ಪ್ರಧಾನಿ ಮೋದಿ ರಾಜೀನಾಮೆ, ಶನಿವಾರ ಪ್ರಮಾಣ ವಚನ?
ನವದೆಹಲಿ:ಪ್ರಧಾನಿ ನರೇಂದ್ರ
ಮೋದಿ ಅವರು 2024 ಜೂನ್ 08ರ ಶನಿವಾರ
ಮೂರನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ
ಸ್ವೀಕರಿಸಲಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಇದರೊಂದಿಗೆ, ಕಾಂಗ್ರೆಸ್ ನಾಯಕ ಮತ್ತು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ನಂತರ
ದೇಶದ ಮೊದಲ (ಮತ್ತು ಏಕೈಕ) ಮೂರು ಅವಧಿಯ ನಾಯಕರೆಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಲಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು
ಅವರನ್ನು ಈದಿನ ಸಚಿವ ಸಂಪುಟದ ಸಹೋದ್ಯೋಗಿಗಳ ಜೊತೆಗೆ ಬೇಟಿ ಮಾಡಿದ ಮೋದಿ ಮುಂದಿನ
ಸರ್ಕಾರದ ರಚನೆಗೆ ಮುಂಚಿತವಾಗಿ ರಾಷ್ಟ್ರಪತಿಯವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದರು. ಅವರ ರಾಜೀನಾಮೆಯನ್ನು
ಸ್ವೀಕರಿಸಿದ ರಾಷ್ಟ್ರಪತಿ, ನೂತನ ವ್ಯವಸ್ಥೆ ಆಗುವವವರೆಗೆ ಪ್ರಧಾನಿಯಾಗಿ ಮುಂದುವರೆಯಲು ಸೂಚಿಸಿದರು.
ಮಿತ್ರ ಪಕ್ಷಗಳ ಜೊತೆಗಿನ ಸಭೆಗಳ ನಂತರ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
2014 ರಲ್ಲಿ 282 ಸ್ಥಾನಗಳನ್ನು ಮತ್ತು 2019 ರ ಚುನಾವಣೆಯಲ್ಲಿ 303 ಸ್ಥಾನಗಳನ್ನು ಗಳಿಸಿದ್ದ ನರೇಂದ್ರ
ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷವು ಈ ಬಾರಿ 240 ಸ್ಥಾನಗಳನ್ನು ಗೆದ್ದಿದೆ. ಇದು ಬಹುಮತಕ್ಕೆ
ಬೇಕಾದ 272 ಸ್ಥಾನಗಳಿಗಿಂತ 32ರಷ್ಟು ಕಡಿಮೆಯಾಗಿದೆ. ಹೀಗಾಗಿ ಈಗ
ಈಗ ಮೂರನೇ ಅವಧಿಗೆ ಅಧಿಕಾರದ ಮುದ್ರೆಯೊತ್ತಲು ಪಕ್ಷದ
ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ರಂಗದ (ನ್ಯಾಷನಲ್
ಡೆಮಾಕ್ರಟಿಕ್ ಅಲೈಯನ್ಸ್- ಎನ್ ಡಿಎ) ಅಂಗಪಕ್ಷಗಳ ಸದಸ್ಯರು ಗೆದ್ದಿರುವ 53 ಸ್ಥಾನಗಳನ್ನು ಅವಲಂಬಿಸಬೇಕಾಗಿದೆ.
ನರೇಂದ್ರ ಮೋದಿ ಅವರು ಉತ್ತರ
ಪ್ರದೇಶದ ವಾರಾಣಸಿಯಲ್ಲಿ ಕಾಂಗ್ರೆಸ್‌ನ ಅಜಯ್ ರೈ ಅವರನ್ನು 1.5 ಲಕ್ಷಕ್ಕಿಂತ ಕಡಿಮೆ ಮತಗಳಿಂದ ಸೋಲಿಸಿ ತಮ್ಮ ಲೋಕಸಭಾ ಸ್ಥಾನವನ್ನು ಉಳಿಸಿಕೊಂಡರು. ಇದರೊಂದಿಗೆ
ದೇಗುಲ ಪಟ್ಟಣದಲ್ಲಿ ಹ್ಯಾಟ್ರಿಕ್ ಸಂಸದರಾದರು.
ಮಂಗಳವಾರ ರಾತ್ರಿ ಪಕ್ಷದ ಕೇಂದ್ರ ಕಚೇರಿಯಲ್ಲಿ
ನಡೆದ ಸಭೆ ಹಾಗೂ ಇಂದು ಮುಂಜಾನೆ ಮೋದಿಯವರು ಎನ್‌ಡಿಎ
ಮೂರನೇ ಬಾರಿಗೆ ಸರ್ಕಾರ ರಚಿಸಲು ಹಕ್ಕು ಸಾಧಿಸಲಿದೆ ಎಂದು ದೃಢಪಡಿಸಿದರು, ಚುನಾವಣಾ ಫಲಿತಾಂಶಗಳನ್ನು "ವಿಶ್ವದ ಅತಿದೊಡ್ಡ
ಪ್ರಜಾಪ್ರಭುತ್ವದ ವಿಜಯ" ಎಂದು ಅವರು ಕರೆದರು.
ಈದಿನ ಬೆಳಗ್ಗೆ ಕೇಂದ್ರ ಸಚಿವ ಸಂಪುಟದ ಈ ಅವಧಿಯ ಅಂತಿಮ ಸಭೆಯ ಅಧ್ಯಕ್ಷತೆ ವಹಿಸಿದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 370 ಸ್ಥಾನಗಳನ್ನು (ಎನ್‌ಡಿಎ ಪಾಲುದಾರರು ಸೇರಿದಂತೆ 400+) ಗೆಲ್ಲುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿತ್ತು.
ಆದರೆ ಕಾಂಗ್ರೆಸ್-ನೇತೃತ್ವದ ʼಇಂಡಿʼ ಮೈತ್ರಿಕೂಟವು ಬಿಜೆಪಿಗೆ ಅಡ್ಡಗಾಲು
ಹಾಕಿ, ಹಿನ್ನಡೆಯನ್ನು ಉಂಟು ಮಾಡಿತು. ಪ್ರತಿಪಕ್ಷಗಳ ಮೈತ್ರಿಕೂಟ 232 ಸ್ಥಾನಗಳನ್ನು ಪಡೆದಿದೆ.
ಒಡಿಶಾ (21 ಸ್ಥಾನಗಳಲ್ಲಿ 20), ಆಂಧ್ರಪ್ರದೇಶ (25 ರಲ್ಲಿ 21), ಮಧ್ಯಪ್ರದೇಶ (29 ರಲ್ಲಿ 29) ಮತ್ತು
ಬಿಹಾರ (40 ರಲ್ಲಿ 30), ಎನ್ ಡಿಎಗೆ ಉತ್ತಮ ಫಲಿತಾಂಶ ತಂದುಕೊಟ್ಟವು. ಬಿಜೆಪಿಯು ಮತ್ತೊಮ್ಮೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ಮತ್ತು
ಇತರ ರಾಜ್ಯಗಳಲ್ಲಿ ಆದ ನಷ್ಟವನ್ನು ಸರಿದೂಗಿಸಲು ಈ ಫಲಿತಾಂಶಗಳು ಸಾಕಷ್ಟು ಸಹಕಾರಿಯಾದವು.
ಗಮನಾರ್ಹವಾಗಿ, ಬಿಜೆಪಿಯು ದಕ್ಷಿಣ ರಾಜ್ಯದಲ್ಲಿ ತನ್ನ ಮೊದಲ ಲೋಕಸಭಾ ಸ್ಥಾನವನ್ನು ಕೇರಳದಲ್ಲಿ ಗೆದ್ದುಕೊಂಡಿತು. ಬಿಜೆಪಿಯು
ದಕ್ಷಿಣದಲ್ಲಿ ನೆಲೆಯೂರಲು ಚಾರಿತ್ರಿಕ ಹೋರಾಟ ನಡೆಸಿತು. ಕೇರಳ ಮತ್ತು
ಆಂಧ್ರಪ್ರದೇಶ, ಮತ್ತು ತೆಲಂಗಾಣದ ಫಲಿತಾಂಶಗಳು ಇಲ್ಲಿ ಆದ ಬದಲಾವಣೆಗೆ ಸಾಕ್ಷಿಯಾಗಿವೆ.
ಆದರೂ, ತಮಿಳುನಾಡಿನಲ್ಲಿ ಸತತ
ಎರಡನೇ ಚುನಾವಣೆಯಲ್ಲೂ ಪಕ್ಷವು ಶೂನ್ಯ ಸಾಧನೆಗೆ ತೃಪ್ತಿ ಪಡಬೇಕಾಯಿತು. ಆಡಳಿತಾರೂಢ ಡಿಎಂಕೆ ಮತ್ತು ಇಂಡಿ ಮೈತ್ರಿಕೂಟದ ಮಿತ್ರಪಕ್ಷಗಳು
ಎಲ್ಲ 39 ಸ್ಥಾನಗಳನ್ನೂ ತಮಿಳುನಾಡಿನಲ್ಲಿ ಬಾಚಿಕೊಂಡವು.
ಮಂಗಳವಾರ ತಡರಾತ್ರಿ ಪಕ್ಷದ ದೆಹಲಿಯ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಪ್ರಧಾನಿ, ಭಾರತದ ಜನರು ಮೂರನೇ ಬಾರಿಗೆ ಎನ್ ಡಿಎಯಲ್ಲಿ "ನಂಬಿಕೆಯನ್ನು" ಇಟ್ಟಿದ್ದಾರೆ ಎಂದರು. "ಈ ಪ್ರೀತಿಗಾಗಿ ನಾನು ಜನರಿಗೆ ನಮಸ್ಕರಿಸುತ್ತೇನೆ ಮತ್ತು ಜನರ ಆಕಾಂಕ್ಷೆಗಳನ್ನು ಈಡೇರಿಸಲು ಕಳೆದ ದಶಕದಲ್ಲಿ ಮಾಡಿದ ಉತ್ತಮ ಕೆಲಸವನ್ನು ನಾವು ಮುಂದುವರಿಸುತ್ತೇವೆ ಎಂದು ಅವರಿಗೆ ಭರವಸೆ ನೀಡುತ್ತೇನೆ” ಎಂದು ಹೇಳಿದರು.
ಪ್ರಸ್ತುತ ಕಿಂಗ್ ಮೇಕರ್ ಗಳಾಗಿ ಕಾಣುತ್ತಿರುವ
ಸಮ್ಮಿಶ್ರ ಯುಗದ ರಾಜಕಾರಣಿಗಳಾದ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು
ನಾಯ್ಡು ಮತ್ತು ಜನತಾ ದಳ (ಯುನೈಟೆಡ್) ಮುಖ್ಯಸ್ಥ ನಿತೀಶ್ ಕುಮಾರ್ ಅವರನ್ನು ಮೋದಿ ತಮ್ಮ
ಭಾಷಣದಲ್ಲಿ ವಿಶೇಷವಾಗಿ ಉಲ್ಲೇಖಿಸಿದ್ದರು.
ನಾಯ್ಡು ಅವರ ಟಿಡಿಪಿ 16 ಲೋಕಸಭಾ ಸಂಸದರನ್ನು ಹೊಂದಿದೆ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು 12 ಸಂಸದರನ್ನು ಹೊಂದಿದೆ.
ಎನ್ ಡಿಎ ಈ 28 ಸ್ಥಾನಗಳನ್ನು ಕಳೆದುಕೊಂಡರೆ, ಅದರ ಸಂಖ್ಯಾಬಲ 293ರಿಂದ 265 ಕ್ಕೆ ಇಳಿಯುತ್ತದೆ
ಇಂಡಿ ಮೈತ್ರಿಕೂಟದ ಸ್ಥಾಪಕ
ಸದಸ್ಯರಾದ ನಿತೀಶ್ ಕುಮಾರ್ ಮತ್ತು ಹಿಂದೆ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್
ಅಲೈಯನ್ಸ್‌ನೊಂದಿಗೆ ಇದ್ದ ಚಂದ್ರಬಾಬು ನಾಯ್ಡು ಅವರನ್ನು ಸೆಳೆಯಲು ಇಂಡಿ ಮೈತ್ರಿಕೂಟದ ನಾಯಕರು
ಇನ್ನಿಲ್ಲದ ಪ್ರಯತ್ನಗಳಲ್ಲಿ ತಲ್ಲೀನರಾಗಿದ್ದಾರೆ.
ವರದಿಗಳ ಪ್ರಕಾರ ಇಂಡಿ ಮೈತ್ರಿಕೂಟವು ನಾಯ್ಡು ಅವರಿಗೆ
ಪ್ರಧಾನಿ ಸ್ಥಾನ ಮತ್ತು ನಿತೀಶ್ ಕುಮಾರ್ ಅವರಿಗೆ ಉಪ ಪ್ರಧಾನಿ ಸ್ಥಾನದ ಆಮಿಷ ಒಡ್ಡಿವೆ.
ಆದರೆ ಈ ಬಗ್ಗೆ ನಿತೀಶ್
ಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಆದರೆ ನಾಯ್ಡು ಅವರು ಇಂದು ದೆಹಲಿಯಲ್ಲಿ ಸುದ್ದಿಗಾರರಿಗೆ "ನಾನು
ಎನ್‌ಡಿಎಯಲ್ಲಿದ್ದೇನೆ ... ಸಭೆಗೆ ಹೋಗುತ್ತಿದ್ದೇನೆ" ಎಂದು ಹೇಳಿದರು.
ಚುನಾವಣಾ ಫಲಿತಾಂಶಗಳ ಪರಿಶೀಲನೆ ಮತ್ತು ಭವಿಷ್ಯದ ಯೋಜನೆಗಳನ್ನು ರೂಪಿಸಲು ಎನ್‌ಡಿಎ
ಮತ್ತು ಇಂಡಿ ಮೈತ್ರಿಕೂಟ ದೆಹಲಿಯಲ್ಲಿ ಹಗ್ಗಜಗ್ಗಾಟ ನಿರತವಾಗಿವೆ.
ಇವುಗಳನ್ನೂ ಓದಿ:
ಇವರೆಲ್ಲ ಭಾರತದ ಈವರೆಗಿನ ಪ್ರಧಾನಿಗಳು, ಮುಂದಿನ ಪ್ರಧಾನಿ …… ?
ಕನ್ಯಾಕುಮಾರಿಯ ಧ್ಯಾನ: ಪ್ರಧಾನಿ ಮೋದಿ ಹೊಸ ಸಂಕಲ್ಪಗಳು
ಅರುಣಾಚಲ ಪ್ರದೇಶ: ಬಿಜೆಪಿ ಹ್ಯಾಟ್ರಿಕ್, ಸಿಕ್ಕಿಂನಲ್ಲಿ ಎಸ್‌ಕೆಎಂ ಜಯಭೇರಿ
No comments:
Post a Comment