Sunday, November 23, 2008

ಇಂದಿನ ಇತಿಹಾಸ History Today ನವೆಂಬರ್ 20

ಇಂದಿನ ಇತಿಹಾಸ

ನವೆಂಬರ್ 20

 ಮರಾಠಾ ಯೋಧ ಶಿವಾಜಿ ತನ್ನ ಕೈಗೆ ಅಂಟಿಸಲಾಗಿದ್ದ `ವ್ಯಾಘ್ರನಖ' (ಹುಲಿ ಉಗುರು) ಬಳಸಿ ಬಿಜಾಪುರದ ಅದಿಲ್ ಶಹಾನ ಜನರಲ್ ಅಫ್ಜಲ್ ಖಾನನನ್ನು ಕೊಂದು ಹಾಕಿದ. ಸಂಧಾನದ ಹೆಸರಿನಲ್ಲಿ ಶಿವಾಜಿಯ ಹತ್ಯೆಗಾಗಿ ನಡೆದಿದ್ದ ಸಂಚೊಂದು ಈ ರೀತಿ ವಿಫಲಗೊಂಡಿತು. ಈ ಘಟನೆಯ ಬಳಿಕ ಶಿವಾಜಿ `ಹೀರೋ' ಆಗಿ ಬೆಳೆದ.

2007: ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿ, ವಿಧಾನ ಸಭೆಯ ವಿಸರ್ಜನೆಗೆ ಸಂಸತ್ತನ್ನು ಕೋರಲು ನಿರ್ಧರಿಸಿತು. ಸಂಪುಟದ ನಿರ್ಣಯಕ್ಕೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಂಗೀಕಾರದ ಮೊಹರು ಒತ್ತಿದ ನಂತರ ಗೃಹಸಚಿವ ಶಿವರಾಜ್ ಪಾಟೀಲ್ ರಾಷ್ಟ್ರಪತಿ ಆಳ್ವಿಕೆಯ ಅಧಿಕೃತ ನಿರ್ಧಾರವನ್ನು ಸಂಜೆ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರಿಗೆ ರವಾನಿಸಿದರು. ಹೀಗಾಗಿ ಕರ್ನಾಟಕ ಕೇವಲ ಆರು ವಾರಗಳ ಅವಧಿಯಲ್ಲಿ ಎರಡನೇ ಬಾರಿಗೆ ರಾಷ್ಟ್ರಪತಿ ಆಳ್ವಿಕೆಗೆ ಒಳಗಾಯಿತು. ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ಜೆಡಿ (ಎಸ್) ನಿರಾಕರಿಸಿದ್ದರಿಂದ ನಿರ್ಮಾಣವಾದ ರಾಜಕೀಯ ಬಿಕ್ಕಟ್ಟಿನಿಂದಾಗಿ 2007ರ ಅಕ್ಟೋಬರ್ ಒಂಬತ್ತರಿಂದ ನವೆಂಬರ್ 12ರ ವರೆಗೆ 34 ದಿನಗಳ ಕಾಲ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. 

2007: ಹನೂರು ಕ್ಷೇತ್ರ ಶಾಸಕಿ ಪರಿಮಳಾ ನಾಗಪ್ಪ ಅವರ ಅಳಿಯ ಡಾ.ಕಿರಣ್ ಪಟೇಲ್ (34) ಅವರು ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಭೂಪಸಂದ್ರ ಬಡಾವಣೆಯಲ್ಲಿ ಸಂಭವಿಸಿತು. ಎಂಬಿಬಿಎಸ್ ವ್ಯಾಸಂಗ ಮುಗಿಸಿದ ಬಳಿಕ ವೈದ್ಯಕೀಯ ಉಪಕರಣಗಳ ವ್ಯಾಪಾರ ಮಾಡಿಕೊಂಡಿದ್ದ ಕಿರಣ್ ಪಟೇಲ್ ಅವರು ಭೂಪಸಂದ್ರದಲ್ಲಿ ನೆಲೆಸಿದ್ದರು. 

2007: 1997ರಲ್ಲಿ ದೆಹಲಿಯ ಉಪಾಹಾರ್ ಸಿನಿಮಾ ಮಂದಿರದ ಬೆಂಕಿ ದುರಂತದಲ್ಲಿ 59 ಜನರು ಸಜೀವ ದಹನಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನಿಮಾ ಮಂದಿರದ ಮಾಲಿಕರಾದ ಸುಶಿಲ್, ಗೋಪಾಲ್ ಅನ್ಸಾಲ್ ಮತ್ತು ದೆಹಲಿ ನಗರಪಾಲಿಕೆ ಅಧಿಕಾರಿಗಳಾದ ಶಾಂ ಸುಂದರ್ ಶರ್ಮಾ, ಎನ್. ಡಿ. ತಿವಾರಿ ಹಾಗೂ ಅಗ್ನಿ ಶಾಮಕದ ದಳದ ಅಧಿಕಾರಿ ಎಚ್. ಎಸ್. ಪನ್ವರ್ ಅವರೂ ಸೇರಿ ಇತರ 12 ಮಂದಿಯನ್ನು ತಪ್ಪಿತಸ್ಥರು ಎಂದು ನ್ಯಾಯಾಲಯ ಘೋಷಿಸಿತು. ಅನ್ಸಾಲ್ ಮತ್ತು ಇತರ 12 ಮಂದಿ ಭಾರತೀಯ ದಂಡ ಸಂಹಿತೆ 304ಎ (ಆತುರ ಹಾಗೂ ನಿರ್ಲ್ಯಕ್ಷದ ಕ್ರಮ) ಮತ್ತು ಜನರ ಜೀವಕ್ಕೆ ಅಪಾಯ ಒಡ್ಡಿದ ಇತರ ಪ್ರಕರಣಗಳ ಪ್ರಕಾರ ತಪ್ಪಿತಸ್ಥರು. ಇದಲ್ಲದೆ ಅನ್ಸಾಲ್ ಸಹೋದರರು ಸಿನಿಮಾಟೋಗ್ರಫಿ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ಹೆಚ್ಚುವರಿ ಸೆಷನ್ ನ್ಯಾಯಾಧೀಶರಾದ ಮಮತಾ ಸೆಹಗಲ್ ತೀರ್ಪು ನೀಡಿದರು. ಅನ್ಸಾಲ್ ಸಹೋದರರ ಎಂಟು ಮಂದಿ ಸಂಬಂಧಿಕರೂ ಸೇರಿದಂತೆ ಸಿಬಿಐ ಅಧಿಕಾರಿಗಳು ಒಟ್ಟು 115 ಸಾಕ್ಷಿಗಳ ವಿಚಾರಣೆ ನಡೆಸಿದ್ದರು. ಅನ್ಸಾಲ್ ಸಂಬಂಧಿಗಳು ನಂತರ ತದ್ವಿರುದ್ಧ ಹೇಳಿಕೆ ನೀಡಿದ್ದರು. ಈ ಮಧ್ಯೆ ಅನ್ಸಾಲ್ ಸಹೋದರರ ಆಮಿಷಕ್ಕೆ ಒಳಗಾಗಿ ದಾಖಲೆ ಪತ್ರಗಳನ್ನು ತಿದ್ದಿದ್ದ  ನ್ಯಾಯಾಲಯದ ಸಿಬ್ಬಂದಿಯೊಬ್ಬರನ್ನು ಸೇವೆಯಿಂದ ವಜಾ ಮಾಡಲಾಗಿತ್ತು.

2007:  ದೇವರ ಆಜ್ಞೆಯ ನೆಪ ಹೇಳಿ  ಜಲಪೈಗುರಿ ಜಿಲ್ಲೆಯ ಕಾಶಿಯಾಜ್ಹೋರಾ ಗ್ರಾಮದ ಅಫಿಜುದ್ದೀನ್ ಅಲಿ (37) ಎಂಬಾತ  ತನ್ನ ಹದಿಹರೆಯದ ಮಗಳನ್ನೇ ಮದುವೆಯಾದ ವಿಚಿತ್ರ ಘಟನೆ ತಡವಾಗಿ ಬೆಳಕಿಗೆ ಬಂದಿತು. ದೈವಿಕ ಇಚ್ಛೆಯೇ ತಾನು ತನ್ನ ಮಗಳನ್ನು ಮದುವೆಯಾಗಲು ಕಾರಣ. ದೇವರು ಕನಸಲ್ಲಿ ಬಂದು ಹಿರಿಯ ಮಗಳನ್ನು ಮದುವೆಯಾಗಲು ಆಜ್ಞಾಪಿಸಿದ ಎಂಬ ಸಬೂಬನ್ನು ಈ ಭೂಪ ನೀಡಿದ. ಹುಡುಗಿ ಐದು ತಿಂಗಳ ಗರ್ಭಿಣಿಯಾದಾಗ ವಿಷಯ ಬೆಳಕಿಗೆ ಬಂತು.

2007: ತಿರುಮಕೂಡಲಿನ ಇತಿಹಾಸ ಪ್ರಸಿದ್ಧ ಸೋಸಲೆ ವ್ಯಾಸರಾಜಮಠದ ಮಠಾಧಿಪತಿಗಳಾಗಿದ್ದ ವಿದ್ಯಾವಾಚಸ್ಪತಿ ತೀರ್ಥ ಸ್ವಾಮೀಜಿ (87) ತಿ. ನರಸೀಪುರದಲ್ಲಿ ನಿಧನರಾದರು. ಮೂಲತಃ ತಿ. ನರಸೀಪುರ ತಾಲ್ಲೂಕಿನ ತಲಕಾಡಿನವರಾದ ಸ್ವಾಮೀಜಿ, ಗುಂಬಳ್ಳಿ ನರಸಿಂಹಾಚಾರ್ ಅವರ ಪುತ್ರರಾಗಿದ್ದರು. ತಿ.ನರಸೀಪುರದಲ್ಲಿ ತಮ್ಮ ವಿದ್ಯಾಭ್ಯಾಸ ಪಡೆದಿದ್ದರು. ಮಹಾರಾಜರ ಕಾಲದಲ್ಲಿ ಇವರು 5 ಭಾಷೆಗಳಲ್ಲಿ ಹರಿಕಥಾ ವಿದ್ವಾಂಸರಾಗಿ ಸೇವೆ ಸಲ್ಲಿಸಿದ್ದರು. ಇವರಿಗೆ 10 ಮಂದಿ ಮಕ್ಕಳಿದ್ದರು. 1997ರಲ್ಲಿ ಮಠದ 54ನೇ ಮಠಾಧಿಪತಿಗಳಾಗಿ ಇವರು ನೇಮಕಗೊಂಡಿದ್ದರು.

2007: ಪೆಪ್ಸಿಕೊದ ಚೇರ್ಮನ್ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಇಂದ್ರಾ ಕೆ. ನೂಯಿ ಅವರನ್ನು ಅಮೆರಿಕ ಭಾರತ ವಾಣಿಜ್ಯ ಮಂಡಳಿಯ (ಯುಎಸ್ಐಬಿಸಿ) ನಿರ್ದೇಶಕ ಮಂಡಳಿಗೆ ನೇಮಕ ಮಾಡಲಾಯಿತು. ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವ ಅಮೆರಿಕದ 250 ಬೃಹತ್ ಉದ್ದಿಮೆ ಸಂಸ್ಥೆಗಳಿಗೆ ಮತ್ತು ಭಾರತದ 24 ಜಾಗತಿಕ ಸಂಸ್ಥೆಗಳಿಗೆ `ಯು ಎಸ್ ಐ ಬಿ ಸಿ' ಸಲಹಾ ರೂಪದ ಸೇವೆ ನೀಡುತ್ತದೆ.

2006: ಕ್ಯಾನ್ಸರ್, ಏಡ್ಸ್, ಮಧುಮೇಹ ಮತ್ತು ರಕ್ತದ ಒತ್ತಡದಂತಹ ರೋಗಗಳನ್ನು ವಾಸಿ ಮಾಡುವಲ್ಲಿಪರಿಣಾಮಕಾರಿ ಫಲ ನೀಡಿರುವ ಗೋಮೂತ್ರ ಇದೀಗ ಗಡಿಯಾರದ ಮುಳ್ಳುಗಳನ್ನು ಚಲಿಸುವಂತೆ ಮಾಡುವಲ್ಲಿಯೂ ಯಶಸ್ವಿಯಾಯಿತು. ಕಛ್ ಮೂಲದ ವರ್ಧಮಾನ ಜೀವದಯಾ ಕೇಂದ್ರದ ಆಡಳಿತ ಟ್ರಸ್ಟಿ ವಸಂತಜಿ ಪ್ರೇಮ್ ಜಿ ಸೋನಿ ಅವರು ಆನಂದದಲ್ಲಿ ಗುಜರಾತ್ ಪ್ರದೇಶ ಆಯುರ್ವೇದ ಸಮ್ಮೇಳನದ ಆಶ್ರಯದಲ್ಲಿ ನಡೆದ ಆಯುರ್ವೇದ ಮೇಳದಲ್ಲಿ ಇದನ್ನು ಯಶಸ್ವಿಯಾಗಿ ಪ್ರಯೋಗ ಮಾಡಿ ತೋರಿಸಿದರು. ಅವರು ಮಾಡಿದ್ದು ಇಷ್ಟೆ: ಒಂದು ಲೋಟದದಲ್ಲಿ ಗೋಮೂತ್ರ ತುಂಬಿ ಅದರಲ್ಲಿ ತಾಮ್ರ ಹಾಗೂ ಸತುವಿನ ಒಂದೊಂದು ವಿದ್ಯುತ್ ವಾಹಕಗಳನ್ನು (ಎಲೆಕ್ಟ್ರೋಡ್) ಮುಳುಗಿಸಿದರು. ವಿದ್ಯುತ್ ಸಂಪರ್ಕ ಕಲ್ಪಿಸುವ ಈ ಪ್ರಕ್ರಿಯೆ ಪೂರ್ಣಗೊಂಡಾಗ ವಿದ್ಯುತ್ ಸಂಚಾರ ಆರಂಭವಾಗಿ ಗಡಿಯಾರದ ಮುಳ್ಳುಗಳು ಟಿಕ್ ಟಿಕ್ ಸದ್ದು ಮಾಡುತ್ತಾ ಚಲಿಸಲಾರಂಭಿಸಿದವು. `ಗೋಮೂತ್ರದಿಂದ ಈ ರೀತಿ ಉತ್ಪನ್ನವಾಗುವ ವಿದ್ಯುತ್ತಿನಿಂದ ಗಡಿಯಾರವನ್ನು 15 ದಿನಗಳ ಕಾಲ ನಿರಂತರವಾಗಿ ಚಲಾಯಿಸಬಹುದು. ಗೋಮೂತ್ರದ ವಿದ್ಯುತ್ ಶಕ್ತಿಯ ಬಗ್ಗೆ 1999ರಿಂದಲೇ ಪ್ರಯೋಗ ನಡೆಸುತ್ತಿದ್ದೇನೆ. ಎಲೆಕ್ಟ್ರಾನಿಕ್ ಕ್ಯಾಲ್ಕುಲೇಟರುಗಳು ಹಾಗೂ ರೇಡಿಯೋಗಳನ್ನು ಸಹಾ ಗೋಮೂತ್ರ ಬಳಸಿ ಚಲಾಯಿಸುವಲ್ಲಿ ಯಶಸ್ವಿಯಾಗಿದ್ದೇನೆ' ಎಂದು ಅವರು ಪ್ರತಿಪಾದಿಸಿದರು. ವರ್ಧಮಾನ ಜೀವದಯಾ ಕೇಂದ್ರವು ಗೋಶಾಲೆಯೊಂದನ್ನು ನಡೆಸುತ್ತಿದ್ದು ಅಲ್ಲಿ ಭಾರಿ ಪ್ರಮಾಣದಲ್ಲಿ ಹಸುಗಳನ್ನು ಸಾಕುತ್ತಿದೆ. 

2006: ಉತ್ತರ ಬಂಗಾಳದ ನ್ಯೂ ಜಲಪೈಗುರಿ ಸಮೀಪದ ಬೆಲಕೋಬ ನಿಲ್ದಾಣದಲ್ಲಿ, ಹಲ್ದಿಬಾರಿ-ಸಿಲಿಗುರಿ ಪ್ಯಾಸೆಂಜರ್ ರೈಲಿನಲ್ಲಿ ಸಂಜೆ ಸಂಭವಿಸಿದ ಭಾರಿ ಬಾಂಬ್ ಸ್ಫೋಟದಲ್ಲಿ 8 ಪ್ರಯಾಣಿಕರು ಮೃತರಾಗಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಅನಧಿಕೃತ ಮೂಲಗಳ ಪ್ರಕಾರ ಸತ್ತವರ ಸಂಖ್ಯೆ 15 ಎಂದು ಹೇಳಲಾಗಿದೆ. ರೈಲುಗಾಡಿಯ ಬೋಗಿಯೊಂದರ ಶೌಚಾಲಯದಲ್ಲಿ ಉಗ್ರಗಾಮಿಗಳು ಬಾಂಬನ್ನು ಅಡಗಿಸಿ ಇಟ್ಟಿದ್ದರು ಎಂದು ಶಂಕಿಸಲಾಗಿದೆ.

2006: ತ್ವರಿತವಾಗಿ ಆರ್ಥಿಕ ಬೆಳವಣಿಗೆ ಸಾಧಿಸುತ್ತಿರುವ ಭಾರತ ಮತ್ತು ಚೀನಾ ದೇಶಗಳ ಪರಸ್ಪರ ಬಾಂಧವ್ಯ ಸುಧಾರಣೆಗೆ ಒತ್ತು ಸಿಗುವ ನಿರೀಕ್ಷೆಗಳ ಮಧ್ಯೆ ಚೀನಾ ಅಧ್ಯಕ್ಷ ಹು ಜಿಂಟಾವೊ ಅವರು ನವದೆಹಲಿಗೆ ಆಗಮಿಸಿದರು. ಉನ್ನತ ಮಟ್ಟದ ನಿಯೋಗದ ನೇತೃತ್ವ ವಹಿಸಿರುವ ಜಿಂಟಾವೊ ಅವರನ್ನು ಪಾಲಂ ವಿಮಾನ ನಿಲ್ದಾಣದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣವ್ ಮುಖರ್ಜಿ ಹಾಗೂ ಕೇಂದ್ರ ಸಚಿವ ಕಪಿಲ್ ಸಿಬಲ್ ಸ್ವಾಗತಿಸಿದರು. 10 ವರ್ಷಗಳ ಅವಧಿಯಲ್ಲಿ ಭಾರತಕ್ಕೆ ಭೇಟಿ ನೀಡಿದ ಮೊದಲ ಚೀನೀ ರಾಷ್ಟ್ರಪತಿ ಜಿಂಟಾವೊ.

2005: ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಬೆಂಗಳೂರಿನಲ್ಲಿ ಕರ್ನಾಟಕ ವಿಧಾನಮಂಡಲ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದರು. ಉಜ್ವಲ ಕರ್ನಾಕಕಕ್ಕೆ ನೀಲನಕ್ಷೆಯನ್ನು ಪ್ರಕಟಿಸಿದರು.

1999: ಖ್ಯಾತ ಗಾಯಕಿ ಲತಾ ಮಂಗೇಶ್ಕರ್, ಹಿರಿಯ ಪತ್ರಕರ್ತ ರಾಮಸ್ವಾಮಿ, ನ್ಯಾಯಮೂರ್ತಿ ಫಾಲಿ ಎಸ್. ನಾರಿಮನ್ ಮತ್ತು ಹಿರಿಯ ಆರೆಸ್ಸೆಸ್ ನಾಯಕ ನಾನಾಜಿ ದೇಶಮುಖ್ ಅವರನ್ನು ರಾಜ್ಯಸಭೆ ಸದಸ್ಯರಾಗಿ ನಾಮಕರಣ ಮಾಡಲಾಯಿತು.

1995: ತಾನು ರಾಜಕುಮಾರ ಚಾರ್ಲ್ಸ್ ಅವರಿಗೆ ವಿಧೇಯಳಾಗಿಲ್ಲ ಎಂದು ರಾಜಕುಮಾರಿ ಡಯಾನಾ ಬಿಬಿಸಿಯಲ್ಲಿ ಪ್ರಸಾರವಾದ ಸಂದರ್ಶನವೊಂದರಲ್ಲಿ ಒಪ್ಪಿಕೊಂಡರು.

1981: ಭಾರತದ ಎರಡನೇ ಭೂ ವೀಕ್ಷಣಾ ಉಪಗ್ರಹ `ಭಾಸ್ಕರ-2'ನ್ನು ಮಾಸ್ಕೋದ ಬಾಹ್ಯಾಕಾಶ ಉಪಗ್ರಹ ನಿಲ್ದಾಣದಿಂದ ಯಶಸ್ವಿಯಾಗಿ ಅಂತರಿಕ್ಷಕ್ಕೆ ಹಾರಿಬಿಡಲಾಯಿತು.

1975: ಸ್ಪೇನಿನ ಜನರಲ್ ಫ್ರಾನ್ಸಿಸ್ಕೊ ಫ್ರಾಂಕೊ ತಮ್ಮ 82ನೇ ವಯಸ್ಸಿನಲ್ಲಿ ನಿಧನರಾದರು. ಹೆಚ್ಚು ಕಡಿಮೆ 40 ವರ್ಷಗಳ ಕಾಲ ಅವರು ಸ್ಪೇನಿನ ಆಡಳಿತ ನಡೆಸಿದರು.

1970: ಸಾಹಿತಿ ಟಿ. ಪದ್ಮ ಜನನ.

1962: ಕ್ಯೂಬಾದ ಕ್ಷಿಪಣಿ ಬಿಕ್ಕಟ್ಟು ಅಂತ್ಯಗೊಂಡಿತು. ಸೋವಿಯತ್ ಯೂನಿಯನ್ ಕ್ಯೂಬಾದಲ್ಲಿದ್ದ ತನ್ನ ಎಲ್ಲ ಕ್ಷಿಪಣಿ ಹಾಗೂ ಬಾಂಬರುಗಳನ್ನು. ಅಮೆರಿಕ ದ್ವೀಪದ ಮೇಲೆ ವಿಧಿಸಿದ್ದ ದಿಗ್ಬಂಧನವನ್ನು ರದ್ದು ಪಡಿಸಿತು.

1952: ಸಾಹಿತಿ ಕಮಲಾ ಹೆಮ್ಮಿಗೆ ಜನನ.

1947: ಬ್ರಿಟನ್ನಿನ ರಾಜಕುಮಾರಿ ಎಲಿಜಬೆತ್ ಮತ್ತು ಎಡಿನ್ ಬರೋದ ಡ್ಯೂಕ್ ಫಿಲಿಪ್ ಮೌಂಟ್ ಬ್ಯಾಟನ್ ಅವರ ವಿವಾಹ ವೆಸ್ಟಮಿನ್ ಸ್ಟರ್ ಅಬ್ಬೆಯಲ್ಲಿ ನಡೆಯಿತು.

1944: ಸಾಹಿತಿ ದಾಸೇಗೌಡ (ಜಿವಿಡಿ) ಜನನ.

1931: ಸಾಹಿತಿ ವಿ.ಜೆ. ನಾಯಕ ಜನನ.

1918: ಸಾಹಿತಿ ಇ.ಆರ್. ಸೇತೂರಾಂ ಜನನ.

1900: ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾದ ದೇಶಭಕ್ತರಿಗೆ ಕನ್ನಡ ದೇಶಭಕ್ತಿ ಗೀತೆಗಳನ್ನು ರಚಿಸಿಕೊಟ್ಟ `ಭಾರತಿ' ಕಾವ್ಯನಾಮದ ರಾಜಮ್ಮ (20-11-1900ರಿಂದ 24-10-1984) ಅವರು ರಾಘವಾಚಾರ್ಯರು- ಸೀತಮ್ಮ ದಂಪತಿಯ ಮಗನಾಗಿ ತುಮಕೂರಿನಲ್ಲಿ ಜನಿಸಿದರು.

1889: ಅಮೆರಿಕದ ಖಗೋಳ ವಿಜ್ಞಾನಿ ಎಡ್ವಿನ್ ಪೊವೆಲ್ ಹಬಲ್ (1889-1953) ಹುಟ್ಟಿದ ದಿನ. ವಿಶ್ವವು ವಿಸ್ತಾರಗೊಳ್ಳುತ್ತಿದೆ ಎಂಬುದಕ್ಕೆ ಇವರು ಮೊತ್ತ ಮೊದಲ ಸಾಕ್ಷ್ಯ ಒದಗಿಸಿದರು. ಇಂದು ಇವರು `ಎಕ್ಸ್ ಟ್ರಾ ಗ್ಯಾಲಕ್ಟಿಕ್ ಅಸ್ಟ್ರಾನಮಿ'ಯ ಸ್ಥಾಪಕರೆಂದೇ ಖ್ಯಾತರಾಗಿದ್ದಾರೆ.

1873: ಪ್ರತಿಸ್ಪರ್ಧಿ ನಗರಗಳಾಗಿದ್ದ ಬುಡಾ ಮತ್ತು ಪೆಸ್ಟ್ ಒಂದಾಗಿ ಹಂಗರಿಯ ರಾಜಧಾನಿ `ಬುಡಾಪೆಸ್ಟ್' ರೂಪುಗೊಂಡಿತು.

1659: ಮರಾಠಾ ಯೋಧ ಶಿವಾಜಿ ತನ್ನ ಕೈಗೆ ಅಂಟಿಸಲಾಗಿದ್ದ `ವ್ಯಾಘ್ರನಖ' (ಹುಲಿ ಉಗುರು) ಬಳಸಿ ಬಿಜಾಪುರದ ಅದಿಲ್ ಶಹಾನ ಜನರಲ್ ಅಫ್ಜಲ್ ಖಾನನನ್ನು ಕೊಂದು ಹಾಕಿದ. ಸಂಧಾನದ ಹೆಸರಿನಲ್ಲಿ ಶಿವಾಜಿಯ ಹತ್ಯೆಗಾಗಿ ನಡೆದಿದ್ದ ಸಂಚೊಂದು ಈ ರೀತಿ ವಿಫಲಗೊಂಡಿತು. ಈ ಘಟನೆಯ ಬಳಿಕ ಶಿವಾಜಿ `ಹೀರೋ' ಆಗಿ ಬೆಳೆದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement