಕವಿ ಡಿವಿಜಿ ಅವರ ಈ ಕವನವನ್ನು ಕ್ಷಣ ಕ್ಷಣಕ್ಕೂ ನೆನಪಿಸುವಂತೆ ಮೂಡಿ ಬಂದಿದೆ. ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ನೂತನ ರಾಮ ಮಂದಿರ. ಭಾರತೀಯ ಚಿಂತನೆ, ವಾಸ್ತು, ಕಲೆ ಮತ್ತು ವಿಜ್ಞಾನ ಇವೆಲ್ಲವೂ ಇಲ್ಲಿ ಮೇಳೈಸಿವೆ.

ಭಾರತದ ಪ್ರಾಚೀನ ಚಿಂತನೆ, ವಾಸ್ತುಶಿಲ್ಪ ಮತ್ತು ಆಧುನಿಕ ವಿಜ್ಞಾನ ಮಿಳಿತವಾದ ಸುಂದರ ಮಂದಿರವನ್ನು ಭಾರತದ ನಾಗರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದರ ಎತ್ತರ ಕುತುಬ್‌ ಮಿನಾರ್‌ ಕಟ್ಟಡದ ಶೇಕಡಾ 70ರಷ್ಟು ಇದೆ.

ಪ್ರಸಿದ್ಧ ವಾಸ್ತುಶಿಲ್ಪಿ ಚಂದ್ರಕಾಂತ್ ಬಿ ಸೋಂಪುರ ಅವರು ತಮ್ಮ ಮಗ ಆಶಿಶ್ ಸಹಾಯದಿಂದ ವಿನ್ಯಾಸಗೊಳಿಸಿರುವ ರಾಮ ಮಂದಿರದ ಕಲ್ಪನೆಯನ್ನು 30 ವರ್ಷಗಳಷ್ಟು ಹಿಂದೆಯೇ ವಿವರಿಸಿದ್ದರು.

2024 ಜನವರಿ 22ರ  ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರ ಯಜಮಾನಿಕೆಯಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕಾಗಿ ಅಯೋಧ್ಯೆಯ ರಾಮಮಂದಿರವು ಇದೀಗ ಅಲಂಕೃತವಾಗಿ ನಿಂತಿದೆ.

ದೇವಾಲಯಗಳ ಪಟ್ಟಣ ಎಂಬುದಾಗಿಯೇ ಹೆಸರು ಪಡೆದಿರುವ ಅಯೋಧ್ಯೆಯಲ್ಲಿ 2.7 ಎಕರೆ ಭೂಮಿಯಲ್ಲಿ ಮೈತಳೆದು ನಿಂತಿರುವ ಈ ದೇವಾಲಯ 161 ಅಡಿ ಎತ್ತರ, 235 ಅಡಿ ಅಗಲ ಮತ್ತು ಒಟ್ಟು 360 ಅಡಿ ಉದ್ದವನ್ನು ಹೊಂದಿದೆ. ಆಧುನಿಕ ತಂತ್ರಜ್ಞಾನದ ಸಮ್ಮಿಲನದೊಂದಿಗೆ ಎಲ್ಲ ವೈದಿಕ ಆಚರಣೆಗಳನ್ನು ಅನುಸರಿಸಿ, ಪ್ರಾಚೀನ  ಭಾರತದ ಎರಡು ವಿಶಿಷ್ಟವಾದ ಕಟ್ಟಡ ಶೈಲಿಗಳಲ್ಲಿ ಒಂದಾದ ನಾಗರಾ ಶೈಲಿಯಲ್ಲಿ ಇದನ್ನು ನಿರ್ಮಿಸಲಾಗಿದೆ.

ಈ ದೇವಾಲಯದ ನಿರ್ಮಾಣ ಪ್ರದೇಶವು ಸುಮಾರು 57,000 ಚದರ ಅಡಿಗಳು. ಕಟ್ಟಡ ಮೂರು ಅಂತಸ್ತುಗಳನ್ನು ಹೊಂದಿದೆ. ಎತ್ತರಿಸಿದ ಪಾಯದ ಮೇಲೆ ಗರ್ಭಗುಡಿ ನಿರ್ಮಾಣಗೊಂಡಿದೆ. ಮೂರು ಅಂತಸ್ತುಗಳನ್ನು ಹೊಂದಿರುವ ದೇವಾಲಯದ ಗರ್ಭಗುಡಿಯ ಮೇಲೆ ಅತ್ಯಂತ ಎತ್ತರದ ಶಿಖರವಿದೆ. ದೇವಾಲಯ ಹೊಂದಿರುವ ಐದು ಮಂಟಪಗಳು ಒಟ್ಟು ಐದು ಶಿಖರಗಳನ್ನು ಹೊಂದಿವೆ. ಮಂಟಪಗಳು 300 ಸ್ತಂಭಗಳು ಮತ್ತು 44 ತೇಗದ ಬಾಗಿಲುಗಳನ್ನು ಹೊಂದಿವೆ.

ಭಗವಾನ್ ರಾಮನ ಹೆಸರನ್ನು ವಿವಿಧ ಭಾಷೆಗಳಲ್ಲಿ ಕೆತ್ತಿದ ಮತ್ತು 30 ವರ್ಷಗಳಿಂದ ಸಂಗ್ರಹಿಸಲಾದ ಸುಮಾರು ಎರಡು ಲಕ್ಷ ಇಟ್ಟಿಗೆಗಳನ್ನು ದೇವಾಲಯಕ್ಕೆ ಬಳಸಲಾಗಿದೆ. ತಾಜ್‌ ಮಹಲ್‌ ನಿರ್ಮಿಸಲು ಬಳಸಲಾಗಿದ್ದ ಅಮೃತಶಿಲೆಗಳನ್ನೇ ಬಳಸಿ ಗರ್ಭಗುಡಿಯ ಒಳಭಾಗವನ್ನು ಅಲಂಕರಿಸಲಾಗಿದೆ. ಉಕ್ಕು ಮತ್ತು ಕಬ್ಬಿಣವನ್ನು ಒಂದಿಷ್ಟೂ ಬಳಸಿಲ್ಲ ಎಂಬುದು ಇದರ ವಿಶೇಷ. ಹಾಗೆಯೇ ಈ ಮಂದಿರ ನಿರ್ಮಾಣಕ್ಕೆ ಒಂದಿಷ್ಟೂ ಸಿಮೆಂಟ್‌ ಅಥವಾ ಗಾರೆ ಕೂಡಾ ಬಳಸಿಲ್ಲ.

ನಾಗರ ಶೈಲಿಯ ಕಟ್ಟಡಗಳ ನಿರ್ಮಾಣ ಆರಂಭವಾದದ್ದು ಭಾರತವು ಸುವರ್ಣ ಯುಗವನ್ನು ಕಂಡಿದ್ದ ಗುಪ್ತರ ಕಾಲದಲ್ಲಿ. ಕಬ್ಬಿಣದ ಬಾಳಿಕೆ ಸುಮಾರು 80-90 ವರ್ಷ ಮಾತ್ರ. ಹೀಗಾಗಿ ದೇವಾಲಯವನ್ನು ಕನಿಷ್ಠ ಒಂದು ಸಾವಿರ ವರ್ಷ ಕಾಲ ದೃಢವಾಗಿ ನಿಲ್ಲುವಂತೆ ಗ್ರಾನೈಟ್‌, ಮರಳುಗಲ್ಲು, ಅಮೃತಶಿಲೆ ಬಳಸಿ ಲಾಕ್‌ ಮತ್ತು ಕೀ ಯಾಂತ್ರಿಕ ವ್ಯವಸ್ಥೆಯೊಂದಿಗೆ ನಿರ್ಮಿಸಲಾಗಿದೆ.

ರಾಮ ಮಂದಿರ ನಿರ್ಮಾಣಕ್ಕೆ ಮೊದಲು ಈ ಪ್ರದೇಶವನ್ನು 15 ಮೀಟರ್‌ ಆಳಕ್ಕೆ ಅಗೆದು, 47 ಪದರಗಳಲ್ಲಿ ಮಣ್ಣನ್ನು ಗಟ್ಟಿಯಾಗಿ ತುಂಬಿ ಪಾಯವನ್ನು ನಿರ್ಮಿಸಲಾಗಿತ್ತು. ಅದಕ್ಕೆ 1.5 ಮೀಟರ್‌ ದಪ್ಪದ ಎಂ-35 ದರ್ಜೆಯ ಕಾಂಕ್ರೀಟ್‌ ಹಾಕಲಾಯಿತು. ಗಟ್ಟಿಮಟ್ಟು ಆಗಲು 6.3 ಮೀಟರ್‌ ದಪ್ಪದ ಘನ ಗ್ರಾನೈಟ್‌ ಕಲ್ಲನ್ನು ಹೊದಿಸಲಾಯಿತು.

ವಿಜ್ಞಾನದ ಕೊಡುಗೆ

ರಾಮಮಂದಿರವನ್ನು ನಿರ್ಮಿಸಲು ಕೆಲವು ಉನ್ನತ ಭಾರತೀಯ ವಿಜ್ಞಾನಿಗಳು ಕೊಡುಗೆ ನೀಡಿದ್ದಾರೆ. ನಿರ್ಮಾಣದಲ್ಲಿ ಇಸ್ರೋ ತಂತ್ರಜ್ಞಾನವನ್ನೂ ಬಳಸಲಾಗಿದೆ. ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ (ಸಿಬಿಆರ್‌ಐ) ನಿರ್ದೇಶಕ ಪ್ರದೀಪ್ ಕುಮಾರ್ ರಾಮಂಚರ್ಲಾ ಅವರು ಯೋಜನೆಯೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ವಿಶೇಷ ‘ಸೂರ್ಯ ತಿಲಕ್’ ಕನ್ನಡಿ ಎಂಬ ಮಸೂರ ಆಧಾರಿತ ಉಪಕರಣವನ್ನು ಸಿಬಿಆರ್‌ ಐ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐಐಎ/ IIA) ವಿಜ್ಞಾನಿಗಳ ತಂಡ ವಿನ್ಯಾಸಗೊಳಿಸಿದೆ. ಇದರ ಮೂಲಕ ಪ್ರತಿವರ್ಷ ರಾಮನವಮಿಯ ದಿನದಂದು ಮಧ್ಯಾಹ್ನದ ಸಮಯದಲ್ಲಿ ರಾಮಲಲ್ಲಾ ವಿಗ್ರಹದ ಹಣೆಯ ಮೇಲೆ ಸೂರ್ಯನ ಬೆಳಕಿನ ಅಭಿಷೇಕವಾಗುತ್ತದೆ.

ಚಿತ್ರಗಳ ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿರಿ.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.


ಇವುಗಳನ್ನೂ ಓದಿ:

ಬಟ್ಟೆ ರಹಿತ ಪೂರ್ಣ ಮುಖದ ವಿಗ್ರಹ ನೈಜ ರಾಮಲಲ್ಲಾ ಅಲ್ಲ

No comments:

Advertisement