Sunday, August 30, 2009

ಇಂದಿನ ಇತಿಹಾಸ History Today ಆಗಸ್ಟ್ 27


ಇಂದಿನ ಇತಿಹಾಸ

ಆಗಸ್ಟ್ 27

ತೆಲುಗುದೇಶಂ ಪಕ್ಷದ ಒಡಕಿನ ಹಿನ್ನೆಲೆಯಲ್ಲಿ ಆಗಸ್ಟ್ 31ರ ಒಳಗೆ ಬಹುಮತ ಸಾಬೀತು ಪಡಿಸುವಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಟಿ. ರಾಮರಾವ್ ಅವರಿಗೆ ರಾಜ್ಯಪಾಲರು ಸೂಚಿಸಿದರು.

2015: ಶ್ರೀನಗರ: ಪಾಕಿಸ್ತಾನದ ಉಗ್ರ ಮಹಮ್ಮದ್ ನವೀದ್ ಯಾಕೂಬ್ ಸೆರೆ ಸಿಕ್ಕ 22 ದಿನಗಳ ಬಳಿಕ, ಕಾಶ್ಮೀರದಲ್ಲಿ ಮತ್ತೋರ್ವ ಪಾಕ್ ಉಗ್ರನನ್ನು ಭಾರತೀಯ ಸೇನಾಪಡೆ ಬಲೆಗೆ ಕೆಡವಿತು. ಬಾರಾಮುಲ್ಲಾ ಜಿಲ್ಲೆಯ ರಫಿಯಾಬಾದ್ ಪ್ರದೇಶದ ಗಡಿಯಲ್ಲಿ ಉಗ್ರರ ತಂಡವಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಸೇನಾಪಡೆ ಬುಧವಾರವೇ ಜಮ್ಮು-
ಕಾಶ್ಮೀರ ಪೊಲೀಸರ ಸಹಯೋಗದಲ್ಲಿ ಜಂಟಿ ಕಾರ್ಯಾಚರಣೆ ಆರಂಭಿಸಿತ್ತು. ಓರ್ವ ಉಗ್ರನನ್ನು ಹತ್ಯೆಗೈದ ನಂತರ ಕಾರ್ಯಾಚರಣೆ ಸ್ಥಗಿತಗೊಳಿ ಸಲು ನಿರ್ಧರಿಸಿದಾಗ ಮತ್ತಷ್ಟು ಉಗ್ರರು ಅಡಗಿರುವ ಸುಳಿವು ಸಿಕ್ಕಿತ್ತು. ಈದಿನ ಅಲ್ಲಿನ ಗುಹೆಯೊಂದರ ಬಳಿ ಸೈನಿಕರು ತೆರಳುತ್ತಿದ್ದಾಗ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಸೇನಾಪಡೆ ಪ್ರತಿದಾಳಿ ನಡೆಸಿ ದಾಗ ಮೂವರು ಉಗ್ರರು ಬಲಿಯಾದರೆ, ಓರ್ವ ಉಗ್ರ ಸೆರೆಸಿಕ್ಕಿದ.. ಕಾರ್ಯಾಚರಣೆ ವೇಳೆ ಓರ್ವ ಯೋಧನಿಗೂ ಗಾಯವಾಯಿತು. ಶ್ರೀನಗರದಲ್ಲಿ ವಿಚಾರಣೆ: ಬಂಧಿತ ಉಗ್ರ ಸಜ್ಜದ್ ಅಹ್ಮದ್​ನನ್ನು ಶ್ರೀನಗರಕ್ಕೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾಗ. ಆತನಿಗೆ ಅಬು ಉಬೇದ್ ಉಲ್ಲಾ ಎಂಬ ಕೋಡ್​ನೇಮ್ ನೀಡಲಾಗಿತ್ತು ಎಂಬ ಮಾಹಿತಿ ಹೊರಬಿದ್ದಿತು.

2008: ಜಮ್ಮುವಿನಲ್ಲಿ ಮೂವರು ಪಾಕ್ ಉಗ್ರರು ಮನೆಯೊಂದಕ್ಕೆ ನುಗ್ಗಿ ನಾಲ್ಕು ಮಕ್ಕಳು ಹಾಗೂ ಅವರ ತಾಯಿ ಮತ್ತು ಇಬ್ಬರು ಮಹಿಳೆಯರು ಸೇರಿ 7 ಜನರನ್ನು ಒತ್ತೆಯಾಗಿಟ್ಟುಕೊಂಡಿದ್ದ ಪ್ರಕರಣ 16 ಗಂಟೆಗಳ ಗುಂಡಿನ ಚಕಮಕಿ ಬಳಿಕ ಅಂತ್ಯಗೊಂಡಿತು. ಅಟ್ಟಹಾಸ ಮೆರೆದ ಉಗ್ರರು ಗುಂಡಿನ ಘರ್ಷಣೆಯ ಬಳಿಕ ಭದ್ರತಾ ಪಡೆ ಸಿಬ್ಬಂದಿಗೆ ಮಣಿದರು. ಗುಂಡಿನ ಕಾಳಗದಲ್ಲಿ ಮೂವರು ಉಗ್ರರೂ ಹತರಾದರು.

2007: ಚೆನ್ನೈಯ 57 ವರ್ಷದ ಅಳಗಪ್ಪನ್ ಅವರ ಪತ್ನಿ ವೃಂದಾ ಅವರು 56ರ ಹರೆಯದಲ್ಲಿ ದಾಂಪತ್ಯದ ಸುದೀರ್ಘ 26 ವರ್ಷದ ಬಳಿಕ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಈಕೆಗೆ ಋತುಚಕ್ರ ನಿಂತು 11 ವರ್ಷಗಳಾಗಿದ್ದು ಚೆನ್ನೈಯ ಅಕ್ಷಯ ಫರ್ಟಿಲಿಟಿ ಸೆಂಟರ್ ನೀಡಿದ ಚಿಕಿತ್ಸೆಯಿಂದ ಗರ್ಭವತಿಯಾದರು. ಸತತ ಒಂದು ಗಂಟೆ ಸಿಸೇರಿಯನ್ ಮೂಲಕ ಮಕ್ಕಳನ್ನು ಹೊರತೆಗೆಯಲಾಯಿತು. ವೈದ್ಯ ವಿಜ್ಞಾನದಲ್ಲಿ ಮೈಲಿಗಲ್ಲು ಎನಿಸಿರುವ ಇಂತಹ ಪ್ರಕರಣ ರಾಷ್ಟ್ರದಲ್ಲಿಯೇ ಮೊತ್ತ ಮೊದಲನೆಯದು ಎನ್ನಲಾಗಿದೆ.

2007: ದೆಹಲಿ ಕುತುಬ್ ಮಿನಾರ್ ಆವರಣದಲ್ಲಿರುವ ಪುರಾತನ ಕಬ್ಬಿಣದ ಸ್ತಂಭದ ಮೇಲಿರುವ ಬ್ರಾಹ್ಮಿ ಲಿಪಿಯ ಬರಹಗಳು ಆ ಸ್ತಂಭದ ಮೇಲೆ ಕೆತ್ತಿದ್ದಲ್ಲ. ಬದಲಾಗಿ ಅದರ ಮೇಲೆ ಲೋಹವನ್ನು ಪಡಿಯಚ್ಚಿನ ನೆರವಿನಿಂದ ಎರಕ ಹೊಯ್ದು ನಿರ್ಮಿಸಿದ್ದು ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.ಈ ಬರಹ ಈವರೆಗೆ ದೊರೆತಿರುವ ಗುಪ್ತರ ಕಾಲದ ಶಾಸನಗಳಲ್ಲೇ ಅತಿ ಹಿಂದಿನದು. 1,600 ವರ್ಷಗಳಿಂದ ಮಳೆ, ಗಾಳಿ ಹೊಡೆತಕ್ಕೆ ಸಿಲುಕಿದರೂ ಒಂದಿನಿತೂ ಸವೆದಿಲ್ಲ. ಕಬ್ಬಿಣದ ಸ್ತಂಭದಲ್ಲಿ ಆರು ಸಾಲುಗಳಲ್ಲಿ ಬರೆಯಲಾದ 227 ಅಕ್ಷರಗಳನ್ನು ಅಧ್ಯಯನ ಮಾಡಿದ ಕಾನ್ಪುರ ಐಐಟಿ `ಮೆಟಲರ್ಜಿಕಲ್ ಎಂಜಿನಿಯರಿಂಗ್' (ಲೋಹಶಾಸ್ತ್ರ) ವಿಭಾಗದ ವಿಜ್ಞಾನಿಗಳು, ಐದನೇ ಶತಮಾನದ ಆರಂಭದಲ್ಲಿ ಕಬ್ಬಿಣದ ಸ್ತಂಭ ಲಂಬವಾಗಿ ನಿಂತ ಸ್ಥಿತಿಯಲ್ಲೇ ಬ್ರಾಹ್ಮಿ ಲಿಪಿಯ ಅಕ್ಷರಗಳನ್ನು ಎರಕ ಹೊಯ್ಯಲಾಗಿದೆ ಎಂದು ಹೇಳಿದರು. ಅಕ್ಷರಗಳನ್ನು ಕೆತ್ತಿದ್ದರೆ ಅವುಗಳ ತುದಿ ಮೊಂಡಾಗಿರುತ್ತಿತ್ತು. ಗುಪ್ತರ ಕಾಲದ ಲೋಹಶಾಸ್ತ್ರಜ್ಞರ ನೈಪುಣ್ಯಕ್ಕೆ ಇದು ಸಾಕ್ಷಿ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಆರ್. ಬಾಲಸುಬ್ರಹ್ಮಣ್ಯಂ ಹೇಳಿದರು.

2007: ಪೂರ್ವ ಉಗಾಂಡದ ಕಪ್ ಚೊರ್ವಾ ಬಳಿ ಸುಮಾರು 100ಕ್ಕೂ ಮೇಲ್ಪಟ್ಟು ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ ಟ್ರಕ್, ರಸ್ತೆ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಸಂಭವಿಸಿದ ಅಪಘಾತದಲ್ಲಿ 70 ಕ್ಕೂ ಹೆಚ್ಚು ಮಂದಿ ಮೃತರಾದರು. ಇವರಲ್ಲಿ ಅಂದಾಜು 57 ಮಂದಿ ಸೇನಾ ಯೋಧರು.

2007: ಅಮೆರಿಕದ ಟೆನಿಸ್ ಅಂಗಣಗಳಲ್ಲಿ ದಿನೇದಿನೇ ಪುಟಿದೆದ್ದ ಭಾರತದ ಸಾನಿಯಾ ಮಿರ್ಜಾ ಸಿಂಗಲ್ಸ್ ಹಾಗೂ ಡಬಲ್ಸ್ ವಿಶ್ವ ರ್ಯಾಂಕಿಂಗ್ ಪಟ್ಟಿಗಳಲ್ಲಿ ಮೇಲೇರಿದರು. ಅವರು ಸಿಂಗಲ್ಸ್ ನಲ್ಲಿ 27ನೇ ಸ್ಥಾನಕ್ಕೆ ಹಾಗೂ ಡಬಲ್ಸ್ ನಲ್ಲಿ 20ನೇ ಸ್ಥಾನಕ್ಕೆ ಜಿಗಿದರು. ಪೈಲಟ್ ಪೆನ್ ಓಪನ್ ಡಬಲ್ಸಿನಲ್ಲಿ ಸಾನಿಯಾ ಹಾಗೂ ಮಾರಾ ಸ್ಯಾಂಟೆಂಜಲೊ ಚಾಂಪಿಯನ್ ಆದ ಕಾರಣ ಭಾರತದ ಆಟಗಾರ್ತಿ ರ್ಯಾಂಕಿಂಗಿನಲ್ಲಿ ನಾಲ್ಕು ಸ್ಥಾನ ಮೇಲೇರಿದರು.

2006: ಖ್ಯಾತ ಚಿತ್ರ ನಿರ್ದೇಶಕ ಹೃಶಿಕೇಶ್ ಮುಖರ್ಜಿ (84) ಮುಂಬೈಯಲ್ಲಿ ನಿಧನರಾದರು. ನಲವತ್ತಕ್ಕೂ ಹೆಚ್ಚು ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಆನಂದ್, ಖೂಬ್ ಸೂರತ್, ಗೋಲ್ ಮಾಲ್, ಅನುಪಮಾ ಅವರಿಗೆ ಹೆಸರು ತಂದು ಕೊಟ್ಟ ಹಿಂದಿ ಚಿತ್ರಗಳ ಪೈಕಿ ಮುಖ್ಯವಾದವು. ಅವರ ಬಹುತೇಕ ಚಿತ್ರಗಳಿಗೆ ಎಸ್.ಡಿ. ಬರ್ಮನ್ ಸಂಗೀತ ಸಂಯೋಜನೆ ಮಾಡಿದ್ದರು. ಪಿ.ಲಂಕೇಶ್ ಅವರ `ಪಲ್ಲವಿ' ಚಿತ್ರದ ಸಂಕಲನದ ಸಂದರ್ಭದಲ್ಲಿ ಸಹಕಾರ ನೀಡುವ ಮೂಲಕ ಅವರು ಕನ್ನಡ ಚಿತ್ರರಂಗದ ನಂಟನ್ನು ಹೊಂದಿದ್ದರು. `ಝೂಟ್ ಬೋಲೆ ಕವ್ವಾ ಕಾಟೆ' ಅವರ ನಿರ್ದೇಶನದ ಕೊನೆಯ ಚಿತ್ರ. `ತಲಾಶ್' ಎಂಬ ಟೆಲಿವಿಷನ್ ಧಾರಾವಾಹಿಯನ್ನೂ ನಿರ್ದೇಶಿಸಿದ್ದ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಸೇರಿದಂತೆ ಪ್ರಮುಖ ಪ್ರಶಸ್ತಿಗಳು ಸಂದಿದ್ದವು.

2006: ಭೂಮಿ ಮೇಲಿನ ಅತ್ಯಂತ ಹಿರಿಯ ವ್ಯಕ್ತಿ ಎಂಬುದಾಗಿ ಗಿನ್ನೆಸ್ ದಾಖಲೆಗಳ ಪುಸ್ತಕದಲ್ಲಿ ಸ್ಥಾನ ಗಿಟ್ಟಿಸಿದ್ದ 116 ವರ್ಷದ ಮರಿಯಾ ಎಸ್ತರ್ ದೆ ಕಾಪೊವಿಲ್ಲಾ ಎಂಬ ಮಹಿಳೆ ಈಕ್ವಡೋರಿನ ಕ್ವೆಟ್ಟಾದಲ್ಲಿ ನಿಧನಳಾದಳು. ನ್ಯೂಮೋನಿಯಾ ಪರಿಣಾಮವಾಗಿ ಆಕೆ ಮೃತಳಾದಳು ಎಂದು ಆಕೆಯ ಮೊಮ್ಮಗಳು ಕ್ಯಾಥರೀನ್ ಕಾಪೊವ್ಲಿಲಾ ಹೇಳಿದಳು. ಈ ಅಜ್ಜಿ 1889ರ ಸೆಪ್ಟೆಂಬರ್ 14ರಂದು ಜನಿಸಿದ್ದಳು. ಇದೇ ವರ್ಷ ಚಾರ್ಲಿನ್ ಮತ್ತು ಅಡಾಲ್ಫ್ ಹಿಟ್ಲರ್ ಜನಿಸಿದ್ದರು.

1995: ತೆಲುಗುದೇಶಂ ಪಕ್ಷದ ಒಡಕಿನ ಹಿನ್ನೆಲೆಯಲ್ಲಿ ಆಗಸ್ಟ್ 31ರ ಒಳಗೆ ಬಹುಮತ ಸಾಬೀತು ಪಡಿಸುವಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಟಿ. ರಾಮರಾವ್ ಅವರಿಗೆ ರಾಜ್ಯಪಾಲರು ಸೂಚಿಸಿದರು.

1982: `ಸೋಯುಜ್ ಟಿ-7' ಗಗನನೌಕೆ ಭೂಮಿಗೆ ವಾಪಸಾಯಿತು.

1979: ಭಾರತದ ಕೊನೆಯ ವೈಸ್ ರಾಯ್ ಲಾರ್ಡ್ ಲೂಯಿ ಮೌಂಟ್ ಬ್ಯಾಟನ್ ಐರ್ಲೆಂಡ್ ಕರಾವಳಿಯಲ್ಲಿ ಸಂಭವಿಸಿದ ದೋಣಿ ಸ್ಫೋಟವೊಂದರಲ್ಲಿ ಅಸು ನೀಗಿದರು. ಐರಿಷ್ ರಿಪಬ್ಲಿಕನ್ ಆರ್ಮಿ ಈ ಕೃತ್ಯಕ್ಕೆ ತಾನು ಹೊಣೆ ಎಂದು ಘೋಷಿಸಿತು.

1975: ಇಥಿಯೋಪಿಯಾದ ಪದಚ್ಯುತ ದೊರೆ ಹೈಲೆ ಸೆಲಾಸ್ಸೀ ತಮ್ಮ 83ನೇ ವಯಸ್ಸಿನಲ್ಲಿ ಅಡ್ಡಿಸ್ ಅಬಾಬಾದಲ್ಲಿ ಮೃತರಾದರು. ಅಧಿಕೃತ ಮೂಲಗಳ ಪ್ರಕಾರ ಅವರದ್ದು ಸಹಜ ಸಾವು. ಆದರೆ ನಂತರ ಲಭಿಸಿದ ಸಾಕ್ಷ್ಯಗಳು ಅವರನ್ನು ಸೇನಾ ಆಡಳಿತದ ಆದೇಶದ ಮೇರೆಗೆ ನೇಣುಹಾಕಲಾಯಿತು ಎಂಬುದನ್ನು ಬೆಳಕಿಗೆ ತಂದವು.

1955: `ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡಿಸಿಜರ್ಡ್ಸ್ ನ 198 ಪುಟಗಳ ಮೊದಲ ಪ್ರತಿ ಸಿದ್ಧಗೊಂಡಿತು. ನೊರ್ರಿಸ್ ಮತ್ತು ರೋಸ್ ಮೆಕ್ ರೈಟರ್ ಹೆಸರಿನ ಅವಳಿ-ಜವಳಿಗಳು ಸಂಪಾದಿಸಿದ ಈ ಪುಸ್ತಕ ಭಾರೀ ಜನಪ್ರಿಯತೆ ಗಳಿಸಿತು. ಇಂಗ್ಲಿಷ್ ಆವೃತ್ತಿ 70 ರಾಷ್ಟ್ರಗಳಲ್ಲಿ ವಿತರಣೆಗೊಂಡರೆ ಇತರ 22 ಆವೃತ್ತಿಗಳು ವಿದೇಶಿ ಭಾಷೆಗಳಲ್ಲಿ ಪ್ರಕಟಗೊಂಡವು.

1939: ಜಗತ್ತಿನ ಮೊತ್ತ ಮೊದಲ ಜೆಟ್ ಪ್ರೊಪೆಲ್ಲರ್ ಚಾಲಿತ ವಿಮಾನ (ಏರ್ ಪ್ಲೇನ್) `ಹೀನ್ ಕೆಲ್ 178' ಉತ್ತರ ಜರ್ಮನಿಯ ಮರೀನ್ಚೆಯಲ್ಲಿ ಚೊಚ್ಚಲ ಹಾರಾಟ ನಡೆಸಿತು.

1928: ಪ್ಯಾರಿಸ್ಸಿನಲ್ಲಿ ಕ್ಲ್ಲೆಲಾಗ್-ಬ್ರೈಂಡ್ ಒಪ್ಪಂದಕ್ಕೆ ಸಹಿ ಮಾಡಲಾಯಿತು. ಯುದ್ಧಗಳನ್ನು ನಿಷೇಧಿಸಿದ ಈ ಒಪ್ಪಂದ ವಿವಾದಗಳನ್ನು ಶಾಂತಿಯುತವಾಗಿ ಇತ್ಯರ್ಥಪಡಿಸಲು ಅವಕಾಶ ಕಲ್ಪಿಸಿತು.

1910: ಕಲ್ಕತ್ತದ (ಈಗಿನ ಕೋಲ್ಕತ್ತಾ) ಮದರ್ ತೆರೇಸಾ (1910-1997) ಎಂದೇ ಖ್ಯಾತರಾದ ಏಗ್ನೆಸ್ ಗೊಂಕ್ಷಾ ಬೊಜಾಕ್ಷ್ ಹಿಯು ಅವರ ಜನ್ಮದಿನ.

1859: ಅಮೆರಿಕದ ಪೆನ್ಸಿಲ್ವೇನಿಯಾದ ಟಿಟುಸ್ವಿಲೆ ಬಳಿ ಮೊತ್ತ ಮೊದಲ ಬಾರಿಗೆ ಕೊರೆದ ತೈಲ ಬಾವಿ ಯಶಸ್ವಿಯಾಯಿತು.

1783: ಮೊತ್ತ ಮೊದಲ ಮಾನವ ರಹಿತಯ ಜಲಜನಕ ಬಲೂನ್ ಹಾರಾಟ ಯಶಸ್ವಿಯಾಯಿತು.

1604: ಅಮೃತಸರದ ಸ್ವರ್ಣಮಂದಿರದಲ್ಲಿ ಸಿಖ್ಖರ ಧರ್ಮಗ್ರಂಥ `ಗುರು ಗ್ರಂಥ ಸಾಹಿಬ್' ಪ್ರತಿಷ್ಠಾಪನೆ ನಡೆಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement