ಇಂದಿನ ಇತಿಹಾಸ History Today ಜುಲೈ 24
2022: ಯೂಜೀನ್, ಅಮೆರಿಕ: ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಭಾರತದ ನೀರಜ್ ಚೋಪ್ರಾ ಅವರು ಅಮೆರಿಕದ ಯೂಜೀನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಕ್ರೀಡಾಕೂಟದಲ್ಲಿ 2022 ಜುಲೈ 24ರ ಭಾನುವಾರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ 19 ವರ್ಷಗಳ ಬಳಿಕ ಭಾರತಕ್ಕೆ ಪದಕವನ್ನು ಒದಗಿಸಿ ಇತಿಹಾಸ ನಿರ್ಮಿಸಿದರು. ನೀರಜ್, ತಮ್ಮ ನಾಲ್ಕನೇ ಪ್ರಯತ್ನದಲ್ಲಿ 88.13 ಮೀಟರ್ ದೂರ ಎಸೆಯುವ ಮೂಲಕ ಈ ಸಾಧನೆ ಮಾಡಿದರು. ಅವರು ಅರ್ಹತಾ ಸುತ್ತಿನಲ್ಲಿಯೂ ಎರಡನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದ್ದರು. ಇಡೀ ದೇಶದ ಚಿತ್ತ, ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಚೋಪ್ರಾ ಅವರ ಮೇಲಿತ್ತು. ಸ್ಪರ್ಧೆಯಲ್ಲಿ ಗ್ರೆನಾಡದ ಆ್ಯಂಡರ್ಸನ್ ಪೀಟರ್ಸ್ ಅವರು ಚೋಪ್ರಾಗಿಂತ ಉತ್ತಮ ಸಾಧನೆ ತೋರಿದರು. ಪೀಟರ್ಸ್ 90.54 ಮೀಟರ್ ದೂರ ಎಸೆದು ಚಿನ್ನದ ಪದಕ ಬಾಚಿಕೊಂಡರು. ಚೆಕ್ ಗಣರಾಜ್ಯದ ಜಾಕೂಬ್ ವಾಡ್ಲೆಚ್ ಅವರು 88.09 ದೂರ ಎಸೆಯುವುದರೊಂದಿಗೆ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದರು. ನೀರಜ್ ಚೋಪ್ರಾ ಅವರು ಬೆಳ್ಳಿ ಸಾಧನೆ ಮಾಡುವ ಮೂಲಕ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ 19 ವರ್ಷಗಳ ಬಳಿಕ ಭಾರತಕ್ಕೆ ಪದಕ ಗೆದ್ದುಕೊಟ್ಟರು. 2003ರಲ್ಲಿ ಮಹಿಳೆಯರ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಅಂಜು ಬಾಬಿ ಜಾರ್ಜ್ ಕಂಚಿನ ಪದಕ ಗೆದ್ದಿದ್ದರು. ಅದಾದ ಬಳಿಕ ಭಾರತಕ್ಕೆ ಪದಕ ಕೈಗೂಡಿರಲಿಲ್ಲ. ನೀರಜ್ ಚೋಪ್ರಾ ಭಾರತದ ಅತ್ಯಂತ ವಿಶಿಷ್ಟ ಕ್ರೀಡಾಪಟುಗಳಲ್ಲಿ ಒಬ್ಬರು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಚೋಪ್ರಾ ಅವರನ್ನು ಅಭಿನಂದಿಸಿದರು.
2020: ನವದೆಹಲಿ: ಉಪ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಂಡಿರುವ ಸಚಿನ್ ಪೈಲಟ್ ಮತ್ತು ೧೮ ಮಂದಿಯ ಅವರ ಬಂಡಾಯ ಶಾಸಕರ ಗುಂಪಿನ ಅನರ್ಹತೆ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜಸ್ಥಾನ ಹೈಕೋರ್ಟ್ 2020 ಜುಲೈ 24ರ ಶುಕ್ರವಾರ ಆಜ್ಞಾಪಿಸಿದ್ದು ತನ್ನ ನಿರ್ಧಾರವನ್ನು ಸೋಮವಾರಕ್ಕೆ ಮುಂದೂಡಿತು. ಇದರೊಂದಿಗೆ ಪೈಲಟ್ ಮತ್ತು ಬೆಂಬಲಿಗರಿಗೆ ಇನ್ನೊಂದು ನಿರಾಳತೆ ಲಭ್ಯವಾಯಿತು. ಸೋಮವಾರ ಸುಪ್ರೀಂಕೋರ್ಟ್ ಕೂಡಾ ತನ್ನ ಮುಂದೆ ವಿಧಾನಸಭಾಧ್ಯಕ್ಷ ಸಿಪಿ ಜೋಶಿ ಅವರು ಸಲ್ಲಿಸಿರುವ ವಿಶೇಷ ಅರ್ಜಿಯ ವಿಚಾರಣೆ ನಡೆಸಲಿದೆ. ಅನರ್ಹತೆ ವಿಷಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಭಾರತ ಸರ್ಕಾರವನ್ನು ಕಕ್ಷಿದಾರನಾಗಿ ಸೇರಿಸಬೇಕು ಎಂಬುದಾಗಿ ಪೈಲಟ್ ಗುಂಪು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ಬಳಿಕ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿ ಅಲ್ಲಿಯವರೆಗೆ ಯಥಾಸ್ಥಿತಿ ಪಾಲನೆಗೆ ಆದೇಶ ನೀಡಿತು. ಅರ್ಜಿದಾರರು ಗುರುವಾರ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಇಂದ್ರಜಿತ್ ಮಹಾಂತಿ ಮತ್ತು ನ್ಯಾಯಮೂರ್ತಿ ಪ್ರಕಾಶ ಗುಪ್ತ ಅವರನ್ನು ಒಳಗೊಂಡ ಪೀಠವು ಅಂಗೀಕರಿಸಿತು. ಬಳಿಕ ಪೀಠವು ೨೦ ನಿಮಿಷಗಳ ಕಾಲ ಕಲಾಪವನ್ನು ಮುಂದೂಡಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ).
2020: ನವದೆಹಲಿ: ಭಾರತದಲ್ಲಿ ೪೯,೩೧೦ ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ಕೋವಿಡ್ -೧೯ ಪ್ರಕರಣಗಳ ಸಂಖ್ಯೆ ೧೨,೮೭,೯೪೫ಕ್ಕೆ ಏರಿದೆ. ಇದೇ ವೇಳೆಗೆ ಸೋಂಕಿನಿಂದ ಗುಣಮುಖರಾಗಿ ಚೇತರಿಸಿದರೆ ಸಂಖ್ಯೆ ೮,೧೭,೨೦೮ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು 2020 ಜುಲೈ 24ರ ಶುಕ್ರವಾರ ತಿಳಿಸಿವೆ. ಇದರಿಂದಾಗಿ ಶೇಕಡಾ ೬೩.೪೫ರಷ್ಟು ಜನರು ಚೇತರಿಸಿಕೊಂಡಂತಾಗಿದೆ. ದೇಶದಲ್ಲಿ ೭೪೦ ಹೊಸ ಸಾವುಗಳೊಂದಿಗೆ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ ೩೦,೬೦೧ ಕ್ಕೆ ಏರಿದೆ ಎಂದು ಶುಕ್ರವಾರ ಬೆಳಗ್ಗೆ ನವೀಕರಿಸಲಾದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಹೇಳಿವೆ. ದೇಶದಲ್ಲಿ ಪ್ರಸ್ತುತ ೪,೪೦,೧೩೫ ಸಕ್ರಿಯ ಕೊರೊನಾವೈರಸ್ ಸೋಂಕಿನ ಪ್ರಕರಣಗಳಿವೆ. ಕಳೆದ ೨೪ ಗಂಟೆಗಳಲ್ಲಿ ವರದಿಯಾದ ೭೪೦ ಸಾವುಗಳಲ್ಲಿ ಮಹಾರಾಷ್ಟ್ರದಿಂದ ೨೯೮, ಕರ್ನಾಟಕದಿಂದ ೯೭, ತಮಿಳುನಾಡಿನಿಂದ ೮೮, ಆಂಧ್ರಪ್ರದೇದಿಂದ ೬೧, ಪಶ್ಚಿಮ ಬಂಗಾಳದಿಂದ ೩೪, ಗುಜರಾತಿನಿಂದ ೨೮, ಉತ್ತರ ಪ್ರದೇಶ ಮತ್ತು ದೆಹಲಿಯಿಂದ ತಲಾ ೨೬, ರಾಜಸ್ಥಾನದಿಂದ ೧೧ ಸಾವುಗಳು ವರದಿಯಾಗಿವೆ. ರಾಜಸ್ಥಾನ, ಮಧ್ಯಪ್ರದೇಶದಿಂದ ೧೦ ಹಾಗೂ ಜಮ್ಮು ಮತ್ತು ಕಾಶ್ಮೀರ ಮತ್ತು ತೆಲಂಗಾಣದಿಂದ ತಲಾ ೯ ಸಾವುಗಳು ದಾಖಲಾಗಿವೆ. ಪಂಜಾಬಿನಲ್ಲಿ ೮, ಅಸ್ಸಾಂ, ಒಡಿಶಾ ಮತ್ತು ಹರಿಯಾಣದಲ್ಲಿ ತಲಾ ೬, ಕೇರದಲ್ಲಿ ೫, ಉತ್ತರಾಖಂಡ, ಜಾರ್ಖಂಡ್ ಮತ್ತು ಪುದುಚೇರಿಯಲ್ಲಿ ತಲಾ ೩ ಸಾವುಗಳು ಸಂಭವಿಸಿವೆ. ಛತ್ತೀಸ್‌ಗಢ, ತ್ರಿಪುರ ಮತ್ತು ಗೋವಾ ತಲಾ ೩ ಸಾವು ದಾಖಲಾಗಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ವರ್ಷ ಪೂರ್ತಿ ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಜನ್ಮ ಶತಮಾನೋತ್ಸವ ಆಚರಣೆಯನ್ನು ಹಮ್ಮಿಕೊಂಡದ್ದಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ ಪಕ್ಷದ ತೆಲಂಗಾಣ ಘಟಕಕ್ಕೆ 2020 ಜುಲೈ 24ರ ಶುಕ್ರವಾರ ಅಭಿನಂದನಾ ಪತ್ರಗಳನ್ನು ಬರೆದಿದ್ದಾರೆ. "ನರಸಿಂಹ ರಾವ್ ಅವರ ಜನ್ಮ ಶತಮಾನೋತ್ಸವವು ವಿದ್ವತ್ಪೂರ್ಣ ಮತ್ತು ಪ್ರಬುದ್ಧ ವ್ಯಕ್ತಿತ್ವವನ್ನು ನೆನಪಿಸಿಕೊಳ್ಳುವ ಮತ್ತು ಗೌರವಿಸುವ ಸಂದರ್ಭವಾಗಿದೆ’ ಎಂದು ಸೋನಿಯಾ ಗಾಂಧಿ ಅವರ ಸಂದೇಶ ತಿಳಿಸಿದೆ. "ರಾಜ್ಯ ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ಸುದೀರ್ಘ ವೃತ್ತಿಜೀವನದ ನಂತರ, ಗಂಭೀರ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಅವರು ಭಾರತದ ಪ್ರಧಾನಿಯಾದರು. ಅವರ ದಿಟ್ಟ ನಾಯಕತ್ವದ ಮೂಲಕ ನಮ್ಮ ದೇಶವು ಅನೇಕ ಸವಾಲುಗಳನ್ನು ಯಶಸ್ವಿಯಾಗಿ ಜಯಿಸಲು ಸಾಧ್ಯವಾಯಿತು. ೧೯೯೧ರ ಜುಲೈ ೨೪ರ ಕೇಂದ್ರ ಮುಂಗಡಪತ್ರವು ನಮ್ಮ ದೇಶದ ಆರ್ಥಿಕ ಪರಿವರ್ತನೆಗೆ ದಾರಿಮಾಡಿಕೊಟ್ಟಿತು’ ಎಂದು ಸೋನಿಯಾ ಗಾಂಧಿ ಅವರ ಪತ್ರ ಹೇಳಿತು. ’ರಾವ್ ಅವರ ಅಧಿಕಾರಾವಧಿಯನ್ನು ಹಲವಾರು ರಾಜಕೀಯ, ಸಾಮಾಜಿಕ ಮತ್ತು ವಿದೇಶಿ ನೀತಿಯ ಸಾಧನೆಗಳಿಂದ ಗುರುತಿಸಲಾಗಿದೆ ಮತ್ತು ಅವರು ಸಮರ್ಪಿತ ಕಾಂಗ್ರೆಸ್ಸಿಗರಾಗಿದ್ದರು’ ಎಂದು ಸೋನಿಯಾ ಬೊಟ್ಟು ಮಾಡಿದ್ದಾರೆ. ‘ಈ ವರ್ಷಪೂರ್ತಿ ಪಿವಿಎನ್ ಜನ್ಮ ಶತಮಾನೋತ್ಸವ ಆಯೋಜಿಸಿದ್ದಕ್ಕಾಗಿ ನಾನು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯನ್ನು ಅಭಿನಂದಿಸುತ್ತೇನೆ. ಪಿ.ವಿ.ನರಸಿಂಹ ರಾವ್ ಅವರು ಅತ್ಯಂತ ಗೌರವಾನ್ವಿತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವ್ಯಕ್ತಿ. ಅವರ ಅನೇಕ ಸಾಧನೆಗಳು ಮತ್ತು ಕೊಡುಗೆಗಳಲ್ಲಿ ಕಾಂಗ್ರೆಸ್ ಪಕ್ಷ ಹೆಮ್ಮೆ ಪಡುತ್ತದೆ’ ಎಂದು ಅವರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಜೈಪುರ: ೨೦೦ ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ೧೦೯ ಶಾಸಕರ ಬೆಂಬಲ ಹೊಂದಿರುವುದಾಗಿ ಪ್ರತಿಪಾದಿಸಿರುವ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು ಬಹುಮತ ಸಾಬೀತು ಪಡಿಸಲು ಅನುವು ಮಾಡಿಕೊಡಲು ಸೋಮವಾರ ವಿಧಾನಸಭೆ ಅಧಿವೇಶನ ಕರೆಯಬೇಕು ಎಂದು ಆಗ್ರಹಿಸಿ ತಮ್ಮ ಬೆಂಬಲಿಗ ಶಾಸಕರೊಂದಿಗೆ 2020 ಜುಲೈ 24ರ ಶುಕ್ರವಾರ ರಾಜ್ಯಭವನದ ಮುಂದೆ ಧರಣಿ ನಡೆಸುವುದುರೊಂದಿಗೆ ರೋಚಕ ತಿರುವು ಪಡೆದುಕೊಂಡಿತು. ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಪಟ್ಟು ಬಿಗಿಗೊಳಿಸಿರುವ ಗೆಹ್ಲೋಟ್ ತಂಡವು ’ಹೌಸ್ ಬುಲಾವೋ(ಅಧಿವೇಶನ ಕರೆಯಿರಿ)’ ಎಂದು ರಾಜ್ಯಪಾಲರನ್ನು ಉದ್ದೇಶಿಸಿ ಘೋಷಣೆ ಕೂಗುತ್ತಾ ಧರಣಿ ನಡೆಸಿದರು. ಕೇಂದ್ರದ ಒತ್ತಡದಿಂದಾಗಿ ರಾಜ್ಯಪಾಲರು ವಿಶೇಷ ಅಧಿವೇಶನ ಕರೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಗೆಹ್ಲೋಟ್ ಗಂಭೀರ ಆರೋಪ ಮಾಡಿದರು. ಪ್ರತಿಭಟನೆ ನಿರತ ಗೆಹ್ಲೋಟ್ ಬಣಕ್ಕೆ ರಾಜ್ಯಪಾಲರಿಂದ ಯಾವುದೇ ಆಶ್ವಾಸನೆ ಬರದೇ ಇರುವುದರಿಂದ ಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಂಡಿತು. ಸಚಿನ್ ಪೈಲಟ್ ಅನರ್ಹತೆ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜಸ್ಥಾನ ಹೈಕೋರ್ಟ್ ಆದೇಶಿಸಿದ ಬೆನ್ನಲ್ಲೇ, ಗೆಹ್ಲೋಟ್ ಬಣ ಹೋಟೆಲಿನಿಂದ ನೇರವಾಗಿ ಬಸ್ಸಿನ ಮೂಲಕ ರಾಜಭವನಕ್ಕೆ ಆಗಮಿಸಿ ವಿಶೇಷ ವಿಧಾನಸಭೆ ಕರೆಯುವಂತೆ ಒತ್ತಾಯಿಸತೊಡಗಿತು. ‘ವಿಧಾನಸಭೆಯಲ್ಲಿ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳಿಗೆ ಬಹುಮತ ಇದೆ. ಅಷ್ಟೇ ಅಲ್ಲ, ಪಕ್ಷದ ವಿರುದ್ಧ ಬಂಡಾಯವೆದ್ದು ಹೋಗಿರುವ ಶಾಸಕರಲ್ಲಿ ಕೆಲವರು ಪುನಃ ಪಕ್ಷಕ್ಕೆ ಮರಳಲು ಉತ್ಸುಕರಾಗಿದ್ದಾರೆ. ಆದರೆ ಅವರನ್ನು ಹರಿಯಾಣದಲ್ಲಿ ಬಂಧಿಸಿ ಇಡಲಾಗಿದೆ’ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ
No comments:
Post a Comment