Tuesday, January 26, 2010

ಇಂದಿನ ಇತಿಹಾಸ History Today ಡಿಸೆಂಬರ್ 27

ಇಂದಿನ ಇತಿಹಾಸ

ಡಿಸೆಂಬರ್ 27

ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರನ್ನು ಡಿಎಂಕೆ ಪಕ್ಷದ 10ನೇ ಅವಧಿಯ ಅಧ್ಯಕ್ಷರನ್ನಾಗಿ ಅವಿರೋಧ ಆಯ್ಕೆ ಮಾಡಲಾಯಿತು. ಈದಿನ ಚೆನ್ನೈಯಲ್ಲಿ ನಡೆದ ಪಕ್ಷದ ಕಾರ್ಯಕಾರಿ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಕರುಣಾನಿಧಿ ಅವರ ಪುತ್ರ ಎಂ.ಕೆ.ಸ್ಟಾಲಿನ್ ಖಜಾಂಚಿಯಾಗಿ ಹಾಗೂ ಪಕ್ಷದ ಹಿರಿಯ ಮುಖಂಡ ಆರ್ಕಾಟ್ ಎನ್. ವೀರಸ್ವಾಮಿ ಅವರು ಮುಖ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದರು.

2008: ಬಾಲಿವುಡ್ಡಿನ ಖ್ಯಾತ ನಟ ಅಮೀರ್ ಖಾನ್ ಮೊಟ್ಟ ಮೊದಲ ಬಾರಿಗೆ ನಿರ್ದೇಶಿಸಿದ 'ತಾರೆ ಜಮೀನ್ ಪರ್' ಹಾಗೂ ನೀರಜ್ ಪಾಂಡೆ ಅವರ 'ಎ ವೆನ್ಸಡೆ' ಚಿತ್ರಗಳು ಹಲವು ವಿಭಾಗಗಳಲ್ಲಿ ವಿ. ಶಾಂತಾರಾಮ್ ಪ್ರಶಸ್ತಿ ಪಡೆದುಕೊಂಡವು. ಮುಂಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ 'ತಾರೆ ಜಮೀನ್ ಪರ್' ಚಿತ್ರವು ಅತ್ಯುತ್ತಮ ಚಿತ್ರಕ್ಕಾಗಿ ವಿ.ಶಾಂತಾರಾಮ್ ಸ್ವರ್ಣ ಪ್ರಶಸ್ತಿ ಪಡೆದುಕೊಂಡಿತು. ಅದರಂತೆ 'ಎ ವೆನ್ಸಡೆ' ಹಾಗೂ ಮರಾಠಿ ಚಿತ್ರ 'ತಿಂಗ್ಯಾ' ರಜತ ಹಾಗೂ ಕಂಚು ಪ್ರಶಸ್ತಿ ಪಡೆದುಕೊಂಡವು. 'ಎ ವೆನ್ಸಡೆ' ಚಿತ್ರ ನಿರ್ದೇಶಿಸಿದ ನೀರಜ್ ಪಾಂಡೆ ಅವರಿಗೆ ಅತ್ಯುತ್ತಮ ನಿರ್ದೇಶಕ ಹಾಗೂ ಮೊದಲ ಬಾರಿ ನಿರ್ದೇಶನ ಮಾಡಿದ್ದಕ್ಕಾಗಿ ಪ್ರಶಸ್ತಿ ದಕ್ಕಿದವು. 2ನೇ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಅಮೀರ್ ಖಾನ್ (ತಾರೆ...), 3ನೇ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಅಶುತೋಷ್ ಗಾವರಿಕರ್ (ಜೋಧಾ ಅಕ್ಬರ್) ಭಾಜನರಾದರು. ಅತ್ಯುತ್ತಮ ನಟನಾಗಿ ದರ್ಶಿಲ್ ಸಫಾರೆ (ತಾರೆ...) ಹಾಗೂ ಅತ್ಯುತ್ತಮ ನಟಿಯಾಗಿ ಐಶ್ವರ್ಯ ರೈ (ಜೋಧಾ ಅಕ್ಬರ್) ಆಯ್ಕೆಯಾದರು. ಅತ್ಯುತ್ತಮ ಪೋಷಕ ಪಾತ್ರದ ಪ್ರಶಸ್ತಿ ಜಿಮ್ಮಿ ಶೆರ್ಗಿಲ್ (ಎ ವೆನ್ಸಡೆ) ಅವರ ಮುಡಿಗೇರಿತು. ಮೊದಲ ಬಾರಿ ನಟಿಸಿದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಫರ್ಹಾಣ್ ಅಖ್ತರ್ ಸ್ವೀಕರಿಸಿದರು. ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಎ.ಆರ್. ರೆಹಮಾನ್ (ಜೋಧಾ ಅಕ್ಬರ್) ಅವರಿಗೆ ಲಭಿಸಿತು.

2008: ಮುಂಬೈ ಮೇಲೆ ನವೆಂಬರ್ 26ರಂದು ನಡೆದ ಉಗ್ರರ ದಾಳಿ ವೇಳೆ ಬಂಧಿತನಾದ ಪಾಕಿಸ್ಥಾನಿ ಪ್ರಜೆ ಮೊಹಮ್ಮದ್ ಅಜ್ಮಲ್ ಅಮೀರ್ ಅಲಿಯಾಸ್ ಕಸಾಬ್‌ನನ್ನು ದಕ್ಷಿಣ ಮುಂಬೈನ ಆರ್ಥರ್ ಜೈಲಿನಲ್ಲಿ ಪೆರೇಡ್ ಮಾಡಿಸಲಾಯಿತು. ಕಸಾಬ್‌ನನ್ನು ಕನಿಷ್ಠ 40 ಜನ ಪ್ರತ್ಯಕ್ಷ ಸಾಕ್ಷಿಗಳು ದೃಢೀಕರಿಸಿದರು. ಇವರಲ್ಲಿ ಪೊಲೀಸ್ ಜೀಪ್‌ನಲ್ಲಿ ಸಾಗುತ್ತಿದ್ದ ಪೊಲೀಸ್ ಅರುಣ್ ಜಾಧವ್ ಕೂಡಾ ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು. ಈ ಪೊಲೀಸ್ ಜೀಪ್ ಅನ್ನು ಅಂದು ಕಸಾಬ್ ಮತ್ತು ಆತನ ಸಹಚರ ಅಪಹರಿಸಿದ್ದರು. ಭದ್ರತಾ ದೃಷ್ಟಿಯಿಂದ ಸೀಮೀತ ಸಂಖ್ಯೆಯ ಪ್ರತ್ಯಕ್ಷ ಸಾಕ್ಷಿಗಳನ್ನು ಮಾತ್ರವೇ ಜೈಲಿಗೆ ಕರೆಸಲಾಗಿತ್ತು.

2008: ಗಾಜಾ ಪ್ರದೇಶದಲ್ಲಿ ಇಸ್ರೇಲಿ ಯುದ್ಧ ವಿಮಾನಗಳು ನಡೆಸಿದ ದಾಳಿಗೆ 120 ಪ್ಯಾಲಿಸ್ಥೀನಿಯರು ಬಲಿಯಾದರು ಎಂದು ಹಮಾಸ್ ಮೂಲಗಳು ತಿಳಿಸಿದವು. ಮೃತರಲ್ಲಿ ಬಹುತೇಕ ಹಮಾಸ್ ರಕ್ಷಣಾ ಪಡೆಯವರು ಎಂದು ಮೂಲಗಳು ಹೇಳಿದವು. ಮೃತರಲ್ಲಿ ಹಮಾಸ್ ಪೊಲೀಸ್ ಮುಖ್ಯಸ್ಥ ತವ್ಫೀಕ್ ಜಬೇರ್ ಕೂಡ ಸೇರಿದ್ದರು. ಹಮಾಸ್ ರಕ್ಷಣಾ ಪಡೆಯ ಮುಖ್ಯ ಕಚೇರಿ ಮತ್ತು ಅಲ್ಲಿನ ಸೇನಾ ವಿಭಾಗದ ತರಬೇತಿ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು.

2008: ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರನ್ನು ಡಿಎಂಕೆ ಪಕ್ಷದ 10ನೇ ಅವಧಿಯ ಅಧ್ಯಕ್ಷರನ್ನಾಗಿ ಅವಿರೋಧ ಆಯ್ಕೆ ಮಾಡಲಾಯಿತು. ಈದಿನ ಚೆನ್ನೈಯಲ್ಲಿ ನಡೆದ ಪಕ್ಷದ ಕಾರ್ಯಕಾರಿ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಕರುಣಾನಿಧಿ ಅವರ ಪುತ್ರ ಎಂ.ಕೆ.ಸ್ಟಾಲಿನ್ ಖಜಾಂಚಿಯಾಗಿ ಹಾಗೂ ಪಕ್ಷದ ಹಿರಿಯ ಮುಖಂಡ ಆರ್ಕಾಟ್ ಎನ್. ವೀರಸ್ವಾಮಿ ಅವರು ಮುಖ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದರು.

2007: ಪಾಕಿಸ್ಥಾನದ ಮಾಜಿ ಪ್ರಧಾನಿ, ಪಾಕಿಸ್ಥಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷೆ ಬೆನಜೀರ್ ಭುಟ್ಟೊ (54) ಅವರನ್ನು ರಾವಲ್ಪಿಂಡಿಯ ಲಿಯಾಖತ್ ಬಾಗಿನಲ್ಲಿ ನಡೆದ ಚುನಾವಣಾ ರಾಲಿಯಲ್ಲಿ
ಉಗ್ರಗಾಮಿಗಳು ಗುಂಡಿಟ್ಟು ಹತ್ಯೆ ಮಾಡಿದರು. 2008ರ ಜನವರಿ 8ಕ್ಕೆ ನಡೆಯುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಪ್ರಚಾರ ರಾಲಿಯಲ್ಲಿ ಅಪಾರ ಸಂಖ್ಯೆಯ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ನಂತರ ಸಂಜೆ ಸುಮಾರು 5.30ಕ್ಕೆ ತಮ್ಮ ಕಾರಿನಲ್ಲಿ ಕೂರುತ್ತಿದ್ದಾಗ ಭಯೋತ್ಪಾದಕನೊಬ್ಬ ಎ.ಕೆ.47 ಬಳಸಿ ಸಮೀಪದಿಂದ ಐದು ಸುತ್ತು ಗುಂಡು ಹಾರಿಸಿದ. ಬೆನಜೀರ್ ಅವರ ಕುತ್ತಿಗೆ ಮತ್ತು ತಲೆಗೆ ಗುಂಡು ತಗುಲಿದ್ದರಿಂದ ಅವರನ್ನು ತಕ್ಷಣ ಸ್ಥಳೀಯ ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಅವರನ್ನು ಉಪಚರಿಸಿದ ವೈದ್ಯರು ಸಂಜೆ 6 ಗಂಟೆ 16 ನಿಮಿಷಕ್ಕೆ ಬೆನಜೀರ್ ಮೃತರಾಗಿರುವುದಾಗಿ ಘೋಷಿಸಿದರು. ಬೆನಜೀರ್ ಮೇಲೆ ಗುಂಡು ಹಾರಾಟ ನಡೆಯುತ್ತಿದ್ದಂತೆಯೇ ಸಂಭವಿಸಿದ ಇನ್ನೊಂದು ಆತ್ಮಹತ್ಯಾ ದಾಳಿಯಿಂದ ಇದೇ ಸ್ಥಳದಲ್ಲಿ 22ಕ್ಕೂ ಹೆಚ್ಚು ಮಂದಿ ಮೃತರಾಗಿ ಹಲವರು ಗಾಯಗೊಂಡರು. ಘಟನೆಯ ಬೆನ್ನಲ್ಲೇ ಪಾಕಿಸ್ಥಾನದ ವಿವಿಧ ಕಡೆಗಳಲ್ಲಿ ನಡೆದ ಹಿಂಸಾತ್ಮಕ ಘಟನೆಗಳಲ್ಲಿ 14 ಮಂದಿ ಮೃತರಾದರು. 2007ರ ಅಕ್ಟೋಬರ್ 19ರಂದು ಬೆನಜೀರ್ ಭುಟ್ಟೊ ಪಾಕಿಸ್ಥಾನಕ್ಕೆ ಮರಳಿದ ನಂತರ ಅವರ ಸಭೆಗಳ ಮೇಲೆ ನಡೆದ ಎರಡನೇ ದಾಳಿ ಇದು. ಅವರು ಪಾಕ್ ಪ್ರವೇಶಿಸಿದ ದಿನವೇ ಪಿಪಿಪಿ ಆಯೋಜಿಸಿದ್ದ ಬೃಹತ್ ಸ್ವಾಗತ ರಾಲಿಯಲ್ಲಿಯೂ ಆತ್ಮಾಹುತಿ ದಾಳಿ ನಡೆದಿತ್ತು. ಆ ದಾಳಿಯಲ್ಲಿ ಸುಮಾರು 140ಕ್ಕೂ ಅಧಿಕ ಜನ ಮೃತರಾಗಿದ್ದರು.

2007: ಖ್ಯಾತ ವಿವಾದಾತ್ಮಕ ಚಿತ್ರ ಕಲಾವಿದ ಎಂ.ಎಫ್. ಹುಸೇನ್ ಅವರ ಕಲಾ ಕೃತಿಗಳ ಪ್ರದರ್ಶನವನ್ನು ಸಂಘಟಿಸಿದ್ದ ನವದೆಹಲಿಯ ಭಾರತದ ಅಂತಾರಾಷ್ಟ್ರೀಯ ಕೇಂದ್ರದ ಮೇಲೆ ಶಿವಸೇನಾ ಕಾರ್ಯಕರ್ತರು ದಾಳಿಮಾಡಿ ಎರಡು ಕಲಾಕೃತಿಗಳನ್ನು ವಿಕೃತಗೊಳಿಸಿದರು. ಘಟನೆಯಲ್ಲಿ 1.5 ಲಕ್ಷ ಬಲೆಬಾಳುವ ಅಕ್ಬರ್ ದೊರೆಯ ಚಿತ್ರ ಸಂಪೂರ್ಣ ಹಾಳಾಗಿದ್ದು, ಮತ್ತೊಂದು ಚಿತ್ರ ಸ್ವಲ್ಪ ಹಾಳಾಯಿತು.

2007: ಭೂ ಒತ್ತುವರಿ ಹಾವಳಿಯಿಂದಾಗಿ ರಾಷ್ಟ್ರದಾದ್ಯಂತ ಹಲವಾರು ಕೆರೆಗಳೇ ಗುಳುಂ ಆದದ್ದು ಇತಿಹಾಸ. ಇಂತಹ ಇತಿಹಾಸವನ್ನೆ ಮೀರಿಸುವ ಮತ್ತೊಂದು ಭೂಗಳ್ಳತನದ ಕುಖ್ಯಾತಿಗೆ ರಾಷ್ಟ್ರದ 2ನೇ ಅತಿದೊಡ್ಡ ಕೆರೆ ಎಂದೇ ಪ್ರಸಿದ್ಧಿಯಾಗಿರುವ ಚೆನ್ನೈಯ ಪುಲಿಕ್ಯಾಟ್ ಕೆರೆ ತುತ್ತಾಗಿರುವುದು ಬೆಳಕಿಗೆ ಬಂತು. ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಸಾಗರದಂತಹ ಈ ಕೆರೆ ಕಳೆದ ಎರಡು ದಶಕಗಳಿಂದ ತನ್ನ ವಿಸ್ತೀರ್ಣದಲ್ಲಿ ಭಾರಿ ಪ್ರಮಾಣದಲ್ಲಿ ಕುಗ್ಗುತ್ತ ಬಂದಿದೆ. ಆರಂಭದಲ್ಲಿ ಪುಲಿಕ್ಯಾಟ್ ಕೆರೆಯ ವಿಸ್ತೀರ್ಣ 600 ಚದರ ಕಿ. ಮೀ. ಇತ್ತು. ಕ್ರಮೇಣ ಇದರ ವಿಸ್ತೀರ್ಣ 400 ಚ.ಕಿ.ಮೀ.ಗೆ ಕುಗ್ಗಿದೆ. 4ಮೀ. ಆಳವಿದ್ದ ಕೆರೆ ಈಗ 2ಮೀ. ಮಾತ್ರ ಇದೆ. ಈ ಕೆರೆಗೆ ವಲಸೆ ಬರುವ ಪಕ್ಷಿಗಳ ಸಂಖ್ಯೆಯಲ್ಲಿಯೂ ಗಣನೀಯ ಕುಸಿತ ಕಂಡು ಬಂದಿದೆ. ಚಳಿಗಾಲದಲ್ಲಿ ಈ ಕೆರೆಗೆ ವಲಸೆ ಬರುತ್ತಿದ್ದಪಕ್ಷಿಗಳು ಈಗ ನೀರಿನ ಕೊರತೆಯಿಂದ ಬರಲು ಹಿಂದೇಟು ಹಾಕುತ್ತಿವೆ. 2002ರ ಚಳಿಗಾಲದಲ್ಲಿ ಸುಮಾರು 30 ಸಾವಿರ ಪಕ್ಷಿಗಳು ಬಂದಿದ್ದವು. ಆದರೆ, 2006ರಲ್ಲಿ ಕೇವಲ 7 ಸಾವಿರ ಪಕ್ಷಿಗಳು ಈ ಕೆರೆಗೆ ಬಂದಿವೆ ಎಂಬುದು ಸಮೀಕ್ಷೆಯೊಂದರಿಂದ ಬೆಳಕಿಗೆ ಬಂತು.

2007: ಪ್ಯಾರಿಸ್ಸಿಗೆ ಹೋಗಬೇಕಾಗಿದ್ದ ವಿಷ್ಣುವಿನ `ಟೆರಕೋಟ' ಮೂರ್ತಿಗಳು ಢಾಕಾ ವಿಮಾನ ನಿಲ್ದಾಣದಲ್ಲಿಯೇ ಕಳುವಾದ ಹಿನ್ನೆಲೆಯಲ್ಲಿ ಭುಗಿಲೆದ್ದ ಸಾರ್ವಜನಿಕರ ಪ್ರತಿಭಟನೆಗೆ ಮಣಿದು ಬಾಂಗ್ಲಾದೇಶ ಸರ್ಕಾರದ ಶಿಕ್ಷಣ ಮತ್ತು ಸಂಸ್ಕೃತಿ ವ್ಯವಹಾರಗಳ ಖಾತೆಯ ಸಲಹೆಗಾರ ಅಯೂಬ್ ಖಾದ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪ್ಯಾರಿಸ್ಸಿನಲ್ಲಿ ನಡೆಯುವ ವಸ್ತು ಪ್ರದರ್ಶನದಲ್ಲಿ ಇಡಲಿಕ್ಕಾಗಿ ಅಲ್ಲಿಗೆ ಕಳುಹಿಸಲು ವಿಷ್ಣುವಿನ ಮೂರ್ತಿಗಳನ್ನು ವಿಮಾನ ನಿಲ್ದಾಣದಲ್ಲಿ ಇಡಲಾಗಿತ್ತು. ಆದರೆ ಐದು ದಿನಗಳ ಹಿಂದೆ ಈ ಎರಡು ಮೂರ್ತಿಗಳು ಕಳುವಾಗಿದ್ದವು.

2007: ದೇವನಹಳ್ಳಿ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬೆಂಗಳೂರು ನಗರದ ನಡುವಿನ ಅತಿ ವೇಗದ ಅಟ್ಟಣಿಗೆ (ಎಲಿವೇಟೆಡ್) ರೈಲು ಯೋಜನೆ ಜಾರಿಗೆ ಕೈಗೊಳ್ಳಬೇಕಾದ ಕ್ರಮಗಳಿಗೆ ಚಾಲನೆ ನೀಡುವ ಸಂಬಂಧ ಸರ್ಕಾರಿ ಆದೇಶ ಹೊರ ಬಿದ್ದಿತು. 2007ರ ಸೆಪ್ಟೆಂಬರ್ 26ರಂದು ಹಣಕಾಸು ಇಲಾಖೆ ಈ ಯೋಜನೆಗೆ ಸಮ್ಮತಿ ನೀಡಿತ್ತು. ರಾಜ್ಯಪಾಲ ರಾಮೇಶ್ವರ ಠಾಕೂರ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟಕ್ಕೆ ಸಮನಾದ ರಾಜ್ಯ ಸರ್ಕಾರದ ಕಾರ್ಯಕಾರಿ ಸಮಿತಿ ಸಭೆಯು ಈ ಯೋಜನೆ ಜಾರಿಗೆ ಅಂತಿಮ ಒಪ್ಪಿಗೆ ಕೊಟ್ಟಿತ್ತು.

2006: ಅಮೆರಿಕದ ಚುನಾವಣೆ ಎದುರಿಸದ ಅಧ್ಯಕ್ಷ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಜೆರಾಲ್ಡ್ ಫೋರ್ಡ್ (93) (1913-2006) ಲಾಸ್ ಏಂಜೆಲಿಸ್ನಲ್ಲಿ ನಿಧನರಾದರು. 1974ರಲ್ಲಿ ರಿಚರ್ಡ್ ನಿಕ್ಸನ್ ಅವರು ವಾಟರ್ ಗೇಟ್ ಹಗರಣದ ಆರೋಪಕ್ಕೆ ಗುರಿಯಾಗಿ ರಾಜೀನಾಮೆ ಸಲ್ಲಿಸಿದಾಗ ಫೋರ್ಡ್ ಅವರು ಅಮೆರಿಕದ 38ನೇ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ರಿಪಬ್ಲಿಕನ್ ಪಕ್ಷಕ್ಕೆ ಸೇರಿದ ಅವರು ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಚುನಾವಣೆ ಎದುರಿಸಲಿಲ್ಲ. ಅಧಿಕಾರ ವಹಿಸಿಕೊಂಡ ಒಂದೇ ತಿಂಗಳಲ್ಲಿ ನಿಕ್ಸನ್ ಅವರಿಗೆ ಸಂಪೂರ್ಣ ಕ್ಷಮಾಪಣೆ ನೀಡಿ ಜನರನ್ನು ಅಚ್ಚರಿಯ ಕೂಪಕ್ಕೆ ಕೆಡವಿದ್ದರು.

2006: ತೈವಾನ್ ರಾಷ್ಟ್ರದ ಅಧ್ಯಕ್ಷ ಚೆನ್ ಶುಯಿ ಬಿಯಾನ್ ಅಳಿಯ ಚೌ ಚುಯಾನ್ ಮಿಂಗ್ ಅವರು ಅಧ್ಯಕ್ಷರ ಹೆಸರು ಬಳಸಿಕೊಂಡು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದು ಸಾಬೀತಾದ ಕಾರಣ ನ್ಯಾಯಾಲಯ 6 ವರ್ಷಗಳ ಸೆರೆಮನೆವಾಸದ ಶಿಕ್ಷೆ ವಿಧಿಸಿತು.

2006: ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಬಿ ಎಸ್ ಸಿ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಮುಕುಂದ ತಿವಾರಿ ಅವರಿಗೆ ಅಂಗವಿಕಲರ ನೆರವಿಗಾಗಿ ಸಂಶೋಧಿಸಿದ ಅಗ್ಗದ ದರದ ತಂತ್ರಜ್ಞಾನಕ್ಕಾಗಿ ರಾಷ್ಟ್ರೀಯ ಪುರಸ್ಕಾರ ಲಭಿಸಿತು.

2006: ಸೌರಮಂಡಲದ ಆಚೆಗಿನ ಭೂಮಿಯನ್ನು ಹೋಲುವ ಹೊಸ ಗ್ರಹ ಒಂದನ್ನು ಹುಡುಕುವ ಸಲುವಾಗಿ ಹಾಗೂ ನಕ್ಷತ್ರಗಳ ಆಂತರಿಕ ಒಳಗುಟ್ಟು ಅರಿಯುವ ಸಲುವಾಗಿ ಫ್ರೆಂಚ್ ಪ್ರಾಯೋಜಿತ ಮುಖ್ಯ ಉಪಗ್ರಹ ಯೋಜನೆಯಡಿ `ಕೊರೋಟ್' ಹೆಸರಿನ `ಗ್ರಹ ಅನ್ವೇಷಕ' ಒಂದನ್ನು ಕಜಕಿಸ್ಥಾನದಿಂದ ಉಡಾವಣೆ ಮಾಡಲಾಯಿತು. `ಕೊರೋಟ್' ಸೌರ ಮಂಡಲದಾಚೆಗಿನ ಸೌರ ವ್ಯವಸ್ಥೆ ಹಾಗೂ ಭೂಮಿಯನ್ನು ಹೋಲುವಂತಹ ಗ್ರಹವನ್ನು ಹುಡುಕುವಂತಹ ಪ್ರಪ್ರಥಮ ಬಾಹ್ಯಾಕಾಶ ದೂರದರ್ಶಕ (ಟೆಲೆಸ್ಕೋಪ್) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

2005: ಲೈಂಗಿಕ ಹಗರಣದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜಯ ಜೋಶಿ ರಾಜೀನಾಮೆ ನೀಡಿದರು.

1979: ಸೋವಿಯತ್ ಪಡೆಗಳು ಅಪಘಾನಿಸ್ಥಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡವು. ಅಧ್ಯಕ್ಷ ಹಫೀಜುಲ್ಲಾ ಅಮೀನ್ ಅವರನ್ನು ಮರಣದಂಡನೆಗೆ ಗುರಿಪಡಿಸಲಾಯಿತು. ಅವರ ಸ್ಥಾನಕ್ಕೆ ಬಬ್ರಾಕ್ ಕರ್ಮಾಲ್ ಅವರನ್ನು ನೇಮಿಸಲಾಯಿತು. ಇದು ಹತ್ತು ವರ್ಷಗಳಿಗೂ ಹೆಚ್ಚಿನ ಕಾಲದ ಸಮರದ ಆರಂಭಕ್ಕೆ ನಾಂದಿಯಾಯಿತು.

1965: ಹಿಂದೀ ಚಿತ್ರನಟ ಸಲ್ಮಾನ್ ಖಾನ್ ಹುಟ್ಟಿದ ದಿನ.

1959: ಸಾಹಿತಿ ಮುಕುಂದರಾಜ್ ಎಲ್. ಜನನ.

1948: ಸಾಹಿತಿ ತಾಳ್ತಜೆ ವಸಂತಕುಮಾರ್ ಜನನ.

1945: ವಾಷಿಂಗನ್ನಿನಲ್ಲಿ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ `ವಿಶ್ವ ಬ್ಯಾಂಕ್' ಸ್ಥಾಪನೆಗೊಂಡಿತು. 28 ರಾಷ್ಟ್ರಗಳು ಈ ನಿಟ್ಟಿನ ಒಪ್ಪಂದಕ್ಕೆ ಸಹಿ ಹಾಕಿದವು.

1939: ಸಾಹಿತಿ ಜಯದೇವಪ್ಪ ಜೈನ ಕೇರಿ ಜನನ.

1929: ಉತ್ತಮ ಪ್ರಾಧ್ಯಾಪಕ, ಸುಗಮ ಸಂಗೀತ ಗಾಯಕ ಪ್ರೊ. ಕೆ.ಬಿ. ಪ್ರಭುಪ್ರಸಾದ್ ಅವರು ಬಿ.ಎಸ್. ಕುರುವತ್ತಿ- ಸರ್ವಮಂಗಳೆ ದಂಪತಿಯ ಮಗನಾಗಿ ದಾವಣಗೆರೆಯಲ್ಲಿ ಜನಿಸಿದರು.

1911: ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಕಲ್ಕತ್ತಾ (ಈಗಿನ ಕೋಲ್ಕತ) ಅಧಿವೇಶನದಲ್ಲಿ `ಜನ ಗಣ ಮನ' ಗೀತೆಯನ್ನು ಹಾಡಲಾಯಿತು. 1950ರ ಜನವರಿ 24ರಂದು ಅದನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಯಿತು.

1831: ಚಾರ್ಲ್ಸ್ ಡಾರ್ವಿನ್ ಅವರಿದ್ದ ಎಚ್ ಎಂ ಎಸ್ ಬೀಗಲ್ ನೌಕೆಯು ಜಗತ್ತಿಗೆ ಸುತ್ತುಹಾಕುವ ವೈಜ್ಞಾನಿಕ ಪ್ರವಾಸಕ್ಕಾಗಿ ಪ್ಲೈಮೌತ್ನಿಂದ ಯಾನ ಆರಂಭಿಸಿತು. ಈ ಯಾನ ಐದು ವರ್ಷಗಳ ಕಾಲ ಮುಂದುವರೆಯಿತು.

1797: ಪರ್ಷಿಯನ್ ಹಾಗೂ ಉರ್ದು ಭಾಷೆಗಳಲ್ಲಿ ಪ್ರಭುತ್ವ ಹೊಂದಿದ್ದ ಭಾರತದ ಖ್ಯಾತ ಕವಿ, ಬರಹಗಾರ ಮಿರ್ಜಾ ಅಸದುಲ್ಲಾ ಖಾನ್ ಘಾಲಿಬ್ (1797-1869) ಹುಟ್ಟಿದ ದಿನ.

1773: ಸರ್ ಜಾರ್ಜ್ ಗೇಲೇ (1773-1857) ಹುಟ್ಟಿದ ದಿನ. ಈತ ಮಾನವನನ್ನು ಒಯ್ಯಬಹುದಾದ ಮೊತ್ತ ಮೊದಲ ಗ್ಲೈಡರನ್ನು ಯಶಸ್ವಿಯಾಗಿ ನಿರ್ಮಿಸಿದ.

1571: ಜರ್ಮನ್ ಖಗೋಳ ತಜ್ಞ ಹಾಗೂ ಭವಿಷ್ಯಕಾರ ಜೊಹಾನ್ನೆಸ್ ಕೆಪ್ಲರ್ (1571-1630) ಹುಟ್ಟಿದ ದಿನ. ಗ್ರಹಗಳ ಚಲನೆಗೆ ಸಂಬಂಧಿಸಿದ ಮೂರು ತತ್ವಗಳಿಗಾಗಿ ಈತ ಖ್ಯಾತನಾಗಿದ್ದಾನೆ.

No comments:

Advertisement