Showing posts with label ಎನ್‌ ಎಲ್‌ ಟಿ. Show all posts
Showing posts with label ಎನ್‌ ಎಲ್‌ ಟಿ. Show all posts

Tuesday, October 1, 2024

ಎನ್‌ಎಲ್‌ಟಿ ಬಳಕೆ: ಸಮಿತಿ ರಚನೆಗೆ ಸಚಿವ ಖರ್ಗೆ ನಿರ್ದೇಶನ

 ಎನ್‌ಎಲ್‌ಟಿ ಬಳಕೆ: ಸಮಿತಿ ರಚನೆಗೆ ಸಚಿವ ಖರ್ಗೆ ನಿರ್ದೇಶನ

ಬೆಂಗಳೂರು: ಗ್ರಾಮ ಪಂಚಾಯಿತಿಗಳ ಸಾಮರ್ಥ್ಯ ವೃದ್ಧಿಗಾಗಿ ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಅಭಿವೃದ್ಧಿ ಪಡಿಸಿದ ʼಸಂಪೂರ್ಣ ಪಂಚಾಯತ್‌ ಆಪ್ತಮಿತ್ರʼ ಆಪ್‌ ಆಧಾರಿತ ದಿಕ್ಸೂಚಿ ಕಲಿಕಾ ತಂತ್ರಜ್ಞಾನವನ್ನು (ಎನ್‌ಎಲ್‌ಟಿ) ಬಳಸಿಕೊಳ್ಳುವ ನಿಟ್ಟಿನಲ್ಲಿ ಸಮಿತಿಯೊಂದನ್ನು ರಚಿಸಿ ಕಾರ್ಯಪ್ರವೃತ್ತರಾಗುವಂತೆ ರಾಜ್ಯ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರು 2024 ಸೆಪ್ಟೆಂಬರ್‌ 30ರ ಸೋಮವಾರ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರ ಸಹಪಾಠಿಗಳಾದ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘ ʼಅಗ್ರಿ ಬೆಸ್ಟ್‌ ಕ್ಲಬ್‌ -75ʼ ಸದಸ್ಯರು ನೇತೃತ್ವದಲ್ಲಿ ವಿಕಾಸಸೌಧದ ಗೃಹ ಸಚಿವರ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಸಚಿವರು ಈ ಸೂಚನೆ ನೀಡಿದರು.

ಗ್ರಾಮ ಪಂಚಾಯಿತಿ ವ್ಯವಸ್ಥೆ ಅಸ್ತಿತ್ವಕ್ಕೆ ಬಂದು ಮೂವತ್ತು ವರ್ಷಗಳು ಕಳೆದಿದ್ದರೂ ಗ್ರಾಮ ಪಂಚಾಯಿತಿಗಳ ಕಾರ್ಯ ನಿರ್ವಹಣೆ ಸುಧಾರಿಸಿಲ್ಲ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಗ್ರಾಮ ಪಂಚಾಯಿತಿಗಳ ಕಾರ್ಯ ನಿರ್ವಹಣೆ ಕುರಿತು ನೀಡಲಾಗುತ್ತಿರುವ ತರಬೇತಿ ಜೊತೆಗೆ ಆನ್‌ ಲೈನ್‌ ತರಬೇತಿಯ ಅಂಶವನ್ನು ಸೇರಿಸಲು ಸಾಧ್ಯವಿದೆ ಎಂದು ಅವರು ಹೇಳಿದರು.

ಈ ತರಬೇತಿಯಲ್ಲಿ ಇರಬೇಕಾದ ವಿಷಯಗಳಿಗೆ ಸಂಬಂಧಿಸಿದಂತೆ ತೀರ್ಮಾನಿಸಲು ಸರ್ಕಾರಿ ಅಧಿಕಾರಿಗಳು ಮತ್ತು ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ತ್ವರಿತವಾಗಿ ರಚಿಸಿ ಕಾರ್ಯೋನ್ಮುಖರಾಗುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗೃಹ ಸಚಿವ ಪರಮೇಶ್ವರ್‌ ಅವರು ಮಾತನಾಡಿ ಕನಿಷ್ಠ 4-5 ಜಿಲ್ಲೆಗಳಲ್ಲಿ ಒಂದೊಂದು ತಾಲೂಕಿನಲ್ಲಿ ಪ್ರಾಯೋಗಿಕ ಕಾರ್ಯಕ್ರಮ ಮೂಲಕ ಈ ತರಬೇತಿ ನೀಡುವ ಯತ್ನ ಆರಂಭಿಸುವಂತೆ ಸಲಹೆ ಮಾಡಿದರು.

ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಮ್‌ ಅಂಜುಮ್‌ ಪರ್ವೇಜ್‌, ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್‌ ಮತ್ತು ಇತರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಂಪೂರ್ಣ ಸ್ವರಾಜ್‌ ಫೌಂಡೇಷನ್‌ ಸಂಸ್ಥಾಪಕ ಹಾಗೂ ಕಾರ್ಯ ನಿರ್ವಾಹಕ ಟ್ರಸ್ಟಿ ಡಾ. ಶಂಕರ ಕೆ. ಪ್ರಸಾದ್‌ ಅವರು ʼಸಂಪೂರ್ಣ ಪಂಚಾಯತ್‌ ಆಪ್ತಮಿತ್ರ ಆಪ್‌ʼ ಮೂಲಕ ದಿಕ್ಸೂಚಿ ಕಲಿಕಾ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮ ಪಂಚಾಯತ್‌ ಸದಸ್ಯರು, ಸಿಬ್ಬಂದಿಗೆ ತಾವಿರುವ ಜಾಗದಲ್ಲೇ ತರಬೇತಿ ಪಡೆಯುವ ಬಗೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.




ಇವುಗಳನ್ನೂ ಓದಿರಿ: 

ಮುಂದಿನ ಬಜೆಟಿಗೆ ಎನ್‌ಎಲ್‌ಟಿ: ಗೃಹ ಸಚಿವ ಪರಮೇಶ್ವರ್‌ ಭರವಸೆ
ಭ್ರಷ್ಟಾಚಾರ, ಮಧ್ಯವರ್ತಿ ನಿವಾರಣೆಗೆ ತಂತ್ರಜ್ಞಾನ ಪರಿಹಾರ
ಗಾಂಧಿಗಿರಿಯ ʼಗುಲಾಬಿ ಗ್ಯಾಂಗ್‌ʼ ಕಥೆಗೆ ಇದೀಗ ಪುಸ್ತಕ ರೂಪ
ಏನಿದೆ ಈ ಪುಸ್ತಕಗಳಲ್ಲಿ?
ಪುಸ್ತಕಗಳ ಬಿಡುಗಡೆ ಸಮಾರಂಭ
ರೇಡಿಯೋ ಶಿವಮೊಗ್ಗದಲ್ಲಿ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ
ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ
ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಕಂತು-2
ಸಾಮರ್ಥ್ಯ ವೃದ್ಧಿಗೆ ಡಿಜಿಟಲ್‌ ತಂತ್ರಜ್ಞಾನ ಬಳಕೆ ಹೇಗೆ?
ಇದೀಗ ಬಿಡುಗಡೆಯಾಗಿದೆ……

Thursday, September 12, 2024

ಮುಂದಿನ ಬಜೆಟಿಗೆ ಎನ್‌ಎಲ್‌ಟಿ: ಗೃಹ ಸಚಿವ ಪರಮೇಶ್ವರ್‌ ಭರವಸೆ

 ಮುಂದಿನ ಬಜೆಟಿಗೆ ಎನ್‌ಎಲ್‌ಟಿ: ಗೃಹ ಸಚಿವ ಪರಮೇಶ್ವರ್‌ ಭರವಸೆ

ಬೆಂಗಳೂರು: ಡಿಜಿಟಲ್‌ ಪರಿವರ್ತನೆಯ ಮೂಲಕ ಗ್ರಾಮ ಪಂಚಾಯತಿಗಳ ಸಾಮರ್ಥ್ಯ ವೃದ್ಧಿಗಾಗಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನ (ಎನ್‌ಎಲ್‌ಟಿ- ನ್ಯಾವಿಗೇಟೆಡ್‌ ಲರ್ನಿಂಗ್‌ ಟೆಕ್ನಾಲಜಿ) ಮತ್ತು ಇತರ ಸೀಮಾತೀತ ತಂತ್ರಜ್ಞಾನಗಳನ್ನು ಬಳಸುವ ಯೋಜನೆಗೆ ಬೆಂಬಲ ವ್ಯಕ್ತ ಪಡಿಸಿರುವ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಈ ಯೋಜನೆಯನ್ನು ಸರ್ಕಾರದ ಮುಂದಿನ ಮುಂಗಡ ಪತ್ರದಲ್ಲಿ ಅಳವಡಿಸುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ.

ನಗರದ ಅರಮನೆ ಮೈದಾನದ ಕೆ.ಸಿ. ಕ್ಲಬ್‌ ಆವರಣದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿಗಳ ಸಂಘ ʼಅಗ್ರಿ ಬೆಸ್ಟ್‌ ಕ್ಲಬ್-‌75ʼ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಈ ಬಗ್ಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ (ಆರ್‌ ಡಿ ಪಿಆರ್)‌ ಸಚಿವರ ಜೊತೆಗೆ ಮಾತನಾಡುವುದಾಗಿ ಭರವಸೆ ನೀಡಿದರು.

ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಸಂಸ್ಥಾಪಕ ಹಾಗೂ ನಿರ್ವಾಹಕ ಟ್ರಸ್ಟಿ ಡಾ. ಶಂಕರ ಕೆ. ಪ್ರಸಾದ್‌ ಅವರು ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್‌ ಪರಿವರ್ತನೆಯ ಮೂಲಕ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಎನ್‌ ಎಲ್‌ ಟಿ ಮತ್ತು ಇತರ ಸೀಮಾತೀತ ತಂತ್ರಜ್ಞಾನಗಳನ್ನು ಬಳಸುವ ಬಗ್ಗೆ ನೀಡಿದ ಪ್ರಾತ್ಯಕ್ಷಿಕೆಯನ್ನು ಸಚಿವರು ಮೆಚ್ಚಿಕೊಂಡರು.

ಇಂತಹ ಉಪಕ್ರಮಗಳು ಗ್ರಾಮೀಣ ಸಮುದಾಯಗಳಲ್ಲಿ ಧನಾತ್ಮಕ ಪರಿಣಾಮ ಬೀರುತ್ತವೆ ಎಂದು ಅವರು ನುಡಿದರು. ಕೃಷಿ ವಿಶ್ವ ವಿದ್ಯಾನಿಲಯದ ಹಳೆ ವಿದ್ಯಾರ್ಥಿಗಳ ಸಂಘವು ಈ ವಿಚಾರಗಳನ್ನು ತನ್ನ ಕಾರ್ಯಕ್ಷೇತ್ರದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.


ವಿಶ್ವಸಂಸ್ಥೆ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಡಿಜಿಟಲ್‌ ಪರಿವರ್ತನೆಯ ಮೂಲಕ ಸಾಮರ್ಥ್ಯ ವೃದ್ಧಿಗಾಗಿ ಸೀಮಾತೀತ ತಂತ್ರಜ್ಞಾನಗಳನ್ನು ಬಳಸುವ ನಿಟ್ಟಿನಲ್ಲಿ ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಕೈಗೊಂಡಿರುವ ಉಪಕ್ರಮಗಳನ್ನು ಡಾ. ಶಂಕರ ಪ್ರಸಾದ್‌ ಅವರು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ಗ್ರಾಮ ಪಂಚಾಯಿತಿಯಂತಹ ಬುಡ ಮಟ್ಟದ ಸಂಸ್ಥೆಗಳನ್ನು ಬಲ ಪಡಿಸುವುದು, ಬಡತನ, ಸ್ವಚ್ಛತೆ, ಶುದ್ಧ ನೀರು, ನೈರ್ಮಲ್ಯ, ಆಹಾರ ಭದ್ರತೆ, ಆರೋಗ್ಯ ಮತ್ತು ಶಿಕ್ಷಣದಂತಹ ಸ್ಥಳೀಯ ವಿಷಯಗಳನ್ನು ಡಿಜಿಟಲ್‌ ಪರಿವರ್ತನೆಯ ಮೂಲಕ ನಿಭಾಯಿಸಬಹುದಾದ ಬಗೆಯ ಬಗ್ಗೆ ಅವರು ವಿವರ ನೀಡಿದರು. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಸಾಧನೆಗೂ ಈ ತಂತ್ರಜ್ಞಾನಗಳ ಬಳಕೆಯ ಕುರಿತು ಅವರು ವಿವರಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಪ್ರಜಾತಂತ್ರದ ಪುನಸ್ಥಾಪನೆ  ಹಾಗೂ ಭ್ರಷ್ಟಾಚಾರದ ಚಕ್ರವ್ಯೂಹ ಕುರಿತ ಪುಸ್ತಕಗಳನ್ನೂ ಅವರು ಸಚಿವರಿಗೆ ಅರ್ಪಿಸಿದರು.

ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಅಗ್ರಿ ಬೆಸ್ಟ್‌ ಕ್ಲಬ್-75ರ ಸ್ವರ್ಣ ಮಹೋತ್ಸವವನ್ನು 2025ರಲ್ಲಿ ಆಚರಿಸುವ ಬಗ್ಗೆ ಸದಸ್ಯರು ಚರ್ಚಿಸಿದರು. ಸಂಘದ ಅಧ್ಯಕ್ಷ ಕೆ. ಎನ್.‌ ಗೋಪಾಲ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಇವುಗಳನ್ನೂ ಓದಿರಿ:

ಭ್ರಷ್ಟಾಚಾರ, ಮಧ್ಯವರ್ತಿ ನಿವಾರಣೆಗೆ ತಂತ್ರಜ್ಞಾನ ಪರಿಹಾರ

Advertisement