ಇಂದಿನ ಇತಿಹಾಸ
ಡಿಸೆಂಬರ್ 05
ಮಹಾರಾಷ್ಟ್ರ ಶಾಸಕಾಂಗ ಪಕ್ಷದ ನಾಯಕನ ಹುದ್ದೆಗೆ ಅಶೋಕ್ ಚವಾಣ್ ಅವರನ್ನು ಆಯ್ಕೆ ಮಾಡಿದ ವಿಚಾರವನ್ನು ಹಿರಿಯ ನಾಯಕ ಪ್ರಣವ್ ಮುಖರ್ಜಿ ಅಧಿಕೃತವಾಗಿ ನವದೆಹಲಿಯಲ್ಲಿ ಪ್ರಕಟಿಸಿದರು. ಉಪ ಮುಖ್ಯಮಂತ್ರಿಯಾಗಿ ಎನ್‌ಸಿಪಿಯ ಛಗನ್ ಭುಜಬಲ್ ಅವರು ಆಯ್ಕೆಯಾದರು. 50 ವರ್ಷದ ಅಶೋಕ್ ಚವಾಣ್ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವರಾಗಿದ್ದ ದಿವಂಗತ ಎಸ್.ಬಿ. ಚವಾಣ್ ಅವರ ಪುತ್ರ.
2014: ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಯಶಸ್ವಿಯಾಗಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ಭಂಗಗೊಳಿಸುವ ಧುಸ್ಸಾಹಸಕ್ಕೆ ಕೈ ಹಾಕಿದ ಉಗ್ರರು ಈದಿನ ಒಂದೇ ದಿನ ನಾಲ್ಕು ಕಡೆ ಯೋಜಿತ ದಾಳಿ ನಡೆಸಿದರು. ಭದ್ರತಾ ಸಿಬ್ಬಂದಿ ಮತ್ತು ನಾಗರಿಕರನ್ನು ಗುರಿಯಾಗಿಸಿಕೊಂಡು ಜನನಿಬಿಡ ಪ್ರದೇಶಗಳಲ್ಲಿ ಉಗ್ರರು ದಾಳಿ ನಡೆಸಿದರು. ಉರಿ ಸೇನಾ ಶಿಬಿರ ಮತ್ತು ಶೋಪಿಯಾನ್ ಪೊಲೀಸ್ ಠಾಣೆಯ ಮೇಲೆ ಗ್ರೆನೇಡ್ ದಾಳಿ ನಡೆಸಿದರು. ಪುಲ್ವಾಮಾ ಜಿಲ್ಲೆಯ ತ್ರಾಲ್ನ ಬಸ್ ನಿಲ್ದಾಣದ ಸಮೀಪದಲ್ಲೇ ದಾಳಿ ನಡೆಯಿತು.. ಶ್ರೀನಗರದ ಪ್ರಖ್ಯಾತ ಲಾಲ್ಚೌಕದಿಂದ ಕೇವಲ 10 ಕಿ.ಮೀ. ದೂರದಲ್ಲಿರುವ ಸೌರಾದಲ್ಲೂ ಸೇನಾ ಶಿಬಿರಗಳ ಮೇಲೆ ದಾಳಿ ನಡೆಯಿತು.. ಈ ದಾಳಿಗಳಲ್ಲಿ 11 ಭದ್ರತಾ ಸಿಬ್ಬಂದಿ ಮೃತರಾಗಿ, ಹತ್ತಾರು ನಾಗರಿಕರು ಗಂಭೀರವಾಗಿ ಗಾಯಗೊಂಡರು. ಭದ್ರತಾ ಸಿಬ್ಬಂದಿ ನಡೆಸಿದ ಪ್ರತಿದಾಳಿಗೆ 6 ಉಗ್ರರು ಹತರಾದರು. ಬಾರಾಮುಲ್ಲಾ ಜಿಲ್ಲೆಯ ಉರಿಯಲ್ಲಿನ ಸೇನಾ ಶಿಬಿರದ ಮೇಲೆ ನಸುಕಿನ ಜಾವ 3.10ರ ವೇಳೆಗೆ ಉಗ್ರರು ನಡೆಸಿದ ಗುಂಡಿನ ದಾಳಿಗೆ ಮೂವರು ಪೊಲೀಸರು ಸೇರಿದಂತೆ 8 ಭದ್ರತಾ ಸಿಬ್ಬಂದಿ ಅಸು ನೀಗಿದರು. ಸೇನೆಯೂ ಪ್ರತಿ ದಾಳಿ ನಡೆಸಿ, ಕುಖ್ಯಾತ ಲಷ್ಕರ್ ಕಮಾಂಡರ್ ಸೇರಿ 6 ಉಗ್ರರನ್ನು ಹತ್ಯೆಗೈದಿತು.
2014: ಸಿಂಗಾಪುರ: 'ಏಷ್ಯಾದ ವರ್ಷದ ವ್ಯಕ್ತಿ' ಪ್ರಶಸ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಲಾಯಿತು. ಸಿಂಗಾಪುರದ ಮಾಧ್ಯಮ ಸಂಸ್ಥೆಯೊಂದು ಪ್ರಶಸ್ತಿಗಾಗಿ ನಡೆಸಿದ ಸಮೀಕ್ಷೆಯಲ್ಲಿ ನರೇಂದ್ರ ಮೋದಿ ಅವರನ್ನೇ ಹೆಚ್ಚಿನವರು ಅನುಮೋದಿಸಿದರು.. ಈ ಹಿನ್ನೆಲೆಯಲ್ಲಿ ಸಂಘಟಕರು ಮೋದಿ ಅವರನ್ನು 'ಏಷ್ಯಾದ ವರ್ಷದ ವ್ಯಕ್ತಿ' ಪುರಸ್ಕಾರಕ್ಕೆ ಆಯ್ಕೆ ಮಾಡಿದರು. ಅಭಿವೃದ್ಧಿ ಕಾರ್ಯ, ಯೋಜನೆಗಳಿಂದ ಜನಪ್ರಿಯತೆ ಗಳಿಸಿಕೊಂಡ ವ್ಯಕ್ತಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡುವಂತೆ ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆಯಲ್ಲಿ ಮೋದಿ ಕೇವಲ ಅವರ ದೇಶವಷ್ಟೇ ಅಲ್ಲ ನೆರೆಯ ದೇಶಗಳಲ್ಲೂ ಜನಪ್ರಿಯತೆ ಗಳಿಸಿಕೊಂಡಿದ್ದಾರೆ ಎನ್ನುವ ಅಭಿಪ್ರಾಯ ಸಾಕಷ್ಟು ಮಂದಿಯಿಂದ ವ್ಯಕ್ತಗೊಂಡಿದೆ ಎಂದು ಪ್ರಶಸ್ತಿ ನೀಡುತ್ತಿರುವ ಮಾಧ್ಯಮ ಸಂಸ್ಥೆ ಹೇಳಿತು.
2014: ವಾಷಿಂಗ್ಟನ್: ಮಾನವ ರಹಿತ ಬಾಹ್ಯಾಕಾಶ ನೌಕೆ 'ಒರಿಯಾನ್' ಗಗನಕ್ಕೆ ಚಿಮ್ಮಿತು. ಫ್ಲೊರಿಡಾದ ಕೇಪ್ ಕೆನಾವೆರಾಲ್ ಉಡಾವಣಾ ನೆಲೆಯಿಂದ ಬಾಹ್ಯಾಕಾಶಕ್ಕೆ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಮಾನವನನ್ನು ಮಂಗಳ ಗ್ರಹಕ್ಕೆ ಕಳುಹಿಸುವ ಒನ್ ಮಾರ್ಸ್ ಯೋಜನೆಗೆ ಪೂರ್ವಭಾವಿಯಾಗಿ ನಾಸಾ ಪ್ರಾಯೋಗಿಕವಾಗಿ ಈ ಮಾನವ ರಹಿತ ಈ ನೌಕೆಯನ್ನು ಮಂಗಳನ ಅಂಗಳದತ್ತ ಹಾರಿಬಿಟ್ಟಿತು. ಮುಂಬರುವ ದಿನದಲ್ಲಿ ಮನುಷ್ಯನನ್ನು ಮಂಗಳನ ಅಂಗಳಕ್ಕೆ ಕರೆದೊಯ್ಯುವ ನಾಸಾದ ಯೋಜನೆಗೆ ಪರೀಕ್ಷಾರ್ಥ ಉಡಾವಣೆ ಮಹತ್ವದ್ದಾಗಿದೆ. ಹಿಂದಿನ ದಿನವೇ ಉಡಾವಣೆಯಾಗಬೇಕಿದ್ದ ಈ ನೌಕೆಯನ್ನು ಹವಾಮಾನ ವ್ಯತ್ಯಯವಾದ ಹಿನ್ನೆಲೆಯಲ್ಲಿ ಈದಿನ ಹಾರಿಬಿಡಲಾಯಿತು. 11 ಅಡಿ ಎತ್ತರ, 16.5 ಅಡಿ ವಿಸ್ತಾರದ ನೌಕೆ 40 ವರ್ಷಗಳ ಹಿಂದೆ ಚಂದ್ರನ ಅಂಗಳಕ್ಕೆ ಹಾರಿಬಿಟ್ಟ ಅಪೊಲೊ ನೌಕೆಗಳಿಗಿಂತಲೂ ದೊಡ್ಡದು.
2014: ನ್ಯೂಯಾರ್ಕ್: ಭಾರತದ ಕಾಂಗ್ರೆಸ್ ಪಕ್ಷದ ವಿರುದ್ಧ ಹೂಡಲಾದ ಸಿಕ್ಖರ ಹಕ್ಕುಗಳ ಉಲ್ಲಂಘನೆಯ 1984ರ ಪ್ರಕರಣವನ್ನು ಫೆಡರಲ್ ಕೋರ್ಟ್ಗೆ ವಹಿಸಬೇಕೆ ಅಥವಾ ವಜಾಗೊಳಿಸಬೇಕೆ ಎಂಬ ಕುರಿತ ತನ್ನ ತೀರ್ಪನ್ನು ಅಮೆರಿಕದ ನ್ಯಾಯಾಲಯವೊಂದು ಕಾಯ್ದಿರಿಸಿತು. ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ಜೆ) ಹಕ್ಕುಗಳ ಗುಂಪು ನ್ಯೂರ್ಯಾನ ಎರಡನೇ ರ್ಸಟ್ ಮೇಲ್ಮನವಿ ಕೋರ್ಟ್ನಲ್ಲಿ ಈ ಖಟ್ಲೆ ಹೂಡಿದ್ದು, ಕ್ಯಾಲಿಫೋರ್ನಿಯಾ ಫೆಡರಲ್ ಕೋರ್ಟ್ ಈಗಾಗಲೇ ಸಿಕ್ಖರಿಗೆ ನಿರಾಶ್ರಿತ ಸ್ಥಾನಮಾನ ನೀಡಿರುವುದರಿಂದ ಸುಪ್ರೀಂಕೋರ್ಟ್ ಆದೇಶದ ಅಡಿಯಲ್ಲಿ ತಮ್ಮ ಪ್ರತಿಪಾದನೆ ವ್ಯಾಪ್ತಿ ಮೀರುವುದಿಲ್ಲ ಎಂದು ಪ್ರತಿಪಾದಿಸಿತು. ಎಸ್ಎಫ್ಜೆಯ ಈ ನಿಲುವಿನ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ವಾದದ ವೇಳೆ, ಅಮೆರಿಕದ ನ್ಯಾಯಾಲಯಗಳಿಂದ ಘೊಷಣಾತ್ಮಕ ತೀರ್ಪಗಳನ್ನು ಕೋರಲು ಮಾನವ ಹಕ್ಕುಗಳ ಗುಂಪುಗಳಿಗೆ ಸಾಂಸ್ಥಿಕ ನೆಲೆ ಇದೆ ಎಂದು ವಾದಿಸಲಾಯಿತು. 1984ರಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯ ಬಳಿಕ ಸಿಖ್ ಸಮುದಾಯದ ವಿರುದ್ಧ ನಡೆದ ಹಿಂಸಾಚಾರವನ್ನು 'ಜನಾಂಗಹತ್ಯೆ' ಎಂಬುದಾಗಿ ಘೋಷಿಸಬೇಕು ಎಂದು ಎಸ್ಎಫ್ಜೆ ಈ ಪ್ರಕರಣದಲ್ಲಿ ಕೋರಿತ್ತು. 1984ರ ಹಿಂಸಾಚಾರ ಪ್ರಕರಣಗಳಲ್ಲಿ ಮೃತರಾದವರ ಕಾನೂನುಬದ್ಧ ವಾರಸುದಾರರು ಅಥವಾ ಬದುಕಿಳಿದವರು ವೈಯಕ್ತಿಕ ಅರ್ಜಿದಾರರಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಆರ್ಥಿಕ ನೆರವು ಕೋರಿ ಈ ಮೊಕದ್ದಮೆ ದಾಖಲಿಸಿದ್ದರು.
2014: ಕೊಲಂಬೊ: ಮಾಲ್ಡೀವ್ಸ್ನ ರಾಜಧಾನಿ ಮಾಲೆಯಲ್ಲಿ ನೀರಿನ ಅಭಾವ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತ ಐದು ವಿಶೇಷ ವಿಮಾನಗಳ ಮೂಲಕ ನೀರು ಪೂರೈಕೆ ಮಾಡಿತು. ಈ ಕುರಿತು ವಿದೇಶಾಂಗ ಸಚಿವಾಲಯದ ವಕ್ತಾರ ಸೈಯ್ಯದ್ ಅಕ್ಬರುದ್ದೀನ್ ಟ್ವೀಟ್ನಲ್ಲಿ ಮಾಹಿತಿ ನೀಡಿದರು. ಮಾಲ್ಡೀವ್ಸ್ನ ನೀರು ಪೂರೈಕೆ, ಶುದ್ಧೀಕರಣ ಘಟಕದಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ನೀರು ಸರಬರಾಜು ಹಠಾತ್ ಸ್ಥಗಿತಗೊಂಡಿತ್ತು. ಪರಿಣಾಮ ಲಕ್ಷಕ್ಕೂ ಹೆಚ್ಚು ನಿವಾಸಿಗಳಿಗೆ ನೀರು ಪೂರೈಕೆ ಸಮಸ್ಯೆಯಾಗಿದ ಕಾರಣ ಮಾಲ್ಡೀವ್ಸ್ ಸರ್ಕಾರ ನರೆ ರಾಷ್ಟ್ರಗಳಾದ ಭಾರತ, ಶ್ರೀಲಂಕಾ, ಚೀನಾ ಮತ್ತು ಅಮೆರಿಕಕ್ಕೆ ಮನವಿ ಸಲ್ಲಿಸಿತ್ತು. ಮಾಲ್ಡೀವ್ ರಾಜಧಾನಿ ಮಾಲೆ ದ್ವೀಪವಾಗಿದ್ದು, ಇಲ್ಲಿ ನೈಸರ್ಗಿಕ ನೀರಿನ ವ್ಯವಸ್ಥೆಯಿಲ್ಲ. ಸಮುದ್ರದ ನೀರನ್ನೇ ಶುದ್ಧೀಕರಿಸಿ ಬಳಸಬೇಕಾಗಿದೆ.
2008: ಮುಂಬೈ ಮೇಲೆ ನಡೆದ ಉಗ್ರರ ದಾಳಿಯ ತನಿಖೆಯಲ್ಲಿ ಪಾಕಿಸ್ಥಾನ ಅಸಹಕಾರ ತೋರಿದ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಭಾರತ ನಿರ್ಧರಿಸಿತು. ಮುಂಬೈ ಮೇಲಿನ ದಾಳಿಯ ಸಂಚು ರೂಪಿಸಿ ಪ್ರಚೋದನೆ ನೀಡಿದ್ದಾರೆ ಎನ್ನಲಾದ ವ್ಯಕ್ತಿಗಳು ಹಾಗೂ ಈ ಹಿಂದೆ ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಿದ್ದಾರೆ ಎನ್ನಲಾದ ಉಗ್ರರು ಹಾಗೂ ಭೂಗತ ಪಾತಕಿಗಳನ್ನು ಹಸ್ತಾಂತರಿಸುವಂತೆ ಭಾರತ ಮಾಡಿಕೊಂಡ ಮನವಿಗೆ ಪಾಕಿಸ್ಥಾನ ಉತ್ತರಿಸದ ಕಾರಣ ಹಾಗೂ ತಪ್ಪಿತಸ್ಥರನ್ನು ತನ್ನ ನೆಲದಲ್ಲಿಯೇ ಶಿಕ್ಷಿಸುವುದಾಗಿ ಪಾಕ್ ಸರ್ಕಾರ ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಭಾರತ ಈ ನಿರ್ಧಾರ ಕೈಗೊಂಡಿತು.
2008: ಮಹಾರಾಷ್ಟ್ರ ಶಾಸಕಾಂಗ ಪಕ್ಷದ ನಾಯಕನ ಹುದ್ದೆಗೆ ಅಶೋಕ್ ಚವಾಣ್ ಅವರನ್ನು ಆಯ್ಕೆ ಮಾಡಿದ ವಿಚಾರವನ್ನು ಹಿರಿಯ ನಾಯಕ ಪ್ರಣವ್ ಮುಖರ್ಜಿ ಅಧಿಕೃತವಾಗಿ ನವದೆಹಲಿಯಲ್ಲಿ ಪ್ರಕಟಿಸಿದರು. ಉಪ ಮುಖ್ಯಮಂತ್ರಿಯಾಗಿ ಎನ್‌ಸಿಪಿಯ ಛಗನ್ ಭುಜಬಲ್ ಅವರು ಆಯ್ಕೆಯಾದರು. 50 ವರ್ಷದ ಅಶೋಕ್ ಚವಾಣ್ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವರಾಗಿದ್ದ ದಿವಂಗತ ಎಸ್.ಬಿ. ಚವಾಣ್ ಅವರ ಪುತ್ರ.
2008: ಬೈಕ್ ಹ್ಯಾಂಡಲ್ ಹಿಡಿಯದೇ ಬಾಗಲಕೋಟೆಯಿಂದ ಬೆಂಗಳೂರಿನವರೆಗೆ ಪ್ರಯಾಣಿಸುವ ಮೂಲಕ ಇಳಕಲ್ಲಿನ ಈರಣ್ಣ ಜಿ. ಕುಂದರಗಿಮಠ ವಿಶಿಷ್ಟ ಸಾಧನೆ ಮಾಡಿದರು. ಒಟ್ಟು 510 ಕಿ. ಮೀ ದೂರದ ಪ್ರಯಾಣವನ್ನು ಕೇವಲ 11 ಗಂಟೆಯಲ್ಲಿ ಕ್ರಮಿಸಿ ವಿಭಿನ್ನ ರೀತಿಯ ಬೈಕ್ ಸಾಹಸವನ್ನು ಮೆರೆದರು. 'ಬೆಳಿಗ್ಗೆ ಬಾಗಲಕೋಟೆಯಿಂದ ಪ್ರಯಾಣ ಆರಂಭಿಸಿ ರಾತ್ರಿ ವೇಳೆಗೆ ಬೆಂಗಳೂರಿಗೆ ತಲುಪಿದೆ. ಗಂಟೆಗೆ 80 ಕಿ.ಮೀ ವೇಗದಲ್ಲಿ ಬೈಕ್ ಓಡಿಸಿದ ನನಗೆ ನಿರೀಕ್ಷಿತ ಗುರಿ ಸಾಧಿಸಿದರ ಬಗ್ಗೆ ಸಂತಸವಿದೆ' ಎಂದು ಈರಣ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
2008: ಪಾಕಿಸ್ಥಾನದ ಪೇಶಾವರದ ಷಿಯಾ ಪ್ರಾರ್ಥನಾ ಮಂದಿರವೊಂದರಲ್ಲಿ ಪ್ರಬಲ ಬಾಂಬ್ ಸ್ಫೋಟಿಸಿ 26 ಜನ ಬಲಿಯಾಗಿ 95ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ನಡೆಯಿತು. ನಗರದ ಇಕ್ಕಟ್ಟಾದ ಕುಚಾ ರಿಸಾಲ್ದಾರ್ ಪ್ರದೇಶದ ಇಮಾಮ್ ದರ್ಗಾದ ಸಮೀಪ ವಾಹನವೊಂದರಲ್ಲಿ ಬಾಂಬ್ ಹುದುಗಿಸಿ ಇಡಲಾಗಿತ್ತು.
2008: ಗುಲ್ಬರ್ಗದ 13ರ ಹರೆಯದ ಬಾಲೆ ಸ್ಫೂರ್ತಿ ಜೋಶಿ, ಅಂತಾರಾಷ್ಟ್ರೀಯ ಮಟ್ಟದ ಯುಸಿ ಮಾಸ್ ಅಬ್ಯಾಕಸ್ ಹಾಗೂ ಮೆಂಟಲ್ ಅರಿಥ್‌ಮ್ಯಾಟಿಕ್ ಸ್ಪರ್ಧೆಯಲ್ಲಿ ಚಾಂಪಿಯನ್‌ಶಿಪ್ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಸಾಧನೆ ಮಾಡಿದರು. 'ಮಲೇಷ್ಯಾದ ಕೌಲಾಲಂಪುರದಲ್ಲಿ ಈ ಸ್ಪರ್ಧೆ ನಡೆಯಿತು. ಕೇವಲ ಎಂಟು ನಿಮಿಷದಲ್ಲಿ ಗಣಿತದ 200 ಲೆಕ್ಕಗಳನ್ನು ಬಿಡಿಸಬೇಕಿತ್ತು. ಎಲ್ಲ ಸಮಸ್ಯೆಗಳನ್ನು ಬಿಡಿಸಿ ಒಟ್ಟು 300 ಅಂಕಗಳ ಪೈಕಿ 295 ಅಂಕ ಪಡೆದು ಚಾಂಪಿಯನ್ ಆದೆ' ಎಂದು ಸ್ಫೂರ್ತಿ ಹೆಮ್ಮೆಯಿಂದ ನುಡಿದರು.
2007: ಜಗತ್ತಿನಾದ್ಯಂತ ಎಲ್ಲರ ಗಮನ ಸೆಳೆದು ಆಕರ್ಷಣೆಯ ಕೇಂದ್ರವಾದ ಲಂಡನ್ನಿನ ಸ್ವಾಮಿ ನಾರಾಯಣ ದೇಗುಲವು ಇಂಗ್ಲೆಂಡಿನ `ಹೆಮ್ಮೆಯ ತಾಣ' ಪ್ರಶಸ್ತಿ ಪಡೆಯಿತು. ಆನ್ ಲೈನ್ ಮತದಾನದ ಮೂಲಕ ಈ ಆಯ್ಕೆ ನಡೆದಿದ್ದು, ಫಲಿತಾಂಶಗಳನ್ನು ಈದಿನ ಪ್ರಕಟಿಸಲಾಯಿತು. ಯೂರೋಪಿನಲ್ಲಿ ನಿರ್ಮಾಣವಾದ ಮೊದಲ ಸಾಂಪ್ರದಾಯಿಕ ಹಿಂದೂ ದೇಗುಲವಿದು. ಸ್ವಾಮಿ ನಾರಾಯಣ ದೇಗುಲವನ್ನು ತಮ್ಮ ಹೆಮ್ಮೆಯ ತಾಣವೆಂದು ಆನ್ ಲೈನ್ ಮತದಾನದಲ್ಲಿ ಭಾಗವಹಿಸಿದ್ದ ಬಹುತೇಕ ಲಂಡನ್ ನಿವಾಸಿಗಳು ಒಪ್ಪಿದರು. ರಾಷ್ಟ್ರೀಯ ಮತದಾನದಲ್ಲೂ ಈ ದೇಗುಲಕ್ಕೆ ಮೊದಲ ಸ್ಥಾನ ದೊರಕಿತು.
2007: ರಾಮಜನ್ಮಭೂಮಿ- ಬಾಬ್ರಿ ಮಸೀದಿ ಧ್ವಂಸವಾದ 15 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಪ್ರಕರಣದ ವಿಚಾರಣೆ ಉತ್ತರಪ್ರದೇಶದ ರಾಯ್ ಬರೇಲಿಯ ಸಿಬಿಐ ನ್ಯಾಯಾಲಯದಲ್ಲಿ ಈದಿನ ಆರಂಭವಾಯಿತು. ಮಾಜಿ ಉಪಪ್ರಧಾನಿ ಎಲ್.ಕೆ. ಆಡ್ವಾಣಿ, ಬಿಜೆಪಿ ನಾಯಕರಾದ ಮುರಳಿ ಮನೋಹರ ಜೋಷಿ, ವಿನಯ್ ಕಟಿಯಾರ್, ಭಾರತೀಯ ಜನಶಕ್ತಿ ಪಕ್ಷದ ಮುಖ್ಯಸ್ಥೆ ಉಮಾ ಭಾರತಿ, ವಿ ಎಚ್ ಪಿ ನಾಯಕರಾದ ಅಶೋಕ ಸಿಂಘಾಲ್, ಗಿರಿರಾಜ ಕಿಶೋರ್, ವಿಷ್ಣು ದಾಲ್ಮಿಯಾ ಮತ್ತು ಸಾಧ್ವಿ ಋತಂಬರಾ ಅವರನ್ನು ಆರೋಪಿಗಳಾಗಿ ಹೆಸರಿಸಲಾಯಿತು. ಇವರೆಲ್ಲರೂ ಘಟನಾ ಸ್ಥಳದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದರು ಎಂದು ರಾಮ ಜನ್ಮಭೂಮಿ ಪೊಲೀಸ್ ಠಾಣೆಯ ಆಗಿನ ಮುನ್ಷಿ (ಈಗ ಸಹಾಯಕ ಪೊಲೀಸ್ ಇನ್ ಸ್ಪೆಕ್ಟರ್) ಹನುಮಾನ್ ಪ್ರಸಾದ್ ದಾಖಲಿಸಿದ್ದ ಎಫ್ ಐ ಆರ್ ನ್ನು ಪರಿಶೀಲಿಸಲಾಯಿತು. ತಾವೇ ಈ ವರದಿ ತಯಾರಿಸಿದ್ದಾಗಿ ಹನುಮಾನ್ ಪ್ರಸಾದ್ ಒಪ್ಪಿಕೊಂಡರು. ಆದರೆ ಅವರನ್ನು ಪ್ರಶ್ನಿಸಲು ಸಿಬಿಐಗೆ ನ್ಯಾಯಾಲಯ ಅವಕಾಶ ನೀಡಲಿಲ್ಲ.
2007: ದೇಶದ ಸಂಸತ್ತಿಗೆ ಆಯ್ಕೆಯಾದ `ಮೊದಲ ದಂಪತಿ' ಎಂಬ ಹೆಗ್ಗಳಿಕೆಗೆ ಪಾತ್ರರಾದ ಜೋಕಿಂ ಮತ್ತು ವಯಲೆಟ್ ಆಳ್ವ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಬಿಪಿನ್ ಚಂದ್ರಪಾಲ್ ಅವರ ಭಾವಚಿತ್ರವನ್ನು ಸಂಸತ್ ಸಭಾಂಗಣದಲ್ಲಿ ಈದಿನ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅನಾವರಣಗೊಳಿಸಿದರು. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ವಿರೋಧ ಪಕ್ಷದ ನಾಯಕ ಎಲ್. ಕೆ. ಅಡ್ವಾಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಆಳ್ವ ದಂಪತಿಯ ಭಾವಚಿತ್ರ ರಚಿಸಿದ ಕಲಾವಿದ ಸುಹಾಸ್ ಬಹುಳ್ಕರ್ ಅವರನ್ನು ಪ್ರಧಾನಿ ಸಿಂಗ್ ಹಾಗೂ ಬಿಪಿನ್ ಚಂದ್ರಪಾಲ್ ಅವರ ಭಾವಚಿತ್ರ ರಚಿಸಿದ ಕಲಾವಿದ ಪ್ರೊ. ಜಾಗರ್ ಜಾಹೂರ್ ಅವರನ್ನು ಉಪರಾಷ್ಟ್ರಪತಿ ಅನ್ಸಾರಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಆಳ್ವ ದಂಪತಿ ಮತ್ತು ಬಿಪಿನ್ ಅವರ ಪರಿಚಯವನ್ನು ಒಳಗೊಂಡ ಹಿಂದಿ ಮತ್ತು ಇಂಗ್ಲಿಷ್ ಭಾಷಾ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
2007: ಡಾ.ಶಿವರಾಮ ಕಾರಂತ ಅವರು ರಚಿಸಿರುವ ಏಳು ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶನ ಮಾಡುವ ಮುನ್ನ ಅವರ ಉತ್ತರಾಧಿಕಾರಿ ಬಿ.ಮಾಲಿನಿ ಮಲ್ಯ ಅವರಿಂದ ಹಕ್ಕು ಸ್ವಾಮ್ಯ (ಕಾಪಿ ರೈಟ್) ಪಡೆಯುವುದು ಅಗತ್ಯ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿತು. ಹಕ್ಕು ಸ್ವಾಮ್ಯ ಪಡೆಯುವುದು ಅತ್ಯಗತ್ಯ ಎಂದು 2003ರ ನವೆಂಬರಿನಲ್ಲಿ ಉಡುಪಿಯ ಜಿಲ್ಲಾ ನ್ಯಾಯಾಲಯ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ ಹಾಗೂ ಮಹಾತ್ಮಾ ಗಾಂಧಿ ಸ್ಮಾರಕ ಕಾಲೇಜುಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ವಿ.ಜಗನ್ನಾಥನ್ ವಜಾ ಮಾಡಿದರು. (ಭೀಷ್ಮ ವಿಜಯ, ನಳ - ದಮಯಂತಿ (ಕನಕಾಂಗಿ ಕಲ್ಯಾಣ), ಅಭಿಮನ್ಯು ವಧೆ, ಚಿತ್ರಾಂಗದಾ, ಬಬ್ರುವಾಹನ ಕಾಳಗ, ಪಂಚವಟಿ ಹಾಗೂ ಗಯ ಚರಿತಾ ಇವು ಈ ಏಳು ಯಕ್ಷಗಾನ ಪ್ರಸಂಗಗಳು.) ಯಕ್ಷಗಾನವೆಂಬುದು ಬಹು ಪುರಾತನ ಕಲೆ. ಶತಮಾನದ ಇತಿಹಾಸವುಳ್ಳ ಇಂತಹ ಕಲೆಗೆ ಹಕ್ಕು ಸ್ವಾಮ್ಯ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಅನೂರ್ಜಿತಗೊಳಿಸುವಂತೆ ಅವರು ಕೋರಿದ್ದರು. ಮಾಲಿನಿ ಮಲ್ಯ ಅವರ ಪರ ವಾದಿಸಿದ ವಕೀಲ ಟಿ.ಎನ್. ರಘುಪತಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಬೇರೆಯವರು ರಚಿಸಿರುವ ಇದೇ ಪ್ರಸಂಗಗಳನ್ನು ಪ್ರದರ್ಶನ ಮಾಡಬಾರದು ಎಂಬುದು ತಮ್ಮ ಆಶಯವಲ್ಲ. ಬದಲಿಗೆ ಕಾರಂತರು ರಚಿಸಿರುವ ಕೃತಿಗಳ ಪ್ರದರ್ಶನಕ್ಕೆ ಹಕ್ಕು ಸ್ವಾಮ್ಯ ಪಡೆಯುವುದು ಅಗತ್ಯ ಎಂಬುದು ಅವರ ಸ್ಪಷ್ಟನೆಯಾಗಿತ್ತು. `ಈ ಎಲ್ಲ ಪ್ರಸಂಗಗಳು ಪೌರಾಣಿಕ ಹಿನ್ನೆಲೆ ಹೊಂದಿದ್ದರೂ, ಕಾರಂತರು ಅದಕ್ಕೆ ಹೊಸ ರೂಪ ಕೊಟ್ಟಿದ್ದಾರೆ. ಅದಕ್ಕೆ ರಾಗ, ತಾಳದ ಸಂಯೋಜನೆ, ಸಂಗೀತ ರಚನೆ, ರಂಗಸ್ಥಳದ ಕಲ್ಪನೆ ಸೇರಿದಂತೆ ಪ್ರಯೋಗಗಳಿಗೆ ಹೊಸ ಆಯಾಮ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಕ್ಕು ಸ್ವಾಮ್ಯ ಪಡೆಯದೇ ಅದನ್ನು ಪ್ರದರ್ಶನ ಮಾಡುವುದು ಸಲ್ಲದು' ಎಂದು ವಾದಿಸಿದರು. 1997ರ ಡಿಸೆಂಬರ್ ತಿಂಗಳಿನಲ್ಲಿ ಕಾರಂತರು ನಿಧನರಾದರು. ಆದರೆ 1994ರ ಜೂನ್ 18ರಂದು ಉಯಿಲು ಬರೆದಿಟ್ಟಿದ್ದ ಅವರು ಮಾಲಿನಿ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಲಿನಿ ಅವರ ಅನುಮತಿ ಅಗತ್ಯ ಎಂದು ಆದೇಶಿಸುವಂತೆ ಕೋರಿದರು. ಈ ವಾದವನ್ನು ಕೋರ್ಟ್ ಮಾನ್ಯ ಮಾಡಿತು.
2007: ಬಂಧನದಲ್ಲಿದ್ದ ಪಾಕಿಸ್ಥಾನ ಸುಪ್ರೀಂಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಮೊಹಮ್ಮದ್ ಚೌಧುರಿ ಸೇರಿದಂತೆ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟುಗಳ 37 ನ್ಯಾಯಮೂರ್ತಿಗಳನ್ನು ಪಾಕಿಸ್ಥಾನ ಸರ್ಕಾರ ವಜಾ ಮಾಡಿತು. ಈ ಸಂಬಂಧ ಕಾನೂನು ಸಚಿವಾಲಯ ಎರಡು ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಿತು. ಅಧ್ಯಕ್ಷ ಪರ್ವೇಜ್ ಮುಷರಫ್ ಹೊರಡಿಸಿರುವ ಸಂವಿಧಾನಿಕ ಆಜ್ಞೆಯ ಅಡಿ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿರುವ ಕಾರಣ ಈ ನ್ಯಾಯಮೂರ್ತಿಗಳನ್ನು ವಜಾಗೊಳಿಸಲಾಯಿತು. ವಜಾಗೊಂಡ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಲ್ಲಿ ಪಾಕಿಸ್ಥಾನದ ಏಕೈಕ ಹಿಂದೂ ನ್ಯಾಯಮೂರ್ತಿ ರಾಣಾ ಭಗವಾನ್ ದಾಸ್ ಸಹ ಒಬ್ಬರು. ಚೌಧುರಿ ಹಾಗೂ ದಾಸ್ ಹೊರತಾಗಿ ಸುಪ್ರೀಂಕೋರ್ಟಿನ ಇನ್ನೂ 11 ನ್ಯಾಯಮೂರ್ತಿಗಳನ್ನು ಕಿತ್ತು ಹಾಕಲಾಯಿತು. ಸಿಂಧ್, ಪಂಜಾಬ್ ಹಾಗೂ ಪೇಶಾವರ ಹೈಕೋರ್ಟುಗಳ 24 ನ್ಯಾಯಮೂರ್ತಿಗಳನ್ನು ಸಹ ವಜಾಗೊಳಿಸಲಾಯಿತು. ವಜಾಗೊಂಡ ನ್ಯಾಯಮೂರ್ತಿಗಳಿಗೆ ಪಿಂಚಣಿ ಇತ್ಯಾದಿ ಯಾವುದೇ ಸೌಲಭ್ಯ ನಿರಾಕರಿಸಲಾಯಿತು.
2007: ಬಿಸಿಸಿಐ ರಾಷ್ಟ್ರೀಯ ಆಯ್ಕೆ ಸಮಿತಿಯು ಅನಿಲ್ ಕುಂಬ್ಳೆ ಅವರನ್ನು ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಉಳಿಸಿಕೊಂಡಿತು. ಬೆಂಗಳೂರಿನಲ್ಲಿ ದಿಲೀಪ್ ವೆಂಗ್ ಸರ್ಕರ್ ನೇತೃತ್ವದಲ್ಲಿ ಸಭೆ ಸೇರಿದ ಆಯ್ಕೆಗಾರರು ಈ ನಿರ್ಧಾರ ಕೈಗೊಂಡರು.
2005: ಭಾರತೀಯ ಮೂಲದ ವ್ಯಕ್ತಿಗಳ ವಿರುದ್ಧ ಕೊಲೆ ಯತ್ನದ ಆರೋಪ ದಾಖಲಿಸುವುದನ್ನು ಮಲೇಷ್ಯಾ ಆಡಳಿತ ಮುಂದುವರೆಸಿತು. ಈದಿನ ಮತ್ತೆ ಐವರ ವಿರುದ್ಧ ಇಂಥ ಗುರುತರ ಆರೋಪ ದಾಖಲಿಸಲಾಯಿತು. ಇದರಿಂದಾಗಿ ಇಂಥ ಆರೋಪ ಎದುರಿಸುತ್ತಿರುವ ಭಾರತೀಯರ ಸಂಖ್ಯೆ 31 ಕ್ಕೆ ಏರಿತು. ಸರ್ಕಾರದ ನಿಷೇಧದ ಹೊರತಾಗಿಯೂ 2007ರ ನವೆಂಬರ್ 25 ರಂದು ಭಾರತೀಯ ಮೂಲದ ಸಾವಿರಾರು ಜನ ಸಭೆ ಸೇರಿ ಜನಾಂಗೀಯ ಭೇದಭಾವದ ವಿರುದ್ಧ ರ್ಯಾಲಿ ನಡೆಸಿದ್ದರು. ಆ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದರೆಂಬ ಆರೋಪವನ್ನು ಈ 31 ಜನರ ಮೇಲೆ ಹೊರಿಸಲಾಗಿದೆ. ಗರಿಷ್ಠ 20 ವರ್ಷ ಜೈಲುವಾಸದ ಶಿಕ್ಷೆ ವಿಧಿಸಬಹುದಾದ ಅಪರಾಧದ ಆರೋಪ ಹೊತ್ತಿರುವ 31 ಜನರನ್ನು ಈದಿನ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.
2006: ರಾಷ್ಟ್ರವ್ಯಾಪಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಆಪ್ತ ಕಾರ್ಯದರ್ಶಿ ಶಶಿನಾಥ್ ಝಾ ಕೊಲೆ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ ಜೆಎಂಎಂ ಮುಖ್ಯಸ್ಥ ಶಿಬು ಸೊರೇನ್ ಅವರಿಗೆ ದೆಹಲಿ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ಐದು ಲಕ್ಷ ರೂಪಾಯಿಗಳ ದಂಡ ವಿಧಿಸಿತು. 12 ವರ್ಷಗಳ ಹಿಂದೆ ಈ ಕೊಲೆ ನಡೆದಿತ್ತು. ಸೊರೇನ್ ಅಪರಾಧಿ ಎಂದು ನ್ಯಾಯಾಲಯ ನವೆಂಬರ್ 28ರಂದು ತೀರ್ಪು ನೀಡಿತ್ತು.
2006: ಬೆಂಗಳೂರು ಜಯನಗರ ವಾಣಿಜ್ಯ ಸಂಕೀರ್ಣದಲ್ಲಿ ಇರುವ ಪುಟ್ಟಣ್ಣ ಕಣಗಾಲ್ ಚಿತ್ರಮಂದಿರವನ್ನು ಮಲ್ಟಿಪ್ಲೆಕ್ಸ್ ಕಟ್ಟಡವಾಗಿ ಪರಿವರ್ತಿಸಲು ಮತ್ತು ಜಯನಗರ ವಾಣಿಜ್ಯ ಸಂಕೀರ್ಣವನ್ನು ನವೀಕರಿಸಲು ಬೆಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿತು. ಈ ಸಲುವಾಗಿ ನಕ್ಷೆ ತಯಾರಿಸುವಂತೆ ಆಯುಕ್ತ ಜೈರಾಜ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
2006: ಫಿಜಿಯಲ್ಲಿ ನಡೆದ ರಕ್ತರಹಿತ ಕ್ಷಿಪ್ರಕ್ರಾಂತಿಯಲ್ಲಿ ಸೇನೆ ಅಧಿಕಾರವನ್ನು ತನ್ನ ವಶಕ್ಕೆ ತೆಗೆದುಕೊಂಡು, ಪ್ರಧಾನಿ ಲೈಸೆನಿಯಾ ಕರಾಸೆ ಅವರನ್ನು ಪದಚ್ಯುತಿಗೊಳಿಸಿತು. ಕಳೆದ 20 ವರ್ಷಗಳಲ್ಲಿ ಫಿಜಿಯಲ್ಲಿ ನಡೆಯುತ್ತಿರುವ ನಾಲ್ಕನೇ ಸೇನಾ ದಂಗೆ ಇದು. ಬೆಳಿಗ್ಗೆ ಸೇನೆ ಸರ್ಕಾರ ಮತ್ತು ದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ' ಎಂದು ಸೇನಾ ದಂಡನಾಯಕ ಫ್ರಾಂಕ್ ಬೈನಿಮರಮ ಅವರು ಫಿಜಿಯ ರಾಜಧಾನಿ ಸುವಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. ಫಿಜಿಯ ಈಗಿನ ಕ್ಷಿಪ್ರಕ್ರಾಂತಿಗೆ 2000ನೇ ಇಸ್ವಿಯಲ್ಲಿ ನಡೆದ ಘಟನೆಗೆ ನಂಟು ಹಾಕಲಾಗಿದೆ. ಆಗ ಸ್ಥಳೀಯರು ನಡೆಸಿದ ಕ್ಷಿಪ್ರಕ್ರಾಂತಿ ರಕ್ತಪಾತದಲ್ಲಿ ಅಂತ್ಯಗೊಂಡಿತ್ತು. ಸೇನಾ ದಂಗೆಯೂ ವಿಫಲವಾಗಿತ್ತು. ಬೈನಿಮರಮ ವಿರುದ್ಧವೇ ಸೇನೆಯ ಒಂದು ಭಾಗ ತಿರುಗಿ ಬಿದ್ದಿತ್ತು.. ಆಗ ದಂಗೆ ಎದ್ದ ಸೈನಿಕರ ಮೇಲೆ ಪ್ರಧಾನಿ ಕರಾಸೆ ಮೃದುಧೋರಣೆ ತಾಳಿದ್ದಾರೆ ಎಂಬ ಅಸಹನೆ ಬೈನಿಮರಮ ಅವರಲ್ಲಿತ್ತು ಎಂದು ವಿಶ್ಲೇಷಿಸಲಾಯಿತು.
2006: ವಿಯೆಟ್ನಾಮಿನ ದಕ್ಷಿಣ ಭಾಗಗಳಲ್ಲಿ ಬಲವಾಗಿ ಅಪ್ಪಳಿಸಿದ ಡ್ಯೂರಿಯನ್ ಚಂಡಮಾರುತಕ್ಕೆ ಕನಿಷ್ಠ 38 ಮಂದಿ ಬಲಿಯಾದರು. ಘಟನೆಯಲ್ಲಿ ನೂರಾರು ಮನೆಗಳು ನಾಶವಾದವು.. ಫಿಲಿಪ್ಪೀನ್ಸಿನಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಇದೇ ಚಂಡಮಾರುತ ನೂರಾರು ಮಂದಿಯನ್ನು ಬಲಿ ತೆಗೆದುಕೊಂಡಿತ್ತು. ಭಾರಿ ಮಳೆಯೊಂದಿಗೆ ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಬಂದ ಚಂಡಮಾರುತ, ವಿಯೆಟ್ನಾಮಿನ ಪ್ರಮುಖ ಕೃಷಿ ಪ್ರದೇಶವಾದ ಮೆಕಾಂಗಿನಲ್ಲಿ ಭಾರಿ ಹಾನಿ ಉಂಟುಮಾಡಿತು.
2005: ಇಂಗ್ಲೆಂಡಿನಲ್ಲಿ ಸಲಿಂಗಕಾಮಿಗಳ ಮದುವೆಗೆ ಮಾನ್ಯತೆ ಒದಗಿಸುವ ಸಿವಿಲ್ ಪಾರ್ನರ್ ಶಿಪ್ ಆಕ್ಟ್ ಜಾರಿಗೆ ಬಂದಿತು. ಈ ಕಾಯ್ದೆಯ ಪ್ರಕಾರ ಸಲಿಂಗಕಾಮಿ ಜೋಡಿಗಳು ರಿಜಿಸ್ಟ್ರಾರ್ ಮತ್ತು ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಮದುವೆ ದಾಖಲಾತಿ ಮಾಡಿಕೊಳ್ಳಬಹುದು. ಈ ನೋಂದಣಿ ಅವರಿಗೆ ದಂಪತಿ ಮಾದರಿಯಲ್ಲೇ ಒಬ್ಬನು(ಳು) ಮೃತನಾದರೆ ಆತನ ಜೋಡಿ ಹುಡುಗ(ಗಿ)ನಿಗೆ ಮೃತನ(ಳ) ಪಿಂಚಣಿ, ಆಸ್ಪತ್ರೆ ಹಕ್ಕುಗಳನ್ನು ಒದಗಿಸುತ್ತದೆ. ಜೋಡಿಯ ಮನೆಯಿಂದ ಲಭಿಸುವ ಆಸ್ತಿಗೆ ತೆರಿಗೆ ವಿನಾಯ್ತಿ ಸಿಗುತ್ತದೆ. ವಿಚ್ಛೇದನಾ ನಿಯಮಗಳ ಪ್ರಕಾರ ಅವರು ಈ ದಾಂಪತ್ಯ ಒಪ್ಪಂದವನ್ನು ವಿಸರ್ಜನೆ ಮಾಡಲೂ ಈ ಕಾಯ್ದೆ ಅವಕಾಶ ನೀಡಿದೆ.
2005: ಅಶಿಸ್ತು ಹಾಗೂ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡದ್ದಕ್ಕಾಗಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಯಿತು.
2005: ಇರಾಕಿನ ಆಹಾರಕ್ಕಾಗಿ ತೈಲ ಕಾರ್ಯಕ್ರಮದ ಲಾಭ ಪಡೆದಿದ್ದಾರೆ ಎಂಬುದಾಗಿ ವೋಲ್ಕರ್ ಸಮಿತಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಹೆಚ್ಚಿದ ಒತ್ತಡಕ್ಕೆ ಕೊನೆಗೂ ಮಣಿದ ಕೇಂದ್ರ ಸಚಿವ ಕೆ. ನಟವರ್ ಸಿಂಗ್ ರಾಜೀನಾಮೆ ನೀಡಲು ಮುಂದೆ ಬಂದರು. ಮಾಸ್ಕೊ ಭೇಟಿಯಲ್ಲಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ನಟವರ್ ಸಿಂಗ್ ಪ್ರಧಾನಿ ಪ್ರವಾಸದಿಂದ ವಾಪಸಾದೊಡನೆ ರಾಜೀನಾಮೆ ಸಲ್ಲಿಸುವುದಾಗಿ ತಿಳಿಸಿದರು.
2000: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಮಹಮ್ಮದ್ ಅಜರುದ್ದೀನ್ ಮತ್ತು ಅಜಯ್ ಶರ್ಮಾ ಅವರನ್ನು ಮ್ಯಾಚ್ ಫಿಕ್ಸಿಂಗ್ ಮತ್ತು ಲಂಚ ಪಡೆದ ಆರೋಪದಲ್ಲಿ ಇಡೀ ಜೀವಮಾನದ ಅವಧಿಗೆ ಡಿಬಾರ್ ಮಾಡಿತು. ಅಜಯ್ ಜಡೇಜಾ, ಮನೋಜ್ ಪ್ರಭಾಕರ್ ಮತ್ತು ಫಿಸಿಯೋ ಥೆರೆಪಿಸ್ಟ್ ಅಲಿ ಇರಾನಿ ಅವರಿಗೆ ಐದೈದು ವರ್ಷಗಳ ನಿಷೇಧ ವಿಧಿಸಲಾಯಿತು.
1994: ಸಂಸತ್ತಿಗೆ ವಿ.ಪಿ. ಸಿಂಗ್ ರಾಜೀನಾಮೆ ಸಲ್ಲಿಸಿದರು.
1965: ಸಾಹಿತಿ ವಿದ್ಯಾ ಉಮೇಶ್ ಜನನ.
1961: ಸಾಹಿತಿ ಕಬ್ಬಿನಾಲೆ ವಸಂತ ಭಾರಧ್ವಾಜ್ ಜನನ.
1959: ಭಾರತದ ಖ್ಯಾತ ಕ್ರಿಕೆಟ್ ಪಟು ದುಲೀಪ್ ಸಿನ್ಹಜಿ ಅವರು ನಿಧನರಾದರು.
1950: ಶ್ರೀ ಅರವಿಂದ ಘೋಷ್ ಅವರು ತಮ್ಮ 78ನೇ ವಯಸ್ಸಿನಲ್ಲಿ ಪಾಂಡಿಚೇರಿಯಲ್ಲಿ `ಮಹಾಸಮಾಧಿ' ಹೊಂದಿದರು.
1943: ಕಲ್ಕತ್ತ (ಈಗ ಕೋಲ್ಕತ್ತ) ಬಂದರಿನ ಮೇಲೆ ಜಪಾನ್ ವಿಮಾನದಾಳಿ ನಡೆಸಿತು.
1940: ಸಾಹಿತಿ ಗೀತಾ ಸಿ.ವಿ. ಜನನ.
1939: ಸಾಹಿತಿ ಚಿರಂಜೀವಿ ಜನನ.
1932: ನವಾಬ್ ಪಟೌಡಿ ಸೀನಿಯರ್ ಇಂಗ್ಲೆಂಡ್ ಪರವಾಗಿ ತಮ್ಮ ಕ್ರಿಕೆಟ್ ಟೆಸ್ಟ್ ಪಂದ್ಯಕ್ಕೆ ಚೊಚ್ಚಲ ಹೆಜ್ಜೆ ಇರಿಸಿದರು. ಭಾರತದ ಇತರ ಇಬ್ಬರು ಕ್ರಿಕೆಟ್ ಪಟುಗಳಾದ ರಣಜಿತ್ ಸಿನ್ಹಜಿ ಮತ್ತು ದುಲೀಪ್ ಸಿನ್ಹಜಿ ಅವರಂತೆ ಶತಕ ಸಿಡಿಸಿದರು.
1913: ಸಾಹಿತಿ ವಿಶಾಲಾಕ್ಷಿ ಲಕ್ಷ್ಮಣಗೌಡ ಜನನ.
1908: ಕಾವ್ಯ, ನಾಟಕ, ಶಿಶುಸಾಹಿತ್ಯ ಇತ್ಯಾದಿ ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ದುಡಿದ ಜಿ.ಪಿ. ರಾಜರತ್ನಂ (5-12-1908ರಿಂದ 13-3-1979) ಅವರು ಪಿ. ಗೋಪಾಲಕೃಷ್ಣ ಅಯ್ಯಂಗಾರ್ ಮಗನಾಗಿ ರಾಮನಗರದಲ್ಲಿ ಜನಿಸಿದರು.
1905: ಸ್ವಾತಂತ್ರ್ಯ ಹೋರಾಟಗಾರ ಷೇಕ್ ಮಹಮ್ಮದ್ ಅಬ್ದುಲ್ಲ (1905-1982) ಹುಟ್ಟಿದ ದಿನ. ಕಾಶ್ಮೀರಿಗಳಿಗೆ ವಿಶೇಷ ಹಕ್ಕುಗಳನ್ನು ಪಡೆಯುವ ಸಲುವಾಗಿಯೂ ಹೋರಾಡಿದ ಇವರು ಭಾರತದೊಳಗೇ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಪಡೆಯುವಲ್ಲಿ ಸಫಲರಾದರು.
1901: ವಾಲ್ಟೇರ್ ಎಲಿಯಾಸ್ ಡಿಸ್ನಿ (1901-1966) ಹುಟ್ಟಿದ ದಿನ. `ಮಿಕ್ಕಿ ಮೌಸ್', `ಡೊನಾಲ್ಡ್ ಡಕ್'ಗಳಂತಹ ಕಾರ್ಟೂನ್ ಪಾತ್ರಗಳನ್ನು ನಿರ್ಮಿಸಿದ `ವಾಲ್ಟ್ ಡಿಸ್ನಿ' ಅನಿಮೇಷನ್ ಚಿತ್ರಗಳನ್ನು ಮೊತ್ತ ಮೊದಲಿಗರಾಗಿ ನಿರ್ಮಿಸಿದ ಅಮೆರಿಕನ್.
1776: ಲಂಡನ್ನಿನ ಪಾಲ್ ಮಾಲ್ನಲ್ಲಿ `ಹರಾಜು ಮನೆ' (ಆಕ್ಷನ್ ಹೌಸ್) ಸ್ಥಾಪಿಸಿದ ಮಾಜಿ ನೌಕಾ ಅಧಿಕಾರಿ ಜೇಮ್ಸ್ ಕ್ರಿಸ್ಟೀ ದಿ ಎಲ್ಡರ್ (1730-1803) ತನ್ನ ಮಳಿಗೆಯಲ್ಲಿ ಮೊದಲ ಮಾರಾಟ ನಡೆಸಿದ. ಥಾಮಸ್ ಗೇನ್ಸ್ ಬರೋ, ಸರ್ ಜೊಶುವಾ ರೇನಾಲ್ಡ್ಸ್, ಥಾಮಸ್ ಚಿಪ್ಪಾಂಡೇಲ್ ಅವರಂತಹ ಕಲಾವಿದರಿಗೆ ಜೇಮ್ಸ್ ಗೆಳೆಯನಾದ. ಆತನ `ಹರಾಜುಮನೆ' ಕಲಾಕೃತಿಗಳನ್ನು ಕೊಳ್ಳುವವರು- ಮಾರುವವರಿಗೆ ಕೇಂದ್ರವಾಯಿತು. 1859ರಲ್ಲಿ ಸಂಸ್ಥೆ ಈಗಿನ `ಕ್ರಿಸ್ಟೀ, ಮ್ಯಾನ್ಸನ್ ಅಂಡ್ ವುಡ್ಸ್' ಹೆಸರನ್ನು ಪಡೆದುಕೊಂಡಿತು. 1973ರಲ್ಲಿ ಸಾರ್ವಜನಿಕ ಕಂಪೆನಿಯಾಯಿತು.
1456: ನೇಪಾಳದಲ್ಲಿ ಭೂಕಂಪದಿಂದ 35,000 ಜನ ಮೃತರಾದರು.
No comments:
Post a Comment